ಯೆಹೋವನ ಶಕ್ತಿಯನ್ನು ಮಾನವ ಬಲಹೀನತೆಯು ಉತ್ಪ್ರೇಕ್ಷಿಸುತ್ತದೆ
“ನಾನು ಎಷ್ಟೊಂದು ಸಂತೋಷಿತ ಮತ್ತು ಚೈತನ್ಯಪೂರ್ಣಳಾದ ಪೂರ್ಣ ಸಮಯದ ಶುಶ್ರೂಷಕಿಯಾಗಿದ್ದೆನೆಂದು ಎಲ್ಲರೂ ನೆನಸಿದರು. ನಾನು ಇತರರಿಗೆ ಅವರ ಸಮಸ್ಯೆಗಳಲ್ಲಿ ಯಾವಾಗಲೂ ಸಹಾಯ ಮಾಡುತ್ತಿದ್ದವಳಾಗಿದ್ದೆ. ಅದೇ ಸಮಯದಲ್ಲಿ, ನಾನು ಒಳಗೊಳಗೆ ಸಾಯುತ್ತಿದ್ದೇನೆಂಬಂತೆ ನನಗನಿಸುತ್ತಿತ್ತು. ಶಾಂತಿಗೆಡಿಸುವ ಆಲೋಚನೆಗಳು ಮತ್ತು ಮಾನಸಿಕ ಬೇಗುದಿಯು ನನ್ನ ಮೇಲೆ ಹಾನಿಕಾರಕ ಪ್ರಭಾವವನ್ನು ಬೀರುತ್ತಿತ್ತು. ನಾನು ಜನರಿಂದ ಪ್ರತ್ಯೇಕಿಸಲ್ಪಟ್ಟಿದ್ದೇನೆಂಬ ಅನಿಸಿಕೆಯಾಗಲಾರಂಭಿಸಿತು. ನಾನು ಮನೆಯಲ್ಲೇ ಹಾಸಿಗೆಯಲ್ಲಿರಲು ಬಯಸುತ್ತಿದ್ದೆ. ಅನೇಕ ತಿಂಗಳುಗಳ ವರೆಗೆ, ನಾನು ಸಾಯುವಂತೆ ಬಿಡಲು ಯೆಹೋವನಿಗೆ ಬೇಡಿಕೊಂಡೆ.”—ವಾನೆಸ್ಸಾ.
ಮೇಲೆ ಉಲ್ಲೇಖಿಸಲ್ಪಟ್ಟಿರುವ ವಿದ್ಯಮಾನದಂತೆ, ಯೆಹೋವನ ಸೇವಕರು, “ನಿಭಾಯಿಸಲು ಕಷ್ಟಕರವಾಗಿರುವ” ಈ “ಕಠಿನ ಸಮಯಗಳಲ್ಲಿ” (NW) ಜೀವಿಸುವುದರ ಪರಿಣಾಮಗಳನ್ನು ಕೆಲವೊಮ್ಮೆ ಅನುಭವಿಸುವರೆಂಬುದು ನಿರೀಕ್ಷಿಸತಕ್ಕದ್ದೇ. (2 ತಿಮೊಥೆಯ 3:1) ಕೆಲವರು ಮನಗುಂದಿದವರೂ ಆಗಬಹುದು. (ಫಿಲಿಪ್ಪಿ 2:25-27) ವಿಷಣ್ಣತೆಯು ದೀರ್ಘಾವಧಿಯ ವರೆಗೆ ಇರುವಾಗ, ಅದು ನಮ್ಮ ಬಲವನ್ನು ಕಸಿದುಕೊಳ್ಳಲು ಸಾಧ್ಯವಿದೆ, ಯಾಕಂದರೆ ಬೈಬಲ್ ತಿಳಿಸುವುದು: “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ.” (ಜ್ಞಾನೋಕ್ತಿ 24:10) ಹೌದು, ನಾವು ನಿರುತ್ಸಾಹಿತರಾಗಿರುವಾಗ, ನಮಗೆ ಶಕ್ತಿಯ—ಅಪೊಸ್ತಲ ಪೌಲನು ಯಾವುದನ್ನು “ಸಾಧಾರಣವಾದುದನ್ನು ಮೀರುವ ಶಕ್ತಿ”ಯೆಂದು (NW) ಕರೆದನೋ ಪ್ರಾಯಶಃ ಅದರ—ಅಗತ್ಯವಿದೆ.—2 ಕೊರಿಂಥ 4:7.
