ಕೈಸರನ ವಿಷಯಗಳನ್ನು ಕೈಸರನಿಗೆ ಹಿಂದಿರುಗಿಸುವುದು
“ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ.”—ರೋಮಾಪುರ 13:7.
1, 2. (ಎ) ಯೇಸುವಿಗನುಸಾರ, ದೇವರು ಮತ್ತು ಕೈಸರನ ಕಡೆಗಿರುವ ತಮ್ಮ ಹಂಗುಗಳನ್ನು ಕ್ರೈಸ್ತರು ಹೇಗೆ ಸರಿದೂಗಿಸಬೇಕು? (ಬಿ) ಯೆಹೋವನ ಸಾಕ್ಷಿಗಳ ಪ್ರಪ್ರಥಮ ಚಿಂತೆಯು ಏನಾಗಿದೆ?
ಯೇಸುವಿಗನುಸಾರ, ನಾವು ದೇವರಿಗೆ ಸಲ್ಲಿಸಬೇಕಾದ ವಿಷಯಗಳು ಮತ್ತು ಕೈಸರನಿಗೆ ಅಥವಾ ರಾಜ್ಯಕ್ಕೆ ಸಲ್ಲಿಸಬೇಕಾದ ವಿಷಯಗಳಿವೆ. ಯೇಸು ಹೇಳಿದ್ದು: “ಕೈಸರನ ವಿಷಯಗಳನ್ನು ಕೈಸರನಿಗೆ ಹಿಂದಕ್ಕೆ ಸಲ್ಲಿಸಿರಿ, ಆದರೆ ದೇವರ ವಿಷಯಗಳನ್ನು ದೇವರಿಗೆ ಸಲ್ಲಿಸಿರಿ.” ಈ ಕೆಲವು ಮಾತುಗಳಲ್ಲಿ, ಅವನು ತನ್ನ ವೈರಿಗಳನ್ನು ದಿಗ್ಭ್ರಮೆಗೊಳಿಸಿದನು ಮತ್ತು ದೇವರೊಂದಿಗಿನ ನಮ್ಮ ಸಂಬಂಧದಲ್ಲಿ ಹಾಗೂ ರಾಜ್ಯದೊಂದಿಗಿನ ನಮ್ಮ ವ್ಯವಹಾರಗಳಲ್ಲಿ ನಮಗಿರಬೇಕಾದ ಸಮತೂಕದ ಮನೋಭಾವವನ್ನು ಸಂಕ್ಷಿಪ್ತವಾಗಿ ಸಾರಾಂಶಿಸಿದನು. ಅವನ ಕೇಳುಗರು “ಆತನ ವಿಷಯದಲ್ಲಿ ಬಹು ಆಶ್ಚರ್ಯ”ಪಟ್ಟದ್ದು ಸಹಜವೇ!—ಮಾರ್ಕ 12:17, NW.
2 ನಿಶ್ಚಯವಾಗಿ, ಯೆಹೋವನ ಸೇವಕರ ಪ್ರಪ್ರಥಮ ಚಿಂತೆಯು, ಅವರು ದೇವರ ವಿಷಯಗಳನ್ನು ದೇವರಿಗೆ ಹಿಂದಕ್ಕೆ ಸಲ್ಲಿಸುವುದೇ ಆಗಿದೆ. (ಕೀರ್ತನೆ 116:12-14) ಆದರೆ, ಹಾಗೆ ಮಾಡುವುದರಲ್ಲಿ, ಕೈಸರನಿಗೆ ಕೆಲವೊಂದು ವಿಷಯಗಳನ್ನು ಅವರು ಸಲ್ಲಿಸಬೇಕೆಂದು ಯೇಸು ಹೇಳಿದ್ದನ್ನು ಅವರು ಮರೆಯುವುದಿಲ್ಲ. ಅವರ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಗಳು, ಕೈಸರನು ಕೇಳುವ ವಿಷಯವನ್ನು ಅವರು ಎಷ್ಟರ ಮಟ್ಟಿಗೆ ಹಿಂದಕ್ಕೆ ಸಲ್ಲಿಸಬಲ್ಲರೆಂದು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸುವಂತೆ ಅವಶ್ಯಪಡಿಸುತ್ತವೆ. (ರೋಮಾಪುರ 13:7) ಆಧುನಿಕ ಸಮಯಗಳಲ್ಲಿ, ಅನೇಕ ನ್ಯಾಯಶಾಸ್ತ್ರಜ್ಞರು, ಸರಕಾರೀ ಶಕ್ತಿಗೆ ಮಿತಿಗಳಿವೆಯೆಂದು ಮತ್ತು ಎಲ್ಲೆಡೆಯೂ ಜನರು ಮತ್ತು ಸರಕಾರಗಳು ಪ್ರಕೃತಿ ನಿಯಮದಿಂದ ಬಂಧಿಸಲ್ಪಟ್ಟಿದ್ದಾರೆಂಬುದನ್ನು ಮನಗಂಡಿದ್ದಾರೆ.
3, 4. ಪ್ರಕೃತಿ ನಿಯಮ, ಪ್ರಕಟಿಸಲ್ಪಟ್ಟ ನಿಯಮ ಮತ್ತು ಮಾನವ ನಿಯಮದ ಕುರಿತು ಯಾವ ಸ್ವಾರಸ್ಯಕರ ಹೇಳಿಕೆಗಳು ಮಾಡಲ್ಪಟ್ಟಿವೆ?
3 ಲೋಕದ ಜನರ ಕುರಿತು ಅಪೊಸ್ತಲ ಪೌಲನು ಬರೆದಾಗ, ಅವನು ಈ ಪ್ರಕೃತಿ ನಿಯಮವನ್ನು ಸೂಚಿಸಿದನು: “ಯಾಕಂದರೆ ದೇವರ ವಿಷಯವಾಗಿ ತಿಳಿಯಬಹುದಾದದ್ದು ಅವರ ಮನಸ್ಸಿಗೆ ಸ್ಪಷ್ಟವಾಗಿ ತಿಳಿದದೆ; ಅದನ್ನು ಅವರಿಗೆ ದೇವರೇ ಸ್ಪಷ್ಟವಾಗಿ ತಿಳಿಸಿದನು. ಹೇಗಂದರೆ ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ; ಹೀಗಿರುವದರಿಂದ ಅವರು ಉತ್ತರವಿಲ್ಲದವರಾಗಿದ್ದಾರೆ.” ಅವರು ಅದಕ್ಕೆ ಪ್ರತಿಕ್ರಿಯೆ ತೋರಿಸಿದರೆ, ಪ್ರಕೃತಿ ನಿಯಮವು ಈ ಅವಿಶ್ವಾಸಿಗಳ ಮನಸ್ಸಾಕ್ಷಿಗಳನ್ನೂ ಪ್ರೇರಿಸುವುದು. ಹೀಗೆ, ಪೌಲನು ಮುಂದೆ ಹೇಳಿದ್ದು: “ಧರ್ಮಶಾಸ್ತ್ರವಿಲ್ಲದ ಅನ್ಯಜನರು ಸ್ವಾಭಾವಿಕವಾಗಿ ಧರ್ಮಶಾಸ್ತ್ರದಲ್ಲಿ ಹೇಳಿದಂತೆ ನಡೆದರೆ ಅವರು ಧರ್ಮಶಾಸ್ತ್ರವಿಲ್ಲದವರಾಗಿದ್ದರೂ ತಾವೇ ತಮಗೆ ಧರ್ಮಪ್ರಮಾಣವಾಗಿದ್ದಾರೆ; ಹೇಗಂದರೆ ಅವರು ಧರ್ಮಶಾಸ್ತ್ರದ ಮುಖ್ಯ ತಾತ್ಪರ್ಯ ತಮ್ಮ ಹೃದಯದಲ್ಲಿ ಬರೆದದೆ ಎಂಬದನ್ನು ತೋರ್ಪಡಿಸುತ್ತಾರೆ. ಇದಕ್ಕೆ ಅವರ ಮನಸ್ಸು ಸಹ ಸಾಕ್ಷಿ ನುಡಿಯುತ್ತದೆ.”—ರೋಮಾಪುರ 1:19, 20; 2:14, 15.
