“ದೇವರ ವಾಕ್ಯವು . . . ಕಾರ್ಯಸಾಧಕವಾದದ್ದು”
1 “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು” ಎಂದು ಅಪೊಸ್ತಲ ಪೌಲನು ಬರೆದನು. (ಇಬ್ರಿ. 4:12) ಅವನು ಹೇಳಿದ್ದರ ಅರ್ಥವೇನಾಗಿತ್ತು? ಬೈಬಲಿನಲ್ಲಿ ಕಂಡುಬರುವ ದೇವರ ವಾಕ್ಯ ಅಥವಾ ಸಂದೇಶವು, ಜನರ ಮನಸ್ಸುಗಳ ಮೇಲೆ ಬಲವಾದ ಪ್ರಭಾವವನ್ನು ಬೀರಸಾಧ್ಯವಿದೆ. ಬೈಬಲಿನಲ್ಲಿ ಒಳಗೂಡಿರುವ ವಿವೇಕವು, ಒಬ್ಬ ವ್ಯಕ್ತಿಯ ಜೀವನವನ್ನು ಉತ್ತಮಗೊಳಿಸುವ ಶಕ್ತಿಯನ್ನು ಹೊಂದಿದೆ. ಅದು ನೀಡುವ ಸಾಂತ್ವನ ಹಾಗೂ ನಿರೀಕ್ಷೆಯು, ಮಾನವರನ್ನು ಜೀವದಾತನಾದ ಯೆಹೋವ ದೇವರ ಕಡೆಗೆ ಸೆಳೆಯುತ್ತದೆ. ಅದರಲ್ಲಿರುವ ಸಂದೇಶವು, ಪ್ರಾಮಾಣಿಕ ಹೃದಯದ ಜನರು ನಿತ್ಯಜೀವದ ಮಾರ್ಗದಲ್ಲಿ ನಡೆಯುವಂತೆ ಮಾಡಬಲ್ಲದು. ಆದರೂ, ಈ ಪರಿಣಾಮಗಳನ್ನು ಪಡೆಯಬೇಕಾದರೆ, ಇತರರಿಗೆ ಸಾಕ್ಷಿ ನೀಡುವಾಗ ನಾವು ಬೈಬಲನ್ನು ಉಪಯೋಗಿಸುವ ಅಗತ್ಯವಿದೆ.
2 ಸಾಕ್ಷಿಕಾರ್ಯದಲ್ಲಿ ಸಂದರ್ಭ ಸಿಕ್ಕಾಗೆಲ್ಲ ಒಂದು ವಚನವನ್ನು ಓದಿರಿ: ಅನೇಕ ಪ್ರಚಾರಕರು ಮನೆಯಿಂದ ಮನೆಯ ಸೇವೆಯನ್ನು ಮಾಡುತ್ತಿರುವಾಗ ಬೈಬಲನ್ನು ಉಪಯೋಗಿಸುವುದನ್ನು ನಿಲ್ಲಿಸಿಬಿಟ್ಟಿರುವಂತೆ ತೋರುತ್ತದೆ. ನೀವು ಸಹ ಬೈಬಲನ್ನು ಉಪಯೋಗಿಸುವುದನ್ನು ನಿಲ್ಲಿಸಿಬಿಟ್ಟಿದ್ದೀರೋ? ಇಂದು ಅನೇಕರಿಗೆ ದೀರ್ಘವಾದ ಸಂಭಾಷಣೆಯಲ್ಲಿ ಒಳಗೂಡಲು ಸಮಯ ಸಿಗದಿರುವ ಕಾರಣ, ನೀವು ಸಹ ಸಾಹಿತ್ಯವನ್ನು ಮಾತ್ರ ನೀಡುವ ಅಥವಾ ಒಂದು ಶಾಸ್ತ್ರವಚನವನ್ನು ಬಾಯಿಮಾತಿನಲ್ಲಿ ಹೇಳುವ ರೂಢಿಗೆ ಒಗ್ಗಿಹೋಗಿರಬಹುದು. ಆದರೆ, ಸುವಾರ್ತೆಯನ್ನು ಸಾರುವಾಗ, ಬೈಬಲಿನಿಂದ ಕಡಿಮೆಪಕ್ಷ ಒಂದು ವಚನವನ್ನಾದರೂ ಓದುವ ಪ್ರಯತ್ನವನ್ನು ಮಾಡುವಂತೆ ಎಲ್ಲ ಪ್ರಚಾರಕರನ್ನು ನಾವು ಪ್ರೋತ್ಸಾಹಿಸುತ್ತೇವೆ. ಇದರಿಂದ, ನಮ್ಮ ಸಂದೇಶವು ನಿಜವಾಗಿಯೂ ದೇವರ ವಾಕ್ಯದ ಮೇಲಾಧಾರಿತವಾಗಿದೆ ಎಂಬುದು ಮನೆಯವರಿಗೆ ಗೊತ್ತಾಗುವುದು.
