ವಿಮೋಚನಾ ಮೌಲ್ಯ ನಮ್ಮ ತಂದೆ ಕೊಟ್ಟ “ಪರಿಪೂರ್ಣ ವರ”
‘ಪ್ರತಿಯೊಂದು ಒಳ್ಳೆಯ ದಾನ, ಪ್ರತಿಯೊಂದು ಪರಿಪೂರ್ಣ ವರ ತಂದೆಯಿಂದ ಬರುತ್ತದೆ.’—ಯಾಕೋ. 1:17.
1. ವಿಮೋಚನಾ ಮೌಲ್ಯದಿಂದಾಗಿ ಯಾವ ಆಶೀರ್ವಾದಗಳು ಸಿಗಲಿವೆ?
ಯೇಸು ಕ್ರಿಸ್ತನು ಕೊಟ್ಟ ವಿಮೋಚನಾ ಯಜ್ಞದಿಂದಾಗಿ ಹಲವಾರು ಆಶೀರ್ವಾದಗಳು ಸಿಗಲಿವೆ. ಉದಾಹರಣೆಗೆ, ಆದಾಮನ ಮಕ್ಕಳಲ್ಲಿ ನೀತಿಯನ್ನು ಪ್ರೀತಿಸುವವರು ವಿಮೋಚನಾ ಮೌಲ್ಯದಿಂದಾಗಿ ಮುಂದೊಂದು ದಿನ ದೇವರ ಕುಟುಂಬದ ಭಾಗವಾಗಲಿದ್ದಾರೆ. ಮಾತ್ರವಲ್ಲ ಸದಾಕಾಲ ಸಂತೋಷದಿಂದ ಬಾಳುವ ಅವಕಾಶವೂ ಸಿಗಲಿದೆ. ಈ ಆಶೀರ್ವಾದಗಳಿಗಿಂತ ಮುಖ್ಯವಾಗಿ, ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿರುವ ಎಲ್ಲರಿಗೂ ತುಂಬ ಮಹತ್ವದ್ದಾಗಿರುವ ವಿಷಯಗಳೊಂದಿಗೆ ವಿಮೋಚನಾ ಮೌಲ್ಯ ಸಂಬಂಧಪಟ್ಟಿದೆ.—ಇಬ್ರಿ. 1:8, 9.
2. (ಎ) ತುಂಬ ಮಹತ್ವವುಳ್ಳ ಯಾವ ವಿಷಯಗಳನ್ನು ಯೇಸು ಪ್ರಾರ್ಥನೆಯಲ್ಲಿ ಸೇರಿಸಿದನು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಈ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?
2 ಯೇಸು ಸಾಯುವುದಕ್ಕೆ ಸುಮಾರು ಎರಡು ವರ್ಷ ಮುಂಚೆ ತನ್ನ ಶಿಷ್ಯರಿಗೆ ಈ ಪ್ರಾರ್ಥನೆ ಕಲಿಸಿದನು: “ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ.” (ಮತ್ತಾ. 6:9, 10) ಯೆಹೋವನ ಹೆಸರಿನ ಪವಿತ್ರೀಕರಣಕ್ಕೆ, ದೇವರ ರಾಜ್ಯದ ಆಳ್ವಿಕೆಗೆ, ಆತನ ಚಿತ್ತದ ನೆರವೇರಿಕೆಗೆ ವಿಮೋಚನಾ ಮೌಲ್ಯ ಹೇಗೆ ಸಂಬಂಧಿಸಿದೆ ಎಂದು ಈಗ ನೋಡೋಣ.
“ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ”
3. (ಎ) ಯೆಹೋವನ ಹೆಸರು ಏನನ್ನು ಸೂಚಿಸುತ್ತದೆ? (ಬಿ) ಸೈತಾನನು ಯೆಹೋವನ ಹೆಸರಿಗೆ ಹೇಗೆ ಮಸಿಬಳಿದನು?
3 ಆ ಪ್ರಾರ್ಥನೆಯಲ್ಲಿ ಯೇಸು ಮೊಟ್ಟಮೊದಲು ಹೇಳಿದ್ದು, ಯೆಹೋವನ ನಾಮ ಪವಿತ್ರೀಕರಿಸಲ್ಪಡಲಿ ಎಂದು. ಯೆಹೋವನ ಹೆಸರು ಆತನು ಯಾರೆಂದು ಸೂಚಿಸುತ್ತದೆ. ಇಡೀ ವಿಶ್ವದಲ್ಲಿ ಆತನೇ ಅತಿ ಶಕ್ತಿಶಾಲಿ, ನೀತಿವಂತನು. ಯೇಸು ಆತನನ್ನು “ಪವಿತ್ರನಾದ ತಂದೆ” ಎಂದೂ ಕರೆದನು. (ಯೋಹಾ. 17:11) ಯೆಹೋವನು ಪವಿತ್ರನಾಗಿರುವುದರಿಂದ ಆತನು ಮಾಡುವ ಪ್ರತಿಯೊಂದು ಕೆಲಸವೂ ಪವಿತ್ರ. ಆತನ ನಿಯಮಗಳು ಸಹ ಪವಿತ್ರ. ಆದರೆ ದೇವರು ಈ ರೀತಿ ಮಾನವರಿಗಾಗಿ ನಿಯಮಗಳನ್ನು, ಮಟ್ಟಗಳನ್ನು ಸ್ಥಾಪಿಸಲು ಯಾವ ಹಕ್ಕಿದೆಯೆಂದು ಸೈತಾನನು ಏದೆನಿನಲ್ಲಿ ಕುತಂತ್ರದಿಂದ ಪ್ರಶ್ನಿಸಿದನು. ಯೆಹೋವನ ಬಗ್ಗೆ ಸುಳ್ಳು ಹೇಳಿದನು. ಹೀಗೆ ಆತನ ಹೆಸರಿಗೆ ಮಸಿಬಳಿದನು.—ಆದಿ. 3:1-5.
