ಹಾನಿಕರ ಹರಟೆಯನ್ನು ಸದೆಬಡೆಯುವ ವಿಧ
“ಯೆಹೋವನೇ, ನನ್ನ ಬಾಯಿಗೆ ಕಾವಲಿರಿಸು; ನನ್ನ ತುಟಿಗಳೆಂಬ ಕದವನ್ನು ಕಾಯಿ.”—ಕೀರ್ತನೆ 141:3.
1. ನಮ್ಮ ದೇವ-ದತ್ತ ಮೆದುಳಿಗೆ ಯಾವ ಸಾಮರ್ಥ್ಯವಿದೆ?
ಯೆಹೋವನು ನಮಗೆ ಮಿದುಳನ್ನು ಕೊಟ್ಟಿದ್ದಾನೆ, ಮತ್ತು ಅದು ಎಷ್ಟೊಂದು ಆಶ್ಚರ್ಯಕರವಾಗಿದೆ! ದ ಇನ್ಕ್ರೆಡಿಬಲ್ ಮೆಶಿನ್ ಎಂಬ ಪುಸ್ತಕ ಹೇಳುವದು: “ನಾವು ದೃಷ್ಟಿಸಬಹುದಾದ ಅತ್ಯಂತ ಸಂಕ್ಲಿಷ್ಟತೆಯ ಕಂಪ್ಯೂಟರುಗಳು ಮಾನವ ಮಿದುಳಿನ ಅಪಾರ ಜಟಿಲತೆ ಮತ್ತು ಹೊಂದಾಣಿಕೆಗೆ ಹೋಲಿಸುವಾಗ ಅತ್ಯಂತ ಒರಟಾಗಿರುತ್ತವೆ. ಯಾವುದೇ ಕ್ಷಣದಲ್ಲಿ ನಿಮ್ಮ ಮಿದುಳಿನ ಮೂಲಕ ಮಿಂಚುತ್ತಿರುವ ಲಕ್ಷಾಂತರ ಸಂಕೇತಗಳು ಸಮಾಚಾರದ ಅಸಾಧಾರಣ ಹೊರೆಯನ್ನು ಕೊಂಡೊಯ್ಯುತ್ತವೆ. ಅವುಗಳು ನಿಮ್ಮ ದೇಹದೊಳಗಿನ ಮತ್ತು ಹೊರಗಿನ ಪರಿಸರಣಗಳ ವಾರ್ತೆಗಳನ್ನು ತರುತ್ತವೆ. . . . ಇತರ ಸಂಕೇತಗಳನ್ನು ಪರಿಷ್ಕರಿಸಿ, ಮತ್ತು ಸಮಾಚಾರವನ್ನು ವಿಮರ್ಶಿಸುತ್ತಿರುವಂತೆ, ಅವುಗಳು ನಿರ್ದಿಷ್ಟತರದ ಮನೋಭಾವನೆಗಳನ್ನು, ಜ್ಞಾಪಕಗಳನ್ನು, ಆಲೋಚನೆಗಳನ್ನು ಯಾ ಯೋಜನೆಗಳನ್ನು ಉತ್ಪಾದಿಸಿ ಒಂದು ತೀರ್ಮಾನಕ್ಕೆ ನಡಿಸುತ್ತವೆ. ಹೆಚ್ಚು ಕಡಿಮೆ ತಕ್ಷಣವೇ ನಿಮ್ಮ ಮಿದುಳಿನ ಸಂಕೇತಗಳು ನಿಮ್ಮ ದೇಹದ ಇತರ ಅವಯವಗಳಿಗೆ ಏನು ಮಾಡಬೇಕೆಂದು ತಿಳಿಸುತ್ತವೆ. . . . ತನ್ಮಧ್ಯೆ, ನಿಮ್ಮ ಮಿದುಳು, ನಿಮ್ಮ ಉಸಿರಾಟ, ರಕ್ತದ ರಾಸಾಯನಿಕತೆ, ಉಷ್ಣತೆ ಮತ್ತು ಇತರ ಆವಶ್ಯಕ ಪರಿಷ್ಕರಣಗಳನ್ನು ನಿಮ್ಮ ಅರಿವಿಲ್ಲದೇ ನಿಯಂತ್ರಿಸುತ್ತಿರುತ್ತವೆ.”—ಪುಟ 326.
2. ಈಗ ಪರಿಗಣನೆಗೆ ಅರ್ಹವಾಗಿರುವ ಪ್ರಶ್ನೆಯು ಯಾವುದು?
2 ಖಂಡಿತವಾಗಿಯೂ, ದೇವರ ಈ ಅದ್ಭುತವಾದ ಕೊಡುಗೆಯನ್ನು ಒಂದು ಕಸದ ಪೀಪಾಯಿ ಅಥವಾ ಒಂದು ಕೊಳೆಯ ದಬ್ಬಿಯಾಗಿ ಉಪಯೋಗಿಸಬಾರದು. ಆದಾಗ್ಯೂ, ಹಾನಿಕರ ಹರಟೆಗೆ ಕಿವಿಗೊಡುವದರಿಂದ ಮತ್ತು ಅದನ್ನು ಹರಡಿಸುವದರಿಂದ ನಾವು ಮಿದುಳನ್ನು ದುರುಪಯೋಗಿಸಬಹುದು. ಇಂಥ ಮಾತುಕತೆಯನ್ನು ನಾವು ಹೇಗೆ ದೂರಮಾಡಬಹುದು ಮತ್ತು ಅದರಲ್ಲಿ ಇತರರು ತೊಡಗಿರುವದರಿಂದ ದೂರವಿರುವಂತೆ ನಾವು ಹೇಗೆ ಸಹಾಯ ನೀಡಬಲ್ಲೆವು?
ನಿಮ್ಮ ದೇವದತ್ತ ಮನಸ್ಸನ್ನು ಗಣ್ಯಮಾಡಿರಿ
3. ಯಾವನೇ ನಿಜಕ್ರೈಸ್ತನು ಹಾನಿಕರ ಮಾತುಕತೆಯಲ್ಲಿ ತೊಡಗುವದಿಲ್ಲ ಏಕೆ?
3 ನಮ್ಮ ದೇವದತ್ತ ಮನಸ್ಸಿಗಾಗಿ ಗಣ್ಯತೆಯು ಹಾನಿಕರ ಹರಟೆಗೆ ಕಿವಿಗೊಡುವದರಿಂದ ಮತ್ತು ಅದನ್ನು ಹರಡಿಸುವದರಿಂದ ನಮ್ಮನ್ನು ತಡೆಯುತ್ತದೆ. ಯಾರೊಬ್ಬನ ಮನಸ್ಸನ್ನೂ ಅಂಥ ಆಲೋಚನೆಗಳಿಂದ ತುಂಬಿಸಲು ಮತ್ತು ಅವನ ನಾಲಗೆಯನ್ನು ಇತರರಿಗೆ ಹಾನಿ ಮಾಡಲು ಬಳಸುವಂತೆ ಯೆಹೋವನ ಆತ್ಮವು ಪ್ರಚೋದಿಸುವದಿಲ್ಲ. ಬದಲಾಗಿ, ದೇವರ ವಾಕ್ಯವು ಹೇಳುವದು: “ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ.” (ಯೆಶಾಯ 55:7) ಒಬ್ಬ ದುಷ್ಟ ವ್ಯಕ್ತಿಯ ಮನಸ್ಸು ದುಷ್ಟ ಆಲೋಚನೆಗಳಿಂದ ತುಂಬಿಕೊಂಡಿರುತ್ತದೆ ಮತ್ತು ಯಥಾರ್ಥವಂತರನ್ನು ನಿಂದಿಸಲು ಅವನು ಕೂಡಲೇ ಸಿದ್ಧನಿರುತ್ತಾನೆ. ಆದರೆ ತಮ್ಮ ದೇವದತ್ತ ಮನಸ್ಸನ್ನು ಗಣ್ಯ ಮಾಡುವವರಿಂದ ನಾವು ಇಂಥ ಮಾತುಕತೆಯನ್ನು ನಿರೀಕ್ಷಿಸುವದಿಲ್ಲ.
4. ನಮ್ಮ ಮೆದುಳು ಮತ್ತು ಮಾತಾಡುವ ಸಾಮರ್ಥ್ಯವನ್ನು ಗಣ್ಯ ಮಾಡುವದಾದರೆ, ನಾವು ನಮ್ಮ ಮನಸ್ಸು ಮತ್ತು ನಾಲಗೆಯನ್ನು ಹೇಗೆ ಉಪಯೋಗಿಸುವೆವು?
