‘ಪುರುಷರ ರೂಪದಲ್ಲಿರುವ ದಾನಗಳನ್ನು’ ಗಣ್ಯಮಾಡುವುದು
‘ಯಾರು ನಿಮ್ಮಲ್ಲಿ ಪ್ರಯಾಸಪಡುತ್ತಾರೋ . . . ಅವರನ್ನು ಲಕ್ಷಿಸಿ ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಬಹಳವಾಗಿ ಸನ್ಮಾನಮಾಡಿರಿ.’—1 ಥೆಸಲೊನೀಕ 5:12, 13.
1. ಅ. ಕೃತ್ಯಗಳು 20:35ಕ್ಕನುಸಾರ, ಕೊಡುವಿಕೆಗೆ ಯಾವ ಸಾಮರ್ಥ್ಯವಿದೆ? ದೃಷ್ಟಾಂತಿಸಿರಿ.
“ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲೇ ಹೆಚ್ಚಿನ ಸಂತೋಷವಿದೆ.” (ಅ. ಕೃತ್ಯಗಳು 20:35, NW) ಯೇಸುವಿನ ಈ ಮಾತುಗಳ ಸತ್ಯತೆಯನ್ನು ಅನುಭವಿಸಿದ ಇತ್ತೀಚಿನ ಒಂದು ಸಂದರ್ಭವನ್ನು ನೀವು ಜ್ಞಾಪಿಸಿಕೊಳ್ಳಬಲ್ಲಿರೊ? ಅದು ನೀವು ಬಹಳವಾಗಿ ಪ್ರೀತಿಸುವ ಒಬ್ಬರಿಗೆ ಕೊಟ್ಟ ಕೊಡುಗೆಯಾಗಿದ್ದಿರಬಹುದು. ಆ ಪ್ರಿಯ ವ್ಯಕ್ತಿಯು ಅದನ್ನು ನೆಚ್ಚಬೇಕೆಂದು ನೀವು ಬಯಸಿದ ಕಾರಣ, ಅದನ್ನು ತುಂಬ ಜಾಗ್ರತೆಯಿಂದ ಆಯ್ಕೆಮಾಡಿದಿರಿ. ನೀವು ಪ್ರೀತಿಸುವ ವ್ಯಕ್ತಿಯ ಮುಖದಲ್ಲಿನ ಆ ಉಲ್ಲಾಸದ ನೋಟವು, ನಿಮ್ಮನ್ನು ಎಷ್ಟೊಂದು ಹುರಿದುಂಬಿಸಿತು! ಯೋಗ್ಯವಾಗಿ ಪ್ರಚೋದಿಸಲ್ಪಟ್ಟಾಗ, ಕೊಡುವಿಕೆ ಪ್ರೀತಿಯ ಅಭಿವ್ಯಕ್ತಿಯಾಗಿದೆ, ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವುದರಿಂದ ನಮಗೆ ಸಂತೋಷವು ಸಿಗುತ್ತದೆ.
2, 3. (ಎ) ಯೆಹೋವನಿಗಿಂತ ಬೇರೆ ಯಾರೂ ಹೆಚ್ಚು ಸಂತೋಷಿತರಾಗಿಲ್ಲವೆಂದು ಏಕೆ ಹೇಳಬಹುದು, ಮತ್ತು “ಪುರುಷರ ರೂಪದಲ್ಲಿ ದಾನಗಳ” ಈ ಒದಗಿಸುವಿಕೆಯು ಆತನ ಹೃದಯಕ್ಕೆ ಆನಂದವನ್ನು ಹೇಗೆ ಉಂಟುಮಾಡಬಲ್ಲದು? (ಬಿ) ದೇವರಿಂದ ಬಂದ ದಾನದ ವಿಷಯದಲ್ಲಿ ನಾವು ಏನು ಮಾಡಬಯಸುವುದಿಲ್ಲ?
2 “ಎಲ್ಲಾ ಒಳ್ಳೇ ದಾನಗಳ” ಕೊಡುವಾತನಾದ ಯೆಹೋವನಿಗಿಂತಲೂ ಹೆಚ್ಚು ಸಂತೋಷಿತರಾಗಿ ಇನ್ನಾರು ಇರಬಲ್ಲರು? (ಯಾಕೋಬ 1:17; 1 ತಿಮೊಥೆಯ 1:11) ಆತನು ಕೊಡುವ ಪ್ರತಿಯೊಂದು ದಾನವು ಪ್ರೀತಿಯಿಂದ ಪ್ರಚೋದಿಸಲ್ಪಡುತ್ತದೆ. (1 ಯೋಹಾನ 4:8) ದೇವರು ಕ್ರಿಸ್ತನ ಮೂಲಕ ಸಭೆಗೆ ಕೊಟ್ಟಿರುವ ‘ಪುರುಷರ ರೂಪದಲ್ಲಿ ದಾನಗಳು’ ಎಂಬ ಕೊಡುಗೆಯ ವಿಷಯದಲ್ಲಿಯೂ ಇದು ಸತ್ಯವಾಗಿದೆ. (ಎಫೆಸ 4:8) ಮಂದೆಯನ್ನು ಪರಾಮರಿಸಲಿಕ್ಕಾಗಿ ಒದಗಿಸಲ್ಪಟ್ಟಿರುವ ಹಿರಿಯರು, ದೇವರಿಗೆ ತನ್ನ ಜನರ ಕಡೆಗಿರುವ ಆಳವಾದ ಪ್ರೀತಿಯ ಅಭಿವ್ಯಕ್ತಿಯಾಗಿದ್ದಾರೆ. ಈ ಪುರುಷರು ಜಾಗರೂಕತೆಯಿಂದ ಆರಿಸಲ್ಪಡುತ್ತಾರೆ. ಅವರು ಶಾಸ್ತ್ರೀಯ ಅರ್ಹತೆಗಳನ್ನು ಪೂರೈಸಬೇಕಾಗಿದೆ. (1 ತಿಮೊಥೆಯ 3:1-7; ತೀತ 1:5-9) ಅವರಿಗೆ “ಹಿಂಡನ್ನು ಕನಿಕರಿಸ”ಬೇಕೆಂಬುದು ತಿಳಿದಿದೆ, ಆಗ ಮಾತ್ರ ಕುರಿಗಳು ಇಂತಹ ಪ್ರೀತಿಪರ ಕುರುಬರಿಗೆ ಆಭಾರಿಗಳಾಗಿರಲು ಸಕಾರಣವಿರುವುದು. (ಅ. ಕೃತ್ಯಗಳು 20:29; ಕೀರ್ತನೆ 100:3) ತನ್ನ ಕುರಿಗಳ ಹೃದಯವು ಕೃತಜ್ಞತೆಯಿಂದ ತುಂಬಿರುವುದನ್ನು ಯೆಹೋವನು ನೋಡುವಾಗ, ಆತನ ಹೃದಯವೂ ಹರ್ಷಿಸುತ್ತದೆಂಬುದರಲ್ಲಿ ಸಂದೇಹವಿಲ್ಲ!—ಜ್ಞಾನೋಕ್ತಿ 27:11.
3 ದೇವರಿಂದ ಬರುವ ದಾನದ ಮೌಲ್ಯವನ್ನು ಕಡಿಮೆಗೊಳಿಸಲು ನಾವು ಬಯಸುವುದೂ ಇಲ್ಲ, ಆತನ ದಾನಗಳಿಗೆ ಗಣ್ಯತೆಯನ್ನು ತೋರಿಸದಿರಲು ಇಚ್ಛಿಸುವುದೂ ಇಲ್ಲ. ಆದಕಾರಣ, ಎರಡು ಪ್ರಶ್ನೆಗಳು ಏಳುತ್ತವೆ: ಹಿರಿಯರು ಸಭೆಯಲ್ಲಿ ತಮ್ಮ ಪಾತ್ರವನ್ನು ಹೇಗೆ ವೀಕ್ಷಿಸಬೇಕು? ಮತ್ತು “ಪುರುಷರ ರೂಪದಲ್ಲಿ ದಾನ”ಗಳಾಗಿರುವವರನ್ನು ತಾವು ಗಣ್ಯಮಾಡುತ್ತೇವೆಂದು ಮಂದೆಯಲ್ಲಿರುವ ಇತರರು ಹೇಗೆ ತೋರಿಸಬಲ್ಲರು?
‘ನಾವು ನಿಮ್ಮ ಜೊತೆ ಕೆಲಸಗಾರರು’
4, 5. (ಎ) ಪೌಲನು ಸಭೆಯನ್ನು ಯಾವುದಕ್ಕೆ ಹೋಲಿಸುತ್ತಾನೆ, ಮತ್ತು ಇದೊಂದು ಯೋಗ್ಯವಾದ ದೃಷ್ಟಾಂತವಾಗಿದೆ ಏಕೆ? (ಬಿ) ನಾವು ಒಬ್ಬರನ್ನೊಬ್ಬರು ವೀಕ್ಷಿಸುವ ಮತ್ತು ಉಪಚರಿಸುವ ವಿಷಯದಲ್ಲಿ ಪೌಲನ ದೃಷ್ಟಾಂತವು ಏನನ್ನು ತೋರಿಸುತ್ತದೆ?
