ವಾಚನದಲ್ಲಿ ಶ್ರದ್ಧೆಯಿಂದ ನಿಮ್ಮನ್ನೇ ನಿರತರಾಗಿಸಿಕೊಳ್ಳಿ
ನೀವು ಇದೀಗ ಮಾಡುತ್ತಿರುವುದನ್ನು ಪ್ರಾಣಿಗಳು ಮಾಡಲಾರವು. 6 ಮಂದಿಯಲ್ಲಿ ಒಬ್ಬರು ಓದಲು ಕಲಿತಿರುವುದಿಲ್ಲ; ಇದಕ್ಕೆ ಕಾರಣವೇನೆಂದರೆ ಅನೇಕವೇಳೆ ಅವರಿಗೆ ಶಾಲೆಗೆ ಹೋಗುವ ಸದವಕಾಶವೇ ಸಿಕ್ಕಿರುವುದಿಲ್ಲ. ಮತ್ತು ಓದಲು ಕಲಿತಿರುವವರಲ್ಲಿ ಅನೇಕರು ಅದನ್ನು ಕ್ರಮವಾಗಿ ಮಾಡುವುದಿಲ್ಲ. ಆದರೂ, ಮುದ್ರಿತ ಪುಟಗಳನ್ನು ಓದಲು ನಿಮಗಿರುವ ಸಾಮರ್ಥ್ಯವು, ನೀವು ಈ ಮಾಧ್ಯಮದ ಮೂಲಕ ಇತರ ದೇಶಗಳಿಗೆ ಪ್ರಯಾಣಿಸಲು, ಯಾರ ಜೀವಿತಗಳು ನಿಮ್ಮ ಜೀವಿತವನ್ನು ಉತ್ತಮಗೊಳಿಸಬಲ್ಲವೊ ಅಂತಹ ಜನರನ್ನು ಭೇಟಿಯಾಗಲು ಮತ್ತು ಜೀವನದ ಚಿಂತೆಗಳನ್ನು ನಿಭಾಯಿಸುವಂತೆ ಸಹಾಯಮಾಡುವ ಪ್ರಾಯೋಗಿಕ ಜ್ಞಾನವನ್ನು ಪಡೆಯಲು ನಿಮಗೆ ಸಾಧ್ಯಮಾಡುತ್ತದೆ.
ಓದುವ ಸಾಮರ್ಥ್ಯವು, ಒಬ್ಬ ಹುಡುಗನು ಶಾಲಾ ವಿದ್ಯಾಭ್ಯಾಸದಿಂದ ಎಷ್ಟು ಒಳಿತನ್ನು ಪಡೆಯುತ್ತಾನೆಂಬುದರ ಮೇಲೆ ಪ್ರಭಾವ ಬೀರುತ್ತದೆ. ಅವನು ಉದ್ಯೋಗವನ್ನು ಹುಡುಕುವಾಗ, ಅವನ ವಾಚನ ಸಾಮರ್ಥ್ಯವು ಅವನಿಗೆ ಯಾವ ವಿಧದ ಉದ್ಯೋಗ ದೊರೆಯಬಹುದೆಂಬುದನ್ನು ಮತ್ತು ಅವನ ಜೀವನೋಪಾಯಕ್ಕಾಗಿ ಅವನು ಎಷ್ಟು ತಾಸು ಕೆಲಸಮಾಡಬೇಕೆಂಬುದನ್ನು ಪ್ರಭಾವಿಸಬಹುದು. ಚೆನ್ನಾಗಿ ಓದಬಲ್ಲ ಗೃಹಿಣಿಯರು, ಸರಿಯಾದ ಪೌಷ್ಟಿಕ ಆಹಾರ, ಆರೋಗ್ಯ ಮತ್ತು ರೋಗತಡೆಗಳ ಸಂಬಂಧದಲ್ಲಿ ತಮ್ಮ ಕುಟುಂಬಗಳನ್ನು ಹೆಚ್ಚು ಉತ್ತಮವಾಗಿ ಪರಾಮರಿಸಶಕ್ತರಾಗುತ್ತಾರೆ. ಚೆನ್ನಾಗಿ ಓದಲು ಬರುವ ತಾಯಂದಿರು, ತಮ್ಮ ಮಕ್ಕಳ ಬುದ್ಧಿಶಕ್ತಿಯ ಬೆಳವಣಿಗೆಯ ಮೇಲೂ ಅತಿ ಸಕಾರಾತ್ಮಕವಾದ ಪ್ರಭಾವವನ್ನು ಬೀರುವ ಸಾಧ್ಯತೆ ಇದೆ.
