“ನಂಬಿಕೆಗಾಗಿ ತೀವ್ರವಾದ ಹೋರಾಟವನ್ನು ನಡೆಸಿರಿ”!
“ಪವಿತ್ರ ಜನರಿಗೆ ಒಮ್ಮೆಗೇ ಒಪ್ಪಿಸಲ್ಪಟ್ಟ ನಂಬಿಕೆಗಾಗಿ ತೀವ್ರವಾದ ಹೋರಾಟವನ್ನು ನಡೆಸಿರಿ.” —ಯೂದ 3, NW.
1. ಯಾವ ಅರ್ಥದಲ್ಲಿ ಇಂದು ನಿಜ ಕ್ರೈಸ್ತರು ಯುದ್ಧಾಚರಣೆಯಲ್ಲಿ ತೊಡಗಿದ್ದಾರೆ?
ಯುದ್ಧದಲ್ಲಿರುವ ಸೈನಿಕರ ಜೀವನರೀತಿಯು ಸದಾ ಪ್ರಯಾಸಕರ. ಯುದ್ಧದ ಪೂರ್ಣ ಸಮವಸ್ತ್ರವನ್ನು ಧರಿಸಿಕೊಂಡು, ಮಳೆಬಿಸಿಲೆನ್ನದೆ ಎಣಿಕೆಯಿಲ್ಲದ ಕಿಲೊಮೀಟರುಗಳಷ್ಟು ದೂರ ನಡೆಯುತ್ತಾ, ಶಸ್ತ್ರಗಳ ಬಳಕೆಯಲ್ಲಿ ಕಡುಸಂಕಷ್ಟದ ತರಬೇತಿಯನ್ನು ಪಡೆದುಕೊಳ್ಳುತ್ತಾ, ಇಲ್ಲವೆ ಜೀವ ಮತ್ತು ಶರೀರಕ್ಕಿರುವ ಎಲ್ಲ ಬಗೆಯ ಹಿಂಸಾತ್ಮಕ ಬೆದರಿಕೆಗಳ ವಿರುದ್ಧ ತಮ್ಮನ್ನೇ ರಕ್ಷಿಸಿಕೊಳ್ಳಬೇಕಾಗುವುದನ್ನು ಊಹಿಸಿಕೊಳ್ಳಿರಿ. ನಿಜ ಕ್ರೈಸ್ತರಾದರೊ, ರಾಷ್ಟ್ರಗಳ ಯುದ್ಧಗಳಲ್ಲಿ ಭಾಗವಹಿಸುವುದಿಲ್ಲ. (ಯೆಶಾಯ 2:2-4; ಯೋಹಾನ 17:14) ಹಾಗಿದ್ದರೂ, ನಾವೆಲ್ಲರೂ ಒಂದರ್ಥದಲ್ಲಿ ಯುದ್ಧ ನಡೆಸುತ್ತಿದ್ದೇವೆಂಬುದನ್ನು ಎಂದಿಗೂ ಮರೆಯಬಾರದು. ಸೈತಾನನು, ಯೇಸು ಕ್ರಿಸ್ತನನ್ನು ಮತ್ತು ಭೂಮಿಯ ಮೇಲಿರುವ ಅವನ ಹಿಂಬಾಲಕರನ್ನು ಬಹಳವಾಗಿ ದ್ವೇಷಿಸುತ್ತಾನೆ. (ಪ್ರಕಟನೆ 12:17) ಯೆಹೋವ ದೇವರಿಗೆ ಸೇವೆಸಲ್ಲಿಸಲು ನಿರ್ಧರಿಸುವ ಎಲ್ಲರೂ, ಕಾರ್ಯತಃ ಆತ್ಮಿಕ ಯುದ್ಧವನ್ನು ನಡೆಸಲು ಸೈನಿಕರಾಗಿ ನಮೂದಿಸಿಕೊಳ್ಳುತ್ತಿದ್ದಾರೆ.—2 ಕೊರಿಂಥ 10:4.
2. ಯೂದನು ಕ್ರೈಸ್ತ ಯುದ್ಧಾಚರಣೆಯನ್ನು ಹೇಗೆ ವರ್ಣಿಸುತ್ತಾನೆ, ಮತ್ತು ಅದರಲ್ಲಿ ತಾಳಿಕೊಳ್ಳುವಂತೆ ಅವನ ಪತ್ರವು ನಮಗೆ ಹೇಗೆ ಸಹಾಯ ಮಾಡಸಾಧ್ಯವಿದೆ?
2 ಸೂಕ್ತವಾಗಿಯೇ, ಯೇಸುವಿನ ಮಲತಮ್ಮನಾದ ಯೂದನು ಬರೆಯುವುದು: “ಪ್ರಿಯರೇ, ನಮಗೆ ಹುದುವಾಗಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವದಕ್ಕೆ ಪೂರ್ಣಾಸಕ್ತಿಯಿಂದ ಪ್ರಯತ್ನಮಾಡುತ್ತಿದ್ದಾಗ, ಪವಿತ್ರ ಜನರಿಗೆ ಒಮ್ಮೆಗೇ ಒಪ್ಪಿಸಲ್ಪಟ್ಟ ನಂಬಿಕೆಗಾಗಿ ತೀವ್ರವಾದ ಹೋರಾಟವನ್ನು ನಡೆಸಿರಿ ಎಂದು ಎಚ್ಚರಿಸಿ ಬರೆಯುವದು ಅವಶ್ಯವೆಂದು ತೋಚಿತು.” (ಯೂದ 3, NW) “ತೀವ್ರವಾದ ಹೋರಾಟವನ್ನು ನಡೆಸಿರಿ” ಎಂಬುದಾಗಿ ಯೂದನು ಕ್ರೈಸ್ತರಿಗೆ ಪ್ರೇರಣೆ ನೀಡುವಾಗ, “ಸಂಕಟ” ಎಂಬ ಪದಕ್ಕೆ ಸಂಬಂಧಿಸಿರುವ ಒಂದು ಶಬ್ದವನ್ನು ಅವನು ಬಳಸುತ್ತಾನೆ. ಹೌದು, ಈ ಹೋರಾಟವು ಕಷ್ಟಕರವಾಗಿ, ಸಂಕಟಕರವಾಗಿಯೂ ಇರಸಾಧ್ಯವಿದೆ! ಈ ಯುದ್ಧದಲ್ಲಿ ತಾಳಿಕೊಳ್ಳುವುದು ಕಷ್ಟಕರವೆಂದು ನೀವು ಕೆಲವೊಮ್ಮೆ ಕಂಡುಕೊಳ್ಳುತ್ತೀರೊ? ಯೂದನ ಚಿಕ್ಕದಾದ ಆದರೆ ಶಕ್ತಿಶಾಲಿಯಾದ ಪತ್ರವು ನಮಗೆ ಸಹಾಯ ನೀಡಬಲ್ಲದು. ಅದು ಅನೈತಿಕತೆಯನ್ನು ಪ್ರತಿರೋಧಿಸುವಂತೆ, ದೈವಿಕವಾಗಿ ಸ್ಥಾಪಿಸಲ್ಪಟ್ಟ ಅಧಿಕಾರವನ್ನು ಗೌರವಿಸುವಂತೆ, ಮತ್ತು ನಮ್ಮನ್ನು ದೇವರ ಪ್ರೀತಿಯಲ್ಲಿಟ್ಟುಕೊಳ್ಳುವಂತೆ ನಮ್ಮನ್ನು ಪ್ರೇರಿಸುತ್ತದೆ. ಈ ಸಲಹೆಯನ್ನು ಅನ್ವಯಿಸಿಕೊಳ್ಳುವ ವಿಧವನ್ನು ನಾವು ಪರಿಗಣಿಸೋಣ.
ಅನೈತಿಕತೆಯನ್ನು ಪ್ರತಿರೋಧಿಸಿರಿ
3. ಯೂದನ ದಿನದಲ್ಲಿದ್ದ ಕ್ರೈಸ್ತ ಸಭೆಯು ಯಾವ ತುರ್ತಿನ ಸನ್ನಿವೇಶವನ್ನು ಎದುರಿಸಿತು?
