ನಾವು ನಮ್ಮ ನಂಬಿಕೆಗೆ ಸದ್ಗುಣವನ್ನು ಹೇಗೆ ಒದಗಿಸಬಹುದು?
“ನಿಮಗಿರುವ ನಂಬಿಕೆಗೆ ಸದ್ಗುಣವನ್ನು . . . ಕೂಡಿಸಿರಿ.”—2 ಪೇತ್ರ 1:5.
1, 2. ಯೆಹೋವನ ಜನರು ಸದ್ಗುಣಶೀಲವಾದುದ್ದನ್ನು ಮಾಡುವಂತೆ ನಾವು ಯಾಕೆ ಅಪೇಕ್ಷಿಸಬೇಕು?
ಯೆಹೋವನು ಯಾವಾಗಲು ಸದ್ಗುಣದಿಂದ ವರ್ತಿಸುತ್ತಾನೆ. ಯಾವುದು ನೀತಿ ಮತ್ತು ಒಳ್ಳೇದೊ ಅದನ್ನಾತನು ಮಾಡುತ್ತಾನೆ. ಆದುದರಿಂದ, ಅಭಿಷಿಕ್ತ ಕ್ರೈಸ್ತರನ್ನು “ತನ್ನ ಪ್ರಭಾವದಿಂದಲೂ ಗುಣಾತಿಶಯದಿಂದಲೂ” ಕರೆದವನೆಂದು ದೇವರ ಕುರಿತು ಅಪೊಸ್ತಲ ಪೌಲನು ಮಾತಾಡಸಾಧ್ಯವಿತ್ತು. ಅವರ ಸದ್ಗುಣದ ಸ್ವರ್ಗೀಯ ತಂದೆಯ ನಿಷ್ಕ್ರಷ್ಟ ಜ್ಞಾನವು ಅವರಿಗೆ ನಿಜ ದೇವ ಭಕ್ತಿಯ ಜೀವಿತವನ್ನು ಬೆನ್ನಟ್ಟುವಂತೆ ಅಗತ್ಯವಿರುವುದನ್ನು ತೋರಿಸಿಕೊಟ್ಟಿದೆ.—2 ಪೇತ್ರ 1:2, 3.
2 ಅಪೊಸ್ತಲ ಪೌಲನು ಕ್ರೈಸ್ತರಿಗೆ “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸು”ವಂತೆ ಉತ್ತೇಜಿಸುತ್ತಾನೆ. (ಎಫೆಸ 5:1) ಯೆಹೋವನ ಆರಾಧಕರು ಅವರ ಸ್ವರ್ಗೀಯ ತಂದೆಯಂತೆ ಯಾವುದೇ ಸಂದರ್ಭದಲ್ಲಿ ಸದ್ಗುಣವಾದದ್ದನ್ನು ಮಾಡಬೇಕು. ಆದರೆ ಸದ್ಗುಣವೆಂದರೇನು?
ಸದ್ಗುಣದ ಅರ್ಥ
3. ಸದ್ಗುಣವನ್ನು ಹೇಗೆ ಸ್ಪಷ್ಟೀಕರಿಸಲಾಗಿದೆ?
3 “ಸದ್ಗುಣ”ವನ್ನು ಆಧುನಿಕ ದಿನದ ನಿಘಂಟುಗಳು “ನೈತಿಕ ಉತ್ಕೃಷ್ಟತೆ; ಒಳ್ಳೇತನ”ವಾಗಿ ಸ್ಪಷ್ಟೀಕರಿಸುತ್ತವೆ. ಅದು “ಸರಿಯಾದ ಕೃತ್ಯ ಮತ್ತು ಆಲೋಚನೆ; ಗುಣದ ಒಳ್ಳೇತನ”ವಾಗಿದೆ. ಸದ್ಗುಣದ ವ್ಯಕ್ತಿಯು ನೀತಿವಂತನಾಗಿರುತ್ತಾನೆ. ಸದ್ಗುಣವನ್ನು “ಸಮರ್ಪಕತೆಯ ಒಂದು ಮಟ್ಟಕ್ಕೆ ಹೊಂದಿಕೆ” ಎಂದಾಗಿಯೂ ಸ್ಪಷ್ಟಪಡಿಸಲಾಗಿರುತ್ತದೆ. ಖಂಡಿತವಾಗಿಯೂ, ಕ್ರೈಸ್ತರಿಗೆ “ಸರಿಯ ಮಟ್ಟವು” ದೇವರಿಂದ ನಿಶ್ಚಯಿಸಲ್ಪಟ್ಟಿದೆ ಮತ್ತು ಆತನ ಪವಿತ್ರ ವಾಕ್ಯ, ಬೈಬಲಿನಲ್ಲಿ ಸ್ಪಷ್ಟಪಡಿಸಲಾಗಿದೆ.
4. ಎರಡನೇ ಪೇತ್ರ 1:5-7 ರಲ್ಲಿ ತಿಳಿಸಿರುವ ಯಾವ ಗುಣಗಳನ್ನು ಕ್ರೈಸ್ತರು ಬೆಳೆಸಲು ಪ್ರಯಾಸಕರ ಕೆಲಸ ಮಾಡಬೇಕು?
4 ನಿಜ ಕ್ರೈಸ್ತರು ಯೆಹೋವ ದೇವರ ನೀತಿಯ ಮಟ್ಟಗಳಿಗೆ ಹೊಂದಿಕೊಳ್ಳುತ್ತಾರೆ, ಮತ್ತು ನಂಬಿಕೆಯನ್ನು ಪ್ರದರ್ಶಿಸುವುದರ ಮೂಲಕ ಆತನ ಅಮೂಲ್ಯ ವಾಗ್ದಾನಗಳಿಗೆ ಪ್ರತಿಕ್ರಿಯಿಸುತ್ತಾರೆ. ಅವರು ಪೇತ್ರನ ಸಲಹೆಗೆ ಕೂಡ ಗಮನ ಕೊಡುತ್ತಾರೆ: “ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ ಜ್ಞಾನಕ್ಕೆ ದಮೆಯನ್ನೂ ದಮೆಗೆ ತಾಳ್ಮೆಯನ್ನೂ ತಾಳ್ಮೆಗೆ ಭಕ್ತಿಯನ್ನೂ ಭಕ್ತಿಗೆ ಸಹೋದರಸ್ನೇಹವನ್ನೂ ಸಹೋದರಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ.” (2 ಪೇತ್ರ 1:5-7) ಈ ಗುಣಗಳನ್ನು ಬೆಳೆಸಿಕೊಳ್ಳಲು ಒಬ್ಬ ಕ್ರೈಸ್ತನು ಕಷ್ಟಪಟ್ಟು ದುಡಿಯಬೇಕು. ಇದು ಕೆಲವೇ ದಿನಗಳಲ್ಲಿ ಮತ್ತು ವರ್ಷಗಳಲ್ಲಿ ಮಾಡಲ್ಪಡುವುದಿಲ್ಲ, ಬದಲಿಗೆ ಇದಕ್ಕೆ ಜೀವನಾವಧಿಯ ಸಂತತ ಪ್ರಯತ್ನವು ಬೇಕಾಗಿದೆ. ನಂಬಿಕೆಗೆ ಸದ್ಗುಣವನ್ನು ಒದಗಿಸುವುದು ತಾನೇ ಒಂದು ಪಂಥಾಹ್ವಾನವಾಗಿರುತ್ತದೆ!
5. ಶಾಸ್ತ್ರೀಯ ದೃಷ್ಟಿಕೋನದಿಂದ ನೋಡುವಾಗ ಸದ್ಗುಣವು ಏನಾಗಿರುತ್ತದೆ?
