ದೈವಿಕ ಬೋಧನೆಯು ವಿಜಯಿಯಾಗುತ್ತದೆ
“ನಿಮ್ಮ ಕಣ್ಣುಗಳು ನಿಮ್ಮ ಮಹಾ ಬೋಧಕನನ್ನು ಕಾಣುತ್ತಿರುವ ಕಣ್ಣುಗಳಾಗಿರತಕ್ಕದ್ದು. ಮತ್ತು ನಿಮ್ಮ ಸ್ವಂತ ಕಿವಿಗಳು ನಿಮ್ಮ ಹಿಂದೆ ಒಂದು ಮಾತನ್ನು ಹೇಳುವುದನ್ನು ಕೇಳುವುವು: ‘ಇದೇ ಮಾರ್ಗ. ಜನರೇ ಅದರಲ್ಲಿ ನಡೆಯಿರಿ.’” —ಯೆಶಾಯ 30:20, 21, NW.
1. ಯೆಹೋವನ ಕಲಿಸುವಿಕೆಯನ್ನು ಯುಕ್ತವಾಗಿಯೇ ದೈವಿಕ ಬೋಧನೆಯೆಂದು ಯಾಕೆ ಕರೆಯಸಾಧ್ಯವಿದೆ?
ಯಾರಾದರೂ ಪಡೆಯ ಬಹುದಾದ ಅತ್ಯುತ್ತಮ ಬೋಧನೆಯ ಮೂಲನು ಯೆಹೋವ ದೇವರಾಗಿದ್ದಾನೆ. ಆತನು ಮಾತಾಡುವಾಗ, ವಿಶೇಷವಾಗಿ ತನ್ನ ಪವಿತ್ರ ವಾಕ್ಯದ ಮೂಲಕ ಮಾತಾಡುವಾಗ ನಾವು ಆಲಿಸುವದಾದರೆ, ಆತನು ನಮ್ಮ ಮಹಾ ಬೋಧಕನಾಗಿರುವನು. (ಯೆಶಾಯ 30:20) ಇಬ್ರಿಯ ಬೈಬಲ್ ವಚನವು ಆತನನ್ನು “ದಿವ್ಯನು” ಎಂದು ಕೂಡ ಕರೆಯುತ್ತದೆ. (ಕೀರ್ತನೆ 50:1, NW) ಆದುದರಿಂದ, ಯೆಹೋವನ ಕಲಿಸುವಿಕೆ ದೈವಿಕ ಬೋಧನೆಯಾಗಿ.
2. ಯಾವ ಅರ್ಥದಲ್ಲಿ ದೇವರೊಬ್ಬನೇ ವಿವೇಕಿಯೆಂಬುದು ಸತ್ಯವಾಗಿದೆ?
2 ಲೋಕವು ತನ್ನ ಅನೇಕ ಶೈಕ್ಷಣಿಕ ಸಂಸ್ಥೆಗಳಿಗಾಗಿ ಹೆಮ್ಮೆ ಪಡುತ್ತದೆ, ಆದರೆ ಅವುಗಳಲ್ಲಿ ಒಂದಾದರೂ ದೈವಿಕ ಬೋಧನೆಯನ್ನು ನೀಡುವದಿಲ್ಲ. ಯಾಕೆ, ಯೆಹೋವನ ಅಪಾರ ವಿವೇಕದ ಮೇಲೆ ಆಧಾರಿಸಿದ ದೈವಿಕ ಬೋಧನೆಗೆ ಮಾನವ ಕುಲವು ಇತಿಹಾಸದ ಉದ್ದಕ್ಕೂ ಶೇಖರಿಸಿದ ವಿವೇಕವನ್ನು ಹೋಲಿಸಿದಾಗ, ಅಲ್ಪವಾಗಿ ಪರಿಣಮಿಸುತ್ತದೆ. ದೇವನೊಬ್ಬನೇ ವಿವೇಕಿಯೆಂದು ರೋಮಾಪುರ 16:27 ಹೇಳುತ್ತದೆ, ಮತ್ತು ಯೆಹೋವನು ಮಾತ್ರ ಶ್ರೇಷ್ಠವಾದ ವಿವೇಕವನ್ನು ಪಡೆದಿರುವನೆಂಬ ಅರ್ಥದಲ್ಲಿ ಇದು ಸತ್ಯವಾಗಿದೆ.
3. ಭೂಮಿಯ ಮೇಲೆ ನಡೆದವರಲ್ಲಿ ಯೇಸು ಕ್ರಿಸ್ತನು ಅತಿ ದೊಡ್ಡ ಬೋಧಕನಾಗಿರುತ್ತಾನೆ ಯಾಕೆ?
3 ದೇವರ ಮಗನಾದ, ಯೇಸು ಕ್ರಿಸ್ತನು, ವಿವೇಕದ ಆದರ್ಶನಾಗಿದ್ದಾನೆ ಮತ್ತು ಭೂಮಿಯ ಮೇಲೆ ನಡೆದವರಲ್ಲಿ ಅತಿ ದೊಡ್ಡ ಬೋಧಕನಾಗಿರುತ್ತಾನೆ. ಅದರಲ್ಲಿ ಆಶ್ಚರ್ಯವೇನೂ ಇಲ್ಲ! ಅನೇಕ ಯುಗಗಳ ಕಾಲ ಯೆಹೋವನು ಪರಲೋಕದಲ್ಲಿ ಅವನ ಬೋಧಕನಾಗಿದ್ದನು. ನಿಜವಾಗಿಯೂ, ಆತನ ಪ್ರಥಮ ಸೃಷ್ಟಿಯಾದ, ಆತನ ಏಕಜಾತ ಪುತ್ರನಿಗೆ ಕಲಿಸಲು ದೇವರು ಪ್ರಾರಂಭಿಸಿದಾಗ, ದೈವಿಕ ಬೋಧನೆ ಆರಂಭಗೊಂಡಿತು. ಆದುದರಿಂದ ಯೇಸು ಹೀಗೆ ಹೇಳಶಕ್ತನಾಗಿದ್ದನು: “ತಂದೆಯು ನನಗೆ ಬೋಧಿಸಿದ ಹಾಗೆ ಇದನ್ನೆಲ್ಲಾ ಮಾತಾಡುತ್ತೇನೆ.” (ಯೋಹಾನ 8:28; ಜ್ಞಾನೋಕ್ತಿ 8:22, 30) ಬೈಬಲಿನಲ್ಲಿ ದಾಖಲೆ ಮಾಡಲಾದ ಕ್ರಿಸ್ತನ ಸ್ವಂತ ಮಾತುಗಳು ದೈವಿಕ ಬೋಧನೆಯ ನಮ್ಮ ಜ್ಞಾನಕ್ಕೆ ಹೆಚ್ಚಿನದನ್ನು ಸೇರಿಸುತ್ತವೆ. ಯೇಸುವು ಏನನ್ನು ಕಲಿಸಿದನೋ ಅದನ್ನು ಕಲಿಸುವುದರಿಂದ, ಸಭೆಯ ಮೂಲಕ ದೇವರ ನಾನಾ ವಿಧವಾದ ವಿವೇಕವನ್ನು ತಿಳಿಯ ಪಡಿಸಬೇಕೆಂಬ ಚಿತ್ತವಿರುವ ಅವರ ಮಹಾ ಉಪದೇಶಕನಿಗೆ ಅಭಿಷಿಕ್ತ ಕ್ರೈಸ್ತರು ವಿಧೇಯರಾಗುತ್ತಾರೆ.—ಎಫೆಸ 3:10, 11; 5:1; ಲೂಕ 6:40, NW.
ವಿವೇಕಕ್ಕಾಗಿ ಅನ್ವೇಷಣೆ
4. ಮಿದುಳಿನ ಸಾಮರ್ಥ್ಯದ ಕುರಿತು ಏನು ಹೇಳಲಾಗಿದೆ?
