“ನಮ್ರಭಾವವೆಂಬ ಸೊಂಟಾಪಟ್ಟಿಯನ್ನು ಕಟ್ಟಿಕೊಳ್ಳಿರಿ”
“ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.”—1 ಪೇತ್ರ 5:5.
1, 2. ಮಾನವ ವರ್ತನೆಯನ್ನು ಬಹಳವಾಗಿ ಪ್ರಭಾವಿಸುವ, ಪರಸ್ಪರ ವಿರುದ್ಧವಾದ ಎರಡು ಮನೋಭಾವಗಳು ಯಾವುವು?
ಪರಸ್ಪರ ವಿರುದ್ಧವಾಗಿರುವ ಎರಡು ಮನೋಭಾವಗಳನ್ನು ದೇವರ ವಾಕ್ಯವು ನಮ್ಮ ಗಮನಕ್ಕೆ ತರುತ್ತದೆ. ಇವೆರಡೂ ಮನೋಭಾವಗಳು ಮಾನವ ವರ್ತನೆಯನ್ನು ಬಹಳವಾಗಿ ಪ್ರಭಾವಿಸುತ್ತವೆ. ಒಂದನ್ನು “ನಮ್ರಭಾವ” (NW) ಎಂಬುದಾಗಿ ವರ್ಣಿಸಲಾಗಿದೆ. (1 ಪೇತ್ರ 5:5) “ನಮ್ರತೆ”ಯನ್ನು ಒಂದು ಶಬ್ದಕೋಶವು, “ವಿನಯಶೀಲತೆ,” “ಹೆಮ್ಮೆ ಇಲ್ಲದಿರುವಿಕೆ” ಎಂಬುದಾಗಿ ಅರ್ಥನಿರೂಪಿಸುತ್ತದೆ. ನಮ್ರಭಾವದ ಸಮನಾರ್ಥಕ ಪದವು ದೀನತೆಯಾಗಿದ್ದು, ಇದು ದೇವರ ದೃಷ್ಟಿಯಲ್ಲಿ ಬಹು ಅಪೇಕ್ಷಣೀಯ ಗುಣವಾಗಿದೆ.
2 ಇದಕ್ಕೆ ತದ್ವಿರುದ್ಧವಾಗಿರುವ ಗುಣವು ಅಹಂಕಾರವಾಗಿದೆ. ಇದನ್ನು, “ಅತಿಯಾದ ಆತ್ಮಾಭಿಮಾನ,” ಮತ್ತು “ಉಪೇಕ್ಷಿಸುವುದು” ಎಂಬುದಾಗಿ ಅರ್ಥನಿರೂಪಿಸಲಾಗಿದೆ. ಇದು ಸ್ವಹಿತಾಸಕ್ತಿಯುಳ್ಳದ್ದಾಗಿದ್ದು, ಇತರರನ್ನು ಬಾಧಿಸುವ ಪ್ರತಿಕೂಲ ಪ್ರಭಾವಗಳನ್ನೂ ಲೆಕ್ಕಿಸದೆ, ಪ್ರಾಪಂಚಿಕ, ಸ್ವಾರ್ಥಪರ, ಹಾಗೂ ಇತರೇ ಪ್ರಯೋಜನಗಳಿಗಾಗಿ ಹಾತೊರೆಯುತ್ತದೆ. ಇದರ ಒಂದು ಪರಿಣಾಮವನ್ನು ಬೈಬಲು ತಿಳಿಸುತ್ತದೆ: “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡು”ತ್ತಾನೆ. ಬೈಬಲು “ಪರಸ್ಪರ ಮತ್ಸರ”ದ ಕುರಿತು ತಿಳಿಸುತ್ತ, ಅದನ್ನು “ಗಾಳಿಯನ್ನು ಹಿಂದ”ಟ್ಟುವ ವಿಷಯಕ್ಕೆ ಹೋಲಿಸುತ್ತದೆ, ಏಕೆಂದರೆ ನಾವು ಮರಣದಲ್ಲಿ ‘ಏನೂ ಇಲ್ಲದವರಾಗಿ ಗತಿಸಿಹೋಗು’ತ್ತೇವೆ. ಇಂತಹ ಅಹಂಕಾರವು ದೇವರ ದೃಷ್ಟಿಯಲ್ಲಿ ಬಹಳ ಅನಪೇಕ್ಷಣೀಯವಾಗಿದೆ.—ಪ್ರಸಂಗಿ 4:4; 5:15; 8:9.
ಲೋಕದಲ್ಲಿ ಪ್ರಚಲಿತವಾಗಿರುವ ಮನೋಭಾವ
3. ಲೋಕದಲ್ಲಿ ಪ್ರಚಲಿತವಾಗಿರುವ ಮನೋಭಾವವು ಯಾವುದು?
3 ಈ ಎರಡು ಮನೋಭಾವಗಳಲ್ಲಿ, ಇಂದು ಯಾವುದು ಲೋಕದ ಮುಖ್ಯ ಲಕ್ಷಣವಾಗಿದೆ? ಈ ಲೋಕದಲ್ಲಿ ಪ್ರಚಲಿತವಾಗಿರುವ ಮನೋಭಾವವು ಯಾವುದಾಗಿದೆ? ಲೋಕದ ಮಿಲಿಟರಿ ಹಾಗೂ ಸಾಮಾಜಿಕ ವೆಚ್ಚಗಳು 1996 (ಇಂಗ್ಲಿಷ್) ಪುಸ್ತಕವು ಗಮನಿಸುವುದು: “ದೌರ್ಜನ್ಯದಿಂದ ಕೂಡಿದ . . . ಹಿಂಸಾಚಾರದ ವಿಷಯದಲ್ಲಿ, ಬೇರೆ ಯಾವುದೇ ಶತಮಾನವು 20ನೆಯ ಶತಮಾನಕ್ಕೆ ಸರಿಸಾಟಿಯಾಗಿಲ್ಲ.” ರಾಜಕೀಯ ಹಾಗೂ ಆರ್ಥಿಕ ಬಲಕ್ಕಾಗಿ ನಡೆಸಲ್ಪಡುವ ಸ್ಪರ್ಧೆಯ ಜೊತೆಗೆ, ರಾಷ್ಟ್ರೀಯ, ಧಾರ್ಮಿಕ, ಜಾತೀಯ, ಮತ್ತು ಕುಲಸಂಬಂಧಿತ ಪ್ರತಿಸ್ಪರ್ಧೆಗಳು, ಈ ಶತಮಾನದಲ್ಲೇ ಹತ್ತು ಕೋಟಿಗಿಂತಲೂ ಹೆಚ್ಚಿನ ಜನರನ್ನು ಕೊಂದುಹಾಕಿವೆ. ವ್ಯಕ್ತಿಗತ ಮಟ್ಟದಲ್ಲೂ ಜನರ ಸ್ವಹಿತಾಸಕ್ತಿಯ ವರ್ತನೆಯು ಹೆಚ್ಚಾಗಿದೆ. ಶಿಕಾಗೊ ಟ್ರಿಬ್ಯೂನ್ ಹೇಳಿದ್ದು: “ಸಾಮಾಜಿಕ ಅನಿಷ್ಟಗಳಲ್ಲಿ, ಬುದ್ಧಿಹೀನ ಹಿಂಸಾಚಾರ, ಮಕ್ಕಳ ದುರುಪಯೋಗ, ವಿವಾಹ ವಿಚ್ಛೇದ, ಕುಡಿಕತನ, ಏಡ್ಸ್, ಹದಿವಯಸ್ಕ ಆತ್ಮಹತ್ಯೆ, ಅಮಲೌಷಧ ಸೇವನೆ, ಬೀದಿ ಗ್ಯಾಂಗ್ಗಳು, ಬಲಾತ್ಕಾರ ಸಂಭೋಗ, ವಿವಾಹಬಾಹಿರ ಸಂಬಂಧಗಳು, ಗರ್ಭಪಾತ, ಲಂಪಟ ಸಾಹಿತ್ಯ, . . . ಸುಳ್ಳಾಡುವಿಕೆ, ವಂಚನೆ, ರಾಜಕೀಯ ಭ್ರಷ್ಟಾಚಾರವು ಸೇರಿದ್ದು, . . . ಸರಿತಪ್ಪುಗಳೆಂಬ ನೈತಿಕ ಪರಿಕಲ್ಪನೆಗಳು ಸಂಪೂರ್ಣವಾಗಿ ನಶಿಸಿಹೋಗಿವೆ.” ಈ ಕಾರಣ, ಯುಎನ್ ಕ್ರಾನಿಕಲ್ ಎಚ್ಚರಿಸಿದ್ದು: “ಇಂದಿನ ಸಮಾಜಗಳು ಛಿನ್ನಭಿನ್ನವಾಗುತ್ತಿವೆ.”
4, 5. ನಮ್ಮ ದಿನಕ್ಕಾಗಿರುವ ಬೈಬಲ್ ಪ್ರವಾದನೆಯಲ್ಲಿ, ಈ ಲೋಕದ ಮನೋಭಾವವು ಹೇಗೆ ನಿಷ್ಕೃಷ್ಟವಾಗಿ ವರ್ಣಿಸಲ್ಪಟ್ಟಿದೆ?
4 ಈ ಪರಿಸ್ಥಿತಿಗಳು ಎಲ್ಲೆಡೆಯೂ ವ್ಯಾಪಿಸಿವೆ. ಇದು ನಮ್ಮ ಕಾಲದ ಕುರಿತು ಬೈಬಲ್ ಪ್ರವಾದನೆಯು ಮುಂತಿಳಿಸಿದಂತೆಯೇ ಇದೆ: “ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ” ಆಗಿರುವರು.—2 ತಿಮೊಥೆಯ 3:1-4.
5 ಇದು ಈ ಲೋಕದಲ್ಲಿ ಪ್ರಚಲಿತವಾಗಿರುವ ಮನೋಭಾವದ ತಕ್ಕ ವರ್ಣನೆಯಾಗಿದೆ. ಅದೊಂದು ಸ್ವಾರ್ಥಪರವಾದ, ನಾ-ಮೊದಲು ಎಂಬ ಮನೋಭಾವವಾಗಿದೆ. ರಾಷ್ಟ್ರಗಳ ಮಧ್ಯೆಯಿರುವ ಪ್ರತಿಸ್ಪರ್ಧೆಯು, ವ್ಯಕ್ತಿಗಳ ನಡುವೆ ಇರುವ ಪ್ರತಿಸ್ಪರ್ಧೆಯನ್ನು ಪ್ರತಿಬಿಂಬಿಸುತ್ತದೆ. ಉದಾಹರಣೆಗೆ, ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ, ಪ್ರಥಮ ಸ್ಥಾನವನ್ನು ಗಳಿಸಲು ಬಯಸುವ ಅನೇಕ ಕ್ರೀಡಾಪಟುಗಳು, ಇತರರಿಗಾಗುವ ಭಾವನಾತ್ಮಕ, ಇಲ್ಲವೆ ಶಾರೀರಿಕ ನಷ್ಟದ ಕುರಿತು ಕಿಂಚಿತ್ತೂ ಕಾಳಜಿವಹಿಸುವುದಿಲ್ಲ. ಮಕ್ಕಳಾಗಿರುವಾಗ ಪ್ರವರ್ಧಿಸಲ್ಪಡುವ ಈ ಸ್ವಹಿತಾಸಕ್ತ ಮನೋಭಾವವು, ಅವರು ದೊಡ್ಡವರಾದಾಗಲೂ ಅನೇಕ ಕ್ಷೇತ್ರಗಳಲ್ಲಿ ಮುಂದುವರಿಯುತ್ತದೆ. ಅದು “ಜಗಳ ಹೊಟ್ಟೆಕಿಚ್ಚು ಸಿಟ್ಟು ಕಕ್ಷಭೇದ ಭಿನ್ನಮತ”ಗಳಲ್ಲಿ ಪರಿಣಮಿಸುತ್ತದೆ.—ಗಲಾತ್ಯ 5:19-21.
6. ಸ್ವಾರ್ಥಪರತೆಯನ್ನು ಯಾರು ಪ್ರವರ್ಧಿಸುತ್ತಾರೆ, ಮತ್ತು ಇಂತಹ ಮನೋಭಾವದ ಕುರಿತು ಯೆಹೋವನಿಗೆ ಹೇಗನಿಸುತ್ತದೆ?
6 ಈ ಲೋಕದ ಸ್ವಹಿತಾಸಕ್ತ ಮನೋಭಾವವು “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ ಆ ಮಹಾ ಘಟಸರ್ಪನು ಅಂದರೆ ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ”ವನ ಮನೋಭಾವವನ್ನು ಪ್ರತಿಬಿಂಬಿಸುತ್ತದೆಂದು ಬೈಬಲು ತೋರಿಸುತ್ತದೆ. ಈ ಕಠಿನವಾದ ಕಡೇ ದಿವಸಗಳಲ್ಲಿ ಜೀವಿಸುತ್ತಿರುವ ಜನರ ಮೇಲೆ ಸೈತಾನನ ಪ್ರಭಾವದ ಕುರಿತು, ಬೈಬಲು ಮುಂತಿಳಿಸುವುದು: “ಭೂಮಿಯೇ, . . . ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” (ಪ್ರಕಟನೆ 12:9-12) ಆದುದರಿಂದ, ಅವನೂ ಅವನ ದೆವ್ವಗಳೂ ಮಾನವ ಕುಟುಂಬದಲ್ಲಿ ಸ್ವಾರ್ಥಪರ ಮನೋಭಾವವನ್ನು ಪ್ರವರ್ಧಿಸಲು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿವೆ. ಮತ್ತು ಇಂತಹ ಒಂದು ಮನೋಭಾವದ ಕುರಿತು ಯೆಹೋವನಿಗೆ ಹೇಗನಿಸುತ್ತದೆ? ಆತನ ವಾಕ್ಯವು ಹೇಳುವುದು: “ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ.”—ಜ್ಞಾನೋಕ್ತಿ 16:5.
ಯೆಹೋವನು ನಮ್ರಭಾವದರೊಂದಿಗಿದ್ದಾನೆ
7. ಯೆಹೋವನು ನಮ್ರಭಾವದವರನ್ನು ಹೇಗೆ ಪರಿಗಣಿಸುತ್ತಾನೆ, ಮತ್ತು ಅವರಿಗೆ ಏನನ್ನು ಕಲಿಸುತ್ತಾನೆ?
7 ಆದರೆ, ಮತ್ತೊಂದು ಕಡೆಯಲ್ಲಿ, ಯೆಹೋವನು ನಮ್ರಭಾವದವರನ್ನು ಆಶೀರ್ವದಿಸುತ್ತಾನೆ. ಯೆಹೋವನಿಗೆ ಕೀರ್ತನೆ ಹಾಡುತ್ತಾ, ರಾಜ ದಾವೀದನು ಹೇಳಿದ್ದು: “ದೀನರನ್ನು ಉದ್ಧರಿಸುತ್ತೀ; ಹಮ್ಮಿನವರನ್ನು ಕಂಡುಹಿಡಿದು ತಗ್ಗಿಸಿಬಿಡುತ್ತೀ.” (2 ಸಮುವೇಲ 22:1, 28) ಆದಕಾರಣ, ದೇವರ ವಾಕ್ಯವು ಸಲಹೆ ನೀಡುವುದು: “ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ, ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.” (ಚೆಫನ್ಯ 2:3) ದೀನಭಾವದಿಂದ ಯೆಹೋವನನ್ನು ಹುಡುಕುವವರು, ಈ ಲೋಕದ ಮನೋಭಾವದಿಂದ ತೀರ ಭಿನ್ನವಾಗಿರುವ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಕಲಿಸಲ್ಪಡುತ್ತಿದ್ದಾರೆ. ‘ಆತನು ದೀನರಿಗೆ . . . ತನ್ನ ಮಾರ್ಗವನ್ನು ತೋರಿಸುವನು.’ (ಕೀರ್ತನೆ 25:9; ಯೆಶಾಯ 54:13) ಆ ಮಾರ್ಗವು ಪ್ರೀತಿಯ ಮಾರ್ಗವಾಗಿದೆ. ಅದು ದೇವರ ಮಟ್ಟಗಳಿಗನುಸಾರ, ಸರಿಯಾಗಿರುವುದನ್ನು ಮಾಡುವುದರ ಮೇಲೆ ಅವಲಂಬಿಸಿದೆ. ಬೈಬಲಿಗನುಸಾರ, ಈ ತತ್ವಾಧಾರಿತ ಪ್ರೀತಿಯು, “ಹೊಗಳಿಕೊಳ್ಳುವದಿಲ್ಲ; ಉಬ್ಬಿಕೊಳ್ಳುವದಿಲ್ಲ; . . . ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ.” (1 ಕೊರಿಂಥ 13:1-8) ಪ್ರೀತಿಯು ನಮ್ರತೆಯಲ್ಲೂ ವ್ಯಕ್ತವಾಗುತ್ತದೆ.
8, 9. (ಎ) ತತ್ವಾಧಾರಿತ ಪ್ರೀತಿಯು ಎಲ್ಲಿಂದ ಹುಟ್ಟಿಬರುತ್ತದೆ? (ಬಿ) ಯೇಸು ಪ್ರದರ್ಶಿಸಿದ ಪ್ರೀತಿ ಮತ್ತು ದೀನತೆಯನ್ನು ಅನುಕರಿಸುವುದು ಎಷ್ಟು ಪ್ರಾಮುಖ್ಯವಾಗಿದೆ?
8 ಪೌಲನು ಮತ್ತು ಪ್ರಥಮ ಶತಮಾನದ ಇತರ ಕ್ರೈಸ್ತರು, ಈ ರೀತಿಯ ಪ್ರೀತಿಯನ್ನು ಯೇಸುವಿನ ಬೋಧನೆಗಳಿಂದ ಕಲಿತುಕೊಂಡರು. ಮತ್ತು ಯೇಸು ಇದನ್ನು, ಯಾರ ಬಗ್ಗೆ ಬೈಬಲು “ದೇವರು ಪ್ರೀತಿಸ್ವರೂಪಿಯು” ಎಂದು ಹೇಳುತ್ತದೊ, ಆ ತಂದೆಯಾದ ಯೆಹೋವನಿಂದ ಕಲಿತುಕೊಂಡನು. (1 ಯೋಹಾನ 4:8) ತಾನು ಪ್ರೀತಿಯ ನಿಯಮಕ್ಕನುಸಾರ ಜೀವಿಸಬೇಕೆಂಬುದು ದೇವರ ಚಿತ್ತವಾಗಿದೆಯೆಂದು ಯೇಸುವಿಗೆ ಗೊತ್ತಿತ್ತು. (ಯೋಹಾನ 6:38) ಆದಕಾರಣ, ಅವನು ದೀನದಲಿತರು, ಬಡವರು, ಮತ್ತು ಪಾಪಿಗಳಿಗಾಗಿ ಕನಿಕರಪಟ್ಟನು. (ಮತ್ತಾಯ 9:36) ಅವನು ಅವರಿಗೆ ಹೇಳಿದ್ದು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು. ನಾನು ಸಾತ್ವಿಕನೂ ದೀನಮನಸ್ಸುಳ್ಳವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ.” (ಓರೆಅಕ್ಷರಗಳು ನಮ್ಮವು.)—ಮತ್ತಾಯ 11:28, 29.
9 “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು” ಎಂಬುದಾಗಿ ಯೇಸು ತನ್ನ ಶಿಷ್ಯರಿಗೆ ಹೇಳಿದಾಗ, ತನ್ನ ಪ್ರೀತಿ ಹಾಗೂ ದೀನತೆಯನ್ನು ಅನುಕರಿಸುವುದರ ಮಹತ್ವವನ್ನು ಅವರಿಗೆ ತೋರಿಸಿಕೊಟ್ಟನು. (ಯೋಹಾನ 13:35) ಈ ರೀತಿಯಲ್ಲಿ ಅವರು ಸ್ವಹಿತಾಸಕ್ತಿಯುಳ್ಳ ಲೋಕದಿಂದ ಪ್ರತ್ಯೇಕರಾಗಿ ಕಾಣಿಸಿಕೊಳ್ಳಲಿದ್ದರು. ಆದುದರಿಂದಲೇ, ಯೇಸು ತನ್ನ ಹಿಂಬಾಲಕರ ಕುರಿತು, “ಇವರೂ ಲೋಕದವರಲ್ಲ,” ಎಂದು ಹೇಳಸಾಧ್ಯವಿತ್ತು. (ಯೋಹಾನ 17:14) ಹೌದು, ಅವರು ಈ ಸೈತಾನನ ಲೋಕದ ಅಹಂಕಾರಿ, ಸ್ವಾರ್ಥಪರ ಮನೋಭಾವವನ್ನು ಅನುಕರಿಸುವುದಿಲ್ಲ. ಬದಲಿಗೆ, ಯೇಸು ಪ್ರದರ್ಶಿಸಿದ ಪ್ರೀತಿ ಹಾಗೂ ದೀನತೆಯ ಮನೋಭಾವವನ್ನು ಅನುಕರಿಸುತ್ತಾರೆ.
10. ಯೆಹೋವನು ನಮ್ಮ ದಿನದಲ್ಲಿ ನಮ್ರಭಾವದವರೊಂದಿಗೆ ಹೇಗೆ ವ್ಯವಹರಿಸುತ್ತಿದ್ದಾನೆ?
10 ಈ ಕಡೇ ದಿವಸಗಳಲ್ಲಿ, ಪ್ರೀತಿ ಹಾಗೂ ದೀನತೆಯ ಮೇಲಾಧಾರಿತವಾದ ಒಂದು ಭೌಗೋಲಿಕ ಸಮಾಜದೊಳಗೆ ದೀನರು ಒಂದಾಗಿ ಸೇರಿಸಲ್ಪಡುವರು ಎಂಬುದಾಗಿ ದೇವರ ವಾಕ್ಯವು ಮುಂತಿಳಿಸಿತು. ಹೀಗೆ, ಅಹಂಕಾರವನ್ನು ಹೆಚ್ಚೆಚ್ಚಾಗಿ ಪ್ರದರ್ಶಿಸುತ್ತಿರುವ ಈ ಲೋಕದಲ್ಲಿ, ಯೆಹೋವನ ಜನರು ನಮ್ರಭಾವವೆಂಬ ವ್ಯತಿರಿಕ್ತವಾದ ಮನೋಭಾವವನ್ನು ಪ್ರದರ್ಶಿಸುತ್ತಾರೆ. ಅಂತಹವರು ಹೇಳುವುದು: “ಯೆಹೋವನ ಪರ್ವತಕ್ಕೆ [ಉನ್ನತಸ್ಥಾನದಲ್ಲಿರುವ ಸತ್ಯಾರಾಧನೆಗೆ], . . . ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು.” (ಯೆಶಾಯ 2:2, 3) ದೇವರ ಮಾರ್ಗಗಳಲ್ಲಿ ನಡೆಯುವ ಈ ಭೌಗೋಲಿಕ ಸಮಾಜವನ್ನು ಯೆಹೋವನ ಸಾಕ್ಷಿಗಳು ರೂಪಿಸಿರುತ್ತಾರೆ. ಅವರಲ್ಲಿ ಸದಾ ಹೆಚ್ಚುತ್ತಿರುವ “ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು . . . ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ” ಸೇರಿರುತ್ತಾರೆ. (ಪ್ರಕಟನೆ 7:9) ಈ ಮಹಾ ಸಮೂಹದಲ್ಲಿ ಈಗ ಲಕ್ಷಾಂತರ ಜನರಿದ್ದಾರೆ. ಅವರು ದೀನರಾಗಿರುವಂತೆ ಯೆಹೋವನು ಹೇಗೆ ತರಬೇತಿ ನೀಡುತ್ತಿದ್ದಾನೆ?
ನಮ್ರಭಾವದವರಾಗಿರಲು ಕಲಿತುಕೊಳ್ಳುವುದು
11, 12. ದೇವರ ಸೇವಕರು ನಮ್ರಭಾವವನ್ನು ಹೇಗೆ ಪ್ರದರ್ಶಿಸುತ್ತಾರೆ?
11 ಸದಾಸಿದ್ಧರಾಗಿರುವ ದೇವಜನರ ಮೇಲೆ ಯೆಹೋವನ ಆತ್ಮವು ಕಾರ್ಯಮಾಡುತ್ತ, ಈ ಲೋಕದ ಕೆಟ್ಟ ಮನೋಭಾವವನ್ನು ಜಯಿಸುವಂತೆ ಮತ್ತು ದೇವರಾತ್ಮದ ಫಲಗಳನ್ನು ಪ್ರದರ್ಶಿಸುವಂತೆ ಅವರಿಗೆ ಸಹಾಯ ಮಾಡುತ್ತದೆ. ಇದು “ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ” ಎಂಬ ಗುಣಗಳಲ್ಲಿ ವ್ಯಕ್ತವಾಗುತ್ತದೆ. (ಗಲಾತ್ಯ 5:22, 23) ಈ ಗುಣಗಳನ್ನು ಬೆಳೆಸಿಕೊಳ್ಳುವಂತೆ ಅವರಿಗೆ ಸಹಾಯ ಮಾಡಲು, ದೇವರ ಸೇವಕರು “ಅಹಂಕಾರಿಗಳೂ ಒಬ್ಬರನ್ನೊಬ್ಬರು ಕೆಣಕುವವರೂ ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೇ” ಇರುವಂತೆ ಎಚ್ಚರಿಸಲ್ಪಟ್ಟಿದ್ದಾರೆ. (ಗಲಾತ್ಯ 5:26) ತದ್ರೀತಿಯಲ್ಲಿ, ಅಪೊಸ್ತಲ ಪೌಲನು ಹೇಳಿದ್ದು: “ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ . . . ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ಭಾವಿಸಿಕೊಳ್ಳಬೇಕು.”—ರೋಮಾಪುರ 12:3.
12 ಸತ್ಯ ಕ್ರೈಸ್ತರು “ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ” ಎಂಬುದಾಗಿ ದೇವರ ವಾಕ್ಯವು ಹೇಳುತ್ತದೆ. (ಫಿಲಿಪ್ಪಿ 2:3, 4) “ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ.” (1 ಕೊರಿಂಥ 10:24) ಹೌದು, ನಿಸ್ವಾರ್ಥ ನಡೆನುಡಿಗಳಿಂದ ಕೂಡಿದ “ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.” (1 ಕೊರಿಂಥ 8:1) ಅದು ಸ್ಪರ್ಧೆಯನ್ನಲ್ಲ, ಸಹಕಾರವನ್ನು ಪ್ರವರ್ಧಿಸುತ್ತದೆ. ಯೆಹೋವನ ಸೇವಕರಲ್ಲಿ ನಾ-ಮೊದಲು ಎಂಬ ಮನೋಭಾವಕ್ಕೆ ಯಾವ ಆಸ್ಪದವೂ ಇರುವುದಿಲ್ಲ.
13. ನಮ್ರಭಾವವನ್ನು ಏಕೆ ಬೆಳೆಸಿಕೊಳ್ಳಬೇಕು, ಮತ್ತು ಇದನ್ನು ಒಬ್ಬನು ಹೇಗೆ ಬೆಳೆಸಿಕೊಳ್ಳಬಹುದು?
13 ಹಾಗಿದ್ದರೂ, ಪಿತ್ರಾರ್ಜಿತವಾಗಿ ಬಂದಿರುವ ಅಪರಿಪೂರ್ಣತೆಯ ಕಾರಣ, ನಾವು ನಮ್ರಭಾವದೊಂದಿಗೆ ಜನಿಸಿರುವುದಿಲ್ಲ. (ಕೀರ್ತನೆ 51:5) ಈ ಗುಣವನ್ನು ಬೆಳೆಸಿಕೊಳ್ಳಬೇಕಾಗಿದೆ. ಇದು, ಯೆಹೋವನ ರೀತಿನೀತಿಗಳನ್ನು ಬಾಲ್ಯಾವಸ್ಥೆಯಿಂದ ಕಲಿಯದ, ಆದರೆ ನಂತರದ ಜೀವಿತದಲ್ಲಿ ಅದನ್ನು ಸ್ವೀಕರಿಸಿಕೊಂಡವರಿಗೆ ಕಷ್ಟಕರವಾಗಬಹುದು. ಏಕೆಂದರೆ, ಈ ಹಳೆಯ ಲೋಕದ ಮನೋಭಾವಗಳ ಮೇಲಾಧಾರಿತವಾದ ವ್ಯಕ್ತಿತ್ವಗಳನ್ನು ಅವರು ಈಗಾಗಲೇ ರೂಪಿಸಿಕೊಂಡಿರುತ್ತಾರೆ. ಈ ಕಾರಣ, ಅವರು “[ತಮ್ಮ] ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು,” ಮತ್ತು “ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿ”ರುವ ನೂತನಸ್ವಭಾವವನ್ನು ಧರಿಸಿಕೊಳ್ಳಲು ಕಲಿತುಕೊಳ್ಳಬೇಕು. (ಎಫೆಸ 4:22, 24) ದೇವರ ಸಹಾಯದಿಂದ ಈ ಯಥಾರ್ಥವಂತರು, “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿ”ಕೊಳ್ಳಬೇಕೆಂಬ ದೇವರ ಆವಶ್ಯಕತೆಯನ್ನು ಪೂರೈಸಬಲ್ಲರು. (ಓರೆಅಕ್ಷರಗಳು ನಮ್ಮವು.)—ಕೊಲೊಸ್ಸೆ 3:12.
14. ಒಬ್ಬನು ತನ್ನನ್ನು ಹೆಚ್ಚಿಸಿಕೊಳ್ಳುವ ವಿಷಯದ ಕುರಿತು ಯೇಸು ಯಾವ ಎಚ್ಚರಿಕೆಯನ್ನು ನೀಡಿದನು?
14 ಇದನ್ನು ಮಾಡಲು ಯೇಸುವಿನ ಶಿಷ್ಯರೂ ಕಲಿತುಕೊಳ್ಳಬೇಕಾಗಿತ್ತು. ಅವರು ಯೇಸುವಿನ ಶಿಷ್ಯರಾದಾಗ ವಯಸ್ಕರಾಗಿದ್ದರು, ಆದುದರಿಂದ ಅವರಲ್ಲಿ ಈ ಲೋಕದ ಸ್ಪರ್ಧಾತ್ಮಕ ಮನೋಭಾವವು ಸ್ವಲ್ಪಮಟ್ಟಿಗೆ ಇತ್ತು. ಆ ಶಿಷ್ಯರಲ್ಲಿ ಇಬ್ಬರ ತಾಯಿಯು ತನ್ನ ಪುತ್ರರಿಗೆ ಪ್ರಧಾನ ಸ್ಥಾನಮಾನಗಳನ್ನು ಕೋರಿದಾಗ, ಯೇಸು ಹೇಳಿದ್ದು: “ಜನಗಳನ್ನಾಳುವವರು [ಜನರ] ಮೇಲೆ ಅಹಂಕಾರದಿಂದ ದೊರೆತನಮಾಡುತ್ತಾರೆ, ಮತ್ತು ದೊಡ್ಡವರು ಬಲಾತ್ಕಾರದಿಂದ ಅಧಿಕಾರನಡಿಸುತ್ತಾರೆ . . . ನಿಮ್ಮಲ್ಲಿ ಹಾಗಿರಬಾರದು; ಆದರೆ ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು; ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ನಿಮ್ಮ ಆಳಾಗಿರಬೇಕು. ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಡುವದಕ್ಕೂ ಬಂದನು.” (ಮತ್ತಾಯ 20:20-28) ಶಿಷ್ಯರು ಬಿರುದುಗಳನ್ನು ಉಪಯೋಗಿಸಬಾರದೆಂದು ಇಲ್ಲವೆ ತಮ್ಮನ್ನು ಹೆಚ್ಚಿಸಿಕೊಳ್ಳಬಾರದೆಂದು ಯೇಸು ಹೇಳಿದ ಮೇಲೆ, “ನೀವೆಲ್ಲರು ಸಹೋದರರು” ಎಂಬುದನ್ನೂ ಕೂಡಿಸಿ ಹೇಳಿದನು.—ಮತ್ತಾಯ 23:8.
15. ಮೇಲ್ವಿಚಾರಣೆಯ ಸ್ಥಾನವನ್ನು ಬಯಸುವವರಿಗೆ ಯಾವ ಮನೋಭಾವವಿರಬೇಕು?
15 ಯೇಸುವಿನ ನಿಜ ಹಿಂಬಾಲಕನೊಬ್ಬನು ಸೇವಕನಾಗಿದ್ದಾನೆ, ಹೌದು ತನ್ನ ಜೊತೆ ಕ್ರೈಸ್ತರ ಒಬ್ಬ ದಾಸನಾಗಿದ್ದಾನೆ. (ಗಲಾತ್ಯ 5:13) ಇದು ಸಭೆಯಲ್ಲಿ ಮೇಲ್ವಿಚಾರಣೆಯ ಸ್ಥಾನಕ್ಕಾಗಿ ಅರ್ಹರಾಗಬಯಸುವ ಪುರುಷರ ವಿಷಯದಲ್ಲಿ ಸತ್ಯವಾಗಿದೆ. ಅವರೆಂದೂ ಪ್ರಧಾನತೆಗಾಗಿ ಇಲ್ಲವೆ ಅಧಿಕಾರಕ್ಕಾಗಿ ಸ್ಪರ್ಧಿಸಬಾರದು, ಅಲ್ಲದೆ ‘ದೇವರು ಅವರ ವಶದಲ್ಲಿಟ್ಟಿರುವ ಸಭೆಗಳ ಮೇಲೆ ದೊರೆತನಮಾಡುವವರಂತೆ ನಡೆಯದೆ ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಬೇಕು.’ (1 ಪೇತ್ರ 5:3) ಹೌದು, ಸ್ವಪ್ರಯೋಜನವನ್ನೇ ಅರಸುವ ಮನೋಭಾವವು ಒಬ್ಬ ಪುರುಷನನ್ನು ಮೇಲ್ವಿಚಾರಣೆಯ ಸ್ಥಾನಕ್ಕೆ ಅನರ್ಹನನ್ನಾಗಿ ಮಾಡುತ್ತದೆ. ಅಂತಹ ಒಬ್ಬ ವ್ಯಕ್ತಿಯು ಸಭೆಗೆ ಅಪಾಯಕಾರಿ ಆಗಿರುವನು. ‘ಸಭಾಧ್ಯಕ್ಷನ ಉದ್ಯೋಗವನ್ನು ಪಡಕೊಳ್ಳಬೇಕೆಂದಿರುವುದು’ ಯೋಗ್ಯವಾದ ವಿಷಯವಾಗಿದ್ದರೂ, ಸಭೆಯಲ್ಲಿರುವ ಇತರರಿಗೆ ಸೇವೆಸಲ್ಲಿಸಬೇಕೆಂಬ ಬಯಕೆಯಿಂದ ಇದು ಹುಟ್ಟಿಬರಬೇಕು. ಇದು ಪ್ರಾಧಾನ್ಯತೆಯ ಇಲ್ಲವೆ ಅಧಿಕಾರದ ಸ್ಥಾನವಾಗಿರುವುದಿಲ್ಲ, ಏಕೆಂದರೆ ಮೇಲ್ವಿಚಾರಣೆ ಮಾಡುವವರು ಸಭೆಯಲ್ಲಿರುವ ಅತ್ಯಂತ ನಮ್ರಭಾವದ ಜನರಲ್ಲಿ ಒಬ್ಬರಾಗಿರಬೇಕು.—1 ತಿಮೊಥೆಯ 3:1, 6.
16. ದೇವರ ವಾಕ್ಯದಲ್ಲಿ ದಿಯೋತ್ರೇಫನನ್ನು ಏಕೆ ಖಂಡಿಸಲಾಗಿದೆ?
16 ಈ ವಿಷಯದಲ್ಲಿ ತಪ್ಪಾದ ದೃಷ್ಟಿಕೋನವಿದ್ದ ಒಬ್ಬ ವ್ಯಕ್ತಿಯ ಬಗ್ಗೆ ಅಪೊಸ್ತಲ ಯೋಹಾನನು ನಮಗೆ ತಿಳಿಸುವುದು: “ಸಭೆಗೆ ಕೆಲವು ಮಾತುಗಳನ್ನು ಬರೆದಿದ್ದೆನು; ಆದರೆ ಸಭೆಯವರಲ್ಲಿ ಪ್ರಮುಖನಾಗಬೇಕೆಂದಿರುವ ದಿಯೋತ್ರೇಫನು ನಮ್ಮ ಮಾತನ್ನು ಅಂಗೀಕರಿಸುವದಿಲ್ಲ.” ಈ ಪುರುಷನು ತನ್ನ ಸ್ವಂತ ಸ್ಥಾನವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತ, ಇತರರೊಂದಿಗೆ ಅಗೌರವದಿಂದ ನಡೆದುಕೊಂಡನು. ಆದುದರಿಂದ, ನಾ-ಮೊದಲು ಎಂಬ ಮನೋಭಾವದ ಕಾರಣ, ದಿಯೋತ್ರೇಫನ ವಿಷಯದಲ್ಲಿ ಖಂಡನೆಯ ಮಾತುಗಳನ್ನು ಬೈಬಲಿನಲ್ಲಿ ಸೇರಿಸುವಂತೆ ದೇವರ ಆತ್ಮವು ಯೋಹಾನನನ್ನು ಪ್ರೇರೇಪಿಸಿತು.—3 ಯೋಹಾನ 9, 10.
ಸರಿಯಾದ ಮನೋಭಾವ
17. ಪೇತ್ರ, ಪೌಲ, ಮತ್ತು ಬಾರ್ನಬರು ನಮ್ರಭಾವವನ್ನು ಹೇಗೆ ಪ್ರದರ್ಶಿಸಿದರು?
17 ಬೈಬಲಿನಲ್ಲಿ, ಸರಿಯಾದ ಮನೋಭಾವದ ಕುರಿತು, ಅಂದರೆ, ನಮ್ರಭಾವದ ಕುರಿತು ಅನೇಕ ಉದಾಹರಣೆಗಳಿವೆ. ಪೇತ್ರನು ಕೊರ್ನೇಲ್ಯನ ಮನೆಯನ್ನು ಪ್ರವೇಶಿಸಿದಾಗ, ಆ ಮನುಷ್ಯನು “[ಪೇತ್ರನ] ಪಾದಕ್ಕೆ ಬಿದ್ದು ನಮಸ್ಕಾರ ಮಾಡಿದನು.” ಈ ಮಿತಿಮೀರಿದ ಮರ್ಯಾದೆಯನ್ನು ಸ್ವೀಕರಿಸುವ ಬದಲು, “ಪೇತ್ರನು—ಏಳಪ್ಪಾ, ನಾನೂ ಮನುಷ್ಯನು ಎಂದು ಹೇಳಿ” ಅವನನ್ನು ಎತ್ತಿದನು. (ಅ. ಕೃತ್ಯಗಳು 10:25, 26) ಪೌಲ ಬಾರ್ನಬರು ಲುಸ್ತ್ರದಲ್ಲಿದ್ದಾಗ, ಹುಟ್ಟುಕುಂಟನಾಗಿದ್ದ ಒಬ್ಬನನ್ನು ಪೌಲನು ಗುಣಪಡಿಸಿದನು. ಆಗ, ಜನರ ಗುಂಪು ಅಪೊಸ್ತಲರನ್ನು ದೇವತೆಗಳೆಂದು ಹೇಳತೊಡಗಿತು. ಆದರೆ, ಪೌಲ ಬಾರ್ನಬರು, “ತಮ್ಮ ವಸ್ತ್ರಗಳನ್ನು ಹರಕೊಂಡು ಜನರ ಗುಂಪಿನೊಳಗೆ ಕೂಗುತ್ತಾ ನುಗ್ಗಿ— ಜನರೇ, ನೀವು ಮಾಡುವದು ಇದೇನು? ನಾವೂ ಮನುಷ್ಯರು, ನಿಮ್ಮಂಥ ಸ್ವಭಾವವುಳ್ಳವರು” ಎಂದರು. (ಅ. ಕೃತ್ಯಗಳು 14:8-15) ಈ ದೀನ ಕ್ರೈಸ್ತರು, ಮನುಷ್ಯರಿಂದ ಅತಿಶಯವಾದ ಕೀರ್ತಿಯನ್ನು ಸ್ವೀಕರಿಸಲು ಬಯಸಲಿಲ್ಲ.
18. ದೀನಭಾವವನ್ನು ವ್ಯಕ್ತಪಡಿಸುತ್ತಾ ಒಬ್ಬ ಶಕ್ತಿಶಾಲಿ ದೇವದೂತನು ಯೋಹಾನನಿಗೆ ಏನು ಹೇಳಿದನು?
18 ಅಪೊಸ್ತಲ ಯೋಹಾನನಿಗೆ ಒಬ್ಬ ದೇವದೂತನ ಮೂಲಕ, “ಯೇಸು ಕ್ರಿಸ್ತನ ಪ್ರಕಟನೆಯು” ನೀಡಲಾಯಿತು. (ಪ್ರಕಟನೆ 1:1) ಒಬ್ಬ ದೇವದೂತನಿಗಿರುವ ಶಕ್ತಿಯ ಕಾರಣ, ಯೋಹಾನನು ಭಯಚಕಿತಗೊಂಡನೆಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಏಕೆಂದರೆ ಒಬ್ಬ ದೇವದೂತನು ಒಂದೇ ರಾತ್ರಿಯಲ್ಲಿ 1,85,000 ಅಶ್ಶೂರ್ಯರನ್ನು ಕೊಂದುಹಾಕಿದ್ದನು. (2 ಅರಸು 19:35) ಯೋಹಾನನು ವರದಿಸುವುದು: “ನಾನು ಕೇಳಿ ಕಂಡಾಗ ಈ ಸಂಗತಿಗಳನ್ನು ನನಗೆ ತೋರಿಸಿದ ದೇವದೂತನಿಗೆ ನಮಸ್ಕಾರಮಾಡಬೇಕೆಂದು ಅವನ ಪಾದಕ್ಕೆ ಬಿದ್ದೆನು. ಅವನು ನನಗೆ—ಮಾಡಬೇಡ ನೋಡು; ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ . . . ಜೊತೆಯ ದಾಸನಾಗಿದ್ದೇನೆ; ದೇವರಿಗೇ ನಮಸ್ಕಾರಮಾಡು ಎಂದು ಹೇಳಿದನು.” (ಪ್ರಕಟನೆ 22:8, 9) ಈ ಶಕ್ತಿಶಾಲಿ ದೇವದೂತನು ಎಂತಹ ನಮ್ರಭಾವದವನಾಗಿದ್ದನು!
19, 20. ಜಯಗಳಿಸಿದ ರೋಮನ್ ಸೇನಾಪತಿಗಳ ಜಂಬಕ್ಕೂ ಯೇಸುವಿನ ನಮ್ರಭಾವಕ್ಕೂ ಇರುವ ವ್ಯತ್ಯಾಸವನ್ನು ತೋರಿಸಿರಿ.
19 ನಮ್ರಭಾವವನ್ನು ಪ್ರದರ್ಶಿಸಿದವರಲ್ಲಿ ಯೇಸು ಅತ್ಯುತ್ತಮ ಮಾದರಿಯಾಗಿದ್ದನು. ಅವನು ದೇವರ ಏಕೈಕ ಪುತ್ರನಾಗಿದ್ದು, ದೇವರ ಸ್ವರ್ಗೀಯ ರಾಜ್ಯದ ಭಾವೀ ರಾಜನಾಗಿದ್ದನು. ಅವನು ಒಬ್ಬ ಅರಸನೋಪಾದಿ ಜನರ ಮುಂದೆ ತನ್ನನ್ನು ಪ್ರಸ್ತುತಪಡಿಸಿಕೊಂಡಾಗ, ಜಯಗಳಿಸಿದ ರೋಮನ್ ಸೇನಾಪತಿಗಳು ಮಾಡಿದಂತೆ ಮಾಡಲಿಲ್ಲ. ಅವರಿಗಾಗಿ ದೊಡ್ಡ ಮೆರವಣಿಗೆಗಳನ್ನು ಏರ್ಪಡಿಸಲಾಗುತ್ತಿತ್ತು, ಮತ್ತು ಅವರು ಶ್ವೇತವರ್ಣದ ಕುದುರೆಗಳು, ಅಥವಾ ಆನೆಗಳು, ಸಿಂಹಗಳು ಇಲ್ಲವೆ ಹುಲಿಗಳಿಂದಲೂ ಎಳೆಯಲ್ಪಟ್ಟ, ಚಿನ್ನ ಮತ್ತು ದಂತದಿಂದ ಅಲಂಕೃತವಾದ ರಥಗಳಲ್ಲಿ ಸವಾರಿ ಮಾಡುತ್ತಿದ್ದರು. ಈ ಮೆರವಣಿಗೆಯಲ್ಲಿ ವಿಜಯದ ಹಾಡುಗಳನ್ನು ಹಾಡುತ್ತಿದ್ದ ಸಂಗೀತಗಾರರ ಜೊತೆಗೆ, ಕೊಳ್ಳೆ ಹೊಡೆದ ಸಾಮಾನುಗಳಿಂದ ತುಂಬಿದ ಬಂಡಿಗಳು ಮತ್ತು ಯುದ್ಧದ ದೃಶ್ಯಗಳನ್ನು ಚಿತ್ರಿಸಿದ ದೊಡ್ಡ ದೊಡ್ಡ ಪ್ರದರ್ಶನದ ಬಂಡಿಗಳೂ ಸೇರಿದ್ದವು. ಇವುಗಳೊಂದಿಗೆ ಸೆರೆಹಿಡಿಯಲ್ಪಟ್ಟ ರಾಜರು, ರಾಜಕುಮಾರರು, ಮತ್ತು ಸೇನಾಪತಿಗಳು ಮತ್ತವರ ಕುಟುಂಬದವರೂ ಇರುತ್ತಿದ್ದರು. ಅವರಿಗೆ ಅಪಮಾನ ಮಾಡಲು, ಅನೇಕ ವೇಳೆ ಅವರನ್ನು ನಗ್ನಗೊಳಿಸಲಾಗುತ್ತಿತ್ತು. ಈ ಸಮಾರಂಭಗಳು ಅಹಂಕಾರದ ಮತ್ತು ಜಂಬದ ದುರ್ಗಂಧವನ್ನು ಸೂಸುತ್ತಿದ್ದವು.
20 ಇದನ್ನು, ಯೇಸು ತನ್ನನ್ನು ಅರ್ಪಿಸಿಕೊಂಡ ವಿಧದೊಂದಿಗೆ ಹೋಲಿಸಿ ನೋಡಿರಿ. ಅವನ ಕುರಿತು, “ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನು, ಸುರಕ್ಷಿತನು; ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು . . . ಹತ್ತಿದವನಾಗಿಯೂ ಬರುತ್ತಾನೆ” ಎಂಬುದಾಗಿ ಮುಂತಿಳಿಸಿದ ಪ್ರವಾದನೆಯನ್ನು ನೆರವೇರಿಸಲು, ದೀನಭಾವದಿಂದ ತನ್ನನ್ನು ಅಧೀನಪಡಿಸಿಕೊಂಡನು. ಅವನು ಭವ್ಯವಾದ ಮೆರವಣಿಗೆಗಾಗಿ ಉಪಯೋಗಿಸಲ್ಪಡುವ ಪ್ರಾಣಿಗಳಿಂದ ಎಳೆಯಲ್ಪಟ್ಟ ರಥದಲ್ಲಿ ಅಲ್ಲ, ಒಂದು ಹೇರು ಪ್ರಾಣಿಯ ಮೇಲೆ ಹತ್ತಿ ಬಂದನು. (ಜೆಕರ್ಯ 9:9; ಮತ್ತಾಯ 21:4, 5) ಹೊಸ ಲೋಕದಲ್ಲಿ ಈ ಇಡೀ ಭೂಮಿಯ ಮೇಲೆ ಯೇಸು ಯೆಹೋವನ ನೇಮಿತ ಅರಸನಾಗಿರುವನೆಂಬುದು ದೀನರಿಗೆ ಸಂತೋಷದ ಸಂಗತಿಯೇ ಸರಿ. ಏಕೆಂದರೆ ಅವನು ನಿಜವಾಗಿಯೂ ನಮ್ರನೂ, ದೀನಭಾವದವನೂ, ಪ್ರೀತಿಪರನೂ, ಸಹಾನುಭೂತಿಯುಳ್ಳವನೂ, ಕರುಣಾಮಯನೂ ಆಗಿದ್ದಾನೆ.—ಯೆಶಾಯ 9:6, 7; ಫಿಲಿಪ್ಪಿ 2:5-8.
21. ನಮ್ರಭಾವವು ಯಾವುದನ್ನು ಸೂಚಿಸುವುದಿಲ್ಲ?
21 ಯೇಸು, ಪೇತ್ರ, ಪೌಲ, ಮತ್ತು ಬೈಬಲ್ ಸಮಯಗಳಲ್ಲಿ ಜೀವಿಸಿದ ಇತರ ನಂಬಿಗಸ್ತ ಸ್ತ್ರೀಪುರುಷರು ನಮ್ರಭಾವದವರಾಗಿದ್ದರೆಂಬ ವಾಸ್ತವಾಂಶದಿಂದ, ದೀನತೆಯು ಒಂದು ಬಲಹೀನತೆಯಾಗಿದೆ ಎಂಬ ವಿಚಾರವು ಸುಳ್ಳೆಂದು ರುಜುವಾಗುತ್ತದೆ. ಬದಲಿಗೆ, ಅದು ನೈತಿಕ ಬಲವನ್ನು ವ್ಯಕ್ತಪಡಿಸುತ್ತದೆ, ಏಕೆಂದರೆ ಇವರೆಲ್ಲ ಧೈರ್ಯವಂತರೂ ಹುರುಪುಳ್ಳವರೂ ಆಗಿದ್ದರು. ಅತ್ಯಧಿಕವಾದ ಮಾನಸಿಕ ಹಾಗೂ ನೈತಿಕ ಬಲದಿಂದ ಅವರು ತೀವ್ರವಾದ ಕಷ್ಟಗಳನ್ನು ತಾಳಿಕೊಂಡರು. (ಇಬ್ರಿಯ, 11ನೆಯ ಅಧ್ಯಾಯ) ಮತ್ತು ಇಂದು, ನಮ್ರರಾಗಿರುವ ಯೆಹೋವನ ಸೇವಕರಿಗೆ ತದ್ರೀತಿಯ ಬಲವಿದೆ, ಏಕೆಂದರೆ ದೇವರು ತನ್ನ ಶಕ್ತಿಶಾಲಿ ಪವಿತ್ರಾತ್ಮದಿಂದ ನಮ್ರಭಾವದವರನ್ನು ಬೆಂಬಲಿಸುತ್ತಾನೆ. ಆದಕಾರಣ, ನಾವು ಹೀಗೆ ಪ್ರೇರಿಸಲ್ಪಟ್ಟಿದ್ದೇವೆ: “ನೀವೆಲ್ಲರೂ ನಮ್ರಭಾವವೆಂಬ ಸೊಂಟಾಪಟ್ಟಿಯನ್ನು ಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ. ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು.”—1 ಪೇತ್ರ 5:5, 6, NW.
22. ಮುಂದಿನ ಲೇಖನದಲ್ಲಿ ಯಾವ ವಿಷಯವನ್ನು ಚರ್ಚಿಸಲಾಗುವುದು?
22 ನಮ್ರಭಾವದ ವಿಷಯದಲ್ಲಿ ದೇವರ ಸೇವಕರು ಅಭ್ಯಾಸಿಸಬೇಕಾದ ಮತ್ತೊಂದು ಸಕಾರಾತ್ಮಕ ಅಂಶವಿದೆ. ಇದು ಸಭೆಗಳಲ್ಲಿ ಪ್ರೀತಿ ಮತ್ತು ಸಹಕಾರದ ಮನೋಭಾವವನ್ನು ಹೆಚ್ಚಿಸಲು ಬಹಳವಾಗಿ ಸಹಾಯ ಮಾಡುವ ಅಂಶವಾಗಿದೆ. ಅದು ನಮ್ರಭಾವದ ಅತ್ಯಾವಶ್ಯಕ ಅಂಶವೂ ಆಗಿದೆ. ಇದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.
ಪುನರ್ವಿಮರ್ಶೆಯಲ್ಲಿ
◻ ಈ ಲೋಕದಲ್ಲಿ ಪ್ರಚಲಿತವಾಗಿರುವ ಮನೋಭಾವವನ್ನು ವರ್ಣಿಸಿರಿ.
◻ ನಮ್ರಭಾವದವರನ್ನು ಯೆಹೋವನು ಹೇಗೆ ಅನುಗ್ರಹಿಸುತ್ತಾನೆ?
◻ ನಮ್ರಭಾವವನ್ನು ಏಕೆ ಬೆಳೆಸಿಕೊಳ್ಳಬೇಕಾಗಿದೆ?
◻ ನಮ್ರಭಾವವನ್ನು ವ್ಯಕ್ತಪಡಿಸಿದ ಕೆಲವು ವ್ಯಕ್ತಿಗಳ ಬೈಬಲ್ ಉದಾಹರಣೆಗಳು ಯಾವುವು?
[ಪುಟ 15 ರಲ್ಲಿರುವ ಚಿತ್ರ]
ದೇವದೂತನು ಯೋಹಾನನಿಗೆ ಹೇಳಿದ್ದು: “ಮಾಡಬೇಡ ನೋಡು; ನಾನೂ . . . ನಿನ್ನ . . . ಜೊತೆಯ ದಾಸನಾಗಿದ್ದೇನೆ”