ಯೆಹೋವ ದೇವರು ಅಪರಿಮಿತ ಶಕ್ತಿಯ ಮೂಲನಾಗಿದ್ದಾನೆ. ನಾವು ಆತನ ಸೃಷ್ಟಿಯನ್ನು ಪರೀಕ್ಷಿಸುವಾಗ ಇದು ವ್ಯಕ್ತವಾಗುತ್ತದೆ. (ರೋಮಾಪುರ 1:20) ಉದಾಹರಣೆಗಾಗಿ, ಸೂರ್ಯನನ್ನು ಪರಿಗಣಿಸಿರಿ. ಸೂರ್ಯನಿಂದ ಬರುವ ಸುಮಾರು 2.4 ಕೋಟಿ ಕೋಟಿಯ ಹಾರ್ಸ್ ಪವರಿನ ಒಂದು ತಡೆಯಿಲ್ಲದ ಪ್ರವಾಹವನ್ನು ಭೂಮಿಯು ಅಡ್ಡಗಟ್ಟುತ್ತದೆ. ಆದರೂ ಈ ಸಂಖ್ಯೆಯು, ಸೂರ್ಯನ ಶಕ್ತಿಯ ಹುಟ್ಟುವಳಿಯಲ್ಲಿ ಕೇವಲ ಸುಮಾರು 200 ಕೋಟಿಗಳಲ್ಲಿ ಒಂದಂಶವನ್ನು ಪ್ರತಿನಿಧಿಸುತ್ತದೆ. ಮತ್ತು ದೈತ್ಯಾತೀತಗಳು (ಸೂಪರ್ಜೈಯೆಂಟ್ಸ್) ಎಂದು ಜ್ಞಾತವಾಗಿರುವ ನಕ್ಷತ್ರಗಳಿಗೆ ಹೋಲಿಸುವಾಗ ಸೂರ್ಯನು ಚಿಕ್ಕದಾಗಿದ್ದಾನೆ. ಇವುಗಳಲ್ಲಿ ಒಂದು ರೀಜೆಲ್ ಆಗಿದೆ. ಇದು ಓರೀಯೊನ್ ನಕ್ಷತ್ರಮಂಡಲದಲ್ಲಿನ ಒಂದು ನಕ್ಷತ್ರವಾಗಿದೆ. ಇದು ನಮ್ಮ ಸೂರ್ಯನಿಗಿಂತ 50 ಪಟ್ಟು ಹೆಚ್ಚು ದೊಡ್ಡದಾಗಿದೆ ಮತ್ತು ಅದಕ್ಕಿಂತಲೂ 1,50,000 ಪಟ್ಟು ಹೆಚ್ಚಿನ ಶಕ್ತಿಯನ್ನು ಹೊರಸೂಸುತ್ತದೆ!
ಅಂತಹ ಸ್ವರ್ಗೀಯ ಶಕ್ತಿಸ್ಥಾವರಗಳ ಸೃಷ್ಟಿಕರ್ತನು ಸ್ವತಃ “ಚಾಲಕ ಶಕ್ತಿಯ ಸಮೃದ್ಧಿ”ಯನ್ನು (NW) ಹೊಂದಿರುವವನು ಆಗಿರಲೇಬೇಕು. (ಯೆಶಾಯ 40:26; ಕೀರ್ತನೆ 8:3, 4) ಖಂಡಿತವಾಗಿಯೂ, ಯೆಹೋವನು “ದಣಿದು ಬಳಲುವದಿಲ್ಲ” ಎಂದು ಪ್ರವಾದಿಯಾದ ಯೆಶಾಯನು ತಿಳಿಸಿದನು. ಮತ್ತು ಮಾನವ ಬಲಹೀನತೆಯಿಂದಾಗಿ ದಣಿಯುತ್ತಿದ್ದೇವೆಂದು ಭಾವಿಸುವವರೊಂದಿಗೆ ದೇವರು ತನ್ನ ಶಕ್ತಿಯನ್ನು ಹಂಚಿಕೊಳ್ಳಲು ಸಿದ್ಧನಿದ್ದಾನೆ. (ಯೆಶಾಯ 40:28, 29) ಆತನು ಇದನ್ನು ಮಾಡುವ ವಿಧವು, ಕ್ರೈಸ್ತ ಅಪೊಸ್ತಲನಾದ ಪೌಲನ ವಿಷಯದಲ್ಲಿ ದೃಷ್ಟಾಂತಿಸಲ್ಪಟ್ಟಿದೆ.
ಸಂಕಷ್ಟಗಳನ್ನು ನಿಭಾಯಿಸುವುದು
ತಾನು ತಾಳಿಕೊಳ್ಳಲೇಬೇಕಾದ ಒಂದು ಅಡಚಣೆಯ ಕುರಿತಾಗಿ ಪೌಲನು ಕೊರಿಂಥದವರಿಗೆ ತಿಳಿಸಿದನು. ಅವನು ಅದನ್ನು ‘ಶರೀರದಲ್ಲಿನ ಒಂದು ಶೂಲ’ ಎಂದು ಕರೆದನು. (2 ಕೊರಿಂಥ 12:7) ಈ “ಶೂಲ”ವು, ಪ್ರಾಯಶಃ ದುರ್ಬಲಗೊಂಡಿರುವ ದೃಷ್ಟಿಯಂತಹ ಒಂದು ಆರೋಗ್ಯ ಸಮಸ್ಯೆಯಾಗಿದ್ದಿರಬಹುದು. (ಗಲಾತ್ಯ 4:15; 6:11) ಅಥವಾ ಪೌಲನು ಸುಳ್ಳು ಅಪೊಸ್ತಲರು ಇಲ್ಲವೇ ತನ್ನ ಅಪೊಸ್ತಲತ್ವವನ್ನು ಮತ್ತು ಕೆಲಸವನ್ನು ಪ್ರತಿಭಟಿಸಿದ ಇತರ ಗಲಭೆಗಾರರನ್ನು ಸೂಚಿಸುತ್ತಿದ್ದಿರಬಹುದು. (2 ಕೊರಿಂಥ 11:5, 6, 12-15; ಗಲಾತ್ಯ 1:6-9; 5:12) ಅದು ಏನೇ ಆಗಿದ್ದಿರಲಿ, ‘ಶರೀರದಲ್ಲಿನ ಈ ಶೂಲ’ವು ಪೌಲನನ್ನು ಕಡು ಸಂಕಟಕ್ಕೊಳಪಡಿಸಿತು, ಮತ್ತು ಅದು ತೆಗೆದುಹಾಕಲ್ಪಡುವಂತೆ ಅವನು ಪದೇ ಪದೇ ಪ್ರಾರ್ಥಿಸಿದನು.—2 ಕೊರಿಂಥ 12:8.
