ಮಹಿಮಾನ್ವಿತ ರಾಜನಾದ ಕ್ರಿಸ್ತನಿಗೆ ಜೈಕಾರವೆತ್ತಿ!
“ ಆಡಂಬರದಿಂದ ವಾಹನಾರೂಢನಾಗಿ ವಿಜಯೋತ್ಸವದೊಡನೆ ಹೊರಡೋಣವಾಗಲಿ.”—ಕೀರ್ತ. 45:4.
1, 2. ನಾವೇಕೆ 45ನೇ ಕೀರ್ತನೆಗೆ ಗಮನಕೊಡಬೇಕು?
ಮಹಿಮಾನ್ವಿತ ರಾಜನೊಬ್ಬನು ಸತ್ಯ ಮತ್ತು ನೀತಿಯನ್ನು ಸ್ಥಾಪಿಸುವುದಕ್ಕಾಗಿ, ಶತ್ರುಗಳನ್ನು ಸದೆಬಡಿಯಲಿಕ್ಕಾಗಿ ಮುನ್ನುಗ್ಗುತ್ತಾನೆ. ಶತ್ರುಗಳ ಮೇಲೆ ಅಂತಿಮ ವಿಜಯವನ್ನು ಸಾಧಿಸಿದ ಬಳಿಕ ಆತನು ಚೆಲುವೆಯಾದ ವಧುವನ್ನು ವಿವಾಹವಾಗುತ್ತಾನೆ. ಆ ರಾಜನನ್ನು ಮುಂದಣ ಸಂತತಿಗಳವರೆಲ್ಲರು ಸ್ಮರಿಸುತ್ತಾ ಹಾಡಿಹೊಗಳುತ್ತಾರೆ. ಇದೇ 45ನೇ ಕೀರ್ತನೆಯ ತಿರುಳು.
2 ಆದರೆ ಈ ಕೀರ್ತನೆಯಲ್ಲಿರುವುದು ಸುಖಾಂತ್ಯವಿರುವ ಕೇವಲ ಒಂದು ರೋಮಾಂಚಕ ಕಥೆಯಲ್ಲ. ಅದರಲ್ಲಿ ಹೇಳಲಾಗಿರುವ ಘಟನೆಗಳಿಗೂ ನಮಗೂ ನಂಟಿದೆ. ಅವು ನಮ್ಮ ಈಗಿನ ಜೀವನಕ್ಕೆ ಹಾಗೂ ನಮ್ಮ ಭವಿಷ್ಯತ್ತಿಗೆ ಸಂಬಂಧಿಸಿವೆ. ಹಾಗಾಗಿ ನಾವೀಗ ಈ ಕೀರ್ತನೆಯನ್ನು ಗಮನಕೊಟ್ಟು ಜಾಗ್ರತೆಯಿಂದ ಪರಿಶೀಲಿಸೋಣ.
“ಒಂದು ದಿವ್ಯ ವಿಷಯವನ್ನು ಹೇಳುವದಕ್ಕೆ ನನ್ನ ಹೃದಯವು ತವಕಪಡುತ್ತದೆ”
3, 4. (ಎ) ಕೀರ್ತನೆಗಾರನು ಹೇಳಿದ ‘ಒಳ್ಳೇ ವಿಷಯ’ ಯಾವುದು? (ಬಿ) ಅದು ನಮ್ಮ ಹೃದಯವನ್ನು ಹೇಗೆ ಪ್ರಭಾವಿಸುತ್ತದೆ? (ಸಿ) ಯಾವ ವಿಧದಲ್ಲಿ ‘ನಮ್ಮ ಪದ್ಯ’ ರಾಜನ ಕುರಿತಾಗಿದೆ? (ಡಿ) ನಮ್ಮ ನಾಲಿಗೆ ಲೇಖನಿಯಂತೆ ಸಿದ್ಧವಾಗುವುದು ಎಂದರೇನು?
3 ಕೀರ್ತನೆ 45:1 ಓದಿ. ‘ಒಂದು ದಿವ್ಯ ವಿಷಯವು’ ಅಂದರೆ ಒಳ್ಳೇ ವಿಷಯವು ಕೀರ್ತನೆಗಾರನ ಹೃದಯವನ್ನು ಸ್ಪರ್ಶಿಸುತ್ತದೆ ಮತ್ತು ಅದನ್ನು ಹೇಳಲು ಅವನ ಹೃದಯ “ತವಕಪಡುತ್ತದೆ.” ಯಾವುದು ಆ ವಿಷಯ? ಅದು ಒಬ್ಬ ರಾಜನ ಕುರಿತಾಗಿದೆ. “ತವಕಪಡುತ್ತದೆ” ಎಂದು ಭಾಷಾಂತರವಾಗಿರುವ ಮೂಲ ಹೀಬ್ರು ಕ್ರಿಯಾಪದಕ್ಕೆ “ಉಕ್ಕೇರುವುದು” ಅಥವಾ “ಕುದಿಯುವುದು” ಎಂಬರ್ಥವಿದೆ. ಹೌದು, ಆ ರಾಜನ ಕುರಿತಾದ ವಿಷಯ ಕೀರ್ತನೆಗಾರನ ಹೃದಯವನ್ನು ಉತ್ಸಾಹದಿಂದ ಉಕ್ಕೇರುವಂತೆ ಮಾಡಿತು. ಮಾತ್ರವಲ್ಲ ಅವನ ನಾಲಿಗೆಯನ್ನು “ಒಳ್ಳೇ ಬರವಣಿಗಸ್ತನ ಲೇಖನಿಯಂತೆ” ಸಿದ್ಧಗೊಳಿಸಿತು.