4 18ನೆಯ ಶತಮಾನದಲ್ಲಿ, ಪ್ರಖ್ಯಾತ ಇಂಗ್ಲಿಷ್ ನ್ಯಾಯಶಾಸ್ತ್ರಜ್ಞರಾದ ವಿಲಿಯಮ್ ಬ್ಲ್ಯಾಕ್ಸ್ಟೋನ್ ಬರೆದುದು: “ಈ ಪ್ರಕೃತಿ ನಿಯಮವು [ಸ್ವಾಭಾವಿಕ ನಿಯಮವು], ಮಾನವ ಜಾತಿಯೊಂದಿಗೆ ಏಕಕಾಲೀನ [ಒಂದೇ ವಯಸ್ಸಿನದ್ದು]ವಾಗಿದ್ದು, ಸ್ವತಃ ದೇವರಿಂದಲೇ ವಿಧಿಸಲ್ಪಟ್ಟಿದ್ದು, ನಿಶ್ಚಯವಾಗಿ ಬದ್ಧತೆಯಲ್ಲಿ ಬೇರೆ ಯಾವುದೇ ನಿಯಮಕ್ಕಿಂತ ಶ್ರೇಷ್ಠವಾಗಿದೆ. ಅದು ಭೂಗೋಲದ ಸುತ್ತಲೂ, ಎಲ್ಲ ದೇಶಗಳಲ್ಲಿ, ಮತ್ತು ಎಲ್ಲ ಸಮಯಗಳಲ್ಲಿ ಬಂಧಕವಾಗಿದೆ: ಮಾನವ ನಿಯಮಗಳು ಇದಕ್ಕೆ ಪ್ರತಿಕೂಲವಾಗಿದ್ದರೆ, ಯಾವ ಸಪ್ರಮಾಣತೆಯನ್ನೂ ಪಡೆದಿರುವುದಿಲ್ಲ.” ಬೈಬಲಿನಲ್ಲಿ ಕಂಡುಕೊಳ್ಳಲ್ಪಟ್ಟಂತೆ, ಬ್ಲ್ಯಾಕ್ಸ್ಟೋನ್ “ಪ್ರಕಟಿಸಲ್ಪಟ್ಟ ನಿಯಮ”ದ ಕುರಿತು ಮಾತಾಡಲು ಮುಂದುವರಿದರು, ಮತ್ತು ಅವರು ಹೇಳಿಕೆಯನ್ನಿತ್ತದ್ದು: “ಈ ಎರಡು ಆಧಾರ—ಪ್ರಕೃತಿ ನಿಯಮ ಮತ್ತು ಪ್ರಕಟಿಸಲ್ಪಟ್ಟ ನಿಯಮ—ಗಳ ಮೇಲೆ ಎಲ್ಲ ಮಾನವ ನಿಯಮಗಳು ಅವಲಂಬಿಸಿವೆ; ಅಂದರೆ, ಯಾವುದೇ ಮಾನವ ನಿಯಮಗಳು ಇವುಗಳ ವಿರುದ್ಧವಾಗಿರುವಂತೆ ಅವಕಾಶ [ಅನುಮತಿ] ಕೊಡಲ್ಪಡಬಾರದು.” ಇದು, ಮಾರ್ಕ 12:17ರಲ್ಲಿ ದಾಖಲಿಸಲಾದಂತೆ, ದೇವರು ಮತ್ತು ಕೈಸರನ ಕುರಿತು ಯೇಸು ಹೇಳಿದ ವಿಷಯದೊಂದಿಗೆ ಹೊಂದಿಕೆಯಲ್ಲಿದೆ. ಸ್ಪಷ್ಟವಾಗಿ, ಕೈಸರನು ಒಬ್ಬ ಕ್ರೈಸ್ತನಿಂದ ಅವಶ್ಯಪಡಿಸುವುದನ್ನು ದೇವರು ಮಿತಗೊಳಿಸುವ ಕ್ಷೇತ್ರಗಳಿವೆ. ಯೇಸುವಿನ ಕುರಿತು ಸಾರುವುದನ್ನು ನಿಲ್ಲಿಸುವಂತೆ ಅವರು ಅಪೊಸ್ತಲರನ್ನು ಆಜ್ಞಾಪಿಸಿದಾಗ, ದೇವರಿಂದ ಸ್ಥಾಪಿಸಲ್ಪಟ್ಟ ಮಿತಿಗಳನ್ನು ಸಭಾಮಂದಿರವು ಉಲ್ಲಂಘಿಸಿತು. ಆದಕಾರಣ, ಅಪೊಸ್ತಲರು ಸರಿಯಾಗಿಯೇ ಪ್ರತ್ಯುತ್ತರಿಸಿದ್ದು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.”—ಅ. ಕೃತ್ಯಗಳು 5:28, 29.
“ದೇವರ ವಿಷಯಗಳು”
5, 6. (ಎ) 1914ರಲ್ಲಿ ರಾಜ್ಯದ ಜನನದ ನೋಟದಲ್ಲಿ, ಯಾವ ವಿಷಯವನ್ನು ಕ್ರೈಸ್ತರು ಹೆಚ್ಚು ಒತ್ತಾಗಿ ಮನಸ್ಸಿನಲ್ಲಿಡಬೇಕು? (ಬಿ) ತಾನೊಬ್ಬ ಶುಶ್ರೂಷಕನೆಂಬ ಪ್ರಮಾಣವನ್ನು ಒಬ್ಬ ಕ್ರೈಸ್ತನು ಹೇಗೆ ಕೊಡುತ್ತಾನೆ?
5 ವಿಶೇಷವಾಗಿ 1914ರಂದಿನಿಂದ, ಸರ್ವಶಕ್ತನಾದ ಯೆಹೋವ ದೇವರು ಕ್ರಿಸ್ತನ ಮೆಸ್ಸೀಯ ಸಂಬಂಧಿತ ರಾಜ್ಯದ ಮುಖಾಂತರ ರಾಜನೋಪಾದಿ ಆಳಲಾರಂಭಿಸಿದಾಗ, ದೇವರ ವಿಷಯಗಳನ್ನು ಕೈಸರನಿಗೆ ಕೊಡದೇ ಇರುವುದರ ಕುರಿತು ಕ್ರೈಸ್ತರು ಖಚಿತರಾಗಿರಬೇಕಿತ್ತು. (ಪ್ರಕಟನೆ 11:15, 17) ಹಿಂದೆಂದೂ ಮಾಡದ ರೀತಿಯಲ್ಲಿ ದೇವರ ನಿಯಮವು ಕ್ರೈಸ್ತರನ್ನು ‘ಲೋಕದವರಾಗಿರದೆ’ ಇರುವಂತೆ ಈಗ ಅವಶ್ಯಪಡಿಸುತ್ತದೆ. (ಯೋಹಾನ 17:16) ತಮ್ಮ ಜೀವದಾತನಾದ ದೇವರಿಗೆ ಸಮರ್ಪಿತರಾಗಿದ್ದು, ತಾವು ಇನ್ನು ಮುಂದೆ ಸ್ವತಃ ತಮಗೇ ಸೇರಿರುವುದಿಲ್ಲವೆಂಬುದನ್ನು ಅವರು ಸ್ಪಷ್ಟವಾಗಿ ಪ್ರದರ್ಶಿಸಬೇಕು. (ಕೀರ್ತನೆ 100:2, 3) ಪೌಲನು ಬರೆದಂತೆ, “ನಾವು ಯೆಹೋವನಿಗೆ ಸೇರಿದವರು.” (ರೋಮಾಪುರ 14:8, NW) ಅಲ್ಲದೆ, ಒಬ್ಬ ಕ್ರೈಸ್ತನ ದೀಕ್ಷಾಸ್ನಾನದ ಸಮಯದಲ್ಲಿ, ಅವನು ದೇವರ ಶುಶ್ರೂಷಕನಂತೆ ದೀಕ್ಷೆಪಡೆಯುತ್ತಾನೆ, ಹೀಗೆ ಅವನು ಪೌಲನು ಹೇಳಿದ್ದನ್ನು ಹೇಳಬಲ್ಲನು: “ಆತನು . . . ಸೇವಕರಾಗಿರುವ ಸಾಮರ್ಥ್ಯವನ್ನು ನಮಗೆ ಅನುಗ್ರಹಿಸಿದ್ದಾನೆ.”—2 ಕೊರಿಂಥ 3:5, 6.
6 ಅಪೊಸ್ತಲ ಪೌಲನು ಹೀಗೂ ಬರೆದನು: “ನನ್ನ ಶುಶ್ರೂಷೆಯನ್ನು ನಾನು ಮಹಿಮೆಪಡಿಸುತ್ತೇನೆ.” (ರೋಮಾಪುರ 11:13, NW) ಖಂಡಿತವಾಗಿಯೂ, ನಾವು ಅಂತೆಯೇ ಮಾಡಬೇಕು. ನಾವು ಶುಶ್ರೂಷೆಯಲ್ಲಿ ಪೂರ್ಣ ಸಮಯ ಅಥವಾ ಅಂಶಕಾಲಿಕವಾಗಿ ಭಾಗವಹಿಸಲಿ, ಸ್ವತಃ ಯೆಹೋವನೇ ನಮ್ಮನ್ನು ನಮ್ಮ ಶುಶ್ರೂಷೆಗೆ ನೇಮಿಸಿದನೆಂಬುದನ್ನು ನಾವು ಮನಸ್ಸಿನಲ್ಲಿಡುತ್ತೇವೆ. (2 ಕೊರಿಂಥ 2:17) ಕೆಲವರು ನಮ್ಮ ಸ್ಥಾನವನ್ನು ಪ್ರಶ್ನಿಸಬಹುದಾದ ಕಾರಣ, ಪ್ರತಿಯೊಬ್ಬ ಸಮರ್ಪಿತ, ದೀಕ್ಷಾಸ್ನಾನ ಪಡೆದ ಕ್ರೈಸ್ತನು, ತಾನು ನಿಜವಾಗಿಯೂ ಸುವಾರ್ತೆಯ ಒಬ್ಬ ಶುಶ್ರೂಷಕನೆಂಬ ಸ್ಪಷ್ಟವಾದ ಹಾಗೂ ಸಕಾರಾತ್ಮಕವಾದ ಪ್ರಮಾಣವನ್ನು ಒದಗಿಸಲು ಸಿದ್ಧನಾಗಿರಬೇಕು. (1 ಪೇತ್ರ 3:15) ಅವನ ಶುಶ್ರೂಷೆಯು ಅವನ ನಡತೆಯಿಂದಲೂ ರುಜುಗೊಳಿಸಲ್ಪಡಬೇಕು. ದೇವರ ಶುಶ್ರೂಷಕನೋಪಾದಿ, ಒಬ್ಬ ಕ್ರೈಸ್ತನು ಶುದ್ಧವಾದ ನೈತಿಕತೆಗಳನ್ನು ಶಿಫಾರಸ್ಸು ಮಾಡಿ, ಆಚರಿಸಬೇಕು, ಕುಟುಂಬ ಐಕ್ಯವನ್ನು ಎತ್ತಿಹಿಡಿಯಬೇಕು, ಪ್ರಾಮಾಣಿಕನಾಗಿರಬೇಕು, ಮತ್ತು ನಿಯಮ ಹಾಗೂ ಶಿಸ್ತಿಗೆ ಗೌರವವನ್ನು ತೋರಿಸಬೇಕು. (ರೋಮಾಪುರ 12:17, 18; 1 ಥೆಸಲೊನೀಕ 5:15) ದೇವರೊಂದಿಗಿನ ಒಬ್ಬ ಕ್ರೈಸ್ತನ ಸಂಬಂಧ ಮತ್ತು ದೈವಿಕವಾಗಿ ನೇಮಿಸಲ್ಪಟ್ಟ ಅವನ ಶುಶ್ರೂಷೆ, ಅವನ ಜೀವಿತದಲ್ಲಿನ ಅತ್ಯಂತ ಪ್ರಾಮುಖ್ಯವಾದ ವಿಷಯಗಳಾಗಿವೆ. ಇವುಗಳನ್ನು ಅವನು ಕೈಸರನ ಆಜ್ಞೆಯ ಮೇರೆಗೆ ಬಿಟ್ಟುಬಿಡಲು ಸಾಧ್ಯವಿಲ್ಲ. ಸ್ಪಷ್ಟವಾಗಿ, ಅವು “ದೇವರ ವಿಷಯ”ಗಳೊಳಗೆ ಎಣಿಸಲ್ಪಡಬೇಕು.