5 “ಸದ್ಗುಣ”ವೆಂದು ನಿರೂಪಿಸಲಾದ ಗ್ರೀಕ್ ಪದದ ಮೂಲ ಸಾಹಿತ್ಯದ ಅರ್ಥವು “ಯಾವುದೇ ರೀತಿಯ ಅತ್ಯುಷ್ಕ್ರಷತ್ಟೆ”ಯನ್ನು ಸೂಚಿಸುತ್ತದೆ ಎಂದು ನಿಘಂಟುಕಾರ ಎಮ್. ಆರ್. ವಿನ್ಸೆಂಟ್ ಹೇಳುತ್ತಾರೆ. ಕ್ರೈಸ್ತರು ದೇವರ “ಗುಣಾತಿಶಯಗಳನ್ನು,” ಯಾ ಸದ್ಗುಣಗಳನ್ನು, ಪ್ರಚಾರಮಾಡಬೇಕೆಂದು ಹೇಳಿದಾಗ ಪೇತ್ರನು ಅದರ ಬಹುವಚನದ ವಿಧವನ್ನು ಬಳಸಿದನು. (1 ಪೇತ್ರ 2:9) ಶಾಸ್ತ್ರೀಯ ದೃಷ್ಟಿಕೋನದಿಂದ, ಸದ್ಗುಣವನ್ನು ನಿಷ್ಕ್ರಿಯವೆಂದಾಗಿಯಲ್ಲ, ಬದಲಿಗೆ “ನೈತಿಕ ಬಲ, ನೈತಿಕ ಶಕ್ತಿ, ಆತ್ಮದ ಸ್ವತ” ಎಂದು ವಿವರಿಸಲಾಗಿದೆ. ಸದ್ಗುಣದ ಕುರಿತು ಹೇಳುವಲ್ಲಿ, ದೇವರ ಸೇವಕರಿಂದ ಪ್ರದರ್ಶಿಸಲು ಮತ್ತು ಕಾಪಾಡಲು ಬಯಸಲ್ಪಡುವ ಧೈರ್ಯದ ನೈತಿಕ ಗುಣಾತಿಶಯವು ಪೇತ್ರನ ಮನಸ್ಸಿನಲ್ಲಿತ್ತು. ಆದಾಗ್ಯೂ, ನಾವು ಅಪರಿಪೂರ್ಣರಾಗಿರುವುದರಿಂದ, ನಿಜವಾಗಿಯೂ ದೇವರ ದೃಷ್ಟಿಯಲ್ಲಿ ಸದ್ಗುಣವಾದುದನ್ನು ಮಾಡಬಹುದೊ?
ಅಪರಿಪೂರ್ಣರು, ಆದರೆ ಸದ್ಗುಣವುಳ್ಳವರು
6. ನಾವು ಅಪರಿಪೂರ್ಣರಾಗಿದ್ದಾಗ್ಯೂ, ದೇವರ ದೃಷ್ಟಿಯಲ್ಲಿ ಸದ್ಗುಣಶೀಲವಾದದನ್ನು ಮಾಡಬಹುದೆಂದು ಯಾಕೆ ಹೇಳಬಹುದು?
6 ನಮ್ಮಲ್ಲಿ ಅನುವಂಶಿಕ ಅಪರಿಪೂರ್ಣತೆ ಮತ್ತು ಪಾಪವಿರುವುದರಿಂದ, ದೇವರ ದೃಷ್ಟಿಯಲ್ಲಿ ಸದ್ಗುಣವಾದುದನ್ನು ನಿಜವಾಗಿಯೂ ಮಾಡುವುದು ಹೇಗೆ ಎಂದು ನಾವು ಕುತೂಹಲಗೊಳ್ಳಬಹುದು. (ರೋಮಾಪುರ 5:12) ಸದ್ಗುಣವುಳ್ಳ ಆಲೋಚನೆ, ನುಡಿ, ಮತ್ತು ಕ್ರಿಯೆಗಳು ಹೊರಬರುವಂಥ ಶುದ್ಧ ಹೃದಯವು ನಮಗೆ ಇರಬೇಕಾಗಿರುವಲ್ಲಿ ನಿಶ್ಚಯವಾಗಿಯೂ ಯೆಹೋವನ ಸಹಾಯದ ಅಗತ್ಯ ನಮಗಿದೆ. (ಹೋಲಿಸಿ ಲೂಕ 6:45) ಬತ್ಷೆಬಳ ಸಂಬಂಧದಲ್ಲಿ ಪಾಪಗೈದ ಅನಂತರ, ಪಶ್ಚಾತ್ತಾಪಿ ಕೀರ್ತನೆಗಾರ ದಾವೀದನು ಬೇಡಿದ್ದು: “ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು.” (ಕೀರ್ತನೆ 51:10) ಸದ್ಗುಣದ ಮಾರ್ಗಕ್ರಮವನ್ನು ಬೆನ್ನಟ್ಟುವಂತೆ ಅಗತ್ಯವಿದ್ದ ದೇವರ ಕ್ಷಮಾಪಣೆ ಮತ್ತು ಸಹಾಯವು ದಾವೀದನಿಗೆ ದೊರಕಿತು. ಆದುದರಿಂದ, ನಾವು ಗಂಭೀರ ತಪ್ಪುಗೈದಿರುವದಾದರೂ, ಪಶ್ಚಾತ್ತಾಪಪೂರ್ವಕವಾಗಿ ದೇವರ ಮತ್ತು ಸಭೆಯ ಹಿರಿಯರ ಸಹಾಯವನ್ನು ಸ್ವೀಕರಿಸಿರುವಲ್ಲಿ, ನಾವು ಸದ್ಗುಣದ ಹಾದಿಯಲ್ಲಿ ಹಿಂತೆರಳಬಹುದು ಮತ್ತು ಅದರಲ್ಲಿ ಉಳಿಯಬಹುದು.—ಕೀರ್ತನೆ 103:1-3, 10-14; ಯಾಕೋಬ 5:13-15.
7, 8. (ಎ) ನಾವು ಸದ್ಗುಣವಂತರಾಗಿ ಉಳಿಯಬೇಕಾದಲ್ಲಿ, ಯಾವುದು ಅವಶ್ಯವಾಗಿರುತ್ತದೆ? (ಬಿ) ಸದ್ಗುಣಶೀಲರಾಗಿರುವಲ್ಲಿ ಕ್ರೈಸ್ತರಿಗೆ ಯಾವ ಸಹಾಯವು ಇದೆ?
7 ಅನುವಂಶಿಕ ಪಾಪಪೂರ್ಣತೆಯಿಂದಾಗಿ, ಸದ್ಗುಣದ ಮಾರ್ಗಕ್ರಮವು ನಮ್ಮಿಂದ ಅಪೇಕ್ಷಿಸುವುದನ್ನು ಮಾಡಲು ನಾವು ಸಂತತವಾದ ಆಂತರಿಕ ಹೋರಾಟವನ್ನು ಮುಂದುವರಿಸಬೇಕು. ನಾವು ಸದ್ಗುಣವುಳ್ಳವರಾಗಿ ಉಳಿಯಬೇಕಾದರೆ, ನಮ್ಮನ್ನು ಪಾಪದ ದಾಸರಾಗುವಂತೆ ಎಂದಿಗೂ ಬಿಡಸಾಧ್ಯವಿಲ್ಲ. ಅದರ ಬದಲಿಗೆ, ಯಾವಾಗಲೂ ಸದ್ಗುಣದ ರೀತಿಯಲ್ಲಿ ಆಲೋಚಿಸಿ, ಮಾತಾಡಿ, ಕಾರ್ಯ ನಡಿಸುವುದರ ಮೂಲಕ, ನಾವು “ನೀತಿಗೆ ದಾಸರಾಗಬೇಕು.” (ರೋಮಾಪುರ 6:16-23) ನಿಶ್ಚಯವಾಗಿಯೂ, ನಮ್ಮ ಶರೀರದಾಶೆಗಳು ಮತ್ತು ಪಾಪಪೂರ್ಣ ಪ್ರವೃತ್ತಿಗಳು ಬಲಶಾಲಿಯಾಗಿವೆ, ಮತ್ತು ಇವುಗಳ ಮತ್ತು ದೇವರು ನಮ್ಮಿಂದ ಕೇಳಿಕೊಳ್ಳುವ ಸದ್ಗುಣದ ವಿಷಯಗಳ ನಡುವೆ ಒಂದು ಹೋರಾಟವನ್ನು ನಾವು ಎದುರಿಸುತ್ತೇವೆ. ಹೀಗಿರುವಲ್ಲಿ, ಏನು ಮಾಡಬೇಕಾಗಿದೆ?
