ಫಿಲೆಮೋನ ಮತ್ತು ಓನೇಸಿಮ—ಕ್ರೈಸ್ತ ಸಹೋದರತ್ವದಲ್ಲಿ ಐಕ್ಯರು
ಅಪೊಸ್ತಲ ಪೌಲನ ದೈವಿಕವಾಗಿ ಪ್ರೇರಿತವಾದ ಪತ್ರಗಳಲ್ಲೊಂದು, ಇಬ್ಬರು ಪುರುಷರನ್ನು ಒಳಗೊಂಡಿರುವ ಒಂದು ಸೂಕ್ಷ್ಮವಾದ ಸಮಸ್ಯೆಯೊಂದಿಗೆ ವ್ಯವಹರಿಸುತ್ತದೆ. ಒಬ್ಬನು ಫಿಲೆಮೋನನು, ಇನ್ನೊಬ್ಬನು ಓನೇಸಿಮನಾಗಿದ್ದನು. ಈ ಪುರುಷರು ಯಾರು? ಮತ್ತು ಪೌಲನು ಅವರ ಸನ್ನಿವೇಶದಲ್ಲಿ ಆಸಕ್ತಿವಹಿಸುವಂತೆ ಮಾಡಿದಂತಹ ವಿಷಯವು ಯಾವುದು?
ಆ ಪತ್ರವನ್ನು ಪಡೆದಂತಹ ಫಿಲೆಮೋನನು, ಏಷಿಯ ಮೈನರ್ನ ಕೊಲೊಸ್ಸೆಯಲ್ಲಿ ವಾಸಿಸುತ್ತಿದ್ದನು. ಅದೇ ಕ್ಷೇತ್ರದಲ್ಲಿದ್ದ ಇತರ ಅನೇಕ ಕ್ರೈಸ್ತರಿಗೆ ಅಸದೃಶವಾಗಿ, ಫಿಲೆಮೋನನು ಪೌಲನ ಸಾರುವ ಚಟುವಟಿಕೆಯಿಂದಾಗಿ ಸುವಾರ್ತೆಯನ್ನು ಅಂಗೀಕರಿಸಿದ್ದರಿಂದ, ಅವನು ಆ ಅಪೊಸ್ತಲನೊಂದಿಗೆ ಸುಪರಿಚಿತನಾಗಿದ್ದನು. (ಕೊಲೊಸ್ಸೆ 1:1; 2:1) ಪೌಲನು ಅವನನ್ನು ಒಬ್ಬ ‘ಪ್ರಿಯ ಜೊತೆಕೆಲಸ’ಗಾರನಾಗಿ ತಿಳಿದುಕೊಂಡಿದ್ದನು. ಫಿಲೆಮೋನನು ನಂಬಿಕೆ ಮತ್ತು ಪ್ರೀತಿಯ ಒಂದು ಮಾದರಿಯಾಗಿದ್ದನು. ಅವನು ತನ್ನ ಜೊತೆ ಕ್ರೈಸ್ತರ ಕಡೆಗೆ ಅತಿಥಿಸತ್ಕಾರಭಾವದವನೂ, ಚೈತನ್ಯದ ಮೂಲನೂ ಆಗಿದ್ದನು. ಫಿಲೆಮೋನನು ಬಹುಶಃ ಧನಿಕನೂ ಆಗಿದ್ದನು. ಯಾಕಂದರೆ, ಅವನ ಮನೆಯು ಸ್ಥಳಿಕ ಸಭೆಯ ಕೂಟಗಳಿಗೆ ಸೌಕರ್ಯವನ್ನು ಒದಗಿಸುವಷ್ಟು ದೊಡ್ಡದ್ದಾಗಿತ್ತು. ಪೌಲನ ಪತ್ರದಲ್ಲಿ ಸಂಬೋಧಿಸಲ್ಪಟ್ಟಿರುವ ಇತರ ಇಬ್ಬರು ವ್ಯಕ್ತಿಗಳಾದ ಅಪ್ಫಿಯ ಮತ್ತು ಅರ್ಖಿಪ್ಪರು, ಅವನ ಹೆಂಡತಿ ಮತ್ತು ಮಗನಾಗಿದ್ದಿರಬಹುದೆಂದು ಸೂಚಿಸಲಾಗಿದೆ. ಫಿಲೆಮೋನನಿಗೆ ಕಡಿಮೆ ಪಕ್ಷ ಒಬ್ಬ ದಾಸನೂ ಇದ್ದನು. ಅವನೇ ಓನೇಸಿಮನು.—ಫಿಲೆಮೋನ 1, 2, 5, 7, 19ಬಿ, 22.
