ದೇವ-ದತ್ತ ಬಲದ ಮೇಲೆ ಆತುಕೊಳ್ಳಿರಿ
ಎರಡನೆಯ ತಿಮೊಥೆಯ ಪತ್ರದಿಂದ ಅತ್ಯುಜ್ವಲ ಭಾಗಗಳು
ಯೆಹೋವನು ಶೋಧನೆಗಳನ್ನೂ, ಹಿಂಸೆಯನ್ನೂ ತಾಳಿಕೊಳ್ಳಲು ತನ್ನ ಸೇವಕರಿಗೆ ಶಕ್ತಿಯನ್ನು ಕೊಡುತ್ತಾನೆ. ತಿಮೊಥೆಯನಿಗೂ ಇತರ ಕ್ರೈಸ್ತರಿಗೂ ದೇವ-ದತ್ತ ಬಲವು ಎಷ್ಟೊಂದು ಅವಶ್ಯಕವಾಗಿ ಬೇಕಿತ್ತು! ಸಾ.ಶ. 64 ರಲ್ಲಿ ರೋಮ್ ಬೆಂಕಿಯ ಧ್ವಂಸಕ್ಕೆ ಈಡಾಯಿತು ಮತ್ತು ಚಕ್ರವರ್ತಿ ನೀರೋ ಇದಕ್ಕೆ ಜವಾಬ್ದಾರನೆಂದು ವದಂತಿ. ಪ್ರಾಯಶಃ ತನ್ನನ್ನು ರಕ್ಷಿಸಿ ಕೊಳ್ಳಲು ಅವನು ಕ್ರೈಸ್ತರ ಮೇಲೆ ಅಪವಾದ ಹೊರಿಸಿದನು, ಮತ್ತು ಇದು ಹಿಂಸೆಯ ಅಲೆಯನ್ನು ಎಬ್ಬಿಸಿತು. ಅದೇ ಸಮಯದಲ್ಲಿ (ಸುಮಾರು ಸಾ.ಶ. 65) ಅಪೊಸ್ತಲ ಪೌಲನು ಪುನಃ ರೋಮಿನಲ್ಲಿ ಸೆರೆಮನೆಗೆ ಹಾಕಲ್ಪಟ್ಟಿರಬೇಕು. ಮರಣವನ್ನು ಎದುರಿಸುತ್ತಿದ್ದನಾದರೂ, ಅವನು ಆಗ ತಿಮೊಥೆಯನಿಗೆ ತನ್ನ ಎರಡನೆಯ ಪತ್ರವನ್ನು ಬರೆದನು.
ಧರ್ಮಭ್ರಷ್ಟರನ್ನು ಎದುರಿಸಲು ಮತ್ತು ಹಿಂಸೆಯ ಎದುರಲ್ಲಿ ಸ್ಥಿರವಾಗಿ ನಿಲ್ಲಲು ಪೌಲನ ಪತ್ರವು ತಿಮೊಥೆಯನನ್ನು ಸಿದ್ಧಗೊಳಿಸಿತು. ಆತ್ಮೀಕ ಪ್ರಗತಿಮಾಡುವದನ್ನು ಮುಂದುವರಿಸುವಂತೆ ಅದು ಅವನನ್ನು ಹುರಿದುಂಬಿಸಿತು ಮತ್ತು ಪೌಲನ ಸೆರೆಮನೆಯ ಪರಿಸ್ಥಿತಿಯನ್ನು ತಿಳಿಸಿತು. ದೇವ-ದತ್ತ ಬಲದ ಮೇಲೆ ಆತುಕೊಳ್ಳುವಂತೆ ವಾಚಕರಿಗೆ ಈ ಪತ್ರವು ಸಹಾಯ ಮಾಡುತ್ತದೆ.
