“ನಿಮ್ಮ ವಿವೇಚನಾ ಶಕ್ತಿಯೊಂದಿಗೆ ಪವಿತ್ರ ಸೇವೆ”
“ನಿಮ್ಮ ದೇಹಗಳನ್ನು ತ್ಯಾಗದ ಬದುಕಾಗಿಯೂ, ಪವಿತ್ರವೂ, ದೇವರಿಗೆ ಸ್ವೀಕರಣೀಯವೂ, ನಿಮ್ಮ ವಿವೇಚನಾ ಶಕ್ತಿಯೊಂದಿಗೆ ಪವಿತ್ರ ಸೇವೆಯೂ ಆಗಿರುವುದಾಗಿ ಅರ್ಪಿಸಿರಿ.”—ರೋಮಾಪುರ 12:1, NW.
1, 2. ಬೈಬಲ್ ತತ್ವಗಳನ್ನು ಅನ್ವಯಿಸಲು ಕಲಿಯುವುದು ಒಂದು ಹೊಸ ಭಾಷೆಯಲ್ಲಿ ಪ್ರಾವೀಣ್ಯ ಪಡೆಯುವುದಕ್ಕೆ ಸಮಾನವಾಗಿದೆ ಹೇಗೆ?
ಒಂದು ಹೊಸ ಭಾಷೆಯನ್ನು ಕಲಿಯಲು ನೀವು ಪ್ರಯತ್ನಿಸಿದ್ದುಂಟೊ? ಹಾಗಿರುವಲ್ಲಿ, ಅದು ಕಷ್ಟದ ಕೆಲಸವೆಂದು ನೀವು ನಿಸ್ಸಂದೇಹವಾಗಿ ಒಪ್ಪುವಿರಿ. ಎಷ್ಟೆಂದರೂ ಕೇವಲ ಹೊಸ ಶಬ್ದಗಳನ್ನು ಕಲಿಯುವುದಕ್ಕಿಂತ ಹೆಚ್ಚಿನದು ಅದರಲ್ಲಿ ಕೂಡಿದೆ. ಒಂದು ಭಾಷೆಯ ನುರಿತ ಉಪಯೋಗಕ್ಕೆ ಅದರ ವ್ಯಾಕರಣದ ಸಂಪೂರ್ಣ ಜ್ಞಾನವೂ ಆವಶ್ಯಕ. ಶಬ್ದಗಳು ಹೇಗೆ ಒಂದಕ್ಕೊಂದು ಸಂಬಂಧಿಸುತ್ತವೆ ಮತ್ತು ಅವು ಹೇಗೆ ಸಂಪೂರ್ಣ ವಿಚಾರವನ್ನು ರೂಪಿಸುವುದಕ್ಕೆ ಜತೆಗೂಡುತ್ತವೆ ಎಂಬುದನ್ನು ನೀವು ಗ್ರಹಿಸಿಕೊಳ್ಳತಕ್ಕದ್ದು.
2 ಅದು ದೇವರ ವಾಕ್ಯದ ನಮ್ಮ ಜ್ಞಾನದ ಪಡೆದುಕೊಳ್ಳುವಿಕೆಗೆ ಸದೃಶವಾಗಿದೆ. ಆಯ್ದುಕೊಂಡ ಶಾಸ್ತ್ರವಚನಗಳನ್ನು ಕೇವಲ ಕಲಿಯುವುದಕ್ಕಿಂತ ಹೆಚ್ಚಿನದು ಒಳಗೂಡಿರುತ್ತದೆ. ಸಾಂಕೇತಿಕವಾಗಿ ಹೇಳುವುದಾದರೆ, ಬೈಬಲಿನ ವ್ಯಾಕರಣವನ್ನೂ ನಾವು ಕಲಿಯಬೇಕಾಗಿದೆ. ಶಾಸ್ತ್ರವಚನಗಳು ಹೇಗೆ ಒಂದಕ್ಕೊಂದು ಸಂಬಂಧಿಸುತ್ತವೆ ಮತ್ತು ಅವು ಹೇಗೆ ದಿನನಿತ್ಯದ ಜೀವನದಲ್ಲಿ ಅನ್ವಯಿಸಸಾಧ್ಯವಿರುವ ತತ್ವಗಳಾಗಿ ಕಾರ್ಯನಡಿಸುತ್ತವೆ ಎಂದು ತಿಳಿದುಕೊಳ್ಳುವ ಅಗತ್ಯ ನಮಗಿದೆ. ಹೀಗೆ ನಾವು “ಪೂರ್ಣ ಪ್ರವೀಣರೂ, ಸಕಲ ಸತ್ಕಾರ್ಯಕ್ಕೆ ಪೂರ್ಣ ಸನ್ನದ್ಧರೂ” ಆಗುವೆವು.—2 ತಿಮೊಥೆಯ 3:17, NW.
3. ದೇವರ ಸೇವೆಯ ಸಂಬಂಧದಲ್ಲಿ, ಸಾ.ಶ. 33 ರಲ್ಲಿ ಯಾವ ಬದಲಾವಣೆಯು ಸಂಭವಿಸಿತು?
3 ಮೋಶೆಯ ನಿಯಮ ಶಾಸ್ತ್ರದ ಏರ್ಪಾಡಿನ ಕೆಳಗೆ, ನಂಬಿಗಸ್ತಿಕೆಯನ್ನು ಬಹಳ ಮಟ್ಟಿಗೆ, ಸುಸ್ಪಷ್ಟ ಮಾಡಲ್ಪಟ್ಟ ನಿಯಮಗಳ ಕಟ್ಟುನಿಟ್ಟಿನ ಪಾಲನೆಯ ಮೂಲಕ ಪ್ರದರ್ಶಿಸಸಾಧ್ಯವಿತ್ತು. ಆದರೂ ಸಾ.ಶ. 33 ರಲ್ಲಿ, ಯೆಹೋವನು ನಿಯಮಶಾಸ್ತ್ರವನ್ನು, ಕಾರ್ಯತಃ ಯಾವುದರ ಮೇಲೆ ಆತನ ಪುತ್ರನು ಮರಣಕ್ಕೆ ಹಾಕಲ್ಪಟ್ಟಿದ್ದನೊ ಆ “ಶಿಲುಬೆಗೆ ಜಡಿದು” ರದ್ದುಮಾಡಿಬಿಟ್ಟನು. (ಕೊಲೊಸ್ಸೆ 2:13, 14) ತದನಂತರ, ದೇವರ ಜನರಿಗೆ ಹಲವಾರು ಯಜ್ಞಗಳನ್ನರ್ಪಿಸುವ ಮತ್ತು ಹಲವಾರು ನಿಯಮಗಳನ್ನು ಪಾಲಿಸುವ ವಿಸ್ತಾರವಾದ ಪಟ್ಟಿಯು ಕೊಡಲ್ಪಡಲಿಲ್ಲ. ಬದಲಾಗಿ, ಅವರಿಗೆ ಹೇಳಲ್ಪಟ್ಟದ್ದು: “ನಿಮ್ಮ ದೇಹಗಳನ್ನು ತ್ಯಾಗದ ಬದುಕಾಗಿಯೂ, ಪವಿತ್ರವೂ, ದೇವರಿಗೆ ಸ್ವೀಕರಣೀಯವೂ, ನಿಮ್ಮ ವಿವೇಚನಾ ಶಕ್ತಿಯೊಂದಿಗೆ ಪವಿತ್ರ ಸೇವೆಯೂ ಆಗಿರುವುದಾಗಿ ಅರ್ಪಿಸಿರಿ.” (ರೋಮಾಪುರ 12:1, NW) ಹೌದು, ದೇವರ ಸೇವೆಯಲ್ಲಿ ಕ್ರೈಸ್ತರು ಪೂರ್ಣ ಹೃದಯ, ಆತ್ಮ, ಮನಸ್ಸು, ಮತ್ತು ಶಕಿಯ್ತಿಂದ ತಮ್ಮನ್ನು ಕೊಟ್ಟುಕೊಳ್ಳಲು ಪರಿಶ್ರಮಿಸಬೇಕಿತ್ತು. (ಮಾರ್ಕ 12:30; ಹೋಲಿಸಿರಿ ಕೀರ್ತನೆ 110:3.) ಆದರೆ “ನಿಮ್ಮ ವಿವೇಚನಾ ಶಕ್ತಿಯೊಂದಿಗೆ ಪವಿತ್ರ ಸೇವೆ” ಯನ್ನು ಅರ್ಪಿಸುವುದು ಏನನ್ನು ಅರ್ಥೈಸುತ್ತದೆ?
