ನಮ್ಮ ಸಮರ್ಪಣೆಗೆ ಅನುಸಾರವಾಗಿ “ಅನುದಿನವೂ” ಜೀವಿಸುವುದು
“ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ, ತನ್ನ ಯಾತನಾ ಕಂಬವನ್ನು ಅನುದಿನವೂ ಹೊತ್ತುಕೊಂಡು ಸತತವಾಗಿ ನನ್ನ ಹಿಂದೆ ಬರಲಿ.”—ಲೂಕ 9:23, NW.
1. ಕ್ರೈಸ್ತರೋಪಾದಿ ನಮ್ಮ ಯಶಸ್ಸನ್ನು ನಾವು ಅಳೆಯಸಾಧ್ಯವಿರುವ ಒಂದು ವಿಧವು ಯಾವುದು?
“ನಾವು ನಿಜವಾಗಿಯೂ ಸಮರ್ಪಿತ ಪುರುಷರಾಗಿದೆವ್ದೊ?” ಈ ಪ್ರಶ್ನೆಗೆ ಉತ್ತರವು, ಅಮೆರಿಕದ 35 ನೆಯ ಅಧ್ಯಕ್ಷರಾದ ಜಾನ್ ಎಫ್. ಕೆನಡಿಗನುಸಾರ, ಸರಕಾರದಲ್ಲಿ ಜವಾಬ್ದಾರಿಯ ಸ್ಥಾನಗಳಲ್ಲಿರುವವರ ಯಶಸ್ಸನ್ನು ಅಳೆಯುವುದರಲ್ಲಿ ಒಂದು ಅಂಶವಾಗಿದೆ. ಕ್ರೈಸ್ತ ಶುಶ್ರೂಷಕರೋಪಾದಿ ನಮ್ಮ ಯಶಸ್ಸಿಗಾಗಿರುವ ಒಂದು ಪರೀಕ್ಷೆಯಂತೆ, ಈ ಪ್ರಶ್ನೆಯು ಆಳವಾದ ಮಹತ್ವದೊಂದಿಗೆ ಕಾರ್ಯಮಾಡಸಾಧ್ಯವಿದೆ.
2. “ಸಮರ್ಪಣೆ” ಎಂಬ ಪದವನ್ನು ಒಂದು ಡಿಕ್ಷನರಿಯು ಹೇಗೆ ವಿಶದೀಕರಿಸುತ್ತದೆ?
2 ಹಾಗಿದ್ದರೂ, ಸಮರ್ಪಣೆ ಎಂದರೇನು? ವೆಬ್ಸ್ಟರ್ಸ್ ನೈನ್ತ್ ನ್ಯೂ ಕಲೀಜಿಅಟ್ ಡಿಕ್ಷನರಿ ಅದನ್ನು “ಒಬ್ಬ ದೈವಿಕ ವ್ಯಕ್ತಿಗೆ ಅಥವಾ ಪವಿತ್ರವಾದ ಒಂದು ಉಪಯೋಗಕ್ಕೆ ಸಮರ್ಪಿಸಿಕೊಳ್ಳುವ ಒಂದು ಕ್ರಿಯೆ ಅಥವಾ ಸಂಸ್ಕಾರ,” “ವಿಶೇಷವಾದೊಂದು ಉದ್ದೇಶಕ್ಕೆ ಅರ್ಪಿಸಿಕೊಳ್ಳುವುದು ಅಥವಾ ಪ್ರತ್ಯೇಕವಾಗಿರುವುದು,” “ಸ್ವತ್ಯಾಗದ ಭಕ್ತಿ” ಎಂದು ವಿಶದೀಕರಿಸುತ್ತದೆ. ಜಾನ್ ಎಫ್. ಕೆನಡಿ ಆ ಪದವನ್ನು, “ಸ್ವತ್ಯಾಗದ ಭಕ್ತಿ” ಯನ್ನು ಅರ್ಥೈಸಲು ಉಪಯೋಗಿಸುತ್ತಿದ್ದರು ಎಂಬುದು ವ್ಯಕ್ತ. ಕ್ರೈಸ್ತನೊಬ್ಬನಿಗೆ, ಸಮರ್ಪಣೆಯು ಇನ್ನೂ ಹೆಚ್ಚಿನದನ್ನು ಅರ್ಥೈಸುತ್ತದೆ.
3. ಕ್ರೈಸ್ತ ಸಮರ್ಪಣೆ ಎಂದರೇನು?
3 ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಹೇಳಿದ್ದು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆ (“ಯಾತನಾ ಕಂಬ,” NW) ಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ.” (ಮತ್ತಾಯ 16:24) ದೈವಿಕ ಉಪಯೋಗಕ್ಕಾಗಿ ಪ್ರತ್ಯೇಕಗೊಳಿಸಲ್ಪಟ್ಟಿರುವುದು, ಆದಿತ್ಯವಾರದಂದು ಅಥವಾ ಆರಾಧನೆಯ ಯಾವುದಾದರೊಂದು ಸ್ಥಳವನ್ನು ಸಂದರ್ಶಿಸುವಾಗ, ಆರಾಧನೆಯ ಒಂದು ಕ್ರಿಯೆಯನ್ನು ಮಾಡುವುದನ್ನು ಮಾತ್ರ ಒಳಗೊಳ್ಳುವುದಿಲ್ಲ. ಅದು ಒಬ್ಬನ ಇಡೀ ಜೀವನ ಶೈಲಿಯನ್ನು ಒಳಗೊಳ್ಳುತ್ತದೆ. ಒಬ್ಬ ಕ್ರೈಸ್ತನಾಗಿರುವುದರ ಅರ್ಥವು, ಯೇಸು ಕ್ರಿಸ್ತನು ಸೇವಿಸಿದ ಯೆಹೋವ ಎಂಬ ದೇವರನ್ನು ಸೇವಿಸುವಾಗ, ತನ್ನನ್ನು ನಿರಾಕರಿಸಿಕೊಳ್ಳುವುದು ಅಥವಾ ಸ್ವಾರ್ಥ ತ್ಯಾಗಮಾಡುವುದು ಎಂದಾಗಿದೆ. ಅದರ ಜತೆಗೆ, ಕ್ರಿಸ್ತನ ಹಿಂಬಾಲಕನಾಗಿರುವ ಕಾರಣ ಈಡಾಗಬಹುದಾದ ಯಾವುದೇ ಕಷ್ಟಾನುಭವವನ್ನು ತಾಳಿಕೊಳ್ಳುವ ಮೂಲಕ, ಕ್ರೈಸ್ತನೊಬ್ಬನು ತನ್ನ “ಯಾತನಾ ಕಂಬ” ವನ್ನು ಹೊತ್ತುಕೊಳ್ಳುತ್ತಾನೆ.
ಪರಿಪೂರ್ಣ ಮಾದರಿ
4. ಯೇಸುವಿನ ದೀಕ್ಷಾಸ್ನಾನವು ಏನನ್ನು ಸಂಕೇತಿಸಿತು?
4 ಒಬ್ಬನು ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವುದು ಏನನ್ನು ಒಳಗೊಳ್ಳುತ್ತದೆ ಎಂಬುದನ್ನು ಯೇಸು ಭೂಮಿಯಲ್ಲಿದ್ದಾಗ ಪ್ರದರ್ಶಿಸಿದನು. ಅವನ ಭಾವನೆಗಳು ಹೀಗಿದ್ದವು: “ಯಜ್ಞನೈವೇದ್ಯಗಳು ನಿನಗೆ ಇಷ್ಟವಾಗಿರಲಿಲ್ಲ, ನನಗೆ ದೇಹವನ್ನು ಸಿದ್ಧಮಾಡಿಕೊಟ್ಟಿ.” ಅನಂತರ ಅವನು ಕೂಡಿಸಿದ್ದು: “ಇಗೋ, ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ. ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ.” (ಇಬ್ರಿಯ 10:5-7) ಒಂದು ಸಮರ್ಪಿತ ಜನಾಂಗದ ಸದಸ್ಯನೋಪಾದಿ, ಹುಟ್ಟಿನಿಂದ ಅವನು ಯೆಹೋವನಿಗೆ ಸಮರ್ಪಿತನಾಗಿದ್ದನು. ಆದರೂ, ಅವನ ಭೂಶುಶ್ರೂಷೆಯ ಪ್ರಾರಂಭದಲ್ಲಿ, ಯೆಹೋವನ ಚಿತ್ತವನ್ನು ಮಾಡಲು ತನ್ನನ್ನೇ ಒಪ್ಪಿಸಿಕೊಳ್ಳುವುದರ ಸಂಕೇತದೋಪಾದಿ, ದೀಕ್ಷಾಸ್ನಾನಕ್ಕೆ ಅವನು ತನ್ನನ್ನು ನೀಡಿಕೊಂಡನು, ಅವನ ವಿಷಯದಲ್ಲಿ ತನ್ನ ಜೀವವನ್ನು ಪ್ರಾಯಶ್ಚಿತ್ತ ಯಜ್ಞದಂತೆ ಅರ್ಪಿಸುವುದನ್ನು ಅದು ಒಳಗೊಳ್ಳಲ್ಲಿತ್ತು. ಹೀಗೆ ಅವನು, ಯೆಹೋವನು ಏನನ್ನೇ ಇಚ್ಛಿಸಲಿ ಅದನ್ನು ಮಾಡುವಂತೆ ಕ್ರೈಸ್ತರಿಗೆ ಒಂದು ಮಾದರಿಯನ್ನಿಟ್ಟನು.