4 ಈ “ಪುರುಷರ ರೂಪದಲ್ಲಿ ದಾನ”ಗಳಾಗಿರುವವರಿಗೆ ಸಭೆಯಲ್ಲಿ ಒಂದಿಷ್ಟು ಅಧಿಕಾರವನ್ನು ಯೆಹೋವನು ದಯಪಾಲಿಸಿದ್ದಾನೆ. ಈ ಅಧಿಕಾರವನ್ನು ದುರುಪಯೋಗಿಸಲು ಹಿರಿಯರು ಬಯಸುವುದಿಲ್ಲವಾದರೂ, ಅಪರಿಪೂರ್ಣ ಮಾನವರೋಪಾದಿ ಹಾಗೆ ಮಾಡುವುದು ಬಹಳ ಸುಲಭವೆಂದು ಅವರಿಗೆ ಗೊತ್ತಿದೆ. ಹಾಗಾದರೆ, ಮಂದೆಯ ಸಂಬಂಧದಲ್ಲಿ ಅವರು ತಮ್ಮನ್ನು ಹೇಗೆ ವೀಕ್ಷಿಸಿಕೊಳ್ಳಬೇಕು? ಅಪೊಸ್ತಲ ಪೌಲನು ಉಪಯೋಗಿಸಿದ ದೃಷ್ಟಾಂತವನ್ನು ಪರಿಗಣಿಸಿರಿ. “ಪುರುಷರ ರೂಪದಲ್ಲಿ ದಾನ”ಗಳಾಗಿರುವವರು ಏಕೆ ಒದಗಿಸಲ್ಪಟ್ಟಿದ್ದಾರೆಂಬುದನ್ನು ಚರ್ಚಿಸಿದ ನಂತರ, ಪೌಲನು ಬರೆದುದು: “ಪ್ರೀತಿಯಿಂದ ಸತ್ಯವನ್ನನುಸರಿಸುತ್ತಾ ಬೆಳೆದು ಎಲ್ಲಾ ವಿಷಯಗಳಲ್ಲಿಯೂ ಕ್ರಿಸ್ತನ ಐಕ್ಯವನ್ನು ಹೊಂದುತ್ತಾ ಬರಬೇಕು. ಆತನೇ ಶಿರಸ್ಸು; ದೇಹವೆಲ್ಲಾ ಆತನ ಧೊರೆತನದಲ್ಲಿದ್ದು ತನ್ನಲ್ಲಿರುವ ಎಲ್ಲಾ ನರಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಪ್ರತಿ ಅಂಗದಿಂದ ಅದರದರ ಶಕ್ತಿಯ ಪ್ರಕಾರ ಸಹಾಯಹೊಂದಿ ಪ್ರೀತಿಯಿಂದ ಐಕ್ಯವಾಗಿದ್ದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ.” (ಎಫೆಸ 4:15, 16) ಹಿರಿಯರು ಮತ್ತು ಇತರ ಸದಸ್ಯರನ್ನು ಒಳಗೊಂಡ ಸಭೆಯನ್ನು, ಪೌಲನು ಮಾನವ ದೇಹಕ್ಕೆ ಹೋಲಿಸುತ್ತಾನೆ. ಇದೊಂದು ಯೋಗ್ಯವಾದ ದೃಷ್ಟಾಂತವಾಗಿದೆ ಏಕೆ?
5 ಮಾನವ ದೇಹವು ಬೇರೆ ಬೇರೆ ಅಂಗಗಳಿಂದ ರಚಿಸಲ್ಪಟ್ಟಿದ್ದರೂ, ಅದಕ್ಕೆ ಒಂದೇ ಒಂದು ತಲೆಯಿದೆ. ಆದರೂ ದೇಹದಲ್ಲಿರುವ ಪ್ರತಿಯೊಂದು ಭಾಗವು, ಅದು ಸ್ನಾಯುವಾಗಿರಲಿ, ನರವಾಗಿರಲಿ, ರಕ್ತನಾಳವಾಗಿರಲಿ ಉಪಯುಕ್ತವಾಗಿದೆ. ಪ್ರತಿಯೊಂದು ಅಂಗವು ಅಮೂಲ್ಯವಾಗಿದ್ದು, ಇಡೀ ದೇಹದ ಆರೋಗ್ಯ ಹಾಗೂ ಸೌಂದರ್ಯಕ್ಕೆ ನೆರವನ್ನೀಡುತ್ತದೆ. ತದ್ರೀತಿಯಲ್ಲಿ, ಸಭೆಯು ಅನೇಕ ಸದಸ್ಯರಿಂದ ರಚಿಸಲ್ಪಟ್ಟಿದ್ದರೂ, ಪ್ರತಿಯೊಬ್ಬ ಸದಸ್ಯನು ಅವನು ಯುವಕನಾಗಿರಲಿ ವೃದ್ಧನಾಗಿರಲಿ, ಬಲವಂತನಾಗಿರಲಿ ಬಲಹೀನನಾಗಿರಲಿ, ಸಭೆಯ ಆತ್ಮಿಕ ಆರೋಗ್ಯ ಹಾಗೂ ಸೌಂದರ್ಯಕ್ಕೆ ಒಂದಿಷ್ಟನ್ನು ಕೂಡಿಸಬಲ್ಲನು. (1 ಕೊರಿಂಥ 12:14-26) ತಾನು ತೀರ ಅಲ್ಪನೆಂದು ಯಾರೂ ಭಾವಿಸಿಕೊಳ್ಳಬೇಕಾಗಿಲ್ಲ. ಮತ್ತೊಂದು ಕಡೆಯಲ್ಲಿ, ತಾವು ಶ್ರೇಷ್ಠರೆಂದು ಯಾರಿಗೂ ಅನಿಸಬಾರದು. ಏಕೆಂದರೆ, ಕುರುಬರು ಮತ್ತು ಕುರಿಗಳನ್ನೊಳಗೊಂಡ ನಾವೆಲ್ಲರೂ ದೇಹದ ಭಾಗವಾಗಿದ್ದೇವೆ, ಮತ್ತು ಕ್ರಿಸ್ತನೆಂಬ ಒಬ್ಬನೇ ಶಿರಸ್ಸು ನಮಗಿದ್ದಾನೆ. ಹೀಗೆ ನಾವು ಪರಸ್ಪರ ಹೊಂದಿರಬೇಕಾದ ಪ್ರೀತಿ, ಅಕ್ಕರೆ ಹಾಗೂ ಆದರದ ಒಂದು ಹೃದಯಸ್ಪರ್ಶಿ ಚಿತ್ರಣವನ್ನು ಪೌಲನು ನೀಡುತ್ತಾನೆ. ಹಿರಿಯರು ಇದನ್ನು ಗ್ರಹಿಸಿಕೊಳ್ಳುವಾಗ, ಸಭೆಯಲ್ಲಿ ತಮ್ಮ ಪಾತ್ರದ ಒಂದು ದೀನ, ಸಮತೂಕದ ನೋಟವು ಅವರಿಗಿರಬಲ್ಲದು.
6. ಪೌಲನಿಗೆ ಅಪೊಸ್ತಲ ಸಂಬಂಧಿತ ಅಧಿಕಾರವಿದ್ದರೂ, ಅವನು ದೀನ ಭಾವವನ್ನು ಹೇಗೆ ಪ್ರದರ್ಶಿಸಿದನು?