4. ದೇವರ ಹೆಸರನ್ನು ಪವಿತ್ರೀಕರಿಸಲು ಯೇಸು ಏನು ಮಾಡಿದನು?
4 ಯೇಸು ಸೈತಾನನಂತೆ ಅಲ್ಲ, ಆತನಿಗೆ ಯೆಹೋವನ ಹೆಸರಿನ ಬಗ್ಗೆ ತುಂಬ ಗೌರವ. ಅದನ್ನು ಪವಿತ್ರೀಕರಿಸಲಿಕ್ಕಾಗಿ ತನ್ನಿಂದಾದದ್ದೆಲ್ಲವನ್ನು ಮಾಡಿದನು. (ಯೋಹಾ. 17:25, 26) ಯೆಹೋವನ ಮಟ್ಟಗಳು ಸರಿಯಾದದ್ದು, ಆತನು ಹೇಳುವುದೆಲ್ಲವೂ ನಮ್ಮ ಒಳಿತಿಗಾಗಿದೆ ಎಂದು ಯೇಸು ತನ್ನ ನಡತೆ ಹಾಗೂ ಬೋಧನೆಗಳ ಮೂಲಕ ತೋರಿಸಿಕೊಟ್ಟನು. (ಕೀರ್ತನೆ 40:8-10 ಓದಿ.) ಯೇಸು ನರಳಿ ಸಾಯುವಂತೆ ಸೈತಾನನು ಮಾಡಿದರೂ ದೇವರಿಗೆ ನಿಷ್ಠನಾಗಿ ಉಳಿದನು. ಪರಿಪೂರ್ಣ ಮಾನವನು ಯೆಹೋವನಿಗೆ ಸಂಪೂರ್ಣ ವಿಧೇಯತೆ ತೋರಿಸಲು ಸಾಧ್ಯವಿದೆಯೆಂದು ಸಾಬೀತುಪಡಿಸಿದನು.
5. ದೇವರ ಹೆಸರನ್ನು ನಾವು ಪವಿತ್ರವೆಂದು ಎಣಿಸುತ್ತೇವೆಂದು ಹೇಗೆ ತೋರಿಸಬಹುದು?
5 ನಮಗೂ ಯೆಹೋವನ ಹೆಸರಿನ ಬಗ್ಗೆ ತುಂಬ ಗೌರವವಿದೆಯೆಂದು ಹೇಗೆ ತೋರಿಸಬಹುದು? ನಮ್ಮ ನಡತೆಯ ಮೂಲಕ. ನಾವು ಪವಿತ್ರರಾಗಿರಬೇಕೆಂದು ಯೆಹೋವನು ಬಯಸುತ್ತಾನೆ. (1 ಪೇತ್ರ 1:15, 16 ಓದಿ.) ಹಾಗಾಗಿ ನಾವು ಆತನೊಬ್ಬನನ್ನೇ ಆರಾಧಿಸುತ್ತೇವೆ. ಆತನಿಗೆ ಮನಸಾರೆ ವಿಧೇಯರಾಗುತ್ತೇವೆ. ನಾವು ಹಿಂಸೆ-ವಿರೋಧವನ್ನು ಎದುರಿಸುತ್ತಿರುವಾಗಲೂ ಆತನು ಕಲಿಸಿಕೊಟ್ಟಂಥ ರೀತಿಯಲ್ಲಿ ಜೀವಿಸಲು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡುತ್ತೇವೆ. ಯೆಹೋವನ ನಿಯಮಗಳು, ಮಟ್ಟಗಳಿಗನುಸಾರ ಜೀವಿಸುವ ಮೂಲಕ ಆತನ ಹೆಸರಿಗೆ ಮಹಿಮೆ ತರುತ್ತೇವೆ. (ಮತ್ತಾ. 5:14-16) ಯೆಹೋವನ ನಿಯಮಗಳಿಂದ ನಮಗೆ ಒಳ್ಳೇದೇ ಆಗುತ್ತದೆ ಮತ್ತು ಸೈತಾನನು ಹೇಳಿದ್ದೆಲ್ಲ ಸುಳ್ಳು ಎಂದು ತೋರಿಸಿಕೊಡುತ್ತೇವೆ. ನಾವು ಪರಿಪೂರ್ಣರಲ್ಲ, ಹಾಗಾಗಿ ಎಷ್ಟೋ ಸಲ ತಪ್ಪುಮಾಡುತ್ತೇವೆ. ಆದರೆ ನಾವು ಪಶ್ಚಾತ್ತಾಪಪಟ್ಟು, ದೇವರ ಹೆಸರಿಗೆ ಅಗೌರವ ತರುವಂಥ ಕೆಲಸ ಮಾಡುವುದನ್ನು ನಿಲ್ಲಿಸುತ್ತೇವೆ.—ಕೀರ್ತ. 79:9.
