ಬೈಬಲಿನ ದೃಷ್ಟಿಕೋನ
ಪತ್ನಿಯೋಗ್ಯ ಅಧೀನತೆ ಅದರ ಅರ್ಥವೇನು?
ದೇವರ ವಾಕ್ಯವಾದ ಬೈಬಲ್, ಎಫೆಸ 5:22ರಲ್ಲಿ ತಿಳಿಸುವುದು: “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ.” ಇದು ನಿಖರವಾಗಿ ಏನನ್ನು ಅರ್ಥೈಸುತ್ತದೆ? ಒಬ್ಬ ಹೆಂಡತಿಯು ತನ್ನ ಗಂಡನು ಬಯಸುವಂತಹದ್ದೆಲ್ಲದ್ದಕ್ಕೆ—ಅದು ಏನೇ ಆಗಿರಲಿ—ಅಧೀನಳಾಗಬೇಕೊ? ಅವಳು ಎಂದೂ ತನ್ನ ಸ್ವಂತ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಲಾರಳೋ ಅಥವಾ ಅವನಿಗಿಂತ ಭಿನ್ನವಾದ ಅಭಿಪ್ರಾಯಗಳನ್ನು ಹೊಂದಿರಲಾರಳೋ?
ಅಬೀಗೈಲಳ ಕುರಿತಾದ ಬೈಬಲ್ ವೃತ್ತಾಂತವನ್ನು ಪರಿಗಣಿಸಿರಿ. ಅವಳು ವಿವೇಕಯುತವಾಗಿ, ಆದರೆ ಅವಳ ಧನಿಕ ಗಂಡನಾದ ನಾಬಾಲನ ಇಷ್ಟಗಳಿಗೆ ವಿರುದ್ಧವಾಗಿ ಕ್ರಿಯೆಗೈದಳು. ಇಸ್ರಾಯೇಲಿನ ರಾಜನಾಗಲು ದೇವರಿಂದ ಆರಿಸಲ್ಪಟ್ಟವನಾದ ದಾವೀದನ ಅನುಚರರಿಂದ ನಾಬಾಲನಿಗೆ ತೋರಿಸಲ್ಪಟ್ಟ ದಯೆಯ ಹೂರತೂ, ನಾಬಾಲನು “ಬಂದವರ ಮೇಲೆ ಬಿದ್ದು ಬೈದನು.” ನಾಬಾಲನ ಕೃತಘ್ನತೆಯಿಂದಾಗಿ ಕ್ರೋಧಿತನಾಗಿ, ದಾವೀದನು ಅವನನ್ನು ಕೊಲ್ಲಲು ಸಿದ್ಧನಾಗಿದ್ದನು. ತನ್ನ ಇಡೀ ಮನೆತನವು ಅಪಾಯದಲ್ಲಿದೆಯೆಂದು ಅಬೀಗೈಲಳು ಗ್ರಹಿಸಿದಳು. ದಾವೀದನು ಪಟ್ಟುಸಡಿಲಿಸುವಂತೆ ಅವಳು ಮಾಡಿದಳು. ಹೇಗೆ?—1 ಸಮುವೇಲ 25:2-35.