8 ಒಂದು ವಿಷಯ, ನಾವು ಯೆಹೋವನ ಪವಿತ್ರ ಆತ್ಮದ, ಯಾ ಕಾರ್ಯಕಾರಿ ಶಕ್ತಿಯ ಮಾರ್ಗದರ್ಶನೆಯನ್ನು ಅನುಸರಿಸುವ ಅಗತ್ಯವಿದೆ. ಆದುದರಿಂದ ನಾವು ಪೌಲನ ಸಲಹೆಗೆ ಗಮನಕೊಡಬೇಕು: “ನಾನು ಹೇಳುವದೇನಂದರೆ ಪವಿತ್ರಾತ್ಮನನ್ನು ಅನುಸರಿಸಿ ನಡೆದುಕೊಳ್ಳಿರಿ; ಆಗ ನೀವು ಶರೀರಭಾವದ ಅಭಿಲಾಷೆಗಳನ್ನು ಎಷ್ಟು ಮಾತ್ರಕ್ಕೂ ನೆರವೇರಿಸುವದಿಲ್ಲ. ಯಾಕಂದರೆ ಶರೀರಭಾವವು ಅಭಿಲಾಷಿಸುವುದು ಆತ್ಮನಿಗೆ ವಿರುದ್ಧವಾಗಿದೆ, ಆತ್ಮನು ಅಭಿಲಾಷಿಸುವದು ಶರೀರಭಾವಕ್ಕೆ ವಿರುದ್ಧವಾಗಿದೆ. ನೀವು ಮಾಡಲಿಚ್ಛಿಸುವದನ್ನು ಮಾಡದಂತೆ ಇವು ಒಂದಕ್ಕೊಂದು ಹೋರಾಡುತ್ತವೆ.” (ಗಲಾತ್ಯ 5:16, 17) ಹೌದು, ನೀತಿಗೆ ಬಲದಂತೆ ದೇವರಾತ್ಮವು ನಮಗಿದೆ, ಮತ್ತು ಯೋಗ್ಯ ನಡತೆಗೆ ಮಾರ್ಗದರ್ಶಿಯಂತೆ ಆತನ ವಾಕ್ಯವು ನಮಗಿದೆ. ಯೆಹೋವನ ಸಂಸ್ಥೆಯ ಪ್ರೀತಿಯ ಸಹಾಯ ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ” ಸಲಹೆಯು ಕೂಡ ನಮಗಿದೆ. (ಮತ್ತಾಯ 24:45-47) ಹೀಗೆ ಪಾಪ ಪ್ರವೃತ್ತಿಯ ವಿರುದ್ಧ ಯಶಸ್ವಿಯಾದ ಹೋರಾಟವನ್ನು ನಡೆಸಬಲ್ಲೆವು. (ರೋಮಾಪುರ 7:15-25) ನಿಶ್ಚಯವಾಗಿಯೂ, ಒಂದು ಅಶುದ್ಧ ಆಲೋಚನೆಯು ನಮ್ಮ ಮನಸ್ಸಿನೊಳಗೆ ಬರುವಲ್ಲಿ, ನಾವು ವಿಳಂಬ ಮಾಡದೆ ಅದನ್ನು ತೊಡೆದುಹಾಕಬೇಕು ಮತ್ತು ಸದ್ಗುಣದ ಕೊರತೆ ಇರುವ ಯಾವುದೇ ವಿಧಾನದಲ್ಲಿ ಕ್ರಿಯೆಗೈಯಲು ಇರುವ ಯಾವುದೇ ಶೋಧನೆಯನ್ನು ತಡೆಯಲು ದೇವರ ಸಹಾಯಕ್ಕಾಗಿ ಪ್ರಾರ್ಥಿಸಬೇಕು.—ಮತ್ತಾಯ 6:13.
ಸದ್ಗುಣ ಮತ್ತು ನಮ್ಮ ಆಲೋಚನೆಗಳು
9. ಸದ್ಗುಣಶೀಲ ನಡತೆಯು ಯಾವ ರೀತಿಯ ಆಲೋಚನೆಯನ್ನು ಅವಶ್ಯಪಡಿಸುತ್ತದೆ?
9 ಒಬ್ಬ ವ್ಯಕ್ತಿಯು ಆಲೋಚಿಸುವ ವಿಧಾನದೊಂದಿಗೆ ಸದ್ಗುಣವು ಆರಂಭಿಸುತ್ತದೆ. ದೈವಿಕ ಅನುಗ್ರಹವನ್ನು ಅನುಭವಿಸಲು, ನಾವು ನೀತಿಯ, ಒಳ್ಳೇ, ಸದ್ಗುಣದ ವಿಷಯಗಳ ಕುರಿತು ಆಲೋಚಿಸಬೇಕು. ಪೌಲನು ಹೇಳಿದ್ದು: “ಸಹೋದರರೇ, ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೂ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.” (ಫಿಲಿಪ್ಪಿ 4:8) ನಾವು ನಮ್ಮ ಮನಸ್ಸುಗಳನ್ನು ನ್ಯಾಯವಾದ, ಶುದ್ಧವಾದ ವಿಷಯಗಳ ಮೇಲೆ ಇಡಬೇಕು, ಮತ್ತು ಸದ್ಗುಣದ ಕೊರತೆಯ ಯಾವುದೇ ವಿಷಯವು ನಮಗೆ ಹಿಡಿಸಬಾರದು. ಪೌಲನು ಹೇಳಶಕ್ತನಾದದ್ದು: “ನೀವು ಯಾವದನ್ನು ನನ್ನಿಂದ ಕಲಿತು ಹೊಂದಿದಿರೋ, ಮತ್ತು ಯಾವದನ್ನು ನನ್ನಲ್ಲಿ ಕೇಳಿ ಕಂಡಿರೋ ಅದನ್ನೇ ಮಾಡುತ್ತಾ ಬನ್ನಿರಿ.” ನಾವು ಪೌಲನಂತಿರುವಲ್ಲಿ—ಆಲೋಚನೆ, ನುಡಿ, ಮತ್ತು ಕ್ರಿಯೆಯಲ್ಲಿ ಸದ್ಗುಣವನ್ನು ತೋರಿಸುವಲ್ಲಿ—ನಾವು ಒಳ್ಳೇ ಸಹವಾಸಿಗಳಾಗಿರುತ್ತೇವೆ ಮತ್ತು ಕ್ರೈಸ್ತ ಜೀವಿಸುವಿಕೆಯಲ್ಲಿ ಉತ್ತಮ ಮಾದರಿಗಳಾಗಿರುತ್ತೇವೆ, ಮತ್ತು ‘ಶಾಂತಿದಾಯಕನಾದ ದೇವರು ನಮ್ಮೊಂದಿಗಿರುವನು.’—ಫಿಲಿಪ್ಪಿ 4:9.
10. ಒಂದನೇ ಕೊರಿಂಥ 14:20 ರ ವೈಯಕ್ತಿಕ ಅನ್ವಯವು ನಾವು ಸದ್ಗುಣವುಳ್ಳವರಾಗಿರುವಂತೆ ಹೇಗೆ ಸಹಾಯ ಮಾಡುತ್ತದೆ?
