ಜ್ಞಾನದಲ್ಲಿ ಬೆಳೆಯುತ್ತಾ ಸಾಗಿರಿ
“ನಿಮಗಿರುವ ನಂಬಿಕೆಗೆ . . . ಜ್ಞಾನವನ್ನೂ . . . ಕೂಡಿಸಿರಿ.”—2 ಪೇತ್ರ 1:5.
1, 2. (ಎ) ಆಕಾಶವನ್ನು ನೋಡುವುದರಿಂದ ನೀವು ಏನು ಕಲಿಯಬಲ್ಲಿರಿ? (ರೋಮಾಪುರ 1:20) (ಬಿ) ಮಾನವನ ಜ್ಞಾನ ವರ್ಧನೆಯ ನಿಜ ವ್ಯಾಪ್ತಿ ಎಷ್ಟು?
ಒಂದು ತಿಳಿಯಾದ, ಕತ್ತಲ ರಾತ್ರಿಯಲ್ಲಿ ಹೊರಗೆ ಹೋಗಿ ಶುಭ್ರವಾದ ಚಂದ್ರ ಮತ್ತು ಅಸಂಖ್ಯಾತ ನಕ್ಷತ್ರಗಳನ್ನು ನೋಡುವ ಮೂಲಕ ನೀವೇನು ಕಲಿಯಬಲ್ಲಿರಿ? ಇವೆಲ್ಲವನ್ನು ಸೃಷ್ಟಿಸಿದ ಒಬ್ಬಾತನ ಕುರಿತು ಏನನ್ನೋ ಕಲಿಯಬಲ್ಲಿರಿ.—ಕೀರ್ತನೆ 19:1-6; 69:34.
2 ಆ ಜ್ಞಾನವನ್ನು ನೀವು ವರ್ಧಿಸಬಯಸುವಲ್ಲಿ, ನಿಮ್ಮ ಮನೆಯ ಚಾವಣಿಯನ್ನೇರಿ, ಅಲ್ಲಿಂದ ನೋಡುವಿರೊ? ಪ್ರಾಯಶಃ ಹಾಗೆ ಮಾಡಲಿಕ್ಕಿಲ್ಲ. ವಿಜ್ಞಾನಿಗಳು ತಮಗಿರುವ ವಿಶ್ವದ ಜ್ಞಾನವನ್ನು ನಿಜವಾಗಿಯೂ ಹೆಚ್ಚು ವರ್ಧಿಸಿಲ್ಲ ಮತ್ತು ಅವುಗಳನ್ನು ಸೃಷ್ಟಿಸಿದಾತನ ವಿಷಯವೊ ನಿಶ್ಚಯವಾಗಿಯೂ ಅತಿ ಕೊಂಚವೇ ವರ್ಧಿಸಿದ್ದಾರೆ ಎಂಬ ವಿಚಾರವನ್ನು ಒತ್ತಿಹೇಳುವ ಉದ್ದೇಶದಿಂದ ಆಲ್ಬರ್ಟ್ ಐನ್ಸ್ಟೈನ್ ಒಮ್ಮೆ ಇಂತಹ ಒಂದು ದೃಷ್ಟಾಂತವನ್ನು ಕೊಟ್ಟರು.a ಡಾ. ಲೂಇಸ್ ಥಾಮಸ್ ಬರೆದುದು: “ವೈಜ್ಞಾನಿಕವಾಗಿ ಅತಿ ಉತ್ಪಾದಕವಾದ ಈ ಶತಮಾನದಲ್ಲಿ, ವಿಜ್ಞಾನದ ಅತಿ ಮಹತ್ತಾದ ಏಕ ಸಾಧನೆಯು ನಾವು ಅಗಾಧವಾದ ಅಜ್ಞಾನಿಗಳು ಎಂಬ ಕಂಡುಹಿಡಿತವೇ; ನಮಗೆ ಪ್ರಕೃತಿಯ ವಿಷಯದಲ್ಲಿರುವ ಜ್ಞಾನ ತೀರಾ ಕೊಂಚ, ಅದರ ತಿಳಿವಳಿಕೆ ಇನ್ನೂ ಕಡಿಮೆ.”
3. ಜ್ಞಾನದ ವರ್ಧನವು ವೇದನೆಯನ್ನು ವರ್ಧಿಸುವುದು ಯಾವ ಅರ್ಥದಲ್ಲಿ?
3 ಒಂದು ಸಾಮಾನ್ಯ ಜೀವಾವಧಿಯ ಉಳಿದಿರುವ ಎಲ್ಲ ವರ್ಷಗಳನ್ನು ನೀವು ಇಂತಹ ಜ್ಞಾನಾರ್ಜನೆಯಲ್ಲಿ ಕಳೆಯುವುದಾದರೂ, ಜೀವವು ಎಷ್ಟು ಅಲ್ಪಾವಧಿಯದ್ದೆಂದು ನೀವು ಹೆಚ್ಚು ಅರಿತವರಾದೀರಿ ಮತ್ತು ಮನುಷ್ಯನ ಜ್ಞಾನೋಪಯೋಗವು ಅಪೂರ್ಣತೆಯಿಂದ ಮತ್ತು ಈ ಲೋಕದ ‘ವಕ್ರತೆ’ ಯಿಂದ ಸೀಮಿತವಾಗಿದೆ ಎಂಬುದನ್ನು ಹೆಚ್ಚು ಸ್ಪಷ್ಟವಾಗಿಗಿ ನೋಡೀರಿ. ಸೊಲೊಮೋನನು ಹೀಗೆ ಬರೆಯುತ್ತಾ ವಾದಸಮರ್ಥನೆ ಮಾಡುತ್ತಾನೆ: “ಬಹು ಜ್ಞಾನವಿದ್ದಲ್ಲಿ ಬಹು ಸಂಕಟ, ಹೆಚ್ಚು ತಿಳುವಳಿಕೆಯನ್ನು ಪಡೆದವನಿಗೆ ಹೆಚ್ಚು ವ್ಯಥೆ.” (ಪ್ರಸಂಗಿ 1:15, 18) ಹೌದು, ದೇವರ ಉದ್ದೇಶಗಳಿಗೆ ಸಂಬಂಧಿಸದ ಜ್ಞಾನ, ವಿವೇಕಗಳ ಸಂಪಾದನೆ ಸಾಧಾರಣವಾಗಿ ವೇದನೆ ಮತ್ತು ಪೀಡೆಯನ್ನೊಳಗೊಂಡಿರುತ್ತದೆ.—ಪ್ರಸಂಗಿ 1:13, 14; 12:12; 1 ತಿಮೊಥೆಯ 6:20.
4. ನಾವು ಯಾವ ಜ್ಞಾನವನ್ನು ಸಂಪಾದಿಸಲು ಬಯಸಬೇಕು?
4 ನಾವು ಜ್ಞಾನವನ್ನು ವರ್ಧಿಸುವ ವಿಷಯದಲ್ಲಿ ಆಸಕ್ತರಾಗಿರಬಾರದು ಎಂದು ಬೈಬಲು ಶಿಫಾರಸ್ಸು ಮಾಡುತ್ತಿದೆಯೆ? ಅಪೊಸ್ತಲ ಪೇತ್ರನು ಬರೆದುದು: “ನೀವು ಕೃಪೆಯಲ್ಲಿಯೂ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ವಿಷಯವಾದ ಜ್ಞಾನದಲ್ಲಿಯೂ ಅಭಿವೃದ್ಧಿಯನ್ನು ಹೊಂದುತ್ತಾ ಇರ್ರಿ.” (2 ಪೇತ್ರ 3:18) ಆ ಬುದ್ಧಿವಾದ ನಮಗೆ ಅನ್ವಯಿಸುತ್ತದೆ, ನಾವು ಜ್ಞಾನದಲ್ಲಿ ವೃದ್ಧಿಯಾಗುವಂತೆ ಪ್ರೋತ್ಸಾಹಿಸುತ್ತದೆ, ಎಂಬುದನ್ನು ನಾವು ಅಂಗೀಕರಿಸಬಲ್ಲೆವು, ಮತ್ತು ಅಂಗೀಕರಿಸಬೇಕು. ಆದರೆ ಯಾವ ರೀತಿಯ ಜ್ಞಾನ? ನಾವದರಲ್ಲಿ ಹೇಗೆ ವೃದ್ಧಿಮಾಡಬಲ್ಲೆವು? ಮತ್ತು ನಾವು ನಿಜವಾಗಿಯೂ ಹಾಗೆ ಮಾಡುತ್ತಿದ್ದೇವೆಯೆ?