4 ತಕ್ಕದಾದ್ದ ಗಣ್ಯತೆಯು ನಮ್ಮ ಮನಸ್ಸು ಮತ್ತು ನಮ್ಮ ನಾಲಗೆಯನ್ನು ನಮ್ಮ ಪಾಪಪೂರ್ಣ ದೇಹಕ್ಕೆ ಆಹಾರ ಒದಗಿಸುವಂತೆ ಉಪಯೋಗಿಸುವದರಿಂದ ನಮ್ಮನ್ನು ತಡೆಯುತ್ತದೆ. ಬದಲಾಗಿ, ನಮ್ಮ ಆಲೋಚನೆ ಮತ್ತು ಮಾತುಕತೆಯನ್ನು ನಾವು ಉನ್ನತ ಸ್ತರದಲ್ಲಿ ಇರಿಸುವೆವು. ಯಾರ ಆಲೋಚನೆಗಳು ನಮ್ಮದವುಗಳಿಗಿಂತ ಎಷ್ಟೋ ಉನ್ನತವಾಗಿವೆಯೋ ಆತನ ಮೇಲೆ ಪ್ರಾರ್ಥನಾಪೂರ್ವಕವಾಗಿ ಆತುಕೊಳ್ಳುವದರ ಮೂಲಕ ನಾವು ಹಾನಿಕರ ಹರಟೆಯನ್ನು ಹೋಗಲಾಡಿಸ ಸಾಧ್ಯವಿದೆ. ಅಪೊಸ್ತಲ ಪೌಲನು ಬುದ್ಧಿವಾದವನ್ನಿತ್ತದ್ದು: “ಯಾವಾವದು ಸತ್ಯವೂ [ಸುಳ್ಳು ಯಾ ಮಾನಹಾನಿಕರವಲ್ಲದ], ಗಂಭೀರ ಗಮನಹರಿಸುವಂಥಹದ್ದೂ [ಕ್ಷುಲಕವಲ್ಲದು], ನ್ಯಾಯವೂ [ಕೇಡಿನದ್ದೂ, ಹಾನಿಕರವಲ್ಲದ್ದೂ], ಶುದ್ಧವೂ [ಅಶುದ್ಧವಾದ ಮಾನಹಾನಿ ಯಾ ದುರುದ್ದೇಶ ಸಂಶಯಗಳಲ್ಲದ], ಪ್ರೀತಿಕರವೂ [ದ್ವೇಷಕರವಲ್ಲದ್ದೂ, ಕಡೆಗೆಣಿಸುವಂಥಹದ್ದೂ ಅಲ್ಲದ], ಶುಭಕರವೂ [ಹೀನಾಯಮಾನವಾದದ್ದಲ್ಲ], ಸದ್ಗುಣವಾದದ್ದೂ [ದುಷ್ಟತನವಲ್ಲ], ಸ್ತುತಾರ್ಹವೋ [ಖಂಡಿಸಲ್ಪಡುವಂಥದ್ದಲ್ಲ], ಅವೆಲ್ಲವುಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುವದನ್ನು ಮುಂದುವರಿಸಿರಿ.”—ಫಿಲಿಪ್ಪಿಯ 4:8, NW.
5. ಪೌಲನ ಸಂಬಂಧದಲ್ಲಿ ಜತೆವಿಶ್ವಾಸಿಗಳು ಏನನ್ನು ನೋಡಿದ್ದರು ಮತ್ತು ಕೇಳಿದ್ದರು?
5 ಪೌಲನು ಕೂಡಿಸಿದ್ದು: “ನೀವು ಯಾವುದನ್ನು ನನ್ನಿಂದ ಕಲಿತು ಹೊಂದಿದ್ದೀರೋ ಮತ್ತು ಯಾವುದನ್ನು ನನ್ನಲ್ಲಿ ಕೇಳಿ ಕಂಡಿರೋ, ಅದನ್ನೇ ಮಾಡುತ್ತಾ ಬನ್ನಿರಿ. ಹೀಗೆ ಮಾಡಿದರೆ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.” (ಫಿಲಿಪ್ಪಿಯ 4:9) ಪೌಲನ ಸಂಬಂಧದಲ್ಲಿ ಇತರರು ಏನನ್ನು ನೋಡಿದ್ದರು ಮತ್ತು ಕೇಳಿದ್ದರು? ಶುದ್ಧವೂ, ಆತ್ಮಿಕವಾಗಿ ಬಲವರ್ಧಕವೂ ಆಗಿರುವ ಸಂಗತಿಗಳನ್ನು. ಲೂದ್ಯಳ ಇಲ್ಲವೇ ತಿಮೊಥೆಯನ ಕುರಿತಾದ ಇತ್ತೀಚಿನ ಹರಟೆಗಳಿಂದ ಅವನು ಅವರ ಕಿವಿಗಳನ್ನು ಊದಲಿಲ್ಲ. ಯೆರೂಸಲೇಮಿನಲ್ಲಿದ್ದ ಹಿರೀ ಪುರುಷರ ಕುರಿತಾದ ಗಾಳಿಸುದ್ದಿಗಳನ್ನು ಪೌಲನು ಕೇಳಲೂ ಇಲ್ಲ ಮತ್ತು ಹಬ್ಬಿಸಲೂ ಇಲ್ಲ ಎಂಬ ವಿಷಯದಲ್ಲಿ ನಾವು ನಿಶ್ಚಯತೆಯಿಂದಿರಸಾಧ್ಯವಿದೆ.a ಬಹುಶಃ ಅವನ ದೇವದತ್ತ ಮನಸ್ಸಿನೆಡೆಗೆ ಅವನಿಗಿರುವ ಗೌರವವು ಹಾನಿಕರ ಹರಟೆಯಲ್ಲಿ ಒಳಗೂಡುವದನ್ನು ತಡೆಗಟ್ಟಲು ಪೌಲನಿಗೆ ಸಹಾಯಮಾಡಿರಬೇಕು. ನಮಗೆ ಯೆಹೋವನು ಕೊಟ್ಟಿರುವ ಮನಸ್ಸು ಮತ್ತು ನಾಲಗೆಯನ್ನು ನಾವು ನಿಜವಾಗಿ ಗಣ್ಯಮಾಡುವದಾದರೆ ಅವನ ಉದಾಹರಣೆಯನ್ನು ನಾವು ಅನುಕರಿಸುವೆವು.
ದೇವರನ್ನೂ ಅವನ ವಾಕ್ಯವನ್ನೂ ಗೌರವಿಸಿರಿ
6, 7. (ಎ)ಒಂದು ಅಂಕೆಯಿಲ್ಲದ ನಾಲಗೆಯ ಪರಿಣಾಮಗಳನ್ನು ಯಾಕೋಬನು ಹೇಗೆ ತೋರಿಸಿದನು? (ಬಿ) ನಾವು ದೇವರನ್ನೂ ಅವನ ವಾಕ್ಯವನ್ನೂ ಗೌರವಿಸಿದರೆ, ಏನು ಸಂಭವಿಸುವದಿಲ್ಲ?
6 ದೇವರ ಮತ್ತು ಅವನ ಪವಿತ್ರ ವಾಕ್ಯದ ಕಡೆಗೆ ಇರುವ ಹೃದಯಪೂರ್ವಕ ಗೌರವವು ಕೂಡ ಹಾನಿಕರ ಹರಟೆಯನ್ನು ಸದೆಬಡಿಯಲು ನಮಗೆ ಸಹಾಯ ಮಾಡುವದು. ಖಂಡಿತವಾಗಿಯೂ ಅಂಥಾ ಗೌರವವು ನಾಲಿಗೆಯನ್ನು ಯೋಗ್ಯ ಕೆಲಸಕ್ಕೆ ಹಚ್ಚಿದ ಶಿಷ್ಯ ಯಾಕೋಬನ ಬುದ್ಧಿವಾದವನ್ನು ಆಲಿಸುವಂತೆ ನಮ್ಮನ್ನು ನಡಿಸತಕ್ಕದ್ದು. (ಯಾಕೋಬ 3:2-12) ಕುದುರೆಯ ಬಾಯಲ್ಲಿರುವ ಒಂದು ಚಿಕ್ಕ ಕಡಿವಾಣವು ಆ ಪ್ರಾಣಿಯನ್ನು ಮಾರ್ಗದರ್ಶಿಸಸಾಧ್ಯವಿರುವಂತೆ, ಒಬ್ಬ ವ್ಯಕ್ತಿಯು ತನ್ನ ನಾಲಗೆಯನ್ನು ಹತೋಟಿಯಲ್ಲಿರಿಸಲು ಸಮರ್ಥನಾದರೆ, ಅವನ ತನ್ನ ಇಡೀ ದೇಹವನ್ನು ಸ್ವಾಧೀನದಲಿರ್ಲಿಸಲು ಶಕ್ತನಾಗುವನು. ಒಂದು ಬೆಂಕಿಯ ಕಿಡಿಯು ಇಡೀ ಅರಣ್ಯವನ್ನು ಹೇಗೆ ಭಸ್ಮಗೊಳಿಸಶಕ್ತವೋ ಹಾಗೆಯೇ ಚಿಕ್ಕ ನಾಲಗೆಯು ಜೀವನಚಕ್ರಕ್ಕೆ ಬೆಂಕಿ ಹಚ್ಚಿಸಿ ದಹಿಸಸಾಧ್ಯವಿದೆ. ಮನುಷ್ಯನು ಕಾಡುಮೃಗಗಳನ್ನೂ, ಹಕ್ಕಿಗಳನ್ನೂ, ಹರಿದಾಡುವ ಜಂತುಗಳನ್ನೂ ಮತ್ತು ಸಮುದ್ರದ ಜೀವಿಗಳನ್ನೂ ಪಳಗಿಸಬಲ್ಲನು. “ಆದರೆ ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು,” ಅನ್ನುತ್ತಾನೆ ಯಾಕೋಬನು. ಆದರೂ, ಹಾನಿಕರ ಹರಟೆಯನ್ನು ಜಜ್ಜುವಂತಹ ಯಾವುದೇ ಪ್ರಯತ್ನವನ್ನು ಮಾಡದಿರಲು ಅದು ಒಂದು ನೆವನವಾಗಿರುದಿಲ್ಲ.
