ಅಧ್ಯಯನ ಲೇಖನ 50
“ಸತ್ತವರು ಹೇಗೆ ಎಬ್ಬಿಸಲ್ಪಡುತ್ತಾರೆ?”
“ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ಕೊಂಡಿ ಎಲ್ಲಿ?”—1 ಕೊರಿಂ. 15:55.
ಗೀತೆ 130 ಜೀವವೆಂಬ ಅದ್ಭುತ
ಕಿರುನೋಟa
1-2. ಸ್ವರ್ಗಕ್ಕೆ ಹೋಗುವವರ ಪುನರುತ್ಥಾನದ ಬಗ್ಗೆ ಎಲ್ಲಾ ಕ್ರೈಸ್ತರು ಯಾಕೆ ತಿಳ್ಕೊಳ್ಳಬೇಕು?
ಇವತ್ತು ಯೆಹೋವನ ಸೇವೆ ಮಾಡ್ತಿರೋ ಹೆಚ್ಚಿನ ಜನ್ರಿಗೆ ಭೂಮಿಯ ಮೇಲೆ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇದೆ. ಆದ್ರೆ ಅಭಿಷಿಕ್ತ ಕ್ರೈಸ್ತರಲ್ಲಿ ಉಳಿದವರಿಗೆ ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಇದೆ. ಈ ಅಭಿಷಿಕ್ತ ಕ್ರೈಸ್ತರಿಗೆ ಸ್ವರ್ಗದಲ್ಲಿ ತಮ್ಮ ಜೀವನ ಹೇಗಿರುತ್ತೆ ಅಂತ ತಿಳ್ಕೊಳ್ಳೋ ಆಸಕ್ತಿ ಇರುತ್ತೆ. ಆದ್ರೆ ಭೂಮಿಯಲ್ಲಿ ಜೀವಿಸೋ ನಿರೀಕ್ಷೆ ಇರುವವ್ರು ಈ ವಿಷ್ಯದ ಬಗ್ಗೆ ಯಾಕೆ ತಿಳ್ಕೊಬೇಕು? ಸ್ವರ್ಗಕ್ಕೆ ಹೋಗುವವ್ರ ಪುನರುತ್ಥಾನ ಭೂಮಿಯಲ್ಲಿ ಜೀವಿಸೋ ನಿರೀಕ್ಷೆ ಇರುವವ್ರಿಗೂ ಅನೇಕ ಆಶೀರ್ವಾದಗಳನ್ನು ತರುತ್ತೆ. ಹಾಗಾಗಿ ನಮ್ಮ ನಿರೀಕ್ಷೆ ಸ್ವರ್ಗಕ್ಕೆ ಹೋಗುವುದಾಗಲಿ ಅಥ್ವಾ ಭೂಮಿಯಲ್ಲಿ ಇರೋದಾಗಲಿ ನಾವೆಲ್ರೂ ಸ್ವರ್ಗಕ್ಕೆ ಹೋಗುವವರ ಪುನರುತ್ಥಾನದ ಬಗ್ಗೆ ತಿಳ್ಕೊಳ್ಳಲೇಬೇಕು.
2 ಸ್ವರ್ಗಕ್ಕೆ ಹೋಗುವವ್ರ ಪುನರುತ್ಥಾನದ ಬಗ್ಗೆ ಬರೆಯುವಂತೆ ದೇವ್ರು ಒಂದನೇ ಶತಮಾನದಲ್ಲಿದ್ದ ಯೇಸುವಿನ ಕೆಲವು ಶಿಷ್ಯರನ್ನು ಪ್ರೇರಿಸಿದ್ದನು. ಅಪೊಸ್ತಲ ಯೋಹಾನ ಹೀಗೆ ಬರೆದ: “ಈಗ ನಾವು ದೇವರ ಮಕ್ಕಳಾಗಿದ್ದೇವೆ, ಆದರೆ ಮುಂದೆ ಏನಾಗುವೆವೆಂಬುದು ಇನ್ನೂ ಪ್ರಕಟಗೊಂಡಿಲ್ಲ. ಆದರೆ ಆತನು ಪ್ರಕಟಪಡಿಸ್ಪಡುವಾಗ ನಾವು ಆತನಂತೆಯೇ ಇರುವೆವು ಎಂಬುದು ನಮಗೆ ತಿಳಿದಿದೆ.” (1 ಯೋಹಾ. 3:2) ಆದ್ರಿಂದ ಅಭಿಷಿಕ್ತ ಕ್ರೈಸ್ತರಿಗೆ ತಾವು ಆತ್ಮಜೀವಿಗಳಾಗಿ ಸ್ವರ್ಗಕ್ಕೆ ಹೋದಾಗ ಅಲ್ಲಿ ಜೀವನ ಹೇಗಿರುತ್ತೆ ಅನ್ನೋದು ಗೊತ್ತಿಲ್ಲ. ಆದ್ರೆ ಅವ್ರು ಆ ಬಹುಮಾನವನ್ನ ಪಡ್ಕೊಂಡಾಗ ಯೆಹೋವ ದೇವ್ರನ್ನು ಕಣ್ಣಾರೆ ನೋಡ್ತಾರೆ. ಸ್ವರ್ಗಕ್ಕೆ ಹೋಗುವವ್ರ ಪುನರುತ್ಥಾನದ ಇಂಚಿಂಚು ಮಾಹಿತಿಯನ್ನು ಬೈಬಲ್ ಕೊಡಲ್ಲ. ಆದ್ರೆ ಅಪೊಸ್ತಲ ಪೌಲ ಅದ್ರ ಬಗ್ಗೆ ಕೆಲವು ಮಾಹಿತಿಯನ್ನ ತಿಳ್ಸಿದ್ದಾನೆ. ಕ್ರಿಸ್ತನು ‘ಎಲ್ಲ ಅಧಿಪತ್ಯವನ್ನೂ ಎಲ್ಲ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲ ಮಾಡ್ವಾಗ’ ಮತ್ತು ‘ಕೊನೆಯ ಶತ್ರುವಾಗಿರುವ ಮರಣವನ್ನು ನಿರ್ಮೂಲ ಮಾಡ್ವಾಗ’ ಆತನ ಜೊತೆ ಅಭಿಷಿಕ್ತರೂ ಇರ್ತಾರೆ. ಕೊನೆಯಲ್ಲಿ, ಯೇಸು ಮತ್ತು ಈ ಜೊತೆ ರಾಜರು ಯೆಹೋವನಿಗೆ ಎಲ್ಲವನ್ನೂ ಒಪ್ಪಿಸ್ತಾರೆ ಮತ್ತು ತಾವೂ ಅಧೀನರಾಗ್ತಾರೆ. (1 ಕೊರಿಂ. 15:24-28) ಆ ಸಮಯದಲ್ಲಿ ಎಷ್ಟು ಸಂತೋಷ ತುಂಬಿ ತುಳುಕುತ್ತಲ್ವಾ!b
3. ಒಂದನೇ ಕೊರಿಂಥ 15:30-32 ರಲ್ಲಿ ತಿಳಿಸಿರೋ ಪ್ರಕಾರ ಪೌಲನಿಗೆ ಪುನರುತ್ಥಾನದ ಮೇಲೆ ನಂಬಿಕೆ ಇದ್ದಿದ್ರಿಂದ ಏನು ಮಾಡಕ್ಕಾಯ್ತು?