ರೋಮ್ನಲ್ಲಿ ಒಬ್ಬ ಪರಾರಿ
ಓನೇಸಿಮನು ಮನೆಯಿಂದ ಸುಮಾರು 1,400 ಕಿಲೊಮೀಟರ್ ದೂರದಲ್ಲಿ, ರೋಮ್ನಲ್ಲಿ ಪೌಲನೊಂದಿಗೆ ಇದ್ದದ್ದೇಕೆ ಎಂದು ಶಾಸ್ತ್ರವಚನಗಳು ನಮಗೆ ತಿಳಿಸುವುದಿಲ್ಲ. ಅಲ್ಲಿಂದಲೇ ಸುಮಾರು ಸಾ.ಶ. 61ರಲ್ಲಿ ಫಿಲೆಮೋನನಿಗೆ ಆ ಪತ್ರವು ಬರೆಯಲ್ಪಟ್ಟಿತು. ಆದರೆ ಪೌಲನು ಫಿಲೆಮೋನನಿಗೆ ಹೇಳಿದ್ದು: “[ಓನೇಸಿಮನಿಂದ] ನೀನು ಏನಾದರೂ ನಷ್ಟಪಟ್ಟಿದ್ದರೆ ಅಥವಾ ಅವನು ಸಾಲವೇನಾದರೂ ತೀರಿಸಬೇಕಾಗಿದ್ದರೆ ಅದನ್ನು ನನ್ನ ಲೆಕ್ಕಕ್ಕೆ ಹಾಕು.” (ಫಿಲೆಮೋನ 18) ಈ ಮಾತುಗಳು, ಓನೇಸಿಮನಿಗೆ ತನ್ನ ಒಡೆಯನಾದ ಫಿಲೆಮೋನನೊಂದಿಗೆ ಸಮಸ್ಯೆಯಿತ್ತೆಂಬುದನ್ನು ಸ್ಪಷ್ಟಪಡಿಸುತ್ತವೆ. ಈ ಇಬ್ಬರು ವ್ಯಕ್ತಿಗಳ ಮನಸ್ತಾಪವನ್ನು ಬಗೆಹರಿಸುವ ಗುರಿಯಿಂದ ಪೌಲನ ಪತ್ರವು ಬರೆಯಲ್ಪಟ್ಟಿತು.
ರೋಮ್ಗೆ ಓಡಿಹೋಗಲಿಕ್ಕಾಗಿ ಹಣವನ್ನು ಪಡೆಯಲಿಕ್ಕೋಸ್ಕರ ಫಿಲೆಮೋನನಿಂದ ಹಣವನ್ನು ಕದ್ದುಕೊಂಡ ಬಳಿಕ, ಓನೇಸಿಮನು ಪರಾರಿಯಾದನೆಂದು ಸೂಚಿಸಲಾಗಿದೆ. ಅಲ್ಲಿ ಕಿಕ್ಕಿರಿದಿರುವ ಜನಸಂದಣಿಯಲ್ಲಿ ತನ್ನನ್ನು ಅಡಗಿಸಿಕೊಳ್ಳುವ ಉದ್ದೇಶ ಅವನಿಗಿತ್ತು.a ಗ್ರೀಸ್-ರೋಮನ್ ಲೋಕದಲ್ಲಿ, ಓಡಿಹೋದ ದಾಸರು, ದಾಸರ ಧಣಿಗಳಿಗೆ ಮಾತ್ರವಲ್ಲ, ಸಾರ್ವಜನಿಕ ಆಡಳಿತ ವ್ಯವಸ್ಥೆಗೂ ಒಂದು ದೊಡ್ಡ ಸಮಸ್ಯೆಯನ್ನು ಉಂಟುಮಾಡುತ್ತಿದ್ದರು. ರೋಮ್ ನಗರವೇ, ಓಡಿಹೋದ ದಾಸರಿಗೆ “ಒಂದು ಮಾಮೂಲು ಆಶ್ರಯಸ್ಥಾನವಾಗಿ ಕುಪ್ರಸಿದ್ಧ”ವಾಗಿತ್ತು ಎಂದು ಹೇಳಲಾಗಿದೆ.