4, 5. ನಮ್ಮ ವಿವೇಚನಾ ಶಕ್ತಿಯೊಂದಿಗೆ ಯೆಹೋವನನ್ನು ಸೇವಿಸುವುದರಲ್ಲಿ ಏನು ಒಳಗೂಡಿದೆ?
4 “ಪವಿತ್ರ ಸೇವೆ” ಎಂಬ ವಾಕ್ಸರಣಿಯು ಗ್ರೀಕ್ ಶಬ್ದವಾದ ಲಾಗಿಕಾಸ್ ನಿಂದ ತರ್ಜುಮೆಯಾಗಿದ್ದು, “ವಿಚಾರಶಕ್ತಿಯುಳ್ಳ” ಅಥವಾ “ಬುದ್ಧಿಶಕ್ತಿಯುಳ್ಳ” ಎಂಬುದು ಅದರ ಅರ್ಥವಾಗಿದೆ. ದೇವರ ಸೇವಕರು ತಮ್ಮ ಬೈಬಲ್ಶಿಕ್ಷಿತ ಮನಸ್ಸಾಕ್ಷಿಯನ್ನು ಉಪಯೋಗಿಸುವಂತೆ ಕೇಳಲ್ಪಡುತ್ತಾರೆ. ತಮ್ಮ ನಿರ್ಣಯಗಳನ್ನು ಹಲವಾರು ಪೂರ್ವನೇಮಿತ ನಿಯಮಗಳ ಮೇಲೆ ಆಧಾರಿಸುವ ಬದಲಾಗಿ, ಕ್ರೈಸ್ತರಿಗೆ ಬೈಬಲ್ ತತ್ವಗಳನ್ನು ಜಾಗರೂಕತೆಯಿಂದ ತೂಗಿನೋಡಲಿಕ್ಕಿದೆ. ಬೈಬಲಿನ “ವ್ಯಾಕರಣ” ವನ್ನು ಅಥವಾ ವಿವಿಧ ತತ್ವಗಳು ಒಂದಕ್ಕೊಂದು ಹೇಗೆ ಸಂಬಂಧಿಸುತ್ತವೆಂದು ತಿಳಿದುಕೊಳ್ಳುವ ಅಗತ್ಯ ಅವರಿಗಿದೆ. ಹೀಗೆ ಅವರು ತಮ್ಮ ವಿವೇಚನಾ ಶಕಿಯ್ತಿಂದ ಸಮತೆಯ ನಿರ್ಣಯಗಳನ್ನು ಮಾಡಬಲ್ಲರು.
5 ಇದರ ಅರ್ಥವು ಕ್ರೈಸ್ತರು ನೇಮರಹಿತರು ಎಂದಾಗುತ್ತದೊ? ನಿಶ್ಚಯವಾಗಿಯೂ ಇಲ್ಲ. ಕ್ರೈಸ್ತ ಗ್ರೀಕ್ ಶಾಸ್ತ್ರಗಳು ವಿಗ್ರಹಾರಾಧನೆ, ಲೈಂಗಿಕ ಅನೈತಿಕತೆ, ಕೊಲೆ, ಸುಳ್ಳಾಡುವಿಕೆ, ಪ್ರೇತವಾದ, ರಕ್ತದ ಅಪಪ್ರಯೋಗ, ಮತ್ತು ಹಲವಾರು ಬೇರೆ ಪಾಪಗಳನ್ನು ಸ್ಫುಟವಾಗಿ ನಿಷೇಧಿಸುತ್ತವೆ. (ಅ. ಕೃತ್ಯಗಳು 15:28, 29; 1 ಕೊರಿಂಥ 6:9, 10; ಪ್ರಕಟನೆ 21:8) ಆದರೂ ಇಸ್ರಾಯೇಲ್ಯರಿಂದ ಆವಶ್ಯಪಟ್ಟದ್ದಕ್ಕಿಂತ ಎಷ್ಟೋ ಹೆಚ್ಚು ವಿಸ್ತಾರದಲ್ಲಿ, ಬೈಬಲ್ ತತ್ವಗಳನ್ನು ಕಲಿಯಲು ಮತ್ತು ಅನ್ವಯಿಸಲು ನಾವು ನಮ್ಮ ವಿವೇಚನಾ ಶಕ್ತಿಯನ್ನು ಉಪಯೋಗಿಸಬೇಕು. ಬಹುತೇಕ ಒಂದು ಹೊಸ ಭಾಷೆಯನ್ನು ಗ್ರಹಿಸಿಕೊಳ್ಳುವುದರಲ್ಲಿ ಹೇಗೊ ಹಾಗೆಯೇ ಇದಕ್ಕೆ ಸಮಯ ಮತ್ತು ಯತ್ನದ ಅಗತ್ಯವಿದೆ. ನಮ್ಮ ವಿವೇಚನಾ ಶಕ್ತಿಯನ್ನು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ?
ನಿಮ್ಮ ವಿವೇಚನಾ ಶಕ್ತಿಯನ್ನು ಬೆಳೆಸಿಕೊಳ್ಳುವುದು
6. ಬೈಬಲನ್ನು ಅಭ್ಯಾಸಿಸುವುದರಲ್ಲಿ ಏನು ಒಳಗೂಡುತ್ತದೆ?
6 ಮೊದಲಾಗಿ, ನಾವು ಬೈಬಲಿನ ಉತ್ಸುಕ ವಿದ್ಯಾರ್ಥಿಗಳಾಗಿರತಕ್ಕದ್ದು. ದೇವರ ಪ್ರೇರಿತ ವಾಕ್ಯವು “ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” (2 ತಿಮೊಥೆಯ 3:16) ಒಂದು ಸಮಸ್ಯೆಯ ಒಂದು ಉತ್ತರವು ಬೈಬಲಿನ ಒಂದೇ ವಚನದಲ್ಲಿ ಕಂಡುಬರುವುದಾಗಿ ನಾವು ಯಾವಾಗಲೂ ಅಪೇಕ್ಷಿಸಬಾರದು. ಬದಲಾಗಿ, ಒಂದು ನಿರ್ದಿಷ್ಟ ಸನ್ನಿವೇಶ ಮತ್ತು ಸಮಸ್ಯೆಯ ಮೇಲೆ ಬೆಳಕು ಬೀರುವ ಹಲವಾರು ಶಾಸ್ತ್ರವಚನಗಳನ್ನು ನಾವು ವಿವೇಚನೆ ಮಾಡುವ ಅಗತ್ಯಬಿದ್ದೀತು. ವಿಷಯದ ಮೇಲೆ ದೇವರ ಯೋಚನೆಯೇನೆಂದು ಶ್ರದ್ಧಾಪೂರ್ವಕವಾಗಿ ಹುಡುಕುವ ಆವಶ್ಯಕತೆ ನಮಗಿರುವುದು. (ಜ್ಞಾನೋಕ್ತಿ 2:3-5) ತಿಳಿವಳಿಕೆಯು ಕೂಡ ನಮಗೆ ಬೇಕು, ಯಾಕಂದರೆ “ವಿವೇಕಿಯು [ಮತ್ತಷ್ಟು] ಉಚಿತಾಲೋಚನೆಯುಳ್ಳವನಾಗುವನು.” (ಜ್ಞಾನೋಕ್ತಿ 1:5) ತಿಳಿವಳಿಕೆಯುಳ್ಳ ಒಬ್ಬ ವ್ಯಕ್ತಿಯು ಒಂದು ವಿಷಯಕ್ಕೆ ಸಂಬಂಧಿಸಿದ ಕಾರಣಾಂಶಗಳನ್ನು ಪ್ರತ್ಯೇಕಪಡಿಸಿ, ಅನಂತರ ಅವುಗಳಿಗಿರುವ ಪರಸ್ಪರ ಸಂಬಂಧವನ್ನು ಗ್ರಹಿಸಿಕೊಳ್ಳಬಲ್ಲನು. ತುಂಡು ಚಿತ್ರದ ತೊಡಕಿ (ಪಸ್ಲ್) ನಲ್ಲಿರುವ ಹಾಗೆ, ಇಡೀ ಚಿತ್ರವನ್ನು ಅವನು ಕಾಣಶಕ್ತನಾಗುವಂತೆ, ತೊಡಕಿನ ತುಂಡು ತುಂಡು ಚಿತ್ರಗಳನ್ನು ಒಂದುಗೂಡಿಸುತ್ತಾನೆ.