3 ಪೌಲನಿಗೆ ಪುನರುತ್ಥಾನದ ಮೇಲೆ ನಂಬಿಕೆ ಇದ್ದಿದ್ರಿಂದ ಅನೇಕ ಕಷ್ಟಸಂಕಟಗಳನ್ನ ತಾಳಿಕೊಳ್ಳೋಕೆ ಸಾಧ್ಯವಾಯ್ತು. (1 ಕೊರಿಂಥ 15:30-32 ಓದಿ.) ಅವನು ಕೊರಿಂಥದವ್ರಿಗೆ ಹೀಗೆ ಹೇಳಿದ: “ಪ್ರತಿದಿನವೂ ನಾನು ಮರಣವನ್ನು ಎದುರಿಸುತ್ತೇನೆ.” ಅಷ್ಟೇ ಅಲ್ಲ, ‘ಎಫೆಸದಲ್ಲಿ ಕಾಡುಮೃಗಗಳೊಂದಿಗೆ ಹೋರಾಡಿದ್ದೇನೆ’ ಅಂತನೂ ಬರೆದನು. ಇಲ್ಲಿ ಬಹುಶಃ ಅವನು ಎಫೆಸದ ಅಖಾಡದಲ್ಲಿ ಅಥ್ವಾ ಸ್ಟೇಡಿಯಂನಲ್ಲಿ ನಿಜವಾದ ಮೃಗಗಳ ವಿರುದ್ಧ ಹೋರಾಡಿದ್ರ ಬಗ್ಗೆ ಹೇಳ್ತಿರಬಹುದು. (2 ಕೊರಿಂ. 1:8; 4:10; 11:23) ಅಥ್ವಾ ಅವನ ವಿರುದ್ಧ ಕತ್ತಿ ಮಸೆಯುತ್ತಿದ್ದ ಯೆಹೂದಿಗಳು ಮತ್ತು ಬೇರೆಯವ್ರನ್ನು ಅವನು ‘ಕಾಡುಮೃಗಗಳು’ ಅಂತ ಕರೆದಿರಬಹುದು. (ಅ. ಕಾ. 19:26-34; 1 ಕೊರಿಂ. 16:9) ಪೌಲನು ಇಂಥ ಭೀಕರ ಅಪಾಯಗಳನ್ನು ಎದುರಿಸಿದ್ರೂ ಮುಂದೆ ತನಗೆ ಒಳ್ಳೇ ಜೀವನ ಸಿಗುತ್ತೆ ಅನ್ನೋ ನಂಬಿಕೆಯನ್ನ ಕಳಕೊಳ್ಳಲಿಲ್ಲ.—2 ಕೊರಿಂ. 4:16-18.
4. ಪುನರುತ್ಥಾನದ ನಿರೀಕ್ಷೆಯಿಂದ ಇವತ್ತಿನ ಕ್ರೈಸ್ತರಿಗೆ ಏನು ಮಾಡೋಕೆ ಬಲ ಸಿಕ್ಕಿದೆ? (ಮುಖಪುಟ ಚಿತ್ರ ನೋಡಿ.)
4 ಜೀವಕ್ಕೇ ಅಪಾಯ ಇರುವಂಥ ಸಮಯದಲ್ಲಿ ನಾವು ಜೀವಿಸ್ತಿದ್ದೇವೆ. ನಮ್ಮ ಕೆಲವು ಸಹೋದರ ಸಹೋದರಿಯರು ಬೇರೆಯವ್ರ ಅಪರಾಧಗಳಿಗೆ ಬಲಿಯಾಗಿ ಕಷ್ಟ ಅನುಭವಿಸ್ತಿದ್ದಾರೆ. ಇನ್ನು ಕೆಲವ್ರು ಯುದ್ಧ ನಡೆಯೋ ಸ್ಥಳಗಳಲ್ಲಿ ವಾಸಿಸ್ತಿದ್ದಾರೆ. ‘ಯಾವಾಗ ಏನಾಗುತ್ತೋ?’ ಅನ್ನೋ ಭಯದಲ್ಲೇ ಅವ್ರು ಜೀವಿಸಬೇಕಾಗಿದೆ. ಇನ್ನು ಕೆಲವು ಸಹೋದರ ಸಹೋದರಿಯರು ಸುವಾರ್ತೆ ಸಾರೋ ಕೆಲ್ಸದ ಮೇಲೆ ನಿರ್ಬಂಧ ಅಥ್ವಾ ನಿಷೇಧ ಇರುವ ದೇಶಗಳಲ್ಲಿ ಇದ್ದಾರೆ. ಅಧಿಕಾರಿಗಳಿಗೆ ಇವ್ರ ಬಗ್ಗೆ ಗೊತ್ತಾದ್ರೆ ಜೈಲಿಗೆ ಹೋಗೋ ಅಥ್ವಾ ಪ್ರಾಣ ಕಳಕೊಳ್ಳೋ ಅಪಾಯ ಇದೆ. ಆದ್ರೂ ಯೆಹೋವನ ಸೇವೆ ಮಾಡ್ತಿದ್ದಾರೆ, ಆತನ ಆರಾಧನೆಯನ್ನ ನಿಲ್ಲಿಸಿಲ್ಲ. ಈ ಎಲ್ಲಾ ಸಹೋದರ ಸಹೋದರಿಯರು ನಮ್ಮೆಲ್ರಿಗೂ ಅತ್ಯುತ್ತಮ ಮಾದರಿ. ಅವ್ರಿಗೆ, ಈಗ ತಮ್ಮ ಜೀವವನ್ನ ಕಳಕೊಂಡ್ರೂ ಮುಂದೆ ಯೆಹೋವ ತಮಗೆ ಇದಕ್ಕಿಂತ ಚೆನ್ನಾಗಿರೋ ಜೀವನ ಕೊಡ್ತಾನೆ ಅಂತ ಗೊತ್ತಿರೋದ್ರಿಂದ ಅವ್ರು ಭಯಪಡಲ್ಲ.
