ಪವಿತ್ರ ಸೇವೆಯನ್ನು ಸಲ್ಲಿಸುತ್ತಿರುವ ಒಂದು ಮಹಾ ಸಮೂಹ
“ಅವರು ಆತನ ಆಲಯದಲ್ಲಿ ಹಗಲಿರುಳು ಆತನಿಗೆ ಪವಿತ್ರ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ.”—ಪ್ರಕಟನೆ 7:15, NW.
1. ಆತ್ಮಿಕ ತಿಳಿವಳಿಕೆಯ ಯಾವ ಮೈಲುಗಲ್ಲನ್ನು 1935 ರಲ್ಲಿ ಮುಟ್ಟಲಾಯಿತು?
1935, ಮೇ 31 ರಂದು, ವಾಷಿಂಗ್ಟನ್ ಡಿ.ಸಿ. ಯಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅಧಿವೇಶನದಲ್ಲಿನ ಪ್ರತಿನಿಧಿಗಳೊಳಗೆ ಮಹಾ ಆನಂದವಿತ್ತು. ಅಲ್ಲಿ, ಪ್ರಥಮ ಬಾರಿಗೆ, ಪ್ರಕಟನೆ 7:9ರ ಮಹಾ ಜನಸ್ತೋಮವು (ಅಥವಾ, ಮಹಾ ಸಮೂಹವು) ಬೈಬಲಿನ ಉಳಿದ ಭಾಗದೊಂದಿಗೆ ಹೊಂದಿಕೆಯಲ್ಲಿ ಮತ್ತು ಈಗಾಗಲೇ ವಿಕಸಿಸಲು ತೊಡಗಿದ್ದ ಘಟನೆಗಳನುಸಾರ ಸ್ಪಷ್ಟವಾಗಿಗಿ ಗುರುತಿಸಲ್ಪಟ್ಟಿತು.
2. ದೇವರು ತಮ್ಮನ್ನು ಸ್ವರ್ಗೀಯ ಜೀವಿತಕ್ಕೆ ಕರೆದಿರಲಿಲ್ಲವೆಂದು ವರ್ಧಿಸುತ್ತಿದ್ದ ಸಂಖ್ಯೆಯವರು ಗ್ರಹಿಸಿದರೆಂದು ಯಾವುದು ಸೂಚಿಸಿತು?
2 ಸುಮಾರು ಆರು ವಾರಗಳ ಮುಂಚೆ, ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ, ಕರ್ತನ ಸಂಧ್ಯಾ ಭೋಜನದ ಆಚರಣೆಗೆ ಹಾಜರಾಗಿದ್ದ 10,681 ಮಂದಿ (ಸುಮಾರು 6 ಜನರಲ್ಲಿ ಒಬ್ಬರು) ಸಂಕೇತಾತ್ಮಕ ರೊಟ್ಟಿ ಮತ್ತು ದ್ರಾಕ್ಷಾರಸದಲ್ಲಿ ಪಾಲ್ಗೊಂಡಿರಲಿಲ್ಲ, ಮತ್ತು ಇವರಲ್ಲಿ 3,688 ಮಂದಿ ದೇವರ ರಾಜ್ಯದ ಸಕ್ರಿಯ ಘೋಷಕರಾಗಿದ್ದರು. ಕುರುಹುಗಳಲ್ಲಿ ಪಾಲ್ಗೊಳ್ಳುವುದರಿಂದ ಅವರು ತಮ್ಮನ್ನು ಏಕೆ ತಡೆದುಕೊಂಡರು? ಏಕೆಂದರೆ ಬೈಬಲಿನಿಂದ ಕಲಿತಿದ್ದ ವಿಷಯಗಳ ಆಧಾರದ ಮೇಲೆ, ದೇವರು ಅವರನ್ನು ಸ್ವರ್ಗೀಯ ಜೀವಿತಕ್ಕೆ ಕರೆದಿರಲಿಲ್ಲವೆಂದು, ಆದರೆ ಇನ್ನೊಂದು ವಿಧದಲ್ಲಿ ಯೆಹೋವನ ಪ್ರೀತಿಯ ಒದಗಿಸುವಿಕೆಗಳಲ್ಲಿ ಅವರು ಭಾಗವಹಿಸಬಹುದಿತ್ತೆಂದು ಅವರು ಗ್ರಹಿಸಿದರು. ಆದುದರಿಂದ ಆ ಅಧಿವೇಶನದಲ್ಲಿ, “ಭೂಮಿಯಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯುಳ್ಳವರೆಲ್ಲರೂ ದಯವಿಟ್ಟು ಎದ್ದುನಿಲ್ಲುವಿರೊ,” ಎಂದು ಭಾಷಣಕಾರನು ಕೇಳಿದಾಗ, ಏನು ಸಂಭವಿಸಿತು? ಸಾವಿರಾರು ಜನರು ಎದ್ದುನಿಂತರು, ಮತ್ತು ಇದನ್ನನುಸರಿಸಿ ಸಭಿಕರ ಕಡೆಯಿಂದ ಸುದೀರ್ಘ ಪ್ರಶಂಸಾಪರ ಘೋಷವುಂಟಾಯಿತು.
3. ಮಹಾ ಜನಸ್ತೋಮದ ಗುರುತಿಸುವಿಕೆಯು ಕ್ಷೇತ್ರ ಶುಶ್ರೂಷೆಗೆ ನವೀಕರಿಸಿದ ಉತ್ತೇಜನವನ್ನು ಏಕೆ ನೀಡಿತು, ಮತ್ತು ಅದರ ಕುರಿತು ಸಾಕ್ಷಿಗಳಿಗೆ ಹೇಗನಿಸಿತು?
3 ಆ ಅಧಿವೇಶನದಲ್ಲಿ ಪ್ರತಿನಿಧಿಗಳು ಕಲಿತಂಥ ವಿಷಯವು ಅವರ ಶುಶ್ರೂಷೆಗೆ ಹೊಸ ಪ್ರೇರಣೆಯನ್ನು ನೀಡಿತು. ಈಗ, ಹಳೆಯ ವ್ಯವಸ್ಥೆಯ ಅಂತ್ಯದ ಮೊದಲು, ಕೇವಲ ಕೆಲವು ಸಾವಿರ ಜನರಿಗಲ್ಲ ಆದರೆ ಒಂದು ಮಹಾ ಜನಸ್ತೋಮಕ್ಕೆ, ಪ್ರಮೋದವನ ಭೂಮಿಯ ಮೇಲೆ ಸದಾಕಾಲ ಜೀವಿಸುವ ದೃಷ್ಟಿಯಿಂದ, ಜೀವದ ಸಂರಕ್ಷಣೆಗಾಗಿರುವ ಯೆಹೋವನ ಏರ್ಪಾಡಿನೊಳಗೆ ಬರುವ ಅವಕಾಶವು ಕೊಡಲ್ಪಡುವುದೆಂಬ ವಿಷಯವನ್ನು ಅವರು ಗಣ್ಯಮಾಡಿದರು. ಎಂತಹ ಹೃತ್ಪೂರ್ವಕ ಸಂದೇಶವನ್ನು ಸತ್ಯ ಪ್ರಿಯರಿಗೆ ಅಲ್ಲಿ ನೀಡಲಾಯಿತು! ಆನಂದಮಯವಾದ ಒಂದು ಮಹತ್ತರವಾದ ಕೆಲಸವನ್ನು ಮಾಡಲಿಕ್ಕಿತ್ತೆಂದು ಯೆಹೋವನ ಸಾಕ್ಷಿಗಳು ಗ್ರಹಿಸಿದರು. ವರ್ಷಗಳಾನಂತರ, ಆಡಳಿತ ಮಂಡಳಿಯ ಸದಸ್ಯರಾದ ಜಾನ್ ಬೂತ್ ಜ್ಞಾಪಿಸಿಕೊಂಡದ್ದು: “ಹರ್ಷಿಸಲು ಆ ಸಮ್ಮೇಳನವು ನಮಗೆ ಹೆಚ್ಚನ್ನು ನೀಡಿತು.”