7 ನಾಲಿಗೆಯು ಆಶೀರ್ವಾದವನ್ನೂ, ಶಾಪವನ್ನೂ ಅದೇ ಬಾಯಿಂದ ಹೊರಡಿಸುತ್ತದೆ ಎಂದೂ ಯಾಕೋಬನು ಹೇಳಿದ್ದಾನೆ. ಇದು ಸರಿಯಲ್ಲ, ಯಾಕಂದರೆ ಒಂದು ಕಾರಂಜಿಯು ಸಿಹಿ ಮತ್ತು ಕಹಿ ನೀರು ಎರಡನ್ನೂ ಹೊರಡಿಸುವದಿಲ್ಲ. ಒಂದು ಅಂಜೂರ ಮರವು ಎಣ್ಣೇ ಮರದ ಕಾಯಿಯನು ಉತ್ಪಾದಿಸುವದಿಲ್ಲ, ಮತ್ತು ಉಪ್ಪು ನೀರು ಸಿಹಿ ನೀರನ್ನು ಉತ್ಪಾದಿಸುವದಿಲ್ಲ. ಕ್ರೈಸ್ತರು ಅಪರಿಪೂರ್ಣರಾಗಿರುವ ತನಕ, ನಾಲಗೆಯನ್ನು ಪರಿಪೂರ್ಣವಾಗಿ ಪಳಗಿಸುವದು ದೂರದಲ್ಲಿರುತ್ತದೆ ಎಂಬುದೇನೊ ದಿಟ. ಇದು ನಮ್ಮನ್ನು ಪಶ್ಚಾತ್ತಾಪ ಪಡುವ ಅಪರಾಧಿಗಳ ಕಡೆಗೆ ಕರುಣಾಭರಿತರನ್ನಾಗಿ ಮಾಡತಕ್ಕದ್ದು, ಆದರೂ, ಅದು ಹಾನಿಕರ ಹರಟೆಯನ್ನು ವಿನಾಯಿತಿಗೊಳಿಸುವದಿಲ್ಲ. ಒಂದು ವೇಳೆ ನಾವು ನಿಜವಾಗಿಯೂ ದೇವರನ್ನು ಮತ್ತು ಆತನ ವಾಕ್ಯವನ್ನು ಗೌರವಿಸುವದಾದರೆ, ಎಷ್ಟರ ತನಕ ಅದು ನಮ್ಮ ಮೇಲೆ ಹೊಂದಿಕೊಂಡಿದೆಯೋ, ಅಷ್ಟರ ತನಕ ಅಂಥ ವಿಷಕಾರಿ ದುರುಪಯೋಗವು ಸಂಭವಿಸುವದನ್ನು ಮುಂದುವರಿಯಲು ನಾವು ಬಿಡುವದಿಲ್ಲ.
ಪ್ರಾರ್ಥನೆ ಸಹಾಯ ಮಾಡುವ ವಿಧ
8. ಹಾನಿಕರ ಹರಟೆಯನ್ನು ಸದೆಬಡಿಯಲು ಪ್ರಾರ್ಥನೆಯು ಹೇಗೆ ನಮಗೆ ಸಹಾಯಮಾಡುವದು?
8 ಕೆಡುಕನ್ನುಂಟುಮಾಡುವ ಹರಟೆಗೆ ಕಿವಿಗೊಡುವದು ಮತ್ತು ತದನಂತರ ಅದನ್ನು ಹಬ್ಬಿಸುವ ಪ್ರಲೋಭನೆಯು ತುಂಬಾ ಬಲವಾಗಿರ ಸಾಧ್ಯವಿದೆ. ಆದುದರಿಂದ, ಅಂಥ ದುಷ್ಪ್ರೇರಣೆಗೆ ನೀವು ಶರಣಾಗತರಾಗಿದ್ದಿರುವದಾದರೆ, ದೇವರ ಕ್ಷಮಾಪಣೆ ಮತ್ತು ಸಹಾಯವನ್ನು ನೀವು ಯಾಚಿಸಬಾರದೇ? ಯೇಸುವು ನಮಗೆ ಪ್ರಾರ್ಥಿಸಲು ಕಲಿಸಿದ್ದು: “ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೇಡಿನಿಂದ ತಪ್ಪಿಸು.” (ಮತ್ತಾಯ 6:13) ಇಂಥಾ ಪ್ರಲೋಭನೆಯ ಆದರೂ ದುಷ್ಟ ಸಂಭಾಷಣೆಗೆ ತಮ್ಮನ್ನು ಬಿಟ್ಟುಕೊಡದಂತೆ ದೇವರಿಗೆ ಮನಃಪೂರ್ವಕವಾದ ಪ್ರಾರ್ಥನೆಯನ್ನು ಮಾಡುವ ಕ್ರೈಸ್ತರು ಸೈತಾನನ ಈ ತಂತ್ರಕ್ಕೆ ಬಲಿಬೀಳುವದಿಲ್ಲ; ಅವರು ಈ ಮಹಾ ನಿಂದಕನಿಂದ ಪಾರುಗೊಳಿಸಲ್ಪಡುವರು.
9. ಒಬ್ಬರನ್ನು ನಿಂದಿಸುವ ಶೋಧನೆಗೊಳಪಟ್ಟರೆ, ನಾವು ಹೇಗೆ ಪ್ರಾರ್ಥಿಸಬಹುದು?
9 ಯಾರಾದರೊಬ್ಬರನ್ನು ನಿಂದಿಸಲು ನಾವು ಶೋಧನೆಗೊಳಗಾದಾಗ, ನಾವು ಹೀಗೆ ಪ್ರಾರ್ಥಿಸಬಹುದು: “ಯೆಹೋವನೇ, ನನ್ನ ಬಾಯಿಗೆ ಕಾವಲಿರಿಸು; ನನ್ನ ತುಟಿಗಳೆಂಬ ಕದವನ್ನು ಕಾಯಿ.” (ಕೀರ್ತನೆ 141:3) ಶೋಧನೆಗೆ ಶರಣಾಗತರಾಗುವದರಿಂದ ಮತ್ತು ಪಿಶಾಚನನ್ನು ಒಂದು ದ್ವೇಷಿಸುವ, ಸುಳ್ಳುಹೇಳುವ, ಹತ್ಯಾಕಾರಿ ನಿಂದಕನೋಪಾದಿ ಅನುಕರಿಸುವದರಿಂದ ನಿತ್ಯ ಜೀವಿತದ ನಮ್ಮ ನಿರೀಕ್ಷೆಗಳನ್ನು ನಾವು ಹಾಳುಗೆಡವಬಹುದು. (ಯೋಹಾನ 8:44) ಅಪೊಸ್ತಲ ಪೌಲನು ಬರೆದದ್ದು: “ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ, ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯ ಜೀವವು ಇರುವದಿಲ್ಲವೆಂಬುದು ನಿಮಗೆ ಗೊತ್ತಾಗಿದೆ.”—1 ಯೋಹಾನ 3:15.
ಪ್ರೀತಿಯು ಹರಟೆಯನ್ನು ತೊಲಗಿಸುತ್ತದೆ
10. ಇತರರ ಕುರಿತು ಹರಟೆ ಹೊಡೆಯುವದರ ಬದಲಿಗೆ, ನಾವು ಅವರ ಯಾವ ಋಣವನ್ನು ತೀರಿಸಲಿಕ್ಕಿದೆ
10 ನಾವೆಲ್ಲರೂ ಇತರರಿಗೆ ಒಂದಲ್ಲ ಒಂದು ವಿಷಯದಲ್ಲಿ ಋಣಿಗಳಾಗಿದ್ದೇವೆ, ಆದರೆ ನೋವನ್ನುಂಟುಮಾಡುವ ಹರಟೆಯನ್ನು ಪ್ರಚೋದಿಸುವ ದ್ವೇಷ ಇರುವದಕ್ಕೆ ನಾವು ಋಣಿಗಳಾಗಿರುವದಿಲ್ಲ. “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರಬಾರದು” ಎಂದು ಪೌಲನು ಬರೆದನು. (ರೋಮಾಪುರ 13:8) ಇತರರ ವಿರುದ್ಧ ಮಾತಾಡುವದು ಮತ್ತು ಅವರ ಒಳ್ಳೆಯ ಖ್ಯಾತಿಯನ್ನು ಹಾಳು ಮಾಡುವ ಬದಲು, ನಾವು ಪ್ರತಿದಿನ ನಮ್ಮ ಸಾಲವನ್ನು ತೀರಿಸುತ್ತಿರಬೇಕು. ನಾವು ಯೆಹೋವನನ್ನು ಪ್ರೀತಿಸುತ್ತೇವೆ ಎಂದು ಹೇಳಿಕೊಳ್ಳುವದಾದರೆ, ನಾವು ಒಬ್ಬ ಜತೆ ಆರಾಧಕನನ್ನು ನಿಂದಿಸುತ್ತಿರುವವರಾಗಿರ ಸಾಧ್ಯವಿಲ್ಲ, ಏಕಂದರೆ “ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು, ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು.”—1 ಯೋಹಾನ 4:20.
11. ಯೇಸುವಿನ ಕುರಿ ಮತ್ತು ಆಡುಗಳ ಸಾಮ್ಯವು ನೋಯಿಸುವ ಹರಟೆಯ ಕುರಿತಾಗಿ ಯೋಚಿಸಲು ಸ್ವಲ್ಪ ವಿಷಯವನ್ನು ನಮಗೆ ಹೇಗೆ ಕೊಡುತ್ತದೆ?
11 ಕುರಿಗಳ ಮತ್ತು ಆಡುಗಳ ಕುರಿತಾದ ಯೇಸುವಿನ ಸಾಮ್ಯವನ್ನು ಪರಿಗಣಿಸಿರಿ. ಆಡುಗಳಂಥವರಿಗೆ ಹೇಳಲ್ಪಟ್ಟದ್ದೇನಂದರೆ, ಅವರು ಕ್ರಿಸ್ತನ ಸಹೋದರರಿಗೆ ಏನನ್ನು ಮಾಡುತ್ತಾರೋ ಅದನ್ನು ಅವನಿಗೆ ಮಾಡಿದಂತೆ ಎಣಿಸಲ್ಪಡುವದು. ನೀವು ಕ್ರಿಸ್ತನ ಕುರಿತಾಗಿ ಹರಟೆ ಮಾತಾಡುವಿರೋ? ನೀವು ನಿಮ್ಮ ಪ್ರಭು ಮತ್ತು ಒಡೆಯನ ವಿರುದ್ಧ ಮಾತಾಡುವದಿಲ್ಲವಾದರೆ, ಅವನ ಅಭಿಷಿಕ್ತ ಸಹೋದರರನ್ನು ಹಾಗೆ ಸತ್ಕರಿಸಬೇಡಿರಿ. “ನಿತ್ಯ ಶಿಕ್ಷೆಗೆ ಹೋಗುವ” ಈ ಆಡುಗಳಂತೆ, ನೀವು ತಪ್ಪನ್ನು ಮಾಡಬೇಡಿರಿ. ನೀವು ಯೇಸುವಿನ ಸಹೋದರರನ್ನು ಪ್ರೀತಿಸುತ್ತಿದ್ದರೆ, ಅವರ ಕುರಿತಾಗಿ ನೀವೇನನ್ನು ಹೇಳುತ್ತೀರೋ, ಅದರ ಮೂಲಕ ಅದನ್ನು ತೋರ್ಪಡಿಸಿರಿ.—ಮತ್ತಾಯ 25:31-46.
12. ಜ್ಞಾನೋಕ್ತಿ 16:2ರ ಸಾರವೇನು ಮತ್ತು ಅದು ನಮ್ಮ ಯೋಚನೆಗಳನ್ನು, ಕಾರ್ಯಗಳನ್ನು ಮತ್ತು ಸಂಭಾಷಣೆಗಳನ್ನು ಹೇಗೆ ಪ್ರಭಾವಿಸಬೇಕು?
12 ನಾವೆಲ್ಲರೂ ಪಾಪಿಗಳು ಮತ್ತು ಯೇಸುವಿನ ವಿಮೋಚನಾ ಯಜ್ಞದ ಅಗತ್ಯವಿರುವವರಾಗಿರುವದರಿಂದ, ಯಾರಾದರೂ ನಮ್ಮ ಕುರಿತಾಗಿ ಶ್ಲಾಘನೀಯವಲ್ಲದ ಠೀಕೆಗಳನ್ನು ಮಾಡಲು ಬಯಸುವದಾದರೆ, ಹೇಳಲಿಕ್ಕೆ ಅವನಿಗೆ ತುಂಬಾ ವಿಷಯಗಳು ದೊರಕಬಹುದು. (1 ಯೋಹಾನ 2:1, 2) ಸಹಜವಾಗಿ, ನಾವು ಸರಿಯಾದದ್ದನ್ನೇ ಮಾಡುತ್ತಿದ್ದೇವೆ ನಾವು ನೆನಸಬಹುದು. “ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧ; ಆದರೆ ಯೆಹೋವನು ಅಂತರಂಗವನ್ನೇ ಪರೀಕ್ಷಿಸುತ್ತಾನೆ.” ದೇವರ ತಕ್ಕಡಿಗಳು ತಮ್ಮವರೊಲವು ಯಾ ಪಕ್ಷಪಾತದಿಂದ ವಾರೆಯಾಗುವದಿಲ್ಲ. (ಜ್ಞಾನೋಕ್ತಿ 16:2; ಅ.ಕೃತ್ಯಗಳು 10:34, 35) ಯೆಹೋವನು ನಮ್ಮ ಅಂತರಂಗವನ್ನು ತೂಗುತ್ತಾನೆ, ನಮಗೆ ಆಲೋಚಿಸಲು, ಕ್ರಿಯೆಗೈಯಲು ಮತ್ತು ಮಾತಾಡಲು ಪ್ರಚೋದಿಸುವ ನಮ್ನ ಮನಸ್ಸನ್ನು ಮತ್ತು ಪ್ರವೃತ್ತಿಯನ್ನು ಗಮನಿಸುತ್ತಾನೆ. ಹಾಗಿದ್ದರೆ, ನಿಶ್ಚಯವಾಗಿಯೂ, ನಾವು ನಮ್ಮನ್ನೇ ಶುದ್ಧರೆಂದು ಮತ್ತು ಇತರರನ್ನು ಹೊಲಸಾದ ಮತ್ತು ಮನನೋಯಿಸುವ ಠೀಕೆಗೆ ಯೋಗ್ಯರಾಗಿದ್ದಾರೆಂದು ಪರಿಗಣಿಸುವವರು ಎಂಬ ರೀತಿಯಲ್ಲಿ ದೇವರು ನಮ್ಮನ್ನು ಕಂಡುಕೊಳ್ಳಲು ನಾವು ಬಯಸುವದಿಲ್ಲ. ಯೆಹೋವನಂತೆ, ನಾವು ನಿಷ್ಪಕ್ಷಪಾತಿಗಳು, ಕರುಣೆಯುಳ್ಳವರು ಮತ್ತು ಪ್ರೀತಿಸುವವರು ಆಗಿರಬೇಕು.
13. (ಎ) “ಪ್ರೀತಿಯು ಬಹು ತಾಳ್ಮೆಯುಳ್ಳದ್ದು ಮತ್ತು ದಯೆ ತೋರಿಸುವದು” ಎಂಬ ವಾಸ್ತವಾಂಶವು ಹಾನಿಕರ ಹರಟೆಯನ್ನು ಸದೆಬಡಿಯಲು ಹೇಗೆ ಸಹಾಯ ಮಾಡುತ್ತದೆ? (ಬಿ) ನಮಗಿರದ ಸೇವಾ ಸುಯೋಗಗಳನ್ನು ಪಡೆದಿರುವ ಬೇರೊಬ್ಬನ ವಿರುದ್ಧ ಮಾತಾಡುವದರಿಂದ ನಮ್ಮನ್ನು ಏನು ತಡೆಯುತ್ತದೆ?