ನಾಬಾಲನು “ಮೂರ್ಖ”ನೆಂದು ಅಬೀಗೈಲಳು ದಾವೀದನೊಂದಿಗೆ ಒಪ್ಪಿಕೊಂಡು, ನಾಬಾಲನು ಕೊಡಲು ತಡೆಹಿಡಿದಿದ್ದ ಆಹಾರದ ಸರಬರಾಯಿಗಳನ್ನು ದಾವೀದನಿಗೆ ಕೊಟ್ಟಳು. ಸಾಮಾನ್ಯವಾಗಿ, ಒಬ್ಬ ಗಂಡ ಅಥವಾ ಒಬ್ಬ ಹೆಂಡತಿಯು ತನ್ನ ಸಂಗಾತಿಯ ದೋಷಗಳನ್ನು ಬಹಿರಂಗಪಡಿಸುವುದು ತಪ್ಪು. ಹೀಗೆ ಮಾತಾಡುವ ಮತ್ತು ಕ್ರಿಯೆಗೈಯುವ ಮೂಲಕ ಅಬೀಗೈಲಳು ಒಬ್ಬ ಪ್ರತಿರೋಧಿಯಾಗಿದ್ದಳೊ? ಇಲ್ಲ. ಅವಳು ನಾಬಾಲನ ಮತ್ತು ಅವನ ಮನೆತನದವರ ಜೀವಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಳು. ಅವಳು ಅಗೌರವಪೂರ್ಣಳಾಗಿರುವ ಅಥವಾ ಸ್ವತಂತ್ರಳಾಗಿರುವ ರೂಢಿಯನ್ನು ಮಾಡಿದಳೆಂಬುದಕ್ಕೆ ಯಾವ ಸುಳಿವೂ ಇಲ್ಲ. ಅಲ್ಲದೆ, ಮೆಚ್ಚಿಸಲು ಕಷ್ಟವಾಗಿದ್ದ ನಾಬಾಲನು, ಅವಳು ತನ್ನ ದೊಡ್ಡದಾದ ಸ್ತಿರಾಸ್ಥಿಯನ್ನು ನಿರ್ವಹಿಸುವುದರಲ್ಲಿ ಸಹಾಯ ಮಾಡಿದ ರೀತಿಯ ಕುರಿತಾಗಿ ಯಾವುದೇ ಅತೃಪ್ತಿಯನ್ನೂ ವ್ಯಕ್ತಪಡಿಸಿರಲಿಲ್ಲ. ಆದರೆ ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ, ಅವಳು ತನ್ನ ಸ್ವಂತ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ವಿವೇಕವು ಆಜ್ಞಾಪಿಸಿತು. ಇನ್ನೂ ಹೆಚ್ಚಾಗಿ, ಅಬೀಗೈಲಳು ಏನು ಮಾಡಿದಳೋ ಅದರ ಕುರಿತಾಗಿ ಬೈಬಲ್ ಮೆಚ್ಚಿಕೆಯಿಂದ ಮಾತಾಡುತ್ತದೆ.—1 ಸಮುವೇಲ 25:3, 25, 32, 33.
ಅಬೀಗೈಲಳ ದಿನಕ್ಕಿಂತಲೂ ತುಂಬ ಸಮಯದ ಹಿಂದೆ, ಮೂಲಪಿತೃಗಳ ಹೆಂಡತಿಯರು ತಮ್ಮ ದೃಷ್ಟಿಕೋನಗಳನ್ನು ವ್ಯಕ್ತಪಡಿಸಿ, ತಮ್ಮ ಗಂಡಂದಿರು ಬಯಸಿದಂತಹ ರೀತಿಗಿಂತ ಭಿನ್ನವಾದ ಕ್ರಿಯೆಗಳನ್ನು ಗೈದ ಸಮಯಗಳಿದ್ದವು. ಆದರೂ, “ದೇವರ ಮೇಲೆ ನಿರೀಕ್ಷೆಯಿಟ್ಟ ಭಕ್ತೆಯರಾದ ಸ್ತ್ರೀಯರು,” ಒಬ್ಬ ಕ್ರೈಸ್ತ ಹೆಂಡತಿಗೆ ಅಧೀನತೆಯ ಆದರ್ಶಪ್ರಾಯರೋಪಾದಿ ಮುಂದಿಡಲ್ಪಟ್ಟಿದ್ದಾರೆ. (1 ಪೇತ್ರ 3:1-6) ಉದಾಹರಣೆಗಾಗಿ, ಅಬ್ರಹಾಮನ ಮಗನಾದ ಇಷ್ಮಾಯೇಲನು ಅವರ ಪುತ್ರನಾದ ಇಸಾಕನಿಗೆ ಒಂದು ಬೆದರಿಕೆಯೋಪಾದಿ ಪರಿಣಮಿಸಿದ್ದನೆಂದು ಸಾರಳು ಗ್ರಹಿಸಿದಾಗ, ಇಷ್ಮಾಯೇಲನು ಹೊರ ಕಳುಹಿಸಲ್ಪಡಬೇಕೆಂದು ಅವಳು ನಿರ್ಣಯಿಸಿದಳು. ಇದು “ಅಬ್ರಹಾಮನಿಗೆ ಬಹುದುಃಖವನ್ನು ಹುಟ್ಟಿಸಿತು.” ಆದರೆ ದೇವರು ಅಬ್ರಹಾಮನಿಗೆ ಹೇಳಿದ್ದು: “ಮಗನ . . . ದೆಸೆಯಿಂದ ನಿನಗೆ ಕರಕರೆಯಾಗಬಾರದು; ಸಾರಳು ಹೇಳಿದಂತೆಯೇ ಮಾಡು.”—ಆದಿಕಾಂಡ 21:11, 12.