5. ಪ್ರಾಪಂಚಿಕ ವಸ್ತುಗಳ ಕುರಿತು ಒಂದು ಆದರ್ಶಪ್ರಾಯ ನೋಟವನ್ನು ಯೇಸು ಹೇಗೆ ಪ್ರದರ್ಶಿಸಿದನು?
5 ತನ್ನ ದೀಕ್ಷಾಸ್ನಾನದ ಬಳಿಕ, ಯೇಸು ಅಂತಿಮವಾಗಿ ಒಂದು ಯಜ್ಞಾರ್ಪಿತ ಮರಣಕ್ಕೆ ನಡೆಸಿದ ಜೀವನ ಮಾರ್ಗವನ್ನು ಅನುಸರಿಸಿದನು. ಹಣವನ್ನು ಸಂಪಾದಿಸುವುದರಲ್ಲಿ ಅಥವಾ ಹಾಯಾದ ಜೀವನವನ್ನು ಜೀವಿಸುವುದರಲ್ಲಿ ಅವನು ಆಸಕ್ತನಾಗಿರಲಿಲ್ಲ. ಬದಲಿಗೆ, ಅವನ ಶುಶ್ರೂಷೆಯು ಅವನ ಜೀವಿತದ ಅತ್ಯಂತ ಪ್ರಾಮುಖ್ಯವಾದ ಭಾಗವಾಗಿತ್ತು. “ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ,” ಎಂದು ತನ್ನ ಶಿಷ್ಯರಿಗೆ ಅವನು ಬುದ್ಧಿ ಹೇಳಿದನು ಮತ್ತು ಸ್ವತಃ ಈ ಮಾತುಗಳಿಗೆ ಅನುಗುಣವಾಗಿ ಜೀವಿಸಿದನು. (ಮತ್ತಾಯ 6:33) ಒಮ್ಮೆ ಅವನು ಹೀಗೆಯೂ ಹೇಳಿದ್ದುಂಟು: “ನರಿಗಳಿಗೆ ಗುದ್ದುಗಳವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ.” (ಮತ್ತಾಯ 8:20) ತನ್ನ ಹಿಂಬಾಲಕರಿಂದ ಹಣವನ್ನು ಸುಲಿಯುವುದಕ್ಕಾಗಿ ತನ್ನ ಬೋಧನೆಗಳನ್ನು ಅವನು ಸರಿಹೊಂದಿಸಬಹುದಿತ್ತು. ಒಬ್ಬ ಮರಗೆಲಸದವನಾಗಿದ್ದ ಕಾರಣ, ತನ್ನ ಶುಶ್ರೂಷೆಯಿಂದ ಅವನು ಬಿಡುವನ್ನು ಪಡೆದು, ಮಾರಾಟಮಾಡಲು ಒಂದು ಸುಂದರವಾದ ಪೀಠೋಪಕರಣವನ್ನು ಮಾಡಿ, ಇದರಿಂದ ಒಂದಿಷ್ಟು ಹೆಚ್ಚಿನ ಬೆಳ್ಳಿ ನಾಣ್ಯಗಳನ್ನು ಪಡೆದಿರಬಹುದಿತ್ತು. ಆದರೆ ಪ್ರಾಪಂಚಿಕ ಏಳಿಗೆಯನ್ನು ಪಡೆಯಲು ಅವನು ತನ್ನ ಕೌಶಲಗಳನ್ನು ಬಳಸಲಿಲ್ಲ. ದೇವರ ಸಮರ್ಪಿತ ಸೇವಕರೋಪಾದಿ, ಪ್ರಾಪಂಚಿಕ ವಿಷಯಗಳ ಕುರಿತು ಸರಿಯಾದ ಯಥಾದೃಷ್ಟಿಯನ್ನು ಪಡೆದಿರುವುದರಲ್ಲಿ ನಾವು ಯೇಸುವನ್ನು ಅನುಕರಿಸುತ್ತಿದ್ದೇವೊ?—ಮತ್ತಾಯ 6:24-34.
6. ದೇವರ ಸ್ವತ್ಯಾಗದ ಸಮರ್ಪಿತ ಸೇವಕರಾಗಿರುವಲ್ಲಿ ನಾವು ಯೇಸುವನ್ನು ಹೇಗೆ ಅನುಕರಿಸಬಲ್ಲೆವು?
6 ದೇವರಿಗೆ ತನ್ನ ಸೇವೆಯನ್ನು ಪ್ರಥಮವಾಗಿಡುವುದರಲ್ಲಿ, ಯೇಸು ತನ್ನ ಸ್ವಂತ ಅಭಿರುಚಿಗಳನ್ನು ಅರಸಲಿಲ್ಲ. ತನ್ನ ಸಾರ್ವಜನಿಕ ಶುಶ್ರೂಷೆಯ ಮೂರುವರೆ ವರ್ಷಗಳ ಸಮಯದಲ್ಲಿನ ಅವನ ಜೀವಿತವು, ಸ್ವತ್ಯಾಗದ ಜೀವಿತವಾಗಿತ್ತು. ಒಂದು ಸಂದರ್ಭದಲ್ಲಿ, ಕಾರ್ಯಮಗ್ನ ದಿನದ ತರುವಾಯ, ಒಂದು ಊಟವನ್ನು ಮಾಡಲೂ ಸಮಯವನ್ನು ತೆಗೆದುಕೊಳ್ಳದೆ, “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದ” ಜನರಿಗೆ ಕಲಿಸಲು ಯೇಸು ಸಿದ್ಧನಾಗಿದ್ದನು. (ಮತ್ತಾಯ 9:36; ಮಾರ್ಕ 6:31-34) “ದಾರಿನಡೆದು ದಣಿ” ದಿದ್ದರೂ, ಸುಖರ್ನಲ್ಲಿ ಯಾಕೋಬನ ಬಾವಿಗೆ ಬಂದ ಒಬ್ಬ ಸಮಾರ್ಯದ ಸ್ತ್ರೀಯೊಂದಿಗೆ ಮಾತಾಡುವುದರಲ್ಲಿ ಅವನು ಮೊದಲ ಹೆಜ್ಜೆಯನ್ನು ತೆಗೆದುಕೊಂಡನು. (ಯೋಹಾನ 4:6, 7, 13-15) ಅವನು ಯಾವಾಗಲೂ ತನ್ನ ಕ್ಷೇಮಕ್ಕಿಂತ ಇತರರ ಕ್ಷೇಮವನ್ನು ಪರಿಗಣಿಸಿದನು. (ಯೋಹಾನ 11:5-15) ದೇವರನ್ನು ಮತ್ತು ಇತರರನ್ನು ಸೇವಿಸಲು ನಮ್ಮ ಸ್ವಂತ ಅಭಿರುಚಿಗಳನ್ನು ಉದಾರವಾಗಿ ತ್ಯಾಗಮಾಡುವ ಮೂಲಕ ನಾವು ಯೇಸುವನ್ನು ಅನುಕರಿಸಬಲ್ಲೆವು. (ಯೋಹಾನ 6:38) ಅವಶ್ಯವಿರುವ ಕನಿಷ್ಠವನ್ನು ಮಾತ್ರ ಮಾಡುವುದಕ್ಕಿಂತ ದೇವರನ್ನು ನಿಜವಾಗಿಯೂ ಹೇಗೆ ಸಂತೋಷಪಡಿಸಬಲ್ಲೆವು ಎಂಬ ವಿಷಯದಲ್ಲಿ ಯೋಚಿಸುವ ಮೂಲಕ, ನಾವು ನಮ್ಮ ಸಮರ್ಪಣೆಗೆ ಅನುಸಾರವಾಗಿ ಜೀವಿಸುವೆವು.