3 ತುಂಬ ಕಡಿಮೆ ಜನರಿಗೆ ಬೈಬಲನ್ನು ಓದುವ ರೂಢಿಯಿರುವುದಾದರೂ, ಸಾಮಾನ್ಯವಾಗಿ ಎಲ್ಲರೂ ಬೈಬಲನ್ನು ಗೌರವಿಸುತ್ತಾರೆ. ತುಂಬ ಕಾರ್ಯಮಗ್ನರಾಗಿರುವ ಜನರು ಸಹ, ದೇವರ ವಾಕ್ಯದಿಂದ ನೇರವಾಗಿ ಓದಲ್ಪಡುವ ಒಂದು ಸಂದೇಶಕ್ಕೆ ಕಿವಿಗೊಡಲಿಕ್ಕಾಗಿ ಒಂದೆರಡು ನಿಮಿಷಗಳಷ್ಟು ಸಮಯವನ್ನು ಕೊಡುತ್ತಾರೆ. ಸೂಕ್ತವಾದ ಒಂದು ಶಾಸ್ತ್ರವಚನವನ್ನು ಹುರುಪಿನಿಂದ ಓದಿ ಸಂಕ್ಷಿಪ್ತವಾಗಿ ವಿವರಿಸುವಾಗ, ಯೆಹೋವನ ವಾಕ್ಯದ ಶಕ್ತಿಯು ಕಿವಿಗೊಡುವವನ ಮೇಲೆ ಒಳ್ಳೆಯ ಪ್ರಭಾವವನ್ನು ಬೀರಸಾಧ್ಯವಿದೆ. ಆದರೆ ನಿಮ್ಮ ಆರಂಭದ ಮಾತುಗಳನ್ನೂ ಬೈಬಲಿನಿಂದ ಒಂದು ವಚನ ಓದುವುದನ್ನೂ ನೀವು ಹೇಗೆ ಒಂದಕ್ಕೊಂದು ಸಂಬಂಧಿಸುತ್ತೀರಿ?
4 ಪತ್ರಿಕಾ ಸೇವೆಯನ್ನು ಮಾಡುವಾಗ ಇದನ್ನು ಪ್ರಯತ್ನಿಸಿ ನೋಡಿ: ಒಬ್ಬ ಸಂಚರಣ ಮೇಲ್ವಿಚಾರಕನು, ಪತ್ರಿಕಾ ಸೇವೆಯನ್ನು ಮಾಡುವಾಗ ಶಾಸ್ತ್ರವಚನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುತ್ತಾನೆ. ಅವನು ತನ್ನ ಜೇಬಿನಲ್ಲಿ ಒಂದು ಚಿಕ್ಕ ಬೈಬಲನ್ನು ಕೊಂಡೊಯ್ಯುತ್ತಾನೆ. ಮೊದಲು ಪತ್ರಿಕೆಗಳನ್ನು ಕೊಡುತ್ತಾನೆ ಮತ್ತು ಆ ಲೇಖನದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತಾನೆ. ತದನಂತರ, ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಬೈಬಲನ್ನು ತೆರೆದು, ಆ ಲೇಖನಕ್ಕೆ ಹೊಂದಿಕೆಯಲ್ಲಿರುವ ಒಂದು ವಚನವನ್ನು ಓದುತ್ತಾನೆ. ಇದನ್ನು ಮಾಡಲಿಕ್ಕಾಗಿ, “ಈ ಉತ್ತೇಜನದಾಯಕ ವಾಗ್ದಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಬಹುದು. ತದನಂತರ ಸೂಕ್ತವಾದ ಶಾಸ್ತ್ರವಚನವನ್ನು ಓದಸಾಧ್ಯವಿದೆ.
5 ನಿಮ್ಮ ಸಂದೇಶಕ್ಕೆ ಕಿವಿಗೊಡುವ ಪ್ರತಿಯೊಬ್ಬ ವ್ಯಕ್ತಿಗೆ ಬೈಬಲಿನ ಒಂದೆರಡು ವಚನಗಳನ್ನು ತೆರೆದು ತೋರಿಸುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿಕೊಳ್ಳಿರಿ. ಅದರ ಪ್ರಚೋದನದಾಯಕ ಶಕ್ತಿಯು, ಹೆಚ್ಚೆಚ್ಚು ಜನರು ದೇವರ ಕಡೆಗೆ ಆಕರ್ಷಿತರಾಗುವಂತೆ ದಾರಿಯನ್ನು ತೆರೆಯಸಾಧ್ಯವಿದೆ.—ಯೋಹಾ. 6:44.