6. ನಾವು ಅಪರಿಪೂರ್ಣರಾಗಿದ್ದರೂ ಯೆಹೋವನು ನಮ್ಮನ್ನು ನೀತಿವಂತರೆಂದು ಎಣಿಸುತ್ತಾನೆ ಏಕೆ?
6 ನಾವು ವಿಮೋಚನಾ ಮೌಲ್ಯದಲ್ಲಿ ನಂಬಿಕೆ ತೋರಿಸಿದರೆ ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ. ಆತನಿಗೆ ಸಮರ್ಪಣೆ ಮಾಡಿಕೊಂಡವರನ್ನು ತನ್ನ ಆರಾಧಕರಾಗಿ ಸ್ವೀಕರಿಸುತ್ತಾನೆ. ಅವರನ್ನು ನೀತಿವಂತರೆಂದು ಘೋಷಿಸುತ್ತಾನೆ. ಅಭಿಷಿಕ್ತ ಕ್ರೈಸ್ತರನ್ನು ತನ್ನ ಪುತ್ರರಾಗಿ ಮತ್ತು ‘ಬೇರೆ ಕುರಿಗಳನ್ನು’ ತನ್ನ ಸ್ನೇಹಿತರಾಗಿ ಸ್ವೀಕರಿಸುತ್ತಾನೆ. (ಯೋಹಾ. 10:16; ರೋಮ. 5:1, 2; ಯಾಕೋ. 2:21-25) ಹೀಗೆ, ಈಗಲೂ ವಿಮೋಚನಾ ಮೌಲ್ಯದಿಂದಾಗಿ ನಮ್ಮ ತಂದೆಯಾದ ಯೆಹೋವನೊಟ್ಟಿಗೆ ಒಳ್ಳೇ ಸಂಬಂಧವನ್ನು ಇಟ್ಟುಕೊಳ್ಳಲು ಮತ್ತು ಆತನ ಹೆಸರನ್ನು ಪವಿತ್ರೀಕರಿಸಲು ಸಾಧ್ಯವಾಗುತ್ತಿದೆ.
“ನಿನ್ನ ರಾಜ್ಯವು ಬರಲಿ”
7. ವಿಮೋಚನಾ ಮೌಲ್ಯದಿಂದಾಗಿ ಏನೆಲ್ಲಾ ಸಾಧ್ಯವಾಗಲಿದೆ?
7 ಮಾದರಿ ಪ್ರಾರ್ಥನೆಯಲ್ಲಿ ಯೇಸು ನಂತರ ಹೇಳಿದ್ದು: “ನಿನ್ನ ರಾಜ್ಯವು ಬರಲಿ.” ವಿಮೋಚನಾ ಮೌಲ್ಯಕ್ಕೂ ದೇವರ ರಾಜ್ಯಕ್ಕೂ ಏನು ಸಂಬಂಧ? ದೇವರ ರಾಜ್ಯದಲ್ಲಿ ಯೇಸುವಿನ ಜೊತೆ 1,44,000 ಮಂದಿ ರಾಜರಾಗಿ, ಯಾಜಕರಾಗಿ ಆಳಲಿದ್ದಾರೆ. ಭೂಮಿಯಿಂದ ಆಯ್ಕೆಯಾಗಿರುವ ಇವರು ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗಲು ಸಾಧ್ಯವಾಗುವುದೇ ವಿಮೋಚನಾ ಮೌಲ್ಯದಿಂದಾಗಿ. (ಪ್ರಕ. 5:9, 10; 14:1) ಇವರೆಲ್ಲರೂ 1,000 ವರ್ಷಗಳ ವರೆಗೆ ಭೂಮಿಯನ್ನು ಆಳುವರು. ಆ ಸಮಯದಲ್ಲಿ ಯೆಹೋವನು ತನ್ನ ರಾಜ್ಯದ ಮೂಲಕ ಇಡೀ ಭೂಮಿಯನ್ನು ಪರದೈಸಾಗಿ ಮಾಡಿ, ಎಲ್ಲ ಮಾನವರು ಪರಿಪೂರ್ಣರಾಗುವಂತೆ ಮಾಡುವನು. ಆಗ ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿರುವ ಯೆಹೋವನ ಸೇವಕರೆಲ್ಲರೂ ಒಂದೇ ಕುಟುಂಬವಾಗುವರು. (ಪ್ರಕ. 5:13; 20:6) ಯೇಸು ಸೈತಾನನನ್ನು ನಾಶಮಾಡಿ ಅವನಿಂದಾಗಿ ಹುಟ್ಟಿಕೊಂಡಿರುವ ಎಲ್ಲ ಸಮಸ್ಯೆಗಳನ್ನು ತೆಗೆದುಹಾಕುವನು.—ಆದಿ. 3:15.
8. (ಎ) ದೇವರ ರಾಜ್ಯ ಎಷ್ಟು ಪ್ರಾಮುಖ್ಯವೆಂದು ಅರ್ಥಮಾಡಿಕೊಳ್ಳಲು ಯೇಸು ತನ್ನ ಶಿಷ್ಯರಿಗೆ ಹೇಗೆ ಸಹಾಯಮಾಡಿದನು? (ಬಿ) ನಾವಿಂದು ಆ ರಾಜ್ಯಕ್ಕೆ ಹೇಗೆ ಬೆಂಬಲ ತೋರಿಸುತ್ತಿದ್ದೇವೆ?