7. ಯೆಹೋವನಿಗೆ ಯಾವಾಗಲೂ ಘನತೆಯನ್ನು ಕೊಡುವುದರಲ್ಲಿ ನಾವು ಯೇಸುವನ್ನು ಹೇಗೆ ಅನುಕರಿಸಬಲ್ಲೆವು?
7 ಯೇಸು ಜನರಿಗೆ ಸಹಾಯ ಮಾಡುವ ಮೂಲಕ ಯಾವ ವಿಧದಲ್ಲೂ ತನ್ನ ಕಡೆಗೆ ಗಮನವನ್ನು ಆಕರ್ಷಿಸಲು ಪ್ರಯತ್ನಿಸತ್ತಿರಲಿಲ್ಲ. ದೇವರ ಚಿತ್ತವನ್ನು ಮಾಡಲು ಅವನು ಆತನಿಗೆ ಸಮರ್ಪಿತನಾಗಿದ್ದನು. ಆದುದರಿಂದ ನೆರವೇರಿದ್ದ ಎಲ್ಲ ವಿಷಯಗಳಿಗೆ ತನ್ನ ತಂದೆಯಾದ ಯೆಹೋವನು ಸಕಲ ಮಹಿಮೆಯನ್ನು ಪಡೆದನೆಂಬುದನ್ನು ಯಾವಾಗಲೂ ಅವನು ಖಚಿತಪಡಿಸಿಕೊಂಡನು. “ಒಳ್ಳೇ” ಎಂಬ ಪದವನ್ನು ಒಂದು ಪದವಿಯಂತೆ ಬಳಸುತ್ತಾ, ಒಬ್ಬಾನೊಬ್ಬ ಅರಸನು ಯೇಸುವನ್ನು “ಒಳ್ಳೇ ಬೋಧಕನೇ” ಎಂದು ಸಂಬೋಧಿಸಿದಾಗ, “ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಲ್ಲ” ಎಂದು ಹೇಳುವ ಮೂಲಕ ಅವನನ್ನು ಯೇಸು ತಿದ್ದದನು. (ಲೂಕ 18:18, 19; 5:19, 30) ಘನತೆಯನ್ನು ನಮ್ಮ ಕಡೆಗೆ ನಿರ್ದೇಶಿಸದೆ ಯೆಹೋವನ ಕಡೆಗೆ ನಿರ್ದೇಶಿಸುವುದರಲ್ಲಿ ನಾವು ಯೇಸುವಿನಂತೆ ತರ್ವೆಪಡುತ್ತೇವೊ?
8. (ಎ) ಸಮರ್ಪಿತ ಪುರುಷನೋಪಾದಿ, ಯೇಸು ತನ್ನನ್ನು ಹೇಗೆ ಲೋಕದಿಂದ ಪ್ರತ್ಯೇಕವಾಗಿರಿಸಿಕೊಂಡನು? (ಬಿ) ನಾವು ಅವನನ್ನು ಹೇಗೆ ಅನುಕರಿಸತಕ್ಕದ್ದು?
8 ಭೂಮಿಯ ಮೇಲೆ ತನ್ನ ಸಮರ್ಪಿತ ಜೀವನ ಮಾರ್ಗದ ಉದ್ದಕ್ಕೂ, ದೈವಿಕ ಸೇವೆಗಾಗಿ ಯೇಸು ತನ್ನನ್ನು ಮೀಸಲಾಗಿರಿಸಿಕೊಂಡಿದ್ದನೆಂದು ಪ್ರದರ್ಶಿಸಿದನು. ಪ್ರಾಯಶ್ಚಿತ್ತ ಯಜ್ಞವಾಗಿರಲು ತನ್ನನ್ನು ಶುದ್ಧವಾಗಿಟ್ಟುಕೊಂಡನು, ಇದರಿಂದ ತನ್ನನ್ನೇ “ಪೂರ್ಣಾಂಗವಾದ ನಿಷ್ಕಳಂಕ ಯಜ್ಞದ ಕುರಿ” ಯೋಪಾದಿ ಅವನು ಅರ್ಪಿಸಿಕೊಳ್ಳಸಾಧ್ಯವಿತ್ತು. (1 ಪೇತ್ರ 1:19; ಇಬ್ರಿಯ 7:26) ಮೋಶೆಯ ಧರ್ಮಶಾಸ್ತ್ರದ ಎಲ್ಲ ಆಜ್ಞೆಗಳನ್ನು ಅವನು ಪಾಲಿಸಿದನು, ಹೀಗೆ ಆ ಧರ್ಮಶಾಸ್ತ್ರವನ್ನು ನೆರವೇರಿಸಿದನು. (ಮತ್ತಾಯ 5:17; 2 ಕೊರಿಂಥ 1:20) ನೈತಿಕ ವಿಷಯಗಳ ಕುರಿತಾದ ತನ್ನ ಸ್ವಂತ ಬೋಧನೆಗೆ ಅನುಗುಣವಾಗಿ ಅವನು ಜೀವಿಸಿದನು. (ಮತ್ತಾಯ 5:27, 28) ಕೆಟ್ಟ ಉದ್ದೇಶಗಳ ಕುರಿತಾಗಿ ಅವನನ್ನು ಯಾರೂ ಯುಕ್ತವಾಗಿ ಆಪಾದಿಸುವಂತಿರಲಿಲ್ಲ. ನಿಶ್ಚಯವಾಗಿ, ಅವನು “ಅಧರ್ಮವನ್ನು ದ್ವೇಷಿಸಿ” ದನು. (ಇಬ್ರಿಯ 1:9) ದೇವರ ದಾಸರೋಪಾದಿ, ಯೆಹೋವನ ದೃಷ್ಟಿಯಲ್ಲಿ ನಮ್ಮ ಜೀವಿತಗಳನ್ನು ಮತ್ತು ನಮ್ಮ ಉದ್ದೇಶಗಳನ್ನೂ ಶುದ್ಧವಾಗಿಟ್ಟುಕೊಳ್ಳುವುದರಲ್ಲಿ ನಾವು ಯೇಸುವನ್ನು ಅನುಕರಿಸೋಣ.
ಎಚ್ಚರಿಕೆಯ ಉದಾಹರಣೆಗಳು
9. ಯಾವ ಎಚ್ಚರಿಕೆಯ ಉದಾಹರಣೆಯನ್ನು ಪೌಲನು ಸೂಚಿಸಿದನು, ಮತ್ತು ಈ ಉದಾಹರಣೆಯನ್ನು ನಾವು ಏಕೆ ಪರಿಗಣಿಸತಕ್ಕದ್ದು?
9 ಯೇಸುವಿನ ಉದಾಹರಣೆಗೆ ತದ್ವಿರುದ್ಧವಾಗಿ ಇಸ್ರಾಯೇಲ್ಯರ ಎಚ್ಚರಿಕೆಯ ಉದಾಹರಣೆ ನಮಗಿದೆ. ಯೆಹೋವನು ತಮಗೆ ಮಾಡಲು ಹೇಳಿದ ಎಲ್ಲವನ್ನು ತಾವು ಮಾಡುವೆವು ಎಂದು ಅವರು ಘೋಷಿಸಿದ ನಂತರವೂ, ಆತನ ಚಿತ್ತವನ್ನು ಮಾಡುವುದರಲ್ಲಿ ಅವರು ವಿಫಲರಾದರು. (ದಾನಿಯೇಲ 9:11) ಇಸ್ರಾಯೇಲ್ಯರಿಗೆ ಸಂಭವಿಸಿದ ವಿಷಯದಿಂದ ಕಲಿಯುವಂತೆ ಅಪೊಸ್ತಲ ಪೌಲನು ಕ್ರೈಸ್ತರನ್ನು ಉತ್ತೇಜಿಸಿದನು. ಕೊರಿಂಥದವರಿಗೆ ಬರೆದ ತನ್ನ ಮೊದಲನೆಯ ಪತ್ರದಲ್ಲಿ ಪೌಲನು ಸೂಚಿಸಿದ ಕೆಲವು ಘಟನೆಗಳನ್ನು ನಾವು ಪರೀಕ್ಷಿಸೋಣ ಮತ್ತು ನಮ್ಮ ಸಮಯದಲ್ಲಿ ದೇವರ ಸಮರ್ಪಿತ ಸೇವಕರಿಂದ ತೊರೆಯಲ್ಪಡಬೇಕಾದ ಅಪಾಯಗಳು ಯಾವುವೆಂದು ನೋಡೋಣ.—1 ಕೊರಿಂಥ 10:1-6, 11.