6 ಈ ‘ಪುರುಷರ ರೂಪದಲ್ಲಿ ದಾನಗಳು’ ತಮ್ಮ ಜೊತೆ ಆರಾಧಕರ ಜೀವಿತಗಳನ್ನು ಇಲ್ಲವೆ ನಂಬಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸುವುದಿಲ್ಲ. ಪೌಲನಿಗೆ ಅಪೊಸ್ತಲ ಸಂಬಂಧಿತ ಅಧಿಕಾರವಿದ್ದರೂ, ಅವನು ಕೊರಿಂಥದವರಿಗೆ ವಿನಮ್ರನಾಗಿ ಹೇಳಿದ್ದು: “ನಾವು ನಂಬಿಕೆಯ ವಿಷಯದಲ್ಲಿಯೂ ನಿಮ್ಮ ಮೇಲೆ ದೊರೆತನಮಾಡುವವರೆಂದು ನನ್ನ ತಾತ್ಪರ್ಯವಲ್ಲ; ನಿಮ್ಮ ಸಂತೋಷಕ್ಕೆ ನಾವು ಸಹಾಯಕರಾಗಿದ್ದೇವೆ; ನಂಬಿಕೆಯ ವಿಷಯದಲ್ಲಿ ದೃಢನಿಂತಿದ್ದೀರಿ.” (2 ಕೊರಿಂಥ 1:24) ಪೌಲನು ತನ್ನ ಸಹೋದರರ ನಂಬಿಕೆಯನ್ನು ಮತ್ತು ಜೀವನಕ್ರಮವನ್ನು ನಿಯಂತ್ರಿಸಲು ಬಯಸಲಿಲ್ಲ. ಹಾಗೆ ಮಾಡುವುದರ ಅಗತ್ಯವನ್ನೂ ಅವನು ಕಾಣಲಿಲ್ಲ. ಏಕೆಂದರೆ, ಅವರು ಸರಿಯಾದುದನ್ನು ಮಾಡಲು ಬಯಸಿದ ಕಾರಣ, ಈಗಾಗಲೇ ನಂಬಿಗಸ್ತ ಸ್ತ್ರೀಪುರುಷರೋಪಾದಿ ಯೆಹೋವನ ಸಂಸ್ಥೆಯಲ್ಲಿದ್ದರೆಂಬ ಭರವಸೆಯನ್ನು ಅವನು ವ್ಯಕ್ತಪಡಿಸಿದನು. ಆದಕಾರಣ, ತನ್ನ ಹಾಗೂ ತನ್ನೊಂದಿಗಿದ್ದ ಸಂಚರಣ ಸಂಗಾತಿಯಾದ ತಿಮೊಥೆಯನ ಕುರಿತು ಮಾತಾಡುತ್ತಾ, ಅವನು ಕಾರ್ಯತಃ ಹೀಗೆ ಹೇಳಿದನು: ‘ಆನಂದದಿಂದ ದೇವರಿಗೆ ಸೇವೆ ಸಲ್ಲಿಸಲು ನಿಮ್ಮೊಂದಿಗೆ ಕೆಲಸಮಾಡುವುದು ನಮ್ಮ ಕರ್ತವ್ಯವಾಗಿದೆ.’ (2 ಕೊರಿಂಥ 1:1) ಎಂತಹ ದೀನಭಾವ!
7. ಸಭೆಯಲ್ಲಿ ತಮ್ಮ ಪಾತ್ರದ ಕುರಿತು ದೀನಭಾವದ ಹಿರಿಯರು ಏನನ್ನು ಗ್ರಹಿಸುತ್ತಾರೆ, ಮತ್ತು ತಮ್ಮ ಜೊತೆ ಕೆಲಸಗಾರರ ವಿಷಯದಲ್ಲಿ ಅವರಿಗೆ ಯಾವ ಭರವಸೆಯಿದೆ?
7 “ಪುರುಷರ ರೂಪದಲ್ಲಿ ದಾನ”ಗಳಾಗಿರುವವರಿಗೆ ಇಂದು ಅದೇ ಕೆಲಸವಿದೆ. ಅವರು ‘ನಮ್ಮ ಆನಂದಕ್ಕಾಗಿ ಜೊತೆ ಕೆಲಸಗಾರರಾಗಿದ್ದಾರೆ.’ ದೇವರ ಸೇವೆಯಲ್ಲಿ ಇತರರು ಎಷ್ಟನ್ನು ಮಾಡಸಾಧ್ಯವೆಂದು ನಿರ್ಧರಿಸುವವರು ತಾವಲ್ಲ ಎಂಬುದನ್ನು ದೀನ ಹಿರಿಯರು ಗ್ರಹಿಸಿಕೊಳ್ಳುತ್ತಾರೆ. ಇತರರು ತಮ್ಮ ಶುಶ್ರೂಷೆಯನ್ನು ವಿಸ್ತರಿಸುವಂತೆ ಇಲ್ಲವೆ ಸುಧಾರಿಸುವಂತೆ ತಾವು ಉತ್ತೇಜಿಸಬಹುದಾದರೂ, ದೇವರಿಗೆ ಸಲ್ಲುವ ಸೇವೆ ಸ್ವಇಚ್ಛೆಯ ಹೃದಯದಿಂದ ಬರಬೇಕೆಂದು ಅವರು ಬಲ್ಲರು. (ಹೋಲಿಸಿ 2 ಕೊರಿಂಥ 9:7.) ತಮ್ಮ ಜೊತೆ ಕೆಲಸಗಾರರು ಆನಂದಿತರಾಗಿದ್ದರೆ, ತಮ್ಮಿಂದ ಸಾಧ್ಯವಾದುದನ್ನು ಮಾಡುವರೆಂಬ ಪೂರ್ಣ ಭರವಸೆ ಅವರಿಗಿದೆ. ತಮ್ಮ ಸಹೋದರರು “ಯೆಹೋವನನ್ನು ಸಂತೋಷದಿಂದ ಸೇವಿ”ಸುವಂತೆ ಸಹಾಯ ಮಾಡುವುದೇ ಅವರ ಹೃತ್ಪೂರ್ವಕ ಬಯಕೆಯಾಗಿದೆ.—ಕೀರ್ತನೆ 100:2.
ಸಂತೋಷದಿಂದ ಸೇವಿಸುವಂತೆ ಎಲ್ಲರಿಗೂ ಸಹಾಯ ಮಾಡುವುದು
8. ತಮ್ಮ ಸಹೋದರರು ಯೆಹೋವನನ್ನು ಆನಂದದಿಂದ ಸೇವಿಸುವಂತೆ ಹಿರಿಯರು ಸಹಾಯ ಮಾಡಬಹುದಾದ ಕೆಲವು ವಿಧಗಳು ಯಾವುವು?
8 ಹಿರಿಯರೇ, ನಿಮ್ಮ ಸಹೋದರರು ಸಂತೋಷದಿಂದ ಸೇವಿಸುವಂತೆ ನೀವು ಹೇಗೆ ಸಹಾಯ ಮಾಡಬಲ್ಲಿರಿ? ಮಾದರಿಯ ಮೂಲಕ ನೀವು ಉತ್ತೇಜಿಸಬಲ್ಲಿರಿ. (1 ಪೇತ್ರ 5:3) ಶುಶ್ರೂಷೆಯಲ್ಲಿ ನಿಮಗಿರುವ ಹುರುಪು ಮತ್ತು ಆನಂದವು ವ್ಯಕ್ತವಾದಾಗ, ನಿಮ್ಮ ಮಾದರಿಯನ್ನು ಅನುಕರಿಸುವಂತೆ ಇತರರು ಹುರಿದುಂಬಿಸಲ್ಪಡುವರು. ಇತರರನ್ನು ಅವರ ಮನಃಪೂರ್ವಕ ಪ್ರಯತ್ನಗಳಿಗಾಗಿ ಶ್ಲಾಘಿಸಿರಿ. (ಎಫೆಸ 4:29) ಆದರದ ಹಾಗೂ ಯಥಾರ್ಥವಾದ ಶ್ಲಾಘನೆಯಿಂದ, ತಾವು ಉಪಯುಕ್ತರೂ ಬೇಕಾದವರೂ ಎಂಬ ಅನಿಸಿಕೆಯು ಇತರರಲ್ಲಿ ಉಂಟಾಗುತ್ತದೆ. ದೇವರನ್ನು ಸೇವಿಸಲು ತಮ್ಮಿಂದಾದುದನ್ನು ಕುರಿಗಳು ಮಾಡುವಂತೆ ಅದು ಉತ್ತೇಜಿಸುತ್ತದೆ. ಅನುಚಿತವಾದ ಹೋಲಿಕೆಗಳನ್ನು ಮಾಡದಿರಿ. (ಗಲಾತ್ಯ 6:4) ಇಂತಹ ಹೋಲಿಕೆಗಳು ಸುಧಾರಣೆಯನ್ನು ಮಾಡುವಂತೆ ಪ್ರಚೋದಿಸುವ ಬದಲು ನಿರುತ್ಸಾಹವನ್ನು ಉಂಟುಮಾಡುತ್ತವೆ. ಅಲ್ಲದೆ, ಯೆಹೋವನ ಕುರಿಗಳು ವಿಭಿನ್ನ ಸಾಮರ್ಥ್ಯಗಳುಳ್ಳ ಹಾಗೂ ಪರಿಸ್ಥಿತಿಗಳಲ್ಲಿರುವ ಜನರಾಗಿದ್ದಾರೆ. ಪೌಲನಂತೆ, ನಿಮ್ಮ ಸಹೋದರರಲ್ಲಿ ಭರವಸೆಯನ್ನು ವ್ಯಕ್ತಪಡಿಸಿರಿ. ಪ್ರೀತಿಯು “ಎಲ್ಲವನ್ನೂ ನಂಬುತ್ತದೆ,” ಆದುದರಿಂದ ನಮ್ಮ ಸಹೋದರರು ದೇವರನ್ನು ಪ್ರೀತಿಸುತ್ತಾರೆ ಮತ್ತು ಆತನನ್ನು ಮೆಚ್ಚಿಸಲು ಬಯಸುತ್ತಾರೆಂದು ನಾವು ನಂಬುವುದು ಒಳ್ಳೆಯದು. (1 ಕೊರಿಂಥ 13:7) ನೀವು ‘ಇತರರಿಗೆ ಘನತೆಯನ್ನು ತೋರಿಸುವಾಗ,’ ಅವರಲ್ಲಿರುವ ಅತ್ಯುತ್ತಮವಾದುದನ್ನೇ ಹೊರಸೆಳೆಯುತ್ತೀರಿ. (ರೋಮಾಪುರ 12:10) ಕುರಿಗಳು ಉತ್ತೇಜಿಸಲ್ಪಟ್ಟಾಗ ಮತ್ತು ಚೈತನ್ಯಗೊಳಿಸಲ್ಪಟ್ಟಾಗ ಬಲಗೊಳಿಸಲ್ಪಟ್ಟಾಗ, ಅವರಲ್ಲಿ ಹೆಚ್ಚಿನವರು ದೇವರ ಸೇವೆಯಲ್ಲಿ ತಮ್ಮಿಂದ ಸಾಧ್ಯವಾದುದನ್ನು ಮಾಡಿ, ಆ ಸೇವೆಯಲ್ಲಿ ಆನಂದವನ್ನು ಕಂಡುಕೊಳ್ಳುವರೆಂಬ ವಿಷಯದಲ್ಲಿ ನಿಶ್ಚಿತರಾಗಿರಿ.—ಮತ್ತಾಯ 11:28-30.
