ಸಮಯ ಮತ್ತು ಕಾಲಗಳು ಯೆಹೋವನ ಕೈಯಲ್ಲಿವೆ
“ತಂದೆಯು ಸ್ವಂತ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವದು ನಿಮ್ಮ ಕೆಲಸವಲ್ಲ.”—ಅ. ಕೃತ್ಯಗಳು 1:7.
1. ಯೇಸು ತನ್ನ ಅಪೊಸ್ತಲರ, ಸಮಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹೇಗೆ ಉತ್ತರಿಸಿದನು?
ಕ್ರೈಸ್ತಪ್ರಪಂಚದಲ್ಲಿ ಮತ್ತು ಲೋಕದಲ್ಲೆಲ್ಲಾ “ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರು”ವವರು, ಈ ದುಷ್ಟ ವ್ಯವಸ್ಥೆಯು ಅಂತ್ಯಗೊಂಡು, ದೇವರ ನೀತಿಯ ಹೊಸ ಲೋಕವು ಅದನ್ನು ಯಾವಾಗ ಸ್ಥಾನಪಲ್ಲಟಗೊಳಿಸುವುದು ಎಂಬುದರ ಕುರಿತಾಗಿ ಕುತೂಹಲಪಡುವುದು ಸ್ವಾಭಾವಿಕ. (ಯೆಹೆಜ್ಕೇಲ 9:4; 2 ಪೇತ್ರ 3:13) ಯೇಸುವಿನ ಅಪೊಸ್ತಲರು ಅವನ ಮರಣಕ್ಕೆ ಮುಂಚೆ ಮತ್ತು ಪುನರುತ್ಥಾನದ ಬಳಿಕ, ಅವನಿಗೆ ಸಮಯಕ್ಕೆ ಸಂಬಂಧಿಸಿದಂತಹ ಪ್ರಶ್ನೆಗಳನ್ನು ಕೇಳಿದರು. (ಮತ್ತಾಯ 24:3; ಅ. ಕೃತ್ಯಗಳು 1:6) ಆದರೆ ತನ್ನ ಉತ್ತರದಲ್ಲಿ, ಯೇಸು ಅವರಿಗೆ ದಿನಗಳನ್ನು ಲೆಕ್ಕಹಾಕುವ ಒಂದು ಸಾಧನವನ್ನು ಕೊಡಲಿಲ್ಲ. ಒಂದು ಸಂದರ್ಭದಲ್ಲಿ, ಅವನು ಅವರಿಗೆ ಒಂದು ಸಂಘಟಿತ ಸೂಚನೆಯನ್ನು ಕೊಟ್ಟನು ಮತ್ತು ಇನ್ನೊಂದು ಸಂದರ್ಭದಲ್ಲಿ, ಅವನು “ತಂದೆಯು ಸ್ವಂತ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವದು ನಿಮ್ಮ ಕೆಲಸವಲ್ಲ” ಎಂದು ಹೇಳಿದನು.—ಅ. ಕೃತ್ಯಗಳು 1:7.
2. ಅಂತ್ಯದ ಸಮಯದಲ್ಲಿ ಸಂಭವಿಸಲಿಕ್ಕಿದ್ದ ಘಟನೆಗಳಿಗಾಗಿರುವ ತನ್ನ ತಂದೆಯ ವೇಳಾಪಟ್ಟಿಯ ಕುರಿತು, ಯೇಸುವಿಗೆ ಎಲ್ಲ ಸಮಯದಲ್ಲಿ ಮಾಹಿತಿಯಿರಲಿಲ್ಲವೆಂದು ಏಕೆ ಹೇಳಸಾಧ್ಯವಿದೆ?
2 ಯೇಸು, ಯೆಹೋವನ ಏಕಜಾತ ಪುತ್ರನಾಗಿದ್ದರೂ, ಘಟನೆಗಳಿಗಾಗಿರುವ ತನ್ನ ತಂದೆಯ ವೇಳಾಪಟ್ಟಿಯ ಕುರಿತು ಅವನಿಗೆ ಎಲ್ಲ ಸಮಯದಲ್ಲೂ ಮಾಹಿತಿಯಿರಲಿಲ್ಲ. ಕಡೇ ದಿವಸಗಳ ಕುರಿತಾದ ತನ್ನ ಪ್ರವಾದನೆಯಲ್ಲಿ, ಯೇಸು ನಮ್ರತೆಯಿಂದ ಅಂಗೀಕರಿಸಿದ್ದು: “ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.” (ಮತ್ತಾಯ 24:36) ಈ ದುಷ್ಟ ವ್ಯವಸ್ಥೆಯನ್ನು ವಿನಾಶಗೊಳಿಸಲು ಕ್ರಿಯೆಗೈಯುವ ತಕ್ಕ ಸಮಯವನ್ನು, ತನ್ನ ತಂದೆಯು ಪ್ರಕಟಪಡಿಸುವ ವರೆಗೂ ಅವನು ತಾಳ್ಮೆಯಿಂದ ಕಾಯಲು ಸಿದ್ಧನಿದ್ದನು.a
3. ದೇವರ ಉದ್ದೇಶದ ಸಂಬಂಧದಲ್ಲಿನ ಪ್ರಶ್ನೆಗಳಿಗೆ ಯೇಸು ಕೊಟ್ಟ ಉತ್ತರಗಳಿಂದ ನಾವೇನನ್ನು ಕಲಿಯಸಾಧ್ಯವಿದೆ?
3 ದೇವರ ಉದ್ದೇಶದ ನೆರವೇರಿಕೆಯಲ್ಲಿ ಸಂಭವಿಸಲಿಕ್ಕಿದ್ದ ಘಟನೆಗಳ ಕುರಿತ ಪ್ರಶ್ನೆಗಳಿಗೆ ಯೇಸು ಉತ್ತರಿಸಿದ ರೀತಿಯಿಂದ, ಎರಡು ವಿಷಯಗಳನ್ನು ಊಹಿಸಸಾಧ್ಯವಿದೆ. ಮೊದಲನೆಯದಾಗಿ, ಯೆಹೋವನಿಗೆ ಒಂದು ವೇಳಾಪಟ್ಟಿಯಿದೆ, ಮತ್ತು ಎರಡನೆಯದಾಗಿ, ಅದನ್ನು ಆತನೊಬ್ಬನೇ ನಿರ್ಧರಿಸುತ್ತಾನೆ ಮತ್ತು ಆತನ ಸೇವಕರು ಸಮಯ ಮತ್ತು ಕಾಲಗಳ ಕುರಿತು ನಿಷ್ಕೃಷ್ಟವಾದ ಮಾಹಿತಿಯನ್ನು ಪಡೆಯಲು ನಿರೀಕ್ಷಿಸಸಾಧ್ಯವಿಲ್ಲ.
ಯೆಹೋವನ ಸಮಯ ಮತ್ತು ಕಾಲಗಳು
4. ಅ. ಕೃತ್ಯಗಳು 1:7ರಲ್ಲಿರುವ “ಸಮಯಗಳು” ಮತ್ತು “ಕಾಲಗಳು” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದಗಳ ಅರ್ಥವೇನು?
4 “ಸಮಯಗಳ” ಮತ್ತು “ಕಾಲಗಳ” ಅರ್ಥವೇನು? ಅ. ಕೃತ್ಯಗಳು 1:7ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಹೇಳಿಕೆಯಲ್ಲಿ, ಸಮಯದ ಎರಡು ರೂಪಗಳು ಒಳಗೂಡಿವೆ. “ಸಮಯಗಳು” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು, “ಅವಧಿಯನ್ನು,” (ದೀರ್ಘ ಅಥವಾ ಅಲ್ಪವಾದ) ಸಮಯಾವಧಿಯನ್ನು ಅರ್ಥೈಸುತ್ತದೆ. “ಕಾಲಗಳು,” ನಿರ್ದಿಷ್ಟವಾದ ವೈಶಿಷ್ಟ್ಯಗಳಿಂದ ಗುರುತಿಸಲ್ಪಟ್ಟಿರುವ ಒಂದು ನಿರ್ಧರಿತ ಅಥವಾ ನೇಮಿತ ಸಮಯ, ಒಂದು ನಿರ್ದಿಷ್ಟ ಋತು, ಅಥವಾ ಅವಧಿಗೆ ಸೂಚಿಸುವ ಪದದ ಭಾಷಾಂತರವಾಗಿದೆ. ಈ ಎರಡು ಮೂಲ ಪದಗಳ ಕುರಿತಾಗಿ, ಡಬ್ಲೂ. ಇ. ವೈನ್ ತಿಳಿಸುವುದು: “ಅ. ಕೃತ್ಯಗಳು 1:7ರಲ್ಲಿ, ‘ಸಮಯಗಳ’ನ್ನು (ಕ್ರೊನೊಸ್), ಅವಧಿಗಳ ಉದ್ದ, ಮತ್ತು ಕಾಲಗಳನ್ನು (ಕೈರೊಸ್), ನಿರ್ದಿಷ್ಟ ಘಟನೆಗಳುಳ್ಳ ಯುಗಗಳನ್ನು, ‘ತಂದೆಯು ತನ್ನ ಸ್ವಂತ ಅಧಿಕಾರದಲ್ಲಿಟ್ಟುಕೊಂಡಿದ್ದಾನೆ.’”