10. (ಎ) ಇಸ್ರಾಯೇಲ್ಯರು ‘ಕೆಟ್ಟ ವಿಷಯಗಳನ್ನು ಆಶಿಸಿದ್ದು’ ಹೇಗೆ? (ಬಿ) ಎರಡನೆಯ ಬಾರಿ ಅವರು ಆಹಾರದ ಕುರಿತು ಗುಣುಗುಟ್ಟಿದಾಗ, ಇಸ್ರಾಯೇಲ್ಯರು ಏಕೆ ಹೆಚ್ಚು ಹೊಣೆಗಾರರಾಗಿದ್ದರು, ಮತ್ತು ಎಚ್ಚರಿಕೆಯ ಈ ಉದಾಹರಣೆಯಿಂದ ನಾವು ಏನನ್ನು ಕಲಿಯಬಲ್ಲೆವು?
10 ಮೊದಲು, “ಕೆಟ್ಟ ವಿಷಯಗಳನ್ನು ಆಶಿ” ಸುತ್ತಿರಬಾರದೆಂದು ಪೌಲನು ಎಚ್ಚರಿಸಿದನು. (1 ಕೊರಿಂಥ 10:6) ತಿನ್ನಲು ಕೇವಲ ಮನ್ನ ಇರುವುದರ ಕುರಿತು ಇಸ್ರಾಯೇಲ್ಯರು ದೂರು ಸಲ್ಲಿಸಿದ ಸಂದರ್ಭದ ಕುರಿತು ಅದು ನಿಮಗೆ ಜ್ಞಾಪಕ ಹುಟ್ಟಿಸಬಹುದು. ಯೆಹೋವನು ಅವರಿಗೆ ಲಾವಕ್ಕಿಯನ್ನು ಕಳುಹಿಸಿದನು. ಇಸ್ರಾಯೇಲ್ಯರು ಯೆಹೋವನಿಗೆ ತಮ್ಮ ಸಮರ್ಪಣೆಯನ್ನು ಘೋಷಿಸುವ ಸ್ವಲ್ಪ ಮುಂಚೆ, ಸುಮಾರು ಒಂದು ವರ್ಷದ ಹಿಂದೆ ತದ್ರೀತಿಯ ಯಾವುದೊ ಸಂಗತಿಯು ಸೀನ್ ಎಂಬ ಅರಣ್ಯದಲ್ಲಿ ಸಂಭವಿಸಿತ್ತು. (ವಿಮೋಚನಕಾಂಡ 16:1-3, 12, 13) ಆದರೆ ಸನ್ನಿವೇಶವು ನಿಕರವಾಗಿ ಅದೇ ಆಗಿರಲಿಲ್ಲ. ಮೊದಲ ಬಾರಿಗೆ ಯೆಹೋವನು ಲಾವಕ್ಕಿಯನ್ನು ಒದಗಿಸಿದಾಗ, ಅವರ ಗುಣುಗುಟ್ಟುವಿಕೆಗೆ ಯೆಹೋವನು ಇಸ್ರಾಯೇಲ್ಯರನ್ನು ವಿಚಾರಣೆಗೆ ಗುರಿಪಡಿಸಲಿಲ್ಲ. ಈ ಸಮಯವಾದರೊ, ಸನ್ನಿವೇಶವು ಭಿನ್ನವಾಗಿತ್ತು. “ಆ ಮಾಂಸವನ್ನು ಇನ್ನೂ ಆಹಾರಮಾಡಿಕೊಳ್ಳುತ್ತಿರುವಾಗ ಅದು ಮುಗಿದುಹೋಗುವದರೊಳಗಾಗಿಯೇ ಯೆಹೋವನು ಅವರ ಮೇಲೆ ಕೋಪಗೊಂಡು ಬಹಳ ಜನರನ್ನು ಘೋರವ್ಯಾಧಿಯಿಂದ ಸಾಯಿಸಿದನು.” (ಅರಣ್ಯಕಾಂಡ 11:4-6, 31-34) ಯಾವುದು ಬದಲಾಗಿತ್ತು? ಸಮರ್ಪಿತ ಜನಾಂಗದೋಪಾದಿ, ಅವರು ಈಗ ತಮ್ಮ ಕ್ರಿಯೆಗಳಿಗೆ ಹೊಣೆಗಾರರಾಗಿದ್ದರು. ಯೆಹೋವನು ಮಾತಾಡಿದ್ದೆಲ್ಲವನ್ನು ಮಾಡಲು ಅವರು ವಾಗ್ದಾನಿಸಿದ್ದರೂ, ಯೆಹೋವನ ಒದಗಿಸುವಿಕೆಗಳಿಗಾಗಿದ್ದ ಅವರ ಗಣ್ಯತೆಯ ಕೊರತೆಯು, ಯೆಹೋವನ ವಿರುದ್ಧವಾಗಿ ದೂರು ಸಲ್ಲಿಸುವಂತೆ ಅವರನ್ನು ನಡೆಸಿತು! ಯೆಹೋವನ ಮೇಜಿನ ಕುರಿತು ಇಂದು ದೂರುವುದು ತದ್ರೀತಿಯದ್ದಾಗಿದೆ. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ’ನ ಮುಖಾಂತರ ಯೆಹೋವನ ಆತ್ಮಿಕ ಒದಗಿಸುವಿಕೆಗಳನ್ನು ಗಣ್ಯಮಾಡಲು ಕೆಲವರು ತಪ್ಪಿಹೋಗುತ್ತಾರೆ. (ಮತ್ತಾಯ 24:45-47) ಹಾಗಿದ್ದರೂ, ನಮ್ಮ ಸಮರ್ಪಣೆಯು, ನಾವು ಕೃತಜ್ಞತಾಪೂರ್ವಕವಾಗಿ ಯೆಹೋವನು ನಮಗಾಗಿ ಮಾಡಿರುವುದನ್ನು ಜ್ಞಾಪಿಸಿಕೊಳ್ಳುವಂತೆ ಮತ್ತು ಯೆಹೋವನು ಸರಬರಾಯಿ ಮಾಡುವ ಆತ್ಮಿಕ ಆಹಾರವನ್ನು ಸ್ವೀಕರಿಸುವಂತೆ ಕೇಳಿಕೊಳ್ಳುತ್ತದೆ ಎಂಬುದನ್ನು ನೆನಪಿನಲ್ಲಿಡಿರಿ.
11. (ಎ) ಯೆಹೋವನಿಗೆ ಸಲ್ಲಿಸುತ್ತಿದ್ದ ತಮ್ಮ ಆರಾಧನೆಯನ್ನು ಇಸ್ರಾಯೇಲ್ಯರು ವಿಗ್ರಹಾರಾಧನೆಯಿಂದ ಹೇಗೆ ಮಲಿನಗೊಳಿಸಿದರು? (ಬಿ) ಒಂದು ಬಗೆಯ ವಿಗ್ರಹಾರಾಧನೆಯಿಂದ ನಾವು ಹೇಗೆ ಪ್ರಭಾವಿತರಾಗಸಾಧ್ಯವಿದೆ?