4 ದೈವಿಕ ಬೋಧನೆಯಿಂದ ಫಲಿಸುವ ವಿವೇಕದ ಸಂಪಾದನೆಯು, ನಮ್ಮ ದೇವ ದತ್ತ ಆಲೋಚನಾ ಸಾಮರ್ಥ್ಯಗಳ ಶ್ರದ್ಧಾಪೂರ್ವಕ ಉಪಯೋಗವನ್ನು ಆವಶ್ಯಪಡಿಸುತ್ತದೆ. ಮಾನವನ ಮಿದುಳಿಗೆ ಮಹತ್ತರವಾದ ಸಾಮರ್ಥ್ಯವಿರುವದರಿಂದ, ಇದು ಶಕ್ಯವಾಗಿದೆ. ದಿ ಇನ್ಕ್ರೆಡಿಬ್ಲ್ ಮಷೀನ್ ಎಂಬ ಪುಸ್ತಕವು ಹೇಳುವುದು: “ಮಾನವನ ಮಿದುಳಿನ ಮಾಪನಾಂಕ ಗುರುತಿಸಲ್ಪಟ್ಟ ಸಂಜ್ಞೆಗಳ ಜಟಿಲವಾದ, ವ್ಯವಸ್ಥೆಯಿಂದ ಸಾಧ್ಯವಾಗುವ ಅದರ ಅಪಾರ ಸಂಕೀರ್ಣತೆ ಹಾಗೂ ಬಹುಮುಖ ಶಕ್ತಿಯನ್ನು, ನಾವು ಯೋಚಿಸಬಹುದಾದ ಅತ್ಯುನ್ನತ ಕಂಪ್ಯೂಟರ್ಗಳಿಗೆ ಹೋಲಿಸಿದಾಗ, ಅವು ಒರಟಾಗಿವೆ. . . . ನಿಮ್ಮ ಮಿದುಳಿನ ಮೂಲಕ ಯಾವ ಸಮಯದಲ್ಲಾದರೂ ಮಿನುಗುತ್ತಿರುವ ಲಕ್ಷಾಂತರ ಸಂಕೇತಗಳು, ಮಾಹಿತಿಯ ಒಂದು ಅಸಾಧಾರಣ ಹೊರೆಯನ್ನು ಸಾಗಿಸುತ್ತವೆ. ಅವು ನಿಮ್ಮ ದೇಹದ ಆಂತರಿಕ ಹಾಗೂ ಬಾಹ್ಯ ಪರಿಸರಗಳ ಬಗ್ಗೆ: ನಿಮ್ಮ ಕಾಲ್ಬೆರಳಿನ ಸಂಕೋಚನೆ, ಯಾ ಕಾಫಿಯ ಸುವಾಸನೆ, ಅಥವಾ ಒಬ್ಬ ಮಿತ್ರನ ವಿನೋದಕರ ಹೇಳಿಕೆಯ ಕುರಿತು ಸಮಾಚಾರವನ್ನು ತರುತ್ತವೆ. ಬೇರೆ ಸಂಕೇತಗಳು ಮಾಹಿತಿಯನ್ನು ವಿಶೇಷ್ಲಿಸಿ ಪ್ರಕ್ರಿಯೆ ನಡೆಸುತ್ತಿರುವಾಗ, ಒಂದು ನಿರ್ಣಯಕ್ಕೆ ನಡೆಸುವ ಕೆಲವೊಂದು ಭಾವನೆಗಳನ್ನು, ನೆನಪುಗಳನ್ನು, ಯೋಚನೆಗಳನ್ನು, ಯಾ ಯೋಜನೆಗಳನ್ನು ಉಂಟುಮಾಡುತ್ತವೆ. ತಕ್ಷಣವೆ, ನಿಮ್ಮ ಕಾಲ್ಬೆರಳನ್ನು ಅಲ್ಲಾಡಿಸಲು, ಕಾಫಿಯನ್ನು ಕುಡಿಯಲು, ನಗಲು, ಯಾ ಬಹುಶಃ ಒಂದು ಬುದ್ಧಿವಂತಿಕೆಯ ಪ್ರತ್ಯುತ್ತರವನ್ನು ನೀಡಲು, ನಿಮ್ಮ ಮಿದುಳಿನಿಂದ ಬರುವ ಸಂಕೇತಗಳು ನೀವು ಏನನ್ನು ಮಾಡಬೇಕೆಂದು ನಿಮ್ಮ ದೇಹದ ಇತರ ಭಾಗಗಳಿಗೆ ಹೇಳುತ್ತವೆ. ಈ ಮಧ್ಯೆ ನಿಮ್ಮ ಮಿದುಳು ನಿಮ್ಮ ಉಸಿರಾಟ, ರಕ್ತದ ನಿಗೂಢ ಕ್ರಿಯೆ, ಉಷ್ಣಾಂಶ, ಮತ್ತು ನಿಮಗೆ ಅರಿವಿಲ್ಲದ ಇತರ ಅಗತ್ಯವಿರುವ ಪ್ರಕ್ರಿಯೆಗಳನ್ನೂ ಕೂಡ ಗಮನಿಸುತ್ತದೆ. ನಿಮ್ಮ ಪರಿಸರದಲ್ಲಿ ಸತತ ಬದಲಾವಣೆಗಳು ಆದಾಗ್ಯೂ ನಿಮ್ಮ ದೇಹವನ್ನು ಒಂದು ಸಮವಾದ ಸ್ಥಿತಿಯಲ್ಲಿ ಇಡುವಂಥ ಆಜ್ಞೆಗಳನ್ನು ಅದು ಹೊರಡಿಸುತ್ತದೆ. ಅದು ಭವಿಷ್ಯದ ಬೇಡಿಕೆಗಳಿಗಾಗಿಯೂ ಕೂಡ ತಯಾರಿಸುತ್ತದೆ.”—ಪುಟ 326.
5. ಶಾಸ್ತ್ರೀಯ ಅರ್ಥದಲ್ಲಿ, ವಿವೇಕ ಎಂದರೇನು?
5 ಮಾನವನ ಮಿದುಳಿಗೆ ನಿಸ್ಸಂದೇಹವಾಗಿ ಅದ್ಭುತಕರ ಸಾಮರ್ಥ್ಯವಿರುವುದಾದರೂ, ನಾವು ನಮ್ಮ ಮನಸ್ಸನ್ನು ಅತ್ಯುತ್ತಮ ರೀತಿಯಲ್ಲಿ ಹೇಗೆ ಉಪಯೋಗಿಸಬಲ್ಲೆವು? ನಮ್ಮನ್ನು ಭಾಷೆಯ, ಇತಿಹಾಸದ, ವಿಜ್ಞಾನದ, ಮನಶಾಸ್ತ್ರದ, ಯಾ ತುಲನಾತ್ಮಕ ಧರ್ಮದ ಪ್ರಯಾಸಕರ ಅಭ್ಯಾಸದಲ್ಲಿ ಸಂಪೂರ್ಣವಾಗಿ ಮುಳುಗಿಸಿಕೊಳ್ಳುವ ಮೂಲಕ ಅಲ್ಲ. ನಾವು ಪ್ರಥಮವಾಗಿ ನಮ್ಮ ಆಲೋಚನಾ ಸಾಮರ್ಥ್ಯಗಳನ್ನು ದೈವಿಕ ಬೋಧನೆಯನ್ನು ಪಡೆಯಲು ಉಪಯೋಗಿಸಬೇಕು. ಅದು ಮಾತ್ರ ಶುದ್ಧವಾದ ವಿವೇಕದಲ್ಲಿ ಫಲಿಸುತ್ತದೆ. ಆದರೆ ನಿಜವಾದ ವಿವೇಕ ಅಂದರೇನು? ಶಾಸ್ತ್ರೀಯ ಅರ್ಥದಲ್ಲಿ “ವಿವೇಕ” ಎಂಬ ಪದವು, ನಿಷ್ಕೃಷ್ಟ ಜ್ಞಾನ ಮತ್ತು ನಿಜವಾದ ತಿಳಿವಳಿಕೆಯ ಮೇಲೆ ಆಧಾರಿಸಿದ ಯುಕ್ತವಾದ ತೀರ್ಪಿನ ಮೇಲೆ ಒತ್ತರವನ್ನು ಹಾಕುತ್ತದೆ. ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ಅಪಾಯಗಳನ್ನು ಹೋಗಲಾಡಿಸಲು ಯಾ ತೊಲಗಿಸಲು, ಇತರರಿಗೆ ಸಲಹೆ ನೀಡಲು, ಮತ್ತು ಧ್ಯೇಯಗಳನ್ನು ಸಾಧಿಸಲು, ಜ್ಞಾನ ಮತ್ತು ತಿಳಿವಳಿಕೆಯನ್ನು ಯಶಸ್ವಿಯಾಗಿ ಉಪಯೋಗಿಸುವಂತೆ ವಿವೇಕವು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಆಸಕ್ತಕರವಾಗಿಯೇ, ನಾವು ಖಂಡಿತವಾಗಿಯೂ ಹೋಗಲಾಡಿಸಲು ಬಯಸುವ ಗುಣಗಳಾದ ಮೂರ್ಖತನ ಮತ್ತು ಅವಿವೇಕತನದೊಂದಿಗೆ ವಿವೇಕವನ್ನು ಬೈಬಲ್ ವೈದೃಶ್ಯವಾಗಿ ತಿಳಿಸಿದೆ.—ಧರ್ಮೋಪದೇಶಕಾಂಡ 32:6; ಜ್ಞಾನೋಕ್ತಿ 11:29; ಪ್ರಸಂಗಿ 6:8.
