ನಿಮ್ಮ ಸಹೋದರ ಪ್ರೀತಿಯನ್ನು ಹೆಚ್ಚಿಸುತ್ತಾ ಇರಿ
‘ಕ್ರಿಸ್ತನು ನಿಮ್ಮನ್ನು ಪ್ರೀತಿಸಿದ ಪ್ರಕಾರವೇ ನೀವೂ ಪ್ರೀತಿಯಲ್ಲಿ ನಡೆಯುತ್ತಾ ಇರಿ.’—ಎಫೆ. 5:2.
1. ತನ್ನ ಹಿಂಬಾಲಕರ ಪ್ರಧಾನ ಗುಣಲಕ್ಷಣ ಯಾವುದೆಂದು ಯೇಸು ಹೇಳಿದನು?
ದೇವರ ರಾಜ್ಯವನ್ನು ಮನೆಯಿಂದ ಮನೆಗೆ ಸಾರುವುದು ಯೆಹೋವನ ಸಾಕ್ಷಿಗಳ ವಿಶಿಷ್ಟ ಚಿಹ್ನೆ. ಆದರೂ ಯೇಸು ಕ್ರಿಸ್ತನು ತನ್ನ ನಿಜ ಶಿಷ್ಯರನ್ನು ಗುರುತಿಸಲು ಕ್ರೈಸ್ತತ್ವದ ಬೇರೊಂದು ಅಂಶವನ್ನು ಉಪಯೋಗಿಸಿದನು. ಅವನಂದದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಅದೇನೆಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು.”—ಯೋಹಾ. 13:34, 35.
2, 3. ನಮ್ಮ ಸಹೋದರ ಪ್ರೀತಿಯು ಕ್ರೈಸ್ತ ಕೂಟಗಳಿಗೆ ನಮ್ಮೊಂದಿಗೆ ಹಾಜರಾಗುವವರ ಮೇಲೆ ಯಾವ ಪರಿಣಾಮ ಬೀರುತ್ತದೆ?
2 ನಿಜ ಕ್ರೈಸ್ತ ಸಹೋದರರಲ್ಲಿ ಇರುವಂಥ ಪ್ರೀತಿಯು ಬೇರೆ ಯಾರಲ್ಲೂ ಇಲ್ಲ. ಅಯಸ್ಕಾಂತವು ಕಬ್ಬಿಣವನ್ನು ಆಕರ್ಷಿಸುವಂತೆಯೇ ಪ್ರೀತಿಯು ಯೆಹೋವನ ಸೇವಕರನ್ನು ಐಕ್ಯತೆಗೆ ತರುತ್ತದೆ ಮತ್ತು ಪ್ರಾಮಾಣಿಕ ಜನರನ್ನು ಸತ್ಯಾರಾಧನೆಗೆ ಸೆಳೆಯುತ್ತದೆ. ಉದಾಹರಣೆಗೆ, ಮಾರ್ಸೆಲೀನೊ ಎಂಬ ಕ್ಯಾಮರೂನ್ನಲ್ಲಿರುವ ವ್ಯಕ್ತಿಯನ್ನು ತಕ್ಕೊಳ್ಳಿರಿ. ಅವನು ಕೆಲಸ ಮಾಡುತ್ತಿರುವಾಗ ಅಪಘಾತದಿಂದ ತನ್ನ ದೃಷ್ಟಿಯನ್ನು ಕಳೆದುಕೊಂಡನು. ಅವನು ದೃಷ್ಟಿಯನ್ನು ಕಳೆದುಕೊಂಡದ್ದು ಅವನು ಮಾಟಗಾರನಾಗಿದ್ದದರಿಂದಲೇ ಎಂಬ ಗಾಳಿಸುದ್ದಿ ಹಬ್ಬಿತು. ಅವನಿಗೆ ಸಾಂತ್ವನವನ್ನು ಕೊಡುವ ಬದಲಾಗಿ ಅವನ ಪಾದ್ರಿ ಮತ್ತು ಇತರ ಚರ್ಚ್ ಸದಸ್ಯರು ಅವನನ್ನು ಸಭೆಯಿಂದ ಹೊರಗೆ ಹಾಕಿದರು. ಯೆಹೋವನ ಸಾಕ್ಷಿಗಳಲ್ಲೊಬ್ಬನು ಅವನನ್ನು ಕೂಟಕ್ಕೆ ಆಮಂತ್ರಿಸಿದಾಗ ಮಾರ್ಸೆಲೀನೊ ಹಿಂಜರಿದನು. ಇನ್ನೂ ಹೆಚ್ಚಿನ ತಿರಸ್ಕಾರವನ್ನು ಅನುಭವಿಸಲು ಅವನು ಇಷ್ಟಪಡಲಿಲ್ಲ.
3 ರಾಜ್ಯ ಸಭಾಗೃಹದಲ್ಲಿ ಅವನಿಗೆ ಸಿಕ್ಕಿದ ಉಪಚಾರದಿಂದ ಮಾರ್ಸೆಲೀನೊ ಪ್ರಭಾವಿತನಾದನು. ಅವನಿಗೆ ಹೃತ್ಪೂರ್ವಕ ಸ್ವಾಗತ ದೊರೆಯಿತು ಮತ್ತು ಅವನು ಕೇಳಿದ ಬೈಬಲ್ ಬೋಧನೆಗಳು ಅವನಿಗೆ ಸಾಂತ್ವನವನ್ನು ಕೊಟ್ಟವು. ತದನಂತರ ಅವನು ಎಲ್ಲ ಸಭಾ ಕೂಟಗಳಿಗೆ ಹಾಜರಾಗಲು ಪ್ರಾರಂಭಿಸಿದನು. ಬೈಬಲ್ ಅಧ್ಯಯನದಲ್ಲಿ ಪ್ರಗತಿ ಮಾಡಿದನು. ಇಸವಿ 2006ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡನು. ಈಗ ಅವನು ತನ್ನ ಕುಟುಂಬ ಮತ್ತು ನೆರೆಯವರಿಗೆ ಸತ್ಯವನ್ನು ಕಲಿಸುತ್ತಿದ್ದಾನೆ ಹಾಗೂ ಹಲವಾರು ಬೈಬಲ್ ಅಧ್ಯಯನಗಳನ್ನು ಆರಂಭಿಸಿದ್ದಾನೆ. ದೇವಜನರೊಂದಿಗೆ ತಾನು ಅನುಭವಿಸಿದ ಅದೇ ಪ್ರೀತಿಯನ್ನು ತನ್ನೊಂದಿಗೆ ಬೈಬಲ್ ಅಧ್ಯಯನ ಮಾಡುವವರೂ ಅನುಭವಿಸಬೇಕೆಂಬುದು ಮಾರ್ಸೆಲೀನೊವಿನ ಅಪೇಕ್ಷೆ.
4. “ಪ್ರೀತಿಯಲ್ಲಿ ನಡೆಯುತ್ತಾ ಇರಿ” ಎಂಬ ಪೌಲನ ಬುದ್ಧಿವಾದವನ್ನು ನಾವೇಕೆ ಪಾಲಿಸಬೇಕು?
4 ಈ ಸಹೋದರ ಪ್ರೀತಿಯು ಅತ್ಯಂತ ಹಿತಕರ. ಅದನ್ನು ಉಳಿಸಿಕೊಳ್ಳಲು ನಾವೆಲ್ಲರೂ ನಮ್ಮ ಪಾಲನ್ನು ಮಾಡಬೇಕು. ಉದಾಹರಣೆಗೆ, ಚಳಿಗಾಲದ ರಾತ್ರಿ ಬೆಂಕಿಯ ಮುಂದೆ ಚಳಿಕಾಯಿಸಿಕೊಳ್ಳುತ್ತಿದ್ದೀರಿ ಎಂದು ನೆನಸಿ. ಮಿಣುಮಿಣುಗುತ್ತಾ ಉರಿಯುವ ಅದರ ಬೆಚ್ಚಗಿನ ಕಾವು ನಿಮ್ಮನ್ನು ಅದರ ಕಡೆಗೆ ಸೆಳೆದಿದೆ. ಆದರೆ ಕಟ್ಟಿಗೆಯನ್ನು ಹಾಕದಿದ್ದರೆ ಅದು ಆರಿಹೋಗುವುದು ಖಂಡಿತ. ತದ್ರೀತಿ ಸಭೆಯಲ್ಲಿರುವ ಆಶ್ಚರ್ಯಕರ ಪ್ರೀತಿಯ ಬಂಧವು ದುರ್ಬಲಗೊಳ್ಳದೇ ಇರಬೇಕಾದರೆ ಕ್ರೈಸ್ತರಾದ ಪ್ರತಿಯೊಬ್ಬರು ಅದನ್ನು ಬಲಪಡಿಸಲು ಕ್ರಿಯೆಗೈಯಬೇಕು. ಹೇಗೆ? ಅಪೊಸ್ತಲ ಪೌಲನು ಉತ್ತರಿಸುವುದು: “ಕ್ರಿಸ್ತನು ನಿಮ್ಮನ್ನು ಪ್ರೀತಿಸಿ ನಿಮಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯನ್ನು ಬೀರುವ ಕಾಣಿಕೆಯಾಗಿಯೂ ಯಜ್ಞವಾಗಿಯೂ ಒಪ್ಪಿಸಿಕೊಟ್ಟ ಪ್ರಕಾರವೇ ನೀವೂ ಪ್ರೀತಿಯಲ್ಲಿ ನಡೆಯುತ್ತಾ ಇರಿ.” (ಎಫೆ. 5:2) ನಾವೀಗ ಪರಿಗಣಿಸುವ ಪ್ರಶ್ನೆ ಯಾವುದೆಂದರೆ, ನಾನು ಪ್ರೀತಿಯಲ್ಲಿ ನಡೆಯುತ್ತಾ ಇರುವುದು ಹೇಗೆ?
“ನೀವು ಸಹ ವಿಶಾಲಗೊಳ್ಳಿರಿ”
5, 6. ಕೊರಿಂಥದ ಕ್ರೈಸ್ತರು ತಮ್ಮನ್ನು ‘ವಿಶಾಲಗೊಳಿಸುವಂತೆ’ ಪೌಲನು ಪ್ರೇರಿಸಿದ್ದೇಕೆ?
5 ಪ್ರಾಚೀನ ಕೊರಿಂಥದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಬರೆದದ್ದು: “ಕೊರಿಂಥದವರೇ, ನಾವು ನಿಮ್ಮೊಂದಿಗೆ ಮುಚ್ಚುಮರೆಯಿಲ್ಲದೆ ಮಾತಾಡಿದ್ದೇವೆ, ನಮ್ಮ ಹೃದಯವು ವಿಶಾಲಗೊಂಡಿದೆ. ನಿಮ್ಮನ್ನು ನಮ್ಮೊಳಗೆ ಸೇರಿಸಿಕೊಳ್ಳಲಾಗದಷ್ಟು ಸಂಕುಚಿತರು ನಾವಲ್ಲ. ಆದರೆ ನೀವು ನಿಮ್ಮ ಕೋಮಲ ಮಮತೆಯೊಳಗೆ ನಮ್ಮನ್ನು ಸೇರಿಸಿಕೊಳ್ಳಲಾಗದಷ್ಟು ಸಂಕುಚಿತರಾಗಿದ್ದೀರಿ. ಆದುದರಿಂದ ಮಕ್ಕಳೆಂದು ಭಾವಿಸಿ ನಾನು ಹೇಳುವುದೇನೆಂದರೆ, ನಿಮ್ಮ ವಿಷಯದಲ್ಲಿ ನಮ್ಮ ಹೃದಯವು ವಿಶಾಲವಾಗಿರುವಂತೆಯೇ ನೀವು ಸಹ ವಿಶಾಲಗೊಳ್ಳಿರಿ.” (2 ಕೊರಿಂ. 6:11-13) ಇಲ್ಲಿ ಪೌಲನು ಕೊರಿಂಥದವರಿಗೆ ತಮ್ಮ ಪ್ರೀತಿಯನ್ನು ವಿಶಾಲಗೊಳಿಸುವಂತೆ ಹೇಳಿದ್ದೇಕೆ?
6 ಪ್ರಾಚೀನ ಕೊರಿಂಥದಲ್ಲಿದ್ದ ಸಭೆಯು ಆರಂಭವಾದ ವಿಧವನ್ನು ಪರಿಗಣಿಸಿರಿ. ಪೌಲನು ಕ್ರಿ.ಶ. 50ರ ಕೊನೆಯ ಭಾಗದಲ್ಲಿ ಕೊರಿಂಥಕ್ಕೆ ಬಂದನು. ಅಲ್ಲಿ ಅವನ ಸಾರುವ ಕಾರ್ಯವು ಜನರ ವಿರೋಧದಿಂದಾಗಿ ಕಷ್ಟದಿಂದ ಆರಂಭಿಸಿದರೂ ಅಪೊಸ್ತಲನು ತನ್ನ ಕೆಲಸವನ್ನು ಬಿಟ್ಟುಬಿಡಲಿಲ್ಲ. ಕೊಂಚ ಸಮಯದೊಳಗೆ ಆ ನಗರದ ಅನೇಕರು ಸುವಾರ್ತೆಯಲ್ಲಿ ನಂಬಿಕೆಯನ್ನಿಟ್ಟರು. ಆ ಹೊಸ ಸಭೆಯಲ್ಲಿ ಕಲಿಸಲು ಮತ್ತು ಅದನ್ನು ಬಲಪಡಿಸಲು ಪೌಲನು “ಒಂದು ವರ್ಷ ಆರು ತಿಂಗಳು” ಕಳೆದನು. ನಿಜವಾಗಿಯೂ ಅವನಿಗೆ ಕೊರಿಂಥದ ಕ್ರೈಸ್ತರ ಮೇಲೆ ಆಳವಾದ ಪ್ರೀತಿಯಿತ್ತು. (ಅ. ಕಾ. 18:5, 6, 9-11) ಪ್ರತಿಯಾಗಿ ಅವರು ಪೌಲನನ್ನು ಆಳವಾಗಿ ಪ್ರೀತಿಸಲು ಮತ್ತು ಗೌರವಿಸಲು ಸಕಾರಣವಿತ್ತು. ಆದರೂ ಸಭೆಯಲ್ಲಿರುವ ಕೆಲವರು ಅವನನ್ನು ಬಿಟ್ಟು ದೂರಹೋದರು. ಪ್ರಾಯಶಃ ಕೆಲವರು ಅವನ ಮುಚ್ಚುಮರೆಯಿಲ್ಲದ ಬುದ್ಧಿವಾದವನ್ನು ಇಷ್ಟಪಡಲಿಲ್ಲ. (1 ಕೊರಿಂ. 5:1-5; 6:1-10) ಇತರರಾದರೋ ‘ಅತ್ಯುತ್ಕೃಷ್ಟರೆಂದು ತೋರಿಸಿಕೊಳ್ಳುವ ಅಪೊಸ್ತಲರ’ ಸುಳ್ಳು ಮಾತುಗಳಿಗೆ ಕಿವಿಗೊಟ್ಟಿರಲೂಬಹುದು. (2 ಕೊರಿಂ. 11:5, 6) ಪೌಲನಿಗೆ ತನ್ನ ಸಹೋದರ ಸಹೋದರಿಯರೆಲ್ಲರ ಅಪ್ಪಟ ಪ್ರೀತಿ ಬೇಕಾಗಿತ್ತು. ಆದ್ದರಿಂದ ಅವನಿಗೆ ಮತ್ತು ಇತರ ಜೊತೆ ವಿಶ್ವಾಸಿಗಳಿಗೆ ಪ್ರೀತಿಯಲ್ಲಿ ಆಪ್ತರಾಗುವ ಮೂಲಕ ತಮ್ಮನ್ನು ‘ವಿಶಾಲಗೊಳಿಸುವಂತೆ’ ಬೇಡಿಕೊಂಡನು.
7. ಸಹೋದರ ಪ್ರೀತಿಯನ್ನು ತೋರಿಸುವುದರಲ್ಲಿ ನಾವು ಹೇಗೆ ‘ವಿಶಾಲಗೊಳ್ಳಸಾಧ್ಯವಿದೆ’?
7 ನಮ್ಮ ಕುರಿತೇನು? ಸಹೋದರ ಪ್ರೀತಿಯನ್ನು ತೋರಿಸುವುದರಲ್ಲಿ ನಾವು ಹೇಗೆ ‘ವಿಶಾಲಗೊಳ್ಳಸಾಧ್ಯವಿದೆ’? ಒಂದೇ ವಯೋಮಿತಿಯ ಅಥವಾ ಒಂದೇ ಕುಲಕ್ಕೆ ಸೇರಿದ ಜನರಿಗೆ ಒಬ್ಬರಿಗೊಬ್ಬರು ಪ್ರೀತಿ ತೋರಿಸುವುದು ಸುಲಭವಾಗಿರಬಹುದು. ಅಂತೆಯೇ ಏಕರೀತಿಯ ವಿನೋದಾವಳಿಯನ್ನು ಇಷ್ಟಪಡುವವರು ಹೆಚ್ಚಾಗಿ ಒಂದುಗೂಡಿ ಸಮಯ ಕಳೆಯುತ್ತಾರೆ. ಆದರೆ ಕೆಲವು ಕ್ರೈಸ್ತರೊಂದಿಗೆ ನಾವು ಪಾಲ್ಗೊಳ್ಳುವ ಅಭಿರುಚಿಗಳು ಇತರರಿಂದ ನಮ್ಮನ್ನು ಪ್ರತ್ಯೇಕಿಸುವುದಾದರೆ ನಮಗೆ ‘ವಿಶಾಲಗೊಳ್ಳುವ’ ಅಗತ್ಯವಿದೆ. ನಮ್ಮನ್ನು ಹೀಗೆ ಕೇಳಿಕೊಳ್ಳುವುದು ವಿವೇಕಯುತ: ‘ನನ್ನ ಆತ್ಮೀಯ ಗುಂಪಿನ ಹೊರಗಿನ ಸಹೋದರ ಸಹೋದರಿಯರೊಂದಿಗೆ ಶುಶ್ರೂಷೆಯಲ್ಲಿ ಅಥವಾ ವಿನೋದಾವಳಿಯಲ್ಲಿ ನಾನು ಪಾಲ್ಗೊಳ್ಳುವುದು ಅತಿ ವಿರಳವೊ? ರಾಜ್ಯ ಸಭಾಗೃಹದಲ್ಲಿ ಹೊಸಬರು ಬಂದಾಗ, ನನ್ನ ಸ್ನೇಹವನ್ನು ಗಿಟ್ಟಿಸಿಕೊಳ್ಳಲು ಅವರೇ ಬಂದು ಮಾತಾಡಲಿ ಎಂದು ನೆನಸುತ್ತಾ ನಾನು ಅವರೊಂದಿಗಿನ ಸಂಪರ್ಕವನ್ನು ಕಡಿಮೆಮಾಡುತ್ತೇನೊ? ಸಭೆಯಲ್ಲಿರುವ ಎಳೆಯರನ್ನೂ ವೃದ್ಧರನ್ನೂ ನಾನು ವಂದಿಸುತ್ತೇನೊ?’
8, 9. ರೋಮನ್ನರಿಗೆ 15:7ರಲ್ಲಿರುವ ಪೌಲನ ಸಲಹೆಯು ನಮ್ಮ ಸಹೋದರ ಪ್ರೀತಿಯನ್ನು ಹೆಚ್ಚಿಸುವ ರೀತಿಯಲ್ಲಿ ಒಬ್ಬರನ್ನೊಬ್ಬರು ವಂದಿಸಲು ಹೇಗೆ ಸಹಾಯಕಾರಿ?
8 ಒಬ್ಬರನ್ನೊಬ್ಬರು ವಂದಿಸುವ ವಿಷಯದಲ್ಲಿ, ನಮ್ಮ ಜೊತೆ ಆರಾಧಕರ ಬಗ್ಗೆ ಯೋಗ್ಯ ನೋಟವನ್ನು ಬೆಳೆಸಿಕೊಳ್ಳಲು ಪೌಲನು ರೋಮನ್ನರಿಗೆ ಬರೆದ ಮಾತುಗಳು ಸಹಾಯಕಾರಿ. (ರೋಮನ್ನರಿಗೆ 15:7 ಓದಿ.) ಇಲ್ಲಿ, “ಸೇರಿಸಿಕೊಂಡಂತೆ” ಎಂದು ಬರೆಯಲಾದ ಮೂಲ ಗ್ರೀಕ್ ಪದವು “ಸ್ವಾಗತಿಸಿದಂತೆ” ಎಂದಾಗಿದೆ. ಅದರ ಅರ್ಥ “ದಯೆಯಿಂದ ಅಥವಾ ಆದರಾತಿಥ್ಯದಿಂದ ಸೇರಿಸಿಕೊಳ್ಳುವುದು, ಒಬ್ಬನ ಬಳಗದಲ್ಲಿ ಅಥವಾ ಸ್ನೇಹದಲ್ಲಿ ಸೇರಿಸಿಕೊಳ್ಳುವುದು” ಎಂದಾಗಿದೆ. ಬೈಬಲ್ ಕಾಲದಲ್ಲಿ ಸತ್ಕಾರಭಾವದ ಆತಿಥೇಯನು ತನ್ನ ಮನೆಯಲ್ಲಿ ಮಿತ್ರರನ್ನು ಸೇರಿಸಿಕೊಳ್ಳುವಾಗ ಅವರನ್ನು ನೋಡಿ ತನಗೆಷ್ಟು ಸಂತೋಷವಾಯಿತೆಂದು ತಿಳಿಸುತ್ತಿದ್ದನು. ಕ್ರಿಸ್ತನು ಕ್ರೈಸ್ತ ಸಭೆಯೊಳಗೆ ನಮ್ಮನ್ನು ಸಾಂಕೇತಿಕವಾಗಿ ಸ್ವಾಗತಿಸಿದ್ದಾನೆ. ನಮ್ಮ ಜೊತೆ ಆರಾಧಕರನ್ನು ಸ್ವಾಗತಿಸುವುದರಲ್ಲಿ ಅವನನ್ನು ಅನುಕರಿಸುವಂತೆ ನಮ್ಮನ್ನು ಪ್ರೋತ್ಸಾಹಿಸಲಾಗಿದೆ.
9 ರಾಜ್ಯ ಸಭಾಗೃಹದಲ್ಲಿ ಮತ್ತು ಇತರ ಸ್ಥಳಗಳಲ್ಲಿ ನಾವು ನಮ್ಮ ಸಹೋದರರನ್ನು ವಂದಿಸುವ ವಿಷಯದಲ್ಲೇನು? ಇತ್ತೀಚೆಗೆ ನೋಡಿರದ ಅಥವಾ ಮಾತಾಡಿರದ ಸಹೋದರರ ಕಡೆಗೆ ನಾವು ಗಮನ ಕೊಡಸಾಧ್ಯವಿದೆ. ಅವರೊಂದಿಗೆ ಸಂಭಾಷಿಸುತ್ತಾ ಕೆಲವು ನಿಮಿಷಗಳನ್ನು ಯಾಕೆ ಕಳೆಯಬಾರದು? ಮುಂದಿನ ಕೂಟದಲ್ಲೂ ಇತರರೊಂದಿಗೆ ನಾವು ಇದನ್ನೇ ಮಾಡಬಹುದು. ಹೀಗೆ ಮಾಡುವುದಾದರೆ ಕೊಂಚವೇ ಸಮಯದೊಳಗೆ ನಮ್ಮ ಸಹೋದರ ಸಹೋದರಿಯರಲ್ಲಿ ಹೆಚ್ಚಿನವರೊಂದಿಗೆ ನಾವು ಉಲ್ಲಾಸಕರ ಸಂಭಾಷಣೆಗಳನ್ನು ಮಾಡಿರುವೆವು. ಒಂದೇ ದಿನದಲ್ಲಿ ಪ್ರತಿಯೊಬ್ಬರೊಂದಿಗೂ ಮಾತಾಡಲಿಕ್ಕೆ ಅವಕಾಶ ದೊರೆಯದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಪ್ರತಿಯೊಂದು ಕೂಟದಲ್ಲಿ ನಾವು ಅವರನ್ನು ವಂದಿಸಲು ಸಾಧ್ಯವಾಗದಿದ್ದಲ್ಲಿ ಅದಕ್ಕಾಗಿ ಯಾರೂ ಸಿಟ್ಟುಗೊಳ್ಳಬಾರದು.
10. ಸಭೆಯಲ್ಲಿ ಎಲ್ಲರಿಗೂ ಯಾವ ಅಮೂಲ್ಯವಾದ ಸದವಕಾಶವಿದೆ ಮತ್ತು ನಾವು ಹೇಗೆ ಅದನ್ನು ಪೂರ್ಣವಾಗಿ ಸದುಪಯೋಗಿಸಬಲ್ಲೆವು?
10 ಇತರರನ್ನು ಸ್ವಾಗತಿಸುವುದರಲ್ಲಿ ವಂದನೆ ಹೇಳುವುದು ಮೊದಲನೇ ಹೆಜ್ಜೆ. ಇದು ಉಲ್ಲಾಸಕರ ಚರ್ಚೆಗಳಿಗೆ ಮತ್ತು ಬಾಳುವ ಗೆಳೆತನಗಳಿಗೆ ನಡೆಸಬಲ್ಲದು. ಉದಾಹರಣೆಗೆ, ಅಧಿವೇಶನ ಅಥವಾ ಸಮ್ಮೇಳನಗಳಿಗೆ ಹಾಜರಾಗುವವರು ತಮ್ಮನ್ನು ಇತರರಿಗೆ ಪರಿಚಯಪಡಿಸಿ ಮಾತಾಡಲು ಆರಂಭಿಸುವಾಗ ಸಾಮಾನ್ಯವಾಗಿ ಅವರು ಪುನಃ ಭೇಟಿಯಾಗುವುದನ್ನು ಎದುರುನೋಡುತ್ತಾರೆ. ರಾಜ್ಯ ಸಭಾಗೃಹ ನಿರ್ಮಾಣಕಾರ್ಯದ ಸ್ವಯಂಸೇವಕರು ಹಾಗೂ ಪರಿಹಾರ ಕಾರ್ಯದಲ್ಲಿ ಕೆಲಸಮಾಡುವವರು ಹೆಚ್ಚಾಗಿ ಒಳ್ಳೆಯ ಗೆಳೆಯರಾಗುತ್ತಾರೆ. ಏಕೆಂದರೆ ತಾವು ಹಂಚಿಕೊಳ್ಳುವ ಅನುಭವಗಳ ಮೂಲಕ ಪರಸ್ಪರರಲ್ಲಿರುವ ಒಳ್ಳೆಯ ಗುಣಗಳನ್ನು ಅವರು ತಿಳಿದುಕೊಳ್ಳುತ್ತಾರೆ. ಯೆಹೋವನ ಸಂಘಟನೆಯಲ್ಲಿ ಬಾಳುವ ಗೆಳೆತನಗಳನ್ನು ಮಾಡುವ ಸಂದರ್ಭಗಳು ಯಥೇಚ್ಛವಾಗಿವೆ. ನಾವು ‘ವಿಶಾಲಗೊಂಡಲ್ಲಿ’ ನಮ್ಮ ಸ್ನೇಹಿತ ವೃಂದವು ಬೆಳೆದು ಸತ್ಯಾರಾಧನೆಯಲ್ಲಿ ನಮ್ಮನ್ನು ಐಕ್ಯಗೊಳಿಸುವ ಪ್ರೀತಿಯು ಗಾಢಗೊಳ್ಳುವುದು.
ಸ್ನೇಹಪರರಾಗಿರಿ
11. ಮಾರ್ಕ 10:13-16ರಲ್ಲಿ ತಿಳಿಸಲ್ಪಟ್ಟ ಪ್ರಕಾರ ಯೇಸು ಯಾವ ಮಾದರಿಯನ್ನಿಟ್ಟನು?
11 ಯೇಸುವಿನಂತೆ ಕ್ರೈಸ್ತರೆಲ್ಲರು ಸ್ನೇಹಪರರಾಗಿರಲು ಪ್ರಯಾಸಪಡಬಲ್ಲರು. ಹೆತ್ತವರು ತಮ್ಮ ಮಕ್ಕಳನ್ನು ಯೇಸುವಿನ ಬಳಿಗೆ ಕರೆತರಲು ಪ್ರಯತ್ನಿಸಿದಾಗ ಶಿಷ್ಯರು ಅವರನ್ನು ತಡೆಗಟ್ಟಿದ ಸಮಯದಲ್ಲಿ ಅವನು ಹೇಗೆ ಪ್ರತಿಕ್ರಿಯಿಸಿದನೆಂದು ಪರಿಗಣಿಸಿ. ಅವನಂದದ್ದು: “ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ; ಅವುಗಳನ್ನು ತಡೆಯಲು ಪ್ರಯತ್ನಿಸಬೇಡಿ, ಏಕೆಂದರೆ ದೇವರ ರಾಜ್ಯವು ಇಂಥವರಿಗೆ ಸೇರಿದ್ದಾಗಿದೆ.” ಅನಂತರ “ಅವನು ಮಕ್ಕಳನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಅವುಗಳ ಮೇಲೆ ತನ್ನ ಕೈಗಳನ್ನಿಟ್ಟು ಆಶೀರ್ವದಿಸತೊಡಗಿದನು.” (ಮಾರ್ಕ 10:13-16) ಆ ಮಹಾ ಬೋಧಕನಿಂದ ಅಂಥ ಪ್ರೀತಿಪರ ಗಮನವನ್ನು ಪಡೆದದ್ದು ಆ ಪುಟ್ಟ ಮಕ್ಕಳನ್ನು ಎಷ್ಟು ಪುಳಕಗೊಳಿಸಿದ್ದಿರಬೇಕು!
12. ಇತರರೊಂದಿಗೆ ಸಂವಾದಿಸುವುದರಿಂದ ಯಾವುದು ನಮ್ಮನ್ನು ತಡೆಗಟ್ಟಬಲ್ಲದು?
12 ಪ್ರತಿಯೊಬ್ಬ ಕ್ರೈಸ್ತನು ತನ್ನನ್ನು ಹೀಗೆ ಕೇಳಿಕೊಳ್ಳಬೇಕು: ‘ನಾನು ಸ್ನೇಹಪರನಾಗಿದ್ದೇನೊ ಅಥವಾ ಯಾವಾಗಲೂ ಕಾರ್ಯನಿರತನಾಗಿ ಕಾಣುತ್ತೇನೊ?’ ತಪ್ಪಾಗಿರದ ಕೆಲವು ಹವ್ಯಾಸಗಳು ಸಹ ಕೆಲವು ಸಲ ಸಂಭಾಷಣೆಯನ್ನು ತಡೆಗಟ್ಟಬಲ್ಲವು. ಉದಾಹರಣೆಗಾಗಿ, ಇತರರು ನಮ್ಮ ಎದುರಿಗಿರುವಾಗ ನಾವು ಆಗಾಗ ಮೊಬೈಲನ್ನು ಉಪಯೋಗಿಸುತ್ತಾ ಅಥವಾ ಇಯರ್ ಫೋನ್ ಹಾಕಿಕೊಂಡು ರೆಕಾರ್ಡಿಂಗ್ ಕೇಳುತ್ತಾ ಇರುವುದಾದರೆ ನಿಮಗೆ ಅವರ ಸಹವಾಸ ಬೇಡವೋ ಏನೋ ಎಂದು ಅವರಿಗನಿಸೀತು. ನಾವು ಕೈಆಸರೆಯ ಕಂಪ್ಯೂಟರನ್ನು ನೋಡುವುದರಲ್ಲೇ ತಲ್ಲೀನರಾಗಿರುವುದನ್ನು ಇತರರು ನೋಡುವುದಾದರೆ ನಮಗೆ ಅವರೊಂದಿಗೆ ಮಾತಾಡಲು ಇಷ್ಟವಿಲ್ಲ ಎಂದು ಅವರು ನೆನಸಾರು. “ಸುಮ್ಮನಿರುವ ಸಮಯ” ಇದೆ ಎಂಬುದು ನಿಶ್ಚಯ. ಆದರೆ ಜನರು ನಮ್ಮ ಸುತ್ತಲಿರುವಾಗ ಅದು ಹೆಚ್ಚಾಗಿ “ಮಾತಾಡುವ ಸಮಯ” ಆಗಿರುತ್ತದೆ. (ಪ್ರಸಂ. 3:7) “ನನಗೆ ನನ್ನಷ್ಟಕ್ಕೆ ಇರಲು ಇಷ್ಟ” ಅಥವಾ “ಬೆಳಬೆಳಗ್ಗೆ ನನಗೆ ಮಾತಾಡಲು ಮೂಡೇ ಇರುವುದಿಲ್ಲ” ಎಂದು ಕೆಲವರು ಹೇಳಬಹುದು. ಆದರೂ, ನಮಗೆ ಮಾತಾಡಲು ಮನಸ್ಸಿಲ್ಲದಿರುವಾಗಲೂ ಸ್ನೇಹಪರ ಸಂಭಾಷಣೆಯಲ್ಲಿ ತೊಡಗುವುದು ‘ಸ್ವಹಿತವನ್ನು ಹುಡುಕದ’ ಪ್ರೀತಿಯ ಪುರಾವೆಯಾಗಿದೆ.—1 ಕೊರಿಂ. 13:5.
13. ಕ್ರೈಸ್ತ ಸಹೋದರ ಸಹೋದರಿಯರ ಕಡೆಗೆ ಯಾವ ಮನೋಭಾವವನ್ನಿಡುವಂತೆ ಪೌಲನು ತಿಮೊಥೆಯನನ್ನು ಪ್ರೋತ್ಸಾಹಿಸಿದನು?
13 ಸಭೆಯ ಎಲ್ಲ ಸದಸ್ಯರಿಗೆ ಗೌರವ ತೋರಿಸುವಂತೆ ಯುವ ತಿಮೊಥೆಯನನ್ನು ಪೌಲನು ಪ್ರೋತ್ಸಾಹಿಸಿದನು. (1 ತಿಮೊಥೆಯ 5:1, 2 ಓದಿ.) ನಾವು ಸಹ ವೃದ್ಧ ಕ್ರೈಸ್ತರನ್ನು ನಮ್ಮ ತಂದೆತಾಯಿಗಳಂತೆಯೂ ಎಳೆಯರನ್ನು ನಮ್ಮ ಒಡಹುಟ್ಟಿದವರಂತೆಯೂ ಉಪಚರಿಸಬೇಕು. ಆ ರೀತಿಯ ಮನೋಭಾವ ನಮ್ಮಲ್ಲಿರುವುದಾದರೆ ನಮ್ಮ ಸಹೋದರ ಸಹೋದರಿಯರಲ್ಲಿ ಯಾರಿಗೂ ನಮ್ಮೆದುರಲ್ಲಿ ಅಪರಿಚಿತರೋ ಎಂಬ ಅನಿಸಿಕೆಯಾಗದು.
14. ಇತರರೊಂದಿಗೆ ಭಕ್ತಿವೃದ್ಧಿಯ ಸಂಭಾಷಣೆಯನ್ನು ಮಾಡುವುದರಿಂದ ಸಿಗುವ ಕೆಲವು ಪ್ರಯೋಜನಗಳು ಯಾವುವು?
14 ನಾವು ಇತರರೊಂದಿಗೆ ಭಕ್ತಿವೃದ್ಧಿಯ ಸಂಭಾಷಣೆ ಮಾಡುವಾಗ ಅವರ ಆಧ್ಯಾತ್ಮಿಕತೆಗೆ ಹಾಗೂ ಭಾವನಾತ್ಮಕ ಸುಕ್ಷೇಮಕ್ಕೆ ಸಹಾಯಮಾಡುತ್ತೇವೆ. ಬೆತೆಲಿನ ತನ್ನ ಆರಂಭದ ದಿನಗಳಲ್ಲಿ ಹಲವಾರು ವಯಸ್ಕ ಬೆತೆಲಿಗರು ತನ್ನೊಂದಿಗೆ ಮಾತಾಡಲು ಬರುತ್ತಿದ್ದುದನ್ನು ಸಹೋದರನೊಬ್ಬನು ಒಲುಮೆಯಿಂದ ನೆನಪಿಸಿಕೊಳ್ಳುತ್ತಾನೆ. ಅವರ ಉತ್ತೇಜನಕ ಮಾತುಗಳು ತಾನು ನಿಜಕ್ಕೂ ಬೆತೆಲ್ ಕುಟುಂಬದ ಭಾಗ ಎಂಬ ಭಾವನೆಯನ್ನು ಅವನಿಗೆ ಕೊಟ್ಟಿತು. ಈಗ ಅವನು ಜೊತೆ ಬೆತೆಲಿಗರೊಂದಿಗೆ ಸಂಭಾಷಿಸಲು ಮುಂದಾಗುವ ಮೂಲಕ ಅವರನ್ನು ಅನುಕರಿಸಲು ಪ್ರಯತ್ನಿಸುತ್ತಾನೆ.
ಮನಸ್ತಾಪವನ್ನು ಪರಿಹರಿಸಲು ದೀನತೆಯು ನೆರವಾಗುತ್ತದೆ
15. ನಮ್ಮ ಮಧ್ಯೆಯೂ ಭಿನ್ನಾಭಿಪ್ರಾಯಗಳು ಏಳುತ್ತವೆ ಎಂಬುದನ್ನು ಯಾವುದು ತೋರಿಸುತ್ತದೆ?
15 ಪ್ರಾಚೀನ ಫಿಲಿಪ್ಪಿಯದಲ್ಲಿದ್ದ ಇಬ್ಬರು ಕ್ರೈಸ್ತ ಸಹೋದರಿಯರಾದ ಯುವೊದ್ಯ ಮತ್ತು ಸಂತುಕೆಯ ನಡುವೆ ತಲೆದೋರಿದ್ದ ಒಂದು ಸಮಸ್ಯೆಯನ್ನು ಪರಿಹರಿಸುವುದು ಅವರಿಗೆ ಕಷ್ಟವಾಗಿದ್ದಂತೆ ತೋರುತ್ತದೆ. (ಫಿಲಿ. 4:2, 3) ಪೌಲ ಮತ್ತು ಬಾರ್ನಬರ ನಡುವೆಯೂ ತೀವ್ರ ವಾಗ್ವಾದ ಉಂಟಾಗಿ ಅವರಿಬ್ಬರೂ ಸ್ವಲ್ಪ ಸಮಯದ ವರೆಗೆ ಪ್ರತ್ಯೇಕವಾದರೆಂಬುದು ಎಲ್ಲರಿಗೂ ತಿಳಿದುಬಂತು. (ಅ. ಕಾ. 15:37-39) ಸತ್ಯಾರಾಧಕರ ನಡುವೆಯೂ ಭಿನ್ನಾಭಿಪ್ರಾಯಗಳು ಏಳುತ್ತವೆ ಎಂಬುದನ್ನು ಈ ವೃತ್ತಾಂತಗಳು ತೋರಿಸುತ್ತವೆ. ಜಗಳ ಕಚ್ಚಾಟಗಳನ್ನು ಪರಿಹರಿಸಲು ಮತ್ತು ಗೆಳೆತನವನ್ನು ಪುನಃಸ್ಥಾಪಿಸಲು ಯೆಹೋವನು ನಮಗೆ ಸಹಾಯವನ್ನು ಒದಗಿಸುತ್ತಾನೆ. ಆದರೆ ನಮ್ಮಿಂದಲೂ ಆತನು ಏನನ್ನೋ ಅಪೇಕ್ಷಿಸುತ್ತಾನೆ.
16, 17. (ಎ) ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವುದರಲ್ಲಿ ದೀನತೆ ಎಷ್ಟು ಪ್ರಾಮುಖ್ಯ? (ಬಿ) ಯಾಕೋಬನು ಏಸಾವನನ್ನು ಎದುರುಗೊಂಡ ರೀತಿ ದೀನತೆಯ ಮೌಲ್ಯವನ್ನು ಹೇಗೆ ದೃಷ್ಟಾಂತಿಸುತ್ತದೆ?
16 ನೀವು ಮತ್ತು ನಿಮ್ಮ ಸ್ನೇಹಿತನು ಕಾರಲ್ಲಿ ಎಲ್ಲಿಗೋ ಹೋಗಲಿದ್ದೀರಿ ಎಂದು ನೆನಸಿ. ನಿಮ್ಮ ಪ್ರಯಾಣವನ್ನು ಆರಂಭಿಸುವ ಮುಂಚೆ ನೀವು ಕಾರಿನ ಕೀಲಿಕೈಯನ್ನು ಹಾಕಿ ಎಂಜಿನನ್ನು ಸ್ಟಾರ್ಟ್ ಮಾಡಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಕ್ರಿಯೆ ಕೂಡ ಒಂದು ಕೀಲಿಕೈಯಿಂದಲೇ ಆರಂಭಿಸುತ್ತದೆ. ಆ ಕೀಲಿಕೈ ದೀನತೆಯೇ ಆಗಿದೆ. (ಯಾಕೋಬ 4:10 ಓದಿ.) ಆ ಕೀಲಿಕೈ ಪರಸ್ಪರ ಮನಸ್ತಾಪಗೊಂಡಿರುವ ಸಹೋದರರು ಅದನ್ನು ಪರಿಹರಿಸಲು ಮೊದಲಾಗಿ ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸುವುದನ್ನು ಸಾಧ್ಯಮಾಡುತ್ತದೆ. ಮುಂದೆ ಕೊಡಲ್ಪಟ್ಟಿರುವ ಬೈಬಲ್ ಉದಾಹರಣೆಯು ಇದನ್ನೇ ತೋರಿಸುತ್ತದೆ.
17 ಯಾಕೋಬನು ತನ್ನ ಅವಳಿ ಸಹೋದರನಾದ ಏಸಾವನಿಂದ ಚೊಚ್ಚಲತನದ ಹಕ್ಕನ್ನು ಪಡೆದುಕೊಂಡದ್ದರಿಂದ ಏಸಾವನು ಅವನ ಮೇಲೆ ಕೋಪಗೊಂಡು ಅವನನ್ನು ಕೊಲ್ಲಬೇಕೆಂದಿದ್ದನು. ಇದಾಗಿ ಇಪ್ಪತ್ತು ವರ್ಷಗಳ ನಂತರ ಈಗ ಆ ಅವಳಿ ಸಹೋದರರು ಪುನಃ ಭೇಟಿಯಾಗಲಿಕ್ಕಿದ್ದರು. ಆಗ “ಯಾಕೋಬನಿಗೆ ಬಹು ಭಯವೂ ಕಳವಳವೂ ಉಂಟಾದವು.” ಏಸಾವನು ತನಗೆ ಅಪಾಯ ಮಾಡುವ ಸಾಧ್ಯತೆ ಹೆಚ್ಚು ಎಂದು ಅವನು ನೆನಸಿದನು. ಆದರೆ ಅವರು ಸಂಧಿಸಿದಾಗ ಏಸಾವನು ನಿರೀಕ್ಷಿಸದ ಒಂದು ವಿಷಯವನ್ನು ಯಾಕೋಬನು ಮಾಡಿದನು. ಅವನು ತನ್ನ ಸಹೋದರನನ್ನು ಎದುರುಗೊಂಡಾಗ “ನೆಲದ ತನಕ ಬೊಗ್ಗಿ ನಮಸ್ಕರಿಸಿದನು.” ಮುಂದೆ ಏನಾಯಿತು? “ಏಸಾವನು ಅವನನ್ನು ಎದುರುಗೊಳ್ಳುವದಕ್ಕೆ ಓಡಿ ಬಂದು ಅವನ ಕೊರಳನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವರಿಬ್ಬರೂ ಕಣ್ಣೀರುಸುರಿಸಿದರು.” ಅಲ್ಲಿ ಜಗಳವಾಗುವ ಅಪಾಯವು ತಪ್ಪಿಸಲ್ಪಟ್ಟಿತು. ಯಾಕೋಬನು ತೋರಿಸಿದ ದೀನತೆಯು ಏಸಾವನಲ್ಲಿ ಇದ್ದಿರಬಹುದಾದ ಯಾವುದೇ ಸೇಡಿನ ಭಾವನೆಯನ್ನು ಜಯಿಸಲು ಸಹಾಯಮಾಡಿತು.—ಆದಿ. 27:41; 32:3-8; 33:3, 4.
18, 19. (ಎ) ವೈಯಕ್ತಿಕ ಭಿನ್ನಾಭಿಪ್ರಾಯಗಳು ಏಳುವಾಗ ಬೈಬಲಿನ ಸಲಹೆಯನ್ನು ಅನ್ವಯಿಸುವುದಕ್ಕೆ ನಾವು ಮುಂದಾಗುವುದು ಏಕೆ ಅತ್ಯಾವಶ್ಯಕ? (ಬಿ) ಮನಸ್ತಾಪಗೊಂಡ ವ್ಯಕ್ತಿಯು ಆರಂಭದಲ್ಲಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸದಿದ್ದಲ್ಲಿ ನಾವೇಕೆ ನಿರೀಕ್ಷೆಯನ್ನು ಕಳೆದುಕೊಳ್ಳಬಾರದು?
18 ಜಗಳ ಕಲಹಗಳನ್ನು ಪರಿಹರಿಸಲು ಬೈಬಲಿನಲ್ಲಿ ಅತ್ಯುತ್ತಮ ಸಲಹೆಗಳು ಅಡಕವಾಗಿವೆ. (ಮತ್ತಾ. 5:23, 24; 18:15-17; ಎಫೆ. 4:26, 27)a ಆದರೂ ಆ ಸಲಹೆಯನ್ನು ನಾವು ದೀನತೆಯಿಂದ ಅನ್ವಯಿಸಿದ ಹೊರತು ಮನಸ್ತಾಪಗಳನ್ನು ಪರಿಹರಿಸುವುದು ಕಷ್ಟ. ದೀನತೆಯನ್ನು ನಾವು ಕೂಡ ತೋರಿಸಸಾಧ್ಯವಿರುವಾಗ ಮೊದಲಾಗಿ ಇನ್ನೊಬ್ಬನೇ ದೀನತೆಯನ್ನು ತೋರಿಸಬೇಕೆಂದು ಕಾಯುವುದು ಪರಿಹಾರವನ್ನು ತಾರದು.
19 ಯಾವುದೇ ಕಾರಣದಿಂದಾಗಿ ಮನಸ್ತಾಪವನ್ನು ಪರಿಹರಿಸುವ ನಮ್ಮ ಆರಂಭದ ಪ್ರಯತ್ನಗಳು ವಿಫಲವಾದಲ್ಲಿ ನಾವು ನಿರೀಕ್ಷೆಯನ್ನು ಕಳೆದುಕೊಳ್ಳಬಾರದು. ಮನಸ್ತಾಪಗೊಂಡ ಆ ಬೇರೆ ವ್ಯಕ್ತಿಗೆ ತನ್ನ ಭಾವನೆಗಳನ್ನು ಸರಿಪಡಿಸಲು ಸಮಯ ಬೇಕಾಗಬಹುದು. ಯೋಸೇಫನ ಸಹೋದರರು ಅವನಿಗೆ ವಿಶ್ವಾಸಘಾತ ಮಾಡಿದ್ದರು. ಅವರು ಅವನನ್ನು ಈಜಿಪ್ಟಿನ ಪ್ರಧಾನ ಮಂತ್ರಿಯಾಗಿ ಭೇಟಿಯಾಗುವುದಕ್ಕಿಂತ ತುಂಬ ಸಮಯದ ಹಿಂದೆ ಈ ಘಟನೆ ನಡೆದಿತ್ತು. ಆದರೂ ಕೊನೆಗೆ ಅವರ ಮನಸ್ಸು ಬದಲಾಯಿತು ಮತ್ತು ಅವರು ಅವನಿಂದ ಕ್ಷಮೆ ಯಾಚಿಸಿದರು. ಯೋಸೇಫನು ಅವರನ್ನು ಕ್ಷಮಿಸಿದನು ಮತ್ತು ಯಾಕೋಬನ ಮಕ್ಕಳು ಯೆಹೋವನ ನಾಮವನ್ನು ಹೊತ್ತ ಜನಾಂಗವಾಗುವ ಸುಯೋಗವನ್ನು ಪಡೆದರು. (ಆದಿ. 50:15-21) ನಾವು ಸಹ ನಮ್ಮ ಸಹೋದರ ಸಹೋದರಿಯರೊಂದಿಗೆ ಶಾಂತಿಯನ್ನು ಕಾಪಾಡಿಕೊಳ್ಳುವ ಮೂಲಕ ಸಭೆಯ ಐಕ್ಯತೆ ಮತ್ತು ಸಂತೋಷಕ್ಕೆ ನೆರವಾಗುತ್ತೇವೆ.—ಕೊಲೊಸ್ಸೆ 3:12-14 ಓದಿ.
“ಕಾರ್ಯದಲ್ಲಿಯೂ ಸತ್ಯದಲ್ಲಿಯೂ” ಪ್ರೀತಿಸೋಣ
20, 21. ತನ್ನ ಅಪೊಸ್ತಲರ ಪಾದಗಳನ್ನು ಯೇಸು ತೊಳೆದ ವಿಷಯದಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?
20 ಯೇಸು ತನ್ನ ಮರಣಕ್ಕೆ ಸ್ವಲ್ಪ ಮುಂಚಿತವಾಗಿ ತನ್ನ ಅಪೊಸ್ತಲರಿಗೆ ಹೇಳಿದ್ದು: “ನಾನು ಮಾಡಿದಂತೆಯೇ ನೀವೂ ಮಾಡಬೇಕೆಂದು ನಾನು ನಿಮಗೆ ಒಂದು ಮಾದರಿಯನ್ನು ಇಟ್ಟಿದ್ದೇನೆ.” (ಯೋಹಾ. 13:15) ಅವನು ಆಗತಾನೇ ಆ 12 ಮಂದಿಯ ಪಾದಗಳನ್ನು ತೊಳೆದು ಮುಗಿಸಿದ್ದನು. ಯೇಸು ಅಲ್ಲಿ ಮಾಡಿದ್ದು ಕೇವಲ ಒಂದು ಪದ್ಧತಿಯಾಗಿರಲಿಲ್ಲ ಅಥವಾ ಬರೇ ದಯಾಪರ ಕ್ರಿಯೆಯೂ ಆಗಿರಲಿಲ್ಲ. ಕಾಲುಗಳನ್ನು ತೊಳೆಯುವ ಆ ವೃತ್ತಾಂತವನ್ನು ತಿಳಿಸುವ ಮುಂಚಿತವಾಗಿ ಯೋಹಾನನು ಬರೆದದ್ದು: “ಲೋಕದಲ್ಲಿದ್ದ ತನ್ನ ಸ್ವಂತದವರನ್ನು ಪ್ರೀತಿಸಿದ [ಯೇಸು] ಕೊನೆಯ ವರೆಗೂ ಅವರನ್ನು ಪ್ರೀತಿಸಿದನು.” (ಯೋಹಾ. 13:1) ಸಾಮಾನ್ಯವಾಗಿ ಒಬ್ಬ ದಾಸನಿಂದ ಮಾಡಲ್ಪಡುವ ಆ ಸೇವೆಯನ್ನು ಮಾಡುವಂತೆ ಯೇಸುವನ್ನು ಪ್ರೇರಿಸಿದ್ದು ಆ ಶಿಷ್ಯರ ಮೇಲೆ ಅವನಿಗಿದ್ದ ಪ್ರೀತಿಯೇ. ಈಗ ಅವರು ತಾವೇ ದೀನತೆಯಿಂದ ಪರಸ್ಪರ ಪ್ರೀತಿಯುಳ್ಳ ಕ್ರಿಯೆಗಳನ್ನು ಮಾಡಬೇಕಾಗಿತ್ತು. ಹೌದು, ನಿಜವಾದ ಸಹೋದರ ಪ್ರೀತಿಯು ನಮ್ಮೆಲ್ಲ ಕ್ರೈಸ್ತ ಸಹೋದರ ಸಹೋದರಿಯರಿಗಾಗಿ ಅಕ್ಕರೆ ಮತ್ತು ಪರಿಗಣನೆಯನ್ನು ತೋರಿಸಲು ನಮ್ಮನ್ನು ಪ್ರೇರಿಸಬೇಕು.
21 ಯಾರ ಪಾದಗಳು ದೇವಕುಮಾರನಿಂದ ತೊಳೆಯಲ್ಪಟ್ಟವೋ ಆ ಅಪೊಸ್ತಲ ಪೇತ್ರನು ಯೇಸು ಮಾಡಿದ ಕ್ರಿಯೆಯ ಅರ್ಥವನ್ನು ಗ್ರಹಿಸಿಕೊಂಡನು. ಅವನು ಬರೆದದ್ದು: “ನೀವು ಸತ್ಯಕ್ಕೆ ವಿಧೇಯರಾಗಿರುವ ಮೂಲಕ ನಿಮ್ಮ ಪ್ರಾಣಗಳನ್ನು ಶುದ್ಧೀಕರಿಸಿಕೊಂಡು ನಿಷ್ಕಪಟವಾದ ಸಹೋದರ ಮಮತೆಯನ್ನು ಹೊಂದಿರುವುದರಿಂದ ಹೃದಯದಾಳದಿಂದ ಒಬ್ಬರನ್ನೊಬ್ಬರು ಪ್ರೀತಿಸಿರಿ.” (1 ಪೇತ್ರ 1:22) ಅಪೊಸ್ತಲ ಯೋಹಾನನ ಪಾದಗಳು ಸಹ ಕರ್ತನಿಂದ ತೊಳೆಯಲ್ಪಟ್ಟವು. ಅವನು ಬರೆದದ್ದು: “ಚಿಕ್ಕ ಮಕ್ಕಳೇ, ನಾವು ಬರೀ ಮಾತಿನಲ್ಲಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕಾರ್ಯದಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರೋಣ.” (1 ಯೋಹಾ. 3:18) ನಾವು ನಮ್ಮ ಸಹೋದರ ಸಹೋದರಿಯರಿಗಾಗಿರುವ ಪ್ರೀತಿಯನ್ನು ಕ್ರಿಯೆಯಲ್ಲಿ ತೋರಿಸುವಂತೆ ನಮ್ಮ ಹೃದಯಗಳು ನಮ್ಮನ್ನು ಪ್ರೇರಿಸುವಂತಾಗಲಿ.
[ಪಾದಟಿಪ್ಪಣಿ]
a ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕದ ಪುಟಗಳು 144-150 ನೋಡಿ.
ನಿಮಗೆ ನೆನಪಿದೆಯೆ?
• ಪರಸ್ಪರ ತೋರಿಸುವ ಪ್ರೀತಿಯಲ್ಲಿ ನಾವು ಯಾವ ವಿಧಗಳಲ್ಲಿ ‘ವಿಶಾಲಗೊಳ್ಳಸಾಧ್ಯವಿದೆ’?
• ಇತರರಿಗೆ ಸ್ನೇಹಪರತೆಯನ್ನು ತೋರಿಸಲು ನಮಗೆ ಯಾವುದು ಸಹಾಯಕಾರಿ?
• ಶಾಂತಿಯನ್ನು ಪುನಃಸ್ಥಾಪಿಸುವುದರಲ್ಲಿ ದೀನತೆ ಯಾವ ಪಾತ್ರ ವಹಿಸುತ್ತದೆ?
• ಜೊತೆ ವಿಶ್ವಾಸಿಗಳಿಗೆ ಅಕ್ಕರೆಯನ್ನು ತೋರಿಸಲು ಯಾವುದು ನಮ್ಮನ್ನು ಪ್ರೇರಿಸಬೇಕು?
[ಪುಟ 21ರಲ್ಲಿರುವ ಚಿತ್ರ]
ಜೊತೆ ವಿಶ್ವಾಸಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿ
[ಪುಟ 23ರಲ್ಲಿರುವ ಚಿತ್ರ]
ನಿಮ್ಮ ಸ್ನೇಹಪರತೆಯನ್ನು ತೋರಿಸುವ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