ನಿಮ್ಮ ಬೋಧನೆಯ ವಿಷಯದಲ್ಲಿ ಎಚ್ಚರವಾಗಿರ್ರಿ
“ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ [“ಬೋಧನೆಯ,” “NW”] ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.” —1 ತಿಮೊಥೆಯ 4:16.
1, 2. ಇಂದು ಹುರುಪಿನ ಶಿಕ್ಷಕರು ಏಕೆ ತುರ್ತಾಗಿ ಬೇಕಾಗಿದ್ದಾರೆ?
“ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ಯೇಸು ಕ್ರಿಸ್ತನ ಈ ಆಜ್ಞೆಯ ದೃಷ್ಟಿಯಿಂದ, ಎಲ್ಲ ಕ್ರೈಸ್ತರು ಶಿಕ್ಷಕರಾಗಲು ಪ್ರಯತ್ನಿಸಬೇಕು. ಹೆಚ್ಚು ತಡವಾಗುವುದಕ್ಕೆ ಮುಂಚೆ ಪ್ರಾಮಾಣಿಕ ಹೃದಯದ ಜನರು ದೇವರ ಜ್ಞಾನವನ್ನು ಪಡೆದುಕೊಳ್ಳುವಂತೆ ಸಹಾಯಮಾಡಲು, ಹುರುಪುಳ್ಳ ಶಿಕ್ಷಕರು ಬೇಕಾಗಿದ್ದಾರೆ. (ರೋಮಾಪುರ 13:11) ಅಪೊಸ್ತಲ ಪೌಲನು ಪ್ರೇರಿಸಿದ್ದು: “ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು.” (2 ತಿಮೊಥೆಯ 4:2) ಇದು ಸಭೆಯ ಒಳಗೂ, ಹೊರಗೂ ಬೋಧಿಸುವುದನ್ನು ಅವಶ್ಯಪಡಿಸುತ್ತದೆ. ಖಂಡಿತವಾಗಿಯೂ, ಸಾರುವ ನೇಮಕದಲ್ಲಿ ಕೇವಲ ದೇವರ ಸಂದೇಶವನ್ನು ಘೋಷಿಸುವುದಕ್ಕಿಂತಲೂ ಹೆಚ್ಚಿನದ್ದು ಸೇರಿರುತ್ತದೆ. ಆಸಕ್ತ ವ್ಯಕ್ತಿಗಳು ಶಿಷ್ಯರಾಗಬೇಕಾದರೆ, ಪರಿಣಾಮಕಾರಿಯಾದ ರೀತಿಯಲ್ಲಿ ಕಲಿಸುವುದು ಅಗತ್ಯವಾಗಿದೆ.
2 ನಾವು ‘ಕಠಿನಕಾಲಗಳಲ್ಲಿ’ ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1) ಲೌಕಿಕ ತತ್ವಜ್ಞಾನಗಳು ಮತ್ತು ಸುಳ್ಳು ಬೋಧನೆಗಳಿಂದ ಜನರು ದಾರಿತಪ್ಪಿಹೋಗಿದ್ದಾರೆ. ಅನೇಕರ “ಮನಸ್ಸು ಮೊಬ್ಬಾಗಿ ಹೋಗಿದೆ” ಮತ್ತು ಅವರು “ಸಕಲ ನೈತಿಕ ಪ್ರಜ್ಞೆಯ ಮೇರೆಯನ್ನು ದಾಟಿ”ದ್ದಾರೆ. (ಎಫೆಸ 4:18, 19, NW) ಕೆಲವರಿಗೆ ನೋವುಭರಿತ ಭಾವನಾತ್ಮಕ ಗಾಯಗಳಾಗಿವೆ. ಹೌದು, ಜನರು ನಿಜವಾಗಿಯೂ “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿ”ದ್ದಾರೆ. (ಮತ್ತಾಯ 9:36) ಆದರೆ, ಬೋಧಿಸುವ ಕಲೆಯನ್ನು ಉಪಯೋಗಿಸುವ ಮೂಲಕ, ಪ್ರಾಮಾಣಿಕ ಹೃದಯದ ಜನರು ಅಗತ್ಯವಿರುವ ಬದಲಾವಣೆಗಳನ್ನು ಮಾಡುವಂತೆ ನಾವು ಸಹಾಯಮಾಡಬಲ್ಲೆವು.
ಸಭೆಯೊಳಗಿನ ಶಿಕ್ಷಕರು
3. (ಎ) ಯೇಸು ಬೋಧಿಸುವಂತೆ ಕೊಟ್ಟ ನೇಮಕದಲ್ಲಿ ಏನು ಒಳಗೂಡಿದೆ? (ಬಿ) ಸಭೆಯೊಳಗೆ ಬೋಧಿಸುವ ಪ್ರಮುಖ ಜವಾಬ್ದಾರಿ ಯಾರಿಗಿದೆ?
3 ಮನೆ ಬೈಬಲ್ ಅಭ್ಯಾಸದ ಏರ್ಪಾಡಿನ ಮೂಲಕ, ಲಕ್ಷಾಂತರ ಜನರು ವ್ಯಕ್ತಿಗತವಾಗಿ ಉಪದೇಶವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಹೊಸಬರು ದೀಕ್ಷಾಸ್ನಾನವನ್ನು ಪಡೆದುಕೊಂಡ ನಂತರ, “ಅಸ್ತಿವಾರದ ಮೇಲೆ ಬೇರೂರಿಸಲ್ಪಟ್ಟು, ಸ್ಥಿರಗೊಳಿಸಲ್ಪಡಲು” ಅವರಿಗೆ ಇನ್ನೂ ಹೆಚ್ಚಿನ ಸಹಾಯದ ಅಗತ್ಯವಿದೆ. (ಎಫೆಸ 3:17) ಮತ್ತಾಯ 28:19, 20ರಲ್ಲಿ ಯೇಸು ಕೊಟ್ಟಿರುವ ನೇಮಕವನ್ನು ನಾವು ಪೂರೈಸುತ್ತಾ, ಹೊಸಬರನ್ನು ಯೆಹೋವನ ಸಂಸ್ಥೆಯ ಕಡೆಗೆ ನಿರ್ದೇಶಿಸುವಾಗ, ಸಭೆಯೊಳಗೂ ಕಲಿಸಲ್ಪಡುವುದರಿಂದ ಅವರು ಪ್ರಯೋಜನವನ್ನು ಪಡೆಯುತ್ತಾರೆ. ಎಫೆಸ 4:11-13ಕ್ಕನುಸಾರ, ‘ಸಭಾಪಾಲಕರನ್ನಾಗಿಯೂ ಉಪದೇಶಿಗಳನ್ನಾಗಿಯೂ’ ಸೇವೆಸಲ್ಲಿಸುವಂತೆ ಪುರುಷರನ್ನು ನೇಮಿಸಲಾಗಿದೆ. “ದೇವಜನರನ್ನು ಯೋಗ್ಯಸ್ಥಿತಿಗೆ ತರುವ ಕೆಲಸಕ್ಕೋಸ್ಕರವೂ ಸಭೆಯ ಸೇವೆಗೋಸ್ಕರವೂ ಕ್ರಿಸ್ತನ ದೇಹವು ಅಭಿವೃದ್ಧಿಯಾಗುವದಕ್ಕೋಸ್ಕರವೂ ಆತನು ಇವರನ್ನು ಅನುಗ್ರಹಿಸಿದನು.” ಕೆಲವೊಮ್ಮೆ ಅವರ ಬೋಧಿಸುವ ಕಲೆಯಲ್ಲಿ, ‘ಪೂರ್ಣ ದೀರ್ಘಶಾಂತಿಯಿಂದ ಖಂಡಿಸುವುದು, ಗದರಿಸುವುದು, ಎಚ್ಚರಿಸುವುದು’ ಸೇರಿರುತ್ತದೆ. (2 ತಿಮೊಥೆಯ 4:2, NW) ಶಿಕ್ಷಕರ ಕೆಲಸವು ಎಷ್ಟು ಪ್ರಾಮುಖ್ಯವಾಗಿತ್ತೆಂದರೆ, ಪೌಲನು ಕೊರಿಂಥದವರಿಗೆ ಬರೆಯುವಾಗ, ಅಪೊಸ್ತಲರ ಮತ್ತು ಪ್ರವಾದಿಗಳ ನಂತರ ಶಿಕ್ಷಕರ ಪಟ್ಟಿಮಾಡುತ್ತಾನೆ.—1 ಕೊರಿಂಥ 12:28.