5. ಭ್ರಷ್ಟ ಲೋಕವನ್ನು ನಾಶಗೊಳಿಸುವ ತನ್ನ ಉದ್ದೇಶವನ್ನು ಯೆಹೋವನು ನೋಹನಿಗೆ ಯಾವಾಗ ತಿಳಿಸಿದನು, ಮತ್ತು ನೋಹನು ಯಾವ ದ್ವಿಮುಖ ಕಾರ್ಯವನ್ನು ನಿರ್ವಹಿಸಿದನು?
5 ಜಲಪ್ರಳಯಕ್ಕೆ ಮುಂಚೆ, ಮನುಷ್ಯರು ಮತ್ತು ಮಾನವರೂಪವನ್ನು ತಾಳಿದ ದಂಗೆಕೋರ ದೇವದೂತರುಗಳಿಂದ ಉಂಟಾದ ಭ್ರಷ್ಟ ಲೋಕಕ್ಕಾಗಿ, ದೇವರು 120 ವರ್ಷಗಳ ಕಾಲಮಿತಿಯನ್ನು ನಿಶ್ಚಯಿಸಿದ್ದನು. (ಆದಿಕಾಂಡ 6:1-3) ದೇವಭಯವುಳ್ಳ ನೋಹನು ಆಗ 480 ವರ್ಷ ಪ್ರಾಯದವನಾಗಿದ್ದನು. (ಆದಿಕಾಂಡ 7:6) ಅವನಿಗೆ ಆಗ ಮಕ್ಕಳಿರಲಿಲ್ಲ ಮತ್ತು ಮುಂದೆ 20 ವರ್ಷಗಳ ವರೆಗೆ ಹಾಗೆಯೇ ಇದ್ದನು. (ಆದಿಕಾಂಡ 5:32) ತುಂಬ ಸಮಯದ ನಂತರ, ನೋಹನ ಪುತ್ರರು ವಯಸ್ಕರಾಗಿ ವಿವಾಹವಾದ ಬಳಿಕವೇ, ದೇವರು ಭೂಮಿಯಿಂದ ದುಷ್ಟತನವನ್ನು ತೆಗೆದುಹಾಕುವ ತನ್ನ ಉದ್ದೇಶದ ಕುರಿತಾಗಿ ನೋಹನಿಗೆ ತಿಳಿಸಿದನು. (ಆದಿಕಾಂಡ 6:9-13, 18) ನಾವೆಯನ್ನು ಕಟ್ಟುವ ಮತ್ತು ತನ್ನ ಸಮಕಾಲೀನರಿಗೆ ಸಾರುವ ದ್ವಿಮುಖ ನೇಮಕವು ನೋಹನಿಗೆ ವಹಿಸಲ್ಪಟ್ಟಿದ್ದರೂ, ಯೆಹೋವನು ಸಂಭವಿಸಲಿದ್ದ ಘಟನೆಗಳ ಕುರಿತಾದ ತನ್ನ ವೇಳಾಪಟ್ಟಿಯನ್ನು ಅವನಿಗೆ ತಿಳಿಸಲಿಲ್ಲ.—ಆದಿಕಾಂಡ 6:14; 2 ಪೇತ್ರ 2:5.
6. (ಎ) ನೋಹನು, ಸಮಯದ ಕುರಿತಾದ ಸಂಗತಿಗಳನ್ನು ಯೆಹೋವನಿಗೆ ಬಿಟ್ಟುಬಿಟ್ಟಿದ್ದನೆಂದು ಹೇಗೆ ತೋರಿಸಿದನು? (ಬಿ) ನಾವು ನೋಹನ ಮಾದರಿಯನ್ನು ಹೇಗೆ ಅನುಸರಿಸಬಲ್ಲೆವು?
6 ಅನೇಕ ದಶಕಗಳು, ಪ್ರಾಯಶಃ ಅರ್ಧ ಶತಮಾನದ ವರೆಗೆ “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.” ಯಾವುದೇ ಒಂದು ನಿಷ್ಕೃಷ್ಟವಾದ ತಾರೀಖಿನ ಅರಿವಿಲ್ಲದೆ, ನೋಹನು ಅದನ್ನು “ನಂಬಿಕೆಯಿಂದಲೇ” ಮಾಡಿದನು. (ಆದಿಕಾಂಡ 6:22; ಇಬ್ರಿಯ 11:7) ಜಲಪ್ರಳಯವು ಆರಂಭವಾಗುವ ಒಂದು ವಾರದ ವರೆಗೂ, ಯೆಹೋವನು ಅವನಿಗೆ ಸಂಭವಿಸಲಿರುವ ಘಟನೆಗಳ ನಿಖರವಾದ ವೇಳಾಪಟ್ಟಿಯ ಕುರಿತಾಗಿ ತಿಳಿಸಿರಲಿಲ್ಲ. (ಆದಿಕಾಂಡ 7:1-5) ನೋಹನಿಗೆ ಯೆಹೋವನಲ್ಲಿದ್ದ ಸಂಪೂರ್ಣ ಭರವಸೆ ಮತ್ತು ನಂಬಿಕೆಯು, ಸಮಯದ ಕುರಿತಾದ ಸಂಗತಿಗಳನ್ನು ದೇವರಿಗೇ ಬಿಟ್ಟುಬಿಡುವಂತೆ ಅವನನ್ನು ಶಕ್ತಗೊಳಿಸಿತು. ಜಲಪ್ರಳಯದ ಸಮಯದಲ್ಲಿ ಯೆಹೋವನ ಸಂರಕ್ಷಣೆಯನ್ನು ಅನುಭವಿಸಿದಾಗ ಹಾಗೂ ಅನಂತರ ಒಂದು ಶುದ್ಧೀಕರಿಸಲ್ಪಟ್ಟ ಭೂಮಿಯೊಳಗೆ ಕಾಲಿರಿಸಿದಾಗ, ನೋಹನು ಎಷ್ಟು ಆಭಾರಿಯಾಗಿದ್ದಿರಬೇಕು! ಅದೇ ರೀತಿಯಲ್ಲಿ ರಕ್ಷಿಸಲ್ಪಡುವ ನಿರೀಕ್ಷೆಯ ನೋಟದೊಂದಿಗೆ, ನಾವು ಸಹ ದೇವರಲ್ಲಿ ಅಂತಹದ್ದೇ ನಂಬಿಕೆಯನ್ನಿಡಬಾರದೊ?
7, 8. (ಎ) ರಾಷ್ಟ್ರಗಳು ಮತ್ತು ಲೋಕ ಶಕ್ತಿಗಳು ಹೇಗೆ ಅಸ್ತಿತ್ವಕ್ಕೆ ಬಂದವು? (ಬಿ) ಯೆಹೋವನು ‘ಅವರವರು ಇರತಕ್ಕ ಕಾಲಗಳನ್ನೂ ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ’ದ್ದು ಹೇಗೆ?
