‘ನಿಮ್ಮ ಅಭಿವೃದ್ಧಿಯು ತೋರಿಬರಲಿ’
“ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.”—1 ಕೊರಿಂಥ 13:11.
1. ಬೆಳವಣಿಗೆಯು ಸೃಷ್ಟಿಯ ಅದ್ಭುತಕ್ಕೆ ಒಂದು ಸಾಕ್ಷ್ಯವಾಗಿದೆ ಹೇಗೆ?
ಕೇವಲ ಸೂಕ್ಷ್ಮದರ್ಶಕದಿಂದ ಮಾತ್ರವೇ ನೋಡ ಸಾಧ್ಯವಿರುವಷ್ಟು ಚಿಕ್ಕದಾದ ಒಂದು ತತ್ತಿಯಿಂದ, ಒಂದು ತಿಮಿಂಗಿಲವು, 30 ಮೀಟರ್ಗಳಿಗಿಂತಲೂ ಹೆಚ್ಚು ಉದ್ದದ ಮತ್ತು 80 ಟನ್ನುಗಳಿಗಿಂತಲೂ ಹೆಚ್ಚು ಭಾರದ ಒಂದು ಜೀವಿಯಾಗಿ ಬೆಳೆಯಬಲ್ಲದು. ತದ್ರೀತಿಯಲ್ಲಿ, ಅತ್ಯಂತ ಚಿಕ್ಕದಾದ ಬೀಜಗಳೊಂದರಿಂದ, ದೈತ್ಯ ಸಿಕ್ವಾಯ ಮರವು 90 ಮೀಟರುಗಳಿಗಿಂತಲೂ ಹೆಚ್ಚು ಎತ್ತರ ಬೆಳೆಯಬಹುದು. ನಿಜವಾಗಿಯೂ ಬೆಳವಣಿಗೆಯು ಜೀವದ ಅದ್ಭುತಗಳಲ್ಲಿ ಒಂದಾಗಿದೆ. ಅಪೊಸ್ತಲ ಪೌಲನು ಹೇಳಿದ ಪ್ರಕಾರ, ನಾವು ನೆಡಬಲ್ಲೆವು ಮತ್ತು ನೀರು ಹೊಯ್ಯಬಲ್ಲೆವು, ಆದರೆ “ಬೆಳೆಸುತ್ತಾ ಬಂದವನು ದೇವರು.”—1 ಕೊರಿಂಥ 3:7.
2. ಬೈಬಲ್ನಲ್ಲಿ ಯಾವ ರೀತಿಯ ಅಭಿವೃದ್ಧಿಯು ಮುಂತಿಳಿಸಲ್ಪಟ್ಟಿದೆ?
2 ಆದರೆ ಅಷ್ಟೇ ಅದ್ಭುತಕರವಾದ ಇನ್ನೊಂದು ರೀತಿಯ ಬೆಳೆವಣಿಗೆಯು ಇದೆ. ಅದು ಪ್ರವಾದಿ ಯೆಶಾಯನಿಂದ ಮುಂತಿಳಿಸಲ್ಪಟ್ಟಿದ್ದಾಗಿದೆ: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು. ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಅದನ್ನು ಬಲು ಬೇಗನೇ ಉಂಟುಮಾಡುವೆನು.” (ಯೆಶಾಯ 60:22) ಈ ಪ್ರವಾದನೆಯು ದೇವರ ಜನರ ಅಭಿವೃದ್ಧಿಯ ಸಂಬಂಧದಲ್ಲಿದೆ, ಮತ್ತು ನಮ್ಮ ದಿನದಲ್ಲಿ ಒಂದು ದೊಡ್ಡ ನೆರವೇರಿಕೆಯನ್ನು ಪಡೆಯುತ್ತಾ ಇದೆ.
3. ಯೆಹೋವನು ತನ್ನ ಜನರ ಕಾರ್ಯವನ್ನು ತ್ವರಿತಗೊಳಿಸುತ್ತಿದ್ದಾನೆಂದು 1991 ರ ಸೇವಾ ವರ್ಷದ ವರದಿ ಹೇಗೆ ತೋರಿಸಿತ್ತು?
3 ಯೆಹೋವನ ಸಾಕ್ಷಿಗಳ ಲೋಕ ವ್ಯಾಪಕ ಚಟುವಟಿಕೆಯ 1991 ರ ಸೇವಾ ವರ್ಷ ವರದಿಯು, ರಾಜ್ಯ ಪ್ರಚಾರಕರ ಸಂಖ್ಯೆಯು ಒಂದು ಹೊಸ ಉನ್ನತ ಸಂಖ್ಯೆಯಾದ 42,78,820 ಕ್ಕೆ ಮುಟ್ಟಿರುವುದನ್ನು ಮತ್ತು ಜುಮ್ಲಾ 3,00,945 ಮಂದಿ ಆ ವರ್ಷ ದೀಕ್ಷಾಸ್ನಾನ ಪಡೆದಿರುವುದನ್ನು ತೋರಿಸುತ್ತದೆ. ಇಷ್ಟು ಮಂದಿ ಹೊಸಬರ ಒಳಬರುವಿಕೆಯೊಂದಿಗೆ, 3,191 ಹೊಸ ಸಭೆಗಳು ಮತ್ತು ಅವುಗಳೊಂದಿಗೆ ಅನುರೂಪ ಸಂಖ್ಯೆಯಲ್ಲಿ ಸರ್ಕಿಟುಗಳು ಮತ್ತು ಡಿಸ್ಟ್ರಿಕ್ಟ್ಗಳು ರಚಿಸಲ್ಪಟ್ಟವು. ಇದು ದಿನಕ್ಕೆ ಎಂಟಕ್ಕಿಂತಲೂ ಹೆಚ್ಚು ಹೊಸ ಸಭೆಗಳು, ಬಹುಮಟ್ಟಿಗೆ ಪ್ರತಿ ಎರಡು ದಿನಗಳಿಗೆ ಒಂದು ಹೊಸ ಸರ್ಕಿಟು. ಎಂಥ ಆಶ್ಚರ್ಯಕರವಾದ ಬೆಳವಣಿಗೆಯು! ಯೆಹೋವನು ವಿಷಯಗಳನ್ನು ಬಲು ಬೇಗನೇ ನಡಿಸುತ್ತಿದ್ದಾನೆ, ಮತ್ತು ಆತನ ಆಶೀರ್ವಾದವು ಆತನ ಜನರ ಪ್ರಯತ್ನಗಳ ಮೇಲಿದೆ ಎಂಬದು ಸ್ಫುಟ.—ಕೀರ್ತನೆ 127:1.
ಆತ್ಮ ಪರೀಕೆಗ್ಷಾಗಿ ಸಮಯ
4. ನಾವು ಭವಿಷ್ಯದ ಕಡೆಗೆ ನೋಡುವಾಗ ಯಾವ ಪ್ರಶ್ನೆಗಳನ್ನು ಪರಿಗಣಿಸಬೇಕು?
