‘ಸ್ಥಿರವಾಗಿ ನಿಂತು ಯೆಹೋವನ ರಕ್ಷಣಾಕಾರ್ಯವನ್ನು ನೋಡಿರಿ’
“ಯೆಹೋವನು ನನಗಿದ್ದಾನೆ; ಭಯಪಡೆನು; ಮನುಷ್ಯನು ನನಗೆ ಏನು ಮಾಡಾನು?”—ಕೀರ್ತನೆ 118:6.
ಇಂದಿನ ಮಾನವಕುಲವು ಎದುರಿಸಲಿಕ್ಕಿರುವ ಘಟನೆಗಳು ಹಿಂದೆಂದೂ ಸಂಭವಿಸದಂಥವುಗಳಾಗಿವೆ. ನಮ್ಮೀ ದಿನಗಳಲ್ಲಿ ಅವು ಸಂಭವಿಸುವವೆಂದು ಮುಂತಿಳಿಸುತ್ತಾ ಯೇಸು ತನ್ನ ಹಿಂಬಾಲಕರನ್ನು ಎಚ್ಚರಿಸಿದ್ದು: “ಅಂಥ ಸಂಕಟವು [ಮಹಾ ಸಂಕಟ] ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ, ಇನ್ನೂ ಮೇಲೆಯೂ ಆಗುವದಿಲ್ಲ. [ಕರ್ತನು] ಆ ದಿನಗಳನ್ನು ಕಡಿಮೆಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯದು; ಆದರೆ ತಾನು ಆದುಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆಮಾಡುವನು.”—ಮತ್ತಾಯ 24:21, 22.
2 ಮಾನವ ದೃಷ್ಟಿಗೆ ಅಗೋಚರವಾಗಿರುವ ಸ್ವರ್ಗೀಯ ಸೇನೆಗಳು ಆ ಮಹಾ ಸಂಕಟವನ್ನು ಈಗ ತಡೆದುಹಿಡಿದಿವೆ. ಅದನ್ನು ಯಾಕೆ ತಡೆದುಹಿಡಿದಿದ್ದಾರೆಂಬ ಕಾರಣವನ್ನು ಅಪೊಸ್ತಲ ಯೋಹಾನನು ಯೇಸುವಿನಿಂದ ಪಡೆದ ಪ್ರಕಟನೆಯಲ್ಲಿ ಕಂಡನು. ಆ ವೃದ್ಧ ಅಪೊಸ್ತಲನು ಅದನ್ನು ಈ ಮಾತುಗಳಲ್ಲಿ ವರ್ಣಿಸಿದನು: “ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತುಕೊಂಡು . . . ಭೂಮಿಯ ಚತುರ್ದಿಕ್ಕುಗಳ ಗಾಳಿಗಳನ್ನು ಹಿಡಿದಿರುವದನ್ನು ಕಂಡೆನು. ಇದಲ್ಲದೆ ಮತ್ತೊಬ್ಬ ದೇವದೂತನು ಜೀವಸ್ವರೂಪನಾದ ದೇವರ ಮುದ್ರೆಯನ್ನು ಹಿಡುಕೊಂಡು ಮೂಡಣದಿಕ್ಕಿನಿಂದ ಏರಿಬರುವದನ್ನು ಕಂಡೆನು; ಅವನು ಭೂಮಿಯನ್ನೂ ಸಮುದ್ರವನ್ನೂ ಕೆಡಿಸುವದಕ್ಕೆ ಅಧಿಕಾರಹೊಂದಿದ ಆ ನಾಲ್ಕು ಮಂದಿ ದೇವದೂತರಿಗೆ—ನಾವು ನಮ್ಮ ದೇವರ ದಾಸರಿಗೆ ಹಣೆಯ ಮೇಲೆ ಮುದ್ರೆ ಒತ್ತುವತನಕ ಭೂಮಿಯನ್ನಾಗಲಿ ಸಮುದ್ರವನ್ನಾಗಲಿ ಮರಗಳನ್ನಾಗಲಿ ಕೆಡಿಸಬೇಡಿರಿ ಎಂದು ಮಹಾ ಶಬ್ದದಿಂದ ಕೂಗಿ ಹೇಳಿದನು.”—ಪ್ರಕಟನೆ 7:1-3.
3 ಅಭಿಷಿಕ್ತರಾದ “ದೇವರ ದಾಸರ” ಕೊನೆಯ ಮುದ್ರೆಹಾಕುವಿಕೆ ಕೊನೆಮುಟ್ಟುತ್ತಾ ಇದೆ. ಆ ವಿನಾಶಕಾರಿ ಗಾಳಿಗಳನ್ನು ಬಿಟ್ಟುಬಿಡಲು ಆ ನಾಲ್ಕು ಮಂದಿ ದೇವದೂತರು ಸಿದ್ಧರಾಗಿದ್ದಾರೆ. ಅವರು ಆ ಗಾಳಿಗಳನ್ನು ಬಿಟ್ಟುಬಿಡುವಾಗ ಮೊದಲು ಏನು ನಡೆಯುವುದು? ಒಬ್ಬ ದೇವದೂತನು ಆ ಪ್ರಶ್ನೆಯನ್ನು ಹೀಗೆ ಉತ್ತರಿಸುತ್ತಾನೆ: ‘ಮಹಾ ಪಟ್ಟಣವಾದ ಬಾಬೆಲು ದಡದಡನೆ ಕೆಡವಲ್ಪಟ್ಟು ಇನ್ನೆಂದಿಗೂ ಕಾಣಿಸುವದಿಲ್ಲ.’ (ಪ್ರಕಟನೆ 18:21) ಇದಾಗುವಾಗ, ಅಂದರೆ ಸುಳ್ಳು ಧರ್ಮದ ಲೋಕ ಸಾಮ್ರಾಜ್ಯದ ನಾಶನವಾಗುವಾಗ ಪರಲೋಕದಲ್ಲಿ ಎಂಥ ಹರ್ಷೋಲ್ಲಾಸವಿರುವುದು!—ಪ್ರಕಟನೆ 19:1, 2.
