“ಸತ್ಯವಾಕ್ಯವನ್ನು ಸರಿಯಾಗಿ ನಿರ್ವಹಿಸುವುದು”
ದೇವರ ವಾಕ್ಯವು ಒಂದು ಸಫಲ ಜೀವನಕ್ಕಾಗಿ ಪ್ರಮುಖವಾಗಿರುವ ಮೂಲತತ್ವಗಳ ಒಂದು ಭಂಡಾರವಾಗಿದೆ. ಅದು ಒಬ್ಬ ಶುಶ್ರೂಷಕನಿಗೆ ಕಲಿಸಲು, ಗದರಿಸಲು ಮತ್ತು ತಿದ್ದಲು ಸಹಾಯ ಮಾಡಬಲ್ಲದು. (2 ತಿಮೊಥೆಯ 3:16, 17) ಹಾಗಿದ್ದರೂ, ದೈವಿಕವಾಗಿ ಒದಗಿಸಲ್ಪಟ್ಟ ಈ ಮಾರ್ಗದರ್ಶಕದಿಂದ ಪೂರ್ಣವಾಗಿ ಪ್ರಯೋಜನ ಪಡೆಯಲು, ಅಪೊಸ್ತಲ ಪೌಲನು ತಿಮೊಥೆಯನಿಗೆ ನೀಡಿದ ಸಲಹೆಯನ್ನು ನಾವು ಅನುಸರಿಸಬೇಕು: “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸು [“ನಿರ್ವಹಿಸು,” NW]ವವನೂ ಆಗಿರು.”—2 ತಿಮೊಥೆಯ 2:15.
ಇತರ ವಿಷಯಗಳಲ್ಲಿ ದೇವರ ವಾಕ್ಯವು ಪೋಷಿಸುವ ಹಾಲಿಗೆ, ಗಟ್ಟಿಯಾದ ಆಹಾರಕ್ಕೆ, ಚೈತನ್ಯದಾಯಕವಾದ ಹಾಗೂ ಶುದ್ಧಗೊಳಿಸುವ ನೀರಿಗೆ, ಕನ್ನಡಿಗೆ ಮತ್ತು ಒಂದು ಹರಿತವಾದ ಕತ್ತಿಗೆ ಹೋಲಿಸಲ್ಪಟ್ಟಿದೆ. ಈ ಪದಗಳು ಏನನ್ನು ಸೂಚಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು, ಬೈಬಲನ್ನು ಬುದ್ಧಿವಂತಿಕೆಯಿಂದ ಉಪಯೋಗಿಸುವಂತೆ ಒಬ್ಬ ಶುಶ್ರೂಷಕನಿಗೆ ಸಹಾಯ ಮಾಡುತ್ತದೆ.
ದೇವರ ವಾಕ್ಯದ ಹಾಲನ್ನು ಹಂಚುವುದು
ಹಾಲು ನವಜಾತ ಶಿಶುಗಳಿಗೆ ಬೇಕಾದ ಆಹಾರವಾಗಿದೆ. ಶಿಶುವು ಬೆಳೆದಂತೆ, ಅದರ ಪಥ್ಯದಲ್ಲಿ ಗಟ್ಟಿಯಾದ ಆಹಾರವು ಕ್ರಮೇಣ ಸೇರಿಸಲ್ಪಡುತ್ತದೆ, ಆದರೆ ಪ್ರಥಮತಃ ಅದು ಹಾಲನ್ನು ಮಾತ್ರ ಜೀರ್ಣಿಸಬಲ್ಲದು. ಅನೇಕ ವಿಷಯಗಳಲ್ಲಿ, ದೇವರ ವಾಕ್ಯದ ಬಗ್ಗೆ ಸ್ವಲ್ಪ ವಿಷಯವನ್ನು ತಿಳಿದಿರುವವರು ಶಿಶುಗಳಂತೆ ಇದ್ದಾರೆ. ವ್ಯಕ್ತಿಯೊಬ್ಬನು ದೇವರ ವಾಕ್ಯದಲ್ಲಿ ಹೊಸದಾಗಿ ಅಭಿರುಚಿಯುಳ್ಳವನಾಗಿರಲಿ ಅದರೊಂದಿಗೆ ಸ್ವಲ್ಪ ಸಮಯದಿಂದ ಪರಿಚಿತನಾದವನಾಗಿರಲಿ, ಬೈಬಲ್ ಹೇಳುವ ವಿಷಯದ ಮೂಲ ತಿಳಿವಳಿಕೆ ಮಾತ್ರ ಅವನಿಗಿದ್ದರೆ, ಅವನು ಆತ್ಮಿಕ ಶಿಶುವಾಗಿದ್ದಾನೆ ಮತ್ತು ಜೀರ್ಣಿಸಲು ಸುಲಭವಾದ ಪೋಷಣೆಯು ಅವನಿಗೆ ಬೇಕಾಗಿದೆ—ಆತ್ಮಿಕ “ಹಾಲು.” ಅವನು “ಗಟ್ಟಿಯಾದ ಆಹಾರ”ವನ್ನು, ದೇವರ ವಾಕ್ಯದ ಅಗಾಧ ವಿಷಯಗಳನ್ನು ಜೀರ್ಣಿಸಿಕೊಳ್ಳಲು ಇನ್ನೂ ಶಕ್ತನಾಗಿರುವುದಿಲ್ಲ.—ಇಬ್ರಿಯ 5:12.