4 ಈ ಆಶೀರ್ವಾದವನ್ನು ಕಾಣುವುದು ಹೃದಯಾನಂದಕರವಾದರೂ, ಇದು ನಿರ್ದಿಷ್ಟ ಜವಾಬ್ದಾರಿಕೆಗಳನ್ನೂ ತರುತ್ತದೆ. ಈ ಹೊಸಬರೆಲ್ಲರ ಆತ್ಮಿಕ ಆವಶ್ಯಕತೆಗಳನ್ನು ನೋಡಿಕೊಳ್ಳಲು ಸಾಕಷ್ಟು ಪಕ್ವತೆಯುಳ್ಳ ಮತ್ತು ಸಿದ್ಧ ಮನಸ್ಸಿನ ವ್ಯಕ್ತಿಗಳು ಇದ್ದಾರೋ? ಭವಿಷ್ಯದ ಕಡೆಗೆ ನಾವು ಮುನ್ನೋಡುವಾಗ, ಅಭಿವೃದ್ಧಿ ಮತ್ತು ವಿಸ್ತಾರ್ಯದ ಪರಾಮರಿಕೆ ಮಾಡಲು ಬೇಕಾಗುವ ಪಯನೀಯರರ, ಶುಶ್ರೂಷ ಸೇವಕರ, ಹಿರಿಯರ ಮತ್ತು ಸಂಚಾರ ಮೇಲ್ವಿಚಾರಕರುಗಳ ಸಂಖ್ಯೆಯ ಕುರಿತು ಹಾಗೂ ಆ ಕಾರ್ಯದ ಬೆಂಬಲಕ್ಕಾಗಿ ಭೂಸುತ್ತಲೂ ಇರುವ ಬ್ರಾಂಚ್ ಆಫೀಸುಗಳಲ್ಲಿ ಮತ್ತು ಬೆತೆಲ್ ಮನೆಗಳಲ್ಲಿ ಬೇಕಾಗುವ ಸ್ವಯಂ ಸೇವಕರುಗಳ ಸಂಖ್ಯೆಯ ಕುರಿತು ಯೋಚಿಸುವುದು ತತ್ತರಗುಟ್ಟಿಸುತ್ತದೆ. ಜನರ ಈ ಮಹಾ ಸಂಖ್ಯೆಯು ಎಲ್ಲಿಂದ ಬರಲಿದೆ? ಬೆಳೆಯು ಬಹಳವಿದೆ ಎಂಬದಕ್ಕೆ ಯಾವ ಸಂಶಯವೂ ಇಲ್ಲ. ಆದರೆ ಆ ಬೆಳೆಯನ್ನು ಕೊಯ್ಯಲು ಬೇಕಾದ ಕೆಲಸಗಾರರೆಲ್ಲರನ್ನು ಪರಾಮರಿಕೆ ಮಾಡುವ ಸ್ಥಿತಿಯಲ್ಲಿ ಇಂದು ಯಾರಿದ್ದಾರೆ?—ಮತ್ತಾಯ 9:37, 38.
5. ತೀವ್ರ ಅಭಿವೃದ್ಧಿಯಿಂದಾಗಿ ಕೆಲವು ಕ್ಷೇತ್ರಗಳಲ್ಲಿ ಯಾವ ಪರಿಸ್ಥಿತಿಗಳು ನೆಲೆಸಿವೆ?
5 ಉದಾಹರಣೆಗಾಗಿ, ಲೋಕದ ಕೆಲವು ಭಾಗಗಳಲ್ಲಿ, ಒಬ್ಬ ಅಥವಾ ಇಬ್ಬರು ಶುಶ್ರೂಷ ಸೇವಕರೊಂದಿಗೆ ಕೇವಲ ಒಬ್ಬನೇ ಹಿರಿಯನಿಂದ ನಡಿಸಲ್ಪಡುವ ಸುಮಾರು ನೂರರಷ್ಟು ಹೆಚ್ಚು ರಾಜ್ಯ ಪ್ರಚಾರಕರಿರುವ ಸಭೆಗಳು ಇವೆಯೆಂದು ವರದಿಯಾಗಿದೆ. ಕೆಲವು ಸಾರಿ ಒಬ್ಬ ಹಿರಿಯನಿಗೆ ಎರಡು ಸಭೆಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಬೇರೆ ಸ್ಥಳಗಳಲ್ಲಿ ಮನೆ ಬೈಬಲ್ ಅಧ್ಯಯನಗಳನ್ನು ನಡಿಸುವುದಕ್ಕೆ ನುರಿತ ಕ್ರೈಸ್ತ ಶುಶ್ರೂಷಕರ ಅಗತ್ಯವು ಎಷ್ಟು ದೊಡ್ಡದಿದೆಯೆಂದರೆ ಹೊಸಬರನ್ನು ನಿರೀಕ್ಷಕ ಪಟ್ಟಿ (ವೆಯ್ಟಿಂಗ್ ಲಿಸ್ಟ್) ಯಲ್ಲಿ ಹಾಕಬೇಕಾಗುತ್ತಿದೆ. ಇನ್ನು ಬೇರೆ ಕೆಲವು ಕ್ಷೇತ್ರಗಳಲ್ಲಿ, ಹೊಸ ಸಭೆಗಳು ಎಷ್ಟು ತೀವ್ರ ಗತಿಯಲ್ಲಿ ರಚಿಸಲ್ಪಡುತ್ತಿವೆಯೆಂದರೆ, ಮೂರು, ನಾಲ್ಕು, ಅಥವಾ ಐದು ಸಭೆಗಳು ಸಹ ಒಂದು ರಾಜ್ಯ ಸಭಾಗೃಹವನ್ನು ಹಂಚಿಕೊಳ್ಳ ಬೇಕಾಗುತ್ತದೆ. ಪ್ರಾಯಶಃ ನಿಮ್ಮ ಸ್ವಂತ ಕ್ಷೇತ್ರದಲ್ಲಿ ಈ ರೀತಿಯ ಬೆಳೆವಣಿಗೆಯನ್ನು ನೀವು ನೋಡಿರಬಹುದು.
6. ನಮ್ಮ ಪಾಲಿನ ಆತ್ಮ ಪರೀಕ್ಷೆಯು ಕಾಲೋಚಿತವೇಕೆ?
6 ಮೇಲೆ ಹೇಳಿದ ವಿಷಯಗಳು ನಮಗೇನನ್ನು ತಿಳಿಸುತ್ತವೆ? ಏನಂದರೆ ನಮ್ಮ ಕಾಲದ ನೋಟದಲ್ಲಿ, ಆ ಅಗತ್ಯತೆಗೆ ಪ್ರತಿವರ್ತನೆ ತೋರಿಸುವುದಕ್ಕಾಗಿ ನಾವು ನಮ್ಮ ಸಮಯವನ್ನು ಮತ್ತು ಸಂಪತ್ತು ಸಾಧನಗಳನ್ನು ಅತ್ಯುತ್ತಮವಾಗಿ ಬಳಸುತ್ತಿದ್ದೇವೋ ಎಂದು ನೋಡಲು ನಮಗೆಲ್ಲರಿಗೆ ನಮ್ಮ ಪರಿಸ್ಥಿತಿಗಳನ್ನು ಪರೀಕ್ಷಿಸುವ ಅಗತ್ಯವಿದೆ. (ಎಫೆಸ 5:15-17) ಅಪೊಸ್ತಲ ಪೌಲನು ಒಂದನೆಯ ಶತಕದ ಇಬ್ರಿಯ ಕ್ರೈಸ್ತರಿಗೆ ಬರೆದದ್ದು: “ಕಾಲವನ್ನು ನೋಡಿದರೆ ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ ಒಬ್ಬನು ನಿಮಗೆ ದೈವೋಕ್ತಿಗಳ ಮೂಲಪಾಠಗಳನ್ನು ತಿರುಗಿ ಕಲಿಸಿಕೊಡಬೇಕಾಗಿದೆ. ನೀವು ಹಾಲು ಕುಡಿಯತಕ್ಕವರೇ ಹೊರತು ಗಟ್ಟಿಯಾದ ಆಹಾರವನ್ನು ತಿನ್ನತಕ್ಕವರಲ್ಲ.” (ಇಬ್ರಿಯ 5:12) ಆ ಮಾತುಗಳು ತಿಳಿಸುವ ಪ್ರಕಾರ, ವ್ಯಕ್ತಿಪರವಾಗಿ ಕ್ರೈಸ್ತರು ಸಹ ಬೆಳೆಯುವ ಆವಶ್ಯಕತೆ ಇದೆ. ಕ್ರೈಸ್ತ ಪಕ್ವತೆಗೆ ಪ್ರಗತಿ ಮಾಡುವ ಬದಲಾಗಿ ಒಬ್ಬನು ಆತ್ಮಿಕ ಮಗುತನದಲ್ಲಿ ಕಾಲವೆಳೆಯುತ್ತಿರಬಹುದಾದ ಒಂದು ನಿಜ ಅಪಾಯವು ಇದೆ. ಇದಕ್ಕೆ ಹೊಂದಿಕೆಯಲ್ಲಿ, ಪೌಲನು ನಮ್ಮನ್ನು ಪ್ರೇರಿಸುವುದು: “ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ.” (2 ಕೊರಿಂಥ 13:5) ನಿಮ್ಮ ದೀಕ್ಷಾಸ್ನಾನದ ಸಮಯದಿಂದ ಹಿಡಿದು ನೀವು ಆತ್ಮಿಕವಾಗಿ ಬೆಳೆಯುತ್ತಿದ್ದೀರೋ ಎಂದು ನೋಡುವುದಕ್ಕೆ ನೀವು ನಿಮ್ಮನ್ನು ಪರೀಕ್ಷಿಸಿಕೊಂಡಿದ್ದೀರೋ? ಅಥವಾ ನೀವು ನಿಂತಲ್ಲೇ ನಿಂತಿರುತ್ತೀರೋ? ಇದನ್ನು ಒಬ್ಬನು ಹೇಳುವುದಾದರೂ ಹೇಗೆ?
