ಕೊರಿಂಥದವರಿಗೆ ಬರೆದ ಎರಡನೇ ಪತ್ರ
12 ಹೆಮ್ಮೆಪಡೋದ್ರಿಂದ ನನಗೇನೂ ಪ್ರಯೋಜನ ಇಲ್ಲ, ಆದ್ರೂ ನಾನು ಹೆಮ್ಮೆಪಡ್ಲೇಬೇಕು. ಹಾಗಾಗಿ ಪ್ರಭು ನನಗೆ ತೋರಿಸಿದ ಅದ್ಭುತ ದರ್ಶನಗಳ+ ಬಗ್ಗೆ ಮತ್ತು ನನಗೆ ಹೇಳಿದ ಸಂದೇಶಗಳ+ ಬಗ್ಗೆ ಹೇಳ್ತೀನಿ. 2 ಕ್ರಿಸ್ತನ ಜೊತೆ ಒಂದಾಗಿರೋ ಒಬ್ಬ ಮನುಷ್ಯ ನಂಗೊತ್ತು. 14 ವರ್ಷಗಳ ಹಿಂದೆ ಅವನನ್ನ ಮೂರನೇ ಸ್ವರ್ಗಕ್ಕೆ ಎತ್ಕೊಂಡು ಹೋಗಲಾಯ್ತು. ಅವನನ್ನ ಎತ್ಕೊಂಡು ಹೋಗಿದ್ದು ದೇಹ ಸಮೇತನಾ ಇಲ್ಲಾ ದೇಹ ಬಿಟ್ಟಾ ಅಂತ ನಂಗೊತ್ತಿಲ್ಲ, ದೇವರಿಗೇ ಗೊತ್ತು. 3 ಹೌದು, ಇಂಥ ಒಬ್ಬ ಮನುಷ್ಯ ನಂಗೊತ್ತು. ಅವನನ್ನ ಪರದೈಸಿಗೆ ಎತ್ಕೊಂಡು ಹೋಗಲಾಯ್ತು. ಅವನನ್ನ ಎತ್ಕೊಂಡು ಹೋಗಿದ್ದು ದೇಹ ಸಮೇತನಾ ಇಲ್ಲಾ ದೇಹ ಬಿಟ್ಟಾ ಅಂತ ನಂಗೊತ್ತಿಲ್ಲ, ದೇವರಿಗೇ ಗೊತ್ತು. 4 ಆ ಮನುಷ್ಯ ಪರದೈಸಲ್ಲಿ ಇದ್ದಾಗ ಯಾರೂ ಹೇಳಬಾರದ ಮತ್ತು ಮಾತಾಡೋಕೆ ಅನುಮತಿ ಇಲ್ಲದ ಮಾತುಗಳನ್ನ ಕೇಳಿಸ್ಕೊಂಡ. 5 ಅಂಥವನ ಬಗ್ಗೆ ನಾನು ಹೆಮ್ಮೆಪಡ್ತೀನಿ. ಆದ್ರೆ ನನ್ನ ಬಗ್ಗೆ ಹೇಳೋದಾದ್ರೆ, ನನ್ನ ಬಲಹೀನತೆಗಳನ್ನ ಬಿಟ್ಟು ಬೇರೆ ಯಾವ ವಿಷ್ಯದಲ್ಲೂ ನಾನು ನನ್ನ ಬಗ್ಗೆ ಹೆಮ್ಮೆಪಡಲ್ಲ. 6 ನಾನು ಹೆಮ್ಮೆಪಡೋಕೆ ಬಯಸಿದ್ರೂ ಮೂರ್ಖನಲ್ಲ, ಯಾಕಂದ್ರೆ ನಾನು ಸತ್ಯಾನೇ ಹೇಳ್ತೀನಿ. ಹಾಗಂತ ನಾನು ಹೆಮ್ಮೆಪಡಲ್ಲ, ಯಾಕಂದ್ರೆ ನನ್ನಲ್ಲಿ ನೋಡಿದ ಮತ್ತು ನನ್ನಿಂದ ಕೇಳಿಸ್ಕೊಂಡ ವಿಷ್ಯಗಳಿಗಿಂತ ನಾನೇನೋ ಜಾಸ್ತಿ ಮಾಡಿದ್ದೀನಿ ಅನ್ನೋ ಅಭಿಪ್ರಾಯ ಯಾರಲ್ಲೂ ಬರಬಾರದು. 7 ವಿಶೇಷ ರಹಸ್ಯಗಳು ನನಗೆ ಗೊತ್ತು ಅನ್ನೋ ಕಾರಣಕ್ಕೆ ಯಾರೂ ನನ್ನನ್ನ ದೊಡ್ಡ ವ್ಯಕ್ತಿ ಅಂತ ನೆನಸಬಾರದು.
