ಪುನರುತ್ಥಾನದ ನಿರೀಕ್ಷೆಗೆ ಶಕ್ತಿಯಿದೆ
‘ನಾನು ಎಲ್ಲವನ್ನೂ ಕಳಕೊಂಡು . . . ಆತನನ್ನೂ [ಯೇಸು ಕ್ರಿಸ್ತನನ್ನು] ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ . . . ತಿಳುಕೊಳ್ಳಬೇಕಾಗಿದೆ.’—ಫಿಲಿಪ್ಪಿ 3:8-10.
1, 2. (ಎ) ಅನೇಕ ವರ್ಷಗಳ ಹಿಂದೆ, ಒಬ್ಬ ಪಾದ್ರಿಯು ಪುನರುತ್ಥಾನವನ್ನು ಯಾವ ರೀತಿಯಲ್ಲಿ ವರ್ಣಿಸಿದನು? (ಬಿ) ವಾಸ್ತವದಲ್ಲಿ ಪುನರುತ್ಥಾನವು ಹೇಗಾಗುವುದು?
ವಾರ್ತಾಪತ್ರಿಕೆಗಳು 1890ನೆಯ ದಶಕದ ಆರಂಭದಲ್ಲಿ ಅಮೆರಿಕದ ನ್ಯೂ ಯಾರ್ಕಿನ ಬ್ರೂಕ್ಲಿನ್ನಲ್ಲಿ ಒಬ್ಬ ಪಾದ್ರಿಯು ಕೊಟ್ಟ ಒಂದು ಅಸಾಮಾನ್ಯ ಧರ್ಮಪ್ರವಚನದ ಕುರಿತಾಗಿ ವರದಿಸಿದವು. ಪುನರುತ್ಥಾನವು ಹೀಗಿರುವುದೆಂದು ಅವನು ವಿವರಿಸಿದನು: ಬೆಂಕಿಯಿಂದಲೊ ಅಪಘಾತದಿಂದಲೊ ನಾಶವಾಗಿರುವ, ಇಲ್ಲವೆ ಮೃಗವೊಂದು ತಿಂದುಹಾಕಿರುವ ಅಥವಾ ಗೊಬ್ಬರವಾಗಿಬಿಟ್ಟಿರುವ ಒಂದು ಮಾನವ ದೇಹದಲ್ಲಿ ಒಂದು ಸಮಯದಲ್ಲಿದ್ದ ಎಲ್ಲ ಎಲುಬುಗಳು ಮತ್ತು ಮಾಂಸವು ಮತ್ತೆ ಕೂಡಿಸಲ್ಪಟ್ಟು, ಅದರಲ್ಲಿ ಮತ್ತೆ ಜೀವ ತುಂಬಿಸಲ್ಪಡುವುದು. ಆ ಪಾದ್ರಿ ಹೇಳಿದ್ದೇನೆಂದರೆ, ಒಂದು ನಿರ್ದಿಷ್ಟ ದಿನದಂದು, ಅಂದರೆ 24 ತಾಸುಗಳ ಒಂದು ದಿನದಂದು ಕೋಟಿಗಟ್ಟಲೆ ಸತ್ತ ಮಾನವರ ಕೈಕಾಲುಗಳು, ತೋಳುಗಳು, ಬೆರಳುಗಳು, ಎಲುಬುಗಳು, ಸ್ನಾಯುಗಳು ಮತ್ತು ಚರ್ಮದಿಂದಾಗಿ ಎಲ್ಲೆಲ್ಲೂ ಕತ್ತಲು ತುಂಬಿರುವುದು. ಈ ದೇಹದ ಭಾಗಗಳು ತಾವು ಸೇರಬೇಕಾದ ದೇಹದ ಇತರ ಭಾಗಗಳಿಗಾಗಿ ಹುಡುಕುತ್ತಿರುವವು. ಆಗ ಸ್ವರ್ಗದಿಂದಲೂ ನರಕದಿಂದಲೂ ಆತ್ಮಗಳು ಬಂದು, ಈ ಪುನರುತ್ಥಿತ ದೇಹಗಳೊಳಗೆ ಸೇರಿಕೊಳ್ಳುವವು.
2 ಮರಣಕ್ಕೆ ಮುಂಚೆ ಇದ್ದ ಅಣುಗಳೇ ಪುನಃ ಕೂಡಿಸಲ್ಪಡುವ ಮೂಲಕ ಪುನರುತ್ಥಾನವಾಗುವುದೆಂಬ ಸಂಗತಿಯು ತರ್ಕಹೀನವಾದದ್ದು. ಅಷ್ಟುಮಾತ್ರವಲ್ಲ, ಮಾನವರಲ್ಲಿ ಒಂದು ಅಮರ ಆತ್ಮವೆಂಬುದೇ ಇಲ್ಲ. (ಪ್ರಸಂಗಿ 9:5, 10; ಯೆಹೆಜ್ಕೇಲ 18:4) ಪುನರುತ್ಥಾನದ ದೇವರಾಗಿರುವ ಯೆಹೋವನಿಗೆ, ಮರಣಕ್ಕೆ ಮುಂಚೆ ಮಾನವ ದೇಹದಲ್ಲಿದ್ದಂತಹ ಅಣುಗಳನ್ನೇ ಮತ್ತೆ ಕೂಡಿಸುವ ಅಗತ್ಯವಿಲ್ಲ. ಪುನರುತ್ಥಾನವಾಗುವವರಿಗೆ ಆತನು ಹೊಸ ದೇಹಗಳನ್ನೇ ತಯಾರಿಸಶಕ್ತನಾಗಿದ್ದಾನೆ. ಸತ್ತವರನ್ನು ನಿತ್ಯಜೀವದ ನಿರೀಕ್ಷೆಯೊಂದಿಗೆ ಎಬ್ಬಿಸುವ ಶಕ್ತಿಯನ್ನು ಯೆಹೋವನು ತನ್ನ ಮಗನಾದ ಯೇಸು ಕ್ರಿಸ್ತನಿಗೆ ಕೊಟ್ಟಿದ್ದಾನೆ. (ಯೋಹಾನ 5:26) ಆದುದರಿಂದಲೇ ಯೇಸು ಹೇಳಿದ್ದು: “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು.” (ಯೋಹಾನ 11:25, 26) ಎಂತಹ ಹೃದಯಸ್ಪರ್ಶಿ ವಾಗ್ದಾನ! ಸಂಕಷ್ಟಗಳನ್ನು ತಾಳಿಕೊಳ್ಳಲು ಮತ್ತು ಯೆಹೋವನ ನಂಬಿಗಸ್ತ ಸಾಕ್ಷಿಗಳೋಪಾದಿ ಮರಣವನ್ನೂ ಎದುರಿಸಲು ಅದು ನಮಗೆ ಬಲವನ್ನು ಕೊಡುತ್ತದೆ.
3. ಪೌಲನು ಪುನರುತ್ಥಾನವನ್ನು ಏಕೆ ಸಮರ್ಥಿಸಬೇಕಾಯಿತು?