9. ಜೊತೆ ಹಿರಿಯರ ಯಾವ ವೀಕ್ಷಣೆಯು ಆನಂದದಿಂದ ಸೇವಿಸುವಂತೆ ಪ್ರತಿಯೊಬ್ಬ ಹಿರಿಯನಿಗೆ ಸಹಾಯ ಮಾಡುವುದು?
9 ದೀನಭಾವದಿಂದ ನಿಮ್ಮನ್ನು ‘ಜೊತೆ ಕೆಲಸಗಾರರಾಗಿ’ ಭಾವಿಸಿಕೊಳ್ಳುವುದು, ಸಂತೋಷದಿಂದ ಸೇವಿಸಲು ಮತ್ತು ನಿಮ್ಮ ಜೊತೆ ಹಿರಿಯರ ಅದ್ವಿತೀಯ ದಾನಗಳನ್ನು ಗಣ್ಯಮಾಡಲು ನಿಮಗೆ ಸಹಾಯಮಾಡುವುದು. ಪ್ರತಿಯೊಬ್ಬ ಹಿರಿಯನಿಗೆ ತನ್ನದೇ ಆದ ಸಹಜ ಕೌಶಲಗಳು ಮತ್ತು ಸಾಮರ್ಥ್ಯಗಳಿದ್ದು, ಅದನ್ನು ಅವನು ಸಭೆಯ ಲಾಭಕ್ಕಾಗಿ ಉಪಯೋಗಿಸಬಲ್ಲನು. (1 ಪೇತ್ರ 4:10) ಒಬ್ಬನಿಗೆ ಕಲಿಸುವ ದಾನವಿರಬಹುದು. ಮತ್ತೊಬ್ಬನು ಪ್ರಭಾವಕಾರಿ ವಿಧದಲ್ಲಿ ಸಂಘಟಿಸುವವನಾಗಿರಬಹುದು. ಇನ್ನೊಬ್ಬನು ಆದರಣೆ ತೋರಿಸುವವನು ಹಾಗೂ ಸಹಾನುಭೂತಿಯುಳ್ಳವನು ಆಗಿರುವ ಕಾರಣ, ಅವನನ್ನು ಸಮೀಪಿಸುವುದು ತೀರ ಸುಲಭವಾಗಿರಬಹುದು. ಪ್ರತಿಯೊಬ್ಬ ಹಿರಿಯನಲ್ಲಿರುವ ದಾನದ ಪ್ರಮಾಣವು ಒಂದೇ ಆಗಿರಲಾರದು. ಕಲಿಸುವ ದಾನದಂತಹ ಒಂದು ಪ್ರತ್ಯೇಕ ವರವು, ಆ ಹಿರಿಯನನ್ನು ಮತ್ತೊಬ್ಬನಿಗಿಂತ ಶ್ರೇಷ್ಠನನ್ನಾಗಿ ಮಾಡುತ್ತದೊ? ಖಂಡಿತವಾಗಿಯೂ ಇಲ್ಲ! (1 ಕೊರಿಂಥ 4:7) ಇನ್ನೊಂದು ಕಡೆಯಲ್ಲಿ, ಮತ್ತೊಬ್ಬನಲ್ಲಿರುವ ದಾನಕ್ಕಾಗಿ ಅಸೂಯೆ ಪಡುವ ಇಲ್ಲವೆ ಇನ್ನೊಬ್ಬ ಹಿರಿಯನ ಸಾಮರ್ಥ್ಯವು ಅವನಿಗೆ ಇತರರ ಶ್ಲಾಘನೆಯನ್ನು ತರುವಾಗ, ಕೊರತೆಯ ಅನಿಸಿಕೆಯುಳ್ಳವರಾಗಿರುವ ಅಗತ್ಯವಿಲ್ಲ. ಯೆಹೋವನು ನೋಡುವಂತಹ ದಾನಗಳು ಸ್ವತಃ ನಿಮ್ಮಲ್ಲಿಯೇ ಇವೆ ಎಂಬುದನ್ನು ನೆನಪಿನಲ್ಲಿಡಿರಿ. ಆ ದಾನಗಳನ್ನು ಬೆಳೆಸಿಕೊಂಡು, ನಿಮ್ಮ ಸಹೋದರರ ಪ್ರಯೋಜನಕ್ಕಾಗಿ ಅವುಗಳನ್ನು ಉಪಯೋಗಿಸುವಂತೆ ಆತನು ಸಹಾಯ ಮಾಡಬಲ್ಲನು.—ಫಿಲಿಪ್ಪಿ 4:13.
‘ವಿಧೇಯರಾಗಿರಿ ಮತ್ತು ಅಧೀನರಾಗಿರಿ’
10. ನಾವು “ಪುರುಷರ ರೂಪದಲ್ಲಿ ದಾನ”ಗಳಾಗಿರುವವರಿಗೆ ಗಣ್ಯತೆಯನ್ನು ವ್ಯಕ್ತಪಡಿಸುವುದು ತೀರ ಯುಕ್ತವಾದದ್ದು ಏಕೆ?
10 ನಮಗೊಂದು ದಾನವು ಸಿಗುವಾಗ, ಅದಕ್ಕಾಗಿ ಗಣ್ಯತೆಯನ್ನು ವ್ಯಕ್ತಪಡಿಸುವುದು ತೀರ ಯುಕ್ತವಾದದ್ದು. “ಕೃತಜ್ಞತೆಯುಳ್ಳವರಾಗಿರ್ರಿ” ಎಂದು ಕೊಲೊಸ್ಸೆ 3:15 ತಿಳಿಸುತ್ತದೆ. ಹಾಗಾದರೆ, ಯೆಹೋವನು ನಮಗಾಗಿ ಕೊಟ್ಟಿರುವ ಅಮೂಲ್ಯವಾದ ದಾನ, ಅಂದರೆ “ಪುರುಷರ ರೂಪದಲ್ಲಿ ದಾನ”ಗಳಾಗಿರುವವರ ಕುರಿತೇನು? ನಾವು ಪ್ರಥಮವಾಗಿ ಉದಾರ ರೀತಿಯಲ್ಲಿ ಕೊಡುವವನಾದ ಯೆಹೋವನಿಗೇ ಕೃತಜ್ಞರಾಗಿದ್ದೇವೆ. ಆದರೆ “ಪುರುಷರ ರೂಪದಲ್ಲಿ ದಾನ”ಗಳಾಗಿರುವವರ ಕುರಿತೇನು? ನಾವು ಅವರನ್ನು ಗಣ್ಯಮಾಡುತ್ತೇವೆಂದು ಹೇಗೆ ತೋರಿಸಬಲ್ಲೆವು?
11. (ಎ) “ಪುರುಷರ ರೂಪದಲ್ಲಿ ದಾನ”ಗಳಾಗಿರುವವರಿಗೆ ನಾವು ಗಣ್ಯತೆಯನ್ನು ಹೇಗೆ ಪ್ರದರ್ಶಿಸಬಹುದು? (ಬಿ) ‘ವಿಧೇಯರಾಗಿರಿ’ ಮತ್ತು “ಅಧೀನರಾಗಿರಿ” ಎಂಬ ಅಭಿವ್ಯಕ್ತಿಗಳ ಮಹತ್ವವೇನು?
