“ಒಳ್ಳೆಯದರಿಂದ ಕೆಟ್ಟದ್ದನ್ನು ಗೆಲ್ಲುತ್ತ ಇರು”
“ಕೆಟ್ಟದ್ದು ನಿನ್ನನ್ನು ಸೋಲಿಸುವಂತೆ ಬಿಡದೆ ಒಳ್ಳೆಯದರಿಂದ ಕೆಟ್ಟದ್ದನ್ನು ಗೆಲ್ಲುತ್ತ ಇರು.” —ರೋಮಾಪುರ 12:21, NW.
ಸತ್ಯಾರಾಧನೆಯನ್ನು ಘೋರವಾಗಿ ವಿರೋಧಿಸುವವರ ಎದುರು ಸ್ಥಿರವಾಗಿ ನಿಲ್ಲುವುದು ಸಾಧ್ಯವೊ? ನಮ್ಮನ್ನು ಭಕ್ತಿಹೀನ ಜಗತ್ತಿಗೆ ಹಿಂದೆ ಸೆಳೆಯಲು ಪ್ರಯತ್ನಿಸುವ ಶಕ್ತಿಗಳನ್ನು ಸೋಲಿಸುವುದು ಸಾಧ್ಯವೊ? ‘ಖಂಡಿತವಾಗಿಯೂ ಸಾಧ್ಯ!’ ಎಂಬುದೇ ಈ ಎರಡು ಪ್ರಶ್ನೆಗಳಿಗೂ ಉತ್ತರ. ನಾವೇಕೆ ಹಾಗೆನ್ನುತ್ತೇವೆ? ಏಕೆಂದರೆ ಅಪೊಸ್ತಲ ಪೌಲನು ರೋಮಾಪುರದವರಿಗೆ ಬರೆದ ತನ್ನ ಪತ್ರದಲ್ಲಿ ಏನು ಹೇಳಿದನೋ ಆ ಕಾರಣಕ್ಕಾಗಿ. ಅವನು ಬರೆದದ್ದು: “ಕೆಟ್ಟದ್ದು ನಿನ್ನನ್ನು ಸೋಲಿಸುವಂತೆ ಬಿಡದೆ ಒಳ್ಳೆಯದರಿಂದ ಕೆಟ್ಟದ್ದನ್ನು ಗೆಲ್ಲುತ್ತ ಇರು.” (ರೋಮಾಪುರ 12:21) ನಾವು ಯೆಹೋವನಲ್ಲಿ ಭರವಸೆಯಿಟ್ಟು ಲೋಕವು ನಮ್ಮನ್ನು ಸೋಲಿಸುವಂತೆ ಬಿಡದಿರಲು ದೃಢನಿಶ್ಚಯ ಮಾಡಿರುವಲ್ಲಿ, ಲೋಕದ ಕೆಟ್ಟತನ ನಮ್ಮನ್ನು ಜಯಿಸಲಾರದು. ಅಲ್ಲದೆ, “ಕೆಟ್ಟದ್ದನ್ನು ಗೆಲ್ಲುತ್ತ ಇರು” ಎಂಬ ಪದಪ್ರಯೋಗವು ನಾವು ಕೆಟ್ಟದ್ದರ ವಿರುದ್ಧ ನಮ್ಮ ಆಧ್ಯಾತ್ಮಿಕ ಹೋರಾಟವನ್ನು ಮುಂದುವರಿಸುತ್ತ ಇರುವಲ್ಲಿ ನಾವು ಅದನ್ನು ಸೋಲಿಸಬಲ್ಲೆವು ಎಂದು ತೋರಿಸುತ್ತದೆ. ಆದರೆ ಎಚ್ಚರದಿಂದಿರಲು ತಪ್ಪಿಹೋಗಿ ತಮ್ಮ ಹೋರಾಟವನ್ನು ನಿಲ್ಲಿಸುವವರು ಮಾತ್ರ ಈ ದುಷ್ಟಲೋಕದಿಂದ ಮತ್ತು ಅದರ ದುಷ್ಟ ಪ್ರಭುವಾಗಿರುವ ಪಿಶಾಚನಾದ ಸೈತಾನನಿಂದ ಜಯಿಸಲ್ಪಡುವರು.—1 ಯೋಹಾನ 5:19.
