ಯೆಹೋವನ ವಾಗ್ದಾನಗಳಲ್ಲಿ ನಂಬಿಕೆ ಇಡಿ
‘ನಂಬಿಕೆಯು ಕಣ್ಣಿಗೆ ಕಾಣದಿರುವ ನಿಜತ್ವಗಳ ಪ್ರತ್ಯಕ್ಷ ನಿದರ್ಶನ [ಅಂದರೆ, ಮನಗಾಣಿಸುವ ರುಜುವಾತು] ಆಗಿದೆ.’—ಇಬ್ರಿ. 11:1.
1. ನಮ್ಮ ನಂಬಿಕೆಯ ಬಗ್ಗೆ ನಮಗೆ ಹೇಗನಿಸಬೇಕು?
ಎಲ್ಲರಿಗೂ ನಂಬಿಕೆ ಎನ್ನುವುದು ಇರುವುದಿಲ್ಲ. (2 ಥೆಸ. 3:2) ಆದರೆ ಯೆಹೋವನು ತನ್ನ ಎಲ್ಲಾ ಆರಾಧಕರಿಗೆ ನಂಬಿಕೆಯನ್ನು ಕೊಡುತ್ತಾನೆ. (ರೋಮ. 12:3; ಗಲಾ. 5:22) ಯೆಹೋವನು ಕೊಡುವ ಆ ನಂಬಿಕೆಗೆ ನಾವೆಷ್ಟು ಆಭಾರಿಗಳಲ್ಲವೇ.
2, 3. (ಎ) ನಮ್ಮಲ್ಲಿ ನಂಬಿಕೆ ಇರುವುದಾದರೆ ನಮಗೇನು ಪ್ರಯೋಜನ? (ಬಿ) ಯಾವ ಪ್ರಶ್ನೆಗಳನ್ನು ನಾವೀಗ ನೋಡಲಿದ್ದೇವೆ?
2 ಯೆಹೋವನು ನಮಗಾಗಿ ತನ್ನ ಪ್ರಿಯ ಪುತ್ರನಾದ ಯೇಸುವನ್ನೇ ಕೊಟ್ಟನು. ಯಾರು ಯೇಸುವಿನ ಮೇಲೆ ನಂಬಿಕೆ ಇಡುತ್ತಾರೋ ಅವರ ಪಾಪಕ್ಕೆ ಕ್ಷಮೆ ಸಿಗುತ್ತದೆ. ಇದರಿಂದಾಗಿ ಮನುಷ್ಯರು ದೇವರ ಸ್ನೇಹಿತರಾಗಲು ಮತ್ತು ಸದಾಕಾಲ ಬದುಕಲು ಸಾಧ್ಯವಾಗಿದೆ. (ಯೋಹಾ. 6:44, 65; ರೋಮ. 6:23) ಯೆಹೋವನಿಗೆ ನಮ್ಮ ಮೇಲೆ ಎಷ್ಟು ದಯೆ ಇದೆ ಎಂದು ಇದರಿಂದ ಗೊತ್ತಾಗುತ್ತದೆ. ನಾವು ಪಾಪಿಗಳು ಮತ್ತು ಮರಣಕ್ಕೆ ಯೋಗ್ಯರು ಎಂದು ಯೆಹೋವನಿಗೆ ಗೊತ್ತಿರುವುದಾದರೂ ನಮ್ಮಿಂದ ಒಳ್ಳೇದನ್ನು ಮಾಡಲಾಗುತ್ತದೆ ಎಂಬ ಭರವಸೆ ಆತನಿಗಿದೆ. (ಕೀರ್ತ. 103:10) ಯೇಸುವಿನ ಕುರಿತು, ಆತನು ಮಾಡಿದ ತ್ಯಾಗದ ಕುರಿತು ಕಲಿಯಲು ದೇವರು ನಮಗೆ ಸಹಾಯಮಾಡಿದ್ದಾನೆ. ಯಾವಾಗ ನಾವು ಯೇಸುವಿನಲ್ಲಿ ನಂಬಿಕೆ ಇಟ್ಟು ಆತನನ್ನು ಹಿಂಬಾಲಿಸುತ್ತೇವೊ ಆಗ ನಾವು ನಿತ್ಯಜೀವಕ್ಕಾಗಿ ಎದುರುನೋಡಬಹುದು.—1 ಯೋಹಾನ 4:9,10 ಓದಿ.
3 ನಂಬಿಕೆಯ ನಿಜವಾದ ಅರ್ಥವೇನು? ದೇವರು ನಮಗಾಗಿ ಏನೆಲ್ಲಾ ಮಾಡಿದ್ದಾನೆ ಮತ್ತು ಭವಿಷ್ಯದಲ್ಲಿ ಏನು ಮಾಡಲಿದ್ದಾನೆ ಎಂದು ತಿಳಿದಿದ್ದೇವೆ ಎಂದ ಮಾತ್ರಕ್ಕೆ ನಮಗೆ ನಂಬಿಕೆ ಇದೆ ಎಂದು ಅರ್ಥನಾ? ಅಥವಾ ಇನ್ನು ಏನಾದರೂ ಮಾಡಬೇಕಾ ನೋಡೋಣ ಬನ್ನಿ.
