ಒಂದು ವಿಪತ್ತಿನ ಎರಡು ಮುಖಗಳು
ಮೆಕ್ಸಿಕೊದ ಎಚ್ಚರ! ಸುದ್ದಿಗಾರರಿಂದ
ಯೆಹೋವನ ಸಾಕ್ಷಿಗಳಾಗಿರುವ ಗೊಡೊಫ್ರೇಡೊ ಮತ್ತು ಗೀಸೆಲ್ಲಾ ಎಂಬ ವಿವಾಹಿತ ದಂಪತಿಗಳು ಮತ್ತು ಅವರ ಚಿಕ್ಕ ಮಕ್ಕಳು, ಡಾಂಬರಿನ ಹಲಗೆಗಳಿಂದ ಮಾಡಿದ್ದ ಮನೆಯೊಳಗಿದ್ದಾಗ, ಪೌಲೀನ್ ಎಂಬ ಚಂಡಮಾರುತವು, ಮೆಕ್ಸಿಕೊದ ವಹಾಕ ತೀರವನ್ನು ತಾಕಿತು. ಹಲಗೆಗಳು ಒಂದೊಂದಾಗಿ ಕಿತ್ತುಬಂದವು. ಕೊನೆಯಲ್ಲಿ, ಆ ಚೌಕಟ್ಟಿನ ಒಂದು ಭಾಗವು ಮಾತ್ರ ಉಳಿದಾಗ, ಆ ಕುಟುಂಬಕ್ಕೆ ಮರೆಯೇ ಇಲ್ಲದಂತಾಯಿತು.
ಗೀಸೆಲ್ಲಾಳ ಕಂಕುಳಲ್ಲಿ ಎಂಟು ತಿಂಗಳಿನ ಮಗುವೊಂದಿದ್ದು, ಉಳಿದ ಮೂರು ಮಕ್ಕಳು ಅವಳನ್ನು ಮತ್ತು ಗೊಡೊಫ್ರೇಡೊ ಅನ್ನು ಹಿಡಿದುಕೊಂಡಿದ್ದಾಗ, ಅವರು ಎರಡು ತಾಸುಗಳಿಗಿಂತಲೂ ಹೆಚ್ಚಿನ ಸಮಯದ ವರೆಗೆ ಬಿರುಸಾದ ಗಾಳಿಯೊಂದಿಗೆ ಹೋರಾಡಬೇಕಾಯಿತು. ಕೆಲವೊಮ್ಮೆ ಆ ಚಂಡಮಾರುತದ ಬಿರುಸಾದ ಗಾಳಿಯು ಅವರನ್ನು ಕೆಳಕ್ಕೆ ಬೀಳಿಸಿ, ನೆಲದ ಮೇಲೆ ಉರುಳುವಂತೆ ಮಾಡಿತು. ಕೊನೆಯಲ್ಲಿ ಅವರೆಲ್ಲರೂ ಪಾರಾದರು.
ಆಕಪೂಲ್ಕೊ ನಗರದಲ್ಲಿರುವ ನಲೀ ಎಂಬ ಯೆಹೋವನ ಸಾಕ್ಷಿಯು, ಮನೆಯೊಳಗೆ ನೀರು ಬರುತ್ತಿರುವುದನ್ನು ನೋಡಿ, ತನ್ನ ಕುಟುಂಬದವರನ್ನು ಎಬ್ಬಿಸಿದಳು. ನೀರಿನ ಮಟ್ಟವು ಅತಿವೇಗವಾಗಿ ಏರುತ್ತಿತ್ತು, ಮತ್ತು ಆ ಪ್ರವಾಹದ ಸೆಳೆತವು ನಲೀಯನ್ನು ನೀರಿನೊಳಕ್ಕೆ ಎಳೆದುಕೊಂಡಿತು. ಆದರೆ ಅವಳ ಮಗಳು ಅವಳನ್ನು ಹೊರಗೆ ಎಳೆದಳು. ಅವರು ಕಿಟಕಿಯ ಸರಳುಗಳನ್ನು ಹಿಡಿದುಕೊಂಡು, ನೀರು ಅವರ ಕುತ್ತಿಗೆಗಳ ವರೆಗೆ ಏರುತ್ತಿದ್ದಂತೆ ನಿಸ್ಸಹಾಯಕರಾಗಿ ನೋಡುತ್ತಿದ್ದರು. ತರುವಾಯ, ಗಟ್ಟಿಯಾಗಿ ಕೂಗಿಕರೆಯುತ್ತಿದ್ದ ಒಬ್ಬ ಮನುಷ್ಯನ ಸ್ವರವು ಅವರಿಗೆ ಕೇಳಿಸಿತು. ಅದು ಅವರ ನೆರೆಯವನ ಸ್ವರವಾಗಿತ್ತು. ಅವನು ಅವರನ್ನು ನೀರಿನಿಂದ ಹೊರಗೆ ಬರುವಂತೆ ಸಹಾಯಮಾಡಿ, ತನ್ನ ಮನೆಗೆ ಕರೆದುಕೊಂಡು ಹೋದನು. ಯಾವ ಮನೆಯಲ್ಲಿ ಅವರು ಕೆಲವೇ ನಿಮಿಷಗಳ ಮೊದಲು ಇದ್ದರೊ, ಆ ಮನೆಯನ್ನು ಒಂದು ಕಾರು ಸಂಪೂರ್ಣವಾಗಿ ನುಚ್ಚುನೂರು ಮಾಡಿದ್ದನ್ನು, ಅವರು ತಮ್ಮ ನೆರೆಯವನ ಮನೆಯಿಂದ ಭಯಭೀತರಾಗಿ ನೋಡಿದರು.
ಬುಧವಾರ ಅಕ್ಟೋಬರ್ 8, 1997ರ ಮಧ್ಯಾಹ್ನದಂದು, ಪೌಲೀನ್ ಚಂಡಮಾರುತವು ಪ್ರತಿ ಗಂಟೆಗೆ 200 ಕಿಲೊಮೀಟರುಗಳಿಗಿಂತಲೂ ಹೆಚ್ಚಿನ ವೇಗದಲ್ಲಿ ಬೀಸುವ ಗಾಳಿಯೊಂದಿಗೆ, ವಹಾಕ ರಾಜ್ಯದ ತೀರವನ್ನು ಬಲವಾಗಿ ತಾಕಿತು. ತದನಂತರ, ಗುರುವಾರ ಅಕ್ಟೋಬರ್ 9ರ ನಸುಕಿನಲ್ಲಿ, ಚಂಡಮಾರುತವು ಗರೇರೊ ರಾಜ್ಯದಲ್ಲಿನ ಆಕಪೂಲ್ಕೊ ನಗರವನ್ನು ವಿಶೇಷವಾಗಿ ಧ್ವಂಸಮಾಡಿತು. ಚಂಡಮಾರುತದ ಕಾರಣ, ಅಲೆಗಳು 10 ಮೀಟರುಗಳ ಎತ್ತರಕ್ಕೆ ಉಕ್ಕಿ, ಆ ಪ್ರವಾಹವು ಮನೆಗಳು, ಕಾರುಗಳು, ಪ್ರಾಣಿಗಳು, ಮತ್ತು ಜನರನ್ನು ಕೊಚ್ಚಿಕೊಂಡು ಹೋಯಿತು. ಬಿರುಗಾಳಿಯು ಮುಂದಕ್ಕೆ ಹೋಗುವುದರೊಳಗೆ, ಈ ಮೊದಲು ಬೀದಿಗಳಿದ್ದ ಸ್ಥಳದಲ್ಲಿ 10 ಮೀಟರುಗಳಷ್ಟು ಆಳವಾದ ಹಳ್ಳಗಳಿದ್ದವು. ದ ನ್ಯೂಸ್ ಎಂಬ ವಾರ್ತಾಪತ್ರಿಕೆಗನುಸಾರ, ಈ ಎರಡು ರಾಜ್ಯಗಳಲ್ಲಿ ಕಡಿಮೆ ಪಕ್ಷ 400 ಜನರು ಮೃತಪಟ್ಟು, 20,000ದಿಂದ 25,000 ಜನರು ನಿರಾಶ್ರಿತರಾಗಿದ್ದರೆಂದು, ಮೆಕ್ಸಿಕೊದಲ್ಲಿರುವ ರೆಡ್ ಕ್ರಾಸ್ ಸಂಸ್ಥೆಯು ಅಂದಾಜುಮಾಡಿತು. ಆದರೆ, ಈ ವಿಪತ್ತಿನ ಮಧ್ಯದಲ್ಲಿಯೂ, ಮನಕರಗಿಸುವಂತಹ ರೀತಿಯಲ್ಲಿ ಕ್ರೈಸ್ತ ಪ್ರೀತಿಯು ಪ್ರದರ್ಶಿಸಲ್ಪಟ್ಟಿತು.
ಯೆಹೋವನ ಜನರು ಪ್ರತಿಕ್ರಿಯಿಸುತ್ತಾರೆ
ಪೌಲೀನ್ ಚಂಡಮಾರುತದ ಸುದ್ದಿಯು ಸಿಕ್ಕಿದೊಡನೆ, ಮೆಕ್ಸಿಕೊದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸು, ಆ ದೇಶದಾದ್ಯಂತವಿರುವ ಸಾಕ್ಷಿಗಳಿಂದ ದೂರವಾಣಿ ಕರೆಗಳನ್ನು ಪಡೆದುಕೊಳ್ಳಲಾರಂಭಿಸಿತು. ಸಹಾಯಮಾಡಲು ತಾವು ಏನು ಮಾಡಸಾಧ್ಯವಿತ್ತೆಂದು ಈ ಸಾಕ್ಷಿಗಳು ತಿಳಿದುಕೊಳ್ಳಲು ಬಯಸಿದರು. ಹೊರದೇಶಗಳಿಂದಲೂ ನೆರವಿನ ಹಸ್ತವು ನೀಡಲ್ಪಟ್ಟಿತು. ಬೇಗನೆ ಒಂದು ಪರಿಹಾರ ಕಮಿಟಿಯನ್ನು ರಚಿಸಿ, ಟನ್ನುಗಳಷ್ಟು ಆಹಾರ, ಬಟ್ಟೆಬರೆ, ಮತ್ತು ಇತರ ವಸ್ತುಗಳು ವಿತರಿಸಲ್ಪಟ್ಟವು.
ನಿರ್ಮಾಣ ಸಾಮಗ್ರಿಗಳು ಸಹ ಖರೀದಿಸಲ್ಪಟ್ಟು, ನಷ್ಟಗೊಂಡಿದ್ದ ಇಲ್ಲವೆ ನಾಶವಾಗಿಹೋಗಿದ್ದ 360 ಮನೆಗಳು ಮತ್ತು ಹಲವಾರು ರಾಜ್ಯ ಸಭಾಗೃಹಗಳ ದುರಸ್ತಿಕೆಲಸವು ಬೇಗನೆ ಆರಂಭಗೊಂಡಿತು. ಸಾವಿರಾರು ಕ್ರೈಸ್ತ ಸಹೋದರ ಸಹೋದರಿಯರು ದಾನಮಾಡುವುದು, ವಸ್ತುಗಳನ್ನು ಬೇರ್ಪಡಿಸುವುದು, ಪ್ಯಾಕ್ಮಾಡುವುದು, ರವಾನಿಸುವುದು, ಮತ್ತು ಪರಿಹಾರ ವಸ್ತುಗಳನ್ನು ವಿತರಿಸುವುದು ಇಲ್ಲವೆ ದುರಸ್ತಿಕೆಲಸವನ್ನು ಮಾಡುವಂತಹ ಚಟುವಟಿಕೆಗಳಲ್ಲಿ ಕಾರ್ಯಮಗ್ನರಾಗಿದ್ದರು.
ಸಾಕ್ಷಿಗಳ ಚಟುವಟಿಕೆಯಿಂದ ಕೆಲವು ಅಂಗಡಿಗಾರರು ಎಷ್ಟು ಪ್ರಭಾವಿತರಾದರೆಂದರೆ, ಅವರು ಸಹ ಆಹಾರ, ನಿರ್ಮಾಣದ ಸಾಮಗ್ರಿಗಳು, ಮತ್ತು ಇತರ ವಸ್ತುಗಳನ್ನು ದಾನಮಾಡಿದರು. ಇತರರು ವಸ್ತುಗಳ ಬೆಲೆಯನ್ನು ಕಡಿಮೆಮಾಡಿದರು. ಚಂಡಮಾರುತದ ಕಾರಣ ಬಾಧಿಸಲ್ಪಟ್ಟಿದ್ದ ಸಾಕ್ಷಿಗಳು ತಮಗೆ ತೋರಿಸಲ್ಪಟ್ಟ ಪ್ರೀತಿಯಿಂದ, ವಿಶೇಷವಾಗಿ ಸರಬರಾಯಿಗಳೊಂದಿಗೆ ಬಂದಿದ್ದ ಉತ್ತೇಜನದಾಯಕ ಪತ್ರಗಳನ್ನು ಓದಿದಾಗ, ಅವರು ಗಾಢವಾಗಿ ಪ್ರೇರಿಸಲ್ಪಟ್ಟರು.
ದುಃಖಕರವಾಗಿ, 18 ವರ್ಷ ಪ್ರಾಯದ ಸಾಕ್ಷಿ, ಹೋಸೇ ಫಾಸ್ತೀನೊ ಮತ್ತು ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸುತ್ತಿದ್ದ ಮೂವರು ವ್ಯಕ್ತಿಗಳು ಚಂಡಮಾರುತದಿಂದ ಕೊಲ್ಲಲ್ಪಟ್ಟರು. ಅವರ ಸಂಬಂಧಿಕರು, ಹೋಸೇಯ ಹೆತ್ತವರು, ಅವರಿಗಾಗಿ ಮಾಡಲ್ಪಟ್ಟ ಪ್ರಾರ್ಥನೆ ಮತ್ತು ಸಭೆಯಿಂದ ನೀಡಲ್ಪಟ್ಟ ಉತ್ತೇಜನವನ್ನು ಬಹಳವಾಗಿ ಗಣ್ಯಮಾಡಿದ್ದಾರೆ.
ಕೆಲವು ಸಕಾರಾತ್ಮಕ ಫಲಿತಾಂಶಗಳು
ಪೌಲೀನ್ ಚಂಡಮಾರುತವು ಸಂಭವಿಸಿದ ನಂತರ, ಅನೇಕ ಜನರು ಬೈಬಲ್ ಅಧ್ಯಯನಕ್ಕಾಗಿ ವಿನಂತಿಸಿಕೊಂಡರು. ಇವರಲ್ಲಿ ಸಾಕ್ಷಿಗಳ ಅವಿಶ್ವಾಸಿ ಸಂಬಂಧಿಕರು ಸೇರಿದ್ದರು. ಮತ್ತು ಅನೇಕ ನೆರೆಯವರು, ಸಾಕ್ಷಿಗಳ ಸಂದೇಶಕ್ಕೆ ಕಿವಿಗೊಡಲು ಹೆಚ್ಚು ಸಿದ್ಧರಾದರು. ಪರಿಹಾರ ರೂಪದಲ್ಲಿ ನೀಡಲ್ಪಟ್ಟ ಆಹಾರದ ಸಾಮಾನ್ಯ ವಿತರಣೆಯಲ್ಲಿಯೂ ಸಾಕ್ಷಿಗಳು ಭಾಗವಹಿಸಿದರು. ತನ್ನ ಕಂಪನಿಯು ದಾನವಾಗಿ ನೀಡಿದ್ದ ಆಹಾರವನ್ನು ವಿತರಿಸಲು, ವ್ಯಕ್ತಿಯೊಬ್ಬನು ಯೆಹೋವನ ಸಾಕ್ಷಿಗಳನ್ನು ಏಕೆ ಆರಿಸಿಕೊಂಡಿದ್ದನೆಂದು ಒಬ್ಬ ಸಾಕ್ಷಿಯಿಂದ ಕೇಳಲ್ಪಟ್ಟಾಗ, ಅವನು ಉತ್ತರಿಸಿದ್ದು: “ಏಕೆಂದರೆ, ನೀವು ವ್ಯವಸ್ಥಿತರೂ ಪ್ರಾಮಾಣಿಕರೂ ಆದ ಜನರೆಂದು ನನಗೆ ಗೊತ್ತು. ಅಲ್ಲದೆ, ನಿಮ್ಮ ಕ್ಷೇತ್ರದಲ್ಲಿರುವ ಜನರ ಪರಿಚಯ ನಿಮಗಿರುವುದರಿಂದ, ಈ ನೆರವಿನ ಅತ್ಯಂತ ಹೆಚ್ಚಿನ ಅಗತ್ಯ ಯಾರಿಗಿದೆ ಎಂದು ನಿಮಗೆ ನಿಜವಾಗಿಯೂ ತಿಳಿದಿರುತ್ತದೆ.”
ಅಂತ್ಯವು ಸಮೀಪಿಸಿದಂತೆ, ಮತ್ತು ಲೋಕವ್ಯಾಪಕವಾಗಿ ಅನೇಕಾನೇಕ ವಿಪತ್ತುಗಳು ಸಂಭವಿಸಿದಂತೆ, ಕೇಡಿನ ಎದುರಿನಲ್ಲೂ ಬೈಬಲ್ ತತ್ವಗಳು ಕಾರ್ಯರೂಪದಲ್ಲಿ ಹಾಕಲ್ಪಡುವುದನ್ನು ನೋಡುವುದು ಬಹಳ ಉತ್ತೇಜನಕರವಾಗಿದೆ.
[ಪುಟ 11 ರಲ್ಲಿರುವ ಚಿತ್ರ]
ಪುನರ್ನಿರ್ಮಾಣದಲ್ಲಿ ಯೌವನಸ್ಥರು ಸಹಾಯಮಾಡುತ್ತಾರೆ
[ಪುಟ 12 ರಲ್ಲಿರುವ ಚಿತ್ರ]
ಪೌಲೀನ್ ಚಂಡಮಾರುತದ ತರುವಾಯ, ಸಾಕ್ಷಿಗಳು ವಹಾಕದಲ್ಲಿ ಹೊಸ ರಾಜ್ಯ ಸಭಾಗೃಹವನ್ನು ಕಟ್ಟುತ್ತಿರುವುದು