“ನಿನ್ನನ್ನು ತರಬೇತುಗೊಳಿಸಿಕೊ”
ಹೆಚ್ಚು ವೇಗ, ಹೆಚ್ಚು ಎತ್ತರ, ಹೆಚ್ಚು ಪ್ರಬಲ! ಇವು ಪುರಾತನ ಗ್ರೀಸ್ ಮತ್ತು ರೋಮ್ನಲ್ಲಿ ಸ್ಪರ್ಧಾಳುಗಳು ಸಾಧಿಸಲು ಪ್ರಯತ್ನಿಸುತ್ತಿದ್ದ ಗುರಿಗಳಾಗಿದ್ದವು. ಶತಮಾನಗಳಿಂದ ಓಲಿಂಪ್ಯ, ಡೆಲ್ಫಿ, ಮತ್ತು ನೆಮೀಯಾ ಹಾಗೂ ಕೊರಿಂಥದ ಭೂಸಂಧಿಯಲ್ಲಿ, ದೇವತೆಗಳ “ಆಶೀರ್ವಾದ”ದಿಂದ ಹಾಗೂ ಸಾವಿರಾರು ಮಂದಿ ಪ್ರೇಕ್ಷಕರ ನೋಟದ ಮುಂದೆ ಭವ್ಯವಾದ ಕ್ರೀಡಾ ಸ್ಪರ್ಧೆಗಳು ನಡೆಯುತ್ತಿದ್ದವು. ಈ ಆಟಗಳಲ್ಲಿ ಸ್ಪರ್ಧಿಸುವ ಸುಯೋಗವು, ಅನೇಕ ವರ್ಷಗಳ ಕಠಿನ ಶ್ರಮದ ಫಲವಾಗಿತ್ತು. ವಿಜಯವನ್ನು ಪಡೆಯುವುದು, ವಿಜೇತರಿಗೂ ಅವರ ನಗರಕ್ಕೂ ಮಹಿಮೆಯ ಸುರಿಮಳೆಯನ್ನು ತರಲಿತ್ತು.
ಈ ರೀತಿಯ ಸಾಂಸ್ಕೃತಿಕ ಪರಿಸರದಲ್ಲಿರಲಾಗಿ, ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಬರಹಗಾರರು ಕ್ರೈಸ್ತರ ಆತ್ಮಿಕ ಓಟವನ್ನು, ಕ್ರೀಡಾ ಸ್ಪರ್ಧೆಗಳಿಗೆ ಹೋಲಿಸಿದ್ದು ಅಚ್ಚರಿಯ ಸಂಗತಿಯೇನಲ್ಲ. ಪ್ರಬಲವಾದ ಬೋಧನೆಯ ಅಂಶಗಳನ್ನು ತಿಳಿಸಲಿಕ್ಕಾಗಿ ಅಪೊಸ್ತಲರಾದ ಪೇತ್ರ ಹಾಗೂ ಪೌಲರು, ಆಟಗಳ ಮೇಲಾಧಾರಿತವಾದ ದೃಷ್ಟಾಂತಗಳನ್ನು ಕೌಶಲದಿಂದ ಬಳಸಿದರು. ನಮ್ಮ ದಿನಗಳಲ್ಲಿ, ಅದೇ ತೀಕ್ಷ್ಣವಾದ ಕ್ರೈಸ್ತ ಓಟವು ಮುಂದುವರಿಯುತ್ತಿದೆ. ಪ್ರಥಮ ಶತಮಾನದ ಕ್ರೈಸ್ತರಿಗೆ ಯೆಹೂದಿ ವಿಷಯಗಳ ವ್ಯವಸ್ಥೆಯೊಂದಿಗೆ ವ್ಯವಹರಿಸಬೇಕಾಗಿತ್ತು, ಮತ್ತು ಇಂದು ನಮಗೆ ವಿನಾಶದ ಅಂಚಿನಲ್ಲಿರುವ ಒಂದು ಲೋಕವ್ಯಾಪಕ ವ್ಯವಸ್ಥೆಯೊಂದಿಗೆ ‘ಹೋರಾಡಬೇಕಾಗಿದೆ.’ (2 ತಿಮೊಥೆಯ 2:5; 3:1-5) ಕೆಲವರು ವೈಯಕ್ತಿಕವಾಗಿ ತಮ್ಮ ‘ನಂಬಿಕೆಯ ಓಟವು’ ನಿರಂತರವೂ, ದಣಿಯುವಂಥದ್ದೂ ಆಗಿದೆಯೆಂದು ಕಂಡುಕೊಳ್ಳಬಹುದು. (1 ತಿಮೊಥೆಯ 6:12, ದ ನ್ಯೂ ಇಂಗ್ಲಿಷ್ ಬೈಬಲ್) ಬೈಬಲ್ನಲ್ಲಿ ಕೊಡಲ್ಪಟ್ಟಿರುವ, ಈ ಕ್ರೀಡಾ ಸ್ಪರ್ಧೆಗಳು ಮತ್ತು ಕ್ರೈಸ್ತ ಓಟದ ನಡುವೆ ಇರುವ ಹೋಲಿಕೆಗಳಲ್ಲಿ ಕೆಲವೊಂದನ್ನು ಪರೀಕ್ಷಿಸುವುದು ತುಂಬ ಉಪಯುಕ್ತವಾಗಿ ಪರಿಣಮಿಸುವುದು.