4 ಲೋಕದ ಎಲ್ಲ ಜನಾಂಗಗಳು ಯೆಹೋವನ ಜನರ ವಿರುದ್ಧ ಒಟ್ಟುಗೂಡುವವು. ಈ ನಂಬಿಗಸ್ತ ಕ್ರೈಸ್ತರನ್ನು ಅಳಿಸಿಹಾಕುವುದರಲ್ಲಿ ಈ ಜನಾಂಗಗಳು ಸಫಲವಾಗುವವೋ? ಸಫಲವಾಗುವಂತೆ ತೋರಬಹುದು. ಆದರೆ ನೋಡಿ! ಕ್ರಿಸ್ತ ಯೇಸುವಿನ ನೇತೃತ್ವದಲ್ಲಿರುವ ಸ್ವರ್ಗೀಯ ಸೈನ್ಯಗಳು ಈ ಮಾನವ ಪಡೆಗಳನ್ನು ನಾಶಮಾಡುವವು. (ಪ್ರಕಟನೆ 19:19-21) ಕೊನೆಗೆ, ಪಿಶಾಚನನ್ನು ಮತ್ತವನ ದೂತರನ್ನು ನಿಷ್ಕ್ರಿಯತೆಯೆಂಬ ಅಧೋಲೋಕಕ್ಕೆ ಎಸೆಯಲಾಗುವುದು. ಅಂದಿನಿಂದ ಸಾವಿರ ವರ್ಷಗಳ ವರೆಗೆ ಅವರು ಬಂಧಿಸಲ್ಪಡುವುದರಿಂದ ಮನುಷ್ಯರನ್ನು ದಾರಿತಪ್ಪಿಸಲು ಶಕ್ತರಾಗುವುದಿಲ್ಲ. ಹೊಸ ಲೋಕಕ್ಕೆ ಪಾರಾಗಿ ಬಂದಿರುವ ಮಹಾ ಸಮೂಹಕ್ಕೆ ಆಗ ಎಷ್ಟು ನೆಮ್ಮದಿ ಇರುವುದು!—ಪ್ರಕಟನೆ 7:9, 10, 14; 20:1-3.
5 ಈ ಅದ್ಭುತ ಹಾಗೂ ಭಯಚಕಿತಗೊಳಿಸುವ ಘಟನೆಗಳನ್ನು ನಾವು ಬಲುಬೇಗನೆ ಅನುಭವಿಸಲಿದ್ದೇವೆ. ಇವೆಲ್ಲವೂ, ಆಳ್ವಿಕೆ ನಡೆಸಲು ಯೆಹೋವನಿಗಿರುವ ಹಕ್ಕು ಅಂದರೆ ಆತನ ವಿಶ್ವ ಪರಮಾಧಿಕಾರದೊಂದಿಗೆ ಸಂಬಂಧಪಟ್ಟಿವೆ. ಇದರ ಕುರಿತಾಗಿಯೂ ಯೋಚಿಸಿರಿ: ನಾವು ಯೆಹೋವನಿಗೆ ನಿಷ್ಠರಾಗಿ ಉಳಿದು ಆತನ ಪರಮಾಧಿಕಾರಕ್ಕಾಗಿ ಸ್ಥಿರವಾಗಿ ನಿಲ್ಲುವಲ್ಲಿ, ಯೆಹೋವನ ಹೆಸರಿನ ಪವಿತ್ರೀಕರಣ ಹಾಗೂ ಆತನ ಉದ್ದೇಶದ ನೆರವೇರಿಕೆಯಲ್ಲಿ ನಮಗೊಂದು ಪಾಲಿರುವುದು. ಇದೆಂಥ ಬಹುಮೂಲ್ಯವಾದ ಆನಂದ!
6 ಆ ಮಹತ್ವಭರಿತ ಘಟನೆಗಳಿಗಾಗಿ ನಾವು ಸಿದ್ಧರಿದ್ದೇವೋ? ಯೆಹೋವನಿಗಿರುವ ರಕ್ಷಣಾಶಕ್ತಿಯಲ್ಲಿ ನಮಗೆ ನಂಬಿಕೆ ಇದೆಯೋ? ಆತನು ಸರಿಯಾದ ಸಮಯಕ್ಕೆ ಅತಿ ಉತ್ತಮವಾದ ವಿಧದಲ್ಲಿ ನಮಗೆ ಸಹಾಯ ಮಾಡುವನೆಂಬ ದೃಢಭರವಸೆ ನಮಗಿದೆಯೋ? ಇಂಥ ವೈಯಕ್ತಿಕ ಪ್ರಶ್ನೆಗಳನ್ನು ಉತ್ತರಿಸುವಾಗ ಅಪೊಸ್ತಲ ಪೌಲನು ರೋಮ್ನಲ್ಲಿದ್ದ ತನ್ನ ಜೊತೆ ಕ್ರೈಸ್ತರಿಗೆ ಹೇಳಿದ ಈ ಮಾತುಗಳನ್ನು ನಾವು ಮನಸ್ಸಿನಲ್ಲಿಡಬೇಕು: “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” (ರೋಮಾಪುರ 15:4) ನಮ್ಮ ಉಪದೇಶ, ಆದರಣೆ ಹಾಗೂ ನಿರೀಕ್ಷೆಗಾಗಿ ಬರೆಯಲಾಗಿರುವ ಈ ವಿಷಯಗಳಲ್ಲಿ, ಐಗುಪ್ತದ ದಬ್ಬಾಳಿಕೆಗಾರರ ಬಿಗಿಮುಷ್ಠಿಯಿಂದ ಯೆಹೋವನು ಇಸ್ರಾಯೇಲ್ಯರನ್ನು ಬಿಡಿಸಿದ ಕುರಿತಾದ ದಾಖಲೆಯೂ ಇದೆ. ಯೆಹೋವನು ಇಸ್ರಾಯೇಲ್ ಜನರ ರಕ್ಷಣೆಮಾಡಿದಾಗಿನ ಆ ಉದ್ರೇಕಕಾರಿ ಘಟನೆಗಳ ಸ್ಥೂಲ ಪರಿಶೀಲನೆಯು, ವೇಗವಾಗಿ ಧಾವಿಸಿಬರುತ್ತಿರುವ ಮಹಾ ಸಂಕಟಕ್ಕಾಗಿ ಎದುರುನೋಡುವ ನಮಗೆ ತುಂಬ ಉತ್ತೇಜನೀಯವಾಗಿರಬೇಕು.
ಯೆಹೋವನು ತನ್ನ ಜನರನ್ನು ರಕ್ಷಿಸುತ್ತಾನೆ
7 ಸಮಯವು ಸಾ.ಶ.ಪೂ. 1513 ಆಗಿತ್ತು. ಯೆಹೋವನು ಈಗಾಗಲೇ ಐಗುಪ್ತ್ಯರ ವಿರುದ್ಧ ಒಂಬತ್ತು ಬಾಧೆಗಳನ್ನು ತಂದಿದ್ದನು. ಒಂಬತ್ತನೆಯ ಬಾಧೆಯ ನಂತರ ಫರೋಹನು ಮೋಶೆಗೆ ಒರಟಾಗಿ, “ನನ್ನ ಬಳಿಯಿಂದ ಹೋಗು; ಇನ್ನು ಮುಂದೆ ನನ್ನ ಮುಖದೆದುರಿಗೆ ಬರಲೇ ಕೂಡದು; ಎಚ್ಚರ; ತಿರಿಗಿ ಸನ್ನಿಧಿಗೆ ಬಂದರೆ ಮರಣದಂಡನೆ ಆಗುವದು” ಎಂದು ಹೇಳಿ ಕಳುಹಿಸಿಬಿಡುತ್ತಾನೆ. ಅದಕ್ಕೆ ಮೋಶೆ ಉತ್ತರಿಸಿದ್ದು: “ಅಪ್ಪಣೆ; ಇನ್ನು ಮುಂದೆ ನಾನು ಸಮ್ಮುಖಕ್ಕೆ ಬರುವದೇ ಇಲ್ಲ.”—ವಿಮೋಚನಕಾಂಡ 10:28, 29.