13 1 ಕೊರಿಂಥದವರಿಗೆ 13:4-8ರಲ್ಲಿ ಪೌಲನು ಹೇಳಿದ್ದ ವಿಷಯಗಳ ಅನ್ವಯಿಸುವಿಕೆಯು ಹಾನಿಕರವಾದ ಹರಟೆಯನ್ನು ಸದೆಬಡೆಯಲು ನಮಗೆ ಸಹಾಯ ನೀಡಬಹುದು: “ಪ್ರೀತಿಯು ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವದು.” ಒಂದು ವಿಭಜಿತ ಮನೆಯಲ್ಲಿ ಹಿಂಸೆಯನ್ನು ಅನುಭವಿಸುತ್ತಿರುವ ಸಹೋದರಿಯು ನಮ್ಮನ್ನು ಗೆಲುವಿನಿಂದ ವಂದಿಸದಿರಬಹುದು. ಅಥವಾ ಕೆಲವರು ಪ್ರಾಯಶಃ ಕೆಟ್ಟ ಆರೋಗ್ಯದಿಂದಾಗಿ ನಿಧಾನವಾಗಿರಬಹುದು. ಅಂಥವರನ್ನು ಕಟುವಾದ ಹರಟೆಗೆ ಬಲಿಪಶುಗಳನ್ನಾಗಿ ಮಾಡುವ ಬದಲು ಪ್ರೀತಿಯು ನಮ್ಮನ್ನು ಅಂಥ ವ್ಯಕ್ತಿಗಳೆಡೆಗೆ ತಾಳ್ಮೆ ಮತ್ತು ದಯೆಯುಳ್ಳವರಾಗಿರುವಂತೆ ನಡಿಸಬಾರದೇ? ‘ಪ್ರೀತಿಯು ಹೊಟ್ಟೇಕಿಚ್ಚು ಪಟ್ಟುಕೊಳ್ಳುವದಿಲ್ಲ. ಹೊಗಳಿಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ.’ ಆದುದರಿಂದ, ನಮಗೆ ಇರದ ಸೇವಾಸುಯೋಗವನ್ನು ಒಬ್ಬ ಸಹೋದರನು ಪಡೆದರೆ, ಅವನ ವಿರುದ್ಧ ಮಾತಾಡುವದರಿಂದ ಮತ್ತು ಅವನು ಆ ಕೆಲಸಕ್ಕೆ ಅಯೋಗ್ಯನೆಂದು ಸೂಚಿಸುವದರಿಂದ ಪ್ರೀತಿಯು ನಮ್ಮನ್ನು ತಪ್ಪಿಸುತ್ತದೆ. ಕಡಿಮೆ ಸುಯೋಗವಿದ್ದವರನ್ನು ಎದೆಗುಂದಿಸುವ ಸಂಭಾಷಣೆ, ನಮ್ಮ ಸಾಧನೆಗಳ ಕುರಿತಾಗಿ ಕೊಚ್ಚಿಕೊಳ್ಳುವದರಿಂದ ಪ್ರೀತಿಯು ನಮ್ಮನ್ನು ದೂರವಿರಿಸುತ್ತದೆ.
14. ಇತರರ ಕುರಿತು ನಾವು ಏನು ಹೇಳುತ್ತೇವೂ ಅದನ್ನು ಪ್ರಭಾವಿಸುವ ಪ್ರೀತಿಯ ಕುರಿತಾಗಿ ಇನ್ನು ಯಾವ ವಿಷಯ ಇದೆ?
14 ‘ಪ್ರೀತಿಯು ಮರ್ಯಾದೆಗೆಟ್ಟು ನಡೆಯುವದಿಲ್ಲ, ಸ್ವಪ್ರಯೇಜನವನ್ನು ಚಿಂತಿಸುವದಿಲ್ಲ, ಸಿಟ್ಟುಗೊಳ್ಳುವದಿಲ್ಲ, ಅಪಕಾರವನ್ನು ಮನಸ್ಸಿನಲ್ಲಿಟ್ಟುಕೊಳ್ಳುವದಿಲ್ಲ’ ಎಂದು ಕೂಡ ಪೌಲನು ಹೇಳಿದ್ದಾನೆ. ಮರ್ಯಾದೆಗೆಟ್ಟ ರೀತಿಯಲ್ಲಿ ಅಕ್ರಿಸ್ತೀಯ ವಿಷಯಗಳನ್ನು ಹೇಳುವ ಬದಲು, ಇತರರ ಕುರಿತಾಗಿ ಒಳ್ಳೇದನ್ನು ಮಾತಾಡಲು ಮತ್ತು ಅವರ ಆಸಕ್ತಿಗಳನ್ನು ಎಣಿಸಲು ಪ್ರೀತಿಯು ನಮ್ಮನ್ನು ನಡಿಸುವಂತೆ ಬಿಡಬೇಕು. ನಾವು ಸಿಟ್ಟುಗೊಳ್ಳುವಂತೆ ಮತ್ತು ನೈಜವಾದ ಯಾ ಊಹನೆಯ ಹಾನಿಗಳಿಗಾಗಿ ಜನರ ವಿರುದ್ಧ ಮಾತಾಡುವದರಿಂದ ಅದು ನಮ್ಮನ್ನು ತಡೆಯುತ್ತದೆ. ‘ಪ್ರೀತಿಯು ಅನ್ಯಾಯವನ್ನು ನೋಡಿ ಸಂತೋಷಪಡದೆ ಸತ್ಯಕ್ಕಾಗಿ ಸಂತೋಷಪಡುವದರಿಂದ’ ಅನ್ಯಾಯವನ್ನು ಅನುಭವಿಸುತ್ತಿರುವ ವಿರೋಧಿಗಳ ಕುರಿತಾಗಿಯೂ ನಾವು ನೋವನ್ನುಂಟುಮಾಡುದರಿಂದ ನಮ್ಮನ್ನು ತಡೆಯುತ್ತದೆ.
15. (ಎ)“ಪ್ರೀತಿಯು ಎಲ್ಲವನ್ನು ನಂಬುತ್ತದೆ ಮತ್ತು ಎಲ್ಲವನ್ನು ನಿರೀಕ್ಷಿಸತ್ತದೆ” ಎಂಬ ಸತ್ಯಾಂಶದಿಂದ ನಾವು ಹೇಗೆ ಪ್ರಭಾವಿತರಾಗಬಹುದು? (ಬಿ) ಇತರರು ಅದರ ವಿರುದ್ಧ ಮಾತಾಡಿದರೂ, ಯೆಹೋವನ ಸಂಸ್ಥೆಗೆ ಅಂಟಿಕೊಂಡಿರಲು ಪ್ರೀತಿಯ ಇತರ ಯಾವ ಲಕ್ಷಣಗಳು ನಮಗೆ ಸಹಾಯ ಮಾಡುವವು?
15 ಪ್ರೀತಿಯು ದೇವರ ವಾಕ್ಯದಲ್ಲಿರುವ ‘ಎಲ್ಲವನ್ನು ನಂಬುತ್ತದೆ ಮತ್ತು ಎಲ್ಲವನ್ನು ನಿರೀಕ್ಷಿಸುತ್ತದೆ,’ ಮತ್ತು ಸುಳ್ಳು ಧರ್ಮಭ್ರಷ್ಟರ ನಿಂದೆಯ ಹೇಳಿಕೆಗಳಿಗೆ ಕಿವಿಗೊಡುವ ಬದಲು ‘ನಂಬಿಗಸ್ತ ಆಳು ವರ್ಗ’ದಿಂದ ಒದಗಿಸಲ್ಪಡುವ ಆತ್ಮಿಕ ಆಹಾರವನ್ನು ಗಣ್ಯಮಾಡಲು ನಡಿಸುತ್ತದೆ. (ಮತ್ತಾಯ 24:25-27; 1 ಯೋಹಾನ 2:18-21) ‘ಪ್ರೀತಿಯು ಎಲ್ಲವನ್ನು ಸಹಿಸಿಕೊಳ್ಳುತ್ತದೆ ಮತ್ತು ಅದು ಎಂದಿಗೂ ಬಿದ್ದು ಹೋಗದ’ ಕಾರಣ, ‘ಸುಳ್ಳು ಸಹೋದರರು’ ಅಥವಾ ಇತರರು ಅದರ ಯಾ ಅದರ ಸದಸ್ಯರ ವಿರುದ್ಧ ಮಾತಾಡಿದರೂ ಕೂಡ, ಅದು ನಮಗೆ ಯೆಹೋವನ ಸಂಸ್ಥೆಗೆ ನಿಷ್ಠೆಯಿಂದಿರಲು ಸಹಾಯಮಾಡುತ್ತದೆ.—ಗಲಾತ್ಯ 2:4.
