ಅಧ್ಯಾಯ 6
“ವಿಧೇಯತೆಯನ್ನು ಕಲಿತುಕೊಂಡನು”
1, 2. ತನ್ನ ಮಗನು ವಿಧೇಯತೆ ತೋರಿಸಿದಾಗ ಪ್ರೀತಿಪರ ತಂದೆಗೆ ಸಂತೋಷವಾಗಲು ಕಾರಣವೇನು? ಅವನ ಭಾವನೆಗಳು ಯೆಹೋವನ ಭಾವನೆಗಳನ್ನು ಹೇಗೆ ಪ್ರತಿಫಲಿಸುತ್ತವೆ?
ಮಗನು ಗೆಳೆಯರೊಂದಿಗೆ ಸೇರಿ ಆಟವಾಡುತ್ತಿರುವುದನ್ನು ತಂದೆ ಕಿಟಕಿಯಿಂದ ನೋಡುತ್ತಿದ್ದಾನೆ. ಆ ಮಕ್ಕಳ ಬಳಿಯಿಂದ ಎಗರಿದ ಚೆಂಡು ಮೈದಾನವನ್ನು ಬಿಟ್ಟು ರಸ್ತೆಯ ಕಡೆಗೆ ನುಗ್ಗುತ್ತದೆ. ಆ ಹುಡುಗನ ದೃಷ್ಟಿ ಆ ಚೆಂಡನ್ನೇ ಹಿಂಬಾಲಿಸುತ್ತದೆ. ಓಡಿ ಹೋಗಿ ಅದನ್ನು ರಸ್ತೆಯಿಂದ ಎತ್ತಿಕೊಂಡು ಬರುವಂತೆ ಗೆಳೆಯನೊಬ್ಬ ಕೂಗುತ್ತಾನೆ. ಆದರೆ ಆ ಹುಡುಗ ಸಾಧ್ಯವಿಲ್ಲವೆಂಬಂತೆ ತಲೆಯಾಡಿಸುತ್ತಾ ‘ನಾನು ರಸ್ತೆಗೆ ಹೋಗಲ್ಲ’ ಎಂದು ಹೇಳುತ್ತಾನೆ. ದೂರದಿಂದ ಗಮನಿಸುತ್ತಿದ್ದ ತಂದೆ ಇದನ್ನು ಕೇಳಿ ಮಂದಹಾಸ ಬೀರುತ್ತಾನೆ.
2 ತಂದೆಯ ಈ ಸಂತೋಷಕ್ಕೆ ಕಾರಣವೇನು? ರಸ್ತೆಗೆ ಒಬ್ಬನೇ ಹೋಗಬಾರದೆಂದು ಅವನು ತನ್ನ ಮಗನಿಗೆ ಹೇಳಿದ್ದನು. ತಂದೆ ತನ್ನನ್ನು ನೋಡುತ್ತಿದ್ದಾರೆ ಎಂದು ಹುಡುಗನಿಗೆ ಗೊತ್ತಿಲ್ಲದಿದ್ದರೂ ಅವನು ತಂದೆಯ ಮಾತಿಗೆ ವಿಧೇಯನಾಗಿದ್ದನು. ಅದನ್ನು ನೋಡಿದ ತಂದೆ ತನ್ನ ಮಗ ವಿಧೇಯತೆಯನ್ನು ಕಲಿಯುತ್ತಿದ್ದಾನೆ ಮತ್ತು ತುಂಬಾ ಸುರಕ್ಷಿತನಾಗಿದ್ದಾನೆಂದು ತಿಳಿದು ಸಂತೋಷಪಡುತ್ತಾನೆ. ಇಲ್ಲಿ ತಿಳಿಸಲಾಗಿರುವ ತಂದೆ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನ ಭಾವನೆಗಳನ್ನು ಪ್ರತಿಫಲಿಸುತ್ತಿದ್ದಾನೆ. ನಾವು ನಂಬಿಗಸ್ತರಾಗಿದ್ದು ದೇವರು ನಮಗೋಸ್ಕರ ಕಾದಿರಿಸಿರುವ ಸುಂದರ ಭವಿಷ್ಯತ್ತನ್ನು ನೋಡಲು ಬದುಕಿರಬೇಕಾದರೆ ಆತನಲ್ಲಿ ಭರವಸೆಯಿಡಲು ಹಾಗೂ ಆತನಿಗೆ ವಿಧೇಯರಾಗಿರಲು ಕಲಿಯುವುದು ಅತ್ಯಗತ್ಯ ಎಂಬುದು ದೇವರಿಗೆ ಗೊತ್ತಿದೆ. (ಜ್ಞಾನೋಕ್ತಿ 3:5, 6) ಅದಕ್ಕಾಗಿಯೇ ಮಾನವರಲ್ಲೇ ಅತಿ ಶ್ರೇಷ್ಠ ಬೋಧಕನೊಬ್ಬನನ್ನು ನಮಗಾಗಿ ಕಳುಹಿಸಿಕೊಟ್ಟನು.
3, 4. ಯೇಸು ‘ವಿಧೇಯತೆಯನ್ನು ಕಲಿತು ಪರಿಪೂರ್ಣಗೊಳಿಸಲ್ಪಟ್ಟದ್ದು’ ಹೇಗೆ? ದೃಷ್ಟಾಂತಿಸಿ.
3 ಬೈಬಲ್ ಯೇಸುವಿನ ಕುರಿತು ವಿಸ್ಮಯಕರವಾದ ಮಾತೊಂದನ್ನು ತಿಳಿಸುತ್ತದೆ: “ಅವನು ಮಗನಾಗಿದ್ದರೂ ತಾನು ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು; ಅವನು ಪರಿಪೂರ್ಣಗೊಳಿಸಲ್ಪಟ್ಟ ಬಳಿಕ ತನಗೆ ವಿಧೇಯರಾಗಿರುವವರೆಲ್ಲರ ನಿತ್ಯ ರಕ್ಷಣೆಗೆ ಕಾರಣನಾದನು.” (ಇಬ್ರಿಯ 5:8, 9) ಈ ಮಗನು ಸ್ವರ್ಗದಲ್ಲಿ ಅಸಂಖ್ಯಾತ ಯುಗಗಳಿಂದ ಅಸ್ತಿತ್ವದಲ್ಲಿದ್ದನು. ಸೈತಾನ ಮತ್ತವನ ಸಂಗಡಿಗರಾದ ದಂಗೆಕೋರ ದೇವದೂತರು ದೇವರಿಗೆ ಅವಿಧೇಯರಾಗಿದ್ದನ್ನು ಅವನು ಕಣ್ಣಾರೆ ಕಂಡಿದ್ದನು. ಆದರೆ ಈ ಜ್ಯೇಷ್ಠಪುತ್ರನು ಮಾತ್ರ ಎಂದಿಗೂ ಅವರೊಂದಿಗೆ ಕೈಜೋಡಿಸಲಿಲ್ಲ. ದೇವಪ್ರೇರಿತವಾದ ಪ್ರವಾದನೆ, “ನಾನು ಎದುರು ಬೀಳಲಿಲ್ಲ” ಎಂಬ ಮಾತನ್ನು ಅವನಿಗೆ ಅನ್ವಯಿಸುತ್ತದೆ. (ಯೆಶಾಯ 50:5) ಮಗನು ಈ ರೀತಿ ಪರಿಪೂರ್ಣವಾಗಿ ವಿಧೇಯನಾಗಿರುವಲ್ಲಿ, “ವಿಧೇಯತೆಯನ್ನು ಕಲಿತುಕೊಂಡನು” ಎಂಬ ಮಾತು ಅವನಿಗೆ ಹೇಗೆ ಅನ್ವಯವಾಗುತ್ತದೆ? ಈಗಾಗಲೇ ಪರಿಪೂರ್ಣನಾಗಿರುವ ವ್ಯಕ್ತಿ ‘ಪರಿಪೂರ್ಣಗೊಳಿಸಲ್ಪಡುವುದು’ ಹೇಗೆ?