‘ಹೃದಯದಲ್ಲಿ ನಂಬಿಕೆ ಇರಲಿ’
4. ನಮಗೆ ನಂಬಿಕೆ ಇದ್ದರೆ ನಾವೇನು ಮಾಡುತ್ತೇವೆ?
4 ಯೆಹೋವನಲ್ಲಿ, ಯೇಸುವಿನಲ್ಲಿ ನಮಗೆ ನಂಬಿಕೆ ಇದ್ದರೆ ಅವರು ನಮಗಾಗಿ ಈಗಾಗಲೇ ಏನು ಮಾಡಿದ್ದಾರೆ ಮತ್ತು ಮುಂದಕ್ಕೆ ಏನು ಮಾಡಲಿದ್ದಾರೆಂದು ತಿಳಿದುಕೊಂಡು ಸುಮ್ಮನಾಗುವುದಿಲ್ಲ. ಬದಲಿಗೆ ಅವರು ನಮಗೆ ಹೇಗೆ ಜೀವಿಸಬೇಕೆಂದು ಕಲಿಸಿದ್ದಾರೋ ಹಾಗೇ ಜೀವಿಸಲು ನಾವು ಬಯಸುತ್ತೇವೆ. ಅವರ ಬಗ್ಗೆ ಬೇರೆಯವರಿಗೆ ತಿಳಿಸಲು ತುದಿಗಾಲಲ್ಲಿ ನಿಂತಿರುತ್ತೇವೆ. ಅಪೊಸ್ತಲ ಪೌಲ ಹೀಗಂದನು: “ಕ್ರಿಸ್ತನೇ ಕರ್ತನೆಂದು ‘ನಿಮ್ಮ ಬಾಯಿಂದಲೇ ಆ ವಾಕ್ಯವನ್ನು’ ಬಹಿರಂಗವಾಗಿ ಪ್ರಕಟಿಸಿ, ದೇವರು ಅವನನ್ನು ಸತ್ತವರೊಳಗಿಂದ ಎಬ್ಬಿಸಿದನೆಂದು ನಿಮ್ಮ ಹೃದಯದಲ್ಲಿ ನಂಬಿಕೆಯಿಡುವುದಾದರೆ ನೀವು ರಕ್ಷಿಸಲ್ಪಡುವಿರಿ. ಏಕೆಂದರೆ ಒಬ್ಬನು ನೀತಿಗಾಗಿ ಹೃದಯದಿಂದ ನಂಬಿಕೆಯನ್ನು ಅಭ್ಯಾಸಿಸುತ್ತಾನೆ; ಆದರೆ ರಕ್ಷಣೆಗಾಗಿ ಬಾಯಿಂದ ಬಹಿರಂಗವಾಗಿ ಪ್ರಕಟಿಸುತ್ತಾನೆ.”—ರೋಮ. 10:9, 10; 2 ಕೊರಿಂ. 4:13.
5. (ಎ) ನಂಬಿಕೆ ಯಾಕೆ ಪ್ರಾಮುಖ್ಯ? (ಬಿ) ಬಲವಾದ ನಂಬಿಕೆಗಾಗಿ ಏನು ಮಾಡಬೇಕು? ಒಂದು ಉದಾಹರಣೆ ಕೊಡಿ.
5 ಹೊಸ ಲೋಕದಲ್ಲಿ ನಿತ್ಯಜೀವವನ್ನು ಆನಂದಿಸಬೇಕಾದರೆ ನಮಗೆ ನಂಬಿಕೆ ಇರಲೇಬೇಕು ಮತ್ತು ಅದನ್ನು ಬಲಪಡಿಸುತ್ತಾ ಇರಬೇಕು. ನಂಬಿಕೆ ಒಂದು ಗಿಡದಂತೆ. ಗಿಡ ಆರೋಗ್ಯವಾಗಿ ಬೆಳೆಯುತ್ತಾ ಇರಬೇಕಾದರೆ ಅದಕ್ಕೆ ನೀರು ಹಾಕಬೇಕು. ಅದಕ್ಕೆ ಸಾಕಷ್ಟು ನೀರು ಹಾಕದಿದ್ದರೆ ಒಣಗಿ, ಸತ್ತು ಹೋಗುತ್ತದೆ. ಅದೇ ರೀತಿಯಲ್ಲಿ ನಮ್ಮ ನಂಬಿಕೆಯು ಸಹ ‘ಸ್ವಸ್ಥವಾಗಿದ್ದು’ ಬಲವಾಗಿ “ಬೆಳೆಯುತ್ತಾ” ಇದೆಯೋ ಇಲ್ಲವೋ ಎಂದು ನಾವು ಖಚಿತಪಡಿಸಿಕೊಳ್ಳಬೇಕು.—ತೀತ 2:2; 2 ಥೆಸ. 1:3; ಲೂಕ 22:32; ಇಬ್ರಿ. 3:12.
ನಂಬಿಕೆಯ ಅರ್ಥವನ್ನು ಬೈಬಲ್ ವಿವರಿಸುತ್ತದೆ
6. ನಂಬಿಕೆಯ ಅರ್ಥವನ್ನು ಯಾವ ಎರಡು ವಿಧಗಳಲ್ಲಿ ಇಬ್ರಿಯ 11:1 ವಿವರಿಸುತ್ತದೆ?