8 ದೇವರ ರಾಜ್ಯ ಎಷ್ಟು ಪ್ರಾಮುಖ್ಯವೆಂದು ಅರ್ಥಮಾಡಿಕೊಳ್ಳಲು ಯೇಸು ತನ್ನ ಶಿಷ್ಯರಿಗೆ ಸಹಾಯಮಾಡಿದನು. ಹೇಗೆ? ಆತನ ದೀಕ್ಷಾಸ್ನಾನವಾದ ಕೂಡಲೇ ಎಲ್ಲೆಡೆಯೂ “ದೇವರ ರಾಜ್ಯದ ಸುವಾರ್ತೆಯನ್ನು” ಸಾರಲು ಆರಂಭಿಸಿದನು. (ಲೂಕ 4:43) ತನ್ನ ಶಿಷ್ಯರು “ಭೂಮಿಯ ಕಟ್ಟಕಡೆಯ ವರೆಗೂ” ತನ್ನ ಸಾಕ್ಷಿಗಳಾಗಿರಬೇಕೆಂದು ಹೇಳಿದನು. (ಅ. ಕಾ. 1:6-8) ಇಂದು ನಾವು ರಾಜ್ಯದ ಬಗ್ಗೆ ಸಾರುವುದರಿಂದ ಜನರಿಗೆ ವಿಮೋಚನಾ ಮೌಲ್ಯದ ಬಗ್ಗೆ ಕಲಿಯಲು ಮತ್ತು ದೇವರ ರಾಜ್ಯದ ಪ್ರಜೆಗಳಾಗಲು ಅವಕಾಶ ಸಿಗುತ್ತಿದೆ. ಲೋಕದಲ್ಲೆಲ್ಲಾ ಸುವಾರ್ತೆಯನ್ನು ಸಾರಲು ಅಭಿಷಿಕ್ತರೊಂದಿಗೆ ಕೈಜೋಡಿಸುವ ಮೂಲಕ ನಾವು ಆ ರಾಜ್ಯದ ನಿಷ್ಠಾವಂತ ಪ್ರಜೆಗಳೆಂದು ತೋರಿಸುತ್ತಿದ್ದೇವೆ.—ಮತ್ತಾ. 24:14; 25:40.
‘ನಿನ್ನ ಚಿತ್ತ ನೆರವೇರಲಿ’
9. ಮಾನವರ ಬಗ್ಗೆ ಯೆಹೋವನಿಗಿದ್ದ ಉದ್ದೇಶ ನೆರವೇರುವುದೆಂದು ನಮಗೇಕೆ ಭರವಸೆಯಿದೆ?
9 “ನಿನ್ನ ಚಿತ್ತವು . . . ನೆರವೇರಲಿ” ಎಂದೂ ಯೇಸು ಮಾದರಿ ಪ್ರಾರ್ಥನೆಯಲ್ಲಿ ಹೇಳಿದನು. ಅದರ ಅರ್ಥವೇನಾಗಿತ್ತು? ಒಂದು ವಿಷಯವನ್ನು ಮಾಡುತ್ತೇನೆಂದು ಯೆಹೋವನು ಮಾತು ಕೊಟ್ಟಮೇಲೆ ಅದನ್ನು ಖಂಡಿತ ಮಾಡುತ್ತಾನೆ. (ಯೆಶಾ. 55:11) ಇದು ಮಾನವರ ಬಗ್ಗೆ ಯೆಹೋವನಿಗಿದ್ದ ಚಿತ್ತ ಅಂದರೆ ಉದ್ದೇಶದ ವಿಷಯದಲ್ಲೂ ಸತ್ಯ. ಸೈತಾನನ ದಂಗೆಯಿಂದಾಗಿ ಆ ಉದ್ದೇಶ ನೆಲಕಚ್ಚಲಿಲ್ಲ. ಆದಾಮಹವ್ವರಿಗೆ ಹುಟ್ಟುವ ಪರಿಪೂರ್ಣ ಮಕ್ಕಳಿಂದ ಭೂಮಿ ತುಂಬಬೇಕೆನ್ನುವುದು ದೇವರ ಉದ್ದೇಶವಾಗಿತ್ತು. (ಆದಿ. 1:28) ಒಂದುವೇಳೆ ಆದಾಮಹವ್ವರಿಗೆ ಮಕ್ಕಳಾಗುವ ಮುಂಚೆಯೇ ಅವರು ಸತ್ತುಹೋಗಿರುತ್ತಿದ್ದರೆ ಆತನ ಆ ಉದ್ದೇಶ ನೆರವೇರುತ್ತಿರಲಿಲ್ಲ. ಹಾಗಾಗಿ ಅವರಿಗೆ ಮಕ್ಕಳಾಗುವಂತೆ ಯೆಹೋವನು ಅನುಮತಿಸಿದನು. ನಂಬಿಕೆಯಿಡುವ ಮಾನವರಿಗೆ ಪರಿಪೂರ್ಣರಾಗುವ ಮತ್ತು ಸದಾಕಾಲ ಜೀವಿಸುವ ಅವಕಾಶ ಸಿಗುವುದೇ ವಿಮೋಚನಾ ಮೌಲ್ಯದಿಂದಾಗಿ. ಯೆಹೋವನು ಮಾನವರನ್ನು ತುಂಬ ಪ್ರೀತಿಸುತ್ತಾನೆ. ಆತನ ಆರಂಭದ ಉದ್ದೇಶದಂತೆ ನಾವು ಸಂತೋಷದಿಂದ ಜೀವನ ಮಾಡಬೇಕೆಂದು ಬಯಸುತ್ತಾನೆ.