ಶ್ರಮೆಯನ್ನು ಅನುಭವಿಸಿ, ಸಾಧುತ್ವದಿಂದ ಕಲಿಸುವುದು
ಸುವಾರ್ತೆಯ ಘೋಷಕರೋಪಾದಿ ಹಿಂಸೆಯನ್ನು ತಾಳಿಕೊಳ್ಳಲು ದೇವರು ಬಲವನ್ನು ದಯಪಾಲಿಸುತ್ತಾನೆ. (2 ತಿಮೊ. 1:1-18) ತನ್ನ ಪ್ರಾರ್ಥನೆಗಳಲ್ಲಿ ಪೌಲನು ತಿಮೊಥೆಯನನ್ನು ಎಂದೂ ಮರೆಯಲಿಲ್ಲ, ಮತ್ತು ಅವನ ನಿಷ್ಕಪಟವಾದ ನಂಬಿಕೆಯನ್ನು ಅವನು ನೆನಪಿನಲ್ಲಿಟ್ಟುಕೊಂಡಿದ್ದನು. ದೇವರು ತಿಮೊಥೆಯನಿಗೆ ಕೊಟ್ಟ ಆತ್ಮವು ‘ಬಲ, ಪ್ರೀತಿ, ಸ್ವಸ್ಥ ಮನಸ್ಸಿನ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ.’ ಆದುದರಿಂದ ಸಾರುವುದರಲ್ಲಿ ಮತ್ತು ಸುವಾರ್ತೆಗಾಗಿ ಬಾಧೆ ಪಡುವಾಗ ಅವನು ನಾಚಿಕೆ ಪಡಬೇಕಾದ ಜರೂರಿಯಿಲ್ಲ. ಪೌಲನಿಂದ ಅವನು ಕೇಳಿದ “ಸ್ವಸ್ಥ ಬೋಧನಾವಾಕ್ಯಗಳ ಮಾದರಿಯನ್ನು ಅನುಸರಿಸುವಂತೆ” ಅವನಿಗೆ ಉತ್ತೇಜನವನ್ನೀಯಲಾಯಿತು. ತದ್ರೀತಿಯಲ್ಲಿ ನಾವು ಕೂಡಾ, ಬೇರೆಯವರು ಅದರಿಂದ ದೂರ ತೊಲಗಿ ಹೋದರೂ, ನಾವು ಅಪ್ಪಟವಾದ ಕ್ರೈಸ್ತ ಸತ್ಯಗಳಿಗೆ ಖಡಾಖಂಡಿತವಾಗಿ ಅಂಟಿಕೊಂಡಿರ ಬೇಕು.
ಅಪೊಸ್ತಲ ಪೌಲನು ಕಲಿಸಿದ ಉಪದೇಶಗಳನ್ನು, ಇತರರಿಗೆ ಬೋಧಿಸಶಕ್ತರಾದ ನಂಬಿಗಸ್ತ ಮನುಷ್ಯರಿಗೆ ಒಪ್ಪಿಸ ಬೇಕಿತ್ತು. (2:1-26) ಶ್ರಮೆಯನ್ನನುಭವಿಸುತ್ತಾ, ಕ್ರಿಸ್ತನ ಒಳ್ಳೇ ಸೈನಿಕನಾಗುವಂತೆ ತಿಮೊಥೆಯನಿಗೆ ಉತ್ತೇಜಿಸಲಾಗಿದೆ. ಸುವಾರ್ತೆಯನ್ನು ಸಾರಿದ್ದಕ್ಕಾಗಿ, ಪೌಲನು ಸ್ವತಃ ಸಂಕೋಲೆಗಳ ಬಂಧೀವಾಸದ ಶ್ರಮೆಯನ್ನನುಭವಿಸಿದ್ದನು. ದೇವರ ಒಪ್ಪಲ್ಪಟ್ಟ ಕೆಲಸಗಾರನೋಪಾದಿ ತನ್ನನ್ನು ನೀಡಿಕೊಳ್ಳಲು ತನ್ನಿಂದಾದದ್ದನ್ನೆಲ್ಲಾ ಮಾಡುವಂತೆ ಮತ್ತು ಪವಿತ್ರವಾದದ್ದನ್ನು ಹಾಳುಮಾಡುವ ಹರಟೆ ಮಾತುಕತೆಯನ್ನು ಹೋಗಲಾಡಿಸುವಂತೆ ಅವನು ತಿಮೊಥೆಯನನ್ನು ಹುರಿದುಂಬಿಸಿದನು. ಕರ್ತನ ದಾಸನೋಪಾದಿ ಇತರರಿಗೆ ಸಾಧುತ್ವದಿಂದ ಕಲಿಸುವಂತೆ ಅವನಿಗೆ ತಿಳಿಸಲ್ಪಟ್ಟಿತು.
ವಾಕ್ಯವನ್ನು ಸಾರು!
