ನಿಮ್ಮ ವೈರಿ ಎಂಥವನೆಂದು ತಿಳಿದುಕೊಳ್ಳಿ
‘ಸೈತಾನನ ಕುತಂತ್ರಗಳ ವಿಷಯದಲ್ಲಿ ನಾವು ಅಜ್ಞಾನಿಗಳಲ್ಲ.’—2 ಕೊರಿಂ. 2:11.
1. ಆದಾಮಹವ್ವ ಪಾಪ ಮಾಡಿದ ಮೇಲೆ ಯೆಹೋವನು ನಮ್ಮ ವೈರಿಯ ಬಗ್ಗೆ ಏನನ್ನು ಬಯಲುಪಡಿಸಿದನು?
ಹಾವುಗಳು ಮಾತಾಡಲ್ಲ ಎಂದು ಆದಾಮನಿಗೆ ಗೊತ್ತಿತ್ತು. ಆದ್ದರಿಂದ ಒಂದು ಹಾವು ತನ್ನೊಂದಿಗೆ ಮಾತಾಡಿತು ಎಂದು ಹವ್ವಳು ಹೇಳಿದಾಗ ಅದು ಒಬ್ಬ ಆತ್ಮಜೀವಿ ಆಗಿದ್ದಿರಬೇಕೆಂದು ಆದಾಮನಿಗೆ ಅರ್ಥವಾಗಿರಬೇಕು. (ಆದಿ. 3:1-6) ಆ ಆತ್ಮಜೀವಿ ಯಾರೆಂದು ಆದಾಮಹವ್ವರಿಗೆ ಗೊತ್ತಿರಲಿಲ್ಲ. ಆದರೂ ಆದಾಮ ಈ ಅಪರಿಚಿತ ಆತ್ಮಜೀವಿಯ ಜೊತೆ ಸೇರಿ ತನ್ನ ಪ್ರೀತಿಯ ಸ್ವರ್ಗೀಯ ತಂದೆಯ ವಿರುದ್ಧ ದಂಗೆ ಏಳುವ ಆಯ್ಕೆ ಮಾಡಿದನು. (1 ತಿಮೊ. 2:14) ಕೂಡಲೇ ಯೆಹೋವನು ಆ ದುಷ್ಟ ವೈರಿ ಯಾರೆಂದು ಬಯಲುಪಡಿಸಿದನು ಮತ್ತು ಕೊನೆಗೆ ಅವನನ್ನು ನಾಶಮಾಡಲಾಗುವುದು ಎಂದು ತಿಳಿಸಿದನು. ಆದರೆ ಹಾವಿನ ಮೂಲಕ ಮಾತಾಡಿದ ಈ ಆತ್ಮಜೀವಿಯು ನಾಶವಾಗುವ ವರೆಗೆ ದೇವರನ್ನು ಪ್ರೀತಿಸುವವರನ್ನೆಲ್ಲಾ ದ್ವೇಷಿಸುವನು ಎಂದು ಯೆಹೋವನು ಎಚ್ಚರಿಸಿದನು.—ಆದಿ. 3:15.
2, 3. ಮೆಸ್ಸೀಯ ಬರುವ ಮುಂಚೆ ಯೆಹೋವನು ಸೈತಾನನ ಬಗ್ಗೆ ಹೆಚ್ಚು ವಿವರಗಳನ್ನು ಕೊಡದೇ ಇರಲು ಕಾರಣ ಏನಿರಬಹುದು?
2 ತನ್ನ ವಿರುದ್ಧ ದಂಗೆ ಎದ್ದ ದೇವದೂತನ ಹೆಸರನ್ನು ಯೆಹೋವನು ಬಯಲುಪಡಿಸಲಿಲ್ಲ.a ಏದೆನಿನಲ್ಲಿ ದಂಗೆ ನಡೆದು 2,500 ವರ್ಷಗಳಾದ ನಂತರವೇ ಯೆಹೋವನು ದಂಗೆ ಎದ್ದವನು ಯಾರೆಂದು ತಿಳಿಸಿದನು. (ಯೋಬ 1:6) ಅವನಿಗೆ “ಸೈತಾನ” ಎಂಬ ಬಿರುದನ್ನು ಕೊಡಲಾಯಿತು. ಅದರ ಅರ್ಥ “ವಿರೋಧಿಸುವವನು” ಎಂದಾಗಿದೆ. ಹೀಬ್ರು ಶಾಸ್ತ್ರಗ್ರಂಥದ 1 ಪೂರ್ವಕಾಲವೃತ್ತಾಂತ, ಯೋಬ ಮತ್ತು ಜೆಕರ್ಯ ಪುಸ್ತಕಗಳಲ್ಲಿ ಮಾತ್ರ ಸೈತಾನನ ಬಗ್ಗೆ ಮಾತಾಡಲಾಗಿದೆ. ಮೆಸ್ಸೀಯ ಬರುವುದಕ್ಕೆ ಮುಂಚೆ ನಮ್ಮ ವೈರಿಯ ಬಗ್ಗೆ ಯಾಕೆ ಇಷ್ಟು ಮಾತ್ರ ತಿಳಿಸಲಾಯಿತು?
3 ಹೀಬ್ರು ಶಾಸ್ತ್ರಗ್ರಂಥದಲ್ಲಿ ಯೆಹೋವನು ಸೈತಾನನ ಬಗ್ಗೆ ಮತ್ತು ಅವನ ಚಟುವಟಿಕೆಯ ಬಗ್ಗೆ ಹೆಚ್ಚು ವಿವರಗಳನ್ನು ಕೊಡಲಿಲ್ಲ. ಯಾಕೆಂದರೆ ಜನರು ಮೆಸ್ಸೀಯನನ್ನು ಗುರುತಿಸಲು ಮತ್ತು ಆತನನ್ನು ಹಿಂಬಾಲಿಸಲು ಸಹಾಯ ಮಾಡುವ ಉದ್ದೇಶದಿಂದ ಹೀಬ್ರು ಶಾಸ್ತ್ರಗ್ರಂಥವನ್ನು ಕೊಡಲಾಯಿತು. (ಲೂಕ 24:44; ಗಲಾ. 3:24) ಮೆಸ್ಸೀಯನು ಬಂದ ಮೇಲೆ ಯೆಹೋವನು ಈ ಮೆಸ್ಸೀಯನ ಮೂಲಕ ಮತ್ತು ಅವನ ಶಿಷ್ಯರ ಮೂಲಕ ಸೈತಾನ ಮತ್ತು ಅವನ ಜೊತೆ ಸೇರಿದ ಬೇರೆ ದೇವದೂತರ ಬಗ್ಗೆ ಹೆಚ್ಚನ್ನು ಬಯಲುಪಡಿಸಿದನು.b ಇದು ಸೂಕ್ತವಾಗಿತ್ತು. ಯಾಕೆಂದರೆ ಸೈತಾನ ಮತ್ತು ಅವನ ಹಿಂದೆ ಹೋದವರನ್ನು ಯೆಹೋವನು ಯೇಸು ಮತ್ತು ಅಭಿಷಿಕ್ತರನ್ನು ಉಪಯೋಗಿಸಿ ನಾಶಮಾಡಲಿದ್ದಾನೆ.—ರೋಮ. 16:20; ಪ್ರಕ. 17:14; 20:10.