6 ನಂಬಿಕೆಯ ಅರ್ಥವನ್ನು ಇಬ್ರಿಯ 11:1 (ಓದಿ) ಎರಡು ವಿಧಗಳಲ್ಲಿ ವಿವರಿಸುತ್ತದೆ. (1) ನಂಬಿಕೆಯು “ನಿರೀಕ್ಷಿಸುವ ವಿಷಯಗಳ ನಿಶ್ಚಿತ ಭರವಸೆ” ಆಗಿದೆ. ಭವಿಷ್ಯದಲ್ಲಿ ನೆರವೇರುವ ದೇವರ ವಾಗ್ದಾನಗಳು ನಾವು “ನಿರೀಕ್ಷಿಸುವ” ವಿಷಯಗಳಲ್ಲಿ ಸೇರಿವೆ. ಉದಾಹರಣೆಗೆ, ಕೆಟ್ಟ ಸಂಗತಿಗಳು ಕೊನೆಯಾಗುತ್ತವೆಂದು ಮತ್ತು ಹೊಸ ಲೋಕ ಬಂದೇ ಬರುತ್ತದೆಂದು ನಮಗೆ ಗೊತ್ತು. (2) ನಂಬಿಕೆಯು “ಕಣ್ಣಿಗೆ ಕಾಣದಿರುವ ನಿಜತ್ವಗಳ ಪ್ರತ್ಯಕ್ಷ ನಿದರ್ಶನ” ಅಂದರೆ ಮನಗಾಣಿಸುವ ರುಜುವಾತಾಗಿದೆ. ಯೆಹೋವ ದೇವರನ್ನು, ಯೇಸು ಕ್ರಿಸ್ತನನ್ನು, ದೇವದೂತರನ್ನು, ಪರಲೋಕರಾಜ್ಯವನ್ನು ನಾವು ನೋಡಿಲ್ಲ. ಆದರೂ ನಂಬುತ್ತೇವೆ. (ಇಬ್ರಿ. 11:3) ದೇವರ ವಾಗ್ದಾನಗಳಲ್ಲಿ ಮತ್ತು ಕಾಣದಿರುವ ವಿಷಯಗಳಲ್ಲಿ ನಮಗೆ ನಿಜವಾಗಲೂ ನಂಬಿಕೆ ಇದೆ ಎಂದು ಹೇಗೆ ತೋರಿಸಬಹುದು? ನಮ್ಮ ಜೀವನ ರೀತಿಯಿಂದ ಮತ್ತು ನಮ್ಮ ನಡೆ-ನುಡಿಯಿಂದ ನಾವಿದನ್ನು ತೋರಿಸಬಹುದು.
7. ನಂಬಿಕೆಯ ನಿಜವಾದ ಅರ್ಥ ಏನೆಂದು ತಿಳಿಯಲು ನೋಹನ ಉದಾಹರಣೆ ನಮಗೆ ಹೇಗೆ ಸಹಾಯಮಾಡುತ್ತದೆ? (ಲೇಖನದ ಆರಂಭದ ಚಿತ್ರ ನೋಡಿ.)
7 ನಂಬಿಕೆಯ ಬಗ್ಗೆ ನೋಹನಿಂದ ನಾವು ಏನನ್ನು ಕಲಿಯಬಹುದು? ಪೌಲನು ನೋಹನ ಬಗ್ಗೆ ಹೀಗೆ ಹೇಳಿದನು: “ಅದುವರೆಗೆ ಕಾಣದಿದ್ದ ವಿಷಯಗಳ ಕುರಿತು ದೈವಿಕ ಎಚ್ಚರಿಕೆಯನ್ನು ಪಡೆದುಕೊಂಡಾಗ ದೇವಭಯವನ್ನು ತೋರಿಸಿದನು ಮತ್ತು ತನ್ನ ಕುಟುಂಬದ ಸಂರಕ್ಷಣೆಗಾಗಿ ನಾವೆಯನ್ನು ಕಟ್ಟಿದನು.” (ಇಬ್ರಿ. 11:7) ಯೆಹೋವನು ಹೇಳಿದ ವಿಷಯಗಳ ಮೇಲೆ ನೋಹನಿಗೆ ನಂಬಿಕೆ ಇದ್ದದ್ದರಿಂದ ಅವನು ಬೃಹದಾಕಾರದ ನಾವೆಯನ್ನು ಕಟ್ಟಿದನು. ನಾವೆಯನ್ನು ಯಾಕೆ ಕಟ್ಟುತ್ತಿದ್ದಾನೆಂದು ಅವನ ನೆರೆಯವರು ಕೇಳಿರಬಹುದು. ಅವರ ಈ ಪ್ರಶ್ನೆಗೆ ನೋಹನು ಖಂಡಿತವಾಗಿ ಉತ್ತರ ಕೊಟ್ಟನೆಂದು ನಾವು ಹೇಳಬಹುದು. ಏಕೆಂದರೆ ನೋಹ “ನೀತಿಯನ್ನು ಸಾರುವವನಾಗಿದ್ದ” ಎಂದು ಬೈಬಲ್ ಹೇಳುತ್ತದೆ. (2 ಪೇತ್ರ 2:5) ದೇವರು ಪ್ರಳಯದಿಂದ ದುಷ್ಟ ಜನರನ್ನು ನಾಶಮಾಡಲಿದ್ದಾನೆಂದು ಜನರನ್ನು ಎಚ್ಚರಿಸಿದನು. ಯೆಹೋವನು ನೋಹನಿಗೆ, “ಎಲ್ಲಾ ದೇಹಿಗಳಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅವರ ಅನ್ಯಾಯದಿಂದ ತುಂಬಿ ಅದೆ” ಮತ್ತು “ಭೂಮಿಯ ಮೇಲೆ ಜಲಪ್ರಳಯವನ್ನು ಬರಮಾಡಿ ಆಕಾಶದ ಕೆಳಗಿರುವ ಸಕಲಪ್ರಾಣಿಗಳನ್ನೂ ಅಳಿಸಿಬಿಡುವೆನು; ಭೂಮಿಯಲ್ಲಿರುವ ಸಮಸ್ತವೂ ಲಯವಾಗುವದು” ಎಂದು ಹೇಳಿದನು. ಯೆಹೋವನ ಈ ಮಾತುಗಳನ್ನೇ ನೋಹನು ಆ ಜನರಿಗೆ ತಿಳಿಸಿದನು. ಅಷ್ಟೇ ಅಲ್ಲದೆ ಪ್ರಳಯದಿಂದ ಪಾರಾಗಬೇಕಾದರೆ ಯೆಹೋವನು ಆಜ್ಞಾಪಿಸಿದಂತೆ ‘ನಾವೆಯಲ್ಲಿ ಸೇರಬೇಕು’ ಎಂದು ಸಹ ಜನರಿಗೆ ಹೇಳಿರಬೇಕು.—ಆದಿ. 6:13, 17, 18.
8. ನಂಬಿಕೆಯ ಬಗ್ಗೆ ಯಾಕೋಬನು ಏನು ಹೇಳಿದನು?
8 ಪೌಲನಂತೆ ಯಾಕೋಬನು ಸಹ ನಂಬಿಕೆಯ ಬಗ್ಗೆ ಪತ್ರ ಬರೆದನು. ಅವನು ಹೇಳಿದ್ದು: “ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ತೋರಿಸು, ನಾನು ನನ್ನ ಕ್ರಿಯೆಗಳ ಮೂಲಕ ನನ್ನ ನಂಬಿಕೆಯನ್ನು ತೋರಿಸುತ್ತೇನೆ.” (ಯಾಕೋ. 2:18) ಒಂದು ವಿಷಯವನ್ನು ನಾವು ಒಪ್ಪಿಕೊಳ್ಳುತ್ತೇವೆ ಅಂದ ಮಾತ್ರಕ್ಕೆ ಅದರ ಮೇಲೆ ನಂಬಿಕೆ ಇದೆ ಅಂತ ಅರ್ಥವಲ್ಲ ಎಂದು ಅವನು ವಿವರಿಸಿದನು. ಕಾರಣ ದೆವ್ವಗಳು ಸಹ ಯೆಹೋವನು ಇದ್ದಾನೆ ಎಂದು ನಂಬುತ್ತವೆ ಆದರೆ ಅವುಗಳು ಆತನ ಮೇಲೆ ನಂಬಿಕೆ ಇಡುವುದಿಲ್ಲ. ಹಾಗಾಗಿ ಆತನನ್ನು ವಿರೋಧಿಸುತ್ತವೆ. (ಯಾಕೋ. 2:19, 20) ಒಬ್ಬ ವ್ಯಕ್ತಿಗೆ ನಂಬಿಕೆ ಇದ್ದರೆ ಅವನು ದೇವರನ್ನು ಮೆಚ್ಚಿಸಲಿಕ್ಕಾಗಿ ಒಳ್ಳೇ ಕೆಲಸಗಳನ್ನು ಮಾಡುತ್ತಾನೆ. ಅಬ್ರಹಾಮನು ಇದನ್ನೇ ಮಾಡಿದನು. ಯಾಕೋಬನು ಬರೆದದ್ದು: “ನಮ್ಮ ಮೂಲಪಿತೃವಾದ ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಯಜ್ಞವೇದಿಯ ಮೇಲೆ ಅರ್ಪಿಸಿದ ಬಳಿಕ ಕ್ರಿಯೆಗಳ ಮೂಲಕ ನೀತಿವಂತನೆಂದು ನಿರ್ಣಯಿಸಲ್ಪಟ್ಟನಲ್ಲವೆ? ಅವನ ನಂಬಿಕೆಯು ಅವನ ಕ್ರಿಯೆಗಳೊಂದಿಗೆ ಕಾರ್ಯನಡಿಸಿತು ಮತ್ತು ಅವನ ಕ್ರಿಯೆಗಳಿಂದ ಅವನ ನಂಬಿಕೆಯು ಪರಿಪೂರ್ಣಗೊಳಿಸಲ್ಪಟ್ಟಿತು ಎಂಬುದು ಕಾಣಬರುತ್ತದೆ.” ಕ್ರಿಯೆ ಇಲ್ಲದ ನಂಬಿಕೆ ವ್ಯರ್ಥ ಎಂದು ಹೇಳುತ್ತಾ ಯಾಕೋಬನು, “ಜೀವವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯು ಸಹ ಸತ್ತದ್ದಾಗಿದೆ” ಎಂದನು. (ಯಾಕೋ. 2:21-23, 26)
9, 10. ಮಗನಲ್ಲಿ ನಂಬಿಕೆ ಇಡುವುದು ಎಂದರೇನು?