2 ಪೌಲನು ಜೀವಿಸಿದ ಸಮಯಕ್ಕಿಂತ ಸುಮಾರು 500 ವರುಷಗಳಿಗೆ ಮೊದಲು, ಯೆರೂಸಲೇಮಿನಲ್ಲಿ ಜೀವಿಸುತ್ತಿದ್ದ ದೇವರ ಸೇವಕನೊಬ್ಬನು ಕೆಟ್ಟದ್ದರೊಂದಿಗೆ ಹೋರಾಡುವ ವಿಷಯದಲ್ಲಿ ಪೌಲನು ಹೇಳಿದ ಮಾತುಗಳ ಸತ್ಯತೆಯನ್ನು ತೋರಿಸಿಕೊಟ್ಟನು. ಆ ನೆಹೆಮೀಯನೆಂಬ ದೇವರ ಸೇವಕನು ದೈವಭಕ್ತಿಯಿಲ್ಲದ ಜನರಿಂದ ಬಂದ ವಿರೋಧವನ್ನು ಎದುರಿಸಿದ್ದು ಮಾತ್ರವಲ್ಲ ಒಳ್ಳೆಯದರಿಂದ ಕೆಟ್ಟದ್ದನ್ನು ಜಯಿಸಿದನು ಕೂಡ. ಅವನು ಯಾವ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಿದನು? ಅವನು ಜಯಶಾಲಿಯಾಗಲು ಸಮರ್ಥನಾಗುವಂತೆ ಯಾವುದು ಮಾಡಿತು? ಅವನ ಮಾದರಿಯನ್ನು ನಾವು ಹೇಗೆ ಅನುಸರಿಸಬಲ್ಲೆವು? ಈ ಪ್ರಶ್ನೆಗಳನ್ನು ಉತ್ತರಿಸುವ ಸಲುವಾಗಿ ನೆಹೆಮೀಯನ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಪರಿಗಣಿಸೋಣ.a
3 ನೆಹೆಮೀಯನು ಪರ್ಶಿಯದ ಅರಸನಾದ ಅರ್ತಷಸ್ತನ ಆಸ್ಥಾನದಲ್ಲಿ ಸೇವೆಮಾಡುತ್ತಿದ್ದನು. ನೆಹೆಮೀಯನು ಅವಿಶ್ವಾಸಿಗಳ ಮಧ್ಯೆ ಜೀವಿಸುತ್ತಿದ್ದರೂ ಆ ದಿನಗಳ ‘ಲೋಕದ ನಡವಳಿಕೆಯನ್ನು ಅನುಸರಿಸಲಿಲ್ಲ.’ (ರೋಮಾಪುರ 12:2) ಯೆಹೂದದಲ್ಲಿ ಒಂದು ಅಗತ್ಯವೆದ್ದು ಬಂದಾಗ, ಅವನು ತನ್ನ ಹಾಯಾದ ಜೀವನಶೈಲಿಯನ್ನು ತ್ಯಾಗಮಾಡಿ, ಯೆರೂಸಲೇಮಿಗೆ ಪ್ರಯಾಸಕರ ಪ್ರಯಾಣವನ್ನು ಮಾಡಿದನು. ಅಲ್ಲಿ, ಹಾಳುಬಿದ್ದಿದ್ದ ನಗರದ ಗೋಡೆಯನ್ನು ಜೀರ್ಣೋದ್ಧಾರ ಮಾಡುವ ದೊಡ್ಡ ಕೆಲಸವನ್ನು ಕೈಗೊಂಡನು. (ರೋಮಾಪುರ 12:1) ನೆಹೆಮೀಯನು ಯೆರೂಸಲೇಮಿನ ರಾಜ್ಯಪಾಲನಾಗಿದ್ದರೂ ಜೊತೆ ಇಸ್ರಾಯೇಲ್ಯರೊಂದಿಗೆ ಸೇರಿ ದಿನಾಲೂ “ಅರುಣೋದಯದಿಂದ ನಕ್ಷತ್ರಗಳು ಮೂಡುವ ವರೆಗೂ ಕೆಲಸ” ಮಾಡಿದನು. ಇದರ ಪರಿಣಾಮವಾಗಿ, ಕೇವಲ ಎರಡು ತಿಂಗಳುಗಳೊಳಗೆ ಆ ಯೋಜನೆ ಅಂತ್ಯಗೊಂಡಿತು! (ನೆಹೆಮೀಯ 4:21; 6:15) ಅದು ಬೆರಗುಗೊಳಿಸುವ ಸಾಹಸಕಾರ್ಯವಾಗಿತ್ತು. ಏಕೆಂದರೆ ಆ ಕಟ್ಟೋಣದ ಸಮಯದಲ್ಲಿ ಇಸ್ರಾಯೇಲ್ಯರು ವಿವಿಧ ರೀತಿಯ ವಿರೋಧಗಳನ್ನು ಎದುರಿಸಿದರು. ನೆಹೆಮೀಯನ ವಿರೋಧಿಗಳು ಯಾರಾಗಿದ್ದರು? ಅವರ ಗುರಿ ಏನಾಗಿತ್ತು?
4 ಯೆಹೂದದ ಸಮೀಪ ಜೀವಿಸುತ್ತಿದ್ದ ಪ್ರಭಾವಶಾಲಿ ಪುರುಷರಾಗಿದ್ದ ಸನ್ಬಲ್ಲಟ, ಟೋಬೀಯ ಮತ್ತು ಗೆಷೆಮ್ ಎಂಬವರು ಮುಖ್ಯ ವಿರೋಧಿಗಳಾಗಿದ್ದರು. ಅವರು ದೇವಜನರ ವೈರಿಗಳಾಗಿದ್ದುದರಿಂದ, ‘ಇಸ್ರಾಯೇಲ್ಯರ ಹಿತಚಿಂತಕನೊಬ್ಬನು [ನೆಹೆಮೀಯ] ಬಂದ ವರ್ತಮಾನವು ಮುಟ್ಟಿದಾಗ ಬಹಳವಾಗಿ ಹೊಟ್ಟೆಕಿಚ್ಚು ಪಟ್ಟರು.’ (ನೆಹೆಮೀಯ 2:10, 19) ನೆಹೆಮೀಯನ ವೈರಿಗಳು ಅವನ ಕಟ್ಟುವ ಯೋಜನೆಯನ್ನು ಕೆಟ್ಟ ಹಂಚಿಕೆಗಳನ್ನು ಮಾಡಿಯಾದರೂ ನಿಲ್ಲಿಸಲು ನಿರ್ಧರಿಸಿದರು. ನೆಹೆಮೀಯನು ಈಗ ಏನು ಮಾಡುವನು? ‘ಕೆಟ್ಟದ್ದು ತನ್ನನ್ನು ಗೆಲ್ಲುವಂತೆ’ ಬಿಡುವನೊ?