4. ನಾವು ಪಿಶಾಚನಿಗೆ ಯಾಕೆ ಹೆದರಿಕೊಳ್ಳಬಾರದು?
4 ಅಪೊಸ್ತಲ ಪೇತ್ರನು ಪಿಶಾಚನಾದ ಸೈತಾನನನ್ನು “ಗರ್ಜಿಸುವ ಸಿಂಹ” ಎಂದು ವರ್ಣಿಸಿದ್ದಾನೆ. ಯೋಹಾನನು ಅವನನ್ನು “ಘಟಸರ್ಪ” ಮತ್ತು “ಸರ್ಪ” ಎಂದು ಕರೆದಿದ್ದಾನೆ. (1 ಪೇತ್ರ 5:8; ಪ್ರಕ. 12:9) ಆದರೆ ನಾವು ಪಿಶಾಚನಿಗೆ ಹೆದರಿಕೊಳ್ಳಬಾರದು. ಅವನ ಶಕ್ತಿಗೆ ಮಿತಿ ಇದೆ. (ಯಾಕೋಬ 4:7 ಓದಿ.) ಯೆಹೋವ, ಯೇಸು, ನಂಬಿಗಸ್ತ ದೇವದೂತರಿಂದ ನಮಗೆ ಸಂರಕ್ಷಣೆ ಸಿಗುತ್ತದೆ. ಇವರ ಸಹಾಯದಿಂದ ನಾವು ನಮ್ಮ ವೈರಿಯನ್ನು ಎದುರಿಸಿ ನಿಲ್ಲಬಹುದು. ಆದರೂ ನಮಗೆ ಮೂರು ಪ್ರಶ್ನೆಗಳಿಗೆ ಉತ್ತರ ಬೇಕು: ಸೈತಾನನು ಯಾವುದನ್ನೆಲ್ಲ ತನ್ನ ಹಿಡಿತದಲ್ಲಿ ಇಟ್ಟಿದ್ದಾನೆ? ಅವನು ಜನರ ಮೇಲೆ ಹೇಗೆ ಪ್ರಭಾವ ಬೀರುತ್ತಾನೆ? ಅವನಿಂದ ಏನು ಮಾಡಕ್ಕಾಗಲ್ಲ? ನಾವು ಈ ಪ್ರಶ್ನೆಗಳನ್ನು ಪರಿಗಣಿಸುವಾಗ ಇದರಿಂದ ನಮಗೇನು ಪಾಠ ಎಂದು ತಿಳಿದುಕೊಳ್ಳೋಣ.
ಯಾವುದೆಲ್ಲ ಸೈತಾನನ ಹಿಡಿತದಲ್ಲಿದೆ?
5, 6. ಮಾನವರಿಗೆ ಅತ್ಯಾವಶ್ಯಕವಾಗಿ ಬೇಕಾಗಿರುವ ಬದಲಾವಣೆಗಳನ್ನು ಯಾಕೆ ಮಾನವ ಸರ್ಕಾರಗಳಿಂದ ತರಲು ಸಾಧ್ಯವಿಲ್ಲ?
5 ಅನೇಕ ದೇವದೂತರು ಸೈತಾನನ ಜೊತೆ ಸೇರಿ ದೇವರ ವಿರುದ್ಧ ದಂಗೆ ಎದ್ದರು. ಜಲಪ್ರಳಯಕ್ಕೆ ಮುಂಚೆ ಸೈತಾನನು ಅವರಲ್ಲಿ ಕೆಲವರಿಗೆ ಆಸೆ ತೋರಿಸಿ ಸ್ತ್ರೀಯರೊಂದಿಗೆ ಲೈಂಗಿಕ ಅನೈತಿಕತೆ ನಡೆಸುವಂತೆ ಮಾಡಿದನು. ಸೈತಾನ ದೇವದೂತರ ಮೇಲೆ ಬೀರಿದ ಪ್ರಭಾವದ ಬಗ್ಗೆ ಬೈಬಲ್ ಸಾಂಕೇತಿಕ ಭಾಷೆಯಲ್ಲಿ ಮಾತಾಡುತ್ತಾ ಘಟಸರ್ಪವು ಆಕಾಶದ ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗವನ್ನು ತನ್ನ ಕಡೆಗೆ ಎಳೆದುಕೊಂಡಿತು ಎಂದು ತಿಳಿಸುತ್ತದೆ. (ಆದಿ. 6:1-4; ಯೂದ 6; ಪ್ರಕ. 12:3, 4) ಆ ಆತ್ಮಜೀವಿಗಳು ದೇವರ ಕುಟುಂಬವನ್ನು ತೊರೆದು ಬಂದಾಗ ಸೈತಾನನ ಹತೋಟಿಯ ಕೆಳಗೆ ಬಂದರು. ದಂಗೆ ಎದ್ದ ಈ ದೇವದೂತರು ಹೇಳೋರಿಲ್ಲ ಕೇಳೋರಿಲ್ಲದವರ ಥರ ಇದ್ದಾರೆ ಎಂದು ನಾವು ನೆನಸಬಾರದು. ನಮ್ಮ ಕಣ್ಣಿಗೆ ಕಾಣದ ಆತ್ಮಲೋಕದಲ್ಲಿ ಸೈತಾನನು ದೇವರ ಆಡಳಿತವನ್ನು ಹೋಲುವ ತನ್ನ ಸ್ವಂತ ಸರ್ಕಾರವನ್ನು ರಚಿಸಿದ್ದಾನೆ. ತನ್ನನ್ನೇ ಅದರ ರಾಜನಾಗಿ ಮಾಡಿಕೊಂಡು ದೆವ್ವಗಳನ್ನು ಒಟ್ಟುಸೇರಿಸಿದ್ದಾನೆ, ಅವರಿಗೆ ಅಧಿಕಾರ ಕೊಟ್ಟು ಲೋಕಾಧಿಪತಿಗಳಾಗಿ ಮಾಡಿದ್ದಾನೆ.—ಎಫೆ. 6:12.