5. ನಮ್ಮಲ್ಲಿ ಯಾವ ತಪ್ಪಾದ ಯೋಚನೆ ಇದ್ರೆ ಪುನರುತ್ಥಾನ ಆಗುತ್ತೆ ಅನ್ನೋ ನಮ್ಮ ನಂಬಿಕೆ ಕಡಿಮೆಯಾಗುತ್ತೆ?
5 ಪೌಲನ ದಿನಗಳಲ್ಲಿ ಕೆಲವ್ರು, “ಸತ್ತವರು ಎಬ್ಬಿಸಲ್ಪಡುವುದಿಲ್ಲವಾದರೆ ‘ನಾವು ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲ’” ಅಂತ ಯೋಚಿಸ್ತಿದ್ದರು. ಇಂಥ ಯೋಚನೆ ಸಹೋದರರಿಗೆ ಇರಬಾರ್ದು ಅಂತ ಪೌಲ ಎಚ್ಚರಿಸಿದನು. ನಿಜ ಹೇಳಬೇಕಂದ್ರೆ ಇಂಥ ಯೋಚನೆ ಪೌಲನ ದಿನಗಳಿಗಿಂತ ಮುಂಚೆ ಇದ್ದ ಜನ್ರಲ್ಲೂ ಇತ್ತು. ಬಹುಶಃ ಇಲ್ಲಿ ಅವನು ಯೆಶಾಯ 22:13 ನೇ ವಚನವನ್ನು ಉಲ್ಲೇಖಿಸಿರಬಹುದು. ಆ ವಚನ ಇಸ್ರಾಯೇಲ್ಯರಿಗಿದ್ದ ಮನೋಭಾವದ ಬಗ್ಗೆ ತಿಳ್ಸುತ್ತೆ. ಇಸ್ರಾಯೇಲ್ಯರು ಯೆಹೋವನಿಗೆ ಆಪ್ತರಾಗೋ ಬದ್ಲಿಗೆ ಜೀವನವನ್ನ ಆನಂದಿಸೋದ್ರಲ್ಲೇ ಮುಳುಗಿಹೋಗಿದ್ರು. ಅವ್ರಿಗೆ ‘ನಾಳೆ ಇರ್ತಿವೋ ಇಲ್ವೋ? ಇವತ್ತೇ ಎಲ್ಲಾ ಅನುಭವಿಸಿಬಿಡೋಣ’ ಅನ್ನೋ ಮನೋಭಾವ ಇತ್ತು. ಈ ಮನೋಭಾವ ಇವತ್ತು ಮಾಮೂಲಿ ಆಗಿಬಿಟ್ಟಿದೆ. ಈ ರೀತಿ ಯೋಚಿಸಿದ ಇಸ್ರಾಯೇಲ್ಯರಿಗೆ ಕೊನೆಗೆ ಎಂಥ ಗತಿ ಬಂತು ಅಂತ ಬೈಬಲ್ ತಿಳ್ಸುತ್ತೆ.—2 ಪೂರ್ವ. 36:15-20.
6. ಪುನರುತ್ಥಾನ ಆಗುತ್ತೆ ಅನ್ನೋ ನಂಬಿಕೆ ಕಡಿಮೆಯಾಗೋಕೆ ಸ್ನೇಹಿತರು ಹೇಗೆ ಕಾರಣರಾಗಬಹುದು?
6 ಪುನರುತ್ಥಾನ ಆಗುತ್ತೆ ಅನ್ನೋ ನಮ್ಮ ನಂಬಿಕೆ ಕಡಿಮೆಯಾಗೋಕೆ ಸ್ನೇಹಿತರೂ ಕಾರಣರಾಗಬಹುದು. ಹಾಗಾಗಿ ಇಂಥ ಸ್ನೇಹಿತರ ಸಹವಾಸವನ್ನು ಬಿಟ್ಟುಬಿಡಬೇಕು. ಕೊರಿಂಥದಲ್ಲಿದ್ದ ಸಹೋದರರು ಪುನರುತ್ಥಾನ ಆಗಲ್ಲ ಅಂತ ಹೇಳ್ತಿದ್ದ ಜನ್ರಿಂದ ದೂರ ಇರಬೇಕಿತ್ತು. ಇದ್ರಿಂದ ನಮಗೂ ಒಂದು ಪಾಠ ಇದೆ. ಯಾರು ನಾಳೆ ಬಗ್ಗೆ ಒಂಚೂರು ಯೋಚನೆ ಮಾಡದೆ ಇವತ್ತು ಮಜಾ ಮಾಡಬೇಕು ಅಂತ ಅಂದುಕೊಳ್ತಾರೋ ಅಂಥವ್ರ ಜೊತೆ ಹೆಚ್ಚು ಸಮಯ ಕಳೆದ್ರೆ ನಾವೂ ಅವ್ರ ತರನೇ ಯೋಚನೆ ಮಾಡೋಕೆ ಶುರುಮಾಡ್ತೇವೆ. ಅದ್ರ ಜೊತೆಗೆ, ನಾವು ಬೆಳೆಸಿಕೊಂಡು ಬಂದಿರೋ ಒಳ್ಳೇ ರೂಢಿಗಳು ಹಾಳಾಗಿಬಿಡುತ್ತೆ. ನಾವು ದೇವ್ರಿಗೆ ಇಷ್ಟ ಆಗದಿರೋ ವಿಷಯಗಳನ್ನು ಅಥ್ವಾ ಪಾಪವನ್ನು ಮಾಡುವಷ್ಟರ ಮಟ್ಟಿಗೆ ಅವ್ರು ನಮ್ಮ ಮೇಲೆ ಪ್ರಭಾವ ಬೀರಬಹುದು. ಹಾಗಾಗಿ ಪೌಲನು “ನೀತಿಗನುಸಾರ ಅಮಲಿನಿಂದ ಎಚ್ಚತ್ತುಕೊಳ್ಳಿರಿ; ಪಾಪವನ್ನು ಪರಿಪಾಠಮಾಡಬೇಡಿ” ಅಂತ ಖಡಕ್ಕಾಗಿ ಎಚ್ಚರಿಕೆ ನೀಡಿದ.—1 ಕೊರಿಂ. 15:33, 34.