10 ನಮ್ಮ ಆಲೋಚನೆಯಲ್ಲಿ ಸದ್ಗುಣವುಳ್ಳವರಾಗಿ ಉಳಿಯುವಂತೆ ನಮ್ಮ ಬಯಕೆಯಾಗಿರುವಲ್ಲಿ ಮತ್ತು ಹೀಗೆ ಸ್ವರ್ಗೀಯ ತಂದೆಯನ್ನು ಮೆಚ್ಚಿಸುವಲ್ಲಿ, ನಾವು ಪೌಲನ ಸಲಹೆಯನ್ನು ಅನ್ವಯಿಸುವುದು ಅವಶ್ಯವಾಗಿರುತ್ತದೆ: “ಬುದ್ಧಿಯ ವಿಷಯದಲ್ಲಿ ಬಾಲಕರಾಗಿರಬೇಡಿರಿ; ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿಯೇ ಇದ್ದು ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರಬೇಕು. (1 ಕೊರಿಂಥ 14:20) ಕ್ರೈಸ್ತರಾಗಿ ನಾವು ದುಷ್ಟತನದ ಜ್ಞಾನವನ್ನು ಹುಡುಕುವುದಿಲ್ಲ ಯಾ ದುಷ್ಟತನದಲ್ಲಿ ಅನುಭವಪಡೆಯುವುದಿಲ್ಲವೆಂದು ಇದರ ಅರ್ಥವಾಗಿದೆ. ಈ ವಿಧಾನದಲ್ಲಿ ನಮ್ಮ ಮನಸ್ಸುಗಳನ್ನು ಭ್ರಷ್ಟಗೊಳಿಸಲ್ಪಡುವಂತೆ ಬಿಡುವುದರ ಬದಲಿಗೆ, ಈ ವಿಷಯದಲ್ಲಿ ಶಿಶುಗಳಂತೆ ಅನನುಭವಿ ಮತ್ತು ನಿಷ್ಕಪಟವುಳ್ಳವರಾಗಿರುವಂತೆ ವಿವೇಕತನದಿಂದ ನಾವು ಆರಿಸಿಕೊಳ್ಳುತ್ತೇವೆ. ಅದೇ ಸಮಯದಲ್ಲಿ, ಅನೈತಿಕತೆ ಮತ್ತು ತಪ್ಪು ಕೃತ್ಯಗಳು ಯೆಹೋವನ ದೃಷ್ಟಿಯಲ್ಲಿ ಪಾಪಭರಿತವಾಗಿವೆಯೆಂದು ನಾವು ಪೂರ್ಣವಾಗಿ ತಿಳಿದುಕೊಳ್ಳುತ್ತೇವೆ. ಸದ್ಗುಣವುಳ್ಳವರಾಗಿರುವುದರ ಮೂಲಕ ಆತನನ್ನು ಮೆಚ್ಚಿಸಲು ತೀವ್ರ ಹೃದಯಪೂರ್ವಕ ಬಯಕೆಯು ನಮಗೆ ಪ್ರಯೋಜನಕಾರಿಯಾಗಿರುವುದು, ಯಾಕಂದರೆ ಅಶುದ್ಧ ವಿಧದ ಮನೋರಂಜನೆ ಮತ್ತು ಸೈತಾನನ ವಶದಲ್ಲಿರುವ ಈ ಲೋಕದ ಇತರ ಮಾನಸಿಕವಾಗಿ ಭ್ರಷ್ಟಗೊಳಿಸುವ ಪ್ರಭಾವಗಳನ್ನು ತಡೆಯುವಂತೆ ಅದು ನಮ್ಮನ್ನು ಪ್ರೇರಿಸುತ್ತದೆ.—1 ಯೋಹಾನ 5:19.
ಸದ್ಗುಣ ಮತ್ತು ನಮ್ಮ ಮಾತು
11. ಸದ್ಗುಣವುಳ್ಳವರಾಗಿರುವುದು ಯಾವ ವಿಧದ ಮಾತನ್ನು ಕೇಳಿಕೊಳ್ಳುತ್ತದೆ, ಮತ್ತು ಈ ಸಂಬಂಧದಲ್ಲಿ, ಯೆಹೋವ ದೇವರ ಮತ್ತು ಯೇಸು ಕ್ರಿಸ್ತನಲ್ಲಿ ಯಾವ ಮಾದರಿಗಳು ನಮಗಿವೆ?
11 ನಮ್ಮ ಆಲೋಚನೆಗಳು ಸದ್ಗುಣದ್ದಾಗಿರುವಲ್ಲಿ, ಇದು ನಾವೇನನ್ನು ಹೇಳುತ್ತೇವೊ ಅದರ ಮೇಲೆ ಅಗಾಧ ಪರಿಣಾಮವನ್ನು ಮಾಡಬೇಕು. ಸದ್ಗುಣವುಳ್ಳವರಾಗಿರುವುದು ಸ್ವಚ್ಛ, ಉತ್ತಮ, ಸತ್ಯಪೂರ್ವಕ, ಭಕ್ತಿವೃದ್ಧಿಯ ಮಾತನ್ನು ಕೇಳಿಕೊಳ್ಳುತ್ತದೆ. (2 ಕೊರಿಂಥ 6:3, 4, 7) ಯೆಹೋವನು “ಸತ್ಯದ ದೇವರು” ಆಗಿದ್ದಾನೆ. (ಕೀರ್ತನೆ 31:5, NW) ಆತನ ಎಲ್ಲ ವ್ಯವಹಾರಗಳಲ್ಲಿ ಆತನು ನಂಬಿಗಸ್ತನಾಗಿದ್ದಾನೆ, ಮತ್ತು ಆತನು ಸುಳ್ಳಾಡಸಾಧ್ಯವಿರದ ಕಾರಣ ಆತನ ವಾಗ್ದಾನಗಳು ಖಂಡಿತವಾಗಿವೆ. (ಅರಣ್ಯಕಾಂಡ 23:19; 1 ಸಮುವೇಲ 15:29; ತೀತ 1:2) ದೇವರ ಮಗ, ಯೇಸು ಕ್ರಿಸ್ತನು, “ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನು” ಆಗಿದ್ದಾನೆ. ಭೂಮಿಯ ಮೇಲಿರುವಾಗ, ಅವನು ಆತನ ತಂದೆಯಿಂದ ಹೊಂದಿದಂತೆಯೇ ಯಾವಾಗಲೂ ಸತ್ಯವನ್ನೇ ಆಡಿದನು. (ಯೋಹಾನ 1:14; 8:40) ಅದಲ್ಲದೆ, ಯೇಸುವು “ಯಾವ ಪಾಪವನ್ನೂ ಮಾಡಲಿಲ್ಲ; ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ.” (1 ಪೇತ್ರ 2:22) ನಾವು ನಿಜಕ್ಕೂ ದೇವರ ಮತ್ತು ಕ್ರಿಸ್ತನ ಸೇವಕರಾಗಿರುವಲ್ಲಿ, “ಸತ್ಯವೆಂಬ ನಡುಕಟ್ಟನ್ನು ಕಟ್ಟಿ” ಕೊಂಡಂತೆ, ಮಾತಿನಲ್ಲಿ ಸತ್ಯಪೂರ್ಣರೂ ಮತ್ತು ನಡತೆಯಲ್ಲಿ ನೀತಿವಂತರೂ ಆಗುವೆವು.—ಎಫೆಸ 5:9; 6:14.
12. ನಾವು ಸದ್ಗುಣವುಳ್ಳವರಾಗಿರಬೇಕಾದರೆ, ಯಾವ ವಿಧಗಳ ಮಾತನ್ನು ತೊರೆದು ಬಿಡಬೇಕು?