“ಕೈಸರನ ವಿಷಯಗಳು”
7. ತೆರಿಗೆಗಳನ್ನು ಸಲ್ಲಿಸುವ ವಿಷಯದಲ್ಲಿ ಯೆಹೋವನ ಸಾಕ್ಷಿಗಳ ಸತ್ಕೀರ್ತಿಯು ಏನಾಗಿದೆ?
7 ತಾವು ಸರಕಾರೀ ಪ್ರಭುಗಳಿಗೆ, “ಮೇಲಧಿಕಾರಿಗಳಿಗೆ ಅಧೀನ”ತೆಯನ್ನು ಸಲ್ಲಿಸಬೇಕೆಂದು ಯೆಹೋವನ ಸಾಕ್ಷಿಗಳಿಗೆ ಗೊತ್ತಿದೆ. (ರೋಮಾಪುರ 13:1, NW) ಆದಕಾರಣ, ಕೈಸರನು, ರಾಜ್ಯವು ನ್ಯಾಯಸಮ್ಮತ ತಗಾದೆಗಳನ್ನು ಮಾಡುವಾಗ, ಅವರ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಗಳು ಈ ಬೇಡಿಕೆಗಳನ್ನು ಪೂರೈಸುವಂತೆ ಅವರನ್ನು ಅನುಮತಿಸುತ್ತವೆ. ಉದಾಹರಣೆಗೆ, ಸತ್ಯ ಕ್ರೈಸ್ತರು ಭೂಮಿಯ ಮೇಲೆ ಅತ್ಯಂತ ಆದರ್ಶಪ್ರಾಯ ತೆರಿಗೆ ಸಲ್ಲಿಸುವವರಲ್ಲಿ ಒಬ್ಬರಾಗಿದ್ದಾರೆ. ಜರ್ಮನಿಯಲ್ಲಿ, ಯೆಹೋವನ ಸಾಕ್ಷಿಗಳ ಕುರಿತು ಮ್ಯೂಂಕ್ನರ್ ಮರ್ಕುರ್ ಎಂಬ ವಾರ್ತಾಪತ್ರಿಕೆಯು ಹೇಳಿದ್ದು: “ಅವರು ಫೆಡರಲ್ ರಿಪಬ್ಲಿಕ್ನಲ್ಲಿನ ಅತ್ಯಂತ ಪ್ರಾಮಾಣಿಕರೂ ಅತಿ ಕಾಲನಿಷ್ಠ ತೆರಿಗೆ ಸಲ್ಲಿಸುವವರೂ ಆಗಿದ್ದಾರೆ.” ಇಟಲಿಯಲ್ಲಿ ಲಾ ಸ್ಟಾಂಪಾ ಎಂಬ ವಾರ್ತಾಪತ್ರಿಕೆಯು ಗಮನಿಸಿದ್ದು: “ಅವರು [ಯೆಹೋವನ ಸಾಕ್ಷಿಗಳು] ಯಾವನೇ ಬಯಸಬಹುದಾದ ಅತ್ಯಂತ ನಿಷ್ಠಾವಂತ ಪೌರರಾಗಿದ್ದಾರೆ, ಏಕೆಂದರೆ: ಅವರು ತೆರಿಗೆಗಳನ್ನು ಸಲ್ಲಿಸುವುದರಿಂದ ನುಣುಚಿಕೊಳ್ಳುವುದಿಲ್ಲ ಅಥವಾ ತಮ್ಮ ಸ್ವಂತ ಲಾಭಕ್ಕಾಗಿ ಅನನುಕೂಲದ ನಿಯಮಗಳಿಂದ ತಪ್ಪಿಸಿಕೊಳ್ಳಲು ಅವರು ಪ್ರಯತ್ನಿಸುವುದಿಲ್ಲ.” ಯೆಹೋವನ ಸೇವಕರು ಇದನ್ನು ‘ತಮ್ಮ ಮನಸ್ಸಾಕ್ಷಿಗಳ ನಿಮಿತ್ತ’ ಮಾಡುತ್ತಾರೆ.—ರೋಮಾಪುರ 13:5, 6.
8. ನಾವು ಕೈಸರನಿಗೆ ಸಲ್ಲಿಸಬೇಕಾದದ್ದು, ಹಣಕಾಸಿನ ತೆರಿಗೆಗಳಿಗೆ ಮಾತ್ರ ಸೀಮಿತವೊ?
8 “ಕೈಸರನ ವಿಷಯಗಳು” ತೆರಿಗೆಗಳನ್ನು ಸಲ್ಲಿಸುವ ವಿಷಯಕ್ಕೆ ಸೀಮಿತವಾಗಿವೆಯೊ? ಇಲ್ಲ. ಪೌಲನು ಭಯ ಮತ್ತು ಮರ್ಯಾದೆಯಂತಹ ಇತರ ವಿಷಯಗಳನ್ನು ಪಟ್ಟಿಮಾಡಿದನು. ತಮ್ಮ ಕ್ರಿಟಿಕಲ್ ಆ್ಯಂಡ್ ಎಕ್ಸಿಜಿಟಿಕಲ್ ಹ್ಯಾಂಡ್-ಬುಕ್ ಟು ದ ಗಾಸ್ಪೆಲ್ ಆಫ್ ಮ್ಯಾತ್ಯು ಎಂಬ ಪುಸ್ತಕದಲ್ಲಿ, ಜರ್ಮನ್ ಪಂಡಿತರಾದ ಹಿನ್ರಿಕ್ ಮೇಯರ್ ಬರೆದುದು: “[ಕೈಸರನ ವಿಷಯಗಳು] ಎಂಬುದರಿಂದ . . . ನಾವು ಪೌರ ತೆರಿಗೆ ಎಂದು ಮಾತ್ರ ಅರ್ಥಮಾಡಿಕೊಳ್ಳಬಾರದು, ಬದಲಾಗಿ ಅವನ ನ್ಯಾಯಸಮ್ಮತವಾದ ಆಳಿಕೆಯಿಂದ ಅವನು ಯಾವುದಕ್ಕೆ ಅರ್ಹನೊ ಅದೆಲ್ಲವನ್ನು” ಎಂದು ಅರ್ಥಮಾಡಿಕೊಳ್ಳಬೇಕು. ಇತಿಹಾಸಕಾರ ಈ. ಡಬ್ಲ್ಯೂ. ಬಾರ್ನ್ಸ್, ತಮ್ಮ ಪುಸ್ತಕವಾದ ದ ರೈಸ್ ಆಫ್ ಕ್ರಿಸ್ಟಿಆ್ಯನಿಟಿಯಲ್ಲಿ ಗಮನಿಸಿದ್ದೇನೆಂದರೆ, ಒಬ್ಬ ಕ್ರೈಸ್ತನು ತೆರಿಗೆಗಳನ್ನು ಸಲ್ಲಿಸುವ ಹಂಗಿಗನಾಗಿದ್ದರೆ ಅವುಗಳನ್ನು ಸಲ್ಲಿಸುವನು ಮತ್ತು “ಅಂತೆಯೇ, ದೇವರಿಗೆ ಸೇರಿರುವ ವಿಷಯಗಳನ್ನು ಕೈಸರನಿಗೆ ಸಲ್ಲಿಸುವಂತೆ ಅವಶ್ಯಪಡಿಸಲ್ಪಡದಿರುವ ಸಂದರ್ಭದಲ್ಲಿ, ಅವನು ಇತರ ಎಲ್ಲ ರಾಜ್ಯ ಹಂಗುಗಳನ್ನು ಸ್ವೀಕರಿಸುವನು.”
9, 10. ಕೈಸರನಿಗೆ ಅವನ ಕರವನ್ನು ಹಿಂದಕ್ಕೆ ಸಲ್ಲಿಸುವುದರ ಕುರಿತು ಯಾವ ಹಿಂಜರಿತವು ಕ್ರೈಸ್ತನೊಬ್ಬನಿಗಿರಬಹುದು, ಆದರೆ ಯಾವ ನಿಜತ್ವಗಳನ್ನು ಮನಸ್ಸಿನಲ್ಲಿಡಬೇಕು?
