ಲೋಕದಲ್ಲಿದ್ದರೂ ಅದರ ಭಾಗವಲ್ಲ
“ನೀವು ಲೋಕದ ಕಡೆಯವರಲ್ಲದೆ ಇರುವದರಿಂದಲೂ [“ಲೋಕದ ಭಾಗವಾಗಿಲ್ಲದಿರುವುದರಿಂದಲೂ,” NW] . . . ಲೋಕವು ನಿಮ್ಮ ಮೇಲೆ ದ್ವೇಷಮಾಡುತ್ತದೆ.”—ಯೋಹಾನ 15:19.
1. ಕ್ರೈಸ್ತರಿಗೆ ಲೋಕದೊಂದಿಗೆ ಯಾವ ಸಂಬಂಧವಿದೆ, ಆದರೂ ಲೋಕವು ಅವರನ್ನು ಹೇಗೆ ವೀಕ್ಷಿಸುತ್ತದೆ?
ತನ್ನ ಶಿಷ್ಯರೊಂದಿಗಿನ ಕೊನೆಯ ರಾತ್ರಿಯಂದು, ಯೇಸು ಅವರಿಗೆ, “ನೀವು ಲೋಕದ ಭಾಗವಾಗಿಲ್ಲ” ಎಂದು ಹೇಳಿದನು. ಯಾವ ಲೋಕದ ಕುರಿತು ಅವನು ಮಾತಾಡುತ್ತಿದ್ದನು? ಮೊದಲಿನ ಒಂದು ಸಂದರ್ಭದಲ್ಲಿ, “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು,” ಎಂದು ಅವನು ಹೇಳಿರಲಿಲ್ಲವೊ? (ಯೋಹಾನ 3:16) ಶಿಷ್ಯರು ಆ ಲೋಕದ ಭಾಗವಾಗಿದ್ದುದೇನೋ ಸ್ಪಷ್ಟ, ಏಕೆಂದರೆ ನಿತ್ಯಜೀವಕ್ಕಾಗಿ ಯೇಸುವಿನಲ್ಲಿ ನಂಬಿಕೆಯಿಟ್ಟ ಪ್ರಥಮರು ಅವರಾಗಿದ್ದರು. ಹಾಗಾದರೆ ತನ್ನ ಶಿಷ್ಯರು ಲೋಕದಿಂದ ಪ್ರತ್ಯೇಕರೆಂದು ಯೇಸು ಈಗ ಹೇಳಿದ್ದೇಕೆ? ಮತ್ತು, “ನೀವು ಲೋಕದ ಕಡೆಯವರಲ್ಲದೆ ಇರುವದರಿಂದ . . . ಲೋಕವು ನಿಮ್ಮ ಮೇಲೆ ದ್ವೇಷಮಾಡುತ್ತದೆ,” ಎಂದೂ ಅವನು ಹೇಳಿದ್ದೇಕೆ?—ಯೋಹಾನ 15:19.
2, 3. (ಎ) ಕ್ರೈಸ್ತರು ಯಾವ “ಲೋಕ”ದ ಭಾಗವಾಗಿರಬಾರದಾಗಿತ್ತು? (ಬಿ) ಕ್ರೈಸ್ತರು ಯಾವುದರ ಭಾಗವಾಗಿಲ್ಲವೋ ಆ “ಲೋಕ”ದ ಕುರಿತು ಬೈಬಲು ಏನನ್ನುತ್ತದೆ?
2 ಬೈಬಲು “ಲೋಕ” (ಗ್ರೀಕ್, ಕಾಸ್ಮೋಸ್) ಎಂಬ ಪದವನ್ನು ವಿಭಿನ್ನ ರೀತಿಗಳಲ್ಲಿ ಉಪಯೋಗಿಸುವುದೇ ಇದಕ್ಕಿರುವ ಉತ್ತರ. ಹಿಂದಿನ ಲೇಖನದಲ್ಲಿ ವಿವರಿಸಿರುವಂತೆ, ಬೈಬಲಿನಲ್ಲಿ ಕೆಲವೊಮ್ಮೆ “ಲೋಕ” ಎಂಬ ಪದವು ಸಾಮಾನ್ಯವಾಗಿ ಮಾನವಕುಲವನ್ನು ಸೂಚಿಸುತ್ತದೆ. ದೇವರು ಯಾವುದನ್ನು ಪ್ರೀತಿಸಿದನೊ ಮತ್ತು ಯೇಸು ಯಾವುದಕ್ಕಾಗಿ ಸತ್ತನೊ ಆ ಲೋಕವು ಇದೇ. ಆದರೂ, ಕ್ರೈಸ್ತತ್ವದ ಆಕ್ಸ್ಫರ್ಡ್ ಇತಿಹಾಸ (ಇಂಗ್ಲಿಷ್) ಹೇಳುವುದು: “ಕ್ರೈಸ್ತ ಬಳಕೆಯಲ್ಲಿ ‘ಲೋಕವು’ ದೇವರಿಂದ ದೂರವಾಗಿರುವ ಮತ್ತು ಆತನಿಗೆ ವಿರುದ್ಧವಾಗಿರುವ ಯಾವುದನ್ನೊ ಸೂಚಿಸುವ ಪದವೂ ಆಗಿದೆ.” ಇದು ಹೇಗೆ ನಿಜವಾಗಿದೆ? ಕ್ಯಾತೊಲಿಕ್ ಬರಹಗಾರನಾದ ರಾಲಾನ್ ಮಿನರಾಟ್, ಲೆ ಕ್ರೇಟ್ಯನ್ ಏ ಲ ಮಾಂಡ್ (ಕ್ರೈಸ್ತರೂ ಲೋಕವೂ) ಎಂಬ ತನ್ನ ಪುಸ್ತಕದಲ್ಲಿ ವಿವರಿಸುವುದು: “ಅನುಚಿತಾರ್ಥದಲ್ಲಿ, ಲೋಕವು ಹೀಗೆ . . . ದೇವರಿಗೆ ವಿರುದ್ಧವಾಗಿರುವ ಅಧಿಕಾರಗಳು ತಮ್ಮ ಚಟುವಟಿಕೆಯನ್ನು ನಡೆಸುವ ಮತ್ತು ಕ್ರಿಸ್ತನ ವಿಜಯಿ ಆಳಿಕೆಗೆ ವಿರೋಧದಿಂದಾಗಿ ಸೈತಾನನ ನಿಯಂತ್ರಣದಲ್ಲಿರುವ ಶತ್ರು ಸಾಮ್ರಾಜ್ಯವೊಂದನ್ನು ರಚಿಸುವ ಪ್ರಭಾವ ಕ್ಷೇತ್ರವಾಗಿ ಅವಲೋಕಿಸಲ್ಪಡುತ್ತದೆ.” ಈ “ಲೋಕವು” ದೇವರಿಂದ ವಿಮುಖವಾಗಿರುವ ಮಾನವ ಸಮೂಹವಾಗಿದೆ. ಸತ್ಯ ಕ್ರೈಸ್ತರು ಈ ಲೋಕದ ಭಾಗವಾಗಿರುವುದಿಲ್ಲ ಮತ್ತು ಅದು ಅವರನ್ನು ದ್ವೇಷಿಸುತ್ತದೆ.
3 ಒಂದನೆಯ ಶತಮಾನದ ಅಂತ್ಯಕ್ಕೆ ಸಮೀಪದಲ್ಲಿ, ಯೋಹಾನನು ಹೀಗೆ ಬರೆದಾಗ ಈ ಲೋಕವು ಅವನ ಮನಸ್ಸಿನಲ್ಲಿತ್ತು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.” (1 ಯೋಹಾನ 2:15, 16) ಅವನು ಇನ್ನೂ ಬರೆದುದು: “ನಾವು ದೇವರಿಂದ ಹುಟ್ಟಿದವರೆಂದೂ ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ ಎಂದೂ ನಮಗೆ ಗೊತ್ತದೆ.” (1 ಯೋಹಾನ 5:19) ಯೇಸು ತಾನೇ ಸೈತಾನನನ್ನು “ಇಹಲೋಕಾಧಿಪತಿ” ಎಂದು ಕರೆದನು.—ಯೋಹಾನ 12:31; 16:11.
ಲೋಕಶಕ್ತಿಗಳ ಬೆಳವಣಿಗೆ
4. ಲೋಕಶಕ್ತಿಗಳು ಅಸ್ತಿತ್ವಕ್ಕೆ ಬಂದದ್ದು ಹೇಗೆ?
4 ದೇವರಿಂದ ವಿಮುಖಗೊಂಡಿರುವ ಈಗಿರುವ ಮಾನವಲೋಕವು ನೋಹನ ದಿನದ ಜಲಪ್ರಳಯಾನಂತರ ಸ್ವಲ್ಪದರಲ್ಲಿ, ನೋಹನ ವಂಶಸ್ಥರಲ್ಲಿ ಅನೇಕರು ಯೆಹೋವ ದೇವರನ್ನು ಆರಾಧಿಸುವುದನ್ನು ನಿಲ್ಲಿಸಿದಾಗ ಬೆಳೆಯತೊಡಗಿತು. ಆದಿ ದಿನಗಳಲ್ಲಿ ಇವರಲ್ಲಿ, ನಗರ ನಿರ್ಮಾಪಕನೂ, “ಅತಿ ಸಾಹಸಿಯಾದ ಬೇಟೆಗಾರ [“ಯೆಹೋವನಿಗೆ ವಿರುದ್ಧವಾಗಿದ್ದ ಸಾಹಸಿಯಾದ ಬೇಟೆಗಾರ,” NW]”ನೂ ಆಗಿದ್ದ ನಿಮ್ರೋದನು ಪ್ರಮುಖನಾಗಿದ್ದನು. (ಆದಿಕಾಂಡ 10:8-12) ಆ ವರುಷಗಳಲ್ಲಿ, ಈ ಲೋಕದಲ್ಲಿನ ಹೆಚ್ಚಿನ ಭಾಗವು ಚಿಕ್ಕ ನಗರರಾಜ್ಯಗಳಾಗಿ ಸಂಘಟಿಸಲ್ಪಟ್ಟಿತ್ತು. ಅವು ಆಗಾಗ ಒಕ್ಕೂಟಗಳನ್ನು ರಚಿಸಿ, ಒಂದರ ವಿರುದ್ಧ ಒಂದು ಯುದ್ಧಮಾಡಿದವು. (ಆದಿಕಾಂಡ 14:1-9) ಕೆಲವು ನಗರರಾಜ್ಯಗಳು, ಪ್ರಾದೇಶಿಕ ಶಕ್ತಿಗಳಾಗಿ ಪರಿಣಮಿಸಲು ಬೇರೆ ರಾಜ್ಯಗಳ ಮೇಲೆ ಅಧಿಕಾರ ನಡೆಸಿದವು. ಕೆಲವು ಪ್ರಾದೇಶಿಕ ಶಕ್ತಿಗಳು ಕೊನೆಗೆ ಮಹಾ ಲೋಕಶಕ್ತಿಗಳಾಗಿ ಬೆಳೆದವು.
5, 6. (ಎ) ಬೈಬಲ್ ಇತಿಹಾಸದ ಏಳು ಲೋಕಶಕ್ತಿಗಳು ಯಾವುವು? (ಬಿ) ಈ ಲೋಕಶಕ್ತಿಗಳು ಹೇಗೆ ಸೂಚಿಸಲ್ಪಟ್ಟಿವೆ, ಮತ್ತು ಅವುಗಳ ಶಕ್ತಿ ಎಲ್ಲಿಂದ ಬರುತ್ತದೆ?
5 ನಿಮ್ರೋದನ ಮಾದರಿಯನ್ನನುಸರಿಸುತ್ತ, ಲೋಕಶಕ್ತಿಗಳ ಪ್ರಭುಗಳು ಯೆಹೋವನನ್ನು ಆರಾಧಿಸಲಿಲ್ಲ. ಅವರ ಕ್ರೂರ, ಹಿಂಸಾತ್ಮಕ ಕೃತ್ಯಗಳಲ್ಲಿ ಈ ನಿಜತ್ವವು ಪ್ರತಿಬಿಂಬಿಸಿತು. ಈ ಲೋಕಶಕ್ತಿಗಳು ಶಾಸ್ತ್ರದಲ್ಲಿ ಕಾಡುಮೃಗಗಳಿಂದ ಸೂಚಿಸಲ್ಪಡುತ್ತವೆ, ಮತ್ತು ಅನೇಕ ಶತಮಾನಗಳಲ್ಲಿ ಯೆಹೋವನ ಜನರ ಮೇಲೆ ಬಲಾಢ್ಯವಾದ ಪ್ರಭಾವವನ್ನು ಬೀರಿದ ಆರು ಶಕ್ತಿಗಳನ್ನು ಬೈಬಲು ಗುರುತಿಸುತ್ತದೆ. ಐಗುಪ್ತ, ಅಶ್ಶೂರ, ಬಾಬೆಲ್, ಮೇದ್ಯಯ ಪಾರಸೀಯ, ಗ್ರೀಸ್ ಮತ್ತು ರೋಮ್ ಎಂಬ ಶಕ್ತಿಗಳೇ ಇವುಗಳಾಗಿವೆ. ರೋಮ್ನ ಅನಂತರ, ಏಳನೆಯ ಲೋಕಶಕ್ತಿಯೊಂದು ಎದ್ದುಬರುವುದೆಂದು ಪ್ರವಾದಿಸಲಾಗಿತ್ತು. (ದಾನಿಯೇಲ 7:3-7; 8:3-7, 20, 21; ಪ್ರಕಟನೆ 17:9, 10) ಇದು ಆ್ಯಂಗ್ಲೋ-ಅಮೆರಿಕನ್ ಲೋಕಶಕ್ತಿಯಾಗಿ ಪರಿಣಮಿಸಿತು. ಇದರಲ್ಲಿ ಬ್ರಿಟಿಷ್ ಸಾಮ್ರಾಜ್ಯ ಮತ್ತು ಕೊನೆಗೆ ಶಕ್ತಿಯಲ್ಲಿ ಬ್ರಿಟನ್ನನ್ನು ಮೀರಿಸಿದ ಅದರ ಮಿತ್ರರಾಷ್ಟ್ರವಾದ ಅಮೆರಿಕವು ಸೇರಿರುತ್ತದೆ. ರೋಮನ್ ಸಾಮ್ರಾಜ್ಯದ ಕೊನೆಯ ಕುರುಹು ಅಂತಿಮವಾಗಿ ಅದೃಶ್ಯವಾದ ಬಳಿಕ ಬ್ರಿಟಿಷ್ ಸಾಮ್ರಾಜ್ಯವು ವಿಕಾಸಗೊಳ್ಳತೊಡಗಿತು.a
6 ಪ್ರಕಟನೆ ಪುಸ್ತಕದಲ್ಲಿ, ಅನುಕ್ರಮವಾಗಿ ಬರುವ ಏಳು ಲೋಕಶಕ್ತಿಗಳು, ಅವಿಶ್ರಾಂತ ಮಾನವಕುಲವೆಂಬ ಸಮುದ್ರದಿಂದ ಎದ್ದುಬರುವ ಏಳು ತಲೆಗಳುಳ್ಳ ಕಾಡುಮೃಗದ ತಲೆಗಳಿಂದ ಸೂಚಿಸಲ್ಪಡುತ್ತವೆ. (ಯೆಶಾಯ 17:12, 13; 57:20, 21; ಪ್ರಕಟನೆ 13:1) ಈ ಆಳುವ ಮೃಗಕ್ಕೆ ಅಧಿಕಾರವನ್ನು ಯಾರು ಕೊಡುತ್ತಾರೆ? ಬೈಬಲು ಉತ್ತರಿಸುವುದು: “ಅದಕ್ಕೆ ಘಟಸರ್ಪನು ಶಕ್ತಿಯನ್ನೂ ಸಿಂಹಾಸನವನ್ನೂ ಮಹಾ ಅಧಿಕಾರವನ್ನೂ ಕೊಟ್ಟನು.” (ಪ್ರಕಟನೆ 13:2) ಘಟಸರ್ಪನು ಪಿಶಾಚನಾದ ಸೈತಾನನೇ ಹೊರತು ಇನ್ನಾರೂ ಅಲ್ಲ.—ಲೂಕ 4:5, 6; ಪ್ರಕಟನೆ 12:9.
ದೇವರ ರಾಜ್ಯದ ಭಾವಿ ಆಳಿಕೆ
7. ಕ್ರೈಸ್ತರಿಗೆ ಯಾವುದರಲ್ಲಿ ನಿರೀಕ್ಷೆಯಿದೆ, ಮತ್ತು ಇದು, ಲೋಕದ ಸರಕಾರಗಳೊಂದಿಗೆ ಅವರಿಗಿರುವ ಸಂಬಂಧವನ್ನು ಹೇಗೆ ಪ್ರಭಾವಿಸುತ್ತದೆ?
7 ಸುಮಾರು 2,000 ವರ್ಷಗಳಿಂದ ಕ್ರೈಸ್ತರು, “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ,” ಎಂದು ಪ್ರಾರ್ಥಿಸಿದ್ದಾರೆ. (ಮತ್ತಾಯ 6:10) ದೇವರ ರಾಜ್ಯವೊಂದೇ ಭೂಮಿಯ ಮೇಲೆ ನಿಜ ಶಾಂತಿಯನ್ನು ತರಬಲ್ಲದೆಂಬುದನ್ನು ಯೆಹೋವನ ಸಾಕ್ಷಿಗಳು ತಿಳಿದಿದ್ದಾರೆ. ಬೈಬಲ್ ಪ್ರವಾದನೆಯ ನಿಕಟ ಪರಿಶೀಲಕರಾದ ಅವರು, ಈ ಪ್ರಾರ್ಥನೆಗೆ ಬೇಗನೆ ಉತ್ತರ ದೊರೆಯಲಿರುವುದೆಂದೂ ರಾಜ್ಯವು ಬೇಗನೆ ಭೂಮಿಯ ಮೇಲೆ ಅಧಿಕಾರವನ್ನು ವಹಿಸಿಕೊಳ್ಳುವುದೆಂದೂ ಮನಗಂಡವರಾಗಿದ್ದಾರೆ. (ದಾನಿಯೇಲ 2:44) ಈ ರಾಜ್ಯದೊಂದಿಗಿನ ಅವರ ಅಂಟಿಕೆಯು, ಈ ಲೋಕದ ಸರಕಾರಗಳ ವಿಚಾರಗಳಲ್ಲಿ ಅವರು ತಟಸ್ಥರಾಗಿರುವಂತೆ ಮಾಡುತ್ತದೆ.
8. ಕೀರ್ತನೆ 2ರಲ್ಲಿ ಮುಂತಿಳಿಸಿರುವಂತೆ, ಸರಕಾರಗಳು ದೇವರ ರಾಜ್ಯದ ಆಕೆಗೆ ಹೇಗೆ ಪ್ರತಿವರ್ತಿಸುತ್ತವೆ?
8 ಕೆಲವು ಜನಾಂಗಗಳು ತಾವು ಧಾರ್ಮಿಕ ಮೂಲತತ್ತ್ವಗಳನ್ನು ಪಾಲಿಸುತ್ತೇವೆಂದು ವಾದಿಸುತ್ತವೆ. ಆದರೂ, ಆಚಾರದಲ್ಲಿ, ಯೆಹೋವನು ವಿಶ್ವ ಪರಮಾಧಿಕಾರಿಯೆಂಬುದನ್ನು ಮತ್ತು ಆತನು ತನ್ನ ಪುತ್ರನಾದ ಯೇಸುವನ್ನು ಭೂಮಿಯ ಮೇಲೆ ಅಧಿಕಾರವಿರುವ ಸ್ವರ್ಗೀಯ ರಾಜನಾಗಿ ಸಿಂಹಾಸನಕ್ಕೇರಿಸಿದ್ದಾನೆಂಬುದನ್ನು ಅವರು ಅಲಕ್ಷ್ಯ ಮಾಡುತ್ತಾರೆ. (ದಾನಿಯೇಲ 4:17; ಪ್ರಕಟನೆ 11:15) ಪ್ರವಾದನಾತ್ಮಕವಾದ ಕೀರ್ತನೆಯೊಂದು ಹೇಳುವುದು: “ಯೆಹೋವನಿಗೂ ಆತನು ಅಭಿಷೇಕಿಸಿದವನಿಗೂ [ಯೇಸು] ವಿರೋಧವಾಗಿ ಭೂಪತಿಗಳು ಸನ್ನದ್ಧರಾಗಿ ನಿಂತಿದ್ದಾರೆ, ಅಧಿಕಾರಿಗಳು ಒಟ್ಟಾಗಿ ಸೇರಿ ಆಲೋಚಿಸುತ್ತಿದ್ದಾರೆ. ನಮಗೆ ಅವರು ಹಾಕಿದ ಬಂಧನಗಳನ್ನು ಕಿತ್ತು ಬೇಡಿಗಳನ್ನು ಮುರಿದು ಬಿಸಾಡೋಣ ಎಂದು ಮಾತಾಡಿಕೊಳ್ಳುತ್ತಾರಲ್ಲಾ.” (ಕೀರ್ತನೆ 2:2, 3) ತಮ್ಮ ರಾಷ್ಟ್ರೀಯ ಪರಮಾಧಿಕಾರವನ್ನು ನಿರ್ವಹಿಸುವುದನ್ನು ಸೀಮಿತಗೊಳಿಸುವ ಯಾವುದೇ ದೈವಿಕ “ಬಂಧನಗಳನ್ನು” ಮತ್ತು “ಬೇಡಿಗಳನ್ನು” ಸರಕಾರಗಳು ಅಂಗೀಕರಿಸುವುದಿಲ್ಲ. ಆದಕಾರಣ ಯೆಹೋವನು ತನ್ನ ಆಯ್ದುಕೊಳ್ಳಲ್ಪಟ್ಟ ಅರಸನಾದ ಯೇಸುವಿಗೆ ಹೇಳುವುದು: “ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ ನಿನಗೆ ಅಧೀನಮಾಡುವೆನು; ಭೂಮಿಯ ಕಟ್ಟಕಡೆಯ ವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವಾಸ್ತ್ಯವಾಗಿ ಕೊಡುವೆನು. ಕಬ್ಬಿಣದ ಗದೆಯಿಂದ ಅವರನ್ನು ನಾಶಮಾಡುವಿ; ಮಣ್ಣಿನ ಮಡಿಕೆಗಳನ್ನೋ ಎಂಬಂತೆ ಅವರನ್ನು ಒಡೆದುಹಾಕುವಿ.” (ಕೀರ್ತನೆ 2:8, 9) ಆದರೂ, ಯೇಸುವು ಯಾವುದಕ್ಕಾಗಿ ಸತ್ತನೊ ಆ ಮಾನವಲೋಕವು ಪೂರ್ತಿಯಾಗಿ ‘ನಾಶವಾಗದು.’—ಯೋಹಾನ 3:17.
“ಮೃಗ”ದ “ಗುರುತಿ”ನಿಂದ ತಪ್ಪಿಸಿಕೊಳ್ಳುವುದು
9, 10. (ಎ) ಪ್ರಕಟನೆ ಪುಸ್ತಕದಲ್ಲಿ ನಮಗೆ ಯಾವುದರ ಕುರಿತು ಎಚ್ಚರಿಕೆ ಕೊಡಲಾಗಿದೆ? (ಬಿ) ‘ಮೃಗದ ಗುರುತನ್ನು’ ಧರಿಸುವುದು ಏನನ್ನು ಸೂಚಿಸುತ್ತದೆ? (ಸಿ) ದೇವರ ಸೇವಕರು ಯಾವ ಗುರುತುಗಳನ್ನು ಅಂಗೀಕರಿಸುತ್ತಾರೆ?
9 ಅಪೊಸ್ತಲ ಯೋಹಾನನು ಪಡೆದ ಪ್ರಕಟನೆಯು, ದೇವರಿಂದ ವಿಮುಖವಾಗಿರುವ ಮಾನವಲೋಕವು ಅದರ ಅಂತ್ಯಕ್ಕೆ ತುಸು ಮೊದಲಾಗಿ ಹೆಚ್ಚುತ್ತಿರುವ ಹಕ್ಕುಕೇಳಿಕೆಗಳನ್ನು ಮಾಡುವುದೆಂದು ಎಚ್ಚರಿಸಿತು. ಅದು, “ದೊಡ್ಡವರು ಚಿಕ್ಕವರು ಐಶ್ವರ್ಯವಂತರು ಬಡವರು ಸ್ವತಂತ್ರರು ದಾಸರು ಎಲ್ಲರೂ ತಮ್ಮ ತಮ್ಮ ಬಲಗೈಯ ಮೇಲಾಗಲಿ ಹಣೆಯ ಮೇಲಾಗಲಿ ಗುರುತು ಹೊಂದಬೇಕೆಂತಲೂ ಆ ಗುರುತು ಯಾರಿಗಿಲ್ಲವೋ ಅವರು ಕ್ರಯ ವಿಕ್ರಯಗಳನ್ನು ನಡಿಸಕೂಡದೆಂತಲೂ ಆಜ್ಞೆಮಾಡುತ್ತದೆ.” (ಪ್ರಕಟನೆ 13:16, 17) ಇದರ ಅರ್ಥವೇನು? ಬಲಗೈಯ ಮೇಲೆ ಮಾಡುವ ಗುರುತು ಕ್ರಿಯಾಶೀಲ ಬೆಂಬಲದ ಯೋಗ್ಯ ಸಂಕೇತವಾಗಿದೆ. ಹಣೆಯ ಮೇಲಿನ ಗುರುತಿನ ಕುರಿತಾಗಿ ಏನು? ದಿ ಎಕ್ಸ್ಪೊಸಿಟರ್ಸ್ ಗ್ರೀಕ್ ಟೆಸ್ಟಮೆಂಟ್ ಹೇಳುವುದು: “ಈ ಅತಿಶಯವಾಗಿ ಸಾಂಕೇತಿಕವಾದ ಅಪ್ರತ್ಯಕ್ಷ ಸೂಚನೆಯು, ಸೈನಿಕರನ್ನು ಅಥವಾ ಗುಲಾಮರನ್ನು ಒಂದು ಎದ್ದುಕಾಣುವ ಹಚ್ಚೆ ಗುರುತು ಅಥವಾ ಸುಟ್ಟ ಗುರುತಿನಿಂದ ಗುರುತಿಸುವ ಅಭ್ಯಾಸಕ್ಕೆ ಸಂಬಂಧಿಸುತ್ತದೆ . . . ; ಅಥವಾ ಇನ್ನೂ ಉತ್ತಮವಾಗಿ, ದೇವರ ಹೆಸರನ್ನು ತಾಯಿತಿಯಾಗಿ ಧರಿಸುವ ಧಾರ್ಮಿಕ ಪದ್ಧತಿಗೆ ಸಂಬಂಧಿಸುತ್ತದೆ.” ಅನೇಕ ಮಾನವರು ತಮ್ಮ ನಡೆನುಡಿಗಳ ಮೂಲಕ ಈ ಗುರುತನ್ನು, ತಮ್ಮನ್ನು “ಮೃಗ”ದ “ದಾಸ”ರನ್ನಾಗಿ ಅಥವಾ “ಸೈನಿಕ”ರನ್ನಾಗಿ ಗುರುತಿಸಿಕೊಳ್ಳುತ್ತ ಧರಿಸುತ್ತಾರೆ. (ಪ್ರಕಟನೆ 13:3, 4) ಅವರ ಭವಿಷ್ಯತ್ತಿನ ವಿಷಯವಾಗಿ, ಥಿಯೊಲಾಜಿಕಲ್ ಡಿಕ್ಷನೆರಿ ಆಫ ದ ನ್ಯೂ ಟೆಸ್ಟಮೆಂಟ್ ಹೇಳುವುದು: “ದೇವರ ಶತ್ರುಗಳು ಮೃಗದ [ಗುರುತನ್ನು], ಮೃಗದ ಹೆಸರು ಅಡಕವಾಗಿರುವ ಆ ರಹಸ್ಯಾರ್ಥದ ಸಂಖ್ಯೆಯನ್ನು, ತಮ್ಮ ಹಣೆಯ ಮೇಲೆ ಮತ್ತು ಒಂದು ಕೈಯ ಮೇಲೆ ಮುದ್ರೆಯೊತ್ತಲ್ಪಡುವಂತೆ ಬಿಡುತ್ತಾರೆ. ಇದು ಅವರಿಗೆ ಬಹಳಷ್ಟು ಆರ್ಥಿಕ ಹಾಗೂ ವಾಣಿಜ್ಯ ಪ್ರಗತಿಯನ್ನು ತರುತ್ತದಾದರೂ, ಇದು ಅವರನ್ನು ದೇವರ ಕೋಪಕ್ಕೀಡುಮಾಡಿ, ಸಹಸ್ರ ವರ್ಷೀಯ ರಾಜ್ಯದಿಂದ ಅವರನ್ನು ಹೊರಗಿಡುತ್ತದೆ, ಪ್ರಕ. 13:16; 14:9; 20:4.”
10 “ಗುರುತ”ನ್ನು ಪಡೆದುಕೊಳ್ಳುವಂತೆ ಬರುವ ಒತ್ತಡವನ್ನು ಪ್ರತಿಭಟಿಸಲು ಹೆಚ್ಚೆಚ್ಚು ಧೈರ್ಯದ ಮತ್ತು ತಾಳ್ಮೆಯ ಅವಶ್ಯವಿರುತ್ತದೆ. (ಪ್ರಕಟನೆ 14:9-12) ಆದರೂ ದೇವರ ಸೇವಕರಲ್ಲಿ ಇಂತಹ ಬಲವಿದೆ ಮತ್ತು ಈ ಕಾರಣದಿಂದ ಅವರು ಅನೇಕ ಸಲ ದ್ವೇಷಿಸಲ್ಪಡುತ್ತಾರೆ ಮತ್ತು ದೂಷಿಸಲ್ಪಡುತ್ತಾರೆ. (ಯೋಹಾನ 15:18-20; 17:14, 15) ಮೃಗದ ಗುರುತನ್ನು ಧರಿಸುವ ಬದಲಿಗೆ, ಅವರು ತಮ್ಮ ಕೈಯ ಮೇಲೆ, ಸಾಂಕೇತಿಕವಾಗಿ “ಯೆಹೋವದಾಸನು” ಎಂದು ಬರೆದುಕೊಳ್ಳುತ್ತಾರೆ. (ಯೆಶಾಯ 44:5) ಅಲ್ಲದೆ, ಭ್ರಷ್ಟವಾದ ಧರ್ಮವು ಮಾಡಿರುವ ಅಸಹ್ಯ ಕಾರ್ಯಗಳಿಗೆ ಅವರು ‘ನರಳುತ್ತ ಗೋಳಾಡುವುದರಿಂದ,’ ಅವರು ತಮ್ಮ ಹಣೆಯ ಮೇಲೆ ಒಂದು ಸಾಂಕೇತಿಕ ಗುರುತನ್ನು, ಯೆಹೋವನ ನ್ಯಾಯತೀರ್ಪು ವಿಧಿಸಲ್ಪಡುವಾಗ ಉಳಿಸಲ್ಪಡಲು ಯೋಗ್ಯರೆಂಬ ಗುರುತನ್ನು ಪಡೆದುಕೊಳ್ಳುತ್ತಾರೆ.—ಯೆಹೆಜ್ಕೇಲ 9:1-7.
11. ದೇವರ ರಾಜ್ಯವು ಭೂಮಿಯ ಅಧಿಕಾರವನ್ನು ವಹಿಸಿಕೊಳ್ಳಲು ಬರುವ ವರೆಗೆ, ಆಳಲು ಮಾನವ ಸರಕಾರಗಳಿಗೆ ಯಾರು ಅಪ್ಪಣೆ ಕೊಡುತ್ತಾರೆ?
11 ಕ್ರಿಸ್ತನ ಸ್ವರ್ಗೀಯ ರಾಜ್ಯವು ಈ ಭೂಮಿಯ ಆಳಿಕೆಯನ್ನು ಪೂರ್ತಿಯಾಗಿ ವಹಿಸಿಕೊಳ್ಳುವ ತನಕ, ಮಾನವ ಸರಕಾರಗಳು ಆಳುವಂತೆ ದೇವರು ಅನುಮತಿಸುತ್ತಾನೆ. ರಾಜಕೀಯ ಸರಕಾರಗಳ ಈ ದೈವಿಕ ಸಹನೆಯನ್ನು ಪ್ರೊಫೆಸರ್ ಆಸ್ಕಾರ್ ಕುಲ್ಮಾನ್, ತಮ್ಮ ಹೊಸ ಒಡಂಬಡಿಕೆಯಲ್ಲಿ ಸರಕಾರ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಸೂಚಿಸುತ್ತಾರೆ. ಅವರು ಬರೆಯುವುದು: “ಸರಕಾರದ ‘ತಾತ್ಕಾಲಿಕ’ ಸ್ವರೂಪದ ಕುರಿತ ಜಟಿಲ ಭಾವನೆಯು, ಸರಕಾರದ ಕಡೆಗಿನ ಆದಿಕ್ರೈಸ್ತರ ಮನೋಭಾವವು ಏಕೀಕೃತವಾಗಿರುವುದಕ್ಕೆ ಬದಲಾಗಿ ವಿರೋಧಾತ್ಮವಾಗಿ ತೋರಿಬರಲು ಕಾರಣವಾಗಿದೆ. ಹಾಗೆ ತೋರಿಬರುತ್ತದೆ ಎಂಬುದನ್ನು ನಾನು ಒತ್ತಿಹೇಳುತ್ತೇನೆ. ರೋಮಾಪುರ 13:1 ಹೇಳುವ, ‘ಪ್ರತಿಯೊಬ್ಬ ಮನುಷ್ಯನು ಇರುವ ಮೇಲಧಿಕಾರಿಗಳಿಗೆ ಅಧೀನನಾಗಿರಲಿ . . . ’ ಎಂಬುದರೊಂದಿಗೆ, ಪ್ರಕಟನೆ 13: ಹೇಳುವ, ಅಧೋಲೋಕದಿಂದ ಬಂದ ಮೃಗದಂತಿರುವ ಅಧಿಕಾರ”ವನ್ನು ಎತ್ತಿಹೇಳುವುದಷ್ಟೇ ನಮಗೆ ಸಾಕಾಗಿದೆ.
“ಮೃಗ” ಮತ್ತು “ಕೈಸರ”
12. ಮಾನವ ಸರಕಾರಗಳ ಕುರಿತು ಯಾವ ಸಮತೆಯ ದೃಷ್ಟಿಕೋನವು ಯೆಹೋವನ ಸಾಕ್ಷಿಗಳಿಗಿದೆ?
12 ಸರಕಾರಿ ಅಧಿಕಾರದಲ್ಲಿರುವ ಸಕಲ ಮಾನವರೂ ಸೈತಾನನ ಸಾಧನಗಳೆಂದು ತೀರ್ಮಾನಿಸುವುದು ಸರಿಯಲ್ಲ. ಬೈಬಲು “ಬುದ್ಧಿವಂತ”ನೆಂದು ವರ್ಣಿಸಿರುವ ಪ್ರಾಂತಾಧಿಪತಿ ಸೆರ್ಗ್ಯಪೌಲನಂತೆ, ಅನೇಕರು ತಾವು ನೀತಿನಿಷ್ಠೆಯ ಜನರೆಂದು ರುಜುಮಾಡಿಕೊಟ್ಟಿದ್ದಾರೆ. (ಅ. ಕೃತ್ಯಗಳು 13:7) ಕೆಲವು ಮಂದಿ ಅಧಿಪತಿಗಳಿಗೆ ಯೆಹೋವನ ಮತ್ತು ಆತನ ಉದ್ದೇಶಗಳ ಜ್ಞಾನವಿಲ್ಲದಿದ್ದರೂ, ಅವರು ತಮ್ಮ ದೇವದತ್ತ ಮನಸ್ಸಾಕ್ಷಿಯಿಂದ ನಡೆಸಲ್ಪಟ್ಟು, ಅಲ್ಪಸಂಖ್ಯಾತರ ಹಕ್ಕುಗಳನ್ನು ಧೈರ್ಯದಿಂದ ಸಮರ್ಥಿಸಿದ್ದಾರೆ. (ರೋಮಾಪುರ 2:14, 15) ಜ್ಞಾಪಕವಿರಲಿ, ಬೈಬಲು “ಲೋಕ”ವೆಂಬ ಪದವನ್ನು ವೈದೃಶ್ಯವಾಗಿ ಎರಡು ರೀತಿಯಲ್ಲಿ ಉಪಯೋಗಿಸುತ್ತದೆ: ದೇವರು ಪ್ರೀತಿಸುವ ಮತ್ತು ನಾವು ಪ್ರೀತಿಸಬೇಕಾದ ಮಾನವಲೋಕ ಮತ್ತು ಸೈತಾನನು ದೇವರಾಗಿರುವ ಮತ್ತು ನಾವು ಪ್ರತ್ಯೇಕರಾಗಿರಬೇಕಾದ, ಯೆಹೋವನಿಗೆ ವಿಮುಖವಾಗಿರುವ ಮಾನವಲೋಕ. (ಯೋಹಾನ 1:9, 10; 17:14; 2 ಕೊರಿಂಥ 4:4; ಯಾಕೋಬ 4:4) ಹೀಗೆ, ಯೆಹೋವನ ಸೇವಕರಿಗೆ ಮಾನವ ಆಳಿಕೆಯ ಕಡೆಗೆ ಸಮತೆಯ ಮನೋಭಾವವಿದೆ. ನಾವು ದೇವರ ರಾಜ್ಯದ ರಾಯಭಾರಿಗಳೊ ಉಪರಾಯಭಾರಿಗಳೊ ಆಗಿ ಸೇವೆಮಾಡುವುದರಿಂದ ರಾಜಕೀಯ ವಿಚಾರಗಳಲ್ಲಿ ತಟಸ್ಥರಾಗಿದ್ದೇವೆ ಮತ್ತು ನಮ್ಮ ಜೀವಗಳು ದೇವರಿಗೆ ಸಮರ್ಪಿಸಲ್ಪಟ್ಟಿವೆ. (2 ಕೊರಿಂಥ 5:20) ಇನ್ನೊಂದು ಕಡೆಯಲ್ಲಿ, ಅಧಿಕಾರದಲ್ಲಿರುವವರಿಗೆ ನಾವು ಶುದ್ಧಾಂತಃಕರಣದ ಅಧೀನತೆಯಲ್ಲಿರುತ್ತೇವೆ.
13. (ಎ) ಯೆಹೋವನು ಮಾನವ ಸರಕಾರಗಳನ್ನು ಹೇಗೆ ವೀಕ್ಷಿಸುತ್ತಾನೆ? (ಬಿ) ಮಾನವ ಸರಕಾರಗಳ ಕಡೆಗೆ ಕ್ರೈಸ್ತ ಅಧೀನತೆಯು ಎಷ್ಟು ದೂರ ವ್ಯಾಪಿಸುತ್ತದೆ?
13 ಈ ಸಮತೆಯ ಪ್ರಸ್ತಾಪವು ಯೆಹೋವ ದೇವರ ಸ್ವಂತ ವೀಕ್ಷಣವನ್ನು ಪ್ರತಿಬಿಂಬಿಸುತ್ತದೆ. ಲೋಕಶಕ್ತಿಗಳು ಅಥವಾ ಚಿಕ್ಕ ದೇಶಗಳು ಕೂಡ, ತಮ್ಮ ಅಧಿಕಾರವನ್ನು ಅಪಪ್ರಯೋಗಿಸಿ, ತಮ್ಮ ಜನತೆಯನ್ನು ಶೋಷಿಸಿ, ಅಥವಾ ದೇವರನ್ನು ಆರಾಧಿಸುವವರನ್ನು ಹಿಂಸಿಸುವಾಗ, ಅವರನ್ನು ಪ್ರವಾದನೆಯಲ್ಲಿ ಕ್ರೂರ ಮೃಗಗಳೋಪಾದಿ ವರ್ಣಿಸಿರುವುದಕ್ಕೆ ಅವರು ನಿಶ್ಚಯವಾಗಿಯೂ ಅರ್ಹರು. (ದಾನಿಯೇಲ 7:19-21; ಪ್ರಕಟನೆ 11:7) ಆದರೂ, ನಿಯಮ ಮತ್ತು ಶಿಸ್ತು ಪರಿಪಾಲನೆಯನ್ನು ಕಾಪಾಡುವುದರಲ್ಲಿ ರಾಷ್ಟ್ರೀಯ ಸರಕಾರಗಳು ದೇವರ ಉದ್ದೇಶವನ್ನು ಪಾಲಿಸುವಾಗ, ಅವರು ತನ್ನ “ಉದ್ಯೋಗಿಗಳು [“ಸಾರ್ವಜನಿಕ ಸೇವಕರು,” NW]” ಎಂದು ಆತನು ಪರಿಗಣಿಸುತ್ತಾನೆ. (ರೋಮಾಪುರ 13:6) ತನ್ನ ಜನರು ಸರಕಾರಗಳನ್ನು ಸನ್ಮಾನಿಸಿ, ಅವುಗಳಿಗೆ ಅಧೀನರಾಗಬೇಕೆಂದು ಯೆಹೋವನು ಅಪೇಕ್ಷಿಸುವುದಾದರೂ, ಅವರ ಅಧೀನತೆ ಪರಿಮಿತಿಯಿಲ್ಲದ್ದಾಗಿರುವುದಿಲ್ಲ. ದೇವರ ನಿಯಮವು ನಿಷೇಧಿಸುವುದನ್ನು ಜನರು ದೇವರ ಸೇವಕರಿಂದ ಅವಶ್ಯಪಡಿಸುವಾಗ, ಅಥವಾ ತಮ್ಮ ದೇವರು ಮಾಡಬೇಕೆಂದು ಅಪೇಕ್ಷಿಸುವ ವಿಷಯಗಳನ್ನು ಅವರು ನಿಷೇಧಿಸುವಾಗ, ದೇವರ ಸೇವಕರು ಅಪೊಸ್ತಲರು ಆಯ್ದುಕೊಂಡ ಸ್ಥಾನವನ್ನು, ಅಂದರೆ “ಮನುಷ್ಯರಿಗಿಂತಲೂ ಹೆಚ್ಚಾಗಿ ದೇವರಿಗೆ ವಿಧೇಯರಾಗಿರಬೇಕಲ್ಲಾ” ಎಂಬ ಸ್ಥಾನವನ್ನು ಆರಿಸಿಕೊಳ್ಳುತ್ತಾರೆ.—ಅ. ಕೃತ್ಯಗಳು 5:29.
14. ಮಾನವ ಸರಕಾರಗಳಿಗೆ ಕ್ರೈಸ್ತ ಅಧೀನತೆಯನ್ನು ಯೇಸು ಹೇಗೆ ವಿವರಿಸಿದನು? ಪೌಲನು ಹೇಗೆ ವಿವರಿಸಿದನು?
14 “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ,” ಎಂದು ಯೇಸು ಘೋಷಿಸಿದಾಗ, ತನ್ನ ಹಿಂಬಾಲಕರಿಗೆ ಸರಕಾರಗಳ ಮತ್ತು ದೇವರ, ಹೀಗೆ ಎರಡೂ ಪಕ್ಷಗಳ ಕಡೆಗೆ ಅವಶ್ಯ ಕರ್ತವ್ಯವಿರುವುದೆಂದು ಅವನು ನುಡಿದನು. (ಮತ್ತಾಯ 22:21) ಅಪೊಸ್ತಲ ಪೌಲನು ಪ್ರೇರಣೆಯಿಂದ ಬರೆದುದು: “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; . . . ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು; ಅವನು ಸುಮ್ಮನೆ ಕೈಯಲ್ಲಿ ಕತ್ತಿಯನ್ನು ಹಿಡಿದಿಲ್ಲ; ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ನಡಿಸುವವನಿಗೆ ದೇವರ ದಂಡನೆಯನ್ನು ವಿಧಿಸುತ್ತಾನೆ. ಆದಕಾರಣ ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಿಗೆ ನ್ಯಾಯವಾಗಿ ತೋರುವದರಿಂದಲೂ [“ನಿಮ್ಮ ಮನಸ್ಸಾಕ್ಷಿಯ ಕಾರಣವೂ,” NW] ಅವನಿಗೆ ಅಧೀನನಾಗುವದು ಅವಶ್ಯ. ಈ ಕಾರಣದಿಂದಲೇ ನೀವು ಕಂದಾಯವನ್ನು ಕೂಡ ಕೊಡುತ್ತೀರಿ.” (ರೋಮಾಪುರ 13:1, 4-6) ಸಾ.ಶ. ಒಂದನೆಯ ಶತಮಾನದಿಂದ ಹಿಡಿದು ಇಂದಿನ ತನಕ, ಸರಕಾರವು ಮಾಡುವ ಹಕ್ಕುಕೇಳಿಕೆಗಳನ್ನು ಕ್ರೈಸ್ತರಿಗೆ ಪರಿಗಣಿಸಲಿಕ್ಕಿತ್ತು ಮತ್ತು ಪರಿಗಣಿಸಲಿಕ್ಕಿದೆ. ಆ ಹಕ್ಕುಕೇಳಿಕೆಗಳಿಗೆ ಹೊಂದಿಕೊಳ್ಳುವಿಕೆಯು ತಮ್ಮ ಆರಾಧನೆಯ ಒಪ್ಪಂದಕ್ಕೆ ನಡೆಸುತ್ತದೊ, ಅಥವಾ ಅಂತಹ ಹಕ್ಕುಕೇಳಿಕೆಗಳು ನ್ಯಾಯಸಮ್ಮತವಾಗಿದ್ದು ಶುದ್ಧಾಂತಃಕರಣದಿಂದ ಪಾಲಿಸಸಾಧ್ಯವಿರುವಂತಹವುಗಳೊ ಎಂದು ವಿವೇಚಿಸಿ ತಿಳಿಯುವ ಅಗತ್ಯ ಅವರಿಗಿದೆ.
ಶುದ್ಧಾಂತಃಕರಣದ ಪೌರರು
15. ಕೈಸರನಿಗೆ ಸಲ್ಲತಕ್ಕದ್ದನ್ನು ಯೆಹೋವನ ಸಾಕ್ಷಿಗಳು ಶುದ್ಧಾಂತಃಕರಣದಿಂದ ತೆರುವುದು ಹೇಗೆ?
15 ರಾಜಕೀಯ “ಮೇಲಧಿಕಾರಿಗಳು,” ಯಾವುದರಲ್ಲಿ “ಕೆಟ್ಟ ನಡತೆಯುಳ್ಳವರನ್ನು ದಂಡಿಸು”ವುದು ಮತ್ತು “ಒಳ್ಳೆಯ ನಡತೆಯುಳ್ಳವರನ್ನು ಪ್ರೋತ್ಸಾ”ಹಿಸುವುದು ಸೇರಿದೆಯೊ ಆ ತಮ್ಮ ದೇವಾನುಮೋದಿತ ಪಾತ್ರವನ್ನು ನೆರವೇರಿಸುವಾಗ, ದೇವರ “ಸೇವಕನು [“ಶುಶ್ರೂಷಕನು,” NW]” ಆಗಿರುತ್ತಾರೆ. (1 ಪೇತ್ರ 2:13, 14) ಕೈಸರನು ತೆರಿಗೆಗಳ ರೀತಿಯಲ್ಲಿ ನ್ಯಾಯವಾಗಿ ಕೇಳಿಕೊಳ್ಳುವುದನ್ನು ಯೆಹೋವನ ಸೇವಕರು ಶುದ್ಧಾಂತಃಕರಣದಿಂದ ತೆರುತ್ತಾರೆ, ಮತ್ತು “ಅಧಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿ . . . ಸಕಲ ಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರಾಗಿ” ಇರುವುದರಲ್ಲಿ ತಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿ ಅನುಮತಿಸುವ ವರೆಗೂ ಅವರು ಮುಂದುವರಿಯುತ್ತಾರೆ. (ತೀತ 3:1) “ಸತ್ಕಾರ್ಯ”ದಲ್ಲಿ, ವಿಪತ್ತುಗಳು ಬಡಿಯುವಾಗ ಇತರರಿಗೆ ಸಹಾಯ ಮಾಡುವಂತಹ ವಿಷಯಗಳು ಸೇರಿರುತ್ತವೆ. ಈ ಸಂದರ್ಭಗಳಲ್ಲಿ ಯೆಹೋವನ ಸಾಕ್ಷಿಗಳು ಜೊತೆಮಾನವರಿಗೆ ತೋರಿಸಿರುವ ದಯೆಯ ಕುರಿತು ಅನೇಕರು ಸಾಕ್ಷಿನೀಡಿದ್ದಾರೆ.—ಗಲಾತ್ಯ 6:10.
16. ಸರಕಾರಗಳಿಗೂ ಜೊತೆಮಾನವರಿಗೂ ಯೆಹೋವನ ಸಾಕ್ಷಿಗಳು ಯಾವ ಸತ್ಕಾರ್ಯಗಳನ್ನು ಶುದ್ಧಾಂತಃಕರಣದಿಂದ ಮಾಡುತ್ತಾರೆ?
16 ಯೆಹೋವನ ಸಾಕ್ಷಿಗಳು ತಮ್ಮ ಜೊತೆಮಾನವರನ್ನು ಪ್ರೀತಿಸಿ, ತಾವು ಅವರಿಗಾಗಿ ಮಾಡಸಾಧ್ಯವಿರುವ ಅತ್ಯುತ್ತಮವಾದ ಸತ್ಕಾರ್ಯವು, ಅವರು ನೀತಿಯ “ನೂತನಾಕಾಶಮಂಡಲ ಮತ್ತು ನೂತನ ಭೂಮಂಡಲ”ವನ್ನು ತರುವ ದೇವರ ಉದ್ದೇಶದ ನಿಷ್ಕೃಷ್ಟ ಜ್ಞಾನವನ್ನು ಹೊಂದುವಂತೆ ಸಹಾಯಮಾಡುವುದೇ ಎಂದೆಣಿಸುತ್ತಾರೆ. (2 ಪೇತ್ರ 3:13) ಬೈಬಲಿನ ಉನ್ನತ ನೈತಿಕ ಮೂಲತತ್ತ್ವಗಳನ್ನು ಕಲಿಸಿ, ಆಚರಿಸುವ ಮೂಲಕ, ಅನೇಕರನ್ನು ಅಪರಾಧದಿಂದ ರಕ್ಷಿಸುತ್ತ, ಅವರು ಮಾನವ ಸಮಾಜಕ್ಕೆ ಪ್ರಯೋಜನವಾಗಿದ್ದಾರೆ. ಯೆಹೋವನ ಸೇವಕರು ನಿಯಮಪಾಲಕರಾಗಿದ್ದು, ಸರಕಾರೀ ಮಂತ್ರಿಗಳು, ಅಧಿಕಾರಿಗಳು, ನ್ಯಾಯಾಧೀಶರು ಮತ್ತು ನಗರಾಧಿಕಾರಿಗಳಿಗೆ ಗೌರವ ತೋರಿಸಿ, ‘ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು ಸಲ್ಲಿಸುತ್ತಾರೆ.’ (ರೋಮಾಪುರ 13:7) ಸಾಕ್ಷಿ ಹೆತ್ತವರು ತಮ್ಮ ಮಕ್ಕಳ ಶಾಲಾ ಅಧ್ಯಾಪಕರೊಂದಿಗೆ ಸಂತೋಷದಿಂದ ಸಹಕರಿಸಿ, ತಮ್ಮ ಮಕ್ಕಳು ತರುವಾಯ ಜೀವನೋಪಾಯವನ್ನು ಗಳಿಸಶಕ್ತರಾಗುವಂತೆ ಮತ್ತು ಸಮಾಜದ ಮೇಲೆ ಹೊರೆಯಾಗಿರದಂತೆ, ಈಗ ಉತ್ತಮವಾಗಿ ಪಾಠ ಕಲಿಯುವಂತೆ ಸಹಾಯಮಾಡುತ್ತಾರೆ. (1 ಥೆಸಲೊನೀಕ 4:11, 12) ತಮ್ಮ ಸಭೆಗಳೊಳಗೆ, ಸಾಕ್ಷಿಗಳು ಕುಲಸಂಬಂಧದ ಅವಿಚಾರಗಳನ್ನು ಮತ್ತು ವರ್ಗವ್ಯತ್ಯಾಸಗಳನ್ನು ವಿರೋಧಿಸುತ್ತಾರೆ, ಮತ್ತು ಅವರು ಕುಟುಂಬ ಜೀವನವನ್ನು ಬಲಪಡಿಸುವುದರ ಮೇಲೆ ಭಾರಿ ಒತ್ತನ್ನು ಹಾಕುತ್ತಾರೆ. (ಅ. ಕೃತ್ಯಗಳು 10:34, 35; ಕೊಲೊಸ್ಸೆ 3:18-21) ಹೀಗಿರುವುದರಿಂದ, ತಾವು ಕುಟುಂಬ ವಿರೋಧಿಗಳು ಅಥವಾ ಸಮಾಜಕ್ಕೆ ಅಸಹಾಯಕರು ಎಂಬ ತಮ್ಮ ಮೇಲಿನ ಅಪವಾದಗಳು ಸುಳ್ಳೆಂದು ಅವರು ತೋರಿಸುತ್ತಾರೆ. ಹೀಗೆ, ಅಪೊಸ್ತಲ ಪೇತ್ರನ ಮಾತುಗಳು ನಿಜವಾಗುತ್ತವೆ: “ತಿಳಿಯದೆ ಮಾತಾಡುವ ಮೂಢಜನರ ಬಾಯನ್ನು ನೀವು ಒಳ್ಳೇ ನಡತೆಯಿಂದ ಕಟ್ಟಬೇಕೆಂಬದೇ ದೇವರ ಚಿತ್ತ.”—1 ಪೇತ್ರ 2:15.
17. ಕ್ರೈಸ್ತರು “ಹೊರಗಿನವರ ಮುಂದೆ ಜ್ಞಾನವುಳ್ಳವರಾಗಿ ನಡೆ”ಯುತ್ತ ಹೇಗೆ ಮುಂದುವರಿಯಬಲ್ಲರು?
17 ಹೀಗೆ, ಕ್ರಿಸ್ತನ ನಿಜ ಹಿಂಬಾಲಕರು, “ಲೋಕದ ಭಾಗವಾಗಿಲ್ಲ”ದಿರುವುದಾದರೂ, ಅವರಿನ್ನೂ ಮಾನವ ಸಮಾಜದ ಲೋಕದಲ್ಲಿದ್ದು, “ಹೊರಗಿನವರ ಮುಂದೆ ಜ್ಞಾನವುಳ್ಳವರಾಗಿ ನಡೆ”ಯುತ್ತ ಹೋಗಬೇಕು. (ಯೋಹಾನ 17:16; ಕೊಲೊಸ್ಸೆ 4:5) ಮೇಲಧಿಕಾರಿಗಳು ತನ್ನ “ಸೇವಕನು” ಆಗಿ ಕಾರ್ಯನಡೆಸುವಂತೆ ಯೆಹೋವನು ಅನುಮತಿಸುವ ತನಕ, ನಾವು ಅವರಿಗೆ ಯೋಗ್ಯವಾದ ಗೌರವವನ್ನು ಕೊಡುವೆವು. (ರೋಮಾಪುರ 13:1-4) ರಾಜಕೀಯದ ಸಂಬಂಧದಲ್ಲಿ ತಟಸ್ಥರಾಗಿರುವಾಗ, ನಾವು ‘ಅರಸುಗಳು ಮತ್ತು ಎಲ್ಲ ಅಧಿಕಾರಿಗಳ’ ಸಂಬಂಧವಾಗಿ—ವಿಶೇಷವಾಗಿ ಆರಾಧನಾ ಸ್ವಾತಂತ್ರ್ಯವನ್ನು ಪ್ರಭಾವಿಸಸಾಧ್ಯವಿರುವ ನಿರ್ಣಯಗಳನ್ನು ಅವರಿಗೆ ಮಾಡಲಿಕ್ಕಿರುವಾಗ—ಪ್ರಾರ್ಥಿಸುತ್ತೇವೆ. “ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ” ಇದ್ದು, ‘ಎಲ್ಲಾ ಮನುಷ್ಯರು ರಕ್ಷಣೆಯನ್ನು’ ಹೊಂದುವಂತೆ ನಾವಿದನ್ನು ಮಾಡುತ್ತ ಹೋಗುವೆವು.—1 ತಿಮೊಥೆಯ 2:1-4.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಾಶಿತ, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕದ 35ನೆಯ ಅಧ್ಯಾಯವನ್ನು ನೋಡಿ.
ಪುನರ್ವಿಮರ್ಶಾ ಪ್ರಶ್ನೆಗಳು
◻ ಕ್ರೈಸ್ತರು ಯಾವ “ಲೋಕ”ದ ಭಾಗವಾಗಿದ್ದಾರೆ, ಆದರೆ ಯಾವ “ಲೋಕ”ದ ಭಾಗವಾಗಿರಲು ಸಾಧ್ಯವಿಲ್ಲ?
◻ ಒಬ್ಬ ವ್ಯಕ್ತಿಯ ಕೈ ಅಥವಾ ಹಣೆಯ ಮೇಲೆ ಇರುವ “ಮೃಗ”ದ “ಗುರುತು” ಏನನ್ನು ಸೂಚಿಸುತ್ತದೆ, ಮತ್ತು ಯೆಹೋವನ ನಂಬಿಗಸ್ತ ಸೇವಕರಿಗೆ ಯಾವ ಗುರುತುಗಳಿವೆ?
◻ ಮಾನವ ಸರಕಾರಗಳ ಕಡೆಗೆ ಯಾವ ಸಮತೆಯ ವೀಕ್ಷಣವು ಸತ್ಯ ಕ್ರೈಸ್ತರಿಗಿದೆ?
◻ ಮಾನವ ಸಮಾಜದ ಕ್ಷೇಮಕ್ಕೆ ಯೆಹೋವನ ಸಾಕ್ಷಿಗಳು ನೆರವಾಗುವ ಕೆಲವು ವಿಧಗಳಾವುವು?
[ಪುಟ 16 ರಲ್ಲಿರುವ ಚಿತ್ರ]
ಬೈಬಲು ಮಾನವ ಸರಕಾರಗಳನ್ನು, ದೇವರ ಸೇವಕನಾಗಿಯೂ ಕಾಡುಮೃಗವಾಗಿಯೂ ಗುರುತಿಸುತ್ತದೆ
[ಪುಟ 17 ರಲ್ಲಿರುವ ಚಿತ್ರ]
ಇತರರ ಕಡೆಗೆ ಪ್ರೀತಿಯ ಚಿಂತೆಯನ್ನು ತೋರಿಸುವ ಕಾರಣ, ಯೆಹೋವನ ಸಾಕ್ಷಿಗಳು ತಮ್ಮ ಸಮಾಜಗಳಿಗೆ ಒಂದು ಪ್ರಯೋಜನವಾಗಿದ್ದಾರೆ