3 ಮನುಷ್ಯರೊಳಗೆ ಒಂದು ಅಮರ ಆತ್ಮ ಇದೆ ಎಂಬುದು ಗ್ರೀಕ್ ತತ್ತ್ವಜ್ಞಾನಿ ಪ್ಲೇಟೊವಿನ ಅಭಿಪ್ರಾಯವಾಗಿತ್ತು. ಆದರೆ ಪುನರುತ್ಥಾನವು ಈ ಅಭಿಪ್ರಾಯದೊಂದಿಗೆ ಹೊಂದಿಕೊಳ್ಳುವುದಿಲ್ಲ. ಹೀಗಿರುವುದರಿಂದ, ಅಪೊಸ್ತಲ ಪೌಲನು ಯೇಸುವಿನ ಕುರಿತು ಹೇಳುತ್ತಾ, ದೇವರು ಅವನನ್ನು ಪುನರುತ್ಥಾನಗೊಳಿಸಿದನೆಂದು ಅಥೇನಿನ ಅರಿಯೊಪಾಗದಲ್ಲಿ ಕುಲೀನ ಗ್ರೀಕರಿಗೆ ಸಾಕ್ಷಿಕೊಡುತ್ತಿದ್ದಾಗ ಏನಾಯಿತು? ಆ ವೃತ್ತಾಂತವು ಹೇಳುವುದು: “ಸತ್ತವರು ಎದ್ದುಬರುವ ವಿಷಯವನ್ನು ಕೇಳಿದಾಗ ಕೆಲವರು ಅಪಹಾಸ್ಯಮಾಡಿದರು.” (ಅ. ಕೃತ್ಯಗಳು 17:29-34) ಪುನರುತ್ಥಿತ ಯೇಸು ಕ್ರಿಸ್ತನನ್ನು ನೋಡಿದ ಅನೇಕರು ಆ ಸಮಯದಲ್ಲಿ ಇನ್ನೂ ಜೀವಂತರಾಗಿದ್ದರು. ಜನರು ಅಪಹಾಸ್ಯಮಾಡುತ್ತಿದ್ದರೂ, ಯೇಸು ಸತ್ತವರೊಳಗಿಂದ ಎದ್ದಿದ್ದಾನೆಂಬ ಸಂಗತಿಗೆ ಅವರು ಸಾಕ್ಷ್ಯವನ್ನು ಕೊಟ್ಟರು. ಆದರೆ ಕೊರಿಂಥದ ಸಭೆಯಲ್ಲಿದ್ದ ಸುಳ್ಳು ಬೋಧಕರು, ಪುನರುತ್ಥಾನವೇ ಇಲ್ಲವೆಂದು ಹೇಳುತ್ತಿದ್ದರು. ಆದುದರಿಂದ 1ನೇ ಕೊರಿಂಥದ 15ನೇ ಅಧ್ಯಾಯದಲ್ಲಿ ಪೌಲನು ಈ ಕ್ರೈಸ್ತ ಬೋಧನೆಯನ್ನು ಪ್ರಬಲವಾಗಿ ಸಮರ್ಥಿಸಿದನು. ಅವನ ವಾದಗಳನ್ನು ನಾವು ಜಾಗರೂಕತೆಯಿಂದ ಅಭ್ಯಾಸಮಾಡುವಾಗ, ಪುನರುತ್ಥಾನದ ನಿರೀಕ್ಷೆಯು ನಿಶ್ಚಿತವಾದದ್ದು ಮತ್ತು ಶಕ್ತಿಯುಳ್ಳದ್ದು ಆಗಿದೆಯೆಂಬುದು ಖಂಡಿತವಾಗಿಯೂ ರುಜುವಾಗುವುದು.
ಯೇಸುವಿನ ಪುನರುತ್ಥಾನದ ಬಲವಾದ ಪುರಾವೆ
4. ಯೇಸುವಿನ ಪುನರುತ್ಥಾನವಾಗಿರುವುದರ ಕುರಿತು ಪೌಲನು ಯಾವ ಪ್ರತ್ಯಕ್ಷದರ್ಶಿ ರುಜುವಾತನ್ನು ಕೊಟ್ಟನು?
4 ಪೌಲನು ತನ್ನ ಸಮರ್ಥನೆಯನ್ನು ಹೇಗೆ ಆರಂಭಿಸಿದನೆಂಬುದಕ್ಕೆ ಸ್ವಲ್ಪ ಗಮನಕೊಡಿ. (1 ಕೊರಿಂಥ 15:1-11) ಕೊರಿಂಥವರು ರಕ್ಷಣೆಯ ಸುವಾರ್ತೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳದೆ ಇರುತ್ತಿದ್ದಲ್ಲಿ, ಅವರು ವಿಶ್ವಾಸಿಗಳಾಗಿರುವುದಕ್ಕೆ ಯಾವುದೇ ಉದ್ದೇಶವಿರುತ್ತಿರಲಿಲ್ಲ. ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತನು, ಹೂಣಲ್ಪಟ್ಟನು ಮತ್ತು ಅನಂತರ ಎಬ್ಬಿಸಲ್ಪಟ್ಟನು. ವಾಸ್ತವದಲ್ಲಿ, ಪುನರುತ್ಥಿತ ಯೇಸು ಕೇಫ (ಪೇತ್ರ)ನಿಗೆ ಕಾಣಿಸಿಕೊಂಡನು ಮತ್ತು “ಆ ಮೇಲೆ ಹನ್ನೆರಡು ಮಂದಿ ಅಪೊಸ್ತಲರಿಗೂ ಕಾಣಿಸಿಕೊಂಡನು.” (ಯೋಹಾನ 20:19-23) ‘ಹೋಗಿ ಶಿಷ್ಯರನ್ನಾಗಿ ಮಾಡಿರಿ’ ಎಂಬ ಆಜ್ಞೆಯನ್ನು ಅವನು ಕೊಟ್ಟಾಗಲೂ ಸುಮಾರು 500 ಮಂದಿ ಅವನನ್ನು ನೋಡಿದರು. (ಮತ್ತಾಯ 28:19, 20) ಯಾಕೋಬನು ಮಾತ್ರವಲ್ಲದೆ ಅವನ ಎಲ್ಲ ನಂಬಿಗಸ್ತ ಅಪೊಸ್ತಲರು ಸಹ ಅವನನ್ನು ನೋಡಿದರು. (ಅ. ಕೃತ್ಯಗಳು 1:6-11) ದಮಸ್ಕದ ಬಳಿಯಲ್ಲಿ ಯೇಸು, “ದಿನತುಂಬದೆ ಹುಟ್ಟಿದವನಂತಿರುವ” ಸೌಲನಿಗೆ ಕಾಣಿಸಿಕೊಂಡನು. ಇದು ಸೌಲನು ಈಗಾಗಲೇ ಆತ್ಮಜೀವಕ್ಕೆ ಎಬ್ಬಿಸಲ್ಪಟ್ಟಿದ್ದನೋ ಎಂಬಂತಿತ್ತು. (ಅ. ಕೃತ್ಯಗಳು 9:1-9) ಕೊರಿಂಥವರಿಗೆ ಪೌಲನು ಸಾರಿದಾಗ ಅವರು ಸುವಾರ್ತೆಯನ್ನು ಸ್ವೀಕರಿಸಿದ್ದರಿಂದ ವಿಶ್ವಾಸಿಗಳಾದರು.
5. ಒಂದನೆಯ ಕೊರಿಂಥ 15:12-19ರಲ್ಲಿ ದಾಖಲಿಸಲ್ಪಟ್ಟಿರುವಂತೆ ಪೌಲನ ತರ್ಕಸರಣಿ ಏನಾಗಿತ್ತು?
5 ಈಗ ಪೌಲನ ತರ್ಕಸರಣಿಯನ್ನು ಗಮನಿಸಿರಿ. (1 ಕೊರಿಂಥ 15:12-19) ಕ್ರಿಸ್ತನು ಪುನರುತ್ಥಾನಗೊಳಿಸಲ್ಪಟ್ಟನು ಎಂದು ಪ್ರತ್ಯಕ್ಷದರ್ಶಿಗಳೇ ಸಾರುತ್ತಿರುವುದರಿಂದ, ಪುನರುತ್ಥಾನವೇ ಇಲ್ಲವೆಂದು ಹೇಗೆ ಹೇಳಸಾಧ್ಯವಿದೆ? ಯೇಸು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿರದೇ ಇದ್ದಲ್ಲಿ, ನಮ್ಮ ಸಾರುವಿಕೆ ಹಾಗೂ ನಮ್ಮ ನಂಬಿಕೆಯು ನಿಷ್ಪ್ರಯೋಜಕವಾಗಿರುತ್ತಿತ್ತು. ಮತ್ತು ನಾವು ದೇವರ ಕುರಿತಾಗಿ ಸುಳ್ಳು ಹೇಳುವವರಾಗುತ್ತಿದ್ದೆವು. ಯಾಕೆಂದರೆ ದೇವರು ಕ್ರಿಸ್ತನನ್ನು ಪುನರುತ್ಥಾನಗೊಳಿಸಿದನೆಂದು ನಾವು ಹೇಳುತ್ತೇವೆ. ಅಷ್ಟುಮಾತ್ರವಲ್ಲ, ಒಂದು ವೇಳೆ ಸತ್ತವರು ಪುನಃ ಎಬ್ಬಿಸಲ್ಪಡದಿರುವುದಾದರೆ, ‘ನಾವು ಇನ್ನೂ ನಮ್ಮ ಪಾಪಗಳಲ್ಲಿಯೇ ಇದ್ದೇವೆ.’ ಅಲ್ಲದೆ, ಕ್ರಿಸ್ತನವರಾಗಿ ಸತ್ತವರು ನಿತ್ಯಕ್ಕೆ ನಾಶವಾಗಿಹೋಗಿರುವರು. ಅದಲ್ಲದೆ, “ಈ ಜೀವಮಾನಕಾಲದ ಪೂರ್ತಿಗೆ ನಾವು ಕ್ರಿಸ್ತನಲ್ಲಿ ನಿರೀಕ್ಷೆಯಿಟ್ಟುಕೊಂಡದ್ದೇ ಹೊರತು ಮತ್ತೇನೂ ಇಲ್ಲದಿದ್ದರೆ ಎಲ್ಲಾ ಮನುಷ್ಯರಲ್ಲಿಯೂ ನಿರ್ಭಾಗ್ಯರೇ ಸರಿ.”