6 ಸೈತಾನನು ತನ್ನ ಸಂಘಟನೆಯನ್ನು ಉಪಯೋಗಿಸುತ್ತಾ ಎಲ್ಲ ಮಾನವ ಸರ್ಕಾರಗಳನ್ನು ಹತೋಟಿಯಲ್ಲಿ ಇಟ್ಟುಕೊಂಡಿದ್ದಾನೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಯಾಕೆಂದರೆ ಸೈತಾನ ಯೇಸುವಿಗೆ “ನಿವಾಸಿತ ಭೂಮಿಯ ಎಲ್ಲ ರಾಜ್ಯಗಳನ್ನು” ತೋರಿಸಿ “ಈ ಎಲ್ಲ ಅಧಿಕಾರವನ್ನೂ ಇವುಗಳ ವೈಭವವನ್ನೂ ನಾನು ನಿನಗೆ ಕೊಡುವೆನು; ಏಕೆಂದರೆ ಇದನ್ನು ನನ್ನ ವಶಕ್ಕೆ ಕೊಡಲಾಗಿದೆ ಮತ್ತು ನನಗೆ ಮನಸ್ಸು ಬಂದವನಿಗೆ ನಾನು ಅದನ್ನು ಕೊಡುತ್ತೇನೆ” ಎಂದು ಹೇಳಿದನು. (ಲೂಕ 4:5, 6) ಆದರೂ ಅನೇಕ ಸರ್ಕಾರಗಳು ಪ್ರಜೆಗಳಿಗೆ ಒಳ್ಳೇದು ಮಾಡುತ್ತವೆ ಮತ್ತು ಕೆಲವು ನಾಯಕರು ನಿಜಕ್ಕೂ ಜನರಿಗೆ ಸಹಾಯ ಮಾಡಲು ಬಯಸುತ್ತಾರೆ. ಆದರೆ ನಮಗೆ ಅತ್ಯಾವಶ್ಯಕವಾಗಿ ಬೇಕಾಗಿರುವ ಬದಲಾವಣೆಗಳನ್ನು ಯಾವ ಮಾನವ ನಾಯಕನಿಂದಲೂ ತರಲು ಸಾಧ್ಯವಿಲ್ಲ.—ಕೀರ್ತ. 146:3, 4; ಪ್ರಕ. 12:12.
7. ಸೈತಾನನು ಸರ್ಕಾರವನ್ನು ಬಳಸುವುದಲ್ಲದೆ ಸುಳ್ಳು ಧರ್ಮವನ್ನು ಮತ್ತು ವಾಣಿಜ್ಯ ವ್ಯವಸ್ಥೆಯನ್ನು ಬಳಸಿ ಏನು ಮಾಡುತ್ತಾನೆ? (ಲೇಖನದ ಆರಂಭದ ಚಿತ್ರ ನೋಡಿ.)
7 ಸೈತಾನ ಮತ್ತು ದೆವ್ವಗಳು “ಇಡೀ ನಿವಾಸಿತ ಭೂಮಿಯನ್ನು” ಅಥವಾ ಮಾನವರೆಲ್ಲರನ್ನು ದಾರಿತಪ್ಪಿಸಲು ಸುಳ್ಳು ಧರ್ಮ ಮತ್ತು ವಾಣಿಜ್ಯ ವ್ಯವಸ್ಥೆಯನ್ನು ಸಹ ಉಪಯೋಗಿಸುತ್ತವೆ. (ಪ್ರಕ. 12:9) ಸುಳ್ಳು ಧರ್ಮದ ಮೂಲಕ ಸೈತಾನನು ಯೆಹೋವನ ಬಗ್ಗೆ ಸುಳ್ಳನ್ನು ಹಬ್ಬಿಸುತ್ತಾನೆ ಮತ್ತು ದೇವರ ಹೆಸರನ್ನು ಮರೆಮಾಡಲು ಪ್ರಯತ್ನಿಸಿದ್ದಾನೆ. (ಯೆರೆ. 23:26, 27) ಆದ್ದರಿಂದ ತಾವು ನಿಜವಾಗಲೂ ದೇವರನ್ನು ಆರಾಧಿಸುತ್ತಿದ್ದೇವೆ ಎಂದು ನೆನಸುವ ಜನರು ಸಹ ಗೊತ್ತಿಲ್ಲದೆ ದೆವ್ವಗಳನ್ನು ಆರಾಧಿಸುತ್ತಿದ್ದಾರೆ. (1 ಕೊರಿಂ. 10:20; 2 ಕೊರಿಂ. 11:13-15) ಸೈತಾನನು ಸುಳ್ಳುಗಳನ್ನು ಹಬ್ಬಿಸಲು ವಾಣಿಜ್ಯ ವ್ಯವಸ್ಥೆಯನ್ನೂ ಬಳಸುತ್ತಾನೆ. ದುಡ್ಡಿದ್ದರೆ, ಆಸ್ತಿ-ಐಶ್ವರ್ಯ ಇದ್ದರೆ ಸಂತೋಷವಾಗಿರಬಹುದು ಎಂಬಂಥ ಸುಳ್ಳುಗಳನ್ನು ಹಬ್ಬಿಸುತ್ತಾನೆ. (ಜ್ಞಾನೋ. 18:11) ಈ ಸುಳ್ಳನ್ನು ನಂಬುವ ಜನ ಜೀವನಪೂರ್ತಿ ‘ಐಶ್ವರ್ಯದ’ ಹಿಂದೆ ಬೀಳುತ್ತಾರೆ, ದೇವರ ಬಗ್ಗೆ ಯೋಚನೆ ಮಾಡುವುದಿಲ್ಲ. (ಮತ್ತಾ. 6:24) ಅವರು ಮುಂಚೆ ದೇವರನ್ನು ಪ್ರೀತಿಸುತ್ತಿದ್ದ ವ್ಯಕ್ತಿಗಳಾಗಿದ್ದರೂ ವಸ್ತುವ್ಯಾಮೋಹ ಜಾಸ್ತಿಯಾಗಿ ದೇವರ ಮೇಲಿರುವ ಪ್ರೀತಿ ಮಾಯವಾಗಿ ಬಿಡುತ್ತದೆ.—ಮತ್ತಾ. 13:22; 1 ಯೋಹಾ. 2:15, 16.