9 ಯೋಗ್ಯವಾಗಿ ದೇವರಿಗೆ ಸೇರಿರುವ ವಿಷಯಗಳನ್ನು ಅತಿಕ್ರಮಿಸದೆ, ಯಾವ ವಿಷಯಗಳನ್ನು ರಾಜ್ಯವು ಅವಶ್ಯಪಡಿಸಬಹುದು? ತಾವು ಕೈಸರನಿಗೆ ತೆರಿಗೆಯ ರೂಪದಲ್ಲಿ ಹಣವನ್ನು ಬಿಟ್ಟು ಬೇರೆ ಏನನ್ನೂ ನ್ಯಾಯಸಮ್ಮತವಾಗಿ ಕೊಡಸಾಧ್ಯವಿಲ್ಲವೆಂದು ಕೆಲವರಿಗೆ ಅನಿಸಿದೆ. ದೇವಪ್ರಭುತ್ವ ಚಟುವಟಿಕೆಗಳಿಗಾಗಿ ಉಪಯೋಗಿಸಲ್ಪಡಸಾಧ್ಯವಿರುವ ಸಮಯವನ್ನು ತೆಗೆದುಕೊಳ್ಳಬಹುದಾದ ಯಾವುದನ್ನೇ ಕೈಸರನಿಗೆ ಕೊಡುವ ವಿಷಯದಲ್ಲಿ ಅವರಿಗೆ ಖಂಡಿತವಾಗಿಯೂ ಹಿತವೆನಿಸದು. ಆದರೂ, ‘ನಮ್ಮ ದೇವರಾದ ಯೆಹೋವನನ್ನು ನಾವು ನಮ್ಮ ಪೂರ್ಣ ಹೃದಯ, ಪ್ರಾಣ, ಮನಸ್ಸು, ಮತ್ತು ಬಲದಿಂದ ಪ್ರೀತಿ’ಸಬೇಕೆಂಬುದು ಸತ್ಯವಾಗಿದ್ದರೂ, ನಮ್ಮ ಪವಿತ್ರ ಸೇವೆಯ ಹೊರತು ಇತರ ವಿಷಯಗಳಲ್ಲಿ ಸಮಯವನ್ನು ವ್ಯಯಿಸುವಂತೆ ಯೆಹೋವನು ನಮ್ಮಿಂದ ಅಪೇಕ್ಷಿಸುತ್ತಾನೆ. (ಮಾರ್ಕ 12:30; ಫಿಲಿಪ್ಪಿ 3:3) ಉದಾಹರಣೆಗೆ, ಒಬ್ಬ ವಿವಾಹಿತ ಕ್ರೈಸ್ತನು, ಅವನ ಅಥವಾ ಅವಳ ವಿವಾಹದ ಸಂಗಾತಿಯನ್ನು ಮೆಚ್ಚಿಸುವುದಕ್ಕೆ ಸಮಯವನ್ನು ಮೀಸಲಾಗಿಡುವಂತೆ ಸಲಹೆ ನೀಡಲ್ಪಟ್ಟಿದ್ದಾನೆ. ಇಂತಹ ಚಟುವಟಿಕೆಗಳು ತಪ್ಪಾಗಿರುವುದಿಲ್ಲ, ಆದರೆ ಅಪೊಸ್ತಲ ಪೌಲನು ಹೇಳುವುದೇನೆಂದರೆ, ಅವು “ಕರ್ತನ ಕಾರ್ಯ”ಗಳಲ್ಲ, “ಪ್ರಪಂಚದ ಕಾರ್ಯ”ಗಳಾಗಿವೆ.—1 ಕೊರಿಂಥ 7:32-34; ಹೋಲಿಸಿ 1 ತಿಮೊಥೆಯ 5:8.
10 ಇನ್ನೂ ಹೆಚ್ಚಾಗಿ, ತೆರಿಗೆಗಳನ್ನು “ಹಿಂದಕ್ಕೆ ಸಲ್ಲಿಸು”ವಂತೆ ಕ್ರಿಸ್ತನು ತನ್ನ ಹಿಂಬಾಲಕರಿಗೆ ಅಧಿಕಾರ ಕೊಟ್ಟನು, ಮತ್ತು ಇದು ಖಂಡಿತವಾಗಿಯೂ ಯೆಹೋವನಿಗೆ ಸಮರ್ಪಿತವಾಗಿರುವ ಸಮಯದ ಉಪಯೋಗವನ್ನು ಒಳಗೊಳ್ಳುತ್ತದೆ—ಏಕೆಂದರೆ ಈ ವಿಧದಲ್ಲಿ ನಮ್ಮ ಸಂಪೂರ್ಣ ಜೀವಿತಗಳು ದೇವರಿಗೆ ಸಮರ್ಪಿಸಲ್ಪಟ್ಟಿವೆ. ಒಂದು ದೇಶದಲ್ಲಿನ ಸರಾಸರಿ ತೆರಿಗೆಹಾಕುವಿಕೆಯು ವರಮಾನದ 33 ಪ್ರತಿಶತವಾಗಿರುವಲ್ಲಿ (ಕೆಲವು ದೇಶಗಳಲ್ಲಿ ಅದು ಹೆಚ್ಚಾಗಿರುತ್ತದೆ), ಇದರ ಅರ್ಥ, ಪ್ರತಿ ವರ್ಷ ಸರಾಸರಿ ಕೆಲಸಗಾರನು ರಾಜ್ಯದ ಕೋಶಕ್ಕೆ ತನ್ನ ಸಂಪಾದನೆಗಳಲ್ಲಿ ಮೂರನೆಯ ಒಂದಂಶವನ್ನು ಸಲ್ಲಿಸುತ್ತಾನೆ. ಇನ್ನೊಂದು ವಿಧದಲ್ಲಿ ಹೇಳುವುದಾದರೆ, ತನ್ನ ಕಾರ್ಮಿಕ ಜೀವನದ ಕೊನೆಯಲ್ಲಿ, ಸರಾಸರಿ ಕೆಲಸಗಾರನು “ಕೈಸರನು” ಅವಶ್ಯಪಡಿಸುವ ತೆರಿಗೆಯ ಹಣವನ್ನು ಸಂಪಾದಿಸುತ್ತಾ, ಸುಮಾರು 15 ವರ್ಷಗಳನ್ನು ಕಳೆದಿರುವನು. ಶಾಲಾ ಶಿಕ್ಷಣದ ವಿಷಯವನ್ನೂ ಪರಿಗಣಿಸಿರಿ. ತಮ್ಮ ಮಕ್ಕಳು ಕೊಂಚ ವರ್ಷಕಾಲದ ವರೆಗೆ ಶಾಲೆಗೆ ಹಾಜರಾಗುವಂತೆ ಹೆತ್ತವರು ಬಿಡಬೇಕೆಂದು ಹೆಚ್ಚಿನ ದೇಶಗಳಲ್ಲಿನ ನಿಯಮವು ಅವಶ್ಯಪಡಿಸುತ್ತದೆ. ಶಾಲಾ ಶಿಕ್ಷಣದ ವರ್ಷಗಳ ಸಂಖ್ಯೆಯು ದೇಶದಿಂದ ದೇಶಕ್ಕೆ ವ್ಯತ್ಯಾಸವಾಗಿರುತ್ತದೆ. ಹೆಚ್ಚಿನ ಸ್ಥಳಗಳಲ್ಲಿ, ಅದು ಗಣನೀಯ ಪ್ರಮಾಣದ ಸಮಯಾವಧಿಯನ್ನು ಒಳಗೊಳ್ಳುತ್ತದೆ. ನಿಜ, ಅಂತಹ ಶಾಲಾ ಶಿಕ್ಷಣವು ಸಾಮಾನ್ಯವಾಗಿ ಪ್ರಯೋಜನಕರವಾಗಿದೆ, ಆದರೆ ಒಂದು ಮಗುವಿನ ಜೀವಿತದ ಯಾವ ಭಾಗವು ಈ ರೀತಿಯಲ್ಲಿ ವ್ಯಯಿಸಲ್ಪಡಬೇಕೆಂದು ತೀರ್ಮಾನಿಸುವವನು ಕೈಸರನು, ಮತ್ತು ಕ್ರೈಸ್ತ ಹೆತ್ತವರು ಕೈಸರನ ನಿರ್ಣಯದೊಂದಿಗೆ ಸಮ್ಮತಿಸುತ್ತಾರೆ.
ಕಡ್ಡಾಯ ಮಿಲಿಟರಿ ಸೇವೆ
11, 12. (ಎ) ಅನೇಕ ದೇಶಗಳಲ್ಲಿ ಕೈಸರನು ಯಾವ ಬೇಡಿಕೆಯನ್ನು ಮಾಡುತ್ತಾನೆ? (ಬಿ) ಆದಿ ಕ್ರೈಸ್ತರು ಮಿಲಿಟರಿ ಸೇವೆಯನ್ನು ಹೇಗೆ ವೀಕ್ಷಿಸಿದರು?