6. (ಎ) ಯೇಸುವಿನ ಪುನರುತ್ಥಾನವನ್ನು ದೃಢೀಕರಿಸುತ್ತಾ ಪೌಲನು ಏನು ಹೇಳಿದನು? (ಬಿ) “ಕಡೇ ಶತ್ರು” ಏನಾಗಿದೆ, ಮತ್ತು ಅದು ಹೇಗೆ ನಿವೃತ್ತಿಯಾಗುವುದು?
6 ತದನಂತರ ಪೌಲನು, ಯೇಸುವಿನ ಪುನರುತ್ಥಾನವಾಗಿದೆ ಎಂಬುದನ್ನು ದೃಢೀಕರಿಸುತ್ತಾನೆ. (1 ಕೊರಿಂಥ 15:20-28) ಮರಣದಲ್ಲಿ ನಿದ್ರಿಸಿರುವವರಲ್ಲಿ ಕ್ರಿಸ್ತನು “ಪ್ರಥಮಫಲ”ವಾಗಿದ್ದಾನೆ. ಹೀಗಿರುವುದರಿಂದ, ಇತರರೂ ಪುನರುತ್ಥಾನಹೊಂದಲಿದ್ದಾರೆಂಬುದು ಇದರರ್ಥ. ಆದಾಮನೆಂಬ ಮನುಷ್ಯನ ಅವಿಧೇಯತೆಯಿಂದಾಗಿ ಮರಣ ಬಂದಿರುವಂತೆ, ಪುನರುತ್ಥಾನವೂ ಒಬ್ಬ ಮನುಷ್ಯನಿಂದಲೇ ಅಂದರೆ ಯೇಸುವಿನ ಮೂಲಕವೇ ಆಗುತ್ತದೆ. ಅವನಿಗೆ ಸೇರಿದವರು, ಅವನ ಸಾನ್ನಿಧ್ಯದ ಸಮಯದಲ್ಲಿ ಎಬ್ಬಿಸಲ್ಪಡಲಿದ್ದರು. ಕ್ರಿಸ್ತನು ದೇವರ ಪರಮಾಧಿಕಾರಕ್ಕೆ ವಿರೋಧದಲ್ಲಿರುವ ‘ಎಲ್ಲಾ ಧೊರೆತನವನ್ನೂ ಎಲ್ಲಾ ಅಧಿಕಾರವನ್ನೂ ಬಲವನ್ನೂ ನಿವೃತ್ತಿ ಮಾಡುವನು,’ ಮತ್ತು ಅನಂತರ ಯೆಹೋವನು ಎಲ್ಲ ಶತ್ರುಗಳನ್ನು ಅವನ ಪಾದಗಳ ಕೆಳಗೆ ಹಾಕುವ ವರೆಗೆ ರಾಜನಾಗಿ ಆಳುವನು. “ಕಡೇ ಶತ್ರು” ಅಂದರೆ ಆದಾಮನಿಂದ ಬಾಧ್ಯತೆಯಾಗಿ ಪಡೆದಿರುವ ಮರಣ ಸಹ, ಯೇಸುವಿನ ಯಜ್ಞದ ಆಧಾರದ ಮೇಲೆ ನಿವೃತ್ತಿಯಾಗುವುದು. ಅನಂತರ ಕ್ರಿಸ್ತನು ರಾಜ್ಯವನ್ನು ತನ್ನ ದೇವರೂ ತಂದೆಯೂ ಆಗಿರುವಾತನಿಗೆ ಅಧೀನಮಾಡುವನು. ಮತ್ತು “ಸಮಸ್ತವನ್ನೂ ತನಗೆ ಅಧೀನಮಾಡಿಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗುವನು.”
ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದೊ?
7. ‘ಸತ್ತವರಾಗಿರುವುದಕ್ಕಾಗಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು’ ಯಾರು, ಮತ್ತು ಇದರರ್ಥವೇನು?
7 ಪುನರುತ್ಥಾನವನ್ನು ವಿರೋಧಿಸುವವರಿಗೆ ಹೀಗೆ ಕೇಳಲಾಗಿದೆ: “ಸತ್ತವರಿಗೋಸ್ಕರ [“ಸತ್ತವರಾಗಿರುವುದಕ್ಕಾಗಿ,” NW] ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು?” (1 ಕೊರಿಂಥ 15:29) ಸತ್ತವರ ಪರವಾಗಿ ಜೀವಂತ ವ್ಯಕ್ತಿಗಳು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಪೌಲನು ಹೇಳುತ್ತಿದ್ದನೊ? ಇಲ್ಲ, ಯಾಕೆಂದರೆ ಯೇಸುವಿನ ಶಿಷ್ಯರಾಗಲು ಒಬ್ಬ ವ್ಯಕ್ತಿಯು ಸ್ವತಃ ಕಲಿಯಬೇಕು, ನಂಬಬೇಕು ಮತ್ತು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕು. (ಮತ್ತಾಯ 28:19, 20; ಅ. ಕೃತ್ಯಗಳು 2:41) ಅಭಿಷಿಕ್ತ ಕ್ರೈಸ್ತರು ಮರಣ ಮತ್ತು ಪುನರುತ್ಥಾನಕ್ಕೆ ನಡೆಸುವ ಒಂದು ಜೀವನ ಕ್ರಮದಲ್ಲಿ ಮುಳುಗಿರುತ್ತಾರೆ. ಈ ಮೂಲಕ ಅವರು ‘ಸತ್ತವರಾಗಿರುವುದಕ್ಕಾಗಿ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೆ.’ ಇಂಥವರಲ್ಲಿ ದೇವರಾತ್ಮವು ಸ್ವರ್ಗೀಯ ನಿರೀಕ್ಷೆಯನ್ನು ಚಿಗುರಿಸುವಾಗ ಈ ರೀತಿಯ ದೀಕ್ಷಾಸ್ನಾನವು ಆರಂಭವಾಗುತ್ತದೆ. ಮತ್ತು ಅವರು ಸತ್ತವರೊಳಗಿಂದ ಎಬ್ಬಿಸಲ್ಪಟ್ಟು, ಸ್ವರ್ಗದಲ್ಲಿನ ಅಮರ ಆತ್ಮಜೀವಿತಕ್ಕೆ ಸೇರುವಾಗ ಆ ದೀಕ್ಷಾಸ್ನಾನವು ಅಂತ್ಯಗೊಳ್ಳುತ್ತದೆ.—ರೋಮಾಪುರ 6:3-5; 8:16, 17; 1 ಕೊರಿಂಥ 6:14.
8. ಸೈತಾನನು ಮತ್ತು ಅವನ ಸೇವಕರು ಕ್ರೈಸ್ತರನ್ನು ಒಂದುವೇಳೆ ಕೊಂದುಹಾಕಿದರೂ, ಅವರಿಗೆ ಯಾವ ಖಾತ್ರಿಯಿರಬಲ್ಲದು?
8 ರಾಜ್ಯ ಸಾರುವಿಕೆಯ ಕೆಲಸದಿಂದಾಗಿ ಕ್ರೈಸ್ತರು ಸತತವಾಗಿ ಅಪಾಯ ಮತ್ತು ಮರಣವನ್ನು ಎದುರಿಸುತ್ತಿರುತ್ತಾರೆ. ಆದರೆ ಪುನರುತ್ಥಾನದ ನಿರೀಕ್ಷೆಯು ಅವರು ಅದೆಲ್ಲವನ್ನೂ ಎದುರಿಸುವಂತೆ ಶಕ್ತಗೊಳಿಸುತ್ತದೆಂದು ಪೌಲನ ಮಾತುಗಳು ಸೂಚಿಸುತ್ತವೆ. (1 ಕೊರಿಂಥ 15:30, 31) ಒಂದು ವೇಳೆ ಸೈತಾನನು ಮತ್ತು ಅವನ ಸೇವಕರು ಕ್ರೈಸ್ತರನ್ನು ಕೊಂದುಹಾಕುವಂತೆ ಯೆಹೋವನು ಅನುಮತಿಸುವುದಾದರೂ, ತಮ್ಮನ್ನು ಆತನು ಪುನರುತ್ಥಾನಗೊಳಿಸಬಲ್ಲನು ಎಂಬುದು ಅವರಿಗೆ ತಿಳಿದಿದೆ. ಕೇವಲ ದೇವರೊಬ್ಬನೇ ತಮ್ಮ ಪ್ರಾಣ ಅಥವಾ ಜೀವವನ್ನು, ನಿತ್ಯ ನಾಶನವನ್ನು ಸಂಕೇತಿಸುವ ಗೆಹನ್ನದಲ್ಲಿ ನಿರ್ನಾಮಮಾಡಬಲ್ಲನೆಂದೂ ಅವರಿಗೆ ತಿಳಿದಿದೆ.—ಲೂಕ 12:5, NW.