5, 6. ನಮಗೆ ಜ್ಞಾನ ಸಂಪಾದನೆಯ ಅಗತ್ಯವಿದೆಯೆಂದು ಪೇತ್ರನು ಹೇಗೆ ಒತ್ತಿಹೇಳಿದನು?
5 ವಿಶ್ವ ನಿರ್ಮಾಣಿಕನ ಮತ್ತು ಯೇಸುವಿನ ವಿಷಯವಾದ ನಿಷ್ಕೃಷ್ಟ ಜ್ಞಾನದಲ್ಲಿ ವರ್ಧಿಸುವುದು ಪೇತ್ರನ ಎರಡನೆಯ ಪತ್ರದ ಒಂದು ಕೇಂದ್ರ ವಿಚಾರವಾಗಿತ್ತು. ಅದರ ಆರಂಭದಲ್ಲಿ ಅವನು ಬರೆದುದು: “ದೇವರ ವಿಷಯವಾಗಿಯೂ ನಮ್ಮ ಕರ್ತನಾದ ಯೇಸುವಿನ ವಿಷಯವಾಗಿಯೂ [ನಿಷ್ಕೃಷ್ಟ, NW] ಪರಿಜ್ಞಾನವು ನಿಮಗೆ ಉಂಟಾಗುವದರಲ್ಲಿ ಕೃಪೆಯೂ ಶಾಂತಿಯೂ ನಿಮಗೆ ಹೆಚ್ಚೆಚ್ಚಾಗಿ ದೊರೆಯಲಿ. ನಮ್ಮನ್ನು ತನ್ನ ಪ್ರಭಾವದಿಂದಲೂ ಗುಣಾತಿಶಯದಿಂದಲೂ ಕರೆದ ದೇವರ ವಿಷಯವಾಗಿ ಯೇಸುವಿನ ದಿವ್ಯ ಶಕ್ತಿಯು ನಮಗೆ [ನಿಷ್ಕೃಷ್ಟ, NW] ಪರಿಜ್ಞಾನವನ್ನು ಕೊಟ್ಟದ್ದರಲ್ಲಿ ಜೀವಕ್ಕೂ ಭಕ್ತಿಗೂ ಬೇಕಾದದ್ದೆಲ್ಲವು ದೊರೆಯಿತೆಂದು ಬಲೆವ್ಲಷ್ಟೆ.” (2 ಪೇತ್ರ 1:2, 3) ಹೀಗೆ ಅವನು ನಮಗೆ ಕೃಪೆ ಮತ್ತು ಶಾಂತಿಯಿರುವುದನ್ನು ದೇವರ ಮತ್ತು ಆತನ ಕುಮಾರನ ಕುರಿತ ಜ್ಞಾನವನ್ನು ನಾವು ಸಂಪಾದಿಸುವುದಕ್ಕೆ ಸಂಬಂಧಿಸುತ್ತಾನೆ. ಇದು ನ್ಯಾಯಸಮ್ಮತ, ಏಕೆಂದರೆ ಸೃಷ್ಟಿಕರ್ತನಾದ ಯೆಹೋವನು ನಿಜ ಜ್ಞಾನದ ಕೇಂದ್ರವಾಗಿದ್ದಾನೆ. ದೇವರಿಗೆ ಭಯಪಡುವವನೊಬ್ಬನು ಸಂಗತಿಗಳನ್ನು ಯೋಗ್ಯ ಕಣ್ನೆಲೆಯಲ್ಲಿ ನೋಡಲು ಮತ್ತು ಸಮಂಜಸವಾದ ತೀರ್ಮಾನಗಳಿಗೆ ಬರಲು ಶಕ್ತನಾಗುವನು.—ಜ್ಞಾನೋಕ್ತಿ 1:7.
6 ಆಮೇಲೆ ಪೇತ್ರನು ಪ್ರೋತ್ಸಾಹಿಸಿದ್ದು: “ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ ಜ್ಞಾನಕ್ಕೆ ದಮೆಯನ್ನೂ ದಮೆಗೆ ತಾಳ್ಮೆಯನ್ನೂ ತಾಳ್ಮೆಗೆ ಭಕ್ತಿಯನ್ನೂ ಭಕ್ತಿಗೆ ಸಹೋದರಸ್ನೇಹವನ್ನೂ ಸಹೋದರಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ. ಇವು ನಿಮ್ಮಲ್ಲಿದ್ದು ಹೆಚ್ಚುತ್ತಾ ಬಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸಂಬಂಧವಾದ ಪರಿಜ್ಞಾನವನ್ನು ಹೊಂದುವ ವಿಷಯದಲ್ಲಿ ನಿಮ್ಮನ್ನು ಆಲಸ್ಯಗಾರರೂ ನಿಷ್ಫಲರೂ ಆಗದಂತೆ ಮಾಡುತ್ತವೆ.” (2 ಪೇತ್ರ 1:5-8)b ಮುಂದಿನ ಅಧ್ಯಾಯದಲ್ಲಿ, ಜ್ಞಾನದ ಸಂಪಾದನೆಯು ಜನರು ಲೋಕದ ಮೈಲಿಗೆಗಳಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆಂದು ನಾವು ಓದುತ್ತೇವೆ. (2 ಪೇತ್ರ 2:20) ಹೀಗೆ, ಕ್ರೈಸ್ತರಾಗುವವರಿಗೆ ಹಾಗೂ ಆಗಲೇ ಯೆಹೋವನನ್ನು ಸೇವಿಸುತ್ತಿರುವವರಿಗೆ ಜ್ಞಾನವು ಅಗತ್ಯವೆಂದು ಪೇತ್ರನು ಸ್ಪಷ್ಟಪಡಿಸುತ್ತಾನೆ. ನೀವು ಈ ವರ್ಗಗಳಲ್ಲಿ ಒಂದರಲ್ಲಿ ಇದ್ದೀರೊ?
ಕಲಿಯಿರಿ, ಪುನರಾವೃತ್ತಿಸಿರಿ, ಉಪಯೋಗಿಸಿರಿ
7. ಅನೇಕರು ಮೂಲಬೈಬಲ್ ಸತ್ಯಗಳ ನಿಷ್ಕೃಷ್ಟ ಜ್ಞಾನವನ್ನು ಯಾವ ರೀತಿಯಲ್ಲಿ ಪಡೆದಿದ್ದಾರೆ?
7 ಯೆಹೋವನ ಸಾಕ್ಷಿಗಳ ಸಂದೇಶದಲ್ಲಿ ಸತ್ಯದ ನಾದವನ್ನು ಗುರುತಿಸುವ ಕಾರಣ ನೀವು ಅವರೊಂದಿಗೆ ಬೈಬಲ್ ಅಧ್ಯಯನವನ್ನು ನಡೆಸುತ್ತಿರಬಹುದು. ವಾರಕ್ಕೊಮ್ಮೆ, ಸುಮಾರು ಒಂದು ತಾಸಿನ ವರೆಗೆ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬಂತಹ ಸಹಾಯಕದ ಮೂಲಕ ಒಂದು ಬೈಬಲ್ ವಿಷಯವನ್ನು ಪರಿಗಣಿಸುತ್ತೀರಿ. ಅತ್ಯುತ್ತಮ! ಯೆಹೋವನ ಸಾಕ್ಷಿಗಳೊಂದಿಗೆ ಇಂತಹ ಅಧ್ಯಯನವನ್ನು ಮಾಡಿರುವ ಅನೇಕರು ನಿಷ್ಕೃಷ್ಟ ಜ್ಞಾನವನ್ನು ಪಡೆದಿದ್ದಾರೆ. ಆದರೆ, ನೀವು ವ್ಯಕ್ತಿಪರವಾಗಿ ಕಲಿಯುತ್ತಿರುವ ಮೊತ್ತವನ್ನು ವರ್ಧಿಸುವರೆ ನೀವೇನು ಮಾಡಬಲ್ಲಿರಿ? ಕೆಲವು ಸೂಚನೆಗಳು ಇಲ್ಲಿವೆ.c
8. ಅಧ್ಯಯನಕ್ಕಾಗಿ ತಯಾರಿಸುವಾಗ, ಹೆಚ್ಚು ಕಲಿಯಲು ವಿದ್ಯಾರ್ಥಿಯು ಏನು ಮಾಡಬಲ್ಲನು?