11 ಕೆಲವು ದೇಶಗಳಲ್ಲಿ ಕೈಸರನಿಂದ ಮಾಡಲ್ಪಡುವ ಮತ್ತೊಂದು ಬೇಡಿಕೆಯು, ಕಡ್ಡಾಯ ಮಿಲಿಟರಿ ಸೇವೆಯಾಗಿದೆ. 20ನೆಯ ಶತಮಾನದಲ್ಲಿ, ಈ ಏರ್ಪಾಡು ಹೆಚ್ಚಿನ ರಾಷ್ಟ್ರಗಳಿಂದ ಯುದ್ಧದ ಸಮಯಗಳಲ್ಲಿ ಮತ್ತು ಕೆಲವು ರಾಷ್ಟ್ರಗಳಿಂದ ಶಾಂತಿಯ ಸಮಯಗಳಲ್ಲೂ ಸ್ಥಾಪಿಸಲ್ಪಟ್ಟಿದೆ. ಫ್ರಾನ್ಸ್ನಲ್ಲಿ ಈ ಹಂಗನ್ನು ಅನೇಕ ವರ್ಷಗಳ ವರೆಗೆ ರಕ್ತ ಕರವೆಂದು ಕರೆಯಲಾಯಿತು, ಅಂದರೆ ರಾಜ್ಯಕ್ಕಾಗಿ ತನ್ನ ಜೀವವನ್ನು ತ್ಯಾಗಮಾಡಲು ಪ್ರತಿಯೊಬ್ಬ ಯುವ ಪುರುಷನು ಇಚ್ಛೆಯುಳ್ಳವನಾಗಿರಬೇಕಿತ್ತು. ಇದು ಯೆಹೋವನಿಗೆ ಸಮರ್ಪಿತರಾಗಿರುವವರು ಪ್ರಾಮಾಣಿಕವಾಗಿ ಸಲ್ಲಿಸಸಾಧ್ಯವಿರುವ ವಿಷಯವಾಗಿದೆಯೊ? ಪ್ರಥಮ ಶತಮಾನದ ಕ್ರೈಸ್ತರು ಈ ವಿಷಯವನ್ನು ಹೇಗೆ ವೀಕ್ಷಿಸಿದರು?
12 ಅತ್ಯಂತ ಆದಿ ಕ್ರೈಸ್ತರು ಒಳ್ಳೆಯ ಪ್ರಜೆಗಳಾಗಿರಲು ಪ್ರಯತ್ನಿಸಿದರಾದರೂ, ಇನ್ನೊಬ್ಬನ ಜೀವವನ್ನು ತೆಗೆಯುವುದರಿಂದ ಅಥವಾ ರಾಜ್ಯಕ್ಕಾಗಿ ತಮ್ಮ ಸ್ವಂತ ಜೀವಗಳನ್ನು ಬಲಿಕೊಡುವುದರಿಂದ ಅವರ ನಂಬಿಕೆಯು ಅವರನ್ನು ತಡೆಯಿತು. ದಿ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಹೇಳುವುದು: “ಟೆರ್ಟುಲ್ಯನ್ ಮತ್ತು ಆರಿಜನ್ ಅನ್ನು ಸೇರಿಸಿ, ಆದಿಯ ಚರ್ಚ್ ಪ್ರಮುಖರು, ಮಾನವ ಜೀವವನ್ನು ತೆಗೆಯುವುದರಿಂದ ಕ್ರೈಸ್ತರು ನಿರ್ಬಂಧಿಸಲ್ಪಟ್ಟಿದ್ದರೆಂಬುದನ್ನು ದೃಢಪಡಿಸಿದರು—ಇದು ರೋಮನ್ ಸೇನೆಯಲ್ಲಿ ಭಾಗವಹಿಸುವುದರಿಂದ ಅವರನ್ನು ತಡೆದ ಒಂದು ತತ್ವವಾಗಿತ್ತು.” ದಿ ಅರ್ಲಿ ಚರ್ಚ್ ಆ್ಯಂಡ್ ದ ವರ್ಲ್ಡ್ ಎಂಬ ತಮ್ಮ ಪುಸ್ತಕದಲ್ಲಿ, ಪ್ರೊಫೆಸರ್ ಸಿ. ಜೆ. ಕಾಡೂ ಬರೆಯುವುದು: “ಮಾರ್ಕಸ್ ಆರೆಲಿಯಸ್ನ ಆಳಿಕೆಯ ವರೆಗಾದರೂ, [ಸಾ.ಶ. 161-180] ಯಾವ ಕ್ರೈಸ್ತನೂ ತನ್ನ ದೀಕ್ಷಾಸ್ನಾನದ ತರುವಾಯ ಸೈನಿಕನಾಗುತ್ತಿರಲಿಲ್ಲ.”
13. ಕ್ರೈಸ್ತಪ್ರಪಂಚದಲ್ಲಿರುವ ಹೆಚ್ಚಿನವರು ಮಿಲಿಟರಿ ಸೇವೆಯನ್ನು ಆದಿ ಕ್ರೈಸ್ತರು ವೀಕ್ಷಿಸುವಂತೆ ವೀಕ್ಷಿಸುವುದಿಲ್ಲವೇಕೆ?
13 ಇಂದು ಕ್ರೈಸ್ತಪ್ರಪಂಚದ ಚರ್ಚುಗಳ ಸದಸ್ಯರು ವಿಷಯಗಳನ್ನು ಈ ರೀತಿಯಲ್ಲಿ ಏಕೆ ವೀಕ್ಷಿಸುವುದಿಲ್ಲ? ನಾಲ್ಕನೆಯ ಶತಮಾನದಲ್ಲಿ ಸಂಭವಿಸಿದ ಒಂದು ಅಮೂಲಾಗ್ರವಾದ ಬದಲಾವಣೆಯಿಂದಲೇ. ಕ್ಯಾಥೊಲಿಕ್ ಪ್ರಕಾಶನವಾದ ಎ ಹಿಸ್ಟರಿ ಆಫ್ ದ ಕ್ರಿಸ್ಟಿಆ್ಯನ್ ಕೌನ್ಸಿಲ್ಸ್ ವಿವರಿಸುವುದು: “ಅನೇಕ ಕ್ರೈಸ್ತರಿಗೆ, . . . ವಿಧರ್ಮಿ ಚಕ್ರವರ್ತಿಗಳ ಅಧೀನದಲ್ಲಿ, ಮಿಲಿಟರಿ ಸೇವೆಯ ಸಂಬಂಧದಲ್ಲಿ ಧಾರ್ಮಿಕ ಅಳುಕುಗಳಿದ್ದವು ಮತ್ತು ಸಕಾರಾತ್ಮಕವಾಗಿ ಸೈನಿಕರೋಪಾದಿ ಸೇವೆಮಾಡಲು ನಿರಾಕರಿಸಿದರು, ಇಲ್ಲವೆ ತೊರೆದುಬಿಟ್ಟರು. [ಸಾ.ಶ. 314ರಲ್ಲಿ ಜರುಗಿದ ಅರ್ಲ್ಸ್ನ] ಧರ್ಮಾಧಿಕಾರಿಗಳ ಆಲೋಚನಾ ಸಭೆಯು, ಕಾನ್ಸ್ಟಂಟೀನನ ಮೂಲಕ ತರಲ್ಪಟ್ಟ ಬದಲಾವಣೆಗಳನ್ನು ಪರಿಗಣಿಸುತ್ತಾ, ಕ್ರೈಸ್ತರು ಯುದ್ಧದಲ್ಲಿ ಸೇವೆ ಮಾಡಲೇಬೇಕೆಂಬ ಹಂಗನ್ನು ಸ್ಥಾಪಿಸಿತು, . . . ಏಕೆಂದರೆ ಕ್ರೈಸ್ತರೊಂದಿಗೆ ಸ್ನೇಹಪರನಾಗಿರುವ ಒಬ್ಬ ರಾಜಕುಮಾರನ ಅಧೀನದಲ್ಲಿ, ಚರ್ಚು ರಾಜ್ಯದೊಂದಿಗೆ ಶಾಂತಿಯಲ್ಲಿದೆ (ಇನ್ ಪೇಸ್).” ಯೇಸುವಿನ ಬೋಧನೆಗಳ ಈ ತೊರೆಯುವಿಕೆಯ ಫಲಸ್ವರೂಪವಾಗಿ, ಆ ಸಮಯದಿಂದ ಇಲ್ಲಿಯ ವರೆಗೆ, ಕೆಲವು ವ್ಯಕ್ತಿಗಳು ಆತ್ಮಸಾಕ್ಷಿಗೆ ವಿರುದ್ಧವೆಂದು ಪ್ರತಿಭಟಿಸುವವರಾಗಿ ನಿಲುವನ್ನು ತೆಗೆದುಕೊಂಡಿದ್ದರೂ, ರಾಷ್ಟ್ರಗಳ ಸೇನೆಗಳಲ್ಲಿ ಸೇವೆ ಮಾಡಲು ಕ್ರೈಸ್ತಪ್ರಪಂಚದ ಪಾದ್ರಿಗಳು ತಮ್ಮ ಹಿಂಡುಗಳನ್ನು ಉತ್ತೇಜಿಸಿದ್ದಾರೆ.
14, 15. (ಎ) ಕೆಲವು ಸ್ಥಳಗಳಲ್ಲಿರುವ ಕ್ರೈಸ್ತರು ಯಾವ ಆಧಾರದ ಮೇಲೆ ಮಿಲಿಟರಿ ಸೇವೆಯಿಂದ ವಿನಾಯಿತಿಯನ್ನು ಕೇಳುತ್ತಾರೆ? (ಬಿ) ವಿನಾಯಿತಿಯು ಲಭ್ಯವಿರದಿರುವಲ್ಲಿ, ಮಿಲಿಟರಿ ಸೇವೆಯ ವಿಷಯದಲ್ಲಿ ಸರಿಯಾದ ನಿರ್ಣಯವನ್ನು ಮಾಡುವಂತೆ, ಯಾವ ಶಾಸ್ತ್ರೀಯ ತತ್ವಗಳು ಒಬ್ಬ ಕ್ರೈಸ್ತನಿಗೆ ಸಹಾಯ ಮಾಡುವವು?