ಕಡೆಯ ದಿವಸಗಳನ್ನು ಎದುರಿಸಲು ಮತ್ತು ಶಾಸ್ತ್ರೀಯ ಸತ್ಯಕ್ಕೆ ಅಂಟಿಕೊಂಡಿರಲು ದೇವ-ದತ್ತ ಬಲವು ಅವಶ್ಯಕವಾಗಿದೆ. (3:1-17) ದೇವಭಕ್ತಿಯಿಲ್ಲದವರ ನಡುವಿನಿಂದ ‘ಯಾವಾಗಲೂ ಕಲಿಯುತ್ತಾ ಇರುವುದಾದರೂ, ಸತ್ಯದ ಸ್ಪಷ್ಟ ಜ್ಞಾನಕ್ಕೆ ಎಂದಿಗೂ ಬಾರದ’ ಜನರು ಏಳುವರು. ಅಂತಹ ‘ದುಷ್ಟರೂ, ವಂಚಕರೂ ಇತರರನ್ನು ಮೋಸ ಮಾಡುತ್ತಾ, ತಾವೇ ಮೋಸ ಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.’ ಆದಾಗ್ಯೂ, ತಿಮೊಥೆಯನು ‘ಅವನು ಕಲಿತ ವಿಷಯಗಳಲ್ಲಿ ಮುಂದುವರಿಯ ಬೇಕಾಗಿತ್ತು.’ ಅದೇ ರೀತಿ ನಾವೂ ಕೂಡಾ ತಿಳಿದಿರತಕ್ಕದ್ದು, ‘ದೈವ ಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ, ಖಂಡನೆಗೂ, ತಿದ್ದುಪಾಟಿಗೂ, ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲ ಸತ್ಕಾರ್ಯಕ್ಕೆ ಸನ್ನದ್ಧನಾಗುವನು.’
ತಿಮೊಥೆಯನು ಧರ್ಮಭ್ರಷ್ಟರನ್ನು ಪ್ರತಿರೋಧಿಸುತ್ತಾ, ತನ್ನ ಶುಶ್ರೂಷೆಯನ್ನು ಪೂರೈಸಬೇಕಿತ್ತು. (4:1-22) ಅವನದನ್ನು ‘ವಾಕ್ಯವನ್ನು ಸಾರುವುದರ ಮೂಲಕ’ ಮತ್ತು ಅದಕ್ಕೆ ಅಂಟಿಕೊಂಡಿರುವುದರ ಮೂಲಕ ಮಾಡಬಹುದಿತ್ತು. ಇದು ಅತ್ಯಾವಶ್ಯಕ, ಯಾಕಂದರೆ ಸಭೆಯು “ಅನಾನುಕೂಲವಾದ ಸಮಯವನ್ನು” ಎದುರಿಸಿತ್ತು, ಯಾಕಂದರೆ ಕೆಲವರು ಸುಳ್ಳು ಬೋಧನೆಗಳನ್ನು ಕಲಿಸುತ್ತಿದ್ದರು. ಯೆಹೋವನ ಸಾಕ್ಷಿಗಳು ಕೂಡಾ ಈಗ ದೇವರ ವಾಕ್ಯಕ್ಕೆ ಅಂಟಿಕೊಂಡಿದ್ದು, ಅದನ್ನು ಸಭೆಯಲ್ಲಿ ಮತ್ತು ಹೊರಗಿನ ಜನರಿಗೆ, ಅನಾನುಕೂಲವಾದ ಸನ್ನಿವೇಶಗಳಲ್ಲಿಯೂ, ತುರ್ತಾಗಿ ಸಾರಬೇಕಾಗಿದೆ. ಕೆಲವರು ಅವನನ್ನು ತ್ಯಜಿಸಿಹೋದರೂ, ಪೌಲನು “ನಂಬಿಕೆಯನ್ನು ಕಾಪಾಡಿ ಕೊಂಡನು.” ಆದರೆ ‘ಕರ್ತನು ಅವನ ಬಳಿಯಲ್ಲಿ ನಿಂತು ಅವನನ್ನು ಬಲಪಡಿಸಿ ಅವನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ ಮಾಡಿದನು.’ ನಾವೂ ಕೂಡಾ ದೇವ-ದತ್ತ ಬಲದ ಮೇಲೆ ಆತುಕೊಂಡಿರೋಣ ಮತ್ತು ಸುವಾರ್ತೆಯನ್ನು ಸಾರುವುದರಲ್ಲಿ ನಿರತರಾಗಿರೋಣ. (w91 1/15)
[ಪುಟ 28 ರಲ್ಲಿರುವ ಚೌಕ/ಚಿತ್ರಗಳು]