ಪೌಲನು ಅವರಿಗೆ ಬರೆದಾಗ, ಕೊರಿಂಥದಲ್ಲಿ ಹೊಸದಾಗಿ ರೂಪುಗೊಂಡ ಸಭೆಯ ಸನ್ನಿವೇಶವು ಹೀಗಿತ್ತು: “ನಿಮಗೆ ಹಾಲು ಕುಡಿಸಿದೆನು, ಅನ್ನಾ ಕೊಡಲಿಲ್ಲ; ಅನ್ನಾ ತಿನ್ನುವದಕ್ಕೆ ನಿಮಗೆ ಇನ್ನೂ ಶಕ್ತಿ ಇರಲಿಲ್ಲ.” (1 ಕೊರಿಂಥ 3:2) ಕೊರಿಂಥದವರು “ದೈವೋಕ್ತಿಗಳ ಮೂಲಪಾಠಗಳನ್ನು” ಮೊದಲಾಗಿ ಕಲಿಯಬೇಕಿತ್ತು. (ಇಬ್ರಿಯ 5:12) ವಿಕಾಸದ ತಮ್ಮ ಹಂತದಲ್ಲಿ, “ದೇವರ ಅಗಾಧವಾದ ವಿಷಯಗಳನ್ನು” ಅವರಿಗೆ ಜೀರ್ಣಿಸಿಕೊಳ್ಳಸಾಧ್ಯವಾಗುತ್ತಿರಲಿಲ್ಲ.—1 ಕೊರಿಂಥ 2:10.
ಪೌಲನಂತೆ, ಆತ್ಮಿಕ ಶಿಶುಗಳಿಗೆ “ಹಾಲ”ನ್ನು ಕೊಡುವ ಮೂಲಕ, ಅಂದರೆ, ಮೂಲಭೂತ ಕ್ರೈಸ್ತ ಸಿದ್ಧಾಂತದಲ್ಲಿ ದೃಢವಾಗಿ ನೆಲೆಗೊಳ್ಳಲು ಅವರಿಗೆ ಸಹಾಯ ಮಾಡುವ ಮೂಲಕ, ಕ್ರೈಸ್ತ ಶುಶ್ರೂಷಕರು ಇಂದು ಅವರಿಗಾಗಿ ತಮ್ಮ ಚಿಂತೆಯನ್ನು ಪ್ರದರ್ಶಿಸುತ್ತಾರೆ. ‘ಪಾರಮಾರ್ಥಿಕವಾದ ಶುದ್ಧ ಹಾಲಿಗೆ ಬಯಕೆಯನ್ನು ರೂಪಿಸುವಂತೆ’ ಅವರು ಅಂತಹ ಹೊಸ ಅಥವಾ ಪಕ್ವತೆಯಿಲ್ಲದವರನ್ನು ಉತ್ತೇಜಿಸುತ್ತಾರೆ. (1 ಪೇತ್ರ 2:2) “ಹಾಲು ಬೇಕಾದವನು ಕೂಸಿನಂತಿದ್ದು ನೀತಿವಾಕ್ಯದಲ್ಲಿ ಅನುಭವವಿಲ್ಲದವನಾಗಿದ್ದಾನೆ,” ಎಂದು ಅಪೊಸ್ತಲ ಪೌಲನು ಬರೆದಾಗ, ಹೊಸಬರಿಗೆ ಬೇಕಾಗಿರುವ ವಿಶೇಷವಾದ ಗಮನವನ್ನು ಅವನು ಅರಿತುಕೊಂಡನೆಂದು ತೋರಿಸಿದನು. (ಇಬ್ರಿಯ 5:13) ಮನೆ ಬೈಬಲ್ ಅಧ್ಯಯನಗಳಲ್ಲಿ ಮತ್ತು ಸಭೆಯಲ್ಲಿ ಹೊಸಬರೊಂದಿಗೆ ಮತ್ತು ಅನನುಭವಸ್ಥರೊಂದಿಗೆ ಅವರು ವಾಕ್ಯದ ಶುದ್ಧ ಹಾಲನ್ನು ಹಂಚಿಕೊಳ್ಳುವಾಗ, ತಾಳ್ಮೆ, ಪರಿಗಣನೆ, ಅರ್ಥಮಾಡಿಕೊಳ್ಳುವಿಕೆ ಮತ್ತು ಕೋಮಲತೆಯು ದೇವರ ಶುಶ್ರೂಷಕರಿಂದ ಕೇಳಿಕೊಳ್ಳಲ್ಪಡುತ್ತದೆ.