4. (ಎ) 1935 ರಿಂದ ಎಷ್ಟರ ಮಟ್ಟಿಗೆ ವಾಸ್ತವಿಕವಾಗಿ ಮಹಾ ಸಮೂಹದ ಒಟ್ಟುಗೂಡಿಸುವಿಕೆಯು ಸಂಭವಿಸಿದೆ? (ಬಿ) ತಮ್ಮದು ಸಜೀವವಾದ ನಂಬಿಕೆಯೆಂದು ಯಾವ ವಿಧದಲ್ಲಿ ಮಹಾ ಸಮೂಹದವರು ಪ್ರಮಾಣವನ್ನು ಕೊಡುತ್ತಿದ್ದಾರೆ?
4 ಅನುಸರಿಸಿ ಬಂದ ವರ್ಷಗಳಲ್ಲಿ, ಯೆಹೋವನ ಸಾಕ್ಷಿಗಳ ಸಂಖ್ಯೆಯು ನಾಟಕೀಯವಾಗಿ ಹೆಚ್ಚಿತು. II ನೆಯ ಲೋಕ ಯುದ್ಧದ ಸಮಯದಲ್ಲಿ ಅವರ ಮೇಲೆ ಅನೇಕ ವೇಳೆ ಹೇರಲಾದ ಹಿಂಸಾತ್ಮಕ ವಿರೋಧದ ಹೊರತೂ, ಒಂದು ದಶಕದೊಳಗೆ ಅವರ ಸಂಖ್ಯೆಗಳು ಮೂರು ಪಟ್ಟು ಹೆಚ್ಚಾದವು. 1935 ರಲ್ಲಿ ಸಾರ್ವಜನಿಕ ಸಾಕ್ಷಿಯನ್ನು ಕೊಡುತ್ತಿದ್ದ 56,153 ಪ್ರಚಾರಕರು, 1994 ರೊಳಗಾಗಿ 230 ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿರುವ 49,00,000 ಕ್ಕಿಂತಲೂ ಹೆಚ್ಚಾದ ರಾಜ್ಯ ಘೋಷಕರಾಗಿ ಹೆಚ್ಚಿದರು. ಇವರಲ್ಲಿ ಹೆಚ್ಚಿನವರು, ಪ್ರಮೋದವನ ಭೂಮಿಯ ಮೇಲೆ ಜೀವಿತದ ಪರಿಪೂರ್ಣತೆಯನ್ನು ಯೆಹೋವನು ಅನುಗ್ರಹಿಸುವವರೊಂದಿಗೆ ಸೇರಲಿಕ್ಕಾಗಿ ತೀಕ್ಷೈವಾದ ನಿರೀಕ್ಷೆಯಿಂದ ಎದುರುನೋಡುತ್ತಾರೆ. ಚಿಕ್ಕ ಹಿಂಡಿಗೆ ಹೋಲಿಸುವಾಗ, ನಿಜವಾಗಿಯೂ ಅವರು ಒಂದು ಮಹಾ ಸಮೂಹವಾಗಿ ಪರಿಣಮಿಸಿದ್ದಾರೆ. ನಂಬಿಕೆ ಇದೆಯೆಂದು ಹೇಳಿ, ಅದನ್ನು ಪ್ರದರ್ಶಿಸದೆ ಇರುವ ಜನರು ಅವರಾಗಿರುವುದಿಲ್ಲ. (ಯಾಕೋಬ 1:22; 2:14-17) ಅವರಲ್ಲಿ ಎಲ್ಲರು ಇತರರೊಂದಿಗೆ ದೇವರ ರಾಜ್ಯದ ಸುವಾರ್ತೆಯನ್ನು ಹಂಚಿಕೊಳ್ಳುತ್ತಾರೆ. ಆ ಸಂತುಷ್ಟ ಗುಂಪಿನಲ್ಲಿ ನೀವು ಒಬ್ಬರಾಗಿದ್ದೀರೊ? ಸಕ್ರಿಯ ಸಾಕ್ಷಿಯಾಗಿರುವುದು ಪ್ರಾಮುಖ್ಯವಾದೊಂದು ಗುರುತಿಸುವ ಚಿಹ್ನೆಯಾಗಿದೆ, ಆದರೆ ಹೆಚ್ಚಿನ ವಿಷಯವು ಒಳಗೊಂಡಿದೆ.
“ಸಿಂಹಾಸನದ ಮುಂದೆ ನಿಂತಿರುವುದು”
5. ಮಹಾ ಸಮೂಹದವರು “ಸಿಂಹಾಸನದ ಮುಂದೆ ನಿಂತಿರುವ” ಸಂಗತಿಯಿಂದ ಯಾವ ವಿಷಯವು ಸೂಚಿಸಲ್ಪಡುತ್ತದೆ?
5 ಅಪೊಸ್ತಲ ಯೋಹಾನನಿಗೆ ಕೊಡಲ್ಪಟ್ಟ ದರ್ಶನದಲ್ಲಿ, ಅವರು “ಸಿಂಹಾಸನದ ಮುಂದೆ ಮತ್ತು ಕುರಿಮರಿಯ ಮುಂದೆ ನಿಂತಿರುವುದನ್ನು” ಅವನು ಕಂಡನು. (ಪ್ರಕಟನೆ 7:9, NW) ದೇವರ ಸಿಂಹಾಸನದ ಮುಂದೆ ಅವರ ನಿಲ್ಲುವಿಕೆಯು, ಈ ಸಂದರ್ಭದಲ್ಲಿ ವರ್ಣಿಸಲಾದಂತೆ, ಯೆಹೋವನ ಸಾರ್ವಭೌಮತೆಗೆ ಅವರು ಪೂರ್ಣ ಮನ್ನಣೆಯನ್ನು ಕೊಡುತ್ತಾರೆಂಬುದನ್ನು ಸೂಚಿಸುತ್ತದೆ. ಇದು ಹೆಚ್ಚಿನದನ್ನು ಒಳಗೊಳ್ಳುತ್ತದೆ. ದೃಷ್ಟಾಂತಕ್ಕೆ: (1) ಆತನ ಸೇವಕರಿಗಾಗಿ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂದು ನಿರ್ಣಯಿಸಲಿಕ್ಕಿರುವ ಯೆಹೋವನ ಹಕ್ಕನ್ನು ಅವರು ಅಂಗೀಕರಿಸುತ್ತಾರೆ. (ಆದಿಕಾಂಡ 2:16, 17; ಯೆಶಾಯ 5:20, 21) (2) ಯೆಹೋವನು ಆತನ ವಾಕ್ಯದ ಮುಖಾಂತರ ಅವರೊಂದಿಗೆ ಮಾತಾಡುವಾಗ ಅವರು ಆತನಿಗೆ ಕಿವಿಗೊಡುತ್ತಾರೆ. (ಧರ್ಮೋಪದೇಶಕಾಂಡ 6:1-3; 2 ಪೇತ್ರ 1:19-21) (3) ಮೇಲ್ವಿಚಾರಣೆಯನ್ನು ಯೆಹೋವನು ಯಾರಿಗೆ ವಹಿಸಿದ್ದಾನೊ ಅವರಿಗೆ ಅಧೀನರಾಗುವ ಪ್ರಮುಖತೆಯನ್ನು ಅವರು ಗಣ್ಯಮಾಡುತ್ತಾರೆ. (1 ಕೊರಿಂಥ 11:3; ಎಫೆಸ 5:22, 23; 6:1-3; ಇಬ್ರಿಯ 13:17) (4) ಅಪರಿಪೂರ್ಣರಾಗಿದ್ದರೂ, ದೇವಪ್ರಭುತ್ವ ನಿರ್ದೇಶನಕ್ಕೆ ಮನಸ್ಸಿಲ್ಲದೆ ಅಲ್ಲ ಆದರೆ ಮನಃಪೂರ್ವಕವಾಗಿ, ಹೃದಯದಿಂದ ಪ್ರತಿಕ್ರಿಯಿಸಲು ಅವರು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುತ್ತಾರೆ. (ಜ್ಞಾನೋಕ್ತಿ 3:1; ಯಾಕೋಬ 3:17, 18) ಅವರು ಯಾರನ್ನು ಗಾಢವಾಗಿ ಗೌರವಿಸುತ್ತಾರೊ ಮತ್ತು ಆಳವಾಗಿ ಪ್ರೀತಿಸುತ್ತಾರೊ, ಆ ಯೆಹೋವನಿಗೆ ಪವಿತ್ರ ಸೇವೆಯನ್ನು ಸಲ್ಲಿಸಲು ಅವರು ಸಿಂಹಾಸನದ ಮುಂದೆ ಇದ್ದಾರೆ. ಈ ಮಹಾ ಸಮೂಹದ ವಿಷಯದಲ್ಲಿ, ಸಿಂಹಾಸನದ ಮುಂದೆ ಅವರ ‘ನಿಲ್ಲುವಿಕೆಯು’ ಸಿಂಹಾಸನದ ಮೇಲೆ ಕುಳಿತಿರುವಾತನ ಮೆಚ್ಚಿಕೆಯನ್ನು ಸೂಚಿಸುತ್ತದೆ. (ಹೋಲಿಸಿ ಪ್ರಕಟನೆ 6:16, 17.) ಯಾವ ಆಧಾರದ ಮೇಲೆ ಮೆಚ್ಚಿಕೆ?
