‘ಒಬ್ಬನ ಮನೆವಾರ್ತೆಗಾಗಿ ಒದಗಿಸುವುದು’—ವರ್ಧಿಷ್ಣು ದೇಶಗಳಲ್ಲಿ ಪಂಥಾಹ್ವಾನವನ್ನು ನಿಭಾಯಿಸುವುದು
“ನಿಶ್ಚಯವಾಗಿಯೂ ಯಾವನೇ ಆಗಲಿ, ಅವನು ತನ್ನ ಸ್ವಂತದವರಿಗಾಗಿ, ಮತ್ತು ವಿಶೇಷವಾಗಿ ತನ್ನ ಮನೆವಾರ್ತೆಯ ಸದಸ್ಯರಿಗಾಗಿ ಒದಗಿಸದಿರುವಲ್ಲಿ, ಅವನು ತನ್ನ ನಂಬಿಕೆಯನ್ನು ತೊರೆದಿದ್ದಾನೆ ಮತ್ತು ನಂಬಿಕೆಯಿಲ್ಲದ ವ್ಯಕ್ತಿಗಿಂತಲೂ ಕೀಳಾಗಿದ್ದಾನೆ.” ಹಾಗೆಂದನು ಅಪೊಸ್ತಲ ಪೌಲನು. (1 ತಿಮೊಥೆಯ 5:8, NW) ಸಂಪದ್ಭರಿತ ದೇಶಗಳಲ್ಲಿ ಕುಟುಂಬವನ್ನು ಬೆಳೆಸುವುದು ಹೆಚ್ಚೆಚ್ಚು ಕಷ್ಟಕರವಾಗಿದೆಯಾದರೂ, ವರ್ಧಿಷ್ಣು ದೇಶದಲ್ಲಿ ಹಾಗೆ ಮಾಡುವುದು ಅನೇಕ ವೇಳೆ ಇನ್ನಷ್ಟೂ ದುಸ್ಸಾಧ್ಯವಾದ ಪಂಥಾಹ್ವಾನವನ್ನು ನೀಡುತ್ತದೆ.
ಉದಾಹರಣೆಗೆ, ಆಫ್ರಿಕದಲ್ಲಿ ಆರ್ಥಿಕ ತೊಂದರೆಯು ಅನೇಕ ವೇಳೆ ಸಾಮಾನ್ಯವಾಗಿದೆ, ಅಸಾಮಾನ್ಯವಲ್ಲ. ಉದ್ಯೋಗಗಳು ವಿರಳ, ಮತ್ತು ಅವು ದೊರೆಯುವಾಗ ಬರಿಯ ಅನ್ನಾಧಾರವನ್ನು ಒದಗಿಸಲಿಕ್ಕಾಗಿ ಗಂಡಹೆಂಡತಿಯರಿಬ್ಬರೂ ಕೆಲಸಮಾಡುವ ಅಗತ್ಯವಿರಬಹುದು. ಕೆಲಸವನ್ನು ಹುಡುಕಲಿಕ್ಕಾಗಿ ಕುಟುಂಬ ತಲೆಗಳಿಗೆ, ತಮ್ಮ ಜೊತೆಗಳನ್ನೂ ಮಕ್ಕಳನ್ನೂ ತಿಂಗಳುಗಟ್ಟಲೆ ಅಥವಾ ವರ್ಷಗಟ್ಟಲೆ ಒಂಟಿಗರಾಗಿರುವಂತೆ ಬಿಟ್ಟು, ದೂರ ಪಯಣಿಸಬೇಕಾಗಿ ಬಂದೀತು. ತಕ್ಕ ವಸತಿಯನ್ನು ಕಂಡುಕೊಳ್ಳುವುದೂ ಕಷ್ಟಕರವಾಗಿದ್ದೀತು. ಆಫ್ರಿಕದವರ ಅನೇಕ ಕುಟುಂಬಗಳು ದೊಡ್ಡವು; ಆದಕಾರಣ ವಸತಿಯು ಮೂಲಭೂತ ಸೌಕರ್ಯಗಳ ಕೊರತೆಯುಳ್ಳದ್ದಾಗಿದ್ದು, ಸ್ಥಳಸಂಕೋಚವುಳ್ಳದ್ದಾಗಿರುತ್ತದೆ. ಅನೇಕ ವೇಳೆ ಅನಾರೋಗ್ಯಕರವಾದ ಪರಿಸ್ಥಿತಿಗಳು ಅಲ್ಲಿರುತ್ತವೆ.