‘ಬಲು ಹೊಟ್ಟೆಕಿಚ್ಚೂ ಸಿಟ್ಟೂ ಉಳ್ಳವನಾದನು’
5 ನೆಹೆಮೀಯನು ಧೈರ್ಯದಿಂದ “ಬನ್ನಿರಿ, ಯೆರೂಸಲೇಮಿನ ಗೋಡೆಯನ್ನು ಕಟ್ಟೋಣ” ಎಂದು ತನ್ನ ಜನರನ್ನು ಉತ್ತೇಜಿಸಿದನು. ಜನರು ಅದಕ್ಕೆ ಪ್ರತಿವರ್ತಿಸುತ್ತಾ “ಬನ್ನಿರಿ, ಕಟ್ಟೋಣ ಎಂದು ಹೇಳಿ ಆ ಒಳ್ಳೇ ಕೆಲಸಕ್ಕೆ ಕೈಹಾಕಲು ಧೈರ್ಯಗೊಂಡರು” ಎಂದು ನೆಹೆಮೀಯನು ಹೇಳುತ್ತಾನೆ. ಆದರೆ ವಿರೋಧಿಗಳು “ನಮ್ಮನ್ನು ತಿರಸ್ಕರಿಸಿ ಗೇಲಿಮಾಡಿ—ನೀವು ಇಲ್ಲಿ ಮಾಡುವದೇನು? ಅರಸನಿಗೆ ವಿರೋಧವಾಗಿ ತಿರುಗಿಬೀಳಬೇಕೆಂದಿರುತ್ತೀರೋ ಎಂದು ಕೇಳಿದರು.” ನೆಹೆಮೀಯನು ಅವರ ಗೇಲಿಗಳಿಂದ ಮತ್ತು ಸುಳ್ಳು ಆರೋಪಗಳಿಂದ ಧೈರ್ಯಗೆಡಲಿಲ್ಲ. ಅವನು ಆ ವಿರೋಧಿಗಳಿಗೆ ಹೇಳಿದ್ದು: “ಪರಲೋಕದೇವರು ನಮಗೆ ಸಾಫಲ್ಯವನ್ನನುಗ್ರಹಿಸುವನು. ಆದದರಿಂದ ಆತನ ಸೇವಕರಾದ ನಾವು ಕಟ್ಟುವದಕ್ಕೆ ಮನಸ್ಸುಮಾಡಿದ್ದೇವೆ.” (ನೆಹೆಮೀಯ 2:17-20) ಆ “ಒಳ್ಳೇ ಕೆಲಸ”ವನ್ನು ಮುಂದುವರಿಸಲು ನೆಹೆಮೀಯನು ದೃಢನಿಶ್ಚಯ ಮಾಡಿದ್ದನು.
6 ಆ ವಿರೋಧಿಗಳಲ್ಲಿ ಒಬ್ಬನಾಗಿದ್ದ ಸನ್ಬಲ್ಲಟನು “ಬಲು ಹೊಟ್ಟೆಕಿಚ್ಚೂ ಸಿಟ್ಟೂ ಉಳ್ಳವನಾಗಿ” ಬೈಗುಳ ಸುರಿಮಳೆಯನ್ನೇ ಸುರಿಸಿದನು. “ನಿತ್ರಾಣಿಗಳಾದ ಈ ಯೆಹೂದ್ಯರು ಮಾಡುವದೇನು? . . . ಧೂಳಿನ ರಾಶಿಯೊಳಗೆ ಹುಗಿದುಹೋದ ಕಲ್ಲುಗಳನ್ನು ಬದುಕಿಸುವರೇನೋ” ಎಂದು ಹೇಳಿ ಅವನು ಗೇಲಿ ಮಾಡಿದನು. ಟೋಬೀಯನು ಈ ಅಣಕದೊಂದಿಗೆ ಜೊತೆಗೂಡುತ್ತ, “ಅವರು ಕಟ್ಟುವ ಕಲ್ಲುಗೋಡೆಯ ಮೇಲೆ ನರಿ ಹಾರಿದರೆ ಅದು ಬಿದ್ದುಹೋಗುವದು” ಎಂದು ಮೂದಲಿಸಿದನು. (ನೆಹೆಮೀಯ 4:1-3) ಆಗ ನೆಹೆಮೀಯನ ಪ್ರತಿಕ್ರಿಯೆ ಏನಾಗಿತ್ತು?
