ದೇವರಿಂದ ಬೋಧಿಸಲ್ಪಟ್ಟವರಂತೆ ನಡೆಯಿರಿ
“ಬನ್ನಿರಿ, ಯೆಹೋವನ ಪರ್ವತಕ್ಕೆ, . . . , ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು.”—ಮೀಕ 4:2.
1. ಮೀಕನಿಗನುಸಾರ, ದೇವರು ಈ ಕಡೇ ದಿನಗಳಲ್ಲಿ ತನ್ನ ಜನರಿಗಾಗಿ ಏನು ಮಾಡುವನು?
ದೇವರ ಪ್ರವಾದಿಯಾಗಿದ್ದ ಮೀಕನು, “ಅಂತ್ಯ ಕಾಲ” ವಾದ ನಮ್ಮ ಸಮಯದಲ್ಲಿ, ಆರಾಧಿಸುವ ಉದ್ದೇಶದಿಂದ ಅನೇಕ ಜನರು ದೇವರನ್ನು ಸಕ್ರಿಯರಾಗಿ ಹುಡುಕುವರೆಂದು ಮುಂತಿಳಿಸಿದನು. ಅವರು ಒಬ್ಬರನ್ನೊಬ್ಬರು, “ಬನ್ನಿರಿ, ಯೆಹೋವನ ಪರ್ವತಕ್ಕೆ, . . . , ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು,” ಎಂದು ಹೇಳುತ್ತಾ ಪ್ರೋತ್ಸಾಹಿಸುವರು—ಮೀಕ 4:1, 2.
2, 3. ಹಣದಾಸೆಯ ಜನರ ಕುರಿತ ಪೌಲನ ಕಾಲಜ್ಞಾನ ಇಂದು ಹೇಗೆ ನೆರವೇರುತ್ತಾ ಇದೆ?
2 ಎರಡನೆಯ ತಿಮೊಥೆಯ 3:1-5 ರ ನಮ್ಮ ಅಧ್ಯಯನವು, “ಕಡೇ ದಿವಸಗಳಲ್ಲಿ” ದೇವರಿಂದ ಬೋಧಿಸಲ್ಪಡುವುದರಿಂದಾಗುವ ಪರಿಣಾಮವನ್ನು ನೋಡುವಂತೆ ಸಹಾಯ ಮಾಡಬಲ್ಲದು. ಹಿಂದಿನ ಲೇಖನದಲ್ಲಿ, “ಸ್ವಾರ್ಥ ಚಿಂತಕರು” ಆಗಿರಬಾರದೆಂಬ ಪೌಲನ ಎಚ್ಚರಿಕೆಯನ್ನು ಹೃದಯಕ್ಕೆ ತೆಗೆದುಕೊಳ್ಳುವವರಿಗಾಗುವ ಪ್ರಯೋಜನಗಳನ್ನು ಗಮನಿಸುತ್ತಾ ನಾವು ಆರಂಭಿಸಿದೆವು. ಮನುಷ್ಯರು “ಹಣದಾಸೆಯವರೂ” ಆಗಿರುವರೆಂದು ಪೌಲನು ಕೂಡಿಸಿ ನುಡಿದನು.
3 ಆ ಮಾತುಗಳು ನಮ್ಮ ದಿನಗಳಿಗೆ ಎಷ್ಟು ಉತ್ತಮವಾಗಿ ಹೊಂದಿಕೆಯುಳ್ಳದ್ದಾಗಿವೆ ಎಂದು ನೋಡಲು ಯಾವನಿಗೂ ಒಂದು ಕಾಲೆಜ್ ಪದವಿಯ ಅವಶ್ಯವಿಲ್ಲ. ಪ್ರತಿ ವರ್ಷ ಲಕ್ಷಗಟ್ಟಲೆ ಹಣ ಸಂಪಾದಿಸಿದರೂ ತೃಪ್ತರಾಗದ ಬಂಡವಾಳಗಾರರ ಯಾ ವ್ಯಾಪಾರ ಸಂಘಗಳ ನಾಯಕರ ಕರಿತು ನೀವು ಓದಿರುವುದಿಲ್ಲವೆ? ಈ ಹಣಪ್ರೇಮಿಗಳು ಇನ್ನೂ ಹೆಚ್ಚಿನದ್ದನ್ನು, ಶಾಸನಬದ್ಧವಲ್ಲದ ರೀತಿಯಲ್ಲೂ ಬಯಸುತ್ತಿರುತ್ತಾರೆ. ಧನಿಕರಲ್ಲದಿದ್ದರೂ, ಅಷ್ಟೇ ದುರಾಶೆಯಿರುವ, ಎಂದಿಗೂ ತೃಪ್ತರಾಗದ ಇಂದಿನ ಅನೇಕ ಜನರಿಗೂ ಪೌಲನ ಮಾತುಗಳು ಹೊಂದಿಕೆಯಾಗುತ್ತವೆ. ನಿಮ್ಮ ಪ್ರದೇಶದಲ್ಲಿ ಇಂತಹ ಅನೇಕರ ಪರಿಚಯ ನಿಮಗಿರಬಹುದು.
4-6. ಹಣದಾಸೆಯವರಾಗುವುದರಿಂದ ತಪ್ಪುವಂತೆ ಬೈಬಲು ಕ್ರೈಸ್ತರಿಗೆ ಹೇಗೆ ಸಹಾಯ ಮಾಡುತ್ತದೆ?
4 ಪೌಲನು ಹೇಳಿದ ವಿಷಯವು ಮಾನವ ಸ್ವಭಾವದ ಒಂದು ಅನಿವಾರ್ಯ ಭಾಗವಾಗಿದೆಯೆ? ಬೈಬಲಿನ ಗ್ರಂಥಕರ್ತನಿಗನುಸಾರ ಅಲ್ಲ. ಆತನು ಬಹು ಹಿಂದೆ ಈ ಸತ್ಯವನ್ನು ಸ್ಥಾಪಿಸಿದನು: “ಹಣದಾಸೆಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.” ‘ಹಣವು ಸಕಲವಿಧವಾದ ಕೆಟ್ಟತನಕ್ಕೆ ಮೂಲ’ ವೆಂದು ದೇವರನ್ನಲಿಲ್ಲವೆಂಬುದನ್ನು ಗಮನಿಸಿ. “ಹಣದಾಸೆ” ಎಂದೇ ಆತನ ಹೇಳಿಕೆಯಾಗಿತ್ತು.—1 ತಿಮೊಥೆಯ 6:10.
5 ರಸಕರವಾಗಿ, ಪೌಲನ ಮಾತುಗಳ ಪೂರ್ವೋತ್ತರ ಸಂದರ್ಭವು, ಪ್ರಥಮ ಶತಮಾನದ ಕೆಲವು ಉತ್ತಮ ಕ್ರೈಸ್ತರು, ಅವರು ಐಶ್ವರ್ಯವನ್ನು ಪಡೆದವರಾಗಿದ್ದಿರಲಿ, ಅದನ್ನು ಸಂಪಾದಿಸಿದವರಾಗಿದ್ದಿರಲಿ, ಪ್ರಸ್ತುತದ ವಿಷಯಗಳ ವ್ಯವಸ್ಥೆಯಲ್ಲಿ ಐಶ್ವರ್ಯವಂತರಾಗಿದ್ದರು ಎಂಬುದನ್ನು ಒಪ್ಪಿತು. (1 ತಿಮೊಥೆಯ 6:17) ಹಾಗಾದರೆ, ನಮ್ಮ ಆರ್ಥಿಕ ಸ್ಥಿತಿಗತಿ ಏನೇ ಆಗಿರಲಿ, ಹಣ ಪ್ರೇಮಿ ಯಾಗಿ ಪರಿಣಮಿಸುವ ಅಪಾಯದ ಕುರಿತು ಬೈಬಲು ಎಚ್ಚರಿಸುತ್ತದೆ ಎಂಬುದು ವ್ಯಕ್ತವಾಗಬೇಕು. ಈ ವಿಪತ್ಕಾರಕ ಮತ್ತು ಸಾಮಾನ್ಯ ದೋಷವನ್ನು ತಪ್ಪಿಸುವ ಕುರಿತು ಬೈಬಲು ಹೆಚ್ಚಿನ ಯಾವ ಮಾಹಿತಿಯನ್ನಾದರೂ ನೀಡುತ್ತದೆಯೆ? ಹೌದು, ಯೇಸುವಿನ ಪರ್ವತ ಪ್ರಸಂಗದಲ್ಲಿ ಕೊಟ್ಟಂತೆ ನಿಶ್ಚಯವಾಗಿ ನೀಡುತ್ತದೆ. ಇದರ ವಿವೇಕ ಜಗತ್ಪಸ್ರಿದ್ಧ. ಉದಾಹರಣೆಗೆ, ಯೇಸು ಮತ್ತಾಯ 6:26-33 ರಲ್ಲಿ ಹೇಳಿದುದನ್ನು ಗಮನಿಸಿ.