ಅತ್ಯುತ್ಕೃಷ್ಟ ಮಟ್ಟದ ತರಬೇತುಗಾರ
ಒಬ್ಬ ಸ್ಪರ್ಧಾಳುವಿನ ಯಶಸ್ಸು, ಬಹುಮಟ್ಟಿಗೆ ತರಬೇತುಗಾರನ ಮೇಲೆ ಹೊಂದಿಕೊಂಡಿರುತ್ತದೆ. ಪ್ರಾಚೀನ ಕಾಲದ ಆಟಗಳ ಕುರಿತಾಗಿ, ಆರ್ಕಾಯೊಲೇಜೀಯಾ ಗ್ರಯಿಕಾ ಹೇಳುವುದು: “ಆ ಸ್ಪರ್ಧಿಗಳು, ತಾವು ಸಿದ್ಧತೆಯ ಕಸರತ್ತುಗಳನ್ನು ಮಾಡುವುದರಲ್ಲಿ ಪೂರ್ಣವಾಗಿ ಹತ್ತು ತಿಂಗಳುಗಳನ್ನು ಕಳೆದಿದ್ದೇವೆಂದು ಆಣೆಯಿಡುವ ಹಂಗುಳ್ಳವರಾಗಿದ್ದರು.” ಹಾಗೆಯೇ ಕ್ರೈಸ್ತರಿಗೂ ಕಠಿನವಾದ ತರಬೇತಿಯ ಅಗತ್ಯವಿದೆ. ಒಬ್ಬ ಕ್ರೈಸ್ತ ಹಿರಿಯನಾಗಿದ್ದ ತಿಮೊಥೆಯನಿಗೆ ಪೌಲನು ಬುದ್ಧಿಹೇಳಿದ್ದು: “ದೈವ ಭಕ್ತಿಯನ್ನು ನಿನ್ನ ಗುರಿಯಾಗಿಟ್ಟು ನಿನ್ನನ್ನು ತರಬೇತುಗೊಳಿಸಿಕೊ.” (1 ತಿಮೊಥೆಯ 4:7, NW) ಒಬ್ಬ ಕ್ರೈಸ್ತ “ಸ್ಪರ್ಧಾಳುವಿನ” ತರಬೇತುಗಾರನು ಯಾರು? ಸ್ವತಃ ಯೆಹೋವ ದೇವರೇ! ಅಪೊಸ್ತಲ ಪೇತ್ರನು ಬರೆದುದು: “ದೇವರು ತಾನೇ . . . ನಿಮ್ಮನ್ನು ಯೋಗ್ಯಸ್ಥಿತಿಗೆ ತಂದು [“ನಿಮ್ಮ ತರಬೇತನ್ನು ಪೂರ್ಣಗೊಳಿಸಿ,” NW] ನೆಲೆಗೊಳಿಸಿ ಬಲಪಡಿಸುವನು.” (ಓರೆ ಅಕ್ಷರಗಳು ನಮ್ಮವು.)—1 ಪೇತ್ರ 5:10.
‘ನಿಮ್ಮ ತರಬೇತನ್ನು ಪೂರ್ಣಗೊಳಿಸುವನು’ ಎಂಬ ವಾಕ್ಸರಣಿಯು ಒಂದು ಗ್ರೀಕ್ ಕ್ರಿಯಾಪದದಿಂದ ಬಂದದ್ದಾಗಿದೆ. ಹೊಸ ಒಡಂಬಡಿಕೆಯ ದೇವತಾಶಾಸ್ತ್ರ ನಿಘಂಟು (ಇಂಗ್ಲಿಷ್) ಎಂಬ ಪುಸ್ತಕಕ್ಕನುಸಾರ, ಮೂಲತಃ ಅದರರ್ಥ, “ಒಂದು ವಸ್ತುವನ್ನು [ಇಲ್ಲವೆ ವ್ಯಕ್ತಿಯನ್ನು] ಅದರ ಉದ್ದೇಶಕ್ಕಾಗಿ ಯೋಗ್ಯವಾಗಿಸುವುದು, ಅಣಿಗೊಳಿಸುವುದು ಮತ್ತು ಅದರ ಬಳಕೆಗನುಗುಣವಾಗಿ ಹೊಂದಿಸಿಕೊಳ್ಳುವುದು” ಆಗಿದೆ. ತದ್ರೀತಿಯಲ್ಲಿ, ಲಿಡೆಲ್ ಮತ್ತು ಸ್ಕಾಟ್ರವರ ಗ್ರೀಕ್-ಇಂಗ್ಲಿಷ್ ನಿಘಂಟು (ಇಂಗ್ಲಿಷ್) ಹೇಳುವುದೇನೆಂದರೆ, ಆ ಕ್ರಿಯಾಪದವನ್ನು “ತಯಾರಿಸು, ತರಬೇತುಗೊಳಿಸು ಇಲ್ಲವೆ ಪೂರ್ಣವಾಗಿ ಸಜ್ಜುಗೊಳಿಸು” ಎಂದು ಅರ್ಥನಿರೂಪಿಸಬಹುದು. ಬಹಳ ಪ್ರಯತ್ನವನ್ನು ಅಗತ್ಯಪಡಿಸುವ ಕ್ರೈಸ್ತ ಓಟಕ್ಕಾಗಿ ಯೆಹೋವನು ನಮ್ಮನ್ನು ಯಾವ ವಿಧಗಳಲ್ಲಿ ‘ತಯಾರಿಸುತ್ತಾನೆ, ತರಬೇತುಗೊಳಿಸುತ್ತಾನೆ ಇಲ್ಲವೆ ಪೂರ್ಣವಾಗಿ ಸಜ್ಜುಗೊಳಿಸುತ್ತಾನೆ?’ ಈ ಹೋಲಿಕೆಯನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ಹಿಂದಿನ ಕಾಲದಲ್ಲಿ ತರಬೇತಿ ಕೊಡುವವರು ಬಳಸುತ್ತಿದ್ದ ಕೆಲವು ವಿಧಾನಗಳನ್ನು ಪರಿಗಣಿಸೋಣ.
ಪ್ರಾಚೀನ ಗ್ರೀಸ್ನಲ್ಲಿ ಒಲಿಂಪಿಕ್ ಆಟಗಳು (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಯುವಕರ ತರಬೇತಿಯೊಂದಿಗೆ ಸಂಬಂಧಪಟ್ಟವರು, ಎರಡು ಮೂಲಭೂತ ವಿಧಾನಗಳನ್ನು ಬಳಸಿದರು. ಮೊದಲನೆಯದು, ಅತ್ಯುತ್ತಮವಾದ ಫಲಿತಾಂಶಗಳನ್ನು ಪಡೆಯಲಿಕ್ಕಾಗಿ ಶಿಷ್ಯನು ತನ್ನಿಂದ ಸಾಧ್ಯವಾದಷ್ಟು ಹೆಚ್ಚಿನ ಶಾರೀರಿಕ ಪ್ರಯತ್ನವನ್ನು ಮಾಡುವಂತೆ ಪ್ರೋತ್ಸಾಹಿಸುವ ಗುರಿಯುಳ್ಳದ್ದಾಗಿತ್ತು. ಮತ್ತು ಎರಡನೆಯದು, ಅವನ ಕೌಶಲ ಮತ್ತು ಶೈಲಿಯನ್ನು ಉತ್ತಮಗೊಳಿಸುವ ಗುರಿಯುಳ್ಳದ್ದಾಗಿತ್ತು.”