“ಕೂಸಿನ ಗುಣಲಕ್ಷಣಗಳನ್ನು”
7. ಆತ್ಮಿಕ ಅಭಿವೃದ್ಧಿಯು ತೋರಿಬರಬೇಕಾದರೆ, ನಾವೇನು ಮಾಡಬೇಕು?
7 “ನಾನು ಬಾಲಕನಾಗಿದ್ದಾಗ ಬಾಲಕನ ಮಾತುಗಳನ್ನಾಡಿದೆನು, ಬಾಲಕನ ಸುಃಖದುಃಖಗಳನ್ನು ಅನುಭವಿಸಿದೆನು, ಬಾಲಕನ ಆಲೋಚನೆಗಳನ್ನು ಮಾಡಿಕೊಂಡೆನು. ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು [ಕೂಸಿನ ಗುಣಲಕ್ಷಣಗಳನ್ನು, NW] ಬಿಟ್ಟುಬಿಟ್ಟೆನು,” ಅಂದನು ಅಪೊಸ್ತಲ ಪೌಲನು. (1 ಕೊರಿಂಥ 13:11) ಆತ್ಮಿಕ ಬೆಳವಣಿಗೆಯಲ್ಲಿ, ಒಂದು ಸಮಯ ನಾವೆಲ್ಲರೂ ನಮ್ಮ ಆಲೋಚನೆಗಳಲ್ಲಿ ಮತ್ತು ಕ್ರಿಯೆಗಳಲ್ಲಿ ಬಾಲಕರಂತಿದ್ದೆವು. ಆದರೂ ಅಭಿವೃದ್ಧಿಯು ತೋರಿಬರಬೇಕಾದರೆ, ಪೌಲನಂದಂತೆ, ನಾವು “ಕೂಸಿನ ಗುಣಲಕ್ಷಣಗಳನ್ನು” ಬಿಟ್ಟುಬಿಡಬೇಕು. ಈ ಗುಣಲಕ್ಷಣಗಳಲ್ಲಿ ಕೆಲವು ಯಾವುವು?
8. ಇಬ್ರಿಯ 5:13, 14 ರ ಪೌಲನ ಮಾತುಗಳಿಗನುಸಾರ, ಆತ್ಮಿಕ ಕೂಸಿನ ಒಂದು ಗುಣಲಕ್ಷಣ ಯಾವುದು?
8 ಮೊದಲನೆಯದಾಗಿ, ಇಬ್ರಿಯ 5:13, 14 ರ ಪೌಲನ ಮಾತುಗಳನ್ನು ಗಮನಿಸಿರಿ: “ಹಾಲು ಬೇಕಾದವನು ಕೂಸಿನಂತಿದ್ದು ನೀತಿವಾಕ್ಯದಲ್ಲಿ ಅನುಭವವಿಲ್ಲದವನಾಗಿದ್ದಾನೆ. ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ.” ‘ನೀತಿವಾಕ್ಯದಲ್ಲಿ ಅನುಭವವು’ ನಿಮಗಿದೆಯೇ? “ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು” ಮಾಡಲು ಅದನ್ನುಪಯೋಗಿಸ ಶಕ್ತರಾಗುವಂತೆ ದೇವರ ವಾಕ್ಯವಾದ ಬೈಬಲು ನಿಮಗೆ ಸಾಕಷ್ಟು ಚೆನ್ನಾಗಿ ತಿಳಿದಿದೆಯೇ? ಪಕ್ವತೆಯುಳ್ಳ ಜನರು ಅದನ್ನು ಮಾಡಶಕ್ತರು ಎಂದು ಪೌಲನು ಹೇಳಿದ್ದಾನೆ ಯಾಕಂದರೆ ಅವರು ಕ್ರಮವಾಗಿ “ಗಟ್ಟಿಯಾದ ಆಹಾರ” ವನ್ನು ಸೇವಿಸುತ್ತಾರೆ. ಹೀಗೆ, ಗಟ್ಟಿಯಾದ ಆತ್ಮಿಕ ಆಹಾರಕ್ಕಾಗಿ ಒಬ್ಬನ ಅಪೇಕ್ಷೆ ಅಥವಾ ಹಸಿವೆಯು, ಅವನು ಆತ್ಮಿಕವಾಗಿ ಬೆಳೆದಿದ್ದಾನೋ ಅಥವಾ ಇನ್ನೂ ಆತ್ಮಿಕ ಕೂಸಾಗಿ ಉಳಿದಿದ್ದಾನೋ ಎಂಬದಕ್ಕೆ ಒಂದು ಉತ್ತಮ ನಿರ್ದೇಶಕವಾಗಿದೆ.
9. ಒಬ್ಬನ ಆತ್ಮಿಕ ಹಸಿವು ಅವನ ಆತ್ಮಿಕ ಅಭಿವೃದ್ಧಿಯ ಒಂದು ನಿರ್ದೇಶಕ ಹೇಗೆ?