ಒಬ್ಬ ಒಳ್ಳೇ ಸೈನಿಕ: ಪೌಲನು ತಿಮೊಥೆಯನಿಗೆ ಪ್ರೇರೇಪಿಸಿದ್ದು: “ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕನಂತೆ ನನ್ನೊಂದಿಗೆ ಶ್ರಮೆಯನ್ನನುಭವಿಸು. ಯುದ್ಧಕ್ಕೆ ಹೋಗುವ ಸೈನಿಕನು ಲೋಕ ವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವದಕ್ಕೆ ಪ್ರಯಾಸಪಡುತ್ತಿರುವನಲ್ಲವೇ.” (2 ತಿಮೊಥೆಯನಿಗೆ 2:3, 4) ಭಾರವಾದ ಆಯುಧಗಳನ್ನು, ಒಂದು ಕೊಡಲಿ, ಒಂದು ಬುಟ್ಟಿ, ಮೂರು ದಿನಗಳ ಆಹಾರ ಸಾಮಗ್ರಿ ಮತ್ತು ಇನ್ನಿತರ ವಸ್ತುಗಳನ್ನು ಒಬ್ಬ ರೋಮನ್ ಕಾಲಾಳು ಸೈನಿಕನು ಹೊತ್ತುಕೊಂಡು ಹೋಗುವಾಗ ‘ಶ್ರಮೆಯನ್ನನುಭವಿಸುತ್ತಾನೆ.’ (ಜೊಸಿಫಸ್ನ ವಾರ್ಸ್ ಆಫ್ ದ ಜ್ಯೂಸ್ ನ ಎಂಬ 3 ನೆಯ ಪುಸ್ತಕದ 5 ನೆಯ ಅಧ್ಯಾಯ) ಅವನು ಪ್ರಾಪಂಚಿಕ ವ್ಯವಹಾರಗಳನ್ನು ಬೆನ್ನಟ್ಟುವುದಿಲ್ಲ, ಯಾಕಂದರೆ ಅವನ ಉನ್ನತ ಅಧಿಕಾರಿಗಳಿಗೆ ಅದು ಮೆಚ್ಚಿಕೆಯಾಗುವುದಿಲ್ಲ, ಮತ್ತು ಅವನ ಖರ್ಚನ್ನು ನೋಡಿಕೊಳ್ಳಲಾಗುತ್ತದೆ. ತದ್ರೀತಿಯಲ್ಲಿ, “ಕ್ರಿಸ್ತನ ಒಳ್ಳೇ ಸೈನಿಕನಂತೆ” ಇರುವುದೆಂದರೆ ಶೋಧನೆಗಳ ಬಾಧೆಯನ್ನು ಕ್ರೈಸ್ತನು ಅನುಭವಿಸುವುದು ಜೋಡಿಸಲ್ಪಟ್ಟಿದೆ. ಅವನ ಶಾಸ್ತ್ರೀಯ ಹಂಗುಗಳನ್ನು ಪೂರೈಸಲು ಅವರು ಐಹಿಕವಾಗಿ ಕೆಲಸ ಮಾಡಬಹುದಾದರೂ, ಆತ್ಮೀಕ ಯುದ್ಧವನ್ನು ಹೋರಾಡುವುದನ್ನು ನಿಲ್ಲಿಸಬಹುದಾದಂತಹ ರೀತಿಯಲ್ಲಿ ಅವನು ಅನಾವಶ್ಯಕವಾಗಿ ತನ್ನನ್ನು ಐಹಿಕ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಬಿಡಬಾರದು. (1 ಥೆಸಲೋನಿಕದವರಿಗೆ 2:9) ಮನೆಯಿಂದ ಮನೆಯ ಸಾಕ್ಷಿಕಾರ್ಯದಲ್ಲಿ ಅವನು “ಆತ್ಮನ ಕತ್ತಿಯಾದ ದೇವರ ವಾಕ್ಯವನ್ನು” ಧರಿಸಿಕೊಳ್ಳುತ್ತಾನೆ ಮತ್ತು ಧಾರ್ಮಿಕ ತಪ್ಪುಗಳಿಂದ ಜನರು ಸ್ವತಂತ್ರಗೊಳ್ಳಲು ಸಹಾಯ ಮಾಡುತ್ತಾನೆ. (ಎಫೆಸದವರಿಗೆ 6:11-17; ಯೋಹಾನ 8:31, 32) ಜೀವವು ಅಪಾಯದಲ್ಲಿರುವುದರಿಂದ, ಎಲ್ಲಾ ಕ್ರೈಸ್ತ ಸೈನಿಕರು ಈ ರೀತಿಯಲ್ಲಿ ಯೇಸು ಕ್ರಿಸ್ತನನ್ನು ಮತ್ತು ಯೆಹೋವ ದೇವರನ್ನು ಮೆಚ್ಚಿಸುವದನ್ನು ಮುಂದುವರಿಸುತ್ತಾ ಇರಲಿ.