6 ಲೂಕ 12:15-21 ರಲ್ಲಿ ದಾಖಲಿಸಿರುವಂತೆ, ಹೆಚ್ಚು ಸಂಪತ್ತನ್ನು ಶೇಖರಿಸಲು ಪ್ರಯತ್ನಿಸುತ್ತಾ ಇದ್ದರೂ ಫಕ್ಕನೆ ತನ್ನ ಜೀವವನ್ನು ಕಳೆದುಕೊಂಡ ಒಬ್ಬ ಧನಿಕನ ಬಗೆಗೆ ಯೇಸು ಮಾತಾಡಿದನು. ಯೇಸುವಿನ ಮುಖ್ಯಾರ್ಥವೇನಾಗಿತ್ತು? ಅವನಂದದ್ದು: “ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವುದಿಲ್ಲ.” ಇಂತಹ ಸಲಹೆಯನ್ನು ಕೊಡುವುದರೊಂದಿಗೆ, ಬೈಬಲು ಸೋಮಾರಿತನವನ್ನು ಖಂಡಿಸಿ ಪ್ರಾಮಾಣಿಕತೆಯ ಶ್ರಮದ ಬೆಲೆಯನ್ನು ಒತ್ತಿಹೇಳುತ್ತದೆ. (1 ಥೆಸಲೊನೀಕ 4:11, 12) ಈ ಬೋಧನೆಗಳು ನಮ್ಮ ಸಮಯಗಳಿಗೆ ಸಮಂಜಸವಲ್ಲವೆಂದು ಕೆಲವರು ಆಕ್ಷೇಪಣೆ ಎತ್ತಬಹುದೆಂಬುದು ಸರಿ. ಆದರೆ ಅವು ಸಮಂಜಸ, ಮತ್ತು ಅವು ಸಫಲವಾಗುತ್ತಿವೆ.
ಬೋಧಿಸಲ್ಪಟ್ಟದ್ದು ಮತ್ತು ಪ್ರಯೋಜನ ಪಡೆದುದು
7. ಐಶ್ವರ್ಯದ ಕುರಿತ ಬೈಬಲಿನ ಸಲಹೆಯನ್ನು ನಾವು ಯಶಸ್ವಿಯಾಗಿ ಅನ್ವಯಿಸಬಲ್ಲೆವೆಂಬ ಭರವಸೆಗೆ ಯಾವ ಕಾರಣ ನಮಗಿದೆ?
7 ಅನೇಕ ರಾಷ್ಟ್ರಗಳಲ್ಲಿ, ಹಣದ ಸಂಬಂಧದಲ್ಲಿ ದೈವಿಕ ಮೂಲಸೂತ್ರಗಳನ್ನು ಅನ್ವಯಿಸಿಕೊಂಡಿರುವ ಸಕಲ ಸಾಮಾಜಿಕ ಮತ್ತು ಆರ್ಥಿಕ ಹಂತಗಳ ಸ್ತ್ರೀಪುರುಷರ ನೈಜ ಜೀವನ ಮಾದರಿಗಳನ್ನು ನೀವು ಕಂಡುಕೊಳ್ಳಬಲ್ಲಿರಿ. ಹೊರಗಿನವರು ಸಹ ಕಾಣಸಾಧ್ಯವಾಗುವಂತೆ, ಅವರು ತಮಗೂ ತಮ್ಮ ಕುಟುಂಬಗಳಿಗೂ ಪ್ರಯೋಜನವನ್ನು ತಂದಿದ್ದಾರೆ. ಉದಾಹರಣೆಗೆ, ಪ್ರಿನ್ಸ್ಟನ್ ವಿಶ್ವವಿದ್ಯಾಯಲದ ಪ್ರಕಾಶಕರ ಸಮಕಾಲೀನ ಅಮೆರಿಕದಲ್ಲಿ ಧಾರ್ಮಿಕ ಚಳುವಳಿಗಳು (ಇಂಗ್ಲಿಷ್ನಲ್ಲಿ) ಎಂಬ ಪುಸ್ತಕದಲ್ಲಿ, ಒಬ್ಬ ಮಾನವ ಶಾಸ್ತ್ರಜ್ಞನು ಬರೆದದ್ದು: “[ಸಾಕ್ಷಿ] ಪ್ರಕಾಶನಗಳಲ್ಲಿ ಮತ್ತು ಸಭಾ ಭಾಷಣಗಳಲ್ಲಿ, ಅವರ ಗಣ್ಯತೆಗಳಿಗೆ ಅವರು ಹೊಸ ಕಾರುಗಳ, ಬೆಲೆ ಬಾಳುವ ಬಟ್ಟೆಗೆಳ, ಯಾ ವಿಪುಲ ಜೀವನದ ಮೇಲೆ ಹೊಂದಿಕೊಳ್ಳುವುದಿಲ್ಲವೆಂದು ಅವರಿಗೆ ಜ್ಞಾಪಕ ಹುಟ್ಟಿಸಲಾಗುತ್ತದೆ. ಅದೇ ಸಮಯದಲ್ಲಿ ಒಬ್ಬ ಸಾಕ್ಷಿಯು ಅತ್ಯಂತ ಪ್ರಾಮಾಣಿಕತೆಯಿಂದ ತನ್ನ ಧಣಿಗೆ ನ್ಯಾಯವಾದ ದಿನದ ಕೆಲಸವನ್ನು ಒಪ್ಪಿಸಬೇಕು . . . ಇಂಥ ಗುಣಗಳು, ನೈಪುಣ್ಯರಹಿತನಾದ ಒಬ್ಬ ಪುರುಷನನ್ನೂ ಪ್ರಯೋಜನಕಾರಿಯಾದ ಕಾರ್ಮಿಕನಾಗಿ ಮಾಡುತ್ತದೆ, ಮತ್ತು ಉತ್ತರ ಫಿಲಡೆಲ್ಫಿಯ ಬಡಪ್ರದೇಶದ ಕೆಲವು ಸಾಕ್ಷಿಗಳು ಕೆಲಸದ ದೊಡ್ಡ ಜವಾಬ್ದಾರಿಕೆಯಿರುವ ಸ್ಥಾನಗಳಿಗೆ ಏರಿದ್ದಾರೆ.” ದೇವರಿಂದ ಆತನ ವಾಕ್ಯದ ಮೂಲಕ ಶಿಕ್ಷಣವನ್ನು ಪಡೆದಿರುವ ಜನರು, ಇಂದಿನ ಪರಿಸ್ಥಿತಿಗಳನ್ನು ನಿಭಾಯಿಸಲು ಹೆಚ್ಚು ಕಷ್ಟವಾಗಿ ಮಾಡುವ ಮನೋಭಾವಗಳ ಕುರಿತು ಎಚ್ಚರಿಸಲ್ಪಟ್ಟಿದ್ದಾರೆಂಬುದು ಸ್ಪಷ್ಟ. ಬೈಬಲಿನ ಶಿಕ್ಷಣವು ಹೆಚ್ಚು ಉತ್ತಮವಾದ, ಹೆಚ್ಚು ಸಂತೋಷದ ಜೀವನಕ್ಕೆ ನಡೆಸುತ್ತದೆಂದು ಈ ಅನುಭವವು ರುಜುಮಾಡುತ್ತದೆ.
8. “ಬಡಾಯಿ ಕೊಚ್ಚುವವರು,” “ಅಹಂಕಾರಿಗಳು,” ಮತ್ತು “ದೂಷಕರು” ಎಂಬ ವಿಷಯಗಳನ್ನು ಏಕೆ ಜೋಡಿಸಸಾಧ್ಯವಿದೆ, ಮತ್ತು ಈ ಮೂರು ಪದಗಳ ಅರ್ಥವೇನು?