8, 9. (ಎ) ಆದಾಮಹವ್ವರಿಂದ ಮತ್ತು ದಂಗೆ ಎದ್ದ ದೇವದೂತರಿಂದ ನಾವು ಯಾವ ಪಾಠಗಳನ್ನು ಕಲಿಯಬಹುದು? (ಬಿ) ಈ ಲೋಕ ಸೈತಾನನ ನಿಯಂತ್ರಣದಲ್ಲಿದೆ ಎಂದು ತಿಳಿದುಕೊಳ್ಳುವುದು ಯಾಕೆ ಮುಖ್ಯ?
8 ಆದಾಮಹವ್ವರಿಂದ ಮತ್ತು ದಂಗೆ ಎದ್ದ ದೇವದೂತರಿಂದ ನಾವು ಎರಡು ಪ್ರಾಮುಖ್ಯ ಪಾಠಗಳನ್ನು ಕಲಿಯಬಹುದು. ಮೊದಲನೇದಾಗಿ, ಇರುವುದು ಎರಡು ಪಕ್ಷ ಮಾತ್ರ. ನಾವು ಇದರಲ್ಲಿ ಒಂದನ್ನು ಆರಿಸಲೇಬೇಕು. ನಾವು ಯೆಹೋವನ ಪಕ್ಷದಲ್ಲಿ ಇರಬೇಕು, ಇಲ್ಲ ಅಂದರೆ ಸೈತಾನನ ಪಕ್ಷದಲ್ಲಿ ಇರುತ್ತೇವೆ. (ಮತ್ತಾ. 7:13) ಎರಡನೇದಾಗಿ, ಸೈತಾನನ ಪಕ್ಷ ಸೇರುವವರಿಗೆ ಸಿಗುವ ಪ್ರಯೋಜನಗಳು ತಾತ್ಕಾಲಿಕ. ಆದಾಮಹವ್ವರಿಗೆ ಸರಿ ಮತ್ತು ತಪ್ಪು ಯಾವುದೆಂದು ತಾವೇ ತೀರ್ಮಾನಿಸುವ ಅವಕಾಶ ಸಿಕ್ಕಿತು. (ಆದಿ. 3:22) ದೆವ್ವಗಳಿಗೆ ಮಾನವ ಸರ್ಕಾರಗಳ ಮೇಲೆ ಸ್ವಲ್ಪ ಅಧಿಕಾರ ಇದೆ. ಆದರೆ ಸೈತಾನನ ಪಕ್ಷ ಸೇರುವುದರಿಂದ ಕೆಟ್ಟ ಪರಿಣಾಮಗಳನ್ನು ಖಂಡಿತ ಎದುರಿಸಬೇಕಾಗುತ್ತದೆ. ಯಾವುದೇ ಶಾಶ್ವತ ಪ್ರಯೋಜನ ಸಿಗುವುದಿಲ್ಲ.—ಯೋಬ 21:7-17; ಗಲಾ. 6:7, 8.
9 ಈ ಲೋಕ ಸೈತಾನನ ನಿಯಂತ್ರಣದಲ್ಲಿದೆ ಎಂದು ತಿಳಿದುಕೊಳ್ಳುವುದು ಯಾಕೆ ಮುಖ್ಯ? ಇದರಿಂದ ಸರ್ಕಾರಗಳ ಬಗ್ಗೆ ಸರಿಯಾದ ನೋಟ ಇಟ್ಟುಕೊಳ್ಳುತ್ತೇವೆ ಮತ್ತು ಸಾರುವುದಕ್ಕೆ ಹೆಚ್ಚು ಮಹತ್ವ ಕೊಡುತ್ತೇವೆ. ಸರ್ಕಾರಗಳನ್ನು ಸನ್ಮಾನಿಸಬೇಕೆಂದು ಯೆಹೋವನು ಹೇಳುತ್ತಾನೆ. (1 ಪೇತ್ರ 2:17) ಸರ್ಕಾರದ ನಿಯಮಗಳನ್ನು ಪಾಲಿಸಬೇಕೆಂದು ಹೇಳುತ್ತಾನೆ. ಆದರೆ ಸರ್ಕಾರಗಳು ಯೆಹೋವನ ಮಟ್ಟಕ್ಕೆ ವಿರುದ್ಧವಾಗಿ ಹೋಗುವಂತೆ ಹೇಳಿದರೆ ನಾವದನ್ನು ಪಾಲಿಸುವುದಿಲ್ಲ. (ರೋಮ. 13:1-4) ನಾವು ತಟಸ್ಥರಾಗಿರಬೇಕು, ಯಾವುದೇ ರಾಜಕೀಯ ಪಕ್ಷಕ್ಕೆ ಅಥವಾ ಮಾನವ ನಾಯಕನಿಗೆ ಬೆಂಬಲ ಕೊಡಬಾರದೆಂದೂ ನಮಗೆ ಗೊತ್ತು. (ಯೋಹಾ. 17:15, 16; 18:36) ಸೈತಾನನು ಯೆಹೋವನ ಹೆಸರನ್ನು ಮರೆಮಾಡಿ ಆತನ ಹೆಸರನ್ನು ಕೆಡಿಸಲು ಪ್ರಯತ್ನಿಸುವುದರಿಂದ, ದೇವರ ಬಗ್ಗೆ ನಿಜಾಂಶ ಏನೆಂದು ನಾವು ಜನರಿಗೆ ಕಲಿಸಲು ತುಂಬ ಪ್ರಯತ್ನ ಮಾಡುತ್ತೇವೆ. ನಮಗೆ ದೇವರ ಹೆಸರು ಕೊಡಲ್ಪಟ್ಟಿರುವುದಕ್ಕೆ ನಾವು ತುಂಬ ಹೆಮ್ಮೆಪಡುತ್ತೇವೆ ಮತ್ತು ಆ ಹೆಸರನ್ನು ಉಪಯೋಗಿಸಲು ಬಯಸುತ್ತೇವೆ. ಹಣ, ಆಸ್ತಿಯನ್ನು ಪ್ರೀತಿಸುವುದಕ್ಕಿಂತ ದೇವರನ್ನು ಪ್ರೀತಿಸುವುದು ತುಂಬ ಮುಖ್ಯ.—ಯೆಶಾ. 43:10; 1 ತಿಮೊ. 6:6-10.