9 ಸುಮಾರು 30 ವರ್ಷಗಳ ನಂತರ ಯೋಹಾನನು ತನ್ನ ಸುವಾರ್ತಾ ಪುಸ್ತಕವನ್ನು ಮತ್ತು ಬೇರೆ ಮೂರು ಪತ್ರಗಳನ್ನು ಬರೆದನು. ಬೇರೆ ಬೈಬಲ್ ಬರಹಗಾರರಂತೆ ಯೋಹಾನನಿಗೆ ನಂಬಿಕೆ ಅಂದರೆ ಏನೆಂದು ಅರ್ಥವಾಗಿತ್ತು. ಆತನ ಬರಹಗಳಲ್ಲಿ ಅನೇಕ ಬಾರಿ ಯೋಹಾನನು ಗ್ರೀಕ್ ಕ್ರಿಯಾಪದವೊಂದನ್ನು ಬಳಸಿದನು. ಅದನ್ನು ಕನ್ನಡಕ್ಕೆ ಭಾಷಾಂತರಿಸುವುದಾದರೆ ಅದರ ಅರ್ಥ “ನಂಬಿಕೆ ಇಡಿ” ಎಂದಾಗಿದೆ.
10 ಉದಾಹರಣೆಗೆ, ಯೋಹಾನನು ಹೀಗೆ ವಿವರಿಸಿದನು: “ಮಗನಲ್ಲಿ [ಯೇಸುವಿನಲ್ಲಿ] ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಮಗನಿಗೆ ಅವಿಧೇಯನಾಗುವವನು ಜೀವವನ್ನು ಕಾಣುವುದಿಲ್ಲ, ಆದರೆ ದೇವರ ಕ್ರೋಧವು ಅವನ ಮೇಲೆ ನೆಲೆಗೊಳ್ಳುತ್ತದೆ.” (ಯೋಹಾ. 3:36) ಯೇಸುವಿನಲ್ಲಿ ನಂಬಿಕೆ ಇಡಬೇಕಾದರೆ ನಾವು ಆತನಿಗೆ ವಿಧೇಯರಾಗಬೇಕು. ತನ್ನ ಮತ್ತು ತನ್ನ ತಂದೆಯ ಮೇಲೆ ನಂಬಿಕೆ ಇಟ್ಟರೆ ನಿತ್ಯಜೀವ ಸಿಗುತ್ತದೆ ಅಂತ ಯೇಸು ಆಗಾಗ ಹೇಳಿದನೆಂದು ಯೋಹಾನನ ಬರಹಗಳಿಂದ ಗೊತ್ತಾಗುತ್ತದೆ.—ಯೋಹಾ. 3:16; 6:29, 40; 11:25, 26; 14:1, 12.
11. ಯೆಹೋವನಿಗೆ ಕೃತಜ್ಞರಾಗಿದ್ದೇವೆ ಎಂದು ನಾವು ಹೇಗೆ ತೋರಿಸಬಹುದು?
11 ತನ್ನ ಬಗ್ಗೆ ಮತ್ತು ಮಗನ ಬಗ್ಗೆ ತಿಳಿದುಕೊಂಡು ನಂಬಿಕೆ ಬೆಳೆಸಿಕೊಳ್ಳಲು ನೆರವಾಗುವಂತೆ ಯೆಹೋವನು ತನ್ನ ಪವಿತ್ರಾತ್ಮವನ್ನು ನಮಗೆ ಕೊಟ್ಟಿದ್ದಾನೆ. (ಲೂಕ 10:21 ಓದಿ.) ಯೆಹೋವನು ಮಾಡಿರುವ ಎಲ್ಲಾ ವಿಷಯಗಳಿಗಾಗಿ ನಾವು ಕೃತಜ್ಞರಾಗಿದ್ದೇವೆ ಎಂದು ಹೇಗೆ ತೋರಿಸಬಹುದು? ಯೇಸು “ನಮ್ಮ ನಂಬಿಕೆಯ ಮುಖ್ಯ ನಿಯೋಗಿಯೂ ಪರಿಪೂರ್ಣಕನೂ” ಆಗಿದ್ದಾನೆ. ಯೇಸುವಿನ ಮೂಲಕ ಯೆಹೋವನೊಟ್ಟಿಗೆ ಒಂದು ಒಳ್ಳೇ ಸಂಬಂಧವನ್ನು ಇಟ್ಟುಕೊಳ್ಳಲು ಸಾಧ್ಯ. ಯೆಹೋವನು ಮಾಡಿದ ಈ ಸಹಾಯಕ್ಕಾಗಿ ನಾವು ಸದಾಕಾಲಕ್ಕೂ ಆತನಿಗೆ ಆಭಾರಿಗಳಾಗಿರಬೇಕು. (ಇಬ್ರಿ. 12:2) ತಪ್ಪದೆ ಯೆಹೋವನಿಗೆ ಪ್ರಾರ್ಥಿಸುವ ಮತ್ತು ಆತನ ವಾಕ್ಯವನ್ನು ಅಧ್ಯಯನ ಮಾಡುವ ಮೂಲಕ ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುತ್ತಾ ಇರಬೇಕು.—ಎಫೆ. 6:18; 1 ಪೇತ್ರ 2:2.