12 ನಾವು ಸದ್ಗುಣವುಳ್ಳವರಾಗಿರುವಲ್ಲಿ, ನಾವು ತೊರೆದು ಬಿಡುವ ಮಾತಿನ ವಿಧಗಳೂ ಇವೆ. ನಾವು ಪೌಲನ ಸಲಹೆಯಿಂದ ನಡೆಸಲ್ಪಡುವೆವು: “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರ ಮಾಡಿರಿ.” “ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು; ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು. ಹೊಲಸು ಮಾತು ಹುಚ್ಚು ಮಾತು ಕುಚೋದ್ಯ ಮಾತು ಇವು ಬೇಡ, ಅಯುಕ್ತವಾಗಿವೆ; ಇವುಗಳನ್ನು ಬಿಟ್ಟು ದೇವರಿಗೆ ಉಪಕಾರಸ್ತುತಿಮಾಡುವದು ಉತ್ತಮ.” (ಎಫೆಸ 4:31; 5:3, 4)ನಮ್ಮ ನೀತಿಯ ಹೃದಯಗಳು ಅಕ್ರೈಸ್ತ ಮಾತನ್ನು ದೂರವಿಡಲು ಪ್ರೇರಿಸುವುದರಿಂದ, ಇತರರು ನಮ್ಮ ಸಹವಾಸದಲ್ಲಿ ಇರುವುದು ಚೈತನ್ಯದಾಯಕವೆಂದು ಕಾಣುವರು.
13. ಕ್ರೈಸ್ತರು ನಾಲಗೆಯನ್ನು ಯಾಕೆ ಹತೋಟಿಯಲ್ಲಿಡಬೇಕು?
13 ದೇವರನ್ನು ಮೆಚ್ಚಿಸುವ ಮತ್ತು ಸದ್ಗುಣವಾದ ವಿಷಯಗಳನ್ನು ಹೇಳುವ ಬಯಕೆಯು ನಮ್ಮ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಹಾಯ ಮಾಡುವುದು. ಪಾಪಪೂರ್ಣ ಪ್ರವೃತ್ತಿಗಳ ಕಾರಣದಿಂದಾಗಿ, ನಾವೆಲ್ಲರೂ ಮಾತಿನಲ್ಲಿ ಆಗಾಗ್ಗೆ ಎಡವುತ್ತೇವೆ. ಆದರೂ, ಶಿಷ್ಯ ಯಾಕೋಬನು ಹೇಳುವಂಥದ್ದು, “ನಾವು ಕುದುರೆಗಳ . . . ಬಾಯಿಗೆ ಕಡಿವಾಣ” ಹಾಕುವಲ್ಲಿ, ಅವುಗಳು ನಾವು ನಿರ್ದೇಶಿಸುವಲ್ಲಿ ವಿಧೇಯತೆಯಿಂದ ಸಾಗುತ್ತವೆ. ಆದುದರಿಂದ, ನಾಲಿಗೆಗೆ ಕಡಿವಾಣ ಹಾಕಲು ಮತ್ತು ಕೇವಲ ಸದ್ಗುಣೀ ವಿಧಾನಗಳಲ್ಲಿ ಅದನ್ನು ಉಪಯೋಗಿಸುವಂತೆ ಪ್ರಯತ್ನಿಸಲು ನಾವು ಪ್ರಯಾಸಪಟ್ಟು ಕೆಲಸ ಮಾಡಬೇಕು. ಒಂದು ಹತೋಟಿ ಇಲ್ಲದ ನಾಲಿಗೆಯು “ಅಧರ್ಮಲೋಕರೂಪವಾಗಿ” ಇದೆ. (ಯಾಕೋಬ 3:1-7) ಈ ದೇವಭಕ್ತಿ ಇಲ್ಲದ ಲೋಕದ ಪ್ರತಿಯೊಂದು ವಿಧದ ದುಷ್ಟ ಲಕ್ಷಣವು ಪಳಗಿಸಿಲ್ಲದ ನಾಲಿಗೆಯೊಂದಿಗೆ ಸಂಬಂಧಿಸಿದೆ. ಅದು ಸುಳ್ಳುಸಾಕ್ಷಿ, ಬೈಯುವಿಕೆ, ಮತ್ತು ಚಾಡಿಗಳಂಥ ಹಾನಿಕಾರಕ ವಿಷಯಗಳಿಗೆ ಹೊಣೆಯುಳ್ಳದ್ದಾಗಿದೆ. (ಯೆಶಾಯ 5:20; ಮತ್ತಾಯ 15:18-20) ಮತ್ತು ಒಂದು ಅನಿಯಂತ್ರಿತ ನಾಲಿಗೆಯು ನಿಂದಿಸುವ, ಇರಿಯುವ, ಯಾ ಮಿಥ್ಯಾಪವಾದ ಹೊರಿಸುವ ಹೇಳಿಕೆಗಳನ್ನು ಮಾಡುವಾಗ, ಅದು ಮಾರಕವಾದ ವಿಷದಿಂದ ತುಂಬಿರುತ್ತದೆ.—ಕೀರ್ತನೆ 140:3; ರೋಮಾಪುರ 3:13; ಯಾಕೋಬ 3:8.
14. ಯಾವ ಇಬ್ಬಗೆ ಮಟ್ಟದ ಮಾತನ್ನು ಕ್ರೈಸ್ತರು ತೊರೆಯಬೇಕು?
14 ಯಾಕೋಬನು ಸೂಚಿಸುವಂತೆ, ದೇವರ ಕುರಿತು ಉತ್ತಮವಾದದ್ದನ್ನು ಮಾತಾಡುವುದರ ಮೂಲಕ “ಕರ್ತನನ್ನು ಕೊಂಡಾಡಲು” ಆದರೆ ಅನಂತರ ಅವರಿಗೆ ಕೆಟ್ಟದ್ದಾಗಲು ಹಾರೈಸುವ ಮೂಲಕ “ಮನುಷ್ಯರನ್ನು ಶಪಿಸಲು” ನಾಲಿಗೆಯನ್ನು ದುರುಪಯೋಗಪಡಿಸುವುದು ಅಸಮಂಜಸವಾಗಿರುವುದು. ಕೂಟಗಳಲ್ಲಿ ದೇವರ ಸ್ತುತಿಗಳನ್ನು ಹಾಡಿ, ಮತ್ತು ಅನಂತರ ಜತೆ ವಿಶ್ವಾಸಿಗಳ ಬಗ್ಗೆ ಕೆಟ್ಟದ್ದನ್ನು ಮಾತಾಡುವುದು ಎಷ್ಟು ಪಾಪಪೂರ್ಣವಾಗಿದೆ! ಒಂದೇ ಒರತೆಯಿಂದ ಸಿಹಿ ಮತ್ತು ಕಹಿ ನೀರು ಹೊರಡುವುದು ಅಸಾಧ್ಯ. ನಾವು ಯೆಹೋವನ್ನು ಸೇವಿಸುತ್ತಿರುವಲ್ಲಿ, ಅಸ್ವಾದಕರ ನುಡಿಗಳನ್ನು ಮಾತಾಡುವ ಬದಲಿಗೆ ಸದ್ಗುಣಶೀಲ ವಿಷಯಗಳನ್ನು ಮಾತಾಡುವುದನ್ನು ನಮ್ಮಿಂದ ಅಪೇಕ್ಷಿಸಲು ಇತರರಿಗೆ ಹಕ್ಕುಂಟು. ಆದುದರಿಂದ ನಾವು ಕೆಟ್ಟ ಮಾತನ್ನು ತೊರೆಯೋಣ ಮತ್ತು ನಮ್ಮ ಸಹವಾಸಿಗಳಿಗೆ ಪ್ರಯೋಜನವಾಗುವಂಥ ಮತ್ತು ಅವರಿಗೆ ಆತ್ಮಿಕವಾಗಿ ಭಕ್ತಿವೃದ್ಧಿಮಾಡುವಂಥ ವಿಷಯಗಳನ್ನು ಹೇಳಲು ಪ್ರಯತ್ನಿಸೋಣ.—ಯಾಕೋಬ 3:9-12.
ಸದ್ಗುಣ ಮತ್ತು ನಮ್ಮ ಕ್ರಿಯೆಗಳು
15. ವಕ್ರ ಮಾರ್ಗಗಳಿಗೆ ತಿರುಗುವದನ್ನು ತಡೆಯುವುದು ಯಾಕೆ ಅಷ್ಟು ಪ್ರಾಮುಖ್ಯವಾದದ್ದು?