11 ಅವರ ಬೈಬಲಾಧಾರಿತ ಸಲಹೆ ಹಾಗೂ ನಿರ್ಣಯಗಳಿಗೆ ಕಿವಿಗೊಡಲು ತತ್ಪರರಾಗಿರುವ ಮೂಲಕ, ನಾವು “ಪುರುಷರ ರೂಪದಲ್ಲಿ ದಾನ”ಗಳಾಗಿರುವವರಿಗೆ ನಮ್ಮ ಗಣ್ಯತೆಯನ್ನು ಪ್ರದರ್ಶಿಸಸಾಧ್ಯವಿದೆ. ಬೈಬಲು ನಮಗೆ ಸಲಹೆ ನೀಡುವುದು: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.” (ಇಬ್ರಿಯ 13:17) ನಾವು ಸಭಾನಾಯಕರಿಗೆ ಕೇವಲ ‘ವಿಧೇಯರಲ್ಲ’ ‘ಅಧೀನ’ರೂ ಆಗಿರಬೇಕೆಂಬುದನ್ನು ಗಮನಿಸಿರಿ. “ಅಧೀನರಾಗಿರಿ” ಎಂಬ ಪದಕ್ಕೆ ಗ್ರೀಕ್ ಶಬ್ದದ ಅಕ್ಷರಾರ್ಥವು “ಮಣಿಯುವವರಾಗಿರಿ” ಎಂದಾಗಿದೆ. ‘ವಿಧೇಯರಾಗಿರಿ’ ಮತ್ತು “ಅಧೀನರಾಗಿರಿ” ಎಂಬ ಅಭಿವ್ಯಕ್ತಿಗಳ ಕುರಿತು ಹೇಳಿಕೆ ನೀಡುತ್ತಾ, ಬೈಬಲ್ ಪಂಡಿತ ಆರ್. ಸಿ. ಏಚ್. ಲೆನ್ಸ್ಕೀ ಹೇಳುವುದು: “ತಿಳಿಸಿಕೊಟ್ಟ ವಿಷಯವನ್ನು ಒಬ್ಬನು ಒಪ್ಪಿಕೊಂಡು, ಅದರ ಯಥಾರ್ಥತೆ ಹಾಗೂ ಉಪಯುಕ್ತತೆಯ ಕುರಿತು ಮನಗಾಣಿಸಲ್ಪಟ್ಟಾಗ ವಿಧೇಯನಾಗುತ್ತಾನೆ; ಆದರೆ ಅವನಿಗೆ ವ್ಯತಿರಿಕ್ತವಾದ ಅಭಿಪ್ರಾಯವಿರುವಾಗ . . . ಒಬ್ಬನು ಮಣಿಯುತ್ತಾನೆ.” ನಾಯಕತ್ವ ವಹಿಸುವವರ ನಿರ್ದೇಶನವನ್ನು ತಿಳಿದುಕೊಂಡು, ಅದಕ್ಕೆ ಸಮ್ಮತಿಸುವಾಗ ವಿಧೇಯತೆಯು ಸ್ವಾಭಾವಿಕವಾಗಿ ಬರಬಹುದು. ಆದರೆ, ಪ್ರತ್ಯೇಕವಾದೊಂದು ನಿರ್ಣಯದ ಹಿಂದಿರುವ ಕಾರಣವು ನಮಗೆ ಅರ್ಥವಾಗದಿದ್ದಲ್ಲಿ ಆಗೇನು?
12. ಪ್ರತ್ಯೇಕವಾದ ನಿರ್ಣಯದ ಹಿಂದಿರುವ ಕಾರಣವನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದಿದ್ದಾಗಲೂ, ನಾವು ಏಕೆ ಅಧೀನರು ಇಲ್ಲವೆ ಮಣಿಯುವವರು ಆಗಿರಬೇಕು?
12 ಇಂತಹ ಸಂದರ್ಭಗಳಲ್ಲಿಯೇ ನಾವು ಅಧೀನರು, ಇಲ್ಲವೆ ಮಣಿಯುವವರು ಆಗಿರುವ ಅಗತ್ಯವಿರಬಹುದು. ಏಕೆ? ಒಂದು ವಿಷಯವೇನೆಂದರೆ, ಆತ್ಮಿಕ ಅರ್ಹತೆಯುಳ್ಳ ಈ ಪುರುಷರು ನಮ್ಮ ಒಳಿತನ್ನೇ ಬಯಸುತ್ತಾರೆಂಬ ನಂಬಿಕೆ ನಮಗಿರಬೇಕು. ಎಷ್ಟೆಂದರೂ, ಅವರ ಆರೈಕೆಯಲ್ಲಿ ಒಪ್ಪಿಸಲ್ಪಟ್ಟ ಕುರಿಗಳಿಗಾಗಿ ಯೆಹೋವನಿಗೆ ಲೆಕ್ಕ ಒಪ್ಪಿಸಬೇಕೆಂದು ಅವರಿಗೆ ಚೆನ್ನಾಗಿ ಗೊತ್ತಿದೆ. (ಯಾಕೋಬ 3:1) ಅಲ್ಲದೆ, ಆ ಪ್ರತ್ಯೇಕವಾದ ನಿರ್ಣಯಕ್ಕೆ ಅವರನ್ನು ನಡೆಸಿದ ಎಲ್ಲ ಗುಟ್ಟಾದ ನಿಜತ್ವಗಳು ನಮಗೆ ತಿಳಿಯದೇ ಇರಬಹುದು ಎಂಬುದನ್ನು ನಾವು ನೆನಪಿನಲ್ಲಿಡಬೇಕು.—ಜ್ಞಾನೋಕ್ತಿ 18:13.
13. ಹಿರಿಯರು ಮಾಡುವ ನ್ಯಾಯನಿರ್ಣಾಯಕ ಮಂಡಲಿಯ ನಿರ್ಣಯಗಳಿಗೆ ನಾವು ಅಧೀನರಾಗಿರುವಂತೆ ಯಾವುದು ಸಹಾಯ ಮಾಡಸಾಧ್ಯವಿದೆ?
13 ನ್ಯಾಯನಿರ್ಣಾಯಕ ಮಂಡಲಿಯ ನಿರ್ಣಯಗಳಿಗೆ ಅಧೀನರಾಗಿರುವುದರ ಕುರಿತೇನು? ನಾವು ಪ್ರೀತಿಸುವಂತಹ ಒಬ್ಬ ಸಂಬಂಧಿಕನು ಇಲ್ಲವೆ ಒಬ್ಬ ಆಪ್ತ ಮಿತ್ರನನ್ನು ಬಹಿಷ್ಕರಿಸುವ ನಿರ್ಣಯವು ಮಾಡಲ್ಪಟ್ಟಾಗ, ಇದು ಖಂಡಿತವಾಗಿಯೂ ಸುಲಭವಾಗಿರಲಾರದು. ಆದರೆ ಇಂತಹ ಸಂದರ್ಭಗಳಲ್ಲಿಯೂ “ಪುರುಷರ ರೂಪದಲ್ಲಿ ದಾನ”ಗಳಾಗಿರುವವರ ತೀರ್ಪಿಗೆ ಮಣಿಯುವುದು ಅತ್ಯುತ್ತಮವಾಗಿದೆ. ಅವರು ನಮಗಿಂತಲೂ ವಾಸ್ತವಿಕರಾಗಿದ್ದು, ಹೆಚ್ಚಿನ ನಿಜತ್ವಗಳನ್ನು ಬಲ್ಲವರಾಗಿರಬಹುದು. ಇಂತಹ ನಿರ್ಣಯಗಳ ವಿಷಯವಾಗಿ ಈ ಸಹೋದರರು ಸಂಕಟಪಡುತ್ತಾರೆ, ಏಕೆಂದರೆ ‘ಯೆಹೋವನಿಗಾಗಿ ನ್ಯಾಯತೀರಿಸುವುದು’ ಒಂದು ಗಂಭೀರವಾದ ಜವಾಬ್ದಾರಿಯಾಗಿದೆ. (2 ಪೂರ್ವಕಾಲವೃತ್ತಾಂತ 19:6) ದೇವರು ‘ಕ್ಷಮಿಸಲು ಸಿದ್ಧನಾಗಿದ್ದಾನೆ’ ಎಂದು ಅವರು ತಿಳಿದಿರುವುದರಿಂದ, ಕರುಣೆಯುಳ್ಳವರಾಗಿರಲು ಎಲ್ಲ ಪ್ರಯತ್ನವನ್ನು ಮಾಡುತ್ತಾರೆ. (ಕೀರ್ತನೆ 86:5) ಅವರು ಸಭೆಯನ್ನು ಶುದ್ಧವಾಗಿಯೂ ಇಡಬೇಕಾಗಿದೆ. ಆದುದರಿಂದಲೇ ಪಶ್ಚಾತ್ತಾಪಪಡದ ತಪ್ಪಿತಸ್ಥರನ್ನು ಬಹಿಷ್ಕರಿಸುವಂತೆ ಬೈಬಲು ನಿರ್ದೇಶಿಸುತ್ತದೆ. (1 ಕೊರಿಂಥ 5:11-13) ಅನೇಕ ವಿದ್ಯಮಾನಗಳಲ್ಲಿ ತಪ್ಪಿತಸ್ಥನು ತಾನೇ ಆ ನಿರ್ಣಯವನ್ನು ಒಪ್ಪಿಕೊಳ್ಳುತ್ತಾನೆ. ತನ್ನ ತಪ್ಪಿನ ಅರಿವನ್ನು ಉಂಟುಮಾಡಲು ಆ ಶಿಕ್ಷೆಯು ಸೂಕ್ತವೆಂದು ಅವನು ಗ್ರಹಿಸಿಕೊಳ್ಳುತ್ತಾನೆ. ಅವನ ಪ್ರಿಯ ಜನರಾದ ನಾವು ಆ ನಿರ್ಣಯಕ್ಕೆ ಅಧೀನರಾಗಿರುವುದಾದರೆ, ಆ ಶಿಕ್ಷೆಯಿಂದ ಪ್ರಯೋಜನ ಪಡೆದುಕೊಳ್ಳುವಂತೆ ನಾವು ಅವನಿಗೆ ಸಹಾಯ ಮಾಡಬಹುದು.—ಇಬ್ರಿಯ 12:11.