ದೇವರ ವಾಕ್ಯದ ಗಟ್ಟಿಯಾದ ಆಹಾರವನ್ನು ನಿರ್ವಹಿಸುವುದು
ರಕ್ಷಣೆಗೆ ಅಭಿವೃದ್ಧಿಹೊಂದಲು, ಒಬ್ಬ ಕ್ರೈಸ್ತನಿಗೆ ‘ಹಾಲಿ’ಗಿಂತ ಹೆಚ್ಚಿನದ್ದು ಬೇಕಾಗಿದೆ. ಒಮ್ಮೆ ಬೈಬಲಿನ ಪ್ರಾಥಮಿಕ ಸತ್ಯಗಳು ಸ್ಪಷ್ಟವಾಗಿ ಅರ್ಥಮಾಡಿಕೊಂಡು, ಸ್ವೀಕರಿಸಲ್ಪಟ್ಟಿರುವುದಾದರೆ, ಅವನು ‘ಪಕ್ವತೆಯುಳ್ಳ ಜನರಿಗೆ ಸೇರಿರುವ ಗಟ್ಟಿಯಾದ ಆಹಾರಕ್ಕೆ’ ಮುಂದುವರಿಯಲು ಸಿದ್ಧನಾಗಿದ್ದಾನೆ. (ಇಬ್ರಿಯ 5:14) ಇದನ್ನು ಅವನು ಹೇಗೆ ಮಾಡಬಲ್ಲನು? ಮೂಲಭೂತವಾಗಿ, ವೈಯಕ್ತಿಕ ಅಧ್ಯಯನ ಮತ್ತು ಕ್ರೈಸ್ತ ಕೂಟಗಳಲ್ಲಿ ಸಹವಾಸದ ಕ್ರಮವಾದ ದಿನಚರಿಯ ಮೂಲಕವೇ. ಅಂತಹ ಒಳ್ಳೆಯ ಹವ್ಯಾಸಗಳು ಒಬ್ಬ ಕ್ರೈಸ್ತನನ್ನು ಆತ್ಮಿಕವಾಗಿ ಸುದೃಢನೂ, ಪಕ್ವತೆಯುಳ್ಳವನೂ ಮತ್ತು ಶುಶ್ರೂಷೆಯಲ್ಲಿ ಪರಿಣಾಮಕಾರಿಯೂ ಆಗಿರಲು ಸಹಾಯ ಮಾಡುವವು. (2 ಪೇತ್ರ 1:8) ಜ್ಞಾನದ ಜೊತೆಗೆ ಯೆಹೋವನ ಚಿತ್ತದ ಮಾಡುವಿಕೆಯೂ ಆತ್ಮಿಕ ಆಹಾರದಲ್ಲಿ ಸಂಯೋಜಿತವಾಗಿದೆ ಎಂಬುದನ್ನು ನಾವು ಮರೆಯಬಾರದು.—ಯೋಹಾನ 4:34.
ಇಂದು, ದೇವರ ಸೇವಕರಿಗೆ ಸಮಯಕ್ಕೆ ಸರಿಯಾಗಿ ಆಹಾರವನ್ನು ಒದಗಿಸಲು ಮತ್ತು “ದೇವರ . . . ನಾನಾ ವಿಧವಾದ ಜ್ಞಾನ”ವನ್ನು ತಿಳಿದುಕೊಳ್ಳುವಂತೆ ಅವರಿಗೆ ಸಹಾಯ ಮಾಡಲು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ನೇಮಿಸಲ್ಪಟ್ಟಿದ್ದಾನೆ. ‘ಸಮಯಕ್ಕೆ ಸರಿಯಾಗಿ’ ಆತ್ಮಿಕ ‘ಆಹಾರ’ವನ್ನು ನಂಬಿಗಸ್ತಿಕೆಯಿಂದ ಪ್ರಕಾಶಿಸುವ ಈ ನಿಷ್ಠಾವಂತ ಆಳಿನ ಮುಖಾಂತರ, ಯೆಹೋವನು ಅಗಾಧವಾದ ಶಾಸ್ತ್ರೀಯ ಸತ್ಯಗಳನ್ನು ತನ್ನ ಆತ್ಮದ ಮೂಲಕ ಪ್ರಕಟಿಸುತ್ತಾನೆ. (ಮತ್ತಾಯ 24:45-47; ಎಫೆಸ 3:10, 11; ಹೋಲಿಸಿ ಪ್ರಕಟನೆ 1:1, 2.) ಪ್ರತಿಯೊಬ್ಬ ಕ್ರೈಸ್ತನಿಗೆ ಇಂತಹ ಪ್ರಕಾಶಿತ ಒದಗಿಸುವಿಕೆಗಳ ಪೂರ್ಣವಾದ ಉಪಯೋಗವನ್ನು ಮಾಡುವ ಹೊಣೆಗಾರಿಕೆಯಿದೆ.—ಪ್ರಕಟನೆ 1:3.
ನಿಶ್ಚಯವಾಗಿ, ಬೈಬಲಿನಲ್ಲಿರುವ ಕೆಲವು ವಿಷಯಗಳು ಪಕ್ವತೆಯುಳ್ಳ ಕ್ರೈಸ್ತರಿಗೂ “ತಿಳಿಯುವದಕ್ಕೆ ಕಷ್ಟವಾಗಿವೆ.” (2 ಪೇತ್ರ 3:16) ಹೆಚ್ಚಿನ ಅಧ್ಯಯನ ಮತ್ತು ಮನನವನ್ನು ಕೇಳಿಕೊಳ್ಳುವ ದಿಗ್ಭ್ರಮೆಗೊಳಿಸುವ ಅಭಿವ್ಯಕ್ತಿಗಳು, ಪ್ರವಾದನೆಗಳು, ಮತ್ತು ದೃಷ್ಟಾಂತಗಳಿವೆ. ಆದಕಾರಣ, ವೈಯಕ್ತಿಕ ಅಧ್ಯಯನವು ದೇವರ ವಾಕ್ಯದಲ್ಲಿ ಅಗೆಯುವುದನ್ನು ಒಳಗೊಳ್ಳುತ್ತದೆ. (ಜ್ಞಾನೋಕ್ತಿ 1:5, 6; 2:1-5) ಸಭೆಗೆ ಕಲಿಸುವಾಗ ಹಿರಿಯರಿಗೆ ವಿಶೇಷವಾಗಿ ಈ ಸಂಬಂಧದಲ್ಲಿ ಒಂದು ಜವಾಬ್ದಾರಿಯಿದೆ. ಸಭಾ ಪುಸ್ತಕ ಅಭ್ಯಾಸವನ್ನು ಅಥವಾ ಕಾವಲಿನಬುರುಜು ಅಭ್ಯಾಸವನ್ನು ನಡೆಸುತ್ತಿರಲಿ, ಬಹಿರಂಗ ಭಾಷಣಗಳನ್ನು ಕೊಡುತ್ತಿರಲಿ, ಅಥವಾ ಇನ್ನಾವುದೇ ಕಲಿಸುವ ಸಾಮರ್ಥ್ಯದಲ್ಲಿ ಕಾರ್ಯಮಾಡುತ್ತಿರಲಿ, ಹಿರಿಯರು ತಮ್ಮ ವಿಷಯದೊಂದಿಗೆ ಸಂಪೂರ್ಣವಾಗಿ ಪರಿಚಿತರಾಗಿರಬೇಕು ಮತ್ತು ಸಭೆಗೆ ಅವರು ಗಟ್ಟಿಯಾದ ಆತ್ಮಿಕ ಆಹಾರವನ್ನು ಸಾಗಿಸಿದಂತೆ ತಮ್ಮ ‘ಬೋಧಿಸುವ ಕಲೆಗೆ’ ಗಮನ ಕೊಡಲು ಸಿದ್ಧರಾಗಿರಬೇಕು.—2 ತಿಮೊಥೆಯ 4:2.
ಚೈತನ್ಯಗೊಳಿಸುವ ಮತ್ತು ಶುದ್ಧಗೊಳಿಸುವ ನೀರು
ಆಕೆಯಲ್ಲಿ ‘ನಿತ್ಯಜೀವವನ್ನು ಉಂಟುಮಾಡುವ ಉಕ್ಕುವ ಒರತೆ’ಯಾಗಲಿದ್ದ ಏನನ್ನೊ ಕುಡಿಯಲು ಅವನು ಆಕೆಗೆ ಕೊಡಲಿದ್ದನೆಂದು ಬಾವಿಯ ಬಳಿಯಲಿದ್ದ ಸಮಾರ್ಯದ ಸ್ತ್ರೀಗೆ ಯೇಸು ಹೇಳಿದನು. (ಯೋಹಾನ 4:13, 14; 17:3) ಈ ಜೀವದಾಯಕ ನೀರು, ದೇವರ ಕುರಿಮರಿಯ ಮುಖಾಂತರ ಜೀವವನ್ನು ಪಡೆಯಲಿಕ್ಕಾಗಿರುವ ದೇವರ ಎಲ್ಲ ಒದಗಿಸುವಿಕೆಗಳನ್ನು ಒಳಗೊಳ್ಳುತ್ತದೆ ಮತ್ತು ಈ ಒದಗಿಸುವಿಕೆಗಳು ಬೈಬಲಿನಲ್ಲಿ ವಿವರಿಸಲ್ಪಟ್ಟಿವೆ. ಆ “ನೀರಿ”ಗಾಗಿ ಬಾಯಾರಿದ ವ್ಯಕ್ತಿಗಳೋಪಾದಿ, “ಜೀವಜಲವನ್ನು ಕ್ರಯವಿಲ್ಲದೆ ತೆಗೆದು”ಕೊಳ್ಳಲು ಆತ್ಮನಿಂದ ಮತ್ತು ಕ್ರಿಸ್ತನ ಮದಲಗಿತ್ತಿಯ ಮೂಲಕ ಕೊಡಲ್ಪಟ್ಟ ಆಮಂತ್ರಣವನ್ನು ನಾವು ಸ್ವೀಕರಿಸುತ್ತೇವೆ. (ಪ್ರಕಟನೆ 22:17) ಈ ನೀರನ್ನು ಕುಡಿಯುವುದು ನಿತ್ಯಜೀವವನ್ನು ಅರ್ಥೈಸಬಲ್ಲದು.