4 ಹಾಗಾದರೆ ನಮ್ಮ ಕುರಿತೇನು? ಇಂದು ಮೆಸ್ಸೀಯ ರಾಜ್ಯದ ಕುರಿತಾದ ಸುವಾರ್ತೆಯು ನಮ್ಮ ಹೃದಯವನ್ನು ಸ್ಪರ್ಶಿಸುವ ಒಳ್ಳೇ ವಿಷಯವಾಗಿದೆ. 1914ರಲ್ಲಿ ಈ ರಾಜ್ಯ ಸಂದೇಶವು ಇನ್ನೂ ಹೆಚ್ಚು ‘ಒಳ್ಳೇ’ ವಿಷಯವಾಯಿತು. ಏಕೆಂದರೆ ಆಗಿನಿಂದ ಮೆಸ್ಸೀಯ ರಾಜ್ಯವು ಭವಿಷ್ಯತ್ತಿನಲ್ಲಿ ಸ್ಥಾಪಿತವಾಗುವ ರಾಜ್ಯವಾಗಿಲ್ಲ. ಬದಲಿಗೆ ಅದು ಸ್ವರ್ಗದಲ್ಲಿ ಸ್ಥಾಪಿತವಾಗಿರುವ ಹಾಗೂ ರಾಜ್ಯಭಾರ ಮಾಡುತ್ತಿರುವ ಒಂದು ಸರಕಾರವಾಗಿದೆ. ನಾವು “ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ” ಸಾರುತ್ತಿರುವ ‘ಪರಲೋಕ ರಾಜ್ಯದ ಸುವಾರ್ತೆ’ ಇದೇ ಆಗಿದೆ. (ಮತ್ತಾ. 24:14) ರಾಜ್ಯದ ಈ ಸಂದೇಶವನ್ನು ತಿಳಿದು ನಮ್ಮ ಹೃದಯವೂ ಉತ್ಸಾಹದಿಂದ ಉಕ್ಕೇರುತ್ತದೊ? ರಾಜ್ಯದ ಸುವಾರ್ತೆಯನ್ನು ನಾವು ಹುರುಪಿನಿಂದ ಸಾರುತ್ತೇವೊ? ಕೀರ್ತನೆಗಾರನಂತೆ ನಮ್ಮ ಪದ್ಯ ಕೂಡ “ರಾಜನ” ಅಂದರೆ ನಮ್ಮ ರಾಜನಾದ ಯೇಸು ಕ್ರಿಸ್ತನ ಕುರಿತಾಗಿದೆ. ಆತನು ಮೆಸ್ಸೀಯ ರಾಜ್ಯದ ರಾಜನಾಗಿ ಈಗ ಸ್ವರ್ಗದಲ್ಲಿ ಆಳ್ವಿಕೆ ನಡೆಸುತ್ತಿದ್ದಾನೆ ಎಂದು ನಾವು ಘೋಷಿಸುತ್ತೇವೆ. ಮಾತ್ರವಲ್ಲ ಆತನ ಆಳ್ವಿಕೆಯ ಕೆಳಗೆ ಬರುವಂತೆ ಈ ಲೋಕದ ಅಧಿಪತಿಗಳನ್ನೂ ಸೇರಿಸಿ ಎಲ್ಲರನ್ನೂ ಆಮಂತ್ರಿಸುತ್ತೇವೆ. (ಕೀರ್ತ. 2:1, 2, 4-12) ನಮ್ಮ ನಾಲಿಗೆಯು “ಒಳ್ಳೇ ಬರವಣಿಗಸ್ತನ ಲೇಖನಿಯಂತೆ” ಸಿದ್ಧವಾಗುತ್ತದೆ ಅಂದರೆ ಸುವಾರ್ತೆ ಸಾರುವಾಗ ನಾವು ದೇವರ ವಾಕ್ಯವನ್ನು ಹೆಚ್ಚೆಚ್ಚು ಉಪಯೋಗಿಸುತ್ತೇವೆ.
ನಮ್ಮ ರಾಜನಾದ ಯೇಸು ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ನಾವು ಹರ್ಷದಿಂದ ಸಾರುತ್ತೇವೆ
‘ರಾಜನ ಮಾತುಗಳು ಬಹಳ ಮಧುರ’
5. (ಎ) ಯೇಸು ಯಾವ ವಿಧಗಳಲ್ಲಿ ‘ಸುಂದರನಾಗಿದ್ದನು’? (ಬಿ) ಯಾವ ವಿಧದಲ್ಲಿ ‘ರಾಜನ ಮಾತುಗಳು ಬಹಳ ಮಧುರವಾಗಿದ್ದವು’? (ಸಿ) ನಾವು ಆತನ ಮಾದರಿಯನ್ನು ಅನುಸರಿಸಲು ಹೇಗೆ ಪ್ರಯತ್ನಿಸಬಲ್ಲೆವು?
5 ಕೀರ್ತನೆ 45:2 ಓದಿ. ಯೇಸುವಿನ ಬಾಹ್ಯ ಸೌಂದರ್ಯದ ಕುರಿತು ಬೈಬಲಿನಲ್ಲಿ ಹೆಚ್ಚೇನೂ ಹೇಳಿಲ್ಲ. ಪರಿಪೂರ್ಣ ಮನುಷ್ಯನಾದ ಅವನು ‘ಸುಂದರನಾಗಿದ್ದನು’ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಯೆಹೋವನಿಗೆ ಅವನು ತೋರಿಸಿದ ನಂಬಿಗಸ್ತಿಕೆ ಹಾಗೂ ಅಚಲ ಸಮಗ್ರತೆಯೇ ಅವನ ಅಪಾರ ಸೌಂದರ್ಯವಾಗಿತ್ತು. ಅಷ್ಟೇ ಅಲ್ಲ, ಅವನು ರಾಜ್ಯದ ಸಂದೇಶವನ್ನು ಸಾರುವಾಗ ಅವನ ಮಾತುಗಳು ‘ಬಹಳ ಮಧುರವಾಗಿದ್ದವು.’ (ಲೂಕ 4:22; ಯೋಹಾ. 7:46) ನಾವು ಸುವಾರ್ತೆ ಸಾರುವಾಗ ಯೇಸುವಿನ ಮಾದರಿಯನ್ನು ಅನುಸರಿಸುತ್ತಾ ಜನರ ಮನಸ್ಪರ್ಶಿಸುವಂಥ ಪದಗಳನ್ನು ಉಪಯೋಗಿಸಲು ಪ್ರಯತ್ನಿಸುತ್ತೇವಾ?—ಕೊಲೊ. 4:6.
6. ಯೇಸುವಿನ ಮೇಲೆ ದೈವಾನುಗ್ರಹ ಹೇಗೆ ಎಂದೆಂದಿಗೂ ಮುಂದುವರಿಯಿತು?