ಯೆಹೋವನ ಮಹಾ ಪಠ್ಯಪುಸ್ತಕ
6. ನಿಜ ವಿವೇಕವನ್ನು ನಾವು ಪ್ರದರ್ಶಿಸಬೇಕಾದರೆ, ಯಾವುದನ್ನು ಸದುಪಯೋಗಕ್ಕೆ ಹಾಕತಕ್ಕದ್ದು?
6 ನಮ್ಮ ಸುತ್ತಲೂ ಹೇರಳವಾದ ಲೌಕಿಕ ವಿವೇಕವಿದೆ. (1 ಕೊರಿಂಥ 3:18, 19) ಯಾಕೆ, ಈ ಲೋಕವು ಶಾಲೆಗಳಿಂದ ಮತ್ತು ಲಕ್ಷಾಂತರ ಪುಸ್ತಕಗಳನ್ನು ಹೊಂದಿರುವ ಪುಸ್ತಕಾಲಯಗಳಿಂದ ತುಂಬಿದೆ! ಇವುಗಳಲ್ಲಿ ಹೆಚ್ಚಿನವು ಭಾಷೆ, ಗಣಿತ, ವಿಜ್ಞಾನ, ಮತ್ತು ಜ್ಞಾನದ ಬೇರೆ ಕ್ಷೇತ್ರಗಳಲ್ಲಿ ಬೋಧನೆ ನೀಡುವ ಪಠ್ಯಪುಸ್ತಕಗಳಾಗಿವೆ. ಆದರೆ ಮಹಾ ಬೋಧಕನು ಬೇರೆ ಎಲ್ಲಾ ಪಠ್ಯಪುಸ್ತಕಗಳನ್ನು ಮೀರುವ ಒಂದು ಪಠ್ಯಪುಸ್ತಕ—ಆತನ ಪ್ರೇರಿತ ವಾಕ್ಯವಾದ ಬೈಬಲನ್ನು ಒದಗಿಸಿದ್ದಾನೆ. (2 ತಿಮೊಥೆಯ 3:16, 17) ಅದು ಇತಿಹಾಸ, ಭೂಗೋಲಶಾಸ್ತ್ರ, ಮತ್ತು ಸಸ್ಯವಿಜ್ಞಾನದಂಥ ವಿಷಯಗಳಿಗೆ ಸಂಬಂಧಿಸಿದ ಸಂಗತಿಗಳನ್ನು ತಿಳಿಸುವಾಗ ಮಾತ್ರವಲ್ಲ ಭವಿಷ್ಯದ ಕುರಿತು ಮುನ್ಸೂಚಿಸುವಾಗಲೂ ನಿಷ್ಕೃಷ್ಟವಾಗಿದೆ. ಅಷ್ಟೇ ಅಲ್ಲ, ಅದು ನಾವು ಈಗ ಅತಿ ಸಂತೋಷಕರವಾದ ಮತ್ತು ಅತಿ ಉತ್ಪನ್ನಕಾರಕ ಜೀವನವನ್ನು ಜೀವಿಸುವಂತೆ ಸಹಾಯ ನೀಡುತ್ತದೆ. ನಿಜಕ್ಕೂ, ಒಂದು ಲೌಕಿಕ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಪುಸ್ತಕಗಳನ್ನು ಉಪಯೋಗಿಸುವ ಅಗತ್ಯ ಇರುವಂತೆ, “ಯೆಹೋವನಿಂದ ಶಿಕ್ಷಿತರಾಗಿರು” ವವರಂತೆ ನಿಜ ವಿವೇಕವನ್ನು ನಾವು ಪ್ರದರ್ಶಿಸಬೇಕಾದರೆ, ನಾವು ದೇವರ ಮಹಾ ಪಠ್ಯಪುಸ್ತಕದ ಸುಪರಿಚಯವುಳ್ಳವರಾಗಿರಬೇಕು ಮತ್ತು ಅದನ್ನು ಉಪಯೋಗಿಸಬೇಕು.—ಯೋಹಾನ 6:45, NW.
7. ಬೈಬಲಿನಲ್ಲಿ ಇರುವ ಸಂಗತಿಗಳ ಬೌದ್ಧಿಕ ಪರಿಚಯವು ಸಾಕಾಗುವುದಿಲ್ಲವೆಂದು ನೀವು ಯಾಕೆ ಹೇಳುವಿರಿ?
7 ಆದರೆ ಬೈಬಲಿನ ಬೌದ್ಧಿಕ ಪರಿಚಯವು ನಿಜ ವಿವೇಕ ಮತ್ತು ದೈವಿಕ ಬೋಧನೆಗೆ ಅನುಸಾರವಾಗಿರುವದಕ್ಕೆ ಸಮಾನವಾಗಿಲ್ಲ. ದೃಷ್ಟಾಂತಿಸುವುದಕ್ಕಾಗಿ: ಸಾ. ಶ. 17 ನೆಯ ಶತಮಾನದಲ್ಲಿ, ಕೊರ್ನೇಲ್ಯಸ್ ವಾನ್ಡರ್ಸ್ಟೇನ್ ಎಂಬ ಹೆಸರುಳ್ಳ ಒಬ್ಬ ಕ್ಯಾತೊಲಿಕ್ ಮನುಷ್ಯನು ಒಬ್ಬ ಜೆಜ್ಯುಯಿಟ್ ಆಗಲು ಅಪೇಕ್ಷಿಸಿದನು, ಆದರೆ ಅವನು ಬಹಳ ಕುಳ್ಳನಾಗಿದದ್ದರಿಂದ ನಿರಾಕರಿಸಲ್ಪಟ್ಟನು. ಮ್ಯಾನ್ಫ್ರೆಟ್ ಬಾರ್ಟೆಲ್ ತನ್ನ ಪುಸ್ತಕ ದ ಜೆಜ್ಯುಯಿಟ್ಸ್—ಹಿಸ್ಟೊರಿ ಆ್ಯಂಡ್ ಲೆಜೆಂಡ್ ಆಫ್ ದ ಸೊಸೈಟಿ ಆಫ್ ಜೆಸ್ಯುಯಿಟ್ಸ್ ನಲ್ಲಿ ಹೇಳುವುದು: “ಅವನು ಸಂಪೂರ್ಣ ಬೈಬಲನ್ನು ಬಾಯಿ ಪಾಠವಾಗಿ ಉಚ್ಚರಿಸಲು ಕಲಿಯುವನೆಂಬ ಷರತ್ತಿನೊಂದಿಗೆ ಮಾತ್ರ ಅವರು ಎತ್ತರದ ಆವಶ್ಯಕತೆಯನ್ನು ಮನ್ನಾಮಾಡಲು ಸಿದ್ಧರಾಗಿದ್ದಾರೆಂದು, ಕಮಿಟಿಯು ವಾನ್ಡರ್ಸ್ಟೇನ್ಗೆ ತಿಳಿಸಿತು. ಈ ತುಸುಮಟ್ಟಿನ ದುರಹಂಕಾರದ ವಿನಂತಿಗೆ ವಾನ್ಡರ್ಸ್ಟೇನ್ ಒಪ್ಪದೇ ಇದ್ದಿರುತ್ತಿದ್ದರೆ ಈ ಕಥೆಯನ್ನು ಹೇಳುವದರಲ್ಲಿ ಯಾವ ಪ್ರಯೋಜನವೂ ಇರುತ್ತಿರಲಿಲ್ಲ.” ಸಂಪೂರ್ಣ ಬೈಬಲನ್ನು ಬಾಯಿಪಾಠ ಮಾಡಲು ಅದು ಎಂಥ ಪ್ರಯತ್ನವನ್ನು ತೆಗೆದು ಕೊಂಡಿತ್ತು! ಆದಾಗ್ಯೂ, ಖಂಡಿತವಾಗಿ ದೇವರ ವಾಕ್ಯವನ್ನು ಬಾಯಿಪಾಠ ಮಾಡುವುದಕ್ಕಿಂತ ಅದನ್ನು ತಿಳಿದುಕೊಳ್ಳುವುದು ಎಷ್ಟೋ ಹೆಚ್ಚು ಪ್ರಾಮುಖ್ಯವಾಗಿದೆ.
8. ದೈವಿಕ ಬೋಧನೆಯಿಂದ ಪ್ರಯೋಜಿತರಾಗಲು ಮತ್ತು ನಿಜ ವಿವೇಕವನ್ನು ಪ್ರದರ್ಶಿಸಲು ನಮಗೆ ಯಾವುದು ನೆರವಾಗುವುದು?
8 ನಾವು ದೈವಿಕ ಬೋಧನೆಯಿಂದ ಪೂರ್ಣ ಪ್ರಯೋಜನ ಹೊಂದಬೇಕಾದರೆ ಮತ್ತು ನಿಜ ವಿವೇಕವನ್ನು ಪ್ರದರ್ಶಿಸಬೇಕಾದರೆ, ನಮಗೆ ಶಾಸ್ತ್ರಗ್ರಂಥಗಳ ನಿಷ್ಕೃಷ್ಟ ಜ್ಞಾನ ಇರಬೇಕು. ನಾವು ಯೆಹೋವನ ಪವಿತ್ರಾತ್ಮ ಯಾ ಕಾರ್ಯಕಾರೀ ಶಕ್ತಿಯಿಂದಲೂ ಕೂಡ ಮಾರ್ಗದರ್ಶಿಸಲ್ಪಡಬೇಕು. ನಾವು ಗಾಢವಾದ ಸತ್ಯಗಳನ್ನು, “ದೇವರ ಅಗಾಧವಾದ ವಿಷಯಗಳನ್ನು” ಕಲಿಯಲು ಇದು ಶಕ್ಯಮಾಡುವುದು. (1 ಕೊರಿಂಥ 2:10) ಆದುದರಿಂದ, ನಾವು ಯೆಹೋವನ ಮಹಾ ಪಠ್ಯಪುಸ್ತಕವನ್ನು ಶ್ರದ್ಧಾಪೂರ್ವಕವಾಗಿ ಅಭ್ಯಾಸಿಸೋಣ ಮತ್ತು ಪವಿತ್ರಾತ್ಮನ ಮೂಲಕ ಆತನ ಮಾರ್ಗದರ್ಶನೆಗಾಗಿ ಪ್ರಾರ್ಥಿಸೋಣ. ಜ್ಞಾನೋಕ್ತಿ 2:1-6 ಕ್ಕೆ ಹೊಂದಾಣಿಕೆಯಲ್ಲಿ, ನಾವು ಕಿವಿಯನ್ನು ವಿವೇಕದ ಕಡೆಗೂ ಹೃದಯವನ್ನು ವಿವೇಚನೆಯ ಕಡೆಗೂ ತಿರುಗಿಸಿ, ತಿಳಿವಳಿಕೆಗಾಗಿ ಕೂಗಿಕೊಳ್ಳೋಣ. ಇದನ್ನು ನಾವು ನಿಕ್ಷೇಪವನ್ನು ಹುಡುಕುವವರಂತೆ ಮಾಡುವ ಅಗತ್ಯವಿದೆ, ಆಗ ಮಾತ್ರ ನಾವು ‘ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವೆವು.’ ದೈವಿಕ ಬೋಧನೆಯ ಕೆಲವು ವಿಜಯಗಳ ಮತ್ತು ಪ್ರಯೋಜನಗಳ ಪರಿಗಣನೆಯು ದೇವ-ದತ್ತ ವಿವೇಕಕ್ಕಾಗಿ ನಮ್ಮ ಗಣ್ಯತೆಯನ್ನು ಹೆಚ್ಚಿಸುವುದು.
ಪ್ರಗತಿಪರ ತಿಳಿವಳಿಕೆ
9, 10. ಆದಿಕಾಂಡ 3:15 ರಲ್ಲಿ ದಾಖಲಿಸಿದಂತೆ, ದೇವರು ಏನಂದನು, ಮತ್ತು ಆ ಮಾತುಗಳ ಯೋಗ್ಯ ತಿಳಿವಳಿಕೆಯೇನು?
9 ಯೆಹೋವನ ಜನರಿಗೆ ಶಾಸ್ತ್ರಗ್ರಂಥಗಳ ಒಂದು ಪ್ರಗತಿಪರ ತಿಳಿವಳಿಕೆಯನ್ನು ನೀಡುವುದರ ಮೂಲಕ ದೈವಿಕ ಬೋಧನೆಯು ವಿಜಯಿಯಾಗುತ್ತದೆ. ಉದಾಹರಣೆಗೆ, ಏದೆನಿನಲ್ಲಿ ಒಂದು ಸರ್ಪದ ಮುಖಾಂತರ ಮಾತಾಡಿದವನು ಮತ್ತು ನಿಷೇಧಿಸಿದ ಹಣ್ಣನ್ನು ತಿಂದರೆ ಮರಣವು ದಂಡನೆಯಾಗಿರುವುದೆಂದು ದೇವರು ಹೇಳಿದಾಗ, ಆತನು ಸುಳ್ಳಾಡುತ್ತಿದ್ದಾನೆಂದು ತಪ್ಪಾಗಿ ಆಪಾದಿಸಿದವನು ಪಿಶಾಚನಾದ ಸೈತಾನನೆಂದು ಎಂದು ನಾವು ಕಲಿತಿದ್ದೇವೆ. ಆದರೂ, ಯೆಹೋವ ದೇವರಿಗೆ ಅವಿಧೇಯತೆಯು ಮಾನವ ಕುಲದ ಮೇಲೆ ಖಂಡಿತವಾಗಿ ಮರಣವನ್ನು ತಂದಿತ್ತೆಂದು ನಾವು ನೋಡುತ್ತೇವೆ. (ಆದಿಕಾಂಡ 3:1-6; ರೋಮಾಪುರ 5:12) ಆದರೂ, “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ,” ಎಂದು ಸರ್ಪಕ್ಕೆ ಮತ್ತು ಹೀಗೆ ಸೈತಾನನಿಗೆ ಹೇಳಿದಾಗ, ದೇವರು ಮಾನವ ಕುಲಕ್ಕೆ ನಿರೀಕ್ಷೆಯನ್ನು ಕೊಟ್ಟನು.—ಆದಿಕಾಂಡ 3:15.
10 ಆ ಮಾತುಗಳು ದೈವಿಕ ಬೋಧನೆಯ ಮೂಲಕ ಪ್ರಗತಿಪರವಾಗಿ ಪ್ರಕಟಿಸಲ್ಪಟ್ಟಿರುವ ಒಂದು ರಹಸ್ಯವನ್ನು ಹೊಂದಿದ್ದವು. ರಾಜ್ಯದ ಆಳಿಕೆಗೆ ನ್ಯಾಯವಾದ ಹಕ್ಕನ್ನು ಪಡೆದಿರುವ ಅಬ್ರಹಾಮನ ಮತ್ತು ದಾವೀದನ ವಂಶದವನಾದ ಆ ಸಂತಾನದ ಮೂಲಕ, ಯೆಹೋವನ ಪರಮಾಧಿಕಾರದ ನಿರ್ದೋಷೀಕರಣವು, ಬೈಬಲಿನ ಪ್ರಧಾನ ವಿಷಯವಾಗಿದೆ ಎಂದು ಯೆಹೋವನು ತನ್ನ ಜನರಿಗೆ ಕಲಿಸಿದ್ದಾನೆ. (ಆದಿಕಾಂಡ 22:15-18; 2 ಸಮುವೇಲ 7:12, 13; ಯೆಹೆಜ್ಕೇಲ 21:25-27) ಯೇಸು ಕ್ರಿಸ್ತನು “ಸ್ತ್ರೀ”ಯ, ದೇವರ ವಿಶ್ವ ಸಂಸ್ಥೆಯ ಪ್ರಧಾನ ಸಂತಾನವಾಗಿದ್ದಾನೆಂದು ಕೂಡ ನಮ್ಮ ಮಹಾ ಉಪದೇಶಕನು ನಮಗೆ ಕಲಿಸಿದ್ದಾನೆ. (ಗಲಾತ್ಯ 3:16) ಅವನ ಮೇಲೆ ಸೈತಾನನು ತಂದ ಪ್ರತಿಯೊಂದು ಪರೀಕ್ಷೆಯ ಮಧ್ಯದಲ್ಲಿಯೂ, ಯೇಸು ಮರಣದ—ಸಂತಾನದ ಹಿಮ್ಮಡಿಯ ಕಚ್ಚುವಿಕೆಯ ತನಕ ಸಮಗ್ರತೆಯನ್ನು ಕಾಪಾಡಿಕೊಂಡನು. “ಪುರಾತನ ಸರ್ಪ” ವಾದ ಸೈತಾನನ ತಲೆಯನ್ನು ಜಜ್ಜುವುದರಲ್ಲಿ ಕ್ರಿಸ್ತನೊಂದಿಗೆ ಮಾನವ ಕುಲದೊಳಗಿಂದ 1,44,000 ರಾಜ್ಯದ ಸಹ ಬಾಧ್ಯಸ್ತರು ಪಾಲ್ಗೊಳ್ಳುವರೆಂದು ಕೂಡ ನಾವು ಕಲಿತಿದ್ದೇವೆ. (ಪ್ರಕಟನೆ 14:1-4; 20:2; ರೋಮಾಪುರ 16:20; ಗಲಾತ್ಯ 3:29; ಎಫೆಸ 3:4-6) ದೇವರ ವಾಕ್ಯದ ಅಂಥ ಜ್ಞಾನವನ್ನು ನಾವು ಎಷ್ಟೊಂದು ಗಣ್ಯಮಾಡುತ್ತೇವೆ!
ದೇವರ ಅದ್ಭುತಕರ ಬೆಳಕಿನೊಳಗೆ
11. ಆತ್ಮಿಕ ಬೆಳಕಿನೊಳಗೆ ಜನರನ್ನು ತರುವುದರ ಮೂಲಕ ದೈವಿಕ ಬೋಧನೆಯು ವಿಜಯಿಯಾಗುತ್ತದೆ ಎಂದು ಯಾಕೆ ಹೇಳಸಾಧ್ಯವಿದೆ?
11 ಜನರನ್ನು ಆತ್ಮಿಕ ಬೆಳಕಿನೊಳಗೆ ತರುವ ಮೂಲಕ ದೈವಿಕ ಬೋಧನೆ ವಿಜಯಿಯಾಗುತ್ತದೆ. “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸಕ್ವೀಯ ಪ್ರಜೆಯೂ ಆಗಿದ್ದೀರಿ” ಎಂಬ 1 ಪೇತ್ರ 2:9 ರ ನೆರವೇರಿಕೆಯಲ್ಲಿ ಅಭಿಷಿಕ್ತ ಕ್ರೈಸ್ತರು ಆ ಅನುಭವವನ್ನು ಪಡೆದಿದ್ದಾರೆ. ಭೂಪರದೈಸದಲ್ಲಿ ಸದಾ ಕಾಲ ಜೀವಿಸುವ ನಿರೀಕ್ಷೆಯುಳ್ಳ “ಒಂದು ಮಹಾ ಸಮೂಹ” ದಿಂದ ಕೂಡ ಇಂದು ದೇವ ದತ್ತ ಬೆಳಕು ಆನಂದಿಸಲ್ಪಡುತ್ತಿದೆ. (ಪ್ರಕಟನೆ 7:9; ಲೂಕ. 23:43) ದೇವರು ತನ್ನ ಜನರಿಗೆ ಕಲಿಸುತ್ತಿದ್ದಂತೆ, ಜ್ಞಾನೋಕ್ತಿ 4:18 ಸತ್ಯವೆಂದು ರುಜುವಾಗುತ್ತದೆ: “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.” ವಿದ್ಯಾರ್ಥಿಗಳು ವ್ಯಾಕರಣ, ಇತಿಹಾಸ, ಯಾ ಇನ್ನಿತರ ವಿಷಯವನ್ನು ಕಲಿಯುವಾಗ, ಒಬ್ಬ ಅಧ್ಯಾಪಕನ ಒಳ್ಳೆಯ ಸಹಾಯದಿಂದ ಪ್ರಗತಿ ಮಾಡುವಂತೆಯೇ, ಈ ಪ್ರಗತಿಪರ ಕಲಿಕೆಯ ಪ್ರಕ್ರಿಯೆಯು ದೈವಿಕ ಬೋಧನೆಯ ನಮ್ಮ ತಿಳಿವಳಿಕೆಯನ್ನು ಶುದ್ಧೀಕರಿಸುತ್ತದೆ.
12, 13. ಯೆಹೋವನ ಜನರನ್ನು ಯಾವ ತಾತ್ವಿಕ ಅಪಾಯಗಳ ವಿರುದ್ಧ ದೈವಿಕ ಬೋಧನೆಯು ಸಂರಕ್ಷಿಸಿದೆ?
12 ದೈವಿಕ ಬೋಧನೆಯ ಇನ್ನೊಂದು ವಿಜಯವೇನಂದರೆ ಅದು ತನ್ನ ದೀನ ಗ್ರಾಹಕರನ್ನು ‘ದೆವ್ವಗಳ ಬೋಧನೆಗಳಿಂದ’ ರಕ್ಷಿಸುತ್ತದೆ. (1 ತಿಮೊಥೆಯ 4:1) ಇನ್ನೊಂದು ಎಡೆಯಲ್ಲಿ, ಕ್ರೈಸ್ತಪ್ರಪಂಚವನ್ನು ನೋಡಿರಿ! ರೋಮನ್ ಕ್ಯಾತೊಲಿಕ್ ಬಿಷಪ್ ಜಾನ್ ಹೆನ್ರಿ ನ್ಯೂಮನ್ ಹಿಂದೆ 1878 ರಲ್ಲಿ ಬರೆದದ್ದು: “ಕ್ರೈಸ್ತತ್ವದ ಶಕ್ತಿಯಲ್ಲಿ ಭರವಸೆಯಿಟ್ಟು, ದುಷ್ಟತನದ ಸೋಂಕನ್ನು ಪ್ರತಿರೋಧಿಸಲು ಮತ್ತು ದೆವ್ವಾರಾಧನೆಯ ಸಲಕರಣೆ ಹಾಗೂ ಆಚರಣೆಗಳನ್ನೇ ಸೌವಾರ್ತಿಕ ಉಪಯೋಗಕ್ಕೆ ಪರಿವರ್ತಿಸಲು . . . ಆದಿ ಸಮಯದಿಂದಲೂ ಚರ್ಚಿನ ಪ್ರಭುಗಳು, ಸಂದರ್ಭ ಏಳುವುದಾದರೆ ಜನಸಾಮಾನ್ಯರ ಹಾಗೂ ಶಿಕ್ಷಿತ ವರ್ಗದ ತತ್ವಶಾಸ್ತ್ರದ ಬಳಕೆಯಲ್ಲಿರುವ ಸಂಸ್ಕಾರಗಳನ್ನು ಹಾಗೂ ರೂಢಿಗಳನ್ನು ಅಳವಡಿಸಿಕೊಳ್ಳಲು, ಯಾ ಅನುಕರಿಸಲು, ಯಾ ಅನುಮತಿಸಲು ಸಿದ್ಧರಾಗಿದ್ದರು.” ಪರಿಶುದ್ಧ ನೀರು, ಪವಿತ್ರ ವೈದಿಕ ಪೋಷಾಕುಗಳು, ಮತ್ತು ಮೂರ್ತಿಗಳಂಥ ವಿಷಯಗಳು “ಇವೆಲ್ಲವು ವಿಧರ್ಮಿ ಮೂಲದವುಗಳಾಗಿದ್ದವು, ಮತ್ತು ಚರ್ಚಿನೊಳಗೆ ಅವುಗಳ ಸ್ವೀಕರಿಸುವಿಕೆಯಿಂದ ಶುದ್ಧೀಕರಿಸಲ್ಪಟ್ಟಿದ್ದವು” ಎಂದು ನ್ಯೂಮನ್ ಸೇರಿಸಿದರು. ದೈವಿಕ ಬೋಧನೆಯು ತಮ್ಮನ್ನು ಇಂಥ ಧರ್ಮಭ್ರಷ್ಟತೆಯಿಂದ ಸಂರಕ್ಷಿಸುವುದರಿಂದ ದೇವಜನರು ಖಂಡಿತವಾಗಿಯೂ ಕೃತಜ್ಞರಾಗಿರುತ್ತಾರೆ. ಅದು ದೆವ್ವಾರಾಧನೆಯ ಎಲ್ಲಾ ವಿಧಗಳ ಮೇಲೆ ಜಯಶಾಲಿಯಾಗುತ್ತದೆ.—ಅ. ಕೃತ್ಯಗಳು 19:20.
13 ದೈವಿಕ ಬೋಧನೆಯು ಎಲ್ಲಾ ವಿಧದಲ್ಲಿ ಧಾರ್ಮಿಕ ದೋಷಗಳ ಮೇಲೆ ವಿಜಯಿಯಾಗುತ್ತದೆ. ಉದಾಹರಣೆಗೆ, ದೇವರಿಂದ ಕಲಿಸಲ್ಪಟ್ಟವರಂತೆ, ನಾವು ತ್ರಯೈಕ್ಯದಲ್ಲಿ ನಂಬಿಕೆಯನ್ನು ಇಡುವದಿಲ್ಲ ಆದರೆ ಯೆಹೋವನು ಸರ್ವೋನ್ನತನೆಂದು, ಯೇಸು ಆತನ ಮಗನೆಂದು, ಮತ್ತು ಪವಿತ್ರಾತ್ಮವು ದೇವರ ಕ್ರಿಯಾಶೀಲ ಶಕಿಯ್ತೆಂದು ಅಂಗೀಕರಿಸುತ್ತೇವೆ. ನರಕವು ಮಾನವಕುಲದ ಸಾಮಾನ್ಯ ಸಮಾಧಿಯೆಂದು ನಾವು ತಿಳಿದಿರುವದರಿಂದ, ನಾವು ನರಕಾಗ್ನಿಗೆ ಹೆದರುವುದಿಲ್ಲ. ಮತ್ತು ಮಾನವನ ಆತ್ಮವು ಅಮರವಾಗಿದೆ ಎಂದು ಸುಳ್ಳು ಧರ್ಮದವರು ಹೇಳುವಾಗ, ಸತ್ತವರಿಗೆ ಯಾವ ಪ್ರಜ್ಞೆಯೂ ಇಲ್ಲವೆಂದು ನಮಗೆ ಗೊತ್ತಿದೆ. ದೈವಿಕ ಬೋಧನೆಯ ಮೂಲಕ ಸಂಪಾದಿಸಿದ ಸತ್ಯಗಳ ಪಟ್ಟಿಯು ಬೆಳೆಯುತ್ತಾ ಹೋಗುತ್ತದೆ. ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಆತ್ಮಿಕ ಬಂಧನದಿಂದ ಮುಕ್ತರಾಗಿರುವುದು, ಎಂಥ ಒಂದು ಆಶೀರ್ವಾದವಾಗಿದೆ!—ಯೋಹಾನ 8:31, 32; ಪ್ರಕಟನೆ 18:2, 4, 5.
14. ಆತ್ಮಿಕ ಬೆಳಕಿನಲ್ಲಿ ದೇವರ ಸೇವಕರು ನಡೆಯುತ್ತಾ ಹೋಗಬಲ್ಲರು ಯಾಕೆ?
14 ದೈವಿಕ ಬೋಧನೆಯು ತಾತ್ವಿಕ ತಪ್ಪಿನ ಮೇಲೆ ವಿಜಯಿಯಾಗುವದರಿಂದ, ಆತ್ಮಿಕ ಬೆಳಕಿನಲ್ಲಿ ನಡೆಯುವುದನ್ನು ಮುಂದುವರಿಸಲು ಅದು ದೇವರ ಜನರನ್ನು ಶಕ್ತರನ್ನಾಗಿ ಮಾಡುತ್ತದೆ. ವಾಸ್ತವದಲ್ಲಿ, ಅವರ ಹಿಂದುಗಡೆ ವಾಕ್ಯವೊಂದು ಹೀಗೆ ಹೇಳುವುದನ್ನು ಅವರು ಕೇಳುತ್ತಾರೆ: “ಇದೇ ಮಾರ್ಗ. ಜನರೇ, ಅದರಲ್ಲಿ ನಡೆಯಿರಿ.” (ಯೆಶಾಯ 30:21, NW) ತಪ್ಪು ವಿವೇಚನೆಯಿಂದಲೂ ಕೂಡ ದೇವರ ಬೋಧನೆಯು ಆತನ ಸೇವಕರನ್ನು ಸಂರಕ್ಷಿಸುತ್ತದೆ. ಕೊರಿಂಥದ ಸಭೆಯಲ್ಲಿ “ಸುಳ್ಳು ಅಪೊಸ್ತಲರು” ಸಮಸ್ಯೆಗಳನ್ನು ಮಾಡುತ್ತಿರುವಾಗ, ಅಪೊಸ್ತಲ ಪೌಲನು ಬರೆದದ್ದು: “ನಾವು ಉಪಯೋಗಿಸುವ ಆಯುಧಗಳು ಲೋಕಸಂಬಂಧವಾದ ಆಯುಧಗಳಲ್ಲ; ಅವು ದೇವರ ಎಣಿಕೆಯಲ್ಲಿ ಬಲವಾಗಿದ್ದು ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ. ನಾವು ವಿತರ್ಕಗಳನ್ನೂ ದೇವಜ್ಞಾನವನ್ನು ವಿರೋಧಿಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದ ಎಲ್ಲಾ ಕೊತ್ತಲಗಳನ್ನೂ ಕೆಡವಿಹಾಕಿ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿಯುತ್ತೇವೆ.” (2 ಕೊರಿಂಥ 10:4, 5; 11:13-15) ಸಭೆಯಲ್ಲಿ ದೀನಭಾವದಿಂದ ಕೊಡಲ್ಪಡುವ ಶಿಕ್ಷಣದಿಂದ ಮತ್ತು ಹೊರಗಿನವರಿಗೆ ಸುಸಮಾಚಾರದ ನಮ್ಮ ಸಾರುವಿಕೆಯಿಂದ ದೈವಿಕ ಬೋಧನೆಗೆ ವಿರುದ್ಧವಾಗಿರುವ ವಿವೇಚನೆಗಳು ಉರುಳಿಸಲ್ಪಡುತ್ತವೆ.—2 ತಿಮೊಥೆಯ 2:24-26.
ಆತ್ಮ ಮತ್ತು ಸತ್ಯದಿಂದ ಆರಾಧಿಸುವುದು
15, 16. ಆತ್ಮ ಮತ್ತು ಸತ್ಯದಿಂದ ಯೆಹೋವನನ್ನು ಆರಾಧಿಸುವುದು ಅಂದರೆ ಅರ್ಥವೇನು?
15 ರಾಜ್ಯ ಸಾರುವಿಕೆಯ ಕೆಲಸವು ಮುಂದೆ ಸಾಗಿದಂತೆ, ದೇವರನ್ನು “ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ” ಹೇಗೆ ಆರಾಧಿಸಬೇಕೆಂದು ದೀನರಿಗೆ ತೋರಿಸುವುದರಲ್ಲಿ ದೈವಿಕ ಬೋಧನೆಯು ವಿಜಯಿಯಾಗುತ್ತದೆ. ಸುಖರೆಂಬ ಊರಿನ ಹತ್ತಿರವಿದ್ದ ಯಾಕೋಬನ ಬಾವಿಯ ಬಳಿಯಲ್ಲಿ, ಯೇಸು ಒಬ್ಬ ಸಮಾರ್ಯದ ಸ್ತ್ರೀಗೆ ತಾನು ನಿತ್ಯಜೀವವನ್ನು ಉಂಟುಮಾಡುವ ನೀರನ್ನು ಒದಗಿಸಬಲ್ಲನೆಂದು ಹೇಳಿದನು. ಸಮಾರ್ಯರಿಗೆ ಸೂಚಿಸುತ್ತಾ, ಅವನು ಸೇರಿಸಿದ್ದು: “ನೀವು ಅರಿಯದೆ ಇರುವಂಥದನ್ನು ಆರಾಧಿಸುವವರು . . .; ಸತ್ಯಭಾವದಿಂದ ದೇವಾರಾಧನೆಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ; ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ.” (ಯೋಹಾನ 4:7-15, 21-23) ಆ ಮೇಲೆ ಯೇಸು ತನ್ನನ್ನು ಮೆಸ್ಸೀಯನೆಂದು ಗುರುತುಪಡಿಸಿದನು.
16 ಆದರೆ ನಾವು ದೇವರನ್ನು ಆತ್ಮದೊಂದಿಗೆ ಹೇಗೆ ಆರಾಧಿಸಬಲ್ಲೆವು? ಆತನ ವಾಕ್ಯದ ನಿಷ್ಕೃಷ್ಟ ಜ್ಞಾನದ ಮೇಲೆ ಆಧಾರಿಸಿದ ದೇವರ ಪ್ರೀತಿಯಿಂದ ತುಂಬಿರುವ ಕೃತಜ್ಞತಾಪೂರ್ವಕ ಹೃದಯಗಳಿಂದ ಸಲ್ಲಿಸುವ ನಿರ್ಮಲ ಆರಾಧನೆಯ ಮೂಲಕವೇ. ಧಾರ್ಮಿಕ ಅಸತ್ಯಗಳನ್ನು ನಿರಾಕರಿಸಿ, ಯೆಹೋವನ ಮಹಾ ಪಠ್ಯಪುಸ್ತಕದಲ್ಲಿ ಪ್ರಕಟಿಸಲ್ಪಟ್ಟಂತೆ, ದೈವಿಕ ಚಿತ್ತವನ್ನು ಮಾಡುವ ಮೂಲಕ ನಾವು ಆತನನ್ನು ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬಹುದು.
ಶೋಧನೆಗಳ ಮತ್ತು ಲೋಕದ ಮೇಲೆ ವಿಜಯಿಯಾಗುವುದು
17. ಶೋಧನೆಗಳನ್ನು ಎದುರಿಸಲು ದೈವಿಕ ಬೋಧನೆಯು ಯೆಹೋವನ ಸೇವಕರಿಗೆ ನೆರವಾಗಿದೆ ಎಂದು ನೀವು ಹೇಗೆ ರುಜುಪಡಿಸಬಲ್ಲಿರಿ?
17 ದೇವರ ಜನರು ಕಷ್ಟಗಳನ್ನು ಅನುಭವಿಸುವಾಗ, ದೈವಿಕ ಬೋಧನೆಯು ಮೇಲಿಂದ ಮೇಲೆ ವಿಜಯಿಯಾಗುತ್ತದೆ. ಇದನ್ನು ಪರಿಗಣಿಸಿರಿ: ಎರಡನೆಯ ಲೋಕ ಯುದ್ಧದ ಆರಂಭದಲ್ಲಿ ಸಪ್ಟಂಬರ, 1939 ರಲ್ಲಿ, ಯೆಹೋವನ ಸೇವಕರಿಗೆ ಆತನ ಮಹಾ ಪಠ್ಯಪುಸ್ತಕದ ವಿಶೇಷ ಒಳನೋಟದ ಆವಶ್ಯವಿತ್ತು. ಕ್ರಿಸ್ತೀಯ ತಟಸ್ಥತೆಯ ವಿಷಯದ ಮೇಲೆ ದೈವಿಕ ಬೋಧನೆಯನ್ನು ಸ್ಪಷ್ಟವಾಗಿಗಿ ಸಾದರಪಡಿಸಿದ ನವಂಬರ 1, 1939ರ ವಾಚ್ಟವರ್ನ ಒಂದು ಲೇಖನವು ಮಹತ್ತಾಗಿ ಸಹಾಯಕಾರಿಯಾಗಿತ್ತು. (ಯೋಹಾನ 17:16) ಇದೇ ರೀತಿಯಲ್ಲಿ, 1960 ರುಗಳ ಆದಿಯಲ್ಲಿ, ಸರಕಾರೀ “ಮೇಲಿನ ಅಧಿಕಾರಿಗಳಿಗೆ” ತೋರಿಸುವ ಸಂಬಂಧ ಸೂಚಕವಾದ ಅಧೀನತೆಯ ಮೇಲೆ ವಾಚ್ಟವರ್ ಲೇಖನಗಳು, ಸಾಮಾಜಿಕ ಅಶಾಂತಿಯ ಎದುರಿನಲ್ಲಿಯೂ ದೇವರ ಸೇವಕರು ದೈವಿಕ ಬೋಧನೆಯನ್ನು ಅನುಸರಿಸಲು ಸಹಾಯ ಮಾಡಿತು.—ರೋಮಾಪುರ 13:1-7; ಅ. ಕೃತ್ಯಗಳು 5:29.
18. ಸಾ. ಶ. ಎರಡನೆಯ ಮತ್ತು ಮೂರನೆಯ ಶತಮಾನದಲ್ಲಿ ಕ್ರೈಸ್ತರೆನಿಸಿಕೊಂಡವರು ಕೀಳ್ಮಟ್ಟದ ಮನೋರಂಜನೆಯನ್ನು ಹೇಗೆ ದೃಷ್ಟಿಸಿದರು, ಮತ್ತು ಆ ವಿಷಯದಲ್ಲಿ ದೈವಿಕ ಬೋಧನೆಯು ಯಾವ ಸಹಾಯವನ್ನು ಇಂದು ಒದಗಿಸುತ್ತದೆ?
18 ಕೀಳ್ಮಟ್ಟದ ಮನೋರಂಜನೆಯನ್ನು ಹುಡುಕುವ ಆಕರ್ಷಣೆಗಳಂಥ ಶೋಧನೆಗಳ ಮೇಲೆ ವಿಜಯಿಯಾಗಲು ಕೂಡ ದೈವಿಕ ಬೋಧನೆಯು ನಮಗೆ ಸಹಾಯ ನೀಡುತ್ತದೆ. ಸಾ. ಶ. ಎರಡನೆಯ ಮತ್ತು ಮೂರನೆಯ ಶತಮಾನಗಳ ಹೆಸರುಮಾತ್ರದ ಕ್ರೈಸ್ತರಿಂದ ಏನು ಹೇಳಲಾಯಿತೆಂದು ಗಮನಿಸಿರಿ. ಟೆರ್ಟುಲಿಯನ್ ಬರೆದದ್ದು: “ಸರ್ಕಸ್ಸಿನ ಹುಚ್ಚುತನ, ನಾಟಕರಂಗದ ಲಜ್ಜೆಗೇಡಿತನ, ಮಲ್ಲರಂಗದ ಕ್ರೌರ್ಯದೊಂದಿಗೆ, ಮಾತಿನಲ್ಲಿ, ನೋಟದಲ್ಲಿ ಯಾ ಆಲಿಸುವಿಕೆಯ ವಿಷಯದಲ್ಲಿ ಯಾವ ಸಂಬಂಧವೂ ನಮಗಿರುವುದಿಲ್ಲ.” ಆ ಕಾಲಾವಧಿಯ ಇನ್ನೊಬ್ಬ ಬರಹಗಾರನು ಕೇಳಿದ್ದು: “ದುಷ್ಟತನದ ಕುರಿತು ಅವನು ಯೋಚಿಸಲೂ ಬಾರದೆಂದಿರುವಾಗ, ಒಬ್ಬ ನಂಬಿಗಸ್ತ ಕ್ರೈಸ್ತನು ಈ ವಿಷಯಗಳ ಮಧ್ಯೆ ಮಾಡುವುದಾದರೂ ಏನು? ಕಾಮಾಭಿಲಾಷೆಯ ಪ್ರಾತಿನಿಧ್ಯಗಳಲ್ಲಿ ಅವನು ಸಂತೋಷವನ್ನು ಕಂಡುಕೊಳ್ಳುವುದೇಕೆ?” ಒಂದನೆಯ ಶತಮಾನದ ಕ್ರೈಸ್ತರ ಅನಂತರದ ಕೆಲವು ವರ್ಷಗಳಲ್ಲಿ ಈ ಬರಹಗಾರರು ಜೀವಿಸಿದ್ದರೂ, ಅವರು ಕೀಳ್ಮಟ್ಟದ ವಿನೋದಗಳನ್ನು ಖಂಡಿಸಿದ್ದರು. ಇಂದು, ದೈವಿಕ ಬೋಧನೆಯು ಅಶ್ಲೀಲ, ಅನೈತಿಕ, ಮತ್ತು ಹಿಂಸಾತ್ಮಕ ಮನೋರಂಜನೆಯನ್ನು ದೂರವಿಡಲು ನಮಗೆ ವಿವೇಕವನ್ನು ಕೊಡುತ್ತದೆ.
19. ಲೋಕದ ಮೇಲೆ ವಿಜಯಿಗಳಾಗಲು ದೈವಿಕ ಬೋಧನೆಯು ನಮಗೆ ಹೇಗೆ ನೆರವಾಗುತ್ತದೆ?
19 ದೈವಿಕ ಬೋಧನೆಯನ್ನು ಅನುಸರಿಸುವುದು ನಾವು ಸ್ವತಃ ಲೋಕದ ಮೇಲೆಯೇ ವಿಜಯಿಗಳಾಗುವದನ್ನು ಸಾಧ್ಯಮಾಡುತ್ತದೆ. ಹೌದು, ನಮ್ಮ ಮಹಾ ಶಿಕ್ಷಕನ ಬೋಧನೆಯ ಅನ್ವಯಿಸುವಿಕೆಯು ನಮ್ಮನ್ನು ಸೈತಾನನ ವಶದಲ್ಲಿರುವ ಈ ಲೋಕದ ದುಷ್ಟ ಪ್ರಭಾವಗಳ ಮೇಲೆ ಜಯಶಾಲಿಗಳನ್ನಾಗಿ ಮಾಡುತ್ತದೆ. (2 ಕೊರಿಂಥ 4:4; 1 ಯೋಹಾನ 5:19) ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅನುಸಾರವಾಗಿ ನಾವು ನಡೆದಿದ್ದಾಗ, ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದರೂ ನಮ್ಮನ್ನು ದೇವರು ಬದುಕಿಸಿದನೆಂದು ಎಫೆಸ 2:1-3 ಹೇಳುತ್ತದೆ. ಲೌಕಿಕ ಆಶೆಗಳ ಮತ್ತು ಆತನ ಹಾಗೂ ನಮ್ಮ ವೈರಿಯಿಂದ—ಪ್ರಧಾನ ಮೋಸಗಾರ, ಪಿಶಾಚನಾದ ಸೈತಾನನಿಂದ—ಬರುವ ಆತ್ಮದ ಮೇಲೆ ವಿಜಯಿಗಳಾಗಲು ದೈವಿಕ ಬೋಧನೆಯು ನಮಗೆ ಸಹಾಯ ಮಾಡುವುದರಿಂದ ನಾವು ಯೆಹೋವನಿಗೆ ಉಪಕಾರ ಸಲ್ಲಿಸುತ್ತೇವೆ!
20. ಯಾವ ಪ್ರಶ್ನೆಗಳು ಹೆಚ್ಚಿನ ಪರಿಗಣನೆಗೆ ಅರ್ಹವಾಗಿವೆ?
20 ಹಾಗಾದರೆ, ಅನೇಕ ರೀತಿಗಳಲ್ಲಿ ದೈವಿಕ ಬೋಧನೆಯು ಸ್ಪಷ್ಟವಾಗಿಗಿ ವಿಜಯಿಯಾಗಿದೆ. ವಾಸ್ತವದಲ್ಲಿ, ಅದರ ಎಲ್ಲಾ ವಿಜಯಗಳನ್ನು ಉಲ್ಲೇಖಿಸಲು ಅಸಾಧ್ಯವೆಂದು ತೋರುತ್ತದೆ. ಲೋಕಾದ್ಯಂತದ ಜನರನ್ನು ಅದು ಪ್ರಭಾವಿಸುತ್ತದೆ. ಆದರೆ ಅದು ನಿಮಗಾಗಿ ಏನು ಮಾಡುತ್ತದೆ? ನಿಮ್ಮ ಜೀವಿತವನ್ನು ದೈವಿಕ ಬೋಧನೆಯು ಹೇಗೆ ಪ್ರಭಾವಿಸುತ್ತದೆ?
ನೀವೇನನ್ನು ಕಲಿತಿರಿ?
▫ ನಿಜ ವಿವೇಕದ ಅರ್ಥವನ್ನು ಹೇಗೆ ನಿರೂಪಿಸಬಹುದು?
▫ ಆದಿಕಾಂಡ 3:15ರ ಕುರಿತಾಗಿ ದೇವರು ಪ್ರಗತಿಪರವಾಗಿ ಏನನ್ನು ಪ್ರಕಟಿಸಿದ್ದಾನೆ?
▫ ಆತ್ಮಿಕ ವಿಷಯಗಳಲ್ಲಿ ದೈವಿಕ ಬೋಧನೆಯು ಹೇಗೆ ವಿಜಯಿಯಾಗಿದೆ?
▫ ಆತ್ಮ ಮತ್ತು ಸತ್ಯದಿಂದ ದೇವರನ್ನು ಆರಾಧಿಸುವುದು ಅಂದರೆ ಅರ್ಥವೇನು?
▫ ಶೋಧನೆಗಳ ಮತ್ತು ಲೋಕದ ಮೇಲೆ ವಿಜಯ ಗಳಿಸಲು ದೈವಿಕ ಬೋಧನೆಯು ಯೆಹೋವನ ಸೇವಕರಿಗೆ ಹೇಗೆ ಸಹಾಯ ಮಾಡಿದೆ?
[ಪುಟ 10 ರಲ್ಲಿರುವ ಚಿತ್ರಗಳು]
ಯೇಸು ಮರಣದ—ಸಂತಾನದ ಹಿಮ್ಮಡಿಯ ಕಚ್ಚುವಿಕೆಯ—ತನಕ ಸಮಗ್ರತೆಯನ್ನು ಕಾಪಾಡಿಕೊಂಡನು