ಪೌಲನು ಓನೇಸಿಮನನ್ನು ಹೇಗೆ ಸಂಧಿಸಿದನು? ಬೈಬಲ್ ನಮಗೆ ತಿಳಿಸುವುದಿಲ್ಲ. ಸ್ವಾತಂತ್ರ್ಯದ ನವೀನತೆಯು ಕುಂದಿಹೋದಾಗ, ತನ್ನ ಮೇಲೆ ತಾನು ತುಂಬ ಅಪಾಯವನ್ನು ತಂದುಕೊಂಡಿದ್ದೇನೆಂದು ಓನೇಸಿಮನು ಗ್ರಹಿಸಿದ್ದಿರಬಹುದು. ರೋಮ್ ನಗರದಲ್ಲಿ, ಒಂದು ವಿಶೇಷ ಪೊಲೀಸ್ ದಳವು, ಪರಾರಿ ದಾಸರನ್ನು ಬೆನ್ನಟ್ಟಿತು. ಆ ದಾಸರ ಅಪರಾಧವು, ಪ್ರಾಚೀನ ನಿಯಮದಲ್ಲಿ ಜ್ಞಾತವಾದ ಅತಿ ಗಂಭೀರವಾದ ಅಪರಾಧಗಳಲ್ಲಿ ಒಂದಾಗಿತ್ತು. ಗೇರ್ಹಾರ್ಟ್ ಫ್ರೀಡ್ರಿಕ್ರಿಗನುಸಾರ, “ಓಡಿಹೋದ ದಾಸರಲ್ಲಿ ಸೆರೆಹಿಡಿಯಲ್ಪಟ್ಟವರ ಹಣೆಗಳಲ್ಲಿ ಸುಡುಮುದ್ರೆಯನ್ನೊತ್ತಲಾಗುತ್ತಿತ್ತು. ಬೇರೆ ದಾಸರು ಅವರ ಮಾದರಿಯನ್ನು ಅನುಕರಿಸುವುದನ್ನು ತಡೆಯಲು, ಅವರಿಗೆ ಅನೇಕವೇಳೆ ಚಿತ್ರಹಿಂಸೆ ನೀಡಲಾಗುತ್ತಿತ್ತು . . . , ಸರ್ಕಸ್ನಲ್ಲಿ ಮೃಗಗಳಿಗೆ ಎಸೆಯಲಾಗುತ್ತಿತ್ತು, ಅಥವಾ ಕಂಬಕ್ಕೇರಿಸಿ ಸಾಯಿಸಲಾಗುತ್ತಿತ್ತು.” ಫ್ರೀಡ್ರಿಕ್ ಸೂಚಿಸುವುದೇನೆಂದರೆ, ಬಹುಶಃ ಓನೇಸಿಮನ ಹಣವು ಮುಗಿದ ನಂತರ ಮತ್ತು ಅವಿತುಕೊಳ್ಳುವ ಸ್ಥಳವನ್ನು ಅಥವಾ ಉದ್ಯೋಗವನ್ನು ವ್ಯರ್ಥವಾಗಿ ಹುಡುಕಿದ ನಂತರ, ಅವನು ಫಿಲೆಮೋನನ ಮನೆಯಲ್ಲಿ ಯಾರ ಕುರಿತಾಗಿ ಕೇಳಿಸಿಕೊಂಡಿದ್ದನೋ ಆ ಪೌಲನ ಸಂರಕ್ಷಣೆ ಮತ್ತು ಮಧ್ಯಸ್ಥಿಕೆಗಾಗಿ ಕೇಳಿಕೊಂಡನು.
ಉದ್ದೇಶಪೂರ್ವಕವಾಗಿಯೇ ಓನೇಸಿಮನು ತನ್ನ ಒಡೆಯನ ಮಿತ್ರರಲ್ಲಿ ಒಬ್ಬರ ಬಳಿಗೆ ಹೋದನೆಂದು ಇತರರು ನಂಬುತ್ತಾರೆ. ಆ ಮಿತ್ರನ ಪ್ರಭಾವದಿಂದ, ಬೇರೆ ಯಾವುದೋ ಕಾರಣಕ್ಕಾಗಿ ತನ್ನೊಂದಿಗೆ ನ್ಯಾಯವಾಗಿಯೇ ಕೋಪಗೊಂಡಿದ್ದ ಒಡೆಯನೊಂದಿಗೆ ಒಳ್ಳೇ ಸಂಬಂಧಗಳನ್ನು ಪುನಸ್ಸ್ಥಾಪಿಸಬಹುದೆಂದು ಅವನು ನಿರೀಕ್ಷಿಸಿದ್ದಿರಬಹುದು. ಅದು “ತೊಂದರೆಯಲ್ಲಿದ್ದ ದಾಸರ ಒಂದು ಸಾಮಾನ್ಯ ಮತ್ತು ವ್ಯಾಪಕವಾದ ಉಪಾಯ”ವಾಗಿತ್ತೆಂದು ಐತಿಹಾಸಿಕ ಮೂಲಗಳು ಸೂಚಿಸುತ್ತವೆ. ಹಾಗಿರುವಲ್ಲಿ, ಓನೇಸಿಮನ ಕಳ್ಳತನವು, “ಓಡಿಹೋಗುವ ಒಂದು ಯೋಜನೆಯ ಭಾಗವಾಗಿರುವುದಕ್ಕಿಂತಲೂ, ಬಹುಶಃ ತನ್ನ ಪರವಾಗಿ ಫಿಲೆಮೋನನಿಗೆ ಬೇಡಿಕೊಳ್ಳುವಂತೆ ಪೌಲನ ಬಳಿ ವಿನಂತಿಸಲಿಕ್ಕೆ ಪ್ರಯಾಣಿಸುವುದಕ್ಕೋಸ್ಕರ ಮಾಡಲ್ಪಟ್ಟಿತ್ತು” ಎಂದು ವಿದ್ವಾಂಸ ಬ್ರೈಅನ್ ರ್ಯಾಪ್ಸ್ಕೀ ಹೇಳುತ್ತಾರೆ.