ಆದರೆ ವಾಚನದಿಂದ ಬರುವ ಅತ್ಯುತ್ತಮ ಪ್ರಯೋಜನವು, ಅದು ನೀವು “ದೈವಜ್ಞಾನವನ್ನು ಪಡೆ”ಯಶಕ್ತರಾಗುವಂತೆ ಮಾಡುವುದೇ ಆಗಿದೆ ಎಂಬುದಂತೂ ನಿಶ್ಚಯ. (ಜ್ಞಾನೋ. 2:5) ನಾವು ದೇವರನ್ನು ಸೇವಿಸುವ ಅನೇಕ ವಿಧಗಳಲ್ಲಿ ಓದುವ ಸಾಮರ್ಥ್ಯವು ಒಳಗೂಡಿರುತ್ತದೆ. ಸಭಾ ಕೂಟಗಳಲ್ಲಿ ಶಾಸ್ತ್ರವಚನಗಳೂ ಬೈಬಲಾಧಾರಿತ ಸಾಹಿತ್ಯಗಳೂ ಓದಲ್ಪಡುತ್ತವೆ. ಕ್ಷೇತ್ರ ಸೇವೆಯಲ್ಲಿ ನಿಮ್ಮ ಪರಿಣಾಮಕಾರಿತ್ವವು, ನೀವು ಹೇಗೆ ಓದುತ್ತೀರೊ ಅದರಿಂದ ಮಹತ್ತಾಗಿ ಪ್ರಭಾವಿಸಲ್ಪಡುತ್ತದೆ. ಮತ್ತು ಈ ಚಟುವಟಿಕೆಗಳಿಗಾಗಿ ತಯಾರಿಸುವುದರಲ್ಲಿಯೂ ವಾಚನವು ಸೇರಿದೆ. ಈ ಕಾರಣಕ್ಕಾಗಿ, ನಿಮ್ಮ ಆತ್ಮಿಕ ಬೆಳವಣಿಗೆಯು ದೊಡ್ಡ ಪ್ರಮಾಣದಲ್ಲಿ ನಿಮ್ಮ ವಾಚನ ಹವ್ಯಾಸಗಳ ಮೇಲೆ ಹೊಂದಿಕೊಂಡಿರುತ್ತದೆ.
ಸಂದರ್ಭಗಳನ್ನು ಸದುಪಯೋಗಿಸಿರಿ
ದೇವರ ಮಾರ್ಗಗಳನ್ನು ಕಲಿಯುತ್ತಿರುವ ಕೆಲವರಿಗೆ ಸೀಮಿತ ವಿದ್ಯೆಯಿದೆ. ಅವರ ಆತ್ಮಿಕ ಬೆಳವಣಿಗೆಯನ್ನು ಉತ್ತಮಗೊಳಿಸಲಿಕ್ಕಾಗಿ ಅವರಿಗೆ ಓದನ್ನು ಕಲಿಸುವ ಅಗತ್ಯವಿರಬಹುದು. ಅಥವಾ, ಅವರ ಓದುವ ಕೌಶಲವನ್ನು ಉತ್ತಮಗೊಳಿಸಲು ಅವರಿಗೆ ವೈಯಕ್ತಿಕ ಸಹಾಯದ ಅಗತ್ಯವಿರಬಹುದು. ಸ್ಥಳಿಕ ಆವಶ್ಯಕತೆಯಿರುವಲ್ಲಿ, ಓದು-ಬರಹದಲ್ಲಿ ನಿಮ್ಮನ್ನು ಶ್ರದ್ಧೆಯಿಂದ ನಿರತರಾಗಿಸಿಕೊಳ್ಳಿ (ಇಂಗ್ಲಿಷ್) ಎಂಬ ಪ್ರಕಾಶನದ ಆಧಾರದ ಮೇರೆಗೆ ಸಭೆಗಳು ಸಾಕ್ಷರತಾ ಕ್ಲಾಸುಗಳನ್ನು ಏರ್ಪಡಿಸಲು ಪ್ರಯತ್ನಿಸುತ್ತವೆ. ಈ ಒದಗಿಸುವಿಕೆಯಿಂದ ಅನೇಕ ಸಾವಿರ ಜನರು ಬಹಳ ಮಟ್ಟಿಗೆ ಪ್ರಯೋಜನ ಪಡೆದಿದ್ದಾರೆ. ಚೆನ್ನಾಗಿ ಓದಲು ಶಕ್ತರಾಗುವುದರ ಪ್ರಾಮುಖ್ಯತೆಯ ಕಾರಣ, ಕೆಲವು ಸಭೆಗಳಲ್ಲಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯೊಂದಿಗೆ ವಾಚನವನ್ನು ಉತ್ತಮಗೊಳಿಸುವ ಕ್ಲಾಸುಗಳು ಸಹ ನಡೆಸಲ್ಪಡುತ್ತವೆ. ಇಂತಹ ಕ್ಲಾಸುಗಳು ಇಲ್ಲದಿರುವ ಸ್ಥಳಗಳಲ್ಲಿಯೂ, ಒಬ್ಬನು ಪ್ರತಿದಿನ ಸ್ವಲ್ಪ ಸಮಯವನ್ನು ಬದಿಗಿಟ್ಟು ಗಟ್ಟಿಯಾಗಿ ಓದುವಲ್ಲಿ ಮತ್ತು ದೇವಪ್ರಭುತ್ವಾತ್ಮಕ ಶಾಲೆಗೆ ಕ್ರಮವಾಗಿ ಹಾಜರಾಗುತ್ತಾ ಅದರಲ್ಲಿ ಭಾಗವಹಿಸುವಲ್ಲಿ ಅವನು ಒಳ್ಳೇ ಪ್ರಗತಿಯನ್ನು ಮಾಡಬಲ್ಲನು.