15 ಕ್ರೈಸ್ತ ಆಲೋಚನೆ ಮತ್ತು ಮಾತು ಸದ್ಗುಣದ್ದಾಗಿರಬೇಕಾಗಿರುವುದರಿಂದ, ನಮ್ಮ ಕ್ರಿಯೆಗಳ ವಿಷಯದಲ್ಲೇನು? ನಡತೆಯಲ್ಲಿ ಸದ್ಗುಣಿಗಳಾಗಿರುವುದೊಂದೇ ದೇವರ ಮೆಚ್ಚಿಕೆಯನ್ನು ಪಡೆಯುವ ಮಾರ್ಗವಾಗಿದೆ. ಯೆಹೋವನ ಯಾವ ಸೇವಕನೂ ಸದ್ಗುಣವನ್ನು ತೊರೆದು, ವಕ್ರಮಾರ್ಗವನ್ನು ಮತ್ತು ಮೋಸಗಾರಿಕೆಯನ್ನು ಅವಲಂಬಿಸಿ, ಇದು ದೇವರ ಮೆಚ್ಚಿಕೆಯನ್ನು ಪಡೆಯುವದೆಂದು ಸಮರ್ಪಕವಾಗಿ ಯೋಚಿಸ ಸಾಧ್ಯವಿಲ್ಲ. ಜ್ಞಾನೋಕ್ತಿ 3:32 ಹೇಳುವುದು: “ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವದು.” ಯೆಹೋವ ದೇವರೊಂದಿಗೆ ನಮ್ಮ ಸಂಬಂಧವನ್ನು ನಾವು ಬೆಲೆಯುಳ್ಳದುದಾಗಿ ಇಡುವಲ್ಲಿ, ಆ ಆಲೋಚನೆಯನ್ನು ಕೆರಳಿಸುವ ನುಡಿಗಳು ಹಾನಿಯನ್ನುಂಟುಮಾಡುವದಕ್ಕಾಗಿ ಪಿತೂರಿ ನಡಸುವುದರಿಂದ ಮತ್ತು ಯಾವುದೇ ವಕ್ರವಾದುದನ್ನು ಮಾಡುವುದರಿಂದ ನಮ್ಮನ್ನು ಹಿಮ್ಮೆಟ್ಟಿಸಬೇಕು. ಯೆಹೋವನ ಆತ್ಮಕ್ಕೆ ಅಸಹ್ಯವಾಗಿರುವ ಏಳು ವಿಷಯಗಳಲ್ಲಿ “ದುರಾಲೋಚನೆಗಳನ್ನು ಕಲ್ಪಿಸುವ ಹೃದಯವು” ಒಂದಾಗಿದೆ! (ಜ್ಞಾನೋಕ್ತಿ 6:16-19) ಆದುದರಿಂದ, ನಾವು ಅಂಥ ಕ್ರಿಯೆಗಳನ್ನು ತೊರೆಯೋಣ ಮತ್ತು ನಮ್ಮ ಜೊತೆ ಮಾನವರ ಪ್ರಯೋಜನಕ್ಕಾಗಿ ಮತ್ತು ನಮ್ಮ ಸ್ವರ್ಗೀಯ ತಂದೆಯ ಮಹಿಮೆಗಾಗಿ, ಯಾವುದು ಸದ್ಗುಣಶೀಲವೊ ಅದನ್ನು ಮಾಡೋಣ.
16. ಕ್ರೈಸ್ತರು ಯಾವುದೇ ಕಪಟ ಕೃತ್ಯಗಳಲ್ಲಿ ಯಾಕೆ ತೊಡಗಬಾರದು?
16 ಸದ್ಗುಣವನ್ನು ಪ್ರದರ್ಶಿಸುವುದು ನಾವು ಪ್ರಾಮಾಣಿಕರಾಗಿರುವುದನ್ನು ಅವಶ್ಯಪಡಿಸುತ್ತದೆ. (ಇಬ್ರಿಯ 13:18) ಯಾವನ ಮಾತುಗಳೊಂದಿಗೆ ಅವನ ಕೃತ್ಯಗಳು ಹೊಂದಿಕೆಯಾಗುವುದಿಲ್ಲವೊ, ಆ ಕಪಟಿ ವ್ಯಕ್ತಿ, ಸದ್ಗುಣಿಯಲ್ಲ. “ಕಪಟಿ” (ಹಿಪೊಕ್ರಿಟೀಸ್) ಎಂದು ನಿರೂಪಿಸಲಾದ ಗ್ರೀಕ್ ಪದವು “ಉತ್ತರಿಸುವವನು” ಎಂದು ಅರ್ಥಕೊಡುತ್ತದೆ ಮತ್ತು ರಂಗ ನಟನನ್ನೂ ಸೂಚಿಸುತ್ತದೆ. ಗ್ರೀಕ್ ಮತ್ತು ರೋಮನ್ ನಟರು ಮುಸುಕನ್ನು ಹಾಕಿಕೊಳ್ಳುತ್ತಿದ್ದರಾದದರಿಂದ, ಈ ಶಬ್ದವು ಸೋಗನ್ನು ಹಾಕಿಕೊಳ್ಳುವವನಿಗೆ ರೂಪಕಾಲಂಕಾರವಾಗಿ ಬಳಕೆಗೆ ಬಂತು. ಕಪಟಿಗಳು “ಅಪನಂಬಿಗಸ್ತ”ರಾಗಿರುತ್ತಾರೆ. (ಲೂಕ 12:46 ನ್ನು ಮತ್ತಾಯ 24:50, 51 ರೊಂದಿಗೆ ಹೋಲಿಸಿ.) ಕಪಟತನವು (ಹಿಪೊಕ್ರಿಸಿಸ್) ದುಷ್ಟತನವನ್ನು ಮತ್ತು ಕುಯುಕ್ತಿಯನ್ನು ಕೂಡ ಸೂಚಿಸಬಹುದು. (ಮತ್ತಾಯ 22:18; ಮಾರ್ಕ 12:15; ಲೂಕ 20:23) ಒಬ್ಬ ಭರವಸೆಯಿಡುವ ವ್ಯಕ್ತಿಯು ಕೇವಲ ಸೋಗಾಗಿರುವ ಮುಗುಳುನಗೆ, ಮುಖಸ್ತುತಿ, ಮತ್ತು ಕ್ರಿಯೆಗಳ ಮೂಲಕ ವಂಚಿಸಲ್ಪಡುವುದು ಎಷ್ಟು ಶೋಚನೀಯ! ಇನ್ನೊಂದು ಕಡೆಯಲ್ಲಿ ಭರವಸಯೋಗ್ಯ ಕ್ರೈಸ್ತರೊಂದಿಗೆ ನಾವು ವ್ಯವಹರಿಸುತ್ತೇವೆ ಎಂದು ನಮಗೆ ತಿಳಿದಾಗ ಅದು ಹೃದಯಾನುರಾಗದ್ದಾಗಿರುತ್ತದೆ. ಮತ್ತು ನಾವು ಸದ್ಗುಣಿಗಳು ಮತ್ತು ನಿಷ್ಕಪಟಿಗಳಾಗಿರುವುದಕ್ಕೋಸ್ಕರ, ದೇವರು ನಮ್ಮನ್ನು ಆಶೀರ್ವದಿಸುತ್ತಾನೆ. “ನಿಷ್ಕಪಟವಾದ ಸಹೋದರಸ್ನೇಹವನ್ನು” ಪ್ರದರ್ಶಿಸುವವರ ಮತ್ತು “ನಿಷ್ಕಪಟವಾದ ನಂಬಿಕೆ” ಹೊಂದಿರುವವರ ಮೇಲೆ ಆತನ ಮೆಚ್ಚಿಕೆ ನೆಲೆಸುತ್ತದೆ.—1 ಪೇತ್ರ 1:22; 1 ತಿಮೊಥೆ 1:5.