ಸೈತಾನನು ಹೇಗೆ ಪ್ರಭಾವ ಬೀರುತ್ತಾನೆ?
10-12. (ಎ) ಕೆಲವು ದೇವದೂತರನ್ನು ಹಿಡಿಯಲು ಸೈತಾನ ಹೇಗೆ ಎರೆಯನ್ನು ಉಪಯೋಗಿಸಿರಬಹುದು? (ಬಿ) ಆ ದೇವದೂತರು ಮಾಡಿದ ತಪ್ಪಿಂದ ನಾವೇನು ಪಾಠ ಕಲಿಯಬಹುದು?
10 ಸೈತಾನನು ಇತರರನ್ನು ಪ್ರಭಾವಿಸಲು ತನ್ನ ಚಾಣಾಕ್ಷತೆಯನ್ನು ಉಪಯೋಗಿಸುತ್ತಾನೆ. ತಾನಾಡಿಸಿದಂತೆ ಜನ ಆಡಬೇಕೆಂದು ಅವನು ಬಯಸುತ್ತಾನೆ. ಇದಕ್ಕೆ ಎರಡು ವಿಷಯಗಳನ್ನು ಮಾಡುತ್ತಾನೆ. ಮೀನು ಹಿಡಿಯುವವನ ತರ ಎರೆಯನ್ನು ಅಥವಾ ಸೆಳೆವಸ್ತುವನ್ನು ಉಪಯೋಗಿಸುತ್ತಾನೆ. ಇಲ್ಲವೇ ರೌಡಿ ತರ ಹೆದರಿಕೆ ಬೆದರಿಕೆಗಳನ್ನು ಹಾಕುತ್ತಾನೆ.
11 ಸೈತಾನನು ತುಂಬ ಮಂದಿ ದೇವದೂತರನ್ನು ಹಿಡಿಯಲು ಎರೆಯನ್ನು ಉಪಯೋಗಿಸಿದನು. ಅವರಿಗೆ ಮೋಸ ಮಾಡಲು ಯಾವ ವಿಷಯವನ್ನು ಉಪಯೋಗಿಸಬೇಕೆಂದು ತಿಳಿಯಲು ಅವನು ತುಂಬ ಸಮಯ ಅವರನ್ನು ಗಮನಿಸುತ್ತಾ ಇದ್ದಿರಬೇಕು. ಕೆಲವು ದೇವದೂತರು ಅವನು ಹಾಕಿದ ಗಾಳಕ್ಕೆ ಸಿಕ್ಕಿಹಾಕಿಕೊಂಡು ಲೈಂಗಿಕ ಅನೈತಿಕತೆ ನಡೆಸಿದರು. ಅವರಿಗೆ ಹುಟ್ಟಿದ ಮಕ್ಕಳು ಕ್ರೂರ ದೈತ್ಯರಾಗಿದ್ದರು ಮತ್ತು ತಮ್ಮ ಸುತ್ತಲೂ ಇದ್ದ ಜನರಿಗೆ ತುಂಬ ಕಿರುಕುಳ ಕೊಡುತ್ತಿದ್ದರು. (ಆದಿ. 6:1-4) ಅನೈತಿಕತೆಯ ಪಾಶ ಮಾತ್ರವಲ್ಲದೆ ಸೈತಾನನು ಆ ದೇವದೂತರಿಗೆ ಎಲ್ಲ ಮಾನವರ ಮೇಲೆ ಅಧಿಕಾರ ನಡೆಸುವ ಆಸೆಯನ್ನೂ ತೋರಿಸಿರಬಹುದು. ಹೀಗೆ ‘ಸ್ತ್ರೀಯ ಸಂತಾನದ’ ಬಗ್ಗೆ ಯೆಹೋವನು ಮಾಡಿದ್ದ ಪ್ರವಾದನೆ ನೆರವೇರದಂತೆ ಮಾಡಲು ಸೈತಾನ ಪ್ರಯತ್ನಿಸಿರಬಹುದು. (ಆದಿ. 3:15) ಆದರೆ ಸೈತಾನ ಈ ವಿಷಯದಲ್ಲಿ ಜಯ ಸಾಧಿಸುವಂತೆ ಯೆಹೋವನು ಬಿಡಲಿಲ್ಲ. ಸೈತಾನನ ಮತ್ತು ದೆವ್ವಗಳ ಮನಸ್ಸಿನಲ್ಲಿ ಏನೇ ಕೆಟ್ಟ ಯೋಚನೆಗಳಿದ್ದರೂ ದೇವರು ಜಲಪ್ರಳಯವನ್ನು ತರುವ ಮೂಲಕ ಅದನ್ನು ನೀರುಪಾಲು ಮಾಡಿದನು.
12 ಇದರಿಂದ ನಾವೇನು ಕಲಿಯಬಹುದು? ಅನೈತಿಕತೆ ಮತ್ತು ಅಹಂಭಾವ ತುಂಬ ಶಕ್ತಿಶಾಲಿ ಪ್ರಲೋಭನೆಗಳು. ಸೈತಾನನ ಜೊತೆ ಸೇರಿದ ದೇವದೂತರು ದೇವರ ಸನ್ನಿಧಾನದಲ್ಲಿ ಎಷ್ಟೋ ವರ್ಷ ಸೇವೆ ಮಾಡಿದ್ದರು. ಆದರೂ ತಮ್ಮಲ್ಲಿ ತಪ್ಪಾದ ಆಸೆಗಳು ಬೆಳೆಯುವಂತೆ ಬಿಟ್ಟರು. ಈ ಆಸೆಗಳು ತುಂಬ ಬಲವಾದಾಗ ತಪ್ಪು ಮಾಡಿಬಿಟ್ಟರು. ನಾವು ಎಷ್ಟೇ ವರ್ಷಗಳಿಂದ ಯೆಹೋವನ ಸೇವೆ ಮಾಡಿರಲಿ, ತಪ್ಪಾದ ಆಸೆಗಳು ನಮ್ಮಲ್ಲಿ ಬೆಳೆಯುವ ಸಾಧ್ಯತೆ ಇದೆ. (1 ಕೊರಿಂ. 10:12) ಆದ್ದರಿಂದಲೇ ನಾವು ನಮ್ಮ ಹೃದಯದಲ್ಲೇನಿದೆ ಎಂದು ಯಾವಾಗಲೂ ಪರಿಶೀಲಿಸುತ್ತಾ ಇರಬೇಕು. ನಮ್ಮ ಮನಸ್ಸಲ್ಲಿ ಅನೈತಿಕವಾದ ಆಸೆಗಳಿದ್ದರೆ ಅಥವಾ ಅಹಂಭಾವ ಇದ್ದರೆ ಅದನ್ನು ತಕ್ಷಣ ತೆಗೆದುಹಾಕಬೇಕು.—ಗಲಾ. 5:26; ಕೊಲೊಸ್ಸೆ 3:5 ಓದಿ.