ಪೌಲನು ಸಹಾಯಮಾಡುತ್ತಾನೆ
ಓಡಿಹೋಗಲಿಕ್ಕಾಗಿರುವ ಕಾರಣವು ಏನೇ ಆಗಿರಲಿ, ತನ್ನ ಕೆರಳಿದ ಒಡೆಯನೊಂದಿಗೆ ಸಮಾಧಾನವನ್ನು ಮಾಡಿಕೊಳ್ಳಲು ಓನೇಸಿಮನು ಬಹುಶಃ ಪೌಲನ ಸಹಾಯವನ್ನು ಕೋರಿದನು. ಅದು ಪೌಲನಿಗೆ ಒಂದು ಸಮಸ್ಯೆಯನ್ನು ಒಡ್ಡಿತು. ಒಬ್ಬ ಅಪರಾಧಿ ಪರಾರಿಯಾಗಿದ್ದ, ಹಿಂದೆ ಒಬ್ಬ ಅವಿಶ್ವಾಸಿಯಾಗಿದ್ದ ದಾಸನು ಇಲ್ಲಿದ್ದನು. ಕಠಿನವಾದ ಶಿಕ್ಷೆಯನ್ನು ಕೊಡಿಸುವ ಅವನ ಕಾನೂನುಬದ್ಧ ಹಕ್ಕನ್ನು ಚಲಾಯಿಸದೆ ಇರುವಂತೆ ತನ್ನ ಕ್ರೈಸ್ತ ಮಿತ್ರನನ್ನು ಒಡಂಬಡಿಸುವ ಮೂಲಕ ಅಪೊಸ್ತಲನು ಓನೇಸಿಮನಿಗೆ ಸಹಾಯಮಾಡಲು ಪ್ರಯತ್ನಿಸಬೇಕೊ? ಪೌಲನು ಏನು ಮಾಡಬೇಕಿತ್ತು?
ಪೌಲನು ಫಿಲೆಮೋನನಿಗೆ ಬರೆಯುವಷ್ಟರಲ್ಲಿ, ಓಡಿಹೋದವನು ಬಹುಶಃ ಅಪೊಸ್ತಲನೊಂದಿಗೆ ಸ್ವಲ್ಪ ಸಮಯದ ವರೆಗೆ ಇದ್ದನು. ಓನೇಸಿಮನು ಒಬ್ಬ “ಪ್ರಿಯ ಸಹೋದರ”ನಾಗಿದ್ದನೆಂದು ಪೌಲನು ಹೇಳಲು ಸಾಕಾಗುವಷ್ಟು ಸಮಯ ಸರಿದಿತ್ತು. (ಕೊಲೊಸ್ಸೆ 4:9) “ನಾನು ಸೆರೆಯಲ್ಲಿ ಪಡೆದಿರುವ ನನ್ನ ಮಗನಾದ ಓನೇಸಿಮನ ವಿಷಯದಲ್ಲಿ ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು, ಓನೇಸಿಮನೊಂದಿಗೆ ತನಗಿದ್ದ ಸ್ವಂತ ಆತ್ಮಿಕ ಸಂಬಂಧದ ಕುರಿತು ಪೌಲನು ಹೇಳಿದನು. ಇದು, ಪೌಲನ ಮಧ್ಯಸ್ಥಿಕೆಯ ಎಲ್ಲ ಸಂಭವನೀಯ ಫಲಿತಾಂಶಗಳಲ್ಲಿ, ಫಿಲೆಮೋನನು ನಿರೀಕ್ಷಿಸದಂತಹ ಫಲಿತಾಂಶವಾಗಿದ್ದಿರಬೇಕು. ಈ ಹಿಂದೆ “ಅಪ್ರಯೋಜಕ”ನಾಗಿದ್ದ ದಾಸನು, ಒಬ್ಬ ಕ್ರೈಸ್ತ ಸಹೋದರನಾಗಿ ಹಿಂದಿರುಗುತ್ತಿದ್ದನೆಂದು ಅಪೊಸ್ತಲನು ಹೇಳುತ್ತಿದ್ದನು. ಈಗ ಓನೇಸಿಮನು, “ಲಾಭದಾಯಕ” ಅಥವಾ “ಪ್ರಯೋಜಕ”ವಾಗಿರಲಿದ್ದು, ಹೀಗೆ ತನ್ನ ಹೆಸರಿನ ಅರ್ಥಕ್ಕೆ ತಕ್ಕಂತೆ ಬಾಳುತ್ತಿದ್ದನು.—ಫಿಲೆಮೋನ 1, 10-12.
ಓನೇಸಿಮನು ಸೆರೆಯಲ್ಲಿದ್ದ ಅಪೊಸ್ತಲನಿಗೆ ತುಂಬ ಉಪಯುಕ್ತನಾಗಿ ಪರಿಣಮಿಸಿದ್ದನು. ವಾಸ್ತವದಲ್ಲಿ ಪೌಲನು ಅವನನ್ನು ಅಲ್ಲಿ ಇರಿಸಿಕೊಳ್ಳಬಹುದಿತ್ತು, ಆದರೆ ಇದು ಕಾನೂನಿನ ವಿರುದ್ಧವಾಗಿರುತ್ತಿತ್ತು ಮಾತ್ರವಲ್ಲ, ಇದು ಫಿಲೆಮೋನನ ಹಕ್ಕುಗಳ ಉಲ್ಲಂಘನೆಯಾಗಿರುತ್ತಿತ್ತು. (ಫಿಲೆಮೋನ 13, 14) ಫಿಲೆಮೋನನ ಮನೆಯಲ್ಲಿ ಜೊತೆಗೂಡುತ್ತಿದ್ದ ಸಭೆಗೆ ಸುಮಾರು ಅದೇ ಸಮಯದಲ್ಲಿ ಬರೆಯಲ್ಪಟ್ಟ ಇನ್ನೊಂದು ಪತ್ರದಲ್ಲಿ ಪೌಲನು, ಓನೇಸಿಮನನ್ನು “ನಂಬಿಗಸ್ತನಾದ ಪ್ರಿಯ ಸಹೋದರ” ಎಂದು ಸಂಬೋಧಿಸುತ್ತಾನೆ. ಓನೇಸಿಮನು ಈಗಾಗಲೇ ತನ್ನ ಭರವಸಯೋಗ್ಯತೆಯ ಪುರಾವೆಯನ್ನು ಕೊಟ್ಟಿದ್ದನೆಂಬುದನ್ನು ಇದು ಸೂಚಿಸುತ್ತದೆ.—ಕೊಲೊಸ್ಸೆ 4:7-9.b
ಓನೇಸಿಮನನ್ನು ದಯೆಯಿಂದ ಸ್ವಾಗತಿಸುವಂತೆ ಪೌಲನು ಫಿಲೆಮೋನನನ್ನು ಉತ್ತೇಜಿಸಿದನು. ಆದರೆ ಅವನು ಹಾಗೆ ಮಾಡುವಂತೆ ಅಥವಾ ಅವನ ದಾಸನನ್ನು ಬಿಡುಗಡೆಗೊಳಿಸುವಂತೆ ಆಜ್ಞಾಪಿಸಲು ಪೌಲನು ಅಪೊಸ್ತಲ ಸಂಬಂಧಿತ ಅಧಿಕಾರವನ್ನು ಉಪಯೋಗಿಸಲಿಲ್ಲ. ತಮ್ಮ ಸ್ನೇಹ ಮತ್ತು ಪರಸ್ಪರ ಪ್ರೀತಿಯ ಕಾರಣದಿಂದ, ಫಿಲೆಮೋನನು ಅವನಿಂದ ಕೇಳಲ್ಪಟ್ಟಿರುವುದಕ್ಕಿಂತಲೂ “ಹೆಚ್ಚಾಗಿ ಮಾಡು”ವನೆಂದು ಪೌಲನಿಗೆ ನಿಶ್ಚಯವಿತ್ತು. (ಫಿಲೆಮೋನ 21) ಓನೇಸಿಮನ ವಿಷಯದಲ್ಲಿ ಏನನ್ನು ಮಾಡುವುದೆಂಬುದನ್ನು ಕೇವಲ ಫಿಲೆಮೋನನು ನಿರ್ಣಯಿಸಲು ಸಾಧ್ಯವಿದ್ದುದರಿಂದ “ಹೆಚ್ಚಾಗಿ ಮಾಡು”ವುದು ಏನನ್ನು ಅರ್ಥೈಸಿತು ಎಂಬ ವಿಷಯವನ್ನು ಅಸ್ಪಷ್ಟವಾಗಿ ಬಿಡಲಾಗಿದೆ. ಪೌಲನ ಮಾತುಗಳಲ್ಲಿ, ಓಡಿಹೋದವನು ‘ಈಗಾಗಲೇ ಪೌಲನಿಗೆ ಸಹಾಯ ಮಾಡಲು ಆರಂಭಿಸಿದ್ದರಿಂದ ಅವನು ಅದನ್ನು ಮುಂದುವರಿಸಿಕೊಂಡು ಹೋಗಸಾಧ್ಯವಾಗುವಂತೆ ಅವನನ್ನು ಹಿಂದೆ ಕಳುಹಿಸಲು’ ಒಂದು ಸೂಚಿತ ವಿನಂತಿಯಿತ್ತೆಂದು ಕೆಲವರು ಅರ್ಥಮಾಡಿಕೊಂಡಿದ್ದಾರೆ.
ಓನೇಸಿಮನ ಪರವಾಗಿದ್ದ ಪೌಲನ ವಿನಂತಿಗಳನ್ನು ಫಿಲೆಮೋನನು ಸ್ವೀಕರಿಸಿದನೊ? ಅವನು ಸ್ವೀಕರಿಸಿದನೆಂಬ ವಿಷಯದಲ್ಲಿ ಯಾವುದೇ ಸಂಶಯವಿಲ್ಲ. ಆದರೂ ಇದು ಕೊಲೊಸ್ಸೆಯಲ್ಲಿದ್ದ ಇತರ ದಾಸರ ಧಣಿಗಳನ್ನು ಅಸಂತುಷ್ಟಗೊಳಿಸಿದ್ದಿರಬಹುದು. ತಮ್ಮ ಸ್ವಂತ ದಾಸರು ಅವನ ಮಾದರಿಯನ್ನು ಅನುಕರಿಸುವುದರಿಂದ ತಡೆಯಲಿಕ್ಕಾಗಿ, ಓನೇಸಿಮನಿಗೆ ಆದರ್ಶಪ್ರಾಯ ಶಿಕ್ಷೆಯು ಸಿಗುವುದನ್ನು ನೋಡಲು ಅವರು ಇಷ್ಟಪಟ್ಟಿದ್ದಿರಬಹುದು.