ಇದಕ್ಕೆ ಕೂಡಿಸಿ, ಸ್ಥಳಿಕ ಪದ್ಧತಿಗಳು, ದೀರ್ಘಕಾಲದಿಂದ ಬಂದಿರುವ ಸಂಪ್ರದಾಯಗಳು ಮತ್ತು ಜನಪ್ರಿಯ ಅಭಿಪ್ರಾಯಗಳು ದೇವರ ವಾಕ್ಯವಾದ ಬೈಬಲಿನ ಆತ್ಮಕ್ಕೆ ಪ್ರತಿಕೂಲವಾಗಿರಬಹುದು. ವಿವಾಹ ಮತ್ತು ಮಕ್ಕಳ ಕುರಿತು ಚಾಲ್ತಿಯಲ್ಲಿರುವ ಕೆಲವು ಮನೋಭಾವಗಳನ್ನು ಪರ್ಯಾಲೋಚಿಸಿರಿ. ಕೆಲವು ಕುಟುಂಬ ತಲೆಗಳು, ತಾವು ಬಾಡಿಗೆ ಕಟ್ಟಲು ಮತ್ತು ಬಂಧಕವಾದ ಶಾಲಾ ಶುಲ್ಕವನ್ನು ಕಟ್ಟಲು ಮಾತ್ರ ಜವಾಬ್ದಾರರು ಎಂದು ಅಭಿಪ್ರಯಿಸುತ್ತಾರೆ. ಅವರ ಹೆಂಡತಿಯರು ಮತ್ತು ಕೆಲವು ಸಲ ಅವರ ದೊಡ್ಡ ಮಕ್ಕಳು ಕೂಡ, ಆಹಾರ ಮತ್ತು ಬಟ್ಟೆಗಳಂತಹ ಮೂಲಭೂತ ವಸ್ತುಗಳನ್ನು ಒದಗಿಸುವಂತೆ ಬಿಡಲ್ಪಡುತ್ತಾರೆ.
ಅಲ್ಲದೆ, ಕೆಲವು ಗಂಡಂದಿರ ಅಭಿಪ್ರಾಯವು, “ನನ್ನ ಹಣ ನನ್ನದು, ನಿನ್ನ ಹಣವೂ ನನ್ನದೇ” ಎಂಬುದಾಗಿದೆ. ಇದು ಅನೇಕ ವೇಳೆ ಸಂಪಾದನೆಮಾಡುವ ಹೆಂಡತಿಯರಲ್ಲಿ ತೀವ್ರ ಅಸಮಾಧಾನವನ್ನು ಕೆರಳಿಸುತ್ತದೆ. ಟಾನ್ಸೆನೀಯದ ಒಬ್ಬ ಹೆಂಗಸು ದೂರುಕೊಟ್ಟದ್ದು: “ಕುಡಿಯಲಿಕ್ಕಾಗಿ ಹಣವನ್ನು ಖರ್ಚುಮಾಡಲಾಗುತ್ತದೆ, ನಮಗಾಗಿ ಅಥವಾ ಮಕ್ಕಳಿಗಾಗಿ ಅಲ್ಲ. ನಾವು ಕೆಲಸದಲ್ಲಿ ಭಾಗಿಗಳಾಗುವುದು ಅಥವಾ ಅದರಲ್ಲಿ ಹೆಚ್ಚಿನದ್ದನ್ನು ಮಾಡುತ್ತೇವೆ, ಆದರೆ ಅದು ತನ್ನದು, ತಾನು ಸಂಪಾದಿಸಿದ್ದು ಎಂದು ಹೇಳುತ್ತಾ ಎಲ್ಲ ಹಣವನ್ನು ಅವರೇ ತೆಗೆದುಕೊಳ್ಳುತ್ತಾರೆ.”
ಆದರೆ ಕ್ರೈಸ್ತರು, ಸ್ಥಳಿಕ ಸಂಸ್ಕೃತಿ ಅಥವಾ ಜನಪ್ರಿಯ ಅಭಿಪ್ರಾಯಕ್ಕೆ ಮೊದಲಾಗಿ ದೇವರ ವಾಕ್ಯವನ್ನಿಡುತ್ತಾರೆ. ಒಬ್ಬನ ಕುಟುಂಬವನ್ನು ಪರಾಮರಿಸುವ ವಿಷಯದಲ್ಲಿ ಬೈಬಲು ಸಹಾಯಕರವಾದ ನಿರ್ದೇಶನವನ್ನು ಕೊಡುತ್ತದೆ. ಉದಾಹರಣೆಗೆ ಅದು, “ಮಕ್ಕಳು ತಂದೆತಾಯಿಗಳಿಗೋಸ್ಕರ ದ್ರವ್ಯವನ್ನು ಕೂಡಿಸಿಡುವದು ಧರ್ಮವಲ್ಲ, ತಂದೆತಾಯಿಗಳು ಮಕ್ಕಳಿಗೋಸ್ಕರ ಕೂಡಿಸಿಡುವದೇ ಧರ್ಮ” ಎಂದು ಹೇಳುತ್ತದೆ. (2 ಕೊರಿಂಥ 12:14) ಆದುದರಿಂದ, ಕೆಲಸ ಮಾಡಶಕ್ತರಾಗಿರುವ, ದೇವರಿಗೆ ಭಯಪಡುವ ಪುರುಷರು ಸೋಮಾರಿತನದ ಕಾರಣ, ಕುಟುಂಬಕ್ಕೆ ಅನ್ನ, ಬಟ್ಟೆಗಳನ್ನು ಒದಗಿಸುವುದನ್ನು ತಮ್ಮ ಹೆಂಡತಿಯರಿಗೆ ಅಥವಾ ಹಿರಿಯ ಮಕ್ಕಳಿಗೆ ಬಿಡುವುದಿಲ್ಲ; ಆ ಜವಾಬ್ದಾರಿಯು ಖಡಾಖಂಡಿತವಾಗಿ ಕುಟುಂಬದ ತಲೆಯಾಗಿರುವವನ ಮೇಲೆ ಬೀಳುತ್ತದೆ.—1 ಕೊರಿಂಥ 11:3.