ನಾನು ಅತಿಯಾಗಿ ಕೊಚ್ಕೊಳ್ಳಬಾರದು ಅಂತ ನನ್ನ ದೇಹದಲ್ಲಿ ಒಂದು ಮುಳ್ಳು ಚುಚ್ತಾ ಇದೆ.+ ನನ್ನನ್ನ ಹೊಡೀತಾ ಇರೋಕೆ ಸೈತಾನ ಕಳಿಸಿದ ಒಬ್ಬ ದೂತನ ತರ ಅದು ಇದೆ. ನಾನು ಅಹಂಕಾರ ಪಡಬಾರದು ಅಂತ ಹೀಗಾಗಿದೆ. 8 ಈ ಮುಳ್ಳನ್ನ ನನ್ನಿಂದ ತೆಗೆದುಹಾಕು ಅಂತ ನಾನು ಮೂರು ಸಲ ದೇವರ ಹತ್ರ ತುಂಬ ಬೇಡ್ಕೊಂಡೆ. 9 ಆದ್ರೆ ಆತನು ನನಗೆ “ನನ್ನ ಅಪಾರ ಕೃಪೆನೇ ನಿನಗೆ ಸಾಕು. ನಿಂಗೆ ಬಲ ಕಮ್ಮಿ ಆದಾಗ ನಾನು ನಿನಗೆ ಪೂರ್ತಿ ಬಲ ಕೊಡ್ತೀನಿ” ಅಂದನು.+ ಹಾಗಾಗಿ ನಾನು ನನ್ನ ಬಲಹೀನತೆಗಳ ಬಗ್ಗೆ ತುಂಬ ಖುಷಿಯಿಂದ ಹೆಮ್ಮೆಪಡ್ತೀನಿ. ಡೇರೆ ತರ ಕ್ರಿಸ್ತನ ಬಲ ನನ್ನ ಮೇಲೆ ಇದ್ಯಲ್ವಾ. 10 ನನ್ನಲ್ಲಿ ಬಲಹೀನತೆಗಳು ಇದ್ರೂ, ಅವಮಾನ ಆದ್ರೂ, ಕೊರತೆ ಹಿಂಸೆ ಕಷ್ಟಗಳು ಇದ್ರೂ ಕ್ರಿಸ್ತನಿಗಾಗಿ ಖುಷಿಪಡ್ತೀನಿ. ಯಾಕಂದ್ರೆ ನಾನು ಬಲಹೀನನಾಗಿ ಇರುವಾಗ್ಲೇ ಬಲಶಾಲಿ ಆಗ್ತೀನಿ.+
11 ನಾನು ಬುದ್ಧಿ ಇಲ್ಲದವನ ತರ ಮಾತಾಡ್ತಾ ಇದ್ದೀನಿ. ನಿಮ್ಮಿಂದಾನೇ ನಾನು ಈ ತರ ಮಾತಾಡ್ತಿದ್ದೀನಿ. ನೀವು ನನ್ನ ಪರವಾಗಿ ಮಾತಾಡಿದ್ರೆ ನಾನು ಹೀಗೆ ಮಾತಾಡ್ತಿರಲಿಲ್ಲ. ನಿಮ್ಮ ದೃಷ್ಟಿಯಲ್ಲಿ ನಾನು ಏನೂ ಅಲ್ಲದಿದ್ರೂ ನಿಮ್ಮ ಆ ಮಹಾ ಅಪೊಸ್ತಲರಿಗಿಂತ ನಾನು ಯಾವುದ್ರಲ್ಲೂ ಕಮ್ಮಿ ಇಲ್ಲ.+ 12 ನಾನು ನಿಮ್ಮ ಜೊತೆ ತುಂಬ ತಾಳ್ಮೆಯಿಂದ ಇದ್ದೆ,+ ಅದ್ಭುತಗಳನ್ನ ಆಶ್ಚರ್ಯಕರ ಕೆಲಸಗಳನ್ನ ಮಾಡ್ದೆ,+ ಇವೇ ನಾನು ಅಪೊಸ್ತಲ ಅನ್ನೋದಕ್ಕೆ ಸಾಕ್ಷಿ. 