ಗೌರವವು ಹರಟೆಯನ್ನು ನಿಗ್ರಹಿಸುತ್ತದೆ
16. ಕೊರಿಂಥದಲ್ಲಿರುವ ಸುಳ್ಳು ಸಹೋದರರಿಂದ ಪೌಲನು ಹೇಗೆ ಉಪಚರಿಸಲ್ಪಟ್ಟನು?
16 ಜತೆವಿಶ್ವಾಸಿಗಳ ಕಡೆಗೆ ಇರುವ ಗೌರವವು ಕೂಡ ನೋವನ್ನುಂಟುಮಾಡುವ ಹರಟೆಯನ್ನು ಸದೆಬಡಿಯಲು ನೆರವಾಗುವದು. ಅವರು ದೇವರಿಗೆ ಸ್ವೀಕಾರ್ಹರಾಗಿರುವದರಿಂದ, ಅವರನ್ನು ಖಂಡಿತವಾಗಿಯೂ ನಾವು ದೂಷಿಸಕೂಡದು. ಪೌಲನು ಎದುರಿಸಿದ “ಸುಳ್ಳು ಸಹೋದರರಂತೆ” ನಾವೆಂದಿಗೂ ಇರದಿರೋಣ. ನಿಸ್ಸಂದೇಹವಾಗಿ, ಅವರು ಅವನ ಕುರಿತಾಗಿ ಕೆಟ್ಟ ವಿಷಯಗಳನ್ನು ಹೇಳಿದ್ದರು. (2 ಕೊರಿಂಥ 11:26) ಧರ್ಮಭ್ರಷ್ಟರೂ ಅವನನ್ನು ತೆಗಳಿರಬಹುದು. (ಯೂದ 3, 4ನ್ನು ಹೋಲಿಸಿರಿ.) ಕೊರಿಂಥ್ಯದಲ್ಲಿನ ಕೆಲವು ವ್ಯಕ್ತಿಗಳು ಹೀಗೆ ಹೇಳಿದರು: “ಅವನಿಂದ ಬಂದ ಪತ್ರಗಳು ಗೌರವವಾದವುಗಳೂ, ಬಲವುಳ್ಳವಗಳೂ ಆಗಿವೆ; ಆದರೆ ಅವನು ಸಾಕ್ಷಾತ್ತಾಗಿ ಬಂದರೆ ಅವನು ನಿರ್ಬಲನು, ಮತ್ತು ಅವನ ಮಾತುಗಳು ಗಣನೆಗೆ ಬಾರದ್ದು.” (2 ಕೊರಿಂಥ 10:10) ತಾವು ಪ್ರೀತಿಸುತ್ತಿರುವವರ ಕುರಿತಾಗಿ ಜನರು ಇಂಥ ಠೀಕೆಗಳನ್ನು ಮಾಡುವದಿಲ್ಲ.
17. ಅಪೊಸ್ತಲ ಯೋಹಾನನ ಕುರಿತಾಗಿ ದಿಯೊತ್ರೇಫನು ಯಾವ ವಿಧದ ನುಡಿಗಳಿಂದ ಮಾತಾಡುತ್ತಿದ್ದನು?
17 ದಿಯೊತ್ರೇಫನು ವಿರುದ್ಧ ಮಾತಾಡಿದ್ದ ಅಪೊಸ್ತಲ ಯೋಹಾನನನ್ನು ಪರಿಗಣಿಸಿರಿ: “ಸಭೆಗೆ ಕೆಲವು ಮಾತುಗಳನ್ನು ಬರೆದಿದ್ದೆನು,” ಯೋಹಾನನು ಹೇಳುತ್ತಾನೆ, “ಆದರೆ ಸಭೆಯವರಲ್ಲಿ ಪ್ರಮುಖನಾಗಿರ ಬೇಕೆಂದಿರುವ ದಿಯೊತ್ರೇಫನು ನಮ್ಮ ಮಾತನ್ನು ಅಂಗೀಕರಿಸುವದಿಲ್ಲ. ಆದಕಾರಣ ನಾನು ಬಂದರೆ ಅವನು ಮಾಡುವ ಕೃತ್ಯಗಳ ವಿಷಯದಲ್ಲಿ ಎಲ್ಲರಿಗೂ ನೆನಪುಕೊಡುವೆನು. ಅವನು ಹರಟೆ ಕೊಚ್ಚುವವನಾಗಿ ನಮ್ಮ ವಿಷಯದಲ್ಲಿ ಕೆಟ್ಟ ಕೆಟ್ಟಮಾತುಗಳನ್ನಾಡುತ್ತಾನೆ.” (3 ಯೋಹಾನ 9, 10) ಅಂಥಾ ವಟಗುಟ್ಟುವಿಕೆ ಒಂದು ಬಹುಗಂಭೀರ ವಿಷಯವಾಗಿತ್ತು ಮತ್ತು ನಾವಿಂದು ತದ್ರೀತಿಯ ಸಂಭಾಷಣೆಗೆ ಕಿವಿಗೊಡುತ್ತಾ ಇದ್ದರೆ ಅಥವಾ ಹಬ್ಬಿಸುತ್ತಾ ಇದ್ದರೆ, ನಾವದನ್ನು ತತಕ್ಷಣವೇ ನಿಲ್ಲಿಸತಕ್ಕದ್ದು.
18. ದಿಯೊತ್ರೇಫನಿಂದ ದೇಮೇತ್ರೀಯನು ಹೇಗೆ ಭಿನ್ನವಾಗಿದ್ದನು, ಮತ್ತು ಈ ವ್ಯತ್ಯಾಸವು ನಮ್ಮ ನಡತೆಯನ್ನು ಹೇಗೆ ಪ್ರಭಾವಿಸಬೇಕು?
18 ಯಥಾರ್ಥವಂತರಿಗೆ ಗೌರವವನ್ನು ಕೊಡಲು ಪ್ರೇರಿಸುತ್ತಾ, ಯೋಹಾನನು ಗಾಯನಿಗೆ ಹೇಳಿದ್ದು: “ನೀನು ಕೆಟ್ಟ ನಡತೆಯನ್ನು ಅನುಸರಿಸದೆ ಒಳ್ಳೇ ನಡತೆಯನ್ನು ಅನುಸರಿಸು; ಒಳ್ಳೇದನ್ನು ಮಾಡುವವನು ದೇವರನ್ನು ಕಂಡವನಲ್ಲ. ದೇಮೇತ್ರಿಯನು ಸಂಭಾವಿತನೆಂದು ಎಲ್ಲರಿಂದಲೂ ಸಾಕ್ಷತ್ ಸತ್ಯದಿಂದಲೂ ಸಾಕ್ಷಿಹೊಂದಿದ್ದಾನೆ. ನಾವು ಸಹ ಅವನ ವಿಷಯದಲ್ಲಿ ಸಾಕ್ಷಿ ಹೇಳುವವರಾಗಿದ್ದೇವೆ; ನಮ್ಮ ಸಾಕ್ಷಿ ಸತ್ಯವಾದದ್ದೆಂದು ನೀನು ಬಲ್ಲೆ.” (3 ಯೋಹಾನ 1, 11, 12) ನಮ್ಮಲ್ಲಿ ಪ್ರತಿಯೊಬ್ಬನು ತನಗೆ ಹೀಗೆ ಕೇಳಿಕೊಳ್ಳತಕ್ಕದ್ದು: ನಾನೊಬ್ಬ ಹರಟೆ ಕೊಚ್ಚುವ ದಿಯೊತ್ರೇಫನೋ, ಅಥವಾ ಒಬ್ಬ ನಂಬಿಗಸ್ತ ದೇಮೇತ್ರಿಯನೋ? ನಾವು ಜತೆ ವಿಶ್ವಾಸಿಗಳನ್ನು ಗೌರವಿಸುವದಾದರೆ, ನಮ್ಮನ್ನು ಹರಟೆಮಲ್ಲರೋಪಾದಿ ವೀಕ್ಷಿಸುವಂತೆ ಇತರರಿಗೆ ಕಾರಣವನ್ನು ಕೊಡುವದಿಲ್ಲ, ಅಂದರೆ ಅವರ ಕುರಿತಾಗಿ ನಕಾರಾತ್ಮಕ ಠೀಕೆಗಳನ್ನು ನಾವು ಮಾಡುವದಿಲ್ಲ.
19. ಸುಳ್ಳು ಸಹೋದರರು ಸಿ.ಟಿ.ರಸ್ಸೆಲ್ರ ಹೆಸರನ್ನು ಹಾಳುಗೆಡವಲು ಹೇಗೆ ಪ್ರಯತ್ನಿದರು?
