“ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು”
“ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು; ಆದಕಾರಣ . . . ದೇವರ ಪ್ರಭಾವವನ್ನು ಪ್ರಕಾಶಪಡಿಸಿರಿ.”—1 ಕೊರಿಂಥ 6:20.
“ಪುರಾತನ ಲೋಕದಲ್ಲಿ ದಾಸತ್ವವು ಪ್ರಬಲವಾಗಿತ್ತು ಮತ್ತು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿತ್ತು” ಎಂದು ಹೋಲ್ಮನ್ ಇಲಸ್ಟ್ರೇಟೆಡ್ ಬೈಬಲ್ ಡಿಕ್ಷನೆರಿ ತಿಳಿಸುತ್ತದೆ. ಅದು ಕೂಡಿಸಿ ಹೇಳುವುದು: “ಈಜಿಪ್ಟ್, ಗ್ರೀಸ್ ಮತ್ತು ರೋಮ್ನ ಆರ್ಥಿಕತೆಯು ಗುಲಾಮಚಾಕರಿಯ ಮೇಲೆ ಹೊಂದಿಕೊಂಡಿತ್ತು. ಪ್ರಥಮ ಕ್ರೈಸ್ತ ಶತಮಾನದಲ್ಲಿ, ಇಟಲಿಯ ಮೂವರು ವ್ಯಕ್ತಿಗಳಲ್ಲಿ ಒಬ್ಬರು ಮತ್ತು ಬೇರೆ ದೇಶಗಳಲ್ಲಿನ ಐದು ವ್ಯಕ್ತಿಗಳಲ್ಲಿ ಒಬ್ಬರು ದಾಸರಾಗಿದ್ದರು.”
2 ಪುರಾತನ ಇಸ್ರಾಯೇಲ್ನಲ್ಲಿ ಸಹ ದಾಸತ್ವವು ಅಸ್ತಿತ್ವದಲ್ಲಿತ್ತಾದರೂ, ದಾಸರಿಗೆ ಸಂರಕ್ಷಣೆ ದೊರಕುವುದನ್ನು ಮೋಶೆಯ ಧರ್ಮಶಾಸ್ತ್ರವು ಖಚಿತಪಡಿಸಿತ್ತು. ಉದಾಹರಣೆಗೆ, ಒಬ್ಬ ಇಸ್ರಾಯೇಲ್ಯನು ಆರು ವರ್ಷಗಳ ವರೆಗೆ ಮಾತ್ರ ದಾಸನಾಗಿ ಸೇವೆಮಾಡಸಾಧ್ಯವಿದೆ ಎಂದು ಧರ್ಮಶಾಸ್ತ್ರವು ತಿಳಿಸಿತ್ತು. ಏಳನೆಯ ವರ್ಷದಲ್ಲಿ ಅವನು ‘ಏನೂ ಕೊಡದೆ ಬಿಡುಗಡೆಯಾಗಿ ಹೋಗಸಾಧ್ಯವಿತ್ತು.’ ಆದರೆ ದಾಸರನ್ನು ಹೇಗೆ ಉಪಚರಿಸಬೇಕು ಎಂಬುದರ ಕುರಿತಾದ ನಿಬಂಧನೆಗಳು ಎಷ್ಟು ನ್ಯಾಯಸಮ್ಮತವೂ ದಯಾಪರವೂ ಆಗಿದ್ದವೆಂದರೆ, ಮೋಶೆಯ ಧರ್ಮಶಾಸ್ತ್ರವು ಈ ಮುಂದಿನ ಒದಗಿಸುವಿಕೆಯನ್ನು ಮಾಡಿತು: “ಆ ದಾಸನು—ನಾನು ನನ್ನ ಯಜಮಾನನನ್ನೂ ನನ್ನ ಹೆಂಡತಿ ಮಕ್ಕಳನ್ನೂ ಪ್ರೀತಿಸುತ್ತೇನಾದದರಿಂದ ಅವರನ್ನು ಅಗಲಿ ಬಿಡುಗಡೆಯಾಗಿ ಹೋಗಲೊಲ್ಲೆನೆಂದು ದೃಢವಾಗಿ ಹೇಳಿದರೆ ಅವನ ಯಜಮಾನನು ದೇವರ ಬಳಿಗೆ ಅವನನ್ನು ಕರಕೊಂಡು ಬಂದು ಕದದ ಹತ್ತಿರ ಅಥವಾ ಬಾಗಲಿನ ನಿಲುವು ಪಟ್ಟಿಗಳ ಹತ್ತಿರ ನಿಲ್ಲಿಸಿ ಅವನ ಕಿವಿಯನ್ನು ಸಲಾಕೆಯಿಂದ ಚುಚ್ಚಬೇಕು. ಆ ಹೊತ್ತಿನಿಂದ ಇವನು ಶಾಶ್ವತವಾಗಿ ಅವನಿಗೆ ದಾಸನಾಗಿರಬೇಕು.”—ವಿಮೋಚನಕಾಂಡ 21:2-6; ಯಾಜಕಕಾಂಡ 25:42, 43; ಧರ್ಮೋಪದೇಶಕಾಂಡ 15:12-18.
3 ಸ್ವಯಂಪ್ರೇರಿತ ದಾಸತ್ವದ ಏರ್ಪಾಡು, ಸತ್ಯ ಕ್ರೈಸ್ತರು ಯಾವ ದಾಸತ್ವದ ಕೆಳಗಿದ್ದಾರೋ ಅದರ ಒಂದು ಮುನ್ನೋಟವನ್ನು ನೀಡಿತು. ಉದಾಹರಣೆಗೆ, ಬೈಬಲ್ ಬರಹಗಾರರಾದ ಪೌಲ, ಯಾಕೋಬ, ಪೇತ್ರ ಮತ್ತು ಯೂದರು ತಮ್ಮನ್ನು ದೇವರ ಹಾಗೂ ಕ್ರಿಸ್ತನ ದಾಸರಾಗಿ ಗುರುತಿಸಿಕೊಂಡರು. (ತೀತ 1:1; ಯಾಕೋಬ 1:1; 2 ಪೇತ್ರ 1:1; ಯೂದ 1) ಥೆಸಲೊನೀಕದ ಕ್ರೈಸ್ತರು ‘[ತಮ್ಮ] ವಿಗ್ರಹಗಳನ್ನು ಬಿಟ್ಟುಬಿಟ್ಟು ದೇವರ ಕಡೆಗೆ ತಿರುಗಿಕೊಂಡು ಜೀವವುಳ್ಳ ಸತ್ಯದೇವರನ್ನು ಸೇವಿಸುವವರು’ ಅಥವಾ ದಾಸರಾದರೆಂದು ಪೌಲನು ಅವರಿಗೆ ಜ್ಞಾಪಕ ಹುಟ್ಟಿಸಿದನು. (1 ಥೆಸಲೊನೀಕ 1:9, 10) ಸಿದ್ಧಮನಸ್ಸಿನಿಂದ ದೇವರ ದಾಸರಾಗುವಂತೆ ಆ ಕ್ರೈಸ್ತರನ್ನು ಯಾವುದು ಪ್ರಚೋದಿಸಿತು? ವಾಸ್ತವದಲ್ಲಿ, ಒಬ್ಬ ಇಸ್ರಾಯೇಲ್ಯ ದಾಸನು ತನ್ನ ವೈಯಕ್ತಿಕ ಸ್ವಾತಂತ್ರ್ಯವನ್ನು ನಿರಾಕರಿಸುವುದರಲ್ಲಿ ಯಾವುದು ಪ್ರಚೋದನಾ ಶಕ್ತಿಯಾಗಿತ್ತು? ಅದು, ತನ್ನ ಯಜಮಾನನ ಕಡೆಗಿದ್ದ ಪ್ರೀತಿಯಾಗಿರಲಿಲ್ಲವೋ? ಕ್ರೈಸ್ತ ದಾಸತ್ವವು ದೇವರಿಗಾಗಿರುವ ಪ್ರೀತಿಯ ಮೇಲೆ ಆಧಾರಿತವಾಗಿದೆ. ನಾವು ಸತ್ಯವಂತನೂ ಚೈತನ್ಯಸ್ವರೂಪನೂ ಆಗಿರುವ ದೇವರನ್ನು ತಿಳಿದುಕೊಂಡು ಆತನನ್ನು ಪ್ರೀತಿಸಲು ಆರಂಭಿಸುವಾಗ, ‘[ನಮ್ಮ] ಸಂಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ’ ಆತನ ಸೇವೆಮಾಡುವಂತೆ ಪ್ರಚೋದಿಸಲ್ಪಡುತ್ತೇವೆ. (ಧರ್ಮೋಪದೇಶಕಾಂಡ 10:12, 13) ಆದರೂ, ದೇವರ ಮತ್ತು ಕ್ರಿಸ್ತನ ದಾಸರಾಗುವುದರಲ್ಲಿ ಏನು ಒಳಗೂಡಿದೆ? ಇದು ನಮ್ಮ ದೈನಂದಿನ ಜೀವಿತದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?
“ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ”
4 ಒಬ್ಬ ದಾಸನನ್ನು “ಇನ್ನೊಬ್ಬ ವ್ಯಕ್ತಿಯ ಅಥವಾ ವ್ಯಕ್ತಿಗಳ ನ್ಯಾಯಬದ್ಧ ಸೊತ್ತಾಗಿರುವ ಮತ್ತು ಸಂಪೂರ್ಣ ವಿಧೇಯತೆಯನ್ನು ತೋರಿಸಲು ಬದ್ಧನಾಗಿರುವ ಒಬ್ಬ ವ್ಯಕ್ತಿ” ಎಂದು ಅರ್ಥನಿರೂಪಿಸಲಾಗಿದೆ. ನಾವು ಯೆಹೋವನಿಗೆ ನಮ್ಮ ಜೀವಿತಗಳನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನವನ್ನು ಪಡೆದುಕೊಳ್ಳುವಾಗ, ಯೆಹೋವನ ನ್ಯಾಯಬದ್ಧ ಸೊತ್ತಾಗಿ ಪರಿಣಮಿಸುತ್ತೇವೆ. “ನೀವು ನಿಮ್ಮ ಸ್ವಂತ ಸೊತ್ತಲ್ಲ; ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು” ಎಂದು ಅಪೊಸ್ತಲ ಪೌಲನು ವಿವರಿಸುತ್ತಾನೆ. (1 ಕೊರಿಂಥ 6:19, 20) ಆ ಕ್ರಯ ಅಥವಾ ಬೆಲೆಯು ಯೇಸು ಕ್ರಿಸ್ತನ ವಿಮೋಚನಾ ಯಜ್ಞದ ಮೌಲ್ಯವೇ ಆಗಿದೆ. ಇದರ ಆಧಾರದ ಮೇಲೆಯೇ ದೇವರು ನಮ್ಮನ್ನು—ನಾವು ಅಭಿಷಿಕ್ತ ಕ್ರೈಸ್ತರಾಗಿರಲಿ ಅಥವಾ ಭೂನಿರೀಕ್ಷೆಯುಳ್ಳ ಅವರ ಸಂಗಡಿಗರಾಗಿರಲಿ—ತನ್ನ ಸೇವಕರನ್ನಾಗಿ ಸ್ವೀಕರಿಸುತ್ತಾನೆ. (ಎಫೆಸ 1:7; 2:13; ಪ್ರಕಟನೆ 5:9) ಹೀಗೆ, ನಮ್ಮ ದೀಕ್ಷಾಸ್ನಾನದ ಸಮಯದಂದಿನಿಂದ “ನಾವು ಯೆಹೋವನಿಗೆ ಸೇರಿದವರಾಗಿದ್ದೇವೆ.” (ರೋಮಾಪುರ 14:8, NW) ನಾವು ಯೇಸು ಕ್ರಿಸ್ತನ ಅಮೂಲ್ಯ ರಕ್ತದಿಂದ ಕೊಂಡುಕೊಳ್ಳಲ್ಪಟ್ಟವರು ಆಗಿರುವುದರಿಂದ, ನಾವು ಅವನಿಗೂ ದಾಸರಾಗುತ್ತೇವೆ ಮತ್ತು ಅವನ ಆಜ್ಞೆಗಳನ್ನು ಪಾಲಿಸುವ ಹಂಗಿಗೊಳಗಾಗಿದ್ದೇವೆ.—1 ಪೇತ್ರ 1:18, 19.
5 ದಾಸರು ತಮ್ಮ ಯಜಮಾನನಿಗೆ ವಿಧೇಯರಾಗಬೇಕು. ನಮ್ಮ ದಾಸತ್ವವು ಸ್ವಯಂಪ್ರೇರಿತವಾದದ್ದಾಗಿದೆ ಮತ್ತು ಯಜಮಾನನ ಕಡೆಗೆ ನಮಗಿರುವ ಪ್ರೀತಿಯಿಂದ ಪ್ರಚೋದಿತವಾದದ್ದಾಗಿದೆ. 1 ಯೋಹಾನ 5:3 ಹೀಗೆ ತಿಳಿಸುತ್ತದೆ: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.” ಹೀಗಿರುವುದರಿಂದ, ನಮಗಾದರೋ ನಮ್ಮ ವಿಧೇಯತೆಯು ನಮ್ಮ ಪ್ರೀತಿ ಹಾಗೂ ಅಧೀನತೆಯ ರುಜುವಾತಾಗಿದೆ. ಇದು ನಾವು ಮಾಡುವ ಪ್ರತಿಯೊಂದು ವಿಷಯದಲ್ಲಿಯೂ ಸುವ್ಯಕ್ತವಾಗುತ್ತದೆ. ಪೌಲನಂದದ್ದು: “ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ.” (1 ಕೊರಿಂಥ 10:31) ದೈನಂದಿನ ಜೀವಿತದಲ್ಲಿ, ಚಿಕ್ಕಪುಟ್ಟ ರೀತಿಯಲ್ಲಿಯೂ ನಾವು ‘ಯೆಹೋವನ ಸೇವೆಮಾಡುತ್ತೇವೆ’ ಎಂಬುದನ್ನು ತೋರಿಸಲು ಬಯಸುತ್ತೇವೆ.—ರೋಮಾಪುರ 12:11.