4. ಬೋಧಿಸುವ ಸಾಮರ್ಥ್ಯವನ್ನು ಹೊಂದಿರುವುದು, ಇಬ್ರಿಯ 10:24, 25ರಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಬುದ್ಧಿವಾದವನ್ನು ಪಾಲಿಸುವಂತೆ ನಮಗೆ ಹೇಗೆ ಸಹಾಯಮಾಡುವುದು?
4 ಎಲ್ಲ ಕ್ರೈಸ್ತರು, ಹಿರಿಯರು ಅಥವಾ ಮೇಲ್ವಿಚಾರಕರಾಗಿರುವುದಿಲ್ಲ ಎಂಬುದು ನಿಜ. ಆದರೂ, ‘ಪ್ರೀತಿಸುತ್ತಿರಲು ಮತ್ತು ಸತ್ಕಾರ್ಯಮಾಡಲು’ ಎಲ್ಲರನ್ನು ಪ್ರೋತ್ಸಾಹಿಸಲಾಗಿದೆ. (ಇಬ್ರಿಯ 10:24, 25) ಕೂಟಗಳಲ್ಲಿ ಹಾಗೆ ಮಾಡುವುದರಲ್ಲಿ, ಇತರರನ್ನು ಭಕ್ತಿವೃದ್ಧಿಪಡಿಸುವ ಮತ್ತು ಪ್ರೋತ್ಸಾಹಿಸುವಂತಹ ರೀತಿಯಲ್ಲಿ ಚೆನ್ನಾಗಿ ತಯಾರಿಸಲ್ಪಟ್ಟ, ಹೃತ್ಪೂರ್ವಕ ಉತ್ತರಗಳನ್ನು ಕೊಡುವುದು ಒಳಗೂಡಿರುತ್ತದೆ. ಅನುಭವಸ್ಥ ರಾಜ್ಯ ಪ್ರಚಾರಕರು, ಹೊಸಬರೊಂದಿಗೆ ಕ್ಷೇತ್ರ ಸೇವೆಯಲ್ಲಿ ಕೆಲಸಮಾಡುತ್ತಿರುವಾಗ ತಮ್ಮ ಜ್ಞಾನ ಮತ್ತು ಅನುಭವವನ್ನು ಹಂಚಿಕೊಳ್ಳುವ ಮೂಲಕವೂ ‘ಸತ್ಕಾರ್ಯಮಾಡಲು ಪ್ರೇರಿಸಬಹುದು.’ ಅಂತಹ ಸಮಯಗಳಲ್ಲಿ ಮತ್ತು ಅನೌಪಚಾರಿಕ ಸಂದರ್ಭಗಳಲ್ಲಿ ಅಮೂಲ್ಯವಾದ ಉಪದೇಶವನ್ನು ಕೊಡಸಾಧ್ಯವಿದೆ. ಉದಾಹರಣೆಗಾಗಿ, ಪ್ರೌಢ ಸ್ತ್ರೀಯರು ‘ಸದ್ಬೋಧನೆ ಹೇಳುವವರೂ ಆಗಿರುವಂತೆ’ ಪ್ರೇರೇಪಿಸಲಾಗಿದೆ.—ತೀತ 2:3.
ನಂಬುವಂತೆ ಮನವೊಪ್ಪಿಸಲ್ಪಟ್ಟಿರುವುದು
5, 6. (ಎ) ನಿಜ ಕ್ರೈಸ್ತಧರ್ಮವು ಸುಳ್ಳಾರಾಧನೆಯಿಂದ ಹೇಗೆ ಭಿನ್ನವಾಗಿದೆ? (ಬಿ) ಹೊಸಬರು ವಿವೇಕಯುಕ್ತ ನಿರ್ಣಯಗಳನ್ನು ಮಾಡುವಂತೆ ಹಿರಿಯರು ಹೇಗೆ ಸಹಾಯಮಾಡುತ್ತಾರೆ?
5 ಈ ರೀತಿಯಲ್ಲಿ ನಿಜ ಕ್ರೈಸ್ತಧರ್ಮವು ಸುಳ್ಳು ಧರ್ಮಗಳಿಂದ ತೀರ ಭಿನ್ನವಾಗಿದೆ. ಆ ಧರ್ಮಗಳು ತಮ್ಮ ಸದಸ್ಯರ ವಿಚಾರಧಾರೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತವೆ. ಯೇಸು ಭೂಮಿಯಲ್ಲಿದ್ದಾಗ, ಧಾರ್ಮಿಕ ಮುಖಂಡರು, ನಿರಂಕುಶ ಮಾನವನಿರ್ಮಿತ ಸಂಪ್ರದಾಯಗಳ ಮೂಲಕ ಜನರ ಜೀವಿತಗಳ ಕಾರ್ಯತಃ ಪ್ರತಿಯೊಂದು ಅಂಶವನ್ನು ನಿಯಂತ್ರಿಸಲು ಪ್ರಯತ್ನಿಸಿದರು. (ಲೂಕ 11:46) ಕ್ರೈಸ್ತಪ್ರಪಂಚದ ಪಾದ್ರಿವರ್ಗವೂ ಅನೇಕವೇಳೆ ಹಾಗೆಯೇ ಮಾಡಿದೆ.
6 ಆದರೆ ಸತ್ಯಾರಾಧನೆಯು, ನಾವು ನಮ್ಮ “ವಿವೇಚಿಸುವ ಸಾಮರ್ಥ್ಯ”ದೊಂದಿಗೆ ಸಲ್ಲಿಸುವ “ಪವಿತ್ರ ಸೇವೆ” ಆಗಿದೆ. (ರೋಮಾಪುರ 12:1, NW) ಯೆಹೋವನ ಸೇವಕರು ‘ನಂಬುವಂತೆ ಮನವೊಪ್ಪಿಸಲ್ಪಟ್ಟಿದ್ದಾರೆ.’ (2 ತಿಮೊಥೆಯ 3:14, NW) ಕೆಲವೊಮ್ಮೆ, ನೇತೃತ್ವ ವಹಿಸುತ್ತಿರುವವರು, ಸಭೆಯು ಸರಾಗವಾಗಿ ಕಾರ್ಯನಡಿಸುವಂತೆ ಕೆಲವೊಂದು ನಿರ್ದೇಶನಗಳನ್ನು ಮತ್ತು ಕಾರ್ಯವಿಧಾನಗಳನ್ನು ಕೈಗೊಳ್ಳಬೇಕಾಗಬಹುದು. ಆದರೆ ಹಿರಿಯರು, ಜೊತೆ ಕ್ರೈಸ್ತರಿಗಾಗಿ ನಿರ್ಣಯಗಳನ್ನು ಮಾಡಲು ಪ್ರಯತ್ನಿಸುವ ಬದಲಿಗೆ, ಅವರಿಗೆ “ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿ”ದುಕೊಳ್ಳಲು ಕಲಿಸುತ್ತಾರೆ. (ಇಬ್ರಿಯ 5:14) ಹಿರಿಯರು ಇದನ್ನು ಮಾಡುವ ಪ್ರಮುಖ ವಿಧವು, ‘ನಂಬಿಕೆಯ ಮತ್ತು ಸುಬೋಧನೆಯ ವಾಕ್ಯ’ಗಳೊಂದಿಗೆ ಸಭೆಯನ್ನು ಪೋಷಿಸುವ ಮೂಲಕವೇ.—1 ತಿಮೊಥೆಯ 4:6.