7. ಶಿಕ್ಷೆಯ ಸಂಬಂಧದಲ್ಲಿ ಬೈಬಲ್ ತತ್ವಗಳ ಮೇಲೆ ಹೆತ್ತವರು ಹೇಗೆ ವಿವೇಚಿಸಬಲ್ಲರು?
7 ಉದಾಹರಣೆಗಾಗಿ, ಹೆತ್ತವರಿಗೆ ಸಂಬಂಧಿಸಿದ ವಿಷಯವನ್ನು ತೆಗೆದುಕೊಳ್ಳಿರಿ. ತನ್ನ ಮಗನನ್ನು ಪ್ರೀತಿಸುವವನಾದ ತಂದೆಯು ಅವನನ್ನು “ಚೆನ್ನಾಗಿ ಶಿಕ್ಷಿಸು” ತ್ತಾನೆ ಎಂದು ಜ್ಞಾನೋಕ್ತಿ 13:24 ಹೇಳುತ್ತದೆ. ಇದೊಂದೇ ವಚನವನ್ನು ತೆಗೆದುಕೊಂಡಲ್ಲಿ, ಕಠೋರವಾದ, ಕರುಣೆ ತೋರದ ಶಿಕ್ಷೆಯನ್ನು ಸಮರ್ಥಿಸಲು ಈ ವಚನವು ತಪ್ಪಾಗಿ ಅನ್ವಯಿಸಲ್ಪಟ್ಟೀತು. ಆದರೂ, ಕೊಲೊಸ್ಸೆ 3:21 ಸಮತೆಯ ಬುದ್ಧಿವಾದವನ್ನು ಒದಗಿಸುತ್ತದೆ: “ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.” ಯಾವ ಹೆತ್ತವರು ತಮ್ಮ ವಿವೇಚನಾ ಶಕ್ತಿಯನ್ನು ಉಪಯೋಗಿಸುತ್ತಾರೊ ಮತ್ತು ಈ ತತ್ವಗಳನ್ನು ಹೊಂದಿಸಿಕೊಳ್ಳುತ್ತಾರೊ, ಅವರು “ಕೋಪವನ್ನೆಬ್ಬಿ” ಸುವುದಾಗಿ ಹೇಳಸಾಧ್ಯವಿರುವ ಶಿಕ್ಷೆಯನ್ನು ವಿಧಿಸುವುದಿಲ್ಲ. ಅವರು ತಮ್ಮ ಮಕ್ಕಳನ್ನು ಸ್ನೇಹಪರತೆ, ತಿಳಿವಳಿಕೆ, ಮತ್ತು ಗೌರವದಿಂದ ಉಪಚರಿಸುವರು. (ಎಫೆಸ 6:4) ಹೀಗೆ, ಹೆತ್ತವರಿಗೆ ಸಂಬಂಧಿಸಿದ ವಿಷಯದಲ್ಲಿ ಅಥವಾ ಬೈಬಲ್ ತತ್ವಗಳನ್ನು ಒಳಗೂಡಿರುವ ಬೇರೆ ಯಾವುದೇ ವಿಷಯದಲ್ಲಿ ಸಂಬಂಧಿಸಿದ ಎಲ್ಲ ಕಾರಾಣಾಂಶಗಳನ್ನು ತೂಗಿನೋಡುವ ಮೂಲಕ ನಾವು ನಮ್ಮ ವಿವೇಚನಾ ಶಕ್ತಿಯನ್ನು ವಿಕಸಿಸಿಕೊಳ್ಳಬಲ್ಲೆವು. ಈ ವಿಧದಲ್ಲಿ, ದೇವರ ಹೇತುವೇನು ಮತ್ತು ಅದನ್ನು ನಿರ್ವಹಿಸುವುದು ಹೇಗೆಂಬ ಬೈಬಲಿನ ತತ್ವಗಳ “ವ್ಯಾಕರಣ” ವನ್ನು ನಾವು ಗ್ರಹಿಸಿಕೊಳ್ಳಬಲ್ಲೆವು.
8. ಮನೋರಂಜನೆಯ ವಿಷಯದಲ್ಲಿ ಕಟ್ಟುನಿಟ್ಟಿನ, ಉದ್ಧತ ದೃಷ್ಟಿಕೋನಗಳನ್ನು ಸ್ವೀಕರಿಸುವುದನ್ನು ನಾವು ಹೇಗೆ ವರ್ಜಿಸಬಲ್ಲೆವು?
8 ನಮ್ಮ ವಿವೇಚನಾ ಶಕ್ತಿಯನ್ನು ನಾವು ಬೆಳೆಸಿಕೊಳ್ಳಬಲ್ಲ ಎರಡನೆಯ ವಿಧಾನವು ಕಟ್ಟುನಿಟ್ಟಿನ, ಉದ್ಧತ ದೃಷ್ಟಿಕೋನಗಳನ್ನು ವರ್ಜಿಸುವುದಾಗಿದೆ. ಬಗ್ಗಿಸಲಾಗದ ಒಂದು ಹೊರನೋಟವು ನಮ್ಮ ವಿವೇಚನಾ ಶಕ್ತಿಯ ಬೆಳವಣಿಗೆಯನ್ನು ತಡೆಹಿಡಿಯುತ್ತದೆ. ಮನೋರಂಜನೆಯ ವಿಷಯವನ್ನು ಪರಿಗಣಿಸಿರಿ. ಬೈಬಲು ಹೇಳುತ್ತದೆ: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದಿದ್ದೆ.” (1 ಯೋಹಾನ 5:19) ಲೋಕದಿಂದ ಉತ್ಪಾದಿಸಲ್ಪಡುವ ಪ್ರತಿಯೊಂದು ಪುಸ್ತಕ, ಚಲನಚಿತ್ರ, ಅಥವಾ ಟೆಲಿವಿಷನ್ ಕಾರ್ಯಕ್ರಮವು ಭ್ರಷ್ಟವೂ ಪೈಶಾಚಿಕವೂ ಆಗಿದೆಯೆಂದು ಇದರ ಅರ್ಥವೊ? ಅಂತಹ ದೃಷ್ಟಿಕೋನವು ಸಮಂಜಸವಾಗಿರುವುದು ಕಷ್ಟ. ನಿಶ್ಚಯವಾಗಿ, ಕೆಲವರು ಟೆಲಿವಿಷನ್, ಚಲನಚಿತ್ರಗಳು, ಅಥವಾ ಐಹಿಕ ಸಾಹಿತ್ಯದಿಂದ ಪೂರ್ತಿಯಾಗಿ ದೂರವಿರಲು ಆಯ್ದುಕೊಂಡಾರು. ಅದು ಅವರ ಹಕ್ಕು, ಮತ್ತು ಅದಕ್ಕಾಗಿ ಅವರು ಟೀಕಿಸಲ್ಪಡಬಾರದು. ಆದರೆ ಇತರರು ಅಂತಹದೆ ಆದ ಕಟ್ಟುನಿಟ್ಟಿನ ನೆಲೆಯನ್ನು ತೆಗೆದುಕೊಳ್ಳುವಂತೆ ಅವರು ಸಹ ಒತ್ತಡ ಹಾಕಲು ಪ್ರಯತ್ನಿಸಬಾರದು. ನಮ್ಮ ಆರಾಮ ಮತ್ತು ಮನೋರಂಜನೆಯನ್ನು ವಿವೇಕದಿಂದ ಆಯ್ದುಕೊಳ್ಳಲು ನಮ್ಮನ್ನು ಶಕ್ತರನ್ನಾಗಿ ಮಾಡತಕ್ಕ ಬೈಬಲ್ ಸೂತ್ರಗಳನ್ನು ತಿಳಿಸುವ ಲೇಖನಗಳನ್ನು ಸೊಸೈಟಿಯು ಪ್ರಕಾಶಿಸಿದೆ. ಈ ಮಾರ್ಗದರ್ಶಕವನ್ನು ಮೀರಿಹೋಗಿ ಈ ಜಗತ್ತಿನ ಮನೋರಂಜನೆಯಲ್ಲಿ ಬಹಳಷ್ಟು ನೀಡಲಾಗುವ ಅನೈತಿಕ ಯೋಚನೆ, ಘೋರ ಹಿಂಸಾಚಾರ, ಅಥವಾ ಪ್ರೇತವಾದಕ್ಕೆ ನಮ್ಮನ್ನು ಒಡ್ಡಿಕೊಳ್ಳುವುದು ಶುದ್ಧ ಅವಿವೇಕತನ. ನಿಜವಾಗಿಯೂ, ದೇವರ ಮತ್ತು ಮನುಷ್ಯರ ಮುಂದೆ ಒಂದು ಶುದ್ಧ ಮನಸ್ಸಾಕ್ಷಿಯುಳ್ಳವರಾಗುವಂತೆ ಬೈಬಲ್ ತತ್ವಗಳನ್ನು ಅನ್ವಯಿಸಲು ನಮ್ಮ ವಿವೇಚನಾ ಶಕ್ತಿಯನ್ನು ಬಳಸುವರೆ, ಮನೋರಂಜನೆಯ ವಿವೇಕಯುಕ್ತ ಆಯ್ಕೆಯು ನಮ್ಮನ್ನು ಅವಶ್ಯಪಡಿಸುತ್ತದೆ.—1 ಕೊರಿಂಥ 10:31-33.