19 ಸುಳ್ಳು ಸಹೋದರರು ಕೇವಲ ಪ್ರಥಮ ಶತಮಾನದಲ್ಲಿ ಅಸ್ತಿತ್ವದಲ್ಲಿ ಇದ್ದದ್ದಲ್ಲ. 1890ರ ದಶಕದಲ್ಲಿ, ದೇವರ ಸಂಸ್ಥೆಯೊಂದಿಗೆ ಸಹವಸಿಸುತ್ತಿದ್ದ ನೀತಿನಿಷ್ಠೆಗಳಿಲ್ಲದ ವ್ಯಕ್ತಿಗಳು ವಾಚ್ಟವರ್ ಸೊಸೈಟಿಯನ್ನು ತಮ್ಮ ವಶಕ್ಕೊಳಪಡಿಸಲು ಪ್ರಯತ್ನಿಸಿದರು. ಅವರು ಸೊಸೈಟಿಯ ಪ್ರಥಮ ಅಧ್ಯಕ್ಷರಾಗಿ ಚಾರ್ಲ್ಸ್ ಟೇಜ್ ರಸ್ಸೆಲ್ ಇರುವದಕ್ಕೆ ಅಂತ್ಯವನ್ನು ತರಲು ಹುಡುಕುತ್ತಾ, ಅವರ ವಿರುದ್ಧವಾಗಿ ಷಡ್ಯಂತ್ರ ರಚಿಸಿದ್ದರು; ಸುಮಾರು ಎರಡು ವರ್ಷಗಳ ಒಳಸಂಚಿನ ನಂತರ, 1894 ರಲ್ಲಿ ಈ ಸಂಚು ಸ್ಫೋಟಿಸಿತು. ವ್ಯಾಪಾರದಲ್ಲಿ ರಸ್ಸೆಲರ ಅಪ್ರಾಮಾಣಿಕತೆಯ ಆರೋಪದ ಸುತ್ತಲೂ ಮುಖ್ಯವಾಗಿ ಈ ಸುಳ್ಳು ಅಪವಾದಗಳು ಕೇಂದ್ರಿತವಾಗಿದ್ದವು. ಕೆಲವು ಕ್ಷುಲ್ಲಕ ಅಪವಾದಗಳು ಆರೋಪ ಹೊರಿಸುವವರ ಹೇತುವನ್ನು ಬಯಲು ಪಡಿಸಿದವು—ಸಿ.ಟಿ.ರಸ್ಸೆಲ್ರ ಹೆಸರನ್ನು ಹಾಳುಗೆಡುವದು. ನಿಷ್ಪಕ್ಷಪಾತವಿದ್ದ ಕ್ರೈಸ್ತರು ವಿಷಯಗಳನ್ನು ಪರೀಕ್ಷಿಸಿದರು ಮತ್ತು ರಸ್ಸೆಲ್ರು ಸರಿಯಾಗಿರುವದನ್ನು ಕಂಡುಕೊಂಡರು. ಈ ರೀತಿ “ಶ್ರೀಮಾನ್ ರಸ್ಸೆಲ್ರನ್ನು ಮತ್ತು ಅವರ ಕೆಲಸವನ್ನು ಬಾನೆತ್ತರಕ್ಕೆ ಸ್ಫೋಟಿಸುವ” ಅವರ ಈ ಯೋಜನೆಯು ಪರಾಜಯಗೊಂಡಿತು. ಆದುದರಿಂದ, ಪೌಲನಂತೆ, ಸಹೋದರ ರಸ್ಸೆಲ್ರು ಸುಳ್ಳು ಸಹೋದರರಿಂದ ಧಾಳಿಗೆ ಒಳಗಾದರು, ಆದರೆ ಈ ಶೋಧನೆಯನ್ನು ಸೈತಾನನ ಒಂದು ಹಂಚಿಕೆಯೋಪಾದಿ ವೀಕ್ಷಿಸಲಾಯಿತು. ತದನಂತರ, ಕ್ರಿಸ್ತೀಯ ಸಹವಾಸದಲ್ಲಿ ಆನಂದಿಸಲು ಈ ಸಂಚುಗಾರರು ಅಯೋಗ್ಯರೆಂದು ಪರಿಗಣಿಸಲ್ಪಟ್ಟರು.
ಸತ್ಕಾರ್ಯಗಳು ಹಾನಿಕರ ಹರಟೆಯನ್ನು ದುರ್ಬಲಗೊಳಿಸುತ್ತವೆ
20. ಕೆಲವು ಪ್ರಾಯದ ವಿಧವೆಯವರೊಂದಿಗೆ ಪೌಲನು ಯಾವ ತಪ್ಪನ್ನು ಕಂಡುಕೊಂಡನು?
20 ಹಾನಿಕರ ಹರಟೆಯು ಹೆಚ್ಚಾಗಿ ಸೋಮಾರಿತನಕ್ಕೆ ಸಂಬಂಧಿತಪಟ್ಟಿದೆ ಎಂದು ಪೌಲನಿಗೆ ತಿಳಿದಿತ್ತು. “ಮೈಗಳ್ಳರಾಗಿರುವದಲ್ಲದೇ, ಹರಟೆ ಮಾತಾಡುವವರೂ ಇತರರ ಕೆಲಸದಲ್ಲಿ ಕೈ ಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡಲು” ಕಲಿಯುವ ಕೆಲವು ಪ್ರಾಯದ ವಿಧವೆಯರ ಕುರಿತಾಗಿ ಅವನು ಸಂತೋಷಪಡಲಿಲ್ಲ. ಇದಕ್ಕೆ ಪರಿಹಾರ ಏನು? ಹಿತಕರವಾದ ಚಟುವಟಿಕೆ. ಹೀಗೆ, ಪೌಲನು ಬರೆದದ್ದು: “ಆದದ್ದರಿಂದ ಯುವ ವಿಧವೆಯರು ಮದುವೆ ಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯ ಯಜಮಾನಿಯರಾಗಿರುವದು ನನಗೆ ಒಳ್ಳೇದಾಗಿ ತೋಚುತ್ತದೆ; ಹಾಗೆ ಮಾಡುವದರಿಂದ ವಿರೋಧಿಗಳ ನಿಂದೆಗೆ ಆಸ್ಪದಕೊಡದೆ ಇರುವರು.”—1 ತಿಮೊಥೆಯ 5:11-14, ಬೈಯಿಂಗ್ಟನ್.
21. ಹಾನಿಕರವಾದ ಹರಟೆಯ ಪಾಶಗಳನ್ನು ಹೋಗಲಾಡಿಸುವ ವಿಷಯದ ಮೇಲೆ 1 ಕೊರಿಂಥ 15:58 ಯಾವ ಪ್ರಭಾವ ಬೀರುತ್ತದೆ?
21 ಹೆಂಗಸರು ಒಂದು ಮನೆವಾರ್ತೆಯನ್ನು ನಿರ್ವಹಿಸಿದರೆ, ಮಕ್ಕಳನ್ನು ದೇವರ ಮಟ್ಟಗಳಿಗನುಸಾರ ತರಬೇತುಗೊಳಿಸಿದರೆ ಮತ್ತು ಇತರ ಅರ್ಹವಾದ ಕಸುಬುಗಳಲ್ಲಿ ತೊಡಗಿದರೆ, ಕೇಡುನ್ನುಂಟುಮಾಡುವ ಹರಟೆಗೆ ನಡಿಸುವ ಸೋಮಾರಿ ಮಾತುಕತೆಗೆ ಇರುವ ಸಮಯವಾದರೂ ಕೊಂಚವೇ. ಸತ್ಕಾರ್ಯಗಳಲ್ಲಿ ಕಾರ್ಯಮಗ್ನರಾಗಿದ್ದರೆ, ಗಂಡಸರಿಗೂ ಇಂಥಾ ಸಂಭಾಷಣೆಗೆ ಕೊಂಚವೇ ಸಮಯವಿರುವದು. “ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವದು,” ನಮ್ಮೆಲ್ಲರನ್ನು ಹಾನಿಕರ ಹರಟೆಯ ಪಾಶಗಳಿಂದ ತಪ್ಪಿಸಲು ಸಹಾಯ ಮಾಡುವದು. (1 ಕೊರಿಂಥ 15:58) ವಿಶೇಷವಾಗಿ ಕ್ರೈಸ್ತ ಶುಶ್ರೂಷೆಯಲ್ಲಿ ಪೂರ್ಣ ಹೃದಯದ ಒಳಗೂಡುವಿಕೆಯು, ಸಭಾಕೂಟಗಳಲ್ಲಿ ಮತ್ತು ಇತರ ದೈವಿಕ ಉದ್ಯೋಗಗಳು, ನಮ್ಮ ಮನಸ್ಸುಗಳನ್ನು ಆತ್ಮಿಕ ವಿಷಯಗಳ ಮೇಲೆ ಇಡುತ್ತವೆ ಮತ್ತು ಕಸುಬಿಲ್ಲದ ಹರಟೆ ಮಲ್ಲ [ಮಲ್ಲಿ] ರೂ, ಇತರರ ವ್ಯವಹಾರಗಳಲ್ಲಿ ಕೈಹಾಕುವವರು ಆಗದಂತೆ ಸಹಾಯ ಮಾಡುತ್ತದೆ.