13. (ಎ) ಜನರನ್ನು ಸೆಳೆಯಲು ಸೈತಾನನು ಉಪಯೋಗಿಸುವ ಮತ್ತೊಂದು ವಿಷಯ ಯಾವುದು? (ಬಿ) ಅದರಿಂದ ತಪ್ಪಿಸಿಕೊಳ್ಳಲು ನಾವೇನು ಮಾಡಬೇಕು?
13 ಜನರನ್ನು ಸೆಳೆಯಲು ಸೈತಾನನು ಉಪಯೋಗಿಸುವ ಮತ್ತೊಂದು ವಿಷಯ ಭೂತಪ್ರೇತ-ಮಾಟಮಂತ್ರದಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕುತೂಹಲ. ಸೈತಾನನು ಸುಳ್ಳು ಧರ್ಮ ಮತ್ತು ಮನೋರಂಜನೆಯನ್ನು ಉಪಯೋಗಿಸಿ ದೆವ್ವಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿಸುತ್ತಾನೆ. ಚಲನಚಿತ್ರಗಳು, ವಿಡಿಯೋ ಗೇಮ್ಸ್ ಮತ್ತು ಬೇರೆ ರೀತಿಯ ಮನೋರಂಜನೆಯಲ್ಲಿ ಈ ವಿಷಯಗಳಿಂದ ತುಂಬ ಮಜಾ ಸಿಗುವಂತೆ ತೋರಿಸಲಾಗುತ್ತದೆ. ಸೈತಾನನ ಈ ಗಾಳಕ್ಕೆ ನಾವು ಸಿಕ್ಕಿಹಾಕಿಕೊಳ್ಳದಿರಲು ಏನು ಮಾಡಬಹುದು? ಯಾವುದು ಒಳ್ಳೇ ಮನೋರಂಜನೆ, ಯಾವುದು ಕೆಟ್ಟ ಮನೋರಂಜನೆ ಎಂದು ಒಂದು ಪಟ್ಟಿಯನ್ನು ದೇವರ ಸಂಘಟನೆ ನಮಗೆ ಕೊಡಬೇಕೆಂದು ನಾವು ನಿರೀಕ್ಷಿಸಬಾರದು. ಬದಲಿಗೆ ನಾವು ನಮ್ಮ ಮನಸ್ಸಾಕ್ಷಿಯನ್ನು ತರಬೇತಿಗೊಳಿಸಬೇಕು. ಆಗ ಯೆಹೋವನು ಕೊಡುವ ತತ್ವಗಳ ಮೇಲಾಧರಿಸಿದ ಒಳ್ಳೇ ತೀರ್ಮಾನಗಳನ್ನು ಮಾಡುತ್ತೇವೆ. (ಇಬ್ರಿ. 5:14) ದೇವರ ಮೇಲಿರುವ ನಮ್ಮ ಪ್ರೀತಿ “ನಿಷ್ಕಪಟವಾಗಿ” ಇರುವಲ್ಲಿ ಸರಿಯಾದ ಆಯ್ಕೆಗಳನ್ನು ಮಾಡುತ್ತೇವೆ. (ರೋಮ. 12:9) ನಾವು ಹೇಳೋದೊಂದು ಮಾಡೋದೊಂದಾದರೆ ಅದು ಕಪಟತನ ಆಗಿಬಿಡುತ್ತದೆ. ಆದ್ದರಿಂದ ನಾವು ಮನೋರಂಜನೆಯನ್ನು ಆರಿಸಿಕೊಳ್ಳುವಾಗ, ‘ನಾನು ಬೇರೆಯವರಿಗೆ ಪಾಲಿಸಬೇಕೆಂದು ಹೇಳುವ ಅದೇ ತತ್ವಗಳನ್ನು ನಾನು ಪಾಲಿಸುತ್ತೇನಾ? ನಾನು ಆರಿಸಿಕೊಂಡಿರುವ ಮನೋರಂಜನೆಯನ್ನು ನನ್ನ ಬೈಬಲ್ ವಿದ್ಯಾರ್ಥಿಗಳು ಅಥವಾ ನಾನು ಭೇಟಿಮಾಡುವ ಬೇರೆ ಜನರು ನೋಡಿದರೆ ಏನು ನೆನಸುವರು?’ ಎಂದು ನಮ್ಮನ್ನೇ ಕೇಳಿಕೊಳ್ಳಬೇಕು. ನಾವು ಬೇರೆಯವರಿಗೆ ಪಾಲಿಸಬೇಕೆಂದು ಹೇಳುವ ತತ್ವಗಳನ್ನು ನಾವೂ ಪಾಲಿಸಿದರೆ ಸೈತಾನನು ಹಾಕುವ ಗಾಳಕ್ಕೆ ನಾವು ಸಿಕ್ಕಿಹಾಕಿಕೊಳ್ಳುವುದಿಲ್ಲ.—1 ಯೋಹಾ. 3:18.
14. (ಎ) ನಮ್ಮನ್ನು ಹೆದರಿಸಿ-ಬೆದರಿಸಲು ಸೈತಾನ ಏನು ಮಾಡಬಹುದು? (ಬಿ) ನಾವು ಅದನ್ನು ಹೇಗೆ ಎದುರಿಸಿ ನಿಲ್ಲಬಹುದು?