7 ನೆಹೆಮೀಯನು ಆ ಗೇಲಿಯನ್ನು ಅಲಕ್ಷ್ಯ ಮಾಡಿದನು. ಅವನು ದೇವರ ಆಜ್ಞೆಗೆ ವಿಧೇಯನಾದನು, ಸೇಡು ತೀರಿಸಲು ಪ್ರಯತ್ನಿಸಲಿಲ್ಲ. (ಯಾಜಕಕಾಂಡ 19:18) ಅದಕ್ಕೆ ಬದಲಾಗಿ, ಅವನು ವಿಷಯವನ್ನು ಯೆಹೋವನ ಕೈಗೆ ಒಪ್ಪಿಸಿ “ನಮ್ಮ ದೇವರೇ ಕೇಳು; ಅವರು ನಮ್ಮನ್ನು ಎಷ್ಟು ಹೀಯಾಳಿಸುತ್ತಾರೆ! ಈ ನಿಂದೆಯನ್ನು ಅವರ ತಲೆಯ ಮೇಲೆಯೇ ಬರಮಾಡು” ಎಂದು ಪ್ರಾರ್ಥಿಸಿದನು. (ನೆಹೆಮೀಯ 4:4) “ಪ್ರತೀಕಾರಮಾಡಿ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ” ಎಂಬ ಯೆಹೋವನ ಆಶ್ವಾಸನೆಯಲ್ಲಿ ನೆಹೆಮೀಯನು ಭರವಸವಿಟ್ಟನು. (ಧರ್ಮೋಪದೇಶಕಾಂಡ 32:35) ಅಲ್ಲದೆ, ನೆಹೆಮೀಯನೂ ಅವನ ಜನರೂ ‘ಕಟ್ಟುವ ಕೆಲಸವನ್ನು ಮುಂದರಿಸಿದರು.’ ವಿರೋಧವು ತಮ್ಮನ್ನು ದಿಕ್ಕುತಪ್ಪಿಸುವಂತೆ ಅವರು ಬಿಡಲಿಲ್ಲ. ವಾಸ್ತವದಲ್ಲಿ, “ಜನರು [ಕೆಲಸಕ್ಕೆ] ಮನಸ್ಸು ಕೊಟ್ಟದ್ದರಿಂದ ಗೋಡೆಯೆಲ್ಲಾ ಅರ್ಧ ಎತ್ತರದ ವರೆಗೂ ಜೋಡಣೆಯಾಯಿತು.” (ನೆಹೆಮೀಯ 4:6) ಹೀಗೆ ಸತ್ಯಾರಾಧನೆಯ ವೈರಿಗಳು ನಿರ್ಮಾಣಕಾರ್ಯವನ್ನು ನಿಲ್ಲಿಸುವುದರಲ್ಲಿ ವಿಫಲಗೊಂಡರು! ನಾವು ನೆಹೆಮೀಯನನ್ನು ಹೇಗೆ ಅನುಕರಿಸಬಲ್ಲೆವು?
8 ಇಂದು ವಿರೋಧಿಗಳು ಶಾಲೆ, ಕೆಲಸದ ಸ್ಥಳ ಮತ್ತು ಮನೆಯಲ್ಲಿ ಸಹ ನಮ್ಮ ಮೇಲೆ ಕೆಣಕು ನುಡಿ ಮತ್ತು ಆರೋಪಗಳನ್ನು ಹೇರಬಹುದು. ಆದರೂ, “ಸುಮ್ಮನಿರುವ ಸಮಯ” ಎಂಬ ಶಾಸ್ತ್ರೀಯ ಮೂಲತತ್ತ್ವವನ್ನು ಅನ್ವಯಿಸುವ ಮೂಲಕ ಇಂಥ ಸುಳ್ಳು ಆರೋಪಗಳನ್ನು ಹೆಚ್ಚಿನ ಸಮಯದಲ್ಲಿ ಒಳ್ಳೇ ರೀತಿಯಲ್ಲಿ ನಿಭಾಯಿಸಸಾಧ್ಯವಿದೆ. (ಪ್ರಸಂಗಿ 3:1, 7) ಆದುದರಿಂದ, ನೆಹೆಮೀಯನು ಹೇಗೆ ಚುಚ್ಚು ಮಾತುಗಳನ್ನು ಆಡಲಿಲ್ಲವೋ ಹಾಗೆ ನಾವೂ ಆಡುವುದಿಲ್ಲ. (ರೋಮಾಪುರ 12:17) “ನಾನೇ ಪ್ರತಿಫಲವನ್ನು ಕೊಡುವೆನು” ಎಂಬ ದೇವರ ಆಶ್ವಾಸನೆಯಲ್ಲಿ ನಾವು ಭರವಸೆಯಿಟ್ಟು, ಪ್ರಾರ್ಥನೆಯಲ್ಲಿ ಆತನ ಬಳಿ ತಿರುಗುತ್ತೇವೆ. (ರೋಮಾಪುರ 12:19; 1 ಪೇತ್ರ 2:19, 20) ಆ ವಿಧದಲ್ಲಿ, ಇಂದು ಮಾಡಬೇಕಾಗಿರುವ ಆಧ್ಯಾತ್ಮಿಕ ಕಾರ್ಯವನ್ನು ಅಂದರೆ ದೇವರ ರಾಜ್ಯದ ಸುವಾರ್ತೆ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ಕಾರ್ಯವನ್ನು ನಾವು ಮೂಲೆಗೊತ್ತುವಂತೆ ವಿರೋಧಿಗಳಿಗೆ ಎಡೆಗೊಡುವುದಿಲ್ಲ. (ಮತ್ತಾಯ 24:14; 28:19, 20) ನಾವು ಸಾರುವ ಕಾರ್ಯದಲ್ಲಿ ಪ್ರತಿ ಸಲ ಭಾಗವಹಿಸುವಾಗ ಮತ್ತು ವಿರೋಧಕ್ಕೆ ಹೆದರಲು ನಿರಾಕರಿಸುವಾಗ, ನೆಹೆಮೀಯನ ನಂಬಿಗಸ್ತಿಕೆಯ ಮನೋಭಾವವನ್ನು ತೋರಿಸುತ್ತೇವೆ.