8 ಪೌಲನು ಪಟ್ಟಿ ಮಾಡಿದ ಮುಂದಿನ ಮೂರು ಸಂಗತಿಗಳನ್ನು ನಾವು ಜೋಡಿಸಸಾಧ್ಯವಿದೆ. ಕಡೇ ದಿವಸಗಳಲ್ಲಿ ಮನುಷ್ಯರು, “ಬಡಾಯಿ ಕೊಚ್ಚುವವರೂ ಅಹಂಕಾರಿಗಳೂ ದೂಷಕರೂ” ಆಗಿರುವರು. ಈ ಮೂರು ಗುಣಗಳು ತದ್ರೂಪದವುಗಳಲ್ಲವಾದರೂ ಅವೆಲ್ಲ ದುರಭಿಮಾನಕ್ಕೆ ಸಂಬಂಧಿಸಿವೆ. ಮೊದಲನೆಯದ್ದು, “ಬಡಾಯಿ ಕೊಚ್ಚುವವರು.” ಇಲ್ಲಿರುವ ಮೂಲ ಗ್ರೀಕ್ ಪದದ ಅರ್ಥವು, “‘ನಿಜತ್ವವು ನ್ಯಾಯೀಕರಿಸುವುದಕ್ಕಿಂತ ಹೆಚ್ಚಿನದ್ದಾಗಿ ತನ್ನನ್ನು ಮಾಡಿಕೊಳ್ಳುವ ಒಬ್ಬನು,’” ಅಥವಾ ‘ಮಾಡುವುದಕ್ಕಿಂತ ಹೆಚ್ಚಿನದ್ದನ್ನು ವಾಗ್ದಾನಿಸುವವನು,’ ಎಂದು ಒಂದು ನಿಘಂಟು ಹೇಳುತ್ತದೆ. ಕೆಲವು ಬೈಬಲುಗಳು “ಜಂಬ ಹೊಡೆಯುವವರು” ಎಂಬ ಪದವನ್ನು ಏಕೆ ಉಪಯೋಗಿಸುತ್ತವೆಂದು ನೀವು ಗ್ರಹಿಸಬಲ್ಲಿರಿ. ಮುಂದೆ “ಅಹಂಕಾರಿಗಳು,” ಅಥವಾ ಪದಶಃ “ಶ್ರೇಷ್ಠರಾಗಿ ತೋರುವವರು,” ಬರುತ್ತದೆ. ಕೊನೆಯದಾಗಿ, “ದೂಷಕರು.” ಕೆಲವರು ದೂಷಕರನ್ನು, ದೇವರ ವಿಷಯ ಪೂಜ್ಯತೆಯಿಲ್ಲದೆ ಮಾತಾಡುವವರು ಎಂದು ಯೋಚಿಸಬಹುದು. ಆದರೆ ಮೂಲಪದದಲ್ಲಿ ಮನುಷ್ಯರ ವಿರುದ್ಧ ಹಾನಿಕರವಾದ, ಅಪಮಾನಕರವಾದ, ಅಥವಾ ನಿಂದಿಸುವ ಮಾತು ಇಲ್ಲಿ ಸೇರಿದೆ. ಹೀಗೆ ಪೌಲನು ದೇವರ ಮತ್ತು ಮನುಷ್ಯನ ಕಡೆಗೆ ಮಾಡುವ ದೂಷಣೆಯನ್ನು ಸೂಚಿಸುತ್ತಿದ್ದಾನೆ.
9. ಈಗಿರುವ ಹಾನಿಕರವಾದ ಮನೋಭಾವಗಳಿಗೆ ವೈದೃಶ್ಯವಾಗಿ, ಜನರು ಯಾವ ಮನೋಭಾವಗಳನ್ನು ಬೆಳೆಸಬೇಕೆಂದು ಬೈಬಲು ಪ್ರೋತ್ಸಾಹಿಸುತ್ತದೆ?
9 ಜನರು ಜೊತೆಕಾರ್ಮಿಕರಾಗಿರಲಿ, ಶಾಲಾಸಂಗಡಿಗರಾಗಿರಲಿ, ಅಥವಾ ಸಂಬಂಧಿಗಳಾಗಿರಲಿ, ಪೌಲನ ವರ್ಣನೆಗೆ ಹೊಂದಿಕೊಂಡಿರುವ ಜನರ ಮಧ್ಯೆ ನೀವಿರುವಾಗ ನಿಮಗೆ ಹೇಗೆನಿಸುತ್ತದೆ? ಇದು ನಿಮ್ಮ ಜೀವನವನ್ನು ಹೆಚ್ಚು ಸುಲಭ ಮಾಡುತ್ತದೆಯೆ? ಇಲ್ಲವೆ ಇಂತಹ ಜನರು ನಿಮ್ಮ ಜೀವನವನ್ನು, ನಮ್ಮ ಸಮಯಗಳನ್ನು ನಿಭಾಯಿಸಲು ಹೆಚ್ಚು ಕಷ್ಟಕರವಾಗುವಂತೆ ಜಟಿಲಗೊಳಿಸುತ್ತಿದ್ದಾರೊ? ದೇವರ ವಾಕ್ಯವಾದರೋ, ನಾವು ಇಂತಹ ಮನೋಭಾವಗಳಿಂದ ದೂರ ಹೋಗುವಂತೆ ಕಲಿಸಿ, 1 ಕೊರಿಂಥ 4:7; ಕೊಲೊಸ್ಸೆ 3:12, 13; ಮತ್ತು ಎಫೆಸ 4:29 ರಲ್ಲಿ ಕಂಡುಬರುವ ರೀತಿಯ ಶಿಕ್ಷಣವನ್ನು ಕೊಡುತ್ತದೆ.
10. ಬೈಬಲಿನ ಶಿಕ್ಷಣವನ್ನು ಅಂಗೀಕರಿಸುವುದರಿಂದ ಯೆಹೋವನ ಜನರಿಗೆ ಪ್ರಯೋಜನ ದೊರೆಯುತ್ತದೆಂಬುದನ್ನು ಯಾವುದು ಸೂಚಿಸುತ್ತದೆ?
10 ಕ್ರೈಸ್ತರು ಅಪೂರ್ಣರಾದರೂ, ಈ ಉತ್ತಮ ಶಿಕ್ಷಣವನ್ನು ಅವರು ಅನ್ವಯಿಸಿಕೊಳ್ಳುವುದು ಅವರಿಗೆ ಈ ಸಂದಿಗ್ಧ ಸಮಯಗಳಲ್ಲಿ ಮಹತ್ತಾಗಿ ಸಹಾಯ ಕೊಡುತ್ತದೆ. ಇಟೆಲಿಯ ಲಾ ಷೀವೀಲ್ಟ ಕಾಟೋಲೀಕ ಪತ್ರಿಕೆ, ಯೆಹೋವನ ಸಾಕ್ಷಿಗಳು ಹೆಚ್ಚುತ್ತಿರುವುದಕ್ಕೆ ಒಂದು ಕಾರಣ, “ಈ ಚಳುವಳಿ ಅದರ ಸದಸ್ಯರಿಗೆ ಒಂದು ನಿಷ್ಕೃಷ್ಟವಾದ ಮತ್ತು ಬಲವಾದ ಗುರುತನ್ನು ಕೊಡುತ್ತದೆ,” ಎಂದು ಹೇಳಿತು. ಆದರೆ, “ಬಲವಾದ ಗುರುತು” ಎಂದು ಹೇಳಿದಾಗ, ಲೇಖಕನು ಅವರು, “ಬಡಾಯಿ ಕೊಚ್ಚುವವರೂ ಅಹಂಕಾರಿಗಳೂ ದೂಷಕರೂ” ಎಂಬ ಅರ್ಥದಲ್ಲಿ ಹೇಳಿದನೊ? ಇದಕ್ಕೆ ವಿರುದ್ಧವಾಗಿ, ಈ ಜೆಸ್ಯುಯಿಟ್ ಪತ್ರಿಕೆ ಗಮನಿಸುವುದೇನಂದರೆ, ಈ ಚಳುವಳಿ, “ಅದರ ಸದಸ್ಯರಿಗೆ ಒಂದು ನಿಷ್ಕೃಷ್ಟವಾದ ಮತ್ತು ಬಲವಾದ ಗುರುತನ್ನು ಕೊಡುತ್ತದೆ, ಮತ್ತು ಅವರು ವಾತ್ಸಲ್ಯದಿಂದ, ಸಹೋದರತ್ವದ ಭಾವದಿಂದ ಮತ್ತು ಐಕಮತ್ಯದಿಂದ ಸ್ವಾಗತಿಸಲ್ಪಡುವ ಒಂದು ಸ್ಥಳ ಅದಾಗಿದೆ.” ಸಾಕ್ಷಿಗಳಿಗೆ ಕಲಿಸಲ್ಪಟ್ಟಿರುವ ವಿಷಯಗಳು ಅವರಿಗೆ ಸಹಾಯ ನೀಡಿವೆ ಎಂಬುದು ಸುವ್ಯಕ್ತವಲ್ಲವೆ?
ಶಿಕ್ಷಣವು ಕುಟುಂಬದ ಸದಸ್ಯರಿಗೆ ಪ್ರಯೋಜನ ತರುತ್ತದೆ
11, 12. ಅನೇಕ ಕುಟುಂಬಗಳಲ್ಲಿ ಪರಿಸ್ಥಿತಿಗಳು ಹೇಗಿರುವುವೆಂದು ಪೌಲನು ನಿಷ್ಕೃಷ್ಟವಾಗಿ ಹೇಗೆ ಸೂಚಿಸಿದನು?