7 ಜಲಪ್ರಳಯದ ನಂತರ, ನೋಹನ ವಂಶಜರಲ್ಲಿ ಅನೇಕರು ಯೆಹೋವನ ಶುದ್ಧಾರಾಧನೆಯನ್ನು ತೊರೆದರು. ಒಂದೇ ಸ್ಥಳದಲ್ಲಿ ನೆಲೆಸುವ ಗುರಿಯೊಂದಿಗೆ, ಅವರು ಒಂದು ನಗರವನ್ನು ಮತ್ತು ಸುಳ್ಳು ಆರಾಧನೆಗಾಗಿ ಒಂದು ಬುರುಜನ್ನು ಕಟ್ಟಲಾರಂಭಿಸಿದರು. ಮಧ್ಯಪ್ರವೇಶಿಸಲು ಅದು ಸರಿಯಾದ ಸಮಯವಾಗಿತ್ತೆಂದು ಯೆಹೋವನು ನಿರ್ಧರಿಸಿದನು. ಆತನು ಅವರ ಭಾಷೆಯನ್ನು ಗಲಿಬಿಲಿಗೊಳಿಸಿ, “ಅಲ್ಲಿಂದ [ಬಾಬೆಲ್] ಭೂಲೋಕದಲ್ಲೆಲ್ಲಾ ಚದರಿಸಿ”ದನು. (ಆದಿಕಾಂಡ 11:4, 8, 9) ತದನಂತರ ಆ ಭಾಷಾ ಗುಂಪುಗಳು, ಅನೇಕ ರಾಷ್ಟ್ರಗಳಾದವು. ಅವುಗಳಲ್ಲಿ ಕೆಲವು ಬೇರೆ ರಾಷ್ಟ್ರಗಳೊಂದಿಗೆ ಐಕ್ಯಗೊಂಡು ಪ್ರಾದೇಶಿಕ ಶಕ್ತಿಗಳಾದವು, ಮತ್ತು ಹೀಗೆ ಲೋಕ ಶಕ್ತಿಗಳಾಗಿಯೂ ಪರಿಣಮಿಸಿದವು.—ಆದಿಕಾಂಡ 10:32.
8 ರಾಷ್ಟ್ರೀಯ ಮೇರೆಗಳನ್ನು ಮತ್ತು ಯಾವ ಹಂತದಲ್ಲಿ ಒಂದು ನಿರ್ದಿಷ್ಟ ರಾಷ್ಟ್ರವು ಸ್ಥಳಿಕವಾಗಿ ಅಥವಾ ಒಂದು ಲೋಕ ಶಕ್ತಿಯಾಗಿ ಆಧಿಪತ್ಯ ನಡಿಸುವುದೆಂಬುದನ್ನು, ದೇವರು ತನ್ನ ಉದ್ದೇಶದ ನೆರವೇರಿಕೆಯ ಹೊಂದಿಕೆಯಲ್ಲಿ ಸಂದರ್ಭಕ್ಕನುಸಾರವಾಗಿ ನಿರ್ಣಯಿಸುತ್ತಿದ್ದನು. (ಆದಿಕಾಂಡ 15:13, 14, 18-21; ವಿಮೋಚನಕಾಂಡ 23:31; ಧರ್ಮೋಪದೇಶಕಾಂಡ 2:17-22; ದಾನಿಯೇಲ 8:5-7, 20, 21) ಅಪೊಸ್ತಲ ಪೌಲನು ಅಥೇನೆಯಲ್ಲಿದ್ದ ಗ್ರೀಕ್ ಜ್ಞಾನಿಗಳಿಗೆ, ಯೆಹೋವನ ಸಮಯ ಮತ್ತು ಕಾಲಗಳ ಈ ಅಂಶಕ್ಕೆ ಸೂಚಿಸಿದನು: “ಜಗತ್ತನ್ನೂ ಅದರಲ್ಲಿರುವ ಎಲ್ಲಾ ವಸ್ತುಗಳನ್ನೂ ಉಂಟು ಮಾಡಿದ ದೇವರು . . . ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ ಅವರವರು ಇರತಕ್ಕ ಕಾಲಗಳನ್ನೂ ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ವಾಸಮಾಡಿಸಿ”ದನು.—ಅ. ಕೃತ್ಯಗಳು 17:24, 26.
9. ರಾಜರ ಸಂಬಂಧದಲ್ಲಿ ಯೆಹೋವನು ‘ಕಾಲಸಮಯಗಳನ್ನು ಮಾರ್ಪಡಿಸಿದ್ದು’ ಹೇಗೆ?
9 ರಾಷ್ಟ್ರಗಳ ನಡುವೆ ಆಗುವಂತಹ ಎಲ್ಲ ರಾಜಕೀಯ ವಿಜಯಗಳಿಗೆ ಮತ್ತು ಬದಲಾವಣೆಗಳಿಗೆ ಯೆಹೋವನು ಕಾರಣನಾಗಿದ್ದಾನೆಂಬುದನ್ನು ಇದು ಅರ್ಥೈಸುವುದಿಲ್ಲ. ಆದರೂ, ತನ್ನ ಉದ್ದೇಶವನ್ನು ನೆರವೇರಿಸಲಿಕ್ಕೋಸ್ಕರ ಅಗತ್ಯವಿರುವಾಗಲೆಲ್ಲ ಆತನು ಮಧ್ಯಪ್ರವೇಶಿಸಬಲ್ಲನು. ಹೀಗಿರುವುದರಿಂದ, ಬಾಬೆಲ್ ಲೋಕ ಶಕ್ತಿಯ ಪತನವನ್ನು ಮತ್ತು ಅದರ ಸ್ಥಾನದಲ್ಲಿ ಮೇದ್ಯ ಪಾರಸೀಯವು ಅಧಿಕಾರಕ್ಕೆ ಬರುವುದನ್ನು ಪ್ರತ್ಯಕ್ಷವಾಗಿ ನೋಡಿ, ಪ್ರವಾದಿಯಾದ ದಾನಿಯೇಲನು ಯೆಹೋವನ ಕುರಿತು ಹೇಳಿದ್ದು: “ಕಾಲಸಮಯಗಳನ್ನು ಮಾರ್ಪಡಿಸುತ್ತಾನೆ, ರಾಜರನ್ನು ತಳ್ಳುತ್ತಾನೆ, ನಿಲ್ಲಿಸುತ್ತಾನೆ; ಜ್ಞಾನಿಗಳ ಜ್ಞಾನವು, ವಿವೇಕಿಗಳ ವಿವೇಕವು ಆತನ ವರವೇ.”—ದಾನಿಯೇಲ 2:21; ಯೆಶಾಯ 44:24—45:7.
“ಸಮಯವು ಹತ್ತರಕ್ಕೆ ಬರುತ್ತಿರುವಾಗ”
10, 11. (ಎ) ಅಬ್ರಹಾಮನ ವಂಶಜರನ್ನು ಬಂಧಿವಾಸದಿಂದ ಬಿಡುಗಡೆಮಾಡುವ ಸಮಯವನ್ನು ಯೆಹೋವನು ಎಷ್ಟು ಸಮಯಕ್ಕೆ ಮುಂಚೆ ನಿರ್ಧರಿಸಿದ್ದನು? (ಬಿ) ಇಸ್ರಾಯೇಲ್ಯರಿಗೆ, ತಮ್ಮ ಬಿಡುಗಡೆಯ ಸಮಯದ ಕುರಿತು ನಿಖರವಾದ ಮಾಹಿತಿಯಿರಲಿಲ್ಲವೆಂಬುದನ್ನು ಯಾವುದು ಸೂಚಿಸುತ್ತದೆ?