ಗಂಡನ ಆದಾಯವು ಅವನ ಕುಟುಂಬದ ಎಲ್ಲ ಆವಶ್ಯಕತೆಗಳಿಗಾಗಿ ಸಾಲದಿರಬಹುದು ನಿಜ. ಆದರೆ ಅವನ ಹೆಂಡತಿ ಮನೆಯ ಹೊರಗೆ ಹಣ ಸಂಪಾದಿಸುವುದಾದರೆ, ಕ್ರೈಸ್ತ ಪುರುಷನು ಕೋಪಗೊಳ್ಳನು. ಬದಲಾಗಿ, ಅವನು ಆಕೆಯನ್ನು ಗೌರವಯೋಗ್ಯಳಾದ “ಸಹಚಾರಿಣಿ”ಯಾಗಿ ನೋಡಿಕೊಳ್ಳುವನು. (ಮಲಾಕಿಯ 2:14) ಹೀಗೆ ಅವನು ನಿರ್ದಯದಿಂದ ಆಕೆ ಪ್ರಯಾಸಪಟ್ಟು ಗಳಿಸಿದ ಹಣವನ್ನು ತೆಗೆದುಕೊಂಡು, ಆಕೆಯ ಅನಿಸಿಕೆಗಳಿಗೆ ಲಕ್ಷ್ಯಕೊಡದೆ ಹಾಳುಮಾಡನು. ಇದಕ್ಕೆ ವ್ಯತಿರಿಕ್ತವಾಗಿ, ಅವನೂ ಅವನ ಹೆಂಡತಿಯೂ ‘ಒಟ್ಟುಗೂಡಿ ಸಮಾಲೋಚಿಸಿ’ ಹಣವನ್ನು ಇಡೀ ಕುಟುಂಬದ ಪ್ರಯೋಜನಾರ್ಥವಾಗಿ ಹೇಗೆ ಅತ್ಯುತ್ತಮವಾಗಿ ಬಳಸಸಾಧ್ಯವಿದೆಯೆಂದು ನಿರ್ಧರಿಸುವರು. (ಜ್ಞಾನೋಕ್ತಿ 13:10, NW) ಸಾಧ್ಯವಿರುವಲ್ಲಿ, ಗಂಡನು ತನ್ನ ಹೆಂಡತಿಗೆ, ಬೈಬಲ್ ಸಮಯಗಳ “ಗುಣವತಿಯಾದ ಸತಿಯು” ಅನುಭವಿಸಿದಂತೆ, ಸ್ವಲ್ಪ ಮಟ್ಟಿಗಿನ ಆರ್ಥಿಕ ಸ್ವಾತಂತ್ರ್ಯವನ್ನೂ ಕೊಡುವನು. (ಜ್ಞಾನೋಕ್ತಿ 31:10, 11, 16) ಅಂತಹ ವಿಷಯಗಳಲ್ಲಿ ಬೈಬಲಿನ ಸಲಹೆಯನ್ನು ಅನುಸರಿಸುವುದು ಕುಟುಂಬ ಸಂತೋಷವನ್ನೂ ಸಂತೃಪ್ತಿಯನ್ನೂ ಪ್ರವರ್ಧಿಸುವುದು.