11 ಮುಂದಿನ ನಾಲ್ಕು, ಕೊಂಚ ಮಟ್ಟಿಗೆ ಸಂಬಂಧವಿರುವ ವಿಷಯಗಳನ್ನು ನಾವು ಒಂದು ಗುಂಪಾಗಿ ಮಾಡಬಹುದು. ಕಡೇ ದಿವಸಗಳಲ್ಲಿ ಅನೇಕರು, “ತಂದೆತಾಯಿಗಳಿಗೆ ಅವಿಧೇಯರೂ ಉಪಕಾರ ನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ” ಆಗಿರುವರೆಂದು ಪೌಲನು ಮುಂತಿಳಿಸಿದನು. ಇವುಗಳಲ್ಲಿ ಎರಡು ದೋಷಗಳು—ಉಪಕಾರ ನೆನಸದೆ ಇರುವುದು ಮತ್ತು ದೇವಭಯವಿಲ್ಲದೆ ಇರುವುದು—ನಮ್ಮ ಸುತ್ತ ಎಲ್ಲೆಲ್ಲಿಯೂ ಇವೆ ಎಂದು ನಿಮಗೆ ಗೊತ್ತು. ಆದರೂ, ಪೌಲನು ಅವುಗಳನ್ನು “ತಂದೆತಾಯಿಗಳಿಗೆ ಅವಿಧೇಯರು” ಮತ್ತು “ಮಮತೆಯಿಲ್ಲದವರು”—ಇವುಗಳ ಮಧ್ಯೆ ಏಕೆ ಹಾಕಿದನೆಂದು ನಾವು ಸುಲಭವಾಗಿ ನೋಡಬಲ್ಲೆವು. ಈ ನಾಲ್ಕು ಗುಣಗಳು ಒಂದಕ್ಕೊಂದು ಜೋಡಣೆಯಾಗಿವೆ.
12 ಗಮನಿಸುವ ಯಾವ ವ್ಯಕ್ತಿಯೂ, ಅವನು ಎಳೆಯನಾಗಿರಲಿ, ವೃದ್ಧನಾಗಿರಲಿ, ಹೆತ್ತವರಿಗೆ ತೋರಿಸುವ ಅವಿಧೇಯತೆ ಅತಿರೇಕವಾಗಿದೆ, ಮತ್ತು ಇನ್ನೂ ಕೆಡುತ್ತಿದೆ ಎಂದು ಒಪ್ಪಲೇ ಬೇಕು. ಯುವ ಜನರಿಗೆ ಮಾಡಲ್ಪಟ್ಟಿರುವ ಸಕಲ ವಿಷಯಗಳಿಗಾಗಿ ಅವರು ಅನಾಭಾರಿಗಳು ಎಂದು ಅನೇಕ ಹೆತ್ತವರು ಗೊಣಗುತ್ತಾರೆ. ಅನೇಕ ಯುವ ಜನರು, ತಮ್ಮ ಹೆತ್ತವರು ತಮಗಾಗಲಿ (ಇಲ್ಲವೆ ಸರ್ವಸಾಮಾನ್ಯವಾಗಿ, ತಮ್ಮ ಕುಟುಂಬಕ್ಕಾಗಲಿ) ನಿಜವಾಗಿಯೂ ನಿಷ್ಠೆ ತೋರಿಸದೆ, ತಮ್ಮ ಸ್ವಂತ ಕೆಲಸಗಳಲ್ಲಿ, ವಿಲಾಸಗಳಲ್ಲಿ, ಯಾ ತಮ್ಮಲ್ಲಿ ಮಗ್ನರಾಗಿರುತ್ತಾರೆ ಎಂದು ಹೇಳಿ ವಿರೋಧ ಸೂಚಿಸುತ್ತಾರೆ. ದೋಷ ಯಾರದ್ದೆಂದು ಕಂಡುಹಿಡಿಯಲು ಪ್ರಯತ್ನಿಸುವ ಬದಲಿಗೆ, ಫಲಿತಾಂಶಗಳನ್ನು ನೋಡಿರಿ. ಪ್ರಾಯಸ್ಥ ಮತ್ತು ಯುವ ಜನರ ಮಧ್ಯೆ ಬರುವ ವಿಮುಖತೆ ಅನೇಕ ವೇಳೆ, ಯುವ ಜನರು ತಮ್ಮದೇ ಆದ ನೈತಿಕತೆ, ಅಥವಾ ಅನೈತಿಕತೆಯ ಮಟ್ಟವನ್ನು ರಚಿಸುವಂತೆ ನಡೆಸುತ್ತದೆ. ಪರಿಣಾಮ? ಹದಿಪ್ರಾಯದವರ ಗರ್ಭಧಾರಣೆ, ಗರ್ಭಪಾತ ಮತ್ತು ರತಿ ರವಾನಿತ ರೋಗಗಳಲ್ಲಿ ಗಗನಕ್ಕೇರುವ ಪ್ರಮಾಣವೇ. ಅನೇಕ ವೇಳೆ, ಮನೆಯಲ್ಲಿ ಸ್ವಾಭಾವಿಕ ಮಮತೆಯ ಕೊರತೆಯು ಹಿಂಸಾಕೃತ್ಯಗಳಿಗೆ ನಡೆಸುತ್ತದೆ. ಸ್ವಾಭಾವಿಕ ಮಮತೆಯು ಮಾಯವಾಗುತ್ತಾ ಹೋಗುತ್ತಿದೆ ಎಂಬುದಕ್ಕೆ ರುಜುವಾತಾಗಿ ದೃಷ್ಟಾಂತಗಳನ್ನು ನೀವು ಪ್ರಾಯಶಃ ನಿಮ್ಮ ಪ್ರದೇಶದಿಂದಲೇ ಕೊಡಬಲ್ಲಿರಿ.
13, 14. (ಎ) ಅನೇಕ ಕುಟುಂಬಗಳ ಅವನತಿಯ ಎದುರಿನಲ್ಲಿ, ನಾವು ಬೈಬಲಿಗೇಕೆ ಗಮನಕೊಡಬೇಕು? (ಬಿ) ಕುಟುಂಬ ಜೀವನದ ಬಗೆಗೆ ದೇವರು ಯಾವ ರೀತಿಯ ಸಲಹೆಯನ್ನು ನೀಡುತ್ತಾನೆ?
13 ಹೆಚ್ಚೆಚ್ಚಾಗಿ ಜನರು ಒಮ್ಮೆ ಯಾರು ತಮ್ಮ ವಿಸ್ತೃತ ಕುಟುಂಬದ, ಒಂದೇ ಕುಲ, ವಂಶ, ಅಥವಾ ಪಂಗಡದ ಭಾಗವಾಗಿದ್ದರೋ ಅವರ ವಿರುದ್ಧವಾಗಿ ಏಕೆ ಏಳುತ್ತಿದ್ದಾರೆ ಎಂಬುದನ್ನು ಇದು ವಿವರಿಸಬಹುದು. ಆದರೂ, ಇಂದಿನ ಜೀವನದ ನಕಾರಾತ್ಮಕ ರೂಪಗಳನ್ನು ಒತ್ತಿಹೇಳುವ ಕಾರಣ ನಾವು ಈ ವಿಷಯಗಳನ್ನು ಮುಂದೆ ತರುತ್ತಿಲ್ಲ ಎಂಬುದನ್ನು ಮನಸ್ಸಿನಲ್ಲಿಡಿರಿ. ನಮ್ಮ ಎರಡು ಮುಖ್ಯ ಅಭಿರುಚಿಗಳು ಇವೇ: ಪೌಲನು ಪಟ್ಟಿ ಮಾಡಿದ ದೋಷಗಳಿಂದ ಕಷ್ಟಾನುಭವಿಸುವುದನ್ನು ತಪ್ಪಿಸಲು ಬೈಬಲಿನ ಬೋಧನೆಗಳು ಸಹಾಯ ಮಾಡಬಲ್ಲವೊ, ಮತ್ತು ಬೈಬಲ್ ಬೋಧನೆಗಳನ್ನು ನಮ್ಮ ಜೀವಿತದಲ್ಲಿ ಅನ್ವಯಿಸಿಕೊಳ್ಳುವುದರಿಂದ ನಾವು ಪ್ರಯೋಜನ ಪಡೆಯುವೆವೊ? ಪೌಲನ ಪಟ್ಟಿಯಲ್ಲಿರುವ ಆ ನಾಲ್ಕು ವಿಷಯಗಳ ಕುರಿತು ಪ್ರತ್ಯಕ್ಷವಾಗುವಂತೆ, ಉತ್ತರವು ಹೌದು ಎಂದಾಗಸಾಧ್ಯವಿದೆ.