12. ನಮಗೆ ನಂಬಿಕೆ ಇದ್ದರೆ ನಾವೇನು ಮಾಡುತ್ತೇವೆ?
12 ಯೆಹೋವನ ವಾಗ್ದಾನಗಳಲ್ಲಿ ನಮಗೆ ಬಲವಾದ ನಂಬಿಕೆಯಿದೆ ಎಂದು ನಮ್ಮ ಕ್ರಿಯೆಗಳ ಮೂಲಕ ತೋರಿಸುತ್ತಾ ಇರಬೇಕು. ಉದಾಹರಣೆಗೆ, ನಾವು ದೇವರ ರಾಜ್ಯದ ಬಗ್ಗೆ ಜನರಿಗೆ ಸುವಾರ್ತೆಯನ್ನು ಸಾರುತ್ತಾ ಯೇಸುವಿನ ಶಿಷ್ಯರಾಗಲು ಅವರಿಗೆ ಸಹಾಯಮಾಡಬೇಕು. ಜೊತೆಗೆ, “ಎಲ್ಲರಿಗೂ ಒಳ್ಳೇದನ್ನು ಮಾಡೋಣ, ಅದರಲ್ಲೂ ವಿಶೇಷವಾಗಿ ನಂಬಿಕೆಯಲ್ಲಿ ನಮ್ಮ ಸಂಬಂಧಿಕರಂತಿರುವವರಿಗೆ ಮಾಡೋಣ.” (ಗಲಾ. 6:10) ‘ಹಳೆಯ ವ್ಯಕ್ತಿತ್ವವನ್ನು ಅದರ ಅಭ್ಯಾಸಗಳೊಂದಿಗೆ ತೆಗೆದುಹಾಕಲು’ ನಾವು ತುಂಬ ಶ್ರಮಪಡುತ್ತೇವೆ. ಏಕೆಂದರೆ ಯೆಹೋವನೊಟ್ಟಿಗಿರುವ ನಮ್ಮ ಸ್ನೇಹವನ್ನು ಕಳೆದುಕೊಳ್ಳಲು ನಾವು ಇಷ್ಟಪಡುವುದಿಲ್ಲ.—ಕೊಲೊ. 3:5, 8-10.
ದೇವರ ಮೇಲಿನ ನಂಬಿಕೆಯೇ ನಮ್ಮ ಅಸ್ತಿವಾರದ ಭಾಗ
13. (ಎ) ‘ದೇವರ ಕಡೆಗಿನ ನಂಬಿಕೆ’ ಯಾಕೆ ಪ್ರಾಮುಖ್ಯ? (ಬಿ) ಬೈಬಲ್ ಇದನ್ನು ಹೇಗೆ ವಿವರಿಸುತ್ತದೆ? ಏಕೆ?
13 ಬೈಬಲ್ ಹೀಗನ್ನುತ್ತದೆ: ‘ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ; ಏಕೆಂದರೆ ಆತನನ್ನು ಸಮೀಪಿಸುವವನು ಆತನು ಇದ್ದಾನೆ ಎಂದೂ ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದೂ ನಂಬಬೇಕು.’ (ಇಬ್ರಿ. 11:6) ‘ದೇವರ ಕಡೆಗಿನ ನಂಬಿಕೆಯು’ ನಿಜ ಕ್ರೈಸ್ತನಾಗಲು ಮತ್ತು ಹಾಗೇ ಮುಂದುವರಿಯಲು ಬಯಸುವ ಪ್ರತಿಯೊಬ್ಬನಲ್ಲಿ ಇರಲೇಬೇಕಾದ ‘ಅಸ್ತಿವಾರದ’ ಭಾಗವೆಂದು ಬೈಬಲ್ ವಿವರಿಸುತ್ತದೆ. (ಇಬ್ರಿ. 6:1) ಏಕೆಂದರೆ, ಈ ನಂಬಿಕೆಯು ಯೆಹೋವನ ಸ್ನೇಹವನ್ನು ಸಂಪಾದಿಸಿ, ಅದನ್ನು ಉಳಿಸಿಕೊಳ್ಳಲು ಸಹಾಯಮಾಡುತ್ತದೆ. ಆದರೆ ಅದಕ್ಕಾಗಿ ನಾವು ನಂಬಿಕೆಯ ಜೊತೆಗೆ ಇನ್ನು ಕೆಲವು ಪ್ರಾಮುಖ್ಯ ಗುಣಗಳನ್ನು ಬೆಳೆಸಿಕೊಳ್ಳಬೇಕು.—2 ಪೇತ್ರ 1:5-7 ಓದಿ; ಯೂದ 20, 21.
14, 15. ನಂಬಿಕೆಯ ಜೊತೆಗೆ ಪ್ರೀತಿಯು ಸಹ ಪ್ರಾಮುಖ್ಯವಾಗಿದೆ ಯಾಕೆ?
14 ಬೇರೆ ಯಾವುದೇ ಗುಣಕ್ಕಿಂತ ಹೆಚ್ಚಾಗಿ ನಂಬಿಕೆಯ ಬಗ್ಗೆ ಬೈಬಲ್ ಬರಹಗಾರರು ಹೇಳಿದ್ದಾರೆ. ಇದರರ್ಥ ಎಲ್ಲ ಗುಣಗಳಿಗಿಂತ ನಂಬಿಕೆಯೇ ಪ್ರಾಮುಖ್ಯ ಎಂದಾ?