6 ಉದಾಹರಣೆಗೆ, ನಾವು ನಿರ್ಣಯಗಳನ್ನು ಮಾಡುವಾಗ ನಮ್ಮ ಸ್ವರ್ಗೀಯ ದಣಿ ಅಥವಾ ಯಜಮಾನನಾಗಿರುವ ಯೆಹೋವನ ಚಿತ್ತವನ್ನು ಗಂಭೀರವಾಗಿ ಪರಿಗಣಿಸಲು ಜಾಗ್ರತೆವಹಿಸಬೇಕು. (ಮಲಾಕಿಯ 1:6) ಕಷ್ಟಕರ ನಿರ್ಣಯಗಳು ದೇವರಿಗೆ ನಾವು ತೋರಿಸುವ ವಿಧೇಯತೆಯನ್ನು ಪರೀಕ್ಷೆಗೊಡ್ಡಬಹುದು. ಆಗ ನಾವು ನಮ್ಮ “ವಂಚಕ” ಹಾಗೂ ‘ಗುಣವಾಗದ ರೋಗಕ್ಕೆ ಒಳಗಾಗಿರುವ’ ಹೃದಯದ ಪ್ರವೃತ್ತಿಗಳನ್ನು ಅನುಸರಿಸುವುದಕ್ಕೆ ಬದಲಾಗಿ ಆತನ ಸಲಹೆಗೆ ಲಕ್ಷ್ಯಕೊಡುವೆವೋ? (ಯೆರೆಮೀಯ 17:9) ಒಬ್ಬ ಅವಿವಾಹಿತ ಕ್ರೈಸ್ತಳಾಗಿರುವ ಮೆಲಿಸಳು ದೀಕ್ಷಾಸ್ನಾನಪಡೆದು ಸ್ವಲ್ಪ ಸಮಯ ಕಳೆದಿತ್ತಷ್ಟೆ; ಅಷ್ಟರಲ್ಲೇ ಒಬ್ಬ ಯುವಕನು ಅವಳಲ್ಲಿ ಆಸಕ್ತಿಯನ್ನು ತೋರಿಸಲಾರಂಭಿಸಿದನು. ಅವನು ತುಂಬ ಸಭ್ಯ ವ್ಯಕ್ತಿಯಾಗಿರುವಂತೆ ತೋರುತ್ತಿದ್ದನು ಮತ್ತು ಯೆಹೋವನ ಸಾಕ್ಷಿಗಳೊಂದಿಗೆ ಈಗಾಗಲೇ ಬೈಬಲ್ ಅಧ್ಯಯನಮಾಡುತ್ತಿದ್ದನು. ಆದರೂ, ಒಬ್ಬ ಹಿರಿಯನು ಮೆಲಿಸಳೊಂದಿಗೆ, “ಕರ್ತನಲ್ಲಿ ಮಾತ್ರ” (NW) ವಿವಾಹವಾಗಬೇಕೆಂಬ ಯೆಹೋವನ ಆಜ್ಞೆಯನ್ನು ಪಾಲಿಸುವುದರ ಹಿಂದಿರುವ ವಿವೇಕದ ಕುರಿತು ಮಾತಾಡಿದನು. (1 ಕೊರಿಂಥ 7:39; 2 ಕೊರಿಂಥ 6:14) ಮೆಲಿಸಳು ಹೀಗೆ ಹೇಳುತ್ತಾಳೆ: “ಈ ಬುದ್ಧಿವಾದವನ್ನು ಅನ್ವಯಿಸಿಕೊಳ್ಳುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಆದರೂ, ದೇವರ ಚಿತ್ತವನ್ನು ಮಾಡಲಿಕ್ಕಾಗಿ ನಾನು ಆತನಿಗೆ ನನ್ನನ್ನು ಸಮರ್ಪಿಸಿಕೊಂಡಿರುವುದರಿಂದ, ಆತನ ಸ್ಪಷ್ಟವಾದ ಸೂಚನೆಗಳಿಗೆ ವಿಧೇಯಳಾಗುವೆ ಎಂದು ನಿರ್ಧರಿಸಿದೆ.” ಏನು ಸಂಭವಿಸಿತೋ ಅದರ ಕುರಿತು ಜ್ಞಾಪಿಸಿಕೊಳ್ಳುತ್ತಾ ಅವಳನ್ನುವುದು: “ನಾನು ಆ ಬುದ್ಧಿವಾದಕ್ಕನುಸಾರ ನಡೆದುಕೊಂಡದ್ದಕ್ಕಾಗಿ ತುಂಬ ಸಂತೋಷಿತಳಾಗಿದ್ದೇನೆ. ಸ್ವಲ್ಪ ಸಮಯದಲ್ಲೇ ಆ ವ್ಯಕ್ತಿಯು ಅಧ್ಯಯನಮಾಡುವುದನ್ನು ನಿಲ್ಲಿಸಿಬಿಟ್ಟನು. ಒಂದುವೇಳೆ ನಾನು ಆ ಸಂಬಂಧವನ್ನು ಬೆನ್ನಟ್ಟುತ್ತಿದ್ದಲ್ಲಿ, ನಾನಿಷ್ಟರಲ್ಲಿ ಒಬ್ಬ ಅವಿಶ್ವಾಸಿಯ ಹೆಂಡತಿಯಾಗಿರುತ್ತಿದ್ದೆ.”
7 ದೇವರ ದಾಸರಾಗಿರುವ ನಾವು ಮನುಷ್ಯರಿಗೆ ದಾಸರಾಗಬಾರದು. (1 ಕೊರಿಂಥ 7:23) ಇತರರು ನಮ್ಮನ್ನು ಇಷ್ಟಪಡದಿರುವುದನ್ನು ನಮ್ಮಲ್ಲಿ ಯಾರೂ ಬಯಸುವುದಿಲ್ಲ ಎಂಬುದು ನಿಜ, ಆದರೆ ಕ್ರೈಸ್ತರಿಗೆ ಲೋಕದಲ್ಲಿರುವವರಿಗಿಂತ ಭಿನ್ನವಾಗಿರುವ ಮಟ್ಟಗಳಿವೆ ಎಂಬುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳತಕ್ಕದ್ದು. ಪೌಲನು ಕೇಳಿದ್ದು: “ನಾನು ಮನುಷ್ಯರನ್ನು ಮೆಚ್ಚಿಸುವದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ?” ತದನಂತರ ಅವನು ಹೀಗೆ ಮುಕ್ತಾಯಗೊಳಿಸಿದನು: “ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ದಾಸನಲ್ಲ.” (ಗಲಾತ್ಯ 1:10) ಹೀಗಿರುವುದರಿಂದ, ನಾವು ಸಮವಯಸ್ಕರ ಒತ್ತಡಕ್ಕೆ ಮಣಿದು ಮನುಷ್ಯರನ್ನು ಮೆಚ್ಚಿಸುವವರಾಗಿ ಪರಿಣಮಿಸಸಾಧ್ಯವಿಲ್ಲ. ಹಾಗಾದರೆ, ಅವರ ಮಟ್ಟಗಳಿಗೆ ಹೊಂದಿಕೊಳ್ಳುವ ಒತ್ತಡಗಳನ್ನು ನಾವು ಎದುರಿಸುವಾಗ ನಾವೇನು ಮಾಡಸಾಧ್ಯವಿದೆ?
8 ಸ್ಪೆಯ್ನ್ನಲ್ಲಿರುವ ಒಬ್ಬ ಯುವ ಕ್ರೈಸ್ತಳಾದ ಏಲೇನಾಳ ಉದಾಹರಣೆಯನ್ನು ಪರಿಗಣಿಸಿರಿ. ಅವಳ ಅನೇಕ ಸಹಪಾಠಿಗಳು ರಕ್ತದಾನಿಗಳಾಗಿದ್ದರು. ಆದರೆ ಏಲೇನಾಳು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದು ರಕ್ತವನ್ನು ದಾನಮಾಡುವುದಿಲ್ಲ ಮತ್ತು ರಕ್ತಪೂರಣಗಳನ್ನು ಅಂಗೀಕರಿಸುವುದಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ತನ್ನ ಈ ನಿಲುವಿನ ಕುರಿತು ತನ್ನ ಇಡೀ ತರಗತಿಗೆ ವಿವರಿಸುವ ಸದವಕಾಶವು ಏಲೇನಾಳಿಗೆ ದೊರೆತಾಗ, ಅವಳು ಒಂದು ಭಾಷಣವನ್ನು ನೀಡಲು ತಾನಾಗಿಯೇ ಮುಂದೆಬಂದಳು. ಏಲೇನಾ ವಿವರಿಸುವುದು: “ನಿಜ ಹೇಳಬೇಕೆಂದರೆ, ಹೀಗೆ ಮಾಡುವ ವಿಷಯದಲ್ಲಿ ನನಗೆ ತುಂಬ ಹೆದರಿಕೆಯಾಯಿತು. ಆದರೆ ನಾನು ಚೆನ್ನಾಗಿ ತಯಾರಿಮಾಡಿದೆ ಮತ್ತು ಇದರ ಫಲಿತಾಂಶಗಳು ಆಶ್ಚರ್ಯಕರವಾಗಿದ್ದವು. ನಾನು ಅನೇಕ ಸಹಪಾಠಿಗಳ ಗೌರವಕ್ಕೆ ಪಾತ್ರಳಾದೆ ಮತ್ತು ನಾನು ಮಾಡುತ್ತಿರುವ ಕೆಲಸವನ್ನು ಮೆಚ್ಚುತ್ತೇನೆಂದು ನನ್ನ ಶಿಕ್ಷಕನು ನನಗೆ ಹೇಳಿದನು. ಎಲ್ಲಕ್ಕಿಂತಲೂ ಮಿಗಿಲಾಗಿ, ನಾನು ಯೆಹೋವನ ಹೆಸರನ್ನು ಸಮರ್ಥಿಸಿದ್ದೇನೆ ಮತ್ತು ನನ್ನ ಶಾಸ್ತ್ರೀಯ ನಿಲುವಿಗಾಗಿರುವ ಕಾರಣಗಳನ್ನು ಸ್ಪಷ್ಟವಾಗಿ ವಿವರಿಸಲು ಶಕ್ತಳಾಗಿದ್ದೆ ಎಂಬ ಸಂತೃಪ್ತಿ ನನಗಾಯಿತು.” (ಆದಿಕಾಂಡ 9:3, 4; ಅ. ಕೃತ್ಯಗಳು 15:28, 29) ಹೌದು, ದೇವರ ಮತ್ತು ಕ್ರಿಸ್ತನ ದಾಸರಾಗಿರುವ ನಾವು ಇತರರಿಗಿಂತ ಭಿನ್ನರಾಗಿ ಕಂಡುಬರುತ್ತೇವೆ. ಆದರೂ, ನಮ್ಮ ನಂಬಿಕೆಗಳನ್ನು ಗೌರವಭರಿತ ರೀತಿಯಲ್ಲಿ ಸಮರ್ಥಿಸಲು ನಾವು ಸಿದ್ಧರಾಗಿರುವಲ್ಲಿ ನಾವು ಜನರ ಗೌರವಕ್ಕೆ ಪಾತ್ರರಾಗಬಹುದು.—1 ಪೇತ್ರ 3:15.