14 ಒಂದು ಸಾಮಾನ್ಯ ಹೇಳಿಕೆ ಸುಸಮರ್ಥನೀಯ: ಭಾವಾತ್ಮಕವಾಗಿ ಪ್ರೋತ್ಸಾಹಕರವಾದ ಮತ್ತು ಸುಸಾಫಲ್ಯವಿರುವ ಕುಟುಂಬವನ್ನು ಉತ್ಪಾದಿಸುವುದರಲ್ಲಿ ಬೈಬಲಿನ ಬೋಧನೆಯನ್ನು ಇನ್ನಾವುದೂ ಮೀರಿಸುವುದಿಲ್ಲ. ಕುಟುಂಬ ಸದಸ್ಯರಿಗೆ ಕೇವಲ ಅಪಾಯವನ್ನು ತಪ್ಪಿಸುವ ಕಾರಣದಿಂದಲ್ಲ, ಸಾಫಲ್ಯ ಹೊಂದುವ ಕಾರಣದಿಂದ ಸಹಾಯ ಮಾಡಸಾಧ್ಯವಿರುವ ಅದರ ಸಲಹೆಯ ಕೇವಲ ಒಂದು ಮಾದರಿ ಪಟ್ಟಿಯಿಂದ ಇದು ರುಜುವಾಗುತ್ತದೆ. ಗಂಡಂದಿರನ್ನು, ಹೆಂಡತಿಯರನ್ನು, ಮತ್ತು ಮಕ್ಕಳನ್ನು ಸಂಬೋಧಿಸಿದ ಇನ್ನು ಅನೇಕ ಸುಂದರವಾದ ಹಾಗೂ ಪ್ರಾಯೋಗಿಕ ವಚನಗಳು ಇವೆಯಾದರೂ, ಕೊಲೊಸ್ಸೆ 3:18-21 ಇದನ್ನು ಉತ್ತಮವಾಗಿ ಚಿತ್ರೀಕರಿಸುತ್ತದೆ. ಈ ಶಿಕ್ಷಣ ನಮ್ಮ ದಿನಗಳಲ್ಲಿ ಸಾಫಲ್ಯ ಪಡೆಯುತ್ತದೆ. ನಿಜ ಕ್ರೈಸ್ತ ಕುಟುಂಬಗಳಲ್ಲೂ, ಜಟಿಲತೆಗಳೂ ಪಂಥಾಹ್ವಾನಗಳೂ ಇವೆ ಎಂಬುದನ್ನು ಒಪ್ಪಿಕೊಳ್ಳೋಣ. ಆದರೂ, ಬೈಬಲು ಕುಟುಂಬಗಳಿಗೆ ಬಲು ಸಹಾಯಕರ ಬೋಧನೆಯನ್ನು ಒದಗಿಸುತ್ತದೆಂದು ಮೊತ್ತದ ಪರಿಣಾಮಗಳು ರುಜು ಮಾಡುತ್ತವೆ.
15, 16. ಯೆಹೋವನ ಸಾಕ್ಷಿಗಳನ್ನು ಜಾಂಬಿಯದಲ್ಲಿ ಅಧ್ಯಯನ ಮಾಡಿದಾಗ, ಒಬ್ಬ ಸಂಶೋಧಕರು ಯಾವ ಪರಿಸ್ಥಿತಿಯನ್ನು ಕಂಡುಹಿಡಿದರು?
15 ಕೆನಡದ ಲೆತ್ಬ್ರಿಜ್ನ ಒಬ್ಬ ಸಂಶೋಧಕರು ಜಾಂಬಿಯದ ಸಾಮಾಜಿಕ ಜೀವನವನ್ನು ಒಂದೂವರೆ ವರ್ಷಕಾಲ ಅಧ್ಯಯನ ಮಾಡಿದರು. ಅವರು ತೀರ್ಮಾನಿಸಿದ್ದು: “ಸ್ಥಿರವಾದ ವಿವಾಹ ಬಂಧಗಳನ್ನು ಇಟ್ಟುಕೊಳ್ಳುವುದರಲ್ಲಿ ಯೆಹೋವನ ಸಾಕ್ಷಿಗಳು ಬೇರೆ ಪಂಗಡಗಳವರಿಗಿಂತ ಹೆಚ್ಚಿನ ಯಶಸ್ಸನ್ನು ಅನುಭವಿಸುತ್ತಾರೆ. . . . ಗಂಡ, ಹೆಂಡತಿಯ ಮಧ್ಯೆ ನವೀಕರಿಸಿದ ವಿನಿಮಯ ಸಂಬಂಧವನ್ನು ಅವರ ಯಶಸ್ಸು ಪ್ರತಿನಿಧೀಕರಿಸುತ್ತದೆ. ಇವರು, ತಮ್ಮ ಹೊಸದಾಗಿ ಕಂಡುಹಿಡಿದ, ಬೆದರಿಕೆಯಿಲ್ಲದ, ಸಹಕಾರಕ ಪ್ರಯತ್ನಗಳಲ್ಲಿ ಪರಸ್ಪರ ವರ್ತನೆಗೆ ಒಬ್ಬ ಹೊಸ ನಾಯಕನಿಗೆ, ದೇವರಿಗೆ ಉತ್ತರವಾದಿಗಳಾಗಿದ್ದಾರೆ. . . . ಯೆಹೋವನ ಸಾಕ್ಷಿಯಾದ ಗಂಡನು ತನ್ನ ಹೆಂಡತಿ ಮತ್ತು ಮಕ್ಕಳ ಹಿತದ ಜವಾಬ್ದಾರಿಯನ್ನು ವಹಿಸುವುದರಲ್ಲಿ ಬಲಿಯಲು ಕಲಿಸಲ್ಪಡುತ್ತಾನೆ. . . . ಸಮಗ್ರತೆಯ ವ್ಯಕ್ತಿಗಳಾಗುವಂತೆ ಗಂಡನೂ ಹೆಂಡತಿಯೂ ಪ್ರೋತ್ಸಾಹಿಸಲ್ಪಡುತ್ತಾರೆ . . . ಸಮಗ್ರತೆಗಿರುವ ಈ ಪ್ರಧಾನ ಹಕ್ಕುಕೇಳಿಕೆಯು ವಿವಾಹದ ಬಂಧಕವಾಗುತ್ತದೆ.”
16 ಆ ಅಧ್ಯಯನ ಅಸಂಖ್ಯಾತ ನೈಜ ಜೀವನ ಅನುಭವಗಳ ಮೇಲೆ ಆಧಾರಿಸಿತ್ತು. ಉದಾಹರಣೆಗೆ, ವಾಡಿಕೆಯ ವರ್ತನೆಗೆ ವ್ಯತಿರಿಕ್ತವಾಗಿ, ಈ ಸಂಶೋಧಕರು ಹೇಳಿದ್ದು: “ಪುರುಷ ಯೆಹೋವನ ಸಾಕ್ಷಿಗಳು, ತಯಾರಿ ನಡೆಯುವಾಗ ಮಾತ್ರವಲ್ಲ, ನೆಡುವಾಗಲೂ ಅಗೆಯುವಾಗಲೂ, ತೋಟಗಳಲ್ಲಿ ತಮ್ಮ ಹೆಂಡತಿಯರಿಗೆ ಹೆಚ್ಚು ಬಾರಿ ಸಹಾಯ ಮಾಡುತ್ತಿರುವುದು ಕಂಡು ಬಂದಿದೆ.” ಭೂವ್ಯಾಪಕವಾಗಿ ಅಸಂಖ್ಯಾತ ಅನುಭವಗಳು ಬೈಬಲ್ ಶಿಕ್ಷಣವು ಜೀವನಗಳನ್ನು ಪ್ರಭಾವಿಸುವುದನ್ನು ತೋರಿಸುತ್ತವೆಂಬುದು ಇದರಿಂದ ವ್ಯಕ್ತವಾಗುತ್ತದೆ.
17, 18. ಧಾರ್ಮಿಕ ಪರಂಪರೆ ಮತ್ತು ವಿವಾಹಪೂರ್ವ ಸಂಭೋಗದ ಕುರಿತ ಅಧ್ಯಯನದಲ್ಲಿ ಯಾವ ಆಶ್ಚರ್ಯಕರವಾದ ಫಲಿತಾಂಶಗಳು ಎದ್ದುಬಂದವು?