ನಿರುದ್ಯೋಗದ ಪಂಥಾಹ್ವಾನವನ್ನು ನಿಭಾಯಿಸುವುದು
ನಿರುದ್ಯೋಗದ ಸಮಸ್ಯೆಯ ಕುರಿತು ಯೋಚಿಸಿರಿ. ಕೆಲಸಗಳು ಕೊಂಚವಾಗಿದ್ದು ಸಂಬಳವು ಕಡಮೆಯಾಗಿರುವಾಗ, ಆಫ್ರಿಕದ ಅನೇಕ ಕುಟುಂಬ ತಲೆಗಳು ಮನೆಯಿಂದ ಬಹುದೂರದಲ್ಲಿರುವ ಗಣಿಗಳಲ್ಲಿ, ಕಾರ್ಖಾನೆಗಳಲ್ಲಿ, ಹೊಲಗಳಲ್ಲಿ, ಮತ್ತು ನೆಡುತೋಪುಗಳಲ್ಲಿ ಕೆಲಸವನ್ನು ಕಂಡುಕೊಂಡಿದ್ದಾರೆ. ಒಬ್ಬ ಕ್ರೈಸ್ತ ಪುರುಷನು ಈ ಸನ್ನಿವೇಶದಲ್ಲಿರುವಲ್ಲಿ, ತಾನು ಜೊತೆ ಆರಾಧಕರಿಂದ ಬೇರ್ಪಡಿಸಲ್ಪಟ್ಟಿರುವುದನ್ನು ಮತ್ತು ಅತಿ ಕೆಟ್ಟದಾದ ಸಹವಾಸಕ್ಕೆ ಒಡ್ಡಲ್ಪಟ್ಟಿರುವುದನ್ನು ಕಂಡುಕೊಳ್ಳಬಹುದು. (ಜ್ಞಾನೋಕ್ತಿ 18:1; 1 ಕೊರಿಂಥ 15:33) ಅವನ ಕುಟುಂಬವು ಈ ಸನ್ನಿವೇಶವನ್ನು ಆದಷ್ಟು ಕಡಮೆ ಕಷ್ಟಕರವಾದ ರೀತಿಯಲ್ಲಿ ನಿಭಾಯಿಸಲು ಪ್ರಯತ್ನಿಸಬಹುದಾದರೂ, ಆತ್ಮಿಕವಾಗಿ ನಾಯಕತ್ವ ವಹಿಸಲು ಅಥವಾ ಭಾವಾತ್ಮಕವಾದ ಬೆಂಬಲವನ್ನು ಕೊಡಲು ಮನೆಯಲ್ಲಿ ತಂದೆಯಿಲ್ಲದ ಕಾರಣ ಅವರು ಕಷ್ಟಾನುಭವಿಸುವುದು ಸಂಭವನೀಯ. ಹಾಸ್ಯವ್ಯಂಗ್ಯವಾಗಿ, ಆ ದೀರ್ಘಕಾಲದ ಗೈರುಹಾಜರಿಯು ಅದು ಯಾವುದನ್ನು ತಡೆಯುತ್ತದೆಂದು ಎಣಿಸಲಾಗಿತ್ತೊ ಅದೇ ವಿಷಯದಲ್ಲಿ—ಆರ್ಥಿಕ ಕಷ್ಟದೆಸೆಯಲ್ಲಿ—ಪರಿಣಮಿಸಬಹುದು.
ಒಬ್ಬ ತಾಯಿ ಹೇಳುವುದು: “ನನ್ನ ಗಂಡ ಚಿನ್ನಕ್ಕಾಗಿ ಅಗೆಯಲು ಹೋದರು. ಒಂದು ಅಥವಾ ಹೆಚ್ಚೆಂದರೆ ಎರಡು ತಿಂಗಳುಗಳ ಬಳಿಕ ಹಿಂದಿರುಗಿ ಬರಲು ಅವರು ಯೋಜಿಸಿದರು. ಅದು ಒಂದು ವರ್ಷವಾಗಿ ಪರಿಣಮಿಸಿತು! ಆರು ಮಂದಿ ಮಕ್ಕಳನ್ನು ಪರಾಮರಿಸುವಂತೆ ನನ್ನನ್ನು ಬಿಡಲಾಯಿತು. ಅದಲ್ಲದೆ ಬಾಡಿಗೆ ಕೊಡಲಿಕ್ಕಿತ್ತು. ನನ್ನ ಆರೋಗ್ಯವು ಚೆನ್ನಾಗಿಲ್ಲದಿದ್ದುದರಿಂದ, ಆಸ್ಪತ್ರೆಯ ಬಿಲ್ಗಳನ್ನು ಪಾವತಿಮಾಡಲಿಕ್ಕಿತ್ತು. ನಮಗೆ ಬಟ್ಟೆಗಳು ಬೇಕಾಗಿದ್ದವು, ಮತ್ತು ನಾವು ದಿನಾಲೂ ಊಟ ಮಾಡಬೇಕಾಗಿತ್ತು. ನನಗೆ ಕೆಲಸವಿರಲಿಲ್ಲ. ಜೀವನವು ಬಹಳ ಕಷ್ಟಕರವಾಗಿತ್ತು. ಮಕ್ಕಳನ್ನು ಆತ್ಮಿಕವಾಗಿ—ಕುಟುಂಬ ಅಧ್ಯಯನ, ಕೂಟಗಳು ಮತ್ತು ಸಾರುವ ಕೆಲಸದಲ್ಲಿ—ಪರಾಮರಿಸುವುದು ಅತಿ ಕಷ್ಟಕರವಾದ ಭಾಗವಾಗಿತ್ತು. ಯೆಹೋವನ ಬೆಂಬಲದಿಂದ ನಾವು ಹೇಗೊ ಬದುಕಿ ಉಳಿದೆವು.”