4 ಉದಾಹರಣೆಯೊಂದನ್ನು ಪರಿಗಣಿಸಿ. ಸೈನಿಕನೊಬ್ಬನ ಬಳಿ ಕಬ್ಬಿಣದ ಖಡ್ಗವಿದೆ. ಅದನ್ನು ಇಷ್ಟರವರೆಗೆ ಯುದ್ಧದಲ್ಲಿ ಬಳಸಿರದ ಕಾರಣ ಅದರ ಗುಣಮಟ್ಟ ಪರೀಕ್ಷೆಯಾಗಿಲ್ಲ. ಆದರೂ ಅದರಲ್ಲೇನೂ ಕುಂದುಕೊರತೆಗಳಿಲ್ಲ, ನೋಡಲೂ ಚೆನ್ನಾಗಿದೆ. ಹಾಗಿದ್ದರೂ ಅವನದನ್ನು ಕೊಟ್ಟು ಗಟ್ಟಿಮುಟ್ಟಾದ ಉಕ್ಕಿನ ಖಡ್ಗವನ್ನು ಖರೀದಿಸುತ್ತಾನೆ. ಈ ಹೊಸ ಖಡ್ಗವು ಈಗಾಗಲೇ ಅನೇಕ ಯುದ್ಧಗಳನ್ನು ಗೆದ್ದು ಬಂದು ಅದರ ಗುಣಮಟ್ಟ ದೃಢಪಟ್ಟಿದೆ. ಈ ಹೊಸ ಖಡ್ಗವನ್ನು ಖರೀದಿಸಿದ್ದು ನಿಜಕ್ಕೂ ಜಾಣತನವಾಗಿದೆ ಅಲ್ಲವೇ? ಅದೇ ರೀತಿ, ಯೇಸು ಭೂಮಿಗೆ ಬರುವ ಮೊದಲು ತೋರಿಸಿದ ವಿಧೇಯತೆಯಲ್ಲಿ ಯಾವುದೇ ಕುಂದುಕೊರತೆಗಳಿರಲಿಲ್ಲ. ಆದರೆ ಭೂಮಿಗೆ ಬಂದಾಗ ಅವನು ತೋರಿಸಿದ ವಿಧೇಯತೆಯು ಸಂಪೂರ್ಣವಾಗಿ ಭಿನ್ನವಾಗಿತ್ತು. ಅದು ಈಗ ಪರೀಕ್ಷಿಸಲ್ಪಟ್ಟು ದೃಢಪಟ್ಟಿತ್ತು. ಹೇಗಂದರೆ, ಅದು ಅನೇಕ ಪರೀಕ್ಷೆಗಳನ್ನು ಗೆದ್ದು ನಿಂತಿತ್ತು. ಯೇಸು ಸ್ವರ್ಗದಲ್ಲಿ ಅಂಥ ಪರೀಕ್ಷೆಗಳನ್ನು ಎಂದೂ ಎದುರಿಸಿರಲಿಲ್ಲ.
5. ಯೇಸುವಿನ ವಿಧೇಯತೆ ಅಷ್ಟು ಪ್ರಾಮುಖ್ಯವಾಗಿತ್ತೇಕೆ? ಈ ಅಧ್ಯಾಯದಲ್ಲಿ ನಾವು ಏನನ್ನು ಪರಿಗಣಿಸಲಿದ್ದೇವೆ?
5 ಭೂಮಿಯಲ್ಲಿ ತನಗೆ ನೇಮಿಸಲಾದ ಕೆಲಸವನ್ನು ಪೂರೈಸಬೇಕಾದರೆ ಯೇಸು ವಿಧೇಯತೆ ತೋರಿಸುವುದು ತುಂಬ ಪ್ರಾಮುಖ್ಯವಾಗಿತ್ತು. ನಮ್ಮ ಮೊದಲ ಹೆತ್ತವರು ತಾವು ಯೆಹೋವನಿಗೆ ವಿಧೇಯರಾಗಿರುತ್ತೇವೆ ಎಂಬುದನ್ನು ತೋರಿಸಲು ತಪ್ಪಿಹೋಗಿದ್ದರು. ಆದರೆ “ಕೊನೆಯ ಆದಾಮನಾದ” ಯೇಸು ಪರೀಕ್ಷೆಗಳ ಹೊರತೂ ತಾನು ದೇವರಿಗೆ ವಿಧೇಯನಾಗಿರುವೆನೆಂದು ತೋರಿಸಲಿಕ್ಕಾಗಿ ಇಲ್ಲಿಗೆ ಬಂದನು. (1 ಕೊರಿಂಥ 15:45) ಆದರೂ ಯೇಸು ಯಾಂತ್ರಿಕವಾಗಿ ವಿಧೇಯತೆ ತೋರಿಸಲಿಲ್ಲ. ಅವನು ತನು, ಮನ, ಹೃದಯದಿಂದ ವಿಧೇಯನಾದನು. ಮಾತ್ರವಲ್ಲ ಸಂತೋಷದಿಂದ ವಿಧೇಯನಾದನು. ತಂದೆಯ ಚಿತ್ತವನ್ನು ಮಾಡುವುದೇ ಅವನಿಗೆ ಆಹಾರಕ್ಕಿಂತ ಪ್ರಾಮುಖ್ಯವಾಗಿತ್ತು! (ಯೋಹಾನ 4:34) ಯೇಸುವಿನ ವಿಧೇಯತೆಯನ್ನು ಅನುಕರಿಸಲು ನಮಗೆ ಯಾವುದು ಸಹಾಯ ಮಾಡುವುದು? ಮೊದಲು ನಾವು ಅವನ ಇರಾದೆ ಏನಾಗಿತ್ತು ಎಂಬುದನ್ನು ಪರಿಗಣಿಸೋಣ. ಅವನಲ್ಲಿದ್ದ ಅದೇ ಇರಾದೆಗಳನ್ನು ಇಟ್ಟುಕೊಳ್ಳುವುದು ಪ್ರಲೋಭನೆಗಳನ್ನು ನಿಗ್ರಹಿಸಲು ಹಾಗೂ ದೇವರ ಚಿತ್ತವನ್ನು ಮಾಡಲು ನಮಗೆ ನೆರವಾಗುವುದು. ಅನಂತರ ಕ್ರಿಸ್ತನಂತೆ ವಿಧೇಯತೆ ತೋರಿಸುವಾಗ ಸಿಗುವ ಕೆಲವು ಆಶೀರ್ವಾದಗಳನ್ನು ನಾವು ಪರಿಗಣಿಸೋಣ.
ಯಾವ ಇರಾದೆಯಿಂದ ಯೇಸು ವಿಧೇಯತೆ ತೋರಿಸಿದನು?
6, 7. ಯಾವ ಇರಾದೆಯಿಂದ ಯೇಸು ವಿಧೇಯತೆ ತೋರಿಸಿದನು?
6 ಯೇಸುವಿನ ವಿಧೇಯತೆಯು ಅವನ ಹೃದಯದಿಂದ ಹೊರಹೊಮ್ಮಿತ್ತು. ನಾವು 3ನೇ ಅಧ್ಯಾಯದಲ್ಲಿ ನೋಡಿದಂತೆ ಅವನು ದೀನಹೃದಯದ ವ್ಯಕ್ತಿಯಾಗಿದ್ದನು. ಅಹಂಭಾವವಾದರೋ ವಿಧೇಯತೆ ತೋರಿಸದಂತೆ ಜನರನ್ನು ತಡೆಯುತ್ತದೆ. ದೀನಭಾವವಾದರೋ ಯೆಹೋವನಿಗೆ ವಿಧೇಯತೆ ತೋರಿಸುವಂತೆ ನಮಗೆ ಸಹಾಯಮಾಡುತ್ತದೆ. (ವಿಮೋಚನಕಾಂಡ 5:1, 2; 1 ಪೇತ್ರ 5:5, 6) ಯೇಸುವಿನ ವಿಧೇಯತೆಯು ಅವನು ಏನನ್ನು ಪ್ರೀತಿಸಿದನೋ ಮತ್ತು ಏನನ್ನು ದ್ವೇಷಿಸಿದನೋ ಅದರಿಂದ ಸಹ ಪ್ರಚೋದಿಸಲ್ಪಟ್ಟಿತ್ತು.
7 ಎಲ್ಲಕ್ಕಿಂತ ಮಿಗಿಲಾಗಿ, ಯೇಸು ತನ್ನ ಸ್ವರ್ಗೀಯ ತಂದೆಯಾದ ಯೆಹೋವನನ್ನು ಪ್ರೀತಿಸಿದನು. ಆ ಪ್ರೀತಿಯ ಕುರಿತು ಹೆಚ್ಚಿನ ವಿವರಗಳನ್ನು ನಾವು 13ನೇ ಅಧ್ಯಾಯದಲ್ಲಿ ಕಲಿಯಲಿದ್ದೇವೆ. ಅಂಥ ಪ್ರೀತಿಯೇ ಯೇಸುವಿನಲ್ಲಿ ದೇವಭಯವನ್ನು ಹುಟ್ಟಿಸಿತು. ಅವನಿಗೆ ಯೆಹೋವನ ಮೇಲೆ ಎಷ್ಟೊಂದು ಪ್ರೀತಿ ಮತ್ತು ಪೂಜ್ಯಭಾವ ಇತ್ತೆಂದರೆ ತನ್ನ ತಂದೆಯನ್ನು ಅಪ್ರಸನ್ನಗೊಳಿಸಲು ಅವನು ಭಯಪಟ್ಟನು. ಇಂಥ ದೇವಭಯವೇ ಯೇಸುವಿನ ಪ್ರಾರ್ಥನೆಗಳು ಅನುಗ್ರಹಪೂರ್ವಕವಾಗಿ ಕೇಳಲ್ಪಡಲು ಒಂದು ಕಾರಣವಾಗಿತ್ತು. (ಇಬ್ರಿಯ 5:7) ದೇವಭಯವು, ಮೆಸ್ಸೀಯ ರಾಜನಾದ ಯೇಸುವಿನ ಆಳ್ವಿಕೆಯ ಗಮನಾರ್ಹವಾದ ಒಂದು ಲಕ್ಷಣವೂ ಆಗಿದೆ.—ಯೆಶಾಯ 11:3.