‘ನಿಮ್ಮನ್ನು ಕೊಂದುಬಿಡುತ್ತೇವೆ’
9 ನೆಹೆಮೀಯನ ದಿನಗಳಲ್ಲಿದ್ದ ಸತ್ಯಾರಾಧನೆಯ ವಿರೋಧಿಗಳು “ಯೆರೂಸಲೇಮಿನ ಗೋಡೆಯ ಜೀರ್ಣೋದ್ಧಾರಕಾರ್ಯವು ಮುಂದರಿದ” ಸುದ್ದಿ ಕೇಳಿದಾಗ “ಯೆರೂಸಲೇಮಿನವರಿಗೆ ವಿರುದ್ಧವಾಗಿ ಯುದ್ಧಕ್ಕೆ” ಹೋಗಲು ಕತ್ತಿಗಳನ್ನು ತಕ್ಕೊಂಡರು. ಆ ಪರಿಸ್ಥಿತಿಯಿಂದಾಗಿ ಯೆಹೂದ್ಯರು ತುಂಬ ನಿರಾಶೆಗೊಂಡರು. ಉತ್ತರದಲ್ಲಿ ಸಮಾರ್ಯದವರು, ಪೂರ್ವದಲ್ಲಿ ಅಮ್ಮೋನಿಯರು, ದಕ್ಷಿಣದಲ್ಲಿ ಅರಬಿಗಳು ಮತ್ತು ಪಶ್ಚಿಮದಲ್ಲಿ ಅಷ್ಡೋದಿನವರು ಇದ್ದರು. ನಾಲ್ಕೂ ದಿಕ್ಕಿನಿಂದಲೂ ವಿರೋಧಿಗಳು ಯೆರೂಸಲೇಮನ್ನು ಸುತ್ತುವರಿದಿದ್ದರು. ಕಟ್ಟುವ ಕೆಲಸದವರು ಬೋನಿನೊಳಗೆ ಸಿಕ್ಕಿಬಿದ್ದವರಂತೆ ತೋರಿದರು! ಅವರು ಏನು ಮಾಡಸಾಧ್ಯವಿತ್ತು? ನೆಹೆಮೀಯನು ಹೇಳುವುದು: ‘ನಾವಾದರೋ ನಮ್ಮ ದೇವರಿಗೆ ಮೊರೆಯಿಟ್ಟೆವು.’ ವೈರಿಗಳು “ಅವರನ್ನು ಕೊಂದು ಕೆಲಸವನ್ನು ನಿಲ್ಲಿಸಿಬಿಡೋಣ” ಎಂದು ಬೆದರಿಸಿದರು. ಆಗ ನೆಹೆಮೀಯನು, “ಕತ್ತಿಬಿಲ್ಲುಬರ್ಜಿಗಳನ್ನು ಹಿಡಿದುಕೊಂಡು” ಪಟ್ಟಣವನ್ನು ರಕ್ಷಿಸುವ ಕೆಲಸವನ್ನು ಕಟ್ಟುವವರಿಗೆ ನೇಮಿಸಿದನು. ಹೌದು, ಮಾನವ ದೃಷ್ಟಿಯಲ್ಲಿ ಆ ದೊಡ್ಡ ಶತ್ರು ಸೈನ್ಯದ ಎದುರು ಈ ಚಿಕ್ಕ ಗುಂಪಿಗೆ ಜಯ ದೊರೆಯುವ ಸಂಭವವೇ ಇರಲಿಲ್ಲ. ಆದರೆ ನೆಹೆಮೀಯನು ಅವರನ್ನು ಪ್ರೋತ್ಸಾಹಿಸಿದ್ದು: “ನಿಮ್ಮ ಹಗೆಗಳಿಗೆ ಹೆದರಬೇಡಿರಿ; ಮಹೋನ್ನತನೂ ಭಯಂಕರನೂ ಆಗಿರುವ [ಯೆಹೋವನನ್ನು] ನೆನಪು” ಮಾಡಿಕೊಳ್ಳಿರಿ.—ನೆಹೆಮೀಯ 4:7-9, 11, 13, 14.
10 ಈಗ ಹಠಾತ್ತಾಗಿ ಸಂಗತಿಗಳು ಪೂರ್ತಿ ಬದಲಾದವು. ವೈರಿಗಳು ತಮ್ಮ ಆಕ್ರಮಣವನ್ನು ನಿಲ್ಲಿಸಿದರು. ಏಕೆ? ‘ಅವರ ಹಂಚಿಕೆಯನ್ನು ದೇವರು ವ್ಯರ್ಥಮಾಡಿದನು’ ಎಂದು ನೆಹೆಮೀಯನು ಹೇಳುತ್ತಾನೆ. ಆದರೂ, ವೈರಿಗಳು ಬೆದರಿಕೆಯನ್ನು ತಂದೇತರುವರೆಂದು ನೆಹೆಮೀಯನು ಗ್ರಹಿಸಿದನು. ಈ ಕಾರಣದಿಂದ ಅವನು ವಿವೇಚನೆಯಿಂದ ಕಟ್ಟುವವರ ಕೆಲಸ ವಿಧಾನವನ್ನು ಹೊಂದಿಸಿಕೊಂಡನು. ಅಂದಿನಿಂದ ಪ್ರತಿಯೊಬ್ಬರು, “ಒಂದು ಕೈಯಿಂದ ಹೊರೆಹೊತ್ತುಕೊಳ್ಳುತ್ತಾ ಇನ್ನೊಂದು ಕೈಯಿಂದ ಈಟಿಹಿಡಿದುಕೊಳ್ಳುತ್ತಿದ್ದರು.” ವೈರಿಗಳು ಆಕ್ರಮಣ ಮಾಡಿದ್ದಲ್ಲಿ ಕೆಲಸಗಾರರಿಗೆ ಎಚ್ಚರಿಕೆ ದೊರೆಯುವಂತೆ ನೆಹೆಮೀಯನು “ಕೊಂಬೂದುವವನೊಬ್ಬನನ್ನು” ಸಹ ನೇಮಿಸಿದನು. ನೆಹೆಮೀಯನು ಜನರಿಗೆ, “ನಮ್ಮ ದೇವರು ನಮಗೋಸ್ಕರ ಯುದ್ಧಮಾಡುವನು” ಎಂಬ ಪುನರಾಶ್ವಾಸನೆಯನ್ನು ಕೊಟ್ಟನು. (ನೆಹೆಮೀಯ 4:15-20) ಆಕ್ರಮಣವನ್ನು ನಿಭಾಯಿಸಲು ಪ್ರೋತ್ಸಾಹಿತರೂ ಸಿದ್ಧರೂ ಆಗಿದ್ದ ಕಟ್ಟುವವರು ಕೆಲಸವನ್ನು ಮುಂದುವರಿಸುತ್ತ ಹೋದರು. ಈ ವೃತ್ತಾಂತದಿಂದ ನಾವು ಯಾವ ಪಾಠಗಳನ್ನು ಕಲಿತುಕೊಳ್ಳಬಲ್ಲೆವು?