ಎಚ್ಚರವಾಗಿರುವ ಅಗತ್ಯವಿದೆ
9. ಪುನರುತ್ಥಾನದ ನಿರೀಕ್ಷೆಯು ನಮ್ಮ ಜೀವಿತದಲ್ಲಿ ಆಸರೆಯನ್ನು ಕೊಡಬೇಕಾದರೆ, ನಾವೇನನ್ನು ದೂರವಿಡಬೇಕು?
9 ಪುನರುತ್ಥಾನದ ನಿರೀಕ್ಷೆಯು ಪೌಲನಿಗೆ ಆಸರೆಯನ್ನು ಕೊಟ್ಟಿತು. ಅವನು ಎಫೆಸದಲ್ಲಿದ್ದಾಗ, ಅವನ ಶತ್ರುಗಳು ಅವನನ್ನು ಅಖಾಡದಲ್ಲಿ ಹಾಕಿ ಕಾಡುಮೃಗಗಳೊಂದಿಗೆ ಹೋರಾಡುವಂತೆ ಮಾಡಿದ್ದಿರಬಹುದು. (1 ಕೊರಿಂಥ 15:32) ನಿಜವಾಗಿ ಹಾಗೆ ನಡೆದಿರುವುದಾದರೆ, ದಾನಿಯೇಲನನ್ನು ಸಿಂಹಗಳ ಬಾಯಿಂದ ರಕ್ಷಿಸಲಾದಂತೆಯೇ, ಪೌಲನು ಸಹ ರಕ್ಷಿಸಲ್ಪಟ್ಟಿದ್ದಿರಬಹುದು. (ದಾನಿಯೇಲ 6:16-22; ಇಬ್ರಿಯ 11:32, 33) ಪೌಲನಿಗೆ ಪುನರುತ್ಥಾನದಲ್ಲಿ ನಿರೀಕ್ಷೆಯಿದ್ದದ್ದರಿಂದ, ಅವನಿಗೆ ಯೆಶಾಯನ ದಿನದ ಯೆಹೂದದ ಧರ್ಮಭ್ರಷ್ಟರಿಗಿದ್ದಂತಹ ಮನೋಭಾವವಿರಲಿಲ್ಲ. ಅವರು ಹೀಗನ್ನುತ್ತಿದ್ದರು: “ತಿಂದು, ಕುಡಿಯೋಣ, ಹೇಗೂ ನಾಳೆ ಸಾಯುತ್ತೇವಲ್ಲ.” (ಯೆಶಾಯ 22:13, ಸೆಪ್ಟ್ಯುಅಜಿಂಟ್) ಪೌಲನಿಗೆ ಪುನರುತ್ಥಾನದ ನಿರೀಕ್ಷೆಯು ಆಸರೆಯನ್ನು ಕೊಟ್ಟಂತೆಯೇ ನಮಗೂ ಆಸರೆಯನ್ನು ಕೊಡಬೇಕಾದರೆ, ಆ ಧರ್ಮಭ್ರಷ್ಟರಿಗಿದ್ದಂತಹ ತಪ್ಪಾದ ಮನೋವೃತ್ತಿಯಿಂದ ನಾವು ದೂರವಿರಬೇಕು. “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ” ಎಂದು ಪೌಲನು ಎಚ್ಚರಿಸಿದನು. (1 ಕೊರಿಂಥ 15:33) ಈ ಮೂಲತತ್ವವನ್ನು ನಾವು ಜೀವಿತದ ಬೇರೆಬೇರೆ ಕ್ಷೇತ್ರಗಳಲ್ಲಿ ಉಪಯೋಗಿಸುತ್ತೇವಾದರೂ, ಈ ವಿಷಯದಲ್ಲೂ ನಾವು ಅನ್ವಯಿಸಿಕೊಳ್ಳಸಾಧ್ಯವಿದೆ.
10. ನಮ್ಮ ಪುನರುತ್ಥಾನದ ನಿರೀಕ್ಷೆಯನ್ನು ನಾವು ಹೇಗೆ ಸಜೀವವಾಗಿಡಬಲ್ಲೆವು?
10 ಪುನರುತ್ಥಾನದ ಬಗ್ಗೆ ಸಂದೇಹಿಸುತ್ತಿರುವವರಿಗೆ ಪೌಲನು ಹೇಳಿದ್ದು: “ಇಂಥ ಅಮಲಿನಿಂದೆಚ್ಚತ್ತು ನೀತಿವಂತರಾಗಿರಿ, ಪಾಪವನ್ನು ಬಿಟ್ಟುಬಿಡಿರಿ. ಕೆಲವರಿಗೆ ದೇವರ ವಿಷಯದಲ್ಲಿ ಜ್ಞಾನವೇ ಇಲ್ಲ; ನಿಮಗೆ ನಾಚಿಕೆಹುಟ್ಟಬೇಕೆಂದು ಇದನ್ನು ಹೇಳುತ್ತೇನೆ.” (1 ಕೊರಿಂಥ 15:34) ಈ “ಅಂತ್ಯಕಾಲ”ದಲ್ಲಿ ನಾವು ದೇವರ ಮತ್ತು ಕ್ರಿಸ್ತನ ಕುರಿತಾದ ನಿಷ್ಕೃಷ್ಟ ಜ್ಞಾನದೊಂದಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯಬೇಕು. (ದಾನಿಯೇಲ 12:4; ಯೋಹಾನ 17:3) ಇದು ನಮ್ಮ ಪುನರುತ್ಥಾನದ ನಿರೀಕ್ಷೆಯನ್ನು ಯಾವಾಗಲೂ ಸಜೀವವಾಗಿರಿಸುವುದು.
ಯಾವ ದೇಹದೊಂದಿಗೆ ಪುನರುತ್ಥಾನಗೊಳಿಸಲಾಗುವುದು?
11. ಅಭಿಷಿಕ್ತ ಕ್ರೈಸ್ತರ ಪುನರುತ್ಥಾನವನ್ನು ಪೌಲನು ಹೇಗೆ ದೃಷ್ಟಾಂತಿಸಿ ಹೇಳಿದನು?
11 ಮುಂದೆ ಪೌಲನು ನಿರ್ದಿಷ್ಟವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಟ್ಟನು. (1 ಕೊರಿಂಥ 15:35-41) ಪುನರುತ್ಥಾನದ ಕುರಿತು ಸಂದೇಹವನ್ನು ವ್ಯಕ್ತಪಡಿಸುತ್ತಾ, ಒಬ್ಬನು ಹೀಗೆ ಕೇಳಬಹುದು: “ಸತ್ತವರು ಹೇಗೆ ಎಬ್ಬಿಸಲ್ಪಡುತ್ತಾರೆ, ಎಂಥ ದೇಹದಿಂದ ಬರುತ್ತಾರೆ”? ಪೌಲನು ಹೇಳಿದ್ದೇನೆಂದರೆ, ಮಣ್ಣಿನಲ್ಲಿ ಬಿತ್ತಲ್ಪಡುವ ಒಂದು ಬೀಜವು ಒಂದು ಚಿಕ್ಕ ಸಸಿಯಾಗುವಾಗ, ಅದು ವಾಸ್ತವವಾಗಿ ಸಾಯುತ್ತದೆ. ಹಾಗೆಯೇ, ಒಬ್ಬ ಆತ್ಮಜನಿತ ವ್ಯಕ್ತಿಯು ಸಾಯಲೇಬೇಕು. ಬೀಜವೊಂದರಿಂದ ಒಂದು ಗಿಡವು ಒಂದು ಹೊಸ ದೇಹದಂತೆ ಬೆಳೆಯುವಂತೆಯೇ, ಅಭಿಷಿಕ್ತ ಕ್ರೈಸ್ತನ ಪುನರುತ್ಥಿತ ದೇಹವು ಹೊಸದಾಗಿದೆ, ಅದು ಮಾನವ ಶರೀರಕ್ಕಿಂತಲೂ ಭಿನ್ನವಾದದ್ದಾಗಿದೆ. ಅವನು ಸಾಯುವ ಮುಂಚೆ ಇದ್ದ ಜೀವನ ನಮೂನೆಯೇ ಅವನಲ್ಲಿರುತ್ತದೆ. ಆದರೆ ವ್ಯತ್ಯಾಸವೇನೆಂದರೆ, ಈಗ ಸ್ವರ್ಗದಲ್ಲಿ ಜೀವಿಸಲು ಶಕ್ತನಾಗುವಂತೆ ಅವನು ಒಂದು ಹೊಸ ಜೀವಿಯಾಗಿ ಎಬ್ಬಿಸಲ್ಪಡುವಾಗ ಅವನಿಗೆ ಒಂದು ಆತ್ಮದೇಹವು ಕೊಡಲ್ಪಡುವುದು. ಮತ್ತು ಈ ಭೂಮಿಯ ಮೇಲೆ ಎಬ್ಬಿಸಲ್ಪಡುವವರಿಗೆ ಸಹಜವಾಗಿಯೇ ಮಾನವ ಶರೀರಗಳು ಕೊಡಲ್ಪಡುವವು.