ಆದಾಗಲೂ, ಯೆಹೋವನು ಪೌಲನ ಬೇಡಿಕೆಯನ್ನು ದಯಪಾಲಿಸಲಿಲ್ಲ. ಅದಕ್ಕೆ ಬದಲಾಗಿ ಅವನು ಪೌಲನಿಗೆ ಹೇಳಿದ್ದು: “ನನ್ನ ಕೃಪೆಯೇ ನಿನಗೆ ಸಾಕು.” (2 ಕೊರಿಂಥ 12:9) ಇದರಿಂದ ಯೆಹೋವನು ಏನನ್ನು ಅರ್ಥೈಸಿದನು? ಒಳ್ಳೇದು, ಕ್ರೈಸ್ತರನ್ನು ಹಿಂಸಿಸುವ ವಿಷಯದಲ್ಲಿ ನಾವು ಪೌಲನ ಗತ ನಡವಳಿಕೆಯನ್ನು ಪರಿಗಣಿಸುವಾಗ, ಒಬ್ಬ ಅಪೊಸ್ತಲನಾಗಿ ಸೇವೆ ಸಲ್ಲಿಸುವುದಿರಲಿ, ದೇವರೊಂದಿಗೆ ಒಂದು ಸಂಬಂಧವನ್ನು ಪಡೆಯಸಾಧ್ಯವಿದ್ದುದ್ದು ಕೇವಲ ಅಪಾತ್ರ ದಯೆಯಿಂದಲೇ!a (ಜೆಕರ್ಯ 2:8ನ್ನು ಹೋಲಿಸಿರಿ; ಪ್ರಕಟನೆ 16:5, 6.) ಶಿಷ್ಯತನದ ಸುಯೋಗವು “ಸಾಕು” ಎಂದು ಯೆಹೋವನು ಪೌಲನಿಗೆ ಹೇಳುತ್ತಿದ್ದಿರಬಹುದು. ಜೀವನದ ವೈಯಕ್ತಿಕ ಸಮಸ್ಯೆಗಳ ಅದ್ಭುತಕರವಾದ ತೆಗೆದುಹಾಕುವಿಕೆಯಿಂದ ಅದು ಜೊತೆಗೂಡಿಸಲ್ಪಡಲಿಕ್ಕಿಲ್ಲ. ನಿಜವಾಗಿಯೂ, ಕೆಲವು ಕಷ್ಟಗಳು ಹೆಚ್ಚಿನ ಸುಯೋಗಗಳ ಪರಿಣಾಮವಾಗಿಯೂ ಬರಬಹುದು. (2 ಕೊರಿಂಥ 11:24-27; 2 ತಿಮೊಥೆಯ 3:12) ಏನೇ ಆಗಲಿ, ಪೌಲನು ತನ್ನ ‘ಶರೀರದಲ್ಲಿನ ಶೂಲವನ್ನು’ ಕೇವಲ ತಾಳಿಕೊಳ್ಳಬೇಕಾಗಿತ್ತು.
ಆದರೆ ಯೆಹೋವನು ಖಂಡಿತವಾಗಿಯೂ ಪೌಲನನ್ನು ನಿರ್ದಯವಾಗಿ ತೊರೆಯುತ್ತಿರಲಿಲ್ಲ. ಬದಲಿಗೆ, ಆತನು ಅವನಿಗೆ ಹೇಳಿದ್ದು: “ನನ್ನ ಶಕ್ತಿಯು ಬಲಹೀನತೆಯಲ್ಲಿ ಸಿದ್ಧಗೊಳಿಸಲ್ಪಡುತ್ತದೆ.” (2 ಕೊರಿಂಥ 12:9, NW) ಹೌದು, ಪೌಲನಿಗೆ ತನ್ನ ಸನ್ನಿವೇಶವನ್ನು ನಿಭಾಯಿಸಲು ಬೇಕಾಗಿರುವ ಬಲವನ್ನು ಯೆಹೋವನು ಪ್ರೀತಿಯಿಂದ ಒದಗಿಸಲಿದ್ದನು. ಹೀಗೆ, ಪೌಲನ ‘ಶರೀರದಲ್ಲಿನ ಶೂಲ’ವು ಒಂದು ವಸ್ತುಪಾಠವಾಯಿತು. ಅದು ಅವನಿಗೆ ತನ್ನ ಸ್ವಂತ ಬಲಕ್ಕಿಂತ ಯೆಹೋವನ ಬಲದ ಮೇಲೆ ಆತುಕೊಳ್ಳುವಂತೆ ಕಲಿಸಿತು. ಪೌಲನು ಈ ಪಾಠವನ್ನು ಚೆನ್ನಾಗಿ ಕಲಿತನೆಂಬುದು ವ್ಯಕ್ತ. ಯಾಕಂದರೆ, ಕೆಲವು ವರ್ಷಗಳ ಅನಂತರ ಅವನು ಫಿಲಿಪ್ಪಿಯವರಿಗೆ ಬರೆದುದು: “ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತುಕೊಂಡಿದ್ದೇನೆ. ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:11, 13.