11 ನಿಜ ಕ್ರೈಸ್ತರು ಆಗಾಗ್ಗೆ ಹಿಂಸಾತ್ಮಕ ವಿರೋಧವನ್ನು ಎದುರಿಸುತ್ತಾರೆ. ವಾಸ್ತವದಲ್ಲಿ, ಕೆಲವು ದೇಶಗಳಲ್ಲಿ ಸತ್ಯಾರಾಧನೆಯ ಕಟು ವಿರೋಧಿಗಳ ಶತ್ರು ಸೈನ್ಯವು ಬಹು ಬಲವಾಗಿರುತ್ತದೆ. ಮಾನವ ದೃಷ್ಟಿಯಿಂದ, ಆ ದೇಶಗಳಲ್ಲಿರುವ ನಮ್ಮ ಜೊತೆವಿಶ್ವಾಸಿಗಳಿಗೆ ಅಲ್ಲಿ ಸೇವೆಮಾಡುವುದು ಅಸಾಧ್ಯ. ಆದರೂ ಆ ಸಾಕ್ಷಿಗಳಿಗೆ ‘ದೇವರು ತಮ್ಮ ಪರವಾಗಿ ಹೋರಾಡುವನು’ ಎಂಬ ದೃಢಭರವಸೆಯಿದೆ. ಹೌದು, ತಮ್ಮ ನಂಬಿಕೆಗಳಿಗಾಗಿ ಹಿಂಸೆಪಡುತ್ತಿರುವವರು ಯೆಹೋವನು ತಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನೆ ಮತ್ತು ಬಲಾಢ್ಯ ವೈರಿಗಳ ‘ಹಂಚಿಕೆಗಳನ್ನು ವ್ಯರ್ಥಮಾಡುತ್ತಾನೆ’ ಎಂಬುದನ್ನು ಪದೇ ಪದೇ ಅನುಭವದಿಂದ ಕಂಡುಕೊಂಡಿದ್ದಾರೆ. ರಾಜ್ಯ ಕಾರ್ಯವು ನಿಷೇಧಾಜ್ಞೆಯೊಳಗಿರುವ ದೇಶಗಳಲ್ಲಿಯೂ ಕ್ರೈಸ್ತರು ಸುವಾರ್ತೆಯನ್ನು ಸಾರುತ್ತ ಹೋಗಲು ಮಾರ್ಗಗಳನ್ನು ಕಂಡುಹಿಡಿಯುತ್ತಾರೆ. ಯೆರೂಸಲೇಮಿನಲ್ಲಿ ನಿರ್ಮಾಣ ಕೆಲಸಗಾರರು ತಮ್ಮ ಕಾರ್ಯವಿಧಾನವನ್ನು ಹೊಂದಿಸಿಕೊಂಡಂತೆಯೇ ಯೆಹೋವನ ಸಾಕ್ಷಿಗಳು ಇಂದು ಆಕ್ರಮಣಕ್ಕೊಳಗಾಗುವಾಗ ವಿವೇಚನೆಯಿಂದ ತಮ್ಮ ಸಾರುವ ವಿಧಾನವನ್ನು ಹೊಂದಿಸಿಕೊಳ್ಳುತ್ತಾರೆ. ಅವರು ಲೋಕಸಂಬಂಧವಾದ ಆಯುಧಗಳನ್ನು ಉಪಯೋಗಿಸುವುದಿಲ್ಲವೆಂಬುದು ನಿಶ್ಚಯ. (2 ಕೊರಿಂಥ 10:4) ದೈಹಿಕ ಹಿಂಸೆಯ ಬೆದರಿಕೆ ಹಾಕಲ್ಪಟ್ಟಾಗಲೂ ಅವರು ಸಾರುವ ಚಟುವಟಿಕೆಯನ್ನು ನಿಲ್ಲಿಸುವುದಿಲ್ಲ. (1 ಪೇತ್ರ 4:16) ಇದಕ್ಕೆ ವ್ಯತಿರಿಕ್ತವಾಗಿ, ಆ ಧೈರ್ಯಶಾಲಿ ಸೋದರಸೋದರಿಯರು ‘ಒಳ್ಳೆಯದರಿಂದ ಕೆಟ್ಟದ್ದನ್ನು ಗೆಲ್ಲುತ್ತ ಇರುತ್ತಾರೆ.’
“ಒಬ್ಬರನ್ನೊಬ್ಬರು ಎದುರುಗೊಳ್ಳೋಣ ಬಾ”
12 ನೆಹೆಮೀಯನ ಶತ್ರುಗಳು ತಮ್ಮ ನೇರವಾದ ಆಕ್ರಮಣ ವ್ಯರ್ಥಗೊಂಡದ್ದನ್ನು ಕಂಡು ಹೆಚ್ಚು ಕುಯುಕ್ತಿಯ ಆಕ್ರಮಣ ವಿಧಾನಗಳನ್ನು ಯೋಜಿಸಿದರು. ವಾಸ್ತವದಲ್ಲಿ, ಅವರು ಮೂರು ಹಂಚಿಕೆಗಳನ್ನು ಪ್ರಯತ್ನಿಸಿದರು. ಅವು ಯಾವುವು?