10. ಸತ್ತುಹೋಗಿರುವ ಮಾನವರಿಗೆ ವಿಮೋಚನಾ ಮೌಲ್ಯದಿಂದಾಗಿ ಹೇಗೆ ಪ್ರಯೋಜನವಾಗಲಿದೆ?
10 ಯೆಹೋವನ ಬಗ್ಗೆ ತಿಳಿಯುವ ಅವಕಾಶ ಸಿಗದೆ ತೀರಿಹೋದ ಕೋಟಿಗಟ್ಟಲೆ ಜನರ ಕುರಿತೇನು? ಅವರೆಲ್ಲರೂ ಬದುಕಬೇಕೆನ್ನುವುದೇ ಯೆಹೋವನ ಆಸೆ. ಹಾಗಾಗಿ ವಿಮೋಚನಾ ಮೌಲ್ಯದಿಂದಾಗಿ ಅವರ ಪುನರುತ್ಥಾನವಾಗಲಿದೆ. ಅವರಿಗೆ ಯೆಹೋವನ ಬಗ್ಗೆ ಕಲಿಯಲು ಮತ್ತು ಸದಾಕಾಲ ಜೀವಿಸಲು ಅವಕಾಶ ಸಿಗಲಿದೆ. (ಅ. ಕಾ. 24:15) ಯೆಹೋವನು ಜೀವದ ಮೂಲನಾಗಿರುವುದರಿಂದ ಪುನರುತ್ಥಾನ ಆಗಿ ಬರುವವರಿಗೆ ತಂದೆ ಆಗಿದ್ದಾನೆ. (ಕೀರ್ತ. 36:9) ಆದ್ದರಿಂದಲೇ ಯೇಸು ಮಾದರಿ ಪ್ರಾರ್ಥನೆಯಲ್ಲಿ “ಸ್ವರ್ಗದಲ್ಲಿರುವ ನಮ್ಮ ತಂದೆ” ಎಂದು ಹೇಳಿದ್ದು ಸೂಕ್ತವಾಗಿತ್ತು. (ಮತ್ತಾ. 6:9) ಸತ್ತವರ ಪುನರುತ್ಥಾನ ಮಾಡುವುದರಲ್ಲಿ ಯೆಹೋವನು ಯೇಸುವಿಗೆ ತುಂಬ ಮುಖ್ಯವಾದ ಪಾತ್ರವನ್ನು ಕೊಟ್ಟಿದ್ದಾನೆ. ಆದ್ದರಿಂದ ಯೇಸು “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ” ಎಂದು ಹೇಳಿದನು.—ಯೋಹಾ. 6:40, 44; 11:25.
11. “ಮಹಾ ಸಮೂಹ”ದವರಿಗಾಗಿ ದೇವರ ಉದ್ದೇಶವೇನಾಗಿದೆ?
11 ಯೇಸು ಹೀಗೂ ಹೇಳಿದನು: ಯಾರು ದೇವರ ಚಿತ್ತವನ್ನು ಮಾಡುತ್ತಾರೊ ಅವರೇ ‘ತನಗೆ ತಮ್ಮ, ತಂಗಿ, ತಾಯಿ ಆಗಿದ್ದಾರೆ.’ (ಮಾರ್ಕ 3:35) ಎಲ್ಲಾ ಜನಾಂಗ, ಕುಲ, ಭಾಷೆಯವರು ತನ್ನ ಆರಾಧಕರಾಗಬೇಕು ಎನ್ನುವುದು ಯೆಹೋವನ ಉದ್ದೇಶ. ಇವರನ್ನು “ಯಾವ ಮನುಷ್ಯನಿಂದಲೂ ಎಣಿಸಲಾಗದಂಥ ಒಂದು ಮಹಾ ಸಮೂಹ” ಎಂದು ಕರೆಯಲಾಗಿದೆ. ಇವರು ವಿಮೋಚನಾ ಮೌಲ್ಯದಲ್ಲಿ ನಂಬಿಕೆ ಇಡುತ್ತಾರೆ. ದೇವರ ಮಾತಿಗೆ ವಿಧೇಯರಾಗುತ್ತಾರೆ. ಹೃದಯದಾಳದಿಂದ ಆತನನ್ನು ಸ್ತುತಿಸುತ್ತಾ “ಸಿಂಹಾಸನದ ಮೇಲೆ ಕುಳಿತುಕೊಂಡಿರುವ ನಮ್ಮ ದೇವರಿಗೂ ಕುರಿಮರಿಗೂ ನಮ್ಮ ರಕ್ಷಣೆಗಾಗಿ ನಾವು ಋಣಿಗಳು” ಎಂದು ಹೇಳುತ್ತಾರೆ.—ಪ್ರಕ. 7:9, 10.
12. ಮಾನವರಿಗಾಗಿ ಯೆಹೋವನ ಉದ್ದೇಶದ ಬಗ್ಗೆ ಮಾದರಿ ಪ್ರಾರ್ಥನೆಯಿಂದ ಏನು ಕಲಿತೆವು?
12 ಯೇಸು ಕಲಿಸಿದ ಮಾದರಿ ಪ್ರಾರ್ಥನೆಯಿಂದ ನಾವು ಯೆಹೋವನ ಬಗ್ಗೆ ಮತ್ತು ಮಾನವರಿಗಾಗಿ ಆತನಿಗಿರುವ ಉದ್ದೇಶದ ಬಗ್ಗೆ ಅನೇಕ ವಿಷಯಗಳನ್ನು ಕಲಿತೆವು. ಒಂದು, ನಾವು ಆ ಪ್ರಾರ್ಥನೆಗೆ ತಕ್ಕಂತೆ ಯೆಹೋವನ ಹೆಸರನ್ನು ಪವಿತ್ರೀಕರಿಸಲು ನಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಬೇಕು. (ಯೆಶಾ. 8:13) ಯೇಸುವಿನ ಹೆಸರಿನ ಅರ್ಥ “ರಕ್ಷಣೆ ಯೆಹೋವನಿಂದ.” ಆತನು ಕೊಟ್ಟ ವಿಮೋಚನಾ ಮೌಲ್ಯದಿಂದ ನಮಗೆ ರಕ್ಷಣೆ ಸಿಗುತ್ತದೆ. ಇದು ಯೆಹೋವನ ಹೆಸರಿಗೆ ಮಹಿಮೆ, ಗೌರವ ತರುತ್ತದೆ. ಎರಡು, ದೇವರ ರಾಜ್ಯದ ಮೂಲಕ ವಿಧೇಯ ಮಾನವರಿಗೆ ವಿಮೋಚನಾ ಮೌಲ್ಯದ ಪ್ರಯೋಜನಗಳು ಸಿಗಲಿವೆ. ಮೂರು, ದೇವರ ಚಿತ್ತವು ನೆರವೇರುವುದನ್ನು ಯಾವುದೂ ತಡೆಯಲಾರದೆಂಬ ಭರವಸೆಯನ್ನು ಈ ಮಾದರಿ ಪ್ರಾರ್ಥನೆ ಕೊಡುತ್ತದೆ.—ಕೀರ್ತ. 135:6; ಯೆಶಾ. 46:9, 10.
ವಿಮೋಚನಾ ಮೌಲ್ಯಕ್ಕಾಗಿ ಕೃತಜ್ಞತೆ ತೋರಿಸಿ
13. ದೀಕ್ಷಾಸ್ನಾನ ತೆಗೆದುಕೊಳ್ಳುವ ಮೂಲಕ ನಾವೇನು ತೋರಿಸಿಕೊಡುತ್ತೇವೆ?
13 ವಿಮೋಚನಾ ಮೌಲ್ಯಕ್ಕಾಗಿ ನಮ್ಮ ಕೃತಜ್ಞತೆ ತೋರಿಸುವ ಮುಖ್ಯವಾದ ವಿಧ ನಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಣೆ ಮಾಡಿ, ದೀಕ್ಷಾಸ್ನಾನ ಪಡೆಯುವುದೇ. ಈ ಮೂಲಕ ವಿಮೋಚನಾ ಮೌಲ್ಯದಲ್ಲಿ ನಮ್ಮ ನಂಬಿಕೆಯನ್ನು ತೋರಿಸುತ್ತೇವೆ ಮತ್ತು ನಾವು “ಯೆಹೋವನವರೇ” ಎಂದು ತೋರಿಸುತ್ತೇವೆ. (ರೋಮ. 14:8) “ಒಳ್ಳೇ ಮನಸ್ಸಾಕ್ಷಿ” ಕೊಡುವಂತೆಯೂ ದೀಕ್ಷಾಸ್ನಾನದ ಸಮಯದಲ್ಲಿ ಬೇಡಿಕೊಳ್ಳುತ್ತೇವೆ. (1 ಪೇತ್ರ 3:21) ಈ ಬೇಡಿಕೆಯನ್ನು ಯೆಹೋವನು ವಿಮೋಚನಾ ಮೌಲ್ಯದ ಆಧಾರದ ಮೇಲೆ ಪೂರೈಸುತ್ತಾನೆ. ಆತನು ಮಾತುಕೊಟ್ಟಂತೆ ಎಲ್ಲವನ್ನೂ ಕೊಡುವನೆಂದು ನಾವು ಸಂಪೂರ್ಣವಾಗಿ ನಂಬಬಹುದು.—ರೋಮ. 8:32.
14. ನಾವು ಬೇರೆಯವರನ್ನು ಪ್ರೀತಿಸಬೇಕೆಂದು ಯೆಹೋವನು ಆಜ್ಞೆ ಕೊಟ್ಟಿರುವುದೇಕೆ?
14 ಯೆಹೋವನು ಯಾವುದೇ ಕೆಲಸ ಮಾಡಿದರೂ ಅದನ್ನು ಅಪಾರ ಪ್ರೀತಿಯ ಕಾರಣ ಮಾಡುತ್ತಾನೆ. ತನ್ನ ಆರಾಧಕರು ತನ್ನನ್ನು ಅನುಕರಿಸುತ್ತಾ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂದು ಬಯಸುತ್ತಾನೆ. (1 ಯೋಹಾ. 4:8-11) ನಾವು ಜನರಿಗೆ ಪ್ರೀತಿ ತೋರಿಸುವಾಗ ‘ಸ್ವರ್ಗದಲ್ಲಿರುವ ನಮ್ಮ ತಂದೆಯ ಮಕ್ಕಳಾಗಲು’ ಬಯಸುತ್ತೇವೆಂದೂ ತೋರಿಸುತ್ತೇವೆ. (ಮತ್ತಾ. 5:43-48) ಅತಿ ಮುಖ್ಯವಾದ ಎರಡು ಆಜ್ಞೆಗಳಲ್ಲಿ ಮೊದಲನೇದು ಯೆಹೋವನನ್ನು ಪ್ರೀತಿಸಬೇಕು ಎಂದಾಗಿದ್ದರೆ, ಎರಡನೇದು ಬೇರೆಯವರನ್ನು ಪ್ರೀತಿಸಬೇಕು ಎಂದಾಗಿದೆ. (ಮತ್ತಾ. 22:37-40) ನಾವು ಜನರನ್ನು ಪ್ರೀತಿಸುತ್ತೇವೆಂದು ತೋರಿಸುವ ಒಂದು ವಿಧ, ಅವರಿಗೆ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದೇ ಆಗಿದೆ. ಬೇರೆಯವರನ್ನು, ವಿಶೇಷವಾಗಿ ನಮ್ಮ ಸಹೋದರರನ್ನು ಪ್ರೀತಿಸಬೇಕೆಂದು ಯೆಹೋವನು ಕೊಟ್ಟಿರುವ ಆಜ್ಞೆಯನ್ನು ನಾವು ಪಾಲಿಸಿದರೆ, ಆತನ ಮೇಲೆ ನಮಗಿರುವ ಪ್ರೀತಿ “ಪರಿಪೂರ್ಣಗೊಳಿಸಲ್ಪಡುತ್ತದೆ.”—1 ಯೋಹಾ. 4:12, 20.
ವಿಮೋಚನಾ ಮೌಲ್ಯದಿಂದಾಗಿ ಆಶೀರ್ವಾದಗಳು ಸಿಗುತ್ತವೆ
15. (ಎ) ಯೆಹೋವನಿಂದ ನಮಗೆ ಈಗ ಯಾವ ಆಶೀರ್ವಾದಗಳು ಸಿಗುತ್ತವೆ? (ಬಿ) ಭವಿಷ್ಯದಲ್ಲಿ ಯಾವ ಆಶೀರ್ವಾದಗಳು ಸಿಗಲಿವೆ?
15 ನಮಗೆ ವಿಮೋಚನಾ ಮೌಲ್ಯದಲ್ಲಿ ನಂಬಿಕೆ ಇರುವುದರಿಂದ ನಮ್ಮ ಪಾಪಗಳನ್ನು ‘ಅಳಿಸಿಹಾಕಲು’ ಸಾಧ್ಯವಿದೆ ಎಂದು ಯೆಹೋವನು ಆಶ್ವಾಸನೆ ಕೊಡುತ್ತಾನೆ. ನಮ್ಮ ಪಾಪಗಳನ್ನು ಆತನು ಸಂಪೂರ್ಣವಾಗಿ ಕ್ಷಮಿಸುತ್ತಾನೆ. (ಅ. ಕಾರ್ಯಗಳು 3:19-21 ಓದಿ.) ನಾವು ಈ ಹಿಂದೆ ಚರ್ಚಿಸಿದಂತೆ ವಿಮೋಚನಾ ಮೌಲ್ಯದ ಕಾರಣ ಯೆಹೋವನು ಕೆಲವು ಮಾನವರನ್ನು ತನ್ನ ಪುತ್ರರಾಗಿ ದತ್ತುತೆಗೆದುಕೊಳ್ಳಲು ಮತ್ತು ಸ್ವರ್ಗಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತಿದೆ. ಇವರು ಅಭಿಷಿಕ್ತರು. (ರೋಮ. 8:15-17) ‘ಬೇರೆ ಕುರಿಗಳನ್ನು’ ಭೂಮಿ ಮೇಲಿರುವ ತನ್ನ ಕುಟುಂಬದ ಭಾಗವಾಗುವಂತೆ ಯೆಹೋವನು ಆಮಂತ್ರಿಸುತ್ತಾನೆ. ಅವರು ಪರಿಪೂರ್ಣರಾದ ನಂತರ ಒಂದು ಅಂತಿಮ ಪರೀಕ್ಷೆ ನಡೆಯಲಿದೆ. ಆ ಪರೀಕ್ಷೆಯಲ್ಲಿ ಅವರು ಯೆಹೋವನಿಗೆ ನಿಷ್ಠರಾಗಿ ಉಳಿದರೆ, ಅವರನ್ನು ತನ್ನ ಮಕ್ಕಳಾಗಿ ದತ್ತು ಸ್ವೀಕರಿಸುವನು. (ರೋಮ. 8:20, 21; ಪ್ರಕ. 20:7-9) ಯೆಹೋವನು ತನ್ನೆಲ್ಲ ಮಕ್ಕಳನ್ನು ನಿತ್ಯಕ್ಕೂ ಪ್ರೀತಿಸುತ್ತಾ ಇರುವನು. ವಿಮೋಚನಾ ಮೌಲ್ಯದಿಂದಾಗಿ ಅವರಿಗೆ ಸದಾಕಾಲವೂ ಆಶೀರ್ವಾದಗಳು ಸಿಗುವವು. (ಇಬ್ರಿ. 9:12) ಯೆಹೋವನು ನಮಗೆ ವಿಮೋಚನಾ ಮೌಲ್ಯವೆಂಬ ಅಮೂಲ್ಯ ಉಡುಗೊರೆ ಕೊಟ್ಟಿದ್ದಾನೆ. ಅದನ್ನು ಯಾರೂ ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ!
16. ವಿಮೋಚನಾ ಮೌಲ್ಯ ನಮಗೆ ಹೇಗೆ ಬಿಡುಗಡೆ ಕೊಡುತ್ತದೆ?
16 ನಮ್ಮ ಪಾಪಗಳಿಗೆ ನಾವು ಪಶ್ಚಾತ್ತಾಪಪಟ್ಟರೆ, ಮುಂದೊಂದು ದಿನ ಯೆಹೋವನ ಕುಟುಂಬದ ಭಾಗವಾಗುವುದನ್ನು ತಡೆಯಲು ಪಿಶಾಚನಿಗೆ ಆಗುವುದಿಲ್ಲ. ಯೇಸು “ಎಲ್ಲ ಕಾಲಕ್ಕಾಗಿ ಒಂದೇ ಸಾರಿ” ಸತ್ತನು. ಹೀಗೆ ವಿಮೋಚನಾ ಮೌಲ್ಯವನ್ನು ಶಾಶ್ವತವಾಗಿ ತೆರಲಾಗಿದೆ. (ಇಬ್ರಿ. 9:24-26) ಆದಾಮನಿಂದಾಗಿ ನಮಗೆ ಬಂದಿರುವ ಪಾಪ ಮತ್ತು ಮರಣದಿಂದ ಅದು ನಮ್ಮನ್ನು ಬಿಡಿಸುತ್ತದೆ. ಅದು ನಮ್ಮನ್ನು ಸೈತಾನನ ಲೋಕಕ್ಕೆ ದಾಸರಾಗುವುದರಿಂದ ಮತ್ತು ಮರಣಭಯದಿಂದ ಬಿಡಿಸಬಲ್ಲದು.—ಇಬ್ರಿ. 2:14, 15.
17. ಯೆಹೋವನ ಪ್ರೀತಿ ಬಗ್ಗೆ ನಿಮಗೆ ಹೇಗನಿಸುತ್ತದೆ?
17 ದೇವರು ಕೊಟ್ಟ ಎಲ್ಲ ಮಾತು ಖಂಡಿತ ನೆರವೇರುತ್ತದೆ. ಯೆಹೋವನು ಪ್ರಕೃತಿಯಲ್ಲಿ ಇಟ್ಟಿರುವ ನಿಯಮಗಳು ಹೇಗೆ ಬದಲಾಗುವುದಿಲ್ಲವೊ ಹಾಗೆ ಆತನೂ ಬದಲಾಗುವುದಿಲ್ಲ. ಆತನು ಯಾವತ್ತೂ ನಮ್ಮನ್ನು ನಿರಾಶೆಗೊಳಿಸುವುದಿಲ್ಲ. (ಮಲಾ. 3:6) ಆತನು ನಮಗೆ ಬರೀ ಜೀವದ ವರ ಕೊಟ್ಟಿಲ್ಲ, ಪ್ರೀತಿಯನ್ನೂ ಕೊಟ್ಟಿದ್ದಾನೆ. “ನಮ್ಮ ವಿಷಯದಲ್ಲಿ ದೇವರಿಗಿರುವ ಪ್ರೀತಿಯನ್ನು ನಾವೇ ತಿಳಿದುಕೊಂಡಿದ್ದೇವೆ ಮತ್ತು ಅದನ್ನು ನಂಬಿದ್ದೇವೆ. ದೇವರು ಪ್ರೀತಿಯಾಗಿದ್ದಾನೆ.” (1 ಯೋಹಾ. 4:16) ಆತನು ಮಾತು ಕೊಟ್ಟಿರುವಂತೆ ಈ ಭೂಮಿ ಬೇಗನೆ ಒಂದು ಸುಂದರ ಪರದೈಸಾಗಲಿದೆ. ಅಲ್ಲಿ ಜೀವಿಸುವವರೆಲ್ಲರೂ ಯೆಹೋವನನ್ನು ಅನುಕರಿಸುತ್ತಾ ಒಬ್ಬರನ್ನೊಬ್ಬರು ಪ್ರೀತಿಸುವರು. ಆಗ ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿರುವ ಆತನ ಎಲ್ಲ ಸೇವಕರು ಹೀಗನ್ನುವರು: “ಸ್ತುತಿಯೂ ಮಹಿಮೆಯೂ ವಿವೇಕವೂ ಕೃತಜ್ಞತಾಸ್ತುತಿಯೂ ಗೌರವವೂ ಶಕ್ತಿಯೂ ಬಲವೂ ನಮ್ಮ ದೇವರಿಗೆ ಸದಾಸರ್ವದಾ ಸಲ್ಲುತ್ತಾ ಇರಲಿ. ಆಮೆನ್.”—ಪ್ರಕ. 7:12.