“ಯೆಹೋವನ ದಿನ”ವನ್ನು ಯಾರು ಪಾರಾಗುವರು?
“ನೀವು ದೇವರ [“ಯೆಹೋವನ,” NW] ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ.”—2 ಪೇತ್ರ 3:11, 12.
1. ಎಲೀಯನ ಮನೋಭಾವ ಮತ್ತು ಬಲದೊಂದಿಗೆ ಯಾರು ಕೆಲಸಮಾಡಿದ್ದಾರೆ?
ಯೆಹೋವ ದೇವರು, ಸ್ವರ್ಗೀಯ ರಾಜ್ಯದಲ್ಲಿ ತನ್ನ ಮಗನಾದ ಯೇಸು ಕ್ರಿಸ್ತನೊಂದಿಗೆ ಸಹಬಾಧ್ಯಸ್ಥರಾಗಲಿರುವ ವ್ಯಕ್ತಿಗಳನ್ನು ಮಾನವಕುಲದೊಳಗಿಂದ ಆಯ್ಕೆಮಾಡಿದ್ದಾನೆ. (ರೋಮಾಪುರ 8:16, 17) ಅವರು ಭೂಮಿಯ ಮೇಲೆ ಇನ್ನೂ ಇರುವಾಗಲೇ, ಅಭಿಷಿಕ್ತ ಕ್ರೈಸ್ತರು ಎಲೀಯನ ಮನೋಭಾವ ಮತ್ತು ಬಲದೊಂದಿಗೆ ಕೆಲಸಮಾಡಿದ್ದಾರೆ. (ಲೂಕ 1:17) ಹಿಂದಿನ ಲೇಖನದಲ್ಲಿ, ಅವರ ಚಟುವಟಿಕೆಗಳು ಮತ್ತು ಪ್ರವಾದಿಯಾದ ಎಲೀಯನ ಚಟುವಟಿಕೆಗಳ ನಡುವೆ ಕೆಲವೊಂದು ಸಮಾಂತರಗಳನ್ನು ನಾವು ಗಮನಿಸಿದೆವು. ಆದರೆ ಎಲೀಯನ ಉತ್ತರಾಧಿಕಾರಿಯಾದ ಪ್ರವಾದಿ ಎಲೀಷನ ಕೆಲಸದ ಕುರಿತಾಗಿ ಏನು?—1 ಅರಸುಗಳು 19:15, 16.
2. (ಎ) ಎಲೀಯನ ಕೊನೆಯ ಮತ್ತು ಎಲೀಷನ ಮೊದಲನೆಯ ಅದ್ಭುತವು ಯಾವುದಾಗಿತ್ತು? (ಬಿ) ಎಲೀಯನು ಪರಲೋಕಕ್ಕೆ ಹೋಗಲಿಲ್ಲವೆಂಬುದಕ್ಕೆ ಯಾವ ಪ್ರಮಾಣವಿದೆ?
2 ಎಲೀಯನಿಂದ ನಡೆಸಲ್ಪಟ್ಟ ಕೊನೆಯ ಅದ್ಭುತವು, ತನ್ನ ಅಧಿಕೃತ ನಿಲುವಂಗಿಯಿಂದ ಯೊರ್ದನ್ ಹೊಳೆಯ ನೀರನ್ನು ಹೊಡೆಯುವ ಮೂಲಕ ಅದನ್ನು ವಿಭಾಗಮಾಡುವುದಾಗಿತ್ತು. ಇದು ಎಲೀಯ ಮತ್ತು ಎಲೀಷರನ್ನು ಒಣನೆಲದ ಮೇಲೆ ದಾಟಿಹೋಗುವಂತೆ ಮಾಡಿತು. ಅವರು ಹೊಳೆಯ ಪೂರ್ವ ದಿಕ್ಕಿನ ಕಡೆಗೆ ನಡೆದುಹೋಗುತ್ತಿದ್ದಾಗ, ಒಂದು ಬಿರುಗಾಳಿಯು ಎಲೀಯನನ್ನು ಭೂಮಿಯ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯಿತು. (ಪುಟ 15ರಲ್ಲಿರುವ, “ಎಲೀಯನು ಯಾವ ಪರಲೋಕಕ್ಕೆ ಏರಿಹೋದನು?” ಎಂಬ ಶೀರ್ಷಿಕೆಯುಳ್ಳ ರೇಖಾಚೌಕವನ್ನು ನೋಡಿರಿ.) ಎಲೀಯನ ಅಧಿಕೃತ ನಿಲುವಂಗಿಯು ಹಿಂದೆ ಉಳಿಯಿತು. ಯೊರ್ದನ್ ಹೊಳೆಯನ್ನು ಹೊಡೆಯಲು ಎಲೀಷನು ಅದನ್ನು ಉಪಯೋಗಿಸಿದಾಗ, ಒಣನೆಲದ ಮೇಲೆ ಹಿಂದಿರುಗಲು ಅವನನ್ನು ಶಕ್ತನನ್ನಾಗಿ ಮಾಡುತ್ತಾ, ಅದರ ನೀರು ಪುನಃ ವಿಭಾಗವಾಯಿತು. ಇಸ್ರಾಯೇಲಿನಲ್ಲಿ ಸತ್ಯಾರಾಧನೆಯನ್ನು ಪ್ರವರ್ಧಿಸುವುದರಲ್ಲಿ ಎಲೀಷನು ಎಲೀಯನ ಉತ್ತರಾಧಿಕಾರಿಯಾಗಿ ಪರಿಣಮಿಸಿದ್ದನೆಂಬುದನ್ನು ಈ ಅದ್ಭುತವು ಸ್ಪಷ್ಟಗೊಳಿಸಿತು.—2 ಅರಸುಗಳು 2:6-15.
ದೈವಿಕ ಗುಣಗಳು ಅತ್ಯಾವಶ್ಯಕ
3. ಪೌಲ ಮತ್ತು ಪೇತ್ರರು ಯೇಸುವಿನ ಸಾನ್ನಿಧ್ಯ ಮತ್ತು “ಯೆಹೋವನ ದಿನ”ದ ಕುರಿತು ಏನು ಹೇಳಿದರು?
3 ಎಲೀಯ ಮತ್ತು ಎಲೀಷರ ದಿನಗಳ ತರುವಾಯ ಶತಮಾನಗಳು ಕಳೆದಮೇಲೆ, ಅಪೊಸ್ತಲರಾದ ಪೌಲ ಮತ್ತು ಪೇತ್ರರು, ಬರಲಿರುವ “ಯೆಹೋವನ ದಿನ”ವನ್ನು ಯೇಸು ಕ್ರಿಸ್ತನ ಸಾನ್ನಿಧ್ಯ ಮತ್ತು ಆಗ ಭಾವೀಯಾಗಿದ್ದ “ನೂತನ ಆಕಾಶಮಂಡಲಗಳೂ ನೂತನಭೂಮಂಡಲ”ಗಳೊಂದಿಗೆ ಜೋಡಿಸಿದರು. (2 ಥೆಸಲೊನೀಕ 2:1, 2; 2 ಪೇತ್ರ 3:10-13) ದೇವರು ತನ್ನ ವೈರಿಗಳನ್ನು ನಾಶಮಾಡಿ, ತನ್ನ ಜನರನ್ನು ರಕ್ಷಿಸುವ ಯೆಹೋವನ ಮಹಾ ದಿನವನ್ನು ಪಾರಾಗಲು, ನಾವು ಯೆಹೋವನನ್ನು ಹುಡುಕಬೇಕು ಮತ್ತು ದೈನ್ಯ ಹಾಗೂ ನೀತಿಯನ್ನು ಪ್ರದರ್ಶಿಸಬೇಕು. (ಚೆಫನ್ಯ 2:1-3) ಆದರೆ ಪ್ರವಾದಿಯಾದ ಎಲೀಷನನ್ನು ಒಳಗೊಂಡ ಘಟನೆಗಳನ್ನು ನಾವು ಪರಿಗಣಿಸಿದಂತೆ, ಕೆಲವೊಂದು ಹೆಚ್ಚಿನ ಗುಣಗಳು ಸ್ಪಷ್ಟವಾಗುತ್ತವೆ.
4. ಯೆಹೋವನ ಸೇವೆಯಲ್ಲಿ ಹುರುಪು ಯಾವ ಪಾತ್ರವನ್ನು ವಹಿಸುತ್ತದೆ?
4 ನಾವು “ಯೆಹೋವನ ದಿನ”ವನ್ನು ಪಾರಾಗಬೇಕಾದರೆ, ದೇವರ ಸೇವೆಗಾಗಿ ಹುರುಪು ಆವಶ್ಯಕವಾಗಿದೆ. ಎಲೀಯ ಮತ್ತು ಎಲೀಷರು ಯೆಹೋವನ ಸೇವೆಯಲ್ಲಿ ಹುರುಪುಳ್ಳವರಾಗಿದ್ದರು. ತದ್ರೀತಿಯ ಹುರುಪಿನೊಂದಿಗೆ, ಅಭಿಷಿಕ್ತ ಕ್ರೈಸ್ತರಲ್ಲಿ ಉಳಿಕೆಯವರು, ಇಂದು ಯೆಹೋವನಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಾರೆ ಮತ್ತು ಸುವಾರ್ತೆಯನ್ನು ಸಾರುವುದರಲ್ಲಿ ನಾಯಕತ್ವವನ್ನು ವಹಿಸಿಕೊಳ್ಳುತ್ತಾರೆ.a 1930ಗಳ ಮಧ್ಯಭಾಗದಿಂದ, ರಾಜ್ಯ ಸಂದೇಶವನ್ನು ಸ್ವೀಕರಿಸಿ, ಭೂಮಿಯ ಮೇಲೆ ಸದಾಕಾಲ ಜೀವಿಸಲು ನಿರೀಕ್ಷಿಸುವವರೆಲ್ಲರಿಗೆ, ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ದೀಕ್ಷಾಸ್ನಾನಪಡೆದುಕೊಳ್ಳುವಂತೆ ಉತ್ತೇಜನ ನೀಡಿದ್ದಾರೆ. (ಮಾರ್ಕ 8:34; 1 ಪೇತ್ರ 3:21) ಲಕ್ಷಾಂತರ ಜನರು ಈ ಉತ್ತೇಜನಕ್ಕೆ ಅನುಕೂಲವಾಗಿ ಪ್ರತಿಕ್ರಿಯಿಸಿದ್ದಾರೆ. ಒಮ್ಮೆ ಅವರು ಆತ್ಮಿಕ ಅಂಧಕಾರದಲ್ಲಿದ್ದರು ಮತ್ತು ಪಾಪದಲ್ಲಿ ಸತ್ತವರಾಗಿದ್ದರು, ಆದರೆ ಈಗ ಅವರು ದೇವರ ಸತ್ಯವನ್ನು ಕಲಿತಿದ್ದಾರೆ, ಭೂಪ್ರಮೋದವನದಲ್ಲಿ ಅನಂತ ಜೀವನದ ನಿರೀಕ್ಷೆಯನ್ನು ಸ್ವೀಕರಿಸಿದ್ದಾರೆ, ಮತ್ತು ಯೆಹೋವನ ಸೇವೆಯಲ್ಲಿ ಹುರುಪುಳ್ಳವರಾಗಿದ್ದಾರೆ. (ಕೀರ್ತನೆ 37:29; ಪ್ರಕಟನೆ 21:3-5) ತಮ್ಮ ಹುರುಪು, ಸಹಕಾರ, ಆತಿಥ್ಯ, ಮತ್ತು ಇತರ ಒಳ್ಳೆಯ ಕೆಲಸಗಳಿಂದ, ಅವರು ಭೂಮಿಯ ಮೇಲೆ ಇನ್ನೂ ಜೀವಿಸುತ್ತಿರುವ ಕ್ರಿಸ್ತನ ಆತ್ಮಿಕ ಸಹೋದರರಿಗೆ ಬಹಳಷ್ಟು ಚೈತನ್ಯವನ್ನು ತರುತ್ತಾರೆ.—ಮತ್ತಾಯ 25:31-46.
5. ಯೇಸುವಿನ “ಸಹೋದರ”ರಿಗಾಗಿ ಒಳ್ಳೆಯ ವಿಷಯಗಳನ್ನು ಮಾಡುವುದು ಏಕೆ ಅಷ್ಟು ಪ್ರಾಮುಖ್ಯವಾಗಿದೆ, ಮತ್ತು ಎಲೀಷನ ದಿನದ ಯಾವ ಮಾದರಿ ನಮಗಿದೆ?
5 ಈ ಅಭಿಷಿಕ್ತ ಜನರು ಯೇಸುವಿನ ಹಿಂಬಾಲಕರಾಗಿರುವ ಕಾರಣ, ಅವನ “ಸಹೋದರ”ರಿಗೆ ಒಳ್ಳೆಯದನ್ನು ಮಾಡುವವರಿಗೆ “ಯೆಹೋವನ ದಿನ”ವನ್ನು ಪಾರಾಗುವ ನಿರೀಕ್ಷೆಯಿದೆ. ಶೂನೇಮ್ ಹಳ್ಳಿಯಲ್ಲಿದ್ದ ಒಬ್ಬ ವಿವಾಹಿತ ದಂಪತಿಗಳು, ಎಲೀಷ ಹಾಗೂ ಅವನ ಸೇವಕನ ವಿಷಯದಲ್ಲಿ ದಯಾಪರರೂ ಅತಿಥಿ ಸತ್ಕಾರ ಮಾಡುವವರೂ ಆಗಿದ್ದ ಕಾರಣ, ಬಹಳವಾಗಿ ಆಶೀರ್ವದಿಸಲ್ಪಟ್ಟರು. ಈ ದಂಪತಿಗಳಿಗೆ ಮಗನಿರಲಿಲ್ಲ, ಮತ್ತು ಗಂಡನು ವೃದ್ಧನಾಗಿದ್ದನು. ಆದರೆ ಆ ಶೂನೇಮ್ಯ ಸ್ತ್ರೀಯು ಒಬ್ಬ ಮಗನಿಗೆ ಜನ್ಮಕೊಡುವಳೆಂದು ಎಲೀಷನು ವಾಗ್ದಾನಿಸಿದನು, ಮತ್ತು ಅದು ಖಂಡಿತವಾಗಿಯೂ ಸಂಭವಿಸಿತು. ಈ ಒಬ್ಬನೇ ಮಗನು ಕೆಲವು ವರ್ಷಗಳ ತರುವಾಯ ಸತ್ತಾಗ, ಎಲೀಷನು ಶೂನೇಮಿಗೆ ಹೋಗಿ, ಅವನನ್ನು ಪುನರುತ್ಥಾನಗೊಳಿಸಿದನು. (2 ಅರಸುಗಳು 4:8-17, 32-37) ಎಲೀಷನಿಗೆ ಆತಿಥ್ಯ ತೋರಿಸಿದ್ದಕ್ಕಾಗಿ ಎಂತಹ ಪುಷ್ಕಳ ಪ್ರತಿಫಲಗಳು!
6, 7. ನಾಮಾನನು ಯಾವ ಮಾದರಿಯನ್ನಿಟ್ಟನು, ಮತ್ತು “ಯೆಹೋವನ ದಿನ”ವನ್ನು ಪಾರಾಗುವ ವಿಷಯದ ಮೇಲೆ ಇದು ಯಾವ ಪ್ರಭಾವವನ್ನು ಬೀರುತ್ತದೆ?
6 ಯೆಹೋವನ ದಿನವನ್ನು ಪಾರಾಗುವ ನಿರೀಕ್ಷೆಯೊಂದಿಗೆ, ಕ್ರಿಸ್ತನ “ಸಹೋದರ”ರಿಂದ ಬರುವ ಬೈಬಲಾಧಾರಿತ ನಿರ್ದೇಶನವನ್ನು ಸ್ವೀಕರಿಸುವ ಸಲುವಾಗಿ ದೀನಭಾವವು ಬೇಕಾಗಿದೆ. ಸಿರಿಯದ ಕುಷ್ಠರೋಗಿ ಸೇನಾಪತಿ ನಾಮಾನನು, ಸೆರೆಯಲ್ಲಿದ್ದ ಒಬ್ಬ ಇಸ್ರಾಯೇಲ್ಯ ಹುಡುಗಿಯ ಸಲಹೆಗೆ ತಕ್ಕಂತೆ ನಡೆಯಲು ಮತ್ತು ಎಲೀಷನನ್ನು ಕಂಡುಕೊಳ್ಳಲಿಕ್ಕಾಗಿ ಇಸ್ರಾಯೇಲಿಗೆ ಹೋಗುವ ಮೂಲಕ ರೋಗ ನಿವಾರಣೆಯನ್ನು ಪಡೆದುಕೊಳ್ಳಲು, ದೀನಭಾವವನ್ನು ತೋರಿಸಬೇಕಾಗಿತ್ತು. ನಾಮಾನನನ್ನು ಸಂಧಿಸಲು ತನ್ನ ಮನೆಯಿಂದ ಹೊರಗೆ ಬರುವ ಬದಲು, ಎಲೀಷನು ಈ ಸಂದೇಶವನ್ನು ಅವನಿಗೆ ಕಳುಹಿಸಿದನು: “ಹೋಗಿ ಯೊರ್ದನ್ ಹೊಳೆಯಲ್ಲಿ ಏಳು ಸಾರಿ ಸ್ನಾನಮಾಡು; ಆಗ ನಿನ್ನ ದೇಹವು ಮುಂಚಿನಂತಾಗುವದು; ನೀನು ಶುದ್ಧನಾಗುವಿ.” (2 ಅರಸುಗಳು 5:10) ನಾಮಾನನ ಪ್ರತಿಷ್ಠೆ ನೋವಿಗೆ ಗುರಿಯಾಯಿತು, ಮತ್ತು ಅವನು ಕೋಪಗೊಂಡನು. ಆದರೆ ಅನಂತರ ಅವನು ದೀನಭಾವದಿಂದ ಯೊರ್ದನ್ ಹೊಳೆಯಲ್ಲಿ ಏಳು ಬಾರಿ ಮುಳುಗಿ ಎದ್ದಾಗ, “ಅವನ ದೇಹವು ಕೂಸಿನ ದೇಹದಂತೆ ಶುದ್ಧವಾಯಿತು.” (2 ಅರಸುಗಳು 5:14) ಮನೆಗೆ ಹಿಂದಿರುಗುವ ಮೊದಲು, ಯೆಹೋವನ ಪ್ರವಾದಿಗೆ ಉಪಕಾರ ಸಲ್ಲಿಸಲು ನಾಮಾನನು ಪುನಃ ಹಿಂದಿರುಗಿ ಸಮಾರ್ಯಕ್ಕೆ ಪ್ರಯಾಣ ಬೆಳೆಸಿದನು. ದೇವದತ್ತ ಶಕ್ತಿಗಳಿಂದ ಭೌತಿಕವಾಗಿ ಲಾಭಪಡೆಯಬಾರದೆಂಬ ದೃಢನಿರ್ಧಾರದೊಂದಿಗೆ, ಎಲೀಷನು ನಾಮಾನನನ್ನು ಸಂಧಿಸಲು ಹೊರಗೆ ಬಂದನು, ಆದರೆ ಯಾವುದೇ ಕೊಡುಗೆಗಳನ್ನು ಸ್ವೀಕರಿಸಲು ಸಿದ್ಧನಿರಲಿಲ್ಲ. ನಾಮಾನನು ದೀನಭಾವದಿಂದ ಎಲೀಷನಿಗೆ ಹೇಳಿದ್ದು: “ನಾನು ಇನ್ನುಮುಂದೆ ಎಲ್ಲಾ ದೇವತೆಗಳನ್ನು ಬಿಟ್ಟು ಯೆಹೋವನೊಬ್ಬನಿಗೇ ಸರ್ವಾಂಗಹೋಮಯಜ್ಞಗಳನ್ನು ಸಮರ್ಪಿಸಬೇಕೆಂದಿರುತ್ತೇನೆ.”—2 ಅರಸುಗಳು 5:17.
7 ಅಭಿಷಿಕ್ತರ ಶಾಸ್ತ್ರೀಯ ಸಲಹೆಯನ್ನು ದೀನಭಾವದಿಂದ ಅನುಸರಿಸುವ ಮೂಲಕ, ಇಂದು ಲಕ್ಷಾಂತರ ಜನರು ಪುಷ್ಕಳವಾಗಿ ಆಶೀರ್ವದಿಸಲ್ಪಡುತ್ತಾರೆ. ಅಲ್ಲದೆ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯಿಡುವ ಮೂಲಕ, ಈ ಪ್ರಾಮಾಣಿಕ ಹೃದಯದ ಜನರು ಆತ್ಮಿಕವಾಗಿ ಶುದ್ಧಗೊಳಿಸಲ್ಪಟ್ಟಿದ್ದಾರೆ. ಈಗ ಅವರು ಯೆಹೋವ ದೇವರು ಮತ್ತು ಯೇಸು ಕ್ರಿಸ್ತನ ಮಿತ್ರರಾಗಿರುವ ಸುಯೋಗದಲ್ಲಿ ಆನಂದಿಸುತ್ತಾರೆ. (ಕೀರ್ತನೆ 15:1, 2; ಲೂಕ 16:9) ಮತ್ತು ದೇವರ ಕಡೆಗೆ ಹಾಗೂ ಆತನ ಸೇವೆಯ ಕಡೆಗೆ ಅವರಿಗಿರುವ ಭಕ್ತಿಯು, ವೇಗವಾಗಿ ಸಮೀಪಿಸುತ್ತಿರುವ “ಯೆಹೋವನ ದಿನ”ದಲ್ಲಿ, ದುರಹಂಕಾರಿಗಳಾದ, ಪಶ್ಚಾತ್ತಾಪಪಡದ ಪಾಪಿಗಳ ಮೇಲೆ ಇನ್ನೇನು ಎರಗಲಿರುವ ಅನಂತ ನಾಶನದಿಂದ ಅವರು ಪಾರುಗೊಳಿಸಲ್ಪಡುವುದರಲ್ಲಿ ಬಹುಮಾನಿಸಲ್ಪಡುವುದು.—ಲೂಕ 13:24; 1 ಯೋಹಾನ 1:7.
“ನನ್ನ ಪಕ್ಷದವರು ಯಾರು?”
8. (ಎ) “ಯೆಹೋವನ ದಿನ”ವನ್ನು ಪಾರಾಗುವವರಿಗೆ, ದೈವಿಕ ಚಿತ್ತವನ್ನು ಮಾಡುವುದರ ಕಡೆಗೆ ಯಾವ ಮನೋಭಾವವಿದೆ? (ಬಿ) ಯೇಹುವಿಗೆ ಯಾವ ನಿಯೋಗವು ಕೊಡಲ್ಪಟ್ಟಿತು? (ಸಿ) ಈಜೆಬೆಲಳಿಗೆ ಏನು ಸಂಭವಿಸಲಿಕ್ಕಿತ್ತು?
8 “ಯೆಹೋವನ ದಿನ”ವನ್ನು ಪಾರಾಗಲು ನಿರೀಕ್ಷಿಸುತ್ತಿರುವವರು, ದೈವಿಕ ಚಿತ್ತವನ್ನು ಮಾಡುವುದರಲ್ಲಿ ಸಹ ನಿರ್ಣಾಯಕರಾಗಿರಬೇಕು. ರಾಜ ಅಹಾಬನ ಕೊಲೆಗಡುಕ, ಬಾಳನನ್ನು ಆರಾಧಿಸುವ ಕುಟುಂಬದ ನಾಶನವನ್ನು ಎಲೀಯನು ಧೈರ್ಯದಿಂದ ಮುಂತಿಳಿಸಿದನು. (1 ಅರಸುಗಳು 21:17-26) ಆದರೆ, ಈ ತೀರ್ಪು ಕಾರ್ಯರೂಪಕ್ಕೆ ಬರುವ ಮೊದಲು, ಎಲೀಯನ ಉತ್ತರಾಧಿಕಾರಿಯಾದ ಎಲೀಷನು ಮುಗಿಯದೆ ಉಳಿದಿದ್ದ ಒಂದಿಷ್ಟು ಕೆಲಸವನ್ನು ಮಾಡಿಮುಗಿಸಬೇಕಿತ್ತು. (1 ಅರಸುಗಳು 19:15-17) ಯೆಹೋವನ ಕ್ಲುಪ್ತ ಸಮಯವು ಬಂದಾಗ, ಎಲೀಷನು ಒಬ್ಬ ಸೇವಕನಿಗೆ, ಹೋಗಿ ಸೇನಾಪತಿ ಯೇಹುವನ್ನು ಇಸ್ರಾಯೇಲಿನ ಹೊಸ ರಾಜನಾಗಿ ಅಭಿಷೇಕಿಸುವಂತೆ ಆದೇಶಿಸಿದನು. ಯೇಹುವಿನ ತಲೆಯ ಮೇಲೆ ಎಣ್ಣೆಯನ್ನು ಸುರಿದ ಬಳಿಕ, ಆ ಸಂದೇಶವಾಹಕನು ಅವನಿಗೆ ಹೇಳಿದ್ದು: “ಇಸ್ರಾಯೇಲ್ದೇವರಾದ ಯೆಹೋವನ ಮಾತನ್ನು ಕೇಳು; ಆತನು ನಿನಗೆ—ನಾನು ನಿನ್ನನ್ನು ನನ್ನ ಪ್ರಜೆಯಾದ ಇಸ್ರಾಯೇಲ್ಯರ ಅರಸನಾಗುವದಕ್ಕೆ ಅಭಿಷೇಕಿಸಿದ್ದೇನೆ. ನೀನು ನಿನ್ನ ಯಜಮಾನನಾದ ಅಹಾಬನ ಮನೆಯವರನ್ನು ಸಂಹರಿಸಿಬಿಡು; ಆಗ ನನ್ನ ಸೇವಕರಾದ ಪ್ರವಾದಿಗಳೇ ಮೊದಲಾದ ಯೆಹೋವಭಕ್ತರ ರಕ್ತವನ್ನು ಸುರಿಸಿದ್ದಕ್ಕಾಗಿ ನಾನು ಈಜೆಬೆಲಳಿಗೆ ಮುಯ್ಯಿತೀರಿಸಿದಂತಾಗುವದು. ಅಹಾಬನ ಕುಟುಂಬದವರೆಲ್ಲಾ ನಿರ್ನಾಮವಾಗಬೇಕು.” ದುಷ್ಟ ರಾಣಿ ಈಜೆಬೆಲಳು ನಾಯಿಗಳಿಗೆ ತುತ್ತಾಗಲಿದ್ದು, ಯೋಗ್ಯವಾದ ಶವಸಂಸ್ಕಾರವನ್ನು ಪಡೆಯಲಿಕ್ಕಿರಲಿಲ್ಲ.—2 ಅರಸುಗಳು 9:1-10.
9, 10. ಈಜೆಬೆಲಳ ಸಂಬಂಧದಲ್ಲಿ ಎಲೀಯನ ಮಾತು ಹೇಗೆ ನೆರವೇರಿತು?
9 ಯೇಹುವಿನ ಸಂಗಡಿಗರು ಅವನ ಅಭಿಷೇಕದ ಸಪ್ರಮಾಣತೆಯನ್ನು ಗ್ರಹಿಸಿ, ಅವನನ್ನು ಇಸ್ರಾಯೇಲಿನ ಹೊಸ ರಾಜನನ್ನಾಗಿ ಘೋಷಿಸಿದರು. ನಿರ್ಣಾಯಕವಾಗಿ ಕ್ರಿಯೆಗೈಯುತ್ತಾ, ಬಾಳ್ ಆರಾಧನೆಯ ಧರ್ಮಭ್ರಷ್ಟ ಮುಖಂಡರನ್ನು ಮರಣದಂಡನೆಗೆ ಒಪ್ಪಿಸುವ ತನ್ನ ಕೆಲಸವನ್ನು ಆರಂಭಿಸಲು ಯೇಹು ಇಜ್ರೇಲಿನ ಕಡೆಗೆ ಧಾವಿಸಿದನು. ಯೇಹುವಿನ ಮರಣದಂಡನೆಯ ಬಾಣವನ್ನು ಪ್ರಥಮವಾಗಿ ಅನುಭವಿಸಿದ್ದು, ಅಹಾಬನ ಮಗನಾದ ರಾಜ ಯೋರಾಮನು. ಶಾಂತಿಯ ವಿಶೇಷಕಾರ್ಯಕ್ಕಾಗಿ ಯೇಹು ಬಂದಿದ್ದನೊ ಎಂದು ಕೇಳಲು ಅವನು ನಗರದ ಹೊರವಲಯಕ್ಕೆ ಬಂದನು. “ನಿನ್ನ ತಾಯಿಯ ದೇವದ್ರೋಹವೂ ಮಂತ್ರತಂತ್ರವೂ ಪ್ರಬಲವಾಗಿರುವಲ್ಲಿ ಶುಭವೆಲ್ಲಿಂದ ಬರುವದು?” ಎಂದು ಯೇಹು ಉತ್ತರಿಸಿದನು. ಅದರೊಂದಿಗೆ, ಯೇಹುವಿನ ಬಾಣವು ಯೋರಾಮನ ಹೃದಯವನ್ನು ಇರಿಯಿತು.—2 ಅರಸುಗಳು 9:22-24.
10 ದೈವಿಕ ಸ್ತ್ರೀಯರು ಈಜೆಬೆಲಳು ಇಲ್ಲವೆ ಅವಳಂತಹ ಯಾವುದೇ ರೀತಿಯ ಸ್ತ್ರೀಯರಂತೆ ಇರುವುದರಿಂದ ದೂರವಿರುತ್ತಾರೆ. (ಪ್ರಕಟನೆ 2:18-23) ಯೇಹು ಇಜ್ರೇಲನ್ನು ತಲಪುವ ಸಮಯದೊಳಗೆ, ಅವಳು ತನ್ನನ್ನು ಅಲಂಕರಿಸಿಕೊಳ್ಳಲು ಪ್ರಯತ್ನಿಸಿದ್ದಳು. ಕಿಟಕಿಯಿಂದ ನೋಡುತ್ತಾ ಅವಳು ಅವನನ್ನು ಮರೆಸಿಟ್ಟುಕೊಂಡ ಬೆದರಿಕೆಯೊಂದಿಗೆ ವಂದಿಸಿದಳು. “ನನ್ನ ಪಕ್ಷದವರು ಯಾರು”? ಎಂಬುದಾಗಿ ಅವನು ಅವಳ ಸೇವಕರನ್ನು ಕೇಳಿದನು. ಕೂಡಲೇ, ಇಬ್ಬರು ಇಲ್ಲವೆ ಮೂವರು ಕಂಚುಕಿಗಳು ಕೆಳಗೆ ನೋಡಿದರು. ಅವರು ಯೇಹುವಿನ ಪಕ್ಷದವರಾಗಿದ್ದರೊ? “ಆಕೆಯನ್ನು ಕೆಳಗೆ ದೊಬ್ಬಿರಿ” ಎಂದು ಅವನು ಪ್ರೇರಿಸಿದನು. ಆಗ ಅವರು ದುಷ್ಟ ಈಜೆಬೆಲಳನ್ನು ಕಿಟಕಿಯಿಂದ ಹೊರಗೆ ದಬ್ಬುತ್ತಾ, ನಿರ್ಣಾಯಕವಾಗಿ ಕ್ರಿಯೆಗೈದರು. ಅವಳು ಬಹುಶಃ ಕುದುರೆಗಳ ಗೊರಸುಗಳ ಅಡಿಯಲ್ಲಿ ತುಳಿಯಲ್ಪಟ್ಟಳು. ಅವಳನ್ನು ಹೂಳಿಡಲು ಜನರು ಬಂದಾಗ, “ಅವರಿಗೆ ಆಕೆಯ ತಲೆಬರುಡೆ, ಕೈಕಾಲುಗಳು ಹೊರತಾಗಿ ಬೇರೇನೂ ಸಿಕ್ಕಲಿಲ್ಲ.” “ನಾಯಿಗಳು ಈಜೆಬೆಲಳ ದೇಹಮಾಂಸವನ್ನು . . . ತಿಂದುಬಿಡುವವು” ಎಂಬ ಎಲೀಯನ ಮಾತಿನ ಎಂತಹ ಒಂದು ನಾಟಕೀಯ ನೆರವೇರಿಕೆ!—2 ಅರಸುಗಳು 9:30-37.
ಸತ್ಯಾರಾಧನೆಯ ಹೃತ್ಪೂರ್ವಕ ಬೆಂಬಲ
11. ಯೆಹೋನಾದಾಬನು ಯಾರಾಗಿದ್ದನು, ಮತ್ತು ಸತ್ಯಾರಾಧನೆಗಾಗಿ ತನ್ನ ಬೆಂಬಲವನ್ನು ಅವನು ಹೇಗೆ ತೋರಿಸಿದನು?
11 “ಯೆಹೋವನ ದಿನ”ವನ್ನು ಪಾರಾಗಿ, ಭೂಮಿಯ ಮೇಲೆ ಸದಾಕಾಲ ಜೀವಿಸಲು ನಿರೀಕ್ಷಿಸುತ್ತಿರುವವರು ಸತ್ಯಾರಾಧನೆಯನ್ನು ಹೃತ್ಪೂರ್ವಕವಾಗಿ ಬೆಂಬಲಿಸಬೇಕು. ಅವರು, ಯೆಹೋವನ ಇಸ್ರಾಯೇಲ್ಯೇತರ ಆರಾಧಕನಾಗಿದ್ದ ಯೆಹೋನಾದಾಬ ಇಲ್ಲವೆ ಯೋನಾದಾಬನಂತೆ ಇರಬೇಕು. ಯೇಹು ತನ್ನ ನಿಯೋಗವನ್ನು ಹುರುಪಿನಿಂದ ನೆರವೇರಿಸುತ್ತಾ ಇದ್ದಂತೆ, ಯೆಹೋನಾದಾಬನು ತನ್ನ ಸಮ್ಮತಿ ಹಾಗೂ ಬೆಂಬಲವನ್ನು ತೋರಿಸಲು ಬಯಸಿದನು. ಆದುದರಿಂದ, ಅಹಾಬನ ಮನೆಯವರಲ್ಲಿ ಉಳಿದವರನ್ನು ವಧಿಸಲು ಸಮಾರ್ಯಕ್ಕೆ ಹೋಗುತ್ತಿದ್ದ ಇಸ್ರಾಯೇಲಿನ ಹೊಸ ರಾಜನನ್ನು ಸಂಧಿಸಲು ಅವನು ಹೋದನು. ಯೆಹೋನಾದಾಬನನ್ನು ನೋಡಿ, ಯೇಹು ಕೇಳಿದ್ದು: “ನಿನ್ನ ವಿಷಯದಲ್ಲಿ ನನ್ನ ಮನಸ್ಸು ಯಥಾರ್ಥವಾಗಿರುವಂತೆ ನಿನ್ನ ಮನಸ್ಸೂ ಯಥಾರ್ಥವಾಗಿರುತ್ತದೋ”? ಯೆಹೋನಾದಾಬನ ಸಕಾರಾತ್ಮಕ ಉತ್ತರವು, ತನ್ನ ಕೈಯನ್ನು ಚಾಚಿ ಯೆಹೋನಾದಾಬನನ್ನು ತನ್ನ ರಥದೊಳಗೆ ಆಮಂತ್ರಿಸುತ್ತಾ, ಹೀಗೆ ಹೇಳುವಂತೆ ಯೇಹುವನ್ನು ಪ್ರಚೋದಿಸಿತು: “ನನ್ನ ಜೊತೆಯಲ್ಲಿ ಬಂದು ಯೆಹೋವನಲ್ಲಿ ನನಗಿರುವ ಆಸಕ್ತಿಯನ್ನು ನೋಡು.” ತಡಮಾಡದೆ, ಯೆಹೋವನ ಅಭಿಷಿಕ್ತ ವಧಕಾರನಿಗೆ ತನ್ನ ಬೆಂಬಲವನ್ನು ತೋರಿಸುವ ಸುಯೋಗವನ್ನು ಯೆಹೋನಾದಾಬನು ಸ್ವೀಕರಿಸಿದನು.—2 ಅರಸುಗಳು 10:15-17.
12. ಯೆಹೋವನು ಯೋಗ್ಯವಾಗಿಯೇ ಅನನ್ಯ ಭಕ್ತಿಯನ್ನು ಕೇಳಿಕೊಳ್ಳುವುದು ಏಕೆ?
12 ಸತ್ಯಾರಾಧನೆಯ ಹೃತ್ಪೂರ್ವಕ ಬೆಂಬಲವು ಖಂಡಿತವಾಗಿಯೂ ತಕ್ಕದ್ದಾಗಿದೆ, ಏಕೆಂದರೆ ಯೆಹೋವನು ನಮ್ಮ ಅನನ್ಯ ಭಕ್ತಿಯನ್ನು ಯೋಗ್ಯವಾಗಿಯೇ ಕೇಳಿಕೊಳ್ಳುವ ಹಾಗೂ ಅದಕ್ಕೆ ಅರ್ಹನಾಗಿರುವ ಸೃಷ್ಟಿಕರ್ತನೂ ವಿಶ್ವ ಪರಮಾಧಿಕಾರಿಯೂ ಆಗಿದ್ದಾನೆ. ಆತನು ಇಸ್ರಾಯೇಲ್ಯರಿಗೆ ಆಜ್ಞೆ ನೀಡಿದ್ದು: “ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂಬಾರದು ಪೂಜೆಮಾಡಲೂ ಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿ”ಸೆನು. (ವಿಮೋಚನಕಾಂಡ 20:4, 5) “ಯೆಹೋವನ ದಿನ”ವನ್ನು ಪಾರಾಗಲು ನಿರೀಕ್ಷಿಸುವವರು, ಆತನನ್ನು ಅನನ್ಯವಾಗಿ, “ಆತ್ಮದಿಂದಲೂ ಸತ್ಯದಿಂದಲೂ” (NW) ಆರಾಧಿಸಬೇಕು. (ಯೋಹಾನ 4:23, 24) ಅವರು ಎಲೀಯ, ಎಲೀಷ, ಹಾಗೂ ಯೆಹೋನಾದಾಬರಂತೆ ಸತ್ಯಾರಾಧನೆಗಾಗಿ ದೃಢರಾಗಿರಬೇಕು.
13. ಯೆಹೋನಾದಾಬನ ಹೃದಯವು ಯೇಹುವಿನೊಂದಿಗೆ ಇದ್ದಂತೆ, ಮೆಸ್ಸೀಯ ಸಂಬಂಧಿತ ರಾಜನನ್ನು ಯಾರು ಅಂಗೀಕರಿಸುತ್ತಾರೆ ಮತ್ತು ಇದನ್ನು ಅವರು ಹೇಗೆ ತೋರಿಸುತ್ತಾರೆ?
13 ಅಹಾಬನ ಮನೆಯವರ ವಧೆಯ ತರುವಾಯ, ರಾಜ ಯೇಹು ಬಾಳನ ಆರಾಧಕರನ್ನು ಗುರುತಿಸಲು ಮತ್ತು ಇಸ್ರಾಯೇಲಿನಲ್ಲಿ ಈ ಸುಳ್ಳು ಧರ್ಮವನ್ನು ನಿರ್ಮೂಲಮಾಡಲು ಇನ್ನಿತರ ಹೆಜ್ಜೆಗಳನ್ನು ತೆಗೆದುಕೊಂಡನು. (2 ಅರಸುಗಳು 10:18-28) ಇಂದು, ಸ್ವರ್ಗೀಯ ರಾಜನಾದ ಯೇಸು ಕ್ರಿಸ್ತನು, ಯೆಹೋವನ ವೈರಿಗಳನ್ನು ವಧಿಸಲು ಮತ್ತು ಆತನ ಪರಮಾಧಿಕಾರವನ್ನು ನಿರ್ದೋಷೀಕರಿಸಲು ನೇಮಿಸಲ್ಪಟ್ಟಿದ್ದಾನೆ. ಯೆಹೋನಾದಾಬನ ಹೃದಯವು ಯೇಹುವಿನೊಂದಿಗೆ ಇದ್ದಂತೆಯೇ, ಯೇಸುವಿನ “ಬೇರೆ ಕುರಿಗಳ” “ಮಹಾ ಸಮೂಹವು” ಇಂದು ಕ್ರಿಸ್ತನನ್ನು ಮೆಸ್ಸೀಯ ಸಂಬಂಧಿತ ರಾಜನಾಗಿ ಹೃತ್ಪೂರ್ವಕವಾಗಿ ಅಂಗೀಕರಿಸಿ, ಭೂಮಿಯ ಮೇಲಿರುವ ಅವನ ಆತ್ಮಿಕ ಸಹೋದರರೊಂದಿಗೆ ಸಹಕರಿಸುತ್ತದೆ. (ಪ್ರಕಟನೆ 7:9, 10; ಯೋಹಾನ 10:16) ಸತ್ಯ ಧರ್ಮವನ್ನು ಆಚರಿಸುವ ಮೂಲಕ ಮತ್ತು ವೇಗವಾಗಿ ಸಮೀಪಿಸುತ್ತಿರುವ “ಯೆಹೋವನ ದಿನ”ದ ಕುರಿತಾಗಿ ದೇವರ ವೈರಿಗಳಿಗೆ ಎಚ್ಚರಿಕೆ ನೀಡುತ್ತಾ, ಕ್ರೈಸ್ತ ಶುಶ್ರೂಷೆಯಲ್ಲಿ ಒಂದು ಹುರುಪುಳ್ಳ ಪಾಲನ್ನು ಹೊಂದಿರುವ ಮೂಲಕ, ಅವರು ಇದರ ಪುರಾವೆಯನ್ನು ಕೊಡುತ್ತಾರೆ.—ಮತ್ತಾಯ 10:32, 33; ರೋಮಾಪುರ 10:9, 10.
ನಾಟಕೀಯ ಘಟನೆಗಳು ಇನ್ನೇನು ಮುಂದೆಯೇ ಇವೆ!
14. ಸುಳ್ಳು ಧರ್ಮಕ್ಕೆ ಮುಂದೆ ಏನು ಸಂಭವಿಸಲಿಕ್ಕಿದೆ?
14 ಇಸ್ರಾಯೇಲ್ನಲ್ಲಿ ಬಾಳನ ಆರಾಧನೆಯನ್ನು ಕೊನೆಗೊಳಿಸಲು ಯೇಹು ಕ್ರಿಯೆಗೈದನು. ನಮ್ಮ ದಿನದಲ್ಲಿ, ಮಹಾ ಯೇಹುವಾದ ಯೇಸು ಕ್ರಿಸ್ತನ ಮೂಲಕ, ದೇವರು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿಗೆ ನಾಶನವನ್ನು ಬರಮಾಡುವನು. ಅಪೊಸ್ತಲ ಯೋಹಾನನಿಗೆ ದೇವದೂತನು ನುಡಿದ ಮಾತುಗಳ ನೆರವೇರಿಕೆಯನ್ನು ನಾವು ಬೇಗನೆ ನೋಡುವೆವು: “ಇದಲ್ಲದೆ ಹತ್ತು ಕೊಂಬುಗಳನ್ನೂ ಮೃಗವನ್ನೂ ಕಂಡಿಯಲ್ಲ? ಇವುಗಳಿಂದ ಸೂಚಿತರಾದವರು ಆ ಜಾರಸ್ತ್ರೀಯನ್ನು [ಮಹಾ ಬಾಬೆಲನ್ನು] ದ್ವೇಷಿಸಿ ಅವಳನ್ನು ಗತಿಗೆಟ್ಟವಳನ್ನಾಗಿಯೂ ಬಟ್ಟೆಯಿಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು ಅವಳನ್ನು ಬೆಂಕಿಯಿಂದ ಸುಟ್ಟುಬಿಡುವರು. ಯಾಕಂದರೆ ಅವರು ದೇವರ ಅಭಿಪ್ರಾಯವನ್ನು ನೆರವೇರಿಸುವದಕ್ಕೂ ಒಂದೇ ಅಭಿಪ್ರಾಯವುಳ್ಳವರಾಗಿದ್ದು ತಮ್ಮ ರಾಜ್ಯವನ್ನು ಮೃಗಕ್ಕೆ ಕೊಡುವದಕ್ಕೂ ದೇವರು ತನ್ನ ವಚನವು ನೆರವೇರುವ ತನಕ ಅವರ ಹೃದಯಗಳನ್ನು ಪ್ರೇರಿಸಿದನು.” (ಪ್ರಕಟನೆ 17:16, 17; 18:2-5) ‘ಹತ್ತು ಕೊಂಬುಗಳು’ ಭೂಮಿಯನ್ನು ಆಳುತ್ತಿರುವ ಮಿಲಿಟರೀಕೃತ ರಾಜಕೀಯ ಶಕ್ತಿಗಳನ್ನು ಚಿತ್ರಿಸುತ್ತವೆ. ಈಗ ಅವುಗಳಿಗೆ ಮಹಾ ಬಾಬೆಲಿನೊಂದಿಗೆ ಆತ್ಮಿಕವಾಗಿ ವ್ಯಭಿಚಾರದ ಸಂಬಂಧ ಇರುವುದಾದರೂ, ಅವಳ ಸಮಯವು ಗತಿಸುವುದರಲ್ಲಿದೆ. ಈ ಲೋಕದ ರಾಜಕೀಯ ಘಟಕವು ಸುಳ್ಳು ಧರ್ಮವನ್ನು ನಾಶಮಾಡುವುದು, ಮತ್ತು ಅವಳನ್ನು ಧ್ವಂಸಪಡಿಸುವುದರಲ್ಲಿ ‘ಹತ್ತು ಕೊಂಬುಗಳ’ ಜೊತೆಗೆ “ಮೃಗ”—ವಿಶ್ವ ಸಂಸ್ಥೆ—ಕ್ಕೆ ಒಂದು ಪ್ರಧಾನ ಪಾತ್ರವಿರುವುದು.b ಯೆಹೋವನನ್ನು ಕೊಂಡಾಡಲು ಎಂತಹ ಒಂದು ಸಂದರ್ಭ!—ಪ್ರಕಟನೆ 19:1-6.
15. ದೇವರ ಭೂಸಂಸ್ಥೆಯನ್ನು ನಾಶಮಾಡುವ ಪ್ರಯತ್ನವು ಮಾಡಲ್ಪಡುವಾಗ ಏನು ಸಂಭವಿಸುವುದು?
15 ಬಾಳನ ಆರಾಧನೆಯ ವಿರುದ್ಧ ರಾಜ ಯೇಹುವಿನ ಆಕ್ರಮಣದ ತರುವಾಯ, ಅವನ ರಾಜಯೋಗ್ಯ ಮನೆತನವು ಇಸ್ರಾಯೇಲಿನ ರಾಜಕೀಯ ವೈರಿಗಳ ಕಡೆಗೆ ಗಮನವನ್ನು ಹರಿಸಿತು. ರಾಜನಾದ ಯೇಸು ಕ್ರಿಸ್ತನು ತದ್ರೀತಿ ಕ್ರಿಯೆಗೈಯುವನು. ಬಾಳನಂತಹ ಸುಳ್ಳು ಧರ್ಮದ ನಾಶನದ ತರುವಾಯ, ರಾಜಕೀಯ ಶಕ್ತಿಗಳು ಉಳಿಯುವವು. ಪಿಶಾಚನಾದ ಸೈತಾನನ ಪ್ರಭಾವದ ಕೆಳಗೆ, ಯೆಹೋವನ ಪರಮಾಧಿಕಾರದ ಈ ವೈರಿಗಳು, ದೇವರ ಭೂಸಂಸ್ಥೆಯನ್ನು ನಾಶಗೊಳಿಸುವ ಪ್ರಯತ್ನದಲ್ಲಿ ಸರ್ವಶಕ್ತಿಯನ್ನು ಬಳಸಿ ಆಕ್ರಮಣಮಾಡುವರು. (ಯೆಹೆಜ್ಕೇಲ 38:14-16) ಆದರೆ, “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ”ವಾದ ಹರ್ಮಗೆದೋನ್ನಲ್ಲಿ, ಯೆಹೋವನ ಪರಮಾಧಿಕಾರದ ನಿರ್ದೋಷೀಕರಣವನ್ನು ಪೂರ್ತಿಗೊಳಿಸುತ್ತಾ ಅವರನ್ನು ನಾಶಮಾಡುವ ಮೂಲಕ, ರಾಜನಾದ ಯೇಸು ಕ್ರಿಸ್ತನು ಅವರನ್ನು ಹೊಡೆದುರುಳಿಸುವಂತೆ ಯೆಹೋವನು ಮಾಡಿಸುವನು.—ಪ್ರಕಟನೆ 16:14, 16; 19:11-21; ಯೆಹೆಜ್ಕೇಲ 38:18-23.
ಎಲೀಷನಂತಹ ಹುರುಪಿನೊಂದಿಗೆ ಸೇವೆಸಲ್ಲಿಸುವುದು
16, 17. (ಎ) ಎಲೀಷನು ತನ್ನ ಜೀವಿತದ ಕೊನೆಯ ತನಕ ಹುರುಪುಳ್ಳವನಾಗಿದ್ದನೆಂದು ನಮಗೆ ಹೇಗೆ ಗೊತ್ತು? (ಬಿ) ಸತ್ಯದ ಬಾಣಗಳೊಂದಿಗೆ ನಾವು ಏನು ಮಾಡಬೇಕು?
16 “ಯೆಹೋವನ ದಿನ”ವು ಸೈತಾನನ ಇಡೀ ದುಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರುವ ತನಕ, ದೇವರ ಸೇವಕರು ಎಲೀಷನಂತೆ ಧೈರ್ಯವಂತರೂ ಹುರುಪುಳ್ಳವರೂ ಆಗಿರುವರು. ಎಲೀಯನ ಸೇವಕನಂತೆ ತನ್ನ ಕೆಲಸದ ಜೊತೆಗೆ, ಎಲೀಷನು 50ಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಯೆಹೋವನ ಪ್ರವಾದಿಯಾಗಿ ಒಬ್ಬಂಟಿಗನಾಗಿ ಸೇವೆಮಾಡಿದನು! ಮತ್ತು ಎಲೀಷನು ತನ್ನ ದೀರ್ಘವಾದ ಜೀವಿತದ ಕೊನೆಯ ವರೆಗೂ ಹುರುಪುಳ್ಳವನಾಗಿದ್ದನು. ಅವನ ಮರಣಕ್ಕೆ ತುಸು ಮೊದಲು, ಯೇಹುವಿನ ಮೊಮ್ಮಗನಾದ, ರಾಜ ಯೋವಾಷನು ಅವನನ್ನು ಭೇಟಿಮಾಡಿದನು. ಕಿಟಕಿಯಿಂದ ಒಂದು ಬಾಣವನ್ನು ಬಿಡುವಂತೆ ಎಲೀಷನು ಅವನಿಗೆ ಹೇಳಿದನು. ಬಾಣವು ತನ್ನ ಗುರಿಯ ಕಡೆಗೆ ಮುನ್ನುಗಿತು, ಮತ್ತು ಎಲೀಷನು ಉದ್ಗರಿಸಿದ್ದು: “ಇದು ಜಯಪ್ರದವಾದ ಯೆಹೋವನ ಬಾಣ; ಅರಾಮ್ಯರನ್ನು ಜಯಿಸುವ ಬಾಣ. ನೀನು ಅರಾಮ್ಯರನ್ನು ಅಫೇಕದಲ್ಲಿ ಸೋಲಿಸಿ ಸಂಹರಿಸಿಬಿಡುವಿ.” ತರುವಾಯ ಎಲೀಷನ ವಿನಂತಿಯ ಮೇರೆಗೆ, ಯೋವಾಷನು ನೆಲವನ್ನು ತನ್ನ ಬಾಣಗಳಿಂದ ಹೊಡೆದನು. ಆದರೆ, ಮೂರು ಬಾರಿ ಮಾತ್ರ ಹೊಡೆಯುತ್ತಾ, ಅವನು ಇದನ್ನು ಹುರುಪಿನ ಕೊರತೆಯೊಂದಿಗೆ ಮಾಡಿದನು. ಫಲಸ್ವರೂಪವಾಗಿ, ಯೋವಾಷನಿಗೆ ಅರಾಮ್ಯರ ಮೇಲೆ ಮೂರು ವಿಜಯಗಳು ಮಾತ್ರ ಅನುಗ್ರಹಿಸಲ್ಪಡುವವು ಎಂಬುದಾಗಿ ಎಲೀಷನು ಆಮೇಲೆ ಹೇಳಿದನು, ಮತ್ತು ಹಾಗೆಯೇ ಆಯಿತು. (2 ಅರಸುಗಳು 13:14-19, 25) ರಾಜ ಯೋವಾಷನು ಅರಾಮ್ಯರನ್ನು “ನಿರ್ನಾಮವಾಗಿ ಹೋಗುವ ವರೆಗೂ” ಸೋಲಿಸಲಿಲ್ಲ.
17 ಅಭಿಷಿಕ್ತ ಉಳಿಕೆಯವರಾದರೊ, ಎಲೀಷನಂತಹ ಹುರುಪಿನೊಂದಿಗೆ ಸುಳ್ಳು ಆರಾಧನೆಯ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತಾರೆ. ಭೂನಿರೀಕ್ಷೆಗಳುಳ್ಳ ಅವರ ಸಂಗಾತಿಗಳು ಅದನ್ನೇ ಮಾಡುತ್ತಿದ್ದಾರೆ. ಅಲ್ಲದೆ, “ಯೆಹೋವನ ದಿನ”ವನ್ನು ಪಾರಾಗಲು ನಿರೀಕ್ಷಿಸುವ ಎಲ್ಲರೂ, ನೆಲವನ್ನು ಹೊಡೆಯುವ ವಿಷಯದಲ್ಲಿ ಹುರುಪುಳ್ಳ ಎಲೀಷನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು. ನಾವು ಸತ್ಯದ ಬಾಣಗಳನ್ನು ತೆಗೆದುಕೊಂಡು, ಹುರುಪಿನಿಂದ ಅವುಗಳನ್ನು ಉಪಯೋಗಿಸುತ್ತ ಮತ್ತೆ ಮತ್ತೆ—ಹೌದು, ಅವುಗಳೊಂದಿಗಿನ ನಮ್ಮ ಕೆಲಸವು ಪೂರ್ಣಗೊಂಡಿದೆ ಎಂಬುದಾಗಿ ಯೆಹೋವನು ಹೇಳುವ ತನಕ ಹೊಡೆಯೋಣ.
18. ಎರಡನೆಯ ಪೇತ್ರ 3:11, 12ರ ಮಾತುಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
18 “ಯೆಹೋವನ ದಿನವು” ಬೇಗನೆ ಈ ಪ್ರಚಲಿತ ದುಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರುವುದು. ಆದುದರಿಂದ ಅಪೊಸ್ತಲ ಪೇತ್ರನ ಹುರಿದುಂಬಿಸುವ ಮಾತುಗಳಿಂದ ನಾವು ನಮ್ಮನ್ನೇ ಪ್ರಚೋದಿಸಿಕೊಳ್ಳೋಣ. ಪೇತ್ರನು ಉದ್ಘೋಷಿಸಿದ್ದು: “ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದರಿಂದ ನೀವು ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕಲ್ಲಾ.” (2 ಪೇತ್ರ 3:11, 12) ಯೇಸು ಕ್ರಿಸ್ತನ ಮೂಲಕ ವ್ಯಕ್ತಗೊಳಿಸಲ್ಪಡುವ ದೇವರ ಕೋಪದ ಬೆಂಕಿಯಿಂದ ಈ ವ್ಯವಸ್ಥೆಯ ಪ್ರತಿಯೊಂದು ಭಾಗವು ಲಯವಾಗಿ ಹೋಗುವಾಗ, ಶುದ್ಧವಾದ ನಡತೆ ಮತ್ತು ದಿವ್ಯ ಭಕ್ತಿಯ ದಾಖಲೆಯುಳ್ಳವರು ಮಾತ್ರ ತಪ್ಪಿಸಿಕೊಳ್ಳುವರು. ನೈತಿಕ ಹಾಗೂ ಆತ್ಮಿಕ ಶುದ್ಧತೆಯು ಅತ್ಯಾವಶ್ಯಕವಾಗಿದೆ. ನಮ್ಮ ಕ್ರೈಸ್ತ ಶುಶ್ರೂಷೆಯ ಮೂಲಕ, ವಿಶೇಷವಾಗಿ ಒಂದು ಆತ್ಮಿಕ ವಿಧದಲ್ಲಿ, ಜೊತೆ ಮಾನವರ ಅಗತ್ಯಗಳಿಗೆ ಪ್ರತಿಕ್ರಿಯಿಸುವ ಮೂಲಕ ತೋರಿಸಲ್ಪಡುವ ಪ್ರೀತಿಯೂ ಅಷ್ಟೇ ಆವಶ್ಯಕವಾಗಿದೆ.
19. “ಯೆಹೋವನ ದಿನ”ವನ್ನು ಪಾರಾಗಲು ನಾವು ಏನು ಮಾಡಬೇಕು?
19 ನಿಮ್ಮ ನಡೆನುಡಿಗಳು ನಿಮ್ಮನ್ನು ದೇವರ ಒಬ್ಬ ನಂಬಿಗಸ್ತ ಹಾಗೂ ಹುರುಪುಳ್ಳ ಸೇವಕನನ್ನಾಗಿ ಗುರುತಿಸುತ್ತವೊ? ಹಾಗಿರುವಲ್ಲಿ, ನೀವು “ಯೆಹೋವನ ದಿನ”ವನ್ನು ಪಾರಾಗಿ, ದೇವರ ವಾಗ್ದತ್ತ ಹೊಸ ಲೋಕದೊಳಗೆ ಪ್ರವೇಶಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಸಾಧ್ಯವಿದೆ. ಹೌದು, ಶೂನೇಮ್ಯ ದಂಪತಿಗಳು ಎಲೀಷನಿಗೆ ಅತಿಥಿ ಸತ್ಕಾರ ತೋರಿಸಿದಂತೆ, ನೀವು ಕ್ರಿಸ್ತನ ಆತ್ಮಿಕ ಸಹೋದರರಿಗೆ—ಅವರು ಯೇಸುವಿನ ಹಿಂಬಾಲಕರಾಗಿರುವ ಕಾರಣ—ಒಳ್ಳೆಯದನ್ನು ಮಾಡುವುದಾದರೆ, ಪಾರಾಗುವಿಕೆಯು ನಿಮ್ಮ ಅನುಭವವಾಗಿರಬಹುದು. ಪಾರಾಗುವಿಕೆಗಾಗಿ ನೀವು ನಾಮಾನನಂತೆಯೂ ಇರಬೇಕು. ಅವನು ದೈವಿಕ ಉಪದೇಶವನ್ನು ದೀನಭಾವದಿಂದ ಸ್ವೀಕರಿಸಿ, ಯೆಹೋವನ ಆರಾಧಕನಾದನು. ನೀವು ಭೂಪ್ರಮೋದವನದಲ್ಲಿ ಸದಾಕಾಲ ಜೀವಿಸಲು ಹಾತೊರೆಯುವುದಾದರೆ, ಯೆಹೋನಾದಾಬನು ಮಾಡಿದಂತೆ, ಸತ್ಯಾರಾಧನೆಗಾಗಿ ಹೃತ್ಪೂರ್ವಕ ಬೆಂಬಲವನ್ನು ನೀವು ಪ್ರದರ್ಶಿಸಬೇಕು. ಆಗ ನೀವು, ಯೇಸುವಿನ ಮಾತುಗಳ ನೆರವೇರಿಕೆಯನ್ನು ಬೇಗನೆ ಅನುಭವಿಸಲಿರುವ ಯೆಹೋವನ ನಂಬಿಗಸ್ತ ಸೇವಕರಲ್ಲಿ ಒಬ್ಬರಾಗಿರಬಹುದು: “ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ.”—ಮತ್ತಾಯ 25:34.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ, “ನಿನ್ನ ನಾಮವು ಪರಿಶುದ್ಧವೆಂದೆಣಿಸಲ್ಪಡಲಿ” (ಇಂಗ್ಲಿಷ್) ಎಂಬ ಪುಸ್ತಕದ 18 ಮತ್ತು 19ನೆಯ ಅಧ್ಯಾಯಗಳನ್ನು ನೋಡಿರಿ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಪುಸ್ತಕದ 254-6 ಪುಟಗಳನ್ನು ನೋಡಿರಿ.
ನೀವು ಹೇಗೆ ಪ್ರತಿಕ್ರಿಯಿಸುವಿರಿ?
◻ “ಯೆಹೋವನ ದಿನ”ವನ್ನು ಪಾರಾಗುವ ಸಲುವಾಗಿ ಬೇಕಾಗಿರುವ ಕೆಲವು ಗುಣಗಳಾವುವು?
◻ ಎಲೀಷನ ದಿನದಲ್ಲಿ ಶೂನೇಮ್ಯ ದಂಪತಿಗಳಿಂದ ಯಾವ ಮಾದರಿಯು ಸ್ಥಾಪಿಸಲ್ಪಟ್ಟಿತು?
◻ ನಾಮಾನನಿಂದ ಯಾವ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ?
◻ ಯೆಹೋನಾದಾಬನ ಮಾದರಿಯನ್ನು ನಾವು ಹೇಗೆ ಅನುಸರಿಸಬಲ್ಲೆವು?
◻ 2 ಪೇತ್ರ 3:11, 12 ನಮ್ಮನ್ನು ಹೇಗೆ ಪ್ರಭಾವಿಸಬೇಕು?