22. ಜ್ಞಾನೋಕ್ತಿ 6:16-19 ನಿಂದಕರ ಕುರಿತಾಗಿ ದೇವರ ನೋಟವನ್ನು ಹೇಗೆ ಹೇಳುತ್ತದೆ?
22 ದೈವಿಕ ಕೆಲಸಗಳಲ್ಲಿ ನಾವು ಕಾರ್ಯತತ್ಪರರಾಗಿರುವದಾದರೆ, ಮತ್ತು ಇತರರನ್ನು ಆತ್ಮಿಕವಾಗಿ ಹರಸಲು ಪ್ರಯತ್ನಿಸಿದರೆ, ನಾವು ನಿಷ್ಠೆಯ ಗೆಳೆಯರಾಗಿ ಇರುತ್ತವೆಯೇ ಹೊರತು, ದ್ರೋಹಿ ಚಾಡಿಕೋರರಲ್ಲ. (ಜ್ಞಾನೋಕ್ತಿ 17:17) ಮತ್ತು ನಾವು ಕೇಡನ್ನುಂಟುಮಾಡುವ ಹರಟೆಯನ್ನು ಹೋಗಲಾಡಿಸಿದರೆ, ನಮಗೆ ಅತಿ ಶ್ರೇಷ್ಠ ಗೆಳೆಯನು ಇರುವನು—ಯೆಹೋವ ದೇವರು. ಯೆಹೋವನಿಗೆ ಅಸಹ್ಯವಾಗಿರುವ ಏಳು ಸಂಗತಿಗಳು ಇವೆ ಎಂದು ನಾವು ನೆನಪಿನಲ್ಲಿಡೋಣ, ಅವು ಯಾವ್ಯಾವು ಅಂದರೆ “ಹೆಮ್ಮೆಯ ಕಣ್ಣು, ಸುಳ್ಳಿನ ನಾಲಿಗೆ, ನಿರ್ದೋಷ ರಕ್ತವನ್ನು ಸುರಿಸುವ ಕೈ, ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡು ಮಾಡಲು ತರ್ವೆ ಪಡುವ ಕಾಲು, ಅಸತ್ಯವಾಡುವ ಸುಳ್ಳು ಸಾಕ್ಷಿ ಮತ್ತು ಒಡಹುಟ್ಟಿದವರಲ್ಲಿ ಜಗಳಗಳನ್ನು ಬಿತ್ತುವವನು.” (ಜ್ಞಾನೋಕ್ತಿ 6:16-19) ಹರಟೆ ಹಬ್ಬಿಸುವವರು ವಿಷಯಗಳನ್ನು ಅತಿಶಯಗೊಳಿಸುತ್ತಾರೆ ಮತ್ತು ತಿರುಚುತ್ತಾರೆ ಮತ್ತು ನಿಂದಕರಿಗೆ ಸುಳ್ಳಿನ ನಾಲಿಗೆಗಳಿವೆ. ಅವರ ಮಾತುಗಳು ಚಾಡಿ ಹೇಳಲು ಆತುರ ಪಡುವವರ ಕಾಲುಗಳನ್ನು ನಡಿಸುತ್ತವೆ. ಬಹುಮಟ್ಟಿಗೆ ತಪ್ಪದೇ, ಫಲಿತಾಂಶವು ಜಗಳವಾಗಿರುತ್ತದೆ. ಆದರೆ ದೇವರು ಏನನ್ನು ದ್ವೇಷಿಸುತ್ತಾನೋ ಅದನ್ನು ನಾವು ದ್ವೇಷಿಸಿದರೆ, ಯಥಾರ್ಥವಂತರನ್ನು ಕೆಡಿಸುವ ಮತ್ತು ಮಹಾ ನಿಂದಕನಾದ ಪಿಶಾಚನಾದ ಸೈತಾನನಿಗೆ ಉಲ್ಲಾಸವನ್ನು ತರುವ ವೇದನೆಯನ್ನುಂಟುಮಾಡುವ ಹರಟೆಯನ್ನು ತ್ಯಜಿಸುವೆವು.
23. ನಮ್ಮ ಮಾತುಕತೆಯ ಸಂಬಂಧದಲ್ಲಿ, ಯೆಹೋವನ ಹೃದಯವನ್ನು ನಾವು ಹೇಗೆ ಸಂತೋಷಗೊಳಿಸಬಹುದು?
23 ಆದುದರಿಂದ, ನಾವು ಯೆಹೋವನ ಹೃದಯವನ್ನು ಸಂತೋಷ ಪಡಿಸೋಣ. (ಜ್ಞಾನೋಕ್ತಿ 27:11) ಅವನು ದ್ವೇಷಿಸುವ ಮಾತುಕತೆಯನ್ನು ಹೋಗಲಾಡಿಸೋಣ, ನಿಂದೆಗೆ ಕಿವಿಗೊಡಲು ನಿರಾಕರಿಸೋಣ ಮತ್ತು ಹಾನಿಕರವಾದ ಹರಟೆಯನ್ನು ಸದೆಬಡಿಯಲು ನಮ್ಮಿಂದ ಸಾಧ್ಯವಿರುವದ್ದನ್ನೆಲ್ಲವನ್ನೂ ಮಾಡೋಣ. ಖಂಡಿತವಾಗಿಯೂ, ನಮ್ಮ ಪವಿತ್ರ ದೇವರಾದ ಯೆಹೋವನ ಸಹಾಯದಿಂದ ನಾವು ಇದನ್ನು ಮಾಡಶಕ್ತರಾಗುವೆವು. (w89 10/15)
[ಅಧ್ಯಯನ ಪ್ರಶ್ನೆಗಳು]
a ಇಂದು ಕೂಡ, ಆಡಳಿತ ಮಂಡಲಿಯ ಸದಸ್ಯರು ಇಲ್ಲವೇ ಅವರ ಪ್ರತಿನಿಧಿಗಳು ಏನು ಹೇಳಿರಬಹುದು ಇಲ್ಲವೇ ಮಾಡಿರಬಹುದು ಎಂದು ಊಹಿಸಿ ಹೇಳುವ ಭಾವೋದ್ರೇಕಕಾರಿ ಕಥೆಗಳನ್ನು (ಕೆಲವೊಮ್ಮೆ ಯಾವುದೇ ವಾಸ್ತವಾಂಶದ ಮೇಲೆ ಆಧರಿತವಾಗಿರುವದಿಲ್ಲ) ಕೇಳುವದೂ, ಯಾ ಅದನ್ನು ಹಬ್ಬಿಸುವದೂ ಸರಿಯಲ್ಲ.
ನೀವು ಹೇಗೆ ಉತ್ತರಿಸುವಿರಿ?
◻ ಇತರರನ್ನು ನಿಂದಿಸುವದನ್ನು ಹೋಗಲಾಡಿಸಲು ಪ್ರಾರ್ಥನೆಯು ನಮಗೆ ಹೇಗೆ ಸಹಾಯ ಮಾಡಬಲ್ಲದು?
◻ ಹಾನಿಕರ ಹರಟೆಯನ್ನು ಸದೆಬಡಿಯಲು 1 ಕೊರಿಂಥ 13:4-8ನ್ನು ಅನ್ವಯಿಸುವದರಿಂದ ಹೇಗೆ ನಮಗೆ ಸಹಾಯಮಾಡಬಲ್ಲದು?
◻ ಜತೆ ವಿಶ್ವಾಸಿಗಳ ಕುರಿತಾಗಿ ಹರಟೆ ಮಾತಾಡುವ ಯಾವ ಶೋಧನೆಯನ್ನು ನಿಗ್ರಹಿಸಲು ಆತ್ಮ ಗೌರವವು ನಮಗೆ ಹೇಗೆ ಸಹಾಯ ಮಾಡಬಲ್ಲದು?
◻ ಹಾನಿಕರ ಹರಟೆಯ ಪಾಶಗಳನ್ನು ಹೋಗಲಾಡಿಸಲು 1 ಕೊರಿಂಥ 15:58 ಹೇಗೆ ಪ್ರಭಾವಬೀರುತ್ತದೆ?
[ಪುಟ 13 ರಲ್ಲಿರುವ ಚಿತ್ರ ಕೃಪೆ]
U.S. Forest Service photo