ನಿಮ್ಮ ಬೋಧನೆಯ ವಿಷಯದಲ್ಲಿ ಎಚ್ಚರವಾಗಿರುವುದು
7, 8. (ಎ) ಸೀಮಿತ ಸಾಮರ್ಥ್ಯಗಳುಳ್ಳ ವ್ಯಕ್ತಿಗಳು ಹೇಗೆ ಶಿಕ್ಷಕರಾಗಿ ಸೇವೆಸಲ್ಲಿಸಲು ಶಕ್ತರಾಗುತ್ತಾರೆ? (ಬಿ) ಒಬ್ಬ ಪರಿಣಾಮಕಾರಿ ಶಿಕ್ಷಕನಾಗಲು ವ್ಯಕ್ತಿಗತವಾದ ಪ್ರಯತ್ನವು ಆವಶ್ಯಕವೆಂದು ಯಾವುದು ಸೂಚಿಸುತ್ತದೆ?
7 ಆದರೆ ಬೋಧಿಸಲು ನಮಗೆಲ್ಲರಿಗೂ ಕೊಡಲ್ಪಟ್ಟಿರುವ ನೇಮಕಕ್ಕೆ ನಾವು ಪುನಃ ಗಮನಕೊಡೋಣ. ಈ ಕೆಲಸವನ್ನು ಮಾಡಲು ನಮಗೆ ಯಾವುದಾದರೂ ವಿಶೇಷವಾದ ಕೌಶಲಗಳು, ಶಿಕ್ಷಣ ಅಥವಾ ಸಾಮರ್ಥ್ಯಗಳಿರಬೇಕೊ? ಇಲ್ಲ. ಈ ಲೋಕವ್ಯಾಪಕ ಬೋಧನಾ ಕೆಲಸದಲ್ಲಿ ಹೆಚ್ಚಿನಾಂಶವನ್ನು, ಸೀಮಿತ ಸಾಮರ್ಥ್ಯಗಳುಳ್ಳ ಸಾಧಾರಣ ವ್ಯಕ್ತಿಗಳು ಮಾಡುತ್ತಿದ್ದಾರೆ. (1 ಕೊರಿಂಥ 1:26-29) ಪೌಲನು ವಿವರಿಸುವುದು: “ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು ತೋರುವದಕ್ಕಾಗಿ ಈ ನಿಕ್ಷೇಪವು [ಶುಶ್ರೂಷೆಯು] ಮಣ್ಣಿನ ಘಟಗಳಲ್ಲಿ [ಅಪರಿಪೂರ್ಣ ದೇಹಗಳು] ನಮಗುಂಟು.” (2 ಕೊರಿಂಥ 4:7) ಭೌಗೋಲಿಕವಾದ ರಾಜ್ಯ ಸಾರುವಿಕೆಯ ಕೆಲಸದಲ್ಲಿನ ಪ್ರಚಂಡ ಯಶಸ್ಸು, ಯೆಹೋವನ ಪವಿತ್ರಾತ್ಮದ ಶಕ್ತಿಗೆ ಒಂದು ಸಾಕ್ಷ್ಯವಾಗಿದೆ!
8 “ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ” ಆಗುವಂತೆ, ಪ್ರಾಮಾಣಿಕ ವ್ಯಕ್ತಿಗತವಾದ ಪ್ರಯತ್ನವು ಆವಶ್ಯಕ. (2 ತಿಮೊಥೆಯ 2:15) ಪೌಲನು ತಿಮೊಥೆಯನಿಗೆ ಉತ್ತೇಜಿಸಿದ್ದು: “ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ [“ಬೋಧನೆಯ,” NW] ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.” (1 ತಿಮೊಥೆಯ 4:16) ಒಬ್ಬ ವ್ಯಕ್ತಿಯು ಸಭೆಯೊಳಗೆ ಇಲ್ಲವೇ ಹೊರಗೆ ಕಲಿಸುತ್ತಿರುವಾಗ ಹೇಗೆ ಎಚ್ಚರಿಕೆಯಿಂದಿರಬಲ್ಲನು? ಹಾಗೆ ಮಾಡಲು ನಿರ್ದಿಷ್ಟವಾದ ಕೌಶಲಗಳು ಅಥವಾ ಬೋಧಿಸುವ ವಿಧಾನಗಳಲ್ಲಿ ನಿಪುಣರಾಗಿರುವುದು ಅಗತ್ಯವೋ?
9. ಸ್ವಾಭಾವಿಕ ಸಾಮರ್ಥ್ಯಗಳಿಗಿಂತಲೂ ಯಾವುದು ಹೆಚ್ಚು ಪ್ರಾಮುಖ್ಯವಾಗಿದೆ?
9 ಯೇಸು ತನ್ನ ಪ್ರಸಿದ್ಧ ಪರ್ವತ ಪ್ರಸಂಗದಲ್ಲಿ, ಬೋಧಿಸುವ ವಿಧಾನಗಳ ಕುರಿತು ತನಗಿದ್ದ ಅಸಾಮಾನ್ಯವಾದ ಜ್ಞಾನವನ್ನು ಪ್ರದರ್ಶಿಸಿದನು. ಅವನು ಮಾತಾಡಿ ಮುಗಿಸಿದ ಬಳಿಕ “ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟವು.” (ಮತ್ತಾಯ 7:28) ಯೇಸು ಕಲಿಸಿದಷ್ಟು ಉತ್ತಮವಾಗಿ ನಮ್ಮಲ್ಲಿ ಯಾರೂ ಕಲಿಸಲಾರೆವೆಂಬದಂತೂ ನಿಜ. ಆದರೆ ಪರಿಣಾಮಕಾರಿ ಶಿಕ್ಷಕರಾಗಿರಲು ನಾವು ವಾಕ್ಚಾತುರ್ಯವುಳ್ಳ ಭಾಷಣಕಾರರಾಗಿರುವ ಅಗತ್ಯವಿಲ್ಲ. ಯೋಬ 12:7ಕ್ಕನುಸಾರ, “ಮೃಗ”ಗಳು ಮತ್ತು ‘ಪಕ್ಷಿಗಳು’ ಸಹ ಮೌನವಾಗಿ ಕಲಿಸಬಲ್ಲವು! ನಮಗಿರಬಹುದಾದ ಯಾವುದೇ ಸ್ವಾಭಾವಿಕ ಸಾಮರ್ಥ್ಯಗಳು ಅಥವಾ ಕೌಶಲಗಳೊಂದಿಗೆ, ನಾವು “ಯಾವ ವಿಧದ ವ್ಯಕ್ತಿ”ಗಳಾಗಿದ್ದೇವೊ ಅಂದರೆ, ವಿದ್ಯಾರ್ಥಿಗಳು ಅನುಕರಿಸಬಹುದಾದ ಯಾವ ಗುಣಗಳು ಮತ್ತು ಯಾವ ಆತ್ಮಿಕ ರೂಢಿಗಳನ್ನು ನಾವು ಬೆಳೆಸಿಕೊಂಡಿದ್ದೇವೊ ಅವು ವಿಶೇಷವಾಗಿ ಪ್ರಾಮುಖ್ಯವಾಗಿವೆ.—2 ಪೇತ್ರ 3:11; ಲೂಕ 6:40.
ದೇವರ ವಾಕ್ಯದ ವಿದ್ಯಾರ್ಥಿಗಳು
10. ದೇವರ ವಾಕ್ಯದ ವಿದ್ಯಾರ್ಥಿಯೋಪಾದಿ ಯೇಸು ಯಾವ ಉತ್ತಮ ಮಾದರಿಯನ್ನಿಟ್ಟನು?
