ಅಧ್ಯಾಯ 15
“ಸುರುಳಿಯನ್ನು ಬಿಚ್ಚುವುದಕ್ಕೆ ಯಾವನು ಯೋಗ್ಯನು?”
1. ಯೋಹಾನನ ದರ್ಶನದಲ್ಲಿ ಈಗ ಏನು ಸಂಭವಿಸುತ್ತದೆ?
ಭವ್ಯ! ಭಯಭಕ್ತಿ ಹುಟ್ಟಿಸುವಂಥದ್ದು! ಬೆಂಕಿಯ ದೀಪಸ್ತಂಭಗಳ, ಕೆರೂಬಿಯರ, 24 ಹಿರಿಯರುಗಳ ಮತ್ತು ಗಾಜಿನಂಥ ಸಮುದ್ರದ ಮಧ್ಯೆ ಇರುವ ಯೆಹೋವನ ಸಿಂಹಾಸನದ ಕಲುಕುವ ದರ್ಶನವು ಇಂಥದ್ದೇ ಆಗಿದೆ. ಆದರೆ ಯೋಹಾನನೇ, ನೀನು ಮುಂದೇನು ನೋಡುತ್ತೀ? ಯೋಹಾನನು ಈ ಸ್ವರ್ಗೀಯ ದೃಶ್ಯದ ಕೇಂದ್ರಕ್ಕೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸುತ್ತಾ, ನಮಗೆ ಹೀಗೆ ಹೇಳುತ್ತಾನೆ: “ಮತ್ತು ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಳಭಾಗದಲ್ಲಿಯೂ ಮತ್ತು ಹೊರಭಾಗದಲ್ಲಿಯೂ ಬರೆದಿದ್ದ, ಏಳು ಮುದ್ರೆಗಳಿಂದ ಬಿಗಿಯಾಗಿ ಮುದ್ರೆಯೊತ್ತಿದ್ದ ಒಂದು ಸುರುಳಿಯನ್ನು ಕಂಡೆನು. ಮತ್ತು ಬಲಿಷ್ಠನಾದ ಒಬ್ಬ ದೇವದೂತನು ಹೀಗೆ ಮಹಾ ಶಬ್ದದಿಂದ ಘೋಷಿಸುವುದನ್ನು ಕಂಡೆನು: ‘ಈ ಸುರುಳಿಯನ್ನು ಬಿಚ್ಚುವುದಕ್ಕೆ ಮತ್ತು ಅದರ ಮುದ್ರೆಗಳನ್ನು ಸಡಿಲಿಸಲಿಕ್ಕೆ ಯಾವನು ಯೋಗ್ಯನು?’ ಆದರೆ ಆ ಸುರುಳಿಯನ್ನು ಬಿಚ್ಚುವುದಕ್ಕಾದರೂ ಅದರೊಳಗೆ ನೋಡುವುದಕ್ಕಾದರೂ ಪರಲೋಕದಲ್ಲಿಯಾಗಲಿ, ಭೂಮಿಯ ಕೆಳಗಾಗಲಿ ಒಬ್ಬನೂ ಶಕ್ತನಾಗಲಿಲ್ಲ. ಮತ್ತು ಸುರುಳಿಯನ್ನು ಬಿಚ್ಚುವುದಕ್ಕಾಗಲಿ, ಅದರಲ್ಲಿ ನೋಡುವುದಕ್ಕಾಗಲಿ ಯೋಗ್ಯನಾದವನು ಒಬ್ಬನೂ ಸಿಕ್ಕಲಿಲ್ಲವಾದ ಕಾರಣ ನಾನು ಕಣ್ಣೀರು ಕರೆದೆನು.”—ಪ್ರಕಟನೆ 5:1-4, NW.
2, 3. (ಎ) ಸುರುಳಿಯನ್ನು ಬಿಚ್ಚಲು ಯೋಗ್ಯನಾದವನೊಬ್ಬನು ಸಿಗುವುದರ ಕುರಿತು ಯೋಹಾನನು ಆತುರತೆಯುಳ್ಳವನಾಗಿದ್ದುದೇಕೆ, ಆದರೆ ಅದಕ್ಕೋಸ್ಕರ ಯಾವ ಪ್ರತೀಕ್ಷೆ ಇರುವಂತೆ ತೋರುತ್ತದೆ? (ಬಿ) ದೇವರ ಅಭಿಷಿಕ್ತ ಜನರು ನಮ್ಮ ಸಮಯಗಳಲ್ಲಿ ಯಾವುದಕ್ಕೆ ಆತುರತೆಯಿಂದ ಕಾದಿದ್ದಾರೆ?
2 ಸಮಸ್ತ ಸೃಷ್ಟಿಯ ಸಾರ್ವಭೌಮ ಕರ್ತನಾದ ಯೆಹೋವನು ತಾನೇ ಆ ಸುರುಳಿಯನ್ನು ಹಿಡಿದುಕೊಂಡಿರುತ್ತಾನೆ. ಮುಂದುಗಡೆ ಮತ್ತು ಹಿಂದುಗಡೆ ಬರವಣಿಗೆ ಇದ್ದುದರಿಂದ, ಅದು ಪ್ರಾಮುಖ್ಯ ಸಮಾಚಾರದಿಂದ ತುಂಬಿರಲೇ ಬೇಕು. ನಮ್ಮ ಕುತೂಹಲವು ಕೆರಳಿಸಲ್ಪಡುತ್ತದೆ. ಸುರುಳಿಯಲ್ಲಿ ಏನು ಅಡಕವಾಗಿದೆ? ಯೋಹಾನನಿಗೆ ಯೆಹೋವನು ನೀಡಿದ ಆಮಂತ್ರಣವನ್ನು ನಾವು ನೆನಪಿಸುತ್ತೇವೆ: “ಇಲ್ಲಿ ಮೇಲಕ್ಕೆ ಬಾ, ಮತ್ತು ಮುಂದಕ್ಕೆ ಆಗಬೇಕಾದ ಸಂಗತಿಗಳನ್ನು ನಾನು ನಿನಗೆ ತೋರಿಸುವೆನು.’” (ಪ್ರಕಟನೆ 4:1, NW) ಮೈಜುಮ್ಮೆನ್ನಿಸುವ ನಿರೀಕ್ಷಣೆಯೊಂದಿಗೆ, ಆ ವಿಷಯಗಳ ಕುರಿತು ಕಲಿಯಲು ನಾವು ಮುನ್ನೋಡುತ್ತೇವೆ. ಆದರೆ ಅಯ್ಯೋ, ಒತ್ತಾಗಿ ಮುಚ್ಚಲ್ಪಟ್ಟು, ಏಳು ಮುದ್ರೆಗಳಿಂದ ಮುದ್ರೆಯೊತ್ತಿ ಅಂಟಿಸಲ್ಪಟ್ಟಿದೆ!
3 ಸುರುಳಿಯನ್ನು ಬಿಚ್ಚುವುದಕ್ಕೆ ಯೋಗ್ಯನಾಗಿರುವ ಯಾವನನ್ನಾದರೂ ಈ ಬಲಿಷ್ಠ ದೇವದೂತನು ಕಂಡುಕೊಳ್ಳುವನೋ? ಕಿಂಗ್ಡಮ್ ಇಂಟರ್ಲಿನೀಯರ್ ಪ್ರಕಾರ, ಸುರುಳಿಯು ಯೆಹೋವನ “ಬಲಗೈಯ ಮೇಲೆ” ಇದೆ. ಆತನ ತೆರೆದ ಅಂಗೈಯಲ್ಲಿ ಅದನ್ನು ಹಿಡಿದಿದ್ದಾನೆ ಎಂದು ಅದು ಸೂಚಿಸುತ್ತದೆ. ಆದರೆ ಪರಲೋಕದಲ್ಲಿಯಾಗಲಿ ಭೂಮಿಯ ಮೇಲಾಗಲಿ ಆ ಸುರುಳಿಯನ್ನು ಸ್ವೀಕರಿಸಲು ಮತ್ತು ಬಿಚ್ಚಲು ಯೋಗ್ಯನಾಗಿರುವ ಒಬ್ಬನೂ ಇಲ್ಲವೆಂದು ಕಾಣುತ್ತದೆ. ಭೂಮಿಯ ಕೆಳಗಣ ಭಾಗದಲ್ಲಿ ಮೃತಪಟ್ಟ ದೇವರ ನಂಬಿಗಸ್ತ ಸೇವಕರಲ್ಲಿಯೂ ಕೂಡ ಈ ಉಚ್ಚ ಗೌರವಕ್ಕೆ ಯೋಗ್ಯತೆ ಪಡೆದ ಯಾವನೇ ಒಬ್ಬನೂ ಇಲ್ಲ. ಯೋಹಾನನು ಪ್ರತ್ಯಕ್ಷವಾಗಿ ಕ್ಷೋಭೆಗೊಳಗಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ! ಕಟ್ಟಕಡೆಗೂ, “ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು” ಅವನು ಪ್ರಾಯಶಃ ಕಲಿಯಲಿಕ್ಕಿಲ್ಲ. ನಮ್ಮ ದಿನಗಳಲ್ಲಿಯೂ ಕೂಡ, ದೇವರ ಅಭಿಷಿಕ್ತ ಜನರು ಯೆಹೋವನು ಪ್ರಕಟನೆಯ ಮೇಲೆ ತನ್ನ ಬೆಳಕು ಮತ್ತು ಸತ್ಯವನ್ನು ಕಳುಹಿಸುವಂತೆ ಉತ್ಸುಕತೆಯಿಂದ ಕಾದಿದ್ದಾರೆ. ಇದನ್ನು ಆತನು ಒಂದು “ಮಹಾ ರಕ್ಷಣೆಯ” ದಾರಿಯಲ್ಲಿ ತನ್ನ ಜನರನ್ನು ನಡಿಸಲು ಪ್ರಗತಿಪರವಾಗಿ ನೇಮಿತ ಸಮಯದಲ್ಲಿ ಪ್ರವಾದನೆಯ ನೆರವೇರಿಕೆಗಾಗಿ ಮಾಡುವನು.—ಕೀರ್ತನೆ 43:3, 5.
ಯೋಗ್ಯನಾದವನು
4. (ಎ) ಸುರುಳಿಯನ್ನು ಮತ್ತು ಅದರ ಮುದ್ರೆಗಳನ್ನು ಬಿಚ್ಚಲು ಯೋಗ್ಯನಾದವನು ಯಾರೆಂದು ಕಂಡುಹಿಡಿಯಲ್ಪಟ್ಟಿತು? (ಬಿ) ಯೋಹಾನ ವರ್ಗ ಮತ್ತು ಅವರ ಸಂಗಾತಿಗಳು ಈಗ ಯಾವ ಪ್ರತಿಫಲ ಮತ್ತು ಸುಯೋಗದಲ್ಲಿ ಪಾಲಿಗರಾಗುತ್ತಿದ್ದಾರೆ?