ಓನೇಸಿಮನು—ಒಬ್ಬ ಬದಲಾದ ವ್ಯಕ್ತಿ
ಏನೇ ಆಗಿರಲಿ, ಓನೇಸಿಮನು ಒಂದು ಹೊಸ ವ್ಯಕ್ತಿತ್ವದೊಂದಿಗೆ ಕೊಲೊಸ್ಸೆಗೆ ಹಿಂದಿರುಗಿದನು. ಸುವಾರ್ತೆಯ ಶಕ್ತಿಯಿಂದ ರೂಪಾಂತರಗೊಳಿಸಲ್ಪಟ್ಟಿದ್ದ ಆಲೋಚನೆಯೊಂದಿಗೆ, ಅವನು ನಿಸ್ಸಂದೇಹವಾಗಿ ಆ ನಗರದಲ್ಲಿದ್ದ ಕ್ರೈಸ್ತ ಸಭೆಯ ಒಬ್ಬ ನಂಬಿಗಸ್ತ ಸದಸ್ಯನಾದನು. ಓನೇಸಿಮನನ್ನು ಕಟ್ಟಕಡೆಗೆ ಫಿಲೆಮೋನನು ಬಿಡುಗಡೆಗೊಳಿಸಿದನೊ ಎಂಬ ವಿಷಯವು ಶಾಸ್ತ್ರವಚನಗಳಲ್ಲಿ ತಿಳಿಸಲ್ಪಟ್ಟಿಲ್ಲ. ಒಂದು ಆತ್ಮಿಕ ದೃಷ್ಟಿಕೋನದಿಂದಾದರೊ, ಈ ಹಿಂದೆ ಓಡಿಹೋದವನು ಈಗ ಒಬ್ಬ ಸ್ವತಂತ್ರ ಪುರುಷನಾಗಿದ್ದನು. (1 ಕೊರಿಂಥ 7:22ನ್ನು ಹೋಲಿಸಿರಿ.) ತದ್ರೀತಿಯ ರೂಪಾಂತರಗಳು ಇಂದು ಸಂಭವಿಸುತ್ತವೆ. ಜನರು ಬೈಬಲಿನ ಮೂಲತತ್ತ್ವಗಳನ್ನು ತಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳುವಾಗ, ಪರಿಸ್ಥಿತಿಗಳು ಮತ್ತು ವ್ಯಕ್ತಿತ್ವಗಳು ಬದಲಾಗುತ್ತವೆ. ಈ ಹಿಂದೆ ಸಮಾಜಕ್ಕೆ ನಿಷ್ಪ್ರಯೋಜಕರೆಂದು ಎಣಿಸಲ್ಪಟ್ಟವರು ಆದರ್ಶ ನಾಗರಿಕರಾಗಲು ಸಹಾಯ ಮಾಡಲ್ಪಡುತ್ತಾರೆ.c
ನಿಜ ನಂಬಿಕೆಗೆ ಪರಿವರ್ತನೆಯು ಎಂತಹ ಒಂದು ವ್ಯತ್ಯಾಸವನ್ನು ಮಾಡಿತು! ಹಿಂದಿನ ಓನೇಸಿಮನು ಫಿಲೆಮೋನನಿಗೆ “ಅಪ್ರಯೋಜಕ”ನಾಗಿದ್ದಿರಬಹುದಾದರೂ, ಹೊಸ ಓನೇಸಿಮನು ನಿಸ್ಸಂದೇಹವಾಗಿ ತನ್ನ ಹೆಸರಿಗೆ ತಕ್ಕಂತೆ ಒಬ್ಬ “ಲಾಭದಾಯಕ” ವ್ಯಕ್ತಿಯಂತೆ ಜೀವಿಸಿರಬೇಕು. ಮತ್ತು ಫಿಲೆಮೋನನು ಹಾಗೂ ಓನೇಸಿಮನು ಕ್ರೈಸ್ತ ಸಹೋದರತ್ವದಲ್ಲಿ ಐಕ್ಯರಾದದ್ದು, ನಿಶ್ಚಿತವಾಗಿಯೂ ಒಂದು ಆಶೀರ್ವಾದವಾಗಿತ್ತು.
[ಅಧ್ಯಯನ ಪ್ರಶ್ನೆಗಳು]
a ರೋಮನ್ ನಿಯಮವು, ಒಬ್ಬ ಸರ್ವಸ್ ಫ್ಯೂಜಿಟಿವ್ಸ್ (ಪರಾರಿ ದಾಸ)ನನ್ನು ‘ಹಿಂದಿರುಗಿ ಹೋಗುವ ಉದ್ದೇಶವಿಲ್ಲದೆ, ತನ್ನ ಧಣಿಯನ್ನು ಬಿಟ್ಟುಹೋಗಿರುವವನು’ ಎಂದು ಅರ್ಥನಿರೂಪಿಸಿತು.
b ಕೊಲೊಸ್ಸೆಗೆ ಹಿಂದಿರುಗುವ ಈ ಪ್ರಯಾಣದಲ್ಲಿ, ಈಗ ಬೈಬಲ್ ಕ್ಯಾನನ್ನಲ್ಲಿ ಸೇರಿಸಲ್ಪಟ್ಟಿರುವ ಪೌಲನ ಪತ್ರಗಳಲ್ಲಿ ಮೂರು ಪತ್ರಗಳು, ಓನೇಸಿಮನಿಗೆ ಮತ್ತು ತುಖಿಕನಿಗೆ ಕೊಡಲ್ಪಟ್ಟಿದ್ದವೆಂದು ತೋರುತ್ತದೆ. ಫಿಲೆಮೋನನಿಗೆ ಬರೆಯಲ್ಪಟ್ಟ ಈ ಪತ್ರಕ್ಕೆ ಕೂಡಿಸಿ, ಇವು ಎಫೆಸದವರಿಗೆ ಮತ್ತು ಕೊಲೊಸ್ಸೆಯವರಿಗೆ ಪೌಲನು ಬರೆದ ಪತ್ರಗಳಾಗಿದ್ದವು.
c ಉದಾಹರಣೆಗಳಿಗಾಗಿ, ದಯವಿಟ್ಟು ಎಚ್ಚರ! ಪತ್ರಿಕೆಯ ಜುಲೈ 8, 1996, 15-20ನೆಯ ಪುಟಗಳು; ಏಪ್ರಿಲ್ 8, 1997, 26-28ನೆಯ ಪುಟಗಳು; ಕಾವಲಿನಬುರುಜು ಪತ್ರಿಕೆಯ ಆಗಸ್ಟ್ 1, 1989, 30-1 (ಇಂಗ್ಲಿಷ್)ನೆಯ ಪುಟಗಳು; ಫೆಬ್ರವರಿ 15, 1997, 21-4ನೆಯ ಪುಟಗಳನ್ನು ನೋಡಿರಿ.
[ಪುಟ 30 ರಲ್ಲಿರುವ ಚೌಕ]
ರೋಮನ್ ನಿಯಮದ ಕೆಳಗೆ ದಾಸರು
ಸಾ.ಶ. ಪ್ರಥಮ ಶತಮಾನದಲ್ಲಿ ಜಾರಿಯಲ್ಲಿದ್ದ ರೋಮನ್ ಕಾನೂನಿನ ಕೆಳಗೆ, ಒಬ್ಬ ದಾಸನು ಪೂರ್ತಿಯಾಗಿ ತನ್ನ ಧಣಿಯ ಹುಚ್ಚಾಟಿಕೆಗಳು, ವಿಷಯಾಭಿಲಾಷೆ, ಮತ್ತು ಕೋಪಕ್ಕೆ ಈಡಾಗುತ್ತಿದ್ದನು. ವ್ಯಾಖ್ಯಾನಕಾರ ಗೇರ್ಹಾರ್ಟ್ ಫ್ರೀಡ್ರಿಕ್ರಿಗನುಸಾರ, “ಮೂಲಭೂತವಾಗಿ ಮತ್ತು ಕಾನೂನುರೀತ್ಯವಾಗಿ, ದಾಸನು ಒಬ್ಬ ವ್ಯಕ್ತಿಯಲ್ಲ, ಬದಲಾಗಿ ತನ್ನ ಧಣಿಯು ಮುಕ್ತವಾಗಿ ಉಪಯೋಗಿಸಸಾಧ್ಯವಿದ್ದ ಒಂದು ವಸ್ತುವಾಗಿದ್ದನು. . . . [ಅವನು] ಸಾಕು ಪ್ರಾಣಿಗಳು ಮತ್ತು ಉಪಕರಣಗಳ ಮಟ್ಟದಲ್ಲೇ ಇಡಲ್ಪಟ್ಟನು ಮತ್ತು ಅವನು ಪೌರ ನಿಯಮದಿಂದ ಯಾವುದೇ ಪರಿಗಣನೆಯನ್ನು ಗಳಿಸಸಾಧ್ಯವಿರಲಿಲ್ಲ.” ಅನುಭವಿಸಲ್ಪಟ್ಟ ಅನ್ಯಾಯಗಳಿಗಾಗಿ ಒಬ್ಬ ದಾಸನು ಯಾವುದೇ ಕಾನೂನುಬದ್ಧ ಪರಿಹಾರವನ್ನು ಕೋರಲು ಸಾಧ್ಯವಿರಲಿಲ್ಲ. ಮೂಲತಃ, ಅವನು ತನ್ನ ಒಡೆಯನ ನಿಯಮಗಳನ್ನು ಪಾಲಿಸಬೇಕಿತ್ತಷ್ಟೇ. ಕುಪಿತ ಒಡೆಯನೊಬ್ಬನು ಕೊಡಬಹುದಾದ ಶಿಕ್ಷೆಗಳಿಗೆ ಯಾವುದೇ ಮಿತಿಯಿರಲಿಲ್ಲ. ಒಂದು ಚಿಕ್ಕ ತಪ್ಪಿಗಾಗಿಯೂ, ಅವನು ಜೀವಮರಣದ ಅಧಿಕಾರವನ್ನು ಚಲಾಯಿಸುತ್ತಿದ್ದನು.*