12. ‘ಪರಲೋಕದ ದೇಹಗಳು’ ಮತ್ತು ‘ಭೂಲೋಕದ ದೇಹಗಳ’ ಅರ್ಥವೇನು?
12 ಪೌಲನು ಹೇಳಿದಂತೆ, ಮಾನವ ಶರೀರವು ಪಶುಗಳ ಶರೀರದಿಂದ ಭಿನ್ನವಾಗಿದೆ. ಪ್ರಾಣಿಗಳ ಶರೀರಗಳು ಸಹ ಒಂದಕ್ಕೊಂದು ಭಿನ್ನಭಿನ್ನವಾಗಿರುತ್ತವೆ. (ಆದಿಕಾಂಡ 1:20-25) ಸೂರ್ಯನ, ಚಂದ್ರನ ಮತ್ತು ನಕ್ಷತ್ರಗಳ ಮಹಿಮೆಯಲ್ಲಿ ವ್ಯತ್ಯಾಸಗಳಿವೆ. ಹಾಗೆಯೇ, ಆತ್ಮಜೀವಿಗಳ “ಪರಲೋಕದ ದೇಹ”ಗಳ ಮಹಿಮೆಯು, ಮಾಂಸಿಕ “ಭೂಲೋಕದ ದೇಹ”ಗಳ ಮಹಿಮೆಗಿಂತಲೂ ಭಿನ್ನವಾಗಿದೆ. ಪುನರುತ್ಥಿತ ಅಭಿಷಿಕ್ತ ವ್ಯಕ್ತಿಗಳಿಗೆ ಹೆಚ್ಚಿನ ಮಹಿಮೆಯಿದೆ.
13. ಒಂದನೆಯ ಕೊರಿಂಥ 15:42-44ಕ್ಕನುಸಾರ, ಯಾವುದು ಬಿತ್ತಲ್ಪಡುತ್ತದೆ ಮತ್ತು ಯಾವುದು ಎದ್ದುಬರುತ್ತದೆ?
13 ಈ ಎಲ್ಲ ವ್ಯತ್ಯಾಸಗಳನ್ನು ತಿಳಿಸಿದ ನಂತರ, ಪೌಲನು ಕೂಡಿಸಿ ಹೇಳಿದ್ದು: “ಸತ್ತವರಿಗಾಗುವ ಪುನರುತ್ಥಾನವು ಅದೇ ಪ್ರಕಾರವಾಗಿರುವದು.” (1 ಕೊರಿಂಥ 15:42-44) ಅವನಂದದ್ದು: “ದೇಹವು ಲಯಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ನಿರ್ಲಯಾವಸ್ಥೆಯಲ್ಲಿ ಎದ್ದುಬರುವದು.” ಇಲ್ಲಿ ಪೌಲನು ಅಭಿಷಿಕ್ತರ ಕುರಿತು ಒಂದು ಸಮೂಹದೋಪಾದಿ ಮಾತಾಡುತ್ತಿದ್ದಿರಬಹುದು. ಸಾಯುವಾಗ ಅವರ ದೇಹವು ಲಯಾವಸ್ಥೆಯಲ್ಲಿ ಬಿತ್ತಲ್ಪಟ್ಟರೂ, ನಿರ್ಲಯಾವಸ್ಥೆಯಲ್ಲಿ ಅಂದರೆ ಪಾಪದಿಂದ ಮುಕ್ತವಾದ ದೇಹದೊಂದಿಗೆ ಎಬ್ಬಿಸಲ್ಪಡುವರು. ಲೋಕದಿಂದ ಅವಮಾನಪಡಿಸಲ್ಪಟ್ಟಿದ್ದರೂ, ಅದು ಸ್ವರ್ಗೀಯ ಜೀವಿತಕ್ಕೆ ಎಬ್ಬಿಸಲ್ಪಟ್ಟು ಕ್ರಿಸ್ತನ ಮಹಿಮೆಯ ಪ್ರಭಾವದಲ್ಲಿ ಪ್ರತ್ಯಕ್ಷವಾಗುವುದು. (ಅ. ಕೃತ್ಯಗಳು 5:41; ಕೊಲೊಸ್ಸೆ 3:4) ಮರಣದ ಸಮಯದಲ್ಲಿ ಅದು “ಪ್ರಾಕೃತದೇಹವಾಗಿ” ಬಿತ್ತಲ್ಪಡುತ್ತದೆ ಮತ್ತು “ಆತ್ಮಿಕದೇಹವಾಗಿ” ಎದ್ದುಬರುತ್ತದೆ. ಆತ್ಮಜನಿತ ಕ್ರೈಸ್ತರ ವಿಷಯದಲ್ಲಿ ಇದು ಸಾಧ್ಯವಿರುವುದರಿಂದ, ಉಳಿದ ಮಾನವರು ಸಹ ಭೂಮಿಯ ಮೇಲೆ ಎಬ್ಬಿಸಲ್ಪಡಸಾಧ್ಯವಿದೆ ಎಂಬ ಖಾತ್ರಿ ನಮಗಿರಬಲ್ಲದು.
14. ಪೌಲನು ಕ್ರಿಸ್ತನ ಮತ್ತು ಆದಾಮನ ನಡುವಿನ ವ್ಯತ್ಯಾಸವನ್ನು ಹೇಗೆ ತೋರಿಸಿದನು?
14 ಅನಂತರ ಪೌಲನು ಕ್ರಿಸ್ತನ ಮತ್ತು ಆದಾಮನ ನಡುವಿನ ವ್ಯತ್ಯಾಸವನ್ನು ತೋರಿಸಿದನು. (1 ಕೊರಿಂಥ 15:45-49) ಮೊದಲನೆಯ ಮನುಷ್ಯನಾದ ಆದಾಮನು “ಬದುಕುವ ಪ್ರಾಣಿಯಾದನು.” (ಆದಿಕಾಂಡ 2:7) ಆದರೆ ‘ಕಡೇ ಆದಾಮನಾದ’ ಯೇಸು “ಬದುಕಿಸುವ ಆತ್ಮ”ನಾದನು. ಹೇಗೆಂದರೆ, ಅವನು ತನ್ನ ಜೀವವನ್ನು ಒಂದು ಪ್ರಾಯಶ್ಚಿತ್ತ ಯಜ್ಞವಾಗಿ ಕೊಟ್ಟನು. ಇದು ಪ್ರಥಮವಾಗಿ ಅವನ ಅಭಿಷಿಕ್ತ ಹಿಂಬಾಲಕರಿಗಾಗಿತ್ತು. (ಮಾರ್ಕ 10:45) ಈ ಹಿಂಬಾಲಕರು ಮಾನವರಾಗಿರುವಾಗ ‘ಮಣ್ಣಿನಿಂದ ಹುಟ್ಟಿದವನ ಸಾರೂಪ್ಯವನ್ನು ಧರಿಸಿಕೊಂಡಿರುತ್ತಾರೆ,’ ಆದರೆ ಪುನರುತ್ಥಾನಗೊಳಿಸಲ್ಪಡುವಾಗ ಅವರು ಕಡೇ ಆದಾಮನಂತಾಗುವರು. ಆದರೆ ಯೇಸುವಿನ ಯಜ್ಞವು ಖಂಡಿತವಾಗಿಯೂ ಕೇವಲ ಅವರಿಗಲ್ಲ, ಬದಲಾಗಿ ಎಲ್ಲ ವಿಧೇಯ ಮಾನವರಿಗಾಗಿ ಮತ್ತು ಭೂಮಿಯ ಮೇಲೆ ಪುನರುತ್ಥಾನಹೊಂದುವವರಿಗೂ ಪ್ರಯೋಜನವನ್ನು ತರುವುದು.—1 ಯೋಹಾನ 2:1, 2.