10 ಲೋಕ ಶಕ್ತಿಯಾದ ಐಗುಪ್ತದ ರಾಜನ ಸೊಕ್ಕಡಗಿಸಿ, ಅಬ್ರಹಾಮನ ವಂಶಜರನ್ನು ದಾಸತ್ವದಿಂದ ಬಿಡಿಸುವ ನಿರ್ದಿಷ್ಟ ವರ್ಷವನ್ನು, ಯೆಹೋವನು ಸುಮಾರು ನಾಲ್ಕು ಶತಮಾನಗಳಿಗಿಂತಲೂ ಮುಂಚೆ ನಿಶ್ಚಯಿಸಿದ್ದನು. ಅಬ್ರಹಾಮನಿಗೆ ತನ್ನ ಉದ್ದೇಶವನ್ನು ಪ್ರಕಟಪಡಿಸುತ್ತಾ, ದೇವರು ವಾಗ್ದಾನಿಸಿದ್ದು: “ನೀನು ಚೆನ್ನಾಗಿ ತಿಳಿಯತಕ್ಕದ್ದೇನಂದರೆ—ನಿನ್ನ ಸಂತತಿಯವರು ಅನ್ಯದೇಶದಲ್ಲಿ ಕೆಲವು ಕಾಲ ವಾಸವಾಗಿದ್ದು ಆ ದೇಶದವರಿಗೆ ದಾಸರಾಗುವರು. ನಾನೂರು ವರುಷ ಆ ದೇಶದವರಿಂದ ಬಾಧೆಪಡುವರು. ಅವರಿಂದ ಬಿಟ್ಟೀಕೆಲಸ ಮಾಡಿಸಿಕೊಂಡ ಜನಾಂಗವನ್ನು ನಾನು ಶಿಕ್ಷಿಸಿದ ನಂತರ ಅವರು ಬಹಳ ಆಸ್ತಿವಂತರಾಗಿ ಆ ದೇಶದಿಂದ ಬಿಡುಗಡೆಯಾಗಿ ಬರುವರು.” (ಆದಿಕಾಂಡ 15:13, 14) ಹಿರೀ ಸಭೆಯ ಮುಂದೆ ನೀಡಲ್ಪಟ್ಟ ಇಸ್ರಾಯೇಲಿನ ಇತಿಹಾಸದ ಸಾರಾಂಶದಲ್ಲಿ, ಸ್ತೆಫನನು ಆ 400 ವರ್ಷಗಳ ಅವಧಿಗೆ ಸೂಚಿಸಿ, ತಿಳಿಸಿದ್ದು: “ದೇವರು ಅಬ್ರಹಾಮನಿಗೆ ವಾಗ್ದಾನಮಾಡಿದ್ದ ಕಾಲವು [“ಸಮಯವು,” NW] ಹತ್ತರಕ್ಕೆ ಬರುತ್ತಿರುವಾಗ ನಮ್ಮ ಜನರು ಐಗುಪ್ತದೇಶದಲ್ಲಿ ಹೆಚ್ಚಿ ಬಹಳವಾದರು. ಕಡೆಗೆ ಯೋಸೇಫನನ್ನು ಅರಿಯದ ಬೇರೊಬ್ಬ ಅರಸನು ಆಳಿಕೆಗೆ ಬಂದನು.”—ಅ. ಕೃತ್ಯಗಳು 7:6, 17, 18.
11 ಈ ಹೊಸ ಫರೋಹನು, ಇಸ್ರಾಯೇಲ್ಯರನ್ನು ದಾಸರನ್ನಾಗಿ ಮಾಡಿದನು. ಆದಿಕಾಂಡ ಪುಸ್ತಕವನ್ನು ಮೋಶೆಯು ಆಗ ಇನ್ನೂ ಬರೆದಿರಲಿಲ್ಲ. ಆದರೆ ಅಬ್ರಹಾಮನಿಗೆ ಯೆಹೋವನು ಮಾಡಿದ ವಾಗ್ದಾನಗಳು, ಬಾಯಿಮಾತಿನ ಮೂಲಕ ಇಲ್ಲವೇ ಲಿಖಿತ ರೂಪದಲ್ಲಿ ದಾಟಿಸಲ್ಪಟ್ಟಿದ್ದಿರಬಹುದು. ಹಾಗಿದ್ದರೂ, ಇಸ್ರಾಯೇಲ್ಯರಿಗಿದ್ದ ಪೂರ್ವ ಮಾಹಿತಿಯಿಂದಾಗಿ, ದಬ್ಬಾಳಿಕೆಯಿಂದ ತಾವು ಬಿಡುಗಡೆಯಾಗುವ ನಿರ್ದಿಷ್ಟವಾದ ತಾರೀಖನ್ನು ಲೆಕ್ಕಹಾಕುವಂತೆ ಅವರಿಗೆ ಸಾಧ್ಯವಾಗಲಿಲ್ಲವೆಂದು ತೋರುತ್ತದೆ. ಅವರನ್ನು ಬಿಡುಗಡೆಮಾಡುವ ಸಮಯ ದೇವರಿಗೆ ತಿಳಿದಿತ್ತಾದರೂ, ಕಷ್ಟಾನುಭವಿಸುತ್ತಿದ್ದ ಇಸ್ರಾಯೇಲ್ಯರಿಗೆ ಅದು ತಿಳಿಸಲ್ಪಟ್ಟಿರಲಿಲ್ಲವೆಂದು ತೋರುತ್ತದೆ. ನಾವು ಹೀಗೆ ಓದುತ್ತೇವೆ: “ಈ ಮೇರೆಗೆ ಬಹಳ ದಿನಗಳು ಕಳೆದ ಮೇಲೆ ಐಗುಪ್ತದೇಶದ ಅರಸನು ಸತ್ತನು. ಇಸ್ರಾಯೇಲ್ಯರು ತಾವು ಮಾಡಬೇಕಾದ ಬಿಟ್ಟೀಕೆಲಸಕ್ಕಾಗಿ ನಿಟ್ಟುಸುರುಬಿಟ್ಟು ಗೋಳಾಡುತ್ತಾ ಇದ್ದರು. ಆ ಗೋಳು ದೇವರಿಗೆ ಮುಟ್ಟಿತು. ದೇವರು ಅವರ ನರಳಾಟವನ್ನು ಕೇಳಿ ತಾನು ಅಬ್ರಹಾಮ ಇಸಾಕ ಯಾಕೋಬರಿಗೆ ಮಾಡಿದ ವಾಗ್ದಾನವನ್ನು ನೆನಪಿಗೆ ತಂದುಕೊಂಡು ಇಸ್ರಾಯೇಲ್ಯರನ್ನು ನೋಡಿ ಅವರಲ್ಲಿ ಲಕ್ಷ್ಯವಿಟ್ಟನು.”—ವಿಮೋಚನಕಾಂಡ 2:23-25.
12. ಮೋಶೆಯು, ಯೆಹೋವನ ಸಮಯಕ್ಕಿಂತ ಮುಂಚೆಯೇ ಕ್ರಿಯೆಗೈದನೆಂಬುದನ್ನು ಸ್ತೆಫನನು ಹೇಗೆ ತೋರಿಸಿದನು?
12 ಇಸ್ರಾಯೇಲಿನ ಬಿಡುಗಡೆಯ ನಿಖರವಾದ ಸಮಯವು ಅವರಿಗೆ ತಿಳಿದಿರಲಿಲ್ಲವೆಂಬದನ್ನೂ ಸ್ತೆಫನನ ಸಾರಾಂಶದಿಂದ ಹೇಳಸಾಧ್ಯವಿದೆ. ಮೋಶೆಯ ಕುರಿತು ಮಾತಾಡುತ್ತಾ, ಅವನಂದದ್ದು: “ಅವನಿಗೆ ನಾಲ್ವತ್ತು ವರುಷ ವಯಸ್ಸು ತುಂಬುತ್ತಾ ಇರಲು ಇಸ್ರಾಯೇಲ್ ವಂಶಸ್ಥರಾದ ತನ್ನ ಸಹೋದರರನ್ನು ಹೋಗಿನೋಡಬೇಕೆಂಬ ಆಶೆಯು ಅವನ ಹೃದಯದಲ್ಲಿ ಹುಟ್ಟಿತು. ಅವರಲ್ಲಿ ಒಬ್ಬನಿಗೆ ಅನ್ಯಾಯವಾಗುವದನ್ನು ಅವನು ನೋಡಿ ಅವನಿಗೆ ಆಶ್ರಯಕೊಟ್ಟು ಪೀಡಿಸುವ ಐಗುಪ್ತ್ಯನನ್ನು ಹೊಡೆದುಹಾಕಿ ಮುಯ್ಯಿಗೆ ಮುಯ್ಯಿ ತೀರಿಸಿದನು. ದೇವರು ತನ್ನ ಕೈಯಿಂದ ಬಿಡುಗಡೆಯನ್ನು ಉಂಟುಮಾಡುತ್ತಾನೆಂಬದು ತನ್ನ ಸಹೋದರರಿಗೆ ತಿಳಿದುಬರುವದೆಂದು ಭಾವಿಸಿದನು; ಆದರೆ ಅವರು ಹಾಗೆ ತಿಳುಕೊಳ್ಳಲಿಲ್ಲ.” (ಅ. ಕೃತ್ಯಗಳು 7:23-25, ಓರೆಅಕ್ಷರಗಳು ನಮ್ಮವು.) ಮೋಶೆಯು ಇಲ್ಲಿ ದೇವರ ಸಮಯಕ್ಕಿಂತ 40 ವರ್ಷಗಳ ಮುಂಚೆಯೇ ಕ್ರಿಯೆಗೈದನು. ದೇವರು ‘ತನ್ನ ಕೈಯಿಂದ ಇಸ್ರಾಯೇಲ್ಯರಿಗೆ ರಕ್ಷಣೆಯನ್ನು ಉಂಟುಮಾಡ’ಲಿಕ್ಕಾಗಿ, ಮೋಶೆಯು ಇನ್ನೂ 40 ವರ್ಷಗಳ ವರೆಗೆ ಕಾಯಬೇಕಾಗಿತ್ತೆಂಬುದನ್ನು ಸ್ತೆಫನನು ತೋರಿಸಿದನು.—ಅ. ಕೃತ್ಯಗಳು 7:30-36.