3 ಸೈತಾನನಿಗೆದುರಾಗಿದ್ದ ಯುದ್ಧವನ್ನು ತನ್ನ ಎಲ್ಲ ಜೊತೆ ಕ್ರೈಸ್ತರು ಜಯಿಸುತ್ತಿರಲಿಲ್ಲ ಎಂಬುದನ್ನು ಯೂದನು ನೋಡಸಾಧ್ಯವಿತ್ತು. ಆ ಮಂದೆಯು ಒಂದು ತುರ್ತಿನ ಸನ್ನಿವೇಶವನ್ನು ಎದುರಿಸಿತು. ಭ್ರಷ್ಟ ಪುರುಷರು “ಕಳ್ಳತನದಿಂದ ಹೊಕ್ಕಿ”ದ್ದರು ಎಂದು ಯೂದನು ಬರೆಯುತ್ತಾನೆ. ಈ ಪುರುಷರು ಗ್ರಹಿಸಲಾಗದ ರೀತಿಯಲ್ಲಿ ಅನೈತಿಕತೆಯನ್ನು ಪ್ರವರ್ಧಿಸುತ್ತಿದ್ದರು. ಮತ್ತು ಅವರು “ನಮ್ಮ ದೇವರ ಕೃಪೆಯನ್ನು ನೆವಮಾಡಿಕೊಂಡು ನಾಚಿಕೆಗೆಟ್ಟ ಕೃತ್ಯಗಳನ್ನು ನಡಿಸು”ತ್ತಾ, ಜಾಣ್ಮೆಯಿಂದ ತಮ್ಮ ಕೃತ್ಯಗಳನ್ನು ತರ್ಕಸಮ್ಮತಮಾಡಿದರು. (ಯೂದ 4) ಬಹುಶಃ, ಗತಕಾಲದ ಕೆಲವು ಅಧ್ಯಾತ್ಮ ರಹಸ್ಯ ಜ್ಞಾನವಾದಿಗಳಂತೆ, ಒಬ್ಬನು ಎಷ್ಟು ಹೆಚ್ಚು ಪಾಪಮಾಡುತ್ತಾನೊ ಅವನು ಅಷ್ಟು ಹೆಚ್ಚು ಪ್ರಮಾಣದಲ್ಲಿ ದೇವರ ಕೃಪೆಯನ್ನು ಪಡೆಯಸಾಧ್ಯವಿದೆ—ಆದಕಾರಣ, ಕಾರ್ಯತಃ, ಹೆಚ್ಚು ಪಾಪಮಾಡುವುದು ಉತ್ತಮವಾಗಿತ್ತೆಂದು ಅವರು ತರ್ಕಿಸಿದರು! ಅಥವಾ, ಒಬ್ಬ ದಯಾಪರ ದೇವರು ಅವರನ್ನು ಎಂದಿಗೂ ದಂಡಿಸುವುದಿಲ್ಲವೆಂದು ಅವರು ನೆನಸಿದ್ದಿರಬಹುದು. ವಿಷಯವು ಏನೇ ಆಗಿರಲಿ, ಅವರ ಯೋಚನೆಯು ತಪ್ಪಾಗಿತ್ತು.—1 ಕೊರಿಂಥ 3:19.
4. ಗತಕಾಲದಲ್ಲಿ ಯೆಹೋವನು ಜಾರಿಗೊಳಿಸಿದ ನ್ಯಾಯತೀರ್ಪುಗಳಲ್ಲಿ ಯಾವ ಮೂರು ಶಾಸ್ತ್ರೀಯ ಉದಾಹರಣೆಗಳನ್ನು ಯೂದನು ಉದ್ಧರಿಸುತ್ತಾನೆ?
4 ಗತಕಾಲದಲ್ಲಿ ಯೆಹೋವನು ಜಾರಿಗೊಳಿಸಿದ ನ್ಯಾಯತೀರ್ಪುಗಳಲ್ಲಿ ಮೂರು ಉದಾಹರಣೆಗಳನ್ನು ಉದ್ಧರಿಸುವ ಮೂಲಕ, ಯೂದನು ಅವರ ದುಷ್ಟ ತರ್ಕಸರಣಿಗಳನ್ನು ತಪ್ಪೆಂದು ಸಿದ್ಧಪಡಿಸುತ್ತಾನೆ: “ನಂಬದೆಹೋದ” ಇಸ್ರಾಯೇಲ್ಯರ ವಿರುದ್ಧ; ಸ್ತ್ರೀಯರೊಂದಿಗೆ ಪಾಪಮಾಡಲು “ತಮಗೆ ತಕ್ಕ ವಾಸಸ್ಥಾನವನ್ನು ಬಿಟ್ಟ ದೇವದೂತ”ರ ವಿರುದ್ಧ; ಮತ್ತು “ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು ಸ್ವಭಾವವಿರುದ್ಧವಾದ ಭೋಗವನ್ನನುಸರಿಸಿದ” ಸೋದೋಮ ಗೊಮೋರ ಪಟ್ಟಣಗಳ ನಿವಾಸಿಗಳ ವಿರುದ್ಧದ ನ್ಯಾಯತೀರ್ಪು. (ಯೂದ 5-7; ಆದಿಕಾಂಡ 6:2-4; 19:4-25; ಅರಣ್ಯಕಾಂಡ 14:35) ಪ್ರತಿಯೊಂದು ವಿದ್ಯಮಾನದಲ್ಲೂ, ಯೆಹೋವನು ಪಾಪಿಗಳ ವಿರುದ್ಧ ಖಡಾಖಂಡಿತ ನ್ಯಾಯತೀರ್ಪನ್ನು ತಂದನು.
5. ಗತಕಾಲದ ಯಾವ ಪ್ರವಾದಿಯನ್ನು ಯೂದನು ಉದ್ಧರಿಸುತ್ತಾನೆ, ಮತ್ತು ಆ ಪ್ರವಾದನೆಯು ಅದರ ನೆರವೇರಿಕೆಯ ಸಮಗ್ರ ನಿಶ್ಚಯತೆಯನ್ನು ಹೇಗೆ ವ್ಯಕ್ತಪಡಿಸಿತು?
5 ತದನಂತರ, ಇನ್ನೂ ಹೆಚ್ಚು ವ್ಯಾಪಕವಾದ ನ್ಯಾಯತೀರ್ಪಿನ ಕುರಿತು ಯೂದನು ಸೂಚಿಸಿಹೇಳುತ್ತಾನೆ. ಅವನು ಹನೋಕನ ಪ್ರವಾದನೆಯೊಂದನ್ನು ಉದ್ಧರಿಸುತ್ತಾನೆ—ಈ ಉದ್ಧರಣೆಯು ಪ್ರೇರಿತ ಶಾಸ್ತ್ರಗಳಲ್ಲಿ ಬೇರೆಲ್ಲಿಯೂ ಕಂಡುಬರುವುದಿಲ್ಲ.a (ಯೂದ 14, 15) ಯೆಹೋವನು ಎಲ್ಲ ಭಕ್ತಿಹೀನರನ್ನು ಮತ್ತು ಅವರ ಭಕ್ತಿಹೀನ ಕೃತ್ಯಗಳ ನ್ಯಾಯತೀರ್ಪು ಮಾಡಲಿರುವ ಸಮಯದ ಬಗ್ಗೆ ಹನೋಕನು ಮುಂತಿಳಿಸಿದನು. ಆಸಕ್ತಿಕರವಾದ ವಿಷಯವೇನೆಂದರೆ, ಹನೋಕನು ಭೂತಕಾಲದ ರೂಪವನ್ನು ಉಪಯೋಗಿಸಿ ಮಾತಾಡಿದನು. ಏಕೆಂದರೆ ದೇವರ ನ್ಯಾಯತೀರ್ಪುಗಳು ಎಷ್ಟು ಖಂಡಿತವಾಗಿದ್ದವೆಂದರೆ, ಅವು ಈಗಾಗಲೇ ಸಂಭವಿಸಿದ್ದವೋ ಎಂಬಂತಿದ್ದವು. ಜನರು ಹನೋಕನನ್ನು ಮತ್ತು ತದನಂತರ ನೋಹನನ್ನು ಹೀಯಾಳಿಸಿದ್ದಿರಬಹುದು, ಆದರೆ ಅಂತಹ ಎಲ್ಲ ಅಪಹಾಸ್ಯಗಾರರು ಭೌಗೋಲಿಕ ಜಲಪ್ರಳಯದಲ್ಲಿ ಮುಳುಗಿ ಸತ್ತರು.
6. (ಎ) ಯಾವ ವಿಷಯವಾಗಿ ಯೂದನ ದಿನದ ಕ್ರೈಸ್ತರು ಮರುಜ್ಞಾಪಿಸಲ್ಪಡಬೇಕಿತ್ತು? (ಬಿ) ನಾವು ಯೂದನ ಮರುಜ್ಞಾಪನಗಳನ್ನು ಮನಸ್ಸಿಗೆ ಏಕೆ ಹಚ್ಚಿಕೊಳ್ಳಬೇಕು?