13 ಮೊದಲನೆಯದಾಗಿ, ವೈರಿಗಳು ನೆಹೆಮೀಯನನ್ನು ವಂಚಿಸಲು ಪ್ರಯತ್ನಿಸಿದರು. “ಓನೋ ತಗ್ಗಿನ ಹಕ್ಕೆಫಿರೀಮಿನಲ್ಲಿ ಒಬ್ಬರನೊಬ್ಬರು ಎದುರುಗೊಳ್ಳೋಣ ಬಾ” ಎಂದು ಅವರು ಹೇಳಿದರು. ಓನೋ ತಗ್ಗು ಯೆರೂಸಲೇಮ್ ಮತ್ತು ಸಮಾರ್ಯಗಳ ಮಧ್ಯೆ ಇತ್ತು. ತಪ್ಪಾಭಿಪ್ರಾಯಗಳನ್ನು ಪರಿಹರಿಸಲು ನೆಹೆಮೀಯನು ಅರೆದಾರಿಯಲ್ಲಿ ಬಂದು ಅವರನ್ನು ಭೇಟಿಮಾಡಬೇಕು ಎಂದು ಅವರು ಹೇಳಿದರು. ನೆಹೆಮೀಯನು ‘ಅದೂ ನ್ಯಾಯವೇ, ಹೋರಾಡುವುದಕ್ಕಿಂತ ಮಾತಾಡುವುದು ಲೇಸು’ ಎಂದು ಯೋಚಿಸಬಹುದಿತ್ತು. ಆದರೆ ಅವನದನ್ನು ನಿರಾಕರಿಸಿದನು. ಏಕೆ? “ಅವರು ನನಗೆ ಕೇಡುಬಗೆಯುವವರು” ಎಂದು ಅವನು ವಿವರಿಸಿದನು. ಅವನು ಅವರ ಹಂಚಿಕೆಯನ್ನು ಅರಿತುಕೊಂಡನು, ವಂಚನೆಗೊಳಗಾಗಲಿಲ್ಲ. ಅವನು ತನ್ನ ವಿರೋಧಿಗಳಿಗೆ “ಅದನ್ನು ಬಿಟ್ಟು ನಿಮ್ಮ ಬಳಿಗೆ ಬಂದರೆ ಕೆಲಸವು ನಿಂತುಹೋಗುವದು; ನಾನು ಬರಲಾರೆನು” ಎಂದು ನಾಲ್ಕು ಬಾರಿ ಹೇಳಿದನು. ನೆಹೆಮೀಯನು ರಾಜಿ ಮಾಡಿಕೊಳ್ಳುವಂತೆ ವೈರಿಗಳು ಮಾಡಿದ ಪ್ರಯತ್ನಗಳು ವಿಫಲಗೊಂಡವು. ತನ್ನ ದೃಷ್ಟಿಯನ್ನು ಅವನು ಕಟ್ಟುವ ಕೆಲಸದ ಮೇಲೆ ಕೇಂದ್ರೀಕರಿಸಿದನು.—ನೆಹೆಮೀಯ 6:1-4.
14 ಎರಡನೆಯದಾಗಿ, ನೆಹೆಮೀಯನ ವಿರೋಧಿಗಳು ಸುಳ್ಳು ವದಂತಿಗಳನ್ನು ಹಬ್ಬಿಸಿ, ನೆಹೆಮೀಯನು ಅರ್ತಷಸ್ತ ರಾಜನ ವಿರುದ್ಧ ‘ತಿರುಗಿಬೀಳಬೇಕೆಂದಿದ್ದಾನೆ’ ಎಂಬ ಆರೋಪವನ್ನು ಹೊರಿಸಿದರು. ನೆಹೆಮೀಯನನ್ನು ಇನ್ನೊಮ್ಮೆ ‘ಕೂಡಿಮಾತಾಡಲು’ ಕರೆಯಲಾಯಿತು. ಆಗಲೂ ವೈರಿಗಳ ಇಂಗಿತವನ್ನು ಗ್ರಹಿಸಿದ್ದ ನೆಹೆಮೀಯನು ನಿರಾಕರಿಸಿದನು. ನೆಹೆಮೀಯನು ಹೇಳಿದ್ದು: “ಹೀಗೆ ಎಲ್ಲರೂ—ಇವರ ಕೈಗಳು ಜೋಲು ಬಿದ್ದು ಕೆಲಸವನ್ನು ತೀರಿಸದೆ ಬಿಡಲಿ ಅಂದುಕೊಂಡು ನಮ್ಮನ್ನು ಹೆದರಿಸುವದಕ್ಕೆ ಪ್ರಯತ್ನಿಸಿದರು.” ಆದರೆ ಈ ಬಾರಿ ತನ್ನ ವೈರಿಗಳ ಆರೋಪವನ್ನು ಸುಳ್ಳೆಂದು ಸ್ಥಾಪಿಸುತ್ತಾ ಅವನು ಹೀಗಂದನು: “ನೀನು ಬರೆದಂಥದು ಏನೂ ನಡೆದಿಲ್ಲ; ಅದನ್ನು ನೀನೇ ನಿನ್ನ ಮನಸ್ಸಿನಲ್ಲಿ ಕಲ್ಪಿಸಿಕೊಂಡಿದ್ದಿ.” ಇದಲ್ಲದೆ, ನೆಹೆಮೀಯನು ಯೆಹೋವನ ಸಹಾಯಕ್ಕಾಗಿ ಬೇಡುತ್ತಾ “ನನ್ನ ಕೈಗಳನ್ನು ಬಲಪಡಿಸು” ಎಂದು ಪ್ರಾರ್ಥಿಸಿದನು. ಯೆಹೋವನ ಸಹಾಯದಿಂದ ತಾನು ಈ ಒಳಸಂಚನ್ನು ವಿಫಲಗೊಳಿಸಲು ಶಕ್ತನಾಗಿ ನಿರ್ಮಾಣದ ಕೆಲಸವನ್ನು ಮುಂದುವರಿಸುವೆನು ಎಂಬ ಭರವಸೆ ನೆಹೆಮೀಯನಿಗಿತ್ತು.—ನೆಹೆಮೀಯ 6:5-9.