8 ಮುಂಚಿತವಾಗಿ, ನೀವು ಅಧ್ಯಯನಕ್ಕೆ ತಯಾರಿಸುವಾಗ, ಆವರಿಸಬೇಕಾದ ವಿಷಯವನ್ನು ಅವಲೋಕಿಸಿರಿ. ಅಂದರೆ, ಅಧ್ಯಾಯದ ಮೇಲಿಷ್ವಯ, ಉಪಶೀರ್ಷಿಕೆಗಳು, ಮತ್ತು ವಿಷಯವನ್ನು ಚಿತ್ರೀಕರಿಸಲು ಬಳಸಿರುವ ಯಾವುದೇ ಚಿತ್ರಗಳನ್ನು ಗಮನಿಸುವುದು ಎಂದರ್ಥ. ಬಳಿಕ, ಪ್ರಕಾಶನದ ಒಂದು ಪರಿಚ್ಛೇದ ಯಾ ಭಾಗವನ್ನು ನೀವು ಓದುವಾಗ, ಮುಖ್ಯ ಅಭಿಪ್ರಾಯಗಳನ್ನು ಮತ್ತು ಆಧಾರ ವಚನಗಳನ್ನು ಹುಡುಕಿ, ಅವುಗಳಿಗೆ ಅಡಿಗೆರೆ ಎಳೆಯಿರಿ ಯಾ ಅವು ಎದ್ದು ತೋರುವಂತೆ ಮಾಡಿರಿ. ಆವರಿಸಿರುವ ಸತ್ಯಗಳನ್ನು ಕಲಿತಿರೋ ಎಂದು ನೋಡಲು, ವಿವಿಧ ಪರಿಚ್ಛೇದಗಳ ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸಿರಿ. ಹೀಗೆ ಮಾಡುವಾಗ, ನಿಮ್ಮ ಸ್ವಂತ ಮಾತುಗಳಲ್ಲಿ ಉತ್ತರಗಳನ್ನು ರಚಿಸಲು ಯತ್ನಿಸಿರಿ. ಕೊನೆಗೆ, ಆ ಪಾಠವನ್ನು ಪುನರ್ವಿಮರ್ಶಿಸಿ, ಮುಖ್ಯ ವಿಚಾರಗಳನ್ನು ಮತ್ತು ಸಮರ್ಥಿಸುವ ವಾದಗಳನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿರಿ.
9. ಅಧ್ಯಯನದ ಕುರಿತ ಸೂಚನೆಗಳನ್ನು ಅನ್ವಯಿಸಿಕೊಳ್ಳುವುದು ಒಬ್ಬನು ಕಲಿಯುವಂತೆ ಹೇಗೆ ಸಹಾಯ ಮಾಡುವುದು?
9 ಈ ಸೂಚನೆಗಳನ್ನು ಅನ್ವಯಿಸಿಕೊಳ್ಳುವಲ್ಲಿ ನೀವು ಜ್ಞಾನ ವರ್ಧನೆಯನ್ನು ನಿರೀಕ್ಷಿಸಬಲ್ಲಿರಿ. ಇದೇಕೆ? ಆ ವಿಷಯವನ್ನು ಕಲಿಯಲು ತೀಕ್ಷೈ ಬಯಕೆಯಿಂದ ನೀವು ಸಮೀಪಿಸುವುದು—ಮಣ್ಣನ್ನು ತಯಾರಿಸುವಂತೆ—ಇದಕ್ಕೆ ಒಂದು ಕಾರಣ. ಒಂದು ಮೇಲ್ನೋಟವನ್ನು ಪಡೆಯುವದರಿಂದ ಮತ್ತು ಮುಖ್ಯ ಅಭಿಪ್ರಾಯಗಳನ್ನೂ ತರ್ಕಸರಣಿಯನ್ನು ಹುಡುಕುವುದರಿಂದ, ವಿವರಗಳು ಮುಖ್ಯ ವಿಷಯಕ್ಕೆ ಅಥವಾ ಸಮಾಪ್ತಿಗೆ ಹೇಗೆ ಸಂಬಂಧಿಸುತ್ತವೆಂದು ನೀವು ನೋಡುವಿರಿ. ಒಂದು ಅಂತಿಮ ಪುನರ್ವಿಮರ್ಶೆಯು ನೀವು ಅಧ್ಯಯನ ಮಾಡಿದುದನ್ನು ನೆನಪಿಸಿಕೊಳ್ಳಲು ನಿಮಗೆ ಸಹಾಯ ಮಾಡುವುದು. ಆದರೆ ತರುವಾಯ, ನಿಮ್ಮ ಬೈಬಲ್ ಅಧ್ಯಯನದ ಸಮಯದಲ್ಲೇನು?
10. (ಎ) ನಿಜತ್ವಗಳ ಯಾ ಹೊಸ ಮಾಹಿತಿಯ ಬರಿಯ ಪುನರಾವರ್ತನೆ, ಸೀಮಿತವಾದ ಬೆಲೆಯದ್ದೇಕೆ? (ಬಿ) “ಅನುಕ್ರಮಿಕ ಅವಕಾಶ ಪುನರ್ಜ್ಞಾಪನದಲ್ಲಿ” ಏನು ಒಳಗೊಂಡಿದೆ? (ಸಿ) ಇಸ್ರಾಯೇಲ್ಯ ಪುತ್ರರು ಪುನರಾವೃತ್ತಿಯಿಂದ ಹೇಗೆ ಪ್ರಯೋಜನ ಪಡೆದಿರಬಹುದು?
10 ವಿದ್ಯಾಭ್ಯಾಸದ ಕ್ಷೇತ್ರದ ಪರಿಣತರಿಗೆ ಸಮಯೋಚಿತ ಹಾಗೂ ಉದ್ದೇಶಭರಿತ ಪುನರಾವೃತ್ತಿಯ ಬೆಲೆ ಗೊತ್ತಿದೆ. ನೀವು ಶಾಲೆಯಲ್ಲಿ ಯಾವುದೋ ಹೆಸರು, ನಿಜತ್ವ, ಯಾ ವಿಚಾರಗಳನ್ನು ಬಾಯಿಪಾಠ ಮಾಡಲು ಹೇಗೆ ಪ್ರಯತ್ನಿಸಿದಿರ್ದಬಹುದೋ ಹಾಗೆ ಇದು ಮಾತುಗಳ ಬರಿಯ ಗಿಣಿಪಾಠವಲ್ಲ. ನೀವು ಬಾಯಿಪಾಠ ಮಾಡಿದ್ದನ್ನು ಬೇಗನೇ ಮರೆತು ಬಿಟ್ಟಿದ್ದೀರಿ, ಅದು ಬೇಗನೆ ಸ್ಮರಣೆಯಿಂದ ಇಲ್ಲದೆ ಹೋಗಿದೆಯೆಂದು ನಿಮಗೆ ತಿಳಿದುಬಂದದ್ದುಂಟೊ? ಏಕೆ? ಒಂದು ಹೊಸ ಪದವನ್ನು ಯಾ ನಿಜತ್ವವನ್ನು ಗಿಣಿಪಾಠ ಮಾಡುವುದು ಬೇಸರ ಹಿಡಿಸುವ ವಿಷಯವಾಗಬಲ್ಲದು, ಮತ್ತು ಅದರ ಪರಿಣಾಮ ಅಲ್ಪಕಾಲಿಕ. ಇದನ್ನು ಯಾವುದು ಬದಲಾಯಿಸಬಲ್ಲದು? ಕಲಿಯಲು ನಿಮಗಿರುವ ನಿಜವಾದ ಬಯಕೆಯು ಸಹಾಯಮಾಡುವುದು. ಇನ್ನೊಂದು ಕೀಲಿ ಕೈಯು ಉದ್ದೇಶಭರಿತವಾದ ಪುನರಾವರ್ತನೆ. ಒಂದು ವಿಷಯವನ್ನು ನೀವು ಕಲಿತು ಕೆಲವು ನಿಮಿಷಗಳಾದ ಬಳಿಕ, ಅದು ಸ್ಮರಣೆಯಿಂದ ಮಾಸಿಹೋಗುವ ಮೊದಲು, ನೀವು ಕಲಿತದ್ದನ್ನು ನಿಮ್ಮೊಳಗಿಂದ ಹೊರಗೆಳೆಯಲು ಪ್ರಯತ್ನಿಸಿರಿ. ಇದನ್ನು “ಅನುಕ್ರಮವಾಗಿರುವ ಅವಕಾಶ ಪುನರ್ಜ್ಞಾಪನ” ಎಂದು ಕರೆಯಲಾಗಿದೆ. ಮಾಸಿಹೋಗುವ ಮೊದಲು ನಿಮ್ಮ ಸ್ಮರಣೆಯನ್ನು ನೀವು ಚುರುಕಾಗಿಸುವಲ್ಲಿ ನಿಮ್ಮ ಧಾರಣಶಕ್ತಿಯ ಅವಧಿಯನ್ನು ನೀವು ವಿಸ್ತರಿಸುವಿರಿ. ಇಸ್ರಾಯೇಲಿನಲ್ಲಿ, ದೇವರ ಆಜ್ಞೆಗಳನ್ನು ತಂದೆಗಳು ತಮ್ಮ ಪುತ್ರರಲ್ಲಿ ಬೇರೂರಿಸಬೇಕಾಗಿತ್ತು. (ಧರ್ಮೋಪದೇಶಕಾಂಡ 6:6, 7) “ಬೇರೂರಿಸುವುದು” ಎಂದರೆ ಪುನರಾವೃತ್ತಿಸುವುದರ ಮೂಲಕ ಬೋಧಿಸುವುದು ಎಂದರ್ಥ. ಅಲ್ಲಿಯ ಅನೇಕ ತಂದೆಗಳು ಪ್ರಥಮವಾಗಿ ನಿಯಮಗಳನ್ನು ತಮ್ಮ ಪುತ್ರರಿಗೆ ಸಾದರಪಡಿಸಿರುವುದು ಸಂಭಾವ್ಯ; ಬಳಿಕ ಅವರು ಆ ಮಾಹಿತಿಯನ್ನು ಪುನರಾವೃತ್ತಿಸಿದರು; ಮತ್ತು ಆಮೇಲೆ ಕಲಿತುದರ ಬಗೆಗೆ ಅವರು ತಮ್ಮ ಪುತ್ರರನ್ನು ಪ್ರಶ್ನಿಸಿದರು.
11. ಕಲಿಕೆಯನ್ನು ವರ್ಧಿಸಲು ಒಂದು ಬೈಬಲ್ ಅಧ್ಯಯನದ ಸಮಯದಲ್ಲಿ ಏನು ಮಾಡಸಾಧ್ಯವಿದೆ?
11 ಒಬ್ಬ ಸಾಕ್ಷಿಯು ನಿಮ್ಮೊಡನೆ ಬೈಬಲ್ ಅಧ್ಯಯನ ನಡೆಸುತ್ತಿರುವಲ್ಲಿ, ಅವನು ಅಥವಾ ಅವಳು, ಅಧ್ಯಯನಾವಧಿಗಳಲ್ಲಿ ಆಗಾಗ ಪ್ರಗತಿಪರ ಸಾರಾಂಶಗಳನ್ನು ಕೊಡುವ ಮೂಲಕ ನೀವು ಕಲಿಯುವಂತೆ ಸಹಾಯ ಮಾಡಬಹುದು. ಇದು ಮಕ್ಕಳಾಟಿಕೆಯಲ್ಲ. ಇದು ಕಲಿಕೆಯನ್ನು ಉತ್ತಮಗೊಳಿಸುವ ಉಪಾಯವಾಗಿರುವುದರಿಂದ, ನಿಯತಕಾಲಿಕ ಪುನರ್ವಿಮರ್ಶೆಗಳಲ್ಲಿ ಸಂತೋಷದಿಂದ ಭಾಗವಹಿಸಿರಿ. ಬಳಿಕ, ಅಧ್ಯಯನಾಂತ್ಯದಲ್ಲಿ, ಯಾವುದಕ್ಕೆ ನೀವು ಜ್ಞಾಪಕದಿಂದ ಉತ್ತರ ಕೊಡುತ್ತೀರೊ ಆ ಅಂತಿಮ ಪುನರ್ವಿಮರ್ಶೆಯಲ್ಲಿ ಭಾಗವಹಿಸಿರಿ. ನೀವು ನಿಮ್ಮ ಸ್ವಂತ ಮಾತುಗಳಲ್ಲಿ—ಇನ್ನೊಬ್ಬ ವ್ಯಕ್ತಿಗೆ ಕಲಿಸುವ ರೀತಿಯಲ್ಲಿ—ವಿಷಯಗಳನ್ನು ವಿವರಿಸಬಹುದು. (1 ಪೇತ್ರ 3:15) ಇದು, ನೀವು ಕಲಿತದ್ದನ್ನು ನಿಮ್ಮ ದೀರ್ಘಾವಧಿಯ ಜ್ಞಾಪಕಶಕ್ತಿಯ ಭಾಗವಾಗಿ ಮಾಡಲು ಸಹಾಯ ನೀಡುವುದು.—ಹೋಲಿಸಿ ಕೀರ್ತನೆ 119:1, 2, 125; 2 ಪೇತ್ರ 3:1.
12. ತನ್ನ ಜ್ಞಾಪಕಶಕ್ತಿಯನ್ನು ಉತ್ತಮಗೊಳಿಸಲು ವಿದ್ಯಾರ್ಥಿಯು ತಾನೇ ಏನು ಮಾಡಬಲ್ಲನು?
12 ಒಂದೆರಡು ದಿನಗಳೊಳಗೆ ನೀವು ಕಲಿತಿರುವುದನ್ನು ಇನ್ನೊಬ್ಬನಿಗೆ ಒಂದು ವೇಳೆ ಒಬ್ಬ ಶಾಲಾಸ್ನೇಹಿತನಿಗೆ, ಜೊತೆ ಕಾರ್ಮಿಕನಿಗೆ, ಯಾ ಒಬ್ಬ ನೆರೆಯವನಿಗೆ ಹೇಳುವುದು ಇನ್ನೊಂದು ಸಹಾಯಕರ ಹೆಜ್ಜೆಯಾಗಿರುವುದು. ನೀವು ವಿಷಯವಸ್ತುವನ್ನು ಪ್ರಸ್ತಾವಿಸಿದ ಮೇಲೆ, ಅದರ ತರ್ಕಸರಣಿಯನ್ನು ಅಥವಾ ಬೈಬಲಿನಿಂದ ಆಧಾರವಚನಗಳನ್ನು ಜ್ಞಾಪಿಸಿಕೊಳ್ಳಲು ಸಾಧ್ಯವಾಗುತ್ತದೊ ಎಂದು ಕೇವಲ ನೋಡಬಯಸುತ್ತೀರಿ ಎಂದು ಹೇಳಬಹುದು. ಇದು ಇನ್ನೊಬ್ಬ ವ್ಯಕ್ತಿಯ ಆಸಕ್ತಿಯನ್ನು ಕೆರಳಿಸಬಹುದು. ಅದು ಹಾಗೆ ಮಾಡದಿದ್ದರೂ, ಆ ಹೊಸ ಮಾಹಿತಿಯನ್ನು ಒಂದೆರಡು ದಿನಗಳ ಅವಧಿಯ ಬಳಿಕ ಪುನರಾವೃತ್ತಿಸುವ ಆ ಕಾರ್ಯಗತಿಯೇ, ಅದನ್ನು ನಿಮ್ಮ ಜ್ಞಾಪಕದಲ್ಲಿ ಸ್ಥಾಪಿಸುವುದು. ಆಗ ನೀವು 2 ಪೇತ್ರ 3:18 ಪ್ರೋತ್ಸಾಹಿಸುವುದನ್ನು ಮಾಡುತ್ತಾ, ಅದನ್ನು ನಿಜವಾಗಿಯೂ ಕಲಿತಿರುವಿರಿ.
ಕ್ರಿಯಾಶೀಲರಾಗಿ ಕಲಿಯುವುದು
13, 14. ಕೇವಲ ಮಾಹಿತಿ ಸಂಪಾದನೆ ಮತ್ತು ಸ್ಮರಣೆಯನ್ನು ಮೀರಿ ಹೋಗಲು ನಾವೇಕೆ ಬಯಸಬೇಕು?
13 ಕಲಿಕೆಯು ಕೇವಲ ನಿಜತ್ವಗಳನ್ನು ಪಡೆಯುವುದು ಯಾ ಮಾಹಿತಿಯನ್ನು ಜ್ಞಾಪಿಸಿಕೊಳ್ಳಲು ಶಕ್ತರಾಗಿರುವುದಕ್ಕಿಂತ ಹೆಚ್ಚಿನದ್ದಾಗಿದೆ. ಯೇಸುವಿನ ದಿನಗಳ ಧಾರ್ಮಿಕ ಜನರು ಪುನರಾವರ್ತನೆಯ ಪ್ರಾರ್ಥನೆಗಳ ಮೂಲಕ ಹಾಗೆ ಮಾಡಿದರು. (ಮತ್ತಾಯ 6:5-7) ಆದರೆ ಆ ಮಾಹಿತಿಯಿಂದ ಅವರು ಹೇಗೆ ಪ್ರಭಾವಿತರಾದರು? ಅವರು ನೀತಿಯ ಫಲಗಳನ್ನು ಫಲಿಸುತ್ತಿದ್ದರೊ? ನಿಶ್ಚಯವಾಗಿಯೂ ಇಲ್ಲ. (ಮತ್ತಾಯ 7:15-17; ಲೂಕ 3:7, 8) ಅಂಶಿಕ ಸಮಸ್ಯೆ ಏನಾಗಿತ್ತೆಂದರೆ, ಜ್ಞಾನವು ಅವರ ಹೃದಯದಾಳಕ್ಕೆ ಇಳಿಯಲಿಲ್ಲ ಮತ್ತು ಅವರನ್ನು ಒಳ್ಳೆಯದಕ್ಕಾಗಿ ಪ್ರಭಾವಿಸಲಿಲ್ಲ.
14 ಪೇತ್ರನಿಗನುಸಾರ, ಆಗಲೂ, ಈಗಲೂ, ಕ್ರೈಸ್ತರ ಸಂಬಂಧದಲ್ಲಿ ಇದು ಭಿನ್ನವಾಗಿರಬೇಕು. ನಾವು ನಮ್ಮ ನಂಬಿಕೆಗೆ ಜ್ಞಾನವನ್ನು ಒದಗಿಸುವಂತೆ ಅವನು ನಮ್ಮನ್ನು ಪ್ರೋತ್ಸಾಹಿಸುತ್ತಾನೆ. ಇದು ನಾವು ನಿಷ್ಕ್ರಿಯರೂ ಫಲರಹಿತರೂ ಆಗುವುದರಿಂದ ತಪ್ಪಿಸುವುದು. (2 ಪೇತ್ರ 1:5, 8) ಇದು ನಮ್ಮ ಸಂಬಂಧದಲ್ಲಿ ಸತ್ಯವಾಗಿ ಪರಿಣಮಿಸಬೇಕಾದರೆ, ನಾವು ಆ ಜ್ಞಾನದಲ್ಲಿ ಬೆಳೆಯಲು ಬಯಸಲೇಬೇಕು ಮತ್ತು ಅದು ನಮ್ಮ ಅಂತರಾತ್ಮವನ್ನೇ ಸ್ಪರ್ಶಿಸುತ್ತಾ, ಅತಿ ಆಳದಲ್ಲಿ ನಮ್ಮನ್ನು ಪ್ರಭಾವಿಸುವಂತೆ ಬಯಸಬೇಕು. ಅದು ಯಾವಾಗಲೂ ಸಂಭವಿಸಲಿಕ್ಕಿಲ್ಲ.
15. ಕೆಲವು ಇಬ್ರಿಯ ಕ್ರೈಸ್ತರಲ್ಲಿ ಯಾವ ಸಮಸ್ಯೆ ಬೆಳೆಯಿತು?
15 ಪೌಲನ ದಿನಗಳಲ್ಲಿ ಇಬ್ರಿಯ ಕ್ರೈಸ್ತರಿಗೆ ಈ ಸಂಬಂಧದಲ್ಲಿ ಒಂದು ಸಮಸ್ಯೆಯಿತ್ತು. ಯೆಹೂದ್ಯರಾಗಿದ್ದುದರಿಂದ, ಅವರಿಗೆ ಶಾಸ್ತ್ರದ ಸ್ವಲ್ಪ ಜ್ಞಾನವಿತ್ತು. ಅವರು ಯೆಹೋವನ ಮತ್ತು ಆತನ ಕೆಲವು ಆವಶ್ಯಕತೆಗಳ ಕುರಿತು ತಿಳಿದಿದ್ದರು. ಅನಂತರ ಅವರು ಮೆಸ್ಸೀಯನ ಜ್ಞಾನವನ್ನು ಕೂಡಿಸಿ, ನಂಬಿಕೆಯನ್ನು ಪ್ರದರ್ಶಿಸಿ, ಕ್ರೈಸ್ತರಾಗಿ ದೀಕ್ಷಾಸ್ನಾನ ಹೊಂದಿದರು. (ಅ. ಕೃತ್ಯಗಳು 2:22, 37-41; 8:26-36) ತಿಂಗಳುಗಳು ಮತ್ತು ವರ್ಷಗಳಲ್ಲಿ, ಅವರು ಕ್ರೈಸ್ತ ಕೂಟಗಳಲ್ಲಿ ಉಪಸ್ಥಿತರಾಗಿದ್ದಿರಬೇಕು. ಅಲ್ಲಿ ಅವರು ವಚನಗಳನ್ನು ಓದುವುದರಲ್ಲಿ ಮತ್ತು ಹೇಳಿಕೆಗಳನ್ನು ಕೊಡುವುದರಲ್ಲಿ ಭಾಗವಹಿಸಿದ್ದಿರಬೇಕು. ಆದರೂ, ಕೆಲವರು ಜ್ಞಾನದಲ್ಲಿ ಬೆಳೆಯಲಿಲ್ಲ. ಪೌಲನು ಬರೆದುದು: “ಕಾಲವನ್ನು ನೋಡಿದರೆ ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ ಒಬ್ಬನು ನಿಮಗೆ ದೈವೋಕ್ತಿಗಳ ಮೂಲಪಾಠಗಳನ್ನು ತಿರಿಗಿ ಕಲಿಸಿಕೊಡಬೇಕಾಗಿದೆ; ನೀವು ಹಾಲು ಕುಡಿಯತಕ್ಕವರೇ ಹೊರತು ಗಟ್ಟಿಯಾದ ಆಹಾರವನ್ನು ತಿನ್ನತಕ್ಕವರಲ್ಲ.” (ಇಬ್ರಿಯ 5:12) ಇದು ಹೇಗೆ ಆಗಬಲ್ಲದು? ಅದು ನಮಗೂ ಆಗುವ ಸಂಭವ ಇದ್ದೀತೆ?
16. ಪರ್ಮಫ್ರಾಸ್ಟ್ ಎಂದರೇನು, ಮತ್ತು ಅದು ಗಿಡಗಳನ್ನು ಹೇಗೆ ಪ್ರಭಾವಿಸುತ್ತದೆ?
16 ಒಂದು ದೃಷ್ಟಾಂತವಾಗಿ, ಸಾಮಾನ್ಯ ತಾಪಮಾನವು ಘನೀಭವಿಸುವುದರ ಕೆಳಗಿರುವ ಉತ್ತರ ಧ್ರುವ ವೃತ್ತ ಮತ್ತು ಇತರ ಪ್ರದೇಶಗಳ ಕಾಯಂ ಘನೀಭವಿಸಿರುವ ನೆಲವಾದ ಪರ್ಮಫ್ರಾಸ್ಟ್, ಚಿರಸ್ಥಾಯಿ ಘನಹಿಮವನ್ನು ಪರಿಗಣಿಸಿರಿ. ಅಲ್ಲಿ ಮಣ್ಣು, ಬಂಡೆಗಳು, ಮತ್ತು ನೆಲನೀರು, ಕೆಲವು ಬಾರಿ 900 ಮೀಟರ್ ಆಳಕ್ಕೂ ಗಟ್ಟಿ ಮುದ್ದೆಯಾಗುತ್ತದೆ. ಬೇಸಗೆಯಲ್ಲಿ, (ಆ್ಯಕ್ಟಿವ್ ಲೇಯರ್ ಎಂದು ಕರೆಯಲ್ಪಡುವ) ಮೇಲ್ಮೈ ಪದರ ಕರಗಬಹುದು. ಆದರೂ, ಈ ಕರಗಿದ ಮಣ್ಣಿನ ತೆಳ್ಳಗಿನ ಪದರವು ಸಾಧಾರಣವಾಗಿ ಕೆಸರಾಗಿದೆ, ಏಕೆಂದರೆ ತೇವವು ಕೆಳಗಿರುವ ಪರ್ಮಫ್ರಾಸ್ಟ್ನೊಳಗೆ ಹರಿದು ಹೋಗುವುದಿಲ್ಲ. ಆ ಮೇಲ್ಮೈ ಪದರದಲ್ಲಿ ಬೆಳೆಯುವ ಗಿಡಗಳು ಅನೇಕ ವೇಳೆ ಚಿಕ್ಕ ಗಾತ್ರದವುಗಳೂ ಯಾ ಕುಂಠಿತವೂ ಆಗಿವೆ; ಅವುಗಳ ಬೇರುಗಳಿಗೆ ಪರ್ಮಫ್ರಾಸ್ಟನ್ನು ತೂರಿಹೋಗಲಾಗುವುದಿಲ್ಲ. ‘ಬೈಬಲ್ ಸತ್ಯದ ಜ್ಞಾನದಲ್ಲಿ ನಾನು ಬೆಳೆಯುತ್ತಿದ್ದೇನೋ ಎಂಬುದಕ್ಕೂ ಪರ್ಮಫ್ರಾಸ್ಟಿಗೂ ಸಂಬಂಧವೇನು?’ ಎಂದು ನೀವು ಕೇಳಲು ಕುತೂಹಲವುಳ್ಳವರಾಗಬಹುದು.
17, 18. ಕೆಲವು ಇಬ್ರಿಯ ಕ್ರೈಸ್ತರಲ್ಲಿ ಬೆಳೆದ ಸಂಗತಿಯನ್ನು ಪರ್ಮಫ್ರಾಸ್ಟ್ ಮತ್ತು ಅದರ ಕ್ರಿಯಾಶೀಲ ಪದರವನ್ನು ಉಪಯೋಗಿಸಿ ಹೇಗೆ ಚಿತ್ರಿಸಬಹುದು?
17 ಯಾರ ಮಾನಸಿಕ ಶಕ್ತಿಗಳು ಒಳಗೆ ತೆಗೆದುಕೊಳ್ಳುವುದರಲ್ಲಿ, ನೆನಪು ಮಾಡುವುದರಲ್ಲಿ, ಮತ್ತು ನಿಷ್ಕೃಷ್ಟ ಜ್ಞಾನವನ್ನು ಬಳಸುವುದರಲ್ಲಿ ಕ್ರಿಯಾಶೀಲವಾಗಿ ಸೇರಿಕೊಂಡಿಲ್ಲವೊ ಅಂತಹ ಒಬ್ಬನ ಸನ್ನಿವೇಶವನ್ನು ಪರ್ಮಫ್ರಾಸ್ಟ್ ಉತ್ತಮವಾಗಿ ಚಿತ್ರಿಸುತ್ತದೆ. (ಮತ್ತಾಯ 13:5, 20, 21, ಹೋಲಿಸಿ.) ಆ ವ್ಯಕ್ತಿಗೆ ಬೈಬಲ್ ಸತ್ಯವನ್ನು ಸೇರಿಸಿ, ವಿವಿಧ ವಿಷಯಗಳನ್ನು ಕಲಿಯುವ ಮಾನಸಿಕ ಸಾಮರ್ಥ್ಯವಿರುವುದು ಸಂಭವನೀಯ. ಅವನು “ದೈವೋಕ್ತಿಗಳ ಮೂಲಪಾಠಗಳನ್ನು” ಕಲಿತು, ಆ ಇಬ್ರಿಯ ಕ್ರೈಸ್ತರಂತೆ ದೀಕ್ಷಾಸ್ನಾನಕ್ಕೆ ಅರ್ಹತೆ ಪಡೆದಿರಬಹುದು. ಆದರೆ ಅವನು “ಕ್ರಿಸ್ತನ ವಿಷಯವಾದ ಪ್ರಥಮ ಬೋಧನೆಯನ್ನು” ದಾಟಿ, “ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ” ಹೋಗದೆ ಇರಬಹುದು.—ಇಬ್ರಿಯ 5:12; 6:1.
18 ಆಗಿನ ಕೂಟಗಳಲ್ಲಿದ್ದ ಕೆಲವು ಕ್ರೈಸ್ತರನ್ನು ಚಿತ್ರಿಸಿಕೊಳ್ಳಿರಿ. ಅವರು ಉಪಸ್ಥಿತರೂ ಎಚ್ಚರಿಕೆಯುಳ್ಳವರೂ ಆಗಿದ್ದರು, ಆದರೆ ಅವರ ಮನಗಳು ಕಲಿಕೆಯಲ್ಲಿ ಸೇರಿಕೊಂಡಿದ್ದವೊ? ಅವರು ಕ್ರಿಯಾಶೀಲವಾಗಿಯೂ ಶ್ರದ್ಧಾಪೂರ್ವಕವಾಗಿಯೂ ಜ್ಞಾನದಲ್ಲಿ ಬೆಳೆಯುತ್ತಿದ್ದರೊ? ಪ್ರಾಯಶಃ ಇಲ್ಲ. ಅಪಕ್ವವಾಗಿದವ್ದರಿಗೆ ಕೂಟಗಳಲ್ಲಿದ್ದ ಯಾವುದೇ ಸೇರಿಕೆಯು ಆ ತೆಳ್ಳಗಿನ ಕ್ರಿಯಾಶೀಲ ಪದರದಲ್ಲಿಯೋ ಎಂಬಂತೆ ಸಂಭವಿಸಿತು, ಕೆಳಗೆ ಘನೀಭವಿಸಿದ ಆಳವಿತ್ತು. ಈ ಮಾನಸಿಕ ಪರ್ಮಫ್ರಾಸ್ಟಿನ ಪ್ರದೇಶಕ್ಕೆ ಹೆಚ್ಚು ಗಟ್ಟಿಯಾದ ಯಾ ಜಟಿಲವಾದ ಸತ್ಯಗಳ ಬೇರುಗಳು ತೂರಿ ಹೋಗಲು ಸಾಧ್ಯವಿರಲಿಲ್ಲ.—ಯೆಶಾಯ 40:24 ಹೋಲಿಸಿ.
19. ಇಂದು ಒಬ್ಬ ಅನುಭವಿಯಾದ ಕ್ರೈಸ್ತನು ಯಾವ ರೀತಿಯಲ್ಲಿ ಆ ಇಬ್ರಿಯ ಕ್ರೈಸ್ತರಂತಾಗಬಹುದು?
19 ಇಂದು ಒಬ್ಬ ಕ್ರೈಸ್ತನ ಸಂಬಂಧದಲ್ಲಿಯೂ ಸಮಾನವಾದ ಪರಿಸ್ಥಿತಿಯಿರಬಲ್ಲದು. ಕೂಟಗಳಲ್ಲಿ ಉಪಸ್ಥಿತನಾಗಿರುವಾಗ ಅವನು ಆ ಸಂದರ್ಭಗಳನ್ನು ಜ್ಞಾನದಲ್ಲಿ ಬೆಳೆಯಲಿಕ್ಕಾಗಿ ಉಪಯೋಗಿಸಲಿಕ್ಕಿಲ್ಲ. ಅವುಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸುವುದರ ವಿಷಯವೇನು? ಒಬ್ಬ ಹೊಸಬನಿಗೆ ಯಾ ಎಳೆಯನಿಗೆ ಒಂದು ಶಾಸ್ತ್ರ ವಚನವನ್ನು ಓದಲು ಯಾ ಪರಿಚ್ಛೇದದ ಮಾತುಗಳಲ್ಲಿ ಹೇಳಿಕೆಯನ್ನು ನೀಡಲು ಗಣನೀಯ ಪ್ರಯತ್ನ ಅವನ ಸಾಮರ್ಥ್ಯದ ಉತ್ತಮ ಮತ್ತು ಪ್ರಶಂಸಾರ್ಹ ಉಪಯೋಗವನ್ನೂ ಪ್ರತಿಬಂಧಿಸುವ, ಗಣನೀಯ ಪ್ರಯತ್ನದ ಅಗತ್ಯವಿರಬಹುದು. ಆದರೆ ಇತರರು, ಅವರು ಕ್ರೈಸ್ತರಾಗಿದ್ದ ಸಮಯದ ವೀಕ್ಷಣದಲ್ಲಿ, ಜ್ಞಾನದಲ್ಲಿ ಬೆಳೆಯುತ್ತಾ ಹೋಗಬೇಕಾದರೆ, ಭಾಗವಹಿಸುವಿಕೆಯ ಆ ಪ್ರಾಥಮಿಕ ಹಂತವನ್ನು ದಾಟಿ ಅವರು ಮುಂದುವರಿಯಬೇಕೆಂದು ಪೌಲನು ಹೇಳಿದನು.—ಇಬ್ರಿಯ 5:14.
20. ನಮ್ಮಲ್ಲಿ ಪ್ರತಿಯೊಬ್ಬನು ಯಾವ ಆತ್ಮವಿಶ್ಲೇಷಣೆಯನ್ನು ಮಾಡಬೇಕು?
20 ಒಬ್ಬ ಅನುಭವಿಯಾದ ಕ್ರೈಸ್ತನು, ಒಂದು ಬೈಬಲ್ ವಚನವನ್ನು ಓದುವ ಇಲ್ಲವೆ ಪರಿಚ್ಛೇದದಿಂದ ನೇರವಾಗಿ ಎತ್ತಿ ಹೇಳುವ ಮೂಲ ಹೇಳಿಕೆಯ ಹಂತವನ್ನು ಎಂದಿಗೂ ಮೀರಿಹೋಗದಿದ್ದರೆ, ಅವನ ಭಾಗವಹಿಸುವಿಕೆ ಅವನ ಮನಸ್ಸಿನ ಮೇಲ್ಮೈಯ “ಕ್ರಿಯಾಶೀಲ ಪದರ” ದಿಂದ ಬಂದಿರುವುದು ಸಂಭಾವ್ಯ. ಪರ್ಮಫ್ರಾಸ್ಟ್ನ ಚಿತ್ರೀಕರಣವನ್ನು ಮುಂದುವರಿಸುವುದಾದರೆ, ಕೂಟಗಳ ಹಿಂದೆ ಕೂಟಗಳು ಕಳೆದರೂ, ಅವನ ಮಾನಸಿಕ ಸಾಮರ್ಥ್ಯದ ಆಳಗಳು ಘನೀಭವಿಸಿದ ಸ್ಥಿತಿಯಲ್ಲಿಯೇ ಉಳಿಯುತ್ತವೆ. ನಾವು ನಮ್ಮನ್ನೇ ಕೇಳಿಕೊಳ್ಳಬೇಕು: ‘ನನ್ನ ಸಂಬಂಧದಲ್ಲಿ ಇದು ನಿಜವೆ? ನಾನು ಒಂದು ಮಾನಸಿಕ ಪರ್ಮಫ್ರಾಸ್ಟ್ನಂತಿರುವುದನ್ನು ನೆಲೆನಿಲ್ಲುವಂತೆ ಬಿಟ್ಟಿದೇನ್ದೊ? ಕಲಿಕೆಯಲ್ಲಿ ನಾನು ಮಾನಸಿಕವಾಗಿ ಎಷ್ಟು ಎಚ್ಚರದಿಂದಲೂ ಆಸಕ್ತಿಯಿಂದಲೂ ಇದ್ದೇನೆ?’ ನಮ್ಮ ಪ್ರಾಮಾಣಿಕ ಉತ್ತರಗಳಿಂದ ನಮಗೆ ಅಹಿತಕರ ಅನುಭವವಾಗಬಹುದಾದರೂ, ಜ್ಞಾನದಲ್ಲಿ ಬೆಳೆಯುವ ಹೆಜ್ಜೆಗಳನ್ನು ಇಡಲು ನಾವೀಗ ತೊಡಗಬಲ್ಲೆವು.
21. ಈ ಮೊದಲು ಚರ್ಚಿಸಿರುವ ಯಾವ ಹೆಜ್ಜೆಗಳನ್ನು, ಕೂಟಗಳಿಗೆ ತಯಾರಿಸುವಾಗ ಇಲ್ಲವೆ ಹಾಜರಾಗುವಾಗ ನೀವು ಅನ್ವಯಿಸಬಹುದು?
21 ನಾವು ವ್ಯಕ್ತಿಪರವಾಗಿ 8 ನೆಯ ಪರಿಚ್ಛೇದದ ಸೂಚನೆಗಳನ್ನು ಪ್ರಯೋಗಿಸಿಕೊಳ್ಳಬಲ್ಲೆವು. ನಾವು ಸಭೆಯೊಂದಿಗೆ ಎಷ್ಟು ದೀರ್ಘಕಾಲವೇ ಜೊತೆಗೊಂಡಿದಿರ್ದಲಿ, ಪಕ್ವತೆ ಮತ್ತು ಅಧಿಕ ಜ್ಞಾನಕ್ಕೆ ಒತ್ತಿ ಮುಂದುವರಿಯಲು ನಾವು ನಿರ್ಧರಿಸಬಲ್ಲೆವು. ಕೆಲವರ ಸಂಬಂಧದಲ್ಲಿ, ಇದರ ಅರ್ಥವು, ಪ್ರಾಯಶಃ ಅನೇಕ ವರ್ಷಗಳ ಹಿಂದೆ ಅನುಸರಿಸುತ್ತಿದ್ದ, ಆದರೆ ಬಳಿಕ ನಿಧಾನವಾಗಿ ಹಿಮ್ಮರಳಿದ ಹವ್ಯಾಸಗಳನ್ನು ಪುನರುಜ್ಜೀವಿಸಿಕೊಂಡು, ಹೆಚ್ಚು ಶ್ರದ್ಧೆಯಿಂದ ಕೂಟಗಳಿಗೆ ತಯಾರಿಸುವುದೆಂದಾಗಿದೆ. ನೀವು ತಯಾರಿಸುವಾಗ, ಮುಖ್ಯ ವಿಷಯಗಳಾವುವು ಎಂಬುದನ್ನು ನಿರ್ಧರಿಸಲು ಮತ್ತು ತರ್ಕಸರಣಿಯನ್ನು ವಿಕಸಿಸಲು ಉಪಯೋಗಿಸಿರುವ ಅಪರಿಚಿತ ಶಾಸ್ತ್ರವಚನಗಳನ್ನು ತಿಳಿಯಲು ಪ್ರಯತ್ನಿಸಿರಿ. ಅಧ್ಯಯನ ಸಮಾಚಾರದಲ್ಲಿರುವ ಯಾವುದೇ ಹೊಸ ದೃಷ್ಟಿಕೋನ ಯಾ ಮುಖವನ್ನು ಹುಡುಕಿರಿ. ತದ್ರೀತಿ, ಕೂಟದ ಸಮಯದಲ್ಲಿ, ಪರಿಚ್ಛೇದ 10 ಮತ್ತು 11 ರಲ್ಲಿ ಹೇಳಿರುವ ಸೂಚನೆಗಳನ್ನು ನಿಮ್ಮಲ್ಲಿಯೇ ಅನ್ವಯಿಸಿಕೊಳ್ಳಲು ಪ್ರಯತ್ನಿಸಿರಿ. ನಿಮ್ಮ ಮನದ ತಾಪಮಾನವನ್ನು ಬಿಸಿಯಾಗಿ ಇಡುತ್ತೀರೊ ಎಂಬಂತೆ, ಮಾನಸಿಕವಾಗಿ ಎಚ್ಚರದಿಂದಿರಲು ಪ್ರಯತ್ನಿಸಿರಿ. ಇದು “ಪರ್ಮಫ್ರಾಸ್ಟ್” ನೆಲೆನಿಲ್ಲುವ ಯಾವುದೇ ಪ್ರವೃತ್ತಿಯನ್ನು ಪ್ರತೀಕರಿಸುವುದು; ಈ ಪ್ರಜ್ಞಾಪೂರ್ವಕವಾದ ಪ್ರಯತ್ನವು ಈ ಹಿಂದೆ ಬೆಳೆದಿರಬಹುದಾಗಿರುವ ಯಾವುದೇ “ಘನೀಭವಿಸಿದ” ಸ್ಥಿತಿಯನ್ನು ಕರಗಿಸುವುದು ಕೂಡ.—ಜ್ಞಾನೋಕ್ತಿ 8:12, 32-34.
ಜ್ಞಾನ, ಫಲೋತ್ಪಾದನೆಗೆ ಒಂದು ಸಹಾಯಕ
22. ನಮ್ಮ ಜ್ಞಾನ ವರ್ಧನದ ವಿಷಯದಲ್ಲಿ ಕೆಲಸ ಮಾಡುವುದಾದರೆ ನಾವು ಹೇಗೆ ಪ್ರಯೋಜನ ಪಡೆಯುವೆವು?
22 ನಮ್ಮ ಕರ್ತನೂ ರಕ್ಷಕನೂ ಆದ ಯೇಸು ಕ್ರಿಸ್ತನ ಅಪಾತ್ರ ಕೃಪೆ ಮತ್ತು ಜ್ಞಾನದಲ್ಲಿ ಬೆಳೆಯುವ ಈ ವಿಷಯದಲ್ಲಿ ಶ್ರಮಪಡುವಲ್ಲಿ, ನಾವು ವೈಯಕ್ತಿಕವಾಗಿ ಹೇಗೆ ಪ್ರಯೋಜನ ಪಡೆಯುವೆವು? ನಮ್ಮ ಮಾನಸಿಕ ಶಕ್ತಿಗಳನ್ನು ಚುರುಕಾಗಿಸಲು ಪ್ರಜ್ಞಾಪೂರ್ವಕವಾದ ಪ್ರಯತ್ನವನ್ನು ಮಾಡುತ್ತ, ಜ್ಞಾನವನ್ನು ಒಳಗೆ ತೆಗೆದುಕೊಳ್ಳಲು ಸಿದ್ಧರಾಗಿರುವಲ್ಲಿ, ಹೊಸ ಮತ್ತು ಹೆಚ್ಚು ಜಟಿಲವಾದ ಬೈಬಲ್ ಸತ್ಯಗಳ ಬೀಜಗಳು ಆಳವಾದ ಬೇರುಗಳನ್ನು ಕಳುಹಿಸುವುವು, ಮತ್ತು ನಮ್ಮ ತಿಳಿವಳಿಕೆ ವರ್ಧಿಸಿ, ಚಿರಸ್ಥಾಯಿಯಾಗುವುದು. ಯೇಸು ಹೃದಯಗಳ ಒಂದು ಭಿನ್ನವಾದ ದೃಷ್ಟಾಂತದಲ್ಲಿ ಹೇಳಿದುದಕ್ಕೆ ಹೋಲಿಕೆಯಾಗಿ ಇದಿರುವುದು. (ಲೂಕ 8:5-12) ಒಳ್ಳೆಯ ಮಣ್ಣಿನಲ್ಲಿ ಬೀಳುವ ಬೀಜಗಳು, ಉತ್ಪಾದನೆ ಮತ್ತು ಹಣ್ಣು ಕೊಡುವ ಗಿಡಗಳಿಗೆ ಆಧಾರವಾಗಿರಲು ಬಲವಾದ ಬೇರುಗಳನ್ನು ಬಿಡಬಲ್ಲವು.—ಮತ್ತಾಯ 13:8, 23.
23. ನಾವು 2 ಪೇತ್ರ 3:18 ನ್ನು ಹೃದಯಕ್ಕೆ ತೆಗೆದುಕೊಳ್ಳುವಲ್ಲಿ ಯಾವ ಫಲಿತಾಂಶಗಳು ಬರಬಲ್ಲವು? (ಕೊಲೊಸ್ಸೆ 1:9-12)
23 ಯೇಸುವಿನ ದೃಷ್ಟಾಂತ ತುಸು ಭಿನ್ನವಾಗಿದ್ದರೂ, ಉತ್ತಮ ಫಲಿತಾಂಶಗಳು ಪೇತ್ರನು ವಾಗ್ದಾನಿಸಿದುದಕ್ಕೆ ಸದೃಶವಾಗಿದ್ದವು: “ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ . . . ಕೂಡಿಸಿರಿ. ಇವು ನಿಮ್ಮಲ್ಲಿದ್ದು ಹೆಚ್ಚುತ್ತಾ ಬಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸಂಬಂಧವಾದ ಪರಿಜ್ಞಾನವನ್ನು ಹೊಂದುವ ವಿಷಯದಲ್ಲಿ ನಿಮ್ಮನ್ನು ಆಲಸ್ಯಗಾರರೂ ನಿಷ್ಫಲರೂ ಆಗದಂತೆ ಮಾಡುತ್ತವೆ.” (2 ಪೇತ್ರ 1:5-8) ಹೌದು, ಜ್ಞಾನದಲ್ಲಿ ನಮ್ಮ ಬೆಳವಣಿಗೆಯು ನಮ್ಮನ್ನು ಫಲಪ್ರದರಾಗಿ ಮಾಡಲು ಸಹಾಯ ಮಾಡುವುದು. ಇನ್ನೂ ಹೆಚ್ಚು ಜ್ಞಾನವನ್ನು ಒಳಗೆ ತೆಗೆದುಕೊಳ್ಳುವುದು ಸದಾ ಹೆಚ್ಚು ಆಹ್ಲಾದಕರವಾಗಿರುವುದನ್ನು ನಾವು ಕಂಡುಕೊಳ್ಳುವೆವು. (ಜ್ಞಾನೋಕ್ತಿ 2:2-5) ನೀವು ಯಾವುದನ್ನು ಕಲಿಯುತ್ತೀರೊ ಅದು ಹೆಚ್ಚು ಸುಲಭವಾಗಿ ನಿಮ್ಮೊಂದಿಗೆ ಉಳಿಯುವುದು ಮತ್ತು ಶಿಷ್ಯರಾಗಲು ಇತರರಿಗೆ ಕಲಿಸುವಾಗ ಅದು ನಿಮಗೆ ಉಪಯುಕ್ತವಾಗಿರುವುದು. ಹೀಗೆ, ಈ ವಿಧದಲ್ಲಿ ಸಹ, ನೀವು ಹೆಚ್ಚು ಫಲಭರಿತರಾಗುವಿರಿ ಮತ್ತು ದೇವರಿಗೆ ಮತ್ತು ಆತನ ಕುಮಾರನಿಗೆ ಮಹಿಮೆಯನ್ನು ತರುವಿರಿ. ಪೇತ್ರನು ತನ್ನ ಎರಡನೆಯ ಪತ್ರವನ್ನು ಮುಕ್ತಾಯಗೊಳಿಸಿದ್ದು: “ನೀವು ಕೃಪೆಯಲ್ಲಿಯೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ವಿಷಯವಾದ ಜ್ಞಾನದಲ್ಲಿಯೂ ಅಭಿವೃದ್ಧಿಯನ್ನು ಹೊಂದುತ್ತಾ ಇರ್ರಿ. ಆತನಿಗೆ ಈಗಲೂ ಸದಾಕಾಲವೂ ಸ್ತೋತ್ರ.”—2 ಪೇತ್ರ 3:18.
[ಅಧ್ಯಯನ ಪ್ರಶ್ನೆಗಳು]
a “ಅದು, ಚಂದ್ರನ ಕುರಿತು ಹೆಚ್ಚು ಕಲಿಯಲು ಆಸಕ್ತನಾಗಿರುವ ಒಬ್ಬ ಮನುಷ್ಯನು, ಆ ಜ್ಯೋತಿಯನ್ನು ಹೆಚ್ಚು ಒತ್ತಾಗಿ ಪರೀಕ್ಷಿಸುವ ಉದ್ದೇಶದಿಂದ ತನ್ನ ಮನೆಯ ಚಾವಣಿಯನ್ನು ಹತ್ತುವಾಗ ದೊರೆಯುವುದಕ್ಕೆ ಸಮಾನ.”
b ಈ ಭಾಗದ ಮೊದಲ ಎರಡು ಗುಣಗಳಾದ ನಂಬಿಕೆ ಮತ್ತು ಸದ್ಗುಣಗಳನ್ನು ನಮ್ಮ ಜುಲೈ 15, 1993 ರ ಸಂಚಿಕೆಯಲ್ಲಿ ಚರ್ಚಿಸಲಾಗಿದೆ.
c ದೀರ್ಘಕಾಲದ ಕ್ರೈಸ್ತರು ತಮ್ಮ ವೈಯಕ್ತಿಕ ಅಧ್ಯಯನ ಮತ್ತು ಕೂಟಗಳಿಗೆ ತಯಾರಿಯಿಂದ ಹೆಚ್ಚಿನದನ್ನು ಪಡೆಯುವಂತೆಯೂ ಈ ಸೂಚನೆಗಳು ಸಹಾಯಮಾಡಬಲ್ಲವು.
ಜ್ಞಾಪಕಕ್ಕೆ ತರಬಲ್ಲಿರೊ?
▫ ನಿಮ್ಮ ಜ್ಞಾನವನ್ನು ವರ್ಧಿಸುವ ವಿಷಯದಲ್ಲಿ ನೀವೇಕೆ ಆಸಕ್ತರಾಗಿರಬೇಕು?
▫ ಒಬ್ಬ ಹೊಸ ಬೈಬಲ್ ವಿದ್ಯಾರ್ಥಿ ತನ್ನ ಅಧ್ಯಯನದಿಂದ ಹೇಗೆ ಹೆಚ್ಚು ಪ್ರಯೋಜನವನ್ನು ಪಡೆಯಬಲ್ಲನು?
▫ ಪರ್ಮಫ್ರಾಸ್ಟಿನಿಂದ ಚಿತ್ರಿತವಾಗಿರುವಂತೆ, ಯಾವ ಅಪಾಯವನ್ನು ತಪ್ಪಿಸಲು ನೀವು ಬಯಸುವಿರಿ?
▫ ಜ್ಞಾನ ವರ್ಧನದ ಸಾಮರ್ಥ್ಯವನ್ನು ಉತ್ತಮಗೊಳಿಸಲು ನೀವೇಕೆ ನಿರ್ಧರಿಸಬೇಕು?
[ಪುಟ 15 ರಲ್ಲಿರುವ ಚಿತ್ರ]
ನನಗೆ ಮಾನಸಿಕ ಪರ್ಮಫ್ರಾಸ್ಟಿನ ಸಮಸ್ಯೆ ಇದೆಯೆ?