ಕೆಲಸದ ಕಾರಣ ತಮ್ಮ ಕುಟುಂಬಗಳನ್ನು ದೀರ್ಘಕಾಲದ ವರೆಗೆ ಬಿಟ್ಟುಹೋಗಲು ಕೆಲವು ತಾಯಂದಿರು ಸಹ ನಿರ್ಬಂಧಕ್ಕೊಳಗಾಗಿದ್ದಾರೆ. ಕೆಲವರು ಸಂಚಾರಿ ವರ್ತಕರಾಗಿ ಜೀವನೋಪಾಯವನ್ನು ನಡೆಸುತ್ತಾರೆ ಮತ್ತು ಅವರನ್ನು ಮನೆಯಲ್ಲಿ ಕಾಣುವುದೇ ವಿರಳ. ಹೀಗೆ, ಹಿರಿಯ ಮಕ್ಕಳು ಹೆತ್ತವರ ಪಾತ್ರವನ್ನು ವಹಿಸುವ ಒತ್ತಾಯಕ್ಕೊಳಗಾಗಿ, ಊಟಗಳ, ಮನೆಗೆಲಸಗಳ ಮತ್ತು ಒಡಹುಟ್ಟಿದ ಎಳೆಯರಿಗೆ ಶಿಸ್ತು ನೀಡುವ ಜಾಗ್ರತೆಯನ್ನೂ ವಹಿಸುತ್ತಾರೆ. ಆತ್ಮಿಕ ಚಟುವಟಿಕೆಗಳಲ್ಲಿನ ಭಾಗವಹಿಸುವಿಕೆಗೆ ಹಾನಿಯುಂಟಾಗುತ್ತದೆ. ಹೌದು, ಕುಟುಂಬದ ಮೇಲೆ ಬರುವ ಒತ್ತಡವು ಅತ್ಯಂತ ವಿಪರೀತವಾಗಿರಸಾಧ್ಯವಿದೆ!
ಹೌದು, ಆರ್ಥಿಕ ಪರಿಸ್ಥಿತಿಯು ಕಠಿನವಾಗಿರುವಾಗ, ತನ್ನ ಕುಟುಂಬಕ್ಕಾಗಿ ಒದಗಿಸಲು ಒಬ್ಬ ಹೆತ್ತವರಿಗೆ ದೂರಪ್ರದೇಶದಲ್ಲಿ ಕೆಲಸವನ್ನು ಹುಡುಕುವುದನ್ನು ಬಿಟ್ಟು ಅನ್ಯಮಾರ್ಗವಿರಲಿಕ್ಕಿಲ್ಲ. ಬೈಬಲ್ ಸಮಯಗಳಲ್ಲಿ ಐಗುಪ್ತದಿಂದ ಆಹಾರವನ್ನು ಪಡೆಯಲು ಯಾಕೋಬನ ಪುತ್ರರಿಗೆ ತಮ್ಮ ಕುಟುಂಬಗಳನ್ನು ಬಿಟ್ಟುಹೋಗಲೇಬೇಕಾಯಿತೆಂಬುದು ವ್ಯಕ್ತ. (ಆದಿಕಾಂಡ 42:1-5) ಹಾಗೆಯೇ ಇಂದು ಅದೇ ರೀತಿಯ ಸನ್ನಿವೇಶಗಳು ಏಳುವಲ್ಲಿ, ಕುಟುಂಬದ ತಲೆಗಳು, ದೂರದ ಕೆಲಸವು ತರಬಹುದಾದ ಯಾವುದೇ ಪ್ರಾಪಂಚಿಕ ಪ್ರಯೋಜನಗಳ ಎದುರಲ್ಲಿ ದೀರ್ಘಕಾಲದ ಪ್ರತ್ಯೇಕತೆಯಿಂದಾಗಿ ಆಗುವ ಆತ್ಮಿಕ ಹಾಗೂ ಭಾವಾತ್ಮಕ ಹಾನಿಯನ್ನು ತೂಗಿ ನೋಡಬೇಕು. ಅನೇಕ ಕುಟುಂಬಗಳು ದೀರ್ಘಕಾಲದ ಪ್ರತ್ಯೇಕತೆಗಿಂತ ಆರ್ಥಿಕ ಕಷ್ಟವನ್ನು ಸಹಿಸಿಕೊಳ್ಳಲು ಇಷ್ಟಪಡುತ್ತಾರೆ. ಅವರು 1 ತಿಮೊಥೆಯ 6:8ರಲ್ಲಿ ಕಂಡುಬರುವ, “ನಮಗೆ ಅನ್ನವಸ್ತ್ರಗಳಿದ್ದರೆ ಸಾಕು,” ಎಂಬ ಪೌಲನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ.—ಹೋಲಿಸಿ ಜ್ಞಾನೋಕ್ತಿ 15:17.
ಅನೇಕ ವೇಳೆ ಪ್ರಯಾಣಕ್ಕೆ ಅನ್ಯಮಾರ್ಗಗಳಿವೆ. ಆರಂಭದ ಹೆಜ್ಜೆ ಮತ್ತು ಜಾಣತನದ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಉಪಯುಕ್ತ ಸೇವೆಗಳನ್ನು ಒದಗಿಸಿ, ಕೆಲವರು ಉದ್ಯೋಗಗಳನ್ನು ಸೃಷ್ಟಿಸಲು ಶಕ್ತರಾಗಿದ್ದಾರೆ.a (ಹೋಲಿಸಿ ಜ್ಞಾನೋಕ್ತಿ 31:24.) ಅಥವಾ ವಿಷಯವು, ಇತರರು ಕೀಳು ಕೆಲಸವೆಂದು ನೋಡುವ ಕೆಳಮಟ್ಟದ ಕೆಲಸಗಳನ್ನು ಅಂಗೀಕರಿಸುವುದಾಗಿರಬಹುದು. (ಎಫೆಸ 4:28) ತಾನು ಇತರರಿಗೆ ಆರ್ಥಿಕ ರೀತಿಯಲ್ಲಿ ಹೊರೆಯಾಗಿರುವುದನ್ನು ತಪ್ಪಿಸಲು ಅಪೊಸ್ತಲ ಪೌಲನು ತಾನೇ, ‘ಕಷ್ಟದಿಂದ ಹಗಲಿರುಳು ದುಡಿದನು.’ (2 ಥೆಸಲೊನೀಕ 3:8) ಕ್ರೈಸ್ತ ಪುರುಷರು ಇಂದು ಆ ಮಾದರಿಯನ್ನು ಅನುಸರಿಸಬಲ್ಲರು.