ಯಾವ ರೀತಿಯ ದೇಹ ಕೊಡಲಾಗುತ್ತೆ?
7. ಒಂದನೇ ಕೊರಿಂಥ 15:35-38 ರ ಪ್ರಕಾರ ಕೆಲವ್ರು ಪುನರುತ್ಥಾನದ ಬಗ್ಗೆ ಯಾವ ಪ್ರಶ್ನೆ ಕೇಳಿರಬಹುದು?
7 ಒಂದನೇ ಕೊರಿಂಥ 15:35-38 ಓದಿ. ಸತ್ತವರು ಮತ್ತೆ ಬದುಕ್ತಾರೆ ಅಂತ ನಂಬದಿರೋ ಕೆಲವ್ರು ಬೇರೆಯವ್ರಲ್ಲೂ ಆ ವಿಷ್ಯದ ಬಗ್ಗೆ ಸಂಶಯ ಹುಟ್ಟಿಸೋಕೆ, “ಸತ್ತವರು ಹೇಗೆ ಎಬ್ಬಿಸಲ್ಪಡುತ್ತಾರೆ?” ಅಂದ್ರೆ ಸತ್ತವ್ರು ಯಾವ ರೀತಿಯ ದೇಹದಲ್ಲಿ ಎದ್ದುಬರ್ತಾರೆ ಅಂತ ಕೇಳಿರಬಹುದು. ಇದಕ್ಕೆ ಪೌಲ ಏನು ಉತ್ತರ ಕೊಟ್ಟನೋ ಅದನ್ನು ನಾವು ತಿಳ್ಕೊಳ್ಳೋದು ಒಳ್ಳೇದು. ಯಾಕಂದ್ರೆ ಸತ್ತ ಮೇಲೆ ಏನಾಗುತ್ತೆ ಅನ್ನೋದ್ರ ಬಗ್ಗೆ ಇವತ್ತು ಅನೇಕರಿಗೆ ಬೇರೆಬೇರೆ ಅಭಿಪ್ರಾಯಗಳಿವೆ. ಹಾಗಾಗಿ ಬೈಬಲ್ ಇದ್ರ ಬಗ್ಗೆ ಏನು ಕಲಿಸುತ್ತೆ ಅಂತ ಈಗ ನಾವು ನೋಡೋಣ.
8. ಸ್ವರ್ಗಕ್ಕೆ ಹೋಗುವವರ ಪುನರುತ್ಥಾನವನ್ನ ಅರ್ಥಮಾಡಿಕೊಳ್ಳೋಕೆ ಯಾವ ಉದಾಹರಣೆ ಸಹಾಯ ಮಾಡುತ್ತೆ?
8 ಒಬ್ಬ ವ್ಯಕ್ತಿ ತೀರಿಹೋದಾಗ ಅವ್ನ ದೇಹ ಕೊಳೆಯುತ್ತೆ. ಆದ್ರೂ ಅವ್ನಿಗೆ ಪುನಃ ಜೀವ ಕೊಟ್ಟು ಸೂಕ್ತವಾದ ದೇಹ ಕೊಡೋ ಶಕ್ತಿ ದೇವರಿಗಿದೆ. ಇದು ದೇವ್ರಿಗೆ ಕಷ್ಟದ ಕೆಲಸನೇ ಅಲ್ಲ. ಯಾಕಂದ್ರೆ ಶೂನ್ಯದಿಂದ ಇಷ್ಟು ವಿಸ್ತಾರವಾದ ವಿಶ್ವವನ್ನು ಆತನು ಸೃಷ್ಟಿ ಮಾಡಿದ್ದಾನೆ. ಹಾಗಿರುವಾಗ ಒಬ್ಬ ಮನುಷ್ಯ ಸತ್ತುಹೋದ್ರೂ ಅವನಿಗೆ ಹೊಸ ದೇಹ ಕೊಟ್ಟು ಪುನಃ ಜೀವ ಕೊಡೋ ಶಕ್ತಿ ದೇವರಿಗಿಲ್ವಾ? (ಆದಿ. 1:1; 2:7) ಒಬ್ಬ ವ್ಯಕ್ತಿಗೆ ಸ್ವರ್ಗದಲ್ಲಿ ಜೀವಿಸೋಕೆ ಬೇಕಾದ ದೇಹವನ್ನು ಕೊಡೋಕೆ ದೇವರಿಗಾಗುತ್ತೆ. ಇದಕ್ಕೋಸ್ಕರ ಕೊಳೆತು ಹೋಗಿರೋ ಹಳೇ ದೇಹದ ಅವಶ್ಯಕತೆ ಇರಲ್ಲ. ಇದನ್ನ ಅರ್ಥ ಮಾಡಿಸೋಕೆ ಪೌಲನು ‘ಬೀಜದ’ ಉದಾಹರಣೆ ಕೊಟ್ಟ. ಬೀಜವನ್ನು ನೆಲದಲ್ಲಿ ಬಿತ್ತಿದಾಗ ಅದು ಚಿಗುರೊಡೆದು ಗಿಡವಾಗುತ್ತೆ. ಈ ಗಿಡ ಬಿತ್ತಿದಂಥ ಬೀಜದ ತರ ಇರೋದೇ ಇಲ್ಲ. ಅದೇ ತರ ಸತ್ತುಹೋಗಿರೋ ಒಬ್ಬ ವ್ಯಕ್ತಿಗೆ ದೇವರು ಪುನಃ ಜೀವ ಕೊಟ್ಟು ‘ತನಗೆ ಇಷ್ಟವಾದ ದೇಹವನ್ನು ಕೊಡುತ್ತಾನೆ’ ಅಂತ ಪೌಲ ವಿವರಿಸಿದ.
9. ಬೇರೆಬೇರೆ ದೇಹದ ಬಗ್ಗೆ 1 ಕೊರಿಂಥ 15:39-41 ಏನು ಹೇಳುತ್ತೆ?