8, 9. ಪ್ರವಾದನೆ ತಿಳಿಸಿದಂತೆ ನೀತಿ ಹಾಗೂ ದುಷ್ಟತನದ ಕಡೆಗೆ ಯೇಸುವಿಗೆ ಯಾವ ಭಾವನೆಗಳಿದ್ದವು? ಅವುಗಳನ್ನು ಅವನು ಹೇಗೆ ವ್ಯಕ್ತಪಡಿಸಿದನು?
8 ಯೆಹೋವನನ್ನು ಪ್ರೀತಿಸುವುದರಲ್ಲಿ ಆತನು ದ್ವೇಷಿಸುವ ವಿಷಯಗಳನ್ನು ದ್ವೇಷಿಸುವುದು ಸಹ ಅಡಕವಾಗಿದೆ. ಉದಾಹರಣೆಗೆ, ಮೆಸ್ಸೀಯ ರಾಜನ ಕುರಿತ ಈ ಪ್ರವಾದನೆಯನ್ನು ಗಮನಿಸಿ: “ನೀನು ನೀತಿಯನ್ನು ಪ್ರೀತಿಮಾಡುತ್ತೀ; ದುಷ್ಟತನವನ್ನು ದ್ವೇಷಮಾಡುತ್ತೀ. ಆದ್ದರಿಂದ ದೇವರು, ನಿನ್ನ ದೇವರು, ನಿನ್ನ ಸಂಗಡಿಗರಿಗಿಂತ ಹೆಚ್ಚಾಗಿ ನಿನ್ನನ್ನು ಆನಂದ ತೈಲದಿಂದ ಅಭಿಷೇಕಿಸಿದ್ದಾನೆ.” (ಕೀರ್ತನೆ 45:7, NIBV) ಇಲ್ಲಿ ತಿಳಿಸಲಾದ ಯೇಸುವಿನ ‘ಸಂಗಡಿಗರು’ ರಾಜ ದಾವೀದನ ವಂಶಾವಳಿಯಿಂದ ಬಂದ ಇತರ ರಾಜರುಗಳಾಗಿದ್ದರು. ತನ್ನ ರಾಜ್ಯಾಭಿಷೇಕದ ಸಮಯದಲ್ಲಿ ಅವರೆಲ್ಲರಿಗಿಂತಲೂ ಹೆಚ್ಚು ಆನಂದ ಪಡಲು ಯೇಸುವಿಗೆ ಸಕಾರಣವಿತ್ತು. ಏಕೆ? ಏಕೆಂದರೆ, ಅವನಿಗೆ ಸಿಗಲಿದ್ದ ಬಹುಮಾನ ಅವರದ್ದಕ್ಕಿಂತ ಹೆಚ್ಚಿನದ್ದಾಗಿತ್ತು ಮತ್ತು ಅವನ ಅರಸುತನದ ಪ್ರಯೋಜನಗಳೋ ಅಪಾರ. ನೀತಿಗಾಗಿ ಪ್ರೀತಿ ಹಾಗೂ ದುಷ್ಟತನಕ್ಕಾಗಿ ದ್ವೇಷವಿದ್ದುದರಿಂದ ಅವನು ಎಲ್ಲಾ ವಿಷಯಗಳಲ್ಲೂ ದೇವರಿಗೆ ವಿಧೇಯನಾಗಲು ಪ್ರಚೋದಿಸಲ್ಪಟ್ಟನು ಮತ್ತು ಅವನಿಗೆ ಬಹುಮಾನ ದಕ್ಕಿದ್ದು ಇದಕ್ಕಾಗಿಯೇ.
9 ನೀತಿ ಹಾಗೂ ದುಷ್ಟತನದ ಕುರಿತು ಯೇಸು ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದು ಹೇಗೆ? ಉದಾಹರಣೆಗೆ, ಸುವಾರ್ತೆ ಸಾರುವ ವಿಷಯದಲ್ಲಿ ತಾನು ಕೊಟ್ಟ ನಿರ್ದೇಶನಕ್ಕೆ ಶಿಷ್ಯರು ವಿಧೇಯರಾಗಿ ಒಳ್ಳೆಯ ಫಲಿತಾಂಶಗಳನ್ನು ಪಡೆದುಕೊಂಡಾಗ ಯೇಸು ಹೇಗೆ ಪ್ರತಿಕ್ರಿಯಿಸಿದನು? ಅವನು ಅತ್ಯಾನಂದಪಟ್ಟನು. (ಲೂಕ 10:1, 17, 21) ಆದರೆ, ಯೆರೂಸಲೇಮಿನ ಜನರು ತನ್ನ ಅಕ್ಕರೆಯ ನೆರವನ್ನು ತಿರಸ್ಕರಿಸಿ ಪದೇ ಪದೇ ಅವಿಧೇಯ ಮನೋಭಾವ ತೋರಿಸಿದಾಗ ಯೇಸುವಿಗೆ ಹೇಗನಿಸಿತು? ಆ ಪಟ್ಟಣದ ದಂಗೆಕೋರ ನಡತೆಯನ್ನು ನೋಡಿ ಅವನು ಅತ್ತುಬಿಟ್ಟನು. (ಲೂಕ 19:41, 42) ಜನರ ಉತ್ತಮ ನಡತೆ ಹಾಗೂ ಕೆಟ್ಟ ನಡತೆ, ಇವೆರಡೂ ಯೇಸುವಿನ ಮನದ ಮೇಲೆ ಗಾಢವಾದ ಪ್ರಭಾವಬೀರುತ್ತಿತ್ತು.
10. ನೀತಿ ಕಾರ್ಯಗಳು ಮತ್ತು ದುಷ್ಕೃತ್ಯಗಳ ವಿಷಯದಲ್ಲಿ ನಾವು ಯಾವ ಭಾವನೆಗಳನ್ನು ಬೆಳೆಸಿಕೊಳ್ಳಬೇಕು? ಅದಕ್ಕಾಗಿ ನಮಗೆ ಯಾವುದು ಸಹಾಯ ಮಾಡುವುದು?
10 ಯೇಸುವಿನ ಭಾವನೆಗಳ ಕುರಿತು ಧ್ಯಾನಿಸುವುದು ನಾವು ಯಾವ ಇರಾದೆಯಿಂದ ಯೆಹೋವನಿಗೆ ವಿಧೇಯತೆ ತೋರಿಸುತ್ತಿದ್ದೇವೆ ಎಂಬುದನ್ನು ಪರಿಶೀಲಿಸಲು ನೆರವಾಗುವುದು. ನಾವು ಅಪರಿಪೂರ್ಣರಾಗಿದ್ದರೂ ಉತ್ತಮ ಕಾರ್ಯಗಳ ಕಡೆಗೆ ಒಡಲಾಳದ ಪ್ರೀತಿಯನ್ನು ಮತ್ತು ದುಷ್ಕೃತ್ಯಗಳ ಕಡೆಗೆ ಕಡುದ್ವೇಷವನ್ನು ಬೆಳೆಸಿಕೊಳ್ಳಬಲ್ಲೆವು. ಅದಕ್ಕಾಗಿ ನಾವು ಯೆಹೋವನಲ್ಲಿ ಪ್ರಾರ್ಥಿಸುತ್ತಾ, ಆತನಲ್ಲಿರುವ ಹಾಗೂ ಆತನ ಪುತ್ರನಲ್ಲಿರುವ ಭಾವನೆಗಳನ್ನು ಬೆಳೆಸಿಕೊಳ್ಳಲು ಸಹಾಯವನ್ನು ಕೇಳಿಕೊಳ್ಳಬೇಕು. (ಕೀರ್ತನೆ 51:10) ಅದೇ ಸಮಯ, ಅಂಥ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡುವ ಪ್ರಭಾವಗಳಿಂದಲೂ ದೂರವಿರಬೇಕು. ಮನೋರಂಜನೆ ಹಾಗೂ ಒಡನಾಡಿಗಳನ್ನು ಅತಿ ಜಾಗರೂಕತೆಯಿಂದ ಆಯ್ಕೆಮಾಡಿಕೊಳ್ಳುವುದೂ ಅಗತ್ಯ. (ಜ್ಞಾನೋಕ್ತಿ 13:20; ಫಿಲಿಪ್ಪಿ 4:8) ಕ್ರಿಸ್ತನಲ್ಲಿದ್ದ ಅದೇ ಇರಾದೆಗಳು ನಮ್ಮಲ್ಲೂ ಇರುವಲ್ಲಿ ನಮ್ಮ ವಿಧೇಯತೆ ಕೇವಲ ಹೊರತೋರಿಕೆಯಾಗಿರುವುದಿಲ್ಲ. ನಾವು ಒಳ್ಳೇದನ್ನೇ ಮಾಡುತ್ತೇವೆ, ಏಕೆಂದರೆ ನಾವದನ್ನು ಪ್ರೀತಿಸುತ್ತೇವೆ. ನಾವು ಕೆಟ್ಟ ನಡತೆಯನ್ನು ತೊರೆಯುತ್ತೇವೆ, ಸಿಕ್ಕಿಬೀಳುತ್ತೇವೋ ಎಂಬ ಭಯದಿಂದಲ್ಲ, ಬದಲಾಗಿ ಅಂಥ ನಡತೆಯನ್ನು ನಾವು ದ್ವೇಷಿಸುವುದರಿಂದಲೇ.