10 ಶಾಸ್ತ್ರೀಯ ಸತ್ಯಗಳನ್ನು ಪರಿಣಾಮಕಾರಿಯಾಗಿ ಕಲಿಸುವವನು ಸ್ವತಃ ದೇವರ ವಾಕ್ಯದ ಒಬ್ಬ ವಿದ್ಯಾರ್ಥಿಯಾಗಿರತಕ್ಕದ್ದು. (ರೋಮಾಪುರ 2:21) ಈ ವಿಷಯದಲ್ಲಿ ಯೇಸು ಕ್ರಿಸ್ತನು ಒಂದು ಅಸಾಧಾರಣವಾದ ಮಾದರಿಯನ್ನಿಟ್ಟನು. ಯೇಸು ತನ್ನ ಶುಶ್ರೂಷೆಯ ಸಮಯದಲ್ಲಿ, ಹೀಬ್ರೂ ಶಾಸ್ತ್ರಗಳಲ್ಲಿನ ಸುಮಾರು ಅರ್ಧ ಪುಸ್ತಕಗಳಲ್ಲಿರುವ ವಿಚಾರಗಳಿಗೆ ಸೂಚಿಸಿದನು ಇಲ್ಲವೇ ಅವುಗಳನ್ನು ವ್ಯಕ್ತಪಡಿಸಿದನು.a ತನ್ನ 12ನೆಯ ವಯಸ್ಸಿನಲ್ಲಿ ಅವನು “ಬೋಧಕರ ನಡುವೆ ಕುಳಿತುಕೊಂಡು ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆ ಮಾಡುತ್ತಾ” ಇದ್ದಾಗ, ದೇವರ ವಾಕ್ಯದೊಂದಿಗೆ ಅವನು ಎಷ್ಟು ಚೆನ್ನಾಗಿ ಪರಿಚಿತನಾಗಿದ್ದನೆಂಬುದು ತೋರಿಬಂತು. (ಲೂಕ 2:46) ಒಬ್ಬ ವಯಸ್ಕನಾಗಿದ್ದಾಗ, ದೇವರ ವಾಕ್ಯವನ್ನು ಎಲ್ಲಿ ಓದಲಾಗುತ್ತಿತ್ತೊ ಆ ಸಭಾಮಂದಿರಕ್ಕೆ ಹೋಗುವುದು ಯೇಸುವಿನ ರೂಢಿಯಾಗಿತ್ತು.—ಲೂಕ 4:16.
11. ಒಬ್ಬ ಶಿಕ್ಷಕನು ಯಾವ ಒಳ್ಳೇ ಅಭ್ಯಾಸದ ರೂಢಿಗಳನ್ನು ಬೆಳೆಸಿಕೊಳ್ಳಬೇಕು?
11 ನೀವು ದೇವರ ವಾಕ್ಯದ ಹುರುಪಿನ ವಾಚಕರಾಗಿದ್ದೀರೊ? ಅದರಲ್ಲಿ ಅನ್ವೇಷಣೆ ಮಾಡುವುದು, ನೀವು “ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳು”ವ ಮಾಧ್ಯಮವಾಗಿದೆ. (ಜ್ಞಾನೋಕ್ತಿ 2:4, 5) ಆದುದರಿಂದ ಒಳ್ಳೆಯ ಅಭ್ಯಾಸದ ರೂಢಿಗಳನ್ನು ಬೆಳೆಸಿರಿ. ದೇವರ ವಾಕ್ಯದ ಒಂದು ಭಾಗವನ್ನು ಪ್ರತಿ ದಿನ ಓದಲು ಪ್ರಯತ್ನಿಸಿರಿ. (ಕೀರ್ತನೆ 1:2) ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತಿಯೊಂದು ಸಂಚಿಕೆಯನ್ನು ಪಡೆದ ಕೂಡಲೇ ಅದನ್ನು ಓದುವ ರೂಢಿಯನ್ನು ಮಾಡಿಕೊಳ್ಳಿ. ಸಭಾ ಕೂಟಗಳಲ್ಲಿ ನಿಕಟವಾದ ಗಮನವನ್ನು ಕೊಡಿರಿ. ಜಾಗರೂಕತೆಯಿಂದ ಸಂಶೋಧನೆಯನ್ನು ಮಾಡಲು ಕಲಿತುಕೊಳ್ಳಿರಿ. “ಎಲ್ಲವನ್ನೂ ಚೆನ್ನಾಗಿ ವಿಚಾರಿಸಿ” ನೋಡಲು ಕಲಿತುಕೊಳ್ಳುವ ಮೂಲಕ, ನೀವು ಕಲಿಸುವಾಗ ಯಾವುದೇ ಅತಿಶಯೋಕ್ತಿಗಳನ್ನು ಮತ್ತು ತಪ್ಪಾದ ವಿಷಯಗಳನ್ನು ಹೇಳುವುದರಿಂದ ದೂರವಿರಬಲ್ಲಿರಿ.—ಲೂಕ 1:3.
ಯಾರಿಗೆ ಕಲಿಸುತ್ತೀರೊ ಅವರಿಗಾಗಿ ಪ್ರೀತಿಗೌರವ
12. ಯೇಸುವಿಗೆ ತನ್ನ ಶಿಷ್ಯರ ಕಡೆಗೆ ಯಾವ ಮನೋಭಾವವಿತ್ತು?
12 ಇನ್ನೊಂದು ಪ್ರಾಮುಖ್ಯ ಗುಣವು, ನೀವು ಯಾರಿಗೆ ಕಲಿಸುತ್ತಿದ್ದೀರೊ ಅವರ ಕಡೆಗೆ ಯೋಗ್ಯವಾದ ಮನೋಭಾವವನ್ನು ಹೊಂದಿರುವುದೇ ಆಗಿದೆ. ಯೇಸುವಿಗೆ ಕಿವಿಗೊಟ್ಟವರನ್ನು ಫರಿಸಾಯರು ತಾತ್ಸಾರದಿಂದ ನೋಡಿದರು. “ಧರ್ಮಶಾಸ್ತ್ರವನ್ನರಿಯದಂಥ ಈ ಹಿಂಡು ಶಾಪಗ್ರಸ್ತವಾದದ್ದೇ” ಎಂದು ಅವರು ಹೇಳಿದರು. (ಯೋಹಾನ 7:49) ಆದರೆ ಯೇಸು ತನ್ನ ಶಿಷ್ಯರನ್ನು ಪ್ರೀತಿಸಿ ಗೌರವಿಸಿದನು. ಅವನಂದದ್ದು: “ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳನ್ನುವದಿಲ್ಲ; ಯಜಮಾನನು ಮಾಡುವಂಥದು ಆಳಿಗೆ ತಿಳಿಯುವದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಹೇಳಿದ್ದೇನೆ; ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ.” (ಯೋಹಾನ 15:15) ಯೇಸುವಿನ ಶಿಷ್ಯರು ತಮ್ಮ ಕಲಿಸುವ ಚಟುವಟಿಕೆಯನ್ನು ಯಾವ ರೀತಿಯಲ್ಲಿ ನಿರ್ವಹಿಸಬೇಕೆಂಬದನ್ನು ಇದು ಸೂಚಿಸಿತು.
13. ತಾನು ಯಾರಿಗೆ ಕಲಿಸಿದನೊ ಅವರ ಕುರಿತಾಗಿ ಪೌಲನಿಗೆ ಹೇಗನಿಸಿತು?