15 ಪೌಲನು ನಂಬಿಕೆಯನ್ನು ಪ್ರೀತಿಯೊಂದಿಗೆ ಹೋಲಿಸಿದನು. ಅವನು ಬರೆದದ್ದು: “ಬೆಟ್ಟಗಳನ್ನೇ ಸ್ಥಳಾಂತರಿಸುವಷ್ಟು ನಂಬಿಕೆಯುಳ್ಳವನಾಗಿರುವುದಾದರೂ, ನನ್ನಲ್ಲಿ ಪ್ರೀತಿಯಿಲ್ಲದಿದ್ದರೆ ನಾನು ಏನೂ ಅಲ್ಲ.” (1 ಕೊರಿಂ. 13:2) “ಧರ್ಮಶಾಸ್ತ್ರದಲ್ಲಿ ಅತಿ ದೊಡ್ಡ ಆಜ್ಞೆ” ದೇವರನ್ನು ಪ್ರೀತಿಸುವುದೇ ಆಗಿದೆ ಎಂದು ಯೇಸು ಹೇಳಿದನು. (ಮತ್ತಾ. 22:35-40) ದೇವರನ್ನು ಮೆಚ್ಚಿಸಲು ಬೇಕಾದ ಬೇರೆ ಅನೇಕ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೀತಿ ನಮಗೆ ಸಹಾಯಮಾಡುತ್ತದೆ. ಉದಾಹರಣೆಗೆ, ಪ್ರೀತಿಯು “ಎಲ್ಲವನ್ನೂ ನಂಬುತ್ತದೆ” ಎಂದು ಬೈಬಲ್ ಹೇಳುತ್ತದೆ. ಹಾಗಾಗಿ ಬೈಬಲಿನಲ್ಲಿ ದೇವರು ಹೇಳಿರುವ ಎಲ್ಲವನ್ನು ನಂಬಲು ನಮಗೆ ಪ್ರೀತಿ ಸಹಾಯಮಾಡುತ್ತದೆ.—1 ಕೊರಿಂ. 13:4, 7.
16, 17. (ಎ) ನಂಬಿಕೆ ಮತ್ತು ಪ್ರೀತಿಯ ಬಗ್ಗೆ ಬೈಬಲ್ ಏನು ಹೇಳುತ್ತದೆ? (ಬಿ) ಇವುಗಳಲ್ಲಿ ಯಾವ ಗುಣ ತುಂಬ ಪ್ರಾಮುಖ್ಯ? ಯಾಕೆ?
16 ನಂಬಿಕೆ ಮತ್ತು ಪ್ರೀತಿ ಈ ಎರಡೂ ಗುಣಗಳು ತುಂಬ ಪ್ರಾಮುಖ್ಯ. ಬೈಬಲ್ ಬರಹಗಾರರು ಅವನ್ನು ಅನೇಕ ಸಲ ಒಟ್ಟೊಟ್ಟಿಗೆ ಹೇಳಿದ್ದಾರೆ. “ನಂಬಿಕೆ ಮತ್ತು ಪ್ರೀತಿಯ ಎದೆಕವಚವನ್ನು ಧರಿಸಿಕೊಂಡಿರೋಣ” ಎಂದು ಪೌಲನು ತನ್ನ ಸಹೋದರರಿಗೆ ಉತ್ತೇಜಿಸಿದನು. (1 ಥೆಸ. 5:8) ಪೇತ್ರನು ಹೀಗೆ ಬರೆದನು: “ನೀವು ಎಂದೂ ಅವನನ್ನು [ಯೇಸುವನ್ನು] ನೋಡಲಿಲ್ಲವಾದರೂ ಅವನನ್ನು ಪ್ರೀತಿಸುತ್ತೀರಿ; ಈಗ ನೀವು ಅವನನ್ನು ಕಾಣದಿರುವುದಾದರೂ ಅವನಲ್ಲಿ ನಂಬಿಕೆಯನ್ನು ಇಟ್ಟಿದ್ದೀರಿ.” (1 ಪೇತ್ರ 1:8) ತನ್ನ ಅಭಿಷಿಕ್ತ ಸಹೋದರರಿಗೆ ಯಾಕೋಬನು ಹೀಗೆ ಕೇಳಿದನು: “ದೇವರು ಲೋಕದ ಸಂಬಂಧದಲ್ಲಿ ಬಡವರಾಗಿರುವವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರಾಗಲು ಮತ್ತು ತನ್ನನ್ನು ಪ್ರೀತಿಸುವವರಿಗೆ ಆತನು ವಾಗ್ದಾನಮಾಡಿದ ರಾಜ್ಯಕ್ಕೆ ಬಾಧ್ಯರಾಗಲು ಆರಿಸಿಕೊಂಡನಲ್ಲವೆ?” (ಯಾಕೋ. 2:5) ದೇವರ ಆಜ್ಞೆ ಏನೆಂದರೆ “ಆತನ ಮಗನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಂಬಿಕೆಯನ್ನಿಟ್ಟು . . . ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ” ಎಂದು ಯೋಹಾನನು ಬರೆದನು.—1 ಯೋಹಾ. 3:23.