8 ಈಗ ಯೆಹೋವನು ಮೋಶೆಗೆ, ತಾನು ಫರೋಹ ಹಾಗೂ ಎಲ್ಲ ಐಗುಪ್ತ್ಯರ ವಿರುದ್ಧ ಇನ್ನು ಕೇವಲ ಒಂದೇ ಬಾಧೆ ತರುವೆನೆಂದು ಹೇಳುತ್ತಾನೆ. ಇದು ಕೊನೆಯ ಬಾಧೆ ಆಗಿರಲಿತ್ತು. ಎಬಿಬ್ (ನೈಸಾನ್) ತಿಂಗಳ 14ನೇ ದಿನದಂದು ಪ್ರತಿಯೊಬ್ಬ ಐಗುಪ್ತ ಪುರುಷನ ಚೊಚ್ಚಲ ಮಗ ಮತ್ತು ಪ್ರತಿಯೊಂದು ಪ್ರಾಣಿಯ ಚೊಚ್ಚಲ ಮರಿ ಸಾಯಲಿತ್ತು. ಆದರೆ ಇಸ್ರಾಯೇಲಿನ ಪ್ರತಿಯೊಂದು ಕುಟುಂಬ, ದೇವರು ಮೋಶೆಗೆ ಕೊಟ್ಟ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪಾರಾಗಸಾಧ್ಯವಿತ್ತು. ಅವರು ಗಂಡು ಕುರಿಯ ಸ್ವಲ್ಪ ರಕ್ತವನ್ನು ತಮ್ಮ ಮನೆಗಳ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಿ ಮನೆಯೊಳಗೆ ಇರಬೇಕಿತ್ತು. ಆ ರಾತ್ರಿ ಏನಾಯಿತು? ಮೋಶೆಯೇ ನಮಗೆ ಹೇಳಲಿ: “ಯೆಹೋವನು . . . ಐಗುಪ್ತದೇಶದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ ಪಶುಗಳ ಚೊಚ್ಚಲು ಮರಿಗಳನ್ನೂ ಸಂಹಾರ ಮಾಡಿದನು.” ಇದು ನಡೆದಾಗ, ಫರೋಹನು ಕೂಡಲೇ ಪ್ರತಿಕ್ರಿಯಿಸುತ್ತಾನೆ. ಮೋಶೆ ಆರೋನರನ್ನು ಕರೆಸಿ ಅವರಿಗೆ ಹೀಗನ್ನುತ್ತಾನೆ: “ನನ್ನ ಜನರ ಮಧ್ಯದಿಂದ ಹೊರಟುಹೋಗಿರಿ; ನೀವು ಕೇಳಿಕೊಂಡ ಮೇರೆಗೆ ಯೆಹೋವನನ್ನು ಆರಾಧಿಸಿರಿ.” ಆಗ ಇಸ್ರಾಯೇಲ್ಯರು ಹೊರಟೇ ಬಿಡುತ್ತಾರೆ. ಅವರ ಸಂಖ್ಯೆ 30 ಲಕ್ಷಕ್ಕಿಂತಲೂ ಹೆಚ್ಚಾಗಿದ್ದಿರಬಹುದು ಮತ್ತು ಅವರೊಂದಿಗೆ ಇಸ್ರಾಯೇಲ್ಯರಲ್ಲದ ಅಸಂಖ್ಯಾತ “ಬಹು ಮಂದಿ ಅನ್ಯರೂ” ಹೋದರು.—ವಿಮೋಚನಕಾಂಡ 12:1-7, 29, 31, 37, 38.
9 ಇಸ್ರಾಯೇಲ್ಯರಿಗೆ ವಾಗ್ದತ್ತ ದೇಶಕ್ಕೆ ಹೋಗುವ ಸಮೀಪದ ಮಾರ್ಗ, ಭೂಮಧ್ಯ ಸಮುದ್ರತೀರವಾಗಿ ಫಿಲಿಷ್ಟ್ಯರ ಪ್ರದೇಶದಿಂದ ಹಾದುಹೋಗುವುದು ಆಗಿತ್ತು. ಆದರೆ ಇದು ಶತ್ರುಪ್ರದೇಶ. ಹೀಗಿರುವುದರಿಂದ ಯೆಹೋವನು ಬಹುಶಃ ತನ್ನ ಜನರನ್ನು ಯುದ್ಧದಿಂದ ತಪ್ಪಿಸಲಿಕ್ಕಾಗಿ ಕೆಂಪು ಸಮುದ್ರದ ಅರಣ್ಯ ಮಾರ್ಗವಾಗಿ ನಡೆಸುತ್ತಾನೆ. ಲಕ್ಷಾಂತರ ಜನರು ನಡೆದು ಹೋಗುತ್ತಿರುವುದಾದರೂ ಅವರ ಮಧ್ಯೆ ಯಾವುದೇ ಗಲಿಬಿಲಿ, ಗೊಂದಲ ಇರಲಿಲ್ಲ. ಏಕೆಂದರೆ ಬೈಬಲ್ ದಾಖಲೆ ಹೇಳುವಂತೆ, “ಇಸ್ರಾಯೇಲ್ಯರು ಯುದ್ಧ ಸನ್ನದ್ಧರಾಗಿ [“ಸೈನ್ಯ ವ್ಯೂಹದೋಪಾದಿ,” NW] ಐಗುಪ್ತದೇಶದಿಂದ ಹೊರಟರು.”—ವಿಮೋಚನಕಾಂಡ 13:17, 18.
‘ಯೆಹೋವನ ರಕ್ಷಣಾಕಾರ್ಯವನ್ನು ನೋಡಿರಿ’
10 ಮುಂದೆ ಒಂದು ಆಶ್ಚರ್ಯಕರ ಘಟನೆ ನಡೆಯುತ್ತದೆ. ಯೆಹೋವನು ಮೋಶೆಗೆ ಹೀಗನ್ನುತ್ತಾನೆ: “ಇಸ್ರಾಯೇಲ್ಯರು ಅಡ್ಡತಿರಿಗಿ ಪೀಹಹೀರೋತಿನ ಪೂರ್ವಕಡೆಯಲ್ಲಿ ಮಿಗ್ದೋಲಿಗೂ ಸಮುದ್ರಕ್ಕೂ ನಡುವೆ ಬಾಳ್ಚೆಫೋನಿಗೆ ಎದುರಾಗಿ ಇಳುಕೊಳ್ಳಬೇಕೆಂದು ಅವರಿಗೆ ಆಜ್ಞಾಪಿಸು.” ಇಸ್ರಾಯೇಲ್ಯರು ಈ ಸೂಚನೆಯನ್ನು ಪಾಲಿಸಿದಾಗ ತಾವೀಗ ಪರ್ವತಗಳ ಮತ್ತು ಕೆಂಪು ಸಮುದ್ರದ ಮಧ್ಯೆ ಸಿಕ್ಕಿಬಿದ್ದಿರುವುದನ್ನು ನೋಡುತ್ತಾರೆ. ಅಲ್ಲಿಂದ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗ ಇಲ್ಲವೆಂದು ತೋರುತ್ತದೆ. ಆದರೆ ತಾನು ಆ ಸೂಚನೆ ಕೊಟ್ಟದ್ದೇಕೆಂದು ಯೆಹೋವನಿಗೆ ಗೊತ್ತಿದೆ. ಆತನು ಮೋಶೆಗೆ ಹೇಳುವುದು: “ನಾನು ಫರೋಹನ ಹೃದಯವನ್ನು ಕಠಿಣಪಡಿಸುವೆನಾದದರಿಂದ ಅವನು ಅವರನ್ನು ಬೆನ್ನಟ್ಟಿಬರುವನು; ಆಗ ನಾನು ಫರೋಹನಲ್ಲಿಯೂ ಅವನ ಸೈನ್ಯದಲ್ಲಿಯೂ ಪ್ರಖ್ಯಾತಿಗೊಳ್ಳುವೆನು. ನಾನೇ ಯೆಹೋವನೆಂಬದು ಐಗುಪ್ತ್ಯರಿಗೆ ತಿಳಿದುಬರುವದು.”—ವಿಮೋಚನಕಾಂಡ 14:1-4.
11 ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟುಹೋಗುವಂತೆ ಅನುಮತಿಸಿದ್ದು ದೊಡ್ಡ ತಪ್ಪೆಂದು ಫರೋಹನಿಗೆ ಅನಿಸತೊಡಗಿತು. ಆದುದರಿಂದ ಅವನು ತನ್ನ ಸುಸಜ್ಜಿತವಾದ 600 ಯುದ್ಧ ರಥಗಳೊಂದಿಗೆ ಇಸ್ರಾಯೇಲ್ಯರನ್ನು ತೀವ್ರಗತಿಯಿಂದ ಬೆನ್ನಟ್ಟುತ್ತಾನೆ. ಐಗುಪ್ತ್ಯರ ಸೈನ್ಯವು ಬರುತ್ತಿರುವುದನ್ನು ನೋಡಿ ಇಸ್ರಾಯೇಲ್ಯರು ಭೀತಿಯಿಂದ ನಡುಗುತ್ತಾ, ಮೋಶೆಗೆ ಹೀಗೆ ಕೂಗಾಡುತ್ತಾರೆ: “ಐಗುಪ್ತದೇಶದಲ್ಲಿ ಸಮಾಧಿಗಳಿಲ್ಲವಾದದರಿಂದ ಅರಣ್ಯದಲ್ಲಿ ಸಾಯಲಿ ಎಂಬದಾಗಿ ನಮ್ಮನ್ನು ಇಲ್ಲಿಗೆ ಕರಕೊಂಡು ಬಂದಿಯೇನು?” ಆದರೆ ಯೆಹೋವನ ರಕ್ಷಣಾಕಾರ್ಯದಲ್ಲಿ ಪೂರ್ಣ ಭರವಸೆಯಿದ್ದ ಮೋಶೆ ಉತ್ತರಿಸಿದ್ದು: “ನೀವು ಅಂಜಬೇಡಿರಿ; ಸುಮ್ಮನೆ ನಿಂತುಕೊಂಡಿದ್ದು ಯೆಹೋವನು ಈ ಹೊತ್ತು ನಿಮ್ಮನ್ನು ರಕ್ಷಿಸುವ ರೀತಿಯನ್ನು ನೋಡಿರಿ [‘ಸ್ಥಿರವಾಗಿ ನಿಂತು ಯೆಹೋವನ ರಕ್ಷಣಾಕಾರ್ಯವನ್ನು ನೋಡಿರಿ,’ NW]. . . . ಯೆಹೋವನೇ ನಿಮಗಾಗಿ ಯುದ್ಧಮಾಡುವನು; ನೀವಂತು ಸುಮ್ಮನೇ ಇರ್ರಿ.”—ವಿಮೋಚನಕಾಂಡ 14:5-14.
12 ಸ್ವತಃ ಯೆಹೋವನೇ ಇಸ್ರಾಯೇಲ್ಯರ ಪರವಾಗಿ ಹೋರಾಡುವನೆಂದು ಮೋಶೆ ಹೇಳಿದಂತೆಯೇ, ಮಾನವಾತೀತ ಸೇನೆಗಳು ಆ ಸನ್ನಿವೇಶವನ್ನು ನಿಭಾಯಿಸುತ್ತವೆ. ಇಸ್ರಾಯೇಲ್ಯರ ದಂಡಿನ ಮುಂದೆ ಹೋಗುತ್ತಿದ್ದ ಮೇಘಸ್ತಂಭವನ್ನು ಯೆಹೋವನ ದೂತನು ಅದ್ಭುತಕರವಾಗಿ ಅವರ ಹಿಂದಕ್ಕೆ ತರುತ್ತಾನೆ. (ವಿಮೋಚನಕಾಂಡ 13:21, 22; 14:19, 20) ದೇವರ ಅಪ್ಪಣೆಗೆ ವಿಧೇಯತೆ ತೋರಿಸುತ್ತಾ ಮೋಶೆ ಈಗ ತನ್ನ ಕೈ ಚಾಚುತ್ತಾನೆ. ಆ ವೃತ್ತಾಂತವು ಹೀಗೆ ಮುಂದುವರಿಯುತ್ತದೆ: “ಯೆಹೋವನು ಆ ರಾತ್ರಿಯೆಲ್ಲಾ ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿಯನ್ನು ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದು ಕಡೆಗೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದನು. . . . ಇಸ್ರಾಯೇಲ್ಯರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಗಡೆ ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತು.” ಐಗುಪ್ತ್ಯರು ಅವರನ್ನು ಬೆನ್ನಟ್ಟಿಕೊಂಡು ಹೋಗುತ್ತಾರಾದರೂ, ಯೆಹೋವನು ತನ್ನ ಜನರ ಪಕ್ಷದಲ್ಲಿದ್ದಾನೆ. ಆತನು ಐಗುಪ್ತ್ಯರ ದಂಡನ್ನು ತಬ್ಬಿಬ್ಬುಗೊಳಿಸಿ ಅನಂತರ ಮೋಶೆಗೆ ಹೇಳುವುದು: ‘ಸಮುದ್ರದ ಮೇಲೆ ನಿನ್ನ ಕೈ ಚಾಚು; ಆಗ ಅದರ ನೀರು ಮೊದಲಿನಂತೆ ಬಂದು ಐಗುಪ್ತ್ಯರನ್ನೂ ಅವರ ರಥಗಳನ್ನೂ ರಾಹುತರನ್ನೂ ಮುಣುಗಿಸುವದು.’ ಫರೋಹನ ಸೇನೆಗಳ ನಾಶನವು ಎಷ್ಟು ಸಂಪೂರ್ಣವಾಗಿದೆ ಎಂದರೆ ಒಬ್ಬ ಸೈನಿಕನೂ ಬದುಕಿ ಉಳಿಯುವುದಿಲ್ಲ!—ವಿಮೋಚನಕಾಂಡ 14:21-28; ಕೀರ್ತನೆ 136:15.
ಇಸ್ರಾಯೇಲಿನ ರಕ್ಷಣೆಯಿಂದ ಕಲಿಯಿರಿ
13 ಈ ಅದ್ಭುತಕರ ಬಿಡುಗಡೆಯು ಪಾರಾದವರ ಮೇಲೆ ಯಾವ ಪ್ರಭಾವ ಬೀರಿತು? ಮೋಶೆ ಮತ್ತು ಇಸ್ರಾಯೇಲ್ಯರು ಸ್ವಯಂಪ್ರೇರಿತರಾಗಿ ಯೆಹೋವನಿಗೆ ಸ್ತುತಿಗೀತೆಯನ್ನು ಹಾಡಲಾರಂಭಿಸಿದರು! ಅವರು ಹಾಡಿದ್ದು: “ಯೆಹೋವನ ಸ್ತೋತ್ರವನ್ನು ಗಾನಮಾಡೋಣ; ಆತನು ಮಹಾಜಯಶಾಲಿಯಾದನು; . . . ಯೆಹೋವನೇ ಯುಗಯುಗಾಂತರಗಳಲ್ಲಿಯೂ ಆಳುವನು.” (ವಿಮೋಚನಕಾಂಡ 15:1, 18) ಅವರ ಮನಸ್ಸಿಗೆ ಮೊದಲು ಬಂದ ವಿಚಾರ, ದೇವರನ್ನು ಘನಪಡಿಸಬೇಕೆಂಬದೇ. ಏಕೆಂದರೆ ಆ ಸನ್ನಿವೇಶದಲ್ಲಿ ಯೆಹೋವನು ತನ್ನ ಪರಮಾಧಿಕಾರವನ್ನು ತೋರಿಸಿಕೊಟ್ಟಿದ್ದನು.
14 ಈ ರೋಮಾಂಚಕ ಘಟನೆಗಳಿಂದ ನಾವು ಯಾವ ಉಪದೇಶ, ಸಾಂತ್ವನ ಮತ್ತು ನಿರೀಕ್ಷೆಯನ್ನು ಪಡೆದುಕೊಳ್ಳುತ್ತೇವೆ? ಯೆಹೋವನು, ತನ್ನ ಜನರು ಅನುಭವಿಸಬೇಕಾದ ಯಾವುದೇ ಸಂಕಷ್ಟಕ್ಕಾಗಿಯೂ ಸಜ್ಜಾಗಿದ್ದಾನೆಂದು ನಾವು ಖಂಡಿತವಾಗಿ ನೋಡಬಲ್ಲೆವು. ಅವರಿಗೆ ಎದುರಾಗಬಹುದಾದ ಯಾವುದೇ ಸನ್ನಿವೇಶವನ್ನು ಆತನು ನಿಭಾಯಿಸಬಲ್ಲನು. ಕೆಂಪು ಸಮುದ್ರವು ಇಸ್ರಾಯೇಲ್ಯರಿಗೆ ಒಂದು ತಡೆಯಾಗಿರದಂತೆ ಯೆಹೋವನು ಮೂಡಣ ದಿಕ್ಕಿನಿಂದ ಬಲವಾದ ಬಿರುಗಾಳಿ ಬೀಸುವಂತೆ ಮಾಡಿದನು. ಆದರೆ ಅದೇ ಕೆಂಪು ಸಮುದ್ರವು ಫರೋಹನ ಸೈನ್ಯಗಳಿಗೆ ಜಲಸಮಾಧಿಯಾಗುವಂತೆ ಮಾಡಲು ಶಕ್ತನಾಗಿದ್ದನು. ಇದರ ಕುರಿತು ಪರ್ಯಾಲೋಚಿಸುತ್ತಾ, “ಯೆಹೋವನು ನನಗಿದ್ದಾನೆ; ಭಯಪಡೆನು; ಮನುಷ್ಯನು ನನಗೆ ಏನು ಮಾಡಾನು?” ಎಂದು ಹೇಳಿದ ಕೀರ್ತನೆಗಾರನ ಮಾತುಗಳನ್ನು ನಾವು ಪ್ರತಿಧ್ವನಿಸಬಹುದು. (ಕೀರ್ತನೆ 118:6) ರೋಮಾಪುರ 8:31ರಲ್ಲಿ ದಾಖಲಾಗಿರುವ ಪೌಲನ ಮಾತುಗಳೂ ನಮಗೆ ಸಾಂತ್ವನ ಕೊಡುತ್ತವೆ: “ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?” ಈ ಪ್ರೇರಿತ ನುಡಿಗಳು ನಮಗೆ ಎಷ್ಟೊಂದು ಭರವಸೆಯನ್ನು ಕೊಡುತ್ತವೆ! ಅವು ನಮಗಿರಬಹುದಾದ ಯಾವುದೇ ಭಯ ಹಾಗೂ ಶಂಕೆಗಳನ್ನು ತೆಗೆದುಹಾಕಿ ನಮ್ಮಲ್ಲಿ ನಿರೀಕ್ಷೆಯನ್ನು ತುಂಬಿಸುತ್ತವೆ. ಹೀಗಿರುವುದರಿಂದ ಇಸವಿ 2008ರ ನಮ್ಮ ವರ್ಷವಚನವಾದ, ‘ಸ್ಥಿರವಾಗಿ ನಿಂತು ಯೆಹೋವನ ರಕ್ಷಣಾಕಾರ್ಯವನ್ನು ನೋಡಿರಿ’ ಎಂಬುದು ಎಷ್ಟು ಸೂಕ್ತವಾಗಿದೆ!—ವಿಮೋಚನಕಾಂಡ 14:13, NW.
15 ಇಸ್ರಾಯೇಲ್ಯರು ಐಗುಪ್ತದಿಂದ ಬಿಡುಗಡೆಯಾದ ವೃತ್ತಾಂತದಿಂದ ನಾವು ಇನ್ನೇನು ಕಲಿಯಬಲ್ಲೆವು? ಯೆಹೋವನು ಏನೇ ಮಾಡುವಂತೆ ಹೇಳಲಿ ನಾವಾತನ ಮಾತಿಗೆ ವಿಧೇಯರಾಗಬೇಕೆಂದೇ. ಪಸ್ಕಹಬ್ಬದ ತಯಾರಿಗಾಗಿ ಕೊಡಲಾದ ಪ್ರತಿಯೊಂದು ಸೂಕ್ಷ್ಮ ವಿವರವನ್ನೂ ಪಾಲಿಸುತ್ತಾ ಇಸ್ರಾಯೇಲ್ಯರು ವಿಧೇಯರಾಗಿದ್ದರು. ಅವರು ನೈಸಾನ್ 14ರ ರಾತ್ರಿಯಂದು ವಿಧೇಯತೆಯಿಂದ ತಮ್ಮ ಮನೆಯೊಳಗೇ ಉಳಿದರು. ಅವರು ಕೊನೆಗೆ ಐಗುಪ್ತದಿಂದ ಹೊರಡುವಾಗ “ಸೈನ್ಯ ವ್ಯೂಹದೋಪಾದಿ” (NW) ಹೋಗಬೇಕಾಗಿತ್ತು. (ವಿಮೋಚನಕಾಂಡ 13:18) ಇಂದು, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಬರುವಂಥ ಮಾರ್ಗದರ್ಶನವನ್ನು ನಾವು ಅನುಸರಿಸುವುದು ಅತಿ ಪ್ರಾಮುಖ್ಯ! (ಮತ್ತಾಯ 24:45) ನಮ್ಮ ಹಿಂದೆ ಕೇಳಿಬರುವ ದೇವರ ವಾಕ್ಯಕ್ಕೆ ನಾವು ತುಂಬ ಜಾಗ್ರತೆಯಿಂದ ಕಿವಿಗೊಡಬೇಕು. ಅದು ಹೀಗನ್ನುತ್ತದೆ: “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” (ಯೆಶಾಯ 30:21) ಮಹಾ ಸಂಕಟವು ಆರಂಭಗೊಳ್ಳುವ ಸಮಯಕ್ಕೆ ನಾವು ಹೆಚ್ಚೆಚ್ಚು ಹತ್ತಿರವಾಗುತ್ತಿರುವಾಗ ಕೆಲವೊಂದು ವಿವರವಾದ ಸೂಚನೆಗಳು ನಮಗೆ ಸಿಗಬಹುದು. ಆ ಸಂಕಟಮಯ ದಿನಗಳ ಮಧ್ಯದಿಂದ ನಾವು ಸುರಕ್ಷಿತರಾಗಿ ಸಾಗಬೇಕಾದರೆ, ಯೆಹೋವನ ಇತರ ನಿಷ್ಠಾವಂಥ ಸೇವಕರೊಂದಿಗೆ ಹೆಜ್ಜೆಯಿಡುವುದು ಆವಶ್ಯಕ.
16 ಇದನ್ನು ಸಹ ನೆನಪಿಸಿಕೊಳ್ಳಿ: ಒಂದು ಬದಿಯಲ್ಲಿ ಪರ್ವತಗಳು ಮತ್ತು ಇನ್ನೊಂದು ಬದಿಯಲ್ಲಿ ಕೆಂಪು ಸಮುದ್ರವು ಇದ್ದಂಥ ಸ್ಥಳದಲ್ಲಿ ಇಸ್ರಾಯೇಲ್ಯರು ಸಿಕ್ಕಿಬಿದ್ದಿರುವಂತೆ ತೋರಿದ ಸನ್ನಿವೇಶಕ್ಕೆ ಯೆಹೋವನು ನಡೆಸಿದ್ದನು. ಖಂಡಿತವಾಗಿ ಏನೋ ಎಡವಟ್ಟಾಗಿರುವಂತೆ ತೋರಿತು. ಆದರೂ ಸನ್ನಿವೇಶವು ಯೆಹೋವನ ಅಂಕೆಯಲ್ಲಿತ್ತು, ಮತ್ತು ಎಲ್ಲವೂ ಸುಗಮವಾಗಿ ಅಂತ್ಯಗೊಂಡಿತು. ಅದು ಆತನಿಗೆ ಸ್ತುತಿಯನ್ನೂ ಆತನ ಜನರಿಗೆ ರಕ್ಷಣೆಯನ್ನೂ ತಂದಿತು. ಇಂದು, ಸಂಘಟನೆಯಲ್ಲಿ ಕೆಲವೊಂದು ವಿಷಯಗಳನ್ನು ನಿರ್ದಿಷ್ಟ ರೀತಿಯಲ್ಲಿ ಏಕೆ ನಡೆಸಲಾಗುತ್ತದೆಂದು ನಮಗೆ ಸರಿಯಾಗಿ ಅರ್ಥವಾಗದೇ ಇರಬಹುದು. ಆದರೆ, ಯೆಹೋವನು ತನ್ನ ನಂಬಿಗಸ್ತ ಸಂಪರ್ಕ-ಮಾಧ್ಯಮದ ಮುಖಾಂತರ ಕೊಡುವ ಮಾರ್ಗದರ್ಶನದಲ್ಲಿ ನಾವು ನಿಜವಾಗಿ ಭರವಸೆಯನ್ನಿಡಬಲ್ಲೆವು. ಕೆಲವೊಮ್ಮೆ ನಮ್ಮ ಶತ್ರುಗಳಿಗೆ ಯಶಸ್ಸು ಸಿಗುತ್ತಿರುವಂತೆ ತೋರಬಹುದು. ನಮ್ಮ ಸೀಮಿತ ದೃಷ್ಟಿಕೋನದಿಂದಾಗಿ ನಾವು ಇಡೀ ಚಿತ್ರಣವನ್ನು ನೋಡಲು ಶಕ್ತರಾಗಿರಲಿಕ್ಕಿಲ್ಲ. ಆದರೂ, ಹಿಂದೆ ಇಸ್ರಾಯೇಲ್ಯರೊಂದಿಗೆ ಯೆಹೋವನು ಮಾಡಿದಂತೆಯೇ, ಆತನು ತಕ್ಕ ಕಾಲದಲ್ಲಿ ಸನ್ನಿವೇಶವನ್ನು ಬದಲಾಯಿಸಶಕ್ತನು.—ಜ್ಞಾನೋಕ್ತಿ 3:5.
ಯೆಹೋವನ ಮೇಲೆ ದೃಢಭರವಸೆಯಿರಲಿ
17 ಇಸ್ರಾಯೇಲ್ಯರು, ಹಗಲುಹೊತ್ತಿನಲ್ಲಿದ್ದ ಮೇಘಸ್ತಂಭ ಮತ್ತು ರಾತ್ರಿವೇಳೆಯಲ್ಲಿದ್ದ ಅಗ್ನಿಸ್ತಂಭದ ಕುರಿತಾಗಿ ನೆನಪಿಸಿಕೊಂಡಾಗ ಅವರಲ್ಲಿ ಹೊಮ್ಮುತ್ತಿದ್ದ ಭರವಸೆಯ ಭಾವನೆಯನ್ನು ನೀವು ಊಹಿಸಬಲ್ಲಿರಾ? ಒಬ್ಬ “ದೇವದೂತನು” ಅವರ ಪ್ರಯಾಣವನ್ನು ಮಾರ್ಗದರ್ಶಿಸುತ್ತಿದ್ದನು ಎಂಬದಕ್ಕೆ ಆ ಸ್ತಂಭಗಳು ಸಾಕ್ಷ್ಯವಾಗಿದ್ದವು. (ವಿಮೋಚನಕಾಂಡ 13:21, 22; 14:19) ಇಂದು ಯೆಹೋವನು ತನ್ನ ಜನರೊಂದಿಗಿದ್ದು ಅವರನ್ನು ಮಾರ್ಗದರ್ಶಿಸುತ್ತಾನೆ, ಸಂರಕ್ಷಿಸುತ್ತಾನೆ ಮತ್ತು ಬಿಡುಗಡೆಮಾಡುತ್ತಾನೆಂಬ ಭರವಸೆ ನಮಗಿರಬಲ್ಲದು. ನಾವು ಈ ವಾಗ್ದಾನವನ್ನು ಮನಸ್ಸಿನಲ್ಲಿಟ್ಟುಕೊಳ್ಳಬಹುದು: “ಯೆಹೋವನು . . . ತನ್ನ ಭಕ್ತರನ್ನು ಎಂದಿಗೂ ಕೈಬಿಡುವವನಲ್ಲ. ಅವರು ಸದಾಕಾಲವೂ ಸುರಕ್ಷಿತರಾಗಿರುವರು.” (ಕೀರ್ತನೆ 37:28) ಇಂದು ದೇವರ ಸೇವಕರಿಗೆ ಸಹಾಯ ಮಾಡುತ್ತಿರುವ ಆ ಬಲಿಷ್ಠ ದೇವದೂತ ಗಣಗಳನ್ನು ನಾವೆಂದೂ ಮರೆಯದಿರೋಣ. ಅವರ ಬೆಂಬಲದಿಂದ ನಾವು ‘ಸ್ಥಿರವಾಗಿ ನಿಂತು ಯೆಹೋವನ ರಕ್ಷಣಾಕಾರ್ಯವನ್ನು ನೋಡಬಹುದು.’—ವಿಮೋಚನಕಾಂಡ 14:13, NW.
18 ನಾವೆಲ್ಲರೂ ಸತ್ಯದ ಮಾರ್ಗದಲ್ಲಿ ‘ಸ್ಥಿರವಾಗಿ ನಿಲ್ಲುವಂತೆ’ ಯಾವುದು ಸಹಾಯ ಮಾಡುವುದು? ಪೌಲನು ಎಫೆಸದವರಿಗೆ ಬರೆದ ಪತ್ರದಲ್ಲಿ ವರ್ಣಿಸಿರುವ ಆಧ್ಯಾತ್ಮಿಕ ರಕ್ಷಾಕವಚವನ್ನು ಧರಿಸುವುದೇ. ‘ದೇವರು ಕೊಟ್ಟಿರುವ ಸಂಪೂರ್ಣ ರಕ್ಷಾಕವಚವನ್ನು’ (NW) ನಾವು ಧರಿಸುವಂತೆ ಅಪೊಸ್ತಲನು ಬುದ್ಧಿಹೇಳುತ್ತಾನೆಂದು ಗಮನಿಸಿರಿ. ನಾವು ಈ ಆಧ್ಯಾತ್ಮಿಕ ರಕ್ಷಾಕವಚದ ಎಲ್ಲ ಭಾಗಗಳನ್ನು ಧರಿಸುತ್ತಿದ್ದೇವೋ? ಮುಂದಿನ ವರ್ಷದಾದ್ಯಂತ, ನಮ್ಮಲ್ಲಿ ಪ್ರತಿಯೊಬ್ಬರೂ ಆ ರಕ್ಷಾಕವಚದ ಪ್ರತಿಯೊಂದು ಭಾಗವನ್ನು ಸರಿಯಾಗಿ ಧರಿಸಿದ್ದೇವೆಂದು ಖಚಿತಪಡಿಸಿಕೊಳ್ಳುವುದು ಉತ್ತಮ. ನಮ್ಮ ಶತ್ರುವಾಗಿರುವ ಪಿಶಾಚನಾದ ಸೈತಾನನಿಗೆ ನಮ್ಮ ದುರ್ಬಲತೆಗಳು ತಿಳಿದಿವೆ. ನಾವು ಎಚ್ಚರಿಕೆಯಿಂದಿರದ ಸಮಯದಲ್ಲಿ ನಮ್ಮನ್ನು ಹಿಡಿಯಲು ಅಥವಾ ಒಂದು ಸುಲಭಬೇಧ್ಯ ಸನ್ನಿವೇಶದಲ್ಲಿ ನಮ್ಮನ್ನು ಆಕ್ರಮಿಸಲು ಅವನು ಪ್ರಯತ್ನಿಸುತ್ತಾನೆ. ನಮಗೆ ‘ದುರಾತ್ಮಗಳ ಸೇನೆಯ ವಿರುದ್ಧ ಹೋರಾಟವಿದೆ.’ ಹಾಗಿದ್ದರೂ, ಯೆಹೋವನ ಬಲದಿಂದ ನಾವು ಜಯಶಾಲಿಗಳಾಗಬಲ್ಲೆವು!—ಎಫೆಸ 6:11-18; ಜ್ಞಾನೋಕ್ತಿ 27:11.
19 ಯೇಸು ತನ್ನ ಹಿಂಬಾಲಕರಿಗಂದದ್ದು: “ನಿಮ್ಮ ಸೈರಣೆ [“ತಾಳ್ಮೆ,” NW]ಯಿಂದ ನಿಮ್ಮ ಪ್ರಾಣಗಳನ್ನು ಪಡಕೊಳ್ಳುವಿರಿ.” (ಲೂಕ 21:19) ಎದುರಾಗುವಂಥ ಯಾವುದೇ ಕಷ್ಟಗಳನ್ನು ನಂಬಿಗಸ್ತಿಕೆಯಿಂದ ತಾಳಿಕೊಳ್ಳುವವರಲ್ಲಿ ನಾವು ಒಬ್ಬರಾಗಿರೋಣ. ಹೀಗೆ, ದೇವರ ಅಪಾತ್ರ ಕೃಪೆಯಿಂದ ‘ಸ್ಥಿರವಾಗಿ ನಿಂತು ಯೆಹೋವನ ರಕ್ಷಣಾಕಾರ್ಯವನ್ನು ನೋಡುವ’ ಸದವಕಾಶ ನಮಗೆ ಸಿಗುವುದು.
ನಿಮ್ಮ ಉತ್ತರವೇನು?
• ಶೀಘ್ರದಲ್ಲೇ ಯಾವ ರೋಮಾಂಚಕಾರಿ ಘಟನೆಗಳು ನಡೆಯಲಿವೆ?
• ಸಾ.ಶ.ಪೂ. 1513ರಲ್ಲಿ ಯೆಹೋವನು ತನ್ನ ರಕ್ಷಣಾಶಕ್ತಿಯನ್ನು ಹೇಗೆ ಪ್ರದರ್ಶಿಸಿದನು?
• ಭವಿಷ್ಯದಲ್ಲಿ ನೀವೇನು ಮಾಡಲು ದೃಢನಿಶ್ಚಯದಿಂದಿದ್ದೀರಿ?
[ಅಧ್ಯಯನ ಪ್ರಶ್ನೆಗಳು]
1. ಮಾನವಕುಲವು ಭವಿಷ್ಯದಲ್ಲಿ ಯಾವ ಕಠಿನ ಘಟನೆಗಳನ್ನು ಎದುರಿಸಲಿದೆ?
2. ಮಹಾ ಸಂಕಟವು ಆರಂಭವಾಗುವುದನ್ನು ಯಾವುದು ತಡೆದುಹಿಡಿಯುತ್ತಿದೆ?
3. ಮಹಾ ಸಂಕಟದ ಮೊದಲ ಘಟನೆ ಏನಾಗಿರುವುದು?
4. ಇನ್ನೂ ಮುಂದಕ್ಕೆ ಯಾವ ಘಟನೆಗಳು ನಡೆಯಲಿವೆ?
5. ಯೆಹೋವನಿಗೆ ನಿಷ್ಠರಾಗಿ ಉಳಿಯುವವರಿಗೆ ಯಾವ ಆನಂದವು ಕಾದಿದೆ?
6. ಸನ್ನಿಹಿತ ಘಟನೆಗಳನ್ನು ಮನಸ್ಸಿನಲ್ಲಿಟ್ಟು ನಾವೇನನ್ನು ಪರಿಗಣಿಸುವೆವು?
7. ಸಾ.ಶ.ಪೂ. 1513ರಲ್ಲಿ ಐಗುಪ್ತದಲ್ಲಿ ಯಾವ ಪ್ರಕ್ಷುಬ್ಧ ಸ್ಥಿತಿ ಉಂಟಾಗುತ್ತದೆ?
8. ಜೀವ ಉಳಿಸಲಿಕ್ಕಾಗಿ ಇಸ್ರಾಯೇಲ್ಯರಿಗೆ ಯಾವ ಸೂಚನೆಗಳನ್ನು ಕೊಡಲಾಗುತ್ತದೆ, ಮತ್ತು ಫಲಿತಾಂಶವೇನು?
9. ದೇವರು ಇಸ್ರಾಯೇಲ್ಯರನ್ನು ಐಗುಪ್ತದಿಂದ ಹೊರತಂದ ಮಾರ್ಗ ಯಾವುದು, ಮತ್ತು ಆ ಮಾರ್ಗವನ್ನೇಕೆ ಆರಿಸಲಾಯಿತು?
10. ಇಸ್ರಾಯೇಲ್ಯರು ಪೀಹಹೀರೋತಿನ ಮುಂದೆ ಇಳುಕೊಳ್ಳುವಂತೆ ದೇವರು ಏಕೆ ಆಜ್ಞಾಪಿಸುತ್ತಾನೆ?
11. (ಎ) ಫರೋಹನು ಏನು ಮಾಡುತ್ತಾನೆ, ಮತ್ತು ಅದಕ್ಕೆ ಇಸ್ರಾಯೇಲ್ಯರು ಹೇಗೆ ಪ್ರತಿಕ್ರಿಯಿಸುತ್ತಾರೆ? (ಬಿ) ಇಸ್ರಾಯೇಲ್ಯರ ದೂರುಗಳಿಗೆ ಮೋಶೆ ಹೇಗೆ ಉತ್ತರಕೊಡುತ್ತಾನೆ?
12. ಯೆಹೋವನು ತನ್ನ ಜನರನ್ನು ಹೇಗೆ ರಕ್ಷಿಸುತ್ತಾನೆ?
13. ಇಸ್ರಾಯೇಲ್ಯರು ತಮ್ಮ ಬಿಡುಗಡೆಯ ವಿಷಯದಲ್ಲಿ ಹೇಗೆ ಪ್ರತಿಕ್ರಿಯಿಸಿದರು?
14. (ಎ) ಇಸ್ರಾಯೇಲಿನ ಅನುಭವದಿಂದ ನಾವು ಯೆಹೋವನ ಬಗ್ಗೆ ಏನು ಕಲಿಯಬಲ್ಲೆವು? (ಬಿ) ಇಸವಿ 2008ರ ವರ್ಷವಚನ ಯಾವುದು?
15. ಇಸ್ರಾಯೇಲ್ ಐಗುಪ್ತದಿಂದ ಬಿಡುಗಡೆಯಾಗುವುದಕ್ಕೆ ವಿಧೇಯತೆ ಎಷ್ಟು ಪ್ರಾಮುಖ್ಯವಾಗಿತ್ತು, ಮತ್ತು ಇಂದು ಅದು ಎಷ್ಟು ಪ್ರಾಮುಖ್ಯ?
16. ಇಸ್ರಾಯೇಲ್ಯರನ್ನು ಬಿಡುಗಡೆಮಾಡಲು ದೇವರು ಸನ್ನಿವೇಶವನ್ನು ಬದಲಾಯಿಸಿದ ರೀತಿಯಿಂದ ನಾವೇನು ಕಲಿಯಬಲ್ಲೆವು?
17. ನಾವು ದೇವರ ಮಾರ್ಗದರ್ಶನದಲ್ಲಿ ಏಕೆ ಸಂಪೂರ್ಣ ಭರವಸೆ ಇಟ್ಟುಕೊಳ್ಳಬಹುದು?
18. ‘ದೇವರಿಂದ ಬಂದಿರುವ ಸಂಪೂರ್ಣ ರಕ್ಷಾಕವಚವನ್ನು’ ನಾವು ಏಕೆ ಹಾಕಬೇಕು?
19. ನಾವು ತಾಳಿಕೊಳ್ಳುವಲ್ಲಿ ನಮಗೆ ಏನು ಮಾಡುವ ಸದವಕಾಶ ಸಿಗುವುದು?
[Blurb on page 22]
ಇಸವಿ 2008ರ ವರ್ಷವಚನ: ‘ಸ್ಥಿರವಾಗಿ ನಿಂತು ಯೆಹೋವನ ರಕ್ಷಣಾಕಾರ್ಯವನ್ನು ನೋಡಿರಿ.’ —ವಿಮೋಚನಕಾಂಡ 14:13, NW.
[Picture on page 19]
ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲಾಯಿತು
[Picture on page 20]
ಫರೋಹನ ಹಠಮಾರಿತನ ಐಗುಪ್ತದ ಮೇಲೆ ವಿಪತ್ತನ್ನು ಬರಮಾಡಿತು
[Picture on page 21]
ಇಸ್ರಾಯೇಲ್ಯರು ಯೆಹೋವನು ಆಜ್ಞಾಪಿಸಿದ್ದೆಲ್ಲವನ್ನೂ ಮಾಡಿದಾಗ ಬದುಕಿ ಉಳಿದರು