ನಿಮ್ಮ ಕುರಿತಾಗಿ ಏನು? ನೀವು ಪ್ರಾಯಶಃ ಒಂದು ಅಸ್ವಸ್ಥತೆ ಅಥವಾ ನಿಮಗೆ ತುಂಬ ವ್ಯಾಕುಲತೆಯನ್ನು ಉಂಟುಮಾಡುವ ಜೀವನದಲ್ಲಿನ ಒಂದು ಪರಿಸ್ಥಿತಿಯನ್ನು, ಒಂದು ರೀತಿಯ ‘ಶರೀರದಲ್ಲಿನ ಶೂಲ’ವನ್ನು ತಾಳಿಕೊಳ್ಳುತ್ತಿದ್ದೀರೊ? ಹಾಗಿದ್ದಲ್ಲಿ, ಸಾಂತ್ವನಪಡೆದುಕೊಳ್ಳಿರಿ. ಯೆಹೋವನು ತಡೆಯನ್ನು ಅದ್ಭುತಕರವಾಗಿ ತೆಗೆದುಹಾಕದಿರಬಹುದಾದರೂ, ನೀವು ಜೀವನದಲ್ಲಿ ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುತ್ತಾ ಮುಂದುವರಿದಂತೆ, ಅದನ್ನು ನಿಭಾಯಿಸಲು ನಿಮಗೆ ಬೇಕಾದ ವಿವೇಕ ಮತ್ತು ಸ್ಥೈರ್ಯವನ್ನು ಆತನು ದಯಪಾಲಿಸಬಲ್ಲನು.—ಮತ್ತಾಯ 6:33.
ಅಸ್ವಸ್ಥತೆ ಅಥವಾ ವೃದ್ಧಾಪ್ಯವು, ನೀವು ಕ್ರೈಸ್ತ ಚಟುವಟಿಕೆಯಲ್ಲಿ ಮಾಡಲು ಇಷ್ಟಪಡುತ್ತಿರುವಷ್ಟು ಕೆಲಸವನ್ನು ಪೂರೈಸುವುದರಿಂದ ನಿಮ್ಮನ್ನು ಅಡ್ಡಗಟ್ಟುತ್ತದಾದರೆ, ಹತಾಶೆಗೊಳ್ಳದಿರಿ. ನಿಮ್ಮ ಸಂಕಷ್ಟವನ್ನು, ಯೆಹೋವನಿಗೆ ನೀವು ಸಲ್ಲಿಸುವ ಸೇವೆಯನ್ನು ಸೀಮಿತಗೊಳಿಸುವಂತಹ ವಿಷಯವಾಗಿ ದೃಷ್ಟಿಸುವ ಬದಲಿಗೆ, ಆತನ ಮೇಲೆ ನಿಮ್ಮ ಆತುಕೊಳ್ಳುವಿಕೆಯನ್ನು ಹೆಚ್ಚಿಸುವ ಒಂದು ಅವಕಾಶದೋಪಾದಿ ದೃಷ್ಟಿಸಿರಿ. ಒಬ್ಬ ಕ್ರೈಸ್ತನ ಮೌಲ್ಯವನ್ನು, ಅವನ ಚಟುವಟಿಕೆಯ ಮಟ್ಟದಿಂದಲ್ಲ, ಬದಲಾಗಿ ಅವನ ನಂಬಿಕೆ ಮತ್ತು ಪ್ರೀತಿಯ ಅಗಾಧತೆಯಿಂದ ಅಳೆಯಲಾಗುತ್ತದೆಂಬುದನ್ನೂ ನೆನಪಿನಲ್ಲಿಡಿರಿ. (ಹೋಲಿಸಿರಿ ಮಾರ್ಕ 12:41-44.) ನಿಮ್ಮ ಪೂರ್ಣ ಪ್ರಾಣದಿಂದ ಯೆಹೋವನನ್ನು ಪ್ರೀತಿಸುವುದು, ನೀವು ನಿಮ್ಮ ಸ್ವಂತ—ಇತರರದ್ದಲ್ಲ—ಅತ್ಯುತ್ತಮ ಸಾಮರ್ಥ್ಯದಿಂದ ಆತನಿಗೆ ಸೇವೆಸಲ್ಲಿಸುವುದು ಎಂದರ್ಥ.—ಮತ್ತಾಯ 22:37; ಗಲಾತ್ಯ 6:4, 5.