6 ಯೇಸು ತೋರಿಸಿದ ಪೂರ್ಣ ಹೃದಯದ ಭಕ್ತಿಗೆ ಯೆಹೋವನು ಪ್ರತಿಫಲ ಕೊಟ್ಟನು. ಭೂಮಿಯಲ್ಲಿ ಅವನ ಮಾಡಿದ ಸೇವೆಯನ್ನು ಆಶೀರ್ವದಿಸಿದನು ಮಾತ್ರವಲ್ಲ ಅವನು ತನ್ನ ಜೀವವನ್ನು ಯಜ್ಞವಾಗಿ ಅರ್ಪಿಸಿದ ನಂತರ ಅವನಿಗೆ ಬಹುಮಾನ ನೀಡಿದನು. ಈ ಕುರಿತು ಅಪೊಸ್ತಲ ಪೌಲ ಹೀಗೆ ಬರೆದನು: “[ಯೇಸು] ಮನುಷ್ಯನಾಗಿ ಕಾಣಿಸಿಕೊಂಡಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಯಾತನಾ ಕಂಬದ ಮೇಲೆ ಮರಣವನ್ನು ಹೊಂದುವಷ್ಟರ ಮಟ್ಟಿಗೆ ವಿಧೇಯನಾದನು. ಇದೇ ಕಾರಣಕ್ಕಾಗಿ ದೇವರು ಸಹ ಅವನನ್ನು ಉನ್ನತವಾದ ಸ್ಥಾನಕ್ಕೆ ಏರಿಸಿ ಬೇರೆ ಎಲ್ಲ ಹೆಸರುಗಳಿಗಿಂತಲೂ ಉನ್ನತವಾದ ಹೆಸರನ್ನು ಅವನಿಗೆ ದಯಪಾಲಿಸಿದನು. ಆದುದರಿಂದ ಸ್ವರ್ಗದಲ್ಲಿರುವವರೂ ಭೂಮಿಯಲ್ಲಿರುವವರೂ ನೆಲದ ಕೆಳಗಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಮೊಣಕಾಲೂರಬೇಕು ಮತ್ತು ತಂದೆಯಾದ ದೇವರ ಮಹಿಮೆಗಾಗಿ ಯೇಸು ಕ್ರಿಸ್ತನೇ ಕರ್ತನೆಂದು ಪ್ರತಿಯೊಂದು ನಾಲಿಗೆಯೂ ಬಹಿರಂಗವಾಗಿ ಒಪ್ಪಿಕೊಳ್ಳಬೇಕು.” (ಫಿಲಿ. 2:8-11) ಯೇಸುವನ್ನು ಯೆಹೋವನು ಪುನರುತ್ಥಾನಗೊಳಿಸಿ ಅಮರ ಜೀವವನ್ನು ಕೊಟ್ಟನು. ಹೀಗೆ ಯೇಸುವಿನ ಮೇಲೆ ದೈವಾನುಗ್ರಹ “ಯಾವಾಗಲೂ” ಮುಂದುವರಿಯಿತು.—ರೋಮ. 6:9.
ರಾಜನನ್ನು ಅವನ “ಜೊತೆಗಾರರಿಗಿಂತ” ಶ್ರೇಷ್ಠನನ್ನಾಗಿ ಮಾಡಲಾಗುತ್ತದೆ
7. ಯೆಹೋವನು ಯೇಸುವನ್ನು ಅವನ “ಜೊತೆಗಾರರಿಗಿಂತ” ಉನ್ನತ ರೀತಿಯಲ್ಲಿ ಅಭಿಷೇಕಿಸಿದ್ದು ಯಾವ ವಿಧಗಳಲ್ಲಿ?
7 ಕೀರ್ತನೆ 45:7 ಓದಿ. ಯೇಸು ನೀತಿಯನ್ನು ಗಾಢವಾಗಿ ಪ್ರೀತಿಸಿದನು. ತನ್ನ ತಂದೆಯನ್ನು ಅಗೌರವಿಸುವ ಎಲ್ಲವನ್ನು ದ್ವೇಷಿಸಿದನು. ಆದ್ದರಿಂದ ಯೆಹೋವನು ಅವನನ್ನು ಮೆಸ್ಸೀಯ ರಾಜ್ಯದ ರಾಜನಾಗಿ ಅಭಿಷೇಕಿಸಿದನು. ಅವನನ್ನು ಅವನ “ಜೊತೆಗಾರರಿಗಿಂತ” ಅಂದರೆ ದಾವೀದನ ವಂಶದಿಂದ ಬಂದ ಯೆಹೂದದ ರಾಜರಿಗಿಂತ “ಉನ್ನತಸ್ಥಾನಕ್ಕೆ ಏರಿಸಿ ಪರಮಾನಂದತೈಲದಿಂದ” ಅಭಿಷೇಕಿಸಿದನು. ಹಾಗೇಕೆ ಹೇಳಬಹುದು? ಏಕೆಂದರೆ ಯೇಸು ನೇರವಾಗಿ ಯೆಹೋವನಿಂದ ಅಭಿಷೇಕಿಸಲ್ಪಟ್ಟನು. ಯೆಹೋವನು ಅವನನ್ನು ರಾಜನಾಗಿ ಅದೇ ಸಮಯದಲ್ಲಿ ಮಹಾ ಯಾಜಕನಾಗಿಯೂ ಅಭಿಷೇಕಿಸಿದನು. (ಕೀರ್ತ. 2:2; ಇಬ್ರಿ. 5:5, 6) ಅಷ್ಟೇ ಅಲ್ಲದೆ, ಯೇಸುವನ್ನು ಅಭಿಷೇಕಿಸಿದ್ದು ಪವಿತ್ರಾತ್ಮದಿಂದ ಹಾಗೂ ಆತನು ಆಳುವುದು ಭೂಮಿಯಲ್ಲಲ್ಲ, ಸ್ವರ್ಗದಿಂದ.
8. (ಎ) ‘ದೇವರು ಯೇಸುವಿನ ಸಿಂಹಾಸನವಾಗಿರುವನು’ ಎಂಬುದರ ಅರ್ಥವೇನು? (ಬಿ) ಯೇಸುವಿನ ರಾಜ್ಯವು ನೀತಿಯಿಂದ ಆಳ್ವಿಕೆ ನಡೆಸುವುದು ಎಂಬ ಖಾತ್ರಿ ನಮಗಿರಬಲ್ಲದು ಏಕೆ?
8 ಕೀರ್ತನೆ 45:6 (NW) ಓದಿ.a ಯೆಹೋವನು 1914ರಲ್ಲಿ ಯೇಸುವನ್ನು ಮೆಸ್ಸೀಯ ರಾಜನಾಗಿ ಪ್ರತಿಷ್ಠಾಪಿಸಿದನು. ಮೆಸ್ಸೀಯನ ‘ರಾಜದಂಡವು ನ್ಯಾಯಸ್ಥಾಪಕವಾದದ್ದು.’ ಆದ್ದರಿಂದ ಅವನು ನೀತಿ, ನ್ಯಾಯದಿಂದ ಆಳ್ವಿಕೆ ನಡೆಸುವನೆಂಬ ಖಾತ್ರಿ ನಮಗಿದೆ. ‘ದೇವರು ಅವನ ಸಿಂಹಾಸನವಾಗಿರುವನು.’ ಅಂದರೆ ಅವನ ರಾಜ್ಯಕ್ಕೆ ಬುನಾದಿ ಯೆಹೋವನೇ. ಹಾಗಾಗಿ ಯೇಸುವಿನ ಆಳ್ವಿಕೆ ಕಾನೂನುಬದ್ಧವಾದದ್ದು. ಮಾತ್ರವಲ್ಲ ಈ ದೇವನೇಮಿತ ಅರಸನ ಸಿಂಹಾಸನವು “ಯುಗಯುಗಾಂತರಗಳಲ್ಲಿಯೂ” ಇರುವುದು. ಈ ಬಲಿಷ್ಠ ರಾಜನ ಆಳ್ವಿಕೆಯಡಿ ಯೆಹೋವನ ಸೇವೆ ಮಾಡಲು ನಿಮಗೆ ಹೆಮ್ಮೆಯೆನಿಸುವುದಿಲ್ಲವೇ?
ರಾಜನು ‘ಪಟ್ಟದ ಕತ್ತಿಯನ್ನು ಕಟ್ಟಿಕೊಳ್ಳುತ್ತಾನೆ’
9, 10. (ಎ) ಕ್ರಿಸ್ತನು ತನ್ನ ಪಟ್ಟದ ಕತ್ತಿಯನ್ನು ಯಾವಾಗ ಕಟ್ಟಿಕೊಂಡನು? (ಬಿ) ಅದನ್ನು ತಕ್ಷಣ ಅವನು ಹೇಗೆ ಬಳಸಿದನು? (ಸಿ) ಕ್ರಿಸ್ತನು ತನ್ನ ಕತ್ತಿಯನ್ನು ಮುಂದೆ ಹೇಗೆ ಬಳಸಲಿದ್ದಾನೆ?
9 ಕೀರ್ತನೆ 45:3 ಓದಿ. ಯೆಹೋವನು ರಾಜನಿಗೆ ಪಟ್ಟದ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಳ್ಳುವಂತೆ ಹೇಳುತ್ತಾನೆ. ಹೀಗೆ ತನ್ನ ಪರಮಾಧಿಕಾರವನ್ನು ವಿರೋಧಿಸುವ ಎಲ್ಲರ ಮೇಲೆ ಯುದ್ಧ ಮಾಡುವಂತೆ ಹಾಗೂ ಅವರ ಮೇಲೆ ತನ್ನ ನ್ಯಾಯತೀರ್ಪನ್ನು ಜಾರಿಗೊಳಿಸುವಂತೆ ಆತನು ಯೇಸುವಿಗೆ ಅಧಿಕಾರ ಕೊಡುತ್ತಾನೆ. (ಕೀರ್ತ. 110:2) ಕ್ರಿಸ್ತನು ಯಾರೂ ಜಯಿಸಲಾಗದ ರಣವೀರ ಅರಸನಾಗಿರುವುದರಿಂದ ಅವನನ್ನು “ಶೂರ” ಎಂದು ಕರೆಯಲಾಗಿದೆ. ಅವನು ಪಟ್ಟದ ಕತ್ತಿಯನ್ನು ಕಟ್ಟಿಕೊಂಡದ್ದು 1914ರಲ್ಲಿ. ಅವನದನ್ನು ಸೈತಾನ ಮತ್ತು ಅವನ ದೆವ್ವಗಳ ಮೇಲೆ ಜಯ ಸಾಧಿಸಲು ಬಳಸಿದನು. ಅವರನ್ನು ಸ್ವರ್ಗದಿಂದ ಭೂಕ್ಷೇತ್ರಕ್ಕೆ ದೊಬ್ಬಿದನು.—ಪ್ರಕ. 12:7-9.
10 ಅದು ಕ್ರಿಸ್ತನ ವಿಜಯೋತ್ಸವ ಸವಾರಿಯ ಆರಂಭವಷ್ಟೇ. ಅವನು ಇನ್ನೂ ‘ತನ್ನ ವಿಜಯವನ್ನು ಪೂರ್ಣಗೊಳಿಸಲಿಕ್ಕಿದೆ.’ (ಪ್ರಕ. 6:2) ಭೂಮಿಯಲ್ಲಿರುವ ಸೈತಾನನ ವ್ಯವಸ್ಥೆಯ ಎಲ್ಲ ಭಾಗಗಳ ಮೇಲೆ ಯೆಹೋವನ ನ್ಯಾಯತೀರ್ಪನ್ನು ಅವನು ಜಾರಿಗೊಳಿಸಲಿಕ್ಕಿದೆ. ಸೈತಾನನನ್ನೂ ಅವನ ದೆವ್ವಗಳನ್ನೂ ನಿಷ್ಕ್ರಿಯಗೊಳಿಸಲಿಕ್ಕಿದೆ. ಮೊದಲು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲ್ ನಾಶವಾಗುವುದು. ಈ ದುಷ್ಟ “ವೇಶ್ಯೆಯನ್ನು” ರಾಜಕೀಯ ಧುರೀಣರ ಮೂಲಕ ನಾಶಮಾಡುವುದು ಯೆಹೋವನ ಉದ್ದೇಶವಾಗಿದೆ. (ಪ್ರಕ. 17:16, 17) ಅದರ ನಂತರ ಸೈತಾನನ ರಾಜಕೀಯ ವ್ಯವಸ್ಥೆಯನ್ನು ರಣವೀರ ರಾಜನಾದ ಕ್ರಿಸ್ತನು ಇನ್ನಿಲ್ಲದಂತೆ ಮಾಡುವನು. ‘ಅಗಾಧ ಸ್ಥಳದ ದೂತನು’ ಎಂಬ ಹೆಸರಿರುವ ಆತನು ಕೊನೆಗೆ ಸೈತಾನನನ್ನೂ ಅವನ ದೆವ್ವಗಳನ್ನೂ ಅಗಾಧ ಸ್ಥಳಕ್ಕೆ ದೊಬ್ಬಿ ತನ್ನ ವಿಜಯವನ್ನು ಪೂರ್ಣಗೊಳಿಸುವನು. (ಪ್ರಕ. 9:1, 11; 20:1-3) ಈ ಎಲ್ಲ ರೋಮಾಂಚಕಾರಿ ಘಟನೆಗಳನ್ನು 45ನೇ ಕೀರ್ತನೆಯಲ್ಲಿ ಹೇಗೆ ಮುಂತಿಳಿಸಲಾಗಿದೆ ಎಂದು ನಾವೀಗ ನೋಡೋಣ.
ರಾಜನು ‘ಸತ್ಯವನ್ನು ಸ್ಥಾಪಿಸುವುದಕ್ಕಾಗಿ’ ಹೊರಡುತ್ತಾನೆ
11. ಕ್ರಿಸ್ತನು ‘ಸತ್ಯವನ್ನು ಸ್ಥಾಪಿಸುವುದಕ್ಕಾಗಿ’ ಸವಾರಿ ಮಾಡುತ್ತಾನೆ ಹೇಗೆ?
11 ಕೀರ್ತನೆ 45:4 ಓದಿ. ಈ ರಣವೀರ ರಾಜನು ಯುದ್ಧವನ್ನು ಮಾಡುವುದು ಪ್ರದೇಶಗಳನ್ನು ವಶಪಡಿಸಿಕೊಂಡು ಜನರನ್ನು ತನ್ನ ಕೈಕೆಳಗೆ ತರುವುದಕ್ಕಲ್ಲ. ಅವನು ಮಾಡುವ ನೀತಿಯ ಯುದ್ಧಕ್ಕೆ ಉನ್ನತ ಉದ್ದೇಶಗಳಿವೆ. “ಸತ್ಯತೆದೈನ್ಯನೀತಿಗಳನ್ನು ಸ್ಥಾಪಿಸುವದಕ್ಕಾಗಿ” ಅವನು ಹೊರಡುತ್ತಾನೆ. ಅವನು ಸಮರ್ಥಿಸಲಿಕ್ಕಿರುವ ಪ್ರಮುಖ ಸತ್ಯ ಯಾವುದು? ಇಡೀ ವಿಶ್ವವನ್ನು ಆಳಲು ಯೆಹೋವನೊಬ್ಬನಿಗೇ ಹಕ್ಕಿದೆ ಎಂಬುದೇ. ಏಕೆಂದರೆ ಸೈತಾನನು ಆರಂಭದಲ್ಲಿ ದಂಗೆಯೆದ್ದಾಗ ಯೆಹೋವನ ಆಳುವ ಹಕ್ಕಿನ ವಿರುದ್ಧ ಸವಾಲೆಸೆದನು. ಅಂದಿನಿಂದ ಇಂದಿನ ವರೆಗೂ ದೆವ್ವಗಳು ಹಾಗೂ ಮಾನವರು ಯೆಹೋವನ ಪರಮಾಧಿಕಾರವನ್ನು ಪ್ರಶ್ನಿಸುತ್ತಲೇ ಬಂದಿದ್ದಾರೆ. ಹಾಗಾಗಿ ಯೆಹೋವನ ಅಭಿಷಿಕ್ತ ರಾಜನು ಈ ಪರಮಾಧಿಕಾರದ ಸತ್ಯತೆಯನ್ನು ಸಂಪೂರ್ಣವಾಗಿ ರುಜುಪಡಿಸಲಿಕ್ಕಾಗಿ ಸವಾರಿ ಮಾಡುವ ಸಮಯ ಈಗ ಬಂದಿದೆ.
12. ರಾಜನು ‘ದೈನ್ಯವನ್ನು ಸ್ಥಾಪಿಸುವುದಕ್ಕಾಗಿ’ ಹೊರಡುವುದು ಹೇಗೆ?
12 ರಾಜನು ‘ದೈನ್ಯವನ್ನು ಸ್ಥಾಪಿಸುವುದಕ್ಕಾಗಿ’ ಸಹ ಹೊರಡುತ್ತಾನೆ. ದೇವರ ಏಕೈಕಜಾತ ಮಗನಾಗಿರುವ ಅವನು ದೀನನಾಗಿರುವುದರಲ್ಲಿ ಹಾಗೂ ತನ್ನ ತಂದೆಯ ಪರಮಾಧಿಕಾರಕ್ಕೆ ನಿಷ್ಠೆಯಿಂದ ಅಧೀನನಾಗಿರುವುದರಲ್ಲಿ ಅಪ್ಪಟ ಮಾದರಿಯನ್ನಿಟ್ಟಿದ್ದಾನೆ. (ಯೆಶಾ. 50:4, 5; ಯೋಹಾ. 5:19) ಈ ರಾಜನ ನಿಷ್ಠಾವಂತ ಪ್ರಜೆಗಳೆಲ್ಲರು ಅವನ ಮಾದರಿಯನ್ನು ಅನುಕರಿಸಬೇಕು ಮತ್ತು ಎಲ್ಲ ವಿಷಯಗಳಲ್ಲೂ ಯೆಹೋವನ ಪರಮಾಧಿಕಾರಕ್ಕೆ ದೀನಭಾವದಿಂದ ಅಧೀನರಾಗಬೇಕು. ಹಾಗೆ ಮಾಡುವವರು ಮಾತ್ರ ದೇವರು ವಾಗ್ದಾನಿಸಿರುವ ಹೊಸ ಲೋಕದಲ್ಲಿ ಜೀವಿಸುವ ಅವಕಾಶ ಪಡೆಯುವರು.—ಜೆಕ. 14:16, 17.
13. ಕ್ರಿಸ್ತನು ‘ನೀತಿಯನ್ನು ಸ್ಥಾಪಿಸುವದಕ್ಕಾಗಿ’ ಮುನ್ನುಗ್ಗುವನು ಹೇಗೆ?
13 ರಾಜನಾದ ಕ್ರಿಸ್ತನು ‘ನೀತಿಯನ್ನು ಸ್ಥಾಪಿಸುವದಕ್ಕಾಗಿಯೂ’ ಮುನ್ನುಗ್ಗುವನು. ಅವನು ಸಮರ್ಥಿಸಲಿರುವ ನೀತಿಯು ‘ದೇವರ ನೀತಿಯಾಗಿದೆ’ ಅಂದರೆ ಯಾವುದು ಸರಿ ಯಾವುದು ತಪ್ಪು ಎಂಬ ವಿಷಯದಲ್ಲಿ ಯೆಹೋವನು ಇಟ್ಟಿರುವ ಮಟ್ಟಗಳಾಗಿವೆ. (ರೋಮ. 3:21; ಧರ್ಮೋ. 32:4) “ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು” ಎಂದು ರಾಜ ಯೇಸು ಕ್ರಿಸ್ತನ ಕುರಿತು ಯೆಶಾಯನು ಪ್ರವಾದಿಸಿದ್ದನು. (ಯೆಶಾ. 32:1) ಹೌದು, ಯೇಸುವಿನ ಆಳ್ವಿಕೆಯು ‘ನೀತಿಯು ವಾಸವಾಗಿರುವ ನೂತನ ಆಕಾಶವನ್ನೂ ನೂತನ ಭೂಮಿಯನ್ನೂ’ ತರುವುದು. (2 ಪೇತ್ರ 3:13) ಆ ಹೊಸ ಲೋಕದ ಪ್ರತಿಯೊಬ್ಬ ಪ್ರಜೆಯು ಯೆಹೋವನ ಮಟ್ಟಗಳಿಗನುಸಾರ ಜೀವಿಸಬೇಕು.—ಯೆಶಾ. 11:1-5.
ರಾಜನು ‘ಭಯಂಕರ ಕೃತ್ಯಗಳನ್ನು’ ನಡೆಸುತ್ತಾನೆ
14. ಕ್ರಿಸ್ತನ ಬಲಗೈ “ಭಯಂಕರ ಕೃತ್ಯಗಳನ್ನು” ನಡೆಸುವುದು ಹೇಗೆ? (ಲೇಖನದ ಆರಂಭದಲ್ಲಿರುವ ಚಿತ್ರ ನೋಡಿ.)
14 ರಾಜನು ಸವಾರಿಯನ್ನು ಮುಂದುವರಿಸುವಾಗ ಸೊಂಟಕ್ಕೆ ಪಟ್ಟದ ಕತ್ತಿಯನ್ನು ಕಟ್ಟಿಕೊಂಡಿರುವನು. (ಕೀರ್ತ. 45:3) ಆದರೆ ಆ ಕತ್ತಿಯನ್ನು ತನ್ನ ಬಲಗೈಯಲ್ಲಿ ತಕ್ಕೊಂಡು ಬಳಸುವ ಸಮಯ ಬರುವುದು. ಆ ಕುರಿತು ಕೀರ್ತನೆಗಾರನು ಪ್ರವಾದಿಸಿದ್ದು: “ನಿನ್ನ ಬಲಗೈ ಭಯಂಕರ ಕೃತ್ಯಗಳನ್ನು ಪ್ರಕಾಶಪಡಿಸಲಿ.” (ಕೀರ್ತ. 45:4, ಪವಿತ್ರ ಗ್ರಂಥ ಭಾಷಾಂತರ) ಯೇಸು ಕ್ರಿಸ್ತನು ಅರ್ಮಗೆದೋನಿನ ಸಮಯದಲ್ಲಿ ಯೆಹೋವನ ನ್ಯಾಯತೀರ್ಪನ್ನು ಜಾರಿಗೊಳಿಸುವಾಗ ವೈರಿಗಳ ವಿರುದ್ಧ “ಭಯಂಕರ ಕೃತ್ಯಗಳನ್ನು” ನಡೆಸುವನು. ಸೈತಾನನ ವ್ಯವಸ್ಥೆಯನ್ನು ನಾಶಮಾಡಲು ಆತನು ಯಾವುದನ್ನು ಸಾಧನವಾಗಿ ಬಳಸುವನೆಂದು ನಮಗೆ ತಿಳಿದಿಲ್ಲ. ಆದರೆ ಈ ಘಟನೆಯು ರಾಜನ ಆಳ್ವಿಕೆಗೆ ಅಧೀನರಾಗುವಂತೆ ಕೊಡಲಾದ ಎಚ್ಚರಿಕೆಗೆ ಕಿವಿಗೊಡದ ಜನರ ಹೃದಯದಲ್ಲಿ ದಿಗಿಲು ಹುಟ್ಟಿಸುವುದು. (ಕೀರ್ತನೆ 2:11, 12 ಓದಿ.) ಆ ಸಮಯದಲ್ಲಿ ಜನರಿಗೆ ಹೇಗಾಗುವುದೆಂದು ಸ್ವತಃ ಯೇಸುವೇ ಅಂತ್ಯಕಾಲದ ಕುರಿತ ಪ್ರವಾದನೆಯಲ್ಲಿ ತಿಳಿಸಿದ್ದಾನೆ. “ಆಕಾಶದ ಶಕ್ತಿಗಳು ಕುಲುಕಿಸಲ್ಪಡುವುದರಿಂದ ನಿವಾಸಿತ ಭೂಮಿಗೆ ಬರುತ್ತಿರುವ ಸಂಗತಿಗಳ ನಿಮಿತ್ತ ಜನರು ಭಯದಿಂದ ಮತ್ತು ನಿರೀಕ್ಷಣೆಯಿಂದ ಮೂರ್ಛೆಹೋದಂತಾಗುವರು” ಮತ್ತು “ಆಗ ಅವರು ಮನುಷ್ಯಕುಮಾರನು ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ ಮೇಘದಲ್ಲಿ ಬರುವುದನ್ನು ಕಾಣುವರು” ಎಂದನು ಅವನು.—ಲೂಕ 21:26, 27.
15, 16. ಯುದ್ಧಕ್ಕೆ ಹೊರಟಿರುವ ಯೇಸುವನ್ನು ಹಿಂಬಾಲಿಸುವ ಸ್ವರ್ಗೀಯ ‘ಸೈನ್ಯಗಳಲ್ಲಿ’ ಯಾರೆಲ್ಲ ಇರುವರು?
15 ರಾಜನು ನ್ಯಾಯತೀರ್ಪನ್ನು ಜಾರಿಗೊಳಿಸಲು “ಶಕ್ತಿಯಿಂದಲೂ ಮಹಾ ಮಹಿಮೆಯಿಂದಲೂ” ಬರುವುದನ್ನು ಪ್ರಕಟನೆ ಪುಸ್ತಕವು ಹೀಗೆ ಘೋಷಿಸುತ್ತದೆ: “ಸ್ವರ್ಗವು ತೆರೆದಿರುವುದನ್ನು ನಾನು ನೋಡಿದೆನು; ಇಗೋ, ಒಂದು ಬಿಳೀ ಕುದುರೆ. ಅದರ ಮೇಲೆ ಕುಳಿತುಕೊಂಡಿದ್ದವನು ನಂಬಿಗಸ್ತನೂ ಸತ್ಯವಂತನೂ ಎಂದು ಕರೆಯಲ್ಪಡುತ್ತಾನೆ; ಅವನು ನ್ಯಾಯತೀರಿಸುವುದು ಮತ್ತು ಯುದ್ಧವನ್ನು ಮುಂದುವರಿಸುವುದು ನೀತಿಯಿಂದಲೇ. ಇದಲ್ಲದೆ, ಸ್ವರ್ಗದಲ್ಲಿದ್ದ ಸೈನ್ಯಗಳು ಬಿಳೀ ಕುದುರೆಗಳ ಮೇಲೆ ಅವನನ್ನು ಹಿಂಬಾಲಿಸುತ್ತಿದ್ದವು; ಅವರು ಬಿಳಿಯ, ನಿರ್ಮಲವಾದ, ನಯವಾದ ನಾರುಮಡಿಯನ್ನು ಧರಿಸಿಕೊಂಡಿದ್ದರು. ಜನಾಂಗಗಳನ್ನು ಹೊಡೆಯುವುದಕ್ಕಾಗಿ ಅವನ ಬಾಯೊಳಗಿಂದ ಹರಿತವಾದ ಒಂದು ಉದ್ದ ಕತ್ತಿಯು ಹೊರಚಾಚುತ್ತದೆ; ಅವನು ಅವರನ್ನು ಕಬ್ಬಿಣದ ಕೋಲಿನಿಂದ ನಡೆಸುವನು. ಅವನು ಸರ್ವಶಕ್ತನಾದ ದೇವರ ಉಗ್ರ ಕೋಪದ ದ್ರಾಕ್ಷಿಯ ತೊಟ್ಟಿಯಲ್ಲಿರುವುದನ್ನು ಸಹ ತುಳಿಯುತ್ತಾನೆ.”—ಪ್ರಕ. 19:11, 14, 15.
16 ಯುದ್ಧಕ್ಕೆ ಹೊರಟಿರುವ ಯೇಸುವನ್ನು ಸ್ವರ್ಗೀಯ “ಸೈನ್ಯಗಳು” ಹಿಂಬಾಲಿಸುವವು. ಆ ಸೈನ್ಯದಲ್ಲಿರುವ ರಣವೀರರು ಯಾರು? ಯೇಸು ಮೊದಲನೇ ಬಾರಿ ಪಟ್ಟದ ಕತ್ತಿಯನ್ನು ಕಟ್ಟಿಕೊಂಡು ಸೈತಾನ ಮತ್ತು ಅವನ ದೆವ್ವಗಳನ್ನು ಸ್ವರ್ಗದಿಂದ ಹೊರದೊಬ್ಬಿದಾಗ ಅವನೊಂದಿಗೆ ‘ಅವನ ದೂತರು’ ಇದ್ದರು. (ಪ್ರಕ. 12:7-9) ಇದರಿಂದ, ಅರ್ಮಗೆದೋನ್ ಯುದ್ಧದ ಸಮಯದಲ್ಲೂ ಕ್ರಿಸ್ತನ ಸೈನ್ಯಗಳಲ್ಲಿ ಪವಿತ್ರ ದೇವದೂತರು ಇರುವರು ಎಂಬ ನಿರ್ಣಯಕ್ಕೆ ಬರುವುದು ತರ್ಕಬದ್ಧ. ಆ ಸೈನ್ಯಗಳಲ್ಲಿ ಬೇರೆ ಯಾರಾದರೂ ಇರುವರೊ? ಯೇಸು ತನ್ನ ಅಭಿಷಿಕ್ತ ಸಹೋದರರಿಗೆ ಹೀಗೆ ಮಾತುಕೊಟ್ಟಿದ್ದನು: “ಜಯಿಸುವವನಿಗೆ ಮತ್ತು ಕೊನೆಯ ವರೆಗೆ ನನ್ನ ಕ್ರಿಯೆಗಳನ್ನು ಕೈಕೊಂಡು ನಡೆಯುವವನಿಗೆ ನಾನು ಜನಾಂಗಗಳ ಮೇಲೆ ಅಧಿಕಾರವನ್ನು ಕೊಡುವೆನು. ಅವನು ಕಬ್ಬಿಣದ ಕೋಲಿನಿಂದ ಜನರನ್ನು ಆಳುವನು; ಮಣ್ಣಿನ ಮಡಿಕೆಗಳಂತೆ ಅವರು ಚೂರುಚೂರಾಗಿ ಒಡೆಯಲ್ಪಡುವರು. ನನಗೆ ತಂದೆಯಿಂದ ಅಧಿಕಾರವು ಕೊಡಲ್ಪಟ್ಟಿರುವಂತೆ ಅವನಿಗೂ ಕೊಡುವೆನು.” (ಪ್ರಕ. 2:26, 27) ಹಾಗಾದರೆ ಅಷ್ಟರಲ್ಲಿ ಸ್ವರ್ಗೀಯ ಜೀವನದ ಬಹುಮಾನ ಪಡೆದಿರುವ ಕ್ರಿಸ್ತನ ಅಭಿಷಿಕ್ತ ಸಹೋದರರು ಸಹ ಆ ಸ್ವರ್ಗೀಯ ಸೈನ್ಯಗಳಲ್ಲಿರುವರು. ಆತನು “ಭಯಂಕರ ಕೃತ್ಯಗಳನ್ನು” ಮಾಡುವಾಗ ಹಾಗೂ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ನಡೆಸುವಾಗ ಅಭಿಷಿಕ್ತ ಸಹರಾಜರು ಅವನೊಂದಿಗಿರುವರು.
ರಾಜನು ತನ್ನ ವಿಜಯವನ್ನು ಪೂರ್ಣಗೊಳಿಸುತ್ತಾನೆ
17. (ಎ) ಕ್ರಿಸ್ತನು ಕುಳಿತುಕೊಂಡಿರುವ ಬಿಳೀ ಕುದುರೆ ಏನನ್ನು ಸೂಚಿಸುತ್ತದೆ? (ಬಿ) ಪಟ್ಟದ ಕತ್ತಿ ಹಾಗೂ ಬಿಲ್ಲು ಯಾವುದನ್ನು ಪ್ರತಿನಿಧಿಸುತ್ತವೆ?
17 ಕೀರ್ತನೆ 45:5 ಓದಿ. ರಾಜನು ಬಿಳೀ ಕುದುರೆಯ ಮೇಲೆ ಕುಳಿತುಕೊಂಡಿದ್ದಾನೆ. ಅವನು ಕೂತಿರುವ ಬಿಳೀ ಕುದುರೆಯು ಯೆಹೋವನ ದೃಷ್ಟಿಯಲ್ಲಿ ಶುದ್ಧವೂ ನೀತಿಯುತವೂ ಆಗಿರುವ ಯುದ್ಧವನ್ನು ಸೂಚಿಸುತ್ತದೆ. (ಪ್ರಕ. 6:2; 19:11) ರಾಜನ ಹತ್ತಿರ ಪಟ್ಟದ ಕತ್ತಿ ಮಾತ್ರವಲ್ಲ ಒಂದು ಬಿಲ್ಲು ಸಹ ಇದೆ. ಈ ಕುರಿತು ಪ್ರಕಟನೆ ಪುಸ್ತಕ ಹೀಗನ್ನುತ್ತದೆ: “ನಾನು ನೋಡಿದಾಗ, ಇಗೋ ಒಂದು ಬಿಳೀ ಕುದುರೆಯು ಕಾಣಿಸಿತು ಮತ್ತು ಅದರ ಮೇಲೆ ಕುಳಿತುಕೊಂಡಿದ್ದವನ ಬಳಿ ಒಂದು ಬಿಲ್ಲು ಇತ್ತು. ಅವನಿಗೆ ಒಂದು ಕಿರೀಟವು ಕೊಡಲ್ಪಟ್ಟಿತು ಮತ್ತು ಅವನು ಜಯಿಸುತ್ತಾ ತನ್ನ ವಿಜಯವನ್ನು ಪೂರ್ಣಗೊಳಿಸಲು ಹೋದನು.” ರಾಜನ ಬಳಿಯಿರುವ ಪಟ್ಟದ ಕತ್ತಿ ಹಾಗೂ ಬಿಲ್ಲು, ವೈರಿಗಳ ಮೇಲೆ ನ್ಯಾಯತೀರ್ಪನ್ನು ಜಾರಿಗೊಳಿಸಲು ಕ್ರಿಸ್ತನು ಬಳಸಲಿರುವ ಸಾಧನವನ್ನು ಪ್ರತಿನಿಧಿಸುತ್ತವೆ.
18. ಕ್ರಿಸ್ತನ “ಬಾಣಗಳು” ಮಹಾತೀಕ್ಷ್ಣವಾಗಿರುವವು ಎಂದು ಹೇಗೆ ರುಜುವಾಗುತ್ತದೆ?
18 ಕೀರ್ತನೆಗಾರನು ಕಾವ್ಯಾತ್ಮಕವಾಗಿ ರಾಜನ ಬಗ್ಗೆ ಹೀಗೆ ಪ್ರವಾದಿಸಿದ್ದಾನೆ: ‘ರಾಜನ ಬಾಣಗಳು ಮಹಾತೀಕ್ಷ್ಣವಾಗಿರುವವು. ಅವು ರಾಜವಿರೋಧಿಗಳ ಎದೆಯನ್ನು ಭೇದಿಸುವವು. ಶತ್ರುಜನಾಂಗಗಳು ಅವನ ಪಾದದ ಕೆಳಗೆ ಬೀಳುವಂತೆ ಮಾಡುವವು.’ ಆ ಹತ್ಯಾಕಾಂಡ ಭೂಮಿಯಲ್ಲೆಲ್ಲ ನಡೆಯುವುದು. ಈ ಕುರಿತು ಯೆರೆಮೀಯನ ಪ್ರವಾದನೆ ಹೀಗನ್ನುತ್ತದೆ: “ಆ ದಿನದಲ್ಲಿ ಯೆಹೋವನಿಂದ ಹತರಾದವರು ಲೋಕದ ಒಂದು ಕಡೆಯಿಂದ ಇನ್ನೊಂದು ಕಡೆಯ ವರೆಗೂ ಬಿದ್ದಿರುವರು.” (ಯೆರೆ. 25:33) ಅದೇ ಸಮಯದ ಕುರಿತು ಇನ್ನೊಂದು ಪ್ರವಾದನೆ ಹೀಗನ್ನುತ್ತದೆ: “ಒಬ್ಬ ದೇವದೂತನು ಸೂರ್ಯನಲ್ಲಿ ನಿಂತುಕೊಂಡಿರುವುದನ್ನು ಸಹ ನಾನು ನೋಡಿದೆನು. ಅವನು ಗಟ್ಟಿಯಾದ ಧ್ವನಿಯಿಂದ ಕೂಗುತ್ತಾ ಆಕಾಶಮಧ್ಯದಲ್ಲಿ ಹಾರಾಡುವ ಎಲ್ಲ ಪಕ್ಷಿಗಳಿಗೆ, ‘ಇಲ್ಲಿ ಬನ್ನಿರಿ, ದೇವರ ಮಹಾ ಸಂಧ್ಯಾ ಭೋಜನಕ್ಕೆ ಒಟ್ಟುಗೂಡಿರಿ; ರಾಜರ ಮಾಂಸಲ ಭಾಗಗಳನ್ನೂ ಮಿಲಿಟರಿ ಅಧಿಪತಿಗಳ ಮಾಂಸಲ ಭಾಗಗಳನ್ನೂ ಬಲಿಷ್ಠರ ಮಾಂಸಲ ಭಾಗಗಳನ್ನೂ ಕುದುರೆಗಳ ಮತ್ತು ಅವುಗಳ ಮೇಲೆ ಕುಳಿತುಕೊಂಡಿರುವವರ ಮಾಂಸಲ ಭಾಗಗಳನ್ನೂ ಸ್ವತಂತ್ರರೂ ದಾಸರೂ ಚಿಕ್ಕವರೂ ದೊಡ್ಡವರೂ ಇವರೆಲ್ಲರ ಮಾಂಸಲ ಭಾಗಗಳನ್ನೂ ತಿನ್ನುವುದಕ್ಕೆ ಬನ್ನಿರಿ’ ಎಂದು ಹೇಳಿದನು.”—ಪ್ರಕ. 19:17, 18.
19. ಕ್ರಿಸ್ತನು ತನ್ನ ವಿಜಯವನ್ನು ಹೇಗೆ ಪೂರ್ಣಗೊಳಿಸುವನು?
19 ಕ್ರಿಸ್ತನು ಭೂಮಿಯಲ್ಲಿರುವ ಸೈತಾನನ ದುಷ್ಟ ವ್ಯವಸ್ಥೆಯನ್ನು ನಾಶಮಾಡಿದ ನಂತರ “ಆಡಂಬರದಿಂದ” ತನ್ನ ‘ವಿಜಯೋತ್ಸವದ’ ಸವಾರಿಯನ್ನು ಮುಂದುವರಿಸುವನು. (ಕೀರ್ತ. 45:4) ಸೈತಾನ ಮತ್ತು ಅವನ ದೆವ್ವಗಳನ್ನು ಅಗಾಧ ಸ್ಥಳಕ್ಕೆ ದೊಬ್ಬುವ ಮೂಲಕ ತನ್ನ ವಿಜಯವನ್ನು ಪೂರ್ಣಗೊಳಿಸುವನು. ಸಾವಿರ ವರ್ಷಗಳ ಆಳ್ವಿಕೆಯುದ್ದಕ್ಕೂ ಅವರು ಅಲ್ಲೇ ಬಂದಿಗಳಾಗಿರುವರು. (ಪ್ರಕ. 20:2, 3) ಪಿಶಾಚನು ಹಾಗೂ ಅವನ ದೂತರು ಅಗಾಧ ಸ್ಥಳದಲ್ಲಿ ಮೃತಸ್ಥಿತಿಯಲ್ಲಿರುವಂತೆ ಸಂಪೂರ್ಣ ನಿಷ್ಕ್ರಿಯರಾಗಿರುವರು. ಆಗ ಭೂಮಿಯ ನಿವಾಸಿಗಳು ಸೈತಾನನ ಪ್ರಭಾವದಿಂದ ಮುಕ್ತರಾಗಿರುವರು. ವಿಜಯಿಯಾದ ಮಹಿಮಾನ್ವಿತ ರಾಜನ ಆಳ್ವಿಕೆಗೆ ಸಂಪೂರ್ಣ ಅಧೀನತೆ ತೋರಿಸುತ್ತಾ ಜೀವಿಸಲು ಅವರು ಶಕ್ತರಾಗುವರು. ಅನಂತರ ಇಡೀ ಭೂಮಿ ಪರದೈಸಾಗಿ ಮಾರ್ಪಡುವುದನ್ನು ಅವರು ನೋಡುವರು. ಆದರೆ ಅದಕ್ಕೂ ಮುಂಚೆ ಅವರಿಗೆ ರಾಜನೊಂದಿಗೂ ಅವನ ಸ್ವರ್ಗೀಯ ಜೊತೆಗಾರರೊಂದಿಗೂ ಹರ್ಷಿಸಲು ಇನ್ನೊಂದು ಅವಕಾಶವಿರುವುದು. ಆ ಸಂತೋಷಕರ ಘಟನೆಯೇ ಮುಂದಿನ ಲೇಖನದ ಮುಖ್ಯ ವಿಷಯವಾಗಿದೆ.
a ಕೀರ್ತನೆ 45:6 (NW): “ಯುಗಯುಗಾಂತರಗಳಲ್ಲಿಯೂ ದೇವರು ನಿನ್ನ ಸಿಂಹಾಸನವಾಗಿರುವನು; ನಿನ್ನ ರಾಜದಂಡವು ನ್ಯಾಯಸ್ಥಾಪಕವಾದದ್ದೇ.”