“ಬಿಳಿ ನಿಲುವಂಗಿಗಳನ್ನು ತೊಟ್ಟು” ಕೊಂಡು
6. (ಎ) ಮಹಾ ಸಮೂಹದವರು “ಬಿಳಿ ನಿಲುವಂಗಿಗಳನ್ನು ತೊಟ್ಟು” ಕೊಂಡಿರುವುದರ ಅರ್ಥವೇನು? (ಬಿ) ಮಹಾ ಸಮೂಹದವರು ಯೆಹೋವನ ಮುಂದೆ ನೀತಿಯ ನಿಲುವನ್ನು ಪಡೆಯುವುದು ಹೇಗೆ? (ಸಿ) ಕ್ರಿಸ್ತನ ಸುರಿಸಲ್ಪಟ್ಟ ರಕ್ತದಲ್ಲಿ ನಂಬಿಕೆಯು ಎಷ್ಟರ ಮಟ್ಟಿಗೆ ಮಹಾ ಸಮೂಹದವರ ಜೀವಿತಗಳನ್ನು ಪ್ರಭಾವಿಸಿದೆ?
6 ಅಪೊಸ್ತಲ ಯೋಹಾನನು ಕಂಡಂಥ ವಿಷಯಗಳ ಅವನ ವರ್ಣನೆಯು ಹೇಳುವುದೇನೆಂದರೆ, ಈ ಮಹಾ ಸಮೂಹದ ಸದಸ್ಯರು “ಬಿಳಿ ನಿಲುವಂಗಿಗಳನ್ನು ತೊಟ್ಟು” ಕೊಂಡಿದ್ದಾರೆ. ಆ ಬಿಳಿ ನಿಲುವಂಗಿಗಳು ಯೆಹೋವನ ಮುಂದೆ ಅವರ ಶುದ್ಧವಾದ ನೀತಿಯ ನಿಲುವನ್ನು ಸಂಕೇತಿಸುತ್ತವೆ. ಅಂತಹ ಒಂದು ನಿಲುವನ್ನು ಅವರು ಹೇಗೆ ಪಡೆದರು? ಯೋಹಾನನ ದರ್ಶನದಲ್ಲಿ ಅವರು “ಕುರಿಮರಿಯ ಮುಂದೆ” ನಿಂತಿದ್ದರು ಎಂದು ನಾವು ಈಗಾಗಲೇ ಗಮನಿಸಿದ್ದೇವೆ. ಅವರು ಯೇಸು ಕ್ರಿಸ್ತನನ್ನು “ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು” ಎಂದು ಗುರುತಿಸುತ್ತಾರೆ. (ಯೋಹಾನ 1:29) ದರ್ಶನದಲ್ಲಿ, ದೇವರ ಸಿಂಹಾಸನದ ಮುಂದೆ ಉಪಸ್ಥಿತರಾಗಿದ್ದ ಹಿರಿಯರಲ್ಲಿ ಒಬ್ಬನು ಹೀಗೆ ವಿವರಿಸುವುದನ್ನು ಯೋಹಾನನು ಕೇಳಿದನು: “ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿದ್ದಾರೆ. ಈ ಕಾರಣದಿಂದ ಅವರು ದೇವರ ಸಿಂಹಾಸನದ ಮುಂದೆ” ಇದ್ದಾರೆ. (ಪ್ರಕಟನೆ 7:14, 15) ಮುಕ್ತರನ್ನಾಗಿ ಮಾಡುವ ಯೇಸುವಿನ ರಕ್ತದಲ್ಲಿ ನಂಬಿಕೆಯನ್ನು ಇಡುವ ಮೂಲಕ, ತಮ್ಮ ನಿಲುವಂಗಿಗಳನ್ನು ಅವರು ಸಾಂಕೇತಿಕವಾಗಿ ತೊಳೆದಿದ್ದಾರೆ. ಪ್ರಾಯಶ್ಚಿತದ್ತ ಕುರಿತಾದ ಬೈಬಲಿನ ಬೋಧನೆಗೆ ಅವರು ಬರಿಯ ಮಾನಸಿಕ ಸಮ್ಮತಿಯನ್ನು ಕೊಡುವುದಿಲ್ಲ. ಅದಕ್ಕಾಗಿ ಗಣ್ಯತೆಯು ಅವರು ಅಂತರಂಗದಲ್ಲಿ ಆಗಿರುವ ರೀತಿಯ ವ್ಯಕ್ತಿಯನ್ನು ಪ್ರಭಾವಿಸುತ್ತದೆ; ಹೀಗೆ, ಅವರು “ಹೃದಯದಿಂದ” ನಂಬಿಕೆಯನ್ನಿಡುತ್ತಾರೆ. (ರೋಮಾಪುರ 10:9, 10) ತಮ್ಮ ಜೀವಿತಗಳೊಂದಿಗೆ ಅವರು ಏನನ್ನು ಮಾಡುತ್ತಾರೊ, ಅದರ ಮೇಲೆ ಇದಕ್ಕೆ ವಿಶೇಷ ಪರಿಣಾಮಕಾರಿ ಪ್ರಭಾವವಿದೆ. ನಂಬಿಕೆಯಿಂದ ಕ್ರಿಸ್ತನ ಯಜ್ಞದ ಆಧಾರದ ಮೇಲೆ ಅವರು ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ಆ ಸಮರ್ಪಣೆಯನ್ನು ನೀರಿನ ನಿಮಜ್ಜನದ ಮೂಲಕ ಸಂಕೇತಿಸಿ, ತಮ್ಮ ಸಮರ್ಪಣೆಗೆ ಹೊಂದಿಕೆಯಲ್ಲಿ ನಿಜವಾಗಿಯೂ ಜೀವಿಸುತ್ತಾರೆ, ಮತ್ತು ಹೀಗೆ ದೇವರೊಂದಿಗೆ ಒಂದು ಮೆಚ್ಚಲ್ಪಟ್ಟ ಸಂಬಂಧದಲ್ಲಿ ಆನಂದಿಸುತ್ತಾರೆ. ಜಾಗರೂಕತೆಯಿಂದ ಸಂರಕ್ಷಿಸಲ್ಪಡಬೇಕಾದ ಎಂತಹ ಒಂದು ಉತ್ತಮ ಸುಯೋಗ!—2 ಕೊರಿಂಥ 5:14, 15.
7, 8. ತಮ್ಮ ವಸ್ತ್ರಗಳನ್ನು ನಿರ್ಮಲವಾಗಿಡಲು ಮಹಾ ಸಮೂಹದವರಿಗೆ ಯೆಹೋವನ ಸಂಸ್ಥೆಯು ಹೇಗೆ ಸಹಾಯ ಮಾಡಿದೆ?