“ಅವರಿಗೆ ಅಸಾಧಾರಣ ಪರಿಗಣನೆಗಿಂತಲೂ ಹೆಚ್ಚಿನದ್ದನ್ನು ನೀಡಿರಿ”
14, 15. (ಎ) ಒಂದನೆಯ ಥೆಸಲೊನೀಕ 5:12, 13ಕ್ಕನುಸಾರ, ಹಿರಿಯರು ನಮ್ಮ ಪರಿಗಣನೆಗೆ ಏಕೆ ಅರ್ಹರಾಗಿದ್ದಾರೆ? (ಬಿ) ಹಿರಿಯರು ‘ನಮ್ಮಲ್ಲಿ ಪ್ರಯಾಸಪಟ್ಟು ಕೆಲಸಮಾಡುತ್ತಿದ್ದಾರೆಂದು’ ಏಕೆ ಹೇಳಬಹುದಾಗಿದೆ?
14 “ಪುರುಷರ ರೂಪದಲ್ಲಿ ದಾನ”ಗಳಾಗಿರುವವರಿಗೆ ಪರಿಗಣನೆಯನ್ನು ತೋರಿಸುವ ಮೂಲಕವೂ ನಾವು ನಮ್ಮ ಗಣ್ಯತೆಯನ್ನು ಪ್ರದರ್ಶಿಸಬಲ್ಲೆವು. ಥೆಸಲೊನೀಕದ ಸಭೆಗೆ ಬರೆಯುತ್ತಾ, ಪೌಲನು ಅದರ ಸದಸ್ಯರಿಗೆ ಬುದ್ಧಿವಾದ ನೀಡಿದ್ದು: “ಯಾರು ನಿಮ್ಮಲ್ಲಿ ಪ್ರಯಾಸಪಟ್ಟು ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯಸ್ಥರಾಗಿದ್ದು ನಿಮಗೆ ಬುದ್ಧಿ ಹೇಳುತ್ತಾರೋ ಅವರನ್ನು ಲಕ್ಷಿಸಿ ಅವರ ಕೆಲಸದ ನಿಮಿತ್ತ ಅವರನ್ನು ಪ್ರೀತಿಯಿಂದ ಬಹಳವಾಗಿ ಸನ್ಮಾನಮಾಡಬೇಕೆಂದು [“ಅಸಾಧಾರಣವಾದ ಪರಿಗಣನೆಗಿಂತಲೂ ಹೆಚ್ಚಿನದ್ದನ್ನು ನೀಡಬೇಕೆಂದು,” NW] ನಿಮ್ಮನ್ನು ಬೇಡಿಕೊಳ್ಳುತ್ತೇವೆ.” (1 ಥೆಸಲೊನೀಕ 5:12, 13) “ಪ್ರಯಾಸಪಟ್ಟು” ಎಂಬುದು, ನಮ್ಮ ಪರವಾಗಿ ನಿಸ್ವಾರ್ಥ ಭಾವದಿಂದ ತಮ್ಮನ್ನೇ ನೀಡಿಕೊಳ್ಳುವ ಸಮರ್ಪಿತ ಹಿರಿಯರನ್ನು ಯೋಗ್ಯವಾಗಿ ಚಿತ್ರಿಸುವುದಿಲ್ಲವೊ? ಈ ಪ್ರಿಯ ಸಹೋದರರು ಹೊತ್ತುಕೊಳ್ಳುವ ಭಾರಿ ಹೊರೆಯ ಕುರಿತು ಒಂದು ಕ್ಷಣ ಯೋಚಿಸಿ ನೋಡಿ.
15 ಹೆಚ್ಚಿನ ಸಂದರ್ಭಗಳಲ್ಲಿ ಅವರು ಐಹಿಕವಾಗಿ ಕೆಲಸಮಾಡಿ, ತಮ್ಮ ಕುಟುಂಬಗಳಿಗೆ ಬೇಕಾದದ್ದನ್ನು ಒದಗಿಸುವ ಕುಟುಂಬಸ್ಥರಾಗಿದ್ದಾರೆ. (1 ತಿಮೊಥೆಯ 5:8) ಹಿರಿಯನೊಬ್ಬನಿಗೆ ಮಕ್ಕಳಿರುವುದಾದರೆ, ಈ ಎಳೆಯರಿಗೆ ತಮ್ಮ ತಂದೆಯ ಸಮಯ ಹಾಗೂ ಗಮನದ ಅಗತ್ಯವಿದೆ. ಅವನು, ಅವರ ಶಾಲಾಗೆಲಸದಲ್ಲಿ ನೆರವು ನೀಡಿ, ಹಿತಕರವಾದ ಮನೋರಂಜನೆಯಲ್ಲಿ ತಮ್ಮ ಯೌವನಭರಿತ ಶಕ್ತಿಯನ್ನು ವ್ಯಯಿಸುವಂತೆ ಒಂದಿಷ್ಟು ಸಮಯವನ್ನು ಬದಿಗಿಡಬೇಕಾಗಿದೆ. (ಪ್ರಸಂಗಿ 3:1, 4) ಎಲ್ಲಕ್ಕಿಂತಲೂ ಹೆಚ್ಚಾಗಿ, ಅವನು ತನ್ನ ಕುಟುಂಬದ ಆತ್ಮಿಕ ಅಗತ್ಯಗಳಿಗೆ ಗಮನಸಲ್ಲಿಸುತ್ತಾನೆ, ಕ್ರಮವಾಗಿ ಒಂದು ಕುಟುಂಬ ಬೈಬಲ್ ಅಧ್ಯಯನವನ್ನು ನಡೆಸುತ್ತಾನೆ, ಅವರೊಂದಿಗೆ ಕ್ಷೇತ್ರ ಸೇವೆಯಲ್ಲಿ ಕೆಲಸಮಾಡುತ್ತಾನೆ ಮತ್ತು ಅವರನ್ನು ಕ್ರೈಸ್ತ ಕೂಟಗಳಿಗೆ ಕರೆದೊಯ್ಯುತ್ತಾನೆ. (ಧರ್ಮೋಪದೇಶಕಾಂಡ 6:4-7; ಎಫೆಸ 6:4) ನಮ್ಮಲ್ಲಿ ಹೆಚ್ಚಿನವರಿಗೆ ಸಾಮಾನ್ಯವಾಗಿರುವ ಈ ಜವಾಬ್ದಾರಿಗಳಲ್ಲದೆ, ಕೂಟದ ನೇಮಕಗಳಿಗಾಗಿ ತಯಾರಿಸುವುದು, ಕುರಿಪಾಲನಾ ಭೇಟಿಗಳನ್ನು ಮಾಡುವುದು, ಸಭೆಯ ಆತ್ಮಿಕ ಕ್ಷೇಮದ ಕುರಿತು ಚಿಂತಿಸುವುದು, ಮತ್ತು ಅಗತ್ಯವಾದಲ್ಲಿ ನ್ಯಾಯನಿರ್ಣಾಯಕ (ಜುಡಿಷಿಯಲ್) ಮಂಡಲಿಯ ಕೇಸುಗಳನ್ನು ನಿರ್ವಹಿಸುವುದು ಎಂಬಂತಹ ಇನ್ನೂ ಹೆಚ್ಚಿನ ಕರ್ತವ್ಯಗಳು ಹಿರಿಯರಿಗಿವೆ ಎಂಬುದನ್ನು ನಾವು ಮರೆಯದಿರೋಣ. ಕೆಲವರು ಸರ್ಕಿಟ್ ಸಮ್ಮೇಳನಗಳು, ಜಿಲ್ಲಾ ಅಧಿವೇಶನಗಳು, ರಾಜ್ಯ ಸಭಾಗೃಹದ ನಿರ್ಮಾಣ ಮತ್ತು ಹಾಸ್ಪಿಟಲ್ ಲಿಯೆಸಾನ್ ಕಮಿಟಿಗಳ ಸಂಬಂಧದಲ್ಲಿ ಇನ್ನೂ ಹೆಚ್ಚಿನ ಹೊಣೆಯನ್ನು ಹೊತ್ತಿರುತ್ತಾರೆ. ನಿಜವಾಗಿಯೂ ಈ ಸಹೋದರರು “ಪ್ರಯಾಸಪಟ್ಟು” ಕೆಲಸಮಾಡುತ್ತಾರೆ!