ಧನಿಕರ ಬಳಿ ನೂರಾರು ದಾಸರು ಇರುತ್ತಿದ್ದರಾದರೂ, ತುಲನಾತ್ಮಕವಾಗಿ ಸಾಧಾರಣವಾಗಿರುವ ಒಂದು ಮನೆವಾರ್ತೆಯಲ್ಲೂ ಇಬ್ಬರು ಅಥವಾ ಮೂವರು ದಾಸರು ಇರುತ್ತಿದ್ದರು. “ಮನೆಯಾಳುಗಳು ಮಾಡುತ್ತಿದ್ದ ಕೆಲಸಗಳು ತುಂಬ ವಿಭಿನ್ನವಾಗಿರುತ್ತಿದ್ದವು. ದ್ವಾರಪಾಲಕರು, ಅಡಿಗೆಭಟ್ಟರು, ಪರಿಚಾರಕರು, ಶುಚಿಮಾಡುವವರು, ಸಂದೇಶವಾಹಕರು, ಮಕ್ಕಳನ್ನು ನೋಡಿಕೊಳ್ಳುವವರು, ಕೂಸುಗಳಿಗೆ ಹಾಲುಣಿಸಿ ಪೋಷಿಸುವವರು, ಮತ್ತು ಎಲ್ಲ ಉದ್ದೇಶಗಳಿಗಾಗಿರುವ ವೈಯಕ್ತಿಕ ಸೇವಕರಾಗಿರುವ ದಾಸರನ್ನು ನಾವು ಕಂಡುಕೊಳ್ಳುತ್ತೇವೆ. ಹೆಚ್ಚು ದೊಡ್ಡ ಮತ್ತು ಹೆಚ್ಚು ಧನಿಕರಾಗಿರುವವರ ಮನೆಗಳಲ್ಲಿ ಒಬ್ಬನು ಕಂಡುಕೊಳ್ಳಬಹುದಾದ ವಿಭಿನ್ನ ಕಸಬುದಾರರ ಕುರಿತು ಹೇಳಬೇಕಾಗಿಲ್ಲ. . . . ವ್ಯಾವಹಾರಿಕ ಅರ್ಥದಲ್ಲಿ, ಒಬ್ಬ ಮನೆಯಾಳಿನ ಜೀವನದ ಗುಣಮಟ್ಟವು, ಧಣಿಯ ಮನೋವೃತ್ತಿಯ ಮೇಲೆ ತೀರ ಹೆಚ್ಚಾಗಿ ಅವಲಂಬಿಸಿತು ಮತ್ತು ಇದು ಒಂದೇ ಪ್ರಯೋಜನಕರ ಇಲ್ಲವೇ ಹಾನಿಕರ ಫಲಿತಾಂಶಗಳನ್ನು ತರಸಾಧ್ಯವಿತ್ತು: ಒಬ್ಬ ಕ್ರೂರ ಧಣಿಯ ಅಧೀನದಲ್ಲಿರುವುದು, ದುಷ್ಕೃತ್ಯಗಳನ್ನು ಅಸೀಮಿತ ರೀತಿಯಲ್ಲಿ ಅನುಭವಿಸುವುದರಲ್ಲಿ ಫಲಿಸಸಾಧ್ಯವಿತ್ತು. ಆದರೆ ಒಬ್ಬ ದಯಾಪರ ಮತ್ತು ಉದಾರಭಾವದ ಧಣಿಯು, ಜೀವನವನ್ನು ಸಹನೀಯವಾಗಿ ಮತ್ತು ನಿರೀಕ್ಷಾದಾಯಕವಾಗಿ ಮಾಡಸಾಧ್ಯವಿತ್ತು. ಕ್ರೂರ ಉಪಚಾರದ ಪ್ರಸಿದ್ಧ ಉದಾಹರಣೆಗಳು ಸಾಂಸ್ಕೃತಿಕ ಸಾಹಿತ್ಯದಲ್ಲಿ ದಾಖಲಿಸಲ್ಪಟ್ಟಿವೆಯಾದರೂ, ಕೆಲವು ಧಣಿಗಳು ಮತ್ತು ಅವರ ದಾಸರ ನಡುವೆ ಹೃದಯೋಲ್ಲಾಸದ ಅನಿಸಿಕೆಗೆ ಪುರಾವೆಯನ್ನು ಕೊಡುವ ಹೇರಳವಾದ ಬರಹಗಳೂ ಇವೆ” ಎಂದು ವಿದ್ವಾಂಸರಾದ ಜಾನ್ ಬಾರ್ಕ್ಲೆ ಹೇಳುತ್ತಾರೆ.
*ಪ್ರಾಚೀನ ಸಮಯಗಳಲ್ಲಿ ದೇವರ ಜನರ ನಡುವಿನ ದಾಸತ್ವದ ಕುರಿತಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತವಾದ ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಎಂಬ ಪುಸ್ತಕದ ಸಂಪುಟ 2, 977-9ನೆಯ ಪುಟಗಳನ್ನು ನೋಡಿರಿ.