7 ಅವರ ಬಾಳುವ ಕ್ಷೇಮಕ್ಕಾಗಿರುವ ಪ್ರೀತಿಯ ಕಾಳಜಿಯಿಂದ, ಯೆಹೋವನ ಸಂಸ್ಥೆಯು ಪದೇ ಪದೇ ಒಬ್ಬನ ಗುರುತಿನ ವಸ್ತ್ರಗಳನ್ನು ಅಶುದ್ಧ ಅಥವಾ ಕಲೆಗೊಳಿಸಬಹುದಾದ ಮನೋಭಾವಗಳ ಮತ್ತು ನಡತೆಯ ಕಡೆಗೆ ಗಮನವನ್ನು ನಿರ್ದೇಶಿಸಿದೆ. ಏಕೆಂದರೆ ಇದರಿಂದಾಗಿ, ಬಾಹ್ಯ ಹೇಳಿಕೆಗಳ ಹೊರತೂ, ವ್ಯಕ್ತಿಯು ಪ್ರಕಟನೆ 7:9, 10 ರಲ್ಲಿರುವ ಪ್ರವಾದನಾತ್ಮಕ ವಿವರಣೆಗೆ ನಿಜವಾಗಿಯೂ ಹೊಂದಿಕೊಳ್ಳುವುದಿಲ್ಲ. (1 ಪೇತ್ರ 1:15, 16) ಈ ಮುಂಚೆ ಪ್ರಕಟಿಸಲ್ಪಟ್ಟ ವಿಷಯವನ್ನು ಬೆಂಬಲಿಸುತ್ತಾ, ವಾಚ್ಟವರ್ ಪತ್ರಿಕೆಯು, 1941 ರಲ್ಲಿ ಮತ್ತು ತದನಂತರ ಪದೇ ಪದೇ ತೋರಿಸಿದ್ದೇನೆಂದರೆ, ಇತರರಿಗೆ ಉಪದೇಶ ನೀಡಿ ಆಮೇಲೆ ಶುಶ್ರೂಷೆಯಲ್ಲಿ ತೊಡಗಿರದ ಸಮಯದಲ್ಲಿ ಹಾದರ ಅಥವಾ ವ್ಯಭಿಚಾರದಂತಹ ನಡತೆಯಲ್ಲಿ ತೊಡಗುವುದು ಬಹಳ ಅಯೋಗ್ಯವಾಗಿದೆ. (1 ಥೆಸಲೊನೀಕ 4:3; ಇಬ್ರಿಯ 13:4) ಯೆಹೋವನ ಕ್ರೈಸ್ತ ಮದುವೆಯ ಮಟ್ಟಗಳು ಎಲ್ಲ ದೇಶಗಳಲ್ಲಿ ಅನ್ವಯಿಸುತ್ತವೆ ಎಂದು 1947 ರಲ್ಲಿ ಒತ್ತಿಹೇಳಲಾಯಿತು. ಸ್ಥಳಿಕ ರೂಢಿಯು ಯಾವ ವಿಷಯವನ್ನೇ ಅಂಗೀಕರಿಸಲಿ, ಬಹು ಪತ್ನಿತ್ವವನ್ನು ಆಚರಿಸಲು ಮುಂದುವರಿದವರು ಯೆಹೋವನ ಸಾಕ್ಷಿಗಳಾಗಿರಲು ಸಾಧ್ಯವಿರಲಿಲ್ಲ.—ಮತ್ತಾಯ 19:4-6; ತೀತ 1:5, 6.
8 1973 ರಲ್ಲಿ, ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳಿಗೆ ತೋರಿಸಲ್ಪಟ್ಟದ್ದೇನೆಂದರೆ, ಅವರಲ್ಲಿ ಪ್ರತಿಯೊಬ್ಬರು ತಂಬಾಕಿನ ದುರುಪಯೋಗದಂಥ, ನಿರ್ವಿವಾದವಾಗಿ ಅಶುದ್ಧಗೊಳಿಸುವ ಆಚರಣೆಗಳನ್ನು, ಅವರು ಎಲ್ಲೇ ಇರಲಿ, ರಾಜ್ಯ ಸಭಾಗೃಹ ಅಥವಾ ಕ್ಷೇತ್ರ ಸೇವೆಯಲ್ಲಿ ಮಾತ್ರವಲ್ಲ, ಐಹಿಕ ಕೆಲಸದಲ್ಲಿ ಅಥವಾ ಸಾರ್ವಜನಿಕ ನೋಟದಿಂದ ದೂರವಾದ ಯಾವುದೊ ನಿರ್ಜನ ಕ್ಷೇತ್ರದಲ್ಲಿ ಇರುವಾಗಲೂ ಪೂರ್ತಿಯಾಗಿ ತೊರೆಯಬೇಕು. (2 ಕೊರಿಂಥ 7:1) 1987 ರಲ್ಲಿ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಗಳಲ್ಲಿ, ಕ್ರೈಸ್ತ ಯುವ ಜನರಿಗೆ ದೇವರ ಮುಂದೆ ಒಂದು ಶುದ್ಧವಾದ ನಿಲುವನ್ನು ಕಾಪಾಡಿಕೊಳ್ಳುವ ಸಲುವಾಗಿ ಇಬ್ಬಗೆಯ ಜೀವನವನ್ನು ನಡೆಸುವುದರ ವಿರುದ್ಧ ಅವರು ಎಚ್ಚರವಾಗಿರಬೇಕೆಂದು ಬಲವಾಗಿ ಸಲಹೆ ನೀಡಲಾಯಿತು. (ಕೀರ್ತನೆ 26:1, 4) ಆಗಾಗ್ಗೆ, ಕಾವಲಿನಬುರುಜು ಪತ್ರಿಕೆಯು ಲೋಕದ ಆತ್ಮದ ಹಲವಾರು ರೂಪಗಳ ವಿರುದ್ಧ ಎಚ್ಚರಿಸಿದೆ ಯಾಕೆಂದರೆ, “ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ” ಒಬ್ಬನು ತನ್ನನ್ನು “ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರು” ವುದನ್ನು ಒಳಗೊಳ್ಳುತ್ತದೆ.—ಯಾಕೋಬ 1:27.
9. ಮಹಾ ಸಂಕಟದ ತರುವಾಯ ದೇವರ ಸಿಂಹಾಸನದ ಮುಂದೆ ಯಾರು ವಾಸ್ತವವಾಗಿ ಮೆಚ್ಚಲ್ಪಟ್ಟವರಾಗಿ ನಿಲ್ಲುವರು?
9 ಆತ್ಮಿಕವಾಗಿ ಮತ್ತು ನೈತಿಕವಾಗಿ ಶುದ್ಧರಾಗಿ ಉಳಿಯುವಂತಹ ರೀತಿಯಲ್ಲಿ ಜೀವಿಸುವಂತೆ, ಯಾರ ನಂಬಿಕೆಯು ಅವರನ್ನು ಪ್ರೇರೇಪಿಸುತ್ತದೊ ಅಂಥವರು ಬರುವಂತಹ ಮಹಾ ಸಂಕಟದ ಬಳಿಕ, ದೇವರ ಮೆಚ್ಚಲ್ಪಟ್ಟ ಸೇವಕರೋಪಾದಿ ಇನ್ನೂ “ಸಿಂಹಾಸನದ ಮುಂದೆ ನಿಂತಿರುವರು.” ಇವರು ಕ್ರೈಸ್ತ ಜೀವಿತದಲ್ಲಿ ಆರಂಭವೊಂದನ್ನು ಮಾಡುವವರು ಮಾತ್ರವಲ್ಲ ನಿಷ್ಠೆಯಿಂದ ಅದರಲ್ಲಿ ಬಿಡದೆ ಮುಂದುವರಿಯುವ ಜನರೂ ಆಗಿದ್ದಾರೆ.—ಎಫೆಸ 4:24.
“ಅವರ ಕೈಗಳಲ್ಲಿ ಖರ್ಜೂರದ ಗರಿಗಳು”
10. ಯೋಹಾನನಿಂದ ನೋಡಲ್ಪಟ್ಟ ಮಹಾ ಸಮೂಹದವರ ಕೈಗಳಲ್ಲಿದ್ದ ಖರ್ಜೂರದ ಗರಿಗಳ ಮಹತ್ವವೇನು?
10 ಅಪೊಸ್ತಲ ಯೋಹಾನನ ಮೂಲಕ ಗಮನಿಸಲ್ಪಟ್ಟಂತೆ, ಮಹಾ ಸಮೂಹದ ಎದ್ದುಕಾಣುವ ವೈಶಿಷ್ಟ್ಯಗಳಲ್ಲಿ ಒಂದು, “ಅವರ ಕೈಗಳಲ್ಲಿ ಖರ್ಜೂರದ ಗರಿಗಳು” ಇರುವುದೇ. ಅದು ಯಾವ ಮಹತ್ವದ್ದಾಗಿದೆ? ಬೇಸಿಗೆಯ ಕೊಯ್ಲನ್ನು ಅನುಸರಿಸಿ ಬರುವ ಹೀಬ್ರೂ ಕ್ಯಾಲೆಂಡರಿನ ಅತ್ಯಂತ ಆನಂದಮಯ ಉತ್ಸವವಾದ, ಯೆಹೂದ್ಯರ ಪರ್ಣಶಾಲೆಗಳ ಉತ್ಸವವನ್ನು, ಆ ಖರ್ಜೂರದ ಗರಿಗಳು ಯೋಹಾನನ ನೆನಪಿಗೆ ನಿಸ್ಸಂದೇಹವಾಗಿ ತಂದವು. ನಿಯಮಕ್ಕೆ ಹೊಂದಿಕೆಯಾಗಿ, ಇತರ ಮರಗಳ ಗರಿಗಳೊಂದಿಗೆ ಖರ್ಜೂರದ ಗರಿಗಳು, ಉತ್ಸವದ ಸಮಯದಲ್ಲಿ ತಂಗಲಿಕ್ಕಾಗಿ ಗುಡಾರಗಳನ್ನು ಮಾಡಲು ಉಪಯೋಗಿಸಲ್ಪಟ್ಟವು. (ಯಾಜಕಕಾಂಡ 23:39-40; ನೆಹೆಮೀಯ 8:14-18) ಹ್ಯಾಲೆಲ್ (ಸ್ತುತಿ) ಗೀತೆಗಳ (ಕೀರ್ತನೆಗಳು 113-118) ಹಾಡುವಿಕೆಯ ಸಮಯದಲ್ಲಿಯೂ ದೇವಾಲಯದಲ್ಲಿ ಆರಾಧಕರಿಂದ ಅವು ಬೀಸಲ್ಪಟ್ಟವು. ಮಹಾ ಸಮೂಹದವರಿಂದ ಖರ್ಜೂರದ ಗರಿಗಳ ಬೀಸುವಿಕೆಯು ಬಹುಶಃ ಯೋಹಾನನಿಗೆ, ಯಾವಾಗ ಯೇಸು ಯೆರೂಸಲೇಮಿನೊಳಗೆ ಬಂದಾಗ ಆರಾಧಕರ ಒಂದು ಸಮೂಹವು ಆನಂದಕರವಾಗಿ ಖರ್ಜೂರದ ಗರಿಗಳನ್ನು ಬೀಸಿ, “ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ; ಇಸ್ರಾಯೇಲಿನ ಅರಸನಿಗೆ ಆಶೀರ್ವಾದ,” ಎಂದು ಕೂಗಿ ಹೇಳಿತೊ ಆ ಸಂದರ್ಭದ ಕುರಿತು ಮರುಜ್ಞಾಪಿಸಿತು. (ಯೋಹಾನ 12:12, 13) ಆದುದರಿಂದ ಮಹಾ ಸಮೂಹವು ಆನಂದಕರವಾಗಿ ಯೆಹೋವನ ರಾಜ್ಯವನ್ನು ಮತ್ತು ಆತನ ಅಭಿಷಿಕ್ತ ರಾಜನನ್ನು ವಂದಿಸುತ್ತದೆ ಎಂದು ಖರ್ಜೂರದ ಗರಿಗಳ ಬೀಸುವಿಕೆಯು ಸೂಚಿಸುತ್ತದೆ.
11. ಯೆಹೋವನನ್ನು ಸೇವಿಸುವುದರಲ್ಲಿ ದೇವರ ಸೇವಕರು ನಿಜವಾಗಿಯೂ ಆನಂದವನ್ನು ಏಕೆ ಕಂಡುಕೊಳ್ಳುತ್ತಾರೆ?
11 ಈಗಲೂ ಅವರು ಯೆಹೋವನನ್ನು ಸೇವಿಸುವಾಗ, ಮಹಾ ಸಮೂಹದವರು ಆನಂದದ ಇಂತಹ ಆತ್ಮವನ್ನು ಪ್ರದರ್ಶಿಸುತ್ತಾರೆ. ಇದು ಅವರು ಯಾವುದೇ ತೊಂದರೆಗಳನ್ನು ಎದುರಿಸುವುದಿಲ್ಲವೆಂಬ ಅಥವಾ ಯಾವುದೇ ದುಃಖ ಯಾ ವೇದನೆಯನ್ನು ಅನುಭವಿಸುವುದಿಲ್ಲವೆಂಬ ಅರ್ಥವನ್ನು ಕೊಡುವುದಿಲ್ಲ. ಆದರೆ ಯೆಹೋವನನ್ನು ಸೇವಿಸುವುದರಿಂದ ಮತ್ತು ಮೆಚ್ಚಿಸುವುದರಿಂದ ಬರುವ ತೃಪ್ತಿಯು, ಆ ವಿಷಯಗಳನ್ನು ಸಮತೂಗಿಸಲು ಸಹಾಯಮಾಡುತ್ತದೆ. ಹೀಗೆ, ದಲ್ಲಿ 45 ವರ್ಷಗಳ ಕಾಲ ತನ್ನ ಗಂಡನೊಂದಿಗೆ ಸೇವೆ ಸಲ್ಲಿಸಿದ ಒಬ್ಬಾಕೆ ಮಿಷನೆರಿ, ಅವರನ್ನು ಸುತ್ತುವರಿದಿದ್ದ ಅಸಂಸ್ಕೃತ ಪರಿಸ್ಥಿತಿಗಳ ಕುರಿತು, ಕಠಿನ ಕೆಲಸ ಮತ್ತು ರಾಜ್ಯದ ಸಂದೇಶದೊಂದಿಗೆ ಇಂಡಿಯನ್ (ಮೂಲ ನಿವಾಸಿ) ಹಳ್ಳಿಗಳನ್ನು ಸಂಪರ್ಕಿಸಲು ಅವರು ಪ್ರಯತ್ನಿಸಿದಂತೆ, ಜೀವಿತದ ಭಾಗವಾಗಿದ್ದ ಅಪಾಯಕಾರಿ ಪ್ರಯಾಣದ ಕುರಿತು ಹೇಳಿದಳು. ಆಕೆ ಕೊನೆಗೊಳಿಸಿದ್ದು: “ಅದು ನಮ್ಮ ಜೀವಿತಗಳಲ್ಲಿ ನಾವು ಅತ್ಯಂತ ಸಂತೋಷಿತರಾಗಿದ್ದ ಸಮಯವಾಗಿತ್ತು.” ಆಕೆ ಮುಂದುವರಿದ ವಯಸ್ಸು ಮತ್ತು ಅಸ್ವಸ್ಥತೆಯ ಪರಿಣಾಮಗಳನ್ನು ಅನುಭವಿಸುತ್ತಿದ್ದರೂ, ಆಕೆಯ ದಿನಚರಿ ಪಟ್ಟಿಯಲ್ಲಿನ ಕೊನೆಯ ಬರೆವಣಿಗೆಗಳಲ್ಲಿ ಈ ಮಾತುಗಳಿದ್ದವು: “ಅದೊಂದು ಬಹಳಷ್ಟು ಪ್ರತಿಫಲದಾಯಕವಾದ, ಒಳ್ಳೆಯ ಜೀವಿತವಾಗಿತ್ತು.” ಭೂವ್ಯಾಪಕವಾಗಿ, ತಮ್ಮ ಶುಶ್ರೂಷೆಯ ಕುರಿತು ಯೆಹೋವನ ಸಾಕ್ಷಿಗಳಿಗೆ ಹಾಗೆಯೇ ಅನಿಸುತ್ತದೆ.
“ಹಗಲಿರುಳು ಪವಿತ್ರ ಸೇವೆ”
12. ಹಗಲಿನಲ್ಲಾಗಲಿ ಯಾ ರಾತ್ರಿಯಲ್ಲಾಗಲಿ, ಇಲ್ಲಿ ಭೂಮಿಯ ಮೇಲೆ ಯೆಹೋವನು ಏನನ್ನು ಗಮನಿಸುತ್ತಾನೆ?
12 ಈ ಆನಂದಿತ ಆರಾಧಕರು ಯೆಹೋವನಿಗೆ “ಆತನ ದೇವಾಲಯದಲ್ಲಿ ಹಗಲಿರುಳು ಪವಿತ್ರ ಸೇವೆಯನ್ನು” ಸಲ್ಲಿಸುತಾರ್ತೆ. (ಪ್ರಕಟನೆ 7:15, NW) ಭೂಮಂಡಲದ ಸುತ್ತಲೂ, ಲಕ್ಷಾಂತರ ಜನರು ಈ ಪವಿತ್ರ ಸೇವೆಯಲ್ಲಿ ಭಾಗವಹಿಸುತ್ತಿದ್ದಾರೆ. ಕೆಲವೊಂದು ದೇಶಗಳಲ್ಲಿ ರಾತ್ರಿಯ ಸಮಯವಾಗಿದ್ದು, ಜನರು ಅಲ್ಲಿ ಮಲಗಿರುವಾಗ, ಬೇರೆ ದೇಶಗಳಲ್ಲಿ ಸೂರ್ಯೋದಯವಾಗಿರುತ್ತದೆ ಮತ್ತು ಯೆಹೋವನ ಸಾಕ್ಷಿಗಳು ಸಾಕ್ಷಿನೀಡುವುದರಲ್ಲಿ ಕಾರ್ಯಮಗ್ನರಾಗಿರುತ್ತಾರೆ. ಭೂಮಂಡಲವು ತಿರುಗಿದಂತೆ, ಸತತವಾಗಿ ಹಗಲು ರಾತ್ರಿ, ಅವರು ಯೆಹೋವನ ಸ್ತುತಿಗಳನ್ನು ಹಾಡುತ್ತಿದ್ದಾರೆ. (ಕೀರ್ತನೆ 86:9) ಆದರೆ ಪ್ರಕಟನೆ 7:15 ರಲ್ಲಿ ಸೂಚಿಸಲ್ಪಟ್ಟ ಹಗಲಿರುಳಿನ ಸೇವೆಯು ಇನ್ನೂ ಹೆಚ್ಚು ವೈಯಕ್ತಿಕವಾಗಿದೆ.
13. “ಹಗಲಿರುಳು” ಸೇವಿಸುವುದರ ಅರ್ಥವೇನೆಂದು ಶಾಸ್ತ್ರಗಳು ಹೇಗೆ ಸೂಚಿಸುತ್ತವೆ?
13 ಮಹಾ ಸಮೂಹವನ್ನು ರಚಿಸುವ ವ್ಯಕ್ತಿಗಳು ಹಗಲಿರುಳು ಪವಿತ್ರ ಸೇವೆಯನ್ನು ಸಲ್ಲಿಸುತಾರ್ತೆ. ಅವರು ಮಾಡುವ ಎಲ್ಲ ವಿಷಯವು ಪವಿತ್ರ ಸೇವೆಯೋಪಾದಿ ವೀಕ್ಷಿಸಲ್ಪಡುತ್ತದೆ ಎಂಬುದು ಇದರ ಅರ್ಥವೊ? ಅವರು ಏನನ್ನೇ ಮಾಡುತ್ತಿರಲಿ ಅದನ್ನು ಯೆಹೋವನನ್ನು ಘನಪಡಿಸುವ ರೀತಿಯಲ್ಲಿ ಮಾಡಲು ಅವರು ಕಲಿಯುತ್ತಾರೆಂಬುದು ಸತ್ಯ. (1 ಕೊರಿಂಥ 10:31; ಕೊಲೊಸ್ಸೆ 3:23) ಹಾಗಿದ್ದರೂ, “ಪವಿತ್ರ ಸೇವೆ”ಯು ದೇವರ ಆರಾಧನೆಯಲ್ಲಿ ನೇರವಾಗಿ ಒಳಗೊಳ್ಳುವ ವಿಷಯಕ್ಕೆ ಮಾತ್ರ ಅನ್ವಯವಾಗುತ್ತದೆ. ಒಂದು ಚಟುವಟಿಕೆಯಲ್ಲಿ “ಹಗಲಿರುಳು” ತೊಡಗಿರುವುದು, ಕ್ರಮಬದ್ಧತೆಯನ್ನು ಅಥವಾ ಸಮಂಜಸತೆಯನ್ನು ಅಷ್ಟೇ ಅಲ್ಲದೆ ಶ್ರದ್ಧಾಪೂರ್ವಕ ಪ್ರಯತ್ನವನ್ನು ಸೂಚಿಸುತ್ತದೆ.—ಹೋಲಿಸಿ ಯೆಹೋಶುವ 1:8; ಲೂಕ 2:37; ಅ. ಕೃತ್ಯಗಳು 20:31; 2 ಥೆಸಲೊನೀಕ 3:8.
14. “ಹಗಲಿರುಳು” ಸೇವೆಯ ವರ್ಣನೆಯನ್ನು ನಮ್ಮ ವೈಯಕ್ತಿಕ ಕ್ಷೇತ್ರ ಸೇವೆಯು ಹೋಲುವಂತೆ ಯಾವುದು ಮಾಡುವುದು?
14 ಯೆಹೋವನ ಮಹಾ ಆತ್ಮಿಕ ಆಲಯದ ಭೂಅಂಗಣದಲ್ಲಿ ಅವರು ಸೇವೆ ಸಲ್ಲಿಸಿದಂತೆ, ಮಹಾ ಸಮೂಹವನ್ನು ರಚಿಸುವವರು ಕ್ಷೇತ್ರ ಶುಶ್ರೂಷೆಯಲ್ಲಿ ಕ್ರಮವಾಗಿ ಮತ್ತು ಸುಸಂಗತವಾಗಿ ಭಾಗವಹಿಸಲು ಪ್ರಯತ್ನಿಸುತ್ತಾರೆ. ಕ್ಷೇತ್ರ ಶುಶ್ರೂಷೆಯಲ್ಲಿ ಪ್ರತಿ ವಾರ ಸ್ವಲ್ಪವಾದರೂ ಭಾಗವಹಿಸುವುದನ್ನು ಅನೇಕರು ತಮ್ಮ ಗುರಿಯನ್ನಾಗಿ ಮಾಡಿದ್ದಾರೆ. ಇತರರು ತಮ್ಮನ್ನು ಕ್ರಮದ ಪಯನೀಯರರಂತೆ ಅಥವಾ ಆಕ್ಸಿಲಿಯರಿ ಪಯನೀಯರರಂತೆ ಶ್ರಮಿಸಿಕೊಳ್ಳುತ್ತಾರೆ. ಅನೇಕ ವೇಳೆ ಇವರು ಬೆಳಗ್ಗೆ ರಸ್ತೆಗಳಲ್ಲಿ ಮತ್ತು ಅಂಗಡಿಗಳಲ್ಲಿ ಸಾಕ್ಷಿನೀಡುವುದರಲ್ಲಿ ಕಾರ್ಯಮಗ್ನರಾಗಿದ್ದಾರೆ. ಆಸಕ್ತಿ ಇರುವವರಿಗೆ ಸಹಾಯ ಮಾಡಲು, ಕೆಲವು ಸಾಕ್ಷಿಗಳು ಬೈಬಲ್ ಅಧ್ಯಯನಗಳನ್ನು ರಾತ್ರಿ ತಡವಾಗಿ ನಡೆಸುತ್ತಾರೆ. ಖರೀದಿ ಮಾಡುವಾಗ, ಪ್ರಯಾಣಿಸುವಾಗ, ಊಟದ ಸಮಯದಲ್ಲಿ ಮತ್ತು ಟೆಲಿಫೋನ್ ಮೂಲಕ ಅವರು ಸಾಕ್ಷಿನೀಡುತಾರ್ತೆ.
15. ಕ್ಷೇತ್ರ ಶುಶ್ರೂಷೆಯನ್ನು ಹೊರತುಪಡಿಸಿ, ನಮ್ಮ ಪವಿತ್ರ ಸೇವೆಯಲ್ಲಿ ಏನು ಒಳಗೊಂಡಿದೆ?
15 ಸಭಾ ಕೂಟಗಳಲ್ಲಿ ಭಾಗವಹಿಸುವುದು ಕೂಡ ನಮ್ಮ ಪವಿತ್ರ ಸೇವೆಯ ಭಾಗವಾಗಿದೆ; ಹಾಗೆಯೇ ಕ್ರೈಸ್ತ ಒಟ್ಟುಗೂಡುವಿಕೆಯ ಸ್ಥಳಗಳನ್ನು ಕಟ್ಟುವುದರಲ್ಲಿ ಮತ್ತು ಅವುಗಳನ್ನು ನೋಡಿಕೊಳ್ಳುವುದರಲ್ಲಿ ಒಳಗೊಂಡಿರುವ ಕೆಲಸವೂ ನಮ್ಮ ಪವಿತ್ರ ಸೇವೆಯ ಭಾಗವಾಗಿದೆ. ಒಬ್ಬರ ಕ್ರೈಸ್ತ ಸಹೋದರ ಸಹೋದರಿಯರನ್ನು ಯೆಹೋವನ ಸೇವೆಯಲ್ಲಿ ಸಜೀವವಾಗಿ ಇಡಲು, ಆತ್ಮಿಕವಾಗಿ ಮತ್ತು ಪ್ರಾಪಂಚಿಕವಾಗಿ ಸಹಾಯ ಮಾಡಲು ಮತ್ತು ಪ್ರೋತ್ಸಾಹಿಸಲು ಮಾಡಲಾದ ಪ್ರಯತ್ನಗಳು ಒಳಗೊಂಡಿವೆ. ಇದು ನಮ್ಮ ಹಾಸ್ಪಿಟಲ್ ಲೀಏಜಾನ್ ಕಮಿಟಿಗಳ ಕೆಲಸವನ್ನು ಒಳಗೊಳ್ಳುತ್ತದೆ. ಅದರ ಎಲ್ಲ ವಿಭಿನ್ನ ರೂಪಗಳಲ್ಲಿ ಬೆತೆಲ್ ಸೇವೆಯು, ಹಾಗೂ ನಮ್ಮ ಅಧಿವೇಶನಗಳಲ್ಲಿನ ಸ್ವಯಂ ಸೇವೆಯು, ಎಲ್ಲವೂ ಪವಿತ್ರ ಸೇವೆಯಾಗಿದೆ. ನಮ್ಮ ಜೀವಿತಗಳು ಯೆಹೋವನೊಂದಿಗಿನ ನಮ್ಮ ಸಂಬಂಧದ ಸುತ್ತಲೂ ತಿರುಗುವಾಗ, ಅವು ಪವಿತ್ರ ಸೇವೆಯಿಂದ ತುಂಬಲ್ಪಡುತ್ತವೆ ನಿಜ. ಶಾಸ್ತ್ರವಚನವು ಹೇಳುವಂತೆ, ಯೆಹೋವನ ಜನರು “ಹಗಲಿರುಳು ಪವಿತ್ರ ಸೇವೆಯನ್ನು” ಸಲ್ಲಿಸುತಾರ್ತೆ, ಮತ್ತು ಹಾಗೆ ಮಾಡುವುದರಲ್ಲಿ ಅವರು ಮಹಾ ಆನಂದವನ್ನು ಕಂಡುಕೊಳ್ಳುತ್ತಾರೆ.—ಅ. ಕೃತ್ಯಗಳು 20:35; 1 ತಿಮೊಥೆಯ 1:11.
‘ಸಕಲ ರಾಷ್ಟ್ರಗಳು, ಕುಲಗಳು, ಜನಾಂಗಗಳು, ಮತ್ತು ಭಾಷೆಗಳಿಂದ’
16. ಮಹಾ ಸಮೂಹದವರು “ಸಕಲ ರಾಷ್ಟ್ರಗಳಿಂದ” ಬರುತ್ತಾರೆಂಬುದು ಹೇಗೆ ರುಜುವಾಗುತ್ತಿದೆ?
16 ಸಕಲ ರಾಷ್ಟ್ರಗಳಿಂದ ಮಹಾ ಸಮೂಹದವರು ಬರುತ್ತಿದ್ದಾರೆ. ದೇವರು ಪಕ್ಷಪಾತಿಯಲ್ಲ, ಮತ್ತು ಯೇಸು ಕ್ರಿಸ್ತನ ಮುಖಾಂತರ ಮಾಡಲಾದ ಪ್ರಾಯಶ್ಚಿತದ್ತ ಒದಗಿಸುವಿಕೆಯು, ಅವರೆಲ್ಲರನ್ನು ಆವರಿಸುವಷ್ಟಿದೆ. ಮಹಾ ಸಮೂಹವನ್ನು ಶಾಸ್ತ್ರೀಯವಾಗಿ 1935 ರಲ್ಲಿ ಗುರುತಿಸಿದಾಗ, ಯೆಹೋವನ ಸಾಕ್ಷಿಗಳು 115 ದೇಶಗಳಲ್ಲಿ ಸಕ್ರಿಯರಾಗಿದ್ದರು. 1990 ರೊಳಗೆ, ಕುರಿಗಳಂಥ ಜನರ ಅನ್ವೇಷಣೆಯು, ಇಮ್ಮಡಿಗಿಂತ ಹೆಚ್ಚಿನ ದೇಶಗಳಲ್ಲಿ ವಿಸ್ತರಿಸಿತ್ತು.—ಮಾರ್ಕ 13:10.
17. ಮಹಾ ಸಮೂಹದಲ್ಲಿ ಎಲ್ಲ ‘ಕುಲಗಳ, ಜನಾಂಗಗಳ ಮತ್ತು ಭಾಷೆಗಳ’ ಜನರನ್ನು ಒಳಗೂಡಿಸಲಿಕ್ಕಾಗಿ ಸಹಾಯ ಮಾಡಲು ಏನನ್ನು ಮಾಡಲಾಗುತ್ತಿದೆ?
17 ಮಹಾ ಸಮೂಹದ ಭಾವೀ ಸದಸ್ಯರನ್ನು ಗುರುತಿಸುವುದರಲ್ಲಿ, ಯೆಹೋವನ ಸಾಕ್ಷಿಗಳು ಕೇವಲ ರಾಷ್ಟ್ರೀಯ ಗುಂಪುಗಳಿಗೆ ಮಾತ್ರವಲ್ಲ ಆ ರಾಷ್ಟ್ರಗಳ ಕುಲಗಳಿಗೆ ಮತ್ತು ಜನಾಂಗಗಳಿಗೆ ಮತ್ತು ಭಾಷೆಯ ಗುಂಪುಗಳಿಗೂ ಗಮನವನ್ನು ನೀಡಿದ್ದಾರೆ. ಈ ಜನರನ್ನು ತಲಪುವ ಸಲುವಾಗಿ, ಸಾಕ್ಷಿಗಳು 300 ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಬೈಬಲ್ ಸಾಹಿತ್ಯವನ್ನು ಪ್ರಕಾಶಿಸುತ್ತಾರೆ. ಇದು ಅರ್ಹ ಭಾಷಾಂತರಕಾರರ ತಂಡಗಳ ತರಬೇತಿಯನ್ನು ಮತ್ತು ಸಂರಕ್ಷಣೆಯನ್ನು, ಈ ಎಲ್ಲ ಭಾಷೆಗಳ ವಿಧಿವಿಹಿತವಾದ ಕಾರ್ಯವನ್ನು ಮಾಡಲು ಶಕ್ತವಾಗುವಂತೆ ಕಂಪ್ಯೂಟರ್ ಸಜ್ಜು ಒದಗಿಸುವುದನ್ನು, ಅಷ್ಟೇ ಅಲ್ಲದೆ ಮುದ್ರಣಮಾಡುವುದನ್ನು ಸಹ ಒಳಗೊಳ್ಳುತ್ತದೆ. ಕಳೆದ ಕೇವಲ ಐದು ವರ್ಷಗಳಲ್ಲಿ, ಸುಮಾರು 9,80,00,000 ಜನರಿಂದ ಮಾತಾಡಲ್ಪಡುವ 36 ಭಾಷೆಗಳು ಪಟ್ಟಿಗೆ ಕೂಡಿಸಲ್ಪಟ್ಟಿವೆ. ಇದಕ್ಕೆ ಕೂಡಿಸಿ, ದೇವರ ವಾಕ್ಯವನ್ನು ತಿಳಿದುಕೊಳ್ಳಲು ಸಹಾಯ ಮಾಡಲಿಕ್ಕಾಗಿ, ಸಾಕ್ಷಿಗಳು ಈ ಜನರನ್ನು ವೈಯಕ್ತಿಕವಾಗಿ ಭೇಟಿಯಾಗಲು ಪ್ರಯತ್ನಿಸುತ್ತಾರೆ.—ಮತ್ತಾಯ 28:19, 20.
“ಮಹಾ ಸಂಕಟದಿಂದ ಹೊರಗೆ”
18. (ಎ) ಮಹಾ ಸಂಕಟವು ಆರಂಭಗೊಳ್ಳುವಾಗ, ಯಾರು ಸಂರಕ್ಷಿಸಲ್ಪಡುವರು? (ಬಿ) ಯಾವ ಸಂತೋಷಕರ ಉದ್ಘೋಷಗಳನ್ನು ಆಗ ಮಾಡಲಾಗುವುದು?
18 ಪ್ರಕಟನೆ 7:1 ರಲ್ಲಿ ಸೂಚಿಸಲ್ಪಟ್ಟ ನಾಶನದ ಗಾಳಿಗಳನ್ನು ದೇವದೂತರು ಬಿಡುಗಡೆಗೊಳಿಸುವಾಗ, ‘ನಮ್ಮ ದೇವರ ಅಭಿಷಿಕ್ತ ದಾಸರು’ ಮಾತ್ರ ಯೆಹೋವನ ಪ್ರೀತಿಯ ಸಂರಕ್ಷಣೆಯನ್ನು ಅನುಭವಿಸುವುದಿಲ್ಲ, ಸತ್ಯಾರಾಧನೆಯಲ್ಲಿ ಅವರನ್ನು ಸೇರಿರುವ ಮಹಾ ಸಮೂಹವೂ ಅನುಭವಿಸುವುದು. ಅಪೊಸ್ತಲ ಯೋಹಾನನಿಗೆ ಹೇಳಲ್ಪಟ್ಟಂತೆ, ಮಹಾ ಸಮೂಹದವರು ಬದುಕಿ ಉಳಿದವರಂತೆ “ಮಹಾ ಸಂಕಟದಿಂದ ಹೊರಗೆ ಬರುವರು.” ಅವರು ಹೀಗೆ ಘೋಷಿಸುವಾಗ, ಕೃತಜ್ಞತೆಯ ಮತ್ತು ಸ್ತುತಿಯ ಎಂತಹ ಕೂಗನ್ನು ಅವರು ಆಗ ಉದ್ಘೋಷಿಸುವರು: “ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ”! ಮತ್ತು “ಆಮೆನ್. ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾಸುತ್ತಿಯೂ ಮಾನವೂ ಬಲವೂ ಶಕ್ತಿಯೂ ನಮ್ಮ ದೇವರಿಗೆ ಯುಗಯುಗಾಂತರಗಳಲ್ಲಿಯೂ ಇರಲಿ, ಆಮೆನ್,” ಎಂದು ಘೋಷಿಸುವುದರಲ್ಲಿ ಪರಲೋಕದಲ್ಲಿರುವ ದೇವರ ಎಲ್ಲ ನಿಷ್ಠಾವಂತ ಸೇವಕರು ತಮ್ಮ ಧ್ವನಿಗಳನ್ನು ಕೂಡಿಸುವರು.—ಪ್ರಕಟನೆ 7:10-14.
19. ಬದುಕಿ ಉಳಿದವರು ಯಾವ ಆನಂದಕರ ಚಟುವಟಿಕೆಯಲ್ಲಿ ಭಾಗವಹಿಸಲು ಆತುರರಾಗಿರುವರು?
19 ಎಂತಹ ಒಂದು ಸಂತೋಷದ ಸಮಯವು ಅದಾಗಿರುವುದು! ಜೀವಿಸುವವರೆಲ್ಲರು ಏಕೈಕ ಸತ್ಯ ದೇವರ ಸೇವಕರಾಗಿರುವರು! ಇವರೆಲ್ಲರ ಅತ್ಯಂತ ಮಹಾ ಆನಂದವು ಯೆಹೋವನನ್ನು ಸೇವಿಸುವುದರಲ್ಲಿರುವುದು. ಮಾಡಲು ಹೆಚ್ಚಿನ ಕೆಲಸವು ಅಲ್ಲಿರುವುದು—ಆನಂದಕರ ಕೆಲಸ! ಭೂಮಿಯು ಪ್ರಮೋದವನವಾಗಿ ರೂಪಾಂತರಗೊಳ್ಳಲಿರುವುದು. ಸಾವಿರಾರು ಲಕ್ಷಾಂತರ ಸತ್ತವರು ಪುನರುತ್ಥಾನಗೊಳಿಸಲ್ಪಡುವರು ಮತ್ತು ತದನಂತರ ಯೆಹೋವನ ಮಾರ್ಗಗಳಲ್ಲಿ ಶಿಕ್ಷಿಸಲ್ಪಡುವರು. ಅದರಲ್ಲಿ ಪಾಲಿಗರಾಗುವುದು ಎಂತಹ ಆನಂದಕರ ಸುಯೋಗವಾಗಿರುವುದು!
ನಿಮ್ಮ ಹೇಳಿಕೆಯು ಏನು?
▫ 1935 ರಲ್ಲಿ ಸಂಭವಿಸಿದ ಘಟನೆಗಳು ಯೆಹೋವನ ಸಾಕ್ಷಿಗಳ ಕ್ಷೇತ್ರ ಶುಶ್ರೂಷೆಯ ಮೇಲೆ ಯಾವ ಪರಿಣಾಮವನ್ನು ಬೀರಿದವು?
▫ ಮಹಾ ಸಮೂಹದವರು “ಸಿಂಹಾಸನದ ಮುಂದೆ ನಿಂತಿರು” ವುದಾಗಿ ತೋರಿಸಲ್ಪಟ್ಟಿರುವ ಸಂಗತಿಯಿಂದ ಯಾವ ವಿಷಯವು ಸೂಚಿಸಲ್ಪಟ್ಟಿದೆ?
▫ ಕುರಿಮರಿಯ ರಕ್ತಕ್ಕಾಗಿರುವ ಗಣ್ಯತೆಯು ಜೀವಿತಗಳನ್ನು ಹೇಗೆ ಪ್ರಭಾವಿಸತಕ್ಕದ್ದು?
▫ ಖರ್ಜೂರದ ಗರಿಗಳ ಅವರ ಬೀಸುವಿಕೆಯಿಂದ ಏನು ವ್ಯಕ್ತಪಡಿಸಲಾಗುತ್ತದೆ?
▫ ಮಹಾ ಸಮೂಹದವರು ಪವಿತ್ರ ಸೇವೆಯನ್ನು ಹಗಲಿರುಳು ಹೇಗೆ ಸಲ್ಲಿಸುತಾರ್ತೆ?
[ಪುಟ 16,17 ರಲ್ಲಿರುವಚಿತ್ರಗಳು]
ಅವರ ಪವಿತ್ರ ಸೇವೆಯು ಕ್ರಮಬದ್ಧತೆಯನ್ನು, ಶ್ರಮಶೀಲತೆಯನ್ನು, ಮತ್ತು ಶ್ರದ್ಧಾಪೂರ್ವಕ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