9 ಹೀಗಿರಲಾಗಿ, ನಿಮ್ಮ ಆತ್ಮಿಕ ಹಸಿವು ಹೇಗಿದೆ? ಬೈಬಲಾಧಾರಿತ ಪ್ರಕಾಶನಗಳ ಮೂಲಕ ಮತ್ತು ಕ್ರೈಸ್ತ ಕೂಟಗಳು ಮತ್ತು ಸಮ್ಮೇಲನಗಳ ಮೂಲಕ ಯೆಹೋವನು ಕ್ರಮವಾಗಿ ಒದಗಿಸುತ್ತಿರುವ ಆತ್ಮಿಕ ಆಹಾರದ ಹೇರಳವಾದ ಪೂರೈಕೆಯನ್ನು ನೀವು ಹೇಗೆ ವೀಕ್ಷಿಸುತ್ತೀರಿ? (ಯೆಶಾಯ 65:13) ವಾರ್ಷಿಕ ಜಿಲ್ಲಾ ಅಧಿವೇಶನಗಳಲ್ಲಿ ಹೊಸ ಪ್ರಕಾಶನಗಳು ಬಿಡುಗಡೆಯಾದರೆ ನೀವು ಬಹಳವಾಗಿ ಸಂತೋಷಿಸುತ್ತೀರೆಂಬದಕ್ಕೆ ಸಂಶಯವಿಲ್ಲ. ಆದರೆ ಒಮ್ಮೆ ನೀವು ಮನೆಗೆ ಹೋದಾಗ ಅವುಗಳೊಂದಿಗೆ ಏನು ಮಾಡುತ್ತೀರಿ? ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಯ ಒಂದು ಹೊಸ ಸಂಚಿಕೆಯು ಬರುವಾಗ ನೀವೇನು ಮಾಡುತ್ತೀರಿ? ಈ ಪ್ರಕಾಶನಗಳನ್ನು ಓದಲು ನೀವು ಸಮಯ ತಕ್ಕೊಳ್ಳುತ್ತೀರೋ, ಅಥವಾ ಕೇವಲ ಪುಟಗಳನ್ನು ತೆರೆದು, ಮುಖ್ಯಾಂಶಗಳನ್ನು ನೋಡಿ, ಅನಂತರ ಅವನ್ನು ಪುಸ್ತಕಬೀರಿನಲ್ಲಿರುವ ಬೇರೆಯವುಗಳಿಗೆ ಸೇರಿಸುತ್ತೀರೋ? ತದ್ರೀತಿಯ ಪ್ರಶ್ನೆಗಳನ್ನು ಕ್ರೈಸ್ತ ಕೂಟಗಳ ಸಂಬಂಧದಲ್ಲಿಯೂ ಕೇಳಸಾಧ್ಯವಿದೆ. ನೀವು ಕ್ರಮವಾಗಿ ಎಲ್ಲಾ ಕೂಟಗಳಿಗೆ ಹಾಜರಾಗುತ್ತೀರೋ? ಅವುಗಳಿಗಾಗಿ ನೀವು ತಯಾರಿಸುತ್ತೀರೋ ಹಾಗೂ ಅವುಗಳಲ್ಲಿ ಭಾಗವಹಿಸುತ್ತೀರೋ? ಕೆಲವರಾದರೋ ಮೇಲೆ ಮೇಲೆ ಓದುತ್ತಾ, ಅವಸರದಿಂದ ತಿನ್ನುತ್ತಾರೋ ಎಂಬಂತಿದ್ದು ಆತ್ಮಿಕವಾಗಿ ದುರ್ಬಲವಾದ ಉಣ್ಣುವ ಹವ್ಯಾಸಗಳಿಗೆ ಬಿದ್ದಿದ್ದಾರೆ. ಕೀರ್ತನೆಗಾರನ ವಿಷಯದಲ್ಲಾದರೋ ಅದೆಷ್ಟು ಬೇರೆಯಾಗಿತ್ತು, ಅವನಂದದ್ದು: “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ; ದಿನವೆಲ್ಲಾ ಅದೇ ನನ್ನ ಧ್ಯಾನ.” ರಾಜ ದಾವೀದನು ಮತ್ತೂ ಅಂದದ್ದು: “ಆಗ ನಾನು ಮಹಾ ಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರ ಮುಂದೆ ಸ್ತುತಿಸುವೆನು.” (ಕೀರ್ತನೆ 35:18; 119:97) ಆತ್ಮಿಕ ಒದಗಿಸುವಿಕೆಗಳನ್ನು ಎಷ್ಟು ಪರಿಮಾಣದಲ್ಲಿ ನಾವು ಗಣ್ಯಮಾಡುತ್ತೇವೋ ಅದು ನಮ್ಮ ಆತ್ಮಿಕ ಅಭಿವೃದ್ಧಿಯ ನಿರ್ದೇಶಕವಾಗಿದೆ ಎಂಬದು ಸ್ಫುಟ.
10. ಎಫೆಸ 4:14 ರಲ್ಲಿ ಆತ್ಮಿಕ ಕೂಸಿನ ಯಾವ ಗುಣಲಕ್ಷಣವು ಸೂಚಿಸಲ್ಪಟ್ಟಿದೆ?
10 ಪೌಲನು ಎಚ್ಚರಿಕೆ ನೀಡಿದಾಗ ಆತ್ಮಿಕ ಶೈಶವದ ಇನ್ನೊಂದು ಗುಣಲಕ್ಷಣವನ್ನು ನಿರ್ದೇಶಿಸಿದನು: “ನಾವು ಇನ್ನು ಮೇಲೆ ಕೂಸುಗಳಾಗಿರಬಾರದು; ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು ನಾನಾ ಉಪದೇಶಗಳಿಂದ [ನಾನಾ ಉಪದೇಶಗಳ ಗಾಳಿಯಿಂದ, NW] ಕಂಗೆಟ್ಟು ಗಾಳಿಯಿಂದ ಅತ್ತಿತ್ತು ನೂಕಿಸಿಕೊಂಡು ಹೋಗುವವರ ಹಾಗಿರಬಾರದು.” (ಎಫೆಸ 4:14) ಹೆತ್ತವರಿಗೆ ಚೆನ್ನಾಗಿ ತಿಳಿದಿರುವಂತೆ, ಮಕ್ಕಳು ಪ್ರತಿಯೊಂದರಲ್ಲಿ ಕುತೂಹಲವುಳ್ಳವರಾಗಿದ್ದಾರೆ. ಒಂದು ರೀತಿಯಲ್ಲಿ ಇದು ಒಂದು ಸಕಾರಾತ್ಮಕ ಲಕ್ಷಣ ಯಾಕಂದರೆ ಅದು ಅವರನ್ನು ಸಂಶೋಧಿಸುವಂತೆ ಮತ್ತು ಕಲಿಯುವಂತೆ ಮತ್ತು ಕ್ರಮೇಣ ಪಕ್ವ ವ್ಯಕ್ತಿಗಳಾಗಿ ಬೆಳೆಯುವಂತೆ ಶಕ್ತರಾಗಿ ಮಾಡುತ್ತದೆ. ಅಪಾಯವಾದರೋ, ಅವರು ಒಂದರ ನಂತರ ಒಂದು ವಸ್ತುವಿನಿಂದ ಸುಲಭವಾಗಿ ಅಪಕರ್ಷಿಸಲ್ಪಡುವುದರಲ್ಲಿ ನೆಲೆಸಿದೆ. ಇನ್ನೂ ಕೆಟ್ಟದ್ದು ಯಾವುದಂದರೆ, ಅನುಭವದ ಕೊರತೆಯ ಕಾರಣ, ಈ ಕುತೂಹಲವು ಅವರನ್ನು ಹೆಚ್ಚಾಗಿ ಗಂಭೀರ ತೊಂದರೆಗಳಿಗೆ, ಸ್ವತಃ ಅವರನ್ನು ಮತ್ತು ಇತರರನ್ನು ಅಪಾಯಕ್ಕೆ ಸಹ ನಡಿಸುತ್ತದೆ. ಆತ್ಮಿಕ ಕೂಸುಗಳ ವಿಷಯದಲ್ಲೂ ಇದು ಸತ್ಯವಾಗಿದೆ.
11. (ಎ) “ನಾನಾ ಉಪದೇಶಗಳ ಗಾಳಿ” ಎಂಬ ವಾಕ್ಸರಣಿಯನ್ನು ಬಳಸಿದ್ದರಲ್ಲಿ ಪೌಲನ ಮನಸ್ಸಿನಲ್ಲಿದ್ದದ್ದೇನು? (ಬಿ) ನಾವು ಇಂದು ಯಾವ ‘ಗಾಳಿ’ ಗಳಿಂದ ಎದುರಿಸಲ್ಪಟ್ಟಿದ್ದೇವೆ?