17 ಧರ್ಮದ ಶಾಸ್ತ್ರೀಯ ಅಧ್ಯಯನಕ್ಕಾಗಿ ಪತ್ರಿಕೆ (ಇಂಗ್ಲಿಷ್ನಲ್ಲಿ)ಯ ಕಂಡುಹಿಡಿತಗಳನ್ನು ಹಿಂದಿನ ಲೇಖನ ಹೇಳಿತು. ಅದರಲ್ಲಿ, 1991 ರಲ್ಲಿ, “ಧಾರ್ಮಿಕ ಪರಂಪರೆ ಮತ್ತು ವಿವಾಹಪೂರ್ವ ಕಾಮ: ಯುವ ವಯಸ್ಕರ ರಾಷ್ಟ್ರೀಯ ಮಾದರಿ ಪಟ್ಟಿಯ ಸಾಕ್ಷ್ಯ” ಎಂಬ ಲೇಖನವಿತ್ತು. ವಿವಾಹಪೂರ್ವದ ಸಂಭೋಗ ಎಷ್ಟು ವ್ಯಾಪಕವೆಂಬುದನ್ನು ನೀವು ಪ್ರಾಯಶಃ ಬಲ್ಲಿರಿ. ಚಿಕ್ಕ ಪ್ರಾಯದಲ್ಲಿ ಅನೇಕರು ಕಾಮೋದ್ರೇಕಕ್ಕೆ ಬಲಿಯಾಗುತ್ತಾರೆ, ಮತ್ತು ಅನೇಕ ಹದಿವಯಸ್ಕರಿಗೆ ಅನೇಕಾನೇಕ ಕಾಮ ಸಹಭಾಗಿಗಳಿರುತ್ತಾರೆ. ಈ ಸಾಮಾನ್ಯ ನಮೂನೆಯನ್ನು ಬೈಬಲ್ ಬೋಧನೆಗಳು ಬದಲಾಯಿಸಬಲ್ಲವೊ?
18 ಈ ವಿವಾದಾಂಶವನ್ನು ಅಧ್ಯಯನ ಮಾಡಿದ ಮೂವರು ಅಸೋಷಿಯೇಟ್ ಪ್ರೊಫೆಸರರು, ‘ಹೆಚ್ಚು ಪೂರ್ವಾಚಾರ ಪ್ರಿಯ ಕ್ರೈಸ್ತ ಸಂಪ್ರದಾಯಗಳಲ್ಲಿ ಬೆಳೆಸಲ್ಪಟ್ಟ ತರುಣರು ಮತ್ತು ಯುವ ವಯಸ್ಕರು ವಿವಾಹಪೂರ್ವದ ಸಂಭೋಗದಲ್ಲಿ ಭಾಗವಹಿಸುವುದು ಕಡಮೆ ಸಂಭವನೀಯ’ ಎಂದು ಕಂಡುಹಿಡಿಯಲು ನಿರೀಕ್ಷಿಸಿದರು. ಆದರೆ ನಿಜತ್ವಗಳು ಏನನ್ನು ತೋರಿಸಿದವು? ಮೊತ್ತದಲ್ಲಿ, 70 ರಿಂದ 82 ಸೇಕಡಾ ವಿವಾಹಪೂರ್ವ ಸಂಭೋಗದಲ್ಲಿ ಭಾಗವಹಿಸಿದ್ದರು. ಕೆಲವರಿಗೆ, “ಒಂದು ಸಂಪ್ರದಾಯಬದ್ಧ ಪರಂಪರೆ ವಿವಾಹಪೂರ್ವ ಸಂಭೋಗದ ಸಂಭವನೀಯತೆಯನ್ನು [ಕಡಮೆ] ಮಾಡಿತು, ಆದರೆ ‘ಹದಿವಯಸ್ಕರ ವಿವಾಹಪೂರ್ವ ಸಂಭೋಗ’ದ ವಿಷಯದಲ್ಲಿ ಕಡಮೆ ಇರಲಿಲ್ಲ.” ಧಾರ್ಮಿಕ ಕುಟುಂಬಗಳವರೆಂದು ಕಂಡುಬಂದ ಕೆಲವು ಯುವ ಜನರ ಬಗೆಗೆ ಮಾತಾಡುತ್ತಾ ಸಂಶೋಧಕರು ಹೇಳಿದ್ದೇನಂದರೆ ಅವರು, “ಸಾಂಪ್ರದಾಯಿಕ ಪ್ರಾಟೆಸ್ಟಂಟ್ ಪಂಗಡಗಳಿಗೆ ಹೋಲಿಸಿದಾಗ, ಇವರು ವಿವಾಹಪೂರ್ವ ಸಂಭೋಗದ ಗಮನಾರ್ಹವಾಗಿ ಹೆಚ್ಚಾದ ಸಂಭವನೀಯತೆ ಯನ್ನು ಪ್ರದರ್ಶಿಸಿದರು.”
19, 20. ದೇವರ ಶಿಕ್ಷಣವು ಯೆಹೋವನ ಸಾಕ್ಷಿಗಳ ಮಧ್ಯೆ ಇರುವ ಅನೇಕ ಯುವ ಜನರಿಗೆ ಹೇಗೆ ಸಹಾಯ ಮಾಡಿ ರಕ್ಷಣೆಯನ್ನು ಒದಗಿಸಿದೆ?
19 ಈ ಪ್ರೊಫೆಸರರು ಯೆಹೋವನ ಸಾಕ್ಷಿಗಳ ಯುವ ಜನರಲ್ಲಿ ಕೇವಲ ಪ್ರತಿಕೂಲವಾದುದನ್ನು ಕಂಡುಹಿಡಿದರು. ಇವರು, “ಇತರ ಗುಂಪುಗಳಿಗಿಂತ ಅತಿ ಭಿನ್ನವಾದ ಗುಂಪಿನ” ಮಧ್ಯೆ ಇದ್ದರು. ಇದೇಕೆ? “ಅನುಭವ, ನಿರೀಕ್ಷಣೆ ಮತ್ತು ಸೇರಿಕೊಳ್ಳುವಿಕೆಯು ಆಗಿಸುವ ಬದ್ಧತೆಯ ಮಟ್ಟ ಮತ್ತು ಸಾಮಾಜಿಕ ಅನುಕಲನ . . . ಸಾಮಾನ್ಯವಾಗಿ ನಂಬಿಕೆಯ ಮೂಲಸೂತ್ರಕ್ಕೆ ಅಂಟಿಕೊಳ್ಳುವ ಹೆಚ್ಚು ಉನ್ನತ ಮಟ್ಟಗಳನ್ನು ಸೃಷ್ಟಿಸಬಹುದು.” ಅವರು ಕೂಡಿಸಿ ಹೇಳಿದ್ದು: “ಸಾಕ್ಷಿಗಳು, ತರುಣರು ಮತ್ತು ಯುವ ವಯಸ್ಕರಾಗಿ ಸುವಾರ್ತಾ ಜವಾಬ್ದಾರಿಗಳನ್ನು ನೆರವೇರಿಸುವಂತೆ ನಿರೀಕ್ಷಿಸಲಾಗುತ್ತದೆ.”
20 ಹೀಗೆ ಬೈಬಲ್ ಶಿಕ್ಷಣ ಯೆಹೋವನ ಸಾಕ್ಷಿಗಳನ್ನು, ಅವರು ಅನೈತಿಕತೆಯನ್ನು ತಪ್ಪಿಸುವಂತೆ ಸಹಾಯ ಮಾಡುತ್ತಾ ಪ್ರಯೋಜನಕರವಾಗಿ ಪ್ರಭಾವಿಸಿತು. ಇದರ ಅರ್ಥವು, ಯಾವುದರಲ್ಲಿ ಕೆಲವು ಗುಣವಾಗದ್ದೂ, ಇನ್ನು ಕೆಲವು ಮಾರಕವೂ ಆಗಿವೆಯೋ ಅಂತಹ ರತಿ ರವಾನಿತ ರೋಗಗಳಿಂದ ರಕ್ಷಣೆ ಎಂದಾಗುತ್ತದೆ. ಯಾವುದನ್ನು ಬೈಬಲು ಕೊಲೆಗೆ ಸಮಾನವೆಂದು ಹೇಳುತ್ತದೋ ಅಂತಹ ಗರ್ಭಪಾತವನ್ನು ಮಾಡುವ ಒತ್ತಡವೂ ಇಲ್ಲವೆಂದು ಇದರ ಅರ್ಥ. ಸಮರ್ಥರಾದ ಯುವ ವಯಸ್ಕರು ತಮ್ಮ ವಿವಾಹವನ್ನು ಶುದ್ಧ ಮನಸ್ಸಾಕ್ಷಿಯಿಂದ ಪ್ರವೇಶಿಸುತ್ತಾರೆಂದೂ ಇದರ ಅರ್ಥ. ಇದು, ವಿವಾಹಗಳು ಹೆಚ್ಚು ಸ್ಥಿರವಾದ ಅಸ್ತಿವಾರದ ಮೇಲೆ ಕಟ್ಟಲ್ಪಡುತ್ತವೆಂಬ ಅರ್ಥವನ್ನು ಕೊಡುತ್ತದೆ. ನಿಭಾಯಿಸಲು, ಹೆಚ್ಚು ಆರೋಗ್ಯವಂತರಾಗಿರಲು ಮತ್ತು ಹೆಚ್ಚು ಸಂತುಷ್ಟರಾಗಿರಲು ನಮಗೆ ಸಹಾಯ ಮಾಡಸಾಧ್ಯವುಳ್ಳವುಗಳು ಇಂತಹ ಬೋಧನೆಗಳೇ.