ವಿವೇಚನಾಶಕ್ತಿಯು ಅಗತ್ಯ
ಹಾಗಾದರೆ, ಅಧೀನತೆಯ ಹೆಸರಿನಲ್ಲಿ ಒಬ್ಬ ಹೆಂಡತಿಗೆ, ತೀರ ವಿವೇಕಹೀನವಾದ ಅಥವಾ ದೈವಿಕ ಸೂತ್ರಗಳ ಉಲ್ಲಂಘನೆಯಾಗುವುದೆಂದು ಅವಳಿಗೆ ತಿಳಿದಿರುವ ಯಾವುದೊ ವಿಷಯವನ್ನು ಮಾಡಲು ಒತ್ತಾಯಿಸಲ್ಪಟ್ಟ ಅನಿಸಿಕೆಯಾಗುವುದು ಒಳ್ಳೆಯದಲ್ಲ. ಅಥವಾ ಅಬೀಗೈಲಳು ಮತ್ತು ಸಾರಳು ಮಾಡಿದಂತೆ, ಯಾವುದೋ ಅತ್ಯಾವಶ್ಯಕ ವಿಷಯದಲ್ಲಿ ಮೊದಲ ಹೆಜ್ಜೆ ತೆಗೆದುಕೊಂಡದ್ದಕ್ಕಾಗಿ ಅವಳಿಗೆ ದೋಷಿಭಾವನೆಯು ಬರುವಂತೆ ಮಾಡಬಾರದು.
ಒಬ್ಬ ಗಂಡನು ಇಚ್ಛಿಸುವಂತಹ ಪ್ರತಿಯೊಂದು ವಿಷಯದೊಂದಿಗೆ ಪತ್ನಿಯೊಬ್ಬಳು ಯಾವಾಗಲೂ ಅನುವರ್ತಿಸಬೇಕೆಂಬುದನ್ನು ಪತ್ನಿಯೋಗ್ಯ ಅಧೀನತೆಯು ಅರ್ಥೈಸುವುದಿಲ್ಲ. ವ್ಯತ್ಯಾಸವನ್ನು ಮಾಡುವಂತಹ ಸಂಗತಿ ಯಾವುದು? ಸರಿಯಾದ ಸೂತ್ರಗಳು ಗಂಡಾಂತರದಲ್ಲಿರುವಾಗ, ಅವಳು ತನ್ನ ಗಂಡನೊಂದಿಗೆ ಅಸಮ್ಮತಿಸಬೇಕಾಗಬಹುದು. ಹಾಗಿದ್ದರೂ, ಅವಳು ಒಟ್ಟಿನಲ್ಲಿ ದೈವಿಕ ಅಧೀನತೆಯ ಮನೋವೃತ್ತಿಯನ್ನು ಇನ್ನೂ ಪ್ರದರ್ಶಿಸುತ್ತಿರಬೇಕು.
ಒಬ್ಬ ಹೆಂಡತಿಯು ಉದ್ದೇಶಪೂರ್ವಕವಾಗಿ, ಸೇಡಿನಿಂದ ಅಥವಾ ಇತರ ದುರುದ್ದೇಶಗಳಿಂದ ತನ್ನ ಗಂಡನ ಇಚ್ಛೆಗಳನ್ನು ಉಪೇಕ್ಷಿಸದಿರಲು ಜಾಗರೂಕಳಾಗಿರಬೇಕು ಎಂಬುದು ನಿಶ್ಚಯ. ಅವಳು ವಿವೇಚನೆಯುಳ್ಳವಳು, ಅಬೀಗೈಲಳಂತೆ “ಬಹುಬುದ್ಧಿವಂತೆ”ಯಾಗಿರಬೇಕು.—1 ಸಮುವೇಲ 25:3.
ಗಂಡನು ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುವಾಗ
ಒಬ್ಬ ಹೆಂಡತಿಯ ದೈವಿಕ ಅಧೀನತೆಯ ಪ್ರಮುಖ ಗುರಿ ಮತ್ತು ಮನೋವೃತ್ತಿಯು, ತನ್ನ ಗಂಡನೊಂದಿಗೆ ಸಹಕರಿಸುವ ಮತ್ತು ಅವನ ನಿರ್ಣಯಗಳನ್ನು ಬೆಂಬಲಿಸುವ ಮೂಲಕ ಯೆಹೋವನನ್ನು ಮೆಚ್ಚಿಸುವುದು ಆಗಿರುತ್ತದೆ. ಒಬ್ಬ ಗಂಡನು ಆತ್ಮಿಕವಾಗಿ ಪ್ರೌಢನಾಗಿರುವಾಗ ಇದು ತೀರ ಸುಲಭ. ಆದರೆ ಅವನು ಪ್ರೌಢನಾಗಿರದಿರುವಲ್ಲಿ ಅದು ಒಂದು ಪಂಥಾಹ್ವಾನವಾಗಿರಬಲ್ಲದು.
ಈ ವಿದ್ಯಮಾನದಲ್ಲಿ, ಅವಳು ಹೇಗೆ ನಿಭಾಯಿಸಬಲ್ಲಳು? ಅವಳು ಅವನಲ್ಲಿ ಶ್ರದ್ಧೆಯಿಂದ ಬೇಡಿಕೊಳ್ಳಬಹುದು ಅಥವಾ ಕುಟುಂಬಕ್ಕೆ ಯಾವ ನಿರ್ಣಯಗಳು ತೀರ ಹೆಚ್ಚು ಲಾಭವನ್ನು ತರುವವೆಂಬುದರ ಕುರಿತು ಸಲಹೆ ನೀಡಬಹುದು. ಅವನು ಮುಂದಾಳುತ್ವವನ್ನು ತೆಗೆದುಕೊಳ್ಳುವಂತೆ ಅವಳು ಬಿಡುವಲ್ಲಿ, ಅವನು ಅದನ್ನು ಮಾಡುವುದರಲ್ಲಿ ಕೌಶಲವುಳ್ಳವನಾಗಿ ಪರಿಣಮಿಸಬಹುದು. ಗಂಡನನ್ನು ಸತತವಾಗಿ ಕಾಡಿಸುತ್ತಾ ಇರುವುದು, ಯೋಗ್ಯವಾದ ಅಧೀನತೆಯ ಆತ್ಮವನ್ನು ಉಲ್ಲಂಘಿಸುತ್ತದೆ. (ಜ್ಞಾನೋಕ್ತಿ 21:19) ಆದರೂ ಅವನ ಧೋರಣೆಯಿಂದಾಗಿ, ಕುಟುಂಬದ ಕ್ಷೇಮವು ಸ್ಪಷ್ಟವಾಗಿ ಅಪಾಯದಲ್ಲಿರುವಲ್ಲಿ, ಅವಳು ಸಾರಳು ಮಾಡಿದಂತೆ, ಸರಿಪಡಿಸುವಂತಹ ಒಂದು ಕ್ರಮವನ್ನು ಶಿಫಾರಸ್ಸು ಮಾಡಲು ಆರಿಸಿಕೊಳ್ಳಬಹುದು.
ಗಂಡನು ಅವಿಶ್ವಾಸಿಯಾಗಿರುವುದಾದರೆ, ಹೆಂಡತಿಗೆ ಪಂಥಾಹ್ವಾನವು ಇನ್ನೂ ದೊಡ್ಡದ್ದಾಗಿರುತ್ತದೆ. ಆದರೂ, ಎಷ್ಟರ ವರೆಗೆ ಅವನು ಅವಳಿಗೆ ಬೈಬಲಿನ ನಿಯಮಗಳನ್ನು ಉಲ್ಲಂಘಿಸುವಂತೆ ಕೇಳಿಕೊಳ್ಳುವುದಿಲ್ಲವೊ ಅಷ್ಟರ ತನಕ ಅವಳು ಅಧೀನಳಾಗಿರಬೇಕು. ಅವನು ಹಾಗೆ ಮಾಡುವಲ್ಲಿ, ಒಬ್ಬ ಕ್ರೈಸ್ತ ಹೆಂಡತಿಯ ಪ್ರತಿಕ್ರಿಯೆಯು, ದೇವರ ಆಜ್ಞೆಗಳನ್ನು ಉಲ್ಲಂಘಿಸುವಂತೆ ನ್ಯಾಯಾಲಯವು ಶಿಷ್ಯರಿಗೆ ಕೇಳಿಕೊಂಡಾಗ, ಅವರು ತೋರಿಸಿದ ಪ್ರತಿಕ್ರಿಯೆಯಂತೆಯೇ ಇರತಕ್ಕದ್ದು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರ”ಬೇಕು.—ಅ. ಕೃತ್ಯಗಳು 5:29.
ಆದಾಗಲೂ, ಅನುಭವದ ಕೊರತೆ ಮತ್ತು ಸೀಮಿತ ವಿವೇಕದಿಂದಾಗಿ, ಒಳ್ಳೇ ಹೇತುವಿರುವ ಗಂಡಂದಿರು ಮತ್ತು ಹೆಂಡತಿಯರು ಸಹ ತಮ್ಮ ಪಾತ್ರಗಳನ್ನು ಮೀರಿ ಹೋಗಬಲ್ಲರು. ಗಂಡನಲ್ಲಿ ಪರಿಗಣನೆಯ ಕೊರತೆಯಿರಬಹುದು; ಹೆಂಡತಿಯು ತನ್ನ ಇಷ್ಟಗಳನ್ನು ಪೂರೈಸುವಂತೆ ತೀರ ಹೆಚ್ಚಾಗಿ ಪಟ್ಟುಹಿಡಿಯಬಹುದು. ಯಾವುದು ಸಹಾಯಮಾಡುವುದು? ತಮ್ಮ ಕುರಿತಾದ ಒಂದು ಮಿತಭಾವದ ನೋಟವು ಇಬ್ಬರಿಗೂ ಪ್ರಾಮುಖ್ಯ, ಯಾಕಂದರೆ “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು.”—ಯಾಕೋಬ 3:2.
ಒಬ್ಬ ಹೆಂಡತಿಯು ಪ್ರಾಮಾಣಿಕವಾದ ಆರಂಭದ ಹೆಜ್ಜೆಯನ್ನು ಪರಿಜ್ಞಾನದಿಂದ ತೆಗೆದುಕೊಳ್ಳುವಲ್ಲಿ, ಅನೇಕ ಪುರುಷರು ಅದನ್ನು ಗಣ್ಯಮಾಡತೊಡಗುವರು. ಮತ್ತು ಅವರು ತಪ್ಪುಗಳನ್ನು ಮಾಡುವಾಗ ಇಬ್ಬರೂ ಕ್ಷಮೆಯಾಚಿಸುವಲ್ಲಿ ಸಹಕಾರವು ವೃದ್ಧಿಸಲ್ಪಡುತ್ತದೆ. ಯೆಹೋವನು ನಮ್ಮ ದಿನನಿತ್ಯದ ಕುಂದುಗಳನ್ನು ಕ್ಷಮಿಸುವಂತೆ, ನಾವೂ ಇತರರನ್ನು ಕ್ಷಮಿಸಬೇಕು. “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು? ನೀನು ಪಾಪವನ್ನು ಕ್ಷಮಿಸುವವ”ನಾಗಿದ್ದೀ.—ಕೀರ್ತನೆ 130:3, 4.
“ಒಬ್ಬರಿಗೊಬ್ಬರು ಅಧೀನರಾಗಿರಿ”
ಹಾಗಾದರೆ, ನಮ್ಮ ಪರಸ್ಪರ ಹಿತಕ್ಕಾಗಿಯೇ ಶಾಸ್ತ್ರವಚನಗಳು ಈ ಬುದ್ಧಿವಾದವನ್ನು ನೀಡುತ್ತವೆ: “ಕ್ರಿಸ್ತನ ಭಯದಲ್ಲಿ ಒಬ್ಬರಿಗೊಬ್ಬರು ಅಧೀನರಾಗಿರಿ” (NW). ಒಬ್ಬರಿಗೊಬ್ಬರು ಪರಸ್ಪರ ಗೌರವವನ್ನು ಸಲ್ಲಿಸಿರಿ; ಅಡ್ಡಿಪಡಿಸದಿರಿ ಅಥವಾ ಸ್ಪರ್ಧಿಸಬೇಡಿರಿ. ವಚನವು ಮುಂದುವರಿಸುವುದು: “ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ.”—ಎಫೆಸ 5:21-23.
ಎಫೆಸ 5:21, 22ರಲ್ಲಿ ಪೌಲನಿಂದ ಉಪಯೋಗಿಸಲ್ಪಟ್ಟ ಗ್ರೀಕ್ ಶಬ್ದವು, ಒಬ್ಬನು ತನ್ನನ್ನೇ ಅಧೀನಪಡಿಸಿಕೊಳ್ಳುವುದನ್ನು, ಅಧೀನತೆಯೊಳಗೆ ಒತ್ತಾಯಿಸಲ್ಪಡದಿರುವುದನ್ನು ಅರ್ಥೈಸುತ್ತದೆ. ಮತ್ತು ಅಧೀನತೆಯು ಕೇವಲ ವಿವಾಹದ ಹೊಂದಾಣಿಕೆಗಾಗಿ ಅಲ್ಲ, ಕರ್ತನಿಗೋಸ್ಕರವಾಗಿರುತ್ತದೆ. ಕ್ರಿಸ್ತನ ಅಭಿಷಿಕ್ತ ಸಭೆಯು ಸ್ವಯಂಪ್ರೇರಿತವಾಗಿ, ಆನಂದದಿಂದ ತನ್ನನ್ನು ಕ್ರಿಸ್ತನಿಗೆ ಅಧೀನಪಡಿಸಿಕೊಳ್ಳುತ್ತದೆ. ಒಬ್ಬ ಹೆಂಡತಿಯು ಅದನ್ನೇ ತನ್ನ ಗಂಡನಿಗೆ ಮಾಡುವಾಗ, ವಿವಾಹವು ಹೆಚ್ಚು ಸಂಭವನೀಯವಾಗಿ ಸಂತೋಷಕರವೂ ಯಶಸ್ವಿಕರವೂ ಆಗಿ ಪರಿಣಮಿಸುವುದು.
ಶಾಸ್ತ್ರವಚನಗಳು ಇದನ್ನೂ ತಿಳಿಸುತ್ತವೆ: “ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ” ಅಮಿತವಾಗಿ “ಪ್ರೀತಿಸಬೇಕು.” (ಎಫೆಸ 5:33; 1 ಪೇತ್ರ 3:7) “ಪ್ರತಿ ಪುರುಷನಿಗೂ ಕ್ರಿಸ್ತನು ತಲೆ” ಎಂದು ಬೈಬಲ್ ತಿಳಿಸುವುದರಿಂದ, ತಾನೂ ತನ್ನ ತಲೆಗೆ ಅಧೀನತೆಯಲ್ಲಿರಬೇಕೆಂದು ಗಂಡನೂ ಮನಸ್ಸಿನಲ್ಲಿಡಬೇಕು. ಹೌದು, ಪುರುಷನು ಕ್ರಿಸ್ತನ ಬೋಧನೆಗಳಿಗೆ ಅಧೀನತೆಯಲ್ಲಿರಬೇಕು. ಪ್ರತಿಯಾಗಿ, ಕ್ರಿಸ್ತನು ತನ್ನ ತಲೆಗೆ ಅಧೀನತೆಯಲ್ಲಿದ್ದಾನೆ: “ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” ಹೀಗೆ, ಯೆಹೋವನನ್ನು ಬಿಟ್ಟು ಎಲ್ಲರಿಗೆ ಒಂದು ತಲೆಯಿದೆ. ಮತ್ತು ಯೆಹೋವನು ಕೂಡ ತನ್ನನ್ನು ತನ್ನ ಸ್ವಂತ ನಿಯಮಗಳ ನಿರ್ಬಂಧಕ್ಕೆ ಒಳಪಡಿಸಿಕೊಳ್ಳುತ್ತಾನೆ.—1 ಕೊರಿಂಥ 11:3; ತೀತ 1:2; ಇಬ್ರಿಯ 6:18.
ಕ್ರೈಸ್ತ ಅಧೀನತೆಯು ಸಮತೋಲನದ್ದಾಗಿದೆ ಮತ್ತು ಎರಡೂ ಲಿಂಗಜಾತಿಯವರಿಗೆ ಲಾಭದಾಯಕವಾಗಿದೆ. ಅದು ವಿವಾಹಕ್ಕೆ, ನಮ್ಮ ಪ್ರೀತಿಯುಳ್ಳ ಸೃಷ್ಟಿಕರ್ತನೊಬ್ಬನೇ ಒದಗಿಸಬಲ್ಲ ಸಾಮರಸ್ಯ ಮತ್ತು ಸಂತೃಪ್ತಿಯನ್ನು ತರುತ್ತದೆ.—ಫಿಲಿಪ್ಪಿ 4:7.
[ಪುಟ 25 ರಲ್ಲಿರುವ ಚಿತ್ರ ಕೃಪೆ]
Leslie’s