14 ಯೆಹೋವನಿಗೆ ನಾವು ತೋರಿಸುವ ನಿಷ್ಠೆಯನ್ನು ಮುರಿದುಹಾಕಲು ಸೈತಾನನು ಒಬ್ಬ ರೌಡಿಯಂತೆ ಕೆಲವೊಮ್ಮೆ ಹೆದರಿಕೆ-ಬೆದರಿಕೆಗಳನ್ನೂ ಉಪಯೋಗಿಸುತ್ತಾನೆ. ಉದಾಹರಣೆಗೆ, ಸರ್ಕಾರದ ಮೂಲಕ ನಮ್ಮ ಸಾರುವ ಕೆಲಸದ ಮೇಲೆ ನಿಷೇಧವನ್ನು ಅವನು ತರಬಹುದು. ಬೈಬಲ್ ತತ್ವಗಳ ಪ್ರಕಾರ ಜೀವಿಸುತ್ತಿರುವುದರಿಂದ ನಮ್ಮ ಜೊತೆ ಕೆಲಸ ಮಾಡುವವರು ಅಥವಾ ಸಹಪಾಠಿಗಳು ಗೇಲಿಮಾಡುವಂತೆ ಮಾಡಬಹುದು. (1 ಪೇತ್ರ 4:4) ನಮ್ಮ ಒಳ್ಳೇದನ್ನು ಬಯಸುವ ಸತ್ಯದಲ್ಲಿಲ್ಲದ ನಮ್ಮ ಕುಟುಂಬದವರು ನಾವು ಕೂಟಗಳಿಗೆ ಹೋಗುವುದನ್ನು ತಡೆಯುವಂತೆ ಸೈತಾನ ಮಾಡಬಹುದು. (ಮತ್ತಾ. 10:36) ಸೈತಾನನ ಹೆದರಿಕೆ-ಬೆದರಿಕೆಗಳನ್ನು ನಾವು ಹೇಗೆ ಎದುರಿಸಿ ನಿಲ್ಲಬಹುದು? ನಾವು ಇದಕ್ಕೆ ಹೆದರಬಾರದು. ಅವನು ನಮ್ಮೊಂದಿಗೆ ಯುದ್ಧ ಮಾಡುತ್ತಿದ್ದಾನೆ ಎಂದು ನಮಗೆ ಗೊತ್ತಲ್ವಾ? (ಪ್ರಕ. 2:10; 12:17) ಹೀಗೆ ನಮಗೆ ತೊಂದರೆ ಕೊಡುವ ಮೂಲಕ ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾನೆ ಅನ್ನುವುದನ್ನು ನಾವೆಂದೂ ಮರೆಯಬಾರದು. ನಮಗೆ ಅನುಕೂಲ ಇದ್ದಾಗ ಮಾತ್ರ ಯೆಹೋವನ ಸೇವೆ ಮಾಡುತ್ತೇವೆ, ಕಷ್ಟ ಬಂದರೆ ಬಿಟ್ಟು ಓಡಿಹೋಗುತ್ತೇವೆ ಎಂದು ಸಾಧಿಸಲು ಅವನು ಪ್ರಯತ್ನಿಸುತ್ತಿದ್ದಾನೆ. (ಯೋಬ 1:9-11; 2:4, 5) ಬೇಕಾದ ಬಲವನ್ನು ಕೊಡುವಂತೆ ಯೆಹೋವನನ್ನು ಯಾವಾಗಲೂ ಕೇಳಿಕೊಳ್ಳಿ. ಯೆಹೋವನು ಯಾವತ್ತೂ ನಮ್ಮ ಕೈಬಿಡಲ್ಲ ಅನ್ನುವುದನ್ನು ಮರೆಯಬೇಡಿ.—ಇಬ್ರಿ. 13:5.
ಸೈತಾನನಿಂದ ಏನು ಮಾಡಕ್ಕಾಗಲ್ಲ?
15. ನಮಗೆ ಇಷ್ಟ ಇಲ್ಲದ ವಿಷಯವನ್ನು ಮಾಡುವಂತೆ ಸೈತಾನ ಒತ್ತಾಯಿಸಲು ಸಾಧ್ಯನಾ? ವಿವರಿಸಿ.
15 ಜನರು ತಮಗೆ ಇಷ್ಟ ಇಲ್ಲದ ವಿಷಯವನ್ನು ಮಾಡುವಂತೆ ಸೈತಾನ ಒತ್ತಾಯ ಮಾಡಲು ಸಾಧ್ಯವಿಲ್ಲ. (ಯಾಕೋ. 1:14) ಲೋಕದಲ್ಲಿರುವ ಎಷ್ಟೋ ಜನರಿಗೆ ತಾವು ಸೈತಾನನ ಪಕ್ಷದಲ್ಲಿದ್ದೇವೆ ಎಂದು ಗೊತ್ತೇ ಇಲ್ಲ. ಆದರೆ ಒಬ್ಬ ವ್ಯಕ್ತಿ ಸತ್ಯ ಕಲಿತ ಮೇಲೆ ಅವನು ಯೆಹೋವನ ಪಕ್ಷದಲ್ಲಿರಬೇಕಾ ಅಥವಾ ಸೈತಾನನ ಪಕ್ಷದಲ್ಲಿರಬೇಕಾ ಎಂದು ತೀರ್ಮಾನಿಸಬೇಕು. (ಅ. ಕಾ. 3:17; 17:30) ನಾವು ದೇವರಿಗೆ ವಿಧೇಯರಾಗಿರಲು ದೃಢಮನಸ್ಸು ಮಾಡಿಕೊಂಡಿದ್ದರೆ ಸೈತಾನ ನಮ್ಮ ಸಮಗ್ರತೆಯನ್ನು ಮುರಿಯಲು ಸಾಧ್ಯವಿಲ್ಲ.—ಯೋಬ 2:3; 27:5.
16, 17. (ಎ) ಸೈತಾನ ಮತ್ತು ದೆವ್ವಗಳಿಂದ ಇನ್ನೇನು ಮಾಡಲಿಕ್ಕಾಗಲ್ಲ? (ಬಿ) ನಾವು ಗಟ್ಟಿಯಾಗಿ ಪ್ರಾರ್ಥನೆ ಮಾಡಲು ಯಾಕೆ ಹೆದರಬಾರದು?
16 ಸೈತಾನನಿಗೆ ಮತ್ತು ದೆವ್ವಗಳಿಗೆ ಬೇರೆ ಕೆಲವೊಂದು ವಿಷಯಗಳನ್ನೂ ಮಾಡಕ್ಕಾಗಲ್ಲ. ಉದಾಹರಣೆಗೆ, ನಮ್ಮ ಹೃದಯದಲ್ಲಿ ಅಥವಾ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಅವುಗಳಿಗೆ ಸಾಧ್ಯ ಎಂದು ಬೈಬಲ್ ಹೇಳುವುದಿಲ್ಲ. ಯೆಹೋವ ಮತ್ತು ಯೇಸುವಿಗೆ ಮಾತ್ರ ಈ ಸಾಮರ್ಥ್ಯ ಇದೆ. (1 ಸಮು. 16:7; ಮಾರ್ಕ 2:8) ಹಾಗಾದರೆ ನಾವು ಮನಸ್ಸಿನಲ್ಲಿರುವುದನ್ನು ಹೇಳಿಕೊಂಡರೆ ಅಥವಾ ಗಟ್ಟಿಯಾಗಿ ಪ್ರಾರ್ಥಿಸಿದರೆ ಸೈತಾನ ಮತ್ತು ದೆವ್ವಗಳು ಅದನ್ನು ಕೇಳಿಸಿಕೊಂಡು ನಮಗೆ ತೊಂದರೆ ಮಾಡಬಹುದೆಂದು ಹೆದರಬೇಕಾ? ಇಲ್ಲ. ಯಾಕೆ? ಈ ಹೋಲಿಕೆಯನ್ನು ಗಮನಿಸಿ: ನಾವು ಯೆಹೋವನ ಸೇವೆ ಮಾಡುವುದನ್ನು ಸೈತಾನ ನೋಡುತ್ತಾನೆ ಎಂದು ಗೊತ್ತಿದ್ದರೂ ನಾವು ಭಯಪಡದೆ ಒಳ್ಳೇ ವಿಷಯಗಳನ್ನು ಮಾಡುತ್ತೇವೆ. ಅದೇ ರೀತಿ ನಾವು ಗಟ್ಟಿಯಾಗಿ ಪ್ರಾರ್ಥಿಸಿದರೆ ಸೈತಾನ ಕೇಳಿಸಿಕೊಳ್ಳುತ್ತಾನೆ ಎಂದು ಭಯಪಡದೆ ಪ್ರಾರ್ಥಿಸಬೇಕು. ದೇವರ ಸೇವಕರು ಗಟ್ಟಿಯಾಗಿ ಪ್ರಾರ್ಥಿಸಿದ್ದರ ಬಗ್ಗೆ ನಾವು ಬೈಬಲಿನಲ್ಲಿ ತುಂಬ ಕಡೆ ಓದುತ್ತೇವೆ. ಆದರೆ ಅವರ ಪ್ರಾರ್ಥನೆಯನ್ನು ಸೈತಾನ ಕೇಳಿಸಿಕೊಳ್ಳುತ್ತಾನೆ ಎಂದು ಅವರು ಹೆದರಿದ್ದರ ಬಗ್ಗೆ ನಾವು ಎಲ್ಲೂ ಓದುವುದಿಲ್ಲ. (1 ಅರ. 8:22, 23; ಯೋಹಾ. 11:41, 42; ಅ. ಕಾ. 4:23, 24) ದೇವರಿಗೆ ಇಷ್ಟವಾಗುವ ವಿಷಯಗಳನ್ನು ನಾವು ಮಾತಾಡಿದರೆ, ಮಾಡಿದರೆ ಸೈತಾನ ನಮಗೆ ಶಾಶ್ವತ ಹಾನಿಯನ್ನು ಮಾಡದಂತೆ ಯೆಹೋವನು ನೋಡಿಕೊಳ್ಳುತ್ತಾನೆ.—ಕೀರ್ತನೆ 34:7 ಓದಿ.
17 ನಮ್ಮ ವೈರಿ ಎಂಥವನೆಂದು ತಿಳಿದುಕೊಳ್ಳುವುದು ಮುಖ್ಯ. ಆದರೆ ನಾವು ಅವನಿಗೆ ಹೆದರಬೇಕಾಗಿಲ್ಲ. ನಾವು ಅಪರಿಪೂರ್ಣರಾಗಿದ್ದರೂ ಯೆಹೋವನ ಸಹಾಯದಿಂದ ಸೈತಾನನ ವಿರುದ್ಧ ಖಂಡಿತ ಜಯ ಸಾಧಿಸಬಹುದು. (1 ಯೋಹಾ. 2:14) ನಾವು ಅವನನ್ನು ಎದುರಿಸಿದರೆ ಅವನು ನಮ್ಮಿಂದ ಓಡಿಹೋಗುತ್ತಾನೆ. (ಯಾಕೋ. 4:7; 1 ಪೇತ್ರ 5:9) ಇಂದು ಸೈತಾನನು ಮುಖ್ಯವಾಗಿ ಯುವಜನರ ಮೇಲೆ ಕಣ್ಣುಹಾಕಿದ್ದಾನೆ ಎಂದು ಅನಿಸುತ್ತದೆ. ಯುವಜನರು ಪಿಶಾಚನ ದಾಳಿಯನ್ನು ಹೇಗೆ ಎದುರಿಸಿ ನಿಲ್ಲಬಹುದು? ಮುಂದಿನ ಲೇಖನದಲ್ಲಿ ಇದನ್ನು ಚರ್ಚಿಸೋಣ.
a ಕೆಲವು ದೇವದೂತರಿಗೆ ಹೆಸರಿದ್ದದರ ಬಗ್ಗೆ ಬೈಬಲಲ್ಲಿದೆ. (ನ್ಯಾಯ. 13:18; ದಾನಿ. 8:16; ಲೂಕ 1:19; ಪ್ರಕ. 12:7) ಯೆಹೋವನು ಪ್ರತಿ ನಕ್ಷತ್ರಕ್ಕೂ ಹೆಸರಿಟ್ಟಿದ್ದಾನೆಂದು ಸಹ ಬೈಬಲ್ ತಿಳಿಸುತ್ತದೆ. (ಕೀರ್ತ. 147:4) ಹಾಗಾಗಿ ಯೆಹೋವನು ಎಲ್ಲ ದೇವದೂತರಿಗೆ ಖಂಡಿತ ಹೆಸರಿಟ್ಟಿರಬೇಕು. ಸೈತಾನನಿಗೂ ಖಂಡಿತ ಹೆಸರಿದ್ದಿರಬೇಕು.
b “ಸೈತಾನ” ಎಂಬ ಬಿರುದು ಹೀಬ್ರು ಶಾಸ್ತ್ರಗ್ರಂಥದಲ್ಲಿ ಬರೀ 18 ಸಲ ಇದೆ. ಆದರೆ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ 30ಕ್ಕಿಂತ ಹೆಚ್ಚು ಸಲ ಇದೆ.