ಸದ್ಗುಣವು ಕ್ರಿಯಾಶೀಲ ಒಳ್ಳೇತನವಾಗಿದೆ
17, 18. ನಾವು ಆತ್ಮದ ಒಳ್ಳೇತನದ ಫಲವನ್ನು ಪ್ರದರ್ಶಿಸುವಾಗ, ಇತರರೊಂದಿಗೆ ಹೇಗೆ ವರ್ತಿಸುವೆವು?
17 ನಮ್ಮ ನಂಬಿಕೆಗೆ ಸದ್ಗುಣವನ್ನು ಒದಗಿಸುವಲ್ಲಿ, ದೇವರಿಗೆ ಅಸ್ವೀಕರಣೀಯವಾದ ವಿಷಯಗಳನ್ನು ಆಲೋಚಿಸುವುದನ್ನು, ಹೇಳುವುದನ್ನು, ಮತ್ತು ಮಾಡುವುದನ್ನು ನಿಲ್ಲಿಸಲು ನಾವು ಪ್ರಯಾಸಪಡುವೆವು. ಆದಾಗ್ಯೂ, ಕ್ರೈಸ್ತ ಸದ್ಗುಣವನ್ನು ಪ್ರದರ್ಶಿಸುವುದು ನಾವು ಕ್ರಿಯಾಶೀಲ ಒಳ್ಳೇತನವನ್ನು ಆಚರಿಸುವಂತೆಯೂ ಅವಶ್ಯ ಪಡುತ್ತದೆ. ನಿಜತ್ವದಲ್ಲಿ, ಸದ್ಗುಣವನ್ನು ಒಳ್ಳೇತನವೆಂದು ಸ್ಪಷ್ಟೀಕರಿಸಲಾಗಿದೆ. ಮತ್ತು ಒಳ್ಳೇತನವು ಬರಿಯ ಮಾನವ ಪ್ರಯತ್ನದ ಉತ್ಪಾದನೆಯಲ್ಲದೆ ಯೆಹೋವನ ಪವಿತ್ರಾತ್ಮದ ಫಲವಾಗಿರುತ್ತದೆ. (ಗಲಾತ್ಯ 5:22, 23) ನಾವು ಆತ್ಮದ ಫಲವಾದ ಒಳ್ಳೇತನವನ್ನು ಪ್ರದರ್ಶಿಸುತ್ತಿರುವಾಗ, ಇತರರ ಕುರಿತು ಉತ್ತಮವಾದದ್ದನ್ನು ಆಲೋಚಿಸುವಂತೆ ಮತ್ತು ಅಪರಿಪೂರ್ಣತೆಗಳಿದ್ದಾಗ್ಯೂ ಅವರ ಒಳ್ಳೇ ಗುಣಗಳಿಗಾಗಿ ಅವರನ್ನು ಪ್ರಶಂಸಿಸುವಂತೆ ಪ್ರೇರೇಪಿಸಲ್ಪಡುತ್ತೇವೆ. ಅನೇಕ ವರುಷಗಳಿಂದ ಅವರು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸಿರುತ್ತಾರೊ? ಹಾಗಾದರೆ ನಾವವರಿಗೆ ಗೌರವ ತೋರಿಸಬೇಕು ಮತ್ತು ಅವರ ಕುರಿತು ಮತ್ತು ದೇವರಿಗೆ ಅವರ ಸೇವೆಯ ಕುರಿತು ನಾವು ಒಳ್ಳೇದನ್ನು ಮಾತಾಡಬೇಕು. ತನ್ನ ನಾಮಕ್ಕಾಗಿ ಅವರು ತೋರಿಸುವ ಪ್ರೀತಿಯನ್ನು ಮತ್ತು ಅವರ ನಂಬಿಕೆಯ ಸದ್ಗುಣಶೀಲ ಕಾರ್ಯಗಳನ್ನು ನಮ್ಮ ಸ್ವರ್ಗೀಯ ತಂದೆಯು ಗಮನಕ್ಕೆ ತರುತ್ತಾನೆ, ಮತ್ತು ನಾವೂ ಹಾಗೆ ಮಾಡಬೇಕು.—ನೆಹೆಮೀಯ 13:31ಬಿ; ಇಬ್ರಿಯ 6:10.
18 ಸದ್ಗುಣವು ನಮ್ಮನ್ನು ಸೈರಣೆ, ತಿಳಿವಳಿಕೆ, ಸಹಾನುಭೂತಿಯುಳ್ಳವರಾಗುವಂತೆ ಮಾಡುತ್ತದೆ. ಯೆಹೋವನ ಜೊತೆ ಆರಾಧಕನೊಬ್ಬನು ಸಂಕಟ ಯಾ ಖಿನ್ನತೆಯನ್ನನುಭವಿಸುತ್ತಿರುವಲ್ಲಿ, ನಾವು ಸಾಂತ್ವನಗೊಳಿಸುವಂತೆ ಮಾತಾಡುವೆವು ಮತ್ತು ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ನಮಗೆ ಆದರಣೆಯನ್ನು ಕೊಡುವಂತೆಯೆ, ಅವನಿಗೆ ಸ್ವಲ್ಪ ಆದರಣೆಯನ್ನು ಕೊಡಲು ಪ್ರಯತ್ನಿಸುವೆವು. (2 ಕೊರಿಂಥ 1:3, 4; 1 ಥೆಸಲೊನೀಕ 5:14) ಪ್ರಾಯಶಃ ಮರಣದಲ್ಲಿ ಪ್ರಿಯರಾದವರನ್ನು ಕಳಕೊಂಡ ಕಾರಣ, ದುಃಖಿಸುವವರೊಂದಿಗೆ ನಾವು ಅನುಕಂಪ ತೋರಿಸುತ್ತೇವೆ. ಕಷ್ಟಾನುಭವವನ್ನು ಕಡಿಮೆ ಮಾಡಲು ನಮ್ಮಿಂದೇನಾದರೂ ಆಗುವಲ್ಲಿ, ನಾವದನ್ನು ಮಾಡುವೆವು, ಯಾಕಂದರೆ ಸದ್ಗುಣಶೀಲ ಆತ್ಮವು ಪ್ರೀತಿಯ, ಧರ್ಮಶೀಲ ಕಾರ್ಯವನ್ನು ಪ್ರೇರಿಸುತ್ತದೆ.
19. ನಾವು ಆಲೋಚನೆ, ಮಾತು, ಮತ್ತು ಕ್ರಿಯೆಯಲ್ಲಿ ಸದ್ಗುಣವುಳ್ಳವರಾಗಿರುವಲ್ಲಿ, ಇತರರು ನಮ್ಮನ್ನು ಯಾವ ವಿಧದಲ್ಲಿ ನೋಡಿಕೊಳ್ಳುವುದು ಸಂಭವನೀಯ?