11 ಆದರೂ, ಆತ್ಮಿಕ ಕೂಸುಗಳು “ನಾನಾ ಉಪದೇಶಗಳ ಗಾಳಿಯಿಂದ” ಅತ್ತಿತ್ತು ನೂಕಿಸಿಕೊಳ್ಳುವ ಕುರಿತು ಪೌಲನು ಹೇಳಿದಾಗ ಅವನ ಮನಸ್ಸಿನಲ್ಲಿದ್ದದ್ದೇನು? ಇಲ್ಲಿ “ಗಾಳಿ,” ಗ್ರೀಕ್ ಪದವಾದ ಏನಿಮೋಸ್ ನಿಂದ ತರ್ಜುಮೆಯಾಗಿದ, ಅದನ್ನು “ಮಾರ್ಪಡಿಸಲಾಗುವ ವಿಚಾರಕ್ಕೆ ತಕ್ಕ ಶಬ್ದವಾಗಿ ಆರಿಸಿ” ಕೊಂಡಿರಬಹುದು ಎಂದು ಇಂಟರ್ನ್ಯಾಷನಲ್ ಕ್ರಿಟಿಕಲ್ ಕಾಮೆಂಟ್ರಿ ಅವಲೋಕಿಸಿಯದೆ. “ದುರ್ಬೋಧಕರ ಕುಯುಕ್ತಿಗೂ” ಎಂಬ ಪೌಲನ ಹಿಂದಿನ ಮಾತುಗಳಿಂದ ಇದು ಚೆನ್ನಾಗಿ ವಿಶದಗೊಳಿಸಲ್ಪಟ್ಟಿದೆ. “ಕುಯುಕ್ತಿ” ಎಂಬ ಶಬ್ದವು ಮೂಲ ಭಾಷೆಯಲ್ಲಿ ಮೂಲತಃ “ಪಗಡೆ” ಅಥವಾ “ಪಗಡೆಯಾಟ” ಅಂದರೆ, ಅದೃಷ್ಟದ ಆಟ ಎಂಬರ್ಥವುಳ್ಳದ್ದಾಗಿದೆ. ವಿಷಯವೇನಂದರೆ ನಿರಪಾಯಕರ, ಆಕರ್ಷಕ, ಮತ್ತು ಉಪಯುಕ್ತವೆಂದೂ ಕಾಣಬಹುದಾದ ಹೊಸ ವಿಚಾರಗಳಿಂದ ಮತ್ತು ಬೆನ್ನಟ್ಟುವಿಕೆಗಳಿಂದ ನಾವು ಸದಾ ಎದುರಿಸಲ್ಪಡುತ್ತೇವೆ. ಪೌಲನ ಮಾತುಗಳು ಮುಖ್ಯವಾಗಿ ನಮ್ಮ ನಂಬಿಕೆಗೆ ಸಂಬಂಧಿಸಿದ ವಿಷಯಗಳಿಗೆ—ವಿಶ್ವ ಕ್ರೈಸ್ತ ಚಟುವಟಿಕೆಗಳು—ಸಾಮಾಜಿಕ ಮತ್ತು ರಾಜಕೀಯ ಧ್ಯೇಯಗಳೇ ಮುಂತಾದವುಗಳಿಗೆ ಅನ್ವಯಿಸುತ್ತವೆ. (1 ಯೋಹಾನ 4:1 ಹೋಲಿಸಿರಿ.) ಆದರೆ ಈ ತತ್ವವು, ಸದಾ ಬದಲಾಗುತ್ತಿರುವ ಲೋಕದ ಹುಚ್ಚುಗೀಳುಗಳ ಮತ್ತು ಶೈಲಿಗಳ ಸಂಬಂಧದಲ್ಲಿ —ನೂತನ ಪದ್ಧತಿಗಳು, ಮನೋರಂಜನೆ, ಆಹಾರಗಳು, ಆರೋಗ್ಯ ಅಥವಾ ಅಂಗ ಸಾಧನೆಯ ಪದ್ಧತಿಗಳೇ ಮುಂತಾದವುಗಳು ವಿಷಯದಲ್ಲಿಯೂ ಸತ್ಯವಾಗಿದೆ. ಅನುಭವದಲ್ಲಿ ಮತ್ತು ಯೋಗ್ಯ ನಿರ್ಣಯ ಮಾಡುವುದರಲ್ಲಿ ಕೊರತೆಯಿಂದಾಗಿ, ಆತ್ಮಿಕ ಕೂಸು ಇಂಥ ವಿಷಯಗಳಿಂದ ಅತಿಯಾಗಿ ಅಪಕರ್ಷಿಸಲ್ಪಡಬಹುದು ಮತ್ತು ಹೀಗೆ ಆತ್ಮಿಕ ಅಭಿವೃದ್ಧಿ ಮಾಡುವುದರಿಂದ ಹಾಗೂ ಹೆಚ್ಚು ಮಹತ್ವದ ಅವನ ಕ್ರೈಸ್ತ ಹಂಗುಗಳನ್ನು ಪೂರೈಸುವುದರಿಂದ ತಡೆಯಲ್ಪಡಬಹುದು.—ಮತ್ತಾಯ 6:22-25.
12. ಜವಾಬ್ದಾರಿಕೆಯ ಸಂಬಂಧದಲ್ಲಿ ಮಕ್ಕಳು ಪ್ರಾಯಸ್ಥರಿಗಿಂತ ಬೇರೆಯಾಗಿರುವುದು ಹೇಗೆ?
12 ಚಿಕ್ಕ ಮಕ್ಕಳ ಇನ್ನೊಂದು ಗುಣಲಕ್ಷಣವು ಸಹಾಯ ಮತ್ತು ಗಮನಕ್ಕಾಗಿ ಅವರಿಗಿರುವ ಸತತ ಆವಶ್ಯಕತೆಯೇ. ಅವರಿಗೆ ಜವಾಬ್ದಾರಿಕೆಗಳ ಕುರಿತಾದ ಅರಿವೂ ಇಲ್ಲ ಮತ್ತು ಅವುಗಳ ಚಿಂತನೆಯೂ ಇಲ್ಲ; ಬಾಲ್ಯವು ಬಹುಮಟ್ಟಿಗೆ ಪ್ರತಿಯೊಂದೂ ಕೇವಲ ವಿನೋದ ಮತ್ತು ಆಟಗಳಾಗಿರುವ ಜೀವಿತ ಕಾಲವಾಗಿದೆ. ಪೌಲನು ಹೇಳಿದ ಪ್ರಕಾರ, ಅವರು ‘ಬಾಲಕರ ಮಾತುಗಳನ್ನಾಡುತ್ತಾರೆ, ಬಾಲಕರ ಆಲೋಚನೆಗಳನ್ನು ಮಾಡುತ್ತಾರೆ, ಬಾಲಕರಂತೆ ವಿವೇಚನೆ ಮಾಡುತ್ತಾರೆ.’ ಬೇರೆಯವರು ತಮ್ಮನ್ನು ಪರಾಮರಿಕೆ ಮಾಡುವರೆಂದು ಅವರು ಭಾವಿಸುತ್ತಾರೆ. ಆತ್ಮಿಕ ಕೂಸಿನ ವಿಷಯದಲ್ಲೂ ಇದನ್ನೇ ಹೇಳಬಹುದು. ಹೊಸಬನು ತನ್ನ ಪ್ರಥಮ ಬೈಬಲ್ ಭಾಷಣವನ್ನು ಕೊಡುವಾಗ ಅಥವಾ ಕ್ಷೇತ್ರ ಶುಶ್ರೂಷೆಯಲ್ಲಿ ಪ್ರಥಮವಾಗಿ ಭಾಗವಹಿಸುವಾಗ, ಆತ್ಮಿಕ ತಂದೆ ಅಥವಾ ತಾಯಿ ಅವನಿಗೆ ಎಲ್ಲಾ ಸಹಾಯವನ್ನು ಕೊಡಲು ಸಂತೋಷಿಸುತ್ತಾರೆ. ಹೊಸಬನು ಅಂಥ ಸಹಾಯದಲ್ಲೇ ಆತುಕೊಂಡವನಾಗಿ ಮುಂದರಿದರೆ ಮತ್ತು ತನ್ನನ್ನು ತಾನಾಗಿ ಪರಾಮರಿಸುವ ಜವಾಬ್ದಾರಿಕೆಯನ್ನು ಸ್ವೀಕರಿಸಲು ಅಶಕ್ತನೆಂದು ರುಜುವಾದರೆ ಏನು ಸಂಭವಿಸುತ್ತದೆ? ಸ್ವ-ಅನ್ವಯದ ಕೊರತೆಯ ಒಂದು ನಿರ್ದೇಶಕವು ಅದೆಂಬದು ಸ್ಫುಟ.
