ವಾಗ್ದಾನ ಮಾಡಲಾದ ವಿಷಯಗಳನ್ನು ‘ನೋಡಿದರು’
‘ಇವರೆಲ್ಲರೂ ವಾಗ್ದಾನದ ನೆರವೇರಿಕೆಯನ್ನು ಹೊಂದಲಿಲ್ಲವಾದರೂ ಅವುಗಳನ್ನು ದೂರದಿಂದಲೇ ನೋಡಿದರು.’—ಇಬ್ರಿ. 11:13.
1. ನಾವು ನೋಡಿರದ ವಿಷಯಗಳನ್ನು ಮನಸ್ಸಲ್ಲಿ ಚಿತ್ರಿಸಿಕೊಳ್ಳಲು ಶಕ್ತರಾಗಿರುವುದು ಏಕೆ ಒಳ್ಳೇದು? (ಲೇಖನದ ಆರಂಭದ ಚಿತ್ರ ನೋಡಿ.)
ಯೆಹೋವನು ನಮಗೊಂದು ಅದ್ಭುತ ಉಡುಗೊರೆ ಕೊಟ್ಟಿದ್ದಾನೆ. ನಾವು ನೋಡಿರದ ವಿಷಯಗಳನ್ನು ಮನಸ್ಸಲ್ಲಿ ಚಿತ್ರಿಸಿಕೊಳ್ಳುವುದೇ ಆ ಉಡುಗೊರೆ. ಈ ಸಾಮರ್ಥ್ಯ, ಭವಿಷ್ಯದಲ್ಲಿ ಆಗಲಿರುವ ಒಳ್ಳೇ ವಿಷಯಗಳನ್ನು ಎದುರುನೋಡಲು, ಮುಂಚೆಯೇ ಯೋಜನೆಗಳನ್ನು ಮಾಡಲು ಮತ್ತು ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಭವಿಷ್ಯದಲ್ಲಿ ಏನಾಗಲಿದೆ ಎಂದು ಯೆಹೋವನಿಗೆ ಚೆನ್ನಾಗಿ ಗೊತ್ತು. ನಾವು ಮುನ್ನೋಡಬಹುದಾದ ಕೆಲವು ವಿಷಯಗಳನ್ನು ಆತನು ನಮಗೆ ಹೇಳಿದ್ದಾನೆ. ಅವುಗಳನ್ನು ನೋಡಲು ಆಗದಿದ್ದರೂ ಅವುಗಳ ಬಗ್ಗೆ ನಾವು ಮನಸ್ಸಲ್ಲಿ ಚಿತ್ರಿಸಿಕೊಳ್ಳಬಹುದು. ಅವು ಖಂಡಿತ ನೆರವೇರುತ್ತವೆ ಎಂದು ನಂಬಿಕೆಯೂ ಇಡಬಹುದು.—2 ಕೊರಿಂ. 4:18.
2, 3. (ಎ) ಮನಸ್ಸಲ್ಲಿ ಚಿತ್ರಿಸಿಕೊಳ್ಳಲು ನಮಗಿರುವ ಸಾಮರ್ಥ್ಯ ಹೇಗೆ ಸಹಾಯ ಮಾಡುತ್ತದೆ? (ಬಿ) ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ನೋಡಲಿದ್ದೇವೆ?
2 ಯಾವತ್ತೂ ನಡೆಯಲು ಸಾಧ್ಯವಿಲ್ಲದ ವಿಷಯಗಳನ್ನು ಕೆಲವೊಮ್ಮೆ ಊಹಿಸಿಕೊಳ್ಳುತ್ತೇವೆ. ಉದಾಹರಣೆಗೆ, ಚಿಕ್ಕ ಹುಡುಗಿಯೊಬ್ಬಳು ತಾನು ಚಿಟ್ಟೆಯ ಮೇಲೆ ಕುಳಿತು ಹಾರುತ್ತಿರುವುದನ್ನು ಚಿತ್ರಿಸಿಕೊಳ್ಳಬಹುದು. ಇದು ಅಸಾಧ್ಯ ಅಲ್ಲವೇ? ಆದರೆ ಸಮುವೇಲನ ತಾಯಿ ಹನ್ನಳ ಬಗ್ಗೆ ಯೋಚಿಸಿ. ಸಾಧ್ಯವಿರುವ ಸಂಗತಿಗಳನ್ನು ಅವಳು ಮನಸ್ಸಲ್ಲಿ ಚಿತ್ರಿಸಿಕೊಂಡಳು. ತನ್ನ ಮಗನನ್ನು ಗುಡಾರಕ್ಕೆ ಕರೆದುಕೊಂಡು ಹೋಗಿ ಯಾಜಕರ ಬಳಿ ಕೆಲಸಕ್ಕೆ ಬಿಡುವ ದಿನದ ಬಗ್ಗೆ ಅವಳು ಯಾವಾಗಲೂ ಯೋಚಿಸುತ್ತಾ ಇದ್ದಳು. ಇದು ಬರೀ ಕನಸಾಗಿರಲಿಲ್ಲ. ಹನ್ನಳು ಮಾಡಿದ ನಿರ್ಣಯವಾಗಿತ್ತು. ಆ ದಿನದ ಬಗ್ಗೆ ಚಿತ್ರಿಸಿಕೊಂಡಾಗೆಲ್ಲಾ ತಾನು ಯೆಹೋವನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅವಳಿಗೆ ಬಲ ಸಿಕ್ಕಿತು. (1 ಸಮು. 1:22) ಯೆಹೋವನು ಏನೇನು ಮಾಡುತ್ತೇನೆಂದು ಮಾತು ಕೊಟ್ಟಿದ್ದಾನೊ ಅವುಗಳ ಬಗ್ಗೆ ಮನಸ್ಸಲ್ಲಿ ಚಿತ್ರಿಸಿಕೊಳ್ಳುವಾಗ ನಾವು ಹಗಲುಗನಸು ಕಾಣುತ್ತಿಲ್ಲ ಬದಲಿಗೆ ಖಂಡಿತವಾಗಿ ನೆರವೇರುವ ವಿಷಯಗಳನ್ನು ಕಲ್ಪಿಸಿಕೊಳ್ಳುತ್ತಿದ್ದೇವೆ.—2 ಪೇತ್ರ 1:19-21.