13 ಉದಾಹರಣೆಗೆ, ಪೌಲನು ತನ್ನ ವಿದ್ಯಾರ್ಥಿಗಳೊಂದಿಗೆ ಭಾವಶೂನ್ಯ, ವ್ಯಾಪಾರೀ ಮನೋಭಾವದಂತಹ ಸಂಬಂಧವನ್ನಿಟ್ಟುಕೊಳ್ಳಲಿಲ್ಲ. ಅವನು ಕೊರಿಂಥದವರಿಗೆ ಹೇಳಿದ್ದು: “ನಿಮಗೆ ಕ್ರಿಸ್ತನಲ್ಲಿ ಉಪಾಧ್ಯಾಯರು ಸಾವಿರಾರು ಮಂದಿ ಇದ್ದರೂ ತಂದೆಗಳು ಬಹುಮಂದಿ ಇಲ್ಲ; ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಪಡೆದೆನು.” (1 ಕೊರಿಂಥ 4:15) ಕೆಲವೊಮ್ಮೆ, ಪೌಲನು ಯಾರಿಗೆ ಕಲಿಸುತ್ತಿದ್ದನೊ ಅವರಿಗೆ ಬುದ್ಧಿಹೇಳುತ್ತಿದ್ದಾಗ, ಕಣ್ಣೀರನ್ನೂ ಸುರಿಸಿದನು! (ಅ. ಕೃತ್ಯಗಳು 20:31) ಅವನು ಅಸಾಧಾರಣವಾದ ತಾಳ್ಮೆ ಮತ್ತು ದಯೆಯನ್ನೂ ತೋರಿಸಿದನು. ಆದುದರಿಂದ ಅವನು ಥೆಸಲೊನೀಕದವರಿಗೆ ಹೀಗೆ ಹೇಳಸಾಧ್ಯವಿತ್ತು: “ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡಕೊಂಡಿದ್ದೆವು.”—1 ಥೆಸಲೊನೀಕ 2:7.
14. ನಮ್ಮ ಬೈಬಲ್ ವಿದ್ಯಾರ್ಥಿಗಳಲ್ಲಿ ವ್ಯಕ್ತಿಗತವಾದ ಆಸಕ್ತಿಯನ್ನು ತೋರಿಸುವುದು ತುಂಬ ಪ್ರಾಮುಖ್ಯವೇಕೆ? ದೃಷ್ಟಾಂತಿಸಿರಿ.
14 ನೀವು ಯೇಸು ಮತ್ತು ಪೌಲರನ್ನು ಅನುಕರಿಸುತ್ತೀರೊ? ನಮಗೆ ಸ್ವಾಭಾವಿಕ ಸಾಮರ್ಥ್ಯಗಳ ಕೊರತೆಯಿರುವುದಾದರೂ, ನಮ್ಮ ವಿದ್ಯಾರ್ಥಿಗಳಿಗಾಗಿರುವ ನಿಜವಾದ ಪ್ರೀತಿಯು ಆ ಕೊರತೆಯನ್ನು ನೀಗಿಸುವುದು. ನಮ್ಮ ಬೈಬಲ್ ವಿದ್ಯಾರ್ಥಿಗಳಿಗೆ, ನಮಗೆ ಅವರಲ್ಲಿ ವ್ಯಕ್ತಿಗತವಾದ ನಿಜ ಆಸಕ್ತಿಯಿದೆಯೆಂದು ಅನಿಸುತ್ತದೊ? ಅವರೊಂದಿಗೆ ಪರಿಚಿತರಾಗಲು ನಾವು ಸಮಯವನ್ನು ತೆಗೆದುಕೊಳ್ಳುತ್ತೇವೊ? ಒಬ್ಬ ಕ್ರೈಸ್ತ ಮಹಿಳೆಯು ತನ್ನ ವಿದ್ಯಾರ್ಥಿಯು ಆತ್ಮಿಕವಾಗಿ ಪ್ರಗತಿಮಾಡದಿರುವುದನ್ನು ಗಮನಿಸಿದಾಗ, ಅವಳು ದಯೆಯಿಂದ ಕೇಳಿದ್ದು: “ನಿನಗೆ ಯಾವುದಾದರೂ ಚಿಂತೆ ಕಾಡಿಸುತ್ತಿದೆಯೊ?” ಆಗ ಆ ಸ್ತ್ರೀಯು ತನಗಿದ್ದ ಅಸಂಖ್ಯಾತ ಚಿಂತೆ ಮತ್ತು ವ್ಯಾಕುಲತೆಗಳ ಕುರಿತು ತಿಳಿಸುತ್ತಾ, ತನ್ನ ಅಂತರಂಗವನ್ನು ಬಿಚ್ಚಿ ಮಾತಾಡಿದಳು. ಆ ಪ್ರೀತಿಪರ ಸಂಭಾಷಣೆಯು ಆ ಸ್ತ್ರೀಗೆ ಒಂದು ತಿರುಗುಬಿಂದು ಆಗಿತ್ತು. ಅಂತಹ ವಿದ್ಯಮಾನಗಳಲ್ಲಿ ಶಾಸ್ತ್ರೀಯ ವಿಚಾರಗಳು ಮತ್ತು ಸಾಂತ್ವನ ಹಾಗೂ ಪ್ರೋತ್ಸಾಹನೆಯ ಮಾತುಗಳು ಸೂಕ್ತವಾಗಿವೆ. (ರೋಮಾಪುರ 15:4) ಆದರೆ ಒಂದು ಎಚ್ಚರಿಕೆಯ ಮಾತು: ಒಬ್ಬ ಬೈಬಲ್ ವಿದ್ಯಾರ್ಥಿಯು ವೇಗವಾಗಿ ಪ್ರಗತಿಮಾಡುತ್ತಿರಬಹುದಾದರೂ, ಅವನು ಇನ್ನೂ ತ್ಯಜಿಸಬೇಕಾದ ಕೆಲವೊಂದು ಅಕ್ರೈಸ್ತ ರೀತಿನೀತಿಗಳು ಅವನಲ್ಲಿರಬಹುದು. ಆದುದರಿಂದ ಆ ವ್ಯಕ್ತಿಯೊಂದಿಗೆ ಅನಾವಶ್ಯಕವಾಗಿ ತೀರ ಹೆಚ್ಚು ನಿಕಟವಾಗಿರುವುದು ವಿವೇಕಯುತವಲ್ಲ. ಯೋಗ್ಯವಾದ ಕ್ರೈಸ್ತ ಮೇರೆಗಳು ಇಡಲ್ಪಡಬೇಕು.—1 ಕೊರಿಂಥ 15:33.
15. ನಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ನಾವು ಹೇಗೆ ಗೌರವವನ್ನು ತೋರಿಸಬಹುದು?