17 ಆದರೆ ಪೌಲನು: “ನಂಬಿಕೆ, ನಿರೀಕ್ಷೆ, ಪ್ರೀತಿ ಈ ಮೂರೇ ಉಳಿಯುತ್ತವೆ; ಆದರೆ ಇವುಗಳಲ್ಲಿ ಅತಿ ದೊಡ್ಡದು ಪ್ರೀತಿಯೇ” ಎಂದು ಬರೆದನು. (1 ಕೊರಿಂ. 13:13) ಹೊಸ ಲೋಕದ ಬಗ್ಗೆ ಯೆಹೋವನು ಮಾಡಿದ ವಾಗ್ದಾನಗಳಲ್ಲಿ ನಂಬಿಕೆ ಇಡುವ ಅವಶ್ಯಕತೆ ಭವಿಷ್ಯದಲ್ಲಿ ಇರುವುದಿಲ್ಲ. ಏಕೆಂದರೆ ಅವೆಲ್ಲವು ಆಗ ನೆರವೇರಿರುತ್ತವೆ. ಬೈಬಲ್ ಹೇಳುವ ಆ ಅದ್ಭುತಕರವಾದ ಜೀವನ ಆಗ ನಮ್ಮದಾಗಿರುತ್ತದೆ. ಆದರೆ ದೇವರನ್ನು ಮತ್ತು ಆತನ ಜನರನ್ನು ಪ್ರೀತಿಸುವ ಹಂಗು ನಮಗೆ ಈಗಲೂ ಇದೆ ಮುಂದಕ್ಕೂ ಇರುತ್ತದೆ. ಅವರ ಮೇಲಿರುವ ನಮ್ಮ ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ.
ಯೆಹೋವನು ನಮ್ಮ ನಂಬಿಕೆಯನ್ನು ಆಶೀರ್ವದಿಸಿದ್ದಾನೆ
18, 19. (ಎ) ದೇವಜನರಿಗೆ ನಂಬಿಕೆ ಇರುವುದರಿಂದ ಯಾವ ಫಲಿತಾಂಶ ಸಿಕ್ಕಿದೆ? (ಬಿ) ಈ ಸ್ತುತಿಗೆ ಯಾರು ಅರ್ಹರು?
18 ಇಂದು ಪ್ರಪಂಚದಾದ್ಯಂತ ಇರುವ ಯೆಹೋವನ ಜನರು ದೇವರ ರಾಜ್ಯದ ಮೇಲೆ ನಂಬಿಕೆಯನ್ನು ಇಟ್ಟಿದ್ದಾರೆ ಮತ್ತು ಅದಕ್ಕೆ ಬೆಂಬಲ ಕೊಡುತ್ತಾರೆ. ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಕಾರಣ ತಮ್ಮ ಜೀವನವನ್ನು ದೇವರ ಪವಿತ್ರಾತ್ಮ ನಡೆಸುವಂತೆ ಅವರು ಬಿಟ್ಟುಕೊಡುತ್ತಾರೆ. (ಗಲಾ. 5:22, 23) ಇದರ ಫಲಿತಾಂಶ ಏನು? 80 ಲಕ್ಷಕ್ಕಿಂತ ಹೆಚ್ಚು ಸಹೋದರ ಸಹೋದರಿಯರ ಮಧ್ಯೆ ಶಾಂತಿ ಮತ್ತು ಐಕ್ಯತೆ ಇದೆ. ಇದರಿಂದ ನಂಬಿಕೆ ಮತ್ತು ಪ್ರೀತಿ ಈ ಎರಡು ಗುಣಗಳಿಗೂ ತುಂಬ ಶಕ್ತಿಯಿದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ.
19 ಈ ರೀತಿಯ ಐಕ್ಯತೆಗೆ ದೇವರ ಸಹಾಯಹಸ್ತವೇ ಕಾರಣ. ಹಾಗಾಗಿ ಆತನು ನಮ್ಮ ಸ್ತುತಿಗೆ ಅರ್ಹನಾಗಿದ್ದಾನೆ. (ಯೆಶಾ. 55:13) ನಮಗೆ ‘ನಂಬಿಕೆಯ ಮೂಲಕ ರಕ್ಷಣೆ’ ಸಿಗುವಂತೆ ಮಾಡಿಕೊಟ್ಟದ್ದರಿಂದ ನಾವು ಆತನಿಗೆ ಆಭಾರಿಗಳಾಗಿದ್ದೇವೆ. (ಎಫೆ. 2:8) ಅನೇಕರು ಆತನಲ್ಲಿ ನಂಬಿಕೆಯನ್ನಿಡುವಂತೆ ಯೆಹೋವನು ಸಹಾಯಮಾಡುತ್ತಾ ಇದ್ದಾನೆ. ಮುಂದೊಂದು ದಿನ ಇಡೀ ಭೂಮಿ ಪರಿಪೂರ್ಣ, ನೀತಿವಂತ ಮತ್ತು ಸಂತೋಷದ ಜನರಿಂದ ತುಂಬಿರುತ್ತದೆ. ಆಗ ಎಲ್ಲರೂ ಯೆಹೋವನನ್ನು ಸದಾಕಾಲಕ್ಕೂ ಸ್ತುತಿಸುತ್ತಾರೆ.