13 ನಾನು ನಿಮಗೆ ಭಾರವಾಗಿ ಇರಲಿಲ್ಲ. ಇದೊಂದು ವಿಷ್ಯ ಬಿಟ್ರೆ ಬೇರೆ ಯಾವುದ್ರಲ್ಲಿ ನೀವು ಬೇರೆ ಸಭೆಗಳಿಗಿಂತ ಕಮ್ಮಿ ಆಗಿದ್ದೀರಾ?+ ನಾನು ಮಾಡಿದ ಈ ತಪ್ಪನ್ನ ದಯವಿಟ್ಟು ಕ್ಷಮಿಸಿ.
14 ನೋಡಿ, ನಾನು ನಿಮ್ಮ ಹತ್ರ ಬರೋಕೆ ಸಿದ್ಧವಾಗಿ ಇರೋದು ಇದು ಮೂರನೇ ಸಲ. ಈ ಸಲನೂ ನಾನು ನಿಮಗೆ ಭಾರವಾಗಿ ಇರಲ್ಲ. ಯಾಕಂದ್ರೆ ನನಗೆ ಬೇಕಾಗಿರೋದು ನೀವು, ನಿಮ್ಮ ಸೊತ್ತಲ್ಲ.+ ಹೆತ್ತವರು ಮಕ್ಕಳಿಗಾಗಿ+ ಆಸ್ತಿ ಕೂಡಿಸಿ ಇಡಬೇಕೇ ಹೊರತು ಮಕ್ಕಳು ಹೆತ್ತವ್ರಿಗಾಗಿ ಅಲ್ಲ. 15 ನಾನು ನನ್ನಲ್ಲಿ ಇರೋದನ್ನೆಲ್ಲ ನಿಮಗೋಸ್ಕರ ಖುಷಿಯಿಂದ ಕೊಡ್ತೀನಿ, ಬೇಕಾದ್ರೆ ನನ್ನ ಜೀವನೂ ಕೊಡ್ತೀನಿ.+ ನಾನು ನಿಮ್ಮನ್ನ ಇಷ್ಟೊಂದು ಪ್ರೀತಿಸ್ತಾ ಇರೋದಾದ್ರೂ ನಿಮ್ಮಿಂದ ನನಗೆ ಕಮ್ಮಿ ಪ್ರೀತಿ ಸಿಗಬೇಕಾ? 16 ನಾನು ನಿಮಗೆ ಭಾರವಾಗಿ ಇರದಿದ್ರೂ+ ನಾನೊಬ್ಬ ಕುತಂತ್ರಿ, ನಿಮ್ಮನ್ನ ಮೋಸದಿಂದ ಹಿಡ್ಕೊಂಡಿದ್ದೀನಿ ಅಂತ ಹೇಳ್ತೀರ. 17 ನಾನು ನಿಮ್ಮ ಹತ್ರ ಕಳಿಸಿದವ್ರಲ್ಲಿ ಯಾರ ಮೂಲಕವಾದ್ರೂ ನಿಮ್ಮಿಂದ ಲಾಭ ಪಡಿಯೋಕೆ ಪ್ರಯತ್ನ ಮಾಡಿದ್ನಾ? 18 ನಾನು ತೀತನನ್ನ ಪ್ರೋತ್ಸಾಹಿಸಿ ಅವನ ಜೊತೆ ಒಬ್ಬ ಸಹೋದರನನ್ನ ನಿಮ್ಮ ಹತ್ರ ಕಳಿಸ್ದೆ. ತೀತ ನಿಮ್ಮಿಂದ ಲಾಭ ಪಡಿಯೋಕೆ ಪ್ರಯತ್ನಿಸಿದ್ನಾ?+ ಖಂಡಿತ ಇಲ್ಲ. ನಮ್ಮಿಬ್ರಲ್ಲೂ ಒಂದೇ ಮನೋಭಾವ ಇತ್ತಲ್ವಾ? ನಾವು ಒಂದೇ ರೀತಿ ನಡ್ಕೊಂಡ್ವಿ ತಾನೇ?