9 ಒಂದನೇ ಕೊರಿಂಥ 15:39-41 ಓದಿ. ಎಲ್ಲಾ ಜೀವಿಗಳಿಗೂ ದೇವ್ರು ಒಂದೇ ರೀತಿಯ ದೇಹ ಕೊಡಲಿಲ್ಲ ಅಂತ ಪೌಲ ಹೇಳಿದ. ಉದಾಹರಣೆಗೆ, ಪಶುಗಳಿಗೆ ಬೇರೆ ದೇಹ, ಪಕ್ಷಿಗಳಿಗೆ ಬೇರೆ ದೇಹ ಮತ್ತು ಮೀನುಗಳಿಗೆ ಬೇರೆ ದೇಹ ಇದೆ. ಆಕಾಶದಲ್ಲೂ ಸೂರ್ಯನೇ ಬೇರೆ ತರ ಇದ್ದಾನೆ ಮತ್ತು ಚಂದ್ರನೇ ಬೇರೆ ತರ ಇದ್ದಾನೆ ಅಂತ ಪೌಲ ತಿಳಿಸಿದ. ಜೊತೆಗೆ, “ಒಂದು ನಕ್ಷತ್ರವು ಇನ್ನೊಂದು ನಕ್ಷತ್ರಕ್ಕಿಂತ ಮಹಿಮೆಯಲ್ಲಿ ಭಿನ್ನವಾಗಿದೆ” ಅಂತನೂ ತಿಳಿಸಿದ. ನಾವು ಬರಿಗಣ್ಣಲ್ಲಿ ಆಕಾಶವನ್ನು ನೋಡೋದಾದ್ರೆ ಎಲ್ಲಾ ನಕ್ಷತ್ರಗಳು ಒಂದೇ ತರ ಕಾಣಬಹುದು. ಆದ್ರೆ ನಕ್ಷತ್ರಗಳೂ ಬೇರೆಬೇರೆ ತರ ಇರುತ್ತೆ. ಕೆಲವು ದೊಡ್ಡದಿರುತ್ತೆ, ಕೆಲವು ಚಿಕ್ಕದಿರುತ್ತೆ. ಕೆಲವು ಕೆಂಪು ಬಣ್ಣದಲ್ಲಿರುತ್ತೆ, ಕೆಲವು ಬಿಳಿ ಬಣ್ಣದಲ್ಲಿರುತ್ತೆ, ಇನ್ನು ಕೆಲವು ಸೂರ್ಯನ ತರ ಹಳದಿ ಬಣ್ಣದಲ್ಲಿರುತ್ತೆ ಅಂತ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಪೌಲ “ಸ್ವರ್ಗದ ದೇಹಗಳುಂಟು ಮತ್ತು ಭೂಮಿಯ ದೇಹಗಳುಂಟು” ಅಂತನೂ ಹೇಳಿದ. ಅದರರ್ಥ ಏನು? ಭೂಮಿಯಲ್ಲಿರೋ ನಮಗೆ ಮೂಳೆ-ಮಾಂಸದ ದೇಹವಿದೆ. ಆದ್ರೆ ಸ್ವರ್ಗದಲ್ಲಿ ಇರೋವ್ರಿಗೆ ದೇವದೂತರ ತರ ನಮ್ಮ ಕಣ್ಣಿಗೆ ಕಾಣದಿರೋ ದೇಹವಿದೆ.
10. ಸ್ವರ್ಗಕ್ಕೆ ಹೋಗುವವ್ರಿಗೆ ಪುನರುತ್ಥಾನ ಆದಾಗ ಯಾವ ರೀತಿಯ ಶರೀರ ಇರುತ್ತೆ?
10 ನಂತ್ರ ಪೌಲ ಏನು ಹೇಳಿದ ಗಮನಿಸಿ: “ಸತ್ತವರ ಪುನರುತ್ಥಾನವೂ ಹೀಗೆಯೇ ಇರುತ್ತದೆ. ದೇಹವು ಲಯಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ನಿರ್ಲಯಾವಸ್ಥೆಯಲ್ಲಿ ಎಬ್ಬಿಸಲ್ಪಡುತ್ತದೆ.” ಅಂದ್ರೆ ಒಬ್ಬ ಮನುಷ್ಯನು ತೀರಿಹೋದ ಮೇಲೆ ಅವನ ದೇಹ ಕೊಳೆತು ಮಣ್ಣಾಗುತ್ತೆ ಅಥ್ವಾ ಲಯವಾಗುತ್ತೆ. (ಆದಿ. 3:19) ಹಾಗಾದ್ರೆ ಇಲ್ಲಿ ಪೌಲ, “ದೇಹವು ನಿರ್ಲಯಾವಸ್ಥೆಯಲ್ಲಿ ಎಬ್ಬಿಸಲ್ಪಡುತ್ತದೆ” ಅಂದ್ರೆ ಹಾಳಾಗದಿರೋ ದೇಹ ಸಿಗುತ್ತೆ ಅಂತ ಹೇಳಿದ್ದಾನಲ್ಲ, ಅದು ಹೇಗೆ ಸಾಧ್ಯ? ಇಲ್ಲಿ ಪೌಲನು ಎಲೀಯ, ಎಲೀಷ ಮತ್ತು ಯೇಸು ಈ ಭೂಮಿಯಲ್ಲಿ ಜೀವಿಸೋಕೆ ಪುನರುತ್ಥಾನ ಮಾಡಿದಂಥ ವ್ಯಕ್ತಿಗಳ ಬಗ್ಗೆ ಮಾತಾಡ್ತಿಲ್ಲ. ಬದ್ಲಿಗೆ ಸ್ವರ್ಗದಲ್ಲಿ ಜೀವಿಸೋಕೆ ‘ಆತ್ಮಿಕ ದೇಹದಲ್ಲಿ’ ಪುನರುತ್ಥಾನ ಆಗುವಂಥ ವ್ಯಕ್ತಿಗಳ ಬಗ್ಗೆ ಮಾತಾಡ್ತಿದ್ದಾನೆ.—1 ಕೊರಿಂ. 15:42-44.
11-12. ಯೇಸುಗೆ ಪುನರುತ್ಥಾನ ಆದಾಗ ಅವನಿಗೆ ಯಾವ ರೀತಿಯ ದೇಹ ಕೊಡಲಾಯಿತು ಮತ್ತು ಅಭಿಷಿಕ್ತರಿಗೂ ಪುನರುತ್ಥಾನ ಆದಾಗ ಯಾವ ರೀತಿಯ ದೇಹ ಕೊಡಲಾಗುತ್ತೆ?