ಇನ್ನೂ ಹೆಚ್ಚಾಗಿ, ಸತ್ಯ ಕ್ರೈಸ್ತರಿಗೆ ಬೈಬಲು ನೈತಿಕ ಹಾಗೂ ಆತ್ಮಿಕ ಮಟ್ಟಗಳನ್ನಿಡುತ್ತದೆ. ದೈವಿಕವಾಗಿ ಸ್ಥಾಪಿಸಲ್ಪಟ್ಟ ಈ ಮಟ್ಟಗಳನ್ನು ನಾವು ಅನ್ವಯಿಸಿದಂತೆ, ನಾವು ಯೆಹೋವನ ವಾಕ್ಯದಿಂದ ಶುದ್ಧೀಕರಿಸಲ್ಪಡುತ್ತೇವೆ, ಯೆಹೋವ ದೇವರು ದ್ವೇಷಿಸುವ ಎಲ್ಲ ಆಚರಣೆಗಳಿಂದ ‘ಶುದ್ಧವಾಗಿ ತೊಳೆಯಲ್ಪಡುತ್ತೇವೆ.’ (1 ಕೊರಿಂಥ 6:9-11) ಈ ಕಾರಣಕ್ಕಾಗಿ ಪ್ರೇರಿತ ವಾಕ್ಯದಲ್ಲಿರುವ ಸತ್ಯವು “ಜಲಸ್ನಾನ”ವೆಂದು ಕರೆಯಲ್ಪಟ್ಟಿದೆ. (ಎಫೆಸ 5:27) ಈ ರೀತಿಯಲ್ಲಿ ನಮ್ಮನ್ನು ಶುದ್ಧಗೊಳಿಸಲು ನಾವು ದೇವರ ಸತ್ಯವನ್ನು ಅನುಮತಿಸದಿದ್ದಲ್ಲಿ, ನಮ್ಮ ಆರಾಧನೆಯು ಆತನಿಗೆ ಸ್ವೀಕಾರಾರ್ಹವಾಗಿರುವುದಿಲ್ಲ.
ಆಸಕ್ತಿಕರವಾಗಿ, ‘ಸತ್ಯವಾಕ್ಯವನ್ನು ಸರಿಯಾಗಿ ನಿರ್ವಹಿಸುವ’ ಹಿರಿಯರೂ ನೀರಿಗೆ ಹೋಲಿಸಲ್ಪಟ್ಟಿದ್ದಾರೆ. ಅವರು “ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರ” ಇದ್ದಾರೆಂದು ಯೆಶಾಯನು ಹೇಳುತ್ತಾನೆ. (ಯೆಶಾಯ 32:1, 2) ಪ್ರೀತಿಯ ಹಿರಿಯರು ಬಲಗೊಳಿಸುವ ಮತ್ತು ಭದ್ರಪಡಿಸುವಂತಹ ಆತ್ಮೋನ್ನತಿ ಮಾಡುವ, ಸಂತೈಸುವ ಆತ್ಮಿಕ ಮಾಹಿತಿಯನ್ನು ನೀಡಲು ದೇವರ ಚೈತನ್ಯದಾಯಕ ವಾಕ್ಯವನ್ನು ಉಪಯೋಗಿಸುತ್ತಾ, ಆತ್ಮಿಕ ಕುರುಬರೋಪಾದಿ ತಮ್ಮ ಸಹೋದರರನ್ನು ಸಂದರ್ಶಿಸುವಾಗ ಈ ವರ್ಣನೆಯನ್ನು ನೆರವೇರಿಸುತ್ತಾರೆ.—ಹೋಲಿಸಿ ಮತ್ತಾಯ 11:28, 29.a
ಸಭೆಯ ಸದಸ್ಯರು ಹಿರಿಯರ ಭೇಟಿಗಳನ್ನು ಎದುರುನೋಡುತ್ತಾರೆ. “ಹಿರಿಯರು ಎಷ್ಟು ಸಂತೈಸುವವರಾಗಿರಬಲ್ಲರೆಂದು ನನಗೆ ಗೊತ್ತಿದೆ, ಮತ್ತು ಯೆಹೋವನು ಈ ಒದಗಿಸುವಿಕೆಯನ್ನು ಮಾಡಿದ್ದಾನೆ ಎಂಬ ವಿಷಯಕ್ಕಾಗಿ ನಾನು ಬಹಳಷ್ಟು ಸಂತೋಷಿಸುತ್ತೇನೆ,” ಎನ್ನುತ್ತಾಳೆ ಬಾನಿ. ಒಬ್ಬೊಂಟಿ ತಾಯಿಯಾದ ಲಿಂಡ ಬರೆಯುವುದು: “ಶಾಸ್ತ್ರೀಯ ಉತ್ತೇಜನದಿಂದ ನಿಭಾಯಿಸುವಂತೆ ಹಿರಿಯರು ನನಗೆ ಸಹಾಯ ಮಾಡಿದರು. ಅವರು