ಅದೇ ರೀತಿಯಲ್ಲಿ, ನಾವು ನಮ್ಮ ಸಾಧ್ಯತೆಯ ಉತ್ತುಂಗವನ್ನು ತಲಪುವಂತೆ ಮತ್ತು ಆತನ ಸೇವೆಯಲ್ಲಿ ನಮ್ಮ ಕೌಶಲಗಳನ್ನು ಉತ್ತಮಗೊಳಿಸಿಕೊಳ್ಳುವಂತೆ ಯೆಹೋವನು ನಮ್ಮನ್ನು ಉತ್ತೇಜಿಸುತ್ತಾನೆ ಮತ್ತು ಬಲಪಡಿಸುತ್ತಾನೆ. ನಮ್ಮ ದೇವರು ನಮ್ಮನ್ನು ಬೈಬಲ್, ತನ್ನ ಭೂಸಂಸ್ಥೆ, ಮತ್ತು ಪ್ರೌಢ ಜೊತೆ ಕ್ರೈಸ್ತರ ಮುಖಾಂತರ ಬಲಪಡಿಸುತ್ತಾನೆ. ಕೆಲವೊಮ್ಮೆ ಆತನು ಶಿಸ್ತನ್ನು ಕೊಡುವ ಮೂಲಕ ನಮ್ಮನ್ನು ತರಬೇತುಗೊಳಿಸುತ್ತಾನೆ. (ಇಬ್ರಿಯ 12:6) ಬೇರೆ ಸಮಯಗಳಲ್ಲಿ, ನಾವು ತಾಳ್ಮೆಯನ್ನು ಬೆಳೆಸಿಕೊಳ್ಳಲಿಕ್ಕಾಗಿ ನಮ್ಮ ಮೇಲೆ ವಿಭಿನ್ನ ಪರೀಕ್ಷೆಗಳು ಮತ್ತು ಕಷ್ಟಗಳು ಬರುವಂತೆ ಆತನು ಅನುಮತಿಸಬಹುದು. (ಯಾಕೋಬ 1:2-4) ಮತ್ತು ಅದಕ್ಕಾಗಿ ಬೇಕಾದ ಬಲವನ್ನು ಆತನು ಕೊಡುತ್ತಾನೆ ಎಂದು ಪ್ರವಾದಿಯಾದ ಯೆಶಾಯನು ಹೇಳುತ್ತಾನೆ: “ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು.”—ಯೆಶಾಯ 40:31.
ಎಲ್ಲಕ್ಕಿಂತಲೂ ಮಿಗಿಲಾಗಿ, ದೇವರು ನಮಗೆ ತನ್ನ ಪವಿತ್ರಾತ್ಮವನ್ನು ಸಮೃದ್ಧವಾಗಿ ದಯಪಾಲಿಸುತ್ತಾನೆ. ಇದು ನಾವು ಆತನಿಗೆ ಅಂಗೀಕಾರಾರ್ಹವಾದ ಸೇವೆಯನ್ನು ಸಲ್ಲಿಸುತ್ತಾ ಇರುವಂತೆ ನಮ್ಮನ್ನು ಬಲಪಡಿಸುತ್ತದೆ. (ಲೂಕ 11:13) ಅನೇಕ ವಿದ್ಯಮಾನಗಳಲ್ಲಿ ದೇವರ ಸೇವಕರು ದೀರ್ಘವಾದ, ಕಷ್ಟಕರವಾದ ನಂಬಿಕೆಯ ಪರೀಕ್ಷೆಗಳನ್ನು ತಾಳಿಕೊಂಡಿದ್ದಾರೆ. ಹಾಗೆ ಮಾಡಿದವರು ನಮ್ಮಂಥ ಸಾಧಾರಣ ಸ್ತ್ರೀಪುರುಷರೇ ಆಗಿದ್ದರು. ಆದರೆ ಅವರು ದೇವರ ಮೇಲೆ ಪೂರ್ಣ ರೀತಿಯಲ್ಲಿ ಆತುಕೊಂಡಿರುವುದರಿಂದ, ಅವರು ತಾಳಿಕೊಳ್ಳಲು ಶಕ್ತರಾಗಿದ್ದಾರೆ. ಹೌದು, “ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲ.”—2 ಕೊರಿಂಥ 4:7.
ಸಹಾನುಭೂತಿಯುಳ್ಳ ತರಬೇತುಗಾರ
ಪ್ರಾಚೀನಕಾಲದ ತರಬೇತುಗಾರನ ಕೆಲಸಗಳಲ್ಲಿ ಒಂದು, “ಒಬ್ಬೊಬ್ಬ ಸ್ಪರ್ಧಾಳುವಿಗೆ ಮತ್ತು ನಿರ್ದಿಷ್ಟ ಆಟಕ್ಕೆ ಅಗತ್ಯವಿರುವ ರೀತಿಯ ಮತ್ತು ಸಂಖ್ಯೆಯ ಕಸರತ್ತುಗಳನ್ನು ನಿರ್ಧರಿಸು”ವುದು ಆಗಿತ್ತು ಎಂದು ಒಬ್ಬ ವಿದ್ವಾಂಸನು ಹೇಳುತ್ತಾನೆ. ದೇವರು ನಮ್ಮನ್ನು ತರಬೇತುಗೊಳಿಸುವಾಗ, ನಮ್ಮ ವೈಯಕ್ತಿಕ ಪರಿಸ್ಥಿತಿಗಳು, ಸಾಮರ್ಥ್ಯಗಳು, ರಚನೆ ಮತ್ತು ಇತಿಮಿತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾನೆ. ಯೆಹೋವನು ನಮ್ಮನ್ನು ತರಬೇತುಗೊಳಿಸುತ್ತಿರುವ ಸಮಯದಲ್ಲಿ ಎಷ್ಟೋ ಸಾರಿ ನಾವು ಯೋಬನಂತೆ ದೈನ್ಯದಿಂದ ಹೀಗೆ ಮೊರೆಯಿಡುತ್ತೇವೆ: “ನೀನು ನನ್ನನ್ನು ಜೇಡಿಮಣ್ಣಿನಿಂದಲೋ ಎಂಬಂತೆ ರೂಪಿಸಿದ್ದೀಯೆಂದು ಕೃಪೆಮಾಡಿ ನೆನಸಿಕೋ.” (ಯೋಬ 10:9) ಸಹಾನುಭೂತಿಯುಳ್ಳ ನಮ್ಮ ತರಬೇತುಗಾರನು ಹೇಗೆ ಪ್ರತಿಕ್ರಿಯಿಸುತ್ತಾನೆ? ಯೆಹೋವನ ಬಗ್ಗೆ ದಾವೀದನು ಹೀಗೆ ಬರೆದನು: “ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.”—ಕೀರ್ತನೆ 103:14.