ಆದರೆ ವಿಷಾದಕರವಾಗಿ, ಇತರ ವಿಷಯಗಳ ಜೊತೆಗೆ ಕಾಮಿಕ್ ಪುಸ್ತಕಗಳು ಮತ್ತು ಟೆಲಿವಿಷನ್ಗಳು ಅನೇಕರ ಜೀವನಗಳಲ್ಲಿ ವಾಚನವನ್ನು ಬದಿಗೊತ್ತಿಬಿಟ್ಟಿವೆ. ಟೆಲಿವಿಷನ್ ವೀಕ್ಷಣ ಮತ್ತು ಸೀಮಿತ ವಾಚನವು, ಒಬ್ಬ ವ್ಯಕ್ತಿಯ ವಾಚನ ಕೌಶಲಗಳನ್ನು ಮತ್ತು ಸ್ಪಷ್ಟವಾಗಿ ಯೋಚಿಸುವ ಹಾಗೂ ತರ್ಕಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಹಾಗೂ ತನ್ನನ್ನು ವ್ಯಕ್ತಪಡಿಸಿಕೊಳ್ಳುವ ಸಾಮರ್ಥ್ಯಗಳನ್ನು ತಡೆದುಹಿಡಿಯಬಹುದು.
ಬೈಬಲನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡುವ ಸಾಹಿತ್ಯಗಳನ್ನು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುತ್ತದೆ. ಇವುಗಳು ಜೀವದಾಯಕ ಆತ್ಮಿಕ ವಿಷಯಗಳ ಕುರಿತು ವಿಪುಲವಾದ ಮಾಹಿತಿಯನ್ನು ನಮಗೆ ಲಭ್ಯಗೊಳಿಸುತ್ತವೆ. (ಮತ್ತಾ. 24:45; 1 ಕೊರಿಂ. 2:12, 13) ಅವು ಪ್ರಮುಖ ಲೋಕ ವಿಕಸನಗಳನ್ನು ಮತ್ತು ಅವುಗಳ ಅರ್ಥವನ್ನೂ ನಮಗೆ ಪರಿಚಯಪಡಿಸುತ್ತವೆ, ನೈಸರ್ಗಿಕ ಜಗತ್ತಿನೊಂದಿಗೆ ನಾವು ಹೆಚ್ಚು ಪರಿಚಿತರಾಗುವಂತೆ ಸಹಾಯಮಾಡುತ್ತವೆ, ಮತ್ತು ನಮ್ಮನ್ನು ಚಿಂತೆಗೊಳಪಡಿಸುವ ವಿವಾದಾಂಶಗಳನ್ನು ಎದುರಿಸುವ ಮಾರ್ಗಗಳನ್ನು ನಮಗೆ ಕಲಿಸುತ್ತವೆ. ಎಲ್ಲಕ್ಕೂ ಮಿಗಿಲಾಗಿ, ನಾವು ಹೇಗೆ ದೇವರನ್ನು ಸ್ವೀಕಾರಯೋಗ್ಯರಾಗಿ ಸೇವಿಸಬಹುದು ಮತ್ತು ಆತನ ಸಮ್ಮತಿಯನ್ನು ಪಡೆಯಬಹುದು ಎಂಬ ವಿಷಯದ ಮೇಲೆ ಅವು ಕೇಂದ್ರೀಕರಿಸುತ್ತವೆ. ಇಂತಹ ಹಿತಕರವಾದ ವಾಚನವು, ನೀವು ಆತ್ಮಿಕ ವ್ಯಕ್ತಿಯಾಗಿ ಬೆಳೆಯುವಂತೆ ಸಹಾಯಮಾಡುವುದು.
ಚೆನ್ನಾಗಿ ಓದುವ ಸಾಮರ್ಥ್ಯವು ತಾನೇ ದೊಡ್ಡ ವಿಷಯವೆಂದು ಇದರ ಅರ್ಥವಲ್ಲ. ಈ ಕೌಶಲವನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸುವ ಅಗತ್ಯವಿದೆ. ತಿನ್ನುವ ವಿಷಯದಲ್ಲಿ ಆಯ್ಕೆಮಾಡುವಂತೆಯೇ ಓದುವ ವಿಷಯದಲ್ಲಿಯೂ ಆಯ್ಕೆಮಾಡಬೇಕು. ನಿಜವಾಗಿ ಪೌಷ್ಟಿಕವಾಗಿರದ ಅಥವಾ ವಿಷಪೂರಿತವೂ ಆಗಿರಬಹುದಾದ ಆಹಾರವನ್ನು ಏಕೆ ತಿನ್ನಬೇಕು? ಅದೇ ರೀತಿ, ಮನಸ್ಸು ಮತ್ತು ಹೃದಯವನ್ನು ಕೆಡಿಸಬಲ್ಲ ಪುಸ್ತಕಗಳನ್ನು ಅಕಸ್ಮಾತ್ತಾಗಿಯಾದರೂ ಏಕೆ ಓದಬೇಕು? ನಾವು ಯಾವ ಪುಸ್ತಕಗಳನ್ನು ಓದಲು ಆಯ್ದುಕೊಳ್ಳುವೆವು ಎಂಬದನ್ನು ನಿರ್ಧರಿಸಲು ನಾವು ಉಪಯೋಗಿಸಬೇಕಾದ ಮಟ್ಟವನ್ನು ಬೈಬಲ್ ಮೂಲತತ್ತ್ವಗಳು ಒದಗಿಸಬೇಕು. ನೀವು ಏನನ್ನು ಓದಬೇಕು ಎಂದು ನಿರ್ಣಯಿಸುವ ಮೊದಲು, ಈ ಮುಂದಿನ ಶಾಸ್ತ್ರವಚನಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ: ಪ್ರಸಂಗಿ 12:12, 13; ಎಫೆಸ 4:22-24; 5:3, 4; ಫಿಲಿಪ್ಪಿ 4:8; ಕೊಲೊಸ್ಸೆ 2:8; 1 ಯೋಹಾನ 2:15-17; ಮತ್ತು 2 ಯೋಹಾನ 10.
