-
ನಾವು ನಂಬಿಕೆಯುಳ್ಳ ಜನರಾಗಿರೋಣಕಾವಲಿನಬುರುಜು—1999 | ಡಿಸೆಂಬರ್ 15
-
-
ದೇವರ ವಾಕ್ಯದ ಯೋಗ್ಯವಾದ ಬಳಕೆ
6. ಪೌಲನು ಇಬ್ರಿಯ 10:38ರಲ್ಲಿ ದಾಖಲಿಸಿದ ಮಾತುಗಳನ್ನು ಯಾವ ಮೂಲದಿಂದ ಉದ್ಧರಿಸುತ್ತಿದ್ದನು?
6 ಶಾಸ್ತ್ರಗಳನ್ನು ನಿಪುಣವಾಗಿ ಉಪಯೋಗಿಸುವ ಮೂಲಕವೂ ಪೌಲನು ತನ್ನ ಜೊತೆ ವಿಶ್ವಾಸಿಗಳಲ್ಲಿ ನಂಬಿಕೆಯನ್ನು ಕಟ್ಟಿದನು. ಉದಾಹರಣೆಗೆ, ಅವನು ಬರೆದುದು: “ಆದರೆ ನನ್ನವನಾಗಿರುವ ನೀತಿವಂತನು ನಂಬಿಕೆಯಿಂದಲೇ ಬದುಕುವನು” ಮತ್ತು “ಅವನು ಹಿಂದೆಗೆದರೆ ಅವನಲ್ಲಿ ನನಗೆ ಸಂತೋಷವಿರುವದಿಲ್ಲ.” (ಇಬ್ರಿಯ 10:38) ಈ ವಿಷಯವನ್ನು ಪೌಲನು ಹಬಕ್ಕೂಕನ ಪ್ರವಾದನೆಯಿಂದ ಉದ್ಧರಿಸುತ್ತಿದ್ದನು.a ಈ ಮಾತುಗಳು ಪೌಲನ ಓದುಗರಿಗೆ ಚಿರಪರಿಚಿತವಾಗಿದ್ದವು, ಏಕೆಂದರೆ ಇಬ್ರಿಯ ಕ್ರೈಸ್ತರು ಈ ಪ್ರವಾದನ ಪುಸ್ತಕಗಳನ್ನು ಬಲ್ಲವರಾಗಿದ್ದರು. ಸಾ.ಶ. 61ರ ಸಮಯದಲ್ಲಿ ಯೆರೂಸಲೇಮ್ ಮತ್ತು ಅದರ ಅಕ್ಕಪಕ್ಕದಲ್ಲಿ ಜೀವಿಸುತ್ತಿದ್ದ ಕ್ರೈಸ್ತರ ನಂಬಿಕೆಯನ್ನು ಬಲಪಡಿಸಲಿಕ್ಕಾಗಿ ಪೌಲನು ಉಪಯೋಗಿಸಿದಂತಹ ಹಬಕ್ಕೂಕನ ಮಾದರಿಯು ಸೂಕ್ತವಾದದ್ದಾಗಿತ್ತು. ಏಕೆ?
7. ಹಬಕ್ಕೂಕನು ತನ್ನ ಪ್ರವಾದನೆಯನ್ನು ಯಾವಾಗ ದಾಖಲಿಸಿದನು ಮತ್ತು ಆ ಸಮಯದಲ್ಲಿ ಯೂದಾಯದ ಸ್ಥಿತಿಯು ಹೇಗಿತ್ತು?
7 ಸಾ.ಶ.ಪೂ. 607ರಲ್ಲಿ ಯೆರೂಸಲೇಮ್ ನಾಶವಾಗುವ ಎರಡು ದಶಕಗಳ ಮುಂಚೆಯಷ್ಟೇ ಹಬಕ್ಕೂಕನು ತನ್ನ ಪುಸ್ತಕವನ್ನು ಬರೆದಿದ್ದನು. ಪ್ರವಾದಿಯು ಒಂದು ದರ್ಶನದಲ್ಲಿ “ತೀಕ್ಷ್ಣವೂ ತೀವ್ರವೂ ಆದ . . . ಜನಾಂಗವನ್ನು” ಅಂದರೆ ಕಸ್ದೀಯರನ್ನು (ಇಲ್ಲವೆ, ಬಾಬೆಲಿನವರನ್ನು) ಕಂಡನು. ಇವರು ಯೂದಾಯದ ಮೇಲೆ ರಭಸದಿಂದ ಆಕ್ರಮಣಮಾಡಿ, ಜನರನ್ನೂ ಜನಾಂಗಗಳನ್ನೂ ಕಬಳಿಸಿಬಿಡುತ್ತಾ ಯೆರೂಸಲೇಮನ್ನು ಧ್ವಂಸಗೊಳಿಸಿದರು. (ಹಬಕ್ಕೂಕ 1:5-11) ಆದರೆ, ಇಂತಹ ಒಂದು ಕೇಡನ್ನು ಯೆಶಾಯನ ದಿನಗಳಲ್ಲಿ, ಅಂದರೆ ಒಂದು ಶತಮಾನಕ್ಕಿಂತಲೂ ಮೊದಲೇ ಮುಂತಿಳಿಸಲಾಗಿತ್ತು. ಹಬಕ್ಕೂಕನ ಸಮಯದಲ್ಲಿ, ಒಳ್ಳೆಯ ಅರಸನಾದ ಯೋಷೀಯನ ತರುವಾಯ ಯೆಹೋಯಾಕೀಮನು ರಾಜ್ಯಭಾರವನ್ನು ವಹಿಸಿಕೊಂಡನು ಮತ್ತು ಯೂದಾಯದಲ್ಲಿ ಪುನಃ ದುಷ್ಟತನವು ತುಂಬಿತುಳುಕಲಾರಂಭಿಸಿತು. ಯೆಹೋವನ ಹೆಸರಿನಲ್ಲಿ ಮಾತಾಡಿದವರೆಲ್ಲರನ್ನು ಯೆಹೋಯಾಕೀಮನು ಹಿಂಸಿಸಿದನಲ್ಲದೆ ಅವರನ್ನು ಕೊಂದುಹಾಕಿದನು. (2 ಪೂರ್ವಕಾಲವೃತ್ತಾಂತ 36:5; ಯೆರೆಮೀಯ 22:17; 26:20-24) ಆದುದರಿಂದಲೇ ಕಳವಳಗೊಂಡ ಪ್ರವಾದಿಯಾದ ಹಬಕ್ಕೂಕನು, “ಯೆಹೋವನೇ, . . . ಎಷ್ಟು ಕಾಲ?” ಎಂದು ಮೊರೆಯಿಟ್ಟದ್ದರಲ್ಲಿ ಆಶ್ಚರ್ಯವೇ ಇಲ್ಲ.—ಹಬಕ್ಕೂಕ 1:2.
8. ಪ್ರಥಮ ಶತಮಾನದವರಿಗೆ ಮತ್ತು ಇಂದಿನ ಕ್ರೈಸ್ತರಿಗೆ ಹಬಕ್ಕೂಕನ ಮಾದರಿಯು ಏಕೆ ಸಹಾಯಕರವಾಗಿದೆ?
8 ಯೆರೂಸಲೇಮಿನ ನಾಶನವು ಎಷ್ಟು ನಿಕಟವಾಗಿತ್ತು ಎಂಬುದರ ಅರಿವು ಹಬಕ್ಕೂಕನಿಗೆ ಇರಲಿಲ್ಲ. ಅಂತೆಯೇ, ಯೆಹೂದಿ ವಿಷಯಗಳ ವ್ಯವಸ್ಥೆಯು ಯಾವಾಗ ಅಂತ್ಯಗೊಳ್ಳುವುದೆಂದು ಪ್ರಥಮ ಶತಮಾನದ ಕ್ರೈಸ್ತರಿಗೆ ಗೊತ್ತಿರಲಿಲ್ಲ. ನಮಗೂ ಈ ದುಷ್ಟ ವ್ಯವಸ್ಥೆಯ ಮೇಲೆ ಯೆಹೋವನ ನ್ಯಾಯತೀರ್ಪು ಬರಲಿರುವ ‘ದಿನ ಮತ್ತು ಗಳಿಗೆಯ’ ಕುರಿತು ತಿಳಿದಿಲ್ಲ. (ಮತ್ತಾಯ 24:36) ಆದಕಾರಣ, ಯೆಹೋವನು ಹಬಕ್ಕೂಕನಿಗೆ ನೀಡಿದ ಎರಡು ಅರ್ಥಗಳಿದ್ದ ಉತ್ತರವನ್ನು ನಾವು ಪರಿಗಣಿಸೋಣ. ಪ್ರಥಮವಾಗಿ, ಅಂತ್ಯವು ತಕ್ಕ ಸಮಯಕ್ಕೆ ಬರುವುದೆಂಬ ಆಶ್ವಾಸನೆಯನ್ನು ಆತನು ಈ ಪ್ರವಾದಿಗೆ ನೀಡಿದನು. ಮಾನವ ದೃಷ್ಟಿಯಿಂದ ಅದು ತಡವಾಗುತ್ತಿರುವಂತೆ ತೋರಿದರೂ, ಅದು “ತಾಮಸವಾಗದು” ಎಂದು ದೇವರು ತಿಳಿಸಿದನು. (ಹಬಕ್ಕೂಕ 2:3) ಎರಡನೆಯದಾಗಿ, ಯೆಹೋವನು ಹಬಕ್ಕೂಕನಿಗೆ ಜ್ಞಾಪಕ ಹುಟ್ಟಿಸಿದ್ದು: “ನೀತಿವಂತನೋ ತನ್ನ ನಂಬಿಕೆಯಿಂದಲೇ ಬದುಕುವನು.” (ಹಬಕ್ಕೂಕ 2:4) ಎಂತಹ ಸುಂದರವಾದ ಸರಳ ಸತ್ಯಗಳು! ಅಂತ್ಯವು ಯಾವಾಗ ಬರುವುದೆಂಬುದು ಪ್ರಾಮುಖ್ಯವಲ್ಲ, ನಾವು ಎಂದೆಂದಿಗೂ ನಂಬಿಗಸ್ತರಾಗಿ ಜೀವಿಸುವೆವೊ ಎಂಬ ವಿಷಯವೇ ತುಂಬ ಪ್ರಾಮುಖ್ಯವಾದದ್ದಾಗಿದೆ.
9. ಯೆಹೋವನ ವಿಧೇಯ ಸೇವಕರು ತಮ್ಮ ನಂಬಿಗಸ್ತಿಕೆಯಿಂದ (ಎ) ಸಾ.ಶ.ಪೂ. 607ರಲ್ಲಿ (ಬಿ) ಸಾ.ಶ. 66ರ ನಂತರ ಹೇಗೆ ಜೀವಿಸುತ್ತಾ ಇದ್ದರು? (ಸಿ) ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುವುದು ಏಕೆ ಅತ್ಯಾವಶ್ಯಕವಾಗಿದೆ?
9 ಸಾ.ಶ.ಪೂ. 607ರಲ್ಲಿ ಯೆರೂಸಲೇಮ್ ಧ್ವಂಸಗೊಳಿಸಲ್ಪಟ್ಟಾಗ, ಯೆರೆಮೀಯ, ಅವನ ಕಾರ್ಯದರ್ಶಿಯಾದ ಬಾರೂಕ, ಎಬೆದ್ಮೆಲೆಕ, ಮತ್ತು ಆ ನಿಷ್ಠಾವಂತ ರೇಕಾಬನ ಮನೆತನದವರು, ಯೆಹೋವನು ಹಬಕ್ಕೂಕನಿಗೆ ಮಾಡಿದ ವಾಗ್ದಾನದ ಸತ್ಯತೆಯನ್ನು ಕಣ್ಣಾರೆ ಕಂಡರು. ಯೆರೂಸಲೇಮಿನ ಭಯಂಕರ ನಾಶನದಿಂದ ಪಾರಾಗಿ ಉಳಿಯುವ ಮೂಲಕ ಅವರು ‘ಬದುಕಿದರು.’ ಏಕೆ? ಏಕೆಂದರೆ, ಯೆಹೋವನು ಅವರ ನಂಬಿಗಸ್ತಿಕೆಗೆ ಪ್ರತಿಫಲವನ್ನು ನೀಡಿದನು. (ಯೆರೆಮೀಯ 35:1-19; 39:15-18; 43:4-7; 45:1-5) ತದ್ರೀತಿಯಲ್ಲಿ, ಪೌಲನು ನೀಡಿದ ಸಲಹೆಗೆ ಪ್ರಥಮ ಶತಮಾನದ ಇಬ್ರಿಯ ಕ್ರೈಸ್ತರು ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಿರಬೇಕು. ಏಕೆಂದರೆ, ಸಾ.ಶ. 66ರಲ್ಲಿ ರೋಮನ್ ಸೇನೆಗಳು ಯೆರೂಸಲೇಮಿನ ಮೇಲೆ ದಾಳಿ ಮಾಡಿ, ತರುವಾಯ ವಿವರಿಸಲಾಗದ ಕಾರಣಕ್ಕಾಗಿ ಹಿಮ್ಮೆಟ್ಟಿದಾಗ, ಆ ಕ್ರೈಸ್ತರು ಪೂರ್ಣ ನಂಬಿಕೆಯಿಂದ ಯೇಸುವಿನ ಎಚ್ಚರಿಕೆಗೆ ಕಿವಿಗೊಟ್ಟು ಅಲ್ಲಿಂದ ಪಲಾಯನಗೈದರು. (ಲೂಕ 21:20, 21) ತಮ್ಮ ನಂಬಿಗಸ್ತಿಕೆಯ ಕಾರಣ ಅವರು ಪಾರಾಗಿ ಉಳಿದರು. ತದ್ರೀತಿಯಲ್ಲಿ, ಅಂತ್ಯವು ಬರುವ ತನಕ ನಾವು ಸಹ ನಂಬಿಗಸ್ತರಾಗಿದ್ದರೆ ಪಾರಾಗಿ ಉಳಿಯುವೆವು. ಈಗ ನಮ್ಮ ನಂಬಿಕೆಯನ್ನು ಬಲಪಡಿಸಲು ಇದು ಎಷ್ಟು ಮುಖ್ಯವಾದ ಕಾರಣವಾಗಿದೆ!
-
-
ನಾವು ನಂಬಿಕೆಯುಳ್ಳ ಜನರಾಗಿರೋಣಕಾವಲಿನಬುರುಜು—1999 | ಡಿಸೆಂಬರ್ 15
-
-
a ಪೌಲನು ಹಬಕ್ಕೂಕ 2:4ರ ಸೆಪ್ಟ್ಯುಅಜಿಂಟ್ ತರ್ಜುಮೆಯನ್ನು ಉಲ್ಲೇಖಿಸಿದನು. ಅದರಲ್ಲಿ, “ಯಾವನಾದರೂ ಹಿಂದೆಗೆದರೆ ಅವನಲ್ಲಿ ನನಗೆ ಸಂತೋಷವಿರುವದಿಲ್ಲ” ಎಂಬ ವಾಕ್ಸರಣಿಯೂ ಇದೆ. ಈ ಹೇಳಿಕೆಯು ಈಗ ಚಾಲ್ತಿಯಲ್ಲಿರುವ ಯಾವುದೇ ಹೀಬ್ರು ಹಸ್ತಪತ್ರಿಯಲ್ಲಿ ಕಂಡುಬರುವುದಿಲ್ಲ. ಈಗ ಅಸ್ತಿತ್ವದಲ್ಲಿರದ ಹೀಬ್ರು ಹಸ್ತಪ್ರತಿಗಳ ಮೇಲೆ ಈ ಸೆಪ್ಟ್ಯುಅಜಿಂಟ್ ಆಧಾರಿಸಿತ್ತೆಂಬುದು ಕೆಲವರ ಅಭಿಪ್ರಾಯ. ವಿಷಯವು ಏನೇ ಆಗಿರಲಿ, ದೇವರ ಪವಿತ್ರಾತ್ಮದ ಪ್ರೇರಣೆಯ ಕೆಳಗೆ ಪೌಲನು ಅದನ್ನು ಸೇರಿಸಿದನು. ಆದುದರಿಂದ ಅದಕ್ಕೆ ದೈವಿಕ ಮನ್ನಣೆಯಿದೆ.
-