ಶಾಲಾ ಶಿಕ್ಷಣದ ಸಮಸ್ಯೆಗಳು
ಇನ್ನೊಂದು ಸಮಸ್ಯೆಯು ಶಾಲಾ ಶಿಕ್ಷಣವನ್ನು ಒಳಗೊಳ್ಳುತ್ತದೆ. ಕೆಲವು ದೂರದ ಪ್ರದೇಶಗಳಲ್ಲಿ, ಮಕ್ಕಳಿಗೆ ಸಾಕಷ್ಟು ಶಿಕ್ಷಣ ಕೊಡಲಿಕ್ಕಾಗಿ ಹೆತ್ತವರಿಗೆ ತಮ್ಮ ಮಕ್ಕಳನ್ನು ದೀರ್ಘಾವಧಿಗಳ ತನಕ ಅವರು ಸಂಬಂಧಿಗಳೊಂದಿಗೆ ಜೀವಿಸುವಂತೆ ಕಳುಹಿಸುವುದು ಸಾಮಾನ್ಯ. ತಮ್ಮ ಹೆತ್ತವರಿಂದ ಪ್ರತ್ಯೇಕಿಸಲ್ಪಡುವ ಅಂತಹ ಮಕ್ಕಳಿಗೆ, ಕೂಟಗಳಿಗೆ ಹಾಜರಾಗುವುದು ಅಥವಾ ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವುದು ಅನೇಕ ವೇಳೆ ಕಷ್ಟವಾಗುತ್ತದೆ. ಅಗತ್ಯವಿರುವ ಶಿಸ್ತನ್ನು ಕಳೆದುಕೊಳ್ಳುವುದರಿಂದ, ಅವರು ಸುಲಭವಾಗಿ ದುಸ್ಸಹವಾಸಗಳಿಗೆ ಬಲಿಬೀಳುತ್ತಾರೆ. ಇದರ ಫಲವಾಗಿ, ಅನೇಕರು ಕ್ರೈಸ್ತ ಜೀವನ ಮಾರ್ಗವನ್ನು ತ್ಯಜಿಸಿದ್ದಾರೆ.
ಐಹಿಕ ವಿದ್ಯಾಭ್ಯಾಸವು ತನ್ನದೇ ಆದ ಪ್ರಯೋಜನಗಳನ್ನು ಪಡೆದುಕೊಂಡಿದೆಯೆಂಬುದರಲ್ಲಿ ಸಂದೇಹವಿಲ್ಲ. ಆದರೆ ಬೈಬಲು ಆತ್ಮಿಕ ವಿದ್ಯಾಭ್ಯಾಸವನ್ನು ಹೆಚ್ಚು ಮೌಲ್ಯದ್ದಾಗಿ ಕಾಣುತ್ತದೆ. ಮತ್ತು ಇಂತಹ ಶಿಕ್ಷಣವನ್ನು ನೀಡುವರೆ ಜವಾಬ್ದಾರಿಯನ್ನು ದೇವರು ಹೆತ್ತವರಿಗೆ ಕೊಟ್ಟಿದ್ದಾನೆ. (ಧರ್ಮೋಪದೇಶಕಾಂಡ 11:18, 19; ಜ್ಞಾನೋಕ್ತಿ 3:13, 14) ಆದರೂ, ದೀರ್ಘಾವಧಿಗಳ ತನಕ ಒಂದು ಮಗುವನ್ನು ದೂರ ಕಳುಹಿಸಿಬಿಡುವುದು, ಅವನನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ಬೆಳೆಸುವ ಒಬ್ಬ ಹೆತ್ತವರ ಪ್ರಯತ್ನವನ್ನು ದುರ್ಬಲಗೊಳಿಸುವುದು ಸಂಭವನೀಯ.—ಎಫೆಸ 6:4, NW.b
ವಿದ್ಯಾಭ್ಯಾಸಕ್ಕಾಗಿರುವ ಸ್ಥಳಿಕ ಅವಕಾಶಗಳು ಸಾಕಾಗುವುದಿಲ್ಲವೆಂದು ತೋರಿಬರುವಾಗ, ತಮ್ಮ ಮಕ್ಕಳಿಗೆ ಮೂಲಭೂತ ಕೌಶಲಗಳಲ್ಲಿ ತಮ್ಮಿಂದ ಸಾಧ್ಯವಿರುವುದನ್ನು ಕಲಿಸುವುದಲ್ಲದೆ ಇನ್ನಾವ ಆಯ್ಕೆಯೂ ಇರಲಿಕ್ಕಿಲ್ಲ. ನಮ್ಮ ‘ಅತಿ ಶ್ರೇಷ್ಠ ಬೋಧಕನಾದ’ ಯೆಹೋವನಿಂದಲೂ ನಮಗೆ ಸಹಾಯವು ಒದಗಿಸಲ್ಪಡುತ್ತದೆ. (ಯೆಶಾಯ 30:20) ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಗಳು, ಅನೇಕ ಶೈಕ್ಷಣಿಕ ಒದಗಿಸುವಿಕೆಗಳನ್ನು ನೀಡುತ್ತವೆ. ಅನೇಕ ಸಭೆಗಳು ಸಾಕ್ಷರತೆಯ ತರಗತಿಗಳನ್ನು ನಡಿಸುತ್ತವೆ. ತದ್ರೀತಿಯಲ್ಲಿ ದೇವಪ್ರಭುತ್ವ ಶುಶ್ರೂಷಾ ಶಾಲೆಯು, ಮಗುವಿನ ಸ್ಪಷ್ಟವಾಗಿ ಓದುವ ಹಾಗೂ ಮಾತಾಡುವ ಸಾಮರ್ಥ್ಯವನ್ನು ಹರಿತಗೊಳಿಸಬಲ್ಲಂತಹ ಒಂದು ಸಹಾಯಕರ ಒದಗಿಸುವಿಕೆಯಾಗಿದೆ.