16. ಹಿರಿಯರಿಗೆ ನಾವು ಪರಿಗಣನೆಯನ್ನು ತೋರಿಸಬಹುದಾದ ವಿಧಗಳನ್ನು ವಿವರಿಸಿರಿ.
16 ನಾವು ಹೇಗೆ ಅವರಿಗೆ ಪರಿಗಣನೆಯನ್ನು ತೋರಿಸಸಾಧ್ಯವಿದೆ? ಒಂದು ಬೈಬಲ್ ಜ್ಞಾನೋಕ್ತಿಯು ಹೇಳುವುದು: “ಸಮಯೋಚಿತವಾದ ವಚನದಲ್ಲಿ ಎಷ್ಟೋ ಸ್ವಾರಸ್ಯ!” (ಜ್ಞಾನೋಕ್ತಿ 15:23; 25:11) ನಾವು ಅವರ ಪರಿಶ್ರಮವನ್ನು ಲಘುವಾಗಿ ಎಣಿಸುವುದಿಲ್ಲವೆಂದು ನಮ್ಮ ಯಥಾರ್ಥವಾದ ಗಣ್ಯತೆ ಹಾಗೂ ಉತ್ತೇಜನವು ತೋರಿಸಬಲ್ಲದು. ಅಲ್ಲದೆ, ನಾವು ಅವರಿಂದ ಅಪೇಕ್ಷಿಸುವ ವಿಷಯದಲ್ಲೂ ಮಿತಿಯುಳ್ಳವರಾಗಿರಬೇಕು. ಅದೇ ಸಮಯದಲ್ಲಿ, ಸಹಾಯಕ್ಕಾಗಿ ಅವರನ್ನು ಸಮೀಪಿಸಲು ನಾವು ಎಂದೂ ಹಿಂಜರಿಯಬಾರದು. ಕೆಲವೊಮ್ಮೆ ‘ನಮ್ಮ ಹೃದಯವು ನೊಂದು’ಹೋಗಿರುವಾಗ, ದೇವರ ವಾಕ್ಯವನ್ನು ‘ಬೋಧಿಸಲು ಅರ್ಹರಾಗಿರು’ವವರಿಂದ ಶಾಸ್ತ್ರೀಯ ಉತ್ತೇಜನ, ಮಾರ್ಗದರ್ಶನ, ಇಲ್ಲವೆ ಸಲಹೆಯ ಅಗತ್ಯ ನಮಗಿರಬಹುದು. (ಕೀರ್ತನೆ 55:4; 1 ತಿಮೊಥೆಯ 3:2) ಅದೇ ಸಮಯದಲ್ಲಿ, ಹಿರಿಯನೊಬ್ಬನು ನಿರ್ದಿಷ್ಟವಾದ ಸಮಯವನ್ನು ಮಾತ್ರ ನಮಗೆ ಕೊಡಸಾಧ್ಯವಿದೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ, ಅವನು ತನ್ನ ಸ್ವಂತ ಕುಟುಂಬದ ಇಲ್ಲವೆ ಸಭೆಯಲ್ಲಿರುವ ಇತರರ ಅಗತ್ಯಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಪ್ರಯಾಸಪಟ್ಟು ಕೆಲಸಮಾಡುವ ಈ ಸಹೋದರರಿಗೆ ‘ಅನುಕಂಪ’ವನ್ನು ತೋರಿಸುತ್ತಾ, ನಾವು ಅವರಲ್ಲಿ ಅನುಚಿತವಾದ ಬೇಡಿಕೆಗಳನ್ನು ಮಾಡಲು ಬಯಸಲಾರೆವು. (1 ಪೇತ್ರ 3:8) ಬದಲಿಗೆ, ಅವರು ನಮಗೆ ಯೋಗ್ಯವಾಗಿ ಕೊಡಬಲ್ಲ ಸಮಯ ಹಾಗೂ ಗಮನಕ್ಕಾಗಿ ನಾವು ಗಣ್ಯತೆಯನ್ನು ತೋರಿಸೋಣ.—ಫಿಲಿಪ್ಪಿ 4:5.
17, 18. ಹಿರಿಯರಾಗಿರುವ ಪುರುಷರ ಪತ್ನಿಯರು ಯಾವ ತ್ಯಾಗಗಳನ್ನು ಮಾಡುತ್ತಾರೆ, ಮತ್ತು ಈ ನಂಬಿಗಸ್ತ ಸಹೋದರಿಯರನ್ನು ನಾವು ಲಘುವಾಗಿ ಎಣಿಸುವುದಿಲ್ಲ ಎಂಬುದನ್ನು ಹೇಗೆ ತೋರಿಸಬಲ್ಲೆವು?
17 ಈ ಹಿರಿಯರ ಪತ್ನಿಯರ ಕುರಿತೇನು? ಅವರಿಗೂ ನಾವು ಪರಿಗಣನೆಯನ್ನು ತೋರಿಸಬೇಕಲ್ಲವೊ? ಎಷ್ಟೆಂದರೂ, ಅವರು ಸಭೆಯೊಂದಿಗೆ ತಮ್ಮ ಪತಿಯರನ್ನು ಹಂಚಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ಅನೇಕ ವೇಳೆ ತ್ಯಾಗಗಳನ್ನು ಮಾಡಬೇಕಾಗಿರುತ್ತದೆ. ಕೆಲವೊಮ್ಮೆ, ಹಿರಿಯರು ತಮ್ಮ ಕುಟುಂಬಗಳೊಂದಿಗೆ ಕಳೆಯಬಹುದಾದ ಸಂಜೆಯ ಸಮಯವನ್ನು ಸಭೆಯ ವಿಷಯಗಳಿಗಾಗಿ ಕಳೆಯಬೇಕಾಗುತ್ತದೆ. ಅನೇಕ ಸಭೆಗಳಲ್ಲಿರುವ ನಂಬಿಗಸ್ತ ಕ್ರೈಸ್ತ ಸ್ತ್ರೀಯರು ಇಂತಹ ತ್ಯಾಗಗಳನ್ನು ಮನಃಪೂರ್ವಕವಾಗಿ ಮಾಡುವುದರಿಂದ, ಅವರ ಪತಿಯಂದಿರು ಯೆಹೋವನ ಕುರಿಗಳನ್ನು ಪರಾಮರಿಸಸಾಧ್ಯವಾಗುತ್ತದೆ.—ಹೋಲಿಸಿ 2 ಕೊರಿಂಥ 12:15.