11 ಮುಂದೆ, ಪೌಲನು ಎಚ್ಚರಿಸಿದ್ದು: “ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿದ್ದರು; . . . ನೀವು ವಿಗ್ರಹಾರಾಧಕರಾಗಬೇಡಿರಿ.” (1 ಕೊರಿಂಥ 10:7) ಇಲ್ಲಿ ಅಪೊಸ್ತಲನು, ಸೀನಾಯಿ ಬೆಟ್ಟದಲ್ಲಿ ಯೆಹೋವನೊಂದಿಗೆ ಇಸ್ರಾಯೇಲ್ಯರು ಒಡಂಬಡಿಕೆಯನ್ನು ವ್ಯವಸ್ಥಿತಗೊಳಿಸಿದ ಕೂಡಲೇ ಸಂಭವಿಸಿದ ಬಸವನ ಪೂಜೆಯನ್ನು ಸೂಚಿಸುತ್ತಿದನ್ದೆಂಬುದು ಸುವ್ಯಕ್ತ. ನೀವು ಹೀಗೆ ಹೇಳಬಹುದು, ‘ಯೆಹೋವನ ಒಬ್ಬ ಸಮರ್ಪಿತ ಸೇವಕನೋಪಾದಿ, ನಾನೆಂದಿಗೂ ವಿಗ್ರಹಾರಾಧನೆಯಲ್ಲಿ ಸಿಕ್ಕಿಕೊಳ್ಳೆನು.’ ಇಸ್ರಾಯೇಲ್ಯರ ದೃಷ್ಟಿಕೋನದಿಂದ ಗಮನಿಸುವುದಾದರೆ, ಅವರು ಯೆಹೋವನನ್ನು ಆರಾಧಿಸುವುದನ್ನು ನಿಲ್ಲಿಸಲಿಲ್ಲ; ಆದರೂ ದೇವರಿಗೆ ಯಾವುದು ಅಸಹ್ಯವಾಗಿತ್ತೊ ಅಂಥ ಬಸವನ ಪೂಜೆಯ ಒಂದು ಆಚರಣೆಯನ್ನು ತಂದರು. ಈ ರೀತಿಯ ಆರಾಧನೆಯು ಏನನ್ನು ಒಳಗೊಂಡಿತು? ಬಸವನ ಮುಂದೆ ಜನರು ಬಲಿಗಳನ್ನು ಅರ್ಪಿಸಿದರು, ಮತ್ತು ನಂತರ ಅವರು “ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು; ಆ ಮೇಲೆ ಎದ್ದು ಕುಣಿದಾಡಿದರು.” (ವಿಮೋಚನಕಾಂಡ 32:4-6) ಇಂದು, ತಾವು ಯೆಹೋವನನ್ನು ಆರಾಧಿಸುತ್ತೇವೆಂದು ಕೆಲವರು ಹೇಳಿಕೊಳ್ಳಬಹುದು. ಆದರೆ ಅವರ ಜೀವಿತಗಳು ಯೆಹೋವನ ಆರಾಧನೆಯ ಮೇಲಲ್ಲ, ಆದರೆ ಈ ಲೋಕದ ವಿಷಯಗಳ ಸುಖಾನುಭವದ ಮೇಲೆ ಕೇಂದ್ರೀಕೃತವಾಗಿರಬಹುದು, ಮತ್ತು ಇವುಗಳ ಸುತ್ತ ಯೆಹೋವನ ಕಡೆಗಿರುವ ತಮ್ಮ ಸೇವೆಯನ್ನು ಹೊಂದಿಸಲು ಅವರು ಪ್ರಯತ್ನಿಸುತ್ತಾರೆ. ಇದು ಒಂದು ಬಂಗಾರದ ಬಸವನಿಗೆ ತಲೆಬಾಗುವಷ್ಟು ವಿಪರೀತ ವಿಷಯವಲ್ಲ ನಿಜ, ಆದರೆ ತತ್ವದಲ್ಲಿ ಅದು ತೀರ ಭಿನ್ನವಾಗಿಲ್ಲ. ಒಬ್ಬನ ಸ್ವಂತ ಬಯಕೆಯನ್ನು ಒಂದು ದೇವರನ್ನಾಗಿ ಮಾಡುವುದು, ಯೆಹೋವನಿಗೆ ಮಾಡಿದ ಒಬ್ಬನ ಸಮರ್ಪಣೆಗೆ ಅನುಸಾರವಾಗಿ ಜೀವಿಸುವಂತೆಯೇ ಇರುವುದಿಲ್ಲ.—ಫಿಲಿಪ್ಪಿ 3:19.
12. ಪೆಗೋರನ ಬಾಳನೊಂದಿಗೆ ಇಸ್ರಾಯೇಲ್ಯರಿಗಾದ ಅನುಭವದಿಂದ, ನಮ್ಮನ್ನು ನಿರಾಕರಿಸಿಕೊಳ್ಳುವುದರ ಕುರಿತು ನಾವು ಏನನ್ನು ಕಲಿಯುತ್ತೇವೆ?
12 ಪೌಲನು ತಿಳಿಸಿದ ಮುಂದಿನ ಎಚ್ಚರಿಕೆಯ ಉದಾಹರಣೆಯಲ್ಲಿ ಒಂದು ಬಗೆಯ ಮನೋರಂಜನೆಯೂ ಒಳಗೊಂಡಿತ್ತು. “ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತುಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವಮಾಡದೆ ಇರೋಣ.” (1 ಕೊರಿಂಥ 10:8) ಮೋವಾಬ್ನ ಹೆಣ್ಣುಮಕ್ಕಳಿಂದ ನೀಡಲ್ಪಟ್ಟ ಅನೈತಿಕ ಸುಖದಿಂದ ಆಕರ್ಷಿತರಾದ ಇಸ್ರಾಯೇಲ್ಯರು, ಶಿಟ್ಟೀಮಿನಲ್ಲಿ ಪೆಗೋರದ ಬಾಳನನ್ನು ಆರಾಧಿಸುವುದಕ್ಕೆ ನಡೆಸಲ್ಪಟ್ಟರು. (ಅರಣ್ಯಕಾಂಡ 25:1-3, 9) ಯೆಹೋವನ ಚಿತ್ತವನ್ನು ಮಾಡಲು ನಮ್ಮನ್ನು ನಿರಾಕರಿಸಿಕೊಳ್ಳುವುದು, ನೈತಿಕವಾಗಿ ಶುದ್ಧವಾಗಿರುವ ವಿಷಯಗಳಿಗೆ ಆತನ ಮಟ್ಟಗಳನ್ನು ಸ್ವೀಕರಿಸುವುದನ್ನು ಒಳಗೊಳ್ಳುತ್ತದೆ. (ಮತ್ತಾಯ 5:27-30) ಕ್ಷೀಣಿಸುತ್ತಿರುವ ಮಟ್ಟಗಳ ಈ ಯುಗದಲ್ಲಿ, ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂಬುದನ್ನು ನಿರ್ಧರಿಸಲು ಯೆಹೋವನ ಅಧಿಕಾರಕ್ಕೆ ಅಧೀನರಾಗುತ್ತಾ, ಎಲ್ಲ ರೀತಿಯ ಅನೈತಿಕ ನಡತೆಯಿಂದ ನಮ್ಮನ್ನು ಶುದ್ಧರನ್ನಾಗಿ ಇಟ್ಟುಕೊಳ್ಳುವ ಅಗತ್ಯದ ಕುರಿತು ನಾವು ಜ್ಞಾಪಿಸಲ್ಪಡುತ್ತೇವೆ.—1 ಕೊರಿಂಥ 6:9-11.
13. ಯೆಹೋವನಿಗೆ ಮಾಡುವ ಸಮರ್ಪಣೆಯು ಏನನ್ನು ಒಳಗೊಳ್ಳುತ್ತದೆ ಎಂಬುದನ್ನು ತಿಳಿಯಲು ನಮಗೆ ಫೀನೆಹಾಸನ ಉದಾಹರಣೆಯು ಹೇಗೆ ಸಹಾಯ ಮಾಡುತ್ತದೆ?