4 ಹೌದು, ಸುರುಳಿಯನ್ನು ಬಿಚ್ಚಲು ಯೋಗ್ಯನಾದ ಒಬ್ಬನು ಇದ್ದಾನೆ! ಯೋಹಾನನು ವರದಿ ಮಾಡುವುದು: “ಆದರೆ ಹಿರಿಯರಲ್ಲಿ ಒಬ್ಬನು ನನಗೆ ಹೇಳುವುದು: ‘ಅಳುವುದನ್ನು ನಿಲ್ಲಿಸು. ಇಗೋ! ಯೆಹೂದ ಕುಲದ ಸಿಂಹ, ದಾವೀದನ ಬುಡವಾಗಿರುವವನು ಆ ಸುರುಳಿಯನ್ನು ಮತ್ತು ಅದರ ಏಳು ಮುದ್ರೆಗಳನ್ನು ಬಿಚ್ಚುವುದಕ್ಕೋಸ್ಕರ ಜಯಹೊಂದಿದ್ದಾನೆ.’” (ಪ್ರಕಟನೆ 5:5, NW) ಹಾಗಾದರೆ, ಯೋಹಾನನೇ, ಆ ಕಣ್ಣೀರನ್ನು ಒರಸಿಬಿಡು! ಜ್ಞಾನೋದಯಕ್ಕಾಗಿ ತಾಳ್ಮೆಯಿಂದ ಕಾದಿರುವಾಗ, ಯೋಹಾನ ವರ್ಗ ಮತ್ತು ಅವರ ನಿಷ್ಠೆಯ ಸಂಗಾತಿಗಳು ಕೂಡ ಶತಕಗಳ ಕಠಿನತಮ ಪರೀಕ್ಷೆಗಳನ್ನು ಸಹಿಸಿರುತ್ತಾರೆ. ದರ್ಶನವನ್ನು ತಿಳಿದುಕೊಳ್ಳುವುದರಲ್ಲಿ ನಮಗೆ ಎಂಥ ಒಂದು ಸಾಂತ್ವನದಾಯಕ ಬಹುಮಾನ ಈಗ ಇರುತ್ತದೆ ಮತ್ತು ಅದರ ಸಂದೇಶವನ್ನು ಇತರರಿಗೆ ಸಾರುತ್ತಾ ಅದರ ನೆರವೇರಿಕೆಯಲ್ಲಿ ಪಾಲುತೆಗೆದುಕೊಳ್ಳುವುದೂ ಎಂಥ ಒಂದು ಸುಯೋಗವು!
5. (ಎ) ಯೆಹೂದನ ಕುರಿತಾಗಿ ಯಾವ ಪ್ರವಾದನೆಯು ನುಡಿಯಲ್ಪಟ್ಟಿತ್ತು, ಮತ್ತು ಯೆಹೂದನ ವಂಶಜರು ಎಲ್ಲಿ ರಾಜ್ಯಭಾರ ನಡಿಸಿದರು? (ಬಿ) ಶಿಲೋ ಯಾರು?
5 ಆಹಾ, “ಯೆಹೂದ ಕುಲದ ಸಿಂಹ”! ಯೆಹೂದಿ ಜನಾಂಗದ ಪೂರ್ವಜನಾದ ಯಾಕೋಬನು ತನ್ನ ನಾಲ್ಕನೆಯ ಮಗನಾದ ಯೆಹೂದನಿಗೆ ಉಚ್ಚರಿಸಿರುವ ಪ್ರವಾದನೆಯ ಪರಿಚಯವು ಯೋಹಾನನಿಗೆ ಇದೆ: “ಯೆಹೂದನು ಸಿಂಹದ ಮರಿ. ನನ್ನ ಮಗನೇ, ಕೊಳ್ಳೆಯಿಂದ ನೀನು ನಿಶ್ಚಯವಾಗಿಯೂ ಮೇಲೆ ಹೋಗುವಿ. ಅವನು ಬಗ್ಗಿದನು, ಅವನು ಸಿಂಹದಂತೆ ತನ್ನನ್ನು ಚಾಚಿಕೊಂಡನು, ಮತ್ತು ಸಿಂಹದಂತೆ, ಅವನನ್ನು ರೇಗಿಸಲು ಯಾರು ಧೈರ್ಯ ಪಡುವರು? ಶಿಲೋ ಬರುವ ತನಕ ರಾಜದಂಡವು ಯೆಹೂದದಿಂದ ಪಕ್ಕಕ್ಕೆ ತಿರುಗದು, ಆತನ ಪಾದಗಳ ಮಧ್ಯದಿಂದ ಅಧಿಕಾರಿಯ ದಂಡವು ಕೂಡ. ಮತ್ತು ಅವನಿಗೆ ಜನರ ವಿಧೇಯತೆಯು ಸಲ್ಲುವುದು.” (ಆದಿಕಾಂಡ 49:9, 10, NW) ದೇವಜನರ ರಾಜಮನೆತನದ ಸಾಲು ಯೆಹೂದನಿಂದ ಬಂದಿತ್ತು. ದಾವೀದನೊಂದಿಗೆ ಪ್ರಾರಂಭಗೊಳ್ಳುತ್ತಾ, ಬಾಬೆಲಿನವರು ಯೆರೂಸಲೇಮನ್ನು ನಾಶಗೊಳಿಸುವ ವರೆಗೆ ಆ ನಗರದಲ್ಲಿ ಆಳಿದ ಎಲ್ಲಾ ರಾಜರು ಯೆಹೂದನ ವಂಶಜರಾಗಿದ್ದರು. ಆದರೆ ಯಾಕೋಬನಿಂದ ಪ್ರವಾದಿಸಲ್ಪಟ್ಟಂತೆ, ಅವರಲ್ಲಿ ಯಾರೊಬ್ಬನೂ ಶಿಲೋ ಆಗಿರಲಿಲ್ಲ. ಶಿಲೋ ಅಂದರೆ “ಯಾರ [ಹಕ್ಕು] ಅದಾಗಿದೆಯೋ ಅವನು.” ಈ ಹೆಸರು ಪ್ರವಾದನಾರೂಪವಾಗಿ ದಾವೀದನ ರಾಜ್ಯವು ಈಗ ಯಾರಿಗೆ ಶಾಶ್ವತವಾಗಿ ಸೇರಿದೆಯೋ ಆ ಯೇಸುವನ್ನು ತೋರಿಸಿತು.—ಯೆಹೆಜ್ಕೇಲ 21:25-27; ಲೂಕ 1:32, 33; ಪ್ರಕಟನೆ 19:16.
6. ಯೇಸುವು “ಇಷಯನ ಚಿಗುರು” ಮತ್ತು “ದಾವೀದನ ಬುಡ” ಕೂಡ ಆಗಿದ್ದದ್ದು ಯಾವ ವಿಧದಲ್ಲಿ?
6 “ದಾವೀದನ ಬುಡ” ವೆಂಬ ಉಲ್ಲೇಖವನ್ನು ಯೋಹಾನನು ಕೂಡಲೇ ತಿಳಿದುಕೊಳ್ಳುತ್ತಾನೆ. ಪ್ರವಾದನಾರೂಪವಾಗಿ ವಾಗ್ದಾತ್ತ ಮೆಸ್ಸೀಯನನ್ನು “ಇಷಯನ [ರಾಜ ದಾವೀದನ ತಂದೆ] ಬುಡದಿಂದ ಒಂದು ಚಿಗುರು . . . ಒಂದು ತಳಿರು,” ಮತ್ತು “ಆ ದಿನದಲ್ಲಿ ಜನಾಂಗಗಳು ತಮಗೆ ಧ್ವಜಪ್ರಾಯನಾಗಿ ನಿಂತಿರುವ ಇಷಯನ ಅಂಕುರ [ಬುಡ, NW] ದವನನ್ನು ಆಶ್ರಯಿಸುವರು” ಎಂದು ಇಬ್ಬಗೆಯಲ್ಲಿ ಕರೆಯಲ್ಪಟ್ಟಿದ್ದಾನೆ. (ಯೆಶಾಯ 11:1, 10) ಇಷಯನ ಮಗನಾದ ದಾವೀದನ ರಾಜಮನೆತನದ ಸಾಲಿನಲ್ಲಿ ಹುಟ್ಟಿದವನಾಗಿದದ್ದರಿಂದ ಯೇಸುವು ಇಷಯನ ಚಿಗುರಾಗಿದ್ದನು. ಇನ್ನೂ ಹೆಚ್ಚಾಗಿ, ಇಷಯನ ಬುಡದೋಪಾದಿ, ಅದಕ್ಕೆ ಸದಾಕಾಲ ಜೀವ ಮತ್ತು ಪೋಷಣೆಯನ್ನು ಕೊಟ್ಟು, ಇವನು ದಾವೀದನ ರಾಜಮನೆತನವು ಪುನಃ ತಳಿರು ಫಲಿಸುವಂತೆ ಕಾರಣನಾದನು.—2 ಸಮುವೇಲ 7:16.
7. ಸಿಂಹಾಸನದ ಮೇಲೆ ಕೂತಿದ್ದವನ ಕೈಯಿಂದ ಸುರುಳಿಯನ್ನು ತೆಗೆದುಕೊಳ್ಳಲು ಯೇಸುವನ್ನು ಯಾವುದು ಯೋಗ್ಯವನ್ನಾಗಿ ಮಾಡುತ್ತದೆ?
7 ಪರಿಪೂರ್ಣ ಮನುಷ್ಯನೋಪಾದಿ ಯೇಸು ಯೆಹೋವನನ್ನು ಯಥಾರ್ಥತೆಯಿಂದ ಮತ್ತು ಯಾತನಾಮಯ ಪರೀಕ್ಷೆಗಳ ಕೆಳಗೆ ಸೇವಿಸುವುದರ ಮೂಲಕ ಸರ್ವೂತ್ಕೃಷ್ಟನಾಗಿದ್ದಾನೆ. ಆತನು ಸೈತಾನನ ಪಂಥಾಹ್ವಾನಕ್ಕೆ ಸಂಪೂರ್ಣ ಉತ್ತರವನ್ನು ಒದಗಿಸಿದನು. (ಜ್ಞಾನೋಕ್ತಿ 27:11) ಆದುದರಿಂದ, ಆತನು ತನ್ನ ಯಜ್ಞಾರ್ಪಿತ ಮರಣದ ಮುಂಚಿನ ರಾತ್ರಿಯಲ್ಲಿ ಮಾಡಿದಂತೆ, ಹೀಗೆ ಹೇಳಶಕ್ತನಾದನು: “ನಾನು ಲೋಕವನ್ನು ಜಯಿಸಿದ್ದೇನೆ.” (ಯೋಹಾನ 16:33) ಈ ಕಾರಣಕ್ಕಾಗಿ, ಯೆಹೋವನು ಪುನರುತಿತ್ಥ ಯೇಸುವಿಗೆ “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ . . . ಎಲ್ಲಾ ಅಧಿಕಾರವನ್ನು” ವಹಿಸಿಕೊಟ್ಟನು. ಅದರ ಬಹುಮುಖ್ಯವಾದ ಸಂದೇಶವನ್ನು ತಿಳಿಯಪಡಿಸುವ ನೋಟದಿಂದ, ದೇವರ ಎಲ್ಲಾ ಸೇವಕರುಗಳಲ್ಲಿ ಆತನೊಬ್ಬನೇ ಸುರುಳಿಯನ್ನು ಸ್ವೀಕರಿಸಲು ಯೋಗ್ಯನಾಗಿರುತ್ತಾನೆ.—ಮತ್ತಾಯ 28:18.
8. (ಎ) ರಾಜ್ಯದ ಸಂಬಂಧದಲ್ಲಿ ಯೇಸುವಿನ ಯೋಗ್ಯತೆಯನ್ನು ಯಾವುದು ತೋರಿಸುತ್ತದೆ? (ಬಿ) ಸುರುಳಿಯನ್ನು ಬಿಚ್ಚಲು ಯೋಗ್ಯನಾದ ವ್ಯಕ್ತಿ ಯಾರೆಂದು ಯೋಹಾನನಿಗೆ 24 ಹಿರಿಯರಲ್ಲೋಬ್ಬನು ತಿಳಿಸುವುದು ತಕ್ಕದ್ದಾಗಿದೆ ಯಾಕೆ?
8 ಸುರುಳಿಯನ್ನು ಬಿಚ್ಚಲು ಯೇಸು ನಿಜವಾಗಿಯೂ ಯೋಗ್ಯನಾಗಿರುವುದು ಸಮಂಜಸವಾಗಿದೆ. 1914 ರಿಂದ ಆತನು ದೇವರ ಮೆಸ್ಸೀಯ ಸಂಬಂಧಿತ ರಾಜ್ಯದ ರಾಜನಾಗಿ ಸಿಂಹಾಸನಕ್ಕೇರಿಸಲ್ಪಟ್ಟಿದ್ದಾನೆ, ಮತ್ತು ಆ ಸುರುಳಿಯು ರಾಜ್ಯದ ಕುರಿತು ಮತ್ತು ಅದು ಏನೆಲ್ಲಾ ಪೂರೈಸಲಿದೆಯೋ ಅದೆಲ್ಲದರ ಕುರಿತು ಬಹಳಷ್ಟನ್ನು ಪ್ರಕಟಿಸುತ್ತದೆ. ಇಲ್ಲಿ ಭೂಮಿಯ ಮೇಲೆ ಇದ್ದಾಗ, ಯೇಸುವು ರಾಜ್ಯ ಸತ್ಯತೆಗೆ ನಂಬಿಗಸ್ತಿಕೆಯಿಂದ ಸಾಕ್ಷಿಯನ್ನು ಕೊಟ್ಟನು. (ಯೋಹಾನ 18:36, 37) ಆ ರಾಜ್ಯದ ಬರೋಣಕ್ಕಾಗಿ ಪ್ರಾರ್ಥಿಸಲು ಅವನು ತನ್ನ ಹಿಂಬಾಲಕರಿಗೆ ಕಲಿಸಿದನು. (ಮತ್ತಾಯ 6:9, 10) ಆತನು ರಾಜ್ಯದ ಸುವಾರ್ತೆಯನ್ನು ನಮ್ಮ ಕ್ರೈಸ್ತ ಶಕದ ಆರಂಭದಲ್ಲಿ ಮೊದಲಾಗಿ ಪ್ರಾರಂಭಿಸಿದನು ಮತ್ತು ಅಂತ್ಯದ ಸಮಯದಲ್ಲಿ ಆ ಸಾರುವ ಕೆಲಸವು ಉಚ್ಛಾಯ್ರ ಸ್ಥಿತಿಗೆ ಏರಲಿದೆಯೆಂದು ಪ್ರವಾದಿಸಿದನು. (ಮತ್ತಾಯ 4:23; ಮಾರ್ಕ 13:10) ಯೇಸುವು ಮುದ್ರೆಯನ್ನು ತೆರೆಯಲು ಯೋಗ್ಯನಾದವನೆಂದು 24 ಹಿರಿಯರುಗಳಲ್ಲಿ ಒಬ್ಬನು ಯೋಹಾನನಿಗೆ ತಿಳಿಯಪಡಿಸುವುದು ಕೂಡ ತದ್ರೀತಿಯಲ್ಲಿ ಯೋಗ್ಯವಾಗಿರುತ್ತದೆ. ಯಾಕೆ? ಯಾಕಂದರೆ ಆ ಹಿರಿಯರು ಕ್ರಿಸ್ತನ ರಾಜ್ಯದಲ್ಲಿ ಅವನೊಂದಿಗೆ ಜತೆಬಾಧ್ಯಸ್ಥರಾಗಿರುವುದರಿಂದ, ಸಿಂಹಾಸನಗಳಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ಕಿರೀಟಗಳನ್ನು ಧರಿಸುತ್ತಾರೆ.—ರೋಮಾಪುರ 8:17; ಪ್ರಕಟನೆ 4:4.
‘ಕೊಯ್ಯಲ್ಪಟ್ಟ ಕುರಿಮರಿ’
9. ಒಂದು ಸಿಂಹದ ಬದಲು, ಯೋಹಾನನು “ಸಿಂಹಾಸನದ ಮಧ್ಯದಲ್ಲಿ” ಏನನ್ನು ನೋಡುತ್ತಾನೆ, ಮತ್ತು ಅವನದನ್ನು ಹೇಗೆ ವರ್ಣಿಸುತ್ತಾನೆ?
9 ಯೋಹಾನನು ಈ “ಯೆಹೂದ ಕುಲದ ಸಿಂಹವನ್ನು” ನೋಡಲು ಕಣ್ಣು ತಿರುಗಿಸುತ್ತಾನೆ. ಆದರೆ ಇದು ಎಷ್ಟು ದಿಗ್ಭಮ್ರೆಗೊಳಿಸುತ್ತದೆ! ಪೂರ್ತಿ ವಿಭಿನ್ನವಾದ ಒಂದು ಸಾಂಕೇತಿಕ ದೇಹಾಕೃತಿಯು ತೋರುತ್ತದೆ: “ಮತ್ತು ಸಿಂಹಾಸನದ ಮತ್ತು ನಾಲ್ಕು ಜೀವಿಗಳ ಮಧ್ಯದಲ್ಲಿ ಮತ್ತು ಹಿರಿಯರ ಮಧ್ಯದಲ್ಲಿ, ಯಾವುದಕ್ಕೆ ಏಳು ಕೊಂಬುಗಳೂ ಏಳು ಕಣ್ಣುಗಳೂ ಇವೆಯೋ ಮತ್ತು ಯಾವ ಕಣ್ಣುಗಳು ಇಡಿಯ ಭೂಮಿಯೊಳಗೆ ಕಳುಹಿಸಲ್ಪಟ್ಟ ದೇವರ ಏಳು ಆತ್ಮಗಳನ್ನು ಅರ್ಥೈಸುತ್ತವೆಯೋ, ಆ ಕುರಿಮರಿ, ಅದು ಕೊಯ್ಯಲ್ಪಟ್ಟಿದೆಯೋ ಎಂಬಂತೆ ನಿಂತಿರುವುದನ್ನು ನಾನು ಕಂಡೆನು.”—ಪ್ರಕಟನೆ 5:6, NW.
10. ಯೋಹಾನನು ಕಂಡ “ಕುರಿಮರಿ” ಯಾವುದು, ಮತ್ತು ಆ ಪದವು ತಕ್ಕದ್ದಾಗಿದೆ ಏಕೆ?
10 ಸಿಂಹಾಸನದ ಪಕ್ಕದಲ್ಲಿ, ನಾಲ್ಕು ಜೀವಿಗಳಿಂದ ಮತ್ತು 24 ಹಿರಿಯರುಗಳಿಂದ ಉಂಟುಮಾಡಲ್ಪಟ್ಟ ವರ್ತುಲಗಳ ಸರಿ ಮಧ್ಯದಲ್ಲಿ ಒಂದು ಕುರಿಮರಿಯಿದೆ! “ಯೆಹೂದ ಕುಲದ ಸಿಂಹದೊಂದಿಗೆ” ಮತ್ತು “ದಾವೀದನ ಬುಡ” ದೊಂದಿಗೆ ಈ ಕುರಿಮರಿಯನ್ನು ಯೋಹಾನನು ಕೂಡಲೇ ಗುರುತಿಸುತ್ತಾನೆಂಬುದರಲ್ಲಿ ಸಂದೇಹವಿಲ್ಲ. ಸ್ನಾನಿಕನಾದ ಯೋಹಾನನು 60 ವರ್ಷಗಳಿಗಿಂತಲೂ ಮುಂಚೆ, ನೋಡುತ್ತಿದ್ದ ಯೆಹೂದ್ಯರಿಗೆ “ದೇವರು [ಯಜ್ಞಕ್ಕೆ] ನೇಮಿಸಿದ ಕುರಿಮರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು” ಎಂದು ಯೇಸುವನ್ನು ಪರಿಚಯಪಡಿಸಿದ್ದು ಅವನಿಗೆ ತಿಳಿದಿತ್ತು! (ಯೋಹಾನ 1:29, NW) ಭೂಮಿಯ ಮೇಲಿನ ಆತನ ಜೀವಮಾನದಲ್ಲಿ, ಯೇಸುವು ಲೋಕದಿಂದ ಕಳಂಕವಿಲ್ಲದವನಾಗಿ—ಒಂದು ನಿಷ್ಕಳಂಕ ಕುರಿಮರಿಯಂತೆ—ಉಳಿದನು, ಹೀಗೆ ಆತನು ತನ್ನ ನಿರ್ದೋಷ ಜೀವವನ್ನು ಮಾನವ ಕುಲಕ್ಕೆ ಯಜ್ಞವಾಗಿ ಅರ್ಪಿಸಲು ಶಕ್ತನಾದನು.—1 ಕೊರಿಂಥ 5:7; ಇಬ್ರಿಯರಿಗೆ 7:26.
11. ‘ಕೊಯ್ಯಲ್ಪಟ್ಟ ಕುರಿಮರಿ’ ಯೇಸುವನ್ನು ಪ್ರತಿನಿಧಿಸುವುದು ಅಗೌರವವಲ್ಲ ಯಾಕೆ?
11 ಮಹಿಮೆಗೇರಿಸಲ್ಪಟ್ಟ ಯೇಸುವನ್ನು “ಆ ಕುರಿಮರಿ, ಅದು ಕೊಯ್ಯಲ್ಪಟ್ಟಿದೆಯೋ ಎಂಬಂತೆ” ಪ್ರತಿನಿಧಿಸುವುದು ಆತನನ್ನು ಹೇಗಾದರೂ ಹೀನೈಸುವುದು ಯಾ ಅಗೌರವಿಸುವುದಿಲ್ಲವೇ? ಇಲ್ಲವೇ ಇಲ್ಲ! ಯೇಸುವು ಮರಣದ ತನಕ ನಂಬಿಗಸ್ತನಾಗಿ ಉಳಿದನೆಂಬ ವಾಸ್ತವಾಂಶವು ಸೈತಾನನಿಗೆ ಒಂದು ಮಹಾ ಸೋಲು ಆಗಿತ್ತು ಮತ್ತು ಯೆಹೋವ ದೇವರಿಗೆ ಒಂದು ಮಹಾ ವಿಜಯವಾಗಿತ್ತು. ಯೇಸುವನ್ನು ಈ ರೀತಿಯಲ್ಲಿ ಪ್ರತಿನಿಧಿಸುವುದು ಸೈತಾನನ ಲೋಕದ ಮೇಲಿನ ಆತನ ವಿಜಯವನ್ನು ಸ್ಫುಟವಾಗಿ ಚಿತ್ರಿಸುತ್ತದೆ ಮತ್ತು ಮಾನವ ಕುಲದ ಕಡೆಗೆ ಯೆಹೋವ ಮತ್ತು ಯೇಸುವಿಗೆ ಇರುವ ಆಳವಾದ ಪ್ರೀತಿಯ ಒಂದು ಮರುಜ್ಞಾಪನವಾಗಿದೆ. (ಯೋಹಾನ 3:16; 15:13; ಹೋಲಿಸಿರಿ ಕೊಲೊಸ್ಸೆ 2:15.) ಯೇಸುವು ಹೀಗೆ ವಾಗ್ದತ್ತ ಸಂತಾನದವನಾಗಿ, ಸುರುಳಿಯನ್ನು ಬಿಚ್ಚಲು ಗಮನಾರ್ಹವಾಗಿ ಯೋಗ್ಯನಾಗಿದ್ದಾನೆ ಎಂದು ತೋರಿಸಲ್ಪಡುತ್ತಾನೆ.—ಆದಿಕಾಂಡ 3:15.
12. ಕುರಿಮರಿಯ ಏಳು ಕೊಂಬುಗಳು ಏನನ್ನು ಚಿತ್ರಿಸುತ್ತವೆ?
12 ಈ “ಕುರಿಮರಿ”ಯ ಬಗ್ಗೆ ನಮ್ಮ ಗಣ್ಯತೆಗೆ ಇನ್ನಾವುದು ಕೂಡಿಸುತ್ತದೆ? ಅದಕ್ಕೆ ಏಳು ಕೊಂಬುಗಳು ಇವೆ. ಬೈಬಲಿನಲ್ಲಿ ಕೊಂಬುಗಳು ಅನೇಕ ವೇಳೆ ಶಕ್ತಿ ಯಾ ಅಧಿಕಾರದ ಚಿಹ್ನೆಯಾಗಿವೆ, ಮತ್ತು ಏಳು ಪೂರ್ಣತೆಯನ್ನು ಸೂಚಿಸುತ್ತದೆ. (1 ಸಮುವೇಲ 2:1, 10 ಹೋಲಿಸಿರಿ; ಕೀರ್ತನೆ 112:9; 148:14.) ಹೀಗೆ, ಕುರಿಮರಿಯ ಏಳು ಕೊಂಬುಗಳು, ಯೆಹೋವನು ಯೇಸುವಿಗೆ ವಹಿಸಿಕೊಟ್ಟ ಅಧಿಕಾರದ ಸಂಪೂರ್ಣತೆಯನ್ನು ಪ್ರತಿನಿಧೀಕರಿಸುತ್ತದೆ. “ಈ ವಿಷಯಗಳ ವ್ಯವಸ್ಥೆಯಲ್ಲಿ ಮಾತ್ರವಲ್ಲದೆ, ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿಯೂ ಕೂಡ, ಸಕಲ ರಾಜತ್ವ, ಅಧಿಕಾರ, ಮಹತ್ವ, ಪ್ರಭುತ್ವಾದಿಗಳ ಮತ್ತು ಹೆಸರಿಸಲ್ಪಡುವ ಪ್ರತಿಯೊಂದರ ಮೇಲೆ ಅತಿ ಉಚ್ಚ ಸ್ಥಾನದಲ್ಲಿ”ಯೂ ಅವನು ಇದ್ದಾನೆ. (ಎಫೆಸ 1:20-23; 1 ಪೇತ್ರ 3:22) ಯೆಹೋವನು ಆತನನ್ನು ಸ್ವರ್ಗೀಯ ರಾಜನಾಗಿ 1914 ರಲ್ಲಿ ಸಿಂಹಾಸನಾರೂಢನಾಗಿ ಮಾಡಿದಂದಿನಿಂದ, ಯೇಸುವು ತನ್ನ ಅಧಿಕಾರವನ್ನು, ಸರಕಾರೀ ಅಧಿಕಾರವನ್ನು ವಿಶೇಷವಾಗಿ ಚಲಾಯಿಸತೊಡಗಿದ್ದಾನೆ.—ಕೀರ್ತನೆ 2:6.
13. (ಎ) ಕುರಿಮರಿಯ ಏಳು ಕಣ್ಣುಗಳು ಏನನ್ನು ಚಿತ್ರಿಸುತ್ತವೆ? (ಬಿ) ಕುರಿಮರಿಯು ಏನನ್ನು ಮಾಡಲು ಮುಂದುವರಿಯುತ್ತದೆ?
13 ಇನ್ನೂ ಅಧಿಕವಾಗಿ, ಕುರಿಮರಿಯ ಏಳು ಕಣ್ಣುಗಳಿಂದ ಚಿತ್ರಿಸಲ್ಪಟ್ಟಿರುವ “ದೇವರ ಏಳು ಆತ್ಮ” ಗಳೆಂದು ಅರ್ಥಕೊಡುವ ಪವಿತ್ರಾತ್ಮನಿಂದ ಯೇಸುವು ಪೂರ್ಣವಾಗಿ ತುಂಬಿಸಲ್ಪಟ್ಟಿದ್ದಾನೆ. ಯೆಹೋವನ ಕಾರ್ಯಕಾರೀ ಶಕ್ತಿಯು ಆತನ ಐಹಿಕ ಸೇವಕರ ಮೇಲೆ ಪೂರ್ಣವಾಗಿ ಹರಿಯುವ ಮಾಧ್ಯಮ ಯೇಸುವಾಗಿದ್ದಾನೆ. (ತೀತ 3:6) ಇದೇ ಆತ್ಮದ ಮೂಲಕವಾಗಿ ಭೂಮಿಯ ಮೇಲೆ ಸಂಭವಿಸುವಂಥ ಸಂಗತಿಗಳನ್ನು ಪರಲೋಕದಿಂದ ಆತನು ನೋಡುತ್ತಾನೆಂದು ವಿದಿತವಾಗುತ್ತದೆ. ಆತನ ತಂದೆಯಂತೆ ಯೇಸುವಿಗೆ ಪರಿಪೂರ್ಣ ವಿವೇಚನೆಯಿದೆ, ಯಾವುದೂ ಆತನ ಗಮನದಿಂದ ತಪ್ಪಿಸಿಕೊಳ್ಳುವುದಿಲ್ಲ. (ಕೀರ್ತನೆ 11:4 ಹೋಲಿಸಿರಿ; ಜೆಕರ್ಯ 4:10.) ಸ್ಪಷ್ಟವಾಗಿ, ಈ ಮಗನು—ಲೋಕವನ್ನು ಜಯಿಸಿದ ಸಮಗ್ರತಾ ಪಾಲಕನು; ಯೆಹೂದ ಕುಲದ ಬುಡ; ದಾವೀದನ ಬುಡ; ತನ್ನ ಜೀವವನ್ನು ಮಾನವ ಕುಲಕ್ಕಾಗಿ ಅರ್ಪಿಸಿದವನು; ಸಂಪೂರ್ಣ ಅಧಿಕಾರವುಳ್ಳವನು, ಪವಿತ್ರಾತ್ಮದ ಪೂರ್ಣತೆ ಮತ್ತು ಯೆಹೋವ ದೇವರಿಂದ ವಿವೇಚನೆಯುಳ್ಳವನು—ಹೌದು, ಈತನು ಯೆಹೋವನ ಕೈಯಿಂದ ಸುರುಳಿಯನ್ನು ಪಡೆಯಲು ಗಮನಾರ್ಹವಾಗಿಯೇ ಯೋಗ್ಯನಾಗಿರುತ್ತಾನೆ. ಯೆಹೋವನ ಉನ್ನತ ಸಂಸ್ಥೆಯಲ್ಲಿ ಈ ಸೇವಾ ನಿಯೋಗವನ್ನು ಸ್ವೀಕರಿಸಲು ಈತನು ಅಂಜುತ್ತಾನೋ? ಇಲ್ಲ! ಇದರ ಬದಲು, “ಅವನು ಹೋಗಿ ಸಿಂಹಾಸನಾಸೀನನಾದಾತನ ಬಲಗೈಯೊಳಗಿಂದ ಕೂಡಲೇ ಅದನ್ನು [ಆ ಸುರುಳಿಯನ್ನು] ತೆಗೆದುಕೊಂಡನು.” (ಪ್ರಕಟನೆ 5:7, NW) ಇಚ್ಛಾಪೂರ್ವಕವಾದ ಅನುಸರಣೆಯ ಎಂತಹ ಒಂದು ಉತ್ತಮ ಮಾದರಿ!
ಸ್ತುತಿಗೀತಗಳು
14. (ಎ) ಯೇಸುವು ಸುರುಳಿಯನ್ನು ತೆಗೆದುಕೊಂಡದ್ದಕ್ಕೆ ನಾಲ್ಕು ಜೀವಿಗಳು ಮತ್ತು 24 ಹಿರಿಯರು ಹೇಗೆ ಪ್ರತಿಕ್ರಿಯಿಸುತ್ತಾರೆ? (ಬಿ) ಇಪ್ಪತ್ತನಾಲ್ಕು ಹಿರಿಯರ ಕುರಿತು ಯೋಹಾನನು ಪಡೆದ ಸಮಾಚಾರವು ಅವರ ಗುರುತು ಮತ್ತು ಸ್ಥಾನಮಾನವನ್ನು ಹೇಗೆ ಸ್ಥಿರೀಕರಿಸುತ್ತದೆ?
14 ಯೆಹೋವನ ಸಿಂಹಾಸನದ ಮುಂದೆ ಆ ಇನ್ನಿತರರು ಹೇಗೆ ಪ್ರತಿಕ್ರಿಯಿಸುತ್ತಾರೆ? “ಮತ್ತು ಅವನು ಅದನ್ನು ತೆಗೆದುಕೊಂಡಾಗ, ಆ ನಾಲ್ಕು ಜೀವಿಗಳು ಮತ್ತು ಇಪ್ಪತ್ತನಾಲ್ಕು ಮಂದಿ ಹಿರಿಯರು ಕುರಿಮರಿಯಾದಾತನ ಮುಂದೆ ಬಿದ್ದರು, ಪ್ರತಿಯೊಬ್ಬನಲ್ಲಿ ಒಂದೊಂದು ವೀಣೆಯೂ ಮತ್ತು ಧೂಪದಿಂದ ತುಂಬಿದ್ದ ಚಿನ್ನದ ಧೂಪಾರತಿಗಳೂ ಇದ್ದವು, ಮತ್ತು ಧೂಪವೆಂದರೆ ದೇವ ಜನರ ಪ್ರಾರ್ಥನೆಗಳೆಂದು ಅರ್ಥ.” (ಪ್ರಕಟನೆ 5:8, NW) ಯೆಹೋವನ ಸಿಂಹಾಸನದ ಮುಂದೆ ನಿಂತಿದ್ದ ಕೆರೂಬಿಯರ ನಾಲ್ಕು ಜೀವಿಗಳಂತೆ, ಅವನ ಅಧಿಕಾರವನ್ನು ಅಂಗೀಕರಿಸುತ್ತಾ 24 ಹಿರಿಯರು ಯೇಸುವಿನ ಪಾದಕ್ಕೆ ಬೀಳುತ್ತಾರೆ. ಆದರೆ ಆ ಹಿರಿಯರಲ್ಲಿ ಮಾತ್ರವೇ ವೀಣೆಗಳು ಮತ್ತು ಧೂಪಾರತಿಗಳು ಇವೆ.a ಮತ್ತು ಅವರು ಮಾತ್ರವೇ ಒಂದು ಹೊಸ ಹಾಡನ್ನು ಈಗ ಹಾಡುತ್ತಾರೆ. (ಪ್ರಕಟನೆ 5:9) ಹೀಗೆ, ಅವರು ಪರಿಶುದ್ಧ “ದೇವರ ಇಸ್ರಾಯೇಲ್ಯ” ರಾದ 1,44,000 ಮಂದಿಯನ್ನು ಹೋಲುತ್ತಿದ್ದು, ವೀಣೆಗಳನ್ನು ತೆಗೆದುಕೊಂಡವರೂ, ಮತ್ತು ಒಂದು ಹೊಸ ಹಾಡನ್ನು ಹಾಡುವವರೂ ಕೂಡ ಆಗಿದ್ದಾರೆ. (ಗಲಾತ್ಯ 6:16; ಕೊಲೊಸ್ಸೆ 1:12; ಪ್ರಕಟನೆ 7:3-8; 14:1-4) ಇದಲ್ಲದೆ, 24 ಹಿರಿಯರು ಸ್ವರ್ಗೀಯ ಯಾಜಕತ್ವದ ಒಂದು ಕಾರ್ಯವನ್ನು—ಪುರಾತನ ಇಸ್ರಾಯೇಲಿನಲ್ಲಿ ಗುಡಾರದಲ್ಲಿ ಯೆಹೋವನಿಗೆ ಧೂಪ ಸುಡುತ್ತಿದ್ದ ಯಾಜಕರಿಂದ ಚಿತ್ರಿಸಲ್ಪಟ್ಟಿದೆ—ದೇವರು ಯೇಸುವಿನ ಯಾತನಾಕಂಭಕ್ಕೆ ಮೋಶೆಯ ನಿಯಮಶಾಸ್ತ್ರವನ್ನು ಜಡಿದು ಇಲ್ಲದಂತೆ ಮಾಡಿದಾಗ ಭೂಮಿಯಲ್ಲಿ ಮುಗಿದ ಒಂದು ಕಾರ್ಯವನ್ನು ನೆರವೇರಿಸುವವರಂತೆ ತೋರಿಸಲ್ಪಡುತ್ತಾರೆ. (ಕೊಲೊಸ್ಸೆ 2:14) ಇವೆಲ್ಲವುಗಳಿಂದ ನಾವು ಯಾವ ಸಮಾಪ್ತಿಗೆ ಬರುತ್ತೇವೆ? ಏನಂದರೆ ಇಲ್ಲಿ ‘ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಅವನೊಂದಿಗೆ ಸಾವಿರ ವರ್ಷ ರಾಜರಾಗಿ ಆಳುವ’ ಅಭಿಷಿಕ್ತ ಜಯಶಾಲಿಗಳು ತಮ್ಮ ಈ ಕಟ್ಟಕಡೆಯ ನೇಮಕದಲ್ಲಿ ಇರುವುದನ್ನು ಕಾಣಲಾಗುತ್ತದೆ.—ಪ್ರಕಟನೆ 20:6.
15. (ಎ) ಇಸ್ರಾಯೇಲಿನಲ್ಲಿ ಮಂಜೂಷವಿರುವ ಅತಿ ಪವಿತ್ರ ಸ್ಥಾನದಲ್ಲಿ ಯಾರು ಮಾತ್ರ ಪ್ರವೇಶಿಸುವ ಸುಯೋಗವನ್ನು ಹೊಂದಿದ್ದರು? (ಬಿ) ಅತಿ ಪವಿತ್ರ ಸ್ಥಾನವನ್ನು ಪ್ರವೇಶಿಸುವ ಮೊದಲು ಧೂಪವನ್ನು ಸುಡುವುದು ಮಹಾ ಯಾಜಕನಿಗೆ ಜೀವನ್ಮರಣಗಳ ವಿಷಯವಾಗಿತ್ತು ಏಕೆ?
15 ಪುರಾತನ ಇಸ್ರಾಯೇಲಿನಲ್ಲಿ, ಯೆಹೋವನ ಸಾಂಕೇತಿಕ ಸಾನ್ನಿಧ್ಯದ ಮುಂದೆ ಅತಿ ಪರಿಶುದ್ಧ ಸ್ಥಾನದೊಳಗೆ ಪ್ರವೇಶವು ಮಹಾ ಯಾಜಕನಿಗೆ ಮಾತ್ರ ಸೀಮಿತವಾಗಿತ್ತು. ಧೂಪವನ್ನು ಕೊಂಡೊಯ್ಯುವುದು ಅವನಿಗೆ ಜೀವನ್ಮರಣಗಳ ವಿಷಯವಾಗಿತ್ತು. ಯೆಹೋವನ ನಿಯಮವು ಹೇಳಿದ್ದು: “ಅವನು [ಆರೋನನು] ಯೆಹೋವನ ಸನ್ನಿಧಿಯಲ್ಲಿರುವ ವೇದಿಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತುಂಬಿಸಿ ಪರಿಮಳಧೂಪ ದ್ರವ್ಯದ ಚೂರ್ಣದಲ್ಲಿ ಎರಡು ಹಿಡಿ ತೆಗೆದುಕೊಂಡು ತೆರೆಯನ್ನು ದಾಟಿ ಆ ಧೂಪವನ್ನು ಯೆಹೋವನ ಸನ್ನಿಧಿಯಲ್ಲಿಯೇ ಕೆಂಡಗಳ ಮೇಲೆ ಹಾಕಬೇಕು. ಅವನಿಗೆ ಪ್ರಾಣ ನಷ್ಟವಾಗದಂತೆ ಧೂಪದ ಹೊಗೆ ಮೇಘದೋಪಾದಿಯಲ್ಲಿ ಆಜ್ಞಾಶಾಸನಗಳ ಮೇಲಣ ಕೃಪಾಸನವನ್ನು (ಮಂಜೂಷ, NW) ಮುಚ್ಚುವುದು.” (ಯಾಜಕಕಾಂಡ 16:12, 13) ಧೂಪವನ್ನು ಸುಟ್ಟ ಹೊರತಾಗಿ ಮಹಾ ಯಾಜಕನು ಅತಿ ಪರಿಶುದ್ಧ ಸ್ಥಾನದೊಳಗೆ ಯಶಸ್ವಿಯಾಗಿ ತೂರಿಕೊಂಡು ಹೋಗುವುದು ಅಸಾಧ್ಯವಾಗಿತ್ತು.
16. (ಎ) ವಿಷಯಗಳ ಕ್ರೈಸ್ತ ವ್ಯವಸ್ಥೆಯಲ್ಲಿ, ಪಡಿರೂಪದ ಅತಿ ಪವಿತ್ರ ಸ್ಥಾನವನ್ನು ಯಾರು ಪ್ರವೇಶಿಸುತ್ತಾರೆ? (ಬಿ) ಅಭಿಷಿಕ್ತ ಕ್ರೈಸ್ತರು ಯಾಕೆ ‘ಧೂಪವನ್ನು ಸುಡಬೇಕು’?
16 ಕ್ರೈಸ್ತ ವಿಷಯಗಳ ವ್ಯವಸ್ಥೆಯಲ್ಲಿ ಪಡಿರೂಪವಾಗಿ, ಮಹಾ ಯಾಜಕನಾದ ಯೇಸು ಕ್ರಿಸ್ತನು ಮಾತ್ರವೇ ಅಲ್ಲ, ಬದಲು 1,44,000 ಉಪಯಾಜಕರಲ್ಲಿ ಪ್ರತಿಯೊಬ್ಬರು ಕಟ್ಟಕಡೆಗೆ ಪ್ರತಿರೂಪದ ಅತಿ ಪವಿತ್ರ ಸ್ಥಾನದಲ್ಲಿ, ಅಂದರೆ ಪರಲೋಕದಲ್ಲಿ ಯೆಹೋವನ ಸಾನ್ನಿಧ್ಯದ ಸ್ಥಾನದಲ್ಲಿ ಪ್ರವೇಶಿಸುತ್ತಾರೆ. (ಇಬ್ರಿಯ 10:19-23) ಇಲ್ಲಿ 24 ಹಿರಿಯರಿಂದ ಪ್ರತಿನಿಧೀಕರಿಸಲಾದಂತೆ, ಈ ಯಾಜಕರುಗಳಿಗೆ ಅವರು ಧೂಪವನ್ನು ಸುಡದೇ ಇದ್ದರೆ, ಅಂದರೆ ಯೆಹೋವನಿಗೆ ಪ್ರಾರ್ಥನೆಗಳನ್ನು ಮತ್ತು ವಿಜ್ಞಾಪನೆಗಳನ್ನು ಎಡೆಬಿಡದೆ ಸಮರ್ಪಿಸದೆ ಇದ್ದರೆ, ಅತಿ ಪವಿತ್ರ ಸ್ಥಾನದೊಳಗೆ ಪ್ರವೇಶಿಸುವುದು ಅಸಾಧ್ಯವಾಗಿದೆ.—ಇಬ್ರಿಯ 5:7; ಯೂದ 20, 21; ಕೀರ್ತನೆ 141:2 ಹೋಲಿಸಿರಿ.
ಒಂದು ಹೊಸ ಹಾಡು
17. (ಎ) ಯಾವ ಹೊಸ ಹಾಡನ್ನು 24 ಹಿರಿಯರು ಹಾಡುತ್ತಾರೆ? (ಬಿ) “ಹೊಸ ಹಾಡು” ಎಂಬ ವಾಕ್ಸರಣಿಯನ್ನು ಬೈಬಲಿನಲ್ಲಿ ಸಾಮಾನ್ಯವಾಗಿ ಹೇಗೆ ಬಳಸಲಾಗಿದೆ?
17 ಸರ್ವ ಮಾಧುರ್ಯವುಳ್ಳ ಒಂದು ಹಾಡು ಈಗ ಧ್ವನಿಸುತ್ತದೆ. ಅದು ಆತನ ಯಾಜಕ ಸಂಗಾತಿಗಳಾದ 24 ಹಿರಿಯರಿಂದ ಕುರಿಮರಿಗೆ ಹಾಡಲ್ಪಡುತ್ತದೆ: “ಮತ್ತು ಅವರು ಒಂದು ಹೊಸ ಹಾಡನ್ನು ಹಾಡುತ್ತಾ ಹೇಳುವುದು: ‘ನೀನು ಸುರುಳಿಯನ್ನು ತೆಗೆದುಕೊಂಡು ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯನೇ, ಯಾಕಂದರೆ ನೀನು ಕೊಯ್ಯಲ್ಪಟ್ಟಿ ಮತ್ತು ನಿನ್ನ ರಕ್ತದಿಂದ ಪ್ರತಿ ಕುಲ ಭಾಷೆ ಪ್ರಜೆ ಜನಾಂಗಗಳವರಿಂದ ಮನುಷ್ಯರನ್ನು ದೇವರಿಗಾಗಿ ಕೊಂಡುಕೊಂಡಿ.” (ಪ್ರಕಟನೆ 5:9, NW) “ಹೊಸ ಹಾಡು” ಎಂಬ ವಾಕ್ಸರಣಿಯು ಬೈಬಲಿನಲ್ಲಿ ಅನೇಕ ಸಲ ಬರುತ್ತದೆ ಮತ್ತು ಯಾವುದಾದರೂ ರಕ್ಷಣೆಯ ಮಹಾ ಕೃತ್ಯಕ್ಕಾಗಿ ಯೆಹೋವನನ್ನು ಸ್ತುತಿಸುವುದಕ್ಕೆ ಇದು ಸಾಮಾನ್ಯವಾಗಿ ಸೂಚಿಸುತ್ತದೆ. (ಕೀರ್ತನೆ 96:1; 98:1; 144:9) ಹೀಗೆ, ಹಾಡು ಹೊಸತಾಗಿದೆ, ಯಾಕಂದರೆ ಹಾಡುಗಾರನು ಈಗ ಯೆಹೋವನ ಇನ್ನೂ ಹೆಚ್ಚಿನ ಬೆರಗುಗೊಳಿಸುವ ಕೃತ್ಯಗಳನ್ನು ಪ್ರಚುರಪಡಿಸಬಲ್ಲನು ಮತ್ತು ಆತನ ಮಹಿಮಾಭರಿತ ನಾಮಕ್ಕೆ ನವೀಕರಿಸಲ್ಪಟ್ಟ ಗಣ್ಯತೆಯನ್ನು ವ್ಯಕ್ತಪಡಿಸಬಲ್ಲನು.
18. ತಮ್ಮ ಹೊಸ ಹಾಡಿನೊಂದಿಗೆ 24 ಹಿರಿಯರು ಯಾವುದಕ್ಕಾಗಿ ಯೇಸುವನ್ನು ಸ್ತುತಿಸುತ್ತಾರೆ?
18 ಆದಾಗ್ಯೂ ಇಲ್ಲಿ 24 ಹಿರಿಯರು ಯೆಹೋವನ ಮುಂದೆ ಹಾಡುವ ಬದಲು ಯೇಸುವಿನ ಮುಂದೆ ಒಂದು ಹೊಸ ಹಾಡನ್ನು ಹಾಡುತ್ತಾರೆ. ಆದರೆ ಮೂಲಸೂತ್ರವು ಅದೇ ಆಗಿದೆ. ದೇವರ ಮಗನೋಪಾದಿ ಯೇಸುವು ತಮ್ಮ ಪರವಾಗಿ ಮಾಡಿದ ಹೊಸ ವಿಷಯಗಳಿಗೆ ಅವರು ಆತನನ್ನು ಸ್ತುತಿಸುತ್ತಾರೆ. ತನ್ನ ರಕ್ತದ ಮೂಲಕ ಆತನು ಹೊಸ ಒಡಂಬಡಿಕೆಗೆ ಮಧ್ಯಸ್ಥಗಾರನಾದನು ಮತ್ತು ಹೀಗೆ ಯೆಹೋವನ ಸ್ವಕೀಯ ಸ್ವತ್ತಿನೋಪಾದಿ ಹೊಸ ಜನಾಂಗವೊಂದನ್ನು ಹೊರತರಲು ಸಾಧ್ಯ ಮಾಡಿದನು. (ರೋಮಾಪುರ 2:28, 29; 1 ಕೊರಿಂಥ 11:25; ಇಬ್ರಿಯ 7:18-25) ಈ ಹೊಸ ಆತ್ಮಿಕ ಜನಾಂಗದ ಸದಸ್ಯರು ಅನೇಕ ಮಾಂಸಿಕ ಜನಾಂಗಗಳಿಂದ ಬಂದರು, ಆದರೆ ಯೇಸುವು ಇವರನ್ನು ಒಂದು ಸಭೆಯೊಳಗೆ ಒಂದೇ ಜನಾಂಗದೋಪಾದಿ ಐಕ್ಯಗೊಳಿಸಿದನು.—ಯೆಶಾಯ 26:2; 1 ಪೇತ್ರ 2:9, 10.
19. (ಎ) ಅವರ ಅಪನಂಬಿಗಸ್ತಿಕೆಯ ಕಾರಣದಿಂದ ಯಾವ ಆಶೀರ್ವಾದವನ್ನು ಮಾಂಸಿಕ ಇಸ್ರಾಯೇಲ್ಯರು ಪಡೆಯಲು ತಪ್ಪಿಹೋದರು? (ಬಿ) ಯೆಹೋವನ ಹೊಸ ಜನಾಂಗವು ಯಾವ ಆಶೀರ್ವಾದದಲ್ಲಿ ಆನಂದಿಸುತ್ತದೆ?
19 ಹಿಂದೆ ಮೋಶೆಯ ದಿನಗಳಲ್ಲಿ ಯೆಹೋವನು ಇಸ್ರಾಯೇಲ್ಯರನ್ನು ಒಂದು ಜನಾಂಗವನ್ನಾಗಿ ರೂಪಿಸಿದಾಗ, ಅವನು ಅವರೊಂದಿಗೆ ಒಡಂಬಡಿಕೆಯೊಂದನ್ನು ಮಾಡಿಕೊಂಡನು ಮತ್ತು ಆ ಒಡಂಬಡಿಕೆಗೆ ಅವರು ನಂಬಿಗಸ್ತರಾಗಿ ಬಾಳಿದರೆ, ಅವರು ಆತನ ಮುಂದೆ ಯಾಜಕರ ಒಂದು ರಾಜ್ಯವಾಗುವರೆಂದು ವಾಗ್ದಾನಿಸಿದನು. (ವಿಮೋಚನಕಾಂಡ 19:5, 6) ಇಸ್ರಾಯೇಲ್ಯರು ನಂಬಿಗಸ್ತರಾಗಿ ಉಳಿಯಲಿಲ್ಲ ಮತ್ತು ಆ ವಾಗ್ದಾನದ ನೆರವೇರಿಕೆಯನ್ನು ಅನುಭವಿಸಲಿಲ್ಲ. ಇನ್ನೊಂದು ಪಕ್ಕದಲ್ಲಿ, ಯೇಸುವು ಮಧ್ಯಸ್ಥನಾಗಿರುವ ಹೊಸ ಒಡಂಬಡಿಕೆಯ ಆಧಾರದ ಮೇಲೆ ರೂಪಿಸಲ್ಪಟ್ಟ ಹೊಸ ಜನಾಂಗವು ನಂಬಿಗಸ್ತವಾಗಿ ಉಳಿದದೆ. ಆದುದರಿಂದ ಅದರ ಸದಸ್ಯರು ಭೂಮಿಯ ಮೇಲೆ ರಾಜರಾಗಿ ಆಳಲಿರುವರು ಮತ್ತು ಮಾನವ ಕುಲದಲ್ಲಿನ ಸಹೃದಯವುಳ್ಳವರು ಯೆಹೋವನ ಹತ್ತಿರ ರಾಜಿ ಮಾಡುವಂತೆ ಸಹಾಯ ಕೊಡುತ್ತಾ, ಯಾಜಕರೋಪಾದಿ ಸೇವೆ ಕೂಡ ಸಲ್ಲಿಸುವರು. (ಕೊಲೊಸ್ಸೆ 1:20) ಅದು ಈ ಹೊಸ ಹಾಡು ಉದ್ಗರಿಸುವಂತೆಯೇ ಇದೆ: “ಮತ್ತು ಅವರನ್ನು ನಮ್ಮ ದೇವರಿಗೋಸ್ಕರ ರಾಜ್ಯವನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದ್ದಿ, ಮತ್ತು ಅವರು ಭೂಮಿಯ ಮೇಲೆ ರಾಜರಾಗಿ ಆಳುವರು.” (ಪ್ರಕಟನೆ 5:10, NW) ಮಹಿಮಾಭರಿತ ಯೇಸುವಿಗೆ ಈ ಹೊಸ ಸ್ತುತಿಗೀತೆಯನ್ನು ಹಾಡುವುದರಲ್ಲಿ ಈ 24 ಹಿರಿಯರುಗಳಿಗೆ ಎಂಥಾ ಆನಂದ ದೊರಕುತ್ತದೆ!
ಒಂದು ಸ್ವರ್ಗೀಯ ಮೇಳಗೀತ
20. ಈಗ ಕುರಿಮರಿಗೆ ಸ್ತುತಿಯ ಯಾವ ಹಾಡು ಧ್ವನಿಸಲ್ಪಡುತ್ತದೆ?
20 ಸ್ವರ್ಗೀಯ ಯೆಹೋವನ ಸಂಸ್ಥೆಯ ಬಹು ಸಂಖ್ಯಾತರು ಈ ಹೊಸ ಹಾಡಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಅವರ ಹೃದಯಪೂರ್ವಕ ಒಮ್ಮತವನ್ನು ನೋಡುವುದರಲ್ಲಿ ಯೋಹಾನನು ಪುಳಕಿತನಾಗುತ್ತಾನೆ: “ಮತ್ತು ನಾನು ನೋಡಿದೆನು, ಮತ್ತು ಸಿಂಹಾಸನದ ಸುತ್ತಲೂ ಅನೇಕ ದೇವದೂತರ ಮತ್ತು ಜೀವಿಗಳ ಮತ್ತು ಹಿರಿಯರ ಒಂದು ಸರ್ವವನ್ನು ನಾನು ಕೇಳಿದೆನು, ಮತ್ತು ಅವರ ಸಂಖ್ಯೆಯು ಕೋಟ್ಯನುಕೋಟಿಯಾಗಿಯೂ ಲಕ್ಷೋಪಲಕ್ಷವಾಗಿಯೂ ಇದ್ದು, ಮಹಾಶಬ್ದದಿಂದ ಅವರು ಹೇಳುತ್ತಿದ್ದರು: ‘ವಧಿತನಾದ ಕುರಿಮರಿಯಾದಾತನು ಬಲ, ಐಶ್ವರ್ಯ, ವಿವೇಕ, ಸಾಮರ್ಥ್ಯ, ಮಾನ, ಪ್ರಭಾವ, ಆಶೀರ್ವಾದಗಳನ್ನು ಹೊಂದುವುದಕ್ಕೆ ಯೋಗ್ಯನು.’” (ಪ್ರಕಟನೆ 5:11, 12, NW) ಎಂತಹ ಒಂದು ಭಾವೂತ್ಪಾದಕ ಸ್ತುತಿಗೀತೆ!
21. ಕುರಿಮರಿಯನ್ನು ಸ್ತುತಿಸುವುದು ಯೆಹೋವನ ಸಾರ್ವಭೌಮತೆ ಯಾ ಸ್ಥಾನಮಾನವನ್ನು ಕುಂದಿಸುತ್ತದೋ? ವಿವರಿಸಿರಿ.
21 ಯೇಸುವು ಈಗ ಯೆಹೋವ ದೇವರನ್ನು ಸ್ಥಾನಪಲ್ಲಟಗೊಳಿಸಿದ್ದಾನೆ ಮತ್ತು ಸಮಸ್ತ ಸೃಷ್ಟಿಯು ಅವನ ತಂದೆಯ ಬದಲು ಯೇಸುವನ್ನು ಸ್ತುತಿಸಲು ತಿರುಗಿಕೊಂಡಿದೆ ಎಂದು ಇದರ ಅರ್ಥವೂ? ಎಂದಿಗೂ ಹಾಗಲ್ಲ! ಬದಲು, ಈ ಸ್ತುತಿಗೀತೆಯು ಅಪೊಸ್ತಲ ಪೌಲನು ಏನನ್ನು ಬರೆದನೋ ಅದಕ್ಕೆ ಹೊಂದಿಕೆಯಲ್ಲಿದೆ: “ಈ ಕಾರಣದಿಂದ ದೇವರು ಆತನನ್ನು [ಯೇಸುವನ್ನು] ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಆದದರಿಂದ ಸ್ವರ್ಗ ಮರ್ತ್ಯ ಮತ್ತು ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು, ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು.” (ಫಿಲಿಪ್ಪಿ 2:9-11) ಸರ್ವಸೃಷ್ಟಿಯ ಮುಂದಿರುವ ಪ್ರಧಾನ ವಿವಾದಾಂಶ—ಯೆಹೋವನ ನ್ಯಾಯವಾದ ಪರಮಾಧಿಕಾರ—ವನ್ನು ತೀರ್ಮಾನಿಸುವುದರಲ್ಲಿ ಯೇಸುವಿಗಿದ್ದ ಭಾಗದ ಕಾರಣದಿಂದಲೇ ಯೇಸುವು ಇಲ್ಲಿ ಹೊಗಳಲ್ಪಡುತ್ತಾನೆ. ಇದು ಎಂತಹ ಮಹಿಮೆಯನ್ನು ತಂದಿದೆ!
ಉಕ್ಕೇರುವ ಒಂದು ಗೀತೆ
22. ಯಾವ ಗೀತೆಯೊಂದಿಗೆ ಭೂಕ್ಷೇತ್ರದಿಂದ ಬರುವ ಸರ್ವಗಳು ಜತೆಗೂಡುತ್ತವೆ?
22 ಯೋಹಾನನಿಂದ ವರ್ಣಿಸಲಾದ ದೃಶ್ಯದಿಂದ, ಪರಲೋಕದ ಸೈನ್ಯಗಳು ಯೇಸುವಿನ ನಂಬಿಗಸ್ತಿಕೆ ಮತ್ತು ಆತನ ಸ್ವರ್ಗೀಯ ಅಧಿಕಾರವನ್ನು ಅಂಗೀಕಾರ ಮಾಡುತ್ತಾ, ಆತನಿಗೆ ಮಧುರವಾದ ಉದ್ಘೋಷವನ್ನು ಸಲ್ಲಿಸುತ್ತವೆ. ಇದರಲ್ಲಿ, ತಂದೆ ಮತ್ತು ಮಗ ಇಬ್ಬರನ್ನೂ ಸ್ತುತಿಸುವುದರಲ್ಲಿ ಇವರೊಂದಿಗೆ ಭೂಕ್ಷೇತ್ರದಿಂದ ಬಂದ ಸರ್ವಗಳು ಜತೆಗೂಡಲ್ಪಡುತ್ತವೆ. ಒಬ್ಬ ಮಾನವ ಪುತ್ರನ ಸಾಧನೆಗಳು ಹೆತ್ತವರಿಗೆ ಮಹಾ ಖ್ಯಾತಿಯನ್ನು ತರುವಂತೆಯೇ, ಯೇಸುವಿನ ನಿಷ್ಠೆಯ ಮಾರ್ಗಕ್ರಮವು ಎಲ್ಲಾ ಸೃಷ್ಟಿಯಲ್ಲಿ “ತಂದೆಯಾದ ದೇವರಿಗೆ ಘನವನ್ನು” ಫಲಿಸುವುದು. ಹೀಗೆ ಯೋಹಾನನು ವರದಿಸುವುದನ್ನು ಮುಂದರಿಸುತ್ತಾನೆ: “ಮತ್ತು ಆಕಾಶದಲ್ಲಿಯೂ ಭೂಮಿಯ ಮೇಲೆಯೂ ಭೂಮಿಯ ಕೆಳಗೆಯೂ ಸಮುದ್ರದಲ್ಲಿಯೂ ಇರುವ ಎಲ್ಲಾ ಜೀವಿಗಳು ಮತ್ತು ಅವುಗಳಲ್ಲಿರುವ ಎಲ್ಲಾ ವಸ್ತುಗಳು ಹೀಗೆ ಹೇಳುವುದನ್ನು ನಾನು ಕೇಳಿದೆನು: ‘ಸಿಂಹಾಸನಾಸೀನನಿಗೂ ಕುರಿಮರಿಗೂ ಅನುಗ್ರಹ, ಗೌರವ, ಮಹಿಮೆ ಮತ್ತು ಬಲಗಳು ಸದಾ ಸರ್ವದಾ ಇರಲಿ.’”—ಪ್ರಕಟನೆ 5:13, NW.
23, 24. (ಎ) ಸ್ವರ್ಗದಲ್ಲಿ ಯಾವಾಗ, ಮತ್ತು ಭೂಮಿಯಲ್ಲಿ ಈ ಗೀತವು ಯಾವಾಗ ಆರಂಭಿಸುತ್ತದೆ ಎಂದು ಯಾವುದು ಸೂಚಿಸುತ್ತದೆ? (ಬಿ) ವರ್ಷಗಳು ಸಂದ ಹಾಗೆಯೇ ಗೀತೆಯ ಮೊತ್ತವು ಉಕ್ಕೇರುವುದು ಹೇಗೆ?
23 ಈ ಉತ್ಕೃಷ್ಟ ಗೀತೆಯು ಯಾವಾಗ ಧ್ವನಿಸುತ್ತದೆ? ಕರ್ತನ ದಿನದ ಆದಿಯಲ್ಲಿಯೇ ಇದು ಪ್ರಾರಂಭವಾಯಿತು. ಸೈತಾನ ಮತ್ತು ಆತನ ದೆವ್ವಗಳು ಪರಲೋಕದಿಂದ ದೊಬ್ಬಲ್ಪಟ್ಟ ನಂತರ “ಪರಲೋಕದಲ್ಲಿರುವ ಪ್ರತಿಯೊಂದು ಜೀವಿಯು” ಈ ಸ್ತುತಿಗೀತೆಯಲ್ಲಿ ಸೇರಿಕೊಳ್ಳಸಾಧ್ಯವಿತ್ತು. ಮತ್ತು ದಾಖಲೆಯು ತೋರಿಸುವ ಪ್ರಕಾರ 1919 ರಿಂದ ಭೂಮಿಯ ಮೇಲೆ ಬೆಳೆಯುತ್ತಿರುವ ಒಂದು ಜನಸ್ತೋಮವು ಯೆಹೋವನನ್ನು ಸ್ತುತಿಸುವುದರಲ್ಲಿ ತಮ್ಮ ಧ್ವನಿಗಳನ್ನು ಜತೆಗೂಡಿಸಿದೆ, ಕೆಲವು ಸಾವಿರದಿಂದ 1990 ಗಳ ಆದಿಭಾಗದಲ್ಲಿ ಇವರು ನಾಲ್ವತ್ತು ಲಕ್ಷಕ್ಕಿಂತಲೂ ಹೆಚ್ಚಾಗಿ ವೃದ್ಧಿಗೊಂಡಿರುತ್ತಾರೆ.b ಸೈತಾನನ ಭೂವ್ಯವಸ್ಥೆಯು ನಾಶಗೊಳಿಸಲ್ಪಟ್ಟ ಅನಂತರ, “ಭೂಮಿಯಲ್ಲಿನ . . . ಪ್ರತಿಯೊಂದು ಜೀವಿಯು” ಯೆಹೋವನ ಮತ್ತು ಆತನ ಮಗನ ಸ್ತುತಿಗಳನ್ನು ಹಾಡಲಿರುವುದು. ಯೆಹೋವನ ಸ್ವಂತ ಕ್ಲುಪ್ತ ಸಮಯದಲ್ಲಿ, ಮೃತಪಟ್ಟ ಅಗಣಿತ ಲಕ್ಷಾಂತರ ಮಂದಿಗಳ ಪುನರುತ್ಥಾನವು ಆರಂಭವಾಗುವುದು ಮತ್ತು ಅನಂತರ ದೇವರ ಜ್ಞಾಪಕದಲ್ಲಿರುವ “ಭೂಮಿಯ ಕೆಳಗಣ . . . ಪ್ರತಿಯೊಂದು ಜೀವಿಗೆ” ಗೀತೆಯನ್ನು ಹಾಡುವುದರಲ್ಲಿ ಸೇರಿಕೊಳ್ಳುವ ಸಂದರ್ಭ ಇರುವುದು.
24 ಈಗಾಗಲೇ “ಭೂಮಿಯ ಕಟ್ಟಕಡೆಯಿಂದ . . . ಸಮುದ್ರದಿಂದ ಮತ್ತು . . . ದ್ವೀಪಗಳಿಂದ” ಬಂದ ಲಕ್ಷಾಂತರ ಮಾನವರು ಯೆಹೋವನ ಭೌಗೋಲಿಕ ಸಂಸ್ಥೆಯೊಂದಿಗೆ ಜತೆಗೂಡುತ್ತಾ ಒಂದು ಹೊಸ ಹಾಡನ್ನು ಹಾಡುತ್ತಾರೆ. (ಯೆಶಾಯ 42:10; ಕೀರ್ತನೆ 150:1-6) ಮಾನವ ಕುಲವು ಪರಿಪೂರ್ಣತೆಗೆ ಏರಿಸಲ್ಪಟ್ಟಾಗ ಈ ಆನಂದಮಯ ಸ್ತುತಿಯು, ಸಹಸ್ರ ವರ್ಷಗಳ ಕೊನೆಯಲ್ಲಿ ಒಂದು ತುತ್ತತುದಿಗೆ ಮುಟ್ಟುವುದು. ಆ ಪುರಾತನ ಸರ್ಪವೂ, ಪ್ರಧಾನ ವಂಚಕನೂ ಆದ ಸೈತಾನನು ತಾನೇ ಅದಿಕಾಂಡ 3:15ರ ಪೂರ್ಣ ನೆರವೇರಿಕೆಯಲ್ಲಿ, ಆಗ ನಾಶಗೊಳಿಸಲ್ಪಡಲಿರುವನು ಮತ್ತು ಒಂದು ಜಯಭರಿತ ಪರಮಾವಧಿಯಲ್ಲಿ, ಆತ್ಮ ಮತ್ತು ಮಾನವ ಜೀವಿಗಳು, ಹೀಗೆ ಎಲ್ಲಾ ಜೀವಂತ ಸೃಷ್ಟಿಯು ಐಕಮತ್ಯದ ಶ್ರುತಿಯಲ್ಲಿ ಹೀಗೆ ಹಾಡುವುದು: “ಸಿಂಹಾಸನಾಸೀನನಿಗೂ ಕುರಿಮರಿಗೂ ಅನುಗ್ರಹ, ಗೌರವ, ಮಹಿಮೆ ಮತ್ತು ಬಲಗಳು ಸದಾ ಸರ್ವದಾ ಇರಲಿ.” ಸಮಗ್ರ ವಿಶ್ವದಲ್ಲಿ ಇದಕ್ಕೆ ಭಿನ್ನವಾದ ಯಾವುದೇ ಧ್ವನಿಯು ಅಲ್ಲಿ ಇರುವುದಿಲ್ಲ.
25. (ಎ) ವಿಶ್ವ ಗೀತೆಯ ಯೋಹಾನನ ದಾಖಲೆಯನ್ನು ಓದುವುದು, ನಾವೇನು ಮಾಡುವಂತೆ ನಮ್ಮನ್ನು ಪ್ರಚೋದಿಸುತ್ತದೆ? (ಬಿ) ದರ್ಶನವು ಕೊನೆಗೊಳ್ಳುವಾಗ ನಾಲ್ಕು ಜೀವಿಗಳು ಮತ್ತು 24 ಹಿರಿಯರು ನಮಗೋಸ್ಕರ ಯಾವ ಅತ್ಯುತ್ಕೃಷ್ಟ ಮಾದರಿಯನ್ನು ಇಟ್ಟಿರುತ್ತಾರೆ?
25 ಅದು ಎಂತಹ ಒಂದು ಆನಂದಮಯ ಸಮಯವಾಗಿರುವುದು! ನಿಜವಾಗಿಯೂ, ಯೋಹಾನನು ಇಲ್ಲಿ ವಿವರಿಸಿದವುಗಳು ನಮ್ಮ ಹೃದಯಗಳನ್ನು ಸಂತೋಷದಿಂದ ತುಂಬಿಸುತ್ತವೆ ಮತ್ತು ಯೆಹೋವ ದೇವರಿಗೆ ಮತ್ತು ಯೇಸು ಕ್ರಿಸ್ತನಿಗೆ ಹೃದಯಪೂರ್ವಕ ಸ್ತುತಿಗಳನ್ನು ಹಾಡುವುದರಲ್ಲಿ ಸ್ವರ್ಗೀಯ ಸಮೂಹದೊಂದಿಗೆ ಜತೆಗೂಡಲು ನಮ್ಮ ಹೃದಯಗಳು ಉಕ್ಕೇರುತ್ತವೆ. ಒಳ್ಳೆಯ ಕಾರ್ಯಗಳಲ್ಲಿ ತಾಳಿಕೊಂಡಿರಲು ಎಂದೆಂದಿಗಿಂತಲೂ ಈಗ ನಾವು ಹೆಚ್ಚು ನಿಶ್ಚಯಾತ್ಮಕರಾಗಿರುವುದಿಲ್ಲವೇ? ನಾವು ಹೀಗೆ ಮಾಡುವುದಾದರೆ ಯೆಹೋವನ ಸಹಾಯದಿಂದ ಸಂತೋಷದ ಪರಾಕಾಷ್ಠೆಯಲ್ಲಿ ವೈಯಕ್ತಿಕವಾಗಿ ನಾವು ಅಲ್ಲಿದ್ದುಕೊಂಡು, ಸ್ತುತಿಯ ವಿಶ್ವವ್ಯಾಪಕ ಮೇಳಗೀತದಲ್ಲಿ ನಮ್ಮ ಧ್ವನಿಗಳನ್ನು ಕೂಡಿಸುವುದನ್ನು ನಾವು ನಿರೀಕ್ಷಿಸಬಹುದು. ಖಂಡಿತವಾಗಿ, ಕೆರೂಬಿಗಳಾದ ನಾಲ್ಕು ಜೀವಿಗಳು ಮತ್ತು ಪುನರುತಿತ್ಥ ಅಭಿಷಿಕ್ತ ಕ್ರೈಸ್ತರು ಪೂರ್ಣ ಸಹಮತದಲ್ಲಿ ಇರುತ್ತಾರೆ; ಯಾಕಂದರೆ ದರ್ಶನವು ಈ ಮಾತುಗಳಲ್ಲಿ ಕೊನೆಗೊಳ್ಳುತ್ತದೆ: “ಮತ್ತು ಆ ನಾಲ್ಕು ಜೀವಿಗಳು, ‘ಆಮೆನ್!’ ಎಂದು ಹೇಳುತ್ತಾ ಹೋದವು ಮತ್ತು ಆ ಹಿರಿಯರು ಅಡ್ಡಬಿದ್ದು ಆರಾಧಿಸಿದರು.”—ಪ್ರಕಟನೆ 5:14, NW.
26. ಯಾವುದರಲ್ಲಿ ನಾವು ನಂಬಿಕೆಯನ್ನು ಪ್ರದರ್ಶಿಸತಕ್ಕದ್ದು, ಮತ್ತು ಕುರಿಮರಿಯು ಏನು ಮಾಡಲು ಸಿದ್ಧಗೊಳ್ಳುತ್ತಾ ಇದೆ?
26 ಪ್ರಿಯ ವಾಚಕರಾದ ನೀವು, ಕುರಿಮರಿಯ—‘ಯೋಗ್ಯನಾದವನ’— ಯಜ್ಞದ ಮೇಲೆ ನಂಬಿಕೆಯನ್ನು ಪ್ರದರ್ಶಿಸಿರಿ ಮತ್ತು “ಸಿಂಹಾಸನಾಸೀನನಾಗಿರುವ” ಯೆಹೋವನನ್ನು ಆರಾಧಿಸಲು ಮತ್ತು ಸೇವಿಸಲು ನಿಮ್ಮ ದೀನ ಪ್ರಯತ್ನಗಳಲ್ಲಿ ಆಶೀರ್ವದಿಸಲ್ಪಡುವಂತಾಗಲಿ. ಇಂದು ಆವಶ್ಯಕವಾದ “ಹೊತ್ತು ಹೊತ್ತಿಗೆ [ಆತ್ಮಿಕ] ಆಹಾರವನ್ನು ಅಳೆದು ಕೊಡುವ” ಯೋಹಾನ ವರ್ಗವು ನಿಮಗೆ ಸಹಾಯ ಮಾಡಲಿ. (ಲೂಕ 12:42) ಆದರೆ ನೋಡಿರಿ! ಕುರಿಮರಿಯು ಏಳು ಮುದ್ರೆಗಳನ್ನು ಒಡೆಯಲು ಸಿದ್ಧಗೊಳ್ಳುತ್ತಾ ಇದೆ. ನಮಗೆ ಈಗ ಯಾವ ಅಚ್ಚರಿಯ ಪ್ರಕಟನೆಗಳು ಕಾದಿವೆ?
[ಅಧ್ಯಯನ ಪ್ರಶ್ನೆಗಳು]
a ವ್ಯಾಕರಣಬದ್ಧವಾಗಿ ಮಾತಾಡುವುದಾದರೆ, “ವೀಣೆಗಳೂ, ಧೂಪದಿಂದ ತುಂಬಿದ್ದ ಧೂಪಾರತಿಗಳೂ ಇದ್ದವು” ಎಂಬ ವಾಕ್ಸರಣಿಯು ಹಿರಿಯರನ್ನು ಮತ್ತು ನಾಲ್ಕು ಜೀವಿಗಳನ್ನು, ಹೀಗೆ ಇಬ್ಬರಿಗೂ ಸೂಚಿಸಬಲ್ಲದು. ಆದಾಗ್ಯೂ ಪೂರ್ವಾಪರವು ಕೇವಲ 24 ಹಿರಿಯರುಗಳನ್ನು ಮಾತ್ರವೇ ಈ ವಾಕ್ಸರಣಿಯು ಸೂಚಿಸುತ್ತದೆಂಬುದನ್ನು ಸ್ಪಷ್ಟಗೊಳಿಸುತ್ತದೆ.
b ಪುಟ 64 ರಲ್ಲಿರುವ ತಖ್ತೆಯನ್ನು ನೋಡಿರಿ.
[ಪುಟ 97 ರಲ್ಲಿ ಇಡೀ ಪುಟದ ಚಿತ್ರ]