14 ಇಂದು ಈ ವಿಷಯದಲ್ಲಿ ಅಧಿಕಾಂಶ ಜನರನ್ನು ಹಿಂಬಾಲಿಸುವಂತೆ ಕ್ರೈಸ್ತರು ಬದ್ಧರಾಗಿದ್ದಾರೊ? ಇಲ್ಲ. ಒಬ್ಬ ಸಮರ್ಪಿತ, ದೀಕ್ಷಾಸ್ನಾನ ಪಡೆದ ಕ್ರೈಸ್ತನು, ಧರ್ಮದ ಶುಶ್ರೂಷಕರಿಗೆ ಮಿಲಿಟರಿ ಸೇವೆಯಿಂದ ವಿನಾಯಿತಿಯು ಅನುಗ್ರಹಿಸಲ್ಪಡುವ ಒಂದು ದೇಶದಲ್ಲಿ ಜೀವಿಸುವುದಾದರೆ, ಅವನು ಈ ಏರ್ಪಾಡಿನ ಲಾಭವನ್ನು ಪಡೆದುಕೊಳ್ಳಬಹುದು, ಏಕೆಂದರೆ ಅವನು ವಾಸ್ತವವಾಗಿ ಒಬ್ಬ ಶುಶ್ರೂಷಕನಾಗಿದ್ದಾನೆ. (2 ತಿಮೊಥೆಯ 4:5) ಅಮೆರಿಕ ಮತ್ತು ಆಸ್ಟ್ರೇಲಿಯವನ್ನು ಸೇರಿಸಿ, ಅನೇಕ ದೇಶಗಳು ಇಂತಹ ವಿನಾಯಿತಿಯನ್ನು ಯುದ್ಧದ ಸಮಯದಲ್ಲೂ ಅನುಗ್ರಹಿಸಿವೆ. ಮತ್ತು ಶಾಂತಿಯ ಸಮಯದಲ್ಲಿ, ಕಡ್ಡಾಯ ಮಿಲಿಟರಿ ಸೇವೆಯನ್ನಿಟ್ಟುಕೊಳ್ಳುವ ಅನೇಕ ದೇಶಗಳಲ್ಲಿ, ಧರ್ಮದ ಶುಶ್ರೂಷಕರೋಪಾದಿ ಯೆಹೋವನ ಸಾಕ್ಷಿಗಳಿಗೆ ವಿನಾಯಿತಿಯು ಅನುಗ್ರಹಿಸಲ್ಪಡುತ್ತದೆ. ಹೀಗೆ ಅವರು ತಮ್ಮ ಸಾರ್ವಜನಿಕ ಸೇವೆಯ ಮೂಲಕ ಜನರಿಗೆ ಸಹಾಯ ಮಾಡುವುದನ್ನು ಮುಂದುವರಿಸಬಲ್ಲರು.
15 ಆದರೆ, ಧರ್ಮದ ಶುಶ್ರೂಷಕರಿಗೆ ವಿನಾಯಿತಿಯು ಅನುಗ್ರಹಿಸಲ್ಪಡದ ದೇಶವೊಂದರಲ್ಲಿ ಕ್ರೈಸ್ತನೊಬ್ಬನು ಜೀವಿಸುವುದಾದರೆ ಆಗೇನು? ಆಗ ಅವನು ತನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯನ್ನು ಅನುಸರಿಸುತ್ತಾ, ಒಂದು ವೈಯಕ್ತಿಕ ನಿರ್ಣಯವನ್ನು ಮಾಡಬೇಕಾಗುತ್ತದೆ. (ಗಲಾತ್ಯ 6:5) ಕೈಸರನ ಅಧಿಕಾರವನ್ನು ಗಣನೆಗೆ ತೆಗೆದುಕೊಳ್ಳುವಾಗ, ಯೆಹೋವನಿಗೆ ಸಲ್ಲಿಸಬೇಕಾದುದನ್ನು ಅವನು ಜಾಗರೂಕವಾಗಿ ತೂಗಿನೋಡುವನು. (ಕೀರ್ತನೆ 36:9; 116:12-14; ಅ. ಕೃತ್ಯಗಳು 17:28) ತನ್ನ ಎಲ್ಲ ಜೊತೆ ವಿಶ್ವಾಸಿಗಳಿಗಾಗಿ—ಇತರ ದೇಶಗಳಲ್ಲಿ ಜೀವಿಸುವವರು ಅಥವಾ ಇತರ ಜಾತಿಗಳಿಗೆ ಸೇರಿರುವವರಿಗಾಗಿಯೂ—ಪ್ರೀತಿಯು, ಒಬ್ಬ ಸತ್ಯ ಕ್ರೈಸ್ತನ ಗುರುತಾಗಿದೆಯೆಂದು ಆ ಕ್ರೈಸ್ತನು ಜ್ಞಾಪಿಸಿಕೊಳ್ಳುವನು. (ಯೋಹಾನ 13:34, 35; 1 ಪೇತ್ರ 2:17) ಇನ್ನೂ ಹೆಚ್ಚಾಗಿ, ಯೆಶಾಯ 2:2-4; ಮತ್ತಾಯ 26:52; ರೋಮಾಪುರ 12:18; 14:19; 2 ಕೊರಿಂಥ 10:4; ಮತ್ತು ಇಬ್ರಿಯ 12:14 ರಂತಹ ವಚನಗಳಲ್ಲಿ ಕಂಡುಕೊಳ್ಳಲ್ಪಡುವ ಶಾಸ್ತ್ರೀಯ ಮೂಲತತ್ವಗಳನ್ನು ಅವನು ಮರೆಯುವುದಿಲ್ಲ.
ಪೌರಸೇವೆ
16. ಕೆಲವು ದೇಶಗಳಲ್ಲಿ, ಮಿಲಿಟರಿ ಸೇವೆಯನ್ನು ಸ್ವೀಕರಿಸದವರಿಂದ ಯಾವ ಮಿಲಿಟರಿಯಲ್ಲದ ಸೇವೆಯನ್ನು ಕೈಸರನು ತಗಾದೆ ಮಾಡುತ್ತಾನೆ?
16 ಹಾಗಿದ್ದರೂ, ರಾಜ್ಯವು, ಧರ್ಮದ ಶುಶ್ರೂಷಕರಿಗಾಗಿ ವಿನಾಯಿತಿಯನ್ನು ಅನುಮತಿಸದೆ ಇರುವುದಾದರೂ, ಕೆಲವು ವ್ಯಕ್ತಿಗಳು ಮಿಲಿಟರಿ ಸೇವೆಗೆ ಪ್ರತಿಭಟಿಸಬಹುದೆಂದು ಅಂಗೀಕರಿಸುವ ದೇಶಗಳಿವೆ. ಇಂತಹ ಶುದ್ಧಾಂತಃಕರಣದ ವ್ಯಕ್ತಿಗಳು ಮಿಲಿಟರಿ ಸೇವೆಯೊಳಗೆ ಒತ್ತಾಯಿಸಲ್ಪಡದಂತೆ ಇಂತಹ ಅನೇಕ ದೇಶಗಳು ಏರ್ಪಾಡನ್ನು ಮಾಡುತ್ತವೆ. ಕೆಲವು ಸ್ಥಳಗಳಲ್ಲಿ, ಸಮುದಾಯದಲ್ಲಿ ಉಪಯೋಗಕರವಾದ ಕೆಲಸದಂತಹ ಅವಶ್ಯಗೊಳಿಸಲ್ಪಡುವ ಪೌರಸೇವೆಯು, ಮಿಲಿಟರಿಯಲ್ಲದ ರಾಷ್ಟ್ರೀಯ ಸೇವೆಯೋಪಾದಿ ಪರಿಗಣಿಸಲ್ಪಡುತ್ತದೆ. ಸಮರ್ಪಿತ ಕ್ರೈಸ್ತನೊಬ್ಬನು ಅಂತಹ ಒಂದು ಸೇವೆಯನ್ನು ಕೈಕೊಳ್ಳಬಹುದೊ? ಪುನಃ ಇಲ್ಲಿ, ಒಬ್ಬ ಸಮರ್ಪಿತ ದೀಕ್ಷಾಸ್ನಾನ ಪಡೆದ ಕ್ರೈಸ್ತನು, ತನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯ ಆಧಾರದ ಮೇಲೆ ತನ್ನ ಸ್ವಂತ ನಿರ್ಣಯವನ್ನು ಮಾಡಬೇಕಾಗುವುದು.
17. ಮಿಲಿಟರಿಯಲ್ಲದ ಪೌರಸೇವೆಗೆ ಬೈಬಲ್ ಸಂಬಂಧಿತ ಪೂರ್ವನಿದರ್ಶನದ ಆಧಾರವಿದೆಯೊ?
17 ಬೈಬಲ್ ಸಮಯಗಳಲ್ಲಿ ಕಡ್ಡಾಯ ಸೇವೆಯು ಆಚರಿಸಲ್ಪಟ್ಟಿತ್ತೆಂದು ತೋರುತ್ತದೆ. ಒಂದು ಇತಿಹಾಸ ಪುಸ್ತಕವು ಹೇಳುವುದು: “ಯೂದಾಯದ ನಿವಾಸಿಗಳಿಂದ ವಸೂಲಿ ಮಾಡಲ್ಪಟ್ಟ ತೆರಿಗೆಗಳು ಮತ್ತು ಕರಗಳಿಗೆ ಕೂಡಿಸಿ, ಬಿಟ್ಟಿ ಬೇಗಾರಿಯೂ [ಸಾರ್ವಜನಿಕ ಅಧಿಕಾರಿಗಳ ಮೂಲಕ ಸಂಬಳಕೊಡದೆ ವಸೂಲಿ ಮಾಡಲ್ಪಟ್ಟ ಶ್ರಮ] ಇತ್ತು. ಇದು ಮಧ್ಯ ಪೂರ್ವದ ಒಂದು ಪ್ರಾಚೀನ ಸಂಘಟನೆಯಾಗಿತ್ತು, ಇದನ್ನು ಹೆಲನಿಸ್ಟಿಕ್ ಮತ್ತು ರೋಮನ್ ಅಧಿಕಾರಿಗಳು ನಡೆಸಿಕೊಂಡು ಬಂದರು. . . . ಹೊಸ ಒಡಂಬಡಿಕೆಯು ಸಹ, ಅದು ಎಷ್ಟು ವ್ಯಾಪಕವಾಗಿತ್ತೆಂಬುದನ್ನು ತೋರಿಸುತ್ತಾ, ಯೂದಾಯದಲ್ಲಿನ ಬಿಟ್ಟಿ ಬೇಗಾರಿಯ ಉದಾಹರಣೆಗಳನ್ನು ನಮೂದಿಸುತ್ತದೆ. ಈ ರೂಢಿಗೆ ಅನುಗುಣವಾಗಿ, ಯೇಸುವಿನ ಶಿಲುಬೆ [ಯಾತನಾ ಕಂಭ]ಯನ್ನು ಹೊತ್ತುಕೊಳ್ಳುವಂತೆ ಸೈನಿಕರು ಕುರೇನೆ ಪಟ್ಟಣದ ಸೀಮೋನನನ್ನು ಒತ್ತಾಯಿಸಿದರು (ಮತ್ತಾಯ 5:41; 27:32; ಮಾರ್ಕ 15:21; ಲೂಕ 23:26).”