19 ನಾವು ನಮ್ಮ ಬಗ್ಗೆನೇ ವಾದ ಮಾಡ್ತಿದ್ವಿ ಅಂತ ನೀವು ಇಲ್ಲಿ ತನಕ ಅಂದ್ಕೊಂಡಿದ್ರಿ. ಆದ್ರೆ ಅದು ನಿಜ ಅಲ್ಲ. ಕ್ರಿಸ್ತನ ಜೊತೆ ಒಂದಾಗಿರೋ ನಾವು ದೇವರ ಮುಂದೆ ಸತ್ಯಾನೇ ಹೇಳ್ತಿದ್ದೀವಿ. ಆದ್ರೆ ಪ್ರಿಯರೇ, ನಾವು ಮಾಡೋದೆಲ್ಲ ನಿಮ್ಮಲ್ಲಿ ಬಲ ತುಂಬೋಕೇ. 20 ನಾನು ನಿಮ್ಮ ಹತ್ರ ಬರುವಾಗ ನನಗೆ ಇಷ್ಟವಾಗೋ ಹಾಗೆ ನೀವು ಇರಲ್ವೇನೋ ಮತ್ತು ನಿಮಗೆ ಇಷ್ಟವಾಗೋ ಹಾಗೆ ನಾನು ಇರಲ್ವೇನೋ, ನಿಮ್ಮಲ್ಲಿ ಇನ್ನೂ ಜಗಳ, ಹೊಟ್ಟೆಕಿಚ್ಚು, ಕೋಪ, ಆವೇಶ, ಒಡಕು, ಚಾಡಿಹೇಳೋದು, ಕಿವಿ ಊದೋದು,* ಅಹಂಕಾರ, ಗಲಿಬಿಲಿ ಇರುತ್ತೇನೋ ಅಂತ ಭಯ ಆಗ್ತಿದೆ. 21 ಅಷ್ಟೇ ಅಲ್ಲ, ನನ್ನ ದೇವರು ನಿಮ್ಮ ಮುಂದೆ ನನ್ನನ್ನ ತಲೆತಗ್ಗಿಸೋ ತರ ಎಲ್ಲಿ ಮಾಡಿಬಿಡ್ತಾನೋ, ಈ ಮುಂಚೆ ಅಶುದ್ಧ ನಡತೆ, ಲೈಂಗಿಕ ಅನೈತಿಕತೆ* ಮತ್ತು ನಾಚಿಕೆಗೆಟ್ಟ ನಡತೆ* ಪ್ರಕಾರ ನಡ್ಕೊಂಡು ಪಾಪಮಾಡಿದ್ರೂ ಪಶ್ಚಾತ್ತಾಪಪಡದೆ ಇರೋ ತುಂಬ ಜನ್ರಿಗಾಗಿ ನಾನು ದುಃಖಪಡೋ ಪರಿಸ್ಥಿತಿ ಬರುತ್ತೇನೋ ಅಂತ ಚಿಂತೆ ಆಗ್ತಿದೆ.