15 ನಮ್ಮ ವಿದ್ಯಾರ್ಥಿಗಳ ವೈಯಕ್ತಿಕ ಜೀವನಗಳನ್ನು ನಿಯಂತ್ರಿಸಲು ಪ್ರಯತ್ನಿಸದಿರುವ ಮೂಲಕವೂ ನಾವು ಅವರಿಗೆ ಗೌರವವನ್ನು ತೋರಿಸಬಹುದು. (1 ಥೆಸಲೊನೀಕ 4:11) ಉದಾಹರಣೆಗೆ, ವಿವಾಹವಾಗದೆ ಒಬ್ಬ ಪುರುಷನೊಂದಿಗೆ ವಾಸಿಸುತ್ತಿರುವ ಒಬ್ಬ ಸ್ತ್ರೀಯೊಂದಿಗೆ ನಾವು ಅಭ್ಯಾಸವನ್ನು ಮಾಡುತ್ತಿರಬಹುದು. ಅವರಿಗೆ ಮಕ್ಕಳೂ ಇರಬಹುದು. ದೇವರ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡಾಗ, ಆ ಸ್ತ್ರೀಯು ಯೆಹೋವನ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸಲು ಬದಲಾವಣೆಗಳನ್ನು ಮಾಡಲು ಬಯಸಬಹುದು. (ಇಬ್ರಿಯ 13:4) ಅವಳು ಆ ಪುರುಷನನ್ನು ಮದುವೆಯಾಗಬೇಕೊ ಅಥವಾ ಅವನಿಂದ ಪ್ರತ್ಯೇಕಳಾಗಬೇಕೊ? ಯಾವುದೇ ಆತ್ಮಿಕ ಅಭಿರುಚಿಯಿಲ್ಲದ ಪುರುಷನನ್ನು ಮದುವೆಯಾಗುವುದು, ಅವಳ ಮುಂದಿನ ಪ್ರಗತಿಗೆ ಅಡ್ಡಿಯಾಗಬಲ್ಲದೆಂದು ಪ್ರಾಯಶಃ ನಮಗೆ ತುಂಬ ಬಲವಾಗಿ ಅನಿಸುತ್ತದೆ. ಇನ್ನೊಂದು ಕಡೆ, ನಾವು ಅವಳ ಮಕ್ಕಳ ಯೋಗಕ್ಷೇಮದ ಕುರಿತು ಚಿಂತಿತರಾಗಿ, ಅವಳು ಆ ಪುರುಷನನ್ನೇ ಮದುವೆಯಾದರೆ ಒಳ್ಳೇದು ಎಂದು ನೆನಸಬಹುದು. ಏನೇ ಆಗಲಿ, ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ಮಧ್ಯೆಪ್ರವೇಶಿಸಿ, ಅಂತಹ ವಿಷಯಗಳಲ್ಲಿ ನಮ್ಮ ಸ್ವಂತ ಅಭಿಪ್ರಾಯಗಳನ್ನು ಅವರ ಮೇಲೆ ಹೇರುವುದು, ಅಗೌರವಪೂರ್ವಕವೂ ಪ್ರೀತಿರಹಿತವೂ ಆಗಿದೆ. ಎಷ್ಟೆಂದರೂ, ಆ ನಿರ್ಣಯದ ಫಲಿತಾಂಶಗಳನ್ನು ಅನುಭವಿಸುವವಳು ಅವಳೇ ಆಗಿದ್ದಾಳೆ. ಆದುದರಿಂದ, ಅಂತಹ ಒಬ್ಬ ವಿದ್ಯಾರ್ಥಿಯು ತನ್ನ ಸ್ವಂತ “ಜ್ಞಾನೇಂದ್ರಿಯಗಳನ್ನು” ಉಪಯೋಗಿಸುವಂತೆ ಮತ್ತು ತಾನು ಏನು ಮಾಡಬೇಕೆಂಬುದನ್ನು ಸ್ವತಃ ನಿರ್ಣಯಿಸಲು ಆಕೆಯನ್ನು ತರಬೇತಿಗೊಳಿಸುವುದು ಅತ್ಯುತ್ತಮವಲ್ಲವೊ?—ಇಬ್ರಿಯ 5:14.
16. ದೇವರ ಮಂದೆಗೆ ಹಿರಿಯರು ಪ್ರೀತಿ ಮತ್ತು ಗೌರವವನ್ನು ಹೇಗೆ ತೋರಿಸಸಾಧ್ಯವಿದೆ?
16 ಸಭಾ ಹಿರಿಯರು, ಮಂದೆಯನ್ನು ಪ್ರೀತಿ ಮತ್ತು ಗೌರವದಿಂದ ಉಪಚರಿಸುವುದು ತುಂಬ ಪ್ರಾಮುಖ್ಯ. ಫಿಲೆಮೋನನಿಗೆ ಬರೆಯುವಾಗ, ಪೌಲನು ಹೇಳಿದ್ದು: “ನಿನಗೆ ಯುಕ್ತವಾದದ್ದನ್ನು ಆಜ್ಞಾಪಿಸುವದಕ್ಕೆ ನನಗೆ ಕ್ರಿಸ್ತನಲ್ಲಿ ಪೂರಾ ಅಧಿಕಾರವಿದ್ದರೂ ಹಾಗೆ ಆಜ್ಞಾಪಿಸದೆ . . . ನಾನು ಪ್ರೀತಿಯ ನಿಮ್ಮಿತ್ತ ನಿನ್ನನ್ನು ಬೇಡಿಕೊಳ್ಳುತ್ತೇನೆ.” (ಫಿಲೆಮೋನ 8, 9) ಕೆಲವೊಮ್ಮೆ ಸಭೆಯಲ್ಲಿ ನಿರಾಶೆಗೊಳಿಸುವಂತಹ ಪರಿಸ್ಥಿತಿಗಳು ಏಳಬಹುದು. ದೃಢರಾಗಿರುವುದು ಸಹ ಆವಶ್ಯಕವಾಗಿರಬಹುದು. “ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ [ತಪ್ಪು ಮಾಡುವವರನ್ನು] ಕಠಿಣವಾಗಿ ಖಂಡಿಸು”ವಂತೆ ಪೌಲನು ತೀತನನ್ನು ಪ್ರೇರೇಪಿಸಿದನು. (ತೀತ 1:13) ಆದರೂ, ಸಭೆಯೊಂದಿಗೆ ಎಂದಿಗೂ ಕಠೋರವಾಗಿ ಮಾತಾಡದಂತೆ ಮೇಲ್ವಿಚಾರಕರು ಜಾಗರೂಕರಾಗಿರಬೇಕು. “ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವುದರಲ್ಲಿ ಪ್ರವೀಣನೂ ಕೇಡನ್ನು ಸಹಿಸಿಕೊಳ್ಳುವವನೂ” ಆಗಿರಬೇಕೆಂದು ಪೌಲನು ಬರೆದನು.—2 ತಿಮೊಥೆಯ 2:24; ಕೀರ್ತನೆ 141:3.
17. ಮೋಶೆಯು ಯಾವ ತಪ್ಪನ್ನು ಮಾಡಿದನು, ಮತ್ತು ಹಿರಿಯರು ಅದರಿಂದ ಯಾವ ಪಾಠವನ್ನು ಕಲಿಯಬಹುದು?
17 ತಾವು “ದೇವರ ಮಂದೆ”ಯೊಂದಿಗೆ ವ್ಯವಹರಿಸುತ್ತಿದ್ದೇವೆ ಎಂಬುದನ್ನು ಮೇಲ್ವಿಚಾರಕರು ಸ್ವತಃ ಯಾವಾಗಲೂ ಜ್ಞಾಪಕದಲ್ಲಿಡಬೇಕು. (1 ಪೇತ್ರ 5:2, ಓರೆಅಕ್ಷರಗಳು ನಮ್ಮವು.) ಮೋಶೆಯು ಒಬ್ಬ ನಮ್ರ ವ್ಯಕ್ತಿಯಾಗಿದ್ದರೂ, ಒಂದು ಸಮಯದಲ್ಲಿ ಆ ವಿಷಯವನ್ನು ಮರೆತುಬಿಟ್ಟನು. ಇಸ್ರಾಯೇಲ್ಯರು “[“ಅವನಿಗೆ,” NW] ವಿರೋಧವಾಗಿ ನಿಂತಿದ್ದರಿಂದ ಮೋಶೆ ದುಡುಕಿ ಮಾತಾಡಿದನು.” (ಕೀರ್ತನೆ 106:33) ತನ್ನ ಮಂದೆಯು ನಿರ್ದೋಷಿಯಾಗಿರದಿದ್ದರೂ, ಅವರೊಂದಿಗಿನ ಈ ದುರುಪಚಾರದಿಂದಾಗಿ ದೇವರು ತುಂಬ ಅಸಂತುಷ್ಟಗೊಂಡನು. (ಅರಣ್ಯಕಾಂಡ 20:2-12) ಇಂದು ತದ್ರೀತಿಯ ಪಂಥಾಹ್ವಾನಗಳನ್ನು ಎದುರಿಸುತ್ತಿರುವಾಗ, ಹಿರಿಯರು ಒಳನೋಟ ಮತ್ತು ದಯೆಯಿಂದ ಕಲಿಸಲು ಮತ್ತು ಉಪದೇಶಿಸಲು ಶ್ರಮಿಸಬೇಕು. ನಮ್ಮ ಸಹೋದರರನ್ನು, ಸುಧಾರಿಸಲಾಗದವರನ್ನಾಗಿ ಅಲ್ಲ, ಬದಲಾಗಿ ಅವರನ್ನು ಪರಿಗಣನೆಯೊಂದಿಗೆ ಮತ್ತು ಸಹಾಯದ ಅಗತ್ಯವಿರುವ ವ್ಯಕ್ತಿಗಳೋಪಾದಿ ಉಪಚರಿಸುವಾಗಲೇ ಅವರು ಉತ್ತಮ ಪ್ರತಿಕ್ರಿಯೆಯನ್ನು ತೋರಿಸುತ್ತಾರೆ. “ನಾವು ಆಜ್ಞಾಪಿಸುವ ಪ್ರಕಾರ ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು” ಎಂದು ಪೌಲನು ಹೇಳಿದಾಗ ಅವನಿಗಿದ್ದ ಸಕಾರಾತ್ಮಕವಾದ ದೃಷ್ಟಿಕೋನವೇ ಹಿರಿಯರಿಗಿರಬೇಕು.—2 ಥೆಸಲೊನೀಕ 3:4.