9 ನಾವು ದೇವರ ದಾಸರಾಗಿದ್ದೇವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು, ನಾವು ದೀನಭಾವದವರಾಗಿ ಇರುವಂತೆಯೂ ಸಹಾಯಮಾಡಸಾಧ್ಯವಿದೆ. ಒಂದು ಸಂದರ್ಭದಲ್ಲಿ ಸ್ವರ್ಗೀಯ ಯೆರೂಸಲೇಮಿನ ಭವ್ಯ ದರ್ಶನದಿಂದ ಅಪೊಸ್ತಲ ಯೋಹಾನನು ಎಷ್ಟು ಪ್ರಭಾವಿತನಾದನೆಂದರೆ, ದೇವರ ಪ್ರತಿನಿಧಿಯಾಗಿ ಕಾರ್ಯನಡಿಸಿದಂಥ ದೇವದೂತನಿಗೆ ನಮಸ್ಕಾರಮಾಡಲಿಕ್ಕಾಗಿ ಅವನ ಪಾದಗಳ ಮುಂದೆ ಅಡ್ಡಬಿದ್ದನು. ಆಗ ದೇವದೂತನು ಅವನಿಗೆ ಹೇಳಿದ್ದು: “ಮಾಡಬೇಡ ನೋಡು; ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಈ ಪುಸ್ತಕದಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವವರಿಗೂ ಜೊತೆಯ ದಾಸನಾಗಿದ್ದೇನೆ; ದೇವರಿಗೇ ನಮಸ್ಕಾರಮಾಡು.” (ಪ್ರಕಟನೆ 22:8, 9) ದೇವರ ದಾಸರೆಲ್ಲರಿಗೆ ಆ ದೇವದೂತನು ಎಷ್ಟು ಅತ್ಯುತ್ತಮವಾದ ಮಾದರಿಯನ್ನಿಟ್ಟನು! ಕೆಲವು ಕ್ರೈಸ್ತರು ಸಭೆಯಲ್ಲಿ ವಿಶೇಷವಾದ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರಬಹುದು. ಆದರೂ ಯೇಸು ಹೇಳಿದ್ದು: “ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು; ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ನಿಮ್ಮ ಆಳಾಗಿರಬೇಕು.” (ಮತ್ತಾಯ 20:26, 27) ಯೇಸುವಿನ ಹಿಂಬಾಲಕರಾಗಿರುವ ನಾವೆಲ್ಲರೂ ಆಳುಗಳು ಅಥವಾ ದಾಸರಾಗಿದ್ದೇವೆ.
ನಾವು “ಮಾಡಬೇಕಾದದ್ದನ್ನೇ ಮಾಡಿದ್ದೇವೆ”
10 ಅಪರಿಪೂರ್ಣ ಮಾನವರಿಗೆ ದೇವರ ಚಿತ್ತವನ್ನು ಮಾಡುವುದು ಯಾವಾಗಲೂ ಸುಲಭವಾದದ್ದಾಗಿರುವುದಿಲ್ಲ. ಯೆಹೋವನು ಪ್ರವಾದಿಯಾದ ಮೋಶೆಗೆ ಐಗುಪ್ತದ ಬಂಧಿವಾಸದಿಂದ ಇಸ್ರಾಯೇಲ್ಯರನ್ನು ಕರೆತರುವಂತೆ ಕೇಳಿಕೊಂಡಾಗ, ಅವನು ಇದಕ್ಕೆ ವಿಧೇಯನಾಗಲು ಹಿಂಜರಿದನು. (ವಿಮೋಚನಕಾಂಡ 3:10, 11; 4:1, 10) ನಿನೆವೆಯ ಜನರಿಗೆ ನ್ಯಾಯತೀರ್ಪಿನ ಸಂದೇಶವನ್ನು ಘೋಷಿಸುವ ನೇಮಕವನ್ನು ಪಡೆದ ಬಳಿಕ ಯೋನನು ‘ಯೆಹೋವನ ಸನ್ನಿಧಿಯಿಂದ ತಪ್ಪಿಸಿಕೊಳ್ಳುವ ಹಾಗೆ ತಾರ್ಷೀಷಿಗೆ ಓಡಿಹೋದನು.’ (ಯೋನ 1:2, 3) ಪ್ರವಾದಿಯಾದ ಯೆರೆಮೀಯನ ಕಾರ್ಯದರ್ಶಿಯಾಗಿದ್ದ ಬಾರೂಕನು ತಾನು ದಣಿದುಹೋಗುತ್ತಾ ಇದ್ದೇನೆಂದು ದೂರಿದನು. (ಯೆರೆಮೀಯ 45:2, 3) ನಮ್ಮ ವೈಯಕ್ತಿಕ ಆಸೆ ಅಥವಾ ಇಷ್ಟವು ದೇವರ ಚಿತ್ತವನ್ನು ಮಾಡುವುದರೊಂದಿಗೆ ಸಂಘರ್ಷಿಸುವಾಗ ನಾವು ಹೇಗೆ ಪ್ರತಿಕ್ರಿಯಿಸಬೇಕು? ಯೇಸು ಕೊಟ್ಟಂಥ ಒಂದು ದೃಷ್ಟಾಂತವು ಇದಕ್ಕೆ ಉತ್ತರವನ್ನು ಕೊಡುತ್ತದೆ.
11 ತನ್ನ ಯಜಮಾನನ ಮಂದೆಯನ್ನು ಇಡೀ ದಿನ ಹೊಲದಲ್ಲಿ ಮೇಯಿಸುತ್ತಿದ್ದಂಥ ಒಬ್ಬ ಆಳಿನ ಕುರಿತು ಯೇಸು ಮಾತಾಡಿದನು. ಆ ಆಳು ಸುಮಾರು 12 ತಾಸುಗಳ ವರೆಗೆ ಕಷ್ಟಪಟ್ಟು ದುಡಿದು ಬಳಲಿ ಹೊಲದಿಂದ ಮನೆಗೆ ಬಂದಾಗ, ಅವನ ಯಜಮಾನನು ಅವನಿಗೆ ಕುಳಿತುಕೊಂಡು ರಾತ್ರಿಯೂಟವನ್ನು ಆಸ್ವಾದಿಸುವಂತೆ ಆಮಂತ್ರಿಸಲಿಲ್ಲ. ಅದಕ್ಕೆ ಬದಲಾಗಿ ಆ ಯಜಮಾನನು ಹೇಳಿದ್ದು: “ನೀನು ನನ್ನ ಊಟಕ್ಕೇನಾದರೂ ಸಿದ್ಧಮಾಡು, ನಾನು ಊಟಮಾಡಿ ಕುಡಿಯುವ ತನಕ ನಡುಕಟ್ಟಿಕೊಂಡು ನನಗೆ ಸೇವೆಮಾಡು; ಆ ಮೇಲೆ ನೀನು ಊಟಮಾಡಿ ಕುಡಿ.” ಆ ಆಳು ತನ್ನ ಯಜಮಾನನ ಆವಶ್ಯಕತೆಗಳನ್ನು ಪೂರೈಸಿದ ಬಳಿಕವೇ ತನ್ನ ಆವಶ್ಯಕತೆಗಳನ್ನು ನೋಡಿಕೊಳ್ಳಸಾಧ್ಯವಿತ್ತು. ಯೇಸು ಹೀಗೆ ಹೇಳುವ ಮೂಲಕ ಆ ದೃಷ್ಟಾಂತವನ್ನು ಕೊನೆಗೊಳಿಸಿದನು: “ಇದರಂತೆಯೇ ನಿಮ್ಮ ಸಂಗತಿ. ನೀವು ನಿಮಗೆ ಅಪ್ಪಣೆಯಾಗಿರುವದನ್ನೆಲ್ಲಾ ಮಾಡಿದ ಮೇಲೆ—ನಾವು ಆಳುಗಳು, ಪ್ರಯೋಜನವಿಲ್ಲದವರು, ಮಾಡಬೇಕಾದದ್ದನ್ನೇ ಮಾಡಿದ್ದೇವೆ ಅನ್ನಿರಿ.”—ಲೂಕ 17:7-10.
12 ಯೆಹೋವನ ಸೇವೆಯಲ್ಲಿ ನಾವು ಏನು ಮಾಡುತ್ತೇವೋ ಅದನ್ನು ಆತನು ಗಣ್ಯಮಾಡುವುದಿಲ್ಲ ಎಂಬುದನ್ನು ತೋರಿಸಲಿಕ್ಕಾಗಿ ಯೇಸು ಈ ದೃಷ್ಟಾಂತವನ್ನು ಕೊಡಲಿಲ್ಲ. ಬೈಬಲ್ ಸ್ಪಷ್ಟವಾಗಿ ತಿಳಿಸುವುದು: ‘ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನು ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.’ (ಇಬ್ರಿಯ 6:10) ಹೀಗಿರುವುದರಿಂದ, ಯೇಸುವಿನ ಸಾಮ್ಯದಿಂದ, ಒಬ್ಬ ದಾಸನು ಸ್ವತಃ ತನ್ನನ್ನು ಮೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ ಅಥವಾ ತನ್ನ ಸ್ವಂತ ಸುಖದ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಿಲ್ಲ ಎಂಬ ಪಾಠವನ್ನು ನಾವು ಕಲಿಯುತ್ತೇವೆ. ನಾವು ದೇವರಿಗೆ ನಮ್ಮನ್ನು ಸಮರ್ಪಿಸಿಕೊಂಡು, ಆತನ ದಾಸರಾಗುವ ಆಯ್ಕೆಯನ್ನು ಮಾಡಿದಾಗ, ನಮ್ಮ ಚಿತ್ತಕ್ಕಿಂತಲೂ ಹೆಚ್ಚಾಗಿ ಆತನ ಚಿತ್ತಕ್ಕೆ ಪ್ರಥಮ ಸ್ಥಾನವನ್ನು ಕೊಡಲು ಸಮ್ಮತಿಸಿದೆವು. ಆದುದರಿಂದ ನಾವು ನಮ್ಮ ಸ್ವಂತ ಚಿತ್ತಕ್ಕಿಂತಲೂ ದೇವರ ಚಿತ್ತಕ್ಕೆ ಪ್ರಥಮ ಸ್ಥಾನವನ್ನು ಕೊಡಬೇಕು.
13 ದೇವರ ವಾಕ್ಯವನ್ನು ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಪ್ರಕಾಶನಗಳನ್ನು ಕ್ರಮವಾಗಿ ಅಧ್ಯಯನಮಾಡುವುದು, ನಮ್ಮಿಂದ ಭಾರೀ ಪ್ರಯತ್ನವನ್ನು ಅಗತ್ಯಪಡಿಸಬಹುದು. (ಮತ್ತಾಯ 24:45) ವಿಶೇಷವಾಗಿ ಓದುವುದು ನಮಗೆ ಯಾವಾಗಲೂ ಕಷ್ಟಕರವಾದ ಸಂಗತಿಯಾಗಿರುವುದಾದರೆ ಅಥವಾ ಒಂದು ಪ್ರಕಾಶನವು “ದೇವರ ಅಗಾಧವಾದ ವಿಷಯಗಳನ್ನು” ಚರ್ಚಿಸುತ್ತಿರುವುದಾದರೆ ಸನ್ನಿವೇಶವು ಹೀಗಿರಬಹುದು. (1 ಕೊರಿಂಥ 2:10) ಆದರೂ, ವೈಯಕ್ತಿಕ ಅಧ್ಯಯನಕ್ಕಾಗಿ ನಾವು ಸಮಯವನ್ನು ಮಾಡಿಕೊಳ್ಳಬೇಕಲ್ಲವೊ? ಒಂದು ಕಡೆ ಕುಳಿತುಕೊಂಡು ಅಧ್ಯಯನದ ವಿಷಯವನ್ನು ಅವಸರಪಡದೇ ಅವಲೋಕಿಸುವಂತೆ ನಾವು ನಮ್ಮನ್ನು ಶಿಸ್ತುಪಡಿಸಿಕೊಳ್ಳಬೇಕಾಗಿರಬಹುದು. ನಾವು ಈ ರೀತಿ ಮಾಡದಿದ್ದರೆ ‘ಪ್ರಾಯಸ್ಥರಿಗೋಸ್ಕರವಾಗಿರುವ ಗಟ್ಟಿಯಾದ ಆಹಾರಕ್ಕಾಗಿ’ ಹೇಗೆ ತಾನೇ ರುಚಿಯನ್ನು ಬೆಳೆಸಿಕೊಳ್ಳಸಾಧ್ಯವಿದೆ?—ಇಬ್ರಿಯ 5:14.
14 ಬೆಳಗ್ಗಿನಿಂದ ಸಂಜೆಯ ತನಕ ಕೆಲಸಮಾಡಿ ದಣಿದು ಮನೆಗೆ ಹಿಂದಿರುಗುವಂಥ ಸಮಯಗಳ ಕುರಿತಾಗಿ ಏನು? ನಾವು ಕ್ರೈಸ್ತ ಕೂಟಗಳಿಗೆ ಹಾಜರಾಗಲಿಕ್ಕಾಗಿ ಬಹಳಷ್ಟು ಪರಿಶ್ರಮಿಸಬೇಕಾಗಿರಬಹುದು. ಅಥವಾ ಅಪರಿಚಿತರಿಗೆ ಸಾರುವುದು ನಮ್ಮ ಸಹಜ ಪ್ರವೃತ್ತಿಗೆ ವಿರುದ್ಧವಾದದ್ದಾಗಿರಬಹುದು. ಕೆಲವೊಮ್ಮೆ ನಾವು ಸುವಾರ್ತೆಯನ್ನು ‘ನಮ್ಮ ಇಷ್ಟಕ್ಕೆ ವಿರುದ್ಧವಾಗಿ’ ಘೋಷಿಸುವ ಸಮಯಗಳೂ ಇರಸಾಧ್ಯವಿದೆ ಎಂಬುದನ್ನು ಸ್ವತಃ ಪೌಲನು ಮನಗಂಡನು. (1 ಕೊರಿಂಥ 9:17, NW) ಆದರೂ, ನಾವು ಪ್ರೀತಿಸುವಂಥ ನಮ್ಮ ಸ್ವರ್ಗೀಯ ಯಜಮಾನನಾಗಿರುವ ಯೆಹೋವನು ಈ ವಿಷಯಗಳನ್ನು ಮಾಡಬೇಕೆಂದು ಹೇಳಿರುವುದರಿಂದಲೇ ನಾವು ಹಾಗೆ ಮಾಡುತ್ತೇವೆ. ಅಧ್ಯಯನಮಾಡಲು, ಕೂಟಗಳಿಗೆ ಹಾಜರಾಗಲು ಹಾಗೂ ಸಾರಲು ನಾವು ಪ್ರಯತ್ನವನ್ನು ಮಾಡಿದ ಬಳಿಕ ನಮಗೆ ಯಾವಾಗಲೂ ಸಂತೃಪ್ತಿ ಹಾಗೂ ಚೈತನ್ಯದ ಅನಿಸಿಕೆಯಾಗುತ್ತದಲ್ಲವೇ?—ಕೀರ್ತನೆ 1:1, 2; 122:1; 145:10-13.
“ಹಿಂದಕ್ಕೆ” ನೋಡಬೇಡಿರಿ
15 ಯೇಸು ಕ್ರಿಸ್ತನು ತನ್ನ ಸ್ವರ್ಗೀಯ ತಂದೆಗೆ ತನ್ನ ಅಧೀನತೆಯನ್ನು ಸರ್ವೋತ್ಕೃಷ್ಟವಾದ ವಿಧದಲ್ಲಿ ತೋರಿಸಿದನು. “ನನ್ನ ಚಿತ್ತದಂತೆ ನಡೆಯುವದಕ್ಕಾಗಿ ನಾನು ಬಂದಿಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವದಕ್ಕೆ ಪರಲೋಕದಿಂದ ಬಂದೆನು” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಯೋಹಾನ 6:38) ಗೆತ್ಸೇಮನೆ ತೋಟದಲ್ಲಿ ಬೇಗುದಿಯನ್ನು ಅನುಭವಿಸುತ್ತಿದ್ದಾಗ ಅವನು ಪ್ರಾರ್ಥಿಸಿದ್ದು: “ನನ್ನ ತಂದೆಯೇ, ಸಾಧ್ಯವಾಗಿದ್ದರೆ ಈ ಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಹೇಗೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ.”—ಮತ್ತಾಯ 26:39.
16 ದೇವರಿಗೆ ದಾಸರಾಗಿರಲು ನಾವು ಮಾಡಿದ ನಿರ್ಧಾರಕ್ಕೆ ನಂಬಿಗಸ್ತರಾಗಿ ಉಳಿಯುವಂತೆ ಯೇಸು ಕ್ರಿಸ್ತನು ಬಯಸುತ್ತಾನೆ. ಅವನಂದದ್ದು: “ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನು ಹಾಕಿ ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲ.” (ಲೂಕ 9:62) ದೇವರಿಗೆ ದಾಸರಾಗಿ ಸೇವೆಸಲ್ಲಿಸುತ್ತಿರುವಾಗ, ನಾವು ಏನನ್ನು ಹಿಂದೆ ಬಿಟ್ಟುಬಂದಿದ್ದೇವೋ ಅದರ ಕುರಿತು ಆಲೋಚಿಸುತ್ತಿರುವುದು ನಿಶ್ಚಯವಾಗಿಯೂ ಯೋಗ್ಯವಾದ ಸಂಗತಿಯಲ್ಲ. ಅದಕ್ಕೆ ಬದಲಾಗಿ, ದೇವರ ದಾಸರಾಗುವ ಆಯ್ಕೆಯನ್ನು ಮಾಡುವ ಮೂಲಕ ನಾವು ಏನನ್ನು ಪಡೆದುಕೊಂಡಿದ್ದೇವೋ ಅದನ್ನು ಅಮೂಲ್ಯವಾಗಿ ಪರಿಗಣಿಸಬೇಕು. ಫಿಲಿಪ್ಪಿಯವರಿಗೆ ಪೌಲನು ಬರೆದುದು: “ನನ್ನ ಕರ್ತನಾದ ಕ್ರಿಸ್ತ ಯೇಸುವನ್ನರಿಯುವದೇ ಅತಿಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.”—ಫಿಲಿಪ್ಪಿ 3:8.
17 ದೇವರ ದಾಸನಾಗಿ ಪಡೆಯುವ ಆಧ್ಯಾತ್ಮಿಕ ಪ್ರತಿಫಲಗಳಿಗೋಸ್ಕರ ಪೌಲನು ಕಸವೆಂದು ಪರಿಗಣಿಸಿ ತೊರೆದಂಥ ಎಲ್ಲಾ ವಿಷಯಗಳ ಕುರಿತು ಸ್ವಲ್ಪ ಆಲೋಚಿಸಿರಿ. ಅವನು ಲೋಕದ ಸುಖಭೋಗಗಳನ್ನು ತೊರೆದನು ಮಾತ್ರವಲ್ಲ, ಯೆಹೂದಿಮತದ ಭಾವೀ ನಾಯಕನಾಗುವ ಸಾಧ್ಯತೆಯನ್ನು ಸಹ ಪರಿತ್ಯಜಿಸಿದನು. ಒಂದುವೇಳೆ ಪೌಲನು ಯೆಹೂದಿಮತವನ್ನೇ ಆಚರಿಸುತ್ತಾ ಮುಂದುವರಿಯುತ್ತಿದ್ದಲ್ಲಿ, ಅವನ ಶಿಕ್ಷಕನಾಗಿದ್ದ ಗಮಲಿಯೇಲನ ಮಗನಾದ ಸಿಮೆಯೋನನಂಥದ್ದೇ ಸ್ಥಾನದಲ್ಲಿ ಅವನಿದ್ದಿರಸಾಧ್ಯವಿತ್ತು. (ಅ. ಕೃತ್ಯಗಳು 22:3; ಗಲಾತ್ಯ 1:14) ಸಿಮೆಯೋನನು ಫರಿಸಾಯರ ಮುಖಂಡನಾದನು ಮತ್ತು ಅವನಿಗೆ ಕೆಲವು ಶಂಕೆಗಳಿದ್ದವಾದರೂ ಅವನು ಸಾ.ಶ. 66-70ರಲ್ಲಿ ರೋಮ್ನ ವಿರುದ್ಧ ನಡೆದ ಯೆಹೂದಿ ದಂಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದನು. ಆ ಹೋರಾಟದಲ್ಲಿ ಅವನು ಯೆಹೂದಿ ಉಗ್ರವಾದಿಗಳಿಂದ ಅಥವಾ ರೋಮನ್ ಸೈನಿಕರಿಂದ ಹತನಾದನು.
18 ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಪೌಲನ ಮಾದರಿಯನ್ನು ಅನುಸರಿಸಿದ್ದಾರೆ. ಜೀನ್ ಹೇಳುವುದು: “ಶಾಲೆಯನ್ನು ಬಿಟ್ಟು ಕೆಲವೇ ವರ್ಷಗಳು ಕಳೆಯುವುದರೊಳಗೆ, ಲಂಡನ್ನ ಅಗ್ರಗಣ್ಯ ಸಲಹೆ ವಕೀಲನೊಬ್ಬನ ಬಳಿ ನನಗೆ ಎಕ್ಸೆಕ್ಯುಟಿವ್ ಕಾರ್ಯದರ್ಶಿಯ ಕೆಲಸ ಸಿಕ್ಕಿತು. ನನಗೆ ಆ ಕೆಲಸ ತುಂಬ ಹಿಡಿಸಿತು ಮತ್ತು ಕೈತುಂಬ ಹಣವನ್ನು ಸಂಪಾದಿಸುತ್ತಿದ್ದೆ, ಆದರೆ ಆಂತರ್ಯದಲ್ಲಿ ಮಾತ್ರ ಯೆಹೋವನ ಸೇವೆಯಲ್ಲಿ ನಾನು ಹೆಚ್ಚನ್ನು ಮಾಡಸಾಧ್ಯವಿದೆ ಎಂದು ನನಗೆ ಅನಿಸುತ್ತಿತ್ತು. ಕೊನೆಗೂ, ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟು ಪಯನೀಯರ್ ಸೇವೆಯನ್ನು ಆರಂಭಿಸಿದೆ. ಸುಮಾರು 20 ವರ್ಷಗಳ ಹಿಂದೆ ನಾನು ಆ ಹೆಜ್ಜೆಯನ್ನು ತೆಗೆದುಕೊಂಡದ್ದಕ್ಕಾಗಿ ನಾನು ತುಂಬ ಸಂತೋಷಿತಳಾಗಿದ್ದೇನೆ! ಕಾರ್ಯದರ್ಶಿಯ ಯಾವುದೇ ಹುದ್ದೆಗಿಂತಲೂ ನನ್ನ ಪೂರ್ಣ ಸಮಯದ ಸೇವೆಯು ನನ್ನ ಜೀವನವನ್ನು ಸಂಪದ್ಭರಿತವನ್ನಾಗಿ ಮಾಡಿದೆ. ಯೆಹೋವನ ವಾಕ್ಯವು ಯಾವ ರೀತಿಯಲ್ಲಿ ಒಬ್ಬ ವ್ಯಕ್ತಿಯ ಜೀವನವನ್ನು ಬದಲಾಯಿಸಬಲ್ಲದು ಎಂಬುದನ್ನು ನೋಡುವುದಕ್ಕಿಂತ ಹೆಚ್ಚಿನ ಸಂತೃಪ್ತಿಯನ್ನು ಬೇರೆ ಯಾವುದೂ ನೀಡಲಾರದು. ಈ ಕಾರ್ಯಗತಿಯಲ್ಲಿ ಒಂದು ಪಾತ್ರವನ್ನು ಹೊಂದುವುದು ಅಪೂರ್ವ ಅನುಭವವಾಗಿದೆ. ನಾವು ಯೆಹೋವನಿಂದ ಏನನ್ನು ಪಡೆದುಕೊಳ್ಳುತ್ತೇವೋ ಅದಕ್ಕೆ ಹೋಲಿಸುವಾಗ ನಾವು ಆತನಿಗೆ ಏನು ಕೊಡುತ್ತೇವೋ ಅದು ಏನೂ ಅಲ್ಲ.”
19 ಕಾಲಕ್ಕೆ ತಕ್ಕಂತೆ ನಮ್ಮ ಸನ್ನಿವೇಶಗಳೂ ಬದಲಾಗಬಹುದು. ಆದರೆ, ನಾವು ದೇವರಿಗೆ ಮಾಡಿರುವ ನಮ್ಮ ಸಮರ್ಪಣೆಯು ಮಾತ್ರ ಹಾಗೆಯೇ ಉಳಿಯುತ್ತದೆ. ನಾವಿನ್ನೂ ಯೆಹೋವನ ದಾಸರಾಗಿಯೇ ಇರುತ್ತೇವೆ, ಮತ್ತು ಆತನು ನಾವು ನಮ್ಮ ಸಮಯ, ಶಕ್ತಿ, ಪ್ರತಿಭೆಗಳು ಮತ್ತು ಇತರ ಸೊತ್ತುಗಳನ್ನು ಹೇಗೆ ಅತ್ಯುತ್ತಮವಾದ ರೀತಿಯಲ್ಲಿ ಉಪಯೋಗಿಸಸಾಧ್ಯವಿದೆ ಎಂಬುದನ್ನು ನಿರ್ಧರಿಸುವುದನ್ನು ನಮ್ಮ ಪಾಲಿಗೆ ಬಿಟ್ಟಿದ್ದಾನೆ. ಆದುದರಿಂದ, ಈ ವಿಷಯದಲ್ಲಿ ನಾವು ಮಾಡುವ ನಿರ್ಧಾರಗಳು, ದೇವರಿಗಾಗಿರುವ ನಮ್ಮ ಪ್ರೀತಿಯನ್ನು ಪ್ರತಿಬಿಂಬಿಸಬಲ್ಲವು. ಅವು, ಎಷ್ಟರ ಮಟ್ಟಿಗೆ ನಾವು ವೈಯಕ್ತಿಕ ತ್ಯಾಗಗಳನ್ನು ಮಾಡಲು ಸಿದ್ಧರಾಗಿದ್ದೇವೆ ಎಂಬುದನ್ನೂ ತೋರಿಸುತ್ತವೆ. (ಮತ್ತಾಯ 6:33) ನಮ್ಮ ಸನ್ನಿವೇಶಗಳು ಏನೇ ಆಗಿರಲಿ, ಯೆಹೋವನಿಗೆ ನಮ್ಮಿಂದಾದಷ್ಟು ಅತ್ಯುತ್ತಮವಾದದ್ದನ್ನು ಕೊಡುವ ದೃಢನಿರ್ಧಾರವನ್ನು ನಾವು ಮಾಡಬೇಕಲ್ಲವೊ? ಪೌಲನು ಬರೆದುದು: “ಒಬ್ಬನು ಕೊಡುವದಕ್ಕೆ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನಲ್ಲಿ ಇರುವದಕ್ಕೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವದು; ಅವನಿಗೆ ಇಲ್ಲದ್ದನ್ನು ದೇವರು ಕೇಳಿಕೊಳ್ಳುವದಿಲ್ಲ.”—2 ಕೊರಿಂಥ 8:12.
‘ನಿಮ್ಮ ಫಲವನ್ನು’ ಹೊಂದುವುದು
20 ದೇವರಿಗೆ ದಾಸರಾಗಿರುವುದು ಹೊರೆದಾಯಕವಾದದ್ದೇನಲ್ಲ. ಅದಕ್ಕೆ ಬದಲಾಗಿ, ಇದು ನಮ್ಮಿಂದ ಸಂತೋಷವನ್ನು ಕಸಿದುಕೊಳ್ಳುವಂಥ ದಬ್ಬಾಳಿಕೆಭರಿತ ದಾಸತ್ವದಿಂದ ನಮಗೆ ವಿಮುಕ್ತಿಯನ್ನು ನೀಡುತ್ತದೆ. ಪೌಲನು ಬರೆದುದು: “ಈಗಲಾದರೋ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ದೇವರಿಗೆ ದಾಸರಾದದರಿಂದ ಪರಿಶುದ್ಧರಾಗುವದೇ [“ಪರಿಶುದ್ಧತ್ವವೇ,” NW] ನಿಮಗೆ ಫಲ; ಕಡೆಗೆ ದೊರೆಯುವಂಥದು ನಿತ್ಯಜೀವ.” (ರೋಮಾಪುರ 6:22) ನಾವು ದೇವರಿಗೆ ದಾಸರಾಗಿರುವುದು ಪರಿಶುದ್ಧತ್ವದಲ್ಲಿ ಫಲಿಸುತ್ತದೆ, ಅಂದರೆ ನಾವು ಪರಿಶುದ್ಧವಾದ ಅಥವಾ ನೈತಿಕವಾಗಿ ಶುದ್ಧವಾದ ನಡತೆಯಿಂದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೇವೆ. ಅಷ್ಟುಮಾತ್ರವಲ್ಲ, ಅದು ಭವಿಷ್ಯದಲ್ಲಿ ನಿತ್ಯಜೀವಕ್ಕೂ ನಡಿಸುತ್ತದೆ.
21 ಯೆಹೋವನು ತನ್ನ ದಾಸರ ವಿಷಯದಲ್ಲಿ ಉದಾರಿಯಾಗಿದ್ದಾನೆ. ಆತನ ಸೇವೆಯಲ್ಲಿ ನಮ್ಮಿಂದಾದಷ್ಟು ಸರ್ವೋತ್ತಮ ಪ್ರಯತ್ನವನ್ನು ಮಾಡುವಾಗ, ಆತನು “ಪರಲೋಕದ ದ್ವಾರಗಳನ್ನು ತೆರೆದು” ನಮ್ಮ ಮೇಲೆ “ಸ್ಥಳಹಿಡಿಯಲಾಗದಷ್ಟು ಸುವರವನ್ನು” ಸುರಿಸುತ್ತಾನೆ. (ಮಲಾಕಿಯ 3:10) ಯುಗಯುಗಾಂತರಕ್ಕೂ ಯೆಹೋವನ ದಾಸರಾಗಿ ಸೇವೆಮಾಡುತ್ತಾ ಮುಂದುವರಿಯುವುದು ಎಷ್ಟು ಆನಂದಮಯವಾಗಿರುವುದು!
ನೀವು ನೆನಪಿಸಿಕೊಳ್ಳಬಲ್ಲಿರೊ?
• ನಾವು ಏಕೆ ದೇವರ ದಾಸರಾಗುತ್ತೇವೆ?
• ದೇವರ ಚಿತ್ತಕ್ಕೆ ನಮ್ಮ ಅಧೀನತೆಯನ್ನು ನಾವು ಹೇಗೆ ತೋರಿಸಿಕೊಡುತ್ತೇವೆ?
• ನಮ್ಮ ಚಿತ್ತಕ್ಕಿಂತಲೂ ಹೆಚ್ಚಾಗಿ ಯೆಹೋವನ ಚಿತ್ತಕ್ಕೆ ಆದ್ಯತೆ ನೀಡಲು ನಾವು ಏಕೆ ಸಿದ್ಧರಾಗಿರಬೇಕು?
• ‘ಹಿಂದೆ’ ಬಿಟ್ಟುಬಂದಿರುವ ವಿಷಯಗಳ ಕಡೆಗೆ ನಾವೇಕೆ ನೋಡಬಾರದು?
[ಅಧ್ಯಯನ ಪ್ರಶ್ನೆಗಳು]
1, 2. (ಎ) ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಇಸ್ರಾಯೇಲ್ಯ ದಾಸರನ್ನು ಹೇಗೆ ಉಪಚರಿಸಬೇಕಾಗಿತ್ತು? (ಬಿ) ತನ್ನ ಯಜಮಾನನನ್ನು ಪ್ರೀತಿಸುವಂಥ ದಾಸನಿಗೆ ಯಾವ ಆಯ್ಕೆ ಇತ್ತು?
3. (ಎ) ಪ್ರಥಮ ಶತಮಾನದ ಕ್ರೈಸ್ತರು ಯಾವ ರೀತಿಯ ದಾಸತ್ವವನ್ನು ಅಂಗೀಕರಿಸಿದರು? (ಬಿ) ದೇವರ ಸೇವೆಮಾಡುವಂತೆ ಯಾವುದು ನಮ್ಮನ್ನು ಪ್ರಚೋದಿಸುತ್ತದೆ?
4. ನಾವು ಹೇಗೆ ದೇವರಿಗೂ ಕ್ರಿಸ್ತನಿಗೂ ದಾಸರಾಗುತ್ತೇವೆ?
5. ದೇವರ ದಾಸರಾಗಿರುವ ನಾವು ಯಾವ ಪ್ರಮುಖ ಹಂಗಿಗೆ ಒಳಪಟ್ಟಿದ್ದೇವೆ, ಮತ್ತು ನಾವಿದನ್ನು ಹೇಗೆ ಪೂರೈಸಸಾಧ್ಯವಿದೆ?
6. ದೇವರ ದಾಸರಾಗಿರುವುದು ನಾವು ಜೀವನದಲ್ಲಿ ಮಾಡುವ ನಿರ್ಣಯಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಇದನ್ನು ಒಂದು ಉದಾಹರಣೆಯೊಂದಿಗೆ ದೃಷ್ಟಾಂತಿಸಿರಿ.
7, 8. (ಎ) ಮನುಷ್ಯರನ್ನು ಮೆಚ್ಚಿಸುವುದರ ಬಗ್ಗೆ ನಾವು ಅತಿಯಾಗಿ ಚಿಂತಿತರಾಗಿರಬಾರದೇಕೆ? (ಬಿ) ಮನುಷ್ಯರ ಭಯವನ್ನು ಹೇಗೆ ಜಯಿಸಸಾಧ್ಯವಿದೆ ಎಂಬುದನ್ನು ದೃಷ್ಟಾಂತಿಸಿರಿ.
9. ಅಪೊಸ್ತಲ ಯೋಹಾನನಿಗೆ ಕಾಣಿಸಿಕೊಂಡ ದೇವದೂತನಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?
10. ದೇವರ ನಂಬಿಗಸ್ತ ಸೇವಕರು ಆತನ ಚಿತ್ತವನ್ನು ಮಾಡುವುದನ್ನು ಯಾವಾಗಲೂ ಸುಲಭವಾದದ್ದಾಗಿ ಕಂಡುಕೊಳ್ಳಲಿಲ್ಲ ಎಂಬುದನ್ನು ತೋರಿಸಲಿಕ್ಕಾಗಿ ಶಾಸ್ತ್ರೀಯ ಉದಾಹರಣೆಗಳನ್ನು ಕೊಡಿರಿ.
11, 12. (ಎ) ಲೂಕ 17:7-10ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ದೃಷ್ಟಾಂತವನ್ನು ಚುಟುಕಾಗಿ ತಿಳಿಸಿರಿ. (ಬಿ) ಯೇಸುವಿನ ದೃಷ್ಟಾಂತದಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?
13, 14. (ಎ) ಯಾವ ಸನ್ನಿವೇಶಗಳ ಕೆಳಗೆ ನಾವು ನಮ್ಮ ಸ್ವಂತ ಪ್ರವೃತ್ತಿಗಳನ್ನು ಜಯಿಸಬೇಕಾಗಿರಬಹುದು? (ಬಿ) ದೇವರ ಚಿತ್ತವು ಮೇಲುಗೈ ಪಡೆಯುವಂತೆ ನಾವೇಕೆ ಅನುಮತಿಸಬೇಕು?
15. ದೇವರಿಗೆ ಅಧೀನತೆಯನ್ನು ತೋರಿಸುವ ವಿಷಯದಲ್ಲಿ ಯೇಸು ಹೇಗೆ ಒಂದು ಮಾದರಿಯನ್ನಿಟ್ಟನು?
16, 17. (ಎ) ನಾವು ಬಿಟ್ಟುಬಂದಿರುವಂಥ ವಿಷಯಗಳ ಕುರಿತು ನಮಗೆ ಯಾವ ನೋಟವಿರಬೇಕು? (ಬಿ) ತನ್ನ ಲೌಕಿಕ ಪ್ರತೀಕ್ಷೆಗಳನ್ನು “ಕಸ”ವಾಗಿ ಪರಿಗಣಿಸುವುದರಲ್ಲಿ ಪೌಲನು ಹೇಗೆ ವಾಸ್ತವಿಕ ನೋಟವುಳ್ಳವನಾಗಿದ್ದನು ಎಂಬುದನ್ನು ತೋರಿಸಿರಿ.
18. ಆಧ್ಯಾತ್ಮಿಕ ಸಾಧನೆಗಳು ಹೇಗೆ ಪ್ರತಿಫಲವನ್ನು ತರುತ್ತವೆ ಎಂಬುದನ್ನು ತೋರಿಸಲು ಒಂದು ಉದಾಹರಣೆಯನ್ನು ಕೊಡಿ.
19. ನಮ್ಮ ನಿರ್ಧಾರ ಏನಾಗಿರಬೇಕು, ಮತ್ತು ಏಕೆ?
20, 21. (ಎ) ದೇವರ ದಾಸರಿಂದ ಯಾವ ಫಲವು ಉಂಟುಮಾಡಲ್ಪಡುವುದು? (ಬಿ) ತಮ್ಮಿಂದಾದಷ್ಟು ಸರ್ವೋತ್ತಮ ರೀತಿಯಲ್ಲಿ ಕಾರ್ಯನಡಿಸುವವರಿಗೆ ಯೆಹೋವನು ಹೇಗೆ ಪ್ರತಿಫಲ ನೀಡುವನು?
[ಪುಟ 16, 17ರಲ್ಲಿರುವ ಚಿತ್ರ]
ಇಸ್ರಾಯೇಲಿನಲ್ಲಿ ಸ್ವಯಂಪ್ರೇರಿತ ದಾಸತ್ವದ ಒದಗಿಸುವಿಕೆಯು ಕ್ರೈಸ್ತ ದಾಸತ್ವದ ಒಂದು ಮುನ್ನೋಟವಾಗಿತ್ತು
[ಪುಟ 17ರಲ್ಲಿರುವ ಚಿತ್ರ]
ನಾವು ದೀಕ್ಷಾಸ್ನಾನವನ್ನು ಪಡೆದುಕೊಳ್ಳುವಾಗ ದೇವರ ದಾಸರಾಗಿ ಪರಿಣಮಿಸುತ್ತೇವೆ
[ಪುಟ 17ರಲ್ಲಿರುವ ಚಿತ್ರಗಳು]
ಕ್ರೈಸ್ತರು ದೇವರ ಚಿತ್ತಕ್ಕೆ ಪ್ರಥಮ ಸ್ಥಾನವನ್ನು ಕೊಡುತ್ತಾರೆ
[ಪುಟ 18ರಲ್ಲಿರುವ ಚಿತ್ರ]
ಮೋಶೆಯು ತನ್ನ ನೇಮಕವನ್ನು ಸ್ವೀಕರಿಸಲು ಹಿಂಜರಿದನು