13. ಇಂದು ನಮ್ಮ ಪರಿಸ್ಥಿತಿಯು, ಐಗುಪ್ತದಿಂದ ಬಿಡುಗಡೆಯಾಗುವ ಮುಂಚೆ ಇಸ್ರಾಯೇಲ್ಯರಿದ್ದ ಪರಿಸ್ಥಿತಿಯಂತೆಯೇ ಇರುವುದು ಹೇಗೆ?
13 “ವಾಗ್ದಾನಮಾಡಿದ್ದ ಸಮಯವು ಹತ್ತರಕ್ಕೆ ಬರುತ್ತಿ”ದ್ದರೂ ಮತ್ತು ಆ ನಿರ್ದಿಷ್ಟ ವರ್ಷವನ್ನು ದೇವರು ನಿಶ್ಚಯಿಸಿದ್ದರೂ, ಮೋಶೆ ಮತ್ತು ಇಸ್ರಾಯೇಲ್ಯರೆಲ್ಲರೂ ನಂಬಿಕೆಯನ್ನು ಪ್ರದರ್ಶಿಸಿ, ಯೆಹೋವನ ನೇಮಿತ ಸಮಯಕ್ಕಾಗಿ ಕಾಯಬೇಕಾಗಿತ್ತು. ಅವರು ಆ ಸಮಯದ ಕುರಿತು ಮುಂಚಿತವಾಗಿ ಲೆಕ್ಕಹಾಕಲು ಶಕ್ತರಾಗಿರಲಿಲ್ಲವೆಂಬುದು ಸುವ್ಯಕ್ತ. ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯಿಂದ ನಮ್ಮ ಬಿಡುಗಡೆಯು ಹತ್ತಿರವಾಗುತ್ತಿದೆಯೆಂಬ ಮನವರಿಕೆ ನಮಗೂ ಇದೆ. ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆಂದು ನಮಗೆ ತಿಳಿದಿದೆ. (2 ತಿಮೊಥೆಯ 3:1-5) ಆದುದರಿಂದ ನಾವು ನಮ್ಮ ನಂಬಿಕೆಯನ್ನು ಪ್ರದರ್ಶಿಸುತ್ತಾ, ಯೆಹೋವನ ಮಹಾನ್ ದಿನಕ್ಕಾಗಿರುವ ಆತನ ತಕ್ಕ ಸಮಯಕ್ಕಾಗಿ ಕಾದುಕೊಂಡಿರಲು ಸಿದ್ಧರಾಗಿರಬಾರದೊ? (2 ಪೇತ್ರ 3:11-13) ಆಗ, ಮೋಶೆ ಮತ್ತು ಇಸ್ರಾಯೇಲ್ಯರಂತೆ, ನಾವು ಯೆಹೋವನ ಸ್ತುತಿಗಾಗಿ ಬಿಡುಗಡೆಯ ಒಂದು ಮಹಿಮಾಭರಿತ ಹಾಡನ್ನು ಹಾಡಬಹುದು.—ವಿಮೋಚನಕಾಂಡ 15:1-19.
‘ಕಾಲವು ಪರಿಪೂರ್ಣವಾದಾಗ’
14, 15. ತನ್ನ ಪುತ್ರನು ಭೂಮಿಗೆ ಬರಲು ದೇವರು ಒಂದು ಸಮಯವನ್ನು ನಿಶ್ಚಯಿಸಿದ್ದನೆಂದು ನಮಗೆ ಹೇಗೆ ತಿಳಿದಿದೆ, ಮತ್ತು ಪ್ರವಾದಿಗಳು ಹಾಗೂ ದೇವದೂತರು ಸಹ ಏನನ್ನು ಎದುರುನೋಡುತ್ತಾ ಇದ್ದರು?
14 ಮೆಸ್ಸೀಯನೋಪಾದಿ ಭೂಮಿಗೆ ಬರುವಂತೆ ಯೆಹೋವನು ತನ್ನ ಏಕಜಾತ ಪುತ್ರನಿಗಾಗಿ ಒಂದು ನಿರ್ಧರಿತ ಸಮಯವನ್ನಿಟ್ಟಿದ್ದನು. ಪೌಲನು ಬರೆದುದು: “ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು. ಧರ್ಮಶಾಸ್ತ್ರಾಧೀನರಾದವರನ್ನು ವಿಮೋಚಿಸಬೇಕೆಂತಲೂ . . . ಧರ್ಮಶಾಸ್ತ್ರಾಧೀನನಾಗಿಯೂ ಬಂದನು.” (ಗಲಾತ್ಯ 4:4) ಇದು, ಒಂದು ಸಂತಾನವನ್ನು ಕಳುಹಿಸುವ ದೇವರ ವಾಗ್ದಾನದ ನೆರವೇರಿಕೆಯಾಗಿತ್ತು. ಆ ಸಂತಾನವು, ‘ಅನ್ಯಜನಗಳೂ ವಿಧೇಯರಾಗಿರುವ, ಶಿಲೋ’ ಆಗಿದ್ದನು.—ಆದಿಕಾಂಡ 3:15; 49:10, ಪಾದಟಿಪ್ಪಣಿ.
15 ದೇವರ ಪ್ರವಾದಿಗಳು ಮತ್ತು ದೇವದೂತರು ಸಹ, ಮೆಸ್ಸೀಯನು ಲೋಕಕ್ಕೆ ಬಂದು, ಪಾಪಪೂರ್ಣ ಮಾನವಕುಲಕ್ಕೆ ರಕ್ಷಣೆಯು ಸಾಧ್ಯವಾಗುವ “ಕಾಲ”ಕ್ಕಾಗಿ ಎದುರುನೋಡುತ್ತಾ ಇದ್ದರು. ಪೇತ್ರನು ಹೇಳಿದ್ದು: “ದೇವರು ನಿಮಗೆ ತೋರಿಸಿರುವ ಕೃಪೆಯನ್ನು ಕುರಿತು ಮುಂತಿಳಿಸಿದ ಪ್ರವಾದಿಗಳು ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆಮಾಡಿದರು. ತಮ್ಮಲ್ಲಿದ್ದ ಕ್ರಿಸ್ತನ ಆತ್ಮನು ಕ್ರಿಸ್ತನಿಗೆ ಬರಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ಪ್ರಭಾವವನ್ನೂ ಮುಂದಾಗಿ ತಿಳಿಸಿದಾಗ ಆತನು ಯಾವ ಕಾಲವನ್ನು ಇಲ್ಲವೆ ಎಂಥ ಕಾಲವನ್ನು ಸೂಚಿಸುವನೆಂಬದನ್ನು ಅವರು ಪರಿಶೋಧನೆಮಾಡಿದರು. . . . ದೇವದೂತರಿಗೂ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂಬ ಅಪೇಕ್ಷೆ ಉಂಟು.”—1 ಪೇತ್ರ 1:1-5, 10-12.
16, 17. (ಎ) ಯಾವ ಪ್ರವಾದನೆಯ ಮೂಲಕ ಪ್ರಥಮ ಶತಮಾನದ ಯೆಹೂದ್ಯರು ಮೆಸ್ಸೀಯನನ್ನು ನಿರೀಕ್ಷಿಸುತ್ತಾ ಇರಲು ಯೆಹೋವನು ಸಹಾಯಮಾಡಿದನು? (ಬಿ) ದಾನಿಯೇಲನ ಪ್ರವಾದನೆಯು, ಯೆಹೂದ್ಯರು ಮೆಸ್ಸೀಯನಿಗಾಗಿ ಎದುರುನೋಡುವುದನ್ನು ಹೇಗೆ ಪ್ರಭಾವಿಸಿತು?