ಸಕಾರಾತ್ಮಕ ಶಿಕ್ಷಣ
21. ನಮ್ಮ ದಿನಗಳಿಗಾಗಿ ಪೌಲನು ಯಾವ ವಿಷಯಗಳನ್ನು ನಿಷ್ಕೃಷ್ಟವಾಗಿ ಮುಂತಿಳಿಸಿದನು?
21 ಈಗ 2 ತಿಮೊಥೆಯ 3:3, 4 ಕ್ಕೆ ಹಿಂದೆ ಹೋಗಿ, ಅನೇಕರಿಗೆ—ಎಲ್ಲರಿಗಲ್ಲ—ನಮ್ಮ ಸಮಯಗಳನ್ನು ನಿಭಾಯಿಸಲು ಕಷ್ಟವಾಗಿ ಇನ್ನಾವುದು ಮಾಡುತ್ತದೆಂದು ಪೌಲನು ಹೇಳಿದನೆಂದು ಗಮನಿಸಿರಿ: “[ಜನರು] ಸಮಾಧಾನವಾಗದವರೂ ಚಾಡಿ ಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ . . . ಆಗಿರುವರು.” ಎಷ್ಟು ನಿಷ್ಕೃಷ್ಟವಾಗಿದೆ! ಹೀಗಿದ್ದರೂ, ಬೈಬಲಿನ ಶಿಕ್ಷಣವು ನಮ್ಮನ್ನು ರಕ್ಷಿಸಬಲ್ಲದು, ಮತ್ತು ನಾವು ನಿಭಾಯಿಸಲು, ಸಾಫಲ್ಯ ಪಡೆಯಲು ಅದು ನಮ್ಮನ್ನು ಸಜ್ಜಿತರನ್ನಾಗಿ ಮಾಡಬಲ್ಲದು.
22, 23. ಪೌಲನು ತನ್ನ ಪಟ್ಟಿಯನ್ನು ಯಾವ ಸಕಾರಾತ್ಮಕ ಸಲಹೆಯಿಂದ ಮುಗಿಸಿದನು, ಮತ್ತು ಅದರ ಪ್ರಮುಖತೆ ಏನು?
22 ಅಪೊಸ್ತಲ ಪೌಲನು ತನ್ನ ಪಟ್ಟಿಯನ್ನು ಸಕಾರಾತ್ಮಕ ಧಾಟಿಯಲ್ಲಿ ಅಂತ್ಯಗೊಳಿಸುತ್ತಾನೆ. ಅಂತಿಮ ವಿಷಯವನ್ನು ಅವನು ಯಾವುದು ನಮಗೆ ಸಹ ಅಮೇಯವಾದ ಪ್ರಯೋಜನಗಳನ್ನು ತರುತ್ತದೋ ಅಂತಹ ದಿವ್ಯಾಜ್ಞೆಯಾಗಿ ಪರಿವರ್ತಿಸುತ್ತಾನೆ. “ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವ” ಜನರ ಕುರಿತು ಹೇಳಿ, “ಇಂಥವರ ಸಹವಾಸವನ್ನೂ ಮಾಡದಿರು,” ಎಂದು ಹೇಳುತ್ತಾನೆ. ಕೆಲವು ಚರ್ಚುಗಳ ಯುವ ಜನರ ಮಧ್ಯೆ ಸಾಮಾನ್ಯವಾದುದಕ್ಕಿಂತಲೂ ಹೆಚ್ಚು ಪ್ರಮಾಣದ ವಿವಾಹಪೂರ್ವ ಸಂಭೋಗವಿದೆಯೆಂಬುದನ್ನು ಜ್ಞಾಪಿಸಿಕೊಳ್ಳಿ. ಆ ಚರ್ಚ್ಹೋಕರ ಅನೈತಿಕತೆಯು ಸರಾಸರಿಯ ಮಟ್ಟದಲ್ಲಿದ್ದರೂ, ಅವರ ಆರಾಧನಾ ರೂಪವು ಬಲರಹಿತವೆಂಬುದಕ್ಕೆ ಅದು ರುಜುವಾತಾಗಿರುವುದಿಲ್ಲವೊ? ಅಲ್ಲದೆ, ಜನರು ವ್ಯಾಪಾರದಲ್ಲಿ ಹೇಗೆ ವರ್ತಿಸುತ್ತಾರೆ, ಕನಿಷ್ಠರೊಂದಿಗೆ ಹೇಗೆ ವ್ಯವಹರಿಸುತ್ತಾರೆ, ಯಾ ಸಂಬಂಧಿಗಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದರಲ್ಲಿ ಧಾರ್ಮಿಕ ಬೋಧನೆಗಳು ಅವರನ್ನು ಪರಿವರ್ತಿಸುತ್ತವೆಯೆ?
23 ದೇವರ ವಾಕ್ಯದಿಂದ ನಾವು ಕಲಿಯುವುದನ್ನು ಆಚರಣೆಗೆ ತರಬೇಕು, ಕ್ರೈಸ್ತತ್ವದ ನಿಜ ಶಕ್ತಿಯನ್ನು ಪ್ರದರ್ಶಿಸುವ ಆರಾಧನಾ ಮಾರ್ಗ ನಮ್ಮಲ್ಲಿರಬೇಕು ಎಂದು ಪೌಲನ ಮಾತುಗಳು ತೋರಿಸುತ್ತವೆ. ಯಾರ ಆರಾಧನಾ ರೂಪವು ಬಲರಹಿತವೂ ಅಂಥವರ ಕುರಿತು ಪೌಲನು ನಮಗನ್ನುವುದು: “ಇಂಥವರ ಸಹವಾಸವನ್ನೂ ಮಾಡದಿರು.” ಇದು ಸ್ಪಷ್ಟವಾಗಿದ, ನಮಗೆ ನಿಶ್ಚಿತ ಪ್ರಯೋಜನಗಳನ್ನು ತರುವ ಒಂದು ಆಜ್ಞೆಯಾಗಿದೆ.
24. ಪ್ರಕಟನೆ 18 ರ ಬುದ್ಧಿವಾದ ಪೌಲನ ಸಲಹೆಗೆ ಹೇಗೆ ಸಮಾನಾಂತರವಾಗಿದೆ?
24 ಯಾವ ವಿಧದಲ್ಲಿ? ಬೈಬಲಿನ ಕೊನೆಯ ಪುಸ್ತಕವು ಒಬ್ಬ ಸಾಂಕೇತಿಕ ಸ್ತ್ರೀಯನ್ನು, ಬಾಬೆಲೆಂಬ ಮಹಾ ನಗರಿ ಎಂದು ಕರೆಯಲ್ಪಡುವ ಒಬ್ಬ ವೇಶ್ಯೆಯನ್ನು ಚಿತ್ರಿಸುತ್ತದೆ. ಪುರಾವೆಯು ಈ ಮಹಾ ಬಾಬೆಲು, ಯೆಹೋವ ದೇವರು ಪರೀಕ್ಷಿಸಿ ತಳ್ಳಿ ಬಿಟ್ಟಿರುವ ಸುಳ್ಳು ಧರ್ಮದ ಲೋಕವ್ಯಾಪಕ ಸಾಮ್ರಾಜ್ಯವನ್ನು ಪ್ರತಿನಿಧೀಕರಿಸುತ್ತದೆ ಎಂದು ತೋರಿಸುತ್ತದೆ. ಆದರೂ ಇದರಲ್ಲಿ ನಮ್ಮನ್ನು ಸೇರಿಸಬೇಕಾಗಿರುವುದಿಲ್ಲ. ಪ್ರಕಟನೆ 18:4 ನಮಗೆ ಬುದ್ಧಿ ಹೇಳುವುದು: “ನನ್ನ ಪ್ರಜೆಗಳೇ, ಅವಳನ್ನು ಬಿಟ್ಟು ಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿಯಾಗಬಾರದು.” ಇದು ಪೌಲನು ತಿಳಿಯಪಡಿಸಿದ, “ಇಂಥವರ ಸಹಾವಾಸವನ್ನೂ ಮಾಡದಿರು” ಎಂಬದಕ್ಕೆ ಸಮನಾದ ಸಂದೇಶವಲ್ಲವೆ? ಇದಕ್ಕನುಸಾರ ನಡೆಯುವುದು, ನಾವು ದೇವರ ವಾಕ್ಯದ ಶಿಕ್ಷಣದಿಂದ ಪ್ರಯೋಜನ ಪಡೆಯಬಲ್ಲ ಇನ್ನೊಂದು ವಿಧವಾಗಿದೆ.
