ಕ್ರೀಡೆಗಳಿಗಿರುವ ಸ್ಥಾನ
ಮಹಾ ನಿರ್ಮಾಣಿಕನನ್ನು ಬೈಬಲಿನಲ್ಲಿ “ಸಂತೋಷವುಳ್ಳ ದೇವರು” ಎಂದು ಕರೆಯಲಾಗಿದೆ, ಮತ್ತು ತನ್ನ ಸೃಷ್ಟಿಜೀವಿಗಳು ಸಂತೋಷವುಳ್ಳವರಾಗಿರಬೇಕೆಂಬುದು ಆತನ ಅಪೇಕ್ಷೆ. (1 ತಿಮೊಥಿ 1:11, NW) ಹಾಗಾದರೆ ಆಟದಲ್ಲಿ ಆನಂದಿಸುವಂತೆ ಆತನು ಮಾನವರನ್ನು ಸೃಷ್ಟಿಸಿ
ರುವುದು ನಮಗೆ ಸೋಜಿಗದ ವಿಷಯವಾಗಬಾರದು. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ವರದಿ ಮಾಡುವುದು: “ಕ್ರೀಡೆ ಮತ್ತು ಆಟಗಳ ಇತಿಹಾಸ ಮಾನವ ಇತಿಹಾಸದ ಒಂದು ಭಾಗವಾಗಿದೆ.”
ಚೆಂಡಿನ ತೋರಿಬರುವಿಕೆಯು, ಆಟಗಳ ಇತಿಹಾಸದಲ್ಲಿ ಅತ್ಯಂತ ಗಮನಾರ್ಹವಾದ ಸಂಗತಿಯೆಂದು ಹೇಳಲಾಗಿದೆ. “ಪ್ರಾಣಿಗಳು ಆಟದ ಸಾಮಾನುಗಳೊಂದಿಗೆ ನೆಗೆದಾಟುತ್ತವೆಯೆಂಬ ಅವಲೋಕನವು, ಒಂದು ಚೆಂಡಿನ ಬದಲಿಯನ್ನು ಓಡಿಸದೆ ಯಾ ಎಸೆಯದೆ ಇದ್ದ ಸಮಯವೇ ಇದ್ದಿರಲಿಕ್ಕಿಲ್ಲ ಎಂದು ಸೂಚಿಸುತ್ತದೆ,” ಎನ್ನುತ್ತದೆ ಮೇಲೆ ಉಲ್ಲೇಖಿಸಿದ ವಿಶ್ವಕೋಶ.
ರಸಕರವಾಗಿ, ಚೆಂಡನ್ನು ಹೊಡೆಯಲು ದಾಂಡನ್ನು ಸಹ ದೀರ್ಘಕಾಲದಿಂದ ಉಪಯೋಗಿಸಲಾಗಿದೆ. “ಪರ್ಶಿಯನರು, ಗ್ರೀಕರು, ಮತ್ತು ಅಮೆರಿಕನ್ ಇಂಡಿಯನರು ಆಡುತ್ತಿದ್ದ ಕೋಲಾಟಗಳು ನಿಶ್ಚಯವಾಗಿಯೂ ಇದ್ದವು,” ಎಂದು ಗಮನಿಸುತ್ತಾ ಬ್ರಿಟ್ಯಾನಿಕ ಹೇಳುವುದು: “ಟಿಬೆಟನ್ ಮೂಲದಿಂದ ಬಂದ ಪದವಾದ ಪೋಲೊ, ಪರ್ಶಿಯನರಿಗೆ Iನೆಯ ಡೆರಾಯಸ್ (ಆಳಿಕೆ ಕ್ರಿಪೂ. 522-486)ನ ಕಾಲದಲ್ಲಿ ಯಾವುದೋ ರೂಪದಲ್ಲಿ ಪರಿಚಿತವಾಗಿತ್ತು. ಗಾಲ್ಫ್ ಆಟದ ಆಧುನಿಕ ರೂಪವನ್ನು ಸ್ಕಾಟ್ಲೆಂಡ್ ತಾನೇ ಆರಂಭಿಸಿತೆಂದು ಹೇಳುವುದಾದರೂ ರೋಮನ್ ಕಾಲಗಳಲ್ಲಿ ಮತ್ತು ಅನೇಕ ಯೂರೋಪಿಯನ್ ದೇಶಗಳಲ್ಲಿ ಅದಕ್ಕೆ ಸನ್ಮಾನ್ಯವಾದ ಪೂರ್ವಭಾವಿತ್ವ ಇತ್ತು.”