13 ಶಿಟ್ಟೀಮಿನಲ್ಲಿ ಅನೇಕರು ಜಾರತ್ವದ ಪಾಶಕ್ಕೆ ಬಿದ್ದರೂ, ಕೆಲವರು ಯೆಹೋವನಿಗೆ ಮಾಡಿದ ಜನಾಂಗೀಯ ಸಮರ್ಪಣೆಗೆ ಅನುಸಾರವಾಗಿ ಜೀವಿಸಿದರು. ಅವರಲ್ಲಿ ಫೀನೆಹಾಸನು ಹುರುಪಿನಲ್ಲಿ ಪ್ರಮುಖನಾಗಿದ್ದನು. ಒಬ್ಬ ಇಸ್ರಾಯೇಲ್ಯ ಮುಖ್ಯಸ್ಥನು ಒಬ್ಬಾಕೆ ಮಿದ್ಯಾನ್ ಸ್ತ್ರೀಯನ್ನು ತನ್ನ ಗುಡಾರದೊಳಗೆ ಕರೆದುತರುವುದನ್ನು ಅವನು ನೋಡಿದಾಗ, ಫೀನೆಹಾಸನು ಕೂಡಲೆ ತನ್ನ ಕೈಯಲ್ಲಿ ಒಂದು ಈಟಿಯನ್ನು ತೆಗೆದುಕೊಂಡು ಅವರನ್ನು ತಿವಿದನು. ಯೆಹೋವನು ಮೋಶೆಗೆ ಹೇಳಿದ್ದು: “ನಾನೇ ನನ್ನ ಗೌರವವನ್ನು ಕಾಪಾಡಿಕೊಳ್ಳುವ ಮೇರೆಗೆ . . . ಫೀನೆಹಾಸನು ನನ್ನ ಗೌರವವನ್ನು ಕಾಪಾಡಿದರ್ದಿಂದ ಇಸ್ರಾಯೇಲ್ಯರ ಮೇಲಿದ್ದ ನನ್ನ ಕೋಪವನ್ನು ತೊಲಗಿಸಿದ್ದಾನೆ. ಹೀಗಿರುವದರಿಂದ ನಾನು ನನ್ನ ಗೌರವವನ್ನು ಕಾಪಾಡಿಕೊಳ್ಳುವದಕ್ಕಾಗಿ ಇಸ್ರಾಯೇಲ್ಯರನ್ನು ನಿರ್ಮೂಲಮಾಡಬೇಕಾದ ಅಗತ್ಯವಿಲ್ಲ.” (ಅರಣ್ಯಕಾಂಡ 25:11) ಯೆಹೋವನ ಕಡೆಗೆ ಗೌರವವನ್ನು ಕಾಪಾಡಿಕೊಳ್ಳುವುದು—ಅದನ್ನೇ ಸಮರ್ಪಣೆಯು ಅರ್ಥೈಸುತ್ತದೆ. ಯೆಹೋವನಿಗೆ ಮಾಡಿರುವ ಸಮರ್ಪಣೆಯು ನಮ್ಮ ಹೃದಯಗಳಲ್ಲಿ ಆಕ್ರಮಿಸಬೇಕಾದ ಸ್ಥಾನವನ್ನು ಬೇರೆ ಯಾವುದೇ ವಿಷಯವು ಆಕ್ರಮಿಸುವಂತೆ ನಾವು ಅನುಮತಿಸಸಾಧ್ಯವಿಲ್ಲ. ಯೆಹೋವನಿಗಾಗಿರುವ ನಮ್ಮ ಹುರುಪು, ಅಶ್ಲೀಲ ಅನೈತಿಕತೆಯನ್ನು ಸಹಿಸದೆ ಅದನ್ನು ಹಿರಿಯರಿಗೆ ತಿಳಿಸುವ ಮೂಲಕ ಸಭೆಯನ್ನು ಶುದ್ಧವಾಗಿಡುವಂತೆಯೂ ನಮ್ಮನ್ನು ಪ್ರೇರೇಪಿಸುತ್ತದೆ.
14. (ಎ) ಇಸ್ರಾಯೇಲ್ಯರು ಯೆಹೋವನನ್ನು ಪರೀಕೆಗ್ಷೆ ಒಳಪಡಿಸಿದ್ದು ಹೇಗೆ? (ಬಿ) ಯೆಹೋವನ ಕಡೆಗೆ ಸಂಪೂರ್ಣವಾದ ಸಮರ್ಪಣೆಯು “ಆಯಾಸಗೊಳ್ಳದೆ” ಇರುವಂತೆ ನಮಗೆ ಹೇಗೆ ಸಹಾಯ ಮಾಡುತ್ತದೆ?
14 ಪೌಲನು ಇನ್ನೊಂದು ಎಚ್ಚರಿಕೆಯ ಉದಾಹರಣೆಯ ಕುರಿತು ಸೂಚಿಸಿ ಹೇಳಿದನು: “ಅವರಲ್ಲಿ ಕೆಲವರು ಕರ್ತನನ್ನು ಪರೀಕ್ಷಿಸಿ ಸರ್ಪಗಳಿಂದ ನಾಶವಾದಂತೆ ನಾವು ಪರೀಕ್ಷಿಸದೆ ಇರೋಣ.” (1 ಕೊರಿಂಥ 10:9) ಇಲ್ಲಿ ಪೌಲನು, “ಮಾರ್ಗಾಯಾಸದಿಂದ ಅವರಿಗೆ ಬೇಸರ” ವಾಗಿ ದೇವರ ವಿರುದ್ಧ ಇಸ್ರಾಯೇಲ್ಯರು ಮೋಶೆಗೆ ದೂರು ಸಲ್ಲಿಸಿದ ಸಮಯದ ಕುರಿತು ಮಾತಾಡುತ್ತಿದ್ದನು. (ಅರಣ್ಯಕಾಂಡ 21:4) ನೀವು ಎಂದಾದರೂ ಆ ತಪ್ಪನ್ನು ಮಾಡುತ್ತೀರೊ? ನಿಮ್ಮನ್ನು ನೀವು ಯೆಹೋವನಿಗೆ ಸಮರ್ಪಿಸಿಕೊಂಡಾಗ, ಅರ್ಮಗೆದೋನ್ ಬಹಳ ಸಮೀಪವಾಗಿತ್ತೆಂದು ನೀವು ನೆನಸಿದಿರೊ? ಯೆಹೋವನ ತಾಳ್ಮೆಯು ನೀವು ಅಪೇಕ್ಷಿಸಿದ್ದಕ್ಕಿಂತ ಹೆಚ್ಚು ದೀರ್ಘವಾಗಿ ಪರಿಣಮಿಸಿದೆಯೊ? ನಾವು ನಮ್ಮನ್ನು ಯೆಹೋವನಿಗೆ ಒಂದು ನಿರ್ದಿಷ್ಟ ಸಮಯಾವಧಿಗಾಗಿ ಅಥವಾ ಕೇವಲ ಅರ್ಮಗೆದೋನ್ ವರೆಗೆ ಸಮರ್ಪಿಸಿಕೊಳ್ಳಲಿಲ್ಲ. ನಮ್ಮ ಸಮರ್ಪಣೆಯು ಎಂದೆಂದಿಗೂ ಮುಂದುವರಿಯುತ್ತದೆ. ಹಾಗಾದರೆ, “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.”—ಗಲಾತ್ಯ 6:9.
15. (ಎ) ಯಾರ ವಿರುದ್ಧ ಇಸ್ರಾಯೇಲ್ಯರು ಗುಣುಗುಟ್ಟಿದರು? (ಬಿ) ಯೆಹೋವನ ಕಡೆಗಿನ ನಮ್ಮ ಸಮರ್ಪಣೆಯು ದೇವಪ್ರಭುತ್ವ ಅಧಿಕಾರವನ್ನು ಗೌರವಿಸುವಂತೆ ನಮ್ಮನ್ನು ಹೇಗೆ ಪ್ರೇರೇಪಿಸುತ್ತದೆ?
15 ಕೊನೆಯದಾಗಿ, ಯೆಹೋವನ ನೇಮಿತ ಸೇವಕರ ವಿರುದ್ಧ “ಗುಣುಗುಟ್ಟು” ವವರಾಗುವುದರ ಕುರಿತು ಪೌಲನು ಎಚ್ಚರಿಸಿದನು. (1 ಕೊರಿಂಥ 10:10) ಕಾನಾನ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ಕಳುಹಿಸಲ್ಪಟ್ಟ 12 ಗೂಢಚಾರರಲ್ಲಿ 10 ಮಂದಿ ಕೆಟ್ಟ ವರದಿಗಳನ್ನು ತಂದಾಗ, ಇಸ್ರಾಯೇಲ್ಯರು ಮೋಶೆ ಮತ್ತು ಆರೋನರ ವಿರುದ್ಧ ಆವೇಶಪೂರಿತರಾಗಿ ಗುಣುಗುಟ್ಟಿದರು. ಮೋಶೆಯ ಬದಲು ಇನ್ನೊಬ್ಬನನ್ನು ನಾಯಕನನ್ನಾಗಿ ಮಾಡಿ ಐಗುಪ್ತ್ಯಕ್ಕೆ ಹಿಂದಿರುಗುವುದರ ಕುರಿತೂ ಮಾತಾಡಿದರು. (ಅರಣ್ಯಕಾಂಡ 14:1-4) ಇಂದು, ಯೆಹೋವನ ಪವಿತ್ರಾತ್ಮದ ಕ್ರಿಯೆಯ ಮುಖಾಂತರ ನಮಗೆ ಕೊಡಲ್ಪಟ್ಟಿರುವ ನಾಯಕತ್ವವನ್ನು ನಾವು ಸ್ವೀಕರಿಸುತ್ತೇವೊ? ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗದ ಮೂಲಕ ಒದಗಿಸಲ್ಪಡುವ ಸಮೃದ್ಧವಾದ ಆತ್ಮಿಕ ಮೇಜನ್ನು ನೋಡುವುದರಿಂದ, ‘ಸರಿಯಾದ ಹೊತ್ತಿಗೆ ಆಹಾರವನ್ನು’ ಹಂಚಲು ಯೇಸು ಯಾರನ್ನು ಉಪಯೋಗಿಸುತ್ತಿದ್ದಾನೆಂಬುದು ಸ್ಪಷ್ಟವಾಗಿಗಿದೆ. (ಮತ್ತಾಯ 24:45) ಯೆಹೋವನಿಗೆ ಪೂರ್ಣ ಹೃದಯದ ಸಮರ್ಪಣೆಯು, ಆತನ ನೇಮಿತ ಸೇವಕರಿಗೆ ಗೌರವವನ್ನು ನಾವು ತೋರಿಸಬೇಕೆಂದು ಕೇಳಿಕೊಳ್ಳುತ್ತದೆ. ಸಾಂಕೇತಿಕವಾಗಿ ಮಾತಾಡುವುದಾದರೆ, ತಮ್ಮನ್ನು ಲೋಕಕ್ಕೆ ಪುನಃ ಕರೆದುಕೊಂಡು ಹೋಗುವ ಹೊಸ ತಲೆಗೆ ಅವರ ಗಮನವನ್ನು ನಿರ್ದೇಶಿಸಿರುವ ಕೆಲವು ಆಧುನಿಕ ದಿನದ ಗುಣುಗುಟ್ಟುವವರಂತೆ ನಾವು ಎಂದಿಗೂ ಆಗದಿರೋಣ.