ನಿಮ್ಮ ‘ಶರೀರದಲ್ಲಿನ ಶೂಲ’ವು, ಒಬ್ಬ ಪ್ರಿಯ ವ್ಯಕ್ತಿಯ ಮರಣದಂತಹ, ಜೀವಿತದಲ್ಲಿನ ಒಂದು ಸಂಕಟಕರ ಪರಿಸ್ಥಿತಿಯನ್ನು ಒಳಗೊಂಡಿರುವುದಾದರೆ, ಬೈಬಲಿನ ಈ ಬುದ್ಧಿವಾದವನ್ನು ಅನುಸರಿಸಿರಿ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” (ಕೀರ್ತನೆ 55:22) ಸಿಲ್ವಿಯ ಎಂಬ ಹೆಸರಿನ ಒಬ್ಬ ಕ್ರೈಸ್ತ ಸ್ತ್ರೀಯು ಇದನ್ನು ಮಾಡಿದಳು. ಕೆಲವೇ ವರ್ಷಗಳ ಅವಧಿಯಲ್ಲಿ, 50 ವರ್ಷಗಳ ವಿವಾಹದ ಅನಂತರ ಅವಳು ತನ್ನ ಗಂಡನನ್ನು ಮತ್ತು ಕುಟುಂಬದ ಇತರ ಒಂಬತ್ತು ಮಂದಿ ಸದಸ್ಯರನ್ನು ಸಹ—ಎರಡು ಎಳೆಯ ಮೊಮ್ಮಕ್ಕಳನ್ನು ಸೇರಿಸಿ—ಮರಣದಲ್ಲಿ ಕಳೆದುಕೊಂಡಳು. “ಯೆಹೋವನ ಸಹಾಯವಿಲ್ಲದಿರುತ್ತಿದ್ದರೆ, ನಾನು ಅನಿಯಂತ್ರಿತವಾಗಿ ದುಃಖಿಸುತ್ತಿದ್ದೆನೇನೊ. ಆದರೆ ನಾನು ಪ್ರಾರ್ಥಿಸುವುದರಿಂದ ತುಂಬ ಸಾಂತ್ವನವನ್ನು ಪಡೆಯುತ್ತೇನೆ. ನಾನು ಯೆಹೋವನೊಂದಿಗೆ ಕಾರ್ಯತಃ ಒಂದು ಎಡೆಬಿಡದ ಸಂಭಾಷಣೆಯನ್ನು ನಡೆಸುತ್ತೇನೆ. ಆತನು ನನಗೆ ತಾಳಿಕೊಳ್ಳಲು ಬಲವನ್ನು ಕೊಡುತ್ತಾನೆಂದು ನನಗೆ ತಿಳಿದಿದೆ.”
‘ಸಕಲವಿಧವಾಗಿ ಸಂತೈಸುವ ದೇವರು’ ದುಃಖಿಸುತ್ತಿರುವವರಿಗೆ ತಾಳಿಕೊಳ್ಳಲು ಶಕ್ತಿಯನ್ನು ಕೊಡಬಲ್ಲನೆಂಬುದನ್ನು ತಿಳಿಯುವುದು ಎಷ್ಟು ಪುನರಾಶ್ವಾಸನೀಯ! (2 ಕೊರಿಂಥ 1:3; 1 ಥೆಸಲೊನೀಕ 4:13) ಇದನ್ನು ಗಣ್ಯಮಾಡುತ್ತಾ, ನಾವು ಈ ವಿಷಯದ ಕುರಿತಾದ ಪೌಲನ ತೀರ್ಮಾನವನ್ನು ಅರ್ಥೈಸಿಕೊಳ್ಳಸಾಧ್ಯವಿದೆ. ಅವನು ಬರೆದುದು: “ಕ್ರಿಸ್ತನ ನಿಮಿತ್ತ ನನಗೆ ನಿರ್ಬಲಾವಸ್ಥೆಯೂ ತಿರಸ್ಕಾರವೂ ಕೊರತೆಯೂ ಹಿಂಸೆಯೂ ಇಕ್ಕಟ್ಟೂ ಸಂಭವಿಸಿದಾಗ ಸಂತುಷ್ಟನಾಗಿದ್ದೇನೆ. ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ.”—2 ಕೊರಿಂಥ 12:10.
ಅಪರಿಪೂರ್ಣತೆಗಳನ್ನು ನಿಭಾಯಿಸುವುದು
ನಾವೆಲ್ಲರೂ, ನಮ್ಮ ಪ್ರಥಮ ಮಾನವ ಹೆತ್ತವರಿಂದ ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದಿದ್ದೇವೆ. (ರೋಮಾಪುರ 5:12) ಫಲಸ್ವರೂಪವಾಗಿ, ಪತಿತ ಶರೀರದ ಬಯಕೆಗಳ ವಿರುದ್ಧವಾದ ಒಂದು ಹೋರಾಟದಲ್ಲಿ ನಾವಿದ್ದೇವೆ. “ಹಳೆಯ ವ್ಯಕ್ತಿತ್ವದ” ಸ್ವರೂಪಲಕ್ಷಣಗಳು, ನಮ್ಮ ಮೇಲೆ ನಾವು ನೆನಸಿದುದಕ್ಕಿಂತಲೂ ಹೆಚ್ಚು ಬಲಶಾಲಿಯಾದ ಹಿಡಿತವನ್ನು ಪಡೆದಿವೆಯೆಂಬುದನ್ನು ಕಂಡುಹಿಡಿಯುವುದು ಎಷ್ಟು ಎದೆಗುಂದಿಸುವಂತಹ ವಿಷಯವಾಗಿರಸಾಧ್ಯವಿದೆ! (ಎಫೆಸ 4:22-24) ಅಂತಹ ಸಮಯಗಳಲ್ಲಿ, ಅಪೊಸ್ತಲ ಪೌಲನಂತೆ ನಮಗೆ ಅನಿಸಬಹುದು. ಅವನು ಬರೆದುದು: “ಅಂತರಾತ್ಮದೊಳಗೆ ದೇವರ ನಿಯಮದಲ್ಲಿ ಆನಂದಪಡುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ನೋಡುತ್ತೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ.”—ರೋಮಾಪುರ 7:22, 23.
ಇಲ್ಲಿಯೂ ನಾವು ಯೆಹೋವನಿಂದ ಬರುವ ಶಕ್ತಿಯ ಪ್ರಯೋಜನವನ್ನು ಪಡೆದುಕೊಳ್ಳಬಲ್ಲೆವು. ಒಂದು ವೈಯಕ್ತಿಕ ಬಲಹೀನತೆಯೊಂದಿಗೆ ಹೆಣಗಾಡುತ್ತಿರುವಾಗ, ಅದೇ ಸಮಸ್ಯೆಯ ಕುರಿತಾಗಿ ನೀವು ಆತನನ್ನು ಎಷ್ಟೇ ಸಲ ಸಮೀಪಿಸಬೇಕಾಗುವುದಾದರೂ ಶ್ರದ್ಧಾಪೂರ್ವಕವಾಗಿ ಆತನ ಕ್ಷಮೆಯನ್ನು ಕೋರುತ್ತಾ, ಪ್ರಾರ್ಥನೆಯಲ್ಲಿ ಆತನನ್ನು ಸಮೀಪಿಸುವುದನ್ನು ಎಂದೂ ನಿಲ್ಲಿಸಬೇಡಿರಿ. ಆತನ ಅಪಾತ್ರ ದಯೆಯಿಂದಾಗಿ, “ಹೃದಯಗಳನ್ನೇ ಪರೀಕ್ಷಿಸುವ” ಮತ್ತು ನಿಮ್ಮ ಪ್ರಾಮಾಣಿಕತೆಯ ಅಗಾಧತೆಯನ್ನು ನೋಡಬಲ್ಲ ಯೆಹೋವನು, ನಿಮಗೆ ಒಂದು ಶುದ್ಧ ಮನಸ್ಸಾಕ್ಷಿಯನ್ನು ದಯಪಾಲಿಸುವನು. (ಜ್ಞಾನೋಕ್ತಿ 21:2) ತನ್ನ ಪವಿತ್ರಾತ್ಮದ ಮೂಲಕ, ಶಾರೀರಿಕ ಬಲಹೀನತೆಗಳ ವಿರುದ್ಧವಾದ ಹೋರಾಟವನ್ನು ಪುನಃ ಆರಂಭಿಸಲು ಯೆಹೋವನು ನಿಮಗೆ ಬಲವನ್ನು ಒದಗಿಸಬಲ್ಲನು.—ಲೂಕ 11:13.
ಇತರರ ಅಪರಿಪೂರ್ಣತೆಗಳೊಂದಿಗೆ ವ್ಯವಹರಿಸುವಾಗಲೂ ನಮಗೆ ಯೆಹೋವನಿಂದ ಬಲದ ಅಗತ್ಯವಿದೆ. ಉದಾಹರಣೆಗಾಗಿ, ಒಬ್ಬ ಜೊತೆ ಕ್ರೈಸ್ತನು ನಮ್ಮೊಂದಿಗೆ “ಕತ್ತಿತಿವಿದ ಹಾಗೆ ದುಡುಕಿ ಮಾತಾಡ”ಬಹುದು. (ಜ್ಞಾನೋಕ್ತಿ 12:18) ಯಾರಿಗೆ ತಾವು ಮಾಡುತ್ತಿರುವುದು ತಪ್ಪು ಎಂದು ತಿಳಿದಿರಬೇಕೆಂದು ನಮಗನಿಸುತ್ತದೊ, ವಿಶೇಷವಾಗಿ ಅಂತಹವರಿಂದಲೇ ಅದು ಬರುವಾಗ, ಅದು ನಮ್ಮನ್ನು ತುಂಬ ನೋಯಿಸಸಾಧ್ಯವಿದೆ. ನಾವು ತೀರ ಕ್ಷೋಭಿತರಾಗಬಹುದು. ಕೆಲವರು ಇಂತಹ ಮನನೋಯಿಸುವಿಕೆಗಳನ್ನು ಯೆಹೋವನನ್ನು ಬಿಟ್ಟುಹೋಗಲಿಕ್ಕಾಗಿರುವ ಕಾರಣವಾಗಿಯೂ ಉಪಯೋಗಿಸಿದ್ದಾರೆ. ಇದು ಎಲ್ಲಕ್ಕಿಂತಲೂ ಮಹಾ ದೊಡ್ಡ ತಪ್ಪು!