9. “ಪೂರ್ಣ ಸೂಕ್ಷ್ಮಗ್ರಹಣ ಶಕ್ತಿ” ಎಂಬುದರ ಅರ್ಥವೇನು?
9 ಇಂದಿನ ಹೆಚ್ಚಿನ ಮನೋರಂಜನೆಯು ಕ್ರೈಸ್ತರಿಗೆ ಸ್ಫುಟವಾಗಿ ಅಯುಕ್ತವಾಗಿದೆ.a ಆದುದರಿಂದ, ‘ಎಲ್ಲ ನೈತಿಕ ಸಂವೇದನೆಯನ್ನು ತೊರೆದುಬಿಟ್ಟ’ ಒಂದನೆಯ ಶತಕದ ಕೆಲವು ಕ್ರೈಸ್ತರಂತೆ ನಾವಾಗದ ಹಾಗೆ, ನಾವು ನಮ್ಮ ಹೃದಯಗಳನ್ನು, “ಕೆಟ್ಟತನವನ್ನು ಹಗೆಮಾಡು” ವಂತೆ ತರಬೇತುಗೊಳಿಸಬೇಕು. (ಕೀರ್ತನೆ 97:10; ಎಫೆಸ 4:17-19) ಅಂತಹ ವಿಷಯಗಳ ಮೇಲೆ ವಿವೇಚನೆ ಮಾಡಲು ನಮಗೆ ‘ನಿಷ್ಕೃಷ್ಟ ಜ್ಞಾನವೂ ಪೂರ್ಣ ಸೂಕ್ಷ್ಮಗ್ರಹಣ ಶಕ್ತಿಯೂ’ ಅಗತ್ಯ. (ಫಿಲಿಪ್ಪಿ 1:9) “ಸೂಕ್ಷ್ಮಗ್ರಹಣ ಶಕ್ತಿ” ಎಂದು ತರ್ಜುಮೆಯಾದ ಗ್ರೀಕ್ ಪದವು “ಸೂಕ್ಷ್ಮವೇದಿ ನೈತಿಕ ಗ್ರಹಿಕೆಯನ್ನು” ನಿರ್ದೇಶಿಸುತ್ತದೆ. ಈ ಶಬ್ದವು ದೃಷ್ಟಿಯಂತಹ ಮಾನವ ಇಂದ್ರಿಯಗಳಿಗೆ ಅಕ್ಷರಶಃ ಸೂಚಿಸುತ್ತದೆ. ಮನೋರಂಜನೆ ಅಥವಾ ವೈಯಕ್ತಿಕ ನಿರ್ಣಯವನ್ನು ಆವಶ್ಯಪಡಿಸುವ ಬೇರೆ ಯಾವುದೆ ವಿಷಯದ ಸಂಬಂಧದಲ್ಲಿ, ಸುಸ್ಪಷ್ಟಮಾಡಲ್ಪಟ್ಟ ಸರಿತಪ್ಪುಗಳ ಪ್ರಶ್ನೆಗಳನ್ನು ಮಾತ್ರವಲ್ಲ ಎರಡರ ಮಧ್ಯೆಬರುವ ಛಾಯಾಂತರಗಳನ್ನು ಸಹ ಗ್ರಹಿಸಿಕೊಳ್ಳಲು ಶಕ್ತರಾಗುವಂತೆ ನಮ್ಮ ನೈತಿಕ ಸಂವೇದನೆಯು ಕೇಂದ್ರೀಕೃತವಾಗಿರಬೇಕು. ಅದೇ ಸಮಯದಲ್ಲಿ ನಾವು ಬೈಬಲ್ ತತ್ವಗಳನ್ನು ಅಸಮಂಜಸವಾದ ಅತಿರೇಕಕ್ಕೆ ಅನ್ವಯಿಸುವುದನ್ನು ಮತ್ತು ನಮ್ಮ ಸಹೋದರರೆಲ್ಲರೂ ಹಾಗೆಯೆ ಮಾಡಬೇಕೆಂದು ಪಟ್ಟುಹಿಡಿಯವುದನ್ನು ವರ್ಜಿಸಬೇಕು.—ಫಿಲಿಪ್ಪಿ 4:5.
10. ಕೀರ್ತನೆ 15 ರಲ್ಲಿ ಪ್ರತಿಬಿಂಬಿಸಲ್ಪಟ್ಟಂತೆ, ಯೆಹೋವನ ವ್ಯಕ್ತಿತ್ವವನ್ನು ನಾವು ಹೇಗೆ ತಿಳಿದುಕೊಳ್ಳಬಲ್ಲೆವು?
10 ನಮ್ಮ ವಿವೇಚನಾ ಶಕ್ತಿಯನ್ನು ಬೆಳೆಸಿಕೊಳ್ಳುವ ಮೂರನೆಯ ವಿಧಾನವು, ಯೆಹೋವನ ಆಲೋಚನೆಯನ್ನು ಅರಿತುಕೊಂಡು ಅದನ್ನು ನಮ್ಮ ಹೃದಯಗಳಲ್ಲಿ ಆಳವಾಗಿ ಬೇರೂರಿಸುವುದೇ ಆಗಿದೆ. ತನ್ನ ವಾಕ್ಯದಲ್ಲಿ ಯೆಹೋವನು ತನ್ನ ವ್ಯಕ್ತಿತ್ವ ಮತ್ತು ಮಟ್ಟಗಳನ್ನು ಪ್ರಕಟಪಡಿಸುತ್ತಾನೆ. ಉದಾಹರಣೆಗೆ ಕೀರ್ತನೆ 15 ರಲ್ಲಿ, ತನ್ನ ಗುಡಾರದಲ್ಲಿ ಅತಿಥಿಯಾಗಿರುವುದಕ್ಕೆ ಯೆಹೋವನು ಆಮಂತ್ರಿಸುವಂತಹ ರೀತಿಯ ವ್ಯಕ್ತಿಯ ಕುರಿತು ನಾವು ಓದುತ್ತೇವೆ. ಅಂತಹ ಒಬ್ಬ ವ್ಯಕ್ತಿಯು ನೀತಿಯನ್ನು ಅಭ್ಯಾಸಿಸುವವನೂ, ಹೃದಯಪೂರ್ವಕವಾಗಿ ಸತ್ಯವನ್ನಾಡುವನೂ, ವಚನಕ್ಕೆ ತಪ್ಪದವನೂ, ಇತರರನ್ನು ತನ್ನ ಸ್ವಾರ್ಥಲಾಭಕ್ಕಾಗಿ ಬಳಸದವನೂ ಆಗಿರುತ್ತಾನೆ. ಈ ಕೀರ್ತನೆಯನ್ನು ಓದುವಾಗ ನಿಮ್ಮನ್ನು ಕೇಳಿಕೊಳ್ಳಿರಿ, ‘ನನ್ನಲ್ಲಿ ಈ ಗುಣಗಳಿವೆಯೊ? ಯೆಹೋವನು ನನ್ನನ್ನು ತನ್ನ ಗುಡಾರಕ್ಕೆ ಅತಿಥಿಯಾಗಿ ಆಮಂತ್ರಿಸಿಯಾನೊ?’ ಯೆಹೋವನ ಮಾರ್ಗಗಳ ಮತ್ತು ಯೋಚನೆಯ ಹೊಂದಿಕೆಗೆ ನಾವು ಬರುವಾಗ ನಮ್ಮ ವಿವೇಚನಾ ಶಕ್ತಿಗಳು ಬಲಗೊಳಿಸಲ್ಪಡುತ್ತವೆ—ಜ್ಞಾನೋಕ್ತಿ 3:5, 6; ಇಬ್ರಿಯ 5:14.
11. ಫರಿಸಾಯರು “ನ್ಯಾಯವನ್ನೂ ದೇವರ ಪ್ರೀತಿಯನ್ನೂ ಒತ್ತಟ್ಟಿಗೆ ಬಿಟ್ಟದ್ದು” ಹೇಗೆ?
11 ಈ ವಿಶಿಷ್ಟ ಕ್ಷೇತ್ರದಲ್ಲಿಯೆ ಫರಿಸಾಯರು ಅತಿರೇಕ ಲೋಪವುಳ್ಳವರಾದರು. ಫರಿಸಾಯರಿಗೆ ನಿಯಮಶಾಸ್ತ್ರದ ತಾಂತ್ರಿಕ ಚೌಕಟ್ಟು ತಿಳಿದಿತಾದ್ತರೂ ಅದರ “ವ್ಯಾಕರಣವನ್ನು” ಅವರು ಗ್ರಹಿಸಶಕ್ತರಾಗಲಿಲ್ಲ. ಧರ್ಮಶಾಸ್ತ್ರದ ಸಹಸ್ರಾರು ವಿವರಗಳನ್ನು ಪಠಿಸಶಕ್ತರಾದರೂ, ಅದರ ಹಿಂದಿದ್ದ ವ್ಯಕ್ತಿತ್ವವನ್ನು ಗ್ರಹಿಸಿಕೊಳ್ಳಲು ಅವರು ತಪ್ಪಿಹೋದರು. ಯೇಸು ಅವರಿಗೆ ಅಂದದ್ದು: “ನೀವು ಮರುಗ ಸದಾಪು ಮುಂತಾದ ಸಕಲ ಪಲ್ಯಗಳಲ್ಲಿ ಹತ್ತರಲ್ಲೊಂದು ಪಾಲು ಕೊಡುತ್ತೀರಿ ಸರಿ; ಆದರೆ ನ್ಯಾಯವನ್ನೂ ದೇವರ ಪ್ರೀತಿಯನ್ನೂ ಒತ್ತಟ್ಟಿಗೆ ಬಿಟ್ಟಿದ್ದೀರಿ.” (ಲೂಕ 11:42) ತಮ್ಮ ಬಳುಕದ ಮನಸ್ಸು ಮತ್ತು ಕಠೋರ ಹೃದಯಗಳೊಂದಿಗೆ ಫರಿಸಾಯರು ತಮ್ಮ ವಿವೇಚನಾ ಶಕ್ತಿಯನ್ನು ಉಪಯೋಗಿಸಲು ತಪ್ಪಿದರು. ಸಬ್ಬತ್ ದಿನದಲ್ಲಿ ಧಾನ್ಯವನ್ನು ಕಿತ್ತು ಅದರ ಕಾಳನ್ನು ತಿಂದುದಕ್ಕಾಗಿ ಯೇಸುವಿನ ಶಿಷ್ಯರನ್ನು ಅವರು ಟೀಕಿಸಿದಾಗ ಅವರ ಅಸಂಗತವಾದ ವಿವೇಚನೆಯು ತೋರಿಬಂತು. ಆದರೂ ಅನಂತರ ಅದೇ ದಿನದಲ್ಲಿ, ಯೇಸುವನ್ನು ಕೊಲ್ಲುವುದಕ್ಕೆ ಒಳಸಂಚನ್ನು ಮಾಡಿದಾಗ, ಅವರ ಮನಸ್ಸಾಕ್ಷಿಯು ಕೊಂಚವಾದರೂ ಚುಚ್ಚಲಿಲ್ಲ!—ಮತ್ತಾಯ 12:1, 2, 14.
12. ವ್ಯಕ್ತಿಯೋಪಾದಿ ಯೆಹೋವನಿಗೆ ನಾವು ಹೇಗೆ ಹೆಚ್ಚು ಹೊಂದಿಕೆಯಾಗಿ ಇರಬಲ್ಲೆವು?
12 ಫರಿಸಾಯರಿಗಿಂತ ಭಿನ್ನರಾಗಿರಲು ನಾವು ಬಯಸುತ್ತೇವೆ. ದೇವರ ವಾಕ್ಯದ ನಮ್ಮ ಜ್ಞಾನವು ಯೆಹೋವನಿಗೆ ಒಬ್ಬ ವ್ಯಕ್ತಿಯೋಪಾದಿ ಅಧಿಕ ಹೊಂದಿಕೆಯಲ್ಲಿ ಇರುವಂತೆ ನಮಗೆ ಸಹಾಯ ಮಾಡಬೇಕು. ನಾವಿದನ್ನು ಹೇಗೆ ಮಾಡಬಲ್ಲೆವು? ಬೈಬಲಿನ ಅಥವಾ ಬೈಬಲಾಧಾರಿತ ಸಾಹಿತ್ಯದ ಒಂದು ಅಂಶವನ್ನು ಓದಿದ ಬಳಿಕ, ಈ ರೀತಿಯ ಪ್ರಶ್ನೆಗಳನ್ನು ಮನನ ಮಾಡುವ ಮೂಲಕ ಕೆಲವರಿಗೆ ಸಹಾಯವು ಸಿಕ್ಕಿದೆ. ‘ಈ ಮಾಹಿತಿಯು ಯೆಹೋವನ ಕುರಿತು ಮತ್ತು ಆತನ ಗುಣಗಳ ಕುರಿತು ನನಗೇನನ್ನು ಕಲಿಸುತ್ತದೆ? ಇತರರೊಂದಿಗಿನ ನನ್ನ ವ್ಯವಹಾರಗಳಲ್ಲಿ ಯೆಹೋವನ ಗುಣಗಳನ್ನು ನಾನು ಹೇಗೆ ಪ್ರದರ್ಶಿಸಬಲ್ಲೆ?’ ಅಂತಹ ಪ್ರಶ್ನೆಗಳ ಧ್ಯಾನಿಸುವಿಕೆಯು ನಮ್ಮ ವಿವೇಚನಾ ಶಕ್ತಿಯನ್ನು ವಿಕಸಿಸುತ್ತದೆ ಮತ್ತು ‘ದೇವರನ್ನು ಅನುಕರಿಸುವವ’ ರಾಗಲು ನಮಗೆ ಸಾಧ್ಯಮಾಡುತ್ತದೆ.—ಎಫೆಸ 5:1.
ದೇವರ ಮತ್ತು ಕ್ರಿಸ್ತನ ದಾಸರು, ಮನುಷ್ಯರ ದಾಸರಲ್ಲ
13. ಫರಿಸಾಯರು ನೈತಿಕ ಸರ್ವಾಧಿಕಾರಿಗಳಂತೆ ವರ್ತಿಸಿದ್ದು ಹೇಗೆ?