13. ಪ್ರತಿಯೊಬ್ಬನು ತನ್ನ ಸ್ವಂತ ಹೊರೆಯನ್ನು ಹೊತ್ತುಕೊಳ್ಳಲು ಕಲಿಯಬೇಕು ಏಕೆ?
13 ಈ ಸಂಬಂಧದಲ್ಲಿ, ನಾವು “ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳ” ಬೇಕಾದರೂ, ಮತ್ತೂ, “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು” ಎಂಬ ಅಪೊಸ್ತಲ ಪೌಲನ ಬುದ್ಧಿವಾದವನ್ನು ನೆನಪಿಗೆ ತನ್ನಿರಿ. (ಗಲಾತ್ಯ 6:2, 5) ಒಬ್ಬನು ತನ್ನ ಕ್ರೈಸ್ತ ಜವಾಬ್ದಾರಿಕೆಗಳನ್ನು ಹೊತ್ತುಕೊಳ್ಳಲು ಕಲಿಯುವುದಕ್ಕಾಗಿ ಸಮಯ ಮತ್ತು ಪ್ರಯತ್ನದ ಅಗತ್ಯವಿದೆ ನಿಶ್ಚಯ, ಮತ್ತು ಅದು ನಿರ್ದಿಷ್ಟ ಕ್ಷೇತ್ರಗಳಲ್ಲಿ ತ್ಯಾಗಗಳನ್ನು ಮಾಡುವ ಅರ್ಥದಲ್ಲಿರಲೂ ಬಹುದು. ಆದರೂ, ಒಬ್ಬನು ತನ್ನನ್ನು ಜೀವಿತದ ವಿನೋದ ಮತ್ತು ಆಟಗಳಲ್ಲಿ, ಅವು ಮನೋರಂಜನೆ, ಪರ್ಯಟನಗಳು, ಸಾಧನ ಸಲಕರಣೆಗಳು, ಅಥವಾ ಐಹಿಕ ಉದ್ಯೋಗದ ಅನಾವಶ್ಯಕ ಬೆನ್ನಟ್ಟುವಿಕೆ ಸಹ ಆಗಿರಲಿ, ಅವುಗಳಲ್ಲಿ ಅಷ್ಟು ಹೆಚ್ಚಾಗಿ ಒಳಗೂಡಿಸುವಂತೆ ಬಿಟ್ಟುಕೊಡುವುದು ಒಂದು ಗಂಭೀರವಾದ ತಪ್ಪಾಗಿರುವುದು. ಅಂಥವನು ಕೇವಲ ಪ್ರೇಕ್ಷಕನೋ ಎಂಬಂತಿದ್ದು, ಶಿಷ್ಯರನ್ನಾಗಿ ಮಾಡುವ ಕಾರ್ಯದಲ್ಲಿ ತನ್ನ ಪಾಲನ್ನು ಹೆಚ್ಚಿಸುವುದಕ್ಕೆ ಅಥವಾ ಆತ್ಮಿಕ ಅಭಿವೃದ್ಧಿ ಮತ್ತು ಜವಾಬ್ದಾರಿಕೆಗಾಗಿ ಎಟಕಿಸಿಕೊಳ್ಳುವುದಕ್ಕೆ ಯಾವ ಅಪೇಕ್ಷೆಯೂ ಇಲ್ಲದವನಾಗಿದ್ದಾನೆ. “ವಾಕ್ಯದ ಪ್ರಕಾರ ನಡೆಯುವವರಾಗಿರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ” ಎಂದು ಪ್ರೇರೇಪಿಸಿದನು ಶಿಷ್ಯ ಯಾಕೋಬನು.—ಯಾಕೋಬ 1:22; 1 ಕೊರಿಂಥ 16:13.
14. ಆತ್ಮಿಕ ಕೂಸಿನ ಗುಣಲಕ್ಷಣಗಳನ್ನು ಪ್ರದರ್ಶಿಸುವುದರಲ್ಲಿ ನಾವು ತೃಪ್ತರಾಗಿರಬಾರದೇಕೆ?
14 ಹೌದು, ಒಂದು ಮಗುವನ್ನು ಒಬ್ಬ ಪ್ರಾಯಸ್ಥನಿಂದ ಪ್ರತ್ಯೇಕಿಸುವಂಥ ಅನೇಕ ಸುಲಭವಾಗಿ ವಿವೇಚಿಸಬಲ್ಲ ಗುಣಲಕ್ಷಣಗಳು ಇವೆ. ಆದರೂ, ಮಹತ್ವದ ವಿಷಯವು ಯಾವುದಂದರೆ, ಪೌಲನು ಹೇಳುವ ಪ್ರಕಾರ, ನಾವು ನಿಧಾನವಾಗಿ ಕೂಸಿನ ಗುಣಲಕ್ಷಣಗಳನ್ನು ಬಿಟ್ಟುಬಿಡಬೇಕು ಮತ್ತು ಬೆಳೆಯಬೇಕು. (1 ಕೊರಿಂಥ 13:11; 14:20) ಇಲ್ಲವಾದರೆ ಒಂದು ಆತ್ಮಿಕ ಅರ್ಥದಲ್ಲಿ ನಾವು ಬೆಳೆಯದೆ ಇರುವವರಾಗಬಹುದು. ಆದರೆ ಒಬ್ಬನು ಅಭಿವೃದ್ಧಿಯನ್ನು ಮಾಡುವುದು ಹೇಗೆ? ಪಕ್ವತೆಗೆ ನಡಿಸುವ ಆತ್ಮಿಕ ಬೆಳವಣಿಗೆಯನ್ನು ಕಾಪಾಡುವುದರಲ್ಲಿ ಯಾವುದು ಒಳಗೂಡಿದೆ?
ಅಭಿವೃದ್ಧಿಯು ತೋರಿಬರುವ ವಿಧ
15. ಬೆಳವಣಿಗೆಯ ಕಾರ್ಯಗತಿಯಲ್ಲಿ ಮೂಲಭೂತ ಹೆಜ್ಜೆಗಳು ಯಾವುವು?