18. ಯಾವ ಬಗೆಯ ಮಿಲಿಟರಿಯಲ್ಲದ, ಧಾರ್ಮಿಕವಲ್ಲದ ಸಮುದಾಯ ಸೇವೆಯೊಂದಿಗೆ ಯೆಹೋವನ ಸಾಕ್ಷಿಗಳು ಅನೇಕ ವೇಳೆ ಸಹಕರಿಸುತ್ತಾರೆ?
18 ತದ್ರೀತಿಯಲ್ಲಿ, ಸಮುದಾಯ ಸೇವೆಯ ವಿಭಿನ್ನ ರೂಪಗಳಲ್ಲಿ ಭಾಗವಹಿಸುವಂತೆ ಕೆಲವು ದೇಶಗಳಲ್ಲಿರುವ ಪೌರರು, ರಾಜ್ಯ ಅಥವಾ ಸ್ಥಳಿಕ ಅಧಿಕಾರಿಗಳಿಂದ ಕೇಳಿಕೊಳ್ಳಲ್ಪಡುತ್ತಾರೆ. ಕೆಲವೊಮ್ಮೆ ಇದು ಬಾವಿಗಳನ್ನು ತೋಡುವುದು ಅಥವಾ ರಸ್ತೆಗಳನ್ನು ನಿರ್ಮಿಸುವಂತಹ ನಿರ್ದಿಷ್ಟ ಕೆಲಸಕ್ಕಾಗಿರುತ್ತದೆ; ಕೆಲವೊಮ್ಮೆ ಅದು ರಸ್ತೆಗಳು, ಶಾಲೆಗಳು ಅಥವಾ ಆಸ್ಪತ್ರೆಗಳನ್ನು ಶುಚಿ ಮಾಡುವುದರಲ್ಲಿ ಸಾಪ್ತಾಹಿಕ ಭಾಗವಹಿಸುವಿಕೆಯಂತಹ ಕ್ರಮವಾದ ಆಧಾರದ ಮೇಲಿರುತ್ತದೆ. ಎಲ್ಲಿ ಇಂತಹ ಪೌರಸೇವೆಯು ಸಮುದಾಯದ ಒಳಿತಿಗಾಗಿರುತ್ತದೊ ಮತ್ತು ಸುಳ್ಳು ಧರ್ಮದೊಂದಿಗೆ ಸಂಬಂಧಿಸಿರುವುದಿಲ್ಲವೊ ಅಥವಾ ಬೇರೆ ಯಾವುದೇ ವಿಧದಲ್ಲಿ ಯೆಹೋವನ ಸಾಕ್ಷಿಗಳ ಮನಸ್ಸಾಕ್ಷಿಗಳಿಗೆ ಆಕ್ಷೇಪಣೀಯವಾಗಿರುವುದಿಲ್ಲವೊ, ಅಲ್ಲಿ ಅನೇಕ ವೇಳೆ ಅವರು ಸಮ್ಮತಿಸಿದ್ದಾರೆ. (1 ಪೇತ್ರ 2:13-15) ಇದು ಸಾಮಾನ್ಯವಾಗಿ ಅತ್ಯುತ್ತಮ ಸಾಕ್ಷಿಯಲ್ಲಿ ಫಲಿಸಿದೆ ಮತ್ತು ಸಾಕ್ಷಿಗಳು ಸರಕಾರವಿರೋಧಿಗಳಾಗಿರುವುದರ ಕುರಿತು ಅಸತ್ಯವಾಗಿ ದೂಷಿಸುವವರನ್ನು ಇದು ಕೆಲವೊಮ್ಮೆ ಸುಮ್ಮನಾಗಿಸಿದೆ.—ಹೋಲಿಸಿ ಮತ್ತಾಯ 10:18.
19. ಒಂದು ಸಮಯಾವಧಿಗಾಗಿ ಮಿಲಿಟರಿಯಲ್ಲದ ರಾಷ್ಟ್ರೀಯ ಸೇವೆಯನ್ನು ಮಾಡುವಂತೆ ಕೈಸರನು ಅವನನ್ನು ಕೇಳಿದರೆ, ಕ್ರೈಸ್ತನೊಬ್ಬನು ವಿಷಯವನ್ನು ಹೇಗೆ ಸಮೀಪಿಸಬೇಕು?
19 ಆದರೆ, ಪೌರ ಆಡಳಿತದ ಕೆಳಗೆ, ರಾಷ್ಟ್ರೀಯ ಸೇವೆಯ ಒಂದು ಭಾಗವಾಗಿರುವ ಪೌರಸೇವೆಯನ್ನು ಒಂದು ಸಮಯಾವಧಿಯ ವರೆಗೆ ಕ್ರೈಸ್ತನೊಬ್ಬನು ಮಾಡುವಂತೆ ರಾಜ್ಯವು ಕೇಳಿಕೊಳ್ಳುವುದಾದರೆ ಆಗೇನು? ಪುನಃ ಇಲ್ಲಿ, ಒಂದು ತಿಳಿವಳಿಕೆಯುಳ್ಳ ಮನಸ್ಸಾಕ್ಷಿಯ ಮೇಲೆ ಆಧರಿಸಿ, ಕ್ರೈಸ್ತರು ತಮ್ಮ ಸ್ವಂತ ನಿರ್ಣಯವನ್ನು ಮಾಡಬೇಕು. “ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕಲ್ಲಾ.” (ರೋಮಾಪುರ 14:10) ಕೈಸರನ ಆವಶ್ಯಕತೆಯನ್ನು ಎದುರಿಸುವ ಕ್ರೈಸ್ತರು, ವಿಷಯವನ್ನು ಪ್ರಾರ್ಥನಾಪೂರ್ವಕವಾಗಿ ಅಭ್ಯಸಿಸಿ, ಅದರ ಮೇಲೆ ಮನನ ಮಾಡಬೇಕು.a ವಿಷಯದ ಕುರಿತು ಸಭೆಯಲ್ಲಿರುವ ಪಕ್ವ ಕ್ರೈಸ್ತರೊಂದಿಗೆ ಮಾತಾಡುವುದೂ ವಿವೇಕವುಳ್ಳದ್ದಾಗಿರಬಹುದು. ಇದರ ನಂತರ ಒಂದು ವೈಯಕ್ತಿಕ ನಿರ್ಣಯವನ್ನು ಮಾಡಬೇಕು.—ಜ್ಞಾನೋಕ್ತಿ 2:1-5; ಫಿಲಿಪ್ಪಿ 4:5.
20. ಮಿಲಿಟರಿಯಲ್ಲದ ರಾಷ್ಟ್ರೀಯ ಪೌರಸೇವೆಯ ವಿಷಯದಲ್ಲಿ ವಿವೇಚಿಸಲು, ಯಾವ ಪ್ರಶ್ನೆಗಳು ಮತ್ತು ಶಾಸ್ತ್ರೀಯ ತತ್ವಗಳು ಒಬ್ಬ ಕ್ರೈಸ್ತನಿಗೆ ಸಹಾಯ ಮಾಡುವವು?