25, 26. ಯೆಹೋವ ದೇವರಿಂದ ಶಿಕ್ಷಣವನ್ನು ಈಗ ಅಂಗೀಕರಿಸಿ ಅನ್ವಯಿಸುವವರಿಗೆ ಯಾವ ಭವಿಷ್ಯ ಕಾಯುತ್ತಿದೆ?
25 ಬೇಗನೆ ದೇವರು ಮಾನವ ವಿಚಾರಗಳಲ್ಲಿ ಪ್ರತ್ಯಕ್ಷವಾಗಿ ಕೈ ಹಾಕುವನು. ಆತನು ಸಕಲ ಮಿಥ್ಯಾ ಧರ್ಮವನ್ನು ಮತ್ತು ಈಗಿನ ದುಷ್ಟ ವ್ಯವಸ್ಥೆಯಲ್ಲಿ ಉಳಿದಿರುವುದನ್ನು ಅಳಿಸಿ ಬಿಡುವನು. ಪ್ರಕಟನೆ 19:1, 2 ಸೂಚಿಸುವಂತೆ ಅದು ಉಲ್ಲಾಸಕ್ಕೆ ಕಾರಣವಾಗುವುದು. ಭೂಮಿಯಲ್ಲಿ ಯಾರು ದೇವರ ಶಿಕ್ಷಣವನ್ನು ಅಂಗೀಕರಿಸಿ ಅನುಸರಿಸುತ್ತಾರೋ ಅಂಥವರು, ಈ ಕಠಿನ ಸಮಯಗಳ ಅಡಚಣೆಗಳು ಗತವಾಗುವಾಗ ಆತನ ಬೋಧನೆಗಳನ್ನು ಅನುಸರಿಸುತ್ತಾ ಹೋಗುವಂತೆ ಬಿಡಲ್ಪಡುವರು.—ಪ್ರಕಟನೆ 21:3, 4.
26 ಆ ಪುನಃಸ್ಥಾಪಿತವಾದ ಭೂಪ್ರಮೋದವನದಲ್ಲಿ ಜೀವಿಸುವುದು ನಮ್ಮ ಭಾವನೆಗೆ ಮೀರುವಷ್ಟು ಆನಂದದ್ದಾಗಿರುವುದು. ಇದು ನಮಗೆ ಸಾಧ್ಯವೆಂದು ದೇವರು ವಚನ ಕೊಡುತ್ತಾನೆ, ಮತ್ತು ನಾವು ಆತನಲ್ಲಿ ಯಾವ ಸಂಶಯವೂ ಇಲ್ಲದೆ ಭರವಸವಿಡಬಲ್ಲೆವು. ಆತನು ಹೀಗೆ ಆತನ ಸಹಾಯಕರವಾದ ಬೋಧನೆಯನ್ನು ಅಂಗೀಕರಿಸಿ ಅನುಸರಿಸುವಂತೆ ನಮಗೆ ಹೇರಳವಾದ ಕಾರಣಗಳನ್ನು ಕೊಡುತ್ತಾನೆ. ಯಾವಾಗ? ನಾವು ಆತನ ಶಿಕ್ಷಣಗಳನ್ನು ಈಗ ನಮ್ಮ ಸಂದಿಗ್ಧ ಸಮಯಗಳಲ್ಲಿ ಮತ್ತು ಆತನು ವಾಗ್ದಾನಿಸುವ ಪ್ರಮೋದವನದಲ್ಲಿಯೂ ಅನುಸರಿಸೋಣ.—ಮೀಕ 4:3, 4.
ವಿಚಾರ ಮಾಡಲು ವಿಷಯಗಳು
▫ ಯೆಹೋವನ ಜನರು ಐಶ್ವರ್ಯದ ಕುರಿತ ಆತನ ಸಲಹೆಯಿಂದ ಹೇಗೆ ಪ್ರಯೋಜನ ಪಡೆಯುತ್ತಾರೆ?
▫ ದೇವರ ಸೇವಕರು ಆತನ ವಾಕ್ಯವನ್ನು ಅನ್ವಯಿಸಿದುದರ ಮೂಲಕ ಯಾವ ಉತ್ತಮ ಫಲಿತಾಂಶಗಳು ಬಂದಿವೆಯೆಂದು ಒಂದು ಜೆಸ್ಯುಯಿಟ್ ಪತ್ರಿಕೆ ಸಾಕ್ಷಿ ನೀಡಿತು?
▫ ಜಾಂಬಿಯದಲ್ಲಿ ನಡೆದ ಒಂದು ಅಧ್ಯಯನ, ದೈವಿಕ ಶಿಕ್ಷಣವನ್ನು ಅನ್ವಯಿಸಿದುದರಿಂದ ಕುಟುಂಬಗಳಿಗೆ ಬಂದ ಯಾವ ಪ್ರಯೋಜನಗಳನ್ನು ತಿಳಿಸಿತು?
▫ ದೈವಿಕ ಶಿಕ್ಷಣವು ಯುವ ಜನರಿಗೆ ಯಾವ ರಕ್ಷಣೆಯನ್ನು ಒದಗಿಸುತ್ತದೆ?
[ಪುಟ 15 ರಲ್ಲಿರುವ ಚೌಕ]
ತೆರಲು ಎಂತಹ ಭಯಂಕರ ಬೆಲೆ!
“ಹದಿಪ್ರಾಯದವರು ಸಂಭೋಗ ಮತ್ತು ಅಮಲೌಷಧದ ಪ್ರಯೋಗ ನಡೆಸುವುದನ್ನು ಬಯಸುವುದರಿಂದ, ಅಪಾಯಕ್ಕೆ ಈಡು ಮಾಡಿಕೊಂಡು, ಕ್ಷಣಕ್ಕಾಗಿ ಬದುಕುವುದರಿಂದ, ಮತ್ತು ತಾವು ಅಮರರು ಎಂದೆಣಿಸಿ ಅಧಿಕಾರವನ್ನು ಪ್ರತಿಭಟಿಸುವುದರಿಂದ ಏಯ್ಡ್ಸ್ನ ಭಾರಿ ಅಪಾಯಕ್ಕೆ ಅಭಿಮುಖವಾಗಿ ನಿಂತಿದ್ದಾರೆ,” ಎಂದು ಏಯ್ಡ್ಸ್ ಮತ್ತು ಹದಿವಯಸ್ಕರ ಕುರಿತ ಒಂದು ಪರಿಷತ್ತಿನಲ್ಲಿ ನೀಡಿದ ಒಂದು ವರದಿ ಹೇಳಿತು.—ನ್ಯೂ ಯಾರ್ಕ್ ಡೆಯ್ಲಿ ನ್ಯೂಸ್, ಭಾನುವಾರ, ಮಾರ್ಚ್ 7, 1993.
“ಲೈಂಗಿಕವಾಗಿ ಸಕ್ರಿಯರಾಗಿರುವ ಹದಿಹರೆಯದ ಹುಡುಗಿಯರು ಏಯ್ಡ್ಸ್ ಸಾಂಕ್ರಾಮಿಕ ರೋಗದ ಮುಂದಿನ ‘ಅಗ್ರ ಭಾಗ’ ವಾಗಿ ತಲೆದೋರುತ್ತಿದ್ದಾರೆ ಎಂದು ಯೂರೋಪ್, ಆಫ್ರಿಕ ಮತ್ತು ಆಗ್ನೇಯ ಏಷಿಯದಲ್ಲಿ ಮಾಡಿದ ವಿಶ್ವ ಸಂಸ್ಥೆಯ ಒಂದು ಅಧ್ಯಯನ ಕಂಡುಹಿಡಿಯಿತು.”—ದ ನ್ಯೂ ಯಾರ್ಕ್ ಟೈಮ್ಸ್, ಶುಕ್ರವಾರ, ಜುಲೈ 30, 1993.
[ಪುಟ 16,17 ರಲ್ಲಿರುವಚಿತ್ರಗಳು]
ಬೈಬಲ್ ಶಿಕ್ಷಣ ಯೆಹೋವನ ಸಾಕ್ಷಿಗಳಿಗೆ ಸಭೆಗಳಲ್ಲಿ ಮತ್ತು ಮನೆಯಲ್ಲಿ ಪ್ರಯೋಜನ ತರುತ್ತದೆ