ಅವರ ಅಗತ್ಯಗಳಿಗೆ ಪ್ರತಿಕ್ರಿಯೆಯನ್ನು ತೋರಿಸುವುದು
18, 19. (ಎ) ಸೀಮಿತ ಸಾಮರ್ಥ್ಯಗಳುಳ್ಳ ಬೈಬಲ್ ವಿದ್ಯಾರ್ಥಿಗಳ ಅಗತ್ಯಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು? (ಬಿ) ನಿರ್ದಿಷ್ಟ ಸಂಗತಿಗಳೊಂದಿಗೆ ತೊಂದರೆಯಿರುವ ವಿದ್ಯಾರ್ಥಿಗಳಿಗೆ ನಾವು ಹೇಗೆ ಸಹಾಯಮಾಡಬಹುದು?
18 ಒಬ್ಬ ಪರಿಣಾಮಕಾರಿ ಶಿಕ್ಷಕನು, ತನ್ನ ವಿದ್ಯಾರ್ಥಿಗಳ ಸಾಮರ್ಥ್ಯಗಳು ಮತ್ತು ಇತಿಮಿತಿಗಳಿಗನುಸಾರವಾಗಿ ಹೊಂದಿಕೊಳ್ಳಲು ಸಿದ್ಧನಾಗಿರುತ್ತಾನೆ. (ಯೋಹಾನ 16:12ನ್ನು ಹೋಲಿಸಿ.) ತಲಾಂತುಗಳ ಕುರಿತಾದ ಯೇಸುವಿನ ದೃಷ್ಟಾಂತದಲ್ಲಿ, ಧಣಿಯು ಸುಯೋಗಗಳನ್ನು ‘ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟನು.’ (ಮತ್ತಾಯ 25:15) ಬೈಬಲ್ ಅಭ್ಯಾಸಗಳನ್ನು ನಡೆಸುವಾಗ ನಾವು ಅಂತಹದ್ದೇ ನಮೂನೆಯನ್ನು ಅನುಸರಿಸಸಾಧ್ಯವಿದೆ. ಒಂದು ಬೈಬಲ್ ಆಧಾರಿತ ಪ್ರಕಾಶನವನ್ನು ಸಮಂಜಸವಾಗಿ ಸ್ವಲ್ಪ ಸಮಯಾವಧಿಯೊಳಗೆ ಮಾಡಿಮುಗಿಸಲು ಅಪೇಕ್ಷಿಸುವುದು ಸಹಜವಾದ ಸಂಗತಿ. ಆದರೆ, ಎಲ್ಲರಿಗೆ ಚೆನ್ನಾಗಿ ಓದುವ ಕೌಶಲವು ಅಥವಾ ಹೊಸ ವಿಚಾರಗಳನ್ನು ಬೇಗನೆ ಗ್ರಹಿಸಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ ಎಂಬುದು ಒಪ್ಪಬೇಕಾದ ಸಂಗತಿಯಾಗಿದೆ. ಆದುದರಿಂದ, ಅಭ್ಯಾಸವನ್ನು ವೇಗವಾಗಿ ನಡೆಸುವಾಗ ಬೈಬಲ್ ವಿದ್ಯಾರ್ಥಿಗಳಿಗೆ ಜೊತೆಜೊತೆಯಾಗಿ ಹೆಜ್ಜೆಹಾಕಲು ಕಷ್ಟವಾಗುವುದಾದರೆ, ಅಭ್ಯಾಸದಲ್ಲಿ ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಯಾವಾಗ ಮುಂದುವರಿಯಬೇಕೆಂಬುದನ್ನು ನಿರ್ಧರಿಸಲು ವಿವೇಚನಾಶಕ್ತಿಯು ಅಗತ್ಯ. ನಿರ್ಧರಿತ ಗತಿಯಲ್ಲಿ ಮಾಹಿತಿಯನ್ನು ಆವರಿಸುವುದಕ್ಕಿಂತಲೂ, ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ವಿಷಯವನ್ನು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡುವುದೇ ಹೆಚ್ಚು ಪ್ರಾಮುಖ್ಯವಾದ ಸಂಗತಿಯಾಗಿದೆ.—ಮತ್ತಾಯ 13:51.
19 ತ್ರಯೈಕ್ಯ ಅಥವಾ ಧಾರ್ಮಿಕ ಹಬ್ಬಗಳಂತಹ ನಿರ್ದಿಷ್ಟ ವಿಷಯಗಳ ಕುರಿತು ತೊಂದರೆಯಿರುವ ಬೈಬಲ್ ವಿದ್ಯಾರ್ಥಿಗಳ ಕುರಿತಾಗಿಯೂ ಅದನ್ನೇ ಹೇಳಸಾಧ್ಯವಿದೆ. ನಮ್ಮ ಅಭ್ಯಾಸಗಳಲ್ಲಿ ಬೈಬಲ್ ಆಧಾರಿತ ಸಂಶೋಧನೆಯ ವಿಷಯವನ್ನು ಸೇರಿಸುವುದು ಸಾಮಾನ್ಯವಾಗಿ ಅನಾವಶ್ಯಕ. ಆದರೆ ಅದು ಉಪಯುಕ್ತವಾಗಿರುವಲ್ಲಿ, ಅದನ್ನು ಆಗಾಗ್ಗೆ ಮಾಡಬಹುದು. ಒಬ್ಬ ವಿದ್ಯಾರ್ಥಿಯ ಪ್ರಗತಿಯನ್ನು ಅನಾವಶ್ಯಕವಾಗಿ ನಿಧಾನಗೊಳಿಸುವುದನ್ನು ತಡೆಗಟ್ಟಲು ಉಚಿತ ಪರಿಜ್ಞಾನವನ್ನು ಉಪಯೋಗಿಸಬೇಕು.
ಉತ್ಸುಕರಾಗಿರಿ!
20. ಪೌಲನು ತನ್ನ ಬೋಧನೆಯಲ್ಲಿ ಉತ್ಸಾಹ ಮತ್ತು ನಿಶ್ಚಿತಾಭಿಪ್ರಾಯವನ್ನು ತೋರಿಸುವುದರಲ್ಲಿ ಹೇಗೆ ಮಾದರಿಯನ್ನಿಟ್ಟನು?