11 ಯೇಸು ಭೂಮಿಯಲ್ಲಿದ್ದಾಗ ಅವನಿಗೆ ಮೂಳೆ-ಮಾಂಸದ ದೇಹವಿತ್ತು. ಆದ್ರೆ ಅವನಿಗೆ ಪುನರುತ್ಥಾನ ಆದಾಗ “ಜೀವ ಕೊಡುವ ಆತ್ಮಜೀವಿಯಾದನು” ಮತ್ತು ಸ್ವರ್ಗಕ್ಕೆ ವಾಪಸ್ ಹೋದನು. ಅದೇ ರೀತಿ, ಅಭಿಷಿಕ್ತ ಕ್ರೈಸ್ತರಿಗೆ ಪುನರುತ್ಥಾನ ಆದಾಗ ಸ್ವರ್ಗದಲ್ಲಿ ಜೀವಿಸೋಕೆ ಬೇಕಾದಂಥ ದೇಹವನ್ನ ಕೊಡಲಾಗುತ್ತೆ. ಪೌಲ “ನಾವು ಮಣ್ಣಿನಿಂದ ಮಾಡಲ್ಪಟ್ಟವನ ಸ್ವರೂಪವನ್ನು ಧರಿಸಿಕೊಂಡಿರುವಂತೆಯೇ ಸ್ವರ್ಗೀಯ ವ್ಯಕ್ತಿಯ ಸ್ವರೂಪವನ್ನೂ ಧರಿಸಿಕೊಳ್ಳುವೆವು” ಅಂತ ವಿವರಿಸಿದ.—1 ಕೊರಿಂ. 15:45-49.
12 ಯೇಸುಗೆ ಪುನರುತ್ಥಾನ ಆದಾಗ ಅವನಿಗೆ ಮಾಂಸದ ದೇಹವನ್ನ ಕೊಡಲಿಲ್ಲ? ಯಾಕೆ ಕೊಡಲಿಲ್ಲ ಅಂತ ಪೌಲ ಹೀಗೆ ವಿವರಿಸಿದ: “ಮಾಂಸವೂ ರಕ್ತವೂ” ಸ್ವರ್ಗದಲ್ಲಿರುವ “ದೇವರ ರಾಜ್ಯಕ್ಕೆ ಬಾಧ್ಯವಾಗಲಾರದು.” (1 ಕೊರಿಂ. 15:50) ಅಪೊಸ್ತಲರಿಗೆ ಮತ್ತು ಇನ್ನುಳಿದ ಅಭಿಷಿಕ್ತರಿಗೆ ಸ್ವರ್ಗಕ್ಕೆ ಹೋಗಲು ಪುನರುತ್ಥಾನ ಮಾಡಿದಾಗ ಹಾಳಾಗುವಂಥ ರಕ್ತಮಾಂಸವಿರುವ ದೇಹವನ್ನು ಕೊಡಲ್ಲ. ಅವ್ರಿಗೆ ಯಾವಾಗ ಪುನರುತ್ಥಾನ ಆಗುತ್ತೆ? ಅವ್ರು ತೀರಿಹೋದ ತಕ್ಷಣ ಪುನರುತ್ಥಾನ ಆಗಲ್ಲ, ಬದ್ಲಿಗೆ ಮುಂದೆ ಒಂದು ಸಮಯದಲ್ಲಿ ಆಗುತ್ತೆ ಅಂತ ಪೌಲ ಹೇಳಿದ. 1 ನೇ ಕೊರಿಂಥ ಪತ್ರವನ್ನ ಪೌಲ ಬರೆಯುವಷ್ಟರಲ್ಲಿ ಕೆಲವು ಶಿಷ್ಯರು ‘ಮರಣದಲ್ಲಿ ನಿದ್ರೆಹೋಗಿದ್ದರು.’ ಉದಾಹರಣೆಗೆ, ಅಪೊಸ್ತಲ ಯಾಕೋಬ. (ಅ. ಕಾ. 12:1, 2) ಇನ್ನಿತರ ಅಪೊಸ್ತಲರು ಮತ್ತು ಅಭಿಷಿಕ್ತರು ನಂತರ ‘ಮರಣದಲ್ಲಿ ನಿದ್ರೆಹೋದರು.’—1 ಕೊರಿಂ. 15:6.
ಮರಣದ ಮೇಲೆ ಜಯ
13. ಯೇಸು ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಏನೆಲ್ಲಾ ನಡೆಯುತ್ತೆ ಅಂತ ಮುಂಚೆನೇ ತಿಳಿಸಲಾಗಿದೆ?
13 ಯೇಸು ಮತ್ತು ಪೌಲ ಇಬ್ರೂ ಮುಂದೆ ನಡೆಯಲಿದ್ದ ಒಂದು ಪ್ರಾಮುಖ್ಯ ಸಮಯದ ಬಗ್ಗೆ ತಿಳಿಸಿದ್ರು. ಅದು ಕ್ರಿಸ್ತನ ಸಾನ್ನಿಧ್ಯದ ಸಮಯವಾಗಿತ್ತು. ಆ ಸಮಯದಲ್ಲಿ ಭೂಮಿಯಾದ್ಯಂತ ಯುದ್ಧಗಳು, ಭೂಕಂಪಗಳು, ಅಂಟುರೋಗಗಳು ಮತ್ತು ಬೇರೆ ಕೆಟ್ಟ ಘಟನೆಗಳು ನಡೆಯಲಿದ್ದವು. ಬೈಬಲಿನ ಈ ಪ್ರವಾದನೆ 1914 ರಿಂದ ನೆರವೇರುತ್ತಿರೋದನ್ನ ನಾವು ನೋಡ್ತಿದ್ದೇವೆ. ಈ ಸಮಯದಲ್ಲಿ, ದೇವರ ರಾಜ್ಯದ ಆಳ್ವಿಕೆ ಆರಂಭವಾಗಿದೆ ಅನ್ನೋ ಸುವಾರ್ತೆಯನ್ನೂ ಸಾರಲಾಗುತ್ತೆ ಅಂತ ಯೇಸು ಹೇಳಿದ್ದನು. ಆ ಸುವಾರ್ತೆ “ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು ಮತ್ತು ಆಗ ಅಂತ್ಯವು ಬರುವುದು” ಅಂದನು. (ಮತ್ತಾ. 24:3, 7-14) ಅಷ್ಟೇ ಅಲ್ಲ, ‘ಮರಣದಲ್ಲಿ ನಿದ್ರೆಹೋಗಿರುವ’ ಅಭಿಷಿಕ್ತ ಕ್ರೈಸ್ತರಿಗೂ ‘ಕರ್ತನ ಸಾನ್ನಿಧ್ಯದಲ್ಲೇ’ ಪುನರುತ್ಥಾನ ಆಗಿ ಅವ್ರು ಸ್ವರ್ಗಕ್ಕೆ ಹೋಗ್ತಾರೆ ಅಂತ ಪೌಲ ಹೇಳಿದ.—1 ಥೆಸ. 4:14-16; 1 ಕೊರಿಂ. 15:23.
14. ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ತೀರಿಹೋಗುವ ಅಭಿಷಿಕ್ತ ಕ್ರೈಸ್ತರಿಗೆ ಏನಾಗುತ್ತೆ?
14 ಈಗಿರೋ ಅಭಿಷಿಕ್ತ ಕ್ರೈಸ್ತರು ತೀರಿಹೋದ್ರೆ ತಕ್ಷಣ ಅವ್ರಿಗೆ ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗ್ತಾರೆ. ಈ ವಿಷಯವನ್ನ 1 ಕೊರಿಂಥ 15:51, 52 ರಲ್ಲಿ ಪೌಲನು ಖಚಿತಪಡಿಸಿದನು. “ನಾವೆಲ್ಲರೂ ಮರಣದಲ್ಲಿ ನಿದ್ರೆಹೋಗುವುದಿಲ್ಲ. ಆದರೆ ಕೊನೆಯ ತುತೂರಿಯು ಊದಲ್ಪಡುವಾಗ ನಾವೆಲ್ಲರೂ ಒಂದೇ ಕ್ಷಣದಲ್ಲಿ, ಕಣ್ಣುರೆಪ್ಪೆ ಬಡಿಯುವಷ್ಟರೊಳಗೆ ಮಾರ್ಪಡುವೆವು” ಅಂತ ಬರೆದ. ಪೌಲ ಹೇಳಿದ ಈ ಮಾತುಗಳು ಇವತ್ತು ನೆರವೇರ್ತಿವೆ. ಪುನರುತ್ಥಾನ ಆದ ಮೇಲೆ ಕ್ರಿಸ್ತನ ಈ ಸಹೋದರರಿಗೆ ತುಂಬ ಸಂತೋಷ ಆಗುತ್ತೆ. ಯಾಕಂದ್ರೆ ಅವ್ರು “ಯಾವಾಗಲೂ ಕರ್ತನೊಂದಿಗೆ ಇರುವಂತಾಗುವುದು.”—1 ಥೆಸ. 4:17.
15. ಪುನರುತ್ಥಾನವಾದ ಅಭಿಷಿಕ್ತರಿಗೆ ಸ್ವರ್ಗದಲ್ಲಿ ಏನು ಕೆಲಸ ಇರುತ್ತೆ?
15 ಪುನರುತ್ಥಾನವಾದ ಅಭಿಷಿಕ್ತರಿಗೆ ಸ್ವರ್ಗದಲ್ಲಿ ಏನು ಕೆಲಸ ಇರುತ್ತೆ ಅಂತ ಬೈಬಲ್ ತಿಳಿಸುತ್ತೆ. ಯೇಸು ಅವ್ರಿಗೆ ಹೀಗೆ ಹೇಳ್ತಾನೆ: “ಜಯಿಸುವವನಿಗೆ ಮತ್ತು ಕೊನೆಯವರೆಗೆ ನನ್ನ ಕ್ರಿಯೆಗಳನ್ನು ಕೈಕೊಂಡು ನಡೆಯುವವನಿಗೆ ನಾನು ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು. ಅವನು ಕಬ್ಬಿಣದ ಕೋಲಿನಿಂದ ಜನರನ್ನು ಆಳುವನು. ಮಣ್ಣಿನ ಮಡಿಕೆಗಳಂತೆ ಅವರು ಚೂರುಚೂರಾಗಿ ಒಡೆಯಲ್ಪಡುವರು. ನನಗೆ ತಂದೆಯಿಂದ ಅಧಿಕಾರವು ಕೊಡಲ್ಪಟ್ಟಿರುವಂತೆ ಅವನಿಗೂ ಕೊಡುವೆನು.” (ಪ್ರಕ. 2:26, 27) ಅವ್ರು ತಮ್ಮ ನಾಯಕನಾದ ಯೇಸುವನ್ನು ಹಿಂಬಾಲಿಸ್ತಾ ಜನಾಂಗವನ್ನು ಕಬ್ಬಿಣದ ಕೋಲಿನಿಂದ ಆಳ್ತಾರೆ.—ಪ್ರಕ. 19:11-15.
16. ಮನುಷ್ಯರಿಗೆ ಮರಣದ ಮೇಲೆ ಹೇಗೆಲ್ಲಾ ಜಯ ಸಿಗುತ್ತೆ?
16 ಅಭಿಷಿಕ್ತರು ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋದಾಗ ಅವ್ರಿಗೆ ಮರಣದ ಮೇಲೆ ಜಯ ಸಿಗುತ್ತೆ. (1 ಕೊರಿಂ. 15:54-57) ಅವ್ರು ಸ್ವರ್ಗದಲ್ಲಿ ಜೀವಿಸೋದ್ರಿಂದ ಮುಂದೆ ಬರಲಿರುವ ಅರ್ಮಗೆದ್ದೋನ್ ಯುದ್ಧದಲ್ಲಿ ಭೂಮಿಯಲ್ಲಿನ ಎಲ್ಲಾ ದುಷ್ಟತನವನ್ನು ತೆಗೆದುಹಾಕೋದ್ರಲ್ಲೂ ಭಾಗವಹಿಸ್ತಾರೆ. ಆಗ ಭೂಮಿಯಲ್ಲಿರೋ ಲಕ್ಷಾಂತರ ನಂಬಿಗಸ್ತ ಸ್ತ್ರೀ ಪುರುಷರು ‘ಮಹಾ ಸಂಕಟವನ್ನು ಪಾರಾಗ್ತಾರೆ’ ಮತ್ತು ಹೊಸಲೋಕದಲ್ಲಿ ಜೀವಿಸ್ತಾರೆ. (ಪ್ರಕ. 7:14) ಭೂಮಿಯಲ್ಲಿ ಪಾರಾಗಿ ಉಳಿಯುವ ಜನ್ರು ಮರಣದ ಮೇಲೆ ಸಿಗಲಿರುವ ಇನ್ನೊಂದು ಜಯವನ್ನೂ ಕಣ್ಣಾರೆ ನೋಡ್ತಾರೆ. ಅದೇನಂದ್ರೆ, ಈ ಹಿಂದೆ ತೀರಿಹೋದಂಥ ಕೋಟ್ಯಂತರ ಜನ್ರು ಪುನರುತ್ಥಾನ ಆಗೋದನ್ನು ಅವ್ರು ನೋಡ್ತಾರೆ. ಈ ಅಮೋಘ ಘಟನೆಗಳು ನಡೆಯುವಾಗ ಎಷ್ಟು ಸಂತೋಷ ಇರುತ್ತೆ ಯೋಚಿಸಿ! (ಅ. ಕಾ. 24:15) ನಂತರ ಯಾರೆಲ್ಲಾ ಯೆಹೋವನಿಗೆ ಸಂಪೂರ್ಣವಾಗಿ ನಿಯತ್ತಾಗಿ ಇರ್ತಾರೋ ಅವ್ರಿಗೆ ಶಾಶ್ವತವಾಗಿ ಜೀವಿಸುವ ಅವಕಾಶ ಸಿಗುತ್ತೆ. ಹೀಗೆ ಅವ್ರು ಆದಾಮನಿಂದ ಬಾಧ್ಯತೆಯಾಗಿ ಪಡೆದ ಮರಣದ ಮೇಲೂ ಜಯ ಹೊಂದುತ್ತಾರೆ.
17. ಒಂದನೇ ಕೊರಿಂಥ 15:58 ನಾವು ಈಗ ಏನು ಮಾಡೋಕೆ ಉತ್ತೇಜನ ಕೊಡುತ್ತೆ?
17 ಪೌಲ ಕೊರಿಂಥದವ್ರಿಗೆ ಬರೆದ ಪತ್ರದಿಂದ ತುಂಬ ವಿಷಯಗಳನ್ನ ಕಲಿಯೋಕೆ ಆಯಿತಲ್ವಾ? ತೀರಿಹೋದವ್ರು ಪುನರುತ್ಥಾನ ಆಗೋದ್ರ ಬಗ್ಗೆ ಅವನು ತಿಳಿಸಿದ ಮಾತುಗಳನ್ನ ನಾವು ಚೆನ್ನಾಗಿ ಅರ್ಥ ಮಾಡಿಕೊಂಡ್ರೆ ನಮಗೆ ತುಂಬ ಸಂತೋಷ ಸಿಗುತ್ತೆ. ಹಾಗಾಗಿ ಪೌಲ, “ಕರ್ತನ ಕೆಲಸವನ್ನು ಯಾವಾಗಲೂ ಹೇರಳವಾಗಿ ಮಾಡಿರಿ” ಅಂತ ಕೊಟ್ಟಿರೋ ಸಲಹೆಯನ್ನ ಈಗ ನಾವೆಲ್ರೂ ಪಾಲಿಸ್ತಾ ಮುಂದುವರಿಯೋಣ. (1 ಕೊರಿಂಥ 15:58 ಓದಿ.) ಈ ಕೆಲಸವನ್ನ ನಾವು ಯಾವಾಗ್ಲೂ ನಮ್ಮಿಂದಾದಷ್ಟು ಚೆನ್ನಾಗಿ ಮಾಡಿದ್ರೆ ಭವಿಷ್ಯದಲ್ಲಿ ಸಂತೋಷದ ಜೀವನವನ್ನ ಆನಂದಿಸ್ತೇವೆ. ಆಗಿನ ಜೀವನ ಹೇಗಿರುತ್ತೆ ಅಂತ ಊಹಿಸೋದಕ್ಕೂ ಸಾಧ್ಯವಿಲ್ಲ, ಅಷ್ಟು ಚೆನ್ನಾಗಿರುತ್ತೆ. ಆಗ ನಮಗೆ, ಕರ್ತನ ಕೆಲಸದಲ್ಲಿ ಪಟ್ಟ ಪ್ರಯಾಸ ವ್ಯರ್ಥವಾಗಲಿಲ್ಲ ಅನ್ನೋದು ಅರ್ಥ ಆಗುತ್ತೆ.
ಗೀತೆ 55 ಅನಂತ ಜೀವನ ಕಟ್ಟಕಡೆಗೂ
a ಒಂದನೇ ಕೊರಿಂಥ 15 ನೇ ಅಧ್ಯಾಯದ ಇನ್ನುಳಿದ ಭಾಗ ಪುನರುತ್ಥಾನದ ಬಗ್ಗೆ ತಿಳಿಸುತ್ತೆ. ಅದರಲ್ಲೂ ಅಭಿಷಿಕ್ತ ಕ್ರೈಸ್ತರ ಪುನರುತ್ಥಾನದ ಬಗ್ಗೆ ತಿಳಿಸುತ್ತೆ. ಆದ್ರೂ ಇಲ್ಲಿ ಪೌಲ ಬರೆದ ವಿಷಯಗಳು ಬೇರೆ ಕುರಿಗಳಿಗೂ ಪ್ರಾಮುಖ್ಯವಾಗಿವೆ. ಪುನರುತ್ಥಾನದ ನಿರೀಕ್ಷೆ ಈಗ ನಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತೆ ಮತ್ತು ಮುಂದೆ ಸಂತೋಷದ ಜೀವನವನ್ನ ಎದುರು ನೋಡಲಿಕ್ಕಾಗಿ ಹೇಗೆ ಸಹಾಯ ಮಾಡುತ್ತೆ ಅಂತ ಈ ಲೇಖನದಲ್ಲಿ ತಿಳ್ಕೊಳ್ತೇವೆ.
b ಒಂದನೇ ಕೊರಿಂಥ 15:29 ರಲ್ಲಿ ಪೌಲ ತಿಳಿಸಿರುವ ಹೇಳಿಕೆ ಬಗ್ಗೆ ಈ ಸಂಚಿಕೆಯಲ್ಲಿರೋ “ವಾಚಕರಿಂದ ಪ್ರಶ್ನೆಗಳು” ವಿವರಿಸುತ್ತೆ.