3 ಬೈಬಲ್ ಕಾಲದಲ್ಲಿದ್ದ ಯೆಹೋವನ ಜನರಲ್ಲಿ ಅನೇಕರು ಆತನು ವಾಗ್ದಾನ ಮಾಡಿದ್ದ ವಿಷಯಗಳನ್ನು ಮನಸ್ಸಲ್ಲಿ ಚಿತ್ರಿಸಿಕೊಂಡರು. ಅವರು ಹೀಗೆ ಮಾಡಿದ್ದು ಒಳ್ಳೇದಾಗಿತ್ತು ಏಕೆ? ದೇವರ ವಾಗ್ದಾನಗಳು ನೆರವೇರುವಾಗ ನಮ್ಮ ಜೀವನ ಹೇಗಿರುತ್ತದೆ ಎಂದು ಮನಸ್ಸಲ್ಲಿ ಚಿತ್ರಿಸಿಕೊಳ್ಳುವುದು ಒಳ್ಳೇದೇಕೆ?
ಭವಿಷ್ಯವನ್ನು ಮನಸ್ಸಲ್ಲಿ ಚಿತ್ರಿಸಿಕೊಂಡದ್ದರಿಂದ ಅವರ ನಂಬಿಕೆ ಬಲಗೊಂಡಿತು
4. ಹೇಬೆಲನಿಗೆ ಒಂದು ಒಳ್ಳೇ ಭವಿಷ್ಯದ ಬಗ್ಗೆ ಮನಸ್ಸಲ್ಲಿ ಚಿತ್ರಿಸಿಕೊಳ್ಳಲು ಸಾಧ್ಯವಾದದ್ದೇಕೆ?
4 ಯೆಹೋವನು ಮಾಡಿದ ವಾಗ್ದಾನಗಳಲ್ಲಿ ನಂಬಿಕೆ ಇಟ್ಟ ಮೊದಲ ಮಾನವ ಹೇಬೆಲ. ಆದಾಮಹವ್ವ ಪಾಪ ಮಾಡಿದ ನಂತರ ಯೆಹೋವನು ಸರ್ಪಕ್ಕೆ ಹೇಳಿದ ಈ ಮಾತು ಹೇಬೆಲನಿಗೆ ಗೊತ್ತಿತ್ತು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿ. 3:14, 15) ಇದು ಹೇಗೆ ನಡೆಯಲಿದೆ ಎಂದು ಹೇಬೆಲನಿಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಆದರೆ ದೇವರು ಹೇಳಿದ ಆ ಮಾತುಗಳ ಬಗ್ಗೆ ಅವನು ತುಂಬ ಯೋಚಿಸಿರಬೇಕು. ಸರ್ಪದಿಂದ ಯಾರೊ ಗಾಯಗೊಳ್ಳುತ್ತಾರೆ, ಮಾನವರು ಪುನಃ ಪರಿಪೂರ್ಣರಾಗಲು ಆ ವ್ಯಕ್ತಿ ಸಹಾಯ ಮಾಡುತ್ತಾನೆ ಎಂಬುದನ್ನು ಅವನು ಗ್ರಹಿಸಿದನು. ಯೆಹೋವನು ಯಾವುದೇ ವಾಗ್ದಾನ ಮಾಡಿದರೂ ಅದು ನೆರವೇರುತ್ತದೆ ಎಂದು ಹೇಬೆಲನಿಗೆ ನಂಬಿಕೆಯಿತ್ತು. ಆದ್ದರಿಂದಲೇ ಅವನು ಅರ್ಪಿಸಿದ ಯಜ್ಞವನ್ನು ಯೆಹೋವನು ಮೆಚ್ಚಿದನು.—ಆದಿಕಾಂಡ 4:3-5; ಇಬ್ರಿಯ 11:4 ಓದಿ.
5. ಹನೋಕನು ಭವಿಷ್ಯದ ಬಗ್ಗೆ ಮನಸ್ಸಲ್ಲೇ ಚಿತ್ರಿಸಿಕೊಂಡದ್ದು ಒಳ್ಳೇದಾಗಿತ್ತು ಏಕೆ?
5 ದೇವರ ಮೇಲೆ ಅಪಾರ ನಂಬಿಕೆಯಿದ್ದ ಇನ್ನೊಬ್ಬ ವ್ಯಕ್ತಿ ಹನೋಕ. ದೇವರ ವಿರುದ್ಧ ‘ಆಘಾತಕರ ಸಂಗತಿಗಳನ್ನು’ ಹೇಳುತ್ತಿದ್ದ ದುಷ್ಟ ಜನರ ಮಧ್ಯೆ ಇವನು ಬದುಕುತ್ತಿದ್ದನು. ಆದರೂ ಧೈರ್ಯದಿಂದ ದೇವರ ಸಂದೇಶವನ್ನು ಸಾರಿದನು. ಯೆಹೋವನು ದುಷ್ಟರನ್ನು ನಾಶ ಮಾಡಲಿದ್ದಾನೆ ಎಂದು ಜನರಿಗೆ ಹೇಳಿದನು. (ಯೂದ 14, 15) ಇದನ್ನು ಮಾಡಲು ಅವನಿಗೆ ಸಹಾಯ ಮಾಡಿದ್ದು ಯಾವುದು? ಎಲ್ಲರೂ ಯೆಹೋವನನ್ನು ಆರಾಧಿಸುವಾಗ ಲೋಕ ಹೇಗಿರುತ್ತದೆಂದು ಹನೋಕನು ಬಹುಶಃ ಮನಸ್ಸಲ್ಲೇ ಚಿತ್ರಿಸಿಕೊಂಡನು. ಇದು ಅವನಿಗೆ ಸಹಾಯ ಮಾಡಿರಬಹುದು.—ಇಬ್ರಿಯ 11:5, 6 ಓದಿ.
6. ಜಲಪ್ರಳಯದ ನಂತರ ನೋಹನು ಯಾವುದರ ಬಗ್ಗೆ ಮನಸ್ಸಲ್ಲಿ ಚಿತ್ರಿಸಿಕೊಂಡಿರಬಹುದು?