ನೀವು ಶುಶ್ರೂಷೆಯಲ್ಲಿ ಏನನ್ನು ಮಾಡಬಲ್ಲಿರೊ ಅದನ್ನು ಮಿತಗೊಳಿಸುವಂಥ ರೀತಿಯ ಗಂಭೀರವಾದ ಆರೋಗ್ಯ ಸಮಸ್ಯೆ ನಿಮಗಿರಬಹುದು, ಇಲ್ಲವೆ ನೀವು ಕೀಳರಿಮೆಯ ಸಮಸ್ಯೆಯೊಂದಿಗೆ ಹೋರಾಡುತ್ತಿರಬಹುದು. ಪ್ರಾಯಶಃ ನೀವೊಂದು ಕೆಟ್ಟ ಅಭ್ಯಾಸವನ್ನು ನಿಲ್ಲಿಸಲು ಪ್ರಯತ್ನಿಸುತ್ತಿರಬಹುದು, ಇಲ್ಲವೆ ನೆರೆಹೊರೆಯಲ್ಲಿ, ಕೆಲಸದ ಸ್ಥಳದಲ್ಲಿ ಇಲ್ಲವೆ ಶಾಲೆಯಲ್ಲಿನ ಸಮಾನಸ್ಥರ ಒತ್ತಡವನ್ನು ಎದುರಿಸಲಾರಿರೆಂದು ನಿಮಗನಿಸುತ್ತಿರಬಹುದು. ನಿಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ನಿಮ್ಮನ್ನೂ ಸೇರಿಸಿ ಬೇರಾವುದೇ ವ್ಯಕ್ತಿಗಿಂತಲೂ ಹೆಚ್ಚು ಉತ್ತಮವಾಗಿ ಯೆಹೋವನು ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬಲ್ಲನು ಎಂಬುದನ್ನು ಎಂದಿಗೂ ಮರೆಯಬೇಡಿರಿ! ಆತನು ತುಂಬ ಕಾಳಜಿವಹಿಸುತ್ತಿರುವ ತರಬೇತುಗಾರನಾಗಿರುವುದರಿಂದ, ನೀವು ಆತನ ಸಮೀಪಕ್ಕೆ ಹೋಗುವಲ್ಲಿ ಆತನು ನಿಮಗೆ ಸಹಾಯಮಾಡಲು ಯಾವಾಗಲೂ ಸಿದ್ಧನಿರುವನು.—ಯಾಕೋಬ 4:8.
ಪ್ರಾಚೀನಕಾಲದ ತರಬೇತುಗಾರರು, “ಕಸರತ್ತುಗಳಿಂದಲ್ಲ ಬದಲಾಗಿ ಕೆಟ್ಟ ಮನೋಪ್ರವೃತ್ತಿ, ಖಿನ್ನತೆ ಮುಂತಾದ ಮಾನಸಿಕ ಕಾರಣಗಳಂಥ ಇತರ ಮೂಲಗಳಿಂದ ಉಂಟಾಗಿರುವ ದಣಿವು ಇಲ್ಲವೆ ಬಲಹೀನತೆಯನ್ನು ಗುರುತಿಸಲು ಶಕ್ತರಾಗಿದ್ದರು. . . . [ತರಬೇತುಗಾರರ] ಅಧಿಕಾರ ವ್ಯಾಪ್ತಿಯು ಎಷ್ಟು ವಿಶಾಲವಾಗಿತ್ತೆಂದರೆ, ಅವರು ಸ್ಪರ್ಧಾಳುಗಳ ಖಾಸಗಿ ಜೀವನಗಳ ಮೇಲೆ ಕಣ್ಣಿಡುತ್ತಿದ್ದರು, ಮತ್ತು ಅವರಿಗೆ ಅಗತ್ಯವೆಂದೆಣಿಸಿದಲ್ಲೆಲ್ಲ ಮಧ್ಯಪ್ರವೇಶಿಸುತ್ತಿದ್ದರು ಸಹ.”
ಈ ಲೋಕದಿಂದ ನಿಮ್ಮ ಮೇಲೆ ಒಂದೇ ಸಮನಾಗಿ ಬರುತ್ತಿರುವ ಒತ್ತಡಗಳು ಮತ್ತು ಪ್ರಲೋಭನೆಗಳಿಂದಾಗಿ ನಿಮಗೆ ಕೆಲವೊಮ್ಮೆ ದಣಿದಿರುವ ಇಲ್ಲವೆ ಬಲಹೀನರಾಗಿರುವ ಅನಿಸಿಕೆಯಾಗುತ್ತದೊ? ನಿಮ್ಮ ತರಬೇತುಗಾರನೋಪಾದಿ, ಯೆಹೋವನು ನಿಮ್ಮಲ್ಲಿ ತೀವ್ರವಾದ ಆಸಕ್ತಿಯುಳ್ಳವನಾಗಿದ್ದಾನೆ. (1 ಪೇತ್ರ 5:7) ನಿಮ್ಮಲ್ಲಿ ಆತ್ಮಿಕ ಬಲಹೀನತೆ ಇಲ್ಲವೆ ದಣಿವಿನ ಯಾವುದೇ ಸೂಚನೆಯಿರುವಲ್ಲಿ ಆತನದನ್ನು ತತ್ಕ್ಷಣವೇ ಗುರುತಿಸುತ್ತಾನೆ. ಯೆಹೋವನು ನಮ್ಮ ಸ್ವತಂತ್ರ ಇಚ್ಛೆ ಮತ್ತು ವೈಯಕ್ತಿಕ ಆಯ್ಕೆಯನ್ನು ಗೌರವಿಸುವುದಾದರೂ, ನಮ್ಮ ನಿತ್ಯ ಕ್ಷೇಮದ ಕುರಿತಾಗಿ ಆತನಿಗಿರುವ ಚಿಂತೆಯಿಂದಾಗಿ, ಅಗತ್ಯವಿರುವಾಗಲೆಲ್ಲ ಆತನು ಧಾರಾಳವಾದ ಸಹಾಯ ಮತ್ತು ತಿದ್ದುಪಾಟನ್ನು ನೀಡುತ್ತಾನೆ. (ಯೆಶಾಯ 30:21) ಹೇಗೆ? ಬೈಬಲ್ ಮತ್ತು ಬೈಬಲ್ ಆಧಾರಿತ ಪ್ರಕಾಶನಗಳ ಮೂಲಕ, ಸಭೆಯಲ್ಲಿರುವ ಆತ್ಮಿಕ ಹಿರಿಯರ ಮೂಲಕ ಮತ್ತು ನಮ್ಮ ಪ್ರೀತಿಪರ ಸಹೋದರತ್ವದ ಮೂಲಕವೇ.
“ಎಲ್ಲ ವಿಷಯಗಳಲ್ಲಿ ಸ್ವನಿಯಂತ್ರಣ”
ಜಯಗಳಿಸಲಿಕ್ಕಾಗಿ ಒಬ್ಬ ಒಳ್ಳೇ ತರಬೇತುಗಾರನಿಗಿಂತಲೂ ಹೆಚ್ಚಿನದ್ದರ ಅಗತ್ಯವಿತ್ತು ಎಂಬುದು ನಿಜ. ಸ್ವತಃ ಸ್ಪರ್ಧಾಳುವಿನ ಮೇಲೂ, ಕಠಿಣತಮ ತರಬೇತಿಯ ಕಡೆಗೆ ಅವನಿಗಿರುವ ಬದ್ಧತೆಯ ಮೇಲೂ ಯಶಸ್ಸು ಅವಲಂಬಿಸುತ್ತಿತ್ತು. ಜೀವನವಿಧಾನ ತುಂಬ ಕಟ್ಟುನಿಟ್ಟಿನದ್ದಾಗಿತ್ತು, ಏಕೆಂದರೆ ತರಬೇತಿಯಲ್ಲಿ ಕಟ್ಟುನಿಟ್ಟಾದ ಇಂದ್ರಿಯನಿಗ್ರಹ ಮತ್ತು ಆಹಾರಪಥ್ಯವು ಸೇರಿತ್ತು. ಸಾ.ಶ.ಪೂ. ಪ್ರಥಮ ಶತಮಾನದಲ್ಲಿ ಒಬ್ಬ ಕವಿಯಾಗಿದ್ದ ಹೋರೇಸ್ ಎಂಬವನು ಹೇಳಿದ್ದೇನೆಂದರೆ, “ಉತ್ಕಟವಾಗಿ ಹಾರೈಸಲಾಗುತ್ತಿದ್ದ ಗುರಿಯನ್ನು ತಲಪಲಿಕ್ಕಾಗಿ” ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದವರು “ಹೆಂಗಸರಿಂದ ಮತ್ತು ಹೆಂಡದಿಂದ ದೂರವಿರುತ್ತಿದ್ದರು.” ಬೈಬಲ್ ವಿದ್ವಾಂಸ ಎಫ್. ಸಿ. ಕುಕ್ರವರಿಗನುಸಾರ, ಆಟಗಳಲ್ಲಿ ಭಾಗವಹಿಸುತ್ತಿದ್ದವರು “ಹತ್ತು ತಿಂಗಳ ವರೆಗೆ . . . ಸ್ವನಿಗ್ರಹ ಮತ್ತು ಹಾಳತವಾದ ಆಹಾರಪಥ್ಯವನ್ನು” ಕಾಪಾಡಿಕೊಂಡು ಹೋಗಬೇಕಾಗಿತ್ತು.
ಕೊರಿಂಥ ನಗರಕ್ಕೆ, ಹತ್ತಿರದಲ್ಲೇ ನಡೆಯುತ್ತಿದ್ದ ಇಸ್ತ್ಮಿಅನ್ ಪಂದ್ಯಗಳು ಚಿರಪರಿಚಿತವಾಗಿದ್ದವು. ಆ ನಗರದಲ್ಲಿದ್ದ ಕ್ರೈಸ್ತರಿಗೆ ಬರೆಯುವಾಗ ಪೌಲನು ಈ ಹೋಲಿಕೆಯನ್ನು ಉಪಯೋಗಿಸಿದನು: “ಅದರಲ್ಲಿ ಹೋರಾಡುವವರೆಲ್ಲರು ಎಲ್ಲಾ ವಿಷಯಗಳಲ್ಲಿ ಮಿತವಾಗಿರುತ್ತಾರೆ [“ಸ್ವನಿಯಂತ್ರಣ ತೋರಿಸುತ್ತಾರೆ,” NW].” (1 ಕೊರಿಂಥ 9:25) ಸತ್ಯ ಕ್ರೈಸ್ತರು ಈ ಲೋಕದ ಪ್ರಾಪಂಚಿಕ, ಅನೈತಿಕ ಮತ್ತು ಅಶುದ್ಧ ಜೀವನ ಶೈಲಿಗಳಿಂದ ದೂರವಿರುತ್ತಾರೆ. (ಎಫೆಸ 5:3-5; 1 ಯೋಹಾನ 2:15-17) ದೇವಭಕ್ತಿಯಿಲ್ಲದ ಮತ್ತು ಅಶಾಸ್ತ್ರೀಯವಾದ ಗುಣಗಳನ್ನು ಸಹ ತೆಗೆದುಹಾಕಿ, ಕ್ರಿಸ್ತಸದೃಶ ಗುಣಗಳನ್ನು ಅವುಗಳ ಸ್ಥಾನದಲ್ಲಿ ತುಂಬಿಸಬೇಕು.—ಕೊಲೊಸ್ಸೆ 3:9, 10, 12.
ಇದನ್ನು ಹೇಗೆ ಮಾಡಸಾಧ್ಯವಿದೆ? ಒಂದು ವಿಧ ಯಾವುದೆಂಬುದನ್ನು, ಪೌಲನು ಒಂದು ಪ್ರಬಲವಾದ ದೃಷ್ಟಾಂತದ ಮೂಲಕ ಕೊಟ್ಟ ಉತ್ತರದಲ್ಲಿ ಗಮನಿಸಿರಿ: “ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.”—1 ಕೊರಿಂಥ 9:27.
ಪೌಲನು ಇಲ್ಲಿ ಎಷ್ಟು ಬಲವತ್ತಾದ ಅಂಶವನ್ನು ತಿಳಿಸಿದನು! ಅವನು ಶಾರೀರಿಕವಾದ ಸ್ವಯಂಕೃತ ನೋವನ್ನು ಶಿಫಾರಸ್ಸುಮಾಡುತ್ತಿರಲಿಲ್ಲ. ಅದರ ಬದಲು, ತನ್ನೊಳಗೇ ಆಂತರಿಕ ಹೋರಾಟಗಳು ನಡೆಯುತ್ತಿದ್ದವೆಂಬುದನ್ನು ಅವನು ಒಪ್ಪಿಕೊಂಡನು. ಕೆಲವೊಮ್ಮೆ ಅವನು ತಾನು ಮಾಡಲು ಇಷ್ಟಪಡದಿದ್ದ ವಿಷಯಗಳನ್ನು ಮಾಡಿದನು ಮತ್ತು ತಾನು ಮಾಡಲು ಬಯಸುತ್ತಿದ್ದ ವಿಷಯಗಳನ್ನು ಮಾಡದೇ ಬಿಟ್ಟನು. ಆದರೆ ಅವನ ಬಲಹೀನತೆಗಳು ಅವನ ಮೇಲೆ ಎಂದೂ ಜಯಸಾಧಿಸದಂಥ ರೀತಿಯಲ್ಲಿ ಅವನು ಹೋರಾಡಿದನು. ಅವನು ಶಾರೀರಿಕ ಆಸೆಗಳನ್ನೂ ಗುಣಗಳನ್ನೂ ಬಲವಂತವಾಗಿ ಅಂಕೆಯಲ್ಲಿಟ್ಟುಕೊಳ್ಳುತ್ತಾ, ‘ತನ್ನ ಮೈಯನ್ನು ಜಜ್ಜಿಕೊಂಡನು.’—ರೋಮಾಪುರ 7:21-25.
ಕ್ರೈಸ್ತರೆಲ್ಲರು ಸಹ ಇದನ್ನೇ ಮಾಡಬೇಕು. ಕೊರಿಂಥದಲ್ಲಿ ಈ ಹಿಂದೆ ವ್ಯಭಿಚಾರ, ವಿಗ್ರಹಾರಾಧನೆ, ಸಲಿಂಗಿಕಾಮ, ಕಳ್ಳತನ ಇತ್ಯಾದಿ ಕೆಲಸಗಳಲ್ಲಿ ಮಗ್ನರಾಗಿದ್ದ ಕೆಲವರು ಮಾಡಿದ್ದ ಬದಲಾವಣೆಗಳ ಕುರಿತಾಗಿ ಪೌಲನು ತಿಳಿಸಿದನು. ಅವರು ಬದಲಾಗಲು ಶಕ್ತರಾದದ್ದು ಹೇಗೆ? ದೇವರ ವಾಕ್ಯ ಮತ್ತು ಪವಿತ್ರಾತ್ಮದ ಶಕ್ತಿ ಮತ್ತು ಅದಕ್ಕನುಗುಣವಾಗಿ ನಡೆಯಲು ಅವರಿಗಿದ್ದ ದೃಢಸಂಕಲ್ಪದಿಂದಾಗಿಯೇ. ಪೌಲನು ಹೇಳಿದ್ದು: “ಆದರೂ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಲ್ಲಿಯೂ ತೊಳೆದುಕೊಂಡಿರಿ, ದೇವಜನರಾದಿರಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.” (1 ಕೊರಿಂಥ 6:9-11) ಅಂಥ ಕೆಟ್ಟ ರೂಢಿಗಳನ್ನು ಬಿಟ್ಟುಬಿಟ್ಟಿದ್ದವರ ಕುರಿತಾಗಿ ಪೇತ್ರನು ಸಹ ತದ್ರೀತಿಯಲ್ಲಿ ಬರೆದನು. ಕ್ರೈಸ್ತರೋಪಾದಿ ಅವರೆಲ್ಲರೂ ನಿಜವಾದ ಬದಲಾವಣೆಗಳನ್ನು ಮಾಡಿದ್ದರು.—1 ಪೇತ್ರ 4:3, 4.
ಸರಿಯಾದ ಗುರಿಯುಳ್ಳ ಪ್ರಯತ್ನಗಳು
ಆತ್ಮಿಕ ಗುರಿಗಳನ್ನು ಬೆನ್ನಟ್ಟುವುದರಲ್ಲಿ ತನ್ನ ಏಕಾಗ್ರಚಿತ್ತ ಮತ್ತು ಸ್ಪಷ್ಟವಾದ ಗಮನ ಕೇಂದ್ರೀಕರಣವನ್ನು ಹೀಗೆ ಹೇಳುವ ಮೂಲಕ ಪೌಲನು ದೃಷ್ಟಾಂತಿಸಿದನು: “ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದವನಾಗಿ ಗುದ್ದಾಡುತ್ತೇನೆ.” (1 ಕೊರಿಂಥ 9:26) ಸ್ಪರ್ಧೆಯಲ್ಲಿ ಭಾಗವಹಿಸುವವನೊಬ್ಬನು ತನ್ನ ಗುದ್ದುಗಳನ್ನು ಇಲ್ಲವೆ ತಿವಿತಗಳನ್ನು ಹೇಗೆ ನಿರ್ದೇಶಿಸುವನು? ಗ್ರೀಕ್ ಹಾಗೂ ರೋಮನ್ ಜನರ ಬದುಕು (ಇಂಗ್ಲಿಷ್) ಎಂಬ ಪುಸ್ತಕವು ಉತ್ತರಿಸುವುದು: “ಇದಕ್ಕಾಗಿ ಆಕ್ರಮಣಶೀಲ ಬಲವು ಆವಶ್ಯಕವಾಗಿತ್ತು ಮಾತ್ರವಲ್ಲ, ಪ್ರತಿಸ್ಪರ್ಧಿಯ ಬಲಹೀನ ಅಂಶಗಳನ್ನು ಗಮನಿಸಲಿಕ್ಕಾಗಿ ಚುರುಕಾದ ದೃಷ್ಟಿಯೂ ಬೇಕಾಗಿತ್ತು. ಮಲ್ಲರ ಶಾಲೆಗಳಲ್ಲಿ ಕಲಿಸಲಾಗುತ್ತಿದ್ದ ನಿರ್ದಿಷ್ಟವಾದ ಕೌಶಲಭರಿತ ತಿವಿಯುವಿಕೆಗಳು ಮತ್ತು ಒಬ್ಬ ಪ್ರತಿಸ್ಪರ್ಧಿಯನ್ನು ಮೀರಿಸುವುದರಲ್ಲಿ ಶೀಘ್ರತೆಯು ಸಹ ಅಷ್ಟೇ ಪ್ರಯೋಜನಕರವಾಗಿತ್ತು.”
ನಮ್ಮ ಪ್ರತಿಸ್ಪರ್ಧಿಗಳಲ್ಲಿ ಒಂದು, ನಮ್ಮ ಅಪರಿಪೂರ್ಣ ಶರೀರವಾಗಿದೆ. ನಾವು ನಮ್ಮ ವೈಯಕ್ತಿಕ “ಬಲಹೀನ ಅಂಶಗಳನ್ನು” ಗುರುತಿಸಿದ್ದೇವೊ? ಬೇರೆಯವರು—ವಿಶೇಷವಾಗಿ ಸೈತಾನನು—ನಮ್ಮನ್ನು ನೋಡುತ್ತಿರುವ ದೃಷ್ಟಿಕೋನದಿಂದಲೇ ನಾವು ನಮ್ಮನ್ನು ನೋಡಲು ಸಿದ್ಧರಿದ್ದೇವೊ? ಇದಕ್ಕಾಗಿ ಪ್ರಾಮಾಣಿಕವಾದ ಸ್ವವಿಶ್ಲೇಷಣೆ ಆವಶ್ಯಕ. ಆತ್ಮವಂಚನೆಯು ತುಂಬ ಸುಲಭವಾಗಿ ಸಂಭವಿಸುತ್ತದೆ. (ಯಾಕೋಬ 1:22) ನಮ್ಮ ಮೂರ್ಖ ಕ್ರಿಯೆಗೆ ನೆವಗಳನ್ನು ಕೊಟ್ಟು ಸಮರ್ಥಿಸುವುದು ಎಷ್ಟು ಸುಲಭ! (1 ಸಮುವೇಲ 15:13-15, 20, 21) ಅದು ‘ಗಾಳಿಯನ್ನು ಗುದ್ದುವದಕ್ಕೆ’ ಸಮಾನವಾಗಿದೆ.
ಈ ಕಡೇ ದಿವಸಗಳಲ್ಲಿ ಯೆಹೋವನನ್ನು ಮೆಚ್ಚಿಸಲು ಮತ್ತು ಜೀವವನ್ನು ಪಡೆಯಲು ಬಯಸುವವರು, ಸರಿ ಮತ್ತು ತಪ್ಪು, ದೇವರ ಸಭೆ ಮತ್ತು ಭ್ರಷ್ಟ ಲೋಕದ ನಡುವೆ ಆಯ್ಕೆಯನ್ನು ಮಾಡಲು ಹಿಂದೆಮುಂದೆ ನೋಡಬಾರದು. ಅವರು ‘ಎರಡು ಮನಸ್ಸುಳ್ಳವರೂ, ತಮ್ಮ ನಡತೆಯಲ್ಲೆಲ್ಲಾ ಚಂಚಲರಾಗಿದ್ದು’ ತತ್ತರಿಸುವವರೂ ಆಗಿರುವುದರಿಂದ ದೂರವಿರಬೇಕು. (ಯಾಕೋಬ 1:8) ನಿಷ್ಫಲವಾದ ಬೆನ್ನಟ್ಟುವಿಕೆಗಳ ಹಿಂದೆ ಅವರು ತಮ್ಮ ಪ್ರಯತ್ನಗಳನ್ನು ವ್ಯರ್ಥಗೊಳಿಸಬಾರದು. ಒಬ್ಬ ವ್ಯಕ್ತಿಯು ಈ ನೇರವಾದ, ಏಕಾಗ್ರಚಿತ್ತದ ಮಾರ್ಗಕ್ರಮವನ್ನು ಅನುಸರಿಸುವಾಗ, ಅವನು ಸಂತೋಷದಿಂದಿರುವನು ಮತ್ತು ಅವನ “ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು.”—1 ತಿಮೊಥೆಯ 4:15.
ಹೌದು, ಕ್ರೈಸ್ತ ಓಟವು ಇನ್ನೂ ಮುಂದುವರಿಯುತ್ತಾ ಇದೆ. ನಮ್ಮ ಭವ್ಯ ತರಬೇತುಗಾರನಾದ ಯೆಹೋವನು, ನಮ್ಮ ತಾಳ್ಮೆ ಹಾಗೂ ಅಂತಿಮ ವಿಜಯಕ್ಕಾಗಿ ಆವಶ್ಯಕವಾಗಿರುವ ಉಪದೇಶ ಹಾಗೂ ನೆರವನ್ನು ಪ್ರೀತಿಯಿಂದ ಒದಗಿಸುತ್ತಾನೆ. (ಯೆಶಾಯ 48:17) ಪ್ರಾಚೀನಕಾಲದ ಸ್ಪರ್ಧಾಳುಗಳಂತೆ, ನಾವು ನಂಬಿಕೆಗಾಗಿರುವ ನಮ್ಮ ಹೋರಾಟದಲ್ಲಿ ಸ್ವಶಿಸ್ತು, ಸ್ವನಿಯಂತ್ರಣ ಮತ್ತು ಏಕಾಗ್ರಚಿತ್ತವನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಸರಿಯಾದ ಗುರಿಯನ್ನು ಸಾಧಿಸುವ ನಮ್ಮ ಪ್ರಯತ್ನಗಳಿಗೆ ಹೇರಳವಾದ ಪ್ರತಿಫಲಗಳು ಸಿಗುವವು.—ಇಬ್ರಿಯ 11:6.
[ಪುಟ 31ರಲ್ಲಿರುವ ಚೌಕ]
‘ಅವನಿಗೆ ಎಣ್ಣೆಹಚ್ಚಿ’
ಪ್ರಾಚೀನಕಾಲದ ಗ್ರೀಸ್ನಲ್ಲಿ ಸ್ಪರ್ಧಾಳುಗಳಿಗಿದ್ದ ತರಬೇತಿಯ ಒಂದು ಭಾಗವು, ಮಾಲೀಸು ಮಾಡುವವನಿಂದ ಮಾಡಲ್ಪಡುತ್ತಿತ್ತು. ಅವನ ಕೆಲಸವು, ಕಸರತ್ತು ಮಾಡಲಿದ್ದ ಪುರುಷರ ದೇಹಗಳನ್ನು ಎಣ್ಣೆಯಿಂದ ಮಾಲೀಸು ಮಾಡುವುದಾಗಿತ್ತು. ತರಬೇತುಗಾರರು, “ತರಬೇತಿಗೆ ಮುಂಚೆ ಮಾಂಸಖಂಡಗಳನ್ನು ಕುಶಲ ರೀತಿಯಲ್ಲಿ ನೀವುವುದು ಉಪಯುಕ್ತ ಪರಿಣಾಮಗಳನ್ನು ತರುತ್ತಿತ್ತು, ಮತ್ತು ಜಾಗರೂಕವಾದ, ಸೌಮ್ಯ ನೀವುವಿಕೆಯು ತುಂಬ ದೀರ್ಘ ಸಮಯದ ತರಬೇತನ್ನು ಪೂರ್ಣಗೊಳಿಸಿದ್ದ ಒಬ್ಬ ಸ್ಪರ್ಧಾಳುವಿನ ಮಾಂಸಖಂಡಗಳನ್ನು ಸಡಿಲಿಸುವಂತೆ ಮತ್ತು ಅವನು ಚೇತರಿಸಿಕೊಳ್ಳುವಂತೆ ಸಹಾಯಮಾಡಿತ್ತೆಂಬುದನ್ನು ಗಮನಿಸಿದರು” ಎಂದು ಪ್ರಾಚೀನ ಗ್ರೀಸ್ನಲ್ಲಿ ಒಲಿಂಪಿಕ್ ಆಟಗಳು (ಇಂಗ್ಲಿಷ್) ಹೇಳುತ್ತದೆ.
ನಿಜವಾಗಿ ಎಣ್ಣೆಯನ್ನು ದೇಹಕ್ಕೆ ಉಜ್ಜುವುದು ಹೇಗೆ ಶಮನಕಾರಿಯೂ, ಚಿಕಿತ್ಸಕವೂ, ವಾಸಿಕಾರಕವೂ ಆಗಿರುತ್ತದೊ, ಹಾಗೆಯೇ ದಣಿದುಹೋಗಿರುವ ಒಬ್ಬ ಕ್ರೈಸ್ತ “ಸ್ಪರ್ಧಾಳುವಿಗೆ” ದೇವರ ವಾಕ್ಯದ ಅನ್ವಯಿಸಿಕೊಳ್ಳುವಿಕೆಯು ಅವನನ್ನು ತಿದ್ದಬಲ್ಲದು, ಸಂತೈಸಬಲ್ಲದು ಮತ್ತು ಗುಣಪಡಿಸಬಲ್ಲದು. ಹೀಗೆ ಯೆಹೋವನ ಮಾರ್ಗದರ್ಶನದ ಕೆಳಗೆ, ಸಭೆಯ ಹಿರಿಯರು ಅಂಥ ವ್ಯಕ್ತಿಗಾಗಿ ಪ್ರಾರ್ಥಿಸುವಂತೆ, ಸಾಂಕೇತಿಕವಾಗಿ ಹೇಳುವುದಾದರೆ ‘ಯೆಹೋವನ ಹೆಸರಿನಿಂದ ಅವನಿಗೆ ಎಣ್ಣೆಹಚ್ಚುವಂತೆ’ ಸಲಹೆ ಕೊಡಲಾಗಿದೆ. ಇದು ಆತ್ಮಿಕ ಚೇತರಿಸುವಿಕೆಗಾಗಿ ಒಂದು ಅತ್ಯಾವಶ್ಯಕ ಕ್ರಮವಾಗಿತ್ತು.—ಯಾಕೋಬ 5:13-15; ಕೀರ್ತನೆ 141:5.
[ಪುಟ 31ರಲ್ಲಿರುವ ಚಿತ್ರ]
ಒಂದು ಯಜ್ಞದ ನಂತರ, ಸ್ಪರ್ಧಾಳುಗಳು ತಾವು ಹತ್ತು ತಿಂಗಳುಗಳ ತರಬೇತು ಪಡೆದಿದ್ದೇವೆಂದು ಆಣೆಯಿಟ್ಟು ಹೇಳುತ್ತಿದ್ದರು
[ಕೃಪೆ]
Musée du Louvre, Paris
[ಪುಟ 29ರಲ್ಲಿರುವ ಚಿತ್ರ ಕೃಪೆ]
Copyright British Museum