ಯುವ ಜನರೇ—ನಿಮ್ಮ ಗ್ರಹಣಶಕ್ತಿಗಳನ್ನು ತರಬೇತುಗೊಳಿಸಿರಿ!
“ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ, ಅಂದರೆ ಉಪಯೋಗದ ಮೂಲಕ ಸರಿತಪ್ಪಿನ ಮಧ್ಯೆ ಭೇದಕಲ್ಪಿಸಲು ತಮ್ಮ ಗ್ರಹಣಶಕ್ತಿಗಳನ್ನು ತರಬೇತುಗೊಳಿಸಿರುವವರಿಗಾಗಿದೆ.”—ಇಬ್ರಿಯ 5:14, NW.
1, 2. (ಎ) ಇಂದು ನಮ್ಮ ಸನ್ನಿವೇಶವು ಎಫೆಸದಲ್ಲಿದ್ದ ಗತಕಾಲದ ಕ್ರೈಸ್ತರ ಸನ್ನಿವೇಶಕ್ಕೆ ಹೇಗೆ ಹೋಲುತ್ತದೆ? (ಬಿ) ಯಾವ ಸಾಮರ್ಥ್ಯಗಳು ನಿಮ್ಮನ್ನು ಅಪಾಯದಿಂದ ರಕ್ಷಿಸಬಲ್ಲವು, ಮತ್ತು ನೀವು ಅವುಗಳನ್ನು ಹೇಗೆ ವಿಕಸಿಸಿಕೊಳ್ಳಬಲ್ಲಿರಿ?
“ಆದಕಾರಣ ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದೆಂದು [“ನಿಮಗಾಗಿ ಉಚಿತವಾದ ಕಾಲವನ್ನು ಖರೀದಿಸುತ್ತಾ,” NW] ಉಪಯೋಗಿಸಿಕೊಳ್ಳಿರಿ.” (ಎಫೆಸ 5:15, 16) ಈ ಮಾತುಗಳನ್ನು ಅಪೊಸ್ತಲ ಪೌಲನು ಎರಡು ಸಾವಿರ ವರ್ಷಗಳ ಹಿಂದೆ ಬರೆದ ಸಮಯದಿಂದ, ‘ದುಷ್ಟರೂ ವಂಚಕರೂ ಹೆಚ್ಚಾದ ಕೆಟ್ಟತನಕ್ಕೆ ಮುಂದುವರಿದಿದ್ದಾರೆ.’ “ನಿಭಾಯಿಸಲು ಕಠಿನವಾದ ಸಮಯಗಳಲ್ಲಿ” ಅಥವಾ ಮತ್ತೊಂದು ಅನುವಾದವು ಹೇಳುವಂತೆ, “ಅಪಾಯವು ತುಂಬಿತುಳುಕುವ” ಸಮಯಗಳಲ್ಲಿ ನಾವು ಜೀವಿಸುತ್ತಿದ್ದೇವೆ.—2 ತಿಮೊಥೆಯ 3:1-5, 13; ಫಿಲಿಪ್ಸ್.
2 ಆದರೆ, ನಿಮ್ಮ ಮಾರ್ಗದಲ್ಲಿ ಅವಿತುಕೊಂಡು ಹೊಂಚುಹಾಕುತ್ತಿರುವ ಗಂಡಾಂತರಗಳಿಂದ ಹಾನಿಗೊಳಗಾಗುವುದನ್ನು, “ಬುದ್ಧಿವಂತಿಕೆ, . . . ಜ್ಞಾನ ಮತ್ತು ಯೋಚಿಸುವ ಸಾಮರ್ಥ್ಯವನ್ನು” ಬೆಳೆಸಿಕೊಳ್ಳುವ ಮೂಲಕ ನೀವು ತಡೆಗಟ್ಟಬಹುದು. (ಜ್ಞಾನೋಕ್ತಿ 1:4, NW) ಜ್ಞಾನೋಕ್ತಿ 2:10-12 ಹೇಳುವುದು: “ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವದು, ತಿಳುವಳಿಕೆಯು ನಿನ್ನ ಆತ್ಮಕ್ಕೆ ಅಂದವಾಗಿರುವದು. ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು ನಿನ್ನನ್ನು ಕಾಪಾಡುವದು; ಇದರಿಂದ ನೀನು ದುರ್ಮಾರ್ಗದಿಂದಲೂ ಕೆಟ್ಟ ಮಾತನಾಡುವವರಿಂದಲೂ ತಪ್ಪಿಸಿಕೊಳ್ಳುವಿ.” ಆದರೆ, ಈ ಸಾಮರ್ಥ್ಯಗಳನ್ನು ನೀವು ಹೇಗೆ ತಾನೇ ಬೆಳೆಸಿಕೊಳ್ಳಸಾಧ್ಯವಿದೆ? ಇಬ್ರಿಯ 5:14 ಹೇಳುವುದು: “ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ, ಅಂದರೆ ಉಪಯೋಗದ ಮೂಲಕ ಸರಿತಪ್ಪಿನ ಮಧ್ಯೆ ಭೇದಕಲ್ಪಿಸಲು ತಮ್ಮ ಗ್ರಹಣಶಕ್ತಿಗಳನ್ನು ತರಬೇತುಗೊಳಿಸಿರುವವರಿಗಾಗಿದೆ.” ಬೇರೆ ಯಾವುದೇ ಕೌಶಲದ ವಿಷಯದಲ್ಲಿ ಸತ್ಯವಾಗಿರುವಂತೆ, ಗ್ರಹಣಶಕ್ತಿಗಳ ಉಪಯೋಗದಲ್ಲಿ ನೈಪುಣ್ಯವನ್ನು ಪಡೆದುಕೊಳ್ಳಲು ತರಬೇತಿಯು ಅಗತ್ಯ. ಪೌಲನು ಇಲ್ಲಿ ಉಪಯೋಗಿಸಿದ ಗ್ರೀಕ್ ಪದದ ಅಕ್ಷರಾರ್ಥವು, ‘ಒಬ್ಬ ಅಂಗಸಾಧಕನಂತೆ ತರಬೇತಿ ಪಡೆದಿರುವುದನ್ನು’ ಸೂಚಿಸುತ್ತದೆ. ಅಂತಹ ತರಬೇತಿಯನ್ನು ನೀವು ಹೇಗೆ ಆರಂಭಿಸಸಾಧ್ಯವಿದೆ?
ನಿಮ್ಮ ಗ್ರಹಣಶಕ್ತಿಗಳನ್ನು ತರಬೇತುಗೊಳಿಸುವುದು
3. ನಿರ್ಣಯವೊಂದನ್ನು ಮಾಡಬೇಕಾದಾಗ, ನೀವು ನಿಮ್ಮ ಗ್ರಹಣಶಕ್ತಿಗಳನ್ನು ಹೇಗೆ ಉಪಯೋಗಿಸುವಿರಿ?
3 ನಿಮ್ಮ ಗ್ರಹಣಶಕ್ತಿಗಳು, ಅಂದರೆ ಸರಿತಪ್ಪುಗಳ ವ್ಯತ್ಯಾಸವನ್ನು ವಿವೇಚಿಸುವ ಸಾಮರ್ಥ್ಯವು, “ಉಪಯೋಗದ ಮೂಲಕ” ತರಬೇತುಗೊಳಿಸಲ್ಪಡುತ್ತದೆ. ನೀವು ಒಂದು ನಿರ್ಣಯವನ್ನು ಮಾಡಬೇಕಾದಾಗ, ಅದರ ಬಗ್ಗೆ ಊಹಿಸುವುದು, ಹಿಂದೆಮುಂದೆ ನೋಡದೆ ಕ್ರಿಯೆಗೈಯುವುದು, ಅಥವಾ ಒಂದು ಗುಂಪನ್ನು ಅನುಸರಿಸುವುದು, ವಿವೇಕಯುತವಾದ ಆಯ್ಕೆಯಾಗಿರಲಾರದು. ಬುದ್ಧಿವಂತ ನಿರ್ಣಯಗಳನ್ನು ಮಾಡಲು ನೀವು ನಿಮ್ಮ ಗ್ರಹಣಶಕ್ತಿಗಳನ್ನು ಉಪಯೋಗಿಸಬೇಕು. ಅದು ಹೇಗೆ? ಮೊದಲನೆಯದಾಗಿ, ಆ ಸನ್ನಿವೇಶದ ಕುರಿತು ಸಂಪೂರ್ಣವಾಗಿ ವಿಚಾರಿಸಿ, ಬೇಕಾದ ಎಲ್ಲ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಿರಿ. ಅಗತ್ಯವೆಂದು ತೋರುವಲ್ಲಿ ಅದರ ಬಗ್ಗೆ ಪ್ರಶ್ನೆಗಳನ್ನು ಕೇಳಿರಿ. ನಿಮಗಿರುವ ಆಯ್ಕೆಗಳು ಯಾವುವೆಂದು ನಿಶ್ಚಯಿಸಿಕೊಳ್ಳಿರಿ. ಜ್ಞಾನೋಕ್ತಿ 13:16 ಹೇಳುವುದು: “ಪ್ರತಿಯೊಬ್ಬ ಜಾಣನು ತನ್ನ ಕೆಲಸವನ್ನು ತಿಳುವಳಿಕೆಯಿಂದ ನಡಿಸುವನು.” ತರುವಾಯ, ಈ ವಿಷಯಕ್ಕೆ ಯಾವ ಬೈಬಲ್ ನಿಯಮಗಳು ಇಲ್ಲವೆ ತತ್ವಗಳು ಅನ್ವಯಿಸುತ್ತವೆ ಎಂಬುದನ್ನು ನಿರ್ಧರಿಸಿರಿ. (ಜ್ಞಾನೋಕ್ತಿ 3:5) ಇದನ್ನು ಮಾಡಲು, ನಿಮಗೆ ಬೈಬಲಿನ ಜ್ಞಾನವಿರಬೇಕೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದುದರಿಂದಲೇ, “ಗಟ್ಟಿಯಾದ ಆಹಾರ”ವನ್ನು, ಅಂದರೆ ಸತ್ಯದ “ಅಗಲ ಉದ್ದ ಎತ್ತರ ಆಳ ಎಷ್ಟೆಂಬದನ್ನು” ನಾವು ಕಲಿತುಕೊಳ್ಳುವಂತೆ ಪೌಲನು ಉತ್ತೇಜಿಸುತ್ತಾನೆ.—ಎಫೆಸ 3:18.
4. ದೇವರ ತತ್ವಗಳ ಜ್ಞಾನವು ಏಕೆ ಅತ್ಯಾವಶ್ಯಕವಾಗಿದೆ?
4 ನಾವು ಅಪರಿಪೂರ್ಣರೂ, ಪಾಪಪ್ರವೃತ್ತಿಯುಳ್ಳವರೂ ಆಗಿರುವುದರಿಂದ, ಇದನ್ನು ಮಾಡುವುದು ಅತ್ಯಾವಶ್ಯಕವಾಗಿದೆ. (ಆದಿಕಾಂಡ 8:21; ರೋಮಾಪುರ 5:12) “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ” ಎಂದು ಯೆರೆಮೀಯ 17:9 ಹೇಳುತ್ತದೆ. ನಮ್ಮನ್ನು ಮಾರ್ಗದರ್ಶಿಸಲು ಯಾವ ದೈವಿಕ ತತ್ವಗಳೂ ಇರದಿದ್ದರೆ, ನಾವು ಕೇವಲ ನಮ್ಮ ಶಾರೀರಿಕ ಅಭಿಲಾಷೆಗಳನ್ನು ತೃಪ್ತಿಪಡಿಸಿಕೊಳ್ಳಲಿಕ್ಕಾಗಿ ಕೆಟ್ಟದ್ದನ್ನು ಒಳ್ಳೆಯದೆಂದು ಯೋಚಿಸಿ, ಸ್ವತಃ ಮೋಸಕ್ಕೆ ಒಳಗಾಗಬಹುದು. (ಹೋಲಿಸಿ ಯೆಶಾಯ 5:20.) ಕೀರ್ತನೆಗಾರನು ಬರೆದುದು: “ಯೌವನಸ್ಥನು ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವದು ಯಾವದರಿಂದ? ನಿನ್ನ ವಾಕ್ಯವನ್ನು ಗಮನಿಸಿ ನಡೆಯುವದರಿಂದಲೇ. ನಿನ್ನ ನೇಮಗಳ ಮೂಲಕ ವಿವೇಕಿಯಾದೆನು; ಮಿಥ್ಯಾಮಾರ್ಗವನ್ನೆಲ್ಲಾ ಹಗೆಮಾಡುತ್ತೇನೆ.”—ಕೀರ್ತನೆ 119:9, 104.
5. (ಎ) ಕೆಲವು ಯುವ ಜನರು ಮಿಥ್ಯಾ ಮಾರ್ಗಗಳನ್ನು ಅನುಸರಿಸುವುದು ಏಕೆ? (ಬಿ) ಯುವತಿಯೊಬ್ಬಳು ಹೇಗೆ ಸತ್ಯವನ್ನು ತನ್ನದಾಗಿ ಮಾಡಿಕೊಂಡಳು?
5 ಕ್ರೈಸ್ತ ಕುಟುಂಬಗಳಲ್ಲಿ ಬೆಳೆಸಲ್ಪಟ್ಟ ಕೆಲವು ಯುವ ಜನರು ಮಿಥ್ಯಾ ಮಾರ್ಗಗಳನ್ನು ಏಕೆ ಅನುಸರಿಸಿದ್ದಾರೆ? ಅಂತಹವರು ‘ದೇವರ ಚಿತ್ತಕ್ಕನುಸಾರವಾದದ್ದು, ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ಸ್ವತಃ ವಿವೇಚಿಸಿ ತಿಳಿದುಕೊಂಡಿಲ್ಲವೊ?’ (ರೋಮಾಪುರ 12:2, ಓರೆಅಕ್ಷರಗಳು ನಮ್ಮವು.) ಕೆಲವರು ತಮ್ಮ ಹೆತ್ತವರೊಂದಿಗೆ ಕೂಟಗಳಿಗೆ ಹಾಜರಾಗಿ, ಬೈಬಲಿನ ಕೆಲವು ಮೂಲಭೂತ ಬೋಧನೆಗಳನ್ನು ಕಂಠಪಾಠವಾಗಿ ಹೇಳಶಕ್ತರಾಗಿರಬಹುದು. ಆದರೆ, ತಮ್ಮ ನಂಬಿಕೆಗಳಿಗೆ ಕಾರಣವನ್ನು ಕೊಡುವಂತೆ ಇಲ್ಲವೆ ದೇವರ ವಾಕ್ಯದ ಕೆಲವು ಆಳವಾದ ವಿಷಯಗಳನ್ನು ವಿವರಿಸುವಂತೆ ಕೇಳಲ್ಪಟ್ಟಾಗ, ಅವರ ಜ್ಞಾನವು ಬರಿ ಟೊಳ್ಳೆಂದು ತಿಳಿದುಬರುತ್ತದೆ. ಇಂತಹ ಯುವ ಜನರನ್ನು ಸುಲಭವಾಗಿ ದಾರಿತಪ್ಪಿಸಬಹುದು. (ಎಫೆಸ 4:14) ಇದು ನಿಮ್ಮ ವಿಷಯದಲ್ಲಿ ಸತ್ಯವಾಗಿರುವುದಾದರೆ, ಬದಲಾವಣೆಗಳನ್ನು ಮಾಡಲು ಏಕೆ ನಿಶ್ಚಯಿಸಿಕೊಳ್ಳಬಾರದು? ಯುವ ಸಹೋದರಿಯೊಬ್ಬಳು ಜ್ಞಾಪಿಸಿಕೊಳ್ಳುವುದು: “ನಾನು ಹೆಚ್ಚಿನ ಸಂಶೋಧನೆಯನ್ನು ಮಾಡಿದೆ. ಮತ್ತು ನನ್ನನ್ನೇ ಹೀಗೆ ಕೇಳಿಕೊಂಡೆ, ‘ಇದೇ ಸರಿಯಾದ ಧರ್ಮವೆಂದು ನನಗೆ ಹೇಗೆ ಗೊತ್ತು? ಯೆಹೋವ ಎಂಬ ಹೆಸರುಳ್ಳ ದೇವರೊಬ್ಬನು ಇದ್ದಾನೆಂದು ನನಗೆ ಹೇಗೆ ಗೊತ್ತು?’”a ಶಾಸ್ತ್ರವಚನಗಳ ಗಂಭೀರವಾದ ಪರಿಶೀಲನೆಯು, ತನ್ನ ಹೆತ್ತವರಿಂದ ಕಲಿತುಕೊಂಡಿದ್ದ ವಿಷಯಗಳು ಸತ್ಯವಾಗಿಯೇ ಇದ್ದವೆಂಬುದನ್ನು ಆಕೆಗೆ ಮನಗಾಣಿಸಿದವು!—ಹೋಲಿಸಿ ಅ. ಕೃತ್ಯಗಳು 17:11.
6. “ಕರ್ತನಿಗೆ” ಅಂದರೆ ಯೆಹೋವನಿಗೆ “ಮೆಚ್ಚಿಗೆಯಾದದ್ದು ಏನೆಂಬದನ್ನು” ನೀವು ಹೇಗೆ ನಿಶ್ಚಯಿಸಿಕೊಳ್ಳುವಿರಿ?
6 ಯೆಹೋವನ ತತ್ವಗಳ ಕುರಿತಾದ ಇಂತಹ ಜ್ಞಾನದಿಂದ ಸುಸಜ್ಜಿತರಾದ ನೀವು, “ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು” ಬಹಳ ಸುಲಭವಾಗಿ ನಿಶ್ಚಯಿಸಿಕೊಳ್ಳಬಲ್ಲಿರಿ. (ಎಫೆಸ 5:10) ಆದರೆ ನಿರ್ದಿಷ್ಟವಾದ ಒಂದು ಸನ್ನಿವೇಶದಲ್ಲಿ ಯಾವ ವಿವೇಕಯುತ ನಿರ್ಣಯವನ್ನು ಮಾಡಬೇಕೆಂದು ನಿಮಗೆ ಗೊತ್ತಿರದಿದ್ದಾಗ ಆಗೇನು? ಮಾರ್ಗದರ್ಶನಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿರಿ. (ಕೀರ್ತನೆ 119:144) ಈ ವಿಷಯವನ್ನು ನಿಮ್ಮ ಹೆತ್ತವರೊಂದಿಗೆ ಇಲ್ಲವೆ ಒಬ್ಬ ಪ್ರೌಢ ಕ್ರೈಸ್ತ ಸಹೋದರ ಅಥವಾ ಸಹೋದರಿಯೊಂದಿಗೆ ಸಮಾಲೋಚಿಸಿರಿ. (ಜ್ಞಾನೋಕ್ತಿ 15:22; 27:17) ಬೈಬಲಿನಲ್ಲಿ ಮತ್ತು ವಾಚ್ ಟವರ್ ಪ್ರಕಾಶನಗಳಲ್ಲಿ ಹೆಚ್ಚಿನ ಸಂಶೋಧನೆಯನ್ನು ಮಾಡುವ ಮೂಲಕವೂ ಸಹಾಯಕರ ಮಾರ್ಗದರ್ಶನವು ಸಿಗಬಲ್ಲದು. (ಜ್ಞಾನೋಕ್ತಿ 2:3-5) ನಿಮ್ಮ ಗ್ರಹಣಶಕ್ತಿಗಳನ್ನು ಹೆಚ್ಚಾಗಿ ಬಳಸಿದಷ್ಟು ಅವು ಹೆಚ್ಚು ಹರಿತವಾಗುವವು.
ಮನೋರಂಜನೆಯ ವಿಷಯದಲ್ಲಿ ವಿವೇಚನೆಯನ್ನು ತೋರಿಸುವುದು
7, 8. (ಎ) ಒಂದು ಸಂತೋಷ ಕೂಟಕ್ಕೆ ಹಾಜರಾಗಬೇಕೊ ಬೇಡವೊ ಎಂಬುದನ್ನು ನಿರ್ಧರಿಸಲು, ನೀವು ನಿಮ್ಮ ಗ್ರಹಣಶಕ್ತಿಗಳನ್ನು ಹೇಗೆ ಉಪಯೋಗಿಸಬಲ್ಲಿರಿ? (ಬಿ) ಮನೋರಂಜನೆಯ ಕುರಿತು ಬೈಬಲಿನ ನೋಟವೇನು?
7 ನಿಮ್ಮ ಗ್ರಹಣಶಕ್ತಿಗಳನ್ನು ನಿರ್ದಿಷ್ಟವಾದ ಸನ್ನಿವೇಶಗಳಲ್ಲಿ ಹೇಗೆ ಉಪಯೋಗಿಸಬಹುದೆಂಬುದನ್ನು ನಾವು ನೋಡೋಣ. ಉದಾಹರಣೆಗೆ, ನೀವು ಒಂದು ಸಂತೋಷ ಕೂಟಕ್ಕೆ ಆಮಂತ್ರಿಸಲ್ಪಟ್ಟಿದ್ದೀರೆಂದು ಊಹಿಸಿಕೊಳ್ಳಿರಿ. ನಿಮಗೊಂದು ಆಮಂತ್ರಣ ಪತ್ರಿಕೆಯೂ ಸಿಕ್ಕಿರಬಹುದು. ಅನೇಕ ಸಾಕ್ಷಿ ಯುವ ಜನರು ಅಲ್ಲಿರುವರೆಂದು ನಿಮಗೆ ಹೇಳಲಾಗಿದೆ. ಖರ್ಚುಗಳಿಗಾಗಿ ಒಂದಿಷ್ಟು ಹಣವನ್ನು ನೀವು ಕೊಡಬೇಕಾಗಿದೆ. ಈ ಸಂತೋಷ ಕೂಟಕ್ಕೆ ನೀವು ಹಾಜರಾಗಬೇಕೊ?
8 ಈ ರೀತಿಯ ಸನ್ನಿವೇಶದಲ್ಲಿ ನಿಮ್ಮ ಗ್ರಹಣಶಕ್ತಿಗಳನ್ನು ಉಪಯೋಗಿಸಿರಿ. ಮೊದಲು ಮಾಹಿತಿಯನ್ನು ಸಂಗ್ರಹಿಸಿರಿ. ಈ ಸಂತೋಷ ಕೂಟವು ಎಷ್ಟು ದೊಡ್ಡದಾಗಿರುವುದು? ಯಾರೆಲ್ಲ ಅಲ್ಲಿರುವರು? ಅದು ಯಾವಾಗ ಆರಂಭವಾಗುವುದು? ಯಾವಾಗ ಕೊನೆಗೊಳ್ಳುವುದು? ಅಲ್ಲಿ ಯಾವ ಕಾರ್ಯಕ್ರಮಗಳು ಯೋಜಿಸಲ್ಪಟ್ಟಿವೆ? ಮೇಲ್ವಿಚಾರಣೆಯನ್ನು ಯಾವ ರೀತಿಯಲ್ಲಿ ಮಾಡಲಾಗುವುದು? ಅಷ್ಟುಮಾತ್ರವಲ್ಲದೆ, ಒಂದಿಷ್ಟು ಸಂಶೋಧನೆಯನ್ನು ಮಾಡಲು, ವಾಚ್ ಟವರ್ ಪಬ್ಲಿಕೇಶನ್ಸ್ ಇಂಡೆಕ್ಸ್ನಲ್ಲಿ, “ಸಾಮಾಜಿಕ ನೆರವಿಗಳು,” ಮತ್ತು “ಮನೋರಂಜನೆ” ಎಂಬ ವಿಷಯಗಳನ್ನು ನೋಡಿರಿ.b ನಿಮ್ಮ ಸಂಶೋಧನೆಯಿಂದ ನಿಮಗೆ ಏನು ತಿಳಿದುಬರುವುದು? ಒಂದು ವಿಷಯವೇನೆಂದರೆ, ಒಟ್ಟುಗೂಡಿ ಸಂತೋಷವಾಗಿ ಕಾಲ ಕಳೆಯುವುದನ್ನು ಯೆಹೋವನು ಖಂಡಿಸುವುದಿಲ್ಲ. ಪರಿಶ್ರಮದೊಂದಿಗೆ “ಮನುಷ್ಯನು ಅನ್ನಪಾನಗಳನ್ನು ತೆಗೆದುಕೊಂಡು ಸಂತೋಷಪಡುವದಕ್ಕಿಂತ ಅವನಿಗೆ ಲೋಕದಲ್ಲಿ ಇನ್ನಾವ ಮೇಲೂ ಇಲ್ಲವೆಂದು” ಪ್ರಸಂಗಿ 8:15 ಹೇಳುತ್ತದೆ. ಸ್ವತಃ ಯೇಸು ಕ್ರಿಸ್ತನೇ ವಿಶೇಷವಾದ ಭೋಜನಗಳಿಗೆ, ಮತ್ತು ಒಂದು ವಿವಾಹ ಸಮಾರಂಭಕ್ಕೆ ಸಹ ಹಾಜರಾದನು. (ಲೂಕ 5:27-29; ಯೋಹಾನ 2:1-10) ಹೀಗೆ, ಸಮತೂಕವನ್ನು ಕಾಪಾಡಿಕೊಂಡಾಗ, ಸಂತೋಷ ಕೂಟಗಳು ಪ್ರಯೋಜನಕರವಾಗಿರಬಲ್ಲವು.
9, 10. (ಎ) ಕೆಲವು ಸಂತೋಷ ಕೂಟಗಳು ಯಾವ ಅಪಾಯಗಳನ್ನು ತಂದೊಡ್ಡಬಲ್ಲವು? (ಬಿ) ಒಂದು ಸಂತೋಷ ಕೂಟಕ್ಕೆ ಹಾಜರಾಗಬೇಕೊ ಬೇಡವೊ ಎಂಬುದನ್ನು ನಿರ್ಧರಿಸುವ ಮೊದಲು ಯಾವ ಪ್ರಶ್ನೆಗಳನ್ನು ನೀವು ಸ್ವತಃ ಕೇಳಿಕೊಳ್ಳಸಾಧ್ಯವಿದೆ?
9 ಹಾಗಿದ್ದರೂ, ಸರಿಯಾಗಿ ಸಂಘಟಿಸಲ್ಪಡದ ಸಂತೋಷ ಕೂಟಗಳು ಅಪಾಯವನ್ನು ತಂದೊಡ್ಡಬಲ್ಲವು. ಬುದ್ಧಿಹೀನ ಸಹವಾಸವು ಹೇಗೆ ಜಾರತ್ವಕ್ಕೆ ಮತ್ತು ಒಂದೇ ದಿನದಲ್ಲಿ “ಇಪ್ಪತ್ತುಮೂರು ಸಾವಿರ [ಅಪನಂಬಿಗಸ್ತ ಇಸ್ರಾಯೇಲ್ಯರ]” ಹತ್ಯೆಗೆ ನಡೆಸಿತೆಂಬುದನ್ನು ನಾವು 1 ಕೊರಿಂಥ 10:8ರಲ್ಲಿ ಓದುತ್ತೇವೆ. ಮತ್ತೊಂದು ಗಂಭೀರವಾದ ಎಚ್ಚರಿಕೆಯು ರೋಮಾಪುರ 13:13ರಲ್ಲಿ ದಾಖಲಾಗಿದೆ: “ದುಂದೌತಣ ಕುಡಿಕತನಗಳಲ್ಲಿಯಾಗಲಿ ಕಾಮವಿಲಾಸ ನಿರ್ಲಜ್ಜಾಕೃತ್ಯಗಳಲ್ಲಿಯಾಗಲಿ ಜಗಳಗಳು ಹೊಟ್ಟೇಕಿಚ್ಚುಗಳಲ್ಲಿಯಾಗಲಿ ಕಾಲಕಳೆಯದೆ ಹಗಲು ಹೊತ್ತಿಗೆ ತಕ್ಕಹಾಗೆ ಮಾನಸ್ಥರಾಗಿ ನಡೆದುಕೊಳ್ಳೋಣ.” (ಹೋಲಿಸಿ 1 ಪೇತ್ರ 4:3.) ಒಂದು ಸಂತೋಷ ಕೂಟಕ್ಕೆ ನಿಗದಿತ ಸಂಖ್ಯೆಯ ಜನರು ಮಾತ್ರ ಬರಸಾಧ್ಯವೆಂದು ಖಡಾಖಂಡಿತವಾಗಿ ಹೇಳಸಾಧ್ಯವಿಲ್ಲ. ಆದರೆ ಕೂಟವು ದೊಡ್ಡದಾದಷ್ಟು ಅದರ ಮೇಲ್ವಿಚಾರಣೆಯು ಕಷ್ಟಕರವೆಂಬುದು ಅನುಭವದಿಂದ ತಿಳಿದುಬಂದಿದೆ. ಚಿಕ್ಕದಾದ, ಸುವ್ಯವಸ್ಥಿತ ಸಂತೋಷ ಕೂಟಗಳು “ಅಸಭ್ಯ ಪಾರ್ಟಿ”ಗಳಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯು ತೀರ ಕಡಿಮೆ.—ಗಲಾತ್ಯ 5:21, ಬೈಯಿಂಗ್ಟನ್.
10 ನಿಮ್ಮ ಸಂಶೋಧನೆಯು ಇನ್ನೂ ಅನೇಕ ಪ್ರಶ್ನೆಗಳನ್ನು ಎಬ್ಬಿಸುವುದು ಎಂಬುದರಲ್ಲಿ ಸಂದೇಹವಿಲ್ಲ. ಉದಾಹರಣೆಗೆ, ಆ ಸಂತೋಷ ಕೂಟದಲ್ಲಿ ಕೆಲವು ಪ್ರೌಢ ವಯಸ್ಕ ಕ್ರೈಸ್ತರಿರುವರೊ? ಯಾರು ಅದರ ಹೊಣೆ ಹೊತ್ತಿದ್ದಾರೆ? ಆ ಸಂತೋಷ ಕೂಟದ ಉದ್ದೇಶವು, ಹಿತಕರವಾದ ಸಹವಾಸವನ್ನು ಪ್ರವರ್ಧಿಸುವುದಾಗಿದೆಯೊ ಅಥವಾ ಯಾರೊ ಒಬ್ಬರ ಲಾಭಕ್ಕಾಗಿ ಯೋಜಿಸಲ್ಪಟ್ಟಿದೆಯೊ? ಎಂಥವರು ಹಾಜರಾಗಸಾಧ್ಯ ಎಂಬ ವಿಷಯದಲ್ಲಿ ನಿರ್ಬಂಧಗಳೇನಾದರೂ ಇವೆಯೊ? ಸಂತೋಷ ಕೂಟವು ವಾರಾಂತ್ಯದಲ್ಲಿರುವುದಾದರೆ, ಅದಕ್ಕೆ ಹಾಜರಾಗುವವರು ಮರುದಿನ ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಅದು ತಕ್ಕ ಸಮಯಕ್ಕೆ ಮುಗಿಯುವುದೊ? ಸಂಗೀತ ಹಾಗೂ ನೃತ್ಯವು ಯೋಜಿಸಲ್ಪಟ್ಟಿರುವಲ್ಲಿ, ಅದು ಕ್ರೈಸ್ತ ಮಟ್ಟಗಳಿಗೆ ಸಮಂಜಸವಾಗಿರುವುದೊ? (2 ಕೊರಿಂಥ 6:3) ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಸುಲಭವಾಗಿರಲಾರದು. ಆದರೆ ಜ್ಞಾನೋಕ್ತಿ 22:3 ಎಚ್ಚರಿಸುವುದು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.” ಹೌದು, ನಿಮ್ಮ ಗ್ರಹಣಶಕ್ತಿಗಳನ್ನು ಉಪಯೋಗಿಸುವ ಮೂಲಕ ನೀವು ಅಪಾಯಕರ ಸನ್ನಿವೇಶಗಳಿಂದ ದೂರವಿರಸಾಧ್ಯವಿದೆ.
ನಿಮ್ಮ ಶಿಕ್ಷಣದ ಯೋಜನೆಗಳನ್ನು ಮಾಡುವಾಗ ವಿವೇಚನೆಯುಳ್ಳವರಾಗಿರಿ
11. ಯುವ ಜನರು ತಮ್ಮ ಭವಿಷ್ಯದ ಯೋಜನೆಗಳನ್ನು ಮಾಡುವಾಗ, ಗ್ರಹಣಶಕ್ತಿಗಳನ್ನು ಹೇಗೆ ಉಪಯೋಗಿಸಬಲ್ಲರು?
11 ಭವಿಷ್ಯತ್ತಿನ ಕುರಿತು ಯೋಜನೆಗಳನ್ನು ಮಾಡುವುದು ವಿವೇಕಯುತವೆಂದು ಬೈಬಲು ಹೇಳುತ್ತದೆ. (ಜ್ಞಾನೋಕ್ತಿ 21:5) ನಿಮ್ಮ ಭವಿಷ್ಯದ ಕುರಿತು ನೀವೂ ನಿಮ್ಮ ಹೆತ್ತವರೂ ಸೇರಿ ಚರ್ಚಿಸಿದ್ದೀರೊ? ನೀವು ಒಬ್ಬ ಪಯನೀಯರರೋಪಾದಿ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಲು ಯೋಜಿಸಬಹುದು. ನಿಶ್ಚಯವಾಗಿಯೂ, ಬೇರೆ ಯಾವ ಆಯ್ಕೆಯೂ ಇದಕ್ಕಿಂತಲೂ ಹೆಚ್ಚಿನ ಸಂತೃಪ್ತಿಯನ್ನು ನೀಡಲಾರದು. ನೀವು ಒಳ್ಳೆಯ ಅಧ್ಯಯನದ ಹವ್ಯಾಸಗಳನ್ನು ಮತ್ತು ಶುಶ್ರೂಷೆಯಲ್ಲಿ ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳುತ್ತಿರುವುದಾದರೆ, ಆ ಉಲ್ಲಾಸಕರ ಕೆಲಸಕ್ಕಾಗಿ ಬೇಕಾದ ಸಿದ್ಧತೆಗಳನ್ನು ಈಗಲೇ ನೀವು ಮಾಡಿಕೊಳ್ಳುತ್ತಿದ್ದೀರಿ. ನೀವು ಶುಶ್ರೂಷೆಯಲ್ಲಿ ತೊಡಗಿರುವಾಗ, ಸ್ವತಃ ಹೇಗೆ ಪೋಷಿಸಿಕೊಳ್ಳುವಿರಿ ಎಂಬುದರ ಬಗ್ಗೆ ಯೋಚಿಸಿದ್ದೀರೊ? ಮುಂದೆ ನೀವು ವಿವಾಹವಾಗಿ ಒಂದು ಕುಟುಂಬವನ್ನು ಹೊಂದಲು ಬಯಸುವುದಾದರೆ, ಈ ಹೆಚ್ಚಿನ ಜವಾಬ್ದಾರಿಯನ್ನು ಹೊರಲು ಶಕ್ತರಾಗಿರುವಿರೊ? ಇಂತಹ ವಿಷಯಗಳ ಬಗ್ಗೆ ಸಮತೂಕದ ಹಾಗೂ ವಾಸ್ತವವಾದ ನಿರ್ಣಯಗಳನ್ನು ಮಾಡಲು, ಗ್ರಹಣಶಕ್ತಿಗಳನ್ನು ಉಪಯೋಗಿಸುವುದು ತೀರ ಅಗತ್ಯವಾಗಿದೆ.
12. (ಎ) ಬದಲಾಗುತ್ತಿರುವ ಆರ್ಥಿಕ ಸ್ಥಿತಿಗತಿಗೆ ಕೆಲವು ಕುಟುಂಬಗಳು ಹೇಗೆ ಹೊಂದಿಕೊಂಡಿವೆ? (ಬಿ) ಪಯನೀಯರ್ ಸೇವೆಯ ಗುರಿಯನ್ನು ಇಟ್ಟಿರುವಲ್ಲಿ, ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುವುದು ಅದಕ್ಕೆ ವಿರುದ್ಧವಾದ ವಿಷಯವಾಗಿರುವುದೊ? ವಿವರಿಸಿರಿ.
12 ಕೆಲವೊಂದು ಸ್ಥಳಗಳಲ್ಲಿ, ಉದ್ಯೋಗ ಮಾಡುತ್ತಾ ಒಂದು ಪ್ರಯೋಜನಕಾರಿ ಕಸಬು ಇಲ್ಲವೆ ವೃತ್ತಿಯ ತರಬೇತಿಯನ್ನು ಪಡೆದುಕೊಳ್ಳುವ ಸೌಲಭ್ಯವು ಈಗಲೂ ಲಭ್ಯವಿದೆ. ಕೆಲವು ಯುವ ಜನರು ತಮ್ಮ ಕುಟುಂಬ ವೃತ್ತಿಯನ್ನು ಕಲಿತುಕೊಳ್ಳುತ್ತಾರೆ ಇಲ್ಲವೆ ವ್ಯಾಪಾರಗಳಲ್ಲಿ ತೊಡಗಿರುವ ವಯಸ್ಕ ಮಿತ್ರರಿಂದ ತರಬೇತಿಯನ್ನು ಪಡೆದುಕೊಳ್ಳುತ್ತಾರೆ. ಇತರರು ತಮ್ಮ ಜೀವನೋಪಾಯಕ್ಕಾಗಿ ಸಹಾಯಕರವಾಗಿರುವ ಕೋರ್ಸುಗಳನ್ನು ಶಾಲೆಯಲ್ಲೇ ಮಾಡಿಮುಗಿಸುತ್ತಾರೆ. ಇಂತಹ ಸೌಲಭ್ಯಗಳು ಇರದಿದ್ದ ಸ್ಥಳಗಳಲ್ಲಿ, ಹೆತ್ತವರು ಇದರ ಬಗ್ಗೆ ಸಾಕಷ್ಟು ವಿಚಾರಿಸಿ ನೋಡಿ, ತಮ್ಮ ಮಕ್ಕಳ ಪ್ರೌಢಶಾಲೆಯ ಶಿಕ್ಷಣದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇಕಾದ ಏರ್ಪಾಡುಗಳನ್ನು ಮಾಡಬಹುದು. ವಯಸ್ಕ ಜೀವನದ ಜವಾಬ್ದಾರಿಗಳನ್ನು ಪೂರೈಸಲು ಮತ್ತು ವಿಶೇಷವಾಗಿ ದೀರ್ಘ ಸಮಯದ ವರೆಗೆ ಪಯನೀಯರ್ ಸೇವೆಯಲ್ಲಿ ಮುಂದುವರಿಯಲು ಸಾಧ್ಯವಾಗುವಂತೆ, ಈ ರೀತಿಯಲ್ಲಿ ಮುಂಚಿತವಾಗಿಯೇ ಯೋಜನೆಗಳನ್ನು ಮಾಡುವುದು, ದೇವರ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಕೊಡಬೇಕೆಂಬ ವಿಷಯಕ್ಕೆ ಅಸಂಬದ್ಧವಾಗಿರುವುದಿಲ್ಲ. (ಮತ್ತಾಯ 6:33) ಆದರೆ ಅದೇ ಸಮಯದಲ್ಲಿ, ಹೆಚ್ಚಿನ ವಿದ್ಯಾಭ್ಯಾಸದ ಜೊತೆಗೆ ಪಯನೀಯರ್ ಸೇವೆಯನ್ನು ಮುಂದುವರಿಸಸಾಧ್ಯವಿಲ್ಲ ಎಂಬುದು ಇದರರ್ಥವಲ್ಲ. ಉದಾಹರಣೆಗೆ, ಒಬ್ಬ ಯುವ ಸಾಕ್ಷಿಯು ಪಯನೀಯರ್ ಸೇವೆಯನ್ನು ಆರಂಭಿಸಲು ದೀರ್ಘ ಸಮಯದಿಂದ ಬಯಸಿದ್ದಳು. ಅವಳು ತನ್ನ ಪ್ರೌಢಶಾಲೆಯ ಶಿಕ್ಷಣದ ನಂತರ ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡುವಂತೆ, ರೆಗ್ಯುಲರ್ ಪಯನೀಯರರಾಗಿರುವ ಅವಳ ಹೆತ್ತವರು ಅವಳಿಗಾಗಿ ಏರ್ಪಾಡು ಮಾಡಿದರು. ವಿದ್ಯಾಭ್ಯಾಸದ ಜೊತೆಗೆ ಅವಳು ಪಯನೀಯರ್ ಸೇವೆಯನ್ನು ಮಾಡಲು ಶಕ್ತಳಾಗಿದ್ದಳು. ಮತ್ತು ಈಗ ಅವಳು ಒಂದು ವೃತ್ತಿಯ ಮೂಲಕ ತನ್ನನ್ನು ಪೋಷಿಸಿಕೊಳ್ಳುತ್ತಿದ್ದಾಳಲ್ಲದೆ, ಪಯನೀಯರ್ ಸೇವೆಯನ್ನು ಸಹ ಮುಂದುವರಿಸುತ್ತಿದ್ದಾಳೆ.
13. ಕುಟುಂಬಗಳು ಹೆಚ್ಚಿನ ವಿದ್ಯಾಭ್ಯಾಸದ ಖರ್ಚನ್ನು ಹೇಗೆ ಲೆಕ್ಕಮಾಡಬೇಕು?
13 ಹೆಚ್ಚಿನ ವಿದ್ಯಾಭ್ಯಾಸದ ವಿಷಯದಲ್ಲಿ, ಪ್ರತಿಯೊಂದು ಕುಟುಂಬಕ್ಕೆ ತನ್ನ ಸ್ವಂತ ನಿರ್ಣಯವನ್ನು ಮಾಡುವ ಹಕ್ಕು ಮತ್ತು ಜವಾಬ್ದಾರಿಯಿದೆ. ಇಂತಹ ವಿದ್ಯಾಭ್ಯಾಸದ ವಿಷಯದಲ್ಲಿ ಮಾಡಲಾಗುವ ಆಯ್ಕೆಯು ಯೋಗ್ಯವಾಗಿದ್ದರೆ, ಅದು ಪ್ರಯೋಜನಕಾರಿಯಾಗಿರಬಲ್ಲದು. ಆದರೆ, ಅದೊಂದು ಪಾಶವಾಗಿಯೂ ಪರಿಣಮಿಸಬಲ್ಲದು. ಇಂತಹ ಹೆಚ್ಚಿನ ವಿದ್ಯಾಭ್ಯಾಸದ ಗುರಿಯು ಏನಾಗಿದೆ? ವಯಸ್ಕ ಜೀವನದ ಜವಾಬ್ದಾರಿಗಳನ್ನು ಗೌರವಯುತವಾದ ರೀತಿಯಲ್ಲಿ ನಿಭಾಯಿಸುವಂತೆ ನಿಮ್ಮನ್ನು ಸಿದ್ಧಗೊಳಿಸಲಿಕ್ಕಾಗಿಯೊ? ಅಥವಾ ನೀವು ನಿಮಗಾಗಿ ಒಂದು “ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳು”ತ್ತಿದ್ದೀರೊ? (ಯೆರೆಮೀಯ 45:5; 2 ಥೆಸಲೊನೀಕ 3:10; 1 ತಿಮೊಥೆಯ 5:8; 6:9) ಮನೆಯಿಂದ ದೂರ, ಬಹುಶಃ ಒಂದು ಹಾಸ್ಟೆಲ್ನಲ್ಲಿ ವಾಸಿಸುತ್ತಾ, ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡುವುದರ ಕುರಿತೇನು? “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ” ಎಂಬ ಪೌಲನ ಎಚ್ಚರಿಕೆಯನ್ನು ಅವಲೋಕಿಸುವಾಗ, ಅದು ವಿವೇಕಯುತ ನಿರ್ಣಯವಾಗಿರುವುದೊ? (1 ಕೊರಿಂಥ 15:33; 2 ತಿಮೊಥೆಯ 2:22) ಅಲ್ಲದೆ “ಉಳಿದಿರುವ ಸಮಯವು ಕೊಂಚವೇ” (NW) ಎಂಬುದನ್ನೂ ಜ್ಞಾಪಕದಲ್ಲಿಡಿ. (1 ಕೊರಿಂಥ 7:29) ಇಂತಹ ವಿದ್ಯಾಭ್ಯಾಸಕ್ಕಾಗಿ ಎಷ್ಟು ಸಮಯವನ್ನು ನೀವು ಮೀಸಲಾಗಿಡುವಿರಿ? ನಿಮ್ಮ ಯೌವನದ ಬಹುಭಾಗವನ್ನು ಅದು ಉಪಯೋಗಿಸಿಕೊಳ್ಳುವುದೊ? ವಿಷಯವು ಹಾಗಿರುವಲ್ಲಿ, “ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು” ಎಂಬ ಬೈಬಲಿನ ಪ್ರೋತ್ಸಾಹನೆಯನ್ನು ನೀವು ಹೇಗೆ ಕಾರ್ಯರೂಪಕ್ಕೆ ತರುವಿರಿ? (ಪ್ರಸಂಗಿ 12:1) ಅಲ್ಲದೆ, ನೀವು ತೆಗೆದುಕೊಂಡಿರುವ ಕೋರ್ಸುಗಳು, ಕೂಟದ ಹಾಜರಿ, ಕ್ಷೇತ್ರ ಸೇವೆ, ಮತ್ತು ವೈಯಕ್ತಿಕ ಅಧ್ಯಯನದಂತಹ ಅತ್ಯಾವಶ್ಯಕ ಕ್ರೈಸ್ತ ಚಟುವಟಿಕೆಗಳಿಗಾಗಿ ಸಮಯವನ್ನು ಅನುಮತಿಸುವವೊ? (ಮತ್ತಾಯ 24:14; ಇಬ್ರಿಯ 10:24, 25) ನಿಮ್ಮ ಗ್ರಹಣಶಕ್ತಿಗಳು ತೀಕ್ಷ್ಣವಾಗಿರುವುದಾದರೆ, ನೀವೂ ನಿಮ್ಮ ಹೆತ್ತವರೂ ನಿಮ್ಮ ಭವಿಷ್ಯದ ಕುರಿತು ಯೋಜಿಸುವಾಗ ಆತ್ಮಿಕ ಗುರಿಗಳನ್ನು ಕಡೆಗಣಿಸಲಾರಿರಿ.
ಪ್ರಣಯಾಚರಣೆಯನ್ನು ಗೌರವಯುತವಾಗಿಡುವುದು
14. (ಎ) ಪ್ರಣಯಾಚರಣೆಯನ್ನು ನಡೆಸುತ್ತಿರುವ ಜೋಡಿಗಳು ಪರಸ್ಪರ ಪ್ರೀತಿಯನ್ನು ತೋರಿಸುವಾಗ, ಯಾವ ತತ್ವಗಳು ಅವರನ್ನು ಮಾರ್ಗದರ್ಶಿಸಬೇಕು? (ಬಿ) ಈ ವಿಷಯದಲ್ಲಿ ಕೆಲವು ಜೋಡಿಗಳು ಹೇಗೆ ವಿವೇಚನೆಯನ್ನು ತೋರಿಸಿರುವುದಿಲ್ಲ?
14 ನಿಮ್ಮ ಗ್ರಹಣಶಕ್ತಿಗಳನ್ನು ಉಪಯೋಗಿಸಬೇಕಾದ ಮತ್ತೊಂದು ಕ್ಷೇತ್ರವು ಪ್ರಣಯಾಚರಣೆಯಾಗಿದೆ. ನೀವು ತುಂಬ ಕಾಳಜಿವಹಿಸುವ ವ್ಯಕ್ತಿಯ ಕಡೆಗೆ ಪ್ರೀತಿಯನ್ನು ತೋರಿಸಲು ಬಯಸುವುದು ತೀರ ಸ್ವಾಭಾವಿಕವಾದದ್ದು. ಪರಮಗೀತೆಯಲ್ಲಿ ಉಲ್ಲೇಖಿಸಲ್ಪಟ್ಟ ಆ ನಿಷ್ಕಳಂಕ ಜೋಡಿಯು, ತಮ್ಮ ವಿವಾಹದ ಮುಂಚೆ ಪರಸ್ಪರರಿಗಾಗಿದ್ದ ಪ್ರೀತಿಯನ್ನು ಕೆಲವೊಂದು ರೀತಿಗಳಲ್ಲಿ ವ್ಯಕ್ತಪಡಿಸಿತು. (ಪರಮಗೀತ 1:2; 2:6; 8:5) ತದ್ರೀತಿಯಲ್ಲಿ, ಇಂದು ಪ್ರಣಯಾಚರಣೆಯಲ್ಲಿ ಒಳಗೂಡಿರುವ ಕೆಲವು ಜೋಡಿಗಳು, ತಮ್ಮ ವಿವಾಹವು ಇನ್ನೇನು ಸ್ವಲ್ಪದರಲ್ಲಿಯೇ ನಡೆಯಲಿದೆ ಎಂದು ಯೋಚಿಸುತ್ತಾ, ಕೈಗಳನ್ನು ಹಿಡಿದುಕೊಳ್ಳುವುದು, ಮುದ್ದಿಸುವುದು, ಮತ್ತು ಅಪ್ಪಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲವೆಂದು ಭಾವಿಸುತ್ತವೆ. ಆದರೆ, “ತನ್ನಲ್ಲೇ ಭರವಸವಿಡುವವನು ಮೂಢನು” ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. (ಜ್ಞಾನೋಕ್ತಿ 28:26) ಕೆಲವು ಜೋಡಿಗಳು ಅಪಾಯಕರವಾದ ಸನ್ನಿವೇಶಗಳಲ್ಲಿ ತಮ್ಮನ್ನು ಇರಿಸಿಕೊಳ್ಳುವ ಮೂಲಕ, ವಿವೇಚನೆಯನ್ನು ಸರಿಯಾಗಿ ಉಪಯೋಗಿಸಿರುವುದಿಲ್ಲ. ಕೆಲವೊಮ್ಮೆ ಪ್ರೀತಿಯ ಅಭಿವ್ಯಕ್ತಿಗಳು ಅತಿಯಾಗಿಯೂ ಎಲ್ಲೆ ಮೀರಿದವುಗಳಾಗಿಯೂ ಪರಿಣಮಿಸಿವೆ. ಇವು ಅಶುದ್ಧ ಕ್ರಿಯೆಗಳಿಗೆ ನಡೆಸಿ, ಕೆಲವು ಸಂದರ್ಭಗಳಲ್ಲಿ ಲೈಂಗಿಕ ಅನೈತಿಕತೆಯ ಮಟ್ಟವನ್ನೂ ತಲಪಿವೆ.
15, 16. ತಮ್ಮ ಪ್ರಣಯಾಚರಣೆಯು ಗೌರವಯುತವಾಗಿ ಉಳಿಯುವುದೆಂಬುದನ್ನು ನಿಶ್ಚಯಿಸಿಕೊಳ್ಳಲು ಜೋಡಿಗಳು ಯಾವ ನ್ಯಾಯಸಮ್ಮತ ಎಚ್ಚರಿಕೆಗಳನ್ನು ವಹಿಸಬೇಕು?
15 ನೀವು ಡೇಟಿಂಗ್ ಮಾಡುತ್ತಿರುವುದಾದರೆ, ಅನುಚಿತವಾದ ಪರಿಸ್ಥಿತಿಗಳಲ್ಲಿ ನಿಮ್ಮ ಭಾವಿ ಸಂಗಾತಿಯೊಂದಿಗೆ ಏಕಾಂತದಲ್ಲಿರುವುದರಿಂದ ದೂರವಿರಿ. ಅದರ ಬದಲು, ಒಂದು ಗುಂಪಿನಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಸಹವಾಸಿಸುವುದೇ ಅತ್ಯುತ್ತಮವಾಗಿರುವುದು. ಕೆಲವು ಜೋಡಿಗಳು ತಮ್ಮೊಂದಿಗೆ ಮತ್ತೊಬ್ಬ ವ್ಯಕ್ತಿಯು ಇರುವಂತೆ ಏರ್ಪಾಡು ಮಾಡುತ್ತವೆ. ಮತ್ತು ಹೋಶೇಯ 4:11ರ ಮಾತುಗಳನ್ನೂ ಪರಿಗಣಿಸಿರಿ: “ದ್ರಾಕ್ಷಾರಸಮದ್ಯಗಳು ಬುದ್ಧಿಯನ್ನು ಕೆಡಿಸುತ್ತವೆ.” ಮದ್ಯಸಾರವು ವಿವೇಚನೆಯನ್ನು ದುರ್ಬಲಗೊಳಿಸಿ, ಒಂದು ಜೋಡಿಯನ್ನು ಅನುಚಿತವಾದ ವರ್ತನೆಗೆ ನಡೆಸಬಲ್ಲದು.
16 ಜ್ಞಾನೋಕ್ತಿ 13:10 ಹೇಳುವುದು: “ಹೆಮ್ಮೆಯ ಫಲವು ಕಲಹವೇ; ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ [“ಸಮಾಲೋಚಿಸುವವರಲ್ಲಿ,” NW) ಜ್ಞಾನ.” ಹೌದು, ‘ಒಟ್ಟಿಗೆ ಸಮಾಲೋಚಿಸಿ,’ ಹೇಗೆ ನಡೆದುಕೊಳ್ಳುವಿರಿ ಎಂಬುದನ್ನು ಚರ್ಚಿಸಿರಿ. ಒಬ್ಬರು ಮತ್ತೊಬ್ಬರ ಭಾವನೆಗಳನ್ನು ಹಾಗೂ ಮನಸ್ಸಾಕ್ಷಿಯನ್ನು ಗೌರವಿಸುತ್ತಾ, ಪ್ರೀತಿಯ ಅಭಿವ್ಯಕ್ತಿಗಳ ಮೇಲೆ ಇತಿಮಿತಿಗಳನ್ನಿಡಿ. (1 ಕೊರಿಂಥ 13:5; 1 ಥೆಸಲೊನೀಕ 4:3-7; 1 ಪೇತ್ರ 3:16) ಈ ಸೂಕ್ಷ್ಮವಾದ ವಿಷಯದ ಕುರಿತು ಮೊದಮೊದಲು ಮಾತಾಡಲು ಮುಜುಗರವಾಗಬಹುದು, ಆದರೆ ತದನಂತರ ವಿಕಸಿಸಬಹುದಾದ ಗಂಭೀರವಾದ ಸಮಸ್ಯೆಗಳನ್ನು ಅದು ತಡೆಯಸಾಧ್ಯವಿದೆ.
‘ಯುವಪ್ರಾಯದಿಂದ’ ಬೋಧಿಸಲ್ಪಡುವುದು
17. ಯೆಹೋವನನ್ನು ದಾವೀದನು ‘ತನ್ನ ಯುವಪ್ರಾಯದಿಂದ ಭರವಸೆಯನ್ನಾಗಿ’ ಹೇಗೆ ಮಾಡಿಕೊಂಡನು, ಮತ್ತು ಇಂದಿನ ಯುವ ಜನರು ಇದರಿಂದ ಯಾವ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ?
17 ಸೈತಾನನ ಪಾಶಗಳಿಂದ ದೂರವಿರಲು ನೀವು ಸದಾ ಜಾಗೃತರಾಗಿರುವ ಅಗತ್ಯವಿದೆ. ಕೆಲವೊಮ್ಮೆ ಇದು ಬಹಳಷ್ಟು ಧೈರ್ಯವನ್ನೂ ಕೇಳಿಕೊಳ್ಳಬಹುದು. ಕೆಲವೊಮ್ಮೆ ನೀವು ಸಮವಯಸ್ಕರಿಗೆ ಮಾತ್ರವಲ್ಲ, ಇಡೀ ಲೋಕಕ್ಕೆ ಎದುರಾಗಿರಬಹುದು. ಕೀರ್ತನೆಗಾರನಾದ ದಾವೀದನು ಪ್ರಾರ್ಥಿಸಿದ್ದು: “ಕರ್ತನೇ ಯೆಹೋವನೇ, ಬಾಲ್ಯಾರಭ್ಯ [“ಯುವಪ್ರಾಯದಿಂದ,” NW] ನನ್ನ ನಿರೀಕ್ಷೆಯೂ ಭರವಸವೂ ನೀನಲ್ಲವೋ? ದೇವರೇ, ನೀನು ಬಾಲ್ಯಾರಭ್ಯ [“ಯುವಪ್ರಾಯದಿಂದ,” NW] ನನ್ನನ್ನು ಉಪದೇಶಿಸುತ್ತಾ ಬಂದಿದ್ದೀ; ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರಪಡಿಸುತ್ತಿದ್ದೇನೆ.” (ಕೀರ್ತನೆ 71:5, 17)c ದಾವೀದನು ತನ್ನ ಧೈರ್ಯಕ್ಕಾಗಿ ಸುಪ್ರಸಿದ್ಧನಾಗಿದ್ದನು. ಅದನ್ನು ಅವನು ಯಾವಾಗ ಬೆಳೆಸಿಕೊಂಡನು? ಯುವಕನಾಗಿರುವಾಗಲೇ! ಗೊಲ್ಯಾತನ ವಿರುದ್ಧ ನಡೆದ ಆ ಸುಪ್ರಸಿದ್ಧ ಘಟನೆಗೂ ಮುಂಚಿತವಾಗಿ, ದಾವೀದನು ತನ್ನ ತಂದೆಯ ಹಿಂಡನ್ನು ಸಂರಕ್ಷಿಸುತ್ತಾ ಒಂದು ಸಿಂಹವನ್ನು ಹಾಗೂ ಕರಡಿಯನ್ನು ಕೊಂದಾಗ, ಅಸಾಧಾರಣವಾದ ಧೈರ್ಯವನ್ನು ತೋರಿಸಿದ್ದನು. (1 ಸಮುವೇಲ 17:34-37) ಆದರೂ, ದಾವೀದನು ತನ್ನ ಧೈರ್ಯಕ್ಕಾಗಿ ಯೆಹೋವನಿಗೇ ಸಂಪೂರ್ಣ ಕೀರ್ತಿಯನ್ನು ಸಲ್ಲಿಸುತ್ತಾ ಆತನನ್ನು “ಯುವಪ್ರಾಯದಿಂದ ನನ್ನ ಭರವಸವೂ” ನೀನೇ ಎಂದು ಪ್ರಕಟಿಸಿದನು. ದಾವೀದನು ಯಾವಾಗಲೂ ಯೆಹೋವನ ಮೇಲೆ ಆತುಕೊಂಡದ್ದರಿಂದ, ಯಾವುದೇ ಸಂಕಷ್ಟವನ್ನು ಎದುರಿಸಲು ಅವನು ಸಮರ್ಥನಾಗಿದ್ದನು. ನೀವು ಸಹ ಯೆಹೋವನ ಮೇಲೆ ಆತುಕೊಳ್ಳುವುದಾದರೆ, ‘ಲೋಕವನ್ನು ಜಯಿಸಲು’ ನಿಮಗೆ ಬೇಕಾದ ಧೈರ್ಯ ಹಾಗೂ ಬಲವನ್ನು ಆತನು ಕೊಡುತ್ತಾನೆಂಬುದನ್ನು ನೀವು ಕಂಡುಕೊಳ್ಳುವಿರಿ.—1 ಯೋಹಾನ 5:4.
18. ಇಂದಿನ ದೇವಭಕ್ತ ಯುವ ಜನರಿಗೆ ಯಾವ ಪ್ರೋತ್ಸಾಹನೆಯು ನೀಡಲ್ಪಟ್ಟಿದೆ?
18 ನಿಮ್ಮಂತಹ ಸಾವಿರಾರು ಯುವ ಜನರು ಒಂದು ಧೈರ್ಯವಂತ ನಿಲುವನ್ನು ತೆಗೆದುಕೊಂಡಿದ್ದಾರೆ, ಮತ್ತು ಈಗ ಸುವಾರ್ತೆಯ ಸ್ನಾತ ಪ್ರಚಾರಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಯುವ ಜನರಾದ ನಿಮ್ಮ ನಂಬಿಕೆ ಹಾಗೂ ಧೈರ್ಯಕ್ಕಾಗಿ ನಾವು ದೇವರಿಗೆ ಉಪಕಾರ ಸಲ್ಲಿಸುತ್ತೇವೆ! ಈ ಲೋಕದ ಭ್ರಷ್ಟತೆಯಿಂದ ದೂರವಿರಲು ನಿಶ್ಚಯಿಸಿಕೊಳ್ಳಿರಿ. (2 ಪೇತ್ರ 1:4) ನಿಮ್ಮ ಬೈಬಲ್ ಶಿಕ್ಷಿತ ಗ್ರಹಣಶಕ್ತಿಗಳನ್ನು ಉಪಯೋಗಿಸುತ್ತಾ ಇರಿ. ಹಾಗೆ ಮಾಡುವುದು, ನಿಮ್ಮನ್ನು ಕೇಡಿನಿಂದ ಸಂರಕ್ಷಿಸುವುದು ಮಾತ್ರವಲ್ಲ, ನಿಮ್ಮ ರಕ್ಷಣೆಯ ಖಾತ್ರಿಯನ್ನೂ ಅಂತಿಮವಾಗಿ ನೀಡುವುದು. ನಮ್ಮ ಕೊನೆಯ ಲೇಖನವು ತೋರಿಸಲಿರುವಂತೆ, ಈ ರೀತಿಯಲ್ಲಿ ನೀವು ನಿಮ್ಮ ಜೀವನವನ್ನು ಸಫಲಗೊಳಿಸುವಿರಿ.
[ಅಧ್ಯಯನ ಪ್ರಶ್ನೆಗಳು]
a “ಯುವ ಜನರು ಪ್ರಶ್ನಿಸುವುದು . . . ನಾನು ಸತ್ಯವನ್ನು ಹೇಗೆ ನನ್ನದಾಗಿ ಮಾಡಿಕೊಳ್ಳಬಲ್ಲೆ?” ಎಂಬ ಲೇಖನವನ್ನು, 1998, ನವೆಂಬರ್ 8ರ ಎಚ್ಚರ! ಸಂಚಿಕೆಯಲ್ಲಿ ನೋಡಿರಿ.
b ದ ವಾಚ್ಟವರ್ ಪತ್ರಿಕೆಯ, 1992, ಆಗಸ್ಟ್ 15ರ ಸಂಚಿಕೆಯಲ್ಲಿ ಕಂಡುಬರುವ, “ಸಾಮಾಜಿಕ ಮನೋರಂಜನೆ—ಪ್ರಯೋಜನಗಳಲ್ಲಿ ಆನಂದಿಸಿರಿ, ಪಾಶಗಳಿಂದ ದೂರವಿರಿ” ಎಂಬ ಲೇಖನದಲ್ಲಿ, ಈ ವಿಷಯದ ಬಗ್ಗೆ ವಿಸ್ತೃತ ಮಾಹಿತಿಯಿದೆ.
c ಕೀರ್ತನೆ 71, ಕೀರ್ತನೆ 70ರ ಮುಂದುವರಿಕೆಯಾಗಿದ್ದು, ದಾವೀದನ ಕೀರ್ತನೆಯೆಂದು ಮೇಲ್ಬರಹದಲ್ಲಿ ಗುರುತಿಸಲ್ಪಡುತ್ತದೆ.
ಪುನರ್ವಿಮರ್ಶೆಗಾಗಿ ಪ್ರಶ್ನೆಗಳು
◻ ಯುವಕನೊಬ್ಬನು ತನ್ನ ಗ್ರಹಣಶಕ್ತಿಗಳನ್ನು ಹೇಗೆ ತರಬೇತುಗೊಳಿಸುತ್ತಾನೆ?
◻ ಜೊತೆ ಕ್ರೈಸ್ತರು ಏರ್ಪಡಿಸಿದ ಒಂದು ಸಂತೋಷ ಕೂಟಕ್ಕೆ ಹಾಜರಾಗುವ ವಿಷಯದಲ್ಲಿ, ಯುವಕನೊಬ್ಬನು ತನ್ನ ಗ್ರಹಣಶಕ್ತಿಗಳನ್ನು ಹೇಗೆ ಉಪಯೋಗಿಸಬಲ್ಲನು?
◻ ಶಿಕ್ಷಣದ ಕುರಿತು ಯೋಜಿಸುವಾಗ ಒಬ್ಬನು ಯಾವ ಅಂಶಗಳನ್ನು ಪರಿಗಣಿಸಬಹುದು?
◻ ಪ್ರಣಯಾಚರಣೆಯಲ್ಲಿ ತೊಡಗಿರುವ ಜೋಡಿಯು ಲೈಂಗಿಕ ಅನೈತಿಕತೆಯ ಪಾಶದಿಂದ ಹೇಗೆ ದೂರವಿರಸಾಧ್ಯವಿದೆ?
[ಪುಟ 15 ರಲ್ಲಿರುವ ಚಿತ್ರ]
ಸಂಶೋಧನೆಯನ್ನು ಮಾಡಲು ಕಲಿತುಕೊಳ್ಳುವುದು, ನಿಮ್ಮ ಗ್ರಹಣಶಕ್ತಿಗಳಿಗೆ ತರಬೇತಿ ನೀಡಲು ಸಹಾಯ ಮಾಡುವುದು
[ಪುಟ 16 ರಲ್ಲಿರುವ ಚಿತ್ರ]
ಚಿಕ್ಕದಾದ ಸಂತೋಷ ಕೂಟಗಳ ಮೇಲ್ವಿಚಾರಣೆ ಮಾಡುವುದು ತುಂಬ ಸುಲಭ ಮತ್ತು ಅವು ಅನಿಯಂತ್ರಿತ ಪಾರ್ಟಿಗಳಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಯು ತೀರ ಕಡಿಮೆ
[ಪುಟ 16 ರಲ್ಲಿರುವ ಚಿತ್ರ]
ಮಕ್ಕಳು ತಮ್ಮ ಶಿಕ್ಷಣದ ಯೋಜನೆಗಳನ್ನು ಮಾಡುವಾಗ ಹೆತ್ತವರು ಅವರಿಗೆ ಸಹಾಯಮಾಡಬೇಕು
[ಪುಟ 17 ರಲ್ಲಿರುವ ಚಿತ್ರ]
ಒಂದು ಗುಂಪಿನಲ್ಲಿ ಡೇಟಿಂಗ್ ಮಾಡುವುದು ಸಂರಕ್ಷಿತವಾದದ್ದು