15. ಅಭಿಷಿಕ್ತ ಕ್ರೈಸ್ತರ ಪುನರುತ್ಥಾನವಾಗುವಾಗ ಅವರಿಗೆ ಏಕೆ ಮಾನವ ಶರೀರವನ್ನು ಕೊಡಲಾಗುವುದಿಲ್ಲ, ಮತ್ತು ಯೇಸುವಿನ ಸಾನ್ನಿಧ್ಯದ ಸಮಯದಲ್ಲಿ ಅವರು ಹೇಗೆ ಎಬ್ಬಿಸಲ್ಪಡುತ್ತಾರೆ?
15 ಅಭಿಷಿಕ್ತ ಕ್ರೈಸ್ತರು ಸತ್ತು, ಎಬ್ಬಿಸಲ್ಪಡುವಾಗ ಅವರಿಗೆ ಶಾರೀರಿಕ ದೇಹಗಳು ಕೊಡಲ್ಪಡುವುದಿಲ್ಲ. (1 ಕೊರಿಂಥ 15:50-53) ರಕ್ತಮಾಂಸದಿಂದ ಕೂಡಿದ ಲಯವಾಗುವ ದೇಹವು, ನಿರ್ಲಯತ್ವ ಮತ್ತು ಸ್ವರ್ಗೀಯ ರಾಜ್ಯಕ್ಕೆ ಬಾಧ್ಯವಾಗಲಾರದು. ಕೆಲವು ಅಭಿಷಿಕ್ತ ವ್ಯಕ್ತಿಗಳಿಗೆ, ಮರಣದಲ್ಲಿ ದೀರ್ಘಸಮಯದ ವರೆಗೆ ನಿದ್ರಿಸುವ ಆವಶ್ಯಕತೆಯಿರುವುದಿಲ್ಲ. ಯೇಸುವಿನ ಸಾನ್ನಿಧ್ಯದ ಸಮಯದಲ್ಲೇ ಅವರು ತಮ್ಮ ಭೂಜೀವಿತವನ್ನು ಮುಗಿಸುವಾಗ ಅವರು ‘ಒಂದು ಕ್ಷಣದಲ್ಲೇ ರೆಪ್ಪೆಬಡಿಯುವಷ್ಟರೊಳಗೆ ಮಾರ್ಪಡುವರು.’ ಅವರು ತತ್ಕ್ಷಣವೇ ನಿರ್ಲಯತ್ವದ ಮತ್ತು ಮಹಿಮೆಯ ಆತ್ಮಿಕ ಜೀವಿತಕ್ಕೆ ಎಬ್ಬಿಸಲ್ಪಡುವರು. ಕೊನೆಯಲ್ಲಿ, ಕ್ರಿಸ್ತನ ಸ್ವರ್ಗೀಯ ‘ಮದಲಗಿತ್ತಿಯ’ ಸಂಖ್ಯೆಯು 1,44,000 ಆಗಿ ಪೂರ್ಣಗೊಳ್ಳುವುದು.—ಪ್ರಕಟನೆ 14:1; 19:7-9; 21:9; 1 ಥೆಸಲೊನೀಕ 4:15-17.
ಮರಣದ ಮೇಲೆ ವಿಜಯ!
16. ಪೌಲನು ಮತ್ತು ಹಿಂದಿನ ಪ್ರವಾದಿಗಳಿಗನುಸಾರ, ಪಾಪಿ ಆದಾಮನಿಂದ ಬಾಧ್ಯತೆಯಾಗಿ ಪಡೆದಿರುವ ಮರಣಕ್ಕೆ ಏನಾಗುವುದು?
16 ಮರಣವು ಸದಾಕಾಲಕ್ಕಾಗಿ ನುಂಗಿಹಾಕಲ್ಪಡುವುದೆಂದು ಪೌಲನು ವಿಜಯೋತ್ಸಾಹದಿಂದ ಘೋಷಿಸಿದನು. (1 ಕೊರಿಂಥ 15:54-57) ಲಯವಾಗುವ ಮತ್ತು ಮರಣಾಧೀನವಾಗಿರುವ ದೇಹಗಳು, ನಿರ್ಲಯತ್ವ ಮತ್ತು ಅಮರತ್ವವನ್ನು ಧರಿಸಿಕೊಂಡಾಗ ಈ ಮಾತುಗಳು ನೆರವೇರುವವು: “ಮರಣವು ನುಂಗಿಯೇ ಹೋಯಿತು.” “ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?” (ಯೆಶಾಯ 25:8; ಹೋಶೇಯ 13:14) ಮರಣವನ್ನುಂಟುಮಾಡುವ ಕೊಂಡಿಯು ಪಾಪವಾಗಿದೆ. ಮತ್ತು ಪಾಪಕ್ಕೆ ಧರ್ಮಶಾಸ್ತ್ರದಿಂದ ಬಲ ಸಿಗುತ್ತಿತ್ತು, ಯಾಕೆಂದರೆ ಧರ್ಮಶಾಸ್ತ್ರವು ಪಾಪಿಗಳಿಗೆ ಮರಣದಂಡನೆಯನ್ನು ವಿಧಿಸುತ್ತಿತ್ತು. ಆದರೆ ಯೇಸುವಿನ ಯಜ್ಞ ಮತ್ತು ಪುನರುತ್ಥಾನದಿಂದಾಗಿ, ಪಾಪಿ ಆದಾಮನಿಂದ ಬಾಧ್ಯತೆಯಾಗಿ ಪಡೆದಿರುವ ಮರಣಕ್ಕೆ ಇನ್ನು ಮುಂದೆ ಜಯ ದೊರಕುವುದಿಲ್ಲ.—ರೋಮಾಪುರ 5:12; 6:23.
17. ಒಂದನೆಯ ಕೊರಿಂಥ 15:58ರ ಮಾತುಗಳು ಇಂದು ಹೇಗೆ ಅನ್ವಯವಾಗುತ್ತವೆ?
17 “ಆದದರಿಂದ, ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ” ಎಂದು ಪೌಲನು ಹೇಳಿದನು. (1 ಕೊರಿಂಥ 15:58) ಆ ಮಾತುಗಳು, ಇಂದಿರುವ ಅಭಿಷಿಕ್ತ ಉಳಿಕೆಯವರು ಮತ್ತು “ಬೇರೆ ಕುರಿಗಳು” ಈ ಕಡೇ ದಿವಸಗಳಲ್ಲಿ ಸತ್ತರೂ ಅವರಿಗೆ ಅನ್ವಯವಾಗುತ್ತವೆ. (ಯೋಹಾನ 10:16) ಹೇಗೆಂದರೆ, ರಾಜ್ಯ ಘೋಷಕರೋಪಾದಿ ಅವರು ಮಾಡುವ ಪ್ರಯಾಸಗಳು ನಿಷ್ಫಲವಾಗಲಾರವು, ಯಾಕೆಂದರೆ ಅವರು ಸತ್ತರೂ ಅವರಿಗೆ ಪುನರುತ್ಥಾನವಾಗುವುದು. ಹೀಗಿರುವುದರಿಂದ, ಯೆಹೋವನ ಸೇವಕರೋಪಾದಿ ನಾವು ಕರ್ತನ ಕೆಲಸದಲ್ಲಿ ಕಾರ್ಯಮಗ್ನರಾಗಿರೋಣ. ಅದೇ ಸಮಯದಲ್ಲಿ, “ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?” ಎಂದು ನಾವು ಹರ್ಷದಿಂದ ಧ್ವನಿಗೈಯಬಹುದಾದ ದಿನಕ್ಕಾಗಿಯೂ ಕಾಯುತ್ತಾ ಇರೋಣ.
ಪುನರುತ್ಥಾನದ ನಿರೀಕ್ಷೆಯು ನೆರವೇರುತ್ತದೆ!
18. ಪುನರುತ್ಥಾನದಲ್ಲಿನ ಪೌಲನ ನಿರೀಕ್ಷೆಯು ಎಷ್ಟು ಬಲವಾಗಿತ್ತು?