6 ನೋಹನಿಗೂ ಯೆಹೋವನ ಮೇಲೆ ನಂಬಿಕೆ ಇತ್ತು. ಹಾಗಾಗಿ ಜಲಪ್ರಳಯದಲ್ಲಿ ಅವನು ನಾಶವಾಗಲಿಲ್ಲ. (ಇಬ್ರಿ. 11:7) ಅವನಿಗೆ ನಂಬಿಕೆ ಇದ್ದದರಿಂದಲೇ ಯೆಹೋವನಿಗೆ ಪ್ರಾಣಿಗಳ ಯಜ್ಞವನ್ನು ಅರ್ಪಿಸಿದನು. (ಆದಿ. 8:20) ಆದರೆ ಜಲಪ್ರಳಯದ ನಂತರ ಭೂಮಿಯಲ್ಲಿ ಪುನಃ ಕೆಡುಕರು ತುಂಬಿಕೊಂಡರು. ನಿಮ್ರೋದನು ತನ್ನ ಆಳ್ವಿಕೆಯನ್ನು ಶುರುಮಾಡಿದನು. ಜನರು ಯೆಹೋವನ ವಿರುದ್ಧ ದಂಗೆಯೇಳುವಂತೆ ಮಾಡಿದನು. (ಆದಿ. 10:8-12) ಆದರೆ ನೋಹನ ನಂಬಿಕೆ ಮಾತ್ರ ಕಡಿಮೆಯಾಗಲಿಲ್ಲ. ದೇವರು ಇಂದಿಲ್ಲ ನಾಳೆ ಪಾಪಮರಣಗಳನ್ನು ತೆಗೆದು ಹಾಕುತ್ತಾನೆ ಎಂದು ಹೇಬೆಲನಂತೆ ಇವನಿಗೂ ಖಾತ್ರಿ ಇತ್ತು. ಕ್ರೂರ ಆಳ್ವಿಕೆ ನಡೆಸುವವರು ಇಲ್ಲದಿರುವ ಕಾಲದ ಬಗ್ಗೆ ನೋಹನು ಮನಸ್ಸಲ್ಲಿ ಚಿತ್ರಿಸಿಕೊಂಡಿರಬೇಕು. ಅಂಥ ಸುಂದರ ಸಮಯದ ಬಗ್ಗೆ ನಾವೂ ಚಿತ್ರಿಸಿಕೊಳ್ಳಬಹುದು. ಅದು ಬೇಗನೆ ಬರಲಿದೆ!—ರೋಮ. 6:23.
ದೇವರ ವಾಗ್ದಾನಗಳು ನೆರವೇರುವುದನ್ನು ಮನಸ್ಸಲ್ಲಿ ಚಿತ್ರಿಸಿಕೊಂಡರು
7. ಅಬ್ರಹಾಮ, ಇಸಾಕ, ಯಾಕೋಬ ಎಂಥ ಭವಿಷ್ಯವನ್ನು ಎದುರುನೋಡಿದರು?
7 ಅಬ್ರಹಾಮ, ಇಸಾಕ, ಯಾಕೋಬ ಒಂದು ಅದ್ಭುತ ಭವಿಷ್ಯವನ್ನು ಚಿತ್ರಿಸಿಕೊಂಡರು. ಎಲ್ಲಾ ಜನಾಂಗಗಳವರು ಈ ಮೂವರ “ಸಂತತಿ”ಯಿಂದ ಆಶೀರ್ವಾದ ಪಡೆಯುವರು ಎಂದು ಯೆಹೋವನು ವಾಗ್ದಾನ ಮಾಡಿದ್ದನು. (ಆದಿ. 22:18; 26:4, 5; 28:14) ಇವರ ಕುಟುಂಬ ದೊಡ್ಡ ಜನಾಂಗವಾಗಿ ಸುಂದರವಾದ ವಾಗ್ದತ್ತ ದೇಶದಲ್ಲಿ ಜೀವಿಸುವರು ಎಂದೂ ದೇವರು ಹೇಳಿದ್ದನು. (ಆದಿ. 15:5-7) ದೇವರ ವಾಗ್ದಾನಗಳು ಖಂಡಿತ ನೆರವೇರುವವೆಂದು ಅಬ್ರಹಾಮ, ಇಸಾಕ, ಯಾಕೋಬರಿಗೆ ತಿಳಿದಿತ್ತು. ಆದ್ದರಿಂದ ಅವರ ಕುಟುಂಬ ಈಗಾಗಲೇ ಆ ವಾಗ್ದತ್ತ ದೇಶದಲ್ಲಿ ಜೀವಿಸುತ್ತಿರುವುದನ್ನು ಸ್ಪಷ್ಟವಾಗಿ ಮನಸ್ಸಲ್ಲಿ ಚಿತ್ರಿಸಿಕೊಂಡರು. ನಿಜಾಂಶ ಏನೆಂದರೆ ಆದಾಮಹವ್ವರು ಪಾಪ ಮಾಡಿದಾಗಿನಿಂದಲೇ ಯೆಹೋವನು ತನ್ನ ನಿಷ್ಠಾವಂತ ಸೇವಕರಿಗೆ ಮಾನವರು ಪುನಃ ಹೇಗೆ ಪರಿಪೂರ್ಣ ಜೀವನ ಪಡೆಯುವರೆಂದು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತಾ ಬಂದಿದ್ದಾನೆ.
8. ಬಲವಾದ ನಂಬಿಕೆ ಹೊಂದಲು ಮತ್ತು ವಿಧೇಯನಾಗಿರಲು ಅಬ್ರಹಾಮನಿಗೆ ಯಾವುದು ಸಹಾಯಮಾಡಿತು?
8 ಅಬ್ರಹಾಮನಿಗೆ ಬಲವಾದ ನಂಬಿಕೆ ಇದ್ದದರಿಂದಲೇ ಎಷ್ಟೇ ಕಷ್ಟದ ಸನ್ನಿವೇಶ ಬಂದರೂ ಯೆಹೋವನಿಗೆ ವಿಧೇಯನಾಗಿದ್ದನು. ದೇವರ ವಾಗ್ದಾನಗಳು ನೆರವೇರಿದ ಸಮಯದಲ್ಲಿ ಅಬ್ರಹಾಮ ಮತ್ತು ಇತರ ನಿಷ್ಠಾವಂತ ಸೇವಕರು ಜೀವಿಸಲಿಲ್ಲವಾದರೂ ಅವರು ಆ ವಾಗ್ದಾನಗಳನ್ನು ಸ್ಪಷ್ಟವಾಗಿ ಮನಸ್ಸಲ್ಲಿ ಚಿತ್ರಿಸಿಕೊಂಡರು. ಬೈಬಲ್ ಹೀಗನ್ನುತ್ತದೆ: “ಅವುಗಳನ್ನು ದೂರದಿಂದಲೇ ನೋಡಿ ಸ್ವಾಗತಿಸಿದರು.” (ಇಬ್ರಿಯ 11:8-13 ಓದಿ.) ಈ ಹಿಂದೆ ಯೆಹೋವನು ಮಾತು ಕೊಟ್ಟಾಗೆಲ್ಲ ಅದನ್ನು ಉಳಿಸಿಕೊಂಡಿದ್ದಾನೆ ಎಂದು ಅಬ್ರಹಾಮನಿಗೆ ಗೊತ್ತಿತ್ತು. ಆದ್ದರಿಂದ ಯೆಹೋವನು ಭವಿಷ್ಯದ ಬಗ್ಗೆ ನುಡಿದ ಎಲ್ಲಾ ವಾಗ್ದಾನಗಳು ನೆರವೇರುವವೆಂದು ಅವನಿಗೆ ಖಾತ್ರಿಯಿತ್ತು.
9. ದೇವರ ವಾಗ್ದಾನಗಳ ಮೇಲೆ ಅಬ್ರಹಾಮನಿಗಿದ್ದ ನಂಬಿಕೆ ಅವನಿಗೆ ಹೇಗೆ ಸಹಾಯ ಮಾಡಿತು?
9 ದೇವರು ತನಗೆ ಕೊಟ್ಟ ವಾಗ್ದಾನದ ಮೇಲೆ ಅಬ್ರಹಾಮನಿಗೆ ನಂಬಿಕೆ ಇದ್ದ ಕಾರಣ ಯೆಹೋವನು ಹೇಳಿದ್ದನ್ನೇ ಅವನು ಮಾಡುತ್ತಿದ್ದನು. ಉದಾಹರಣೆಗೆ, ಊರ್ ಪಟ್ಟಣದಲ್ಲಿದ್ದ ತನ್ನ ಮನೆಯನ್ನು ಅವನು ಬಿಟ್ಟುಬಂದನು. ತಾನು ಸಾಯುವ ತನಕ ಅಬ್ರಹಾಮ ಒಂದು ಪಟ್ಟಣದಲ್ಲಿ ನೆಲೆಸಿದವನೇ ಅಲ್ಲ. ತನ್ನ ಸುತ್ತಲಿದ್ದ ಪಟ್ಟಣಗಳು ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಅವನಿಗೆ ಗೊತ್ತಿತ್ತು. ಏಕೆಂದರೆ ಅವುಗಳನ್ನು ಆಳುತ್ತಿದ್ದವರು ಯೆಹೋವನ ಆರಾಧಕರಾಗಿರಲಿಲ್ಲ. (ಯೆಹೋ. 24:2) ಯೆಹೋವ ಮತ್ತು ಆತನ ಸರ್ಕಾರ ಈ ಭೂಮಿಯನ್ನು ನಿರಂತರಕ್ಕೂ ಆಳುವ ಸಮಯಕ್ಕಾಗಿ ಅಬ್ರಹಾಮನು ಎದುರುನೋಡಿದನು. ಈ ಸರ್ಕಾರ “ನಿಜವಾದ ಅಸ್ತಿವಾರಗಳುಳ್ಳ . . . ಅಂದರೆ ದೇವರು ಕಟ್ಟಿದ ಮತ್ತು ಸೃಷ್ಟಿಸಿದ ಪಟ್ಟಣ” ಆಗಿದೆ. (ಇಬ್ರಿ. 11:10) ಅಬ್ರಹಾಮನಲ್ಲದೆ ಹೇಬೆಲ, ಹನೋಕ, ನೋಹ ಮತ್ತು ಇತರರಿಗೆ ಪುನರುತ್ಥಾನದಲ್ಲಿ ನಂಬಿಕೆಯಿತ್ತು. ಸುಂದರವಾದ ಭೂಮಿಯಲ್ಲಿ ಅನಂತಕ್ಕೂ ಬದುಕುವುದನ್ನು ಯಾವಾಗೆಲ್ಲಾ ಇವರು ಯೋಚಿಸಿದರೊ ಆಗೆಲ್ಲಾ ಅವರಿಗೆ ಯೆಹೋವನ ಮೇಲಿದ್ದ ನಂಬಿಕೆ ಇನ್ನಷ್ಟು ಬಲಗೊಂಡಿತು.—ಇಬ್ರಿಯ 11:15, 16 ಓದಿ.
10. ಸಾರಳು ಭವಿಷ್ಯವನ್ನು ಎದುರುನೋಡಿದ್ದು ಒಳ್ಳೇದಾಗಿತ್ತು ಏಕೆ?
10 ಅಬ್ರಹಾಮನ ಹೆಂಡತಿ ಸಾರಳಿಗೂ ಯೆಹೋವನ ವಾಗ್ದಾನಗಳ ಮೇಲೆ ತುಂಬ ನಂಬಿಕೆಯಿತ್ತು. 90 ವರ್ಷವಾದರೂ ಅವಳಿಗೆ ಮಕ್ಕಳಿರಲಿಲ್ಲ. ಹಾಗಿದ್ದರೂ ತನಗೊಬ್ಬ ಮಗ ಹುಟ್ಟುವ ಸಮಯವನ್ನು ಅವಳು ಎದುರುನೋಡಿದಳು. ಅಷ್ಟೇ ಅಲ್ಲ ತನ್ನ ಸಂತಾನ ಒಂದು ದೊಡ್ಡ ಜನಾಂಗವಾಗುವುದನ್ನೂ ಮನಸ್ಸಲ್ಲಿ ಚಿತ್ರಿಸಿಕೊಂಡಿರಬೇಕು. (ಇಬ್ರಿ. 11:11, 12) ಅವಳಿಗೆ ಯಾಕೆ ಅಷ್ಟು ಖಾತ್ರಿಯಿತ್ತು? ಯಾಕೆಂದರೆ ಅವಳ ಗಂಡನಿಗೆ ಯೆಹೋವನು ಹೀಗಂದಿದ್ದನು: “ನಾನು ಆಕೆಯನ್ನು ಆಶೀರ್ವದಿಸಿ ಆಕೆಯಲ್ಲಿ ನಿನಗೆ ಮಗನನ್ನು ಕೊಡುವೆನು. ನಾನು ಆಕೆಯನ್ನು ಆಶೀರ್ವದಿಸಿದ್ದರಿಂದ ಆಕೆಯಿಂದ ಅನೇಕಜನಾಂಗಗಳೂ ಅರಸರೂ ಉತ್ಪತ್ತಿಯಾಗುವರು.” (ಆದಿ. 17:16) ಯೆಹೋವನು ವಾಗ್ದಾನ ಮಾಡಿದಂತೆಯೇ ಸಾರಳಿಗೆ ಇಸಾಕ ಎಂಬ ಮಗ ಹುಟ್ಟಿದನು. ಯೆಹೋವನು ಮಾಡಿದ ವಾಗ್ದಾನದ ಉಳಿದ ಭಾಗ ನೆರವೇರುತ್ತದೆ ಎಂದು ನಂಬಲು ಸಾರಳಿಗೆ ಈ ಒಂದು ಅದ್ಭುತವೇ ಸಾಕಾಗಿತ್ತು. ಯೆಹೋವನು ನಮಗಾಗಿ ಮಾಡಿರುವ ಸುಂದರ ವಾಗ್ದಾನಗಳ ಬಗ್ಗೆ ಮನಸ್ಸಲ್ಲಿ ಚಿತ್ರಿಸಿಕೊಳ್ಳುವ ಮೂಲಕ ನಮ್ಮ ನಂಬಿಕೆಯೂ ಬಲಗೊಳ್ಳುತ್ತದೆ.
ಅವರು ಬಹುಮಾನದ ಬಗ್ಗೆ ಯಾವಾಗಲೂ ಯೋಚಿಸುತ್ತಿದ್ದರು
11, 12. ಮೋಶೆಗೆ ಯೆಹೋವನ ಮೇಲೆ ಇನ್ನೂ ಹೆಚ್ಚಾಗಿ ಪ್ರೀತಿ ಬೆಳೆಸಿಕೊಳ್ಳಲು ಸಹಾಯ ಮಾಡಿದ್ದು ಯಾವುದು?
11 ಮೋಶೆಗೂ ಯೆಹೋವನ ವಾಗ್ದಾನಗಳ ಮೇಲೆ ನಂಬಿಕೆ ಇತ್ತು. ಅವನು ಐಗುಪ್ತದಲ್ಲಿ ರಾಜಕುಮಾರನಾಗಿ ಬೆಳೆದವನು. ಆದರೆ ಅವನಿಗೆ ಅಧಿಕಾರ, ಧನಐಶ್ವರ್ಯಗಳು ಬೇಡವೆನಿಸಿತು. ಏಕೆಂದರೆ ಅವೆಲ್ಲಕ್ಕಿಂತ ಹೆಚ್ಚಾಗಿ ಅವನು ಯೆಹೋವನನ್ನು ಪ್ರೀತಿಸಿದನು. ಮೋಶೆ ತನ್ನ ಇಬ್ರಿಯ ಹೆತ್ತವರಿಂದ ಯೆಹೋವನ ಬಗ್ಗೆ ಕಲಿತಿದ್ದನು. ಯೆಹೋವನು ಇಬ್ರಿಯರನ್ನು ದಾಸತ್ವದಿಂದ ಬಿಡಿಸಿ ವಾಗ್ದತ್ತ ದೇಶಕ್ಕೆ ಕರೆದುಕೊಂಡು ಹೋಗುತ್ತಾನೆಂದು ವಾಗ್ದಾನ ಮಾಡಿದ್ದರ ಬಗ್ಗೆ ಅವರು ಅವನಿಗೆ ಕಲಿಸಿದ್ದರು. (ಆದಿ. 13:14, 15; ವಿಮೋ. 2:5-10) ಈ ವಾಗ್ದಾನಗಳ ಬಗ್ಗೆ ಮೋಶೆ ಎಷ್ಟು ಹೆಚ್ಚಾಗಿ ಮನಸ್ಸಲ್ಲಿ ಚಿತ್ರಿಸಿಕೊಂಡನೊ ಯೆಹೋವನ ಮೇಲಿನ ಪ್ರೀತಿ ಅಷ್ಟೇ ಹೆಚ್ಚಾಯಿತು.
12 ಮೋಶೆ ಯಾವುದರ ಬಗ್ಗೆ ಯಾವಾಗಲೂ ಯೋಚಿಸುತ್ತಿದ್ದನೆಂದು ಬೈಬಲ್ ತಿಳಿಸುತ್ತದೆ: “ಮೋಶೆಯು ದೊಡ್ಡವನಾದಾಗ ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ನಿರಾಕರಿಸಿದ್ದು ನಂಬಿಕೆಯಿಂದಲೇ. ಅವನು ಪಾಪದ ತಾತ್ಕಾಲಿಕ ಸುಖಾನುಭವಕ್ಕಿಂತ ದೇವರ ಜನರೊಂದಿಗೆ ದುರುಪಚಾರವನ್ನು ಅನುಭವಿಸುವ ಆಯ್ಕೆಯನ್ನು ಮಾಡಿದನು. ಈಜಿಪ್ಟ್ ದೇಶದ ನಿಕ್ಷೇಪಗಳಿಗಿಂತ ಕ್ರಿಸ್ತನ ನಿಮಿತ್ತ ಅನುಭವಿಸುವ ನಿಂದೆಯನ್ನು ಎಷ್ಟೋ ಶ್ರೇಷ್ಠವಾದ ಐಶ್ವರ್ಯವೆಂದೆಣಿಸಿದನು; ಏಕೆಂದರೆ ಅವನು ತೀವ್ರಾಸಕ್ತಿಯಿಂದ ಬಹುಮಾನದ ನೀಡುವಿಕೆಯ ಕಡೆಗೆ ದೃಷ್ಟಿನೆಟ್ಟವನಾಗಿದ್ದನು.”—ಇಬ್ರಿ. 11:24-26.
13. ಮೋಶೆ ಯೆಹೋವನ ವಾಗ್ದಾನಗಳ ಬಗ್ಗೆ ಯೋಚಿಸುತ್ತಾ ಇದ್ದದ್ದು ಒಳ್ಳೇದಾಗಿತ್ತು ಏಕೆ?
13 ಇಬ್ರಿಯರನ್ನು ದಾಸತ್ವದಿಂದ ಬಿಡಿಸುತ್ತೇನೆಂದು ಯೆಹೋವನು ಮಾಡಿದ ವಾಗ್ದಾನದ ಬಗ್ಗೆ ಮೋಶೆ ಆಳವಾಗಿ ಯೋಚಿಸಿರಬೇಕು. ದೇವರ ಇತರ ಸೇವಕರಿಗೆ ತಿಳಿದಿದ್ದ ಹಾಗೇ ಎಲ್ಲಾ ಮನುಷ್ಯರನ್ನು ಮರಣದಿಂದ ಯೆಹೋವನು ಬಿಡಿಸಲಿದ್ದಾನೆಂದು ಮೋಶೆಗೂ ತಿಳಿದಿತ್ತು. (ಯೋಬ 14:14, 15; ಇಬ್ರಿ. 11:17-19) ಇದರಿಂದ ಯೆಹೋವನು ಜನರನ್ನು ಎಷ್ಟು ಪ್ರೀತಿಸುತ್ತಾನೆಂದು ಮೋಶೆಗೆ ಅರ್ಥವಾಯಿತು. ಹೀಗೆ ಅವನಿಗೆ ಯೆಹೋವನ ಮೇಲೆ ಪ್ರೀತಿ ಹೆಚ್ಚಾಯಿತು ಮತ್ತು ನಂಬಿಕೆ ಬಲಗೊಂಡಿತು. ಜೀವಮಾನವಿಡೀ ಯೆಹೋವನ ಸೇವೆ ಮಾಡಲು ಇದು ಅವನಿಗೆ ನೆರವಾಯಿತು. (ಧರ್ಮೋ. 6:4, 5) ಫರೋಹನು ಅವನನ್ನು ಕೊಲ್ಲಬೇಕೆಂದಿದ್ದರೂ ಮೋಶೆ ಕಿಂಚಿತ್ತೂ ಹೆದರಲಿಲ್ಲ. ಯೆಹೋವನು ಭವಿಷ್ಯತ್ತಿನಲ್ಲಿ ತನಗೆ ಬಹುಮಾನ ನೀಡುತ್ತಾನೆಂದು ನಂಬಿದ್ದನು.—ವಿಮೋ. 10:28, 29.
ದೇವರ ಸರ್ಕಾರ ಮಾಡಲಿರುವ ವಿಷಯಗಳನ್ನು ಮನಸ್ಸಲ್ಲಿ ಚಿತ್ರಿಸಿಕೊಳ್ಳಿ
14. ಕೆಲವರು ಭವಿಷ್ಯದ ಬಗ್ಗೆ ಏನೆಲ್ಲ ಕಲ್ಪನೆ ಮಾಡಿಕೊಳ್ಳುತ್ತಾರೆ?
14 ಅನೇಕರು ಭವಿಷ್ಯದ ಬಗ್ಗೆ ಯೋಚಿಸುವಾಗ ಯಾವತ್ತೂ ನಡೆಯಲು ಸಾಧ್ಯವಿಲ್ಲದ ವಿಷಯಗಳ ಬಗ್ಗೆ ಕಲ್ಪನೆ ಮಾಡಿಕೊಳ್ಳುತ್ತಾರೆ. ಉದಾಹರಣೆಗೆ ತುಂಬ ಬಡವರಾಗಿರುವವರು ಶ್ರೀಮಂತರಾಗಿ ಯಾವುದೇ ಚಿಂತೆಗಳಿಲ್ಲದೆ ಬದುಕುವುದರ ಬಗ್ಗೆ ಕನಸು ಕಾಣುತ್ತಾರೆ. ಆದರೆ ಸೈತಾನನ ಲೋಕ ಅಂದಮೇಲೆ ಜೀವನದಲ್ಲಿ “ಕಷ್ಟಸಂಕಟ” ಇದ್ದೇ ಇರುತ್ತದೆಂದು ಬೈಬಲ್ ನಮಗೆ ತಿಳಿಸುತ್ತದೆ. (ಕೀರ್ತ. 90:10) ಇನ್ನು ಕೆಲವರು ಲೋಕದಲ್ಲಿರುವ ಸಮಸ್ಯೆಗಳಿಗೆ ಮಾನವ ಸರ್ಕಾರ ಪರಿಹಾರ ತರಲಿದೆಯೆಂದು ಊಹಿಸುತ್ತಾರೆ. ಆದರೆ ದೇವರ ಸರ್ಕಾರ ಮಾತ್ರ ಅದನ್ನು ಮಾಡಲು ಸಾಧ್ಯ ಎಂದು ಬೈಬಲಿನಲ್ಲಿದೆ. (ದಾನಿ. 2:44) ಈ ಲೋಕ ಎಂದಿಗೂ ಬದಲಾಗುವುದಿಲ್ಲವೆಂದು ಅನೇಕರು ನೆನಸುತ್ತಾರೆ. ಆದರೆ ದೇವರು ಈ ದುಷ್ಟ ಲೋಕವನ್ನು ನಾಶಮಾಡುವನೆಂದು ಬೈಬಲ್ ಹೇಳುತ್ತದೆ. (ಚೆಫ. 1:18; 1 ಯೋಹಾ. 2:15-17) ಹೀಗೆ ಯೆಹೋವನು ಹೇಳಿರುವ ವಿಷಯಗಳಿಗೆ ವಿರುದ್ಧವಾದ ವಿಷಯಗಳನ್ನು ಕಲ್ಪಿಸಿಕೊಳ್ಳುವವರಿಗೆ ಭವಿಷ್ಯದಲ್ಲಿ ಖಂಡಿತ ನಿರಾಶೆಯಾಗಲಿದೆ.
15. (ಎ) ದೇವರು ವಾಗ್ದಾನ ಮಾಡಿರುವ ಭವಿಷ್ಯತ್ತಿನ ಬಗ್ಗೆ ಮನಸ್ಸಲ್ಲಿ ಚಿತ್ರಿಸಿಕೊಳ್ಳುವುದು ಒಳ್ಳೇದು ಏಕೆ? (ಬಿ) ನೀವು ಹೊಸ ಲೋಕದಲ್ಲಿ ಮಾಡಲು ಕಾಯುತ್ತಿರುವ ವಿಷಯಗಳಲ್ಲಿ ಒಂದು ಯಾವುದು?
15 ಯೆಹೋವನು ನಮಗಾಗಿ ಒಂದು ಅದ್ಭುತ ಭವಿಷ್ಯತ್ತನ್ನು ವಾಗ್ದಾನ ಮಾಡಿದ್ದಾನೆ. ಆ ಸಮಯದ ಬಗ್ಗೆ ಯೋಚಿಸಿದಾಗ ನಮಗೆ ಹೆಚ್ಚು ಸಂತೋಷವಾಗುತ್ತದೆ. ಆತನ ಸೇವೆ ಮಾಡುತ್ತಾ ಇರಲು ಧೈರ್ಯ ಸಿಗುತ್ತದೆ. ನಿಮಗೆ ಸ್ವರ್ಗದಲ್ಲಿ ಜೀವಿಸುವ ನಿರೀಕ್ಷೆ ಇರಲಿ ಭೂಮಿಯಲ್ಲಿ ಜೀವಿಸುವ ನಿರೀಕ್ಷೆ ಇರಲಿ, ಯೆಹೋವನು ವಾಗ್ದಾನ ಮಾಡಿದ ವಿಷಯಗಳನ್ನು ಅನುಭವಿಸುತ್ತಿರುವುದನ್ನು ಸ್ವಲ್ಪ ಊಹಿಸಿಕೊಳ್ಳಿ! ನಿಮಗೆ ಭೂಮಿಯಲ್ಲಿ ಜೀವಿಸುವ ನಿರೀಕ್ಷೆ ಇದ್ದರೆ, ಇದನ್ನು ಮನಸ್ಸಲ್ಲಿ ಚಿತ್ರಿಸಿಕೊಳ್ಳಿ: ಭೂಮಿಯನ್ನು ಒಂದು ಸುಂದರ ತೋಟವನ್ನಾಗಿ ಮಾಡುವ ಕೆಲಸವನ್ನು ನಿಮ್ಮ ಸ್ನೇಹಿತರೊಟ್ಟಿಗೆ ಮಾಡುತ್ತಿದ್ದೀರಿ. ಈ ಕೆಲಸದ ಮೇಲ್ವಿಚಾರಣೆ ಮಾಡುವವರಿಗೆ ನಿಮ್ಮ ಬಗ್ಗೆ ಕಾಳಜಿ ಇದೆ. ನಿಮ್ಮ ಸುತ್ತಲಿರುವ ಜನರು ಸಹ ನಿಮ್ಮ ಹಾಗೆಯೇ ಯೆಹೋವನನ್ನು ಪ್ರೀತಿಸುತ್ತಾರೆ. ನಿಮಗೆ ಒಳ್ಳೇ ಆರೋಗ್ಯ, ಚೈತನ್ಯ ಇರುವುದರಿಂದ ಯಾವುದರ ಬಗ್ಗೆಯೂ ಚಿಂತೆ ಮಾಡುವ ಅಗತ್ಯವೇ ಇಲ್ಲ. ಅಲ್ಲಿ ನಿಮ್ಮ ಪ್ರತಿಭೆ, ಕೌಶಲಗಳನ್ನು ಯೆಹೋವನ ಘನಕ್ಕಾಗಿ ಮತ್ತು ಬೇರೆಯವರ ಸಹಾಯಕ್ಕಾಗಿ ಬಳಸುವುದರಿಂದ ನಿಮಗೆ ತುಂಬ ಆನಂದವಿದೆ. ಪುನರುತ್ಥಾನವಾದವರಿಗೂ ಯೆಹೋವನ ಬಗ್ಗೆ ಕಲಿಸುವ ಅವಕಾಶ ನಿಮಗಿದೆ! (ಯೋಹಾ. 17:3; ಅ. ಕಾ. 24:15) ಈ ಎಲ್ಲಾ ವಿಷಯಗಳ ಬಗ್ಗೆ ಮನಸ್ಸಲ್ಲಿ ಚಿತ್ರಿಸಿಕೊಳ್ಳುವಾಗ ನೀವು ಹಗಲುಗನಸು ಕಾಣುತ್ತಿಲ್ಲ. ಈ ವಿಷಯಗಳು ಬೈಬಲಿನಲ್ಲಿ ಇರುವುದರಿಂದ ಇವು ಖಂಡಿತ ನೆರವೇರುತ್ತವೆ.—ಯೆಶಾ. 11:9; 25:8; 33:24; 35:5-7; 65:22.
ಹೊಸ ಲೋಕದಲ್ಲಿ ಮಾಡಬೇಕೆಂದಿರುವ ವಿಷಯಗಳ ಬಗ್ಗೆ ಮಾತಾಡಿ
16, 17. ಯೆಹೋವನು ವಾಗ್ದಾನ ಮಾಡಿರುವ ಭವಿಷ್ಯದ ಬಗ್ಗೆ ಇತರರೊಟ್ಟಿಗೆ ಮಾತಾಡುವುದು ಏಕೆ ಒಳ್ಳೇದು?
16 ಹೊಸ ಲೋಕದಲ್ಲಿ ನಾವೇನು ಮಾಡಲು ಬಯಸುತ್ತೇವೆಂದು ನಮ್ಮ ಸಹೋದರ ಸಹೋದರಿಯರ ಜೊತೆ ಮಾತಾಡಬೇಕು. ಹೀಗೆ ನಮ್ಮ ಉಜ್ವಲ ಭವಿಷ್ಯತ್ತಿನ ಬಗ್ಗೆ ಸ್ಪಷ್ಟವಾಗಿ ಚಿತ್ರಿಸಿಕೊಳ್ಳಲು ಒಬ್ಬರಿಗೊಬ್ಬರು ಸಹಾಯ ಮಾಡುತ್ತಿರುತ್ತೇವೆ. ನಮ್ಮಲ್ಲಿ ಒಬ್ಬೊಬ್ಬರು ಏನು ಮಾಡುತ್ತಿರುವೆವು ಎಂದು ನಮಗೆ ಗೊತ್ತಿಲ್ಲ. ಆದರೂ ನಾವಲ್ಲಿ ಏನು ಮಾಡುತ್ತಿರುವೆವು ಎಂದು ಚಿತ್ರಿಸಿಕೊಂಡು ಮಾತಾಡಿಕೊಳ್ಳುವಾಗ ಯೆಹೋವನ ವಾಗ್ದಾನಗಳ ಮೇಲೆ ನಮಗಿರುವ ನಂಬಿಕೆಯನ್ನು ತೋರಿಸಿಕೊಡುತ್ತೇವೆ. ಈ ವಿಧದಲ್ಲಿ ನಾವು ಕಷ್ಟಕರ ಸಮಯದಲ್ಲೂ ಯೆಹೋವನ ಸೇವೆ ಮಾಡಲು ಒಬ್ಬರಿಗೊಬ್ಬರು ಉತ್ತೇಜನ ಕೊಡುತ್ತಿದ್ದೇವೆ. ಅಪೊಸ್ತಲ ಪೌಲ ಮತ್ತು ರೋಮ್ನಲ್ಲಿದ್ದ ಸಹೋದರರು ಹೀಗೇ ಮಾಡಿದರು.—ರೋಮ. 1:11, 12.
17 ಭವಿಷ್ಯದ ಬಗ್ಗೆ ಯೆಹೋವನು ವಾಗ್ದಾನ ಮಾಡಿರುವುದರ ಬಗ್ಗೆ ನೀವು ಯೋಚಿಸುವಾಗ ನಿಮ್ಮ ಕಷ್ಟಗಳ ಬಗ್ಗೆ ಹೆಚ್ಚಾಗಿ ಚಿಂತಿಸುವುದಿಲ್ಲ. ಒಮ್ಮೆ ಪೇತ್ರನು ತುಂಬ ಚಿಂತೆಯಲ್ಲಿದ್ದಾಗ ಯೇಸುವಿಗೆ ಹೀಗೆ ಕೇಳಿದನು: “ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ; ನಮಗೆ ಏನು ದೊರಕುವುದು?” ಪೇತ್ರ ಮತ್ತು ತನ್ನ ಜೊತೆ ಇದ್ದ ಇತರ ಶಿಷ್ಯರು ಭವಿಷ್ಯದಲ್ಲಿ ತಾವು ಮಾಡಲಿರುವ ಅದ್ಭುತ ವಿಷಯಗಳ ಬಗ್ಗೆ ಯೋಚಿಸಬೇಕೆಂದು ಯೇಸು ಬಯಸಿದನು. ಆದ್ದರಿಂದ “ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವಾಗ, ನನ್ನನ್ನು ಹಿಂಬಾಲಿಸಿರುವ ನೀವು ಸಹ ಹನ್ನೆರಡು ಸಿಂಹಾಸನಗಳಲ್ಲಿ ಕುಳಿತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ. ನನ್ನ ಹೆಸರಿನ ನಿಮಿತ್ತವಾಗಿ ಮನೆಗಳನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಂದೆಯನ್ನಾಗಲಿ ತಾಯಿಯನ್ನಾಗಲಿ ಮಕ್ಕಳನ್ನಾಗಲಿ ಹೊಲಗಳನ್ನಾಗಲಿ ಬಿಟ್ಟುಬಂದ ಪ್ರತಿಯೊಬ್ಬನಿಗೂ ಅನೇಕ ಪಾಲು ಹೆಚ್ಚಾಗಿ ಸಿಗುವುದು ಮತ್ತು ಅವನು ನಿತ್ಯಜೀವಕ್ಕೆ ಬಾಧ್ಯನಾಗುವನು” ಎಂದು ಹೇಳಿದನು. (ಮತ್ತಾ. 19:27-29) ಹೀಗೆ ಪೇತ್ರ ಮತ್ತು ಇತರ ಶಿಷ್ಯರು ಯೇಸುವಿನ ಜೊತೆ ಸ್ವರ್ಗದಲ್ಲಿ ಆಳುವುದನ್ನು ಮತ್ತು ವಿಧೇಯ ಮಾನವರಿಗೆ ಪರಿಪೂರ್ಣರಾಗಲು ಸಹಾಯ ಮಾಡುವುದನ್ನು ಚಿತ್ರಿಸಿಕೊಳ್ಳಲು ಸಾಧ್ಯವಾಯಿತು.
18. ದೇವರು ತನ್ನ ವಾಗ್ದಾನಗಳನ್ನು ನೆರವೇರಿಸುವ ಸಮಯದ ಬಗ್ಗೆ ಚಿತ್ರಿಸಿಕೊಳ್ಳುವುದು ಏಕೆ ಒಳ್ಳೇದು?
18 ಯೆಹೋವನ ಸೇವಕರಿಗೆ ಬಲವಾದ ನಂಬಿಕೆ ಇರಲು ಯಾವುದು ಸಹಾಯ ಮಾಡಿತೆಂದು ಕಲಿತೆವು. ಒಳ್ಳೇ ಭವಿಷ್ಯದ ಬಗ್ಗೆ ಯೆಹೋವನು ಮಾಡಿದ ವಾಗ್ದಾನ ಕುರಿತು ಹೇಬೆಲನು ಮನಸ್ಸಲ್ಲಿ ಚಿತ್ರಿಸಿಕೊಂಡನು. ಅದರಲ್ಲಿ ಅವನಿಗೆ ನಂಬಿಕೆ ಇದ್ದದರಿಂದ ಯೆಹೋವನನ್ನು ಮೆಚ್ಚಿಸಲು ಅವನಿಂದಾಯಿತು. “ಸಂತತಿ”ಯ ಬಗ್ಗೆ ಯೆಹೋವನು ಮಾಡಿದ ವಾಗ್ದಾನಗಳ ಕುರಿತು ಅಬ್ರಹಾಮನು ಮನಸ್ಸಲ್ಲಿ ಚಿತ್ರಿಸಿಕೊಂಡನು. ಆದ್ದರಿಂದ ಕಷ್ಟದ ಪರಿಸ್ಥಿತಿಯಲ್ಲೂ ಅವನು ಯೆಹೋವನಿಗೆ ವಿಧೇಯನಾದನು. (ಆದಿ. 3:15) ಯೆಹೋವನು ವಾಗ್ದಾನ ಮಾಡಿದ ಪ್ರತಿಫಲಕ್ಕಾಗಿ ಮೋಶೆ ಎದುರುನೋಡಿದನು. ಇದು ಯೆಹೋವನನ್ನು ಪ್ರೀತಿಸಲು ಮತ್ತು ಆತನಿಗೆ ನಂಬಿಗಸ್ತನಾಗಿರಲು ಮೋಶೆಗೆ ನೆರವು ಕೊಟ್ಟಿತು. (ಇಬ್ರಿ. 11:26) ಯೆಹೋವನು ಮಾಡಿರುವ ಎಲ್ಲ ವಾಗ್ದಾನಗಳನ್ನು ಆತನು ಪೂರೈಸುವುದನ್ನು ನಾವು ಮನಸ್ಸಲ್ಲೇ ಚಿತ್ರಿಸಿಕೊಳ್ಳುವಾಗ ನಮ್ಮ ನಂಬಿಕೆ, ಯೆಹೋವನ ಮೇಲಿನ ಪ್ರೀತಿ ಬಲಗೊಳ್ಳುತ್ತದೆ. ಮನಸ್ಸಲ್ಲಿ ಚಿತ್ರಿಸಿಕೊಳ್ಳುವ ನಮ್ಮ ಸಾಮರ್ಥ್ಯವನ್ನು ಬಳಸುವ ಇನ್ನೊಂದು ವಿಧದ ಬಗ್ಗೆ ಮುಂದಿನ ಲೇಖನದಲ್ಲಿ ನೋಡೋಣ.