ಸಂತಾನೋತ್ಪತ್ತಿಯ ಕುರಿತಾದ ಒಂದು ಸಮತೂಕದ ನೋಟ
ಅನೇಕ ಮಕ್ಕಳಿರುವಾಗ, ಅವರಿಗಾಗಿ ಒದಗಿಸುವುದು ನಿರ್ದಿಷ್ಟವಾಗಿ ಕಷ್ಟಕರವಾಗಿರಸಾಧ್ಯವಿದೆ. ತಾವು ಮಕ್ಕಳನ್ನು ಪ್ರೀತಿಸುತ್ತೇವೆಂದು ಅನೇಕವೇಳೆ ಆಫ್ರಿಕದ ಹೆತ್ತವರು ಹೇಳುವರು; ಆದುದರಿಂದ, ಅವರು ತಮ್ಮಿಂದಾದಷ್ಟು ಹೆಚ್ಚು ಮಕ್ಕಳನ್ನು ಪಡೆದುಕೊಳ್ಳುತ್ತಾರೆ! ಮಕ್ಕಳನ್ನು ಒಂದು ಆರ್ಥಿಕ ಸಂಪನ್ಮೂಲದೋಪಾದಿ ವೀಕ್ಷಿಸಬಹುದಾಗಿರುವಾಗ, ಅನೇಕ ಹೆತ್ತವರು ಅವರಲ್ಲಿ ಅಧಿಕ ಸಂಖ್ಯಾತರಿಗೆ ಸಾಕಷ್ಟನ್ನು ಒದಗಿಸಲು ಅಶಕ್ತರಾಗಿದ್ದಾರೆ.
ನಿಶ್ಚಯವಾಗಿ, “ಪುತ್ರಸಂತಾನವು ಯೆಹೋವನಿಂದ ಬಂದ ಸ್ವಾಸ್ತ್ಯ” ಎಂಬುದಾಗಿ ಬೈಬಲು ಹೇಳುತ್ತದೆ. (ಕೀರ್ತನೆ 127:3) ಹಾಗಿದ್ದರೂ, ಆ ಮಾತುಗಳು ಇಸ್ರಾಯೇಲಿನಲ್ಲಿ ಅನುಕೂಲಕರವಾದ ಪರಿಸ್ಥಿತಿಗಳ ಒಂದು ಕಾಲಾವಧಿಯಲ್ಲಿ ಬರೆಯಲ್ಪಟ್ಟಿದ್ದವೆಂಬುದನ್ನು ಗಮನಿಸಿರಿ. ತದನಂತರ, ಘೋರವಾದ ಕ್ಷಾಮ ಹಾಗೂ ಯುದ್ಧವು ಸಂತಾನೋತ್ಪತ್ತಿಯನ್ನು ಕ್ಲೇಶಕರವಾಗಿ ಮಾಡಿತು. (ಪ್ರಲಾಪಗಳು 2:11, 20; 4:10) ಅನೇಕ ವರ್ಧಿಷ್ಣು ದೇಶಗಳಲ್ಲಿ ಪ್ರಚಲಿತವಾಗಿರುವ ಕಷ್ಟಕರ ಸನ್ನಿವೇಶದ ನೋಟದಲ್ಲಿ, ಜವಾಬ್ದಾರಿಯುತರಾದ ಕ್ರೈಸ್ತರು, ತಾವು ವಾಸ್ತವವಾಗಿ ಎಷ್ಟು ಮಕ್ಕಳಿಗೆ ಉಣಿಸಿ, ತೊಡಿಸಿ, ವಸತಿ ಒದಗಿಸಿ, ತರಬೇತಿನೀಡಬಲ್ಲೆವೆಂಬುದಕ್ಕೆ ಗಂಭೀರವಾದ ಗಮನವನ್ನು ಕೊಡಬೇಕು. ಆ ವೆಚ್ಚವನ್ನು ಲೆಕ್ಕಮಾಡಿದವರಾಗಿದ್ದು, ಸಂಪ್ರದಾಯಕ್ಕೆ ವಿರುದ್ಧವಾಗಿ ಹೋಗಿ, ತಾವು ಪಡೆದುಕೊಳ್ಳುವ ಮಕ್ಕಳ ಸಂಖ್ಯೆಯನ್ನು ಪರಿಮಿತಗೊಳಿಸುವುದು ಅತ್ಯುತ್ತಮವಾದದ್ದಾಗಿದೆಯೆಂದು ಅನೇಕ ದಂಪತಿಗಳು ನಿರ್ಣಯಿಸುತ್ತಾರೆ.c—ಹೋಲಿಸಿರಿ ಲೂಕ 14:28.