ಆಲಿಸಿದರು ಮತ್ತು ಕನಿಕರ ತೋರಿಸಿದರು.” ಮೈಕಲ್ ಹೇಳುವುದು: “ನಾನು ಕಾಳಜಿ ವಹಿಸುವ ಒಂದು ಸಂಸ್ಥೆಯ ಭಾಗವಾಗಿದ್ದೇನೆಂದು ಭಾವಿಸುವಂತೆ ಅವರು ಮಾಡಿದರು.” “ತೀವ್ರ ಖಿನ್ನತೆಯ ಅವಧಿಗಳನ್ನು ಜಯಿಸಲು ಹಿರಿಯರ ಸಂದರ್ಶನಗಳು ನನಗೆ ಸಹಾಯ ಮಾಡಿದವು,” ಎನ್ನುತ್ತಾಳೆ ಇನ್ನೊಬ್ಬಳು. ಒಬ್ಬ ಹಿರಿಯನಿಂದ ಆತ್ಮಿಕವಾಗಿ ಮೇಲಕ್ಕೆತ್ತುವ ಸಂದರ್ಶನವು, ತಂಪಾದ, ಚೈತನ್ಯದಾಯಕ ಪಾನೀಯದಂತಿದೆ. ತಮ್ಮ ಸನ್ನಿವೇಶಕ್ಕೆ ಶಾಸ್ತ್ರೀಯ ತತ್ವಗಳು ಹೇಗೆ ಅನ್ವಯಿಸುತ್ತವೆ ಎಂದು ನೋಡಲು, ಪ್ರೀತಿಪರ ಹಿರಿಯರು ಅವರಿಗೆ ಸಹಾಯ ಮಾಡುವಾಗ, ಕುರಿಗಳಂತಹವರು ಸಂತೈಸಲ್ಪಡುತ್ತಾರೆ.—ರೋಮಾಪುರ 1:11, 12; ಯಾಕೋಬ 5:14.
ದೇವರ ವಾಕ್ಯವನ್ನು ಒಂದು ಕನ್ನಡಿಯೋಪಾದಿ ಬಳಸಿರಿ
ವ್ಯಕ್ತಿಯೊಬ್ಬನು ಗಟ್ಟಿಯಾದ ಆಹಾರವನ್ನು ಸೇವಿಸುವಾಗ ಅದರ ಉದ್ದೇಶವು ಕೇವಲ ರುಚಿಯನ್ನು ಸವಿಯುವುದಾಗಿರುವುದಿಲ್ಲ. ಬದಲಿಗೆ, ಅವನು ಕಾರ್ಯಮಾಡುವಂತೆ ಶಕ್ತಗೊಳಿಸುವ ಪೋಷಣೆಯನ್ನು ಪಡೆಯಲು ನಿರೀಕ್ಷಿಸುತ್ತಾನೆ. ಅವನು ಮಗುವಾಗಿದ್ದರೆ, ಒಬ್ಬ ಪ್ರೌಢನಾಗಿ ಬೆಳೆಯುವಂತೆ ಆ ಆಹಾರವು ಸಹಾಯ ಮಾಡುವುದೆಂದು ಅವನು ನಿರೀಕ್ಷಿಸುತ್ತಾನೆ. ಆತ್ಮಿಕ ಆಹಾರದೊಂದಿಗೆ ಅದು ತದ್ರೀತಿಯದ್ದಾಗಿದೆ. ವೈಯಕ್ತಿಕ ಬೈಬಲ್ ಅಧ್ಯಯನವು ಆನಂದಕರವಾಗಿರಬಲ್ಲದು, ಆದರೆ ಅದಕ್ಕಾಗಿರುವ ಏಕಮಾತ್ರ ಕಾರಣವು ಅದಾಗಿರುವುದಿಲ್ಲ. ಆತ್ಮಿಕ ಆಹಾರವು ನಮ್ಮನ್ನು ಮಾರ್ಪಡಿಸಬೇಕು. ಆತ್ಮದ ಫಲವನ್ನು ಗುರುತಿಸಲು ಮತ್ತು ಉತ್ಪಾದಿಸಲು ಅದು ನಮಗೆ ಸಹಾಯ ಮಾಡುತ್ತದೆ ಹಾಗೂ ‘ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇದಿನೇ ನೂತನವಾಗುತ್ತಾ ಪೂರ್ಣಜ್ಞಾನವನ್ನು ಉಂಟುಮಾಡುವ ವ್ಯಕ್ತಿತ್ವವನ್ನು’ ಹಾಕಿಕೊಳ್ಳುವಂತೆ ನಮಗೆ ನೆರವು ನೀಡುತ್ತದೆ. (ಕೊಲೊಸ್ಸೆ 3:10; ಗಲಾತ್ಯ 5:22-24) ನಮ್ಮ ಸಮಸ್ಯೆಗಳನ್ನು ನಿಭಾಯಿಸುವುದರಲ್ಲಿ ಮತ್ತು ಇತರರು ತಮ್ಮ ಸಮಸ್ಯೆಗಳನ್ನು ನಿಭಾಯಿಸುವಂತೆ ಸಹಾಯ ಮಾಡುವುದರಲ್ಲಿ ಶಾಸ್ತ್ರೀಯ ತತ್ವಗಳನ್ನು ಉತ್ತಮವಾಗಿ ಅನ್ವಯಿಸಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತಾ, ಆತ್ಮಿಕ ಆಹಾರವು ಪಕ್ವತೆಗೆ ಬೆಳೆಯುವಂತೆ ಸಹ ನಮಗೆ ಸಹಾಯ ಮಾಡುತ್ತದೆ.
ಬೈಬಲು ನಮ್ಮ ಮೇಲೆ ಆ ಪ್ರಭಾವವನ್ನು ಹೊಂದಿದೆಯೊ ಇಲ್ಲವೊ ಎಂಬುದನ್ನು ನಾವು ಹೇಗೆ ಹೇಳಬಲ್ಲೆವು? ನಾವು ಬೈಬಲನ್ನು ಒಂದು ಕನ್ನಡಿಯೋಪಾದಿ ಬಳಸುತ್ತೇವೆ. ಯಾಕೋಬನು ಹೇಳಿದ್ದು: “ವಾಕ್ಯದ ಪ್ರಕಾರ ಮಾಡುವವರಾಗಿರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು . . . ಮೋಸಗೊಳಿಸಬೇಡಿರಿ. ಯಾವನಾದರೂ ವಾಕ್ಯವನ್ನು ಕೇಳುವವನಾದರೂ ಅದರ ಪ್ರಕಾರ ಮಾಡದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಹುಟ್ಟುಮುಖವನ್ನು ನೋಡಿದ ಮನುಷ್ಯನಂತಿರುವನು; ಇವನು ತನ್ನನ್ನು ನೋಡಿಕೊಂಡು ಹೋಗಿ ತಾನು ಹೀಗಿದ್ದೇನೆಂಬದನ್ನು ಆ ಕ್ಷಣವೇ ಮರೆತುಬಿಡುವನು. ಆದರೆ ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣವನ್ನು ಇಣಿಕಿನೋಡಿ ಇನ್ನೂ ನೋಡುತ್ತಲೇ ಇರುವವನು ವಾಕ್ಯವನ್ನು ಕೇಳಿ ಮರೆತುಹೋಗುವವನಾಗಿರದೆ ಅದರ ಪ್ರಕಾರ ಮಾಡುವವನಾಗಿದ್ದು ತನ್ನ ಮಾಡುವಿಕೆಯಿಂದ ಧನ್ಯನಾಗುವನು.”—ಯಾಕೋಬ 1:22-25, NW.
ನಾವು ದೇವರ ವಾಕ್ಯವನ್ನು ನಿಕಟವಾಗಿ ಪರೀಕ್ಷಿಸಿ, ದೇವರ ಮಟ್ಟಗಳಿಗನುಗುಣವಾಗಿ ನಾವು ಏನಾಗಿರಬೇಕೊ ಅದನ್ನು ನಾವು ಏನಾಗಿದ್ದೇವೊ ಅದರೊಂದಿಗೆ ಹೋಲಿಸುವಾಗ, ನಾವು ಅದರೊಳಗೆ ‘ಇಣಿಕಿ ನೋಡುತ್ತೇವೆ.’ ಇದನ್ನು ಮಾಡುವಾಗ, ನಾವು ‘ವಾಕ್ಯವನ್ನು ಕೇಳುವವರು ಮಾತ್ರವೇ ಆಗಿರದೆ ಅದರ ಪ್ರಕಾರ ಮಾಡುವವರೂ’ ಆಗುವೆವು. ನಮ್ಮ ಮೇಲೆ ಒಂದು ಉತ್ತಮವಾದ ಪರಿಣಾಮವನ್ನು ಬೈಬಲು ಹೊಂದಿರುವುದು.
ಒಂದು ಕತ್ತಿಯೋಪಾದಿ ದೇವರ ವಾಕ್ಯವು
ಅಂತಿಮವಾಗಿ, ನಾವು ದೇವರ ವಾಕ್ಯವನ್ನು ಒಂದು ಕತ್ತಿಯೋಪಾದಿ ಹೇಗೆ ಬಳಸಸಾಧ್ಯವಿದೆಯೆಂದು ನೋಡುವಂತೆ ಅಪೊಸ್ತಲ ಪೌಲನು ನಮಗೆ ಸಹಾಯ ಮಾಡುತ್ತಾನೆ. ನಮ್ಮನ್ನು “ರಾಜತ್ವಗಳ . . . ಅಧಿಕಾರಗಳ . . . ಈ ಅಂಧಕಾರದ ಲೋಕಾಧಿಪತಿಗಳ . . . ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ” ವಿರುದ್ಧ ಎಚ್ಚರಿಸುವಾಗ, “ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿಯಿರಿ” ಎಂದು ಅವನು ನಮ್ಮನ್ನು ಪ್ರೇರೇಪಿಸುತ್ತಾನೆ. (ಎಫೆಸ 6:12, 17) ದೇವರ ವಾಕ್ಯವು “ದೇವಜ್ಞಾನವನ್ನು ವಿರೋಧಿಸುವದಕ್ಕೆ ಏರಿಸಲ್ಪಟ್ಟಿರುವ” ಯಾವುದೇ ವಿಚಾರಗಳನ್ನು ತೆಗೆದುಹಾಕಲು ನಾವು ಬಳಸಬಲ್ಲ ಅವಶ್ಯವಾದ ಆಯುಧವಾಗಿದೆ.—2 ಕೊರಿಂಥ 10:3-5.
ನಿರ್ವಿವಾದಾತ್ಮಕವಾಗಿ, “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು” ಆಗಿದೆ. (ಇಬ್ರಿಯ 4:12) ಯೆಹೋವನು ಮಾನವಜಾತಿಯೊಂದಿಗೆ ತನ್ನ ಪ್ರೇರಿತ ವಾಕ್ಯದ ಪುಟಗಳ ಮುಖಾಂತರ ಮಾತಾಡುತ್ತಾನೆ. ಇತರರಿಗೆ ಕಲಿಸುವುದರಲ್ಲಿ ಮತ್ತು ಸುಳ್ಳು ಸಿದ್ಧಾಂತಗಳನ್ನು ಬಯಲು ಪಡಿಸುವುದರಲ್ಲಿ ಅದನ್ನು ಚೆನ್ನಾಗಿ ಉಪಯೋಗಿಸಿರಿ. ಇತರರನ್ನು ಉತ್ತೇಜಿಸಲು, ಭಕ್ತಿವೃದ್ಧಿಮಾಡಲು, ಚೈತನ್ಯಗೊಳಿಸಲು, ಸಂತೈಸಲು, ಪ್ರಚೋದಿಸಲು ಮತ್ತು ಆತ್ಮಿಕವಾಗಿ ಬಲಗೊಳಿಸಲು ಅದರ ಲಾಭವನ್ನು ಸ್ವತಃ ಪಡೆದುಕೊಳ್ಳಿರಿ. ಮತ್ತು ಯೆಹೋವನು “ತನಗೆ ಸಮರ್ಪಕವಾದದ್ದನ್ನು” ನೀವು ಯಾವಾಗಲೂ ಮಾಡುವಂತೆ “ತನ್ನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಯನ್ನು ನಿಮಗೆ ಅನುಗ್ರಹಿಸಲಿ.”—ಇಬ್ರಿಯ 13:21.
[ಪಾದಟಿಪ್ಪಣಿ]
a 1993, ಸೆಪ್ಟೆಂಬರ್ 15ರ ಕಾವಲಿನಬುರುಜು, ಪುಟಗಳು 20-3ರಲ್ಲಿರುವ “ಚಿಕ್ಕ ಕುರಿಗಳನ್ನು ಅವರು ಕನಿಕರದಿಂದ ಪಾಲಿಸುತ್ತಾರೆ,” ಎಂಬ ಶೀರ್ಷಿಕೆಯುಳ್ಳ ಲೇಖನವನ್ನು ನೋಡಿರಿ.
[ಪುಟ 31 ರಲ್ಲಿರುವ ಚಿತ್ರ]
“ಸತ್ಯವಾಕ್ಯವನ್ನು ಸರಿಯಾಗಿ ನಿರ್ವಹಿಸು”ತ್ತಾ, ಹಿರಿಯರು ಇತರರನ್ನು ಉತ್ತೇಜಿಸುತ್ತಾರೆ