6 ಈ ದೈವಿಕ ನ್ಯಾಯತೀರ್ಪುಗಳ ಬಗ್ಗೆ ಯೂದನು ಏಕೆ ಬರೆದನು? ಏಕೆಂದರೆ ತನ್ನ ದಿನಗಳಲ್ಲಿನ ಕ್ರೈಸ್ತ ಸಭೆಗಳೊಂದಿಗೆ ಸಹವಸಿಸುತ್ತಿದ್ದ ಕೆಲವರು, ಗತಕಾಲದ ಆ ನ್ಯಾಯತೀರ್ಪುಗಳನ್ನು ಉದ್ರೇಕಿಸಿದ ಪಾಪಗಳಷ್ಟೇ ಅಶ್ಲೀಲವೂ ಆಕ್ಷೇಪಣೀಯವೂ ಆದ ಪಾಪಗಳನ್ನು ಗೈಯುತ್ತಿದ್ದರೆಂಬುದು ಅವನಿಗೆ ತಿಳಿದಿತ್ತು. ಹೀಗೆ, ಸಭೆಗಳು ಕೆಲವೊಂದು ಮೂಲಭೂತ ಆತ್ಮಿಕ ಸತ್ಯಗಳ ಕುರಿತು ಮರುಜ್ಞಾಪಿಸಲ್ಪಡುವ ಅಗತ್ಯವಿದೆಯೆಂದು ಯೂದನು ಬರೆಯುತ್ತಾನೆ. (ಯೂದ 5) ತಾವು ಮಾಡುತ್ತಿರುವ ವಿಷಯವನ್ನು ಯೆಹೋವ ದೇವರು ನೋಡುತ್ತಾನೆಂಬುದನ್ನು ಅವರು ಮರೆತುಬಿಟ್ಟಿದ್ದರು ಎಂಬುದು ಸ್ಪಷ್ಟ. ಹೌದು, ಆತನ ಸೇವಕರು ಆತನ ನಿಯಮಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತಾ ತಮ್ಮನ್ನು ಹಾಗೂ ಇತರರನ್ನು ಅಪವಿತ್ರಗೊಳಿಸುವಾಗ, ಆತನು ನೋಡುತ್ತಾನೆ. (ಜ್ಞಾನೋಕ್ತಿ 15:3) ಅಂತಹ ಕೃತ್ಯಗಳು ಆತನ ಮನಸ್ಸನ್ನು ಬಹಳವಾಗಿ ಘಾಸಿಗೊಳಿಸುತ್ತವೆ. (ಆದಿಕಾಂಡ 6:6; ಕೀರ್ತನೆ 78:40) ಬರಿಯ ಮಾನವರಾದ ನಾವು ಈ ವಿಶ್ವದ ಪರಮಾಧಿಕಾರಿ ಕರ್ತನ ಭಾವನೆಗಳನ್ನು ಪ್ರಭಾವಿಸಬಲ್ಲೆವೆಂಬುದು ಭಯಭಕ್ತಿ ಹುಟ್ಟಿಸುವ ವಿಚಾರವಾಗಿದೆ. ಆತನು ದಿನನಿತ್ಯವೂ ನಮ್ಮನ್ನು ಗಮನಿಸುತ್ತಾನೆ, ಮತ್ತು ನಾವು ಆತನ ಮಗನಾದ ಯೇಸು ಕ್ರಿಸ್ತನ ಹೆಜ್ಜೆಜಾಡನ್ನು ಅನುಸರಿಸಲು ಸಕಲ ಪ್ರಯತ್ನವನ್ನೂ ಮಾಡುವಾಗ, ನಮ್ಮ ನಡತೆಯು ಆತನ ಹೃದಯವನ್ನು ಉಲ್ಲಾಸಿತಗೊಳಿಸುತ್ತದೆ. ಹಾಗಾದರೆ ನಾವು, ಯೂದನು ನೀಡುವಂತಹ ರೀತಿಯ ಮರುಜ್ಞಾಪನಗಳಿಗಾಗಿ ಅಸಮಾಧಾನ ಪಟ್ಟುಕೊಳ್ಳದೆ, ಅವುಗಳನ್ನು ಮನಸ್ಸಿಗೆ ತೆಗೆದುಕೊಳ್ಳೋಣ.—ಜ್ಞಾನೋಕ್ತಿ 27:11; 1 ಪೇತ್ರ 2:21.
7. (ಎ) ಗಂಭೀರವಾದ ಪಾಪಕೃತ್ಯದಲ್ಲಿ ಒಳಗೂಡಿರುವವರು ಸಹಾಯವನ್ನು ಕೂಡಲೇ ಕೋರುವುದು ಏಕೆ ನಿರ್ಣಾಯಕವಾಗಿದೆ? (ಬಿ) ನಾವೆಲ್ಲರೂ ಅನೈತಿಕತೆಯಿಂದ ಹೇಗೆ ದೂರವಿರಸಾಧ್ಯವಿದೆ?
7 ಯೆಹೋವನು ನೋಡುತ್ತಾನೆ ಮಾತ್ರವಲ್ಲ, ಆತನು ಕ್ರಿಯೆಗೈಯುತ್ತಾನೆ. ಆತನು ನ್ಯಾಯದ ದೇವರಾಗಿರುವ ಕಾರಣ, ದುಷ್ಟರ ಮೇಲೆ ಇಂದಲ್ಲ ನಾಳೆ ದಂಡನೆಯನ್ನು ತರುತ್ತಾನೆ. (1 ತಿಮೊಥೆಯ 5:24) ಆತನ ನ್ಯಾಯತೀರ್ಪುಗಳು ಕೇವಲ ಗತಕಾಲದ ಇತಿಹಾಸವಾಗಿವೆಯೆಂದು, ಮತ್ತು ತಾವು ಮಾಡುವ ದುಷ್ಟತನದ ಕುರಿತು ಆತನು ಚಿಂತಿಸುವುದಿಲ್ಲವೆಂದು ತರ್ಕಿಸುವ ಜನರು, ತಮ್ಮನ್ನೇ ಮೂರ್ಖರನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಇಂದು ಅನೈತಿಕತೆಯಲ್ಲಿ ಒಳಗೂಡಿರುವ ಯಾರೇ ಆಗಲಿ, ಕ್ರೈಸ್ತ ಹಿರಿಯರಿಂದ ಕೂಡಲೇ ಸಹಾಯವನ್ನು ಕೋರುವುದು ಎಷ್ಟು ನಿರ್ಣಾಯಕವಾಗಿದೆ! (ಯಾಕೋಬ 5:14, 15) ನಮ್ಮ ಆತ್ಮಿಕ ಯುದ್ಧಾಚರಣೆಯಲ್ಲಿ ಅನೈತಿಕತೆಯು ಒಡ್ಡುವಂತಹ ಬೆದರಿಕೆಯಿಂದ ನಮ್ಮಲ್ಲಿ ಎಲ್ಲರೂ ವಿಚಾರಗ್ರಸ್ತರಾಗಬಹುದು. ಪ್ರತಿವರ್ಷ ಅನಾಹುತಗಳು ಆಗುತ್ತವೆ—ನಮ್ಮ ಮಧ್ಯದಿಂದ ಬಹಿಷ್ಕರಿಸಲ್ಪಡುವ ವ್ಯಕ್ತಿಗಳಲ್ಲಿ ಹೆಚ್ಚಿನವರು ಪಶ್ಚಾತ್ತಾಪರಹಿತವಾಗಿ ಅನೈತಿಕ ಕೃತ್ಯಗಳನ್ನು ಗೈದ ಕಾರಣ ಬಹಿಷ್ಕರಿಸಲ್ಪಡುತ್ತಾರೆ. ಅಂತಹ ಒಂದು ದಿಕ್ಕಿನ ಕಡೆಗೆ ನಮ್ಮನ್ನು ನಡೆಸಲೂ ತೊಡಗುವ ಯಾವುದೇ ಪ್ರಲೋಭನಗಳನ್ನು ಪ್ರತಿರೋಧಿಸಲು ನಾವು ದೃಢವಾಗಿ ನಿರ್ಧರಿಸಬೇಕು.—ಹೋಲಿಸಿ ಮತ್ತಾಯ 26:41.
ದೈವಿಕವಾಗಿ ಸ್ಥಾಪಿಸಲ್ಪಟ್ಟ ಅಧಿಕಾರಕ್ಕೆ ಗೌರವತೋರಿಸಿರಿ
8. ಯೂದ 8ರಲ್ಲಿ ಉಲ್ಲೇಖಿಸಲ್ಪಟ್ಟ “ಮಹಿಮಾನ್ವಿತರು” ಯಾರಾಗಿದ್ದರು?
8 ಯೂದನು ಸಂಬೋಧಿಸುವ ಮತ್ತೊಂದು ಸಮಸ್ಯೆಯು, ದೈವಿಕವಾಗಿ ಸ್ಥಾಪಿಸಲ್ಪಟ್ಟ ಅಧಿಕಾರಕ್ಕಾಗಿರುವ ಗೌರವದ ಕೊರತೆಯಾಗಿದೆ. ದೃಷ್ಟಾಂತಕ್ಕೆ, 8ನೆಯ ವಚನದಲ್ಲಿ, ಅದೇ ದುಷ್ಟ ಪುರುಷರ ಮೇಲೆ “ಮಹಿಮಾನ್ವಿತರ ಕುರಿತು ದೂಷಣೀಯವಾಗಿ ಮಾತಾಡುವ” (NW) ಆರೋಪವನ್ನು ಅವನು ಹೊರಿಸುತ್ತಾನೆ. ಈ ‘ಮಹಿಮಾನ್ವಿತರು’ ಯಾರಾಗಿದ್ದರು? ಅವರು ಅಪರಿಪೂರ್ಣ ಪುರುಷರಾಗಿದ್ದರೂ, ಯೆಹೋವನ ಪವಿತ್ರಾತ್ಮದಿಂದ ಅವರಿಗೆ ಜವಾಬ್ದಾರಿಗಳು ಅನುಗ್ರಹಿಸಲ್ಪಟ್ಟಿದ್ದವು. ಉದಾಹರಣೆಗೆ, ಸಭೆಗಳಲ್ಲಿ ಹಿರಿಯರಿದ್ದರು, ಇವರಿಗೆ ದೇವರ ಮಂದೆಯ ಪಾಲನೆಮಾಡುವ ಜವಾಬ್ದಾರಿಯಿತ್ತು. (1 ಪೇತ್ರ 5:2) ಅಪೊಸ್ತಲ ಪೌಲನಂತಹ ಸಂಚರಣ ಮೇಲ್ವಿಚಾರಕರೂ ಇದ್ದರು. ಮತ್ತು ಯೆರೂಸಲೇಮಿನಲ್ಲಿದ್ದ ಹಿರಿಯರ ಮಂಡಲಿಯು, ಇಡೀಯಾಗಿ ಕ್ರೈಸ್ತ ಸಭೆಯನ್ನು ಪ್ರಭಾವಿಸುವ ನಿರ್ಣಯಗಳನ್ನು ಮಾಡುತ್ತಾ, ಆಡಳಿತ ಮಂಡಲಿಯಾಗಿ ಕಾರ್ಯಮಾಡಿತು. (ಅ. ಕೃತ್ಯಗಳು 15:6) ಸಭೆಗಳಲ್ಲಿದ್ದ ಕೆಲವರು ಇಂತಹವರ ಕುರಿತು ದೂಷಣೀಯವಾಗಿ ಮಾತಾಡುತ್ತಿದ್ದರು, ಇಲ್ಲವೆ ನಿಂದಿಸುತ್ತಿದ್ದರೆಂಬ ವಿಷಯದಲ್ಲಿ ಯೂದನು ಬಹಳ ಚಿಂತಿತನಾಗಿದ್ದನು.
9. ಅಧಿಕಾರಕ್ಕೆ ಅಗೌರವವನ್ನು ತೋರಿಸುವುದರ ಸಂಬಂಧದಲ್ಲಿ ಯಾವ ಉದಾಹರಣೆಗಳನ್ನು ಯೂದನು ಉದ್ಧರಿಸುತ್ತಾನೆ?
9 ಅಂತಹ ಅಗೌರವಭರಿತ ಮಾತುಕತೆಯನ್ನು ಖಂಡಿಸಲು, 11ನೆಯ ವಚನದಲ್ಲಿ ಯೂದನು ಇನ್ನೂ ಮೂರು ಉದಾಹರಣೆಗಳನ್ನು ಮರುಜ್ಞಾಪನಗಳಾಗಿ ಉದ್ಧರಿಸುತ್ತಾನೆ: ಕಾಯಿನ, ಬಿಳಾಮ, ಮತ್ತು ಕೋರಹ. ಕಾಯಿನನು ಯೆಹೋವನ ಪ್ರೀತಿಪರ ಸಲಹೆಯನ್ನು ಕಡೆಗಣಿಸಿ, ಕೊಲೆಗೈಯುವಂತಹ ದ್ವೇಷದ ತನ್ನ ಸ್ವಂತ ಪಥವನ್ನು ಸ್ವಇಚ್ಛೆಯಿಂದ ಬೆನ್ನಟ್ಟಿದನು. (ಆದಿಕಾಂಡ 4:4-8) ನಿಸ್ಸಂದೇಹವಾಗಿಯೂ ಒಂದು ಅತಿಮಾನುಷ ಮೂಲದಿಂದ—ಅವನ ಕತ್ತೆಯೂ ಅವನೊಂದಿಗೆ ಮಾತಾಡಿತು—ಬಂದ ಸತತವಾದ ಎಚ್ಚರಿಕೆಗಳನ್ನು ಬಿಳಾಮನು ಪಡೆದನು! ಆದರೂ ಬಿಳಾಮನು ಸ್ವಾರ್ಥಪರವಾಗಿ ದೇವರ ಜನರ ವಿರುದ್ಧ ಸಂಚುಹೂಡುವುದನ್ನು ಮುಂದುವರಿಸಿದನು. (ಅರಣ್ಯಕಾಂಡ 22:28, 32-34; ಧರ್ಮೋಪದೇಶಕಾಂಡ 23:5) ಕೋರಹನಿಗೆ ಅವನದ್ದೇ ಆದ ಜವಾಬ್ದಾರಿಯುತ ಸ್ಥಾನವಿತ್ತು, ಆದರೆ ಅದರಿಂದ ಅವನು ತೃಪ್ತನಾಗಿರಲಿಲ್ಲ. ಅವನು ಭೂಮಿಯ ಮೇಲಿದ್ದ ಅತ್ಯಂತ ದೀನ ವ್ಯಕ್ತಿಯಾದ ಮೋಶೆಯ ವಿರುದ್ಧ ದಂಗೆಯನ್ನು ಕೆರಳಿಸಿದನು.—ಅರಣ್ಯಕಾಂಡ 12:3; 16:1-3, 32.
10. ಇಂದು ಕೆಲವರು “ಮಹಿಮಾನ್ವಿತರ ಕುರಿತು ದೂಷಣೀಯವಾಗಿ ಮಾತಾಡುವ” ಬಲೆಯಲ್ಲಿ ಹೇಗೆ ಬೀಳಸಾಧ್ಯವಿದೆ, ಮತ್ತು ಅಂತಹ ಮಾತುಕತೆಯನ್ನು ಏಕೆ ತ್ಯಜಿಸಬೇಕಾಗಿದೆ?
10 ಸಲಹೆಗೆ ಕಿವಿಗೊಡುವಂತೆ ಮತ್ತು ಜವಾಬ್ದಾರಿಯುತ ಸ್ಥಾನಗಳಲ್ಲಿ ಯೆಹೋವನು ಯಾರನ್ನು ಉಪಯೋಗಿಸುತ್ತಾನೊ ಅವರನ್ನು ಗೌರವಿಸುವಂತೆ, ಈ ಉದಾಹರಣೆಗಳು ನಮಗೆ ಎಷ್ಟು ಸ್ಪಷ್ಟವಾಗಿ ಕಲಿಸುತ್ತವೆ! (ಇಬ್ರಿಯ 13:17) ನಾವೆಲ್ಲರೂ ಅಪರಿಪೂರ್ಣರಾಗಿರುವಂತೆಯೇ, ನೇಮಿತ ಹಿರಿಯರು ಅಪರಿಪೂರ್ಣರಾಗಿರುವ ಕಾರಣ, ಅವರಲ್ಲಿ ತಪ್ಪುಗಳನ್ನು ಕಂಡುಕೊಳ್ಳುವುದು ಬಹಳ ಸುಲಭ. ಆದರೆ ನಾವು ಅವರ ತಪ್ಪುಗಳ ಮೇಲೆ ಕೇಂದ್ರೀಕರಿಸಿ, ಅವರಿಗೆ ಸಲ್ಲಿಸುವ ಗೌರವವನ್ನು ಕಡಿಮೆಗೊಳಿಸುವುದಾದರೆ, ನಾವು “ಮಾಹಿಮಾನ್ವಿತರ ಕುರಿತು ದೂಷಣೀಯವಾಗಿ ಮಾತಾಡು”ತ್ತಿರುವೆವೊ? 10ನೆಯ ವಚನದಲ್ಲಿ, “ತಮಗೆ ಗೊತ್ತಿಲ್ಲದ ಎಲ್ಲವನ್ನೂ ದೂಷಿಸು”ವ ಜನರ ಕುರಿತು ಯೂದನು ಉಲ್ಲೇಖಿಸುತ್ತಾನೆ. ಕೆಲವೊಮ್ಮೆ, ಹಿರಿಯರ ಮಂಡಲಿಯಿಂದ ಅಥವಾ ಒಂದು ನ್ಯಾಯವಿಚಾರಣೆಯ ಕಮಿಟಿಯಿಂದ ಮಾಡಲ್ಪಟ್ಟ ಒಂದು ನಿರ್ಣಯವನ್ನು ಕೆಲವರು ಟೀಕಿಸುತ್ತಾರೆ. ಆದರೂ, ಆ ನಿರ್ಣಯಕ್ಕೆ ಬರಲು ಹಿರಿಯರು ಪರಿಗಣಿಸಬೇಕಾಗಿದ್ದ ಎಲ್ಲ ವಿವರಗಳಲ್ಲಿ ಅವರು ಪಾಲುದಾರರಾಗಿರುವುದಿಲ್ಲ. ಆದಕಾರಣ ಅವರಿಗೆ ನಿಜವಾಗಿಯೂ ಗೊತ್ತಿಲ್ಲದ ವಿಷಯಗಳ ಕುರಿತು ದೂಷಣೀಯವಾಗಿ ಏಕೆ ಮಾತಾಡಬೇಕು? (ಜ್ಞಾನೋಕ್ತಿ 18:13) ಇಂತಹ ನಕಾರಾತ್ಮಕ ಮಾತುಕತೆಯಲ್ಲಿ ಪಟ್ಟುಹಿಡಿದು ಮುಂದುವರಿಯುವವರು ಸಭೆಯಲ್ಲಿ ವಿಭಜನೆಗಳನ್ನು ಉಂಟುಮಾಡಸಾಧ್ಯ ಮತ್ತು ಬಹುಶಃ ಅವರನ್ನು, ಜೊತೆ ವಿಶ್ವಾಸಿಗಳ ಒಟ್ಟುಗೂಡುವಿಕೆಗಳಲ್ಲಿ “ಸಮುದ್ರದೊಳಗಿರುವ” ಅಪಾಯಕರವಾದ “ಗುಪ್ತವಾದ ಬಂಡೆ”ಗಳಿಗೂ ಹೋಲಿಸಸಾಧ್ಯವಿದೆ. (ಯೂದ 12, 16, 19) ನಾವೆಂದಿಗೂ ಇತರರಿಗೆ ಒಂದು ಆತ್ಮಿಕ ಅಪಾಯವನ್ನು ಒಡ್ಡಲು ಬಯಸಬಾರದು. ಬದಲಿಗೆ, ಅವರ ಪರಿಶ್ರಮಕ್ಕಾಗಿ ಮತ್ತು ದೇವರ ಮಂದೆಗೆ ತೋರಿಸುವ ಧರ್ಮನಿಷ್ಠೆಗಾಗಿ, ನಮ್ಮಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯುತ ಪುರುಷರನ್ನು ಗಣ್ಯಮಾಡಲು ದೃಢನಿರ್ಧಾರ ಮಾಡೋಣ.—1 ತಿಮೊಥೆಯ 5:17.
11. ಮೀಕಾಯೇಲನು ಸೈತಾನನ ವಿರುದ್ಧ ದೂಷಣೀಯವಾಗಿ ನ್ಯಾಯತೀರ್ಪನ್ನು ತರುವುದರಿಂದ ಏಕೆ ತಡೆದುಕೊಂಡನು?
11 ಉಚಿತ ರೀತಿಯಲ್ಲಿ ಸ್ಥಾಪಿಸಲ್ಪಟ್ಟ ಅಧಿಕಾರವನ್ನು ಗೌರವಿಸಿದ ಒಬ್ಬನ ಉದಾಹರಣೆಯನ್ನು ಯೂದನು ಉದ್ಧರಿಸುತ್ತಾನೆ. ಅವನು ಬರೆಯುವುದು: “ಆದರೆ ಪ್ರಧಾನ ದೇವದೂತನಾದ ಮೀಕಾಯೇಲನು ಮೋಶೆಯ ಶವದ ವಿಷಯದಲ್ಲಿ ಸೈತಾನನೊಂದಿಗೆ ವ್ಯಾಜ್ಯವಾಡಿ ವಾಗ್ವಾದಮಾಡಿದಾಗ ಅವನು ಸೈತಾನನ ಮೇಲೆ ದೂಷಣಾಭಿಪ್ರಾಯವನ್ನು ಹೇಳುವದಕ್ಕೆ ಧೈರ್ಯಗೊಳ್ಳದೆ—ಕರ್ತನು [“ಯೆಹೋವನು,” NW] ನಿನ್ನನ್ನು ಖಂಡಿಸಲಿ ಅಂದನು.” (ಯೂದ 9) ಪ್ರೇರಿತ ಶಾಸ್ತ್ರಗಳಲ್ಲಿ ಯೂದನಿಂದ ಮಾತ್ರ ದಾಖಲಿಸಲ್ಪಟ್ಟ ಈ ಆಕರ್ಷಕ ವೃತ್ತಾಂತವು, ನಮಗೆ ಎರಡು ಭಿನ್ನವಾದ ಪಾಠಗಳನ್ನು ಕಲಿಸುತ್ತದೆ. ಒಂದೆಡೆ, ಯೆಹೋವನಿಗೆ ನ್ಯಾಯತೀರ್ಪನ್ನು ಬಿಟ್ಟುಬಿಡುವಂತೆ ಅದು ಕಲಿಸುತ್ತದೆ. ಸುಳ್ಳು ಆರಾಧನೆಯನ್ನು ಪ್ರವರ್ಧಿಸಲು ಸೈತಾನನು ನಂಬಿಗಸ್ತ ಮನುಷ್ಯನಾದ ಮೋಶೆಯ ಶವವನ್ನು ದುರುಪಯೋಗಿಸಲು ಬಯಸಿದನೆಂಬುದು ಸ್ಪಷ್ಟ. ಎಂತಹ ನೀಚತನ! ಆದರೂ, ಮೀಕಾಯೇಲನು ಒಂದು ನ್ಯಾಯತೀರ್ಪನ್ನು ತರುವುದರಿಂದ ತನ್ನನ್ನು ದೈನ್ಯದಿಂದ ತಡೆದುಕೊಂಡನು, ಏಕೆಂದರೆ ಯೆಹೋವನಿಗೆ ಮಾತ್ರ ಆ ಅಧಿಕಾರವಿತ್ತು. ಹಾಗಾದರೆ, ಯೆಹೋವನಿಗೆ ಸೇವೆಸಲ್ಲಿಸಲು ಪ್ರಯತ್ನಿಸುತ್ತಿರುವ ನಂಬಿಗಸ್ತ ಪುರುಷರ ನ್ಯಾಯತೀರ್ಪು ಮಾಡುವುದರಿಂದ ನಾವು ಇನ್ನಷ್ಟು ಹೆಚ್ಚಾಗಿ ನಮ್ಮನ್ನು ತಡೆದುಕೊಳ್ಳಬೇಕಾಗಿದೆ.
12. ಕ್ರೈಸ್ತ ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು, ಮೀಕಾಯೇಲನ ಮಾದರಿಯಿಂದ ಏನನ್ನು ಕಲಿಯಬಲ್ಲರು?
12 ಮತ್ತೊಂದು ಕಡೆಯಲ್ಲಿ, ಸಭೆಯಲ್ಲಿ ಒಂದಿಷ್ಟು ಅಧಿಕಾರವುಳ್ಳವರು ಕೂಡ ಮೀಕಾಯೇಲನಿಂದ ಒಂದು ಪಾಠವನ್ನು ಕಲಿಯಬಹುದು. ಮೀಕಾಯೇಲನು “ಪ್ರಧಾನ ದೇವದೂತನು,” ಎಲ್ಲ ದೇವದೂತರ ಮುಖ್ಯಸ್ಥನಾಗಿದ್ದರೂ, ಪ್ರಚೋದನೆಯ ಕೆಳಗೂ ಅವನು ತನಗಿದ್ದ ಅಧಿಕಾರಸ್ಥಾನವನ್ನು ದುರುಪಯೋಗಿಸಲಿಲ್ಲ. ನಂಬಿಗಸ್ತ ಹಿರಿಯರು ಆ ಮಾದರಿಯನ್ನು ನಿಕಟವಾಗಿ ಅನುಕರಿಸುತ್ತಾ, ತಮ್ಮ ಅಧಿಕಾರದ ದುರುಪಯೋಗವು ಯೆಹೋವನ ಪರಮಾಧಿಕಾರಕ್ಕೆ ಅಗೌರವಯುತ ಆಗಿದೆಯೆಂದು ಗ್ರಹಿಸುತ್ತಾರೆ. ಸಭೆಗಳಲ್ಲಿ ಗೌರವಯುತ ಸ್ಥಾನಗಳನ್ನು ಪಡೆದಿದ್ದ, ಆದರೆ ತಮ್ಮ ಅಧಿಕಾರವನ್ನು ದುರುಪಯೋಗಿಸುತ್ತಿದ್ದ ಅನೇಕ ಪುರುಷರ ಕುರಿತು ಯೂದನ ಪತ್ರದಲ್ಲಿ ಹೇಳಲು ಬಹಳಷ್ಟಿತ್ತು. ದೃಷ್ಟಾಂತಕ್ಕೆ 12ರಿಂದ 14ನೆಯ ವಚನಗಳಲ್ಲಿ, ಯೂದನು “ನಿರ್ಭಯವಾಗಿ ಸ್ವಂತ ಹೊಟ್ಟೆಯನ್ನೇ ನೋಡಿಕೊಳ್ಳುವ ಕುರುಬರ” ವಿಷಯದಲ್ಲಿ ತೀಕ್ಷ್ಣವಾಗಿ ಖಂಡಿಸುತ್ತಾ ಬರೆಯುತ್ತಾನೆ. (ಹೋಲಿಸಿ ಯೆಹೆಜ್ಕೇಲ 34:7-10.) ಬೇರೆ ಮಾತುಗಳಲ್ಲಿ, ಅವರ ಪ್ರಥಮ ಆಸಕ್ತಿಯು ಯೆಹೋವನ ಮಂದೆಯನ್ನಲ್ಲ, ತಮ್ಮನ್ನು ಪ್ರಯೋಜನಪಡಿಸಿಕೊಳ್ಳುವುದಾಗಿತ್ತು. ಇಂದು ಹಿರಿಯರು ಇಂತಹ ನಕಾರಾತ್ಮಕ ಉದಾಹರಣೆಗಳಿಂದ ಹೆಚ್ಚಿನ ವಿಷಯವನ್ನು ಕಲಿತುಕೊಳ್ಳಬಲ್ಲರು. ನಾವು ಏನಾಗಿರಲು ಬಯಸುವುದಿಲ್ಲವೊ ಅದನ್ನು ಯೂದನ ಮಾತುಗಳು ಸ್ಪಷ್ಟವಾಗಿ ವರ್ಣಿಸುತ್ತವೆ. ನಾವು ಸ್ವಾರ್ಥಪರರಾಗುವಾಗ, ಕ್ರಿಸ್ತನ ಸೈನಿಕರಾಗಸಾಧ್ಯವಿಲ್ಲ, ಏಕೆಂದರೆ ಆಗ ನಾವು ವೈಯಕ್ತಿಕ ಅಭಿರುಚಿಗಳಿಗಾಗಿ ಹೋರಾಡುವುದರಲ್ಲಿ ಮಗ್ನರಾಗಿರುತ್ತೇವೆ. ಅದಕ್ಕೆ ಬದಲಾಗಿ ನಾವೆಲ್ಲರೂ ಯೇಸುವಿನ ಮಾತುಗಳಿಗನುಸಾರ ಜೀವಿಸೋಣ: “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ.”—ಅ. ಕೃತ್ಯಗಳು 20:35.
“ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”
13. ನಾವೆಲ್ಲರೂ ದೇವರ ಪ್ರೀತಿಯಲ್ಲಿ ಉಳಿಯಲು ಏಕೆ ಶ್ರದ್ಧಾಪೂರ್ವಕವಾಗಿ ಬಯಸಬೇಕು?
13 ತನ್ನ ಪತ್ರದ ಕೊನೆಯಲ್ಲಿ, ಯೂದನು ಈ ಹೃದಯೋಲ್ಲಾಸಕರ ಸಲಹೆಯನ್ನು ನೀಡುತ್ತಾನೆ: “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.” (ಯೂದ 21) ಯೆಹೋವ ದೇವರ ಪ್ರೀತಿಗೆ ಪಾತ್ರರಾಗಿ ಉಳಿಯುವುದು, ಕ್ರೈಸ್ತ ಯುದ್ಧಾಚರಣೆಯನ್ನು ನಡೆಸಲು ನಮಗೆ ಬಹಳವಾಗಿ ಸಹಾಯಮಾಡುವ ಒಂದು ವಿಷಯವಾಗಿದೆ. ಎಷ್ಟೆಂದರೂ, ಪ್ರೀತಿಯು ಯೆಹೋವನ ಪ್ರಧಾನ ಗುಣವಾಗಿದೆ. (1 ಯೋಹಾನ 4:8) ರೋಮ್ನಲ್ಲಿದ್ದ ಕ್ರೈಸ್ತರಿಗೆ ಪೌಲನು ಬರೆದುದು: “ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.” (ರೋಮಾಪುರ 8:38, 39) ನಾವು ಆ ಪ್ರೀತಿಯಲ್ಲಿ ಉಳಿಯುವುದಾದರೂ ಹೇಗೆ? ಯೂದನಿಗನುಸಾರ, ನಾವು ತೆಗೆದುಕೊಳ್ಳಸಾಧ್ಯವಿರುವ ಮೂರು ಹೆಜ್ಜೆಗಳನ್ನು ಪರಿಗಣಿಸಿರಿ.
14, 15. (ಎ) ನಮ್ಮ “ಅತಿಪರಿಶುದ್ಧವಾದ ನಂಬಿಕೆಯ” ಮೇಲೆ ಸ್ವತಃ ಕಟ್ಟಲ್ಪಡುವುದರ ಅರ್ಥವೇನು? (ಬಿ) ನಮ್ಮ ಆತ್ಮಿಕ ಸರ್ವಾಯುಧಗಳ ಸ್ಥಿತಿಯನ್ನು ನಾವು ಹೇಗೆ ಪರೀಕ್ಷಿಸಬಹುದು?
14 ಪ್ರಥಮವಾಗಿ, ನಮ್ಮ “ಅತಿಪರಿಶುದ್ಧವಾದ ಕ್ರಿಸ್ತನಂಬಿಕೆಯ”ಲ್ಲಿ ನಮ್ಮನ್ನು ಕಟ್ಟಿಕೊಳ್ಳುತ್ತಾ ಇರುವಂತೆ ಯೂದನು ನಮಗೆ ಹೇಳುತ್ತಾನೆ. (ಯೂದ 20) ನಾವು ಹಿಂದಿನ ಲೇಖನದಲ್ಲಿ ನೋಡಿದಂತೆ, ಇದೊಂದು ಮುಂದುವರಿಯುವ ಪ್ರಕ್ರಿಯೆಯಾಗಿದೆ. ನಾವು ತೀವ್ರವಾಗಿ ಕೆಡುತ್ತಿರುವ ಹವಾಮಾನದ ಆಕ್ರಮಣದ ಎದುರು ಹೆಚ್ಚೆಚ್ಚು ಭದ್ರತೆಯ ಅಗತ್ಯವಿರುವ ಕಟ್ಟಡಗಳಂತಿದ್ದೇವೆ. (ಹೋಲಿಸಿ ಮತ್ತಾಯ 7:24, 25.) ಆದುದರಿಂದ ನಾವೆಂದಿಗೂ ಅಧಿಕ ಆತ್ಮವಿಶ್ವಾಸವುಳ್ಳ ವ್ಯಕ್ತಿಗಳಾಗದಿರೋಣ. ಬದಲಿಗೆ, ಕ್ರಿಸ್ತನ ಹೆಚ್ಚು ಬಲಿಷ್ಠರೂ ನಂಬಿಗಸ್ತರೂ ಆದ ಸೈನಿಕರಾಗುತ್ತಾ, ನಮ್ಮ ನಂಬಿಕೆಯ ಅಸ್ತಿವಾರದ ಮೇಲೆ ನಾವೆಲ್ಲಿ ಸ್ವತಃ ಕಟ್ಟಿಕೊಳ್ಳಸಾಧ್ಯವಿದೆ ಎಂಬುದನ್ನು ನಾವು ಗಮನಿಸತಕ್ಕದ್ದು. ಉದಾಹರಣೆಗೆ, ಎಫೆಸ 6:11-18ರಲ್ಲಿ ವರ್ಣಿಸಲ್ಪಟ್ಟಿರುವ ಆತ್ಮಿಕ ಸರ್ವಾಯುಧಗಳಲ್ಲಿ ಒಂದೊಂದನ್ನು ನಾವು ಪರಿಗಣಿಸಬಹುದು.
15 ನಮ್ಮ ಸ್ವಂತ ಆತ್ಮಿಕ ಸರ್ವಾಯುಧಗಳ ಸ್ಥಿತಿ ಹೇಗಿದೆ? ನಮ್ಮ ‘ನಂಬಿಕೆಯ ಗುರಾಣಿಯು’ ಇರಬೇಕಾದಷ್ಟು ಬಲವಾಗಿದೆಯೊ? ಇತ್ತೀಚಿನ ವರ್ಷಗಳ ಕುರಿತು ಪರ್ಯಾಲೋಚಿಸುವಾಗ, ಕಡಮೆಯಾಗುತ್ತಿರುವ ಕೂಟದ ಹಾಜರಿ, ಶುಶ್ರೂಷೆಗಾಗಿ ಹುರುಪಿನ ಕೊರತೆ, ಇಲ್ಲವೆ ವೈಯಕ್ತಿಕ ಅಧ್ಯಯನಕ್ಕಾಗಿ ಮಾಯವಾಗುತ್ತಿರುವ ಉತ್ಸಾಹದಂತಹ, ಅಲಕ್ಷ್ಯದ ಕೆಲವು ಸೂಚನೆಗಳನ್ನು ನಾವು ನೋಡುತ್ತೇವೊ? ಅಂತಹ ಸೂಚನೆಗಳು ಗಂಭೀರವಾದವುಗಳಾಗಿವೆ! ಸತ್ಯದಲ್ಲಿ ಕಟ್ಟಲ್ಪಡಲು ಮತ್ತು ನಮ್ಮನ್ನು ಬಲಪಡಿಸಿಕೊಳ್ಳಲು ನಾವು ಈಗ ಕ್ರಿಯೆಗೈಯುವ ಅಗತ್ಯವಿದೆ.—1 ತಿಮೊಥೆಯ 4:15; 2 ತಿಮೊಥೆಯ 4:2; ಇಬ್ರಿಯ 10:24, 25.
16. ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥಿಸುವುದು ಏನನ್ನು ಅರ್ಥೈಸುತ್ತದೆ, ಮತ್ತು ಯಾವ ವಿಷಯವನ್ನು ನಾವು ಕ್ರಮವಾಗಿ ಯೆಹೋವನಲ್ಲಿ ಕೇಳಿಕೊಳ್ಳಬೇಕು?
16 ದೇವರ ಪ್ರೀತಿಯಲ್ಲಿ ಉಳಿಯುವ ಎರಡನೆಯ ವಿಧವು, “ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆ”ಮಾಡುವುದನ್ನು ಮುಂದುವರಿಸುವುದು ಆಗಿದೆ. (ಯೂದ 20) ಅದರ ಅರ್ಥ, ಯೆಹೋವನ ಆತ್ಮದ ಪ್ರಭಾವದಡಿಯಲ್ಲಿ ಮತ್ತು ಆತನ ಆತ್ಮಪ್ರೇರಿತ ವಾಕ್ಯಕ್ಕನುಗುಣವಾಗಿ ಪ್ರಾರ್ಥಿಸುವುದಾಗಿದೆ. ಪ್ರಾರ್ಥನೆ, ಯೆಹೋವನಿಗೆ ವೈಯಕ್ತಿಕವಾಗಿ ಆಪ್ತರಾಗುವ ಮತ್ತು ಆತನಿಗೆ ನಮ್ಮ ಭಕ್ತಿಯನ್ನು ವ್ಯಕ್ತಪಡಿಸುವುದರ ಒಂದು ಅತಿಪ್ರಾಮುಖ್ಯ ವಿಧಾನವಾಗಿದೆ. ಈ ಅದ್ಭುತಕರವಾದ ಸುಯೋಗವನ್ನು ನಾವೆಂದಿಗೂ ಕಡೆಗಣಿಸಬಾರದು! ಮತ್ತು ಪ್ರಾರ್ಥಿಸುವಾಗ, ನಾವು ಪವಿತ್ರಾತ್ಮಕ್ಕಾಗಿ ಕೇಳಬಹುದು—ವಾಸ್ತವವಾಗಿ ಕೇಳುತ್ತಾ ಇರಬಹುದು. (ಲೂಕ 11:13) ಅದು ನಮಗೆ ಲಭ್ಯವಿರುವ ಅತ್ಯಂತ ಬಲವಾದ ಶಕ್ತಿಯಾಗಿದೆ. ಅಂತಹ ಸಹಾಯದೊಂದಿಗೆ, ನಾವು ಯಾವಾಗಲೂ ದೇವರ ಪ್ರೀತಿಯಲ್ಲಿ ಉಳಿದು, ಕ್ರಿಸ್ತನ ಸೈನಿಕರಾಗಿ ತಾಳಿಕೊಳ್ಳಸಾಧ್ಯವಿದೆ.
17. (ಎ) ಕರುಣೆಯ ವಿಷಯದಲ್ಲಿ ಯೂದನ ಮಾದರಿಯು ಏಕೆ ಅಷ್ಟು ಎದ್ದುಕಾಣುವಂತಹದ್ದಾಗಿದೆ? (ಬಿ) ನಮ್ಮಲ್ಲಿ ಪ್ರತಿಯೊಬ್ಬರೂ ಹೇಗೆ ಕರುಣೆಯನ್ನು ತೋರಿಸುತ್ತಾ ಇರಬಹುದು?
17 ಮೂರನೆಯದಾಗಿ, ಕರುಣೆಯನ್ನು ತೋರಿಸುತ್ತಾ ಇರುವಂತೆ ಯೂದನು ನಮ್ಮನ್ನು ಪ್ರೇರಿಸುತ್ತಾನೆ. (ಯೂದ 22) ಈ ಸಂಬಂಧದಲ್ಲಿ ಅವನ ಸ್ವಂತ ಮಾದರಿಯು ಎದ್ದುಕಾಣುವಂತಹದ್ದಾಗಿದೆ. ಅವನು ಕ್ರೈಸ್ತ ಸಭೆಯೊಳಗೆ ನುಸುಳುತ್ತಿದ್ದ ಭ್ರಷ್ಟತೆ, ಅನೈತಿಕತೆ, ಮತ್ತು ಧರ್ಮಭ್ರಷ್ಟತೆಯ ವಿಷಯವಾಗಿ ಕ್ಷೋಭೆಗೊಂಡಿದ್ದು ನ್ಯಾಯವೇ. ಆದರೂ, ಅವನು ಹೆದರಿಕೊಳ್ಳುತ್ತಾ, ಕರುಣೆಯಂತಹ “ಮೃದುವಾದ” ಗುಣವನ್ನು ತೋರಿಸಲು, ಸಮಯವು ತೀರ ಅಪಾಯಕರವಾಗಿತ್ತೊ ಏನೋ ಎಂದು ಯೋಚಿಸಲಿಲ್ಲ. ಬದಲಿಗೆ, ಸಾಧ್ಯವಿರುವಾಗಲೆಲ್ಲಾ ಕರುಣೆಯನ್ನು ತೋರಿಸುತ್ತಾ ಇರುವಂತೆ, ಸಂದೇಹಗಳಿರುವವರೊಂದಿಗೆ ದಯಾಪರವಾಗಿ ತರ್ಕಿಸುವಂತೆ, ಮತ್ತು ಗಂಭೀರ ಪಾಪದ ಕಡೆಗೆ ದಾರಿತಪ್ಪಿ ಹೋಗುತ್ತಿರುವವರನ್ನು ‘ಬೆಂಕಿಯ ಬಾಯೊಳಗಿಂದ ಎಳೆದುಕೊಳ್ಳುವಂತೆ’ಯೂ ತನ್ನ ಸಹೋದರರಿಗೆ ಪ್ರೇರಣೆ ನೀಡಿದನು. (ಯೂದ 23; ಗಲಾತ್ಯ 6:1) ಈ ತೊಂದರೆಯುಕ್ತ ಸಮಯಗಳಲ್ಲಿನ ಹಿರಿಯರಿಗೆ ಎಂತಹ ಉತ್ತಮ ಉತ್ತೇಜನ! ಅಗತ್ಯವಿರುವಾಗ ದೃಢರಾಗಿರುತ್ತಾ, ಕರುಣೆಗೆ ಆಧಾರವಿರುವಾಗಲೆಲ್ಲ ಕರುಣೆಯನ್ನು ತೋರಿಸಲು ಅವರೂ ಪ್ರಯತ್ನಿಸುತ್ತಾರೆ. ತದ್ರೀತಿಯಲ್ಲಿ ನಾವೆಲ್ಲರೂ ಒಬ್ಬರು ಇನ್ನೊಬ್ಬರಿಗೆ ಕರುಣೆಯನ್ನು ತೋರಿಸಲು ಬಯಸುತ್ತೇವೆ. ಉದಾಹರಣೆಗೆ, ಚಿಕ್ಕಪುಟ್ಟ ವಿಷಯಗಳ ಕುರಿತ ಅಸಮಾಧಾನಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಬದಲು, ನಾವು ನಮ್ಮ ಕ್ಷಮಾಪಣೆಯಲ್ಲಿ ಉದಾರಿಗಳಾಗಿರಸಾಧ್ಯವಿದೆ.—ಕೊಲೊಸ್ಸೆ 3:13.
18. ನಮ್ಮ ಆತ್ಮಿಕ ಯುದ್ಧಾಚರಣೆಯಲ್ಲಿ ವಿಜಯದ ಕುರಿತು ನಾವು ಹೇಗೆ ನಿಶ್ಚಿತರಾಗಿರಬಲ್ಲೆವು?
18 ನಾವು ಹೋರಾಡುವ ಯುದ್ಧವು ಸುಲಭವಾದದ್ದಲ್ಲ. ಯೂದನು ಹೇಳುವಂತೆ ಅದೊಂದು “ತೀವ್ರವಾದ ಹೋರಾಟ”ವಾಗಿದೆ. (ಯೂದ 3) ನಮ್ಮ ವೈರಿಗಳು ಶಕ್ತಿಶಾಲಿಗಳಾಗಿದ್ದಾರೆ. ಸೈತಾನನು ಮಾತ್ರವಲ್ಲ, ಅವನ ದುಷ್ಟ ಲೋಕ ಹಾಗೂ ನಮ್ಮ ಸ್ವಂತ ಅಪರಿಪೂರ್ಣತೆಗಳೂ ನಮ್ಮ ವಿರುದ್ಧ ನಿಂತಿವೆ. ಆದರೂ, ವಿಜಯದ ವಿಷಯದಲ್ಲಿ ನಾವು ಅತ್ಯಂತ ಭರವಸೆಯಿಂದಿರಸಾಧ್ಯವಿದೆ! ಏಕೆ? ಏಕೆಂದರೆ ನಾವು ಯೆಹೋವನ ಪಕ್ಷದಲ್ಲಿದ್ದೇವೆ. ಯೆಹೋವನಿಗೆ ಸೂಕ್ತವಾಗಿಯೇ, “ಪ್ರಭಾವ ಮಹತ್ವ ಆಧಿಪತ್ಯ ಅಧಿಕಾರಗಳು ಎಲ್ಲಾ ಕಾಲಕ್ಕಿಂತ ಮೊದಲೂ [ಇದ್ದ ಹಾಗೆ] ಈಗಲೂ ಯಾವಾಗಲೂ” ಸೇರಿದೆ ಎಂಬ ಮರುಜ್ಞಾಪನದೊಂದಿಗೆ ಯೂದನು ತನ್ನ ಪತ್ರವನ್ನು ಮುಗಿಸುತ್ತಾನೆ. (ಯೂದ 25) ಅದೊಂದು ಭಯಪ್ರೇರಕ ವಿಚಾರವಾಗಿದೆಯಲ್ಲವೊ? ಹಾಗಾದರೆ ಇದೇ ದೇವರು “ಎಡವಿಬೀಳದಂತೆ ನಿಮ್ಮನ್ನು ಕಾಪಾಡುವದಕ್ಕೂ . . . ಶಕ್ತನಾಗಿರುವ”ನೆಂಬ ವಿಷಯದಲ್ಲಿ ಯಾವ ಸಂದೇಹವಾದರೂ ಇರಸಾಧ್ಯವಿದೆಯೊ? (ಯೂದ 24) ಖಂಡಿತವಾಗಿಯೂ ಇಲ್ಲ! ನಮ್ಮಲ್ಲಿ ಪ್ರತಿಯೊಬ್ಬರೂ, ಅನೈತಿಕತೆಯನ್ನು ಪ್ರತಿರೋಧಿಸುತ್ತಾ ಇರಲು, ದೈವಿಕವಾಗಿ ಸ್ಥಾಪಿಸಲ್ಪಟ್ಟ ಅಧಿಕಾರವನ್ನು ಗೌರವಿಸಲು, ಮತ್ತು ನಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಲು ನಿಶ್ಚಯಿಸಿಕೊಳ್ಳೋಣ. ಆ ರೀತಿಯಲ್ಲಿ, ನಾವು ಒಟ್ಟಿಗೆ ಒಂದು ಮಹಿಮಾಭರಿತ ವಿಜಯವನ್ನು ಅನುಭವಿಸುವೆವು.
[ಪಾದಟಿಪ್ಪಣಿ]
a ಯೂದನು ಹಳೆಯ ಒಡಂಬಡಿಕೆಯ ಅವಿಶ್ವಸನೀಯ ಭಾಗವಾದ ಹನೋಕನ ಪುಸ್ತಕದಿಂದ ಉದ್ಧರಿಸುತ್ತಿದ್ದಾನೆಂದು ಕೆಲವು ಸಂಶೋಧಕರು ಪ್ರತಿಪಾದಿಸುತ್ತಾರೆ. ಹಾಗಿದ್ದರೂ, ಆರ್. ಸಿ. ಏಚ್. ಲೆನ್ಸ್ಕೀ ಗಮನಿಸುವುದು: “ನಾವು ಕೇಳುವುದು: ‘ಹನೋಕನ ಪುಸ್ತಕ ಎಂಬ ಈ ತೇಪೆಕೃತಿಯ ಮೂಲವು ಏನಾಗಿದೆ?’ ಈ ಪುಸ್ತಕವು ಒಂದು ಸೇರಿಕೆಯಾಗಿದ್ದು, ಅದರ ಹಲವಾರು ಭಾಗಗಳ ತಾರೀಖುಗಳ ಕುರಿತು ಯಾರಿಗೂ ಖಾತ್ರಿಯಿಲ್ಲ . . . , ಅದರ ಅಭಿವ್ಯಕ್ತಿಗಳಲ್ಲಿ ಕೆಲವು ಯೂದನ ಪುಸ್ತಕದಿಂದ ತಾನೇ ತೆಗೆಯಲ್ಪಟ್ಟಿರಬಹುದೊ ಎಂಬ ವಿಷಯದಲ್ಲಿ ಯಾರೂ ಖಚಿತರಾಗಿರಸಾಧ್ಯವಿಲ್ಲ.”
ಪುನರ್ವಿಮರ್ಶೆಗಾಗಿ ಪ್ರಶ್ನೆಗಳು
◻ ಅನೈತಿಕತೆಯನ್ನು ಪ್ರತಿರೋಧಿಸಲು ಯೂದನ ಪತ್ರವು ನಮಗೆ ಹೇಗೆ ಕಲಿಸುತ್ತದೆ?
◻ ದೈವಿಕವಾಗಿ ಸ್ಥಾಪಿಸಲ್ಪಟ್ಟ ಅಧಿಕಾರಕ್ಕೆ ಗೌರವ ತೋರಿಸುವುದು ಏಕೆ ಅಷ್ಟು ಪ್ರಾಮುಖ್ಯವಾಗಿದೆ?
◻ ಸಭಾ ಅಧಿಕಾರವನ್ನು ದುರುಪಯೋಗಿಸುವ ವಿಷಯದಲ್ಲಿ, ತುಂಬ ಗಂಭೀರವಾದ ಸಂಗತಿ ಯಾವುದು?
◻ ದೇವರ ಪ್ರೀತಿಯಲ್ಲಿ ಉಳಿಯಲು ನಾವು ಹೇಗೆ ಶ್ರಮಿಸಬಹುದು?
[ಪುಟ 15 ರಲ್ಲಿರುವ ಚಿತ್ರ]
ರೋಮನ್ ಸೈನಿಕರಿಗೆ ಅಸದೃಶವಾಗಿ, ಕ್ರೈಸ್ತರು ಆತ್ಮಿಕ ಯುದ್ಧಾಚರಣೆಯನ್ನು ನಡೆಸುತ್ತಾರೆ
[ಪುಟ 18 ರಲ್ಲಿರುವ ಚಿತ್ರ]
ಕ್ರೈಸ್ತ ಕುರುಬರು ಸ್ವಾರ್ಥದಿಂದಲ್ಲ, ಪ್ರೀತಿಯಿಂದ ಸೇವೆಸಲ್ಲಿಸುತ್ತಾರೆ