ಆದಾಗಲೂ, ಒಂದು ಸಮತೋಲನದ ಮನೋಭಾವವು, ನಾವು ಇತರರ ಬಲಹೀನತೆಗಳನ್ನು ಸರಿಯಾದ ದೃಷ್ಟಿಕೋನದಿಂದ ವೀಕ್ಷಿಸಲು ನಮಗೆ ಸಹಾಯ ಮಾಡುವುದು. ಅಪರಿಪೂರ್ಣ ಮಾನವರಿಂದ ನಾವು ಪರಿಪೂರ್ಣತೆಯನ್ನು ನಿರೀಕ್ಷಿಸಸಾಧ್ಯವಿಲ್ಲ. “ಪಾಪಮಾಡದ ಮನುಷ್ಯನು ಒಬ್ಬನೂ ಇಲ್ಲವಲ್ಲಾ” ಎಂದು ವಿವೇಕಿ ಅರಸನಾದ ಸೊಲೊಮೋನನು ನಮಗೆ ಜ್ಞಾಪಕ ಹುಟ್ಟಿಸುತ್ತಾನೆ. (1 ಅರಸುಗಳು 8:46) ಸುಮಾರು ಏಳು ದಶಕಗಳಿಂದ ಯೆಹೋವನಿಗೆ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಒಬ್ಬ ಅಭಿಷಿಕ್ತ ಕ್ರೈಸ್ತನಾದ ಆರ್ಥರ್ ಅವಲೋಕಿಸಿದ್ದು: “ಜೊತೆ ಸೇವಕರಲ್ಲಿನ ಬಲಹೀನತೆಗಳು, ನಮ್ಮ ಕ್ರೈಸ್ತ ಸತ್ತ್ವವನ್ನು ಪರೀಕ್ಷಿಸುತ್ತಾ, ದೇವರ ಕಡೆಗಿನ ನಮ್ಮ ಸಮಗ್ರತೆಯನ್ನು ರುಜುಪಡಿಸಲು ಒಂದು ಅವಕಾಶವನ್ನು ರಚಿಸುತ್ತವೆ. ಮಾನವರು ಏನು ಹೇಳುತ್ತಾರೊ ಅಥವಾ ಮಾಡುತ್ತಾರೊ, ಅದು ಯೆಹೋವನಿಗೆ ನಾವು ಸಲ್ಲಿಸುವ ಸೇವೆಗೆ ಅಡ್ಡಬರುವಂತೆ ನಾವು ಅನುಮತಿಸುವಲ್ಲಿ, ನಾವು ಮಾನವರನ್ನು ಸೇವಿಸುತ್ತಿದ್ದೇವೆ. ಅಲ್ಲದೆ, ನಮ್ಮ ಸಹೋದರರೂ ಯೆಹೋವನನ್ನು ಪ್ರೀತಿಸುತ್ತಿರಬೇಕು. ನಾವು ಅವರಲ್ಲಿನ ಒಳಿತನ್ನು ಹುಡುಕುವಲ್ಲಿ, ಅವರು ಅಷ್ಟೇನೂ ಕೆಟ್ಟವರಲ್ಲವೆಂಬುದನ್ನು ನಾವು ಬೇಗನೆ ನೋಡುವೆವು.”
ಸಾರಲಿಕ್ಕಾಗಿ ಶಕ್ತಿ
ಸ್ವರ್ಗಕ್ಕೆ ಏರಿಹೋಗುವ ಮುಂಚೆ, ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರಬೇಕು.”—ಅ. ಕೃತ್ಯಗಳು 1:8.