15 ಒಳ್ಳೇದು, ಪ್ರಾಕೃತಿಕ ಲೋಕದಲ್ಲಿ ಬೆಳವಣಿಗೆಯು ಹೇಗೆ ಸಂಭವಿಸುತ್ತದೆ? “ಪ್ರತಿ ವ್ಯಕ್ತಿಯು ಜೀವವನ್ನು ಒಂದು ಏಕ ಕಣದಿಂದ ಪ್ರಾರಂಭಿಸುತ್ತಾನೆ,” ಎಂದು ವಿವರಿಸುತ್ತದೆ ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ. “ಆ ಕಣವು ಸಾಮಗ್ರಿಗಳನ್ನು ಹೀರುತ್ತದೆ ಮತ್ತು ಅವನ್ನು ತನಗೆ ಬೆಳೆಯಲು ಬೇಕಾದ ಮೈಕಟ್ಟಿನ ಅಚ್ಚುಗಳನ್ನಾಗಿ ಪರಿವರ್ತಿಸುತ್ತದೆ. ಹೀಗೆ ಆ ಏಕ ಕಣವು ಒಳಗಿಂದೊಳಗೆ ಬೆಳೆಯುತ್ತದೆ. ಈ ಕಣವು ಬೇರೆ ಕಣಗಳನ್ನು ರಚಿಸಲಿಕ್ಕಾಗಿ ವೃದ್ಧಿಗೊಳ್ಳಬಲ್ಲದು ಮತ್ತು ವಿಭಜಿಸಿಕೊಳ್ಳಬಲ್ಲದು. ಕಟ್ಟುವ, ವೃದ್ಧಿಗೊಳ್ಳುವ ಮತ್ತು ವಿಭಜಿಸಿಕೊಳ್ಳುವ ಕಾರ್ಯಗತಿಯೇ ಬೆಳವಣಿಗೆಯಾಗಿದೆ.” ಬೆಳವಣಿಗೆಯು ಒಳಗಿನಿಂದ ಆರಂಭಿಸುವುದು ಇಲ್ಲಿರುವ ಗಮನಾರ್ಹವಾದ ವಿಷಯವು. ಯೋಗ್ಯವಾದ ಪೋಷಣೆಯು ಸೇವಿಸಲ್ಪಡುವಾಗ, ದೇಹಗತಮಾಡಿಕೊಂಡಾಗ ಮತ್ತು ಕೆಲಸಕ್ಕೆ ಬಳಸುವಾಗ, ಬೆಳವಣಿಗೆಯು ಉಂಟಾಗುತ್ತದೆ. ಹೊಸದಾಗಿ ಹುಟ್ಟಿದ ಕೂಸಿನ ವಿಷಯದಲ್ಲಿ ಇದನ್ನು ಸ್ಪಷ್ಟವಾಗಿಗಿ ಕಾಣಬಹುದು. ನಮಗೆ ತಿಳಿದಿರುವ ಪ್ರಕಾರ, ಒಂದು ಹೊಸ ಕೂಸು ಬೆಳವಣಿಗೆಗಾಗಿ ಬೇಕಾದ ವಸ್ತುಗಳಾದ ಕೊಬ್ಬು ಮತ್ತು ಸಸಾರಜನಕ ಹೇರಳವಾಗಿರುವ ಒಂದು ನಿರ್ದಿಷ್ಟರೂಪದ ಆಹಾರ, ಹಾಲಿನ ಸಂಗ್ರಹವನ್ನು ಸಮರೀತಿಯಲ್ಲಿ ಸೇವಿಸುತ್ತದೆ. ಫಲಿತಾಂಶ? ಮೊದಲನೆಯ ವರ್ಷದಲ್ಲೇ ಮಗುವು ಗಳಿಸುವ ಭಾರ ಮತ್ತು ಎತ್ತರದ ಮಿತಿಯಲ್ಲಿ ಉಂಟಾಗುವ ಬೆಳಣಿಗೆಯ ಮೊತ್ತವು, ಅದರ ಉಳಿದ ಜೀವಿತದ ಸಾಮಾನ್ಯ ಬೆಳವಣಿಗೆಯ ಬೇರೆ ಯಾವುದೇ ವರ್ಷಕ್ಕೆ ಎಂದೂ ತುಲನೆಯಾಗದು.
16. ಹೆಚ್ಚಿನ ಹೊಸ ಬೈಬಲ್ ವಿದ್ಯಾರ್ಥಿಗಳಲ್ಲಿ ಯಾವ ರೀತಿಯ ಬೆಳವಣಿಗೆಯು ಕಂಡುಬರುತ್ತದೆ, ಮತ್ತು ಅದು ಶಕ್ಯವಾಗಿ ಮಾಡಲ್ಪಡುವುದು ಹೇಗೆ?
16 ಬೆಳವಣಿಗೆಯ ಈ ನೈಸರ್ಗಿಕ ಕಾರ್ಯಗತಿಯಿಂದ, ನಮ್ಮ ಆತ್ಮಿಕ ಪ್ರಗತಿಗೆ ಪ್ರಾರಂಭದಿಂದ ಪಕ್ವತೆಯ ತನಕ ನಾವು ಅನ್ವಯಿಸ ಶಕ್ತನಾದ ಹೆಚ್ಚನ್ನು ಕಲಿಯುತ್ತೇವೆ. ಮೊತ್ತಮೊದಲಾಗಿ, ಒಂದು ಸಮಪ್ರಕಾರದ ಉಣ್ಣುವ ಕಾರ್ಯಕ್ರಮವು ಅತ್ಯಾವಶ್ಯಕ. ಬೈಬಲ್ ಅಧ್ಯಯನ ಮಾಡಲು ನೀವು ಮೊದಲಾಗಿ ಪ್ರಾರಂಭಿಸಿದ್ದ ಆ ಹಿಂದಿನ ಸಮಯವನ್ನು ಯೋಚಿಸಿರಿ. ಹೆಚ್ಚಿನ ಜನರಂತೆ ನೀವಿರುವುದಾದಾರೆ, ದೇವರ ವಾಕ್ಯದ ಕುರಿತು ನಿಮಗೆ ಬಹುಮಟ್ಟಿಗೆ ಏನೂ ತಿಳಿದಿರಲಿಲ್ಲ. ಆದರೆ ವಾರ ವಾರವೂ ನೀವು ನಿಮ್ಮ ಪಾಠಗಳನ್ನು ತಯಾರಿಸಿದಿರಿ ಮತ್ತು ನಿಮ್ಮ ಬೈಬಲ್ ಅಧ್ಯಯನವನ್ನು ಮಾಡಿದಿರಿ, ಮತ್ತು ತುಲನಾತ್ಮಕವಾಗಿ ಕೊಂಚ ಸಮಯದೊಳಗೆ ಶಾಸ್ತ್ರಗ್ರಂಥದ ಎಲ್ಲಾ ಮೂಲಭೂತ ಬೋಧನೆಗಳನ್ನು ನೀವು ತಿಳುಕೊಂಡಿರಿ. ಅದೊಂದು ಅಸಾಧಾರಣವಾದ ಬೆಳವಣಿಗೆ ಎಂಬದನ್ನು ನೀವು ಒಪ್ಪಲೇಬೇಕು, ಮತ್ತು ಅದೆಲ್ಲವೂ ದೇವರ ವಾಕ್ಯವನ್ನು ಕ್ರಮವಾಗಿ ಉಣಿಸಿಕೊಂಡ ಫಲಿತಾಂಶವಾಗಿ ಆಯಿತು!
17. ಒಂದು ಕ್ರಮದ ಆತ್ಮಿಕ ಉಣ್ಣುವಿಕೆಯ ಕಾರ್ಯಕ್ರಮವು ಆವಶ್ಯಕವಾಗಿದೆಯೇಕೆ?