20 ಇಂತಹ ಸಂಶೋಧನೆಯಲ್ಲಿ ತೊಡಗಿರುವಾಗ, ಕ್ರೈಸ್ತರು ಹಲವಾರು ಬೈಬಲ್ ತತ್ವಗಳನ್ನು ಪರಿಗಣಿಸುವರು. ಪೌಲನು ಹೇಳಿದ್ದೇನೆಂದರೆ, ನಾವು “ಅಧಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕೆಂತಲೂ, ಸಕಲಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರಾಗಿರಬೇಕೆಂತಲೂ, . . . ಎಲ್ಲಾ ಮನುಷ್ಯರಿಗೆ ಪೂರ್ಣಸಾಧುಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರ”ಬೇಕು. (ತೀತ 3:1, 2) ಅದೇ ಸಮಯದಲ್ಲಿ, ಪ್ರಸ್ತಾಪಿಸಲ್ಪಟ್ಟ ಪೌರಕೆಲಸವನ್ನು ಪರೀಕ್ಷಿಸುವುದು ಕ್ರೈಸ್ತರಿಗೆ ಒಳ್ಳೆಯದಾಗಿರುವುದು. ಅವರು ಅದನ್ನು ಸ್ವೀಕರಿಸುವುದಾದರೆ, ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿಕೊಳ್ಳಲು ಅವರು ಶಕ್ತರಾಗಿರುವರೊ? (ಮೀಕ 4:3, 5; ಯೋಹಾನ 17:16) ಅದು ಅವರನ್ನು ಯಾವುದಾದರೂ ಸುಳ್ಳು ಧರ್ಮದೊಂದಿಗೆ ಒಳಗೂಡಿಸುವುದೊ? (ಪ್ರಕಟನೆ 18:4, 20, 21) ಅದರ ಮಾಡುವಿಕೆಯು, ತಮ್ಮ ಕ್ರೈಸ್ತ ಜವಾಬ್ದಾರಿಗಳನ್ನು ಪೂರೈಸುವುದರಿಂದ ಅವರನ್ನು ತಡೆಯುವುದೊ ಅಥವಾ ವಿಚಾರಹೀನವಾಗಿ ಸೀಮಿತಪಡಿಸುವುದೊ? (ಮತ್ತಾಯ 24:14; ಇಬ್ರಿಯ 10:24, 25) ಇನ್ನೊಂದು ಕಡೆಯಲ್ಲಿ, ಅವಶ್ಯಗೊಳಿಸಲ್ಪಟ್ಟ ಸೇವೆಯನ್ನು ಮಾಡುವಾಗ, ಬಹುಶಃ ಪೂರ್ಣ ಸಮಯದ ಶುಶ್ರೂಷೆಯಲ್ಲೂ ಭಾಗವಹಿಸುತ್ತಾ, ಆತ್ಮಿಕ ಪ್ರಗತಿ ಮಾಡುವುದನ್ನು ಮುಂದುವರಿಸಲು ಅವರು ಶಕ್ತರಾಗಿರುವರೊ?—ಇಬ್ರಿಯ 6:11, 12.
21. ಅವನ ನಿರ್ಣಯವು ಏನೇ ಆಗಿರಲಿ, ಮಿಲಿಟರಿಯಲ್ಲದ ರಾಷ್ಟ್ರೀಯ ಪೌರಸೇವೆಯ ವಿಷಯವನ್ನು ನಿರ್ವಹಿಸುತ್ತಿರುವ ಒಬ್ಬ ಸಹೋದರನನ್ನು ಸಭೆಯು ಹೇಗೆ ವೀಕ್ಷಿಸಬೇಕು?
21 ಇಂತಹ ಪ್ರಶ್ನೆಗಳಿಗೆ ಕ್ರೈಸ್ತನೊಬ್ಬನ ಪ್ರಾಮಾಣಿಕ ಉತ್ತರಗಳು, ರಾಷ್ಟ್ರೀಯ ಪೌರಸೇವೆಯು, ಅಧಿಕಾರಿಗಳಿಗೆ ವಿಧೇಯತೆ ತೋರಿಸುತ್ತಾ ಅವನು ಮಾಡಬಲ್ಲ ಒಂದು “ಒಳ್ಳೆಯ ಕೆಲಸ”ವಾಗಿದೆ ಎಂದು ಅವನು ತೀರ್ಮಾನಿಸುವಂತೆ ನಡೆಸುವುದಾದರೆ ಆಗೇನು? ಅದು ಯೆಹೋವನ ಮುಂದೆ ಅವನ ನಿರ್ಣಯವಾಗಿದೆ. ನೇಮಿತ ಹಿರಿಯರು ಮತ್ತು ಇತರರು ಆ ಸಹೋದರನ ಮನಸ್ಸಾಕ್ಷಿಯನ್ನು ಪೂರ್ಣವಾಗಿ ಗೌರವಿಸಬೇಕು ಮತ್ತು ಒಳ್ಳೆಯ ನಿಲುವಿರುವ ಕ್ರೈಸ್ತನಂತೆ ಅವನನ್ನು ಪರಿಗಣಿಸುವುದನ್ನು ಮುಂದುವರಿಸಬೇಕು. ಆದರೆ, ಈ ಪೌರಸೇವೆಯನ್ನು ತಾನು ಮಾಡಸಾಧ್ಯವಿಲ್ಲವೆಂದು ಒಬ್ಬ ಕ್ರೈಸ್ತನಿಗೆ ಅನಿಸಿದರೆ, ಅವನ ಸ್ಥಾನವನ್ನೂ ಗೌರವಿಸಬೇಕು. ಅವನು ಕೂಡ ಒಳ್ಳೆಯ ನಿಲುವಿನಲ್ಲಿರುತ್ತಾನೆ ಮತ್ತು ಪ್ರೀತಿಯ ಬೆಂಬಲವನ್ನು ಪಡೆಯಬೇಕು.—1 ಕೊರಿಂಥ 10:29; 2 ಕೊರಿಂಥ 1:24; 1 ಪೇತ್ರ 3:16.
22. ಯಾವ ಸನ್ನಿವೇಶವೇ ನಮ್ಮ ಎದುರಿರಲಿ, ಏನು ಮಾಡುವುದನ್ನು ನಾವು ಮುಂದುವರಿಸುವೆವು?
22 ಕ್ರೈಸ್ತರೋಪಾದಿ ನಾವು “ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು” ಸಲ್ಲಿಸುವುದನ್ನು ನಿಲ್ಲಿಸಲಾರೆವು. (ರೋಮಾಪುರ 13:7) ಒಳ್ಳೆಯ ಶಿಸ್ತನ್ನು ನಾವು ಗೌರವಿಸುವೆವು ಮತ್ತು ಶಾಂತಿಪೂರ್ಣ, ನ್ಯಾಯಬದ್ಧ ಪೌರರಾಗಿರಲು ಪ್ರಯತ್ನಿಸುವೆವು. (ಕೀರ್ತನೆ 34:14) ನಮ್ಮ ಕ್ರೈಸ್ತ ಜೀವನ ಮತ್ತು ಕೆಲಸವನ್ನು ಬಾಧಿಸುವ ನಿರ್ಣಯಗಳನ್ನು ಮಾಡುವಂತೆ ಈ ಪುರುಷರು ಕೇಳಿಕೊಳ್ಳಲ್ಪಡುವಾಗ, ನಾವು “ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ” ಪ್ರಾರ್ಥಿಸಲೂಬಹುದು. ಕೈಸರನ ವಿಷಯಗಳನ್ನು ಕೈಸರನಿಗೆ ಹಿಂದಕ್ಕೆ ಸಲ್ಲಿಸುವುದರ ಪರಿಣಾಮವಾಗಿ, “ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ”ಮಾಡುವೆವೆಂದು ನಾವು ನಿರೀಕ್ಷಿಸಬಹುದು. (1 ತಿಮೊಥೆಯ 2:1, 2) ಎಲ್ಲಕ್ಕಿಂತ ಹೆಚ್ಚಾಗಿ, ಶುದ್ಧಾಂತಃಕರಣದಿಂದ ದೇವರ ವಿಷಯಗಳನ್ನು ದೇವರಿಗೆ ಹಿಂದಕ್ಕೆ ಕೊಡುತ್ತಾ, ಮಾನವಜಾತಿಯ ಏಕಮಾತ್ರ ನಿರೀಕ್ಷೆಯೋಪಾದಿ ನಾವು ರಾಜ್ಯದ ಸುವಾರ್ತೆಯನ್ನು ಸಾರುವುದನ್ನು ಮುಂದುವರಿಸುವೆವು.
[ಪಾದಟಿಪ್ಪಣಿ]
ನೀವು ವಿವರಿಸಬಲ್ಲಿರೊ?
◻ ಕೈಸರನು ಮತ್ತು ಯೆಹೋವನೊಂದಿಗಿನ ತನ್ನ ಸಂಬಂಧಗಳನ್ನು ಸರಿದೂಗಿಸುವುದರಲ್ಲಿ, ಕ್ರೈಸ್ತನೊಬ್ಬನ ಪ್ರಪ್ರಥಮ ಚಿಂತೆಯು ಏನಾಗಿದೆ?
◻ ನಾವು ಕೈಸರನಿಗೆ ಎಂದಿಗೂ ಸಲ್ಲಿಸಸಾಧ್ಯವಿರದ ಏನನ್ನು ಯೆಹೋವನಿಗೆ ಸಲ್ಲಿಸುವ ಹಂಗಿನವರಾಗಿದ್ದೇವೆ?
◻ ನಾವು ಯೋಗ್ಯವಾಗಿ ಕೈಸರನಿಗೆ ಹಿಂದುರುಗಿಕೊಡುವ ಕೆಲವು ವಿಷಯಗಳಾವುವು?
◻ ಕಡ್ಡಾಯ ಮಿಲಿಟರಿ ಸೇವೆಯ ವಿಷಯದಲ್ಲಿ ಸರಿಯಾದ ನಿರ್ಣಯವನ್ನು ಮಾಡುವಂತೆ ಯಾವ ಶಾಸ್ತ್ರವಚನಗಳು ನಮಗೆ ಸಹಾಯ ಮಾಡುತ್ತವೆ?
◻ ಮಿಲಿಟರಿಯಲ್ಲದ ರಾಷ್ಟ್ರೀಯ ಪೌರಸೇವೆಗೆ ನಾವು ಕರೆಯಲ್ಪಟ್ಟರೆ, ಮನಸ್ಸಿನಲ್ಲಿಡಬೇಕಾದ ಕೆಲವು ವಿಷಯಗಳಾವುವು?
◻ ಯೆಹೋವನ ಮತ್ತು ಕೈಸರನ ಸಂಬಂಧದಲ್ಲಿ, ಯಾವ ವಿಷಯವನ್ನು ನಾವು ಮಾಡುತ್ತಾ ಇರುತ್ತೇವೆ?
[ಪುಟ 16,17 ರಲ್ಲಿರುವಚಿತ್ರಗಳು]
ಸಭಾಮಂದಿರಕ್ಕೆ ಅಪೊಸ್ತಲರು ಹೇಳಿದ್ದು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ”