ಯೆಹೋವನಿಗೆ ಸಂತೋಷವನ್ನು ತರುವ ಸ್ತೋತ್ರಯಜ್ಞಗಳು
“ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ.”—ರೋಮಾಪುರ 12:1.
1. ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಅರ್ಪಿಸಲ್ಪಡುತ್ತಿದ್ದ ಯಜ್ಞಗಳ ಮೌಲ್ಯದ ಕುರಿತಾಗಿ ಬೈಬಲ್ ಏನು ಹೇಳುತ್ತದೆ?
“ಧರ್ಮಶಾಸ್ತ್ರದಲ್ಲಿ ಮುಂದೆ ಬರಬೇಕಾಗಿದ್ದ ಮೇಲುಗಳ ಛಾಯೆಯೇ ಹೊರತು ಅವುಗಳ ನಿಜಸ್ವರೂಪವಲ್ಲವಾದದರಿಂದ ಆ ಧರ್ಮಶಾಸ್ತ್ರವು ವರುಷ ವರುಷಕ್ಕೆ ಪದೇ ಪದೇ ಅರ್ಪಿತವಾಗುವ ಒಂದೇ ವಿಧವಾದ ಯಜ್ಞಗಳನ್ನು ಅರ್ಪಿಸಿ ದೇವರ ಸಮೀಪಕ್ಕೆ ಬರುವವರನ್ನು ಎಂದಿಗೂ ಸಿದ್ಧಿಗೆ ತರಲಾರದು.” (ಇಬ್ರಿಯ 10:1) ಈ ಎದ್ದುಕಾಣುವಂತಹ ವಾಕ್ಯದಲ್ಲಿ ಅಪೊಸ್ತಲ ಪೌಲನು ಒಂದು ಮುಖ್ಯವಾದ ವಿಷಯವನ್ನು ದೃಢೀಕರಿಸುತ್ತಾನೆ. ಅದೇನೆಂದರೆ, ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಅರ್ಪಿಸಲ್ಪಡುವ ಎಲ್ಲ ಯಜ್ಞಗಳಿಗೆ ಯಾವುದೇ ಶಾಶ್ವತ ಮೌಲ್ಯವಿಲ್ಲ. ಅವು ಮನುಷ್ಯರಿಗೆ ಶಾಶ್ವತವಾದ ರಕ್ಷಣೆಯನ್ನು ಕೊಡಲಾರವು.—ಕೊಲೊಸ್ಸೆ 2:16, 17.
2. ಧರ್ಮಶಾಸ್ತ್ರದಲ್ಲಿರುವ ಯಜ್ಞಗಳು ಮತ್ತು ನೈವೇದ್ಯಗಳ ಕುರಿತಾದ ಬೈಬಲಿನ ವಿವರವಾದ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ವ್ಯರ್ಥವಲ್ಲ ಏಕೆ?
2 ಹಾಗಾದರೆ, ಪೆಂಟಟ್ಯೂಕ್ನಲ್ಲಿ (ಬೈಬಲಿನ ಮೊದಲ ಐದು ಪುಸ್ತಕಗಳು) ನೈವೇದ್ಯಗಳು ಮತ್ತು ಯಜ್ಞಗಳ ಕುರಿತಾಗಿ ಕೊಡಲ್ಪಟ್ಟಿರುವ ಮಾಹಿತಿಯು, ಇಂದು ಕ್ರೈಸ್ತರಿಗೆ ಪ್ರಯೋಜನಕ್ಕೆ ಬಾರದ ವಿಷಯವಾಗಿದೆಯೊ? ವಾಸ್ತವದಲ್ಲಿ, ಲೋಕದಲ್ಲೆಲ್ಲಾ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ನಡೆಸಲಾಗುವ ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ದಾಖಲಾಗಿರುವ ವ್ಯಕ್ತಿಗಳು, ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಬೈಬಲಿನ ಆ ಮೊದಲ ಐದು ಪುಸ್ತಕಗಳನ್ನು ಇತ್ತೀಚೆಗೆ ಓದಿದ್ದಾರೆ. ಅವುಗಳಲ್ಲಿರುವ ಎಲ್ಲ ವಿವರಗಳನ್ನು ಓದಿ ಅರ್ಥಮಾಡಿಕೊಳ್ಳಲು ಕೆಲವರು ತುಂಬ ಪ್ರಯತ್ನಮಾಡಿದ್ದಾರೆ. ಅವರ ಈ ಎಲ್ಲ ಪ್ರಯತ್ನವು ವ್ಯರ್ಥವೊ? ಖಂಡಿತವಾಗಿಯೂ ಹಾಗಿರಲಾರದು. ಏಕೆಂದರೆ, “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” (ರೋಮಾಪುರ 15:4) ಆದುದರಿಂದ ಪ್ರಶ್ನೆಯೇನೆಂದರೆ, ಧರ್ಮಶಾಸ್ತ್ರದಲ್ಲಿರುವ ಯಜ್ಞಗಳು ಮತ್ತು ನೈವೇದ್ಯಗಳ ಕುರಿತಾದ ಮಾಹಿತಿಯಿಂದ ನಾವು ಯಾವ ‘ಉಪದೇಶ’ ಮತ್ತು ‘ಆದರಣೆಯನ್ನು’ ಪಡೆಯಬಲ್ಲೆವು?
ನಮ್ಮ ಉಪದೇಶ ಮತ್ತು ಆದರಣೆಗಾಗಿ
3. ನಮಗೆ ಯಾವ ಮೂಲಭೂತ ಅಗತ್ಯವು ಇದೆ?
3 ಇಂದು ನಾವು ಧರ್ಮಶಾಸ್ತ್ರಕ್ಕನುಸಾರವಾಗಿ ಅಕ್ಷರಶಃ ಯಜ್ಞಗಳನ್ನು ಅರ್ಪಿಸುವಂತೆ ಕೇಳಲ್ಪಟ್ಟಿಲ್ಲ. ಹಾಗಿದ್ದರೂ, ಆ ಯಜ್ಞಗಳು ಇಸ್ರಾಯೇಲ್ಯರಿಗಾಗಿ ಸ್ವಲ್ಪ ಮಟ್ಟಿಗೆ ಏನನ್ನು ದೊರಕಿಸಿಕೊಟ್ಟವೊ, ಆ ಪಾಪಗಳ ಕ್ಷಮಾಪಣೆ ಮತ್ತು ದೇವರ ಅನುಗ್ರಹವು ನಮಗೂ ಈಗ ಬೇಕಾಗಿದೆ. ಆದರೆ ನಾವು ಈಗ ಅಕ್ಷರಶಃ ಯಜ್ಞಗಳನ್ನು ಅರ್ಪಿಸದೇ ಇರುವುದರಿಂದ, ನಾವು ಇಂತಹ ಪ್ರಯೋಜನಗಳನ್ನು ಹೇಗೆ ಪಡೆದುಕೊಳ್ಳಬಹುದು? ಪ್ರಾಣಿ ಯಜ್ಞಗಳ ಇತಿಮಿತಿಗಳ ಕುರಿತಾಗಿ ತಿಳಿಸಿದ ನಂತರ, ಪೌಲನು ಹೇಳಿದ್ದು: “ಕ್ರಿಸ್ತನು ಭೂಲೋಕದೊಳಗೆ ಬರುವಾಗ—[ದೇವರೇ,] ಯಜ್ಞನೈವೇದ್ಯಗಳು ನಿನಗೆ ಇಷ್ಟವಾಗಿರಲಿಲ್ಲ, ನನಗೆ ದೇಹವನ್ನು ಸಿದ್ಧಮಾಡಿಕೊಟ್ಟಿ; ಸರ್ವಾಂಗಹೋಮಗಳಲ್ಲಿಯೂ ದೋಷಪರಿಹಾರಕಯಜ್ಞಗಳಲ್ಲಿಯೂ ನೀನು ಸಂತೋಷಪಡಲಿಲ್ಲ; ಆಗ ನಾನು—ಇಗೋ, ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ. ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ ಎಂದು ಹೇಳಿದೆನು ಅನ್ನುತ್ತಾನೆ.”—ಇಬ್ರಿಯ 10:5-7.
4. ಪೌಲನು ಕೀರ್ತನೆ 40:6-8ನ್ನು ಯೇಸು ಕ್ರಿಸ್ತನಿಗೆ ಹೇಗೆ ಅನ್ವಯಿಸುತ್ತಾನೆ?
4 ಕೀರ್ತನೆ 40:6-8ರಿಂದ ಉಲ್ಲೇಖಿಸುತ್ತಾ ಪೌಲನು ತಿಳಿಸಿದ್ದೇನೆಂದರೆ, ಯೇಸು ‘ಯಜ್ಞನೈವೇದ್ಯಗಳನ್ನು’ ‘ಸರ್ವಾಂಗಹೋಮಗಳನ್ನೂ ದೋಷಪರಿಹಾರಕಯಜ್ಞಗಳನ್ನೂ’ ನಿರಂತರವಾಗಿ ಮುಂದುವರಿಸಿಕೊಂಡು ಹೋಗಲಿಕ್ಕಾಗಿ ಬರಲಿಲ್ಲ. ಪೌಲನು ಈ ಸಂಗತಿಗಳನ್ನು ಬರೆಯುವಷ್ಟರಲ್ಲಿ ಇವೆಲ್ಲವುಗಳು ದೇವರ ಸಮ್ಮತಿಯನ್ನು ಕಳೆದುಕೊಂಡಿದ್ದವು. ಅದಕ್ಕೆ ಬದಲಾಗಿ, ತನ್ನ ಸ್ವರ್ಗೀಯ ತಂದೆಯು ತನಗಾಗಿ ತಯಾರಿಸಿದ ಒಂದು ದೇಹದೊಂದಿಗೆ ಯೇಸು ಬಂದನು. ಇದು, ದೇವರು ಆದಾಮನನ್ನು ಸೃಷ್ಟಿಸಿದಾಗ ಅವನಿಗೆ ಕೊಟ್ಟಂತಹ ಪರಿಪೂರ್ಣ ದೇಹದಂತೆಯೇ ಇತ್ತು. (ಆದಿಕಾಂಡ 2:7; ಲೂಕ 1:35; 1 ಕೊರಿಂಥ 15:22, 45) ದೇವರ ಪರಿಪೂರ್ಣ ಮಗನೋಪಾದಿ, ಯೇಸು ಆದಿಕಾಂಡ 3:15ರಲ್ಲಿ ಮುಂತಿಳಿಸಲ್ಪಟ್ಟಂತಹ ಸ್ತ್ರೀಯ “ಸಂತಾನ”ವಾಗಿದ್ದನು. ಸ್ವತಃ ಯೇಸುವೇ ‘ಹಿಮ್ಮಡಿಯಲ್ಲಿ ಜಜ್ಜಲ್ಪಡಲಿದ್ದರೂ’ ಅವನು ‘ಸೈತಾನನ ತಲೆಯನ್ನು ಜಜ್ಜಲು’ ಕ್ರಮಗಳನ್ನು ತೆಗೆದುಕೊಳ್ಳಲಿದ್ದನು. ಈ ರೀತಿಯಲ್ಲಿ ಯೇಸು, ಹೇಬೆಲನ ಸಮಯದಿಂದಲೂ ನಂಬಿಗಸ್ತ ಪುರುಷರು ಎದುರುನೋಡುತ್ತಿದ್ದ, ಮಾನವಕುಲದ ರಕ್ಷಣೆಗಾಗಿ ಯೆಹೋವನು ಒದಗಿಸಿರುವ ಮಾಧ್ಯಮವಾದನು.
5, 6. ಕ್ರೈಸ್ತರಿಗೆ ದೇವರನ್ನು ಸಮೀಪಿಸುವ ಯಾವ ಶ್ರೇಷ್ಠ ಮಾರ್ಗವಿದೆ?
5 ಯೇಸುವಿನ ಈ ವಿಶೇಷ ಪಾತ್ರದ ಕುರಿತಾಗಿ ಮಾತಾಡುತ್ತಾ, ಪೌಲನು ಹೇಳುವುದು: “ನಾವು ಆತನಲ್ಲಿ ದೇವರಿಗೆ ಸಮರ್ಪಕರಾದ ನೀತಿಸ್ವರೂಪಿಗಳಾಗುವಂತೆ ದೇವರು ಪಾಪಜ್ಞಾನವಿಲ್ಲದ ಆತನನ್ನು ನಮಗೋಸ್ಕರ ಪಾಪಸ್ವರೂಪಿಯಾಗಿ ಮಾಡಿದನು.” (2 ಕೊರಿಂಥ 5:21) ‘ಪಾಪಸ್ವರೂಪಿಯಾಗಿ ಮಾಡು’ ಎಂಬ ಅಭಿವ್ಯಕ್ತಿಯನ್ನು, ‘ದೋಷಪರಿಹಾರಕ ಯಜ್ಞವಾಗಿ ಮಾಡು’ ಎಂದು ಸಹ ಭಾಷಾಂತರಿಸಬಹುದು. ಅಪೊಸ್ತಲ ಯೋಹಾನನು ಹೇಳುವುದು: “ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ, ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡುತ್ತಾನೆ.” (1 ಯೋಹಾನ 2:2) ಇಸ್ರಾಯೇಲ್ಯರಿಗೆ ತಮ್ಮ ಯಜ್ಞಗಳ ಮೂಲಕ ದೇವರನ್ನು ಸಮೀಪಿಸುವ ಒಂದು ತಾತ್ಕಾಲಿಕ ಮಾಧ್ಯಮವಿತ್ತು. ಆದರೆ ಕ್ರೈಸ್ತರಿಗೆ ದೇವರ ಮುಂದೆ ಬರಲು ಹೆಚ್ಚು ಶ್ರೇಷ್ಠವಾದ ಆಧಾರವಿದೆ. ಯೇಸು ಕ್ರಿಸ್ತನ ಯಜ್ಞವೇ ಅದಾಗಿದೆ. (ಯೋಹಾನ 14:6; 1 ಪೇತ್ರ 3:18) ದೇವರು ಒದಗಿಸಿರುವ ಪ್ರಾಯಶ್ಚಿತ್ತ ಯಜ್ಞದಲ್ಲಿ ನಾವು ನಂಬಿಕೆಯನ್ನಿಡುವುದಾದರೆ ಮತ್ತು ಆತನಿಗೆ ವಿಧೇಯರಾಗುವುದಾದರೆ, ನಮ್ಮ ಪಾಪಗಳು ಸಹ ಕ್ಷಮಿಸಲ್ಪಡುವವು ಹಾಗೂ ನಾವು ದೇವರ ಅನುಗ್ರಹವನ್ನೂ ಆಶೀರ್ವಾದವನ್ನೂ ಪಡೆಯಬಲ್ಲೆವು. (ಯೋಹಾನ 3:17, 18) ಇದು ನಮಗೆ ಸಾಂತ್ವನವನ್ನು ನೀಡುವುದಿಲ್ಲವೊ? ಆದರೆ, ನಮಗೆ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯಿದೆ ಎಂಬುದನ್ನು ನಾವು ಹೇಗೆ ತೋರಿಸಬಹುದು?
6 ದೇವರನ್ನು ಸಮೀಪಿಸಲಿಕ್ಕಾಗಿ ಕ್ರೈಸ್ತರಿಗೆ ಹೆಚ್ಚು ಶ್ರೇಷ್ಠವಾದ ಆಧಾರವಿದೆಯೆಂಬುದನ್ನು ವಿವರಿಸಿದ ಬಳಿಕ, ನಾವು ದೇವರ ಈ ಪ್ರೀತಿಪರ ಏರ್ಪಾಡಿಗಾಗಿ ನಮ್ಮ ಪ್ರೀತಿ ಮತ್ತು ಗಣ್ಯತೆಯನ್ನು ತೋರಿಸಬಹುದಾದ ಮೂರು ವಿಧಗಳನ್ನು ಅಪೊಸ್ತಲ ಪೌಲನು ಇಬ್ರಿಯ 10:22-25ರಲ್ಲಿ ತಿಳಿಸುತ್ತಾನೆ. ಪೌಲನು ಇಲ್ಲಿ ಕೊಟ್ಟ ಬುದ್ಧಿವಾದವು ಪ್ರಮುಖವಾಗಿ, ‘ದೇವರ ಸಮಕ್ಷಮದಲ್ಲಿ ಹೊಸ ದಾರಿಯಲ್ಲಿರುವವರಿಗೆ,’ ಅಂದರೆ ಸ್ವರ್ಗಕ್ಕೆ ಹೋಗುವ ಅಭಿಷಿಕ್ತ ಕ್ರೈಸ್ತರಿಗಾಗಿದೆ. ಆದರೆ ಉಳಿದ ಮಾನವರೆಲ್ಲರು, ಯೇಸುವಿನ ಪಾಪನಿವಾರಣ ಯಜ್ಞದಿಂದ ಪ್ರಯೋಜನವನ್ನು ಪಡೆಯಲು ಬಯಸುವುದಾದರೆ, ಅವರು ಸಹ ಪೌಲನ ಈ ಪ್ರೇರಿತ ಮಾತುಗಳಿಗೆ ಗಮನವನ್ನು ಕೊಡಬೇಕು.—ಇಬ್ರಿಯ 10:19.
ಶುದ್ಧವೂ ನಿರ್ಮಲವೂ ಆದ ಯಜ್ಞಗಳನ್ನು ಅರ್ಪಿಸಿರಿ
7. (ಎ) ಒಂದು ಯಜ್ಞದಲ್ಲಿ ಏನು ಮಾಡಲಾಗುತ್ತಿತ್ತೆಂಬುದನ್ನು ಇಬ್ರಿಯ 10:22 ಹೇಗೆ ಪ್ರತಿಬಿಂಬಿಸುತ್ತದೆ? (ಬಿ) ಒಂದು ಯಜ್ಞವನ್ನು ದೇವರು ಸ್ವೀಕರಿಸಬೇಕಾದಲ್ಲಿ ಏನನ್ನು ಮಾಡಬೇಕಾಗಿತ್ತು?
7 ಪ್ರಥಮವಾಗಿ ಪೌಲನು ಕ್ರೈಸ್ತರಿಗೆ ಉತ್ತೇಜನ ನೀಡುವುದು: “ನಾವು ಹೃದಯವನ್ನು ಪ್ರೋಕ್ಷಿಸಿಕೊಂಡು ದೇಹವನ್ನು ತಿಳಿನೀರಿನಿಂದ ತೊಳೆದುಕೊಂಡು ಪರಿಪೂರ್ಣವಾದ ನಂಬಿಕೆಯುಳ್ಳವರಾಗಿಯೂ ಯಥಾರ್ಥಹೃದಯವುಳ್ಳವರಾಗಿಯೂ ದೇವರ ಬಳಿಗೆ ಬರೋಣ.” (ಇಬ್ರಿಯ 10:22) ಇಲ್ಲಿ ಉಪಯೋಗಿಸಲ್ಪಟ್ಟಿರುವ ಪದಗಳು, ಧರ್ಮಶಾಸ್ತ್ರಕ್ಕನುಸಾರ ಅರ್ಪಿಸಲ್ಪಡುತ್ತಿದ್ದ ಒಂದು ಅಕ್ಷರಶಃ ಯಜ್ಞದಲ್ಲಿ ಏನನ್ನು ಮಾಡಲಾಗುತ್ತಿತ್ತೊ ಅದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ. ಇದು ತಕ್ಕದ್ದಾಗಿತ್ತು, ಯಾಕೆಂದರೆ ಒಂದು ಯಜ್ಞವು ಸ್ವೀಕಾರಯೋಗ್ಯವಾಗಿರಬೇಕಾದಲ್ಲಿ, ಒಬ್ಬ ವ್ಯಕ್ತಿಯು ಸರಿಯಾದ ಉದ್ದೇಶದಿಂದ ಅದನ್ನು ಅರ್ಪಿಸಬೇಕಾಗಿತ್ತು. ಅಷ್ಟುಮಾತ್ರವಲ್ಲದೆ, ಆ ಯಜ್ಞವು ಶುದ್ಧವೂ ನಿರ್ಮಲವೂ ಆದದ್ದಾಗಿರಬೇಕಿತ್ತು. ಯಜ್ಞಕ್ಕಾಗಿ ಕೊಡಲಾಗುತ್ತಿದ್ದ ಪ್ರಾಣಿಯು ಶುದ್ಧಪ್ರಾಣಿಗಳಿಂದ, ಅಂದರೆ ದನಗಳಿಂದಾಗಲಿ ಆಡುಕುರಿಗಳಿಂದಾಗಲಿ ಆರಿಸಲ್ಪಟ್ಟದ್ದಾಗಿರಬೇಕಿತ್ತು. ಮತ್ತು ಅದು ಯಾವುದೇ ಕುಂದಿಲ್ಲದೆ, “ಪೂರ್ಣಾಂಗವಾದದ್ದು” ಆಗಿರಬೇಕಿತ್ತು. ಆ ಯಜ್ಞದಲ್ಲಿ ಪಕ್ಷಿಯು ಅರ್ಪಿಸಲ್ಪಡುತ್ತಿದ್ದರೆ, ಅದು ಬೆಳವಕ್ಕಿ ಅಥವಾ ಪಾರಿವಾಳವಾಗಿರಬೇಕಿತ್ತು. ಈ ಷರತ್ತುಗಳು ಪಾಲಿಸಲ್ಪಟ್ಟರೆ, “ಅದು ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವದಕ್ಕಾಗಿ ಅಂಗೀಕಾರವಾಗುವದು[ತ್ತಿತ್ತು].” (ಯಾಜಕಕಾಂಡ 1:2-4, 10, 14; 22:19-25) ಧಾನ್ಯನೈವೇದ್ಯದಲ್ಲಿ, ಭ್ರಷ್ಟತೆಯನ್ನು ಸೂಚಿಸುತ್ತಿದ್ದ ಯಾವುದೇ ರೀತಿಯ ಹುಳಿ ಇರಬಾರದಿತ್ತು. ಅಥವಾ ಯಾವುದೇ ಸಿಹಿ, ಅಂದರೆ ಹಣ್ಣಿನ ಕಾಕಂಬಿಯು ಇರಬಾರದಿತ್ತು, ಯಾಕೆಂದರೆ ಅದು ಕಿಣ್ವವನ್ನು ಉತ್ಪಾದಿಸಸಾಧ್ಯವಿತ್ತು. ಪ್ರಾಣಿ ಅಥವಾ ಧಾನ್ಯದ ಆ ಯಜ್ಞಗಳು ವೇದಿಯ ಮೇಲೆ ಅರ್ಪಿಸಲ್ಪಡುತ್ತಿದ್ದಾಗ, ಅವುಗಳಿಗೆ ಆಹಾರಸಂರಕ್ಷಕವಾಗಿರುವ ಉಪ್ಪನ್ನು ಸೇರಿಸಲಾಗುತ್ತಿತ್ತು.—ಯಾಜಕಕಾಂಡ 2:11-13.
8. (ಎ) ಒಂದು ನೈವೇದ್ಯವನ್ನು ಅರ್ಪಿಸುವ ವ್ಯಕ್ತಿಯು ಯಾವ ಆವಶ್ಯಕತೆಗಳನ್ನು ಪೂರೈಸಬೇಕಾಗಿತ್ತು? (ಬಿ) ನಮ್ಮ ಆರಾಧನೆಯು ಯೆಹೋವನಿಗೆ ಸ್ವೀಕಾರಯೋಗ್ಯವಾಗಿರುವುದನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಬಹುದು?
8 ಆ ನೈವೇದ್ಯವನ್ನು ಅರ್ಪಿಸುತ್ತಿದ್ದ ವ್ಯಕ್ತಿಯ ಕುರಿತೇನು? ಯೆಹೋವನ ಮುಂದೆ ಬರುವ ಯಾವುದೇ ವ್ಯಕ್ತಿಯು ಶುದ್ಧ ಹಾಗೂ ನಿರ್ಮಲನಾಗಿರಬೇಕಿತ್ತೆಂದು ಧರ್ಮಶಾಸ್ತ್ರವು ತಿಳಿಸಿತ್ತು. ಯಾವುದೇ ರೀತಿಯಲ್ಲಿ ಅಶುದ್ಧನಾಗಿರುವ ಒಬ್ಬ ವ್ಯಕ್ತಿಯು, ಯೆಹೋವನ ಮುಂದೆ ತನ್ನ ಶುದ್ಧ ನಿಲುವನ್ನು ಪುನಃ ಪಡೆದುಕೊಳ್ಳಲು, ಮೊದಲು ಒಂದು ದೋಷಪರಿಹಾರಕ ಯಜ್ಞ ಅಥವಾ ಪ್ರಾಯಶ್ಚಿತ್ತ ಯಜ್ಞವನ್ನು ಅರ್ಪಿಸಬೇಕಾಗಿತ್ತು. ಆಗ ಮಾತ್ರವೇ ಅವನ ಸರ್ವಾಂಗಹೋಮ ಅಥವಾ ಸಮಾಧಾನಯಜ್ಞವನ್ನು ದೇವರು ಸ್ವೀಕರಿಸುತ್ತಿದ್ದನು. (ಯಾಜಕಕಾಂಡ 5:1-6, 15, 17) ನಾವು ಯೆಹೋವನ ಮುಂದೆ ಯಾವಾಗಲೂ ಒಂದು ಶುದ್ಧವಾದ ನಿಲುವನ್ನು ಕಾಪಾಡಿಕೊಳ್ಳುವುದು ಎಷ್ಟು ಮಹತ್ವಪೂರ್ಣವಾಗಿದೆ ಎಂಬುದನ್ನು ಇದರಿಂದ ಗ್ರಹಿಸಬಹುದಲ್ಲವೊ? ನಮ್ಮ ಆರಾಧನೆಯನ್ನು ದೇವರು ಸ್ವೀಕರಿಸಬೇಕಾದರೆ, ದೇವರ ನಿಯಮಗಳನ್ನು ಉಲ್ಲಂಘಿಸುವ ಮೂಲಕ ನಾವು ಮಾಡಿರುವ ಯಾವುದೇ ತಪ್ಪುಗಳನ್ನು ಸರಿಪಡಿಸಲು ನಾವು ತಡಮಾಡಬಾರದು. ನಮಗೆ ಸಹಾಯಮಾಡಲು ದೇವರು ಲಭ್ಯಗೊಳಿಸಿರುವ ಮಾಧ್ಯಮಗಳಿಂದ ನಾವು ಪ್ರಯೋಜನವನ್ನು ಪಡೆದುಕೊಳ್ಳಬೇಕು. ಅಂದರೆ ನಾವು ‘ಸಭೆಯ ಹಿರಿಯರನ್ನು’ ಮತ್ತು ‘ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿರುವ’ ಯೇಸು ಕ್ರಿಸ್ತನ ಸಹಾಯವನ್ನು ಕೋರಬೇಕು.—ಯಾಕೋಬ 5:14; 1 ಯೋಹಾನ 2:1, 2.
9. ಯೆಹೋವನಿಗೆ ಅರ್ಪಿಸಲಾಗುತ್ತಿದ್ದ ಯಜ್ಞಗಳು ಮತ್ತು ಸುಳ್ಳು ದೇವರುಗಳಿಗೆ ಅರ್ಪಿಸಲಾಗುತ್ತಿದ್ದ ಯಜ್ಞಗಳ ನಡುವಿನ ಒಂದು ಮುಖ್ಯ ವ್ಯತ್ಯಾಸವೇನಾಗಿತ್ತು?
9 ಯೆಹೋವನಿಗೆ ಅರ್ಪಿಸಲಾಗುತ್ತಿದ್ದ ಯಜ್ಞಗಳು ಮತ್ತು ಇಸ್ರಾಯೇಲಿನ ಸುತ್ತಲಿದ್ದ ಜನಾಂಗಗಳು ಸುಳ್ಳು ದೇವರುಗಳಿಗೆ ಅರ್ಪಿಸುತ್ತಿದ್ದ ಯಜ್ಞಗಳ ನಡುವೆ ಒಂದು ಮುಖ್ಯ ವ್ಯತ್ಯಾಸವಿತ್ತು. ಅದೇನೆಂದರೆ, ಯಜ್ಞಗಳು ಯಾವುದೇ ರೀತಿಯ ಅಶುದ್ಧತೆಯಿಂದ ಮುಕ್ತವಾಗಿರಬೇಕಿತ್ತು. ಮೋಶೆಯ ಧರ್ಮಶಾಸ್ತ್ರದಲ್ಲಿ ತಿಳಿಸಲ್ಪಟ್ಟಿದ್ದ ಯಜ್ಞಗಳ ಈ ಪ್ರಮುಖ ವೈಶಿಷ್ಟ್ಯದ ಕುರಿತಾಗಿ ಹೇಳಿಕೆಯನ್ನು ಕೊಡುತ್ತಾ, ಒಂದು ಅವಲೋಕನಾ ಕೃತಿಯು ತಿಳಿಸಿದ್ದು: “ಅವುಗಳಲ್ಲಿ ಯಾವುದೇ ರೀತಿಯ ಕಣಿಹೇಳುವಿಕೆ ಅಥವಾ ಶಕುನ ವಿಧಿ ಇರಲಿಲ್ಲ; ಯಾವುದೇ ಧಾರ್ಮಿಕ ಉನ್ಮಾದ, ಗಾಯಗೊಳಿಸುವಿಕೆ, ಅಥವಾ ಪವಿತ್ರ ವೇಶ್ಯಾವಾಟಿಕೆ ಇರಲಿಲ್ಲ, ವಿಷಯಲಂಪಟ ಮತ್ತು ಕಾಮಕೇಳಿಯುಳ್ಳ ಫಲವಂತಿಕೆಯ ಸಂಸ್ಕಾರಗಳು ಖಡಾಖಂಡಿತವಾಗಿ ನಿಷೇಧಿಸಲ್ಪಟ್ಟಿದ್ದವು, ಯಾವುದೇ ಮಾನವ ಬಲಿಗಳಿರಲಿಲ್ಲ; ಸತ್ತವರಿಗಾಗಿ ಯಾವುದೇ ಬಲಿಗಳಿರಲಿಲ್ಲ.” ಇದೆಲ್ಲವೂ, ಯೆಹೋವನು ಪವಿತ್ರನಾಗಿದ್ದಾನೆಂಬುದನ್ನು ಗಮನಕ್ಕೆ ತರುತ್ತವೆ. ಇದಲ್ಲದೆ ಆತನು ಯಾವುದೇ ರೀತಿಯ ಪಾಪ ಅಥವಾ ಭ್ರಷ್ಟತೆಯನ್ನು ಮನ್ನಿಸುವುದಿಲ್ಲ ಅಥವಾ ಸಮ್ಮತಿಸುವುದಿಲ್ಲ. (ಹಬಕ್ಕೂಕ 1:13) ಆದುದರಿಂದ ಆತನಿಗೆ ಸಲ್ಲಿಸಲ್ಪಡುವ ಆರಾಧನೆ ಮತ್ತು ಯಜ್ಞಗಳು ದೈಹಿಕವಾಗಿ, ನೈತಿಕವಾಗಿ ಮತ್ತು ಆತ್ಮಿಕವಾಗಿ ಶುದ್ಧವೂ ನಿರ್ಮಲವೂ ಆಗಿರಬೇಕು.—ಯಾಜಕಕಾಂಡ 19:2; 1 ಪೇತ್ರ 1:14-16.
10. ರೋಮಾಪುರ 12:1, 2ರಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಬುದ್ಧಿವಾದಕ್ಕೆ ಹೊಂದಿಕೆಯಲ್ಲಿ ನಾವು ಯಾವ ಸ್ವ-ಪರೀಕ್ಷೆಯನ್ನು ಮಾಡಿಕೊಳ್ಳಬೇಕು?
10 ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ಇಂದು ಯೆಹೋವನಿಗೆ ಸಲ್ಲಿಸುತ್ತಿರುವ ಸೇವೆಯು ಆತನಿಗೆ ಸ್ವೀಕಾರಯೋಗ್ಯವಾಗಿರುವುದನ್ನು ಖಚಿತಪಡಿಸಲಿಕ್ಕಾಗಿ ನಾವು ನಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲಿ ಸ್ವಪರೀಕ್ಷೆ ಮಾಡಿಕೊಳ್ಳಬೇಕು. ಕ್ರೈಸ್ತ ಕೂಟಗಳಲ್ಲಿ ಮತ್ತು ಕ್ಷೇತ್ರ ಸೇವೆಯಲ್ಲಿ ನಾವು ಪಾಲ್ಗೊಳ್ಳುತ್ತಿರುವುದರಿಂದ, ನಮ್ಮ ಖಾಸಗಿ ಜೀವನದಲ್ಲಿ ನಾವು ಏನು ಬೇಕಾದರೂ ಮಾಡಬಹುದೆಂದು ನಾವು ಎಂದೂ ನೆನಸಬಾರದು. ಕ್ರೈಸ್ತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ, ನಮ್ಮ ಜೀವಿತದ ಇತರ ಕ್ಷೇತ್ರಗಳಲ್ಲಿ ದೇವರ ನಿಯಮಗಳನ್ನು ಪಾಲಿಸುವುದರಿಂದ ನಮಗೆ ವಿನಾಯಿತಿ ಇದೆಯೆಂದು ಸಹ ನಾವು ನೆನಸಬಾರದು. (ರೋಮಾಪುರ 2:21, 22) ದೇವರ ದೃಷ್ಟಿಯಲ್ಲಿ ಅಶುದ್ಧವೂ, ಮಲಿನವೂ ಆದ ಯಾವುದೇ ವಿಷಯವು ನಮ್ಮ ಯೋಚನೆಗಳನ್ನು ಮತ್ತು ಕೃತ್ಯಗಳನ್ನು ಕಲುಷಿತಗೊಳಿಸಿದರೆ, ನಾವು ದೇವರ ಆಶೀರ್ವಾದ ಮತ್ತು ಅನುಗ್ರಹವನ್ನು ಪಡೆದುಕೊಳ್ಳಲಾರೆವು. ಆದ್ದರಿಂದ ಪೌಲನ ಈ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ: “ಸಹೋದರರೇ, ದೇವರ ಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವದೇನಂದರೆ—ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆಯು. ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.”—ರೋಮಾಪುರ 12:1, 2.
ಮನಃಪೂರ್ವಕವಾಗಿ ಸ್ತೋತ್ರಯಜ್ಞಗಳನ್ನು ಅರ್ಪಿಸಿರಿ
11. ಇಬ್ರಿಯ 10:23ರಲ್ಲಿ ತಿಳಿಸಲ್ಪಟ್ಟಿರುವ “ಬಹಿರಂಗ ಘೋಷಣೆ”ಯಲ್ಲಿ ಏನು ಒಳಗೂಡಿದೆ?
11 ಇಬ್ರಿಯರಿಗೆ ಬರೆಯುವಾಗ, ಪೌಲನು ಸತ್ಯಾರಾಧನೆಯ ಇನ್ನೊಂದು ಪ್ರಮುಖ ಅಂಶಕ್ಕೆ ಗಮನವನ್ನು ಸೆಳೆಯುತ್ತಾನೆ: “ನಮ್ಮ ನಿರೀಕ್ಷೆಯನ್ನು ಕುರಿತು ನಾವು ಮಾಡಿದ ಪ್ರತಿಜ್ಞೆಯನ್ನು [“ಬಹಿರಂಗ ಘೋಷಣೆಯನ್ನು,” NW] ನಿಶ್ಚಂಚಲವಾಗಿ ಪರಿಗ್ರಹಿಸೋಣ; ವಾಗ್ದಾನಮಾಡಿದಾತನು ನಂಬಿಗಸ್ತನು.” (ಇಬ್ರಿಯ 10:23) “ಬಹಿರಂಗ ಘೋಷಣೆ” ಎಂಬ ವಾಕ್ಸರಣಿಯ ಅಕ್ಷರಾರ್ಥವು, “ಅರಿಕೆಮಾಡು” ಎಂದಾಗಿದೆ ಮತ್ತು ಪೌಲನು “ಸ್ತೋತ್ರಯಜ್ಞ”ದ ಕುರಿತಾಗಿಯೂ ಮಾತಾಡುತ್ತಾನೆ. (ಇಬ್ರಿಯ 13:15) ಹೇಬೆಲ, ನೋಹ ಮತ್ತು ಅಬ್ರಹಾಮರಂತಹ ಪುರುಷರು ಅರ್ಪಿಸಿದ ರೀತಿಯ ಯಜ್ಞವನ್ನು ಇದು ನಮ್ಮ ನೆನಪಿಗೆ ತರುತ್ತದೆ.
12, 13. ಒಬ್ಬ ಇಸ್ರಾಯೇಲ್ಯನು ಒಂದು ಸರ್ವಾಂಗಹೋಮವನ್ನು ಅರ್ಪಿಸುವ ಮೂಲಕ ಏನನ್ನು ಅಂಗೀಕರಿಸುತ್ತಿದ್ದನು, ಮತ್ತು ನಾವು ಕೂಡ ಅದೇ ರೀತಿಯ ಮನೋಭಾವವನ್ನು ಹೇಗೆ ಪ್ರದರ್ಶಿಸಬಹುದು?
12 ಒಬ್ಬ ಇಸ್ರಾಯೇಲ್ಯನು ಸರ್ವಾಂಗಹೋಮವನ್ನು “ಯೆಹೋವನ ಮುಂದೆ ತನ್ನ ಸ್ವಂತ ಇಷ್ಟದಿಂದ” ಅರ್ಪಿಸುತ್ತಿದ್ದನು. (ಯಾಜಕಕಾಂಡ 1:3) ಈ ರೀತಿಯ ಯಜ್ಞದ ಮೂಲಕ, ಯೆಹೋವನು ತನ್ನ ಜನರ ಮೇಲೆ ಸುರಿಸುವ ಹೇರಳವಾದ ಆಶೀರ್ವಾದಗಳು ಮತ್ತು ತೋರಿಸುವ ಪ್ರೀತಿದಯೆಯ ಕುರಿತು ಅವನು ತನ್ನ ಸ್ವಂತ ಇಚ್ಛೆಯಿಂದ ಬಹಿರಂಗ ಘೋಷಣೆಯನ್ನು ಅಥವಾ ಅಂಗೀಕಾರವನ್ನು ಮಾಡುತ್ತಿದ್ದನು. ಸರ್ವಾಂಗಹೋಮದ ಒಂದು ವೈಶಿಷ್ಟ್ಯವು, ಆ ಇಡೀ ಪ್ರಾಣಿಯು ವೇದಿಯ ಮೇಲೆ ಅರ್ಪಿಸಲ್ಪಡುತ್ತಿತ್ತೆಂಬುದನ್ನು ನೆನಪಿಸಿಕೊಳ್ಳಿರಿ. ಇದು ಸಂಪೂರ್ಣ ಭಕ್ತಿ ಮತ್ತು ಸಮರ್ಪಣೆಯನ್ನು ಚೆನ್ನಾಗಿ ಚಿತ್ರಿಸುತ್ತಿತ್ತು. ಹಾಗೆಯೇ, ನಾವು ಸಿದ್ಧಮನಸ್ಸಿನಿಂದ ಮತ್ತು ಪೂರ್ಣ ಹೃದಯದಿಂದ ಯೆಹೋವನಿಗೆ ನಮ್ಮ “ಸ್ತೋತ್ರಯಜ್ಞವನ್ನು” ಸಲ್ಲಿಸುವಾಗ, ನಮಗೆ ಪ್ರಾಯಶ್ಚಿತ್ತ ಯಜ್ಞದಲ್ಲಿರುವ ನಂಬಿಕೆಯನ್ನು ಮತ್ತು ಅದಕ್ಕಾಗಿರುವ ನಮ್ಮ ಕೃತಜ್ಞತೆಯನ್ನು ನಾವು ತೋರಿಸುತ್ತೇವೆ.
13 ಕ್ರೈಸ್ತರು ಈಗ ಅಕ್ಷರಶಃ ಪ್ರಾಣಿ ಅಥವಾ ಧಾನ್ಯದ ಯಜ್ಞಗಳನ್ನು ಅರ್ಪಿಸುವುದಿಲ್ಲ. ಆದರೆ ಅವರಿಗೆ ರಾಜ್ಯದ ಸುವಾರ್ತೆಯ ವಿಷಯದಲ್ಲಿ ಸಾಕ್ಷಿನೀಡುವ ಮತ್ತು ಯೇಸು ಕ್ರಿಸ್ತನ ಶಿಷ್ಯರನ್ನಾಗಿ ಮಾಡುವ ಜವಾಬ್ದಾರಿಯು ಖಂಡಿತವಾಗಿಯೂ ಇದೆ. (ಮತ್ತಾಯ 24:14; 28:19, 20) ದೇವರು ವಿಧೇಯ ಮಾನವಕುಲಕ್ಕಾಗಿ ಮಾಡಲಿರುವ ಅದ್ಭುತ ವಿಷಯಗಳ ಕುರಿತಾಗಿ ಇನ್ನೂ ಹೆಚ್ಚು ಜನರು ತಿಳಿದುಕೊಳ್ಳುವಂತೆ, ದೇವರ ರಾಜ್ಯದ ಸುವಾರ್ತೆಯನ್ನು ಬಹಿರಂಗವಾಗಿ ಘೋಷಿಸುವ ಅವಕಾಶಗಳನ್ನು ನೀವು ಉಪಯೋಗಿಸುತ್ತಿದ್ದೀರೊ? ಆಸಕ್ತ ಜನರಿಗೆ ಕಲಿಸುವುದರಲ್ಲಿ ನಿಮ್ಮ ಸಮಯ ಮತ್ತು ಶಕ್ತಿಯನ್ನು ಸಿದ್ಧಮನಸ್ಸಿನಿಂದ ಉಪಯೋಗಿಸಿ, ಅವರು ಯೇಸು ಕ್ರಿಸ್ತನ ಶಿಷ್ಯರಾಗುವಂತೆ ಸಹಾಯಮಾಡುತ್ತಿದ್ದೀರೊ? ಶುಶ್ರೂಷೆಯಲ್ಲಿನ ನಮ್ಮ ಹುರುಪಿನ ಭಾಗವಹಿಸುವಿಕೆಯು, ಒಂದು ಸರ್ವಾಂಗಹೋಮದ ಸುಗಂಧಭರಿತ ಸುವಾಸನೆಯಂತೆ ದೇವರಿಗೆ ಮೆಚ್ಚಿಕೆಯಾದದ್ದಾಗಿದೆ.—1 ಕೊರಿಂಥ 15:58.
ದೇವರೊಂದಿಗೆ ಮತ್ತು ಮನುಷ್ಯರೊಂದಿಗಿನ ಸಹವಾಸದಲ್ಲಿ ಹರ್ಷಿಸಿರಿ
14. ಇಬ್ರಿಯ 10:24, 25ರಲ್ಲಿರುವ ಪೌಲನ ಮಾತುಗಳು ಮತ್ತು ಸಮಾಧಾನಯಜ್ಞದ ವಿಚಾರವು ಹೇಗೆ ಸಮಾಂತರವಾಗುತ್ತವೆ?
14 ಕೊನೆಯಲ್ಲಿ ಪೌಲನು, ನಾವು ದೇವರನ್ನು ಆರಾಧಿಸುತ್ತಿರುವಾಗ, ಜೊತೆ ಕ್ರೈಸ್ತರೊಂದಿಗೆ ನಮಗಿರುವ ಸಂಬಂಧಕ್ಕೆ ಗಮನಸೆಳೆಯುತ್ತಾನೆ. “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟು ಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.” (ಇಬ್ರಿಯ 10:24, 25) ‘ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಪ್ರೇರೇಪಿಸು,’ ‘ಸಭೆಯಾಗಿ ಕೂಡಿಕೊಳ್ಳು,’ ಮತ್ತು ‘ಒಬ್ಬರನ್ನೊಬ್ಬರನ್ನು ಎಚ್ಚರಿಸು’ ಎಂಬ ವಾಕ್ಸರಣಿಗಳು, ಹಿಂದಿನ ಕಾಲದಲ್ಲಿ ದೇವರ ಜನರಲ್ಲಿ ಸಮಾಧಾನಯಜ್ಞವು ಏನನ್ನು ಸಾಧ್ಯಮಾಡುತ್ತಿತ್ತೊ ಅದನ್ನು ನೆನಪಿಗೆ ತರುತ್ತದೆ.
15. ಸಮಾಧಾನ ಯಜ್ಞ ಮತ್ತು ಕ್ರೈಸ್ತ ಕೂಟಗಳ ನಡುವೆ ಯಾವ ಹೋಲಿಕೆ ಇದೆ?
15 “ಸಮಾಧಾನ ಯಜ್ಞಗಳು” ಎಂಬ ಪದಗಳಲ್ಲಿರುವ “ಸಮಾಧಾನ” ಎಂಬುದರ ಹೀಬ್ರು ಪದವು ಇಲ್ಲಿ ಬಹುವಚನದಲ್ಲಿದೆ. ಇದು, ಅಂತಹ ಯಜ್ಞಗಳಲ್ಲಿ ಪಾಲ್ಗೊಳ್ಳುವುದು ದೇವರೊಂದಿಗೆ ಮತ್ತು ಜೊತೆ ಆರಾಧಕರೊಂದಿಗಿನ ಸಮಾಧಾನದಲ್ಲಿ ಫಲಿಸುತ್ತದೆಂಬುದನ್ನು ಪ್ರಾಯಶಃ ಚಿತ್ರಿಸುತ್ತಿರಬಹುದು. ಆ ಸಮಾಧಾನ ಯಜ್ಞದ ಕುರಿತಾಗಿ ಒಬ್ಬ ವಿದ್ವಾಂಸನು ಗಮನಿಸಿದ್ದು: “ಇದು ಖಂಡಿತವಾಗಿಯೂ ಒಡಂಬಡಿಕೆಯ ದೇವರೊಂದಿಗೆ ಒಂದು ಸಂತೋಷಭರಿತ ಸಹವಾಸದ ಸಮಯವಾಗಿತ್ತು. ಆತನು ಯಾವಾಗಲೂ ಇಸ್ರಾಯೇಲಿನ ಅತಿಥೇಯನಾಗಿರುತ್ತಿದ್ದರೂ, ಆ ಯಜ್ಞಾರ್ಪಕ ಊಟದಲ್ಲಿ ಆತನು ಇಸ್ರಾಯೇಲಿನ ಅತಿಥಿಯಾಗಲು ತನ್ನನ್ನು ತಗ್ಗಿಸಿಕೊಳ್ಳುತ್ತಿದ್ದನು.” ಇದು ನಮಗೆ ಯೇಸುವಿನ ವಾಗ್ದಾನವನ್ನು ಜ್ಞಾಪಕಕ್ಕೆ ತರುತ್ತದೆ: “ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ.” (ಮತ್ತಾಯ 18:20) ಪ್ರತಿ ಸಲ ನಾವು ಒಂದು ಕ್ರೈಸ್ತ ಕೂಟಕ್ಕೆ ಹಾಜರಾದಾಗ, ಅಲ್ಲಿನ ಭಕ್ತಿವೃದ್ಧಿಮಾಡುವ ಸಹವಾಸ, ಉತ್ತೇಜನದಾಯಕ ಉಪದೇಶ, ಮತ್ತು ಪ್ರಭುವಾದ ಯೇಸು ಕ್ರಿಸ್ತನು ನಮ್ಮೊಂದಿಗೆ ಉಪಸ್ಥಿತನಿದ್ದಾನೆಂಬ ವಿಚಾರದಿಂದ ಪ್ರಯೋಜನಪಡೆಯುತ್ತೇವೆ. ಇದು ಒಂದು ಕ್ರೈಸ್ತ ಕೂಟವನ್ನು ನಿಜವಾಗಿಯೂ ಹರ್ಷದಾಯಕ ಹಾಗೂ ನಂಬಿಕೆಯನ್ನು ಬಲಪಡಿಸುವ ಸಂದರ್ಭವನ್ನಾಗಿ ಮಾಡುತ್ತದೆ.
16. ಸಮಾಧಾನ ಯಜ್ಞವನ್ನು ಮನಸ್ಸಿನಲ್ಲಿಟ್ಟುಕೊಂಡು, ಕ್ರೈಸ್ತ ಕೂಟಗಳನ್ನು ಯಾವುದು ವಿಶೇಷವಾಗಿ ಆನಂದಕರವನ್ನಾಗಿ ಮಾಡುತ್ತದೆಂದು ಹೇಳಬಹುದು?
16 ಸಮಾಧಾನಯಜ್ಞವನ್ನು, ಕರುಳುಗಳ ಸುತ್ತಲೂ, ಹುರುಳಿಕಾಯಿಗಳ ಸುತ್ತಲೂ, ಕಾಳಿಜದ ಮೇಲೆ ಹಾಗೂ ಸೊಂಟದ ಸುತ್ತಲೂ ಇರುವ ಕೊಬ್ಬು ಹಾಗೂ ಕುರಿಗಳ ಬಾಲದ ಕೊಬ್ಬನ್ನು ವೇದಿಯ ಮೇಲೆ ಸುಡುವ ಮೂಲಕ ಇಲ್ಲವೇ ಹೋಮಮಾಡುವ ಮೂಲಕ ಯೆಹೋವನಿಗೆ ಅರ್ಪಿಸಲಾಗುತ್ತಿತ್ತು. (ಯಾಜಕಕಾಂಡ 3:3-16) ಕೊಬ್ಬು ಒಂದು ಪ್ರಾಣಿಯ ಅತಿ ಪೌಷ್ಟಿಕವಾದ ಮತ್ತು ಅತ್ಯುತ್ತಮವಾದ ಭಾಗವಾಗಿ ಪರಿಗಣಿಸಲ್ಪಡುತ್ತಿತ್ತು. ಆದುದರಿಂದ ವೇದಿಯ ಮೇಲೆ ಅದನ್ನು ಅರ್ಪಿಸುವುದು, ಯೆಹೋವನಿಗೆ ಅತ್ಯುತ್ತಮವಾದದ್ದನ್ನು ಕೊಡುವುದನ್ನು ಸೂಚಿಸುತ್ತಿತ್ತು. ಕ್ರೈಸ್ತ ಕೂಟಗಳಲ್ಲಿ ವಿಶೇಷವಾಗಿ ಆನಂದಕರವನ್ನಾಗಿ ಮಾಡುವ ಸಂಗತಿಯೇನೆಂದರೆ, ನಾವು ಅಲ್ಲಿ ಕೇವಲ ಉಪದೇಶವನ್ನು ಪಡೆಯುತ್ತೇವೆ ಮಾತ್ರವಲ್ಲ, ಯೆಹೋವನಿಗೆ ಸ್ತುತಿಯನ್ನೂ ಸಲ್ಲಿಸುತ್ತೇವೆ. ಇದನ್ನು ನಾವು ಹೇಗೆ ಮಾಡುತ್ತೇವೆ? ಕೂಟಗಳಲ್ಲಿ, ನಮ್ಮ ನಮ್ರವಾದ ಆದರೆ ಅತ್ಯುತ್ತಮವಾದ ಪ್ರಯತ್ನದೊಂದಿಗೆ, ಹೃತ್ಪೂರ್ವಕವಾಗಿ ಹಾಡುವ ಮೂಲಕ, ಗಮನಗೊಟ್ಟು ಕಿವಿಗೊಡುವ ಮೂಲಕ ಮತ್ತು ಸಾಧ್ಯವಿರುವಲ್ಲೆಲ್ಲ ಉತ್ತರಗಳನ್ನು ಹೇಳುವ ಮೂಲಕವೇ. “ಯಾಹುವಿಗೆ ಸ್ತೋತ್ರ! ಯೆಹೋವನಿಗೆ ನೂತನಕೀರ್ತನೆಯನ್ನು ಹಾಡಿರಿ; ಭಕ್ತಸಭೆಯಲ್ಲಿ ಆತನನ್ನು ಸ್ತುತಿಸಿರಿ” ಎಂದು ಕೀರ್ತನೆಗಾರನು ಘೋಷಿಸಿದನು.—ಕೀರ್ತನೆ 149:1.
ಯೆಹೋವನಿಂದ ಹೇರಳವಾದ ಆಶೀರ್ವಾದಗಳು ನಮಗಾಗಿ ಕಾದಿವೆ
17, 18. (ಎ) ಯೆರೂಸಲೇಮಿನಲ್ಲಿದ್ದ ಆಲಯದ ಉದ್ಘಾಟನೆಯ ಸಮಯದಲ್ಲಿ ಸೊಲೊಮೋನನು ಯಾವ ಯಜ್ಞವನ್ನು ಅರ್ಪಿಸಿದನು? (ಬಿ) ದೇವಾಲಯದ ಉದ್ಘಾಟನೆಯ ಸಮಯದಲ್ಲಿನ ಸಮಾರಂಭದಿಂದ ಜನರಿಗೆ ಯಾವ ಆಶೀರ್ವಾದಗಳು ಸಿಕ್ಕಿದವು?
17 ಯೆರೂಸಲೇಮಿನಲ್ಲಿದ್ದ ಆಲಯವು, ಸಾ.ಶ.ಪೂ. 1026ನೆಯ ಇಸವಿಯ ಏಳನೆಯ ತಿಂಗಳಿನಲ್ಲಿ ಉದ್ಘಾಟಿಸಲ್ಪಟ್ಟಿತು. ಆಗ ರಾಜನಾದ ಸೊಲೊಮೋನನು ‘ಯೆಹೋವನ ಸನ್ನಿಧಿಯಲ್ಲಿ ಒಂದು ಯಜ್ಞಮಾಡಿದನು.’ ಅದರಲ್ಲಿ ‘ಸರ್ವಾಂಗಹೋಮಗಳು, ಧಾನ್ಯನೈವೇದ್ಯಗಳು, ಸಮಾಧಾನಯಜ್ಞದ ಕೊಬ್ಬು’ ಒಳಗೂಡಿತ್ತು. ಆ ಸಂದರ್ಭದಲ್ಲಿ ಧಾನ್ಯನೈವೇದ್ಯಗಳಿಗೆ ಕೂಡಿಸಿ, 22,000 ಹೋರಿಗಳು ಮತ್ತು 1,20,000 ಕುರಿಗಳನ್ನು ಬಲಿಯರ್ಪಿಸಲಾಯಿತು.—1 ಅರಸು 8:62-65.
18 ಇಷ್ಟು ದೊಡ್ಡದಾದ ಸಮಾರಂಭದಲ್ಲಿ ಎಷ್ಟೊಂದು ಹಣ ಮತ್ತು ಕೆಲಸವು ಒಳಗೂಡಿತ್ತೆಂಬುದನ್ನು ನೀವು ಊಹಿಸಿಕೊಳ್ಳಬಲ್ಲಿರೊ? ಆದರೆ ಇಸ್ರಾಯೇಲ್ ಜನಾಂಗಕ್ಕೆ ಸಿಕ್ಕಿದಂತಹ ಆಶೀರ್ವಾದಗಳಿಗೆ ಹೋಲಿಕೆಯಲ್ಲಿ, ಇದು ಏನೂ ಆಗಿರಲಿಲ್ಲ. ಆ ಉತ್ಸವಸಮಾರಂಭದ ಅಂತ್ಯದಲ್ಲಿ ಸೊಲೊಮೋನನು, “ಜನರಿಗೆ ಹೋಗುವದಕ್ಕೆ ಅಪ್ಪಣೆ”ಕೊಟ್ಟನು. ಅವರು “ಅರಸನನ್ನು ವಂದಿಸಿ ಯೆಹೋವನು ತನ್ನ ಸೇವಕನಾದ ದಾವೀದನಿಗೂ ತನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೂ ಮಾಡಿದ ಸರ್ವೋಪಕಾರಗಳನ್ನು ನೆನಸಿ ಆನಂದಚಿತ್ತರಾಗಿ ಹರ್ಷಿಸುತ್ತಾ ತಮ್ಮ ತಮ್ಮ ನಿವಾಸಗಳಿಗೆ ತೆರಳಿದರು.” (1 ಅರಸುಗಳು 8:66) “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು” ಎಂಬ ಸೊಲೊಮೋನನ ಮಾತುಗಳು ಎಷ್ಟು ಸತ್ಯ!—ಜ್ಞಾನೋಕ್ತಿ 10:22.
19. ಈಗ ಹಾಗೂ ಸದಾಕಾಲಕ್ಕೂ ಯೆಹೋವನಿಂದ ಭವ್ಯವಾದ ಆಶೀರ್ವಾದಗಳನ್ನು ಪಡೆಯಲಿಕ್ಕಾಗಿ ನಾವೇನನ್ನು ಮಾಡಸಾಧ್ಯವಿದೆ?
19 “ಮುಂದೆ ಬರಬೇಕಾಗಿದ್ದ ಮೇಲುಗಳ ಛಾಯೆ”ಯ ಬದಲಿಗೆ “ಅವುಗಳ ನಿಜಸ್ವರೂಪ”ವಿರುವ ಸಮಯದಲ್ಲಿ ನಾವಿಂದು ಜೀವಿಸುತ್ತಿದ್ದೇವೆ. (ಇಬ್ರಿಯ 10:1) ಸೂಚಿತರೂಪದ ಮಹಾಯಾಜಕನ ಪಾತ್ರದಲ್ಲಿ ಯೇಸು ಕ್ರಿಸ್ತನು ಈಗಾಗಲೇ ಸ್ವರ್ಗದೊಳಗೆ ಪ್ರವೇಶಿಸಿದ್ದಾನೆ. ಮತ್ತು ತನ್ನ ಯಜ್ಞದಲ್ಲಿ ನಂಬಿಕೆಯನ್ನಿಡುವವರೆಲ್ಲರಿಗಾಗಿ ದೋಷಪರಿಹಾರವನ್ನು ಮಾಡಲಿಕ್ಕಾಗಿ ತನ್ನ ಸ್ವಂತ ರಕ್ತದ ಮೌಲ್ಯವನ್ನು ಅವನು ಪ್ರಸ್ತುತಪಡಿಸಿದ್ದಾನೆ. (ಇಬ್ರಿಯ 9:10, 11, 24-26) ಆ ಮಹಾನ್ ಯಜ್ಞದ ಆಧಾರದ ಮೇಲೆ ಮತ್ತು ಶುದ್ಧವೂ ನಿರ್ಮಲವೂ ಆಗಿರುವ ಸ್ತೋತ್ರಯಜ್ಞಗಳನ್ನು ದೇವರಿಗೆ ಸಲ್ಲಿಸುವ ಮೂಲಕ, ನಾವು ಸಹ ಯೆಹೋವನಿಂದ ಹೇರಳವಾದ ಆಶೀರ್ವಾದಗಳನ್ನು ಪಡೆಯಲು ನಿರೀಕ್ಷಿಸುತ್ತಾ, “ಆನಂದಚಿತ್ತರಾಗಿ ಹರ್ಷಿಸುತ್ತಾ” ಮುನ್ನಡೆಯಬಲ್ಲೆವು.—ಮಲಾಕಿಯ 3:10.
ನೀವು ಹೇಗೆ ಉತ್ತರಿಸುವಿರಿ?
• ಧರ್ಮಶಾಸ್ತ್ರದಲ್ಲಿ ಯಜ್ಞಗಳು ಮತ್ತು ನೈವೇದ್ಯಗಳ ಕುರಿತಾದ ಮಾಹಿತಿಯಿಂದ ನಾವು ಯಾವ ಉಪದೇಶ ಮತ್ತು ಸಾಂತ್ವನವನ್ನು ಪಡೆಯಬಲ್ಲೆವು?
• ಒಂದು ಯಜ್ಞವು ಸ್ವೀಕಾರಯೋಗ್ಯವಾಗಿರಬೇಕಾದರೆ, ಅದರ ಮೊದಲ ಆವಶ್ಯಕತೆಯೇನು, ಮತ್ತು ಇದು ನಮಗೆ ಏನನ್ನು ಅರ್ಥೈಸುತ್ತದೆ?
• ಒಂದು ಸ್ವಯಂ ಪ್ರೇರಿತ ಸರ್ವಾಂಗಹೋಮಕ್ಕಾಗಿ ಹೋಲುವಂತಹ ಯಾವುದನ್ನು ನಾವು ಅರ್ಪಿಸಸಾಧ್ಯವಿದೆ?
• ಕ್ರೈಸ್ತ ಕೂಟಗಳನ್ನು ಸಮಾಧಾನಯಜ್ಞಕ್ಕೆ ಹೇಗೆ ಹೋಲಿಸಸಾಧ್ಯವಿದೆ?
[ಪುಟ 18ರಲ್ಲಿರುವ ಚಿತ್ರ]
ಮಾನವಕುಲದ ರಕ್ಷಣೆಗಾಗಿ, ಯೇಸುವಿನ ಪ್ರಾಯಶ್ಚಿತ್ತ ಯಜ್ಞವನ್ನು ಯೆಹೋವನು ಒದಗಿಸಿದನು
[ಪುಟ 20ರಲ್ಲಿರುವ ಚಿತ್ರ]
ಯೆಹೋವನಿಗೆ ನಮ್ಮ ಸೇವೆಯು ಸ್ವೀಕಾರಯೋಗ್ಯವಾಗಿರಬೇಕಾದರೆ, ನಾವು ಯಾವುದೇ ರೀತಿಯ ಅಶುದ್ಧತೆಯಿಂದ ದೂರವಿರಬೇಕು
[ಪುಟ 21ರಲ್ಲಿರುವ ಚಿತ್ರ]
ನಾವು ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಾಗ, ಯೆಹೋವನ ಒಳ್ಳೆಯತನವನ್ನು ಬಹಿರಂಗವಾಗಿ ಅಂಗೀಕರಿಸುತ್ತೇವೆ