ಯೋಗ್ಯ ಹೇತುವಿನೊಂದಿಗೆ ಓದಿರಿ
ಸುವಾರ್ತಾ ವೃತ್ತಾಂತಗಳನ್ನು ಪರೀಕ್ಷಿಸುವುದಾದರೆ, ಯೋಗ್ಯವಾದ ಹೇತುವಿನೊಂದಿಗೆ ಓದುವುದರ ಪ್ರಾಮುಖ್ಯತೆಯು ಸ್ಪಷ್ಟವಾಗುತ್ತದೆ. ಉದಾಹರಣೆಗೆ, ಮತ್ತಾಯನ ಸುವಾರ್ತೆಯಲ್ಲಿ ಯೇಸು, ಸುಶಿಕ್ಷಿತರಾಗಿದ್ದ ಧಾರ್ಮಿಕ ಮುಖಂಡರ ಕುತಂತ್ರದ ಪ್ರಶ್ನೆಗಳಿಗೆ ಶಾಸ್ತ್ರೀಯ ಉತ್ತರಗಳನ್ನು ಕೊಡುವಾಗ, “ನೀವು ಓದಲಿಲ್ಲವೋ”? “ನೀವು ಎಂದಾದರೂ ಓದಲಿಲ್ಲವೋ?” ಎಂದು ಅವರನ್ನು ಕೇಳಿದನೆಂಬುದನ್ನು ನಾವು ಕಂಡುಕೊಳ್ಳುತ್ತೇವೆ. (ಮತ್ತಾ. 12:3, 5; 19:4, 5; 21:16, 42; 22:31) ಇದರಿಂದ ನಾವು ಕಲಿಯುವ ಒಂದು ಪಾಠವೇನಂದರೆ, ನಮಗೆ ಓದಲು ಯೋಗ್ಯವಾದ ಹೇತುವು ಇಲ್ಲದಿರುವಲ್ಲಿ, ನಾವು ತಪ್ಪಾದ ತೀರ್ಮಾನಕ್ಕೆ ಬರಬಲ್ಲೆವು ಇಲ್ಲವೆ ಅದರ ಅರ್ಥವನ್ನೇ ಸಂಪೂರ್ಣವಾಗಿ ಗ್ರಹಿಸದಿರುವೆವು. ಶಾಸ್ತ್ರವಚನಗಳನ್ನು ಓದುವುದರ ಮೂಲಕ ತಮಗೆ ನಿತ್ಯಜೀವ ಸಿಗುತ್ತದೆಂದು ಫರಿಸಾಯರು ನೆನಸಿದ್ದರಿಂದಲೇ ಅವರು ಅವುಗಳನ್ನು ಓದುತ್ತಿದ್ದರು. ಆದರೆ ಯೇಸು ತೋರಿಸಿಕೊಟ್ಟಂತೆ, ಆ ಪ್ರತಿಫಲವು ದೇವರನ್ನು ಪ್ರೀತಿಸದವರಿಗೆ ಹಾಗೂ ಆತನ ರಕ್ಷಣಾಮಾರ್ಗವನ್ನು ಅಂಗೀಕರಿಸದವರಿಗೆ ಕೊಡಲ್ಪಡುವುದಿಲ್ಲ. (ಯೋಹಾ. 5:39-43) ಫರಿಸಾಯರ ಉದ್ದೇಶಗಳು ಸ್ವಾರ್ಥಪರವಾಗಿದ್ದವು; ಆದುದರಿಂದ, ಅವರ ಅಧಿಕಾಂಶ ತೀರ್ಮಾನಗಳು ತಪ್ಪಾಗಿದ್ದವು.
ಯೆಹೋವನಿಗಾಗಿರುವ ಪ್ರೀತಿಯೇ ಆತನ ವಾಕ್ಯವನ್ನು ಓದಲು ನಮಗಿರಬಲ್ಲ ಅತ್ಯಂತ ನಿರ್ಮಲವಾದ ಹೇತುವಾಗಿದೆ. ಇಂತಹ ಪ್ರೀತಿಯು ನಾವು ದೇವರ ಚಿತ್ತವನ್ನು ಕಲಿಯುವಂತೆ ನಮ್ಮನ್ನು ಉತ್ತೇಜಿಸುತ್ತದೆ, ಏಕೆಂದರೆ ಪ್ರೀತಿಯು ‘ಸತ್ಯದ ವಿಷಯದಲ್ಲಿ ಸಂತೋಷಪಡುತ್ತದೆ.’ (1 ಕೊರಿಂ. 13:6) ನಾವು ಈ ಹಿಂದೆ ವಾಚನದಲ್ಲಿ ಆನಂದಿಸದೆ ಇದ್ದರೂ, “ಪೂರ್ಣ ಮನಸ್ಸಿನಿಂದ” ಯೆಹೋವನನ್ನು ಪ್ರೀತಿಸುವುದು ತಾನೇ ದೇವರ ಜ್ಞಾನವನ್ನು ಪಡೆದುಕೊಳ್ಳಲು ನಮ್ಮ ಮನಸ್ಸುಗಳನ್ನು ಹುರುಪಿನಿಂದ ನಿರತರಾಗಿಸಿಕೊಳ್ಳುವಂತೆ ಪ್ರೇರಿಸುವುದು. (ಮತ್ತಾ. 22:37, NW) ಪ್ರೀತಿಯು ಆಸಕ್ತಿಯನ್ನು ಕೆರಳಿಸುತ್ತದೆ ಮತ್ತು ಆಸಕ್ತಿಯು ಕಲಿಕೆಯನ್ನು ಹುರಿದುಂಬಿಸುತ್ತದೆ.
ವೇಗವನ್ನು ಪರಿಗಣಿಸಿರಿ
ವಾಚನ ಮತ್ತು ಗ್ರಹಿಸುವಿಕೆಯು ಜೊತೆ ಜೊತೆಯಾಗಿ ಹೋಗುತ್ತವೆ. ಈಗಲೂ ನೀವು ಓದುತ್ತಿರುವಾಗ, ನೀವು ಪದಗಳನ್ನು ಗ್ರಹಿಸಿ, ಅವುಗಳ ಅರ್ಥವನ್ನು ಜ್ಞಾಪಿಸಿಕೊಳ್ಳುತ್ತಿದ್ದೀರಿ. ಈ ಗ್ರಹಿಸುವಿಕೆಯ ಕ್ಷೇತ್ರವನ್ನು ನೀವು ವಿಕಸಿಸುವುದಾದರೆ, ನಿಮ್ಮ ವಾಚನದ ವೇಗವನ್ನು ನೀವು ಹೆಚ್ಚಿಸಬಲ್ಲಿರಿ. ಒಂದೊಂದೇ ಪದವನ್ನು ನೋಡಲು ನಿಲ್ಲಿಸುವ ಬದಲು, ಒಂದೇ ಸಲ ಹಲವು ಪದಗಳನ್ನು ನೋಡಲು ಪ್ರಯತ್ನಿಸಿರಿ. ಈ ಸಾಮರ್ಥ್ಯವನ್ನು ನೀವು ಬೆಳೆಸಿಕೊಳ್ಳುತ್ತಾ ಹೋದಂತೆ, ನೀವು ಏನನ್ನು ಓದುತ್ತಿದ್ದೀರೋ ಅದನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಿದ್ದೀರಿ ಎಂಬದನ್ನು ನೀವು ಕಂಡುಕೊಳ್ಳುವಿರಿ.
ಆದರೆ ಗಹನವಾದ ವಿಷಯವನ್ನು ಓದುತ್ತಿರುವಾಗ, ಒಂದು ಭಿನ್ನ ರೀತಿಯ ವಿಧಾನವನ್ನು ಉಪಯೋಗಿಸುವ ಮೂಲಕ, ನಿಮ್ಮ ಪ್ರಯತ್ನಗಳಿಂದ ನೀವು ಪಡೆಯುವಂತಹ ಫಲವನ್ನು ಇನ್ನಷ್ಟು ಹೆಚ್ಚಿಸಬಹುದು. ಶಾಸ್ತ್ರವಚನಗಳನ್ನು ಓದುವ ವಿಷಯದಲ್ಲಿ ಸಲಹೆ ನೀಡುತ್ತ ಯೆಹೋವನು ಯೆಹೋಶುವನಿಗೆ ಹೇಳಿದ್ದು: “ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ” ಇರಬೇಕು. (ಯೆಹೋ. 1:8) ಧ್ಯಾನಿಸುತ್ತಿರುವಾಗ ಒಬ್ಬ ವ್ಯಕ್ತಿಯು ಗಾಢವಾಗಿ ಆಲೋಚಿಸುತ್ತಾನೆ; ಅವಸರದಿಂದ ಹಾಗೆ ಮಾಡುವುದಿಲ್ಲ. ಆಲೋಚನೆಮಾಡುತ್ತಾ ಓದುವುದರಿಂದ, ದೇವರ ವಾಕ್ಯವು ಮನಸ್ಸು ಮತ್ತು ಹೃದಯಗಳ ಮೇಲೆ ಹೆಚ್ಚು ಪ್ರಭಾವವನ್ನು ಬೀರುವಂತಾಗುತ್ತದೆ. ಬೈಬಲಿನಲ್ಲಿ ಪ್ರವಾದನೆ, ಸಲಹೆ, ಜ್ಞಾನೋಕ್ತಿಗಳು, ಕವಿತೆ, ದೈವಿಕ ತೀರ್ಪಿನ ಘೋಷಣೆಗಳು, ಯೆಹೋವನ ಉದ್ದೇಶದ ವಿವರಗಳು ಮತ್ತು ನಿಜ ಜೀವನದ ಕುರಿತಾದ ಹೇರಳ ಮಾದರಿಗಳು ಅಡಕವಾಗಿವೆ. ಯೆಹೋವನ ಮಾರ್ಗಗಳಲ್ಲಿ ನಡೆಯಲು ಬಯಸುವವರಿಗೆ ಇವೆಲ್ಲ ಅಮೂಲ್ಯವಾಗಿವೆ. ಬೈಬಲನ್ನು ನಿಮ್ಮ ಹೃದಮನಗಳ ಮೇಲೆ ಅಚ್ಚೊತ್ತುವಂತಹ ರೀತಿಯಲ್ಲಿ ಓದುವುದು ಅದೆಷ್ಟು ಪ್ರಯೋಜನದಾಯಕವಾಗಿದೆ!
ಮನಸ್ಸನ್ನು ಕೇಂದ್ರೀಕರಿಸಲು ಕಲಿಯಿರಿ
ಓದುವಾಗ, ವರ್ಣಿಸಲಾಗುತ್ತಿರುವ ಪ್ರತಿಯೊಂದು ದೃಶ್ಯದಲ್ಲಿ ಸ್ವತಃ ನಿಮ್ಮನ್ನು ಚಿತ್ರಿಸಿಕೊಳ್ಳಿ. ಪಾತ್ರಧಾರಿಗಳನ್ನು ನಿಮ್ಮ ಮನೋನೇತ್ರಗಳಿಂದ ನೋಡಲು ಪ್ರಯತ್ನಿಸಿ, ಮತ್ತು ಅವರ ಜೀವಿತಗಳಲ್ಲಿ ನಡೆಯುತ್ತಿರುವ ಅನುಭವಗಳಲ್ಲಿ ಭಾವಪೂರ್ಣವಾಗಿ ಭಾಗವಹಿಸಿರಿ. ಒಂದನೆಯ ಸಮುವೇಲ 17 ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವ ದಾವೀದ ಹಾಗೂ ಗೊಲ್ಯಾತರ ವೃತ್ತಾಂತವನ್ನು ಓದುವಾಗ ಇದನ್ನು ಮಾಡುವುದೇನೋ ಸಾಕಷ್ಟು ಸುಲಭವಾಗಿರುವುದು. ಆದರೆ, ವಿಮೋಚನಕಾಂಡ ಮತ್ತು ಯಾಜಕಕಾಂಡದಲ್ಲಿ ಕೊಡಲಾಗಿರುವ ಸಾಕ್ಷಿಗುಡಾರದ ನಿರ್ಮಾಣ ಅಥವಾ ಯಾಜಕವ್ಯವಸ್ಥೆಯ ವಿವರಗಳು, ನಾವು ಸಾಕ್ಷಿಗುಡಾರದ ಅಳತೆಗಳನ್ನು ಮತ್ತು ಅದನ್ನು ಯಾವುದರಿಂದ ಕಟ್ಟಬೇಕೊ ಆ ವಸ್ತುಗಳನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವಲ್ಲಿ ಅಥವಾ ಧೂಪದ, ಹುರಿದ ಧಾನ್ಯದ ಮತ್ತು ಸರ್ವಾಂಗಹೋಮವಾಗಿ ಅರ್ಪಿಸಿದ ಪ್ರಾಣಿಗಳ ಸುವಾಸನೆಯನ್ನು ಕಲ್ಪಿಸಿಕೊಳ್ಳುವಲ್ಲಿ ಮಾತ್ರ ಸಜೀವವಾಗುವವು. ಯಾಜಕಸೇವೆಯು ಎಷ್ಟೊಂದು ಭಯಾಶ್ಚರ್ಯಪ್ರೇರಕವಾದ ಕೆಲಸವಾಗಿದ್ದಿರಬೇಕೆಂಬುದನ್ನು ತುಸು ಯೋಚಿಸಿರಿ! (ಲೂಕ 1:8-10) ಈ ರೀತಿಯಲ್ಲಿ ನಿಮ್ಮ ಜ್ಞಾನೇಂದ್ರಿಯಗಳನ್ನು ಮತ್ತು ಭಾವಗಳನ್ನು ವಾಚನದಲ್ಲಿ ಒಳಗೂಡಿಸಿಕೊಳ್ಳುವುದು, ನೀವು ಏನನ್ನು ಓದುತ್ತಿದ್ದೀರೊ ಅದರ ಅರ್ಥವನ್ನು ಅರಿತುಕೊಳ್ಳುವಂತೆ ಸಹಾಯಮಾಡುವುದು ಮತ್ತು ಅದು ಸ್ಮರಣ ಸಹಾಯಕವಾಗಿಯೂ ಕಾರ್ಯನಡಿಸುವುದು.
ಆದರೆ, ನೀವು ಓದಲು ಪ್ರಯತ್ನಿಸುವಾಗ ಜಾಗರೂಕರಾಗಿರದಿರುವಲ್ಲಿ, ನಿಮ್ಮ ಮನಸ್ಸು ಅಲೆದಾಡಬಹುದು. ನಿಮ್ಮ ದೃಷ್ಟಿಯು ಪುಟದ ಮೇಲಿದ್ದರೂ ನಿಮ್ಮ ಮನಸ್ಸು ಬೇರೆಲ್ಲೊ ಇರಬಹುದು. ಸಂಗೀತ ನುಡಿಸಲ್ಪಡುತ್ತಿದೆಯೆ? ಟೆಲಿವಿಷನ್ ಆನ್ ಆಗಿದೆಯೆ? ಕುಟುಂಬದವರು ಮಾತಾಡುತ್ತಿದ್ದಾರೊ? ಸಾಧ್ಯವಿರುವಲ್ಲಿ, ಪ್ರಶಾಂತವಾದ ಸ್ಥಳದಲ್ಲಿ ಓದುವುದು ಉತ್ತಮ. ಆದರೆ ಅಪಕರ್ಷಣೆಯು ಆಂತರಿಕವಾಗಿಯೂ ಬರಬಹುದು. ಪ್ರಾಯಶಃ ಅದು ನೀವು ತುಂಬ ಕೆಲಸ ಮಾಡಿದ ದಿನವಾಗಿದ್ದಿರಬಹುದು. ಆಗ, ನಿಮ್ಮ ದಿನದ ಚಟುವಟಿಕೆಗಳನ್ನು ಮನಸ್ಸಿನಲ್ಲಿ ಮೆಲುಕುಹಾಕುವುದು ಎಷ್ಟು ಸುಲಭ! ದಿನದ ಕೆಲಸಗಳನ್ನು ಪುನರ್ವಿಮರ್ಶಿಸುವುದು ಒಳ್ಳೇದಾಗಿರುವುದಾದರೂ, ಅದನ್ನು ಮಾಡುವುದು ಓದುವ ಸಮಯದಲ್ಲಲ್ಲ. ಕೆಲವೊಮ್ಮೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸುತ್ತ ನೀವು ಆರಂಭಿಸಬಹುದು ಅಥವಾ ನೀವು ಓದಲು ಆರಂಭಿಸುವ ಮೊದಲು ಪ್ರಾರ್ಥನೆಯನ್ನೂ ಮಾಡಬಹುದು. ಆದರೆ ಬಳಿಕ, ನೀವು ಓದುತ್ತಾ ಹೋದಂತೆ ನಿಮ್ಮ ಮನಸ್ಸು ಅಲೆದಾಡತೊಡಗುತ್ತದೆ. ಹಾಗಿರುವಲ್ಲಿ ಪುನಃ ಪ್ರಯತ್ನಿಸಿರಿ. ನೀವು ಓದುತ್ತಿರುವ ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸುವಂತೆ ನಿಮ್ಮನ್ನು ಶಿಸ್ತಿಗೊಳಪಡಿಸಿಕೊಳ್ಳಿರಿ. ಕ್ರಮೇಣ ನೀವು ಅಭಿವೃದ್ಧಿಯನ್ನು ನೋಡುವಿರಿ.
ನಿಮಗೆ ಅರ್ಥವಾಗದಿರುವಂಥ ಒಂದು ಪದವನ್ನು ಕಂಡುಕೊಳ್ಳುವಲ್ಲಿ ನೀವು ಏನು ಮಾಡುವಿರಿ? ಕೆಲವು ಅಪರಿಚಿತ ಪದಗಳನ್ನು ಅದೇ ವಿಷಯಭಾಗದಲ್ಲಿ ವಿವರಿಸಲಾಗಿರಬಹುದು ಅಥವಾ ಚರ್ಚಿಸಲಾಗಿರಬಹುದು. ಅಥವಾ, ಆ ಪದದ ಪೂರ್ವಾಪರದಿಂದ ನೀವು ಅದರ ಅರ್ಥವನ್ನು ಗ್ರಹಿಸಶಕ್ತರಾಗಬಹುದು. ಹಾಗಿಲ್ಲದಿರುವಲ್ಲಿ, ಒಂದು ಶಬ್ದಕೋಶವು ಇರುವಲ್ಲಿ ಆ ಪದವನ್ನು ತೆರೆದು ನೋಡಿ ಇಲ್ಲವೆ ತರುವಾಯ ಆ ಪದದ ಅರ್ಥವನ್ನು ಇನ್ನಾರೊಡನೆಯಾದರೂ ಕೇಳುವುದಕ್ಕಾಗಿ ಆ ಪದಕ್ಕೆ ಗುರುತು ಹಾಕಿರಿ. ಇದು ನಿಮ್ಮ ಶಬ್ದಭಂಡಾರವನ್ನು ವಿಸ್ತರಿಸಿ, ನಿಮ್ಮ ವಾಚನ ಗ್ರಹಿಕೆಗೆ ಸಹಾಯ ನೀಡುವುದು.
ಬಹಿರಂಗ ವಾಚನ
ಅಪೊಸ್ತಲ ಪೌಲನು ತಿಮೊಥೆಯನಿಗೆ ವಾಚನದಲ್ಲಿ ಶ್ರದ್ಧೆಯಿಂದ ನಿರತನಾಗುತ್ತ ಮುಂದುವರಿಯುವಂತೆ ಹೇಳಿದಾಗ, ಪೌಲನು ವಿಶಿಷ್ಟವಾಗಿ ಇತರರ ಪ್ರಯೋಜನಾರ್ಥವಾಗಿ ಓದುವುದನ್ನು ಸೂಚಿಸುತ್ತಿದ್ದನು. (1 ತಿಮೊ. 4:13, NW) ಪರಿಣಾಮಕಾರಿಯಾದ ಬಹಿರಂಗ ವಾಚನದಲ್ಲಿ, ಪುಟದಿಂದ ಪದಗಳನ್ನು ಕೇವಲ ಗಟ್ಟಿಯಾಗಿ ಓದುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿರುತ್ತದೆ. ಪದಗಳ ಅರ್ಥ ಮತ್ತು ಅವು ವ್ಯಕ್ತಪಡಿಸುವ ವಿಚಾರಗಳನ್ನು ವಾಚಕನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಅವನು ಹಾಗೆ ಮಾಡುವಲ್ಲಿ ಮಾತ್ರ ವಿಚಾರಗಳನ್ನು ಸರಿಯಾಗಿ ವ್ಯಕ್ತಪಡಿಸಿ, ಭಾವಗಳನ್ನು ನಿಷ್ಕೃಷ್ಟವಾಗಿ ನಕಲು ಮಾಡಶಕ್ತನಾಗುತ್ತಾನೆ. ಇದಕ್ಕೆ ಪೂರ್ಣ ತಯಾರಿ ಮತ್ತು ಅಭ್ಯಾಸದ ಅಗತ್ಯವಿದೆ. ಆದಕಾರಣವೇ ಪೌಲನು, “ಬಹಿರಂಗ ವಾಚನದಲ್ಲಿ ಶ್ರದ್ಧೆಯಿಂದ ನಿರತನಾಗಿರು” ಎಂದು ಸಲಹೆ ನೀಡಿದನು. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ನೀವು ಈ ಕೌಶಲದಲ್ಲಿ ಬೆಲೆಬಾಳುವ ತರಬೇತಿಯನ್ನು ಪಡೆಯುವಿರಿ.
ಓದಲು ಸಮಯವನ್ನು ಮಾಡಿಕೊಳ್ಳಿರಿ
“ಶ್ರದ್ಧಾಶೀಲನ ಯೋಜನೆಗಳು ಅನುಕೂಲ ಸ್ಥಿತಿಯನ್ನು ತರುವುದು ನಿಶ್ಚಯ, ಆದರೆ ಅವಸರಪಡುವ ಪ್ರತಿಯೊಬ್ಬನು ಅಭಾವದತ್ತ ಮುನ್ನುಗ್ಗುವುದು ನಿಶ್ಚಯ.” (ಜ್ಞಾನೋ. 21:5, NW) ನಮ್ಮ ಓದುವ ಅಪೇಕ್ಷೆಯ ಸಂಬಂಧದಲ್ಲಿ ಅದೆಷ್ಟು ನಿಜ! “ಅನುಕೂಲ ಸ್ಥಿತಿಯನ್ನು” ಪಡೆಯಬೇಕಾದರೆ, ಇತರ ಚಟುವಟಿಕೆಗಳು ನಮ್ಮ ವಾಚನವನ್ನು ಹೊರತಳ್ಳದಂತೆ ನಾವು ಅದಕ್ಕಾಗಿ ಶ್ರದ್ಧಾಪೂರ್ವಕವಾಗಿ ಯೋಜನೆಯನ್ನು ಮಾಡುವುದು ಅತ್ಯಾವಶ್ಯಕ.
ನೀವು ಯಾವಾಗ ಓದುತ್ತೀರಿ? ಮುಂಜಾನೆ ಓದುವುದರಿಂದ ನೀವು ಪ್ರಯೋಜನ ಪಡೆಯುತ್ತೀರೊ? ಅಥವಾ ಹೊತ್ತು ಕಳೆದ ಬಳಿಕ ನೀವು ಹೆಚ್ಚು ಎಚ್ಚರವಾಗಿರುತ್ತೀರೊ? ಪ್ರತಿದಿನ ಓದಲಿಕ್ಕಾಗಿ 15 ಅಥವಾ 20 ನಿಮಿಷಗಳಷ್ಟನ್ನಾದರೂ ನೀವು ಬದಿಗಿರಿಸುವಲ್ಲಿ, ನೀವೆಷ್ಟನ್ನು ಪೂರೈಸಲು ಸಾಧ್ಯವಿದೆಯೆಂಬುದನ್ನು ನೋಡಿ ನೀವೇ ಬೆರಗಾಗುವಿರಿ. ಕ್ರಮಬದ್ಧತೆಯೇ ಇದರ ಕೀಲಿ ಕೈ.
ಯೆಹೋವನು ತನ್ನ ಮಹಾ ಉದ್ದೇಶಗಳನ್ನು ಒಂದು ಗ್ರಂಥದಲ್ಲಿ ಬರೆಯಿಸಿ ಇಡಲು ನಿಶ್ಚಯಿಸಿರುವುದೇಕೆ? ಜನರು ತನ್ನ ಲಿಖಿತ ವಾಕ್ಯವನ್ನು ಪರಿಗಣಿಸಲು ಸಾಧ್ಯವಾಗಬೇಕೆಂದೇ. ಇದರಿಂದಾಗಿ ಅವರು ಯೆಹೋವನ ಅದ್ಭುತಕರವಾದ ಕಾರ್ಯಗಳನ್ನು ಪರ್ಯಾಲೋಚಿಸಲು, ಅವುಗಳ ಕುರಿತು ತಮ್ಮ ಮಕ್ಕಳಿಗೆ ತಿಳಿಸಲು ಮತ್ತು ದೇವರ ವಿಧಿಗಳನ್ನು ಅವರ ನೆನಪಿನಲ್ಲಿರಿಸಲು ಶಕ್ತರಾಗುತ್ತಾರೆ. (ಕೀರ್ತ. 78:5-7) ಈ ವಿಚಾರದಲ್ಲಿ ಯೆಹೋವನ ಉದಾರಭಾವಕ್ಕೆ ನಮ್ಮ ಕೃತಜ್ಞತೆಯನ್ನು ತೋರಿಸುವ ಅತ್ಯುತ್ತಮ ವಿಧವು, ಆತನ ಜೀವದಾಯಕ ವಾಕ್ಯವನ್ನು ನಾವು ಶ್ರದ್ಧೆಯಿಂದ ಓದುವುದೇ ಆಗಿದೆ.