15 ಮೂರನೆಯದಾಗಿ, ಶೆಮಾಯನೆಂಬ ಇಸ್ರಾಯೇಲ್ಯ ವಿಶ್ವಾಸಘಾತುಕನನ್ನು ಉಪಯೋಗಿಸಿ ನೆಹೆಮೀಯನು ದೇವರ ನಿಯಮವನ್ನು ಮುರಿಯುವಂತೆ ಮಾಡಲು ವೈರಿಗಳು ಪ್ರಯತ್ನಿಸಿದರು. ಶೆಮಾಯನು ನೆಹೆಮೀಯನಿಗೆ, “ನಿನ್ನನ್ನು ಕೊಲ್ಲುವದಕ್ಕೆ ಬರುತ್ತಾರೆ, ಈ ರಾತ್ರಿಯೇ ಬರುತ್ತಾರೆ. ಆದದರಿಂದ ನಾವಿಬ್ಬರೂ ದೇವಾಲಯಕ್ಕೆ ಹೋಗಿ ಪವಿತ್ರಸ್ಥಾನವನ್ನು ಪ್ರವೇಶಿಸಿ ಅದರ ಕದಗಳನ್ನು ಮುಚ್ಚಿಕೊಳ್ಳೋಣ ಬಾ” ಎಂದು ಹೇಳಿದನು. ನೆಹೆಮೀಯನನ್ನು ಇನ್ನೇನು ಕೊಲ್ಲಲಿಕ್ಕಿದ್ದಾರೆ, ಆದರೆ ದೇವಾಲಯದಲ್ಲಿ ಅಡಗಿಕೊಳ್ಳುವ ಮೂಲಕ ಅವನು ತನ್ನ ಜೀವವನ್ನು ಉಳಿಸಿಕೊಳ್ಳಬಲ್ಲನೆಂದು ಶೆಮಾಯನು ಹೇಳಿದನು. ನೆಹೆಮೀಯನಾದರೋ ಯಾಜಕನಾಗಿರಲಿಲ್ಲ. ಆದುದರಿಂದ ದೇವಾಲಯದಲ್ಲಿ ಅಡಗಿಕೊಳ್ಳುವ ಮೂಲಕ ಪಾಪಕ್ಕೊಳಗಾಗುತ್ತಿದ್ದನು. ಅವನು ತನ್ನ ಪ್ರಾಣರಕ್ಷಣೆಗಾಗಿ ದೇವರ ನಿಯಮವನ್ನು ಮುರಿಯುವನೊ? ನೆಹೆಮೀಯನು ಉತ್ತರ ಕೊಟ್ಟದ್ದು: “ನನ್ನಂಥವನು ಪ್ರಾಣರಕ್ಷಣೆಗಾಗಿ ಪವಿತ್ರಸ್ಥಾನವನ್ನು ಪ್ರವೇಶಿಸುವನೇ? ನಾನು ಬರುವದಿಲ್ಲ.” ನೆಹೆಮೀಯನಿಗಾಗಿ ಸಿದ್ಧಮಾಡಿದ್ದ ಪಾಶದೊಳಗೆ ಅವನೇಕೆ ಸಿಕ್ಕಿಬೀಳಲಿಲ್ಲ? ಏಕೆಂದರೆ, ಶೆಮಾಯನು ಜೊತೆ ಇಸ್ರಾಯೇಲ್ಯನಾಗಿದ್ದರೂ “ಇವನನ್ನು ಪ್ರೇರಿಸಿದವನು ದೇವರಲ್ಲ” ಎಂದು ಅವನಿಗೆ ತಿಳಿದಿತ್ತು. ಏಕೆಂದರೆ ನಿಜ ಪ್ರವಾದಿಯಾಗಿದ್ದ ಪಕ್ಷದಲ್ಲಿ ದೇವರ ನಿಯಮವನ್ನು ಮುರಿಯುವಂತೆ ಅವನು ಎಂದಿಗೂ ಸಲಹೆ ನೀಡುತ್ತಿದ್ದಿಲ್ಲ. ಹೀಗೆ, ನೆಹೆಮೀಯನು ಪುನಃ ದುಷ್ಟ ವಿರೋಧಿಗಳು ತನ್ನನ್ನು ಸೋಲಿಸುವಂತೆ ಬಿಡಲಿಲ್ಲ. ಇದಾಗಿ ಸ್ವಲ್ಪದರಲ್ಲಿ ಅವನು ಹೀಗೆ ಹೇಳಸಾಧ್ಯವಾಯಿತು: “ಗೋಡೆಯು ಭಾದ್ರಪದ ಮಾಸದ ಇಪ್ಪತ್ತೈದನೆಯ ದಿನದಲ್ಲಿ ತೀರಿತು. ಅದನ್ನು ಕಟ್ಟುