ಯುವ ಜನರು ಪ್ರಶ್ನಿಸುತ್ತಾರೆ . . .
ನಾನು ಸತ್ಯವನ್ನು ಹೇಗೆ ನನ್ನದಾಗಿ ಮಾಡಿಕೊಳ್ಳಬಲ್ಲೆ?
“ನಾನು ಒಬ್ಬ ಯೆಹೋವನ ಸಾಕ್ಷಿಯೋಪಾದಿ ಬೆಳೆದೆ, ಮತ್ತು ಒಂದುವೇಳೆ ನಿಮ್ಮನ್ನು ಹಾಗೆ ಬೆಳೆಸಿರುವಲ್ಲಿ, ಖಂಡಿತವಾಗಿಯೂ ನಿಮಗೆ ಯೆಹೋವನ ಬಗ್ಗೆ ತಿಳಿದಿರುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಆದರೆ ನನ್ನ ಎಣಿಕೆ ಎಷ್ಟು ತಪ್ಪಾಗಿತ್ತು!”—ಆಂಟನೆಟ್.
“ಸತ್ಯವಂದರೇನು?” ಯೇಸುವನ್ನು ಮರಣ ದಂಡನೆಗೆ ಒಪ್ಪಿಸಿದ ಪೊಂತ್ಯ ಪಿಲಾತನು, ಈ ಪ್ರಸಿದ್ಧ ಪ್ರಶ್ನೆಯನ್ನು ಕೇಳಿದನು. (ಯೋಹಾನ 18:38) ಆದರೂ, ನಿಷ್ಕಪಟವಾದ ಸಂಭಾಷಣೆಯನ್ನು ಆರಂಭಿಸಲಿಕ್ಕಾಗಿ ಅವನು ಆ ಪ್ರಶ್ನೆಯನ್ನು ಕೇಳಲಿಲ್ಲ. ಬದಲಾಗಿ ಸಂಭಾಷಣೆಯನ್ನು ಅಲ್ಲಿಗೇ ಕೊನೆಗೊಳಿಸುವ ಉದ್ದೇಶದಿಂದ ಅದನ್ನು ಕೇಳಿದನೆಂಬುದು ಸ್ಪಷ್ಟ. ನಿಜಹೇಳಬೇಕೆಂದರೆ ಅವನಿಗೆ “ಸತ್ಯ”ದಲ್ಲಿ ಆಸಕ್ತಿಯಿರಲಿಲ್ಲ. ಆದರೆ ನಿಮ್ಮ ವಿಷಯದಲ್ಲೇನು? ನಿಮಗೆ ಸತ್ಯದಲ್ಲಿ ಆಸಕ್ತಿಯಿದೆಯೆ?
ಅನೇಕ ಶತಮಾನಗಳಿಂದ ತತ್ವಜ್ಞಾನಿಗಳು ಸತ್ಯವೆಂದರೇನು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅವರ ಪ್ರಯತ್ನಗಳಿಗೆ ಹೆಚ್ಚಿನ ಫಲಿತಾಂಶವು ದೊರೆತಿಲ್ಲ. ಆದರೂ, ನೀವು ಪಿಲಾತನ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಸಾಧ್ಯವಿದೆ. ದೇವರ ವಾಕ್ಯವೇ ಸತ್ಯವಾಗಿದೆ ಎಂದು ಯೇಸು ಕ್ರಿಸ್ತನು ಕಲಿಸಿದನು. ಅವನು ತನ್ನ ಕುರಿತು ‘ನಾನೇ ಸತ್ಯವೂ’ ಆಗಿದ್ದೇನೆಂದು ಹೇಳಿಕೊಂಡನು. ಮತ್ತು ಅಪೊಸ್ತಲ ಯೋಹಾನನು ಬರೆದುದು: “ಯೇಸುವಿನ ಮೂಲಕವೇ ಸತ್ಯವು ಅಸ್ತಿತ್ವಕ್ಕೆ ಬಂತು” (NW). (ಯೋಹಾನ 1:17; 14:6; 17:17) ಆದುದರಿಂದ, ಸಮಯಾನಂತರ ಬೈಬಲಿನ ಭಾಗವಾಗಿ ಪರಿಣಮಿಸಿದ ಎಲ್ಲ ಕ್ರೈಸ್ತ ಬೋಧನೆಗಳನ್ನು, “ಸತ್ಯ” ಅಥವಾ “ಸುವಾರ್ತೆಯ ಸತ್ಯ” ಎಂದು ಕರೆಯಲಾಗುತ್ತದೆ. (ತೀತ 1:14; ಗಲಾತ್ಯ 2:14; 2 ಯೋಹಾನ 1, 2) ಈ ಕ್ರೈಸ್ತ ಬೋಧನೆಗಳಲ್ಲಿ, ದೇವರ ವೈಯಕ್ತಿಕ ಹೆಸರು, ದೇವರ ರಾಜ್ಯದ ಸ್ಥಾಪನೆ, ಪುನರುತ್ಥಾನ, ಹಾಗೂ ಯೇಸುವಿನ ವಿಮೋಚನಾ ಯಜ್ಞಗಳಂತಹ ವಿಷಯಗಳು ಒಳಗೂಡಿವೆ.—ಕೀರ್ತನೆ 83:18; ಮತ್ತಾಯ 6:9, 10; 20:28; ಯೋಹಾನ 5:28, 29.
ಸಾವಿರಾರು ಮಂದಿ ಯುವ ಜನರಿಗೆ ಕ್ರೈಸ್ತ ಹೆತ್ತವರಿಂದ ಬೈಬಲ್ ಸತ್ಯತೆಗಳು ಕಲಿಸಲ್ಪಟ್ಟಿವೆ. ಆದರೆ ಅಂತಹ ಯುವ ಜನರು “ಸತ್ಯವನ್ನನುಸರಿಸಿ ನಡೆಯು”ತ್ತಿದ್ದಾರೆಂಬುದು ಇದರ ಅರ್ಥವೊ? (3 ಯೋಹಾನ 3, 4) ಹಾಗಿರಬೇಕೆಂದೇನಿಲ್ಲ. ಉದಾಹರಣೆಗಾಗಿ, ಇಪ್ಪತ್ತು ವರ್ಷ ಪ್ರಾಯದ ಜೆನಿಫರ್, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿ ಬೆಳೆಸಲ್ಪಟ್ಟಿದ್ದಳು. ಅವಳು ಹೀಗೆ ಜ್ಞಾಪಿಸಿಕೊಳ್ಳುತ್ತಾಳೆ: “ನನ್ನ ತಾಯಿ ನನ್ನನ್ನು ಸಾಕ್ಷಿಗಳ ಅಧಿವೇಶನಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಮತ್ತು ನಾನು ಸಹ ದೀಕ್ಷಾಸ್ನಾನವನ್ನು ಪಡೆದುಕೊಳ್ಳಲು ಮನಸ್ಸುಮಾಡಬೇಕು ಎಂದು ಹೇಳುತ್ತಿದ್ದರು. ಆದರೆ ‘ನನಗೆ ಒಬ್ಬ ಸಾಕ್ಷಿಯಾಗಲು ಇಷ್ಟವಿಲ್ಲ. ನಾನು ಮಜಾ ಮಾಡಬೇಕು, ನನಗೆ ಇನ್ನೇನೂ ಬೇಡ!’ ಎಂದು ನನ್ನ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದೆ.”
ಕೆಲವು ಯುವ ಜನರಾದರೋ ತಮಗೆ ಕಲಿಸಲ್ಪಟ್ಟಿರುವ ವಿಷಯಗಳನ್ನು ನಂಬುತ್ತಾರೆ, ಆದರೆ ನಿಜವಾಗಿಯೂ ಬೈಬಲು ಏನನ್ನು ಕಲಿಸುತ್ತದೋ ಅದನ್ನು ಅವರು ಚೆನ್ನಾಗಿ ಅರ್ಥಮಾಡಿಕೊಂಡಿರುವುದಿಲ್ಲ. ಇದರಿಂದ ಯಾವ ಅಪಾಯ ಉಂಟಾಗಸಾಧ್ಯವಿದೆ? ಕೆಲವರು ‘ಬೇರಿಲ್ಲದ’ ವ್ಯಕ್ತಿಗಳೋಪಾದಿ ಇದ್ದಾರೆಂದು ಯೇಸು ಎಚ್ಚರಿಕೆ ನೀಡಿದನು. ಅಂತಹ ಜನರು “ಸ್ವಲ್ಪ ಕಾಲ ಮಾತ್ರವೇ ಇದ್ದು ಬಳಿಕ ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿಬೀಳ”ಬಹುದು. (ಮಾರ್ಕ 4:17) ಇನ್ನಿತರರು ಬೈಬಲ್ ಆಧಾರಿತ ನಂಬಿಕೆಗಳನ್ನು ಸ್ವಲ್ಪ ಮಟ್ಟಿಗೆ ವಿವರಿಸಲು ಸಮರ್ಥರಾಗಿರಬಹುದು, ಆದರೆ ದೇವರನ್ನು ವೈಯಕ್ತಿಕವಾಗಿ ಅವರು ತಿಳಿದಿರುವುದಿಲ್ಲ. ಆ್ಯನೀಸ ಎಂಬ ಹೆಸರಿನ ಯುವತಿಯೊಬ್ಬಳು ಹೇಳುವುದು: “ನಾನು ಚಿಕ್ಕವಳಿದ್ದಾಗ ನನಗೆ ಯೆಹೋವನೊಂದಿಗೆ ನಿಜವಾದ ಸಂಬಂಧವಿರಲಿಲ್ಲ ಎಂದು ಅನಿಸುತ್ತದೆ . . . ನನ್ನ ಹೆತ್ತವರಿಗೆ ದೇವರೊಂದಿಗೆ ಒಳ್ಳೇ ಸಂಬಂಧವಿದ್ದದರಿಂದ ನನಗೂ ಹಾಗನಿಸಿತೋ ಏನೋ.”
ನಿಮ್ಮ ಕುರಿತಾಗಿ ಏನು? ಯೆಹೋವನು ಕೇವಲ ನಿಮ್ಮ ಹೆತ್ತವರಿಗೆ ಮಾತ್ರ ದೇವರಾಗಿದ್ದಾನೋ? ಅಥವಾ, ಬೈಬಲಿನ ಕೀರ್ತನೆಗಾರನಂತೆ ನೀವು, “ನಾನಾದರೋ ಯೆಹೋವನೇ, ನಿನ್ನಲ್ಲೇ ಭರವಸವಿಟ್ಟಿದ್ದೇನೆ; ನೀನೇ ನನ್ನ ದೇವರೆಂದು ಹೇಳಿಕೊಂಡಿದ್ದೇನೆ” ಎಂದು ಹೇಳಶಕ್ತರಾಗಿದ್ದೀರೊ? (ಕೀರ್ತನೆ 31:14) ವಾಸ್ತವ ಸಂಗತಿಗಳನ್ನು ಗ್ರಹಿಸಿ, ಅವುಗಳೊಂದಿಗೆ ವ್ಯವಹರಿಸಲು ಧೈರ್ಯದ ಅಗತ್ಯವಿರಬಹುದು. ಆ್ಯಲೆಕ್ಸಾಂಡರ್ ಎಂಬ ಹೆಸರಿನ ಯೌವನಸ್ಥನೊಬ್ಬನು ಹೀಗೆ ಹೇಳುತ್ತಾನೆ: “ಪ್ರಾಮಾಣಿಕವಾಗಿ ನಾನು ಸ್ವಪರೀಕ್ಷೆಯನ್ನು ಮಾಡಿಕೊಳ್ಳುವುದು ಪ್ರಥಮ ಹೆಜ್ಜೆಯಾಗಿತ್ತು.” ಸ್ವಲ್ಪ ಮಟ್ಟಿಗೆ ಸ್ವಪರೀಕ್ಷೆ ಮಾಡಿಕೊಂಡ ಬಳಿಕ, ನೀವು ಸತ್ಯವನ್ನು (ಅಂದರೆ ಎಲ್ಲ ಕ್ರೈಸ್ತ ಬೋಧನೆಗಳು) ಸರಿಯಾಗಿ ವಿವೇಚಿಸಿ ತಿಳಿದುಕೊಂಡಿಲ್ಲ ಎಂಬುದು ನಿಮಗೆ ಗೊತ್ತಾಗಬಹುದು. ನಿಮ್ಮಲ್ಲಿ ದೃಢವಿಶ್ವಾಸದ ಕೊರತೆಯಿರಬಹುದು. ಆದುದರಿಂದ ನಿಮಗೆ ಗೊತ್ತುಗುರಿಯಿಲ್ಲದಂತೆ, ಅಥವಾ ದಿಕ್ಕುತಪ್ಪಿರುವಂತೆ ಅನಿಸಬಹುದು.
ಯೆಹೋವನ ಸಾಕ್ಷಿಗಳು ತಮ್ಮ ಕ್ರೈಸ್ತ ಕೂಟಗಳಲ್ಲಿ, “ಸತ್ಯವನ್ನು ನಿಮ್ಮದಾಗಿ ಮಾಡಿಕೊಳ್ಳಿರಿ” ಎಂಬ ಮೇಲ್ಬರಹವಿರುವ ಒಂದು ಸಂಗೀತವನ್ನು ಹಾಡುತ್ತಾರೆ.a ಆ ಬುದ್ಧಿವಾದವು ನಿಮಗೆ ಸೂಕ್ತವಾದದ್ದಾಗಿರಬಹುದು. ಆದರೆ ನೀವು ಸತ್ಯವನ್ನು ಹೇಗೆ ನಿಮ್ಮದಾಗಿ ಮಾಡಿಕೊಳ್ಳಬಲ್ಲಿರಿ? ನೀವು ಎಲ್ಲಿಂದ ಆರಂಭಿಸುವಿರಿ?
ಮೊದಲಾಗಿ ನೀವು ಸತ್ಯವನ್ನು ವಿವೇಚಿಸಿ ತಿಳಿದುಕೊಳ್ಳಿರಿ
ರೋಮಾಪುರ 12:2ರಲ್ಲಿ ನಾವು ಅಪೊಸ್ತಲ ಪೌಲನ ಬುದ್ಧಿವಾದವನ್ನು ಕಂಡುಕೊಳ್ಳುತ್ತೇವೆ: “ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” ಅದನ್ನು ನೀವು ಹೇಗೆ ಮಾಡಸಾಧ್ಯವಿದೆ? “ಸತ್ಯದ ಕುರಿತಾದ ನಿಷ್ಕೃಷ್ಟ ಜ್ಞಾನವನ್ನು” (NW) ಪಡೆದುಕೊಳ್ಳುವ ಮೂಲಕವೇ. (ತೀತ 1:1) ಬೆರೋಯ ಪಟ್ಟಣದಲ್ಲಿದ್ದ ಪುರಾತನ ನಿವಾಸಿಗಳು, ತಾವು ಕೇಳಿಸಿಕೊಂಡ ವಿಷಯವನ್ನು ಸುಮ್ಮನೆ ಅಂಗೀಕರಿಸಲಿಲ್ಲ. ಬದಲಾಗಿ, ಅವರು “[ತಾವು ಕಲಿಯುತ್ತಿದ್ದ ವಿಷಯಗಳು] ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು.”—ಅ. ಕೃತ್ಯಗಳು 17:11.
ಎರಿನ್ ಎಂಬ ಹೆಸರಿನ ಒಬ್ಬ ಕ್ರೈಸ್ತ ಯುವತಿಯು, ಶಾಸ್ತ್ರವಚನಗಳನ್ನು ಪರಿಶೋಧಿಸುವ ಅಗತ್ಯವನ್ನು ಮನಗಂಡಳು. ಅವಳು ಜ್ಞಾಪಿಸಿಕೊಳ್ಳುವುದು: “ನಾನು ಪರಿಶೋಧನೆಯನ್ನು ಮಾಡಿದೆ. ‘ಇದೇ ಸತ್ಯ ಧರ್ಮವಾಗಿದೆ ಎಂಬುದು ನನಗೆ ಹೇಗೆ ಗೊತ್ತು? ಯೆಹೋವ ಎಂಬ ಹೆಸರಿನ ದೇವರಿದ್ದಾನೆ ಎಂಬುದು ನನಗೆ ಹೇಗೆ ಗೊತ್ತು? ಎಂದು ನನ್ನನ್ನೇ ಪ್ರಶ್ನಿಸಿಕೊಂಡೆ.” ಸ್ವಂತ ವೈಯಕ್ತಿಕ ಅಭ್ಯಾಸ ಕ್ರಮವನ್ನು ನೀವೇಕೆ ಆರಂಭಿಸಬಾರದು? ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಬೈಬಲ್ ಆಧಾರಿತ ಪುಸ್ತಕವನ್ನು ನೀವು ಮೊದಲಾಗಿ ಆರಂಭಿಸಬಹುದು.b ಅದನ್ನು ಗಮನವಿಟ್ಟು ಓದಿರಿ. ಉದ್ಧರಿಸಲ್ಪಟ್ಟ ಎಲ್ಲ ಶಾಸ್ತ್ರ ವಚನಗಳನ್ನು ತೆರೆದು ನೋಡಿರಿ, ಮತ್ತು ವಿವರಿಸಲ್ಪಟ್ಟಿರುವ ವಿಷಯಕ್ಕೆ ಆ ವಚನಗಳು ಹೇಗೆ ಸಂಬಂಧಿಸುತ್ತವೆ ಎಂಬುದನ್ನು ಗಮನಿಸಿರಿ. ನೀವು ‘ಅವಮಾನಕ್ಕೆ ಗುರಿಯಾಗದ ಕೆಲಸದವರೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವರೂ’ ಆಗಿ ಪರಿಣಮಿಸಿದಾಗ, ಸತ್ಯದ ಕುರಿತು ನಿಮಗೆ ಉಂಟಾಗುವ ಭಿನ್ನ ಅನಿಸಿಕೆಯನ್ನು ನೋಡಿ ನೀವು ಆಶ್ಚರ್ಯಚಕಿತರಾಗಬಹುದು!—2 ತಿಮೊಥೆಯ 2:15.
ಬೈಬಲಿನಲ್ಲಿರುವ ಕೆಲವು ವಿಚಾರಗಳು “ತಿಳಿಯುವದಕ್ಕೆ ಕಷ್ಟವಾಗಿವೆ” ಎಂದು ಅಪೊಸ್ತಲ ಪೇತ್ರನು ಹೇಳಿದನು. ಮತ್ತು ಆ ಮಾತುಗಳು ಸತ್ಯವೆಂದು ನಿಮಗೂ ಅನಿಸಬಹುದು. (2 ಪೇತ್ರ 3:16) ಆದರೆ ಅತ್ಯಂತ ಕಷ್ಟಕರವಾದ ವಿಷಯಗಳನ್ನು ಸಹ ಅರ್ಥಮಾಡಿಕೊಳ್ಳಲು ದೇವರಾತ್ಮವು ನಿಮಗೆ ಸಹಾಯ ಮಾಡಬಲ್ಲದು. (1 ಕೊರಿಂಥ 2:11, 12) ಯಾವುದೇ ವಿಷಯವನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಕಷ್ಟಕರವೆಂದು ಅನಿಸುವಾಗ, ದೇವರ ಸಹಾಯಕ್ಕಾಗಿ ಪ್ರಾರ್ಥಿಸಿರಿ. (ಕೀರ್ತನೆ 119:10, 11, 27) ವಾಚ್ ಟವರ್ ಸೊಸೈಟಿಯ ಪ್ರಕಾಶನಗಳಲ್ಲಿ ಹೆಚ್ಚಿನ ಸಂಶೋಧನೆಯನ್ನು ಮಾಡಿ, ಆ ವಿಷಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಅದನ್ನು ಹೇಗೆ ಮಾಡುವುದೆಂಬುದು ನಿಮಗೆ ಗೊತ್ತಿರದಿದ್ದಲ್ಲಿ, ಇತರರನ್ನು ಕೇಳಿ ತಿಳಿದುಕೊಳ್ಳಿರಿ. ನಿಮ್ಮ ಹೆತ್ತವರು ಅಥವಾ ಕ್ರೈಸ್ತ ಸಭೆಯಲ್ಲಿರುವ ಒಬ್ಬ ಪ್ರೌಢ ಸದಸ್ಯನು ನಿಮಗೆ ಸಹಾಯ ಮಾಡಬಲ್ಲನು.
ನೀವು ಅಧ್ಯಯನ ಮಾಡುತ್ತಿರುವುದು, ಬೇರೆಯವರು ನೀವು ಪಡೆಯುತ್ತಿರುವ ಜ್ಞಾನವನ್ನು ನೋಡಿ ಆಶ್ಚರ್ಯಪಡಬೇಕು ಎಂಬ ಉದ್ದೇಶದಿಂದಲ್ಲ ಎಂಬುದು ನೆನಪಿರಲಿ. ಕೊಲಿನ್ ಎಂಬ ಹೆಸರಿನ ಯುವಕನೊಬ್ಬನು ವಿವರಿಸುವುದು: “ನೀವು ಯೆಹೋವನ ಗುಣಗಳನ್ನು ತಿಳಿದುಕೊಳ್ಳುತ್ತಿದ್ದೀರಿ.” ನೀವು ಓದುವ ವಿಷಯದ ಕುರಿತು ಮನನಮಾಡಲು ಸಮಯವನ್ನು ತೆಗೆದುಕೊಳ್ಳಿರಿ. ಹಾಗೆ ಮಾಡುವಲ್ಲಿ, ಆ ವಿಷಯವು ನಿಮ್ಮ ಮನಸ್ಸಿಗೆ ನಾಟುತ್ತದೆ.—ಕೀರ್ತನೆ 1:2, 3.
ಕ್ರೈಸ್ತ ಕೂಟಗಳಲ್ಲಿ ಸಭೆಯಲ್ಲಿರುವವರೊಂದಿಗೆ ಸಹವಾಸಿಸುವುದು ಸಹ, ಸತ್ಯವನ್ನು ನಿಮ್ಮದಾಗಿ ಮಾಡಿಕೊಳ್ಳಲು ನಿಮಗೆ ಸಹಾಯ ಮಾಡಬಲ್ಲದು. ಆದುದರಿಂದಲೇ, ಸಭೆಯು “ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿದೆ” ಎಂದು ಅಪೊಸ್ತಲ ಪೌಲನು ಬರೆದನು. (1 ತಿಮೊಥೆಯ 3:15) ಕ್ರೈಸ್ತ ಕೂಟಗಳು ಬೇಸರಕರವಾಗಿವೆಯೆಂದು ಕೆಲವು ಯುವ ಜನರು ಹೇಳುತ್ತಾರೆ. “ನೀವು ಕೂಟಗಳಿಗಾಗಿ ತಯಾರಿ ಮಾಡದಿರುವುದಾದರೆ, ಅವುಗಳಿಂದ ಹೆಚ್ಚು ಪ್ರಯೋಜನ ಪಡೆದುಕೊಳ್ಳಲಾರಿರಿ” ಎಂದು ಕೊಲಿನ್ ಹೇಳುತ್ತಾನೆ. ಆದುದರಿಂದ, ಕೂಟಗಳಲ್ಲಿ ಚರ್ಚಿಸಲ್ಪಡುವ ವಿಷಯವನ್ನು ಮುಂಚಿತವಾಗಿಯೇ ತಯಾರಿಸಿರಿ. ನೀವು ಕೂಟಗಳಲ್ಲಿ ಕೇವಲ ಪ್ರೇಕ್ಷಕರಲ್ಲ, ಬದಲಾಗಿ ಸಹಭಾಗಿಗಳಾಗುವಾಗ ಅವು ತುಂಬ ಆಸಕ್ತಿಕರವಾಗಿರುತ್ತವೆ.
ಅಭ್ಯಾಸಮಾಡಲು ಸಮಯವೇ ಇಲ್ಲವೋ?
ನಿಮಗೆ ತುಂಬ ಹೋಮ್ವರ್ಕ್ ಇರುತ್ತದೆ ಹಾಗೂ ಮನೆಗೆಲಸವಿರುತ್ತದೆ, ಆದುದರಿಂದ ಅಭ್ಯಾಸಿಸಲು ಸಮಯವನ್ನು ಬದಿಗಿರಿಸುವುದು ತುಂಬ ಕಷ್ಟ ಎಂಬುದು ಒಪ್ಪತಕ್ಕ ವಿಷಯವೇ. ಸೂಸನ್ ಎಂಬ ಹೆಸರಿನ ಯುವತಿಯೊಬ್ಬಳು ಬರೆಯುವುದು: “ನಾನು ಕೂಟಗಳಿಗೆ ತಯಾರಿಸಬೇಕು ಮತ್ತು ವೈಯಕ್ತಿಕ ಅಭ್ಯಾಸವನ್ನು ಮಾಡಬೇಕು ಎಂಬುದು ನನಗೆ ಅನೇಕ ವರ್ಷಗಳಿಂದಲೂ ಗೊತ್ತಿತ್ತು. ಆದರೆ ನಾನು ಎಂದಿಗೂ ಅದನ್ನು ಮಾಡಶಕ್ತಳಾಗಲಿಲ್ಲ.”
ಹೆಚ್ಚು ಪ್ರಾಮುಖ್ಯವಲ್ಲದ ಕೆಲಸಗಳಿಗಾಗಿ ಸಮಯವನ್ನು ವ್ಯಯಿಸದೆ, ‘ಕಾಲವನ್ನು ಬೆಲೆಯುಳ್ಳದ್ದಾಗಿ ಉಪಯೋಗಿ’ಸುವ ವಿಧವನ್ನು ಸೂಸನ್ ಕಲಿತುಕೊಂಡಳು. (ಎಫೆಸ 5:15, 16) ಮೊದಲಾಗಿ ಅವಳು ತಾನು ಅಭ್ಯಾಸಿಸಬೇಕಾಗಿದ್ದಂತಹ ವಿಷಯಗಳ ಪಟ್ಟಿಯನ್ನು ಮಾಡಿದಳು. ತದನಂತರ, ಅವುಗಳನ್ನು ಅಭ್ಯಾಸಿಸಲಿಕ್ಕಾಗಿ ಸಮಯವನ್ನು ನಿಗದಿಪಡಿಸಿದಳು. ಆದರೆ ತನ್ನ ಕಾರ್ಯತಖ್ತೆಯಲ್ಲಿ ಅವಳು ಮನೋರಂಜನೆಗಾಗಿಯೂ ಸಮಯವನ್ನು ಬದಿಗಿರಿಸಿದಳು. ಅವಳು ಸಲಹೆ ನೀಡುವುದು: “ಸ್ವಲ್ಪ ಸಮಯವನ್ನು ಬದಿಗಿರಿಸಿರಿ. ನಮಗೆಲ್ಲರಿಗೂ ಸ್ವಲ್ಪ ಬಿಡುವಿನ ಅಗತ್ಯವಿದೆ.” ಒಂದು ಕಾರ್ಯತಖ್ತೆಯನ್ನು ಮಾಡಿಕೊಳ್ಳುವುದು ನಿಮಗೆ ಒಳಿತಾಗಿರುವುದು.
ನೀವು ಕಲಿತ ವಿಷಯವನ್ನು ಹಂಚಿಕೊಳ್ಳಿರಿ
ನೀವು ಕಲಿಯುವಂತಹ ವಿಷಯವನ್ನು ಇತರರೊಂದಿಗೆ ಹಂಚಿಕೊಳ್ಳುವುದು, ಅದನ್ನು ನಿಮ್ಮ ಜೀವಿತದ ಭಾಗವಾಗಿ ಮಾಡಿಕೊಳ್ಳುವುದರಲ್ಲಿ ವಿಶೇಷವಾಗಿ ಸಹಾಯಕಾರಿಯಾಗಿದೆ. ಬೇರೆಯವರಿಗೆ ಕಲಿಸಲು ಪ್ರಯತ್ನಿಸಿರಿ. ಕೀರ್ತನೆಗಾರನು ಹೇಳಿದ್ದು: “ನನ್ನ ಬಾಯಿ ಸುಜ್ಞಾನವನ್ನು ಬೋಧಿಸುವದು; ನನ್ನ ಹೃದಯವು ವಿವೇಕವನ್ನು ಫಲಿಸುವದು.”—ಕೀರ್ತನೆ 49:3.
ಸುವಾರ್ತೆಯ ವಿಷಯದಲ್ಲಿ ನೀವು ನಾಚಿಕೆಪಡದಿರುವಲ್ಲಿ, ನಿಮ್ಮ ಸಹಪಾಠಿಗಳೊಂದಿಗೆ ಹಾಗೂ ನೀವು ಸಂಧಿಸುವ ಇತರರೊಂದಿಗೆ ಅದನ್ನು ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. (ರೋಮಾಪುರ 1:16) ಇತರರೊಂದಿಗೆ ಸತ್ಯದ ಕುರಿತು ಮಾತಾಡುವ ಅಂತಹ ಸಂದರ್ಭಗಳ ಸದುಪಯೋಗವನ್ನು ಮಾಡಿಕೊಳ್ಳುವ ಮೂಲಕ, ನೀವು ಕಲಿಯುವ ವಿಷಯಗಳನ್ನು ಉಪಯೋಗಿಸುವಿರಿ; ಮತ್ತು ಈ ರೀತಿಯಲ್ಲಿ ನೀವು ನಿಮ್ಮ ಹೃದಮನಗಳಲ್ಲಿ ಸತ್ಯವನ್ನು ಬೇರೂರಿಸುವಿರಿ.
ಮಿತ್ರರ ವಿಷಯದಲ್ಲಿ ಎಚ್ಚರಿಕೆಯಿಂದಿರಿ
ಪ್ರಥಮ ಶತಮಾನದಲ್ಲಿದ್ದ ಕೆಲವು ಕ್ರೈಸ್ತರು, ಒಳ್ಳೆಯ ಆತ್ಮಿಕ ಪ್ರಗತಿಯನ್ನು ಮಾಡಿದರು. ಆದರೆ ಸ್ವಲ್ಪ ಸಮಯದಲ್ಲೇ ಅಪೊಸ್ತಲ ಪೌಲನು ಅವರಿಗೆ, “ನೀವು ಸತ್ಯವನ್ನು ಅನುವರ್ತಿಸದಂತೆ ಯಾರು ನಿಮ್ಮನ್ನು ತಡೆದರು?” ಎಂದು ಕೇಳುತ್ತಾ ಪತ್ರವನ್ನು ಬರೆಯಬೇಕಾಯಿತು. (ಗಲಾತ್ಯ 5:7) ಆ್ಯಲೆಕ್ಸ್ ಎಂಬ ಹೆಸರಿನ ಯುವಕನಿಗೂ ಹಾಗೆಯೇ ಆಯಿತು. ನಾನು “ಕೆಟ್ಟವರ ಜೊತೆ ಸಹವಾಸಮಾಡಿದ್ದರಿಂದ,” ದೇವರ ವಾಕ್ಯವನ್ನು ಅಭ್ಯಾಸಿಸುವ ತನ್ನ ಪ್ರಯತ್ನಗಳು ಸಫಲವಾಗಲಿಲ್ಲ ಎಂದು ಅವನು ಒಪ್ಪಿಕೊಳ್ಳುತ್ತಾನೆ. ನಿಮ್ಮ ಆತ್ಮಿಕ ಪ್ರಗತಿಗಾಗಿ, ನೀವು ಸಹ ಈ ವಿಷಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಅಗತ್ಯವಿರಬಹುದು.
ಇನ್ನೊಂದು ಕಡೆಯಲ್ಲಿ, ಒಳ್ಳೆಯ ಸಹವಾಸವು ನಿಮಗೆ ಪ್ರಗತಿಮಾಡಲು ಸಹಾಯ ಮಾಡಬಲ್ಲದು. ಜ್ಞಾನೋಕ್ತಿ 27:17 ಹೇಳುವುದು: “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು.” ಸತ್ಯವನ್ನು ತಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳುವಂತಹ ಆದರ್ಶ ಮಿತ್ರರನ್ನು ಕಂಡುಕೊಳ್ಳಿರಿ. ಅಂತಹ ಮಿತ್ರರನ್ನು ನೀವು ನಿಮ್ಮ ಕುಟುಂಬದಲ್ಲೇ ಕಂಡುಕೊಳ್ಳಬಹುದು. ಜೆನಿಫರ್ ಎಂಬ ಯುವತಿಯು ಜ್ಞಾಪಿಸಿಕೊಳ್ಳುವುದು: “ಅಜ್ಜನವರು ನನ್ನ ಆದರ್ಶ ವ್ಯಕ್ತಿಯಾಗಿದ್ದರು. ಆದಿತ್ಯವಾರದಂದು ನಡೆಯುವ ನಮ್ಮ ಸಭಾ ಬೈಬಲ್ ಅಭ್ಯಾಸದ ತಯಾರಿಗಾಗಿ ಅವರು ಯಾವಾಗಲೂ ಮೂರು ತಾಸುಗಳನ್ನು ಕಳೆಯುತ್ತಿದ್ದರು. ಪಾಠದಲ್ಲಿರುವ ಪ್ರತಿಯೊಂದು ಶಾಸ್ತ್ರವಚನವನ್ನು, ಬೇರೆ ಬೇರೆ ಬೈಬಲ್ ಭಾಷಾಂತರಗಳಲ್ಲಿ ತೆರೆದು ನೋಡುತ್ತಿದ್ದರು ಮತ್ತು ತಮ್ಮ ಡಿಕ್ಷನೆರಿಯಲ್ಲಿ ಶಬ್ದಗಳ ಅರ್ಥವನ್ನು ಪರೀಕ್ಷಿಸುತ್ತಿದ್ದರು. ಬೈಬಲಿನ ಚಿಕ್ಕಪುಟ್ಟ ವಿಷಯಗಳಲ್ಲಿ ಅವರು ಪರಿಣತರಾಗಿದ್ದರು. ನೀವು ಅವರಿಗೆ ಯಾವುದೇ ಪ್ರಶ್ನೆ ಕೇಳಿದರೂ ಅವರು ಉತ್ತರವನ್ನು ಕೊಡುತ್ತಿದ್ದರು.”
ನೀವು ಸತ್ಯವನ್ನು ನಿಮ್ಮ ಸ್ವಂತದ್ದಾಗಿ ಮಾಡಿಕೊಳ್ಳುವಾಗ, ನಿಮಗೆ ಒಂದು ಅಮೂಲ್ಯ ಆಸ್ತಿ ದೊರಕುತ್ತದೆ. ಏನೇ ಆದರೂ ನೀವು ಆ ಆಸ್ತಿಯನ್ನು ಬಿಟ್ಟುಕೊಡಲು ಇಷ್ಟಪಡುವುದಿಲ್ಲ. ಆದುದರಿಂದ, ಸತ್ಯವು “ನನ್ನ ಹೆತ್ತವರ ಧರ್ಮ”ವಾಗಿದೆ ಎಂದು ಎಂದಿಗೂ ಭಾವಿಸಬೇಡಿ. ನಿಮ್ಮ ನಿಶ್ಚಿತಾಭಿಪ್ರಾಯವು, “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು” ಎಂದು ಹೇಳಿದಂತಹ ಕೀರ್ತನೆಗಾರನಂತಿರಬೇಕು. (ಕೀರ್ತನೆ 27:10) ಬೈಬಲು ಕಲಿಸುವಂತಹ ವಿಷಯಗಳನ್ನು ತಿಳಿದುಕೊಂಡು, ಅವುಗಳನ್ನು ನಂಬಿ, ನಿಮ್ಮ ನಂಬಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ, ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಆ ನಂಬಿಕೆಗಳಿಗೆ ಅನುಸಾರವಾಗಿ ಜೀವಿಸುವ ಮೂಲಕ, ನೀವು ಸತ್ಯವನ್ನು ನಿಮ್ಮದಾಗಿ ಮಾಡಿಕೊಂಡಿದ್ದೀರಿ ಎಂಬುದನ್ನು ತೋರ್ಪಡಿಸುವಿರಿ.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (ಇಂಗ್ಲಿಷ್) ಎಂಬ ಸಂಗೀತ ಪುಸ್ತಕದಿಂದ ಆರಿಸಿಕೊಳ್ಳಲ್ಪಟ್ಟ ಸಂಗೀತವಾಗಿದೆ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟದ್ದು.
[ಪುಟ 14 ರಲ್ಲಿರುವ ಚಿತ್ರ]
ನೀವೇ ಸಂಶೋಧನೆಮಾಡಿ ನೋಡುವ ಮೂಲಕ ಹಾಗೂ ವೈಯಕ್ತಿಕ ಅಭ್ಯಾಸವನ್ನು ಮಾಡುವ ಮೂಲಕ, ಮೊದಲಾಗಿ ನೀವು ಸತ್ಯವನ್ನು ವಿವೇಚಿಸಿ ತಿಳಿದುಕೊಳ್ಳಿರಿ