13 ಹಿರಿಯರು ಯಾರು ತಮ್ಮ ಪರಿಪಾಲನೆಯ ಕೆಳಗಿದ್ದಾರೊ ಅವರಿಗೆ ತಮ್ಮ ಸ್ವಂತ ವಿವೇಚನಾ ಶಕ್ತಿಯನ್ನು ಉಪಯೋಗಿಸುವಂತೆ ಬಿಟ್ಟುಕೊಡಬೇಕು. ಸಭೆಯ ಸದಸ್ಯರು ಮನುಷ್ಯರ ದಾಸರಲ್ಲ. “ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ದಾಸನಲ್ಲ” ಎಂದು ಪೌಲನು ಬರೆದನು. (ಗಲಾತ್ಯ 1:10; ಕೊಲೊಸ್ಸೆ 3:23, 24) ಇದಕ್ಕೆ ವೈದೃಶ್ಯವಾಗಿ, ದೇವರಿಗಿಂತ ಮನುಷ್ಯರ ಮೆಚ್ಚಿಗೆಯನ್ನು ಗಳಿಸುವುದು ಹೆಚ್ಚು ಪ್ರಾಮುಖ್ಯವೆಂದು ಜನರು ನಂಬುವಂತೆ ಫರಿಸಾಯರು ಬಯಸಿದರು. (ಮತ್ತಾಯ 23:2-7; ಯೋಹಾನ 12:42, 43) ತಮ್ಮ ಸ್ವಂತ ನಿಯಮಗಳನ್ನು ರಚಿಸಿದ ಫರಿಸಾಯರು, ತಮ್ಮನ್ನು ತಾವೆ ನೈತಿಕ ಸರ್ವಾಧಿಕಾರಿಗಳನ್ನಾಗಿ ನೇಮಿಸಿಕೊಂಡು, ಬಳಿಕ ತಾವೆಷ್ಟು ಚೆನ್ನಾಗಿ ಹೊಂದಿಸಿಕೊಳ್ಳುತ್ತೇವೆಂಬುದರಿಂದ ಇತರರಿಗೆ ತೀರ್ಪುಮಾಡಿದರು. ಯಾರು ಫರಿಸಾಯರನ್ನು ಅನುಸರಿಸಿದರೊ ಅವರು ತಮ್ಮ ಬೈಬಲ್ಶಿಕ್ಷಿತ ಮನಸ್ಸಾಕ್ಷಿಯ ಉಪಯೋಗದಲ್ಲಿ ನಿರ್ಬಲಗೊಂಡರು, ಕಾರ್ಯತಃ, ಮನುಷ್ಯರ ದಾಸರಾದರು.
14, 15. (ಎ) ಹಿರಿಯರು ಹಿಂಡಿನೊಂದಿಗೆ ಜೊತೆ ಕೆಲಸಗಾರರಾಗಿ ತಮ್ಮನ್ನು ಹೇಗೆ ತೋರಿಸಿಕೊಳ್ಳಬಲ್ಲರು? (ಬಿ) ಮನಸ್ಸಾಕ್ಷಿಯ ವಿಷಯವನ್ನು ಹಿರಿಯರು ಹೇಗೆ ನಿರ್ವಹಿಸಬೇಕು?
14 ಹಿಂಡು ಪ್ರಾಮುಖ್ಯವಾಗಿ ತಮಗೆ ಲೆಕ್ಕಒಪ್ಪಿಸಬೇಕಾಗಿಲ್ಲವೆಂದು ಕ್ರೈಸ್ತ ಹಿರಿಯರಿಗೆ ಇಂದು ತಿಳಿದಿದೆ. ಪ್ರತಿಯೊಬ್ಬ ಕ್ರೈಸ್ತನು ಅವನ ಅಥವಾ ಅವಳ ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು. (ರೋಮಾಪುರ 14:4; 2 ಕೊರಿಂಥ 1:24; ಗಲಾತ್ಯ 6:5) ವಿಷಯವು ಹೀಗಿರುವುದು ಯೋಗ್ಯ. ಹಿಂಡಿನ ಸದಸ್ಯರು ಮನುಷ್ಯರ ದಾಸರಾಗಿರುತ್ತಿದ್ದರೆ, ವಾಗ್ದಂಡನೆ ಕೊಡಲ್ಪಡುವ ಕಾರಣಮಾತ್ರದಿಂದ ವಿಧೇಯರಾಗುವುದಾದರೆ ಆ ಮನುಷ್ಯರು ಉಪಸ್ಥಿತರಿಲ್ಲದಾಗ ಅವರೇನು ಮಾಡ್ಯಾರು? ಫಿಲಿಪ್ಪಿಯವರ ವಿಷಯದಲ್ಲಿ ಸಂತೋಷಪಡಲು ಪೌಲನಿಗೆ ಕಾರಣವಿತ್ತು: “ನೀವು ನನ್ನ ಮಾತನ್ನು ಯಾವಾಗಲೂ ಕೇಳಿದಂತೆ ಈಗಲೂ ಕೇಳಿರಿ. ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರುವಾಗಲೂ ಬಹು ಹೆಚ್ಚಾಗಿ ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.” ಅವರು ನಿಜವಾಗಿಯೂ ಪೌಲನ ದಾಸರಲ್ಲ, ಕ್ರಿಸ್ತನ ದಾಸರಾಗಿದ್ದರು.—ಫಿಲಿಪ್ಪಿ 2:12.
15 ಆದುದರಿಂದ, ಮನಸ್ಸಾಕ್ಷಿಯ ವಿಷಯದಲ್ಲಿ, ತಮ್ಮ ಪರಿಪಾಲನೆಯ ಕೆಳಗಿರುವವರಿಗಾಗಿ ಹಿರಿಯರು ನಿರ್ಣಯಗಳನ್ನು ಮಾಡುವುದಿಲ್ಲ. ಒಂದು ವಿಷಯದಲ್ಲಿ ಒಳಗೂಡಿರುವ ಬೈಬಲ್ ತತ್ವಗಳನ್ನು ಅವರು ವಿವರಿಸುತ್ತಾರೆ ಮತ್ತು ಅನಂತರ, ಒಳಗೂಡಿರುವ ವ್ಯಕ್ತಿಗಳು ತಮ್ಮ ಸ್ವಂತ ವಿವೇಚನಾ ಶಕ್ತಿಯನ್ನುಪಯೋಗಿಸಿ ಒಂದು ನಿರ್ಣಯವನ್ನು ಮಾಡುವಂತೆ ಬಿಟ್ಟುಕೊಡುತ್ತಾರೆ. ಇದೊಂದು ಗಂಭೀರವಾದ ಜವಾಬ್ದಾರಿಯಾದರೂ, ಆ ವ್ಯಕ್ತಿಯು ಸ್ವತಃ ಹೊರಬೇಕಾದ ಜವಾಬ್ದಾರಿಯಾಗಿದೆ.
16. ಇಸ್ರಾಯೇಲಿನಲ್ಲಿ ಸಮಸ್ಯೆಗಳನ್ನು ನಿರ್ವಹಿಸುವುದಕ್ಕೆ ಯಾವ ಏರ್ಪಾಡು ಅಸ್ತಿತ್ವದಲ್ಲಿತ್ತು?
16 ಇಸ್ರಾಯೇಲ್ಯರನ್ನು ಮಾರ್ಗದರ್ಶಿಸಲು ಯೆಹೋವನು ನ್ಯಾಯಸ್ಥಾಪಕರನ್ನು ಉಪಯೋಗಿಸಿದ ಕಾಲಾವಧಿಯನ್ನು ಗಮನಕ್ಕೆ ತನ್ನಿರಿ. ಬೈಬಲು ನಮಗೆ ಹೇಳುವುದು: “ಆ ಕಾಲದಲ್ಲಿ ಇಸ್ರಾಯೇಲ್ಯರೊಳಗೆ ಅರಸನಿರಲಿಲ್ಲ; ಪ್ರತಿಯೊಬ್ಬನೂ ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದನು.” (ನ್ಯಾಯಸ್ಥಾಪಕರು 21:25) ಆದರೂ ತನ್ನ ಜನರು ಮಾರ್ಗದರ್ಶನವನ್ನು ದೊರಕಿಸಿಕೊಳ್ಳಲಿಕ್ಕಾಗಿ ಯೆಹೋವನು ಮಾಧ್ಯಮವನ್ನು ಒದಗಿಸಿದನು. ಪ್ರತಿಯೊಂದು ಪಟ್ಟಣದಲ್ಲಿ, ಪ್ರಶ್ನೆಗಳು ಮತ್ತು ಸಮಸ್ಯೆಗಳೊಂದಿಗೆ ಪಕ್ವ ಸಹಾಯವನ್ನು ಒದಗಿಸಶಕ್ತರಾದ ಹಿರಿಯ ಪುರುಷರಿದ್ದರು. ಅದಲ್ಲದೆ, ಲೇವ್ಯ ಯಾಜಕರು ದೇವರ ನಿಯಮಗಳಲ್ಲಿ ಜನರಿಗೆ ಶಿಕ್ಷಣಕೊಡುವ ಮೂಲಕ ಒಳ್ಳೆಯ ಪ್ರಭಾವ ಬೀರಿದರು. ವಿಶೇಷವಾಗಿ ಕಷ್ಟದ ಸಮಸ್ಯೆಗಳು ತಲೆದೋರಿದಾಗ, ಊರೀಮ್ ಮತ್ತು ತುಮ್ಮೀಮ್ ಮೂಲಕ ಮಹಾ ಯಾಜಕನು ದೇವರನ್ನು ಸಂಪರ್ಕಿಸಸಾಧ್ಯವಿತ್ತು. ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ವ್ಯಾಖ್ಯಾನಿಸಿದ್ದು: “ಈ ಒದಗಿಸುವಿಕೆಗಳನ್ನು ದೊರಕಿಸಿಕೊಂಡು, ದೇವರ ನಿಯಮದ ಜ್ಞಾನವನ್ನು ಪಡೆದು ಅದನ್ನು ಅನ್ವಯಿಸಿಕೊಂಡ ವ್ಯಕ್ತಿಯ ಮನಸ್ಸಾಕ್ಷಿಗೆ ಸೂಕ್ತ ಮಾರ್ಗದರ್ಶನ ದೊರೆತಿತ್ತು. ಅಂತಹ ಸನ್ನಿವೇಶದಲ್ಲಿ ಅವನು ‘ತನ್ನ ಮನಸ್ಸಿಗೆ ಬಂದಂತೆ’ ಮಾಡುವಿಕೆಯು ಕೆಟ್ಟತನದಲ್ಲಿ ಪರಿಣಮಿಸದು. ಮನಸ್ಸಿರುವ ಅಥವಾ ಮನಸ್ಸಿಲ್ಲದ ಭಾವನೆಯನ್ನು ಜನರು ತೋರಿಸುವಂತೆ ದೇವರು ಅನುಮತಿಸಿದ್ದನು.—ಸಂಪುಟ 2, ಪುಟಗಳು 162-3.b
17. ಹಿರಿಯರು ತಮ್ಮ ಸ್ವಂತ ಮಟ್ಟಕ್ಕನುಸಾರವಲ್ಲ, ಬದಲಾಗಿ ದೇವರ ಮಟ್ಟಗಳಿಗನುಸಾರ ಸೂಚನೆ ಕೊಡುತ್ತಾರೆಂದು ಹೇಗೆ ತೋರಿಸಬಲ್ಲರು?
17 ಇಸ್ರಾಯೇಲ್ಯ ನ್ಯಾಯಸ್ಥಾಪಕರು ಮತ್ತು ಯಾಜಕರಂತೆ, ಸಭಾ ಹಿರಿಯರು ಸಮಸ್ಯೆಗಳಿಗೆ ಪಕ್ವ ಸಹಾಯವನ್ನು ಒದಗಿಸುತ್ತಾರೆ ಮತ್ತು ಅಮೂಲ್ಯ ಸಲಹೆಯನ್ನು ಕೊಡುತ್ತಾರೆ. ಕೆಲವೊಮ್ಮೆ, ಅವರು “ಪೂರ್ಣದೀರ್ಘಶಾಂತಿಯಿಂದ ಉಪದೇಶಿಸುತ್ತಾ ಖಂಡಿಸು, ಗದರಿಸು, ಎಚ್ಚರಿಸು” ತಾರ್ತೆ ಸಹ. (2 ತಿಮೊಥೆಯ 4:2) ಅವರು ಹಾಗೆ ಮಾಡುವುದು ದೇವರ ಮಟ್ಟಗಳಿಗನುಸಾರ, ತಮ್ಮ ಸ್ವಂತ ಮಟ್ಟಗಳಿಗನುಸಾರವಲ್ಲ. ಹಿರಿಯರು ಒಂದು ಮಾದರಿಯನ್ನಿಡುವಾಗ ಮತ್ತು ಹೃದಯಗಳನ್ನು ತಲಪಲು ಪ್ರಯತ್ನಿಸುವಾಗ ಇದೆಷ್ಟು ಪರಿಣಾಮಕಾರಿ!
18. ಹಿರಿಯರು ಹೃದಯಗಳನ್ನು ತಲಪುವುದು ವಿಶೇಷವಾಗಿ ಏಕೆ ಪರಿಣಾಮಕಾರಿಯಾಗಿದೆ?
18 ಹೃದಯವು ನಮ್ಮ ಕ್ರೈಸ್ತ ಚಟುವಟಿಕೆಯ “ಎಂಜಿನ್” ಆಗಿರುತ್ತದೆ. ಆದುದರಿಂದ ಬೈಬಲು ಹೇಳುವುದು: “ಅದರೊಳಗಿಂದ ಜೀವಧಾರೆಗಳು ಹೊರಡುವವು.” (ಜ್ಞಾನೋಕ್ತಿ 4:23) ಹಿರಿಯರು ಹೃದಯವನ್ನು ಹುರಿದುಂಬಿಸುವಾಗ ಸಭೆಯಲ್ಲಿರುವವರು ಆ ಮೂಲಕವಾಗಿ ತಮ್ಮಿಂದಾದ ಎಲ್ಲವನ್ನು ಮಾಡುವಂತೆ ಪ್ರೇರಿಸಲ್ಪಡುವುದನ್ನು ಕಾಣುವರು. ಅವರು ಸಚ್ವಾಲಕರಾಗಿರುವರು, ಯಾವಾಗಲೂ ಇತರರಿಂದ ಕಾರ್ಯಕ್ಕೆ ಉತ್ತೇಜಿಸಲ್ಪಡುವ ಅಗತ್ಯ ಅವರಿಗಿಲ್ಲ. ಒತ್ತಯಾದ ವಿಧೇಯತೆಯನ್ನು ಯೆಹೋವನು ಬಯಸುವುದಿಲ್ಲ. ಪ್ರೀತಿ ತುಂಬಿದ ಹೃದಯದಿಂದ ಬರುವ ವಿಧೇಯತೆಗಾಗಿ ಅವನು ನಿರೀಕ್ಷಿಸುತ್ತಿದ್ದಾನೆ. ಹಿಂಡಿನಲ್ಲಿರುವವರಿಗೆ ತಮ್ಮ ವಿವೇಚನಾ ಶಕ್ತಿಯನ್ನು ವಿಕಸಿಸಲು ಸಹಾಯ ಮಾಡುವ ಮೂಲಕ ಹಿರಿಯರು ಅಂತಹ ಹೃದಯ ಪ್ರೇರಿತ ಸೇವೆಯನ್ನು ಪ್ರೋತ್ಸಾಹಿಸಬಲ್ಲರು.
“ಕ್ರಿಸ್ತನ ಮನಸ್ಸ”ನ್ನು ಬೆಳೆಸಿಕೊಳ್ಳುವುದು
19, 20. ಕ್ರಿಸ್ತನ ಮನಸ್ಸನ್ನು ಬೆಳೆಸಿಕೊಳ್ಳುವುದು ನಮಗೇಕೆ ಪ್ರಾಮುಖ್ಯ?