ಇವು “ವ್ಯವಹರಿಸಲು ಕಷ್ಟಕರವಾದ ಕಠಿನ ಸಮಯಗಳಾ”ಗಿವೆ ಎಂಬುದು ಸ್ಪಷ್ಟ. (2 ತಿಮೊಥೆಯ 3:1-5, NW) ಈ ವಿಷಯಗಳ ವ್ಯವಸ್ಥೆಯು ತನ್ನ ಅನಿವಾರ್ಯ ಅಂತ್ಯದ ಕಡೆಗೆ ಕೆಳಜಾರುತ್ತಿರುವಾಗ, ವರ್ಧಿಷ್ಣು ದೇಶಗಳಲ್ಲಿನ ಕುಟುಂಬಗಳ ಮೇಲಿನ ಒತ್ತಡಗಳು ಅಧಿಕಗೊಳ್ಳುವವು ಎಂಬುದರಲ್ಲಿ ಸಂದೇಹವಿಲ್ಲ. ಆದರೂ, ದೇವರ ವಾಕ್ಯದ ಮೂಲತತ್ವಗಳಿಗೆ ನಿಕಟವಾಗಿ ಅಂಟಿಕೊಳ್ಳುವುದರ ಮೂಲಕ, ಕುಟುಂಬ ತಲೆಗಳು ತಮ್ಮ ಕುಟುಂಬಗಳ ಶಾರೀರಿಕ ಹಾಗೂ ಆತ್ಮಿಕ—ಎರಡೂ—ಅಗತ್ಯಗಳನ್ನು ನೋಡಿಕೊಳ್ಳುವುದರಲ್ಲಿ ಸಫಲರಾಗಬಲ್ಲರು, ಏಕೆಂದರೆ ತನ್ನನ್ನು ನಿಷ್ಠೆಯಿಂದ ಸೇವಿಸುವವರಿಗೆ ಯೆಹೋವನು ಈ ವಾಗ್ದಾನವನ್ನು ಮಾಡುತ್ತಾನೆ: “ನಾನು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ.” (ಇಬ್ರಿಯ 13:5) ಹೌದು, ಬಡ ದೇಶಗಳಲ್ಲಿಯೂ, ಕ್ರೈಸ್ತರು ತಮ್ಮ ಮನೆವಾರ್ತೆಗಳಿಗಾಗಿ ಒದಗಿಸುವ ಪಂಥಾಹ್ವಾನವನ್ನು ಯಶಸ್ವಿಕರವಾಗಿ ನಿಭಾಯಿಸಬಲ್ಲರು!
[ಅಧ್ಯಯನ ಪ್ರಶ್ನೆಗಳು]
a ನಮ್ಮ ಸಂಗಾತಿ ಪತ್ರಿಕೆಯಾದ ಎಚ್ಚರ!ದ ನವೆಂಬರ್ 8, 1994ರ ಸಂಚಿಕೆಯಲ್ಲಿ, “ವರ್ಧಿಷ್ಣು ದೇಶಗಳಲ್ಲಿ ಕೆಲಸಗಳನ್ನು ಸೃಷ್ಟಿಸುವುದು,” ಎಂಬ ಲೇಖನವನ್ನು ನೋಡಿರಿ.
b ಹೆಚ್ಚಿನ ವಿವರಗಳಿಗಾಗಿ, ಆಗಸ್ಟ್ 15, 1982ರ ದ ವಾಚ್ಟವರ್ನ “ವಾಚಕರಿಂದ ಪ್ರಶ್ನೆಗಳು” ನೋಡಿ.
c ಜೂನ್ 8, 1993ರ ಎಚ್ಚರ! ಪತ್ರಿಕೆಯಲ್ಲಿ ಕಂಡುಬರುವ, “ಕುಟುಂಬ ಯೋಜನೆ—ಒಂದು ಜಾಗತಿಕ ವಿವಾದಾಂಶ” ಎಂಬ ಸರಣಿಯಲ್ಲಿ, ಸಹಾಯಕರ ಮಾಹಿತಿಯು ಒದಗಿಸಲ್ಪಟ್ಟಿತು.