18 ಪೌಲನ ಜೀವಿತದಲ್ಲಿ ಪುನರುತ್ಥಾನದ ನಿರೀಕ್ಷೆಯು ಶಕ್ತಿಶಾಲಿಯಾಗಿತ್ತು ಎಂಬುದು 1ನೆಯ ಕೊರಿಂಥ 15ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಮಾತುಗಳಿಂದ ತೋರಿಬರುತ್ತವೆ. ಯೇಸು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದನು ಮತ್ತು ಇತರರು ಸಹ ಮಾನವಕುಲದ ಸಾಮಾನ್ಯ ಸಮಾಧಿಯಿಂದ ಹೊರಬರುವರೆಂದು ಅವನು ಖಡಾಖಂಡಿತವಾಗಿ ನಂಬಿದನು. ನಿಮಗೂ ಅದೇ ರೀತಿಯ ದೃಢನಂಬಿಕೆಯಿದೆಯೊ? ಪೌಲನು ‘ಕ್ರಿಸ್ತನ ಮತ್ತು ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನು ತಿಳಿದುಕೊಳ್ಳಲಿಕ್ಕಾಗಿ’ ಎಲ್ಲ ಸ್ವಾರ್ಥ ಅನುಕೂಲಗಳನ್ನು ‘ಕಸವೆಂದೆಣಿಸಿದನು’ ಮತ್ತು ‘ನಷ್ಟವೆಂದೆಣಿಸಿದನು.’ “ಆರಂಭದ ಪುನರುತ್ಥಾನವನ್ನು” (NW) ಪಡೆದುಕೊಳ್ಳುವ ನಿರೀಕ್ಷೆಯಿಂದಾಗಿ ಆ ಅಪೊಸ್ತಲನು, ಕ್ರಿಸ್ತನು ಅನುಭವಿಸಿದಂತಹ ರೀತಿಯ ಮರಣಕ್ಕೂ ತುತ್ತಾಗಲು ಸಿದ್ಧನಿದ್ದನು. ಇದನ್ನು “ಪ್ರಥಮ ಪುನರುತ್ಥಾನ” ಎಂದೂ ಕರೆಯಲಾಗುತ್ತದೆ. ಮತ್ತು ಅದನ್ನು ಯೇಸುವಿನ 1,44,000 ಅಭಿಷಿಕ್ತ ಹಿಂಬಾಲಕರು ಅನುಭವಿಸುವರು. ಅವರು ಸ್ವರ್ಗದಲ್ಲಿ ಆತ್ಮಿಕ ಜೀವನಕ್ಕೆ ಎಬ್ಬಿಸಲ್ಪಡುವರು. ಆದರೆ “ಮಿಕ್ಕ ಸತ್ತವರು” ಈ ಭೂಮಿಯ ಮೇಲೆಯೇ ಎಬ್ಬಿಸಲ್ಪಡುವರು.—ಫಿಲಿಪ್ಪಿ 3:8-11; ಪ್ರಕಟನೆ 7:4; 20:5, 6.
19, 20. (ಎ) ಬೈಬಲ್ ದಾಖಲೆಯಲ್ಲಿರುವ ಯಾವ ವ್ಯಕ್ತಿಗಳು ಭೂಮಿಯ ಮೇಲಿನ ಜೀವಿತಕ್ಕೆ ಎಬ್ಬಿಸಲ್ಪಡುವರು? (ಬಿ) ನೀವು ಯಾರ ಪುನರುತ್ಥಾನಕ್ಕಾಗಿ ಎದುರುನೋಡುತ್ತೀರಿ?
19 ಮರಣದ ವರೆಗೂ ನಂಬಿಗಸ್ತರಾಗಿರುವ ಅಭಿಷಿಕ್ತರಿಗೆ ಪುನರುತ್ಥಾನದ ನಿರೀಕ್ಷೆಯು ಒಂದು ಮಹಿಮಾಭರಿತ ನೈಜತೆಯಾಗಿಬಿಟ್ಟಿದೆ. (ರೋಮಾಪುರ 8:18; 1 ಥೆಸಲೊನೀಕ 4:15-18; ಪ್ರಕಟನೆ 2:10) “ಮಹಾ ಸಂಕಟ”ದಿಂದ (NW) ಪಾರಾಗಿ ಬರುವವರು, ಭೂಮಿಯಲ್ಲಿ ಪುನರುತ್ಥಾನದ ನಿರೀಕ್ಷೆಯು ನೆರವೇರುವುದನ್ನು ನೋಡುವರು. ಆಗ ‘ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸುವುದು; ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸುವವು.’ (ಪ್ರಕಟನೆ 7:9, 13, 14; 20:13) ಭೂಮಿಯ ಮೇಲೆ ಜೀವಕ್ಕೆ ಎಬ್ಬಿಸಲ್ಪಡುವವರಲ್ಲಿ, ಏಳು ಮಂದಿ ಪುತ್ರರನ್ನು ಮತ್ತು ಮೂರು ಮಂದಿ ಪುತ್ರಿಯರನ್ನು ಮರಣದಲ್ಲಿ ಕಳೆದುಕೊಂಡ ಯೋಬನೂ ಒಬ್ಬನಾಗಿರುವನು. ಅವನು ಆ ಮಕ್ಕಳೆಲ್ಲರನ್ನೂ ಪುನಃ ಸ್ವಾಗತಿಸುವಾಗ ಅವನಿಗೆಷ್ಟು ಆನಂದವಾಗುವುದೆಂಬುದನ್ನು ಕಲ್ಪಿಸಿಕೊಳ್ಳಿ! ಅಷ್ಟುಮಾತ್ರವಲ್ಲದೆ ಆ ಮಕ್ಕಳು, ತಮಗೆ ಇನ್ನೂ ಏಳು ಮಂದಿ ತಮ್ಮಂದಿರು ಮತ್ತು ಇನ್ನೂ ಮೂರು ಮಂದಿ ಸುಂದರ ತಂಗಿಯರಿದ್ದಾರೆಂಬುದನ್ನು ತಿಳಿದುಕೊಳ್ಳುವಾಗ ಅವರೆಷ್ಟು ಹರ್ಷಿಸುವರೆಂಬುದನ್ನು ಸಹ ಊಹಿಸಿಕೊಳ್ಳಿ!—ಯೋಬ 1:1, 2, 18, 19; 42:12-15.
20 ಅಬ್ರಹಾಮ, ಸಾರ, ಇಸಾಕ, ರೆಬೆಕ್ಕ ಮತ್ತು ಇನ್ನೂ ಎಷ್ಟೋ ಮಂದಿ, ಹಾಗೂ “ಎಲ್ಲಾ ಪ್ರವಾದಿಗಳು” ಭೂಮಿಯ ಮೇಲಿನ ಜೀವಿತಕ್ಕೆ ಎಬ್ಬಿಸಲ್ಪಡುವುದು ಎಂತಹ ಒಂದು ಆಶೀರ್ವಾದವಾಗಿರುವುದು! (ಲೂಕ 13:28) ಆ ಪ್ರವಾದಿಗಳಲ್ಲಿ ಒಬ್ಬನು ದಾನಿಯೇಲನಾಗಿರುವನು. ಅವನಿಗೆ, ಮೆಸ್ಸೀಯನ ಆಳ್ವಿಕೆಯಲ್ಲಿ ತನ್ನ ಪುನರುತ್ಥಾನವಾಗುವುದೆಂಬ ಮಾತನ್ನು ಕೊಡಲಾಗಿತ್ತು. ಈಗ ದಾನಿಯೇಲನು ಸುಮಾರು 2,500 ವರ್ಷಗಳಿಂದ ಸಮಾಧಿಯಲ್ಲಿದ್ದಾನೆ. ಆದರೆ ಪುನರುತ್ಥಾನದ ಮೂಲಕ ಅವನು ಬೇಗನೆ ‘ದೇಶದಲ್ಲೆಲ್ಲಾ ಅಧಿಕಾರಿಗಳಾಗಿ ನೇಮಿಸಲ್ಪಟ್ಟಿರುವವರಲ್ಲಿ’ ಒಬ್ಬನೋಪಾದಿ ‘ಅವನ ಸ್ವಾಸ್ತ್ಯಕ್ಕಾಗಿ ನಿಲ್ಲುವನು.’ (ದಾನಿಯೇಲ 12:13; ಕೀರ್ತನೆ 45:16) ಪ್ರಾಚೀನ ಕಾಲದ ನಂಬಿಗಸ್ತರನ್ನು ಮಾತ್ರವಲ್ಲ, ಶತ್ರುವಾದ ಮರಣವು ನಿಮ್ಮಿಂದ ಕಸಿದುಕೊಂಡಿರುವ ನಿಮ್ಮ ಸ್ವಂತ ತಂದೆ, ತಾಯಿ, ಮುದ್ದಿನ ಮಗ, ಮಗಳು ಅಥವಾ ಇತರ ಪ್ರಿಯ ವ್ಯಕ್ತಿಗಳನ್ನೂ ಸ್ವಾಗತಿಸುವಾಗ ನೀವೆಷ್ಟು ಪುಳಕಿತರಾಗುವಿರಿ!