19 ನಾವು ಗಮನಿಸಿದಂತೆ, ದೇವರ ನಿಯಮವನ್ನು ತಿಳಿಯುವುದು ಮಾತ್ರ ಸಾಕಾಗದು. “ನನಗೆ ಜ್ಞಾನವನ್ನು ದಯಪಾಲಿಸು” ಎಂದು ಕೀರ್ತನೆಗಾರನು ಬೇಡಿದನು, “ಆಗ ನಿನ್ನ ಧರ್ಮಶಾಸ್ತ್ರವನ್ನು ಪೂರ್ಣಮನಸ್ಸಿನಿಂದ [ಹೃದಯದಿಂದ, NW] ಕೈಕೊಂಡು ನಡೆಯುವೆನು.” (ಕೀರ್ತನೆ 119:34) ಯೆಹೋವನು ತನ್ನ ವಾಕ್ಯದಲ್ಲಿ “ಕ್ರಿಸ್ತನ ಮನಸ್ಸ”ನ್ನು ಪ್ರಕಟಪಡಿಸಿದ್ದಾನೆ. (1 ಕೊರಿಂಥ 2:16) ತನ್ನ ವಿವೇಚನಾ ಶಕಿಯ್ತಿಂದ ಯೆಹೋವನನ್ನು ಸೇವಿಸಿದವನಾದ ಯೇಸು, ನಮಗಾಗಿ ಒಂದು ಪರಿಪೂರ್ಣ ಮಾದರಿಯನ್ನಿಟ್ಟಿದ್ದಾನೆ. ಅವನು ದೇವರ ನಿಯಮಗಳನ್ನು ಮತ್ತು ತತ್ವಗಳನ್ನು ತಿಳಿದುಕೊಂಡನು, ಮತ್ತು ಅವನ್ನು ತಪ್ಪದೆ ಅನ್ವಯಿಸಿಕೊಂಡನು. ಅವನ ಮಾದರಿಯನ್ನು ನಾವು ಅಭ್ಯಾಸಿಸುವ ಮೂಲಕ, “ಅದರ ಅಗಲ ಉದ್ದ ಎತ್ತರ ಆಳ ಎಷ್ಟೆಂಬದನ್ನು ದೇವಜನರೆಲ್ಲರೊಂದಿಗೆ ಗ್ರಹಿಸಲೂ ಜ್ಞಾನಕ್ಕೆ ಮೀರುವ ಕ್ರಿಸ್ತನ ಪ್ರೀತಿಯನ್ನು ತಿಳುಕೊಳ್ಳಲೂ ಪೂರ್ಣಶಕ್ತ” ರಾಗುವೆವು. (ಎಫೆಸ 3:17-19) ಹೌದು, ನಾವು ಯೇಸುವಿನ ಕುರಿತು ಬೈಬಲಿನಿಂದ ಏನನ್ನು ಕಲಿಯುತ್ತೇವೊ, ಅದು ಕೇವಲ ಬಹಳಷ್ಟು ನಿಜತ್ವಗಳನ್ನು ತಿಳಿಯುವ ತಲೆಜ್ಞಾನಕ್ಕಿಂತ ಎಷ್ಟೋ ಹೆಚ್ಚಾಗಿರುತ್ತದೆ; ಯೆಹೋವನು ತಾನೆ ಏನಾಗಿದ್ದಾನೆಂಬ ಸುಸ್ಪಷ್ಟ ಚಿತ್ರವನ್ನು ಅದು ನಮಗೆ ಕೊಡುತ್ತದೆ.—ಯೋಹಾನ 14:9, 10.
20 ಹೀಗೆ, ದೇವರ ವಾಕ್ಯವನ್ನು ನಾವು ಅಭ್ಯಾಸಿಸಿದಂತೆ, ವಿಷಯಗಳ ಮೇಲೆ ಯೆಹೋವನ ಯೋಚನೆಯನ್ನು ಗ್ರಹಿಸಬಲ್ಲೆವು ಮತ್ತು ಸಮತೆಯ ತೀರ್ಮಾನಗಳನ್ನು ಮುಟ್ಟಬಲ್ಲೆವು. ಇದಕ್ಕೆ ಪ್ರಯತ್ನ ಬೇಕಾಗಿದೆ. ಯೆಹೋವನ ವ್ಯಕ್ತಿತ್ವಕ್ಕೆ ಮತ್ತು ಮಟ್ಟಗಳಿಗೆ ನಮ್ಮನ್ನು ಸೂಕ್ಷ್ಮಸಂವೇದಿಗಳಾಗಿ ಮಾಡಿಕೊಳ್ಳುತ್ತಾ, ದೇವರ ವಾಕ್ಯದ ಉತ್ಸುಕ ವಿದ್ಯಾರ್ಥಿಗಳಾಗಿ ನಾವು ಪರಿಣಮಿಸಬೇಕು. ಸಾಂಕೇತಿಕವಾಗಿ ನಾವು ಒಂದು ಹೊಸ ವ್ಯಾಕರಣವನ್ನು ಕಲಿಯುತ್ತಿದ್ದೇವೆ. ಆದರೂ, ಯಾರು ಹಾಗೆ ಮಾಡುತ್ತಾರೊ ಅವರು “[ತಮ್ಮ] ದೇಹಗಳನ್ನು ತ್ಯಾಗದ ಬದುಕಾಗಿಯೂ, ಪವಿತ್ರವೂ, ದೇವರಿಗೆ ಸ್ವೀಕರಣೀಯವೂ, [ತಮ್ಮ] ವಿವೇಚನಾ ಶಕ್ತಿಯೊಂದಿಗೆ ಪವಿತ್ರ ಸೇವೆಯೂ ಆಗಿರುವುದಾಗಿ ಅರ್ಪಿಸು” ವುದಕ್ಕಾಗಿ ಪೌಲನ ಪ್ರಬೋಧನೆಯನ್ನು ಅನುಸರಿಸುವವರಾಗಿರುವರು.—ರೋಮಾಪುರ 12:1.
[ಅಧ್ಯಯನ ಪ್ರಶ್ನೆಗಳು]
a ಇದು ಪ್ರೇತಾಚಾರ, ಲಂಪಟತನ, ಅಥವಾ ಕ್ರೌರ್ಯ ರತಿಯಿರುವ ಮನೋರಂಜನೆಯನ್ನು, ಹಾಗೂ ಕ್ರೈಸ್ತರು ಅಂಗೀಕರಿಸಲಾರದ ವಿಷಯಗಳಾದ—ಗಂಡು ಹೆಣ್ಣುಗಳ ಸ್ವೇಚ್ಛಾಸಂಪರ್ಕ ಅಥವಾ ನಿರ್ಬಂಧವಿಲ್ಲದ ಸಂಬಂಧವನ್ನು ಪ್ರವರ್ಧಿಸುವ ಕುಟುಂಬ ಮನೋರಂಜನೆ ಎನ್ನಲಾಗುವ ವಿಷಯವನ್ನೂ ತಳ್ಳಿಹಾಕುತ್ತದೆ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್., ಪ್ರಕಾಶಿತ.
ನೀವೇನನ್ನು ಕಲಿತಿರಿ?
◻ ಸಾ.ಶ. 33 ರಲ್ಲಿ ದೇವರ ಸೇವೆಯ ಸಂಬಂಧದಲ್ಲಿ ಯಾವ ಬದಲಾವಣೆಯು ಸಂಭವಿಸಿತು?
◻ ನಮ್ಮ ವಿವೇಚನಾ ಶಕ್ತಿಯನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು?
◻ ಹಿಂಡಿನಲ್ಲಿರುವವರು ದೇವರ ಮತ್ತು ಕ್ರಿಸ್ತನ ದಾಸರಾಗಿರುವಂತೆ ಹಿರಿಯರು ಹೇಗೆ ಸಹಾಯ ಮಾಡಬಲ್ಲರು?
◻ “ಕ್ರಿಸ್ತನ ಮನಸ್ಸ”ನ್ನು ನಾವು ಏಕೆ ಬೆಳೆಸಿಕೊಳ್ಳಬೇಕು?
[ಪುಟ 23 ರಲ್ಲಿರುವ ಚಿತ್ರ]
ಹಿರಿಯರು ಇತರರಿಗೆ ತಮ್ಮ ವಿವೇಚನಾ ಶಕ್ತಿಯನ್ನು ಉಪಯೋಗಿಸಲು ಸಹಾಯ ಮಾಡುತ್ತಾರೆ