16 ಅಚಲವಾದ ನಂಬಿಕೆಯ ವ್ಯಕ್ತಿಯಾಗಿದ್ದ, ತನ್ನ ಪ್ರವಾದಿ ದಾನಿಯೇಲನ ಮೂಲಕ, ಯೆಹೋವನು ‘ಎಪ್ಪತ್ತು ವಾರಗಳನ್ನು’ ಒಳಗೊಂಡಿದ್ದ ಒಂದು ಪ್ರವಾದನೆಯನ್ನು ಕೊಟ್ಟಿದ್ದನು. ಆ ಪ್ರವಾದನೆಯು, ವಾಗ್ದತ್ತ ಮೆಸ್ಸೀಯನು ಕಾಣಿಸಿಕೊಳ್ಳುವ ಸಮಯವು ಸಮೀಪವಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಥಮ ಶತಮಾನದ ಯೆಹೂದ್ಯರಿಗೆ ಸಹಾಯಮಾಡಲಿತ್ತು. ಪ್ರವಾದನೆಯ ಒಂದು ಭಾಗವು ಹೀಗೆ ತಿಳಿಸಿತು: “ಯೆರೂಸಲೇಮನ್ನು ಪುನಸ್ಸ್ಥಾಪಿಸಲು ಮತ್ತು ಪುನರ್ನಿರ್ಮಿಸಲಿಕ್ಕಾಗಿ ಆಜ್ಞೆಯು ಹೊರಡುವಂದಿನಿಂದ, ಪ್ರಭುವಾದ ಮೆಸ್ಸೀಯನು ಬರುವ ತನಕ ಏಳು ವಾರಗಳು, ಅರುವತ್ತೆರಡು ವಾರಗಳೂ ಇರುವವು.” (ದಾನಿಯೇಲ 9:24, 25, NW) ಇಲ್ಲಿ ತಿಳಿಸಲ್ಪಟ್ಟಿರುವ “ವಾರಗಳು,” ವಾರವರ್ಷಗಳನ್ನು ಅರ್ಥೈಸುತ್ತದೆಂಬುದನ್ನು ಸಾಮಾನ್ಯವಾಗಿ ಯೆಹೂದಿ, ಕ್ಯಾಥೊಲಿಕ್ ಮತ್ತು ಪ್ರಾಟೆಸ್ಟೆಂಟ್ ವಿಧ್ವಾಂಸರು ಸಮ್ಮತಿಸುತ್ತಾರೆ. ದಾನಿಯೇಲ 9:25ರ 69 “ವಾರಗಳು” (483 ವರ್ಷಗಳು), ‘ಯೆರೂಸಲೇಮನ್ನು ಪುನಸ್ಸ್ಥಾಪಿಸಲು ಮತ್ತು ಪುನರ್ನಿರ್ಮಿಸಲು’ ಪರ್ಷಿಯದ ರಾಜನಾದ ಅರ್ತಷಸ್ತನು, ಸಾ.ಶ.ಪೂ. 455ರಲ್ಲಿ ನೆಹೆಮೀಯನಿಗೆ ಅಧಿಕಾರ ಕೊಟ್ಟಾಗ ಆರಂಭವಾದವು. (ನೆಹೆಮೀಯ 2:1-8) ಆ ವಾರಗಳು, 483 ವರ್ಷಗಳ ಬಳಿಕ ಸಾ.ಶ. 29ರಲ್ಲಿ ಕೊನೆಗೊಂಡವು. ಆಗ ಯೇಸು ದೀಕ್ಷಾಸ್ನಾನ ಹೊಂದಿ, ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟು, ಹೀಗೆ ಮೆಸ್ಸೀಯ ಅಥವಾ ಕ್ರಿಸ್ತನಾದನು.—ಮತ್ತಾಯ 3:13-17.
17 483 ವರ್ಷಗಳು ಯಾವಾಗ ಆರಂಭಗೊಂಡವೆಂದು ಯೆಹೂದ್ಯರಿಗೆ ನಿಷ್ಕೃಷ್ಟವಾಗಿ ತಿಳಿದಿತ್ತೊ ಇಲ್ಲವೊ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಸ್ನಾನಿಕನಾದ ಯೋಹಾನನು ತನ್ನ ಶುಶ್ರೂಷೆಯನ್ನು ಆರಂಭಿಸಿದಾಗ, “ಇಸ್ರಾಯೇಲ್ ಜನರು ಬರಬೇಕಾದ ಕ್ರಿಸ್ತನನ್ನು ಎದುರುನೋಡುವವರಾಗಿದ್ದದರಿಂದ ಅವರೆಲ್ಲರು ಯೋಹಾನನ ವಿಷಯವಾಗಿ—ಇವನೇ ಆ ಕ್ರಿಸ್ತನಾಗಿರಬಹುದೋ ಏನೋ ಎಂದು ತಮ್ಮ ಮನಸ್ಸಿನಲ್ಲಿ ವಿಚಾರಮಾಡಿಕೊಳ್ಳುತ್ತಿ”ದ್ದರು. (ಲೂಕ 3:15) ಕೆಲವು ಬೈಬಲ್ ವಿದ್ವಾಂಸರು ಈ ಎದುರುನೋಡುವಿಕೆಯನ್ನು ದಾನಿಯೇಲನ ಪ್ರವಾದನೆಯೊಂದಿಗೆ ಜೋಡಿಸುತ್ತಾರೆ. ಈ ವಚನದ ಕುರಿತು ಹೇಳಿಕೆಯನ್ನೀಯುತ್ತಾ, ಮಾಥ್ಯೂ ಹೆನ್ರಿ ಬರೆದುದು: “ಯೋಹಾನನ ಶುಶ್ರೂಷೆ ಮತ್ತು ದೀಕ್ಷಾಸ್ನಾನದಿಂದ ಜನರು, ಮೆಸ್ಸೀಯನ ಕುರಿತಾಗಿ ಮತ್ತು ಅವನು ಬಹು ಬೇಗನೆ ಕಾಣಿಸಿಕೊಳ್ಳಲಿದ್ದಾನೆಂದು ಯೋಚಿಸಲು, ಹೇಗೆ ಆಧಾರವನ್ನು ಕಂಡುಕೊಂಡರೆಂಬುದನ್ನು . . . ನಮಗೆ ಇಲ್ಲಿ ತಿಳಿಸಲಾಗಿದೆ. . . . ದಾನಿಯೇಲನ ಎಪ್ಪತ್ತು ವಾರಗಳು ಆಗ ಅಂತ್ಯವಾಗುತ್ತಾ ಇದ್ದವು.” ವೀಗುರು, ಬಾಕ್ವೆಸ್ ಮತ್ತು ಬ್ರಾಸಾಕ್ರಿಂದ ಫ್ರೆಂಚ್ ಭಾಷೆಯಲ್ಲಿ ಬರೆಯಲ್ಪಟ್ಟ ಮಾನ್ಯುಲ್ ಬಿಬ್ಲಿಕ್ ಎಂಬ ಪುಸ್ತಕವು ತಿಳಿಸುವುದು: “ದಾನಿಯೇಲನಿಂದ ನಿಗದಿಪಡಿಸಲ್ಪಟ್ಟಿದ್ದ ಎಪ್ಪತ್ತು ವಾರವರ್ಷಗಳು ಅಂತ್ಯವಾಗುತ್ತಾ ಇದ್ದವೆಂದು ಜನರಿಗೆ ತಿಳಿದಿತ್ತು; ದೇವರ ರಾಜ್ಯವು ಸಮೀಪವಾಗಿದೆಯೆಂದು ಸ್ನಾನಿಕನಾದ ಯೋಹಾನನು ಪ್ರಕಟಿಸುತ್ತಿದ್ದದ್ದನ್ನು ಕೇಳಿ ಯಾರೂ ಆಶ್ಚರ್ಯಪಡಲಿಲ್ಲ.” ಯೆಹೂದಿ ವಿದ್ವಾಂಸರಾದ ಅಬ್ಬ ಹಿಲೇಲ್ ಸಿಲ್ವರ್ ಬರೆದದ್ದೇನೆಂದರೆ, ಆ ಸಮಯದ “ಜನಪ್ರಿಯ ಕಾಲಗಣನಾ ಶಾಸ್ತ್ರ”ಕ್ಕನುಸಾರ, “ಮೆಸ್ಸೀಯನು ಪ್ರಥಮ ಶತಮಾನದ ಸಾ.ಶ. 25ರಿಂದ 50ನೆಯ ವರ್ಷಗಳ ನಡುವಿನ ಸಮಯದಲ್ಲಿ ನಿರೀಕ್ಷಿಸಲ್ಪಟ್ಟಿದ್ದನು.”
ಘಟನೆಗಳು—ಸಮಯದ ಲೆಕ್ಕಾಚಾರಗಳಲ್ಲ
18. ಮೆಸ್ಸೀಯನು ಕಾಣಿಸಿಕೊಳ್ಳಲಿದ್ದ ಸಮಯವನ್ನು ಅಂದಾಜುಮಾಡಲು ದಾನಿಯೇಲನ ಪ್ರವಾದನೆಯು ಯೆಹೂದ್ಯರಿಗೆ ಸಹಾಯಮಾಡಿತಾದರೂ, ಯೇಸುವಿನ ಮೆಸ್ಸೀಯತ್ವದ ಬಲವಾದ ರುಜುವಾತು ಯಾವುದಾಗಿತ್ತು?
18 ಮೆಸ್ಸೀಯನು ಯಾವಾಗ ಕಾಣಿಸಿಕೊಳ್ಳಲಿದ್ದನೆಂಬುದನ್ನು ಅಂದಾಜು ಮಾಡುವಂತೆ ಕಾಲಗಣನಾಶಾಸ್ತ್ರವು ಸಹಾಯಮಾಡಿದ್ದಿರಬಹುದು, ಆದರೂ ಅವರಲ್ಲಿ ಹೆಚ್ಚಿನವರಿಗೆ ಯೇಸುವಿನ ಮೆಸ್ಸೀಯತ್ವವನ್ನು ಮನಗಾಣಿಸುವಂತೆ ಅದು ಸಹಾಯಮಾಡಲಿಲ್ಲವೆಂದು ತದನಂತರದ ಘಟನೆಗಳು ತೋರಿಸುತ್ತವೆ. ತನ್ನ ಮರಣಕ್ಕೆ ಹೆಚ್ಚುಕಡಿಮೆ ಒಂದು ವರ್ಷವಿರುವಾಗ, ಯೇಸು ತನ್ನ ಶಿಷ್ಯರಿಗೆ ಕೇಳಿದ್ದು: “ನನ್ನನ್ನು ಸಾಮಾನ್ಯ ಜನರು ಯಾರು ಅನ್ನುತ್ತಾರೆ”? ಅವರು ಉತ್ತರಿಸಿದ್ದು: “ನಿನ್ನನ್ನು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ; ಕೆಲವರು ಎಲೀಯನು ಅನ್ನುತ್ತಾರೆ; ಇನ್ನು ಕೆಲವರು ಪೂರ್ವದ ಪ್ರವಾದಿಗಳಲ್ಲಿ ಯಾವನೋ ಒಬ್ಬನು ಎದ್ದಿದ್ದಾನೆ ಅನ್ನುತ್ತಾರೆ.” (ಲೂಕ 9:18, 19) ತಾನು ಮೆಸ್ಸೀಯನಾಗಿದ್ದೇನೆಂದು ರುಜುಪಡಿಸಲು, ಯೇಸು ಎಂದೂ ಆ ಸಾಂಕೇತಿಕ ವಾರಗಳ ಪ್ರವಾದನೆಯನ್ನು ಉಲ್ಲೇಖಿಸಿದನೆಂದು ಹೇಳುವ ಯಾವುದೇ ದಾಖಲೆ ನಮ್ಮಲ್ಲಿ ಇಲ್ಲ. ಆದರೆ ಒಂದು ಸಂದರ್ಭದಲ್ಲಿ ಅವನಂದದ್ದು: “ನನಗಂತೂ ಯೋಹಾನನ ಸಾಕ್ಷಿಗಿಂತ ಹೆಚ್ಚಿನ ಸಾಕ್ಷಿ ಉಂಟು; ಹೇಗಂದರೆ ಪೂರೈಸುವದಕ್ಕೆ ತಂದೆ ನನಗೆ ಕೊಟ್ಟಿರುವ ಕೆಲಸಗಳು, ಅಂದರೆ ನಾನು ಮಾಡುವ ಕೆಲಸಗಳೇ, ತಂದೆಯು ನನ್ನನ್ನು ಕಳುಹಿಸಿಕೊಟ್ಟನೆಂಬದಾಗಿ ನನ್ನ ವಿಷಯದಲ್ಲಿ ಸಾಕ್ಷಿಕೊಡುತ್ತವೆ.” (ಯೋಹಾನ 5:36) ಯಾವುದೇ ಕಾಲಗಣನಾಶಾಸ್ತ್ರದ ಬದಲಿಗೆ, ಯೇಸುವಿನ ಸಾರುವಿಕೆ, ಅವನ ಅದ್ಭುತಗಳು, ಮತ್ತು ಅವನ ಮರಣದ ಸಮಯದಲ್ಲಿ ನಡೆದ ಘಟನೆಗಳು (ಅದ್ಭುತಕರ ಕತ್ತಲೆ ಕವಿಯುವಿಕೆ, ದೇವಾಲಯದ ತೆರೆಯ ಸೀಳಿಹೋಗುವಿಕೆ, ಮತ್ತು ಭೂಕಂಪ), ದೇವರಿಂದ ಕಳುಹಿಸಲ್ಪಟ್ಟ ಮೆಸ್ಸೀಯನು ಅವನೇ ಆಗಿದ್ದನೆಂಬುದನ್ನು ರುಜುಪಡಿಸಿದವು.—ಮತ್ತಾಯ 27:45, 51, 54; ಯೋಹಾನ 7:31; ಅ. ಕೃತ್ಯಗಳು 2:22.
19. (ಎ) ಯೆರೂಸಲೇಮಿನ ನಾಶನವು ಸಮೀಪದಲ್ಲಿತ್ತೆಂದು ಕ್ರೈಸ್ತರಿಗೆ ಹೇಗೆ ತಿಳಿದಿತ್ತು? (ಬಿ) ಆದಿ ಕ್ರೈಸ್ತರು ಯೆರೂಸಲೇಮಿನಿಂದ ಓಡಿಹೋಗಿದ್ದರೂ ಅವರಿಗೆ ಹೆಚ್ಚು ನಂಬಿಕೆಯ ಅಗತ್ಯವಿತ್ತೇಕೆ?
19 ತದ್ರೀತಿಯಲ್ಲಿ ಯೇಸುವಿನ ಮರಣದ ನಂತರ, ಯೆಹೂದಿ ವ್ಯವಸ್ಥೆಯ ಮೇಲೆ ಬರಲಿದ್ದ ಅಂತ್ಯದ ಕುರಿತು ಲೆಕ್ಕಹಾಕಲು ಆದಿ ಕ್ರೈಸ್ತರಿಗೆ ಯಾವುದೇ ಸಾಧನವು ಕೊಡಲ್ಪಟ್ಟಿರಲಿಲ್ಲ. ಸಾಂಕೇತಿಕ ವಾರಗಳ ಕುರಿತಾದ ದಾನಿಯೇಲನ ಪ್ರವಾದನೆಯು, ಆ ವ್ಯವಸ್ಥೆಯ ನಾಶನದ ಕುರಿತು ತಿಳಿಸಿತೆಂಬುದು ನಿಜ. (ದಾನಿಯೇಲ 9:26ಬಿ, 27ಬಿ) ಆದರೆ ಇದು “ಎಪ್ಪತ್ತು ವಾರಗಳ” (ಸಾ.ಶ.ಪೂ. 455—ಸಾ.ಶ. 36) ಅಂತ್ಯದ ನಂತರ ಸಂಭವಿಸಲಿಕ್ಕಿತ್ತು. ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ದಾನಿಯೇಲ 9ನೆಯ ಅಧ್ಯಾಯವು, ಸಾ.ಶ. 36ರ ಬಳಿಕ ಸಂಭವಿಸಲಿದ್ದ ಘಟನೆಗಳ ಕುರಿತು ಯಾವುದೇ ಕಾಲಗಣನಾಶಾಸ್ತ್ರ ಮಾಹಿತಿಯನ್ನು ಕ್ರೈಸ್ತರಿಗೆ ಒದಗಿಸಲಿಲ್ಲ. ಯೆಹೂದಿ ವ್ಯವಸ್ಥೆಯು ಬಹು ಬೇಗನೆ ಅಂತ್ಯಗೊಳ್ಳುವುದನ್ನು ಕಾಲಗಣನಾಶಾಸ್ತ್ರವಲ್ಲ, ಬದಲಾಗಿ ಘಟನೆಗಳು ಅವರಿಗೆ ಸೂಚಿಸಲಿದ್ದವು. ಸಾ.ಶ. 66ರಲ್ಲಿ ರೋಮನ್ ಸೈನ್ಯಗಳು ಯೆರೂಸಲೇಮನ್ನು ಆಕ್ರಮಿಸಿ ಬಳಿಕ ಹಿಮ್ಮೆಟ್ಟಿದಾಗ, ಯೇಸುವಿನಿಂದ ಮುಂತಿಳಿಸಲ್ಪಟ್ಟ ಆ ಘಟನೆಗಳು ಪರಾಕಾಷ್ಠೆಗೇರಲಾರಂಭಿಸಿದವು. ಇದು ಯೆರೂಸಲೇಮ್ ಮತ್ತು ಯೂದಾಯದಲ್ಲಿದ್ದ ನಂಬಿಗಸ್ತ ಹಾಗೂ ಎಚ್ಚರವಾಗಿದ್ದ ಕ್ರೈಸ್ತರಿಗೆ ‘ಬೆಟ್ಟಗಳಿಗೆ ಓಡಿಹೋಗಲು’ ಸದಾವಕಾಶವನ್ನು ಕಲ್ಪಿಸಿಕೊಟ್ಟಿತು. (ಲೂಕ 21:20-22) ಕಾಲಗಣನಾಶಾಸ್ತ್ರದ ಯಾವುದೇ ಸೂಚನೆಗಳಿಲ್ಲದ್ದರಿಂದ, ಆದಿ ಕ್ರೈಸ್ತರಿಗೆ ಯೆರೂಸಲೇಮಿನ ನಾಶನವು ಯಾವಾಗ ಸಂಭವಿಸುವುದೆಂದು ತಿಳಿದಿರಲಿಲ್ಲ. ಸಾ.ಶ. 70ರಲ್ಲಿ ರೋಮನ್ ಸೈನ್ಯವು ಹಿಂದಿರುಗಿ ಬಂದು ಯೆಹೂದಿ ವ್ಯವಸ್ಥೆಯನ್ನು ನಿರ್ಮೂಲಗೊಳಿಸುವ ತನಕ, ಸುಮಾರು ನಾಲ್ಕು ವರ್ಷಗಳ ವರೆಗೆ ತಮ್ಮ ಮನೆ, ಹೊಲ ಮತ್ತು ಕಾರ್ಯಾಗಾರಗಳನ್ನು ಬಿಟ್ಟು, ಯೆರೂಸಲೇಮಿನಿಂದ ದೂರವಿರಲು ಅವರಿಗೆ ಎಷ್ಟು ನಂಬಿಕೆಯಿದ್ದಿರಬೇಕು!—ಲೂಕ 19:41-44.
20. (ಎ) ನೋಹ, ಮೋಶೆ, ಮತ್ತು ಯೂದಾಯದಲ್ಲಿದ್ದ ಪ್ರಥಮ ಶತಮಾನದ ಕ್ರೈಸ್ತರ ಮಾದರಿಗಳಿಂದ ನಾವು ಹೇಗೆ ಪ್ರಯೋಜನ ಪಡೆದುಕೊಳ್ಳಬಲ್ಲೆವು? (ಬಿ) ಮುಂದಿನ ಲೇಖನದಲ್ಲಿ ನಾವೇನನ್ನು ಚರ್ಚಿಸುವೆವು?
20 ನೋಹ, ಮೋಶೆ ಮತ್ತು ಯೂದಾಯದಲ್ಲಿದ್ದ ಪ್ರಥಮ ಶತಮಾನದ ಕ್ರೈಸ್ತರಂತೆ, ನಾವು ಸಹ ಇಂದು ಭರವಸೆಯಿಂದ ಸಮಯ ಮತ್ತು ಕಾಲಗಳನ್ನೂ ಯೆಹೋವನ ಕೈಯಲ್ಲಿಯೇ ಬಿಟ್ಟುಬಿಡಸಾಧ್ಯವಿದೆ. ನಾವೀಗ ಅಂತ್ಯದ ಸಮಯದಲ್ಲಿ ಜೀವಿಸುತ್ತಿದ್ದೇವೆ ಮತ್ತು ನಮ್ಮ ಬಿಡುಗಡೆಯು ಹತ್ತಿರವಾಗುತ್ತಿದೆಯೆಂಬ ನಮ್ಮ ನಿಶ್ಚಿತಾಭಿಪ್ರಾಯವು, ಕೇವಲ ಕಾಲಗಣನಾಶಾಸ್ತ್ರ ಲೆಕ್ಕಾಚಾರದ ಮೇಲಲ್ಲ, ಬದಲಾಗಿ, ಬೈಬಲ್ ಪ್ರವಾದನೆಗಳ ನೆರವೇರಿಕೆಗನುಸಾರ, ನಿಜ ಜೀವನದ ಘಟನೆಗಳ ಮೇಲೆ ಅವಲಂಬಿಸಿರುತ್ತದೆ. ನಾವು ಕ್ರಿಸ್ತನ ಸಾನ್ನಿಧ್ಯದ ಸಮಯದಲ್ಲಿ ಜೀವಿಸುತ್ತಿರುವುದಾದರೂ, ನಾವು ನಂಬಿಕೆಯನ್ನು ಪ್ರದರ್ಶಿಸುವ ಮತ್ತು ಎಚ್ಚರರಾಗಿರುವ ಅಗತ್ಯವಿದೆ. ಶಾಸ್ತ್ರಗಳಲ್ಲಿ ಮುಂತಿಳಿಸಲ್ಪಟ್ಟಿರುವ ರೋಮಾಂಚಕಾರಿ ಘಟನೆಗಳನ್ನು ತವಕದಿಂದ ಎದುರುನೋಡುತ್ತಾ ನಾವು ಜೀವಿಸುವುದನ್ನು ಮುಂದುವರಿಸಬೇಕು. ಮುಂದಿನ ಲೇಖನದ ವಿಷಯ ಇದೇ ಆಗಿದೆ.
[ಅಧ್ಯಯನ ಪ್ರಶ್ನೆಗಳು]
a ಆಗಸ್ಟ್ 1, 1996ರ ಕಾವಲಿನಬುರುಜು ಪತ್ರಿಕೆಯ, 30-1ನೆಯ ಪುಟಗಳನ್ನು ನೋಡಿರಿ.
ಪುನರ್ವಿಮರ್ಶೆ
◻ ಯೆಹೋವನ ಸಮಯ ಮತ್ತು ಕಾಲಗಳ ಸಂಬಂಧದಲ್ಲಿ, ಯೇಸು ತನ್ನ ಅಪೊಸ್ತಲರಿಗೆ ಏನು ಹೇಳಿದನು?
◻ ಜಲಪ್ರಳಯವು ಆರಂಭವಾಗಲಿರುವ ಸಮಯವು, ನೋಹನಿಗೆ ಎಷ್ಟು ಸಮಯಕ್ಕೆ ಮುಂಚೆ ತಿಳಿಯಿತು?
◻ ಮೋಶೆ ಮತ್ತು ಇಸ್ರಾಯೇಲ್ಯರಿಗೆ, ಐಗುಪ್ತದಿಂದ ಯಾವಾಗ ತಮ್ಮ ಬಿಡುಗಡೆಯಾಗುವುದೆಂಬ ಸಮಯವು ನಿಖರವಾಗಿ ತಿಳಿದಿರಲಿಲ್ಲವೆಂಬುದನ್ನು ಯಾವುದು ಸೂಚಿಸುತ್ತದೆ?
◻ ಯೆಹೋವನ ಸಮಯ ಮತ್ತು ಕಾಲಗಳನ್ನು ಒಳಗೊಂಡಿರುವ ಬೈಬಲ್ ಮಾದರಿಗಳಿಂದ ನಾವು ಹೇಗೆ ಪ್ರಯೋಜನವನ್ನು ಪಡೆಯಬಲ್ಲೆವು?
[ಪುಟ 11 ರಲ್ಲಿರುವ ಚಿತ್ರ]
ನೋಹನ ನಂಬಿಕೆಯು, ಅವನು ಸಮಯದ ಕುರಿತ ಸಂಗತಿಗಳನ್ನು ಯೆಹೋವನ ಕೈಗಳಲ್ಲಿ ಬಿಟ್ಟುಬಿಡುವಂತೆ ಶಕ್ತಗೊಳಿಸಿತು