21. ಇತರರಿಗಾಗಿ ಒಳಿತನ್ನು ಮಾಡುವುದರಲ್ಲಿ ನಾವು ಏಕೆ ತಡಮಾಡಬಾರದು?
21 ನಮ್ಮ ಸ್ನೇಹಿತರು ಮತ್ತು ಪ್ರಿಯ ವ್ಯಕ್ತಿಗಳಲ್ಲಿ ಕೆಲವರು ಅನೇಕ ದಶಕಗಳಿಂದ ದೇವರ ಸೇವೆ ಮಾಡುತ್ತಿರಬಹುದು ಮತ್ತು ಈಗ ವೃದ್ಧರಾಗಿರಬಹುದು. ಅವರ ಇಳಿವಯಸ್ಸಿನಿಂದಾಗಿ, ಅವರಿಗೆ ಜೀವನದ ಕಷ್ಟತೊಂದರೆಗಳನ್ನು ಸಹಿಸುವುದು ಕಷ್ಟಕರವಾಗಿರಬಹುದು. ಆದುದರಿಂದ, ನಾವು ಈಗಲೇ ಅವರಿಗೆ ನಮ್ಮಿಂದ ಸಾಧ್ಯವಿರುವಷ್ಟು ಸಹಾಯವನ್ನು ಕೊಡುವುದು ಎಷ್ಟೊಂದು ಪ್ರೀತಿಪರವಾದ ಸಂಗತಿಯಾಗಿದೆ! ನಾವು ಹಾಗೆ ಮಾಡುವಲ್ಲಿ, ಒಂದು ವೇಳೆ ಅವರು ಯಾವುದೇ ರೀತಿಯಲ್ಲಿ ಸಾವನ್ನಪ್ಪಿದರೂ, ನಾವು ಅವರ ಕಡೆಗಿನ ನಮ್ಮ ಕರ್ತವ್ಯಗಳನ್ನು ಪೂರೈಸಲಿಲ್ಲವಲ್ಲ ಎಂದು ನಮ್ಮ ಮನಸ್ಸಾಕ್ಷಿ ಚುಚ್ಚುವುದಿಲ್ಲ. (ಪ್ರಸಂಗಿ 9:11; 12:1-7; 1 ತಿಮೊಥೆಯ 5:3, 8) ವಯಸ್ಸು ಅಥವಾ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳದೇ ಎಲ್ಲರಿಗೂ ನಾವು ಮಾಡುವ ಒಳಿತನ್ನು ಯೆಹೋವನು ಎಂದೂ ಮರೆಯದಿರುವನೆಂದು ನಾವು ನಿಶ್ಚಿತರಾಗಿರಬಲ್ಲೆವು. “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ” ಎಂದು ಪೌಲನು ಬರೆದನು.—ಇಬ್ರಿಯ 6:10.
22. ಪುನರುತ್ಥಾನದ ನಿರೀಕ್ಷೆಯು ನೆರವೇರುವ ವರೆಗೆ, ನಾವು ಏನನ್ನು ಮಾಡಲು ದೃಢನಿರ್ಧಾರವುಳ್ಳವರಾಗಿರಬೇಕು?
22 ಯೆಹೋವನು “ಕನಿಕರವುಳ್ಳ ತಂದೆಯೂ ಸಕಲವಿಧವಾಗಿ ಸಂತೈಸುವ ದೇವರೂ” ಆಗಿದ್ದಾನೆ. (2 ಕೊರಿಂಥ 1:3, 4) ಆತನ ವಾಕ್ಯವು ಶಕ್ತಿಶಾಲಿಯಾದ ಪುನರುತ್ಥಾನದ ನಿರೀಕ್ಷೆಯೊಂದಿಗೆ ನಮ್ಮನ್ನು ಸಂತೈಸುತ್ತದೆ ಮತ್ತು ನಾವು ಇತರರನ್ನು ಸಂತೈಸುವಂತೆ ಸಹಾಯಮಾಡುತ್ತದೆ. ಸತ್ತವರು ಭೂಮಿಯ ಮೇಲಿನ ಜೀವಿತಕ್ಕೆ ಎಬ್ಬಿಸಲ್ಪಡುವಾಗ ಆ ನಿರೀಕ್ಷೆಯು ನೆರವೇರುವುದನ್ನು ನಾವು ಕಣ್ಣಾರೆ ನೋಡುವ ವರೆಗೆ, ನಾವು ಪೌಲನಂತೆ ಪುನರುತ್ಥಾನದಲ್ಲಿ ನಂಬಿಕೆಯನ್ನಿಡೋಣ. ವಿಶೇಷವಾಗಿ ನಾವು ಕ್ರಿಸ್ತನನ್ನು ಅನುಕರಿಸೋಣ. ಏಕೆಂದರೆ ದೇವರು ತನ್ನನ್ನು ಪುನರುತ್ಥಾನಗೊಳಿಸಲು ಶಕ್ತನು ಎಂದು ಅವನಿಗಿದ್ದ ನಿರೀಕ್ಷೆಯು ನೆರವೇರಿತು. ಸ್ವಲ್ಪ ಸಮಯದಲ್ಲಿ ಸಮಾಧಿಗಳಲ್ಲಿರುವವರೆಲ್ಲರೂ ಕ್ರಿಸ್ತನ ಧ್ವನಿಯನ್ನು ಕೇಳಿ, ಎದ್ದು ಹೊರಬರುವರು. ಇದು ನಮಗೆ ಸಾಂತ್ವನ ಮತ್ತು ಸಂತೋಷವನ್ನು ತರುವುದು. ಆದರೆ ಎಲ್ಲದಕ್ಕಿಂತಲೂ ಹೆಚ್ಚಾಗಿ, ನಾವು ಯೆಹೋವನಿಗೆ ಕೃತಜ್ಞರಾಗಿರೋಣ. ಯಾಕೆಂದರೆ ನಮ್ಮ ಪ್ರಭುವಾಗಿರುವ ಯೇಸು ಕ್ರಿಸ್ತನ ಮೂಲಕ ಮರಣದ ಮೇಲಿನ ವಿಜಯವನ್ನು ಸಾಧ್ಯಗೊಳಿಸಿರುವವನು ಆತನೇ ಆಗಿದ್ದಾನೆ!
ನಿಮ್ಮ ಉತ್ತರವೇನು?
• ಯೇಸುವಿನ ಪುನರುತ್ಥಾನದ ಕುರಿತು ಪೌಲನು ಯಾವ ಪ್ರತ್ಯಕ್ಷದರ್ಶಿ ರುಜುವಾತನ್ನು ಕೊಟ್ಟನು?
• “ಕಡೇ ಶತ್ರು” ಏನಾಗಿದೆ, ಮತ್ತು ಅದು ಹೇಗೆ ನಿವೃತ್ತಿಯಾಗುವುದು?
• ಅಭಿಷಿಕ್ತ ಕ್ರೈಸ್ತರ ವಿಷಯದಲ್ಲಿ ಯಾವುದು ಬಿತ್ತಲ್ಪಡುತ್ತದೆ ಮತ್ತು ಯಾವುದು ಎಬ್ಬಿಸಲ್ಪಡುತ್ತದೆ?
• ಬೈಬಲ್ ದಾಖಲೆಯಲ್ಲಿರುವ ಯಾವ ವ್ಯಕ್ತಿಗಳನ್ನು ನೀವು ಪುನರುತ್ಥಾನದ ಸಮಯದಲ್ಲಿ ಭೇಟಿಯಾಗಲು ಇಷ್ಟಪಡುವಿರಿ?
[ಪುಟ 16ರಲ್ಲಿರುವ ಚಿತ್ರ]
ಅಪೊಸ್ತಲ ಪೌಲನು ಪುನರುತ್ಥಾನವನ್ನು ಪ್ರಭಾವಶಾಲಿಯಾದ ರೀತಿಯಲ್ಲಿ ಸಮರ್ಥಿಸಿದನು
[ಪುಟ 20ರಲ್ಲಿರುವ ಚಿತ್ರ]
ಯೋಬ, ಅವನ ಕುಟುಂಬ ಮತ್ತು ಇನ್ನೂ ಅನೇಕರ ಪುನರುತ್ಥಾನವು, ಅಪರಿಮಿತವಾದ ಆನಂದವನ್ನು ತರುವುದು!