17 ಈಗಿನ ಕುರಿತಾದರೂ ಏನು? ಒಂದು ಕ್ರಮವಾಗಿ ಉಣ್ಣುವ ಕಾರ್ಯಕ್ರಮವನ್ನು ನೀವಿನ್ನೂ ಅನುಸರಿಸುತ್ತೀರೋ? ಒಬ್ಬನು ದೀಕ್ಷಾಸ್ನಾನ ಪಡೆದವನೆಂಬ ಕಾರಣ ಮಾತ್ರದಿಂದ, ಪೋಷಕ ಆತ್ಮಿಕ ಆಹಾರದ ಸೇವನೆಯ ಒಂದು ಕ್ರಮದ ಮತ್ತು ವ್ಯವಸ್ಥಿತ ಅಭ್ಯಾಸದ ಅಗತ್ಯ ಇನ್ನಿಲ್ಲ ಎಂಬದಾಗಿ ಅವನೆಂದೂ ನೆನಸಬಾರದು. ತಿಮೊಥೆಯನು ಒಬ್ಬ ಪಕ್ವ ಕ್ರೈಸ್ತ ಮೇಲ್ವಿಚಾರಕನಾಗಿದ್ದರೂ, ಪೌಲನು ಅವನನ್ನು ಪ್ರೇರೇಪಿಸಿದ್ದು: “ಈ ಕಾರ್ಯಗಳನ್ನು ಸಾಧಿಸುವದರಲ್ಲಿ ಆಸಕ್ತನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೆ ಪ್ರಸಿದ್ಧವಾಗುವುದು.” (1 ತಿಮೊಥೆಯ 4:15) ಹಾಗೆ ಮಾಡಲು ನಮ್ಮಲ್ಲಿ ಪ್ರತಿಯೊಬ್ಬನಿಗೆ ಇರುವ ಅಗತ್ಯತೆಯಾದರೂ ಎಷ್ಟು ಹೆಚ್ಚು! ನಿಮ್ಮ ಆತ್ಮಿಕ ಅಭಿವೃದ್ಧಿಯು ಪ್ರಸಿದ್ಧವಾಗುವುದರಲ್ಲಿ ನೀವು ಆಸಕ್ತರಿದ್ದರೆ, ಅಂಥ ಪ್ರಯತ್ನಗಳು ಆವಶ್ಯಕವಾಗಿವೆ.
18. ಒಬ್ಬನ ಆತ್ಮಿಕ ಅಭಿವೃದ್ಧಿಯು ಹೇಗೆ ತೋರಿಬರುತ್ತದೆ?
18 ಒಬ್ಬನ ಅಭಿವೃದ್ಧಿಯು ತೋರಿಬರುವಂತೆ ಬಿಡುವುದು ಎಂದರೆ ಒಬ್ಬನಿಗೆ ಏನು ತಿಳಿದಿದೆಯೋ ಅದರ ಪ್ರದರ್ಶನೆಗಾಗಿ ವಿಶೇಷ ಪ್ರಯತ್ನ ಮಾಡುವುದು ಅಥವಾ ಇತರರನ್ನು ಪ್ರಭಾವಿಸಲು ಪ್ರಯತ್ನಿಸುವುದೆಂದರ್ಥವಲ್ಲ. ಯೇಸುವಂದದ್ದು: “ನೀವು ಲೋಕಕ್ಕೆ ಬೆಳಕಾಗಿದ್ದೀರಿ. ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು” ಮತ್ತು, “ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.” (ಮತ್ತಾಯ 5:14; 12:34) ದೇವರ ವಾಕ್ಯದ ಸುವಿಚಾರಗಳಿಂದ ನಮ್ಮ ಹೃದಯ ಮತ್ತು ಮನಸ್ಸುಗಳು ತುಂಬಿರಲಾಗಿ, ನಾವು ಮಾಡುವ ಮತ್ತು ನುಡಿಯುವ ವಿಷಯಗಳಲ್ಲಿ ಇದನ್ನು ತೋರಿಸದಿರಲು ಸಾಧ್ಯವಿಲ್ಲ.
19. ನಮ್ಮ ಆತ್ಮಿಕ ಪ್ರಗತಿಯ ಕುರಿತು ನಾವು ಏನು ಮಾಡಲು ನಿರ್ಧಾರವುಳ್ಳವರಾಗಿರಬೇಕು, ಮತ್ತು ಯಾವ ಫಲಿತಾಂಶದ ನೋಟದಲ್ಲಿ?
19 ಆದಕಾರಣ, ಪ್ರಶ್ನೆಯೇನಂದರೆ: ನಿಮ್ಮ ಅಂತರ್ಯದ, ಆತ್ಮಿಕ ಬೆಳವಣಿಗೆಯನ್ನು ಪ್ರಚೋದಿಸಬಲ್ಲ ಪೋಷಕ ಸಮಾಚಾರವನ್ನು ಸೇವಿಸಲಿಕ್ಕಾಗಿ ನೀವು ಬೈಬಲನ್ನು ಕ್ರಮವಾಗಿ ಅಭ್ಯಾಸ ಮಾಡುತ್ತೀರೋ ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತೀರೋ? ಆತ್ಮಿಕ ಬೆಳೆವಣಿಗೆಯ ಸಂಬಂಧದಲ್ಲಿ ನಿಷ್ಕ್ರಿಯ ಪ್ರೇಕ್ಷಕರಾಗಿರುವುದರಲ್ಲಿ ಸಂತುಷ್ಟರಾಗಿರಬೇಡಿರಿ. ಯೆಹೋವನು ಒದಗಿಸುವ ಹೇರಳವಾದ ಆತ್ಮಿಕ ಆಹಾರದ ಪೂರ್ಣ ಉಪಯೋಗವನ್ನು ನೀವು ಮಾಡುತ್ತಿದ್ದೀರೆಂದು ನಿಶ್ಚಯಿಸುವುದಕ್ಕಾಗಿ ಸಕಾರಾತ್ಮಕ ಹೆಜ್ಜೆಗಳನ್ನು ತಕ್ಕೊಳ್ಳಿರಿ. ‘ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರು’ ವವರಲ್ಲಿ ನೀವು ಒಬ್ಬರಾಗಿದ್ದರೆ, ನಿಮ್ಮ ಕುರಿತು ಆಗ ಇದನ್ನೂ ಹೇಳ ಸಾಧ್ಯವಿದೆ: “ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ. ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.” (ಕೀರ್ತನೆ 1:2, 3) ಆದರೂ, ನೀವು ಆತ್ಮಿಕ ಅಭಿವೃದ್ಧಿಯನ್ನು ಮಾಡುತ್ತಾ ಮುಂದರಿಯುವಿರಿ ಎಂಬ ಖಾತ್ರಿಯಿಂದಿರಲು ಏನನ್ನು ಮಾಡ ಸಾಧ್ಯವಿದೆ? ಮುಂದಿನ ಲೇಖನದಲ್ಲಿ ನಾವಿದನ್ನು ಚರ್ಚಿಸುವೆವು.
ನೀವು ಉತ್ತರಿಸಬಲ್ಲಿರೋ?
▫ ನಮ್ಮ ಆತ್ಮಿಕ ಅಭಿವೃದ್ಧಿಯನ್ನು ಪರೀಕ್ಷಿಸುವುದು ಏಕೆ ಕಾಲೋಚಿತವು?
▫ ಆತ್ಮಿಕ ಬೆಳವಣಿಗೆಯು ಆತ್ಮಿಕ ಹಸಿವೆಗೆ ಹೇಗೆ ಸಂಬಂಧಿಸಿದೆ?
▫ “ನಾನಾ ಉಪದೇಶಗಳ ಗಾಳಿ” ಯಿಂದ ಏನು ಅರ್ಥೈಸಲ್ಪಡುತ್ತದೆ?
▫ ಪ್ರತಿಯೊಬ್ಬನು ತನ್ನ ಸ್ವಂತ ಹೊರೆಯನ್ನು ಹೊರಬೇಕು ಏಕೆ?
▫ ಆತ್ಮಿಕ ಅಭಿವೃದ್ಧಿಯು ಹೇಗೆ ಸಾಧಿಸಲ್ಪಡುತ್ತದೆ?
[ಪುಟ 10 ರಲ್ಲಿರುವ ಚಿತ್ರ]
ಬೈಬಲಾಧಾರಿತ ಪ್ರಕಾಶನಗಳನ್ನು ಓದಲು ನೀವು ಸಮಯ ತಕ್ಕೊಳ್ಳುತ್ತೀರೋ?