ಇದು ನನ್ನ ಕೈಲಾದದ್ದೆಲ್ಲವೊ?
16. ಯಾವ ಪ್ರಶ್ನೆಗಳನ್ನು ದೇವರ ಸಮರ್ಪಿತ ಸೇವಕರು ಸ್ವತಃ ಕೇಳಿಕೊಳ್ಳಲು ಬಯಸುವರು?
16 ಯೆಹೋವನಿಗೆ ಮಾಡಿರುವ ತಮ್ಮ ಸಮರ್ಪಣೆಯು ನಿರುಪಾಧಿಕವಾದ ಸಮರ್ಪಣೆಯೆಂದು ಇಸ್ರಾಯೇಲ್ಯರು ಜ್ಞಾಪಿಸಿಕೊಂಡಿದ್ದರೆ, ಅವರು ಇಂತಹ ಘೋರವಾದ ತಪ್ಪುಗಳೊಳಗೆ ಬೀಳುತ್ತಿರಲಿಲ್ಲ. ಆ ಅಪನಂಬಿಕೆಯುಳ್ಳ ಇಸ್ರಾಯೇಲ್ಯರಿಗೆ ಅಸದೃಶವಾಗಿ, ಯೇಸು ಕ್ರಿಸ್ತನು ಕೊನೆಯ ತನಕ ತನ್ನ ಸಮರ್ಪಣೆಗೆ ಅನುಸಾರವಾಗಿ ಜೀವಿಸಿದನು. ಕ್ರಿಸ್ತನ ಹಿಂಬಾಲಕರೋಪಾದಿ, ನಮ್ಮ ಜೀವಿತಗಳನ್ನು “ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ” ಜೀವಿಸುತ್ತಾ, ಅವನ ಪೂರ್ಣ ಹೃದಯದ ಭಕ್ತಿಯ ಉದಾಹರಣೆಯನ್ನು ನಾವು ಅನುಕರಿಸುತ್ತೇವೆ. (1 ಪೇತ್ರ 4:2; ಹೋಲಿಸಿ 2 ಕೊರಿಂಥ 5:15.) ಇಂದು “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಜ್ಞಾನಕ್ಕೆ ಸೇರಬೇಕೆಂಬದು” ಯೆಹೋವನ ಚಿತ್ತವಾಗಿದೆ. (1 ತಿಮೊಥೆಯ 2:4) ಆ ಉದ್ದೇಶದಿಂದ, “ರಾಜ್ಯದ ಈ ಸುವಾರ್ತೆಯನ್ನು” ಅಂತ್ಯವು ಬರುವ ಮೊದಲು ನಾವು ಸಾರಬೇಕಾಗಿದೆ. (ಮತ್ತಾಯ 24:14) ಈ ಸೇವೆಯಲ್ಲಿ ನಾವು ಎಷ್ಟು ಪ್ರಯತ್ನವನ್ನು ಮಾಡುತ್ತೇವೆ? ನಾವು ನಮ್ಮನ್ನೇ, ‘ಇದು ನನ್ನ ಕೈಲಾದದ್ದೆಲ್ಲವೊ?’ ಎಂದು ಕೇಳಿಕೊಳ್ಳಲು ಬಯಸಬಹುದು. (2 ತಿಮೊಥೆಯ 2:15) ಪರಿಸ್ಥಿತಿಗಳು ಭಿನ್ನವಾಗಿರುತ್ತವೆ. ಯೆಹೋವನು ‘ಒಬ್ಬ ವ್ಯಕ್ತಿಯಲ್ಲಿ ಇಲ್ಲದಿರುವುದಕ್ಕನುಸಾರವಾಗಿ ಅಲ್ಲ, ಒಬ್ಬ ವ್ಯಕ್ತಿಯಲ್ಲಿ ಇರುವುದಕ್ಕನುಸಾರವಾಗಿ,’ ಸೇವಿಸಲ್ಪಡಲು ಇಷ್ಟಪಡುತ್ತಾನೆ. (2 ಕೊರಿಂಥ 8:12; ಲೂಕ 21:1-4) ಯಾವನೂ ಇನ್ನೊಬ್ಬನ ಸಮರ್ಪಣೆಯ ಆಳ ಮತ್ತು ಪ್ರಾಮಾಣಿಕತೆಯನ್ನು ತೀರ್ಮಾನಿಸಬಾರದು. ಪ್ರತಿಯೊಬ್ಬನು ವೈಯಕ್ತಿಕವಾಗಿ ಯೆಹೋವನ ಕಡೆಗಿನ ತನ್ನ ಸ್ವಂತ ಭಕ್ತಿಯ ವ್ಯಾಪ್ತಿಯನ್ನು ಅಳೆಯಬೇಕು. (ಗಲಾತ್ಯ 6:4) ಯೆಹೋವನಿಗಾಗಿರುವ ನಮ್ಮ ಪ್ರೀತಿಯು ಹೀಗೆ ಕೇಳುವಂತೆ ನಮ್ಮನ್ನು ಪ್ರೇರೇಪಿಸಬೇಕು, ‘ನಾನು ಯೆಹೋವನನ್ನು ಹೇಗೆ ಸಂತೋಷಪಡಿಸಬಲ್ಲೆ?’
17. ಭಕ್ತಿ ಮತ್ತು ಗಣ್ಯತೆಯ ನಡುವೆ ಇರುವ ಸಂಬಂಧವೇನು? ದೃಷ್ಟಾಂತಿಸಿರಿ.
17 ಯೆಹೋವನಿಗಾಗಿರುವ ನಮ್ಮ ಗಣ್ಯತೆಯಲ್ಲಿ ನಾವು ಬೆಳೆದಂತೆ, ಆತನ ಕಡೆಗಿರುವ ನಮ್ಮ ಭಕ್ತಿಯು ಆಳವಾಗುತ್ತದೆ. ಜಪಾನಿನಲ್ಲಿ 14 ವರ್ಷ ಪ್ರಾಯದ ಒಬ್ಬ ಹುಡುಗನು ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡನು ಮತ್ತು ಈ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದನು. ತದನಂತರ, ಅವನು ಉನ್ನತ ವ್ಯಾಸಂಗವನ್ನು ಮುಂದುವರಿಸಿ, ಒಬ್ಬ ವಿಜ್ಞಾನಿಯಾಗಲು ಬಯಸಿದನು. ಪೂರ್ಣ ಸಮಯದ ಶುಶ್ರೂಷೆಯ ಕುರಿತು ಅವನು ಎಂದೂ ಯೋಚಿಸಲಿಲ್ಲ, ಆದರೆ ಒಬ್ಬ ಸಮರ್ಪಿತ ಸೇವಕನೋಪಾದಿ, ಯೆಹೋವನನ್ನು ಮತ್ತು ಆತನ ದೃಶ್ಯ ಸಂಸ್ಥೆಯನ್ನು ಬಿಡಲು ಬಯಸಲಿಲ್ಲ. ತನ್ನ ಜೀವನೋಪಾಯದ ಗುರಿಯನ್ನು ಪೂರೈಸಲು, ಅವನೊಂದು ವಿಶ್ವವಿದ್ಯಾನಿಲಯಕ್ಕೆ ಹಾಜರಾದನು. ಅಲ್ಲಿ ವಿಶ್ವವಿದ್ಯಾನಿಲಯದ ಪದವೀಧರರು ತಮ್ಮ ಕಂಪನಿಗಳಿಗೆ ಅಥವಾ ತಮ್ಮ ಅಭ್ಯಾಸಗಳಿಗೆ ತಮ್ಮ ಇಡೀ ಜೀವನವನ್ನು ಸಮರ್ಪಿಸುವಂತೆ ಒತ್ತಾಯಿಸಲ್ಪಡುವುದನ್ನು ಅವನು ಕಂಡನು. ‘ನಾನು ಇಲ್ಲಿ ಏನು ಮಾಡುತ್ತಿದ್ದೇನೆ?’ ನಾನು ನಿಜವಾಗಿಯೂ ಅವರ ಜೀವನ ವಿಧವನ್ನು ಬೆನ್ನಟ್ಟಿ, ನನ್ನನ್ನು ಐಹಿಕ ಕೆಲಸಕ್ಕೆ ಸಮರ್ಪಿಸಿಕೊಳ್ಳಬಲ್ಲೆನೊ? ನಾನು ಈಗಾಗಲೇ ಯೆಹೋವನಿಗೆ ಸಮರ್ಪಿಸಿಕೊಂಡಿಲ್ಲವೊ?’ ಎಂದು ಅವನು ಕುತೂಹಲಪಟ್ಟನು. ನವೀಕರಿಸಲ್ಪಟ್ಟ ಗಣ್ಯತೆಯೊಂದಿಗೆ, ಅವನೊಬ್ಬ ಕ್ರಮದ ಪಯನೀಯರನಾದನು. ತನ್ನ ಸಮರ್ಪಣೆಯ ಕುರಿತಾದ ಅವನ ತಿಳಿವಳಿಕೆಯು ಆಳಗೊಂಡಿತು ಮತ್ತು ಅವನ ಅಗತ್ಯವು ಎಲ್ಲಿ ಹೆಚ್ಚಿತ್ತೊ ಅಲ್ಲಿಗೆ ಹೋಗಲು ತನ್ನ ಹೃದಯದಲ್ಲಿ ನಿಶಿಯ್ಚಿಸಿಕೊಳ್ಳುವಂತೆ ಅವನನ್ನು ಪ್ರೇರೇಪಿಸಿತು. ಅವನು ಮಿನಿಸ್ಟೀರಿಯಲ್ ಟ್ರೇನಿಂಗ್ ಶಾಲೆಯನ್ನು ಹಾಜರಾದನು ಮತ್ತು ವಿದೇಶೀ ನಾಡಿನಲ್ಲಿ ಒಬ್ಬ ಮಿಷನೆರಿಯೋಪಾದಿ ಸೇವೆ ಸಲ್ಲಿಸುವ ನೇಮಕವನ್ನು ಪಡೆದನು.
18. (ಎ) ಯೆಹೋವನ ಕಡೆಗಿರುವ ನಮ್ಮ ಸಮರ್ಪಣೆಯಲ್ಲಿ ಏನೆಲ್ಲಾ ಒಳಗೊಂಡಿದೆ? (ಬಿ) ಯೆಹೋವನ ಕಡೆಗಿರುವ ನಮ್ಮ ಸಮರ್ಪಣೆಯಿಂದ ಯಾವ ಪ್ರತಿಫಲವನ್ನು ನಾವು ಕೊಯ್ಯಬಲ್ಲೆವು?
18 ಸಮರ್ಪಣೆಯು ನಮ್ಮ ಇಡೀ ಜೀವಿತವನ್ನು ಒಳಗೊಳ್ಳುತ್ತದೆ. ನಾವು ನಮ್ಮನ್ನು ನಿರಾಕರಿಸಿಕೊಳ್ಳಬೇಕು ಮತ್ತು “ಅನುದಿನವೂ” ಯೇಸುವಿನ ಉತ್ತಮ ಉದಾಹರಣೆಯನ್ನು ಅನುಸರಿಸಬೇಕು. (ಲೂಕ 9:23) ನಮ್ಮನ್ನು ನಿರಾಕರಿಸಿಕೊಂಡಿರುವುದರಿಂದ, ನಾವು ಯೆಹೋವನಲ್ಲಿ ಗೈರುಹಾಜರಿಯ ರಜೆಗಾಗಿ ಕೇಳುವುದಿಲ್ಲ. ತನ್ನ ಸೇವಕರಿಗಾಗಿ ಯೆಹೋವನು ಸ್ಥಾಪಿಸಿರುವ ತತ್ವಗಳಿಗೆ ನಮ್ಮ ಜೀವಿತಗಳು ಅನುರೂಪವಾಗುತ್ತವೆ. ನಾವೊಂದು ವೈಯಕ್ತಿಕ ಆಯ್ಕೆಯನ್ನು ಮಾಡಸಾಧ್ಯವಿರುವ ಕ್ಷೇತ್ರಗಳಲ್ಲಿಯೂ, ಯೆಹೋವನಿಗೆ ಸಮರ್ಪಿತವಾದ ಜೀವಿತವನ್ನು ಜೀವಿಸಲು ನಾವು ಅತ್ಯುತ್ತಮವಾದದ್ದನ್ನು ಮಾಡುತ್ತಿದ್ದೇವೊ ಇಲ್ಲವೊ ಎಂಬುದನ್ನು ನೋಡುವುದು ಪ್ರಯೋಜನಕಾರಿಯಾಗಿದೆ. ಅನುದಿನವೂ ನಾವು ಆತನನ್ನು ಮೆಚ್ಚಿಸಲು ನಮ್ಮ ಕೈಲಾದದ್ದೆಲ್ಲವನ್ನು ಮಾಡುತ್ತಾ, ಆತನನ್ನು ಸೇವಿಸುವಾಗ, ಕ್ರೈಸ್ತರೋಪಾದಿ ನಾವು ಸಫಲರಾಗುವೆವು ಮತ್ತು ನಮ್ಮ ಪೂರ್ಣ ಹೃದಯದ ಭಕ್ತಿಗೆ ಅರ್ಹನಾಗಿರುವ ಏಕೈಕ ವ್ಯಕ್ತಿಯಾದ ಯೆಹೋವನಿಂದ ಬರುವ ಮೆಚ್ಚಿಗೆಯ ನಸುನಗೆಯಿಂದ ಆಶೀರ್ವದಿಸಲ್ಪಡುವೆವು.
ನೀವು ವಿವರಿಸಬಲ್ಲಿರೊ?
◻ ಯೇಸು ಕ್ರಿಸ್ತನ ವಿಷಯದಲ್ಲಿ ಸಮರ್ಪಣೆಯು ಏನನ್ನು ಒಳಗೊಂಡಿತು?
◻ ಯೆಹೋವನ ವಿರುದ್ಧ ಗುಣುಗುಟ್ಟುವುದನ್ನು ನಾವು ಏಕೆ ತೊರೆಯತಕ್ಕದ್ದು?
◻ ವಿಗ್ರಹಾರಾಧನೆಯು ನಮ್ಮ ಜೀವಿತಗಳನ್ನು ನವಿರಾಗಿ ವ್ಯಾಪಿಸುವಂತೆ ಬಿಡುವುದನ್ನು ನಾವು ಯಾವ ವಿಧದಲ್ಲಿ ತೊರೆಯಬಲ್ಲೆವು?
◻ ದೇವರ ಚಿತ್ತವನ್ನು ಮಾಡುವುದರಲ್ಲಿ “ಆಯಾಸಗೊಳ್ಳದೆ” ಇರುವಂತೆ ಯಾವ ವಿಷಯವನ್ನು ಜ್ಞಾಪಿಸಿಕೊಳ್ಳುವುದು ನಮಗೆ ಸಹಾಯ ಮಾಡುವುದು?
[ಪುಟ 17 ರಲ್ಲಿರುವ ಚಿತ್ರ]
ಸಮರ್ಪಿತ ಕ್ರೈಸ್ತರು “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರು”ತಾರ್ತೆ