“ಅವನು ಯಾವ ಪಾಪವನ್ನೂ ಮಾಡಲಿಲ್ಲ”
11, 12. (ಎ) ಯೇಸುವಿನ ಶುಶ್ರೂಷೆಯ ಆರಂಭದಲ್ಲಿ ಏನಾಯಿತು? (ಬಿ) ಸೈತಾನನು ಯೇಸುವಿಗೆ ಮೊದಲು ಪ್ರಲೋಭನೆ ಒಡ್ಡಿದ್ದು ಹೇಗೆ? ಯಾವ ವಂಚನೆಯೊಂದಿಗೆ?
11 ಯೇಸು ಪಾಪವನ್ನು ದ್ವೇಷಿಸುತ್ತಿದ್ದುದರಿಂದ ಶುಶ್ರೂಷೆಯ ಆರಂಭದಲ್ಲೇ ಅವನಿಗೆ ಪರೀಕ್ಷೆ ಎದುರಾಯಿತು. ಯೇಸು ದೀಕ್ಷಾಸ್ನಾನದ ನಂತರ ಆಹಾರ ತೆಗೆದುಕೊಳ್ಳದೇ 40 ದಿನ ಹಗಲಿರುಳು ಅರಣ್ಯದಲ್ಲಿ ಕಳೆದನು. ಆ ಸಮಯದಲ್ಲಿ ಸೈತಾನನು ಅವನಿಗೆ ಪ್ರಲೋಭನೆ ಒಡ್ಡಲು ಬಂದನು. ಪಿಶಾಚ ಎಂಥ ಮಹಾವಂಚಕ ಎಂಬುದನ್ನು ಸ್ವಲ್ಪ ಗಮನಿಸಿ.—ಮತ್ತಾಯ 4:1-11.
12 ಸೈತಾನನು ಮೊದಲು ಹೀಗನ್ನುತ್ತಾನೆ: “ನೀನು ದೇವರ ಮಗನಾಗಿರುವಲ್ಲಿ ಈ ಕಲ್ಲುಗಳಿಗೆ ರೊಟ್ಟಿಗಳಾಗುವಂತೆ ಹೇಳು.” (ಮತ್ತಾಯ 4:3) ಅಷ್ಟೊಂದು ದೀರ್ಘ ಸಮಯದಿಂದ ಉಪವಾಸವಿದ್ದ ಯೇಸುವಿನ ಸ್ಥಿತಿ ಹೇಗಿತ್ತು? “ಅವನಿಗೆ ಹಸಿವಾಯಿತು” ಎಂದು ಬೈಬಲ್ ತಿಳಿಸುತ್ತದೆ. (ಮತ್ತಾಯ 4:2) ಅಂದರೆ, ಹಸಿವಿನ ಸಮಯದಲ್ಲಿ ಸಹಜವಾಗಿಯೇ ಆಹಾರದ ಹಂಬಲಿಕೆ ಉಂಟಾಗುತ್ತದೆ ಎಂಬುದನ್ನು ತಿಳಿದಿದ್ದ ಸೈತಾನನು ಅದರ ಲಾಭ ಪಡೆಯಲು ಪ್ರಯತ್ನಿಸಿದನು. ಅದೂ ಸಹ ಯೇಸು ಶಾರೀರಿಕವಾಗಿ ಬಳಲುವ ಸಮಯದ ವರೆಗೂ ಅವನು ಕಾದಿದ್ದನು. ಅಷ್ಟೇ ಅಲ್ಲ, “ನೀನು ದೇವರ ಮಗನಾಗಿರುವಲ್ಲಿ” ಎಂಬ ಸೈತಾನನ ಮೂದಲಿಕೆಯನ್ನು ಗಮನಿಸಿ. ಯೇಸು “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾಗಿದ್ದಾನೆ ಎಂಬುದು ಸೈತಾನನಿಗೆ ಚೆನ್ನಾಗಿಯೇ ಗೊತ್ತಿತ್ತು! (ಕೊಲೊಸ್ಸೆ 1:15) ಇಷ್ಟೆಲ್ಲಾ ಆದರೂ ಅವಿಧೇಯತೆಯ ಮಾರ್ಗಕ್ಕೆ ತನ್ನನ್ನು ತಳ್ಳುವಂತೆ ಯೇಸು ಸೈತಾನನಿಗೆ ಬಿಟ್ಟುಕೊಡಲಿಲ್ಲ. ತನ್ನ ಬಲವನ್ನು ಸ್ವಾರ್ಥಕ್ಕಾಗಿ ಉಪಯೋಗಿಸುವುದು ದೇವರ ಚಿತ್ತಕ್ಕೆ ವಿರೋಧವಾಗಿದೆ ಎಂಬುದು ಯೇಸುವಿಗೆ ಗೊತ್ತಿತ್ತು. ಆದ್ದರಿಂದಲೇ ಅದನ್ನು ನಿರಾಕರಿಸಿದನು. ಹೀಗೆ ಪೋಷಣೆ ಮತ್ತು ನಿರ್ದೇಶನಕ್ಕಾಗಿ ತಾನು ದೀನತೆಯಿಂದ ಯೆಹೋವನ ಮೇಲೆ ಆತುಕೊಂಡಿದ್ದೇನೆ ಎಂಬುದನ್ನು ತೋರಿಸಿಕೊಟ್ಟನು.—ಮತ್ತಾಯ 4:4.
13-15. (ಎ) ಯೇಸುವಿಗೆ ಸೈತಾನನೊಡ್ಡಿದ ಎರಡನೇ ಮತ್ತು ಮೂರನೇ ಪ್ರಲೋಭನೆ ಯಾವುದು? ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? (ಬಿ) ಸೈತಾನನ ವಿರುದ್ಧ ಯೇಸು ಸದಾ ಎಚ್ಚರವಾಗಿದ್ದನು ಎಂಬುದು ನಮಗೆ ಹೇಗೆ ಗೊತ್ತಾಗುತ್ತದೆ?
13 ಎರಡನೆಯ ಬಾರಿ ಪ್ರಲೋಭನೆ ಒಡ್ಡುವಾಗ, ಸೈತಾನನು ಯೇಸುವನ್ನು ಕರೆದುಕೊಂಡು ಹೋಗಿ ಆಲಯದ ಎತ್ತರವಾದ ಕೈಪಿಡಿಗೋಡೆಯ ಮೇಲೆ ನಿಲ್ಲಿಸಿದನು. ಆ ಎತ್ತರವಾದ ಸ್ಥಳದಿಂದ ಕೆಳಗೆ ಧುಮುಕಿ ಸಾಹಸ ಮೆರೆಯುವಂತೆ ಯೇಸುವಿಗೆ ಪ್ರಲೋಭಿಸುತ್ತಾ, ದೇವದೂತರು ಬಂದು ಯೇಸುವನ್ನು ಕಾಪಾಡುವರೆಂದು ಬರೆದಿದೆ ಎಂದು ಕುತಂತ್ರದಿಂದ ದೇವರ ವಾಕ್ಯವನ್ನು ತಿರುಚಿ ಹೇಳಿದನು. ಸ್ವಲ್ಪ ಊಹಿಸಿ, ಒಂದು ವೇಳೆ ಜನರು ಆಲಯದಲ್ಲಿ ಅಂಥ ಅದ್ಭುತವನ್ನು ನೋಡಿದರೆ ಯೇಸುವೇ ವಾಗ್ದಾನಿತ ಮೆಸ್ಸೀಯ ಎಂಬುದರ ಕುರಿತು ಯಾರಾದರೂ ಸಂದೇಹದ ಚಕಾರವೆತ್ತುತ್ತಿದ್ದರೋ? ಮತ್ತು ಜನರು ಯೇಸುವಿನ ಅದ್ಭುತ ಸಾಹಸ ನೋಡಿ ಅವನೇ ಮೆಸ್ಸೀಯನೆಂದು ಅಂಗೀಕರಿಸುವುದಾದರೆ, ಕಷ್ಟ ಸಂಕಷ್ಟಗಳನ್ನು ಅನುಭವಿಸುವ ಪ್ರಮೇಯವೇ ಯೇಸುವಿಗೆ ಬರುತ್ತಿರಲಿಲ್ಲ, ಅಲ್ಲವೇ? ಆದರೆ, ಮೆಸ್ಸೀಯನು ಸಾಧಾರಣ ರೀತಿಯಲ್ಲಿ ತನ್ನ ನೇಮಕವನ್ನು ಪೂರೈಸಬೇಕೆಂಬುದು ಯೆಹೋವನ ಚಿತ್ತವಾಗಿತ್ತೇ ವಿನಃ, ಯಾವುದೇ ಅದ್ಭುತ ಪ್ರದರ್ಶನ ಮಾಡಿ ಜನರನ್ನು ನಂಬಿಸಬೇಕಾಗಿಲ್ಲ ಎಂಬುದು ಯೇಸುವಿಗೆ ಗೊತ್ತಿತ್ತು. (ಯೆಶಾಯ 42:1, 2) ಆದ್ದರಿಂದಲೇ ಯೆಹೋವನಿಗೆ ಅವಿಧೇಯನಾಗಲು ಯೇಸು ಈ ಬಾರಿಯೂ ನಿರಾಕರಿಸಿದನು. ಕೀರ್ತಿಗಳಿಸುವ ಆಮಿಷಕ್ಕೆ ಅವನು ಒಳಗಾಗಲಿಲ್ಲ.
14 ಹಾಗಾದರೆ, ಅಧಿಕಾರದ ಆಮಿಷಕ್ಕೆ ಅವನು ಒಳಗಾದನೋ? ಸೈತಾನನು ಮೂರನೆಯ ಪ್ರಯತ್ನದಲ್ಲಿ, ತನಗೆ ಅಡ್ಡಬಿದ್ದು ಒಂದು ಆರಾಧನಾ ಕ್ರಿಯೆ ಮಾಡುವುದಾದರೆ ಲೋಕದ ಎಲ್ಲ ರಾಜ್ಯಗಳನ್ನು ಕೊಡುವುದಾಗಿ ಯೇಸುವಿಗೆ ತಿಳಿಸಿದನು. ಇದರ ಕುರಿತು ಯೋಚನೆ ಮಾಡಲು ಯೇಸು ಸಮಯಾವಕಾಶ ತಕ್ಕೊಂಡನೋ? ಇಲ್ಲ. “ಸೈತಾನನೇ ತೊಲಗಿಹೋಗು!” ಎಂದು ತಕ್ಷಣವೇ ಹೇಳಿದನು. ಮಾತ್ರವಲ್ಲ, “‘ನಿನ್ನ ದೇವರಾಗಿರುವ ಯೆಹೋವನನ್ನೇ ನೀನು ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆಯನ್ನು ಸಲ್ಲಿಸಬೇಕು’ ಎಂದು ಬರೆದಿದೆ” ಎಂಬುದಾಗಿ ಉತ್ತರಿಸಿದನು. (ಮತ್ತಾಯ 4:10) ಯೆಹೋವನನ್ನು ಬಿಟ್ಟು ಬೇರೆ ದೇವರನ್ನು ಆರಾಧಿಸುವಂತೆ ಯಾವ ವಿಷಯವೂ ಯೇಸುವಿನ ಮನವೊಲಿಸಲು ಸಾಧ್ಯವೇ ಇರಲಿಲ್ಲ. ಈ ಲೋಕದ ಯಾವುದೇ ಅಧಿಕಾರದ ಆಮಿಷವಾಗಲಿ ಪ್ರಭಾವವಾಗಲಿ ಅವಿಧೇಯತೆ ತೋರಿಸುವಂತೆ ಅವನನ್ನು ಕಿಂಚಿತ್ತೂ ಪ್ರೇರಿಸಲಾರದು.
15 ಸೈತಾನನು ತನ್ನ ಪ್ರಯತ್ನಗಳನ್ನು ಅಲ್ಲಿಗೆ ನಿಲ್ಲಿಸಿಬಿಟ್ಟನೋ? ಯೇಸು ಆಜ್ಞಾಪಿಸಿದಾಗಲೇನೋ ಅವನು ಹೋಗಿಬಿಟ್ಟನು. ಆದರೆ ಪಿಶಾಚನು “ಇನ್ನೊಂದು ಅನುಕೂಲವಾದ ಸಂದರ್ಭ ಸಿಗುವ ತನಕ ಅವನನ್ನು ಬಿಟ್ಟುಹೋದನು” ಎಂದು ಲೂಕನ ಸುವಾರ್ತಾ ವೃತ್ತಾಂತವು ಹೇಳುತ್ತದೆ. (ಲೂಕ 4:13) ಹೌದು, ಕೊನೆಯ ವರೆಗೂ ಯೇಸುವನ್ನು ಪ್ರಲೋಭಿಸಲು ಅನುಕೂಲವಾದ ಸಂದರ್ಭಕ್ಕಾಗಿ ಸೈತಾನನು ಹುಡುಕುತ್ತಲೇ ಇದ್ದನು. ಬೈಬಲ್ ಸಹ ಯೇಸು “ಎಲ್ಲ ವಿಷಯಗಳಲ್ಲಿ ಪರೀಕ್ಷಿತನಾದ” ಎಂದು ತಿಳಿಸುತ್ತದೆ. (ಇಬ್ರಿಯ 4:15) ಅಂದರೆ, ಯೇಸು ಪ್ರತಿಕ್ಷಣವೂ ಎಚ್ಚರವಾಗಿರಬೇಕಿತ್ತು. ನಾವು ಸಹ ಸದಾ ಎಚ್ಚರವಾಗಿರಬೇಕು.
16. ಇಂದು ಸೈತಾನನು ದೇವರ ಸೇವಕರನ್ನು ಯಾವ ರೀತಿಯಲ್ಲಿ ಪ್ರಲೋಭನೆಗೆ ಒಡ್ಡುತ್ತಾನೆ? ಅವನ ಪ್ರಯತ್ನಗಳನ್ನು ನಾವು ಹೇಗೆ ನಿರರ್ಥಕಗೊಳಿಸಬಹುದು?
16 ಇಂದಿಗೂ ಸೈತಾನನು ದೇವರ ಸೇವಕರಿಗೆ ಪ್ರಲೋಭನೆ ತಂದೊಡ್ಡುತ್ತಲೇ ಇದ್ದಾನೆ. ವಿಷಾದಕರವಾಗಿ, ಕೆಲವೊಮ್ಮೆ ನಮ್ಮ ಅಪರಿಪೂರ್ಣತೆಯಿಂದಾಗಿ ನಾವು ಸುಲಭವಾಗಿ ಸೈತಾನನ ಗುರಿಹಲಗೆಗಳಾಗಿಬಿಡುತ್ತೇವೆ. ಸೈತಾನನು ಕುತಂತ್ರದಿಂದ ನಮ್ಮಲ್ಲಿರುವ ಸ್ವಾರ್ಥ, ಅಹಂಕಾರ, ಅಧಿಕಾರದ ವ್ಯಾಮೋಹ ಮುಂತಾದ ಪ್ರವೃತ್ತಿಗಳನ್ನೇ ನಮ್ಮ ಮೇಲೆ ಅಸ್ತ್ರವಾಗಿ ಬಳಸುತ್ತಾನೆ. ಪ್ರಾಪಂಚಿಕತೆಯ ಆಶೆತೋರಿಸಿ ಅವನು ಈ ಎಲ್ಲ ಅಸ್ತ್ರಗಳನ್ನು ಒಮ್ಮೆಗೇ ಪ್ರಯೋಗಿಸಿದರೂ ಪ್ರಯೋಗಿಸಬಹುದು! ಆದ್ದರಿಂದ ಯಥಾರ್ಥವಾಗಿ ಸ್ವಪರೀಕ್ಷೆ ಮಾಡಿಕೊಳ್ಳಲು ಸಮಯ ವ್ಯಯಿಸುವುದು ಪ್ರಾಮುಖ್ಯ. ನಾವು 1 ಯೋಹಾನ 2:15-17ರಲ್ಲಿರುವ ಮಾತುಗಳ ಕುರಿತು ಧ್ಯಾನಿಸಬೇಕು. ಹಾಗೆ ಧ್ಯಾನಿಸುವಾಗ, ಈ ವಿಷಯಗಳ ವ್ಯವಸ್ಥೆಯ ಶರೀರದಾಶೆ, ಆಸ್ತಿಪಾಸ್ತಿಗಾಗಿರುವ ಉತ್ಕಟ ಬಯಕೆ ಮತ್ತು ಇತರರ ಮುಂದೆ ಮಿಂಚಬೇಕೆಂಬ ಆಶೆ, ಮುಂತಾದವು ನಮ್ಮ ಸ್ವರ್ಗೀಯ ತಂದೆಯ ಮೇಲಿನ ಪ್ರೀತಿಯನ್ನು ಅಲ್ಪಸ್ವಲ್ಪ ಕಸಿದುಕೊಂಡಿವೆಯೋ ಎಂಬುದಾಗಿ ನಾವು ಕೇಳಿಕೊಳ್ಳಬೇಕು. ಈ ಲೋಕ ಅದರ ಅಧಿಪತಿಯಾದ ಸೈತಾನನಂತೆಯೇ ಗತಿಸಿಹೋಗುತ್ತಿದೆ ಎಂಬುದನ್ನು ನಾವೆಂದೂ ಮರೆಯಬಾರದು. ನಮ್ಮನ್ನು ಪಾಪದಲ್ಲಿ ದೊಬ್ಬಲು ಸೈತಾನನು ಬಳಸುವ ಸಕಲ ತಂತ್ರಗಳನ್ನು ನಿರರ್ಥಕಗೊಳಿಸೋಣ! ಈ ವಿಷಯದಲ್ಲಿ ನಮ್ಮ ನಾಯಕನಾದ ಯೇಸುವಿನಿಂದ ಸ್ಫೂರ್ತಿಗೊಳ್ಳೋಣ. ಏಕೆಂದರೆ, “ಅವನು ಯಾವ ಪಾಪವನ್ನೂ ಮಾಡಲಿಲ್ಲ.”—1 ಪೇತ್ರ 2:22.
‘ನಾನು ಯಾವಾಗಲೂ ಆತನಿಗೆ ಮೆಚ್ಚಿಕೆಯಾಗಿರುವುದನ್ನೇ ಮಾಡುತ್ತೇನೆ’
17. ತನ್ನ ತಂದೆಗೆ ವಿಧೇಯನಾಗಿರುವುದರ ಕುರಿತು ಯೇಸುವಿಗೆ ಹೇಗನಿಸಿತು? ಈ ಬಗ್ಗೆ ಕೆಲವರು ಏನು ಹೇಳಬಹುದು?
17 ವಿಧೇಯತೆಯೆಂದರೆ ಕೇವಲ ಪಾಪ ಮಾಡುವುದರಿಂದ ದೂರವಿರುವುದಷ್ಟೇ ಅಲ್ಲ. ಕ್ರಿಸ್ತನು ತನ್ನ ತಂದೆಯ ಪ್ರತಿಯೊಂದು ಆಜ್ಞೆಯನ್ನು ಚಾಚೂತಪ್ಪದೆ ಪಾಲಿಸಿದನು. ‘ನಾನು ಯಾವಾಗಲೂ ಆತನಿಗೆ ಮೆಚ್ಚಿಕೆಯಾಗಿರುವುದನ್ನೇ ಮಾಡುತ್ತೇನೆ’ ಎಂದು ಅವನು ಹೇಳಿದನು. (ಯೋಹಾನ 8:29) ಈ ರೀತಿಯಲ್ಲಿ ವಿಧೇಯತೆ ತೋರಿಸಿದ್ದು ಯೇಸುವಿಗೆ ಅತ್ಯಾನಂದ ತಂದಿತು. ವಿಧೇಯತೆ ತೋರಿಸಲು ಯೇಸುವಿಗೆ ಅಷ್ಟೇನೂ ಕಷ್ಟವಿರಲಿಲ್ಲವೆಂದು ಕೆಲವರು ಹೇಳಬಹುದು. ಅವನು ಪರಿಪೂರ್ಣನಾದ ಯೆಹೋವನಿಗೆ ಮಾತ್ರ ಲೆಕ್ಕಕೊಟ್ಟಿದ್ದರೆ ಸಾಕಿತ್ತು, ಆದರೆ ನಾವು ಅಧಿಕಾರದಲ್ಲಿರುವ ಅಪರಿಪೂರ್ಣ ಮಾನವರಿಗೂ ವಿಧೇಯತೆ ತೋರಿಸಬೇಕಲ್ಲ ಎಂದವರು ಎಣಿಸಬಹುದು. ನಿಜ ಹೇಳಬೇಕೆಂದರೆ, ಯೇಸು ಅಧಿಕಾರದಲ್ಲಿದ್ದ ಅಪರಿಪೂರ್ಣ ಮಾನವರಿಗೆ ಸಹ ವಿಧೇಯನಾಗಿದ್ದನು.
18. ಯೇಸು ಬಾಲಕನಾಗಿದ್ದಾಗ ವಿಧೇಯತೆಯ ವಿಷಯದಲ್ಲಿ ಯಾವ ಮಾದರಿಯನ್ನಿಟ್ಟನು?
18 ಯೇಸು ತನ್ನ ಅಪರಿಪೂರ್ಣ ಮಾನವ ಹೆತ್ತವರಾದ ಯೋಸೇಫ ಮತ್ತು ಮರಿಯಳ ಹತೋಟಿಯಲ್ಲಿಯೇ ಬೆಳೆದು ದೊಡ್ಡವನಾದನು. ಬಹುಶಃ ಬೇರೆ ಮಕ್ಕಳಿಗಿಂತಲೂ ಚೆನ್ನಾಗಿ ಅವನಿಗೆ ತನ್ನ ಹೆತ್ತವರ ಲೋಪದೋಷಗಳು ಗೊತ್ತಿದ್ದವು. ಆದರೆ ಅವನು ಕುಟುಂಬದಲ್ಲಿನ ತನ್ನ ಪಾತ್ರದ ಎಲ್ಲೆಮೀರಿ ವರ್ತಿಸುತ್ತಾ ಕುಟುಂಬವನ್ನು ಹೇಗೆ ನಡೆಸಬೇಕೆಂದು ತನ್ನ ಹೆತ್ತವರಿಗೆ ಉಪದೇಶಿಸುತ್ತಿದ್ದನೋ? ಲೂಕ 2:51 ಹನ್ನೆರಡು ವರ್ಷ ಪ್ರಾಯದ ಯೇಸುವಿನ ಕುರಿತು ತಿಳಿಸುವುದನ್ನು ಗಮನಿಸಿ: “ಅವನು . . . ಅವರಿಗೆ ಅಧೀನನಾಗಿ ಮುಂದುವರಿದನು.” ಹೆತ್ತವರಿಗೆ ವಿಧೇಯರಾಗುತ್ತಾ ಅವರಿಗೆ ಸಲ್ಲತಕ್ಕ ಮರ್ಯಾದೆ ಕೊಡಲಿಚ್ಛಿಸುವ ಕ್ರೈಸ್ತ ಮಕ್ಕಳಿಗೆ ಯೇಸು ಅತ್ಯುತ್ತಮ ಮಾದರಿಯಾಗಿದ್ದಾನೆ.—ಎಫೆಸ 6:1, 2.
19, 20. (ಎ) ಅಪರಿಪೂರ್ಣ ಮಾನವರಿಗೆ ವಿಧೇಯತೆ ತೋರಿಸುವ ವಿಷಯದಲ್ಲಿ ಯೇಸು ಯಾವ ಸವಾಲುಗಳನ್ನು ಎದುರಿಸಿದನು? (ಬಿ) ಇಂದು ನಿಜ ಕ್ರೈಸ್ತರು ಸಭೆಯಲ್ಲಿ ಮುಂದಾಳುತ್ವ ವಹಿಸುವವರಿಗೆ ಏಕೆ ವಿಧೇಯರಾಗಿರಬೇಕು?
19 ಅಪರಿಪೂರ್ಣ ಮಾನವರಿಗೆ ವಿಧೇಯತೆ ತೋರಿಸುವ ವಿಷಯದಲ್ಲಿ ಯೇಸು ಎದುರಿಸಿದಂಥ ಸವಾಲುಗಳನ್ನು ಇಂದು ನಿಜಕ್ರೈಸ್ತರು ಖಂಡಿತ ಎದುರಿಸಬೇಕಾಗಿಲ್ಲ. ಯೇಸು ಜೀವಿಸಿದ್ದ ಗಮನಾರ್ಹ ಸಮಯಾವಧಿಯ ಕುರಿತು ಸ್ವಲ್ಪ ಯೋಚಿಸಿ. ದೀರ್ಘ ಸಮಯದಿಂದ ಯೆಹೋವನು ಅಂಗೀಕರಿಸಿದ ಯೆಹೂದಿ ಧಾರ್ಮಿಕ ವಿಷಯಗಳ ವ್ಯವಸ್ಥೆಯು ಯೆರೂಸಲೇಮಿನಲ್ಲಿದ್ದ ಅದರ ದೇವಾಲಯ ಮತ್ತು ಯಾಜಕತ್ವದೊಂದಿಗೆ ಸ್ವಲ್ಪದರಲ್ಲೇ ಆತನಿಂದ ತಿರಸ್ಕರಿಸಲ್ಪಡಲಿತ್ತು. ಅದರ ಸ್ಥಾನವನ್ನು ಕ್ರೈಸ್ತ ಸಭೆಯು ತೆಗೆದುಕೊಳ್ಳಲಿತ್ತು. (ಮತ್ತಾಯ 23:33-38) ಅಲ್ಲದೆ, ಆ ಸಮಯದಲ್ಲಿ ಅನೇಕ ಧಾರ್ಮಿಕ ಮುಖಂಡರು ಗ್ರೀಕ್ ತತ್ವಜ್ಞಾನದಿಂದ ಎರವಲುಪಡೆದ ಸುಳ್ಳು ಬೋಧನೆಗಳನ್ನು ಕಲಿಸುತ್ತಿದ್ದರು. ದೇವಾಲಯದಲ್ಲಿ ಭ್ರಷ್ಟಾಚಾರ ಎಷ್ಟಿತ್ತೆಂದರೆ ಯೇಸು ಅದನ್ನು “ಕಳ್ಳರ ಗವಿ” ಎಂದು ಕರೆದನು. (ಮಾರ್ಕ 11:17) ಇಷ್ಟೆಲ್ಲಾ ಇದ್ದರೂ ಯೇಸು ದೇವಾಲಯ ಮತ್ತು ಸಭಾಮಂದಿರಗಳಿಂದ ದೂರ ಉಳಿದನೋ? ಇಲ್ಲ! ಯೆಹೋವನು ಇನ್ನೂ ಆ ಏರ್ಪಾಡುಗಳನ್ನು ಉಪಯೋಗಿಸುತ್ತಿದ್ದನು. ದೇವರು ಮಧ್ಯೆ ಪ್ರವೇಶಿಸಿ ಆ ಬದಲಾವಣೆಗಳನ್ನು ತರುವ ತನಕ ಯೇಸು ದೇವಾಲಯದ ಹಬ್ಬಗಳಿಗೂ ಸಭಾಮಂದಿರಗಳಿಗೂ ವಿಧೇಯತೆಯಿಂದ ಹೋಗಿಬರುತ್ತಿದ್ದನು.—ಲೂಕ 4:16; ಯೋಹಾನ 5:1.
20 ಯೇಸು ಅಂಥ ಪರಿಸ್ಥಿತಿಗಳಲ್ಲೇ ವಿಧೇಯತೆ ತೋರಿಸಿರುವಲ್ಲಿ ಇಂದಿನ ನಿಜ ಕ್ರೈಸ್ತರು ಇನ್ನೆಷ್ಟು ಹೆಚ್ಚು ವಿಧೇಯತೆ ತೋರಿಸಬೇಕಾದೀತು! ನಮ್ಮ ಸನ್ನಿವೇಶವಂತೂ ಪೂರ್ತಿ ಭಿನ್ನವಾಗಿದೆ. ಬಹಳ ಹಿಂದೆ ಮುಂತಿಳಿಸಲ್ಪಟ್ಟಂತೆಯೇ ನಾವು ಶುದ್ಧಾರಾಧನೆ ಪುನಃಸ್ಥಾಪಿಸಲ್ಪಟ್ಟ ಕಾಲದಲ್ಲಿ ಜೀವಿಸುತ್ತಿದ್ದೇವೆ. ಪುನಃಸ್ಥಾಪಿಸಲ್ಪಟ್ಟ ತನ್ನ ಜನರನ್ನು ಕೆಡಿಸಲು ತಾನೆಂದೂ ಸೈತಾನನನ್ನು ಅನುಮತಿಸೆನು ಎಂಬುದಾಗಿ ದೇವರು ನಮಗೆ ಆಶ್ವಾಸನೆ ಕೊಟ್ಟಿದ್ದಾನೆ. (ಯೆಶಾಯ 2:1, 2; 54:17) ಆದಾಗ್ಯೂ ಕ್ರೈಸ್ತ ಸಭೆಯಲ್ಲಿ ಕೆಲವೊಮ್ಮೆ ತಪ್ಪುಗಳೂ ಕುಂದುಕೊರತೆಗಳೂ ನಮ್ಮ ಕಣ್ಣಿಗೆ ಬೀಳಬಹುದು. ಆದರೆ ನಾವು ಇತರರ ತಪ್ಪುಗಳನ್ನೇ ನೆಪವಾಗಿ ತೆಗೆದುಕೊಂಡು ಯೆಹೋವನಿಗೆ ಅವಿಧೇಯರಾಗುತ್ತೇವೋ? ಅಂಥ ಸಂದರ್ಭಗಳಲ್ಲಿ ಕ್ರೈಸ್ತ ಕೂಟಗಳಿಂದ ದೂರ ಉಳಿಯುತ್ತೇವೋ? ಹಿರಿಯರನ್ನು ಟೀಕಿಸುತ್ತಿರುತ್ತೇವೋ? ಎಂದೂ ಇಲ್ಲ! ಬದಲಾಗಿ ಸಭೆಯಲ್ಲಿ ಮುಂದಾಳುತ್ವ ವಹಿಸುವವರನ್ನು ನಾವು ಮನಸಾರೆ ಬೆಂಬಲಿಸುತ್ತೇವೆ. ವಿಧೇಯತೆಯಿಂದ ಕ್ರೈಸ್ತ ಕೂಟಗಳಿಗೂ ಸಮ್ಮೇಳನಗಳಿಗೂ ಹಾಜರಾಗುತ್ತೇವೆ ಮತ್ತು ಅಲ್ಲಿ ಸಿಗುವ ಶಾಸ್ತ್ರಾಧಾರಿತ ಸಲಹೆಗಳನ್ನು ಅನ್ವಯಿಸಿಕೊಳ್ಳುತ್ತೇವೆ.—ಇಬ್ರಿಯ 10:24, 25; 13:17.
21. ದೇವರಿಗೆ ಅವಿಧೇಯನಾಗುವಂತೆ ಮಾನವರು ಒತ್ತಾಯಿಸಿದಾಗ ಯೇಸು ಹೇಗೆ ಪ್ರತಿಕ್ರಿಯಿಸಿದನು? ಅದರಿಂದ ನಮಗೆ ಯಾವ ಪಾಠವಿದೆ?
21 ಜನರಾಗಲಿ, ಒಳ್ಳೇ ಇರಾದೆಗಳಿದ್ದ ಆಪ್ತಸ್ನೇಹಿತರಾಗಲಿ ಯೆಹೋವನಿಗೆ ವಿಧೇಯನಾಗುವುದರಿಂದ ತನ್ನನ್ನು ತಡೆಯುವಂತೆ ಯೇಸು ಬಿಡಲಿಲ್ಲ. ಉದಾಹರಣೆಗೆ, ಅಪೊಸ್ತಲ ಪೇತ್ರನು, ತನ್ನ ಯಜಮಾನನು ಕಷ್ಟವನ್ನನುಭವಿಸಿ ಸಾಯುವ ಅಗತ್ಯವಿಲ್ಲ ಎಂದು ಅವನಿಗೆ ಮನಗಾಣಿಸಲು ಪ್ರಯತ್ನಿಸಿದನು. ತನಗೇ ದಯೆತೋರಿಸಿಕೊಳ್ಳುವಂತೆ ಪೇತ್ರನು ಹೇಳಿದ್ದು ಯೇಸುವಿನ ಹಿತಕ್ಷೇಮವನ್ನು ಬಯಸಿಯೇ. ಆದರೂ ಯೇಸು ಆ ಸಲಹೆಯನ್ನು ಖಡಾಖಂಡಿತವಾಗಿ ತಿರಸ್ಕರಿಸಿದನು. ಏಕೆಂದರೆ ಅದು ತಪ್ಪಾಗಿ ನಿರ್ದೇಶಿಸಲ್ಪಟ್ಟ ಸಲಹೆಯಾಗಿತ್ತು. (ಮತ್ತಾಯ 16:21-23) ದೇವರ ನಿಯಮ ಮತ್ತು ಮೂಲತತ್ತ್ವಗಳಿಗೆ ವಿಧೇಯರಾಗದಂತೆ ಇಂದು ಯೇಸುವಿನ ಹಿಂಬಾಲಕರಿಗೂ ಅವರ ಹಿತಕ್ಷೇಮವನ್ನು ಬಯಸುವ ಸಂಬಂಧಿಕರೇ ಆಗಾಗ್ಗೆ ತಡೆಯೊಡ್ಡಬಹುದು. ಯೇಸುವಿನ ಪ್ರಥಮ ಶತಮಾನದ ಹಿಂಬಾಲಕರಂತೆ “ನಾವು ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗುವುದು ಅಗತ್ಯ” ಎಂಬುದನ್ನು ಮನಗಾಣುತ್ತೇವೆ.—ಅ. ಕಾರ್ಯಗಳು 5:29.
ಕ್ರಿಸ್ತಸದೃಶ ವಿಧೇಯತೆಯಿಂದ ಲಭಿಸುವ ಆಶೀರ್ವಾದಗಳು
22. ಯೇಸು ಯಾವ ಪ್ರಶ್ನೆಗೆ ಉತ್ತರಕೊಟ್ಟನು? ಹೇಗೆ?
22 ಯೇಸುವಿನ ಮರಣದ ಸಮಯದಲ್ಲಿ ಅವನ ವಿಧೇಯತೆಯು ಅತ್ಯುಚ್ಛ ಮಟ್ಟದಲ್ಲಿ ಪರೀಕ್ಷೆಗೊಳಗಾಯಿತು. ಆ ಕರಾಳ ದಿನದಂದು ಅವನು ಪೂರ್ತಿಯಾಗಿ “ವಿಧೇಯತೆಯನ್ನು ಕಲಿತುಕೊಂಡನು.” ಅವನು ತನ್ನ ಚಿತ್ತವನ್ನಲ್ಲ ತಂದೆಯ ಚಿತ್ತವನ್ನು ಮಾಡಿದನು. (ಲೂಕ 22:42) ಹೀಗೆ ಅವನು ಸಮಗ್ರತೆಯ ಪರಿಪೂರ್ಣ ದಾಖಲೆಯನ್ನು ಸ್ಥಾಪಿಸಿದನು. (1 ತಿಮೊಥೆಯ 3:16) ಪರೀಕ್ಷೆಗಳು ಬರುವಾಗಲೂ ಒಬ್ಬ ಪರಿಪೂರ್ಣ ಮನುಷ್ಯನು ಯೆಹೋವನಿಗೆ ವಿಧೇಯನಾಗಿ ಉಳಿಯಬಲ್ಲನೋ ಎಂಬ ದೀರ್ಘಕಾಲದ ಪ್ರಶ್ನೆಗೆ ಅವನು ಉತ್ತರ ಒದಗಿಸಿದನು. ಈ ವಿಷಯದಲ್ಲಿ ಆದಾಮ ಹವ್ವರು ವಿಫಲರಾಗಿದ್ದರು. ಆದರೆ ಯೇಸು ಭೂಮಿಗೆ ಬಂದು, ಜೀವಿಸಿ, ಮರಣಪಟ್ಟು ಸಮರ್ಪಕ ಉತ್ತರ ಕೊಟ್ಟನು. ಯೆಹೋವನ ಸೃಷ್ಟಿಜೀವಿಗಳಲ್ಲೇ ಅತ್ಯುನ್ನತನಾದವನು ಸಾಧ್ಯವಿರುವುದರಲ್ಲೇ ಬಲವಾದ ಉತ್ತರಕೊಟ್ಟನು. ಕಷ್ಟಗಳನ್ನು ಅನುಭವಿಸುವಾಗ ಮಾತ್ರವಲ್ಲ ಮರಣವನ್ನು ಅನುಭವಿಸುವಾಗಲೂ ಅವನು ವಿಧೇಯನಾಗಿದ್ದನು.
23-25. (ಎ) ವಿಧೇಯತೆಯು ಸಮಗ್ರತೆಗೆ ಹೇಗೆ ಜೋಡಿಸಲ್ಪಟ್ಟಿದೆ? ದೃಷ್ಟಾಂತಿಸಿ. (ಬಿ) ಮುಂದಿನ ಅಧ್ಯಾಯದ ವಿಷಯವೇನು?
23 ಯೆಹೋವನಿಗೆ ಸಮಗ್ರತೆ ಇಲ್ಲವೇ ಪೂರ್ಣಹೃದಯದ ಭಕ್ತಿಯನ್ನು ವಿಧೇಯತೆಯ ಮೂಲಕ ತೋರಿಸಲಾಗುತ್ತದೆ. ವಿಧೇಯನಾಗಿದ್ದರಿಂದಲೇ ಯೇಸು ತನ್ನ ಸಮಗ್ರತೆಯನ್ನು ಕಾಪಾಡಿಕೊಂಡನು ಮತ್ತು ಇಡೀ ಮಾನವಕುಲಕ್ಕೆ ಪ್ರಯೋಜನ ತಂದನು. (ರೋಮನ್ನರಿಗೆ 5:19) ಯೆಹೋವನು ಯೇಸುವನ್ನು ಹೇರಳವಾಗಿ ಆಶೀರ್ವದಿಸಿದನು. ನಮ್ಮ ನಾಯಕನಾದ ಕ್ರಿಸ್ತನಿಗೆ ನಾವು ವಿಧೇಯರಾಗುವಲ್ಲಿ ಯೆಹೋವನು ನಮ್ಮನ್ನೂ ಆಶೀರ್ವದಿಸುವನು. ಕ್ರಿಸ್ತನಿಗೆ ತೋರಿಸುವ ವಿಧೇಯತೆ “ನಿತ್ಯ ರಕ್ಷಣೆಗೆ” ನಡೆಸುತ್ತದೆ.—ಇಬ್ರಿಯ 5:9.
24 ಅಲ್ಲದೆ ಸಮಗ್ರತೆ ತಾನೇ ಒಂದು ಆಶೀರ್ವಾದವಾಗಿದೆ. ಜ್ಞಾನೋಕ್ತಿ 10:9 ಹೇಳುವುದು: “ನಿರ್ದೋಷದ [ಸಮಗ್ರತೆಯ, NW] ನಡತೆಯವನು ನಿರ್ಭಯವಾಗಿ ನಡೆಯುವನು.” ಸಮಗ್ರತೆಯನ್ನು ಇಟ್ಟಿಗೆಗಳಿಂದ ಕಟ್ಟಿದ ಒಂದು ದೊಡ್ಡ ಮನೆಗೆ ಹೋಲಿಸುವುದಾದರೆ, ವಿಧೇಯತೆಯ ಒಂದೊಂದು ಕೃತ್ಯವನ್ನು ಅದನ್ನು ಕಟ್ಟಿದ ಒಂದೊಂದು ಇಟ್ಟಿಗೆಗೆ ಹೋಲಿಸಬಹುದು. ಕೇವಲ ಒಂದು ಇಟ್ಟಿಗೆ ಕ್ಷುಲ್ಲಕವಾಗಿ ತೋರಬಹುದು. ಆದರೆ ಪ್ರತಿಯೊಂದು ಇಟ್ಟಿಗೆಗೂ ತನ್ನದೇ ಆದ ಸ್ಥಾನ, ಮೌಲ್ಯ ಎನ್ನುವುದು ಇದೆ. ಮತ್ತು ಯಾವಾಗ ಅನೇಕ ಇಟ್ಟಿಗೆಗಳನ್ನು ಜೊಡಿಸಲಾಗುತ್ತದೋ ಆಗ ಭವ್ಯವಾದೊಂದು ಕಟ್ಟಡ ಕಟ್ಟಲ್ಪಡುತ್ತದೆ. ಅದೇ ರೀತಿಯಲ್ಲಿ ದಿನಂಪ್ರತಿ, ವರ್ಷಂಪೂರ್ತಿ ವಿಧೇಯತೆಯ ಒಂದೊಂದು ಕೃತ್ಯವನ್ನೂ ಒಟ್ಟುಸೇರಿಸುತ್ತಿರುವಲ್ಲಿ ಸಮಗ್ರತೆಯೆಂಬ ಸುಂದರ ಸೌಧವನ್ನು ನಾವು ಕಟ್ಟುವೆವು.
25 ದೀರ್ಘಸಮಯದ ತನಕ ವಿಧೇಯತೆ ತೋರಿಸುತ್ತಾ ಮುಂದುವರಿಯಬೇಕಾದರೆ ಸಹನೆ ಇಲ್ಲವೇ ತಾಳ್ಮೆ ಅಗತ್ಯ. ಯೇಸುವಿನ ಮಾದರಿಯ ಈ ಅಂಶವೇ ಮುಂದಿನ ಅಧ್ಯಾಯದ ವಿಷಯವಾಗಿರುವುದು.