19 ಆತನ ಕುರಿತು ಉತ್ತಮವಾದುದನ್ನು ಮಾತಾಡುವ ಮೂಲಕ ಯೆಹೋವನನ್ನು ನಾವು ಕೊಂಡಾಡುವಂತೆಯೆ, ನಾವು ನಮ್ಮ ಆಲೋಚನೆ, ಮಾತು, ಮತ್ತು ಕ್ರಿಯೆಯಲ್ಲಿ ಸದ್ಗುಣವುಳ್ಳವರಾಗಿರುವಲ್ಲಿ ಇತರರು ನಮ್ಮನ್ನು ಕೊಂಡಾಡುವುದು ಸಂಭವನೀಯ. (ಕೀರ್ತನೆ 145:10) ಒಂದು ವಿವೇಕದ ಜ್ಞಾನೋಕ್ತಿಯು ಹೇಳುವುದು: “ಶಿಷ್ಟನ ತಲೆ ಆಶೀರ್ವಾದದ ನೆಲೆ; ದುಷ್ಟನ ಬಾಯಿಗೆ ಬಲಾತ್ಕಾರವೇ ಮುಚ್ಚಳ.” (ಜ್ಞಾನೋಕ್ತಿ 10:6) ಒಬ್ಬ ದುಷ್ಟ ಮತ್ತು ಬಲಾತ್ಕಾರಿ ವ್ಯಕ್ತಿಯು ಇತರರಿಗೆ ಅವನನ್ನು ಪ್ರೀತಿಪಾತ್ರನನ್ನಾಗಿ ಮಾಡುವ ಸದ್ಗುಣದ ಕೊರತೆಯುಳ್ಳವನಾಗಿರುತ್ತಾನೆ. ಅವನು ಏನನ್ನು ಬಿತ್ತುತ್ತಾನೊ ಅದನ್ನೆ ಕೊಯ್ಯುತ್ತಾನೆ, ಯಾಕಂದರೆ ಜನರು ಕೊಂಡಾಡುವುದರ ಮೂಲಕ ಅವನನ್ನು ಪ್ರಾಮಾಣಿಕವಾಗಿ ಆಶೀರ್ವದಿಸಲಾರನು. (ಗಲಾತ್ಯ 6:7) ಆದರೆ ಯೆಹೋವನ ಸೇವಕರೋಪಾದಿ, ಸದ್ಗುಣಶೀಲ ರೀತಿಯಲ್ಲಿ ಯೋಚಿಸಿ, ಮಾತಾಡಿ, ವರ್ತಿಸುವುದು ಎಷ್ಟು ಹೆಚ್ಚು ಉತ್ತಮ! ಆತನನ್ನು ಆಶೀರ್ವದಿಸಿ, ಕೊಂಡಾಡಲು ಪ್ರೇರಿಸಲ್ಪಡುವುದರಿಂದ ಅವರು ಪ್ರೀತಿ, ಭರವಸೆ ಮತ್ತು ಗೌರವವನ್ನು ಗಳಿಸುವರು. ಅದಲ್ಲದೆ, ಅವರ ದಿವ್ಯ ಸದ್ಗುಣವು ಯೆಹೋವನ ಅಮೂಲ್ಯ ಆಶೀರ್ವಾದದಲ್ಲಿ ಫಲಿಸುತ್ತದೆ.—ಜ್ಞಾನೋಕ್ತಿ 10:22.
20. ಸದ್ಗುಣಶೀಲ ಆಲೋಚನೆಗಳು, ಮಾತು, ಮತ್ತು ಕ್ರಿಯೆಗಳು ಯೆಹೋವನ ಜನರ ಸಭೆಯಲ್ಲಿ ಯಾವ ಪರಿಣಾಮವನ್ನು ಮಾಡಬಲ್ಲದು?
20 ಸದ್ಗುಣಶೀಲ ಆಲೋಚನೆ, ಮಾತು ಮತ್ತು ಕ್ರಿಯೆಗಳು ಯೆಹೋವನ ಜನರ ಸಭೆಗೆ ಪ್ರಯೋಜನಕರವಾಗುವುದು ಖಂಡಿತ. ಒಬ್ಬರಿಗೊಬ್ಬರ ಕಡೆಗೆ ವಾತ್ಸಲ್ಯದ, ಗೌರವಪೂರ್ಣ ಆಲೋಚನೆಗಳು ಜೊತೆ ವಿಶ್ವಾಸಿಗಳಿಗೆ ಇರುವಾಗ, ಸಹೋದರ ಪ್ರೇಮವು ಅವರೊಳಗೆ ಅಭಿವೃದ್ಧಿ ಹೊಂದುತ್ತದೆ. (ಯೋಹಾನ 13:34, 35) ಯಥಾರ್ಥ ಪ್ರಶಂಸೆ ಮತ್ತು ಉತ್ತೇಜನವು ಒಳಗೂಡಿರುವ, ಸದ್ಗುಣಶೀಲ ಮಾತು, ಸಹಕಾರ ಮತ್ತು ಏಕತೆಯ ಅನುರಾಗದ ಭಾವನೆಯನ್ನು ಪೋಷಿಸುತ್ತದೆ. (ಕೀರ್ತನೆ 133:1-3) ಮತ್ತು ಹೃದಯಾನುರಾಗದ, ಸದ್ಗುಣಶೀಲ ಕೃತ್ಯಗಳು ಇತರರು ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವಂತೆ ಪ್ರಚೋದಿಸುತ್ತವೆ. ಎಲ್ಲದಕ್ಕಿಂತಲೂ ಮೇಲಾಗಿ, ಕ್ರೈಸ್ತ ಸದ್ಗುಣದ ಆಚರಣೆಯು ನಮ್ಮ ಸದ್ಗುಣಶೀಲ ಸ್ವರ್ಗೀಯ ತಂದೆ, ಯೆಹೋವನ ಮೆಚ್ಚಿಕೆ ಮತ್ತು ಆಶೀರ್ವಾದದಲ್ಲಿ ಫಲಿಸುತ್ತದೆ. ಆದುದರಿಂದ ನಾವು ನಂಬಿಕೆಯನ್ನು ಪ್ರದರ್ಶಿಸುವುದರ ಮೂಲಕ ದೇವರ ಅಮೂಲ್ಯ ವಾಗ್ದಾನಗಳಿಗೆ ಪ್ರತಿಕ್ರಿಯಿಸುವುದನ್ನು ನಮ್ಮ ಗುರಿಯನ್ನಾಗಿ ಮಾಡೋಣ. ಮತ್ತು ನಮ್ಮ ನಂಬಿಕೆಗೆ ಸದ್ಗುಣವನ್ನು ಒದಗಿಸಲು ಶ್ರದ್ಧಾಪೂರ್ವಕ ಪ್ರಯತ್ನವನ್ನು ನಾವು ನಿಶ್ಚಯವಾಗಿಯೂ ಮಾಡುವಂತಾಗಲಿ.
ನಿಮ್ಮ ಉತ್ತರಗಳೇನು?
▫ “ಸದ್ಗುಣ”ವನ್ನು ನೀವು ಹೇಗೆ ಸ್ಪಷ್ಟೀಕರಿಸುವಿರಿ, ಮತ್ತು ಅಪರಿಪೂರ್ಣ ಜನರು ಸದ್ಗುಣಶೀಲರಾಗಿರಬಲ್ಲರು ಯಾಕೆ?
▫ ಸದ್ಗುಣವು ಯಾವ ವಿಧದ ಆಲೋಚನೆಗಳನ್ನು ಕೇಳಿಕೊಳ್ಳುತ್ತದೆ?
▫ ಸದ್ಗುಣವು ನಮ್ಮ ಮಾತನ್ನು ಹೇಗೆ ಪ್ರಭಾವಿಸಬೇಕು?
▫ ಸದ್ಗುಣವು ನಮ್ಮ ಕ್ರಿಯೆಗಳ ಮೇಲೆ ಯಾವ ಪರಿಣಾಮವನ್ನು ಬೀರಬೇಕು?
▫ ಸದ್ಗುಣಶೀಲರಾಗಿರುವುದರ ಕೆಲವು ಪ್ರಯೋಜನಗಳು ಯಾವುವು?
[ಪುಟ 21 ರಲ್ಲಿರುವ ಚಿತ್ರ]
ಒಂದೇ ಬುಗೆಯ್ಗೊಳಗಿಂದ ಸಿಹಿ ಮತ್ತು ಕಹಿ ನೀರು ಹೊರಡದೇ ಇರುವುದರಿಂದ, ಯೆಹೋವನ ಸೇವಕರು ಕೇವಲ ಸದ್ಗುಣಶೀಲ ವಿಷಯಗಳನ್ನು ಹೇಳುವಂತೆ ಇತರರು ನ್ಯಾಯವಾಗಿ ನಿರೀಕ್ಷಿಸುತ್ತಾರೆ