20 ‘ಆಸಕ್ತಚಿತ್ತರಾಗಿರಿ,’ ಎಂದು ಪೌಲನು ಹೇಳುತ್ತಾನೆ. (ರೋಮಾಪುರ 12:11) ನಾವು ಒಂದು ಮನೆ ಬೈಬಲ್ ಅಭ್ಯಾಸವನ್ನು ನಡೆಸುತ್ತಿರಲಿ ಅಥವಾ ಒಂದು ಸಭಾ ಕೂಟದಲ್ಲಿ ಭಾಗವಹಿಸುತ್ತಿರಲಿ, ನಾವದನ್ನು ಹುರುಪು ಮತ್ತು ಉತ್ಸಾಹದಿಂದ ಮಾಡತಕ್ಕದ್ದು. ಪೌಲನು ಥೆಸಲೊನೀಕದವರಿಗೆ ಹೇಳಿದ್ದು: “ನಾವು ಸಾರಿದ ಸುವಾರ್ತೆಯು ನಿಮ್ಮಲ್ಲಿ ಬರೀ ಮಾತಾಗಿ ಬಾರದೆ ಶಕ್ತಿಯೊಡನೆಯೂ ಪವಿತ್ರಾತ್ಮದೊಡನೆಯೂ ಬಹು ನಿಶ್ಚಯದೊಡನೆಯೂ ಬಂತೆಂಬದನ್ನೂ ಬಲ್ಲೆವು.” (1 ಥೆಸಲೊನೀಕ 1:5) ಈ ರೀತಿಯಲ್ಲಿ ಪೌಲನು ಮತ್ತು ಅವನ ಸಂಗಡಿಗರು, ‘ಸುವಾರ್ತೆಯನ್ನು ಮಾತ್ರವಲ್ಲದೆ [ತಮ್ಮ] ಪ್ರಾಣವನ್ನೇ ಕೊಟ್ಟರು.’—1 ಥೆಸಲೊನೀಕ 2:8.
21. ನಮ್ಮ ಬೋಧಿಸುವ ನೇಮಕಗಳ ಕಡೆಗೆ ನಾವು ಒಂದು ಉತ್ಸಾಹಭರಿತ ಮನೋಭಾವವನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ?
21 ನಮ್ಮ ಬೈಬಲ್ ವಿದ್ಯಾರ್ಥಿಗಳು ನಾವು ಕಲಿಸುತ್ತಿರುವ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕೆಂಬ ದೃಢನಂಬಿಕೆ ನಮಗಿರುವಲ್ಲಿ, ಅದರಿಂದ ನಿಜವಾದ ಉತ್ಸಾಹವು ಹೊರಹೊಮ್ಮುವುದು. ನಾವು ಯಾವುದೇ ಕಲಿಸುವ ನೇಮಕವನ್ನು ಒಂದು ಯಾಂತ್ರಿಕ ಕೆಲಸದೋಪಾದಿ ವೀಕ್ಷಿಸದಿರೋಣ. ಶಾಸ್ತ್ರಿಯಾದ ಎಜ್ರನು ಈ ವಿಷಯದಲ್ಲಿ ತನ್ನ ಬೋಧನೆಗೆ ನಿಶ್ಚಯವಾಗಿಯೂ ಗಮನವನ್ನು ಕೊಟ್ಟನು. “ಅವನು ಯೆಹೋವಧರ್ಮಶಾಸ್ತ್ರವನ್ನು ಅಭ್ಯಾಸಿಸಿ ಅನುಸರಿಸಲಿಕ್ಕೂ ಇಸ್ರಾಯೇಲ್ಯರಿಗೆ ಅದರ ವಿಧಿನ್ಯಾಯಗಳನ್ನು ಕಲಿಸಲಿಕ್ಕೂ [“ತನ್ನ ಹೃದಯವನ್ನು,” NW] ದೃಢಮಾಡಿಕೊಂಡಿದ್ದನು.” (ಎಜ್ರ 7:10) ನಾವು ತದ್ರೀತಿಯಲ್ಲಿ ಪೂರ್ಣವಾದ ತಯಾರಿಯನ್ನು ಮಾಡುತ್ತಾ, ವಿಷಯದ ಮಹತ್ವದ ಕುರಿತು ಪರ್ಯಾಲೋಚಿಸಬೇಕು. ನಮ್ಮಲ್ಲಿ ನಂಬಿಕೆ ಮತ್ತು ನಿಶ್ಚಿತಾಭಿಪ್ರಾಯವನ್ನು ತುಂಬಿಸುವಂತೆ ಯೆಹೋವನಿಗೆ ಪ್ರಾರ್ಥಿಸೋಣ. (ಲೂಕ 17:5) ನಮ್ಮ ಉತ್ಸಾಹವು ಬೈಬಲ್ ವಿದ್ಯಾರ್ಥಿಗಳು ಸತ್ಯಕ್ಕಾಗಿ ನಿಜವಾದ ಪ್ರೀತಿಯನ್ನು ವಿಕಸಿಸಿಕೊಳ್ಳುವಂತೆ ಸಹಾಯಮಾಡಬಲ್ಲದು. ನಮ್ಮ ಬೋಧನೆಯ ವಿಷಯದಲ್ಲಿ ಎಚ್ಚರಿಕೆಯಾಗಿರುವುದರಲ್ಲಿ, ಬೋಧಿಸುವ ವಿಶಿಷ್ಟ ವಿಧಾನಗಳನ್ನು ಉಪಯೋಗಿಸುವುದು ಸಹ ಒಳಗೂಡಿರಸಾಧ್ಯವಿದೆ. ನಮ್ಮ ಮುಂದಿನ ಲೇಖನವು, ಇವುಗಳಲ್ಲಿ ಕೆಲವೊಂದನ್ನು ಚರ್ಚಿಸುವುದು.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿರುವ ಶಾಸ್ತ್ರಗಳ ಮೇಲೆ ಒಳನೋಟ (ಇಂಗ್ಲಿಷ್) ಎಂಬ ಪುಸ್ತಕದ 2ನೆಯ ಸಂಪುಟ, ಪುಟ 1071ನ್ನು ನೋಡಿರಿ.
ನಿಮಗೆ ಜ್ಞಾಪಕವಿದೆಯೊ?
◻ ಕುಶಲ ಕ್ರೈಸ್ತ ಶಿಕ್ಷಕರು ಇಂದು ಏಕೆ ಬೇಕಾಗಿದ್ದಾರೆ?
◻ ನಾವು ಯಾವ ಉತ್ತಮ ಅಭ್ಯಾಸದ ರೂಢಿಗಳನ್ನು ವಿಕಸಿಸಬಲ್ಲೆವು?
◻ ನಾವು ಯಾರಿಗೆ ಕಲಿಸುತ್ತೇವೊ ಅವರಿಗಾಗಿ ಪ್ರೀತಿ ಮತ್ತು ಗೌರವವನ್ನು ತೋರಿಸುವುದು ಏಕೆ ತುಂಬ ಪ್ರಾಮುಖ್ಯ?
◻ ನಮ್ಮ ಬೈಬಲ್ ವಿದ್ಯಾರ್ಥಿಗಳ ಅಗತ್ಯಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಸಾಧ್ಯವಿದೆ?
◻ ಇತರರಿಗೆ ಕಲಿಸುವಾಗ ಉತ್ಸಾಹ ಮತ್ತು ಮನಗಾಣಿಕೆ ಏಕೆ ಅತ್ಯಾವಶ್ಯಕವಾಗಿವೆ?
[ಪುಟ 10 ರಲ್ಲಿರುವ ಚಿತ್ರ]
ಉತ್ತಮ ಶಿಕ್ಷಕರು ಸ್ವತಃ ದೇವರ ವಾಕ್ಯದ ವಿದ್ಯಾರ್ಥಿಗಳಾಗಿದ್ದಾರೆ
[ಪುಟ 13 ರಲ್ಲಿರುವ ಚಿತ್ರ]
ಬೈಬಲ್ ವಿದ್ಯಾರ್ಥಿಗಳಲ್ಲಿ ವ್ಯಕ್ತಿಗತವಾದ ಆಸಕ್ತಿವಹಿಸಿರಿ