ಯೇಸುವಿನ ಮಾತುಗಳಿಗೆ ಸತ್ಯವಾಗಿ, ಈ ಕೆಲಸವು ಈಗ ಭೂಗೋಳದಾದ್ಯಂತ 233 ದೇಶಗಳಲ್ಲಿ ಯೆಹೋವನ ಸಾಕ್ಷಿಗಳಿಂದ ನಡೆಸಲ್ಪಡುತ್ತಿದೆ. ಒಟ್ಟಿನಲ್ಲಿ, ಅವರು ಪ್ರತಿ ವರ್ಷ, ಯೆಹೋವನ ಜ್ಞಾನವನ್ನು ಪಡೆದುಕೊಳ್ಳಲು ಇತರರಿಗೆ ಸಹಾಯ ಮಾಡುವುದರಲ್ಲಿ 100 ಕೋಟಿಗಿಂತಲೂ ಹೆಚ್ಚು ತಾಸುಗಳನ್ನು ವ್ಯಯಿಸುತ್ತಾರೆ. ಈ ಕೆಲಸವನ್ನು ಪೂರೈಸುವುದು ಯಾವಾಗಲೂ ಸುಲಭವಲ್ಲ. ಕೆಲವು ದೇಶಗಳಲ್ಲಿ ರಾಜ್ಯ ಸಾರುವಿಕೆಯ ಕೆಲಸವು ನಿಷೇಧಿಸಲ್ಪಟ್ಟಿದೆ ಅಥವಾ ನಿರ್ಬಂಧಿಸಲ್ಪಟ್ಟಿದೆ. ಯಾರು ಈ ಕೆಲಸವನ್ನು ಮಾಡುತ್ತಿದ್ದಾರೊ ಅವರನ್ನೂ ಪರಿಗಣಿಸಿರಿ. ಅವರು, ತಮ್ಮ ಸ್ವಂತ ಪಾಲಿನ ಸಮಸ್ಯೆಗಳು ಮತ್ತು ವ್ಯಾಕುಲತೆಗಳು ಇರುವ, ದುರ್ಬಲ, ಅಪರಿಪೂರ್ಣ ಮಾನವರಾಗಿದ್ದಾರೆ. ಆದರೂ ಕೆಲಸವು ಮುಂದುವರಿಯುತ್ತದೆ, ಮತ್ತು ಫಲಸ್ವರೂಪವಾಗಿ, ಕಳೆದ ಮೂರು ವರ್ಷಗಳಲ್ಲಿ ಹತ್ತು ಲಕ್ಷಕ್ಕಿಂತಲೂ ಹೆಚ್ಚು ವ್ಯಕ್ತಿಗಳು ಯೆಹೋವನಿಗೆ ತಮ್ಮ ಜೀವಿತಗಳನ್ನು ಸಮರ್ಪಿಸಿಕೊಂಡು, ತಮ್ಮ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದ್ದಾರೆ. (ಮತ್ತಾಯ 28:18-20) ನಿಜವಾಗಿಯೂ, ಈ ಕೆಲಸವು ಕೇವಲ ದೇವರ ಬಲದಿಂದಲೇ ಪೂರೈಸಲ್ಪಡುತ್ತಿದೆ. ಪ್ರವಾದಿಯಾದ ಜೆಕರ್ಯನ ಮೂಲಕ ಯೆಹೋವನು ಹೇಳಿದ್ದು: “ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ ಆತ್ಮದಿಂದಲೇ.”—ಜೆಕರ್ಯ 4:6.
ನೀವು ಸುವಾರ್ತೆಯ ಒಬ್ಬ ಪ್ರಚಾರಕರಾಗಿರುವಲ್ಲಿ, ನೀವು ಆ ಮಹಾ ಸಾಧನೆಯಲ್ಲಿ ಒಂದು ಪಾಲನ್ನು—ಅದು ಎಷ್ಟೇ ಚಿಕ್ಕದಾಗಿ ತೋರಲಿ—ತೆಗೆದುಕೊಳ್ಳುತ್ತಿದ್ದೀರಿ. ನೀವು ತಾಳಿಕೊಳ್ಳಬೇಕಾದ ‘ಶೂಲಗಳನ್ನು’ ಲಕ್ಷಿಸದೆ, ಯೆಹೋವನು “ಈ ಕೆಲಸವನ್ನೂ ಇದರಲ್ಲಿ ನೀವು [ಆತನ] ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ” ಮರೆತುಬಿಡುವುದಿಲ್ಲವೆಂಬ ಆಶ್ವಾಸನೆ ನಿಮಗಿರಬಲ್ಲದು. (ಇಬ್ರಿಯ 6:10) ಆದುದರಿಂದ, ಎಲ್ಲಾ ಚಾಲಕ ಶಕ್ತಿಯ ಮೂಲನಾಗಿರುವಾತನ ಮೇಲೆ ಬೆಂಬಲಕ್ಕಾಗಿ ಆತುಕೊಳ್ಳುವುದನ್ನು ಮುಂದುವರಿಸಿರಿ. ಯೆಹೋವನ ಬಲದಿಂದಲೇ ನಾವು ತಾಳಿಕೊಳ್ಳಬಲ್ಲೆವೆಂಬುದನ್ನು ನೆನಪಿನಲ್ಲಿಡಿರಿ; ಆತನ ಶಕ್ತಿಯು ನಮ್ಮ ಬಲಹೀನತೆಗಳಲ್ಲಿ ಸಿದ್ಧಗೊಳಿಸಲ್ಪಡುತ್ತದೆ.
[ಪಾದಟಿಪ್ಪಣಿ]
a “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿ”ರುವುದರಿಂದ, ಯಾವ ಮನುಷ್ಯರೇ ಆಗಲಿ, ಆತನೊಂದಿಗೆ ಒಂದು ಸಂಬಂಧದೊಳಗೆ ಬರಶಕ್ತರಾಗುವುದು ದೇವರ ಕರುಣೆಯ ರುಜುವಾತಾಗಿದೆ ಎಂಬುದು ಖಂಡಿತ.—ರೋಮಾಪುರ 3:23.
[ಪುಟ 26 ರಲ್ಲಿರುವ ಚಿತ್ರ]
ಸಾರುವ ಕೆಲಸವು ಕೇವಲ ಯೆಹೋವನ ಶಕ್ತಿಯಿಂದ ಪೂರೈಸಲ್ಪಡುತ್ತದೆ