ಆಟಗಳಿಗೆ ಆದಿ ಪ್ರಾಧಾನ್ಯ
ಹೀಬ್ರು ಶಾಸ್ತ್ರಗಳು (“ಹಳೆಯ ಒಡಂಬಡಿಕೆ”) ಬರೆದು ಮುಗಿಸುವುದಕ್ಕೆ ನೂರಾರು ವರ್ಷಗಳ ಮೊದಲು, ವ್ಯವಸ್ಥಾಪಿತ ಆಟಗಳು ಜನಪ್ರಿಯವಾಗಿದ್ದವು. ಉದಾಹರಣೆಗೆ, ಪುರಾತನ ಕಾಲದ ಗ್ರೀಸಿನ ಒಲಿಂಪಿಯದಲ್ಲಿ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಟಗಳು ನಡೆಯುತ್ತಿದ್ದವು. ಬ್ರಿಟ್ಯಾನಿಕ ವರದಿ ಮಾಡುವುದು: “ಒಲಿಂಪಿಯದಲ್ಲಿ ಕ್ರಿಪೂ. 776 ರಿಂದ ಕ್ರಿಶ. 217ರ ವರೆಗಿನ ಕ್ರೀಡಾಪಟುಗಳ ದಾಖಲೆಗಳಿವೆ,” ಅಥವಾ ಸುಮಾರು ಒಂದು ಸಾವಿರ ವರ್ಷಗಳ ದಾಖಲೆಗಳಿವೆ! ಗ್ರೀಕರ ಜೀವನದಲ್ಲಿ ಒಲಿಂಪಿಕ್ ಆಟಗಳು ಎಷ್ಟು ಪ್ರಾಮುಖ್ಯವಾಗಿದ್ದವೆಂದರೆ, ಸಮಯವು ಅವುಗಳಿಂದ ಅಳೆಯಲ್ಪಡುತ್ತಿತ್ತು. ಆಟಗಳ ಮಧ್ಯೆ ಇದ್ದ ಪ್ರತಿ ನಾಲ್ಕು ವರ್ಷಗಳ ಅವಧಿಯನ್ನು ಒಲಿಂಪಿಅ್ಯಡ್ ಎಂದು ಕರೆಯಲಾಗುತ್ತಿತ್ತು. ಹೀಗೆ, ಕಾಲಗಣನೆಯ ಈ ಆದಿ ವಿಧಾನಕ್ಕನುಸಾರವಾಗಿ, ಯೇಸು ಕ್ರಿಸ್ತನು 194ನೆಯ ಒಲಿಂಪಿಕ್ ಶಕದಲ್ಲಿ ಜನಿಸಿದನು.
ಹೀಬ್ರು ಶಾಸ್ತ್ರಗಳು ವ್ಯವಸ್ಥಾಪಿತ ಆಟಗಳ ಬಗೆಗೆ ಏನೂ ಹೇಳುವುದಿಲ್ಲವಾದರೂ, ಪ್ರವಾದಿಗಳಲ್ಲಿ ಒಬ್ಬನು, “ಆ [ಯೆರೂಸಲೇಮ್] ಪಟ್ಟಣದ ಚೌಕದಲ್ಲಿ ಆಟವಾಡುವ ಬಾಲಕ ಬಾಲಕಿಯರೂ ತುಂಬಿಕೊಂಡಿರುವರು,” ಎಂದು ಹೇಳುತ್ತಾನೆ. (ಜೆಕರ್ಯ 8:5) ಯೇಸುವಿನ ಜನನಕ್ಕೆ ನೂರಕ್ಕೂ ಹೆಚ್ಚು ವರ್ಷಗಳ ಮೊದಲು, ಗ್ರೀಕ್ ಪಂದ್ಯಾಟಗಳನ್ನು ಇಸ್ರಾಯೇಲಿಗೆ ತರಲಾಯಿತು. ಯೆರೂಸಲೇಮಿನಲ್ಲಿ ಒಂದು ಅಂಗಸಾಧನಾ ಶಾಲೆಯನ್ನು ತೆರೆಯಲಾಯಿತು. ಮತ್ತು ಈ ಆಟಗಳಲ್ಲಿ ಭಾಗವಹಿಸುವ ಕಾರಣದಿಂದ ಕೆಲವು ಯಾಜಕರು ತಮ್ಮ ಸೇವೆಯನ್ನು ಸಹ ಅಸಡ್ಡೆ ಮಾಡಿದ್ದುಂಟು.—2 ಮ್ಯಾಕಬೀಸ್ 4:12-15.
ಯೇಸು ಜನಿಸಿದಾಗ ಆಳುತ್ತಿದ್ದ ರೋಮನ್ ಸಾಮ್ರಾಟ ಅಗಸಸ್ಟ್ ಸೀಸರನು ಕ್ರೀಡಾಪ್ರೇಮಿಯಾಗಿದ್ದನು, ಮತ್ತು ಆಟಗಳು ರೋಮಿನಲ್ಲಿ ಜನಪ್ರಿಯವಾದವು. ಆದರೂ ರೋಮನ್ ಪೌರರನ್ನು ನಿಜವಾಗಿಯೂ ಆಸಕ್ತಿಗೊಳಿಸಿದ್ದು ಬಾಕ್ಸಿಂಗ್ ಮತ್ತು ಕುಸ್ತಿಯಂಥ ಕಾಳಗಗಳೆ. ಈ “ಕ್ರೀಡೆಗಳು” ಅನೇಕ ವೇಳೆ, ಹಿಂಸಾತ್ಮಕವಾದ ರಕ್ತ ಸುರಿತದ ಸ್ಪರ್ಧೆಗಳಾಗಿ ಅವನತಿಗೊಂಡು, ಅವುಗಳಲ್ಲಿ ಮನುಷ್ಯರು ಮನುಷ್ಯರಿಗೆ ವಿರುದ್ಧವಾಗಿ ಯಾ ಮೃಗಗಳಿಗೆ ವಿರುದ್ಧವಾಗಿ ಮರಣ ಪರ್ಯಂತ ಹೋರಾಡುತ್ತಿದ್ದರು.
“ಹೊಸ ಒಡಂಬಡಿಕೆ”ಯಲ್ಲಿ ಕ್ರೀಡೆಗಳು
ಆದರೂ, ಕ್ರೀಡೆಗಳ ಇಂಥ ಅಪಪ್ರಯೋಗ, ಅವುಗಳನ್ನು ಆಡುವುದು ತಪ್ಪೆಂಬ ಅರ್ಥವನ್ನು ಕೊಡಲಿಲ್ಲ. ಶಾಸ್ತ್ರದಲ್ಲಿ ಯೇಸುವಾಗಲಿ, ಅವನ ಹಿಂಬಾಲಕರಾಗಲಿ ಆಟಗಳನ್ನು ಅಥವಾ ಆಡುವುದನ್ನು ಖಂಡಿಸುವುದನ್ನು ನಾವು ಎಂದಿಗೂ ಕಾಣುವುದಿಲ್ಲ. ಬದಲಿಗೆ, ಅನೇಕವೇಳೆ ಅಪೊಸ್ತಲರು ಅವುಗಳ ಅಂಶಗಳನ್ನು ಬೋಧನೆಯ ಮುಖ್ಯ ವಿಷಯಗಳನ್ನು ಚಿತ್ರಿಸಲಿಕ್ಕಾಗಿ ಉಪಯೋಗಿಸಿದರು.
ಉದಾಹರಣೆಗೆ, ಅಪೊಸ್ತಲ ಪೌಲನು ಕ್ರೈಸ್ತರನ್ನು ಉದ್ದೇಶಿಸಿ, “ರಂಗಸ್ಥಾನದಲ್ಲಿ ಓಡುವದಕ್ಕೆ ಗೊತ್ತಾದವರೆಲ್ಲರೂ ಓಡುತ್ತಾರಾದರೂ ಒಬ್ಬನು ಮಾತ್ರ ಬಿರುದನ್ನು ಹೊಂದುತ್ತಾನೆ ಎಂಬದು ನಿಮಗೆ ತಿಳಿಯದೋ? ಅವರಂತೆ ನೀವೂ ಬಿರುದನ್ನು ಪಡಕೊಳ್ಳಬೇಕೆಂತಲೇ ಓಡಿರಿ,” ಎಂದು ಪ್ರೋತ್ಸಾಹಿಸಿದಾಗ ಅವನ ಮನಸ್ಸಿನಲ್ಲಿ ಒಲಿಂಪಿಕ್ ಆಟಗಳಲ್ಲಿದ್ದ ಓಟದ ಪಂದ್ಯಗಳಿದ್ದವು ಎಂದು ವ್ಯಕ್ತವಾಗುತ್ತದೆ. ಅವನು ಕೂಡಿಸಿ ಹೇಳಿದ್ದು: “ಅದರಲ್ಲಿ ಹೋರಾಡುವವರೆಲ್ಲರು ಎಲ್ಲಾ ವಿಷಯಗಳಲ್ಲಿ ಮಿತವಾಗಿರುತ್ತಾರೆ. ಅವರು ಬಾಡಿಹೋಗುವ ಜಯಮಾಲಿಕೆಯನ್ನು ಹೊಂದುವದಕ್ಕೆ ಸಾಧನೆ ಮಾಡುತ್ತಾರೆ; ನಾವಾದರೋ ಬಾಡಿಹೋಗದ ಜಯಮಾಲಿಕೆಯನ್ನು ಹೊಂದುವದಕ್ಕೆ ಸಾಧನೆ ಮಾಡುವವರಾಗಿದ್ದೇವೆ.”—1 ಕೊರಿಂಥ 9:24, 25.
ಇನ್ನೊಂದು ಸಂದರ್ಭದಲ್ಲಿ, ಒಬ್ಬ ಕ್ರೈಸ್ತನು ಜೀವದ ಬಹುಮಾನವನ್ನು ಗಳಿಸಬೇಕಾದರೆ ದೃಢತೆಯಂದ ಓಡಬೇಕೆಂದು ಪೌಲನಂದನು. ಅವನು ಬರೆದದ್ದು: “ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.” (ಫಿಲಿಪ್ಪಿ 3:14) ಅಲ್ಲದೆ, ನೈತಿಕ ಜೀವನ ನಿಯಮಗಳಿಗೆ ಅಂಟಿಕೊಳ್ಳುವ ಅಗತ್ಯತೆಯನ್ನು ಚಿತ್ರಿಸುವಾಗ ಪೌಲನು ತಿಮೊಥಿಗೆ ಜ್ಞಾಪಕ ಹುಟ್ಟಿಸಿದ್ದು: “ಇದಲ್ಲದೆ ಯಾವನಾದರೂ ರಂಗಸ್ಥಳದಲ್ಲಿ ಎದುರಾಳಿನೊಡನೆ ಹೋರಾಡುವಾಗ ನಿಯಮದ ಪ್ರಕಾರ ಹೋರಾಡದಿದ್ದರೆ ಅವನಿಗೆ ಜಯಮಾಲೆಯು ದೊರಕುವದಿಲ್ಲ.” (2 ತಿಮೊಥಿ 2:5) ಮತ್ತು ತಮ್ಮ ಜವಾಬ್ದಾರಿಗಳನ್ನು ಪೂರೈಸುವ ಕ್ರೈಸ್ತ ಪಾಲಕರು, “ದೇವಪ್ರಭಾವವೆಂಬ ಎಂದಿಗೂ ಬಾಡದ ಜಯಮಾಲೆಯನ್ನು” ಹೊಂದುವರೆಂದು ಅಪೊಸ್ತಲ ಪೇತ್ರನು ಬರೆದನು.—1 ಪೇತ್ರ 5:4.
ಕ್ರೀಡೆಗಳಲ್ಲಿ ಆಸಕ್ತರಾಗಿದ್ದ ಯುವ ಕ್ರೈಸ್ತರ ಪಾಲನೆಯಲ್ಲಿ ಯುವ ತಿಮೊಥಿ ಸೇರಿದ್ದನೆಂಬುದು ನಿಸ್ಸಂಶಯ. ಈ ಕಾರಣದಿಂದ ಪೌಲನು ಅವನಿಗೆ, “[ಅಂಗಸಾಧಕರಂತೆ ಮಾಡುವ] ದೇಹಸಾಧನೆಯು ಸ್ವಲ್ಪ ಮಟ್ಟಿಗೆ ಪ್ರಯೋಜನವಾಗಿದೆ,” ಎಂದು ಹೇಳಿ ಗ್ರೀಕರು ಕಠಿಣಾಭ್ಯಾಸಿಸುತ್ತಿದ್ದ ಅಂಗಸಾಧನೆಯ ವ್ಯಾಯಾಮಗಳಿಂದ ತುಸು ಪ್ರಯೋಜನವಿದೆಯೆಂದು ಒಪ್ಪಿಕೊಳ್ಳುತ್ತಾನೆ. “ಆದರೆ,” ಪೌಲನು ಬೇಗನೆ ಕೂಡಿಸಿ ಹೇಳಿದ್ದು: “[ದಿವ್ಯ] ಭಕ್ತಿಯಾದರೋ ಎಲ್ಲಾ ವಿಧಗಳಲ್ಲಿ ಪ್ರಯೋಜನವಾದದ್ದು; ಅದಕ್ಕೆ ಇಹಪರಗಳಲ್ಲಿಯೂ ಜೀವವಾಗ್ದಾನ ಉಂಟು.”—1 ತಿಮೊಥಿ 4:8; ದ ಕಿಂಗ್ಡಮ್ ಇಂಟರ್ಲಿನಿಯರ್ ಟ್ರಾನ್ಸ್ಲೇಶನ್ ಆಫ್ ದ ಗ್ರೀಕ್ ಸ್ಕ್ರಿಪ್ಚರ್ಸ್ ನೋಡಿ.
ವ್ಯಾಯಾಮಕ್ಕೆ ತಕ್ಕ ಸ್ಥಳ
ಹೀಗೆ ದೈಹಿಕ ವ್ಯಾಯಾಮಕ್ಕೆ ಜೀವನದಲ್ಲಿ ತಕ್ಕ ಸ್ಥಾನವಿರಬಲ್ಲದೆಂದು ಶಾಸ್ತ್ರಗಳು ಸೂಚಿಸುತ್ತವೆ. ಆದರೂ ಸಮತೆಯ, ಸಮಂಜಸತೆಯ ಅಗತ್ಯವಿದೆ. ಪೌಲನು ಬರೆದದ್ದು: “ನಿಮ್ಮ ಸೈರಣೆಯು [ಸಮಂಜಸತೆ, NW] ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ.” (ಫಿಲಿಪ್ಪಿ 4:5) ಆದರೆ, ಈ ಸಮತೆಯನ್ನು ಕಂಡುಕೊಳ್ಳುವುದು ಎಷ್ಟು ಕಷ್ಟ!
ಆದಿ ಗ್ರೀಕರು ಆಟಗಳಿಗೆ ವಿಪರೀತ ಪ್ರಾಧಾನ್ಯವನ್ನು ಕೊಟ್ಟರು, ಮತ್ತು ರೋಮನರು ಭಾಗಿಗಳಿಗೆ ಹಾಗೂ ರಕ್ತಮಯ ಪ್ರದರ್ಶನಗಳಲ್ಲಿ ಸಂತೋಷಿಸಿದ ಪ್ರೇಕ್ಷಕರಿಗೆ ಹಾನಿಮಾಡಿದ ರೀತಿಯ ಕ್ರೀಡೆಗಳನ್ನು ಪ್ರದರ್ಶಿಸಿದರು. ಆದರೆ, ಇನ್ನು ಕೆಲವರು, ಧರ್ಮದ ಹೆಸರಲ್ಲಿ ಆಟಗಳನ್ನು ನಿರೋಧಿಸಿರುವುದಲ್ಲದೆ, ಅವುಗಳನ್ನು ನಿಷೇಧಿಸಿದ್ದಾರೆ. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಗಮನಿಸಿದ್ದು: “17ನೆಯ ಶತಕದ ವಿರೋಧ ವೈರ ಮನೋಭಾವ ಯೂರೋಪ್ ಮತ್ತು ಅಮೆರಿಕದಲ್ಲಿ ಆಟದ ವಿನೋದವನ್ನು ಕಡಮೆ ಮಾಡಿತು.”
ಕ್ರೀಡೆಗಳು ಇತ್ತೀಚೆಗೆ, ಪ್ರಾಯಶಃ ಇತಿಹಾಸದಲ್ಲಿ ಇದ್ದಿರದಷ್ಟು ಗಾತ್ರದ ಪುನರುಜ್ಜೀವನವನ್ನು ಪಡೆದಿವೆ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಹವಾಮಾನವನ್ನು ಬಿಟ್ಟರೆ, ಜನರು ಇನ್ನಾವ ವಿಷಯಕ್ಕೂ ಹೆಚ್ಚಾಗಿ ಪ್ರಾಯಶಃ ಕ್ರೀಡೆಗಳ ವಿಷಯ ಮಾತಾಡುತ್ತಾರೆ.” ಕ್ರೀಡೆಗಳನ್ನು “ಜನರ ಮಾದಕ ವಸ್ತು” ಎಂದೂ ಕರೆಯಲಾಗಿದೆ.
ಕ್ರೀಡೆಗಳಿಗಿರುವ ಇಂಥ ಕಟ್ಟಾಸಕ್ತಿ ಸೃಷ್ಟಿಸಿರುವ ಕೆಲವು ಸಮಸ್ಯೆಗಳಾವುವು? ನೀವಾಗಲಿ, ನಿಮ್ಮ ಕುಟುಂಬವಾಗಲಿ ಇದರ ಪರಿಣಾಮವಾಗಿ ಪ್ರತಿಕೂಲ ಫಲವನ್ನು ಅನುಭವಿಸುತ್ತಿರುವುದುಂಟೆ? ಕ್ರೀಡೆಗಳನ್ನು ನೀವು ಅವುಗಳ ತಕ್ಕ ಸ್ಥಳದಲ್ಲಿ ಹೇಗೆ ಇಡಬಲ್ಲಿರಿ? (g91 8/22)