18 ಈ ನಂಬಿಗಸ್ತ ಕ್ರೈಸ್ತ ಸಹೋದರಿಯರನ್ನು ನಾವು ಲಘುವಾಗಿ ಎಣಿಸುವುದಿಲ್ಲವೆಂದು ಹೇಗೆ ತೋರಿಸಸಾಧ್ಯವಿದೆ? ನಿಶ್ಚಯವಾಗಿಯೂ ಅವರ ಪತಿಯಂದಿರಲ್ಲಿ ಅನುಚಿತವಾದ ಬೇಡಿಕೆಗಳನ್ನು ಮಾಡದೆ ಇರುವ ಮೂಲಕವೇ. ಅದರೊಂದಿಗೆ, ಸರಳವಾದ ಗಣ್ಯತೆಯ ಮಾತುಗಳಲ್ಲಿರುವ ಸಾಮರ್ಥ್ಯವನ್ನು ನಾವು ಮರೆಯದಿರೋಣ. ಜ್ಞಾನೋಕ್ತಿ 16:24 ಹೇಳುವುದು: “ಸವಿನುಡಿಯು ಜೇನುಗೂಡು; ಅದು ಆತ್ಮಕ್ಕೆ ಸಿಹಿ, ಎಲುಬುಗಳಿಗೆ ಕ್ಷೇಮ.” ಈ ಕೆಳಗಿನ ಅನುಭವವನ್ನು ಪರಿಗಣಿಸಿರಿ. ಒಂದು ಕ್ರೈಸ್ತ ಕೂಟದ ನಂತರ, ವಿವಾಹಿತ ದಂಪತಿಗಳಿಬ್ಬರು ಒಬ್ಬ ಹಿರಿಯನನ್ನು ಸಮೀಪಿಸಿ ತಮ್ಮ ಹದಿವಯಸ್ಕ ಮಗನೊಂದಿಗೆ ಮಾತಾಡುವಂತೆ ಕೇಳಿಕೊಂಡರು. ಹಿರಿಯನು ಆ ದಂಪತಿಗಳೊಂದಿಗೆ ಮಾತಾಡುತ್ತಿರುವಾಗ, ಅವನ ಪತ್ನಿ ತಾಳ್ಮೆಯಿಂದ ಕಾದಳು. ತರುವಾಯ ಆ ತಾಯಿಯು ಹಿರಿಯನ ಪತ್ನಿಯ ಬಳಿಗೆ ಹೋಗಿ ಹೇಳಿದ್ದು: “ನನ್ನ ಕುಟುಂಬಕ್ಕೆ ನೆರವು ನೀಡಲು ನಿನ್ನ ಪತಿಯು ಕಳೆದ ಸಮಯಕ್ಕಾಗಿ ನಿನಗೆ ತುಂಬ ಉಪಕಾರ.” ಗಣ್ಯತೆಯ ಆ ಸರಳ ಹಾಗೂ ಹಿತವಾದ ಮಾತುಗಳು, ಆ ಹಿರಿಯನ ಪತ್ನಿಯ ಹೃದಯವನ್ನು ಸ್ಪರ್ಶಿಸಿತೆಂಬುದರಲ್ಲಿ ಸಂದೇಹವೇ ಇಲ್ಲ.
19. (ಎ) ಒಂದು ಗುಂಪಿನೋಪಾದಿ ಹಿರಿಯರು ಯಾವ ಉದ್ದೇಶಗಳನ್ನು ನಂಬಿಗಸ್ತಿಕೆಯಿಂದ ಪೂರೈಸುತ್ತಿದ್ದಾರೆ? (ಬಿ) ಏನನ್ನು ಮಾಡಲು ನಾವೆಲ್ಲರೂ ನಿಶ್ಚಯಿಸಿಕೊಳ್ಳಬೇಕು?
19 ಕುರಿಗಳನ್ನು ನೋಡಿಕೊಳ್ಳುವುದಕ್ಕಾಗಿರುವ ಹಿರಿಯರ ಏರ್ಪಾಡು, ಯೆಹೋವನ ‘ಒಳ್ಳೇ ದಾನಗಳಲ್ಲಿ’ ಒಂದಾಗಿದೆ. (ಯಾಕೋಬ 1:17) ಈ ಪುರುಷರು ಪರಿಪೂರ್ಣರಲ್ಲ; ನಮ್ಮೆಲ್ಲರಂತೆಯೇ ಅವರು ತಪ್ಪುಗಳನ್ನು ಮಾಡುತ್ತಾರೆ. (1 ಅರಸು 8:46) ಆದರೂ ಒಂದು ಗುಂಪಿನೋಪಾದಿ, ಲೋಕವ್ಯಾಪಕವಾಗಿರುವ ಸಭಾ ಹಿರಿಯರು ಮಂದೆಯನ್ನು ಸರಿಪಡಿಸುವ, ಕಟ್ಟುವ, ಐಕ್ಯಗೊಳಿಸುವ, ಮತ್ತು ಸಂರಕ್ಷಿಸುವ ಯೆಹೋವನ ಉದ್ದೇಶಗಳನ್ನು ನಂಬಿಗಸ್ತಿಕೆಯಿಂದ ಪೂರೈಸುತ್ತಿದ್ದಾರೆ. ಯೆಹೋವನ ಕುರಿಗಳನ್ನು ಕೋಮಲವಾಗಿ ಪರಾಮರಿಸುತ್ತಾ ಇರಲು ಪ್ರತಿಯೊಬ್ಬ ಹಿರಿಯನು ನಿರ್ಧರಿಸಿಕೊಳ್ಳಲಿ. ಹೀಗೆ, ಅವನು ತನ್ನ ಸಹೋದರರಿಗೆ ಒಂದು ದಾನವಾಗಿ ಇಲ್ಲವೆ ಆಶೀರ್ವಾದವಾಗಿ ಪರಿಣಮಿಸುವನು. ಮತ್ತು ನಾವೆಲ್ಲರೂ ಅವರಿಗೆ ವಿಧೇಯರಾಗಿ ಮತ್ತು ಅಧೀನರಾಗಿ ಇರುವ ಮೂಲಕ ಹಾಗೂ ಅವರ ಪರಿಶ್ರಮಕ್ಕೆ ಪರಿಗಣನೆಯನ್ನು ತೋರಿಸುವ ಮೂಲಕ “ಪುರುಷರ ರೂಪದಲ್ಲಿ ದಾನ”ಗಳಾಗಿರುವವರಿಗೆ ನಮ್ಮ ಗಣ್ಯತೆಯನ್ನು ತೋರಿಸಲು ನಿಶ್ಚಯಿಸಿಕೊಳ್ಳೋಣ. ‘ಆನಂದದಿಂದ ದೇವರನ್ನು ಸೇವಿಸಲು ನಿಮಗೆ ಸಹಾಯ ಮಾಡುವುದೇ ನಮ್ಮ ಕೆಲಸ’ವೆಂದು ಆತನ ಕುರಿಗಳಿಗೆ ಹೇಳುವ ಈ ಪುರುಷರನ್ನು ಯೆಹೋವನು ಪ್ರೀತಿಯಿಂದ ಒದಗಿಸಿದ್ದಕ್ಕಾಗಿ ನಾವೆಷ್ಟು ಕೃತಜ್ಞರಾಗಿರಬೇಕು!
ನೀವು ಹೇಗೆ ಪ್ರತಿಕ್ರಿಯಿಸುವಿರಿ?
◻ ಸಭೆಯನ್ನು ಏಕೆ ಯೋಗ್ಯವಾಗಿ ಒಂದು ದೇಹಕ್ಕೆ ಹೋಲಿಸಸಾಧ್ಯವಿದೆ?
◻ ತಮ್ಮ ಸಹೋದರರು ಯೆಹೋವನನ್ನು ಆನಂದದಿಂದ ಸೇವಿಸುವಂತೆ ಹಿರಿಯರು ಹೇಗೆ ಸಹಾಯ ಮಾಡಬಲ್ಲರು?
◻ ನಾಯಕತ್ವ ವಹಿಸುವವರಿಗೆ ನಾವು ವಿಧೇಯರಾಗಿರುವುದು ಮಾತ್ರವಲ್ಲ ಅಧೀನರಾಗಿಯೂ ಇರಬೇಕು ಏಕೆ?
◻ ಯಾವ ವಿಧಗಳಲ್ಲಿ ನಾವು ಹಿರಿಯರಿಗೆ ಪರಿಗಣನೆಯನ್ನು ತೋರಿಸಸಾಧ್ಯವಿದೆ?
[ಪುಟ 16 ರಲ್ಲಿರುವ ಚಿತ್ರ]
ಹಿರಿಯರೇ, ಇತರರನ್ನು ಅವರ ಹೃತ್ಪೂರ್ವಕ ಪ್ರಯತ್ನಗಳಿಗಾಗಿ ಪ್ರಶಂಸಿಸಿರಿ
[ಪುಟ 17 ರಲ್ಲಿರುವ ಚಿತ್ರ]
ಶುಶ್ರೂಷೆಯಲ್ಲಿ ತಮ್ಮ ಹುರುಪುಳ್ಳ ಮಾದರಿಯ ಮೂಲಕ, ಹಿರಿಯರು ಕುಟುಂಬ ಸದಸ್ಯರಿಗೆ ಮತ್ತು ಇತರರಿಗೆ ಆನಂದದಿಂದ ಸೇವಿಸುವಂತೆ ಸಹಾಯ ಮಾಡಬಲ್ಲರು
[ಪುಟ 18 ರಲ್ಲಿರುವ ಚಿತ್ರ]
ಕಷ್ಟಪಟ್ಟು ಕೆಲಸಮಾಡುವ ನಮ್ಮ ಹಿರಿಯರನ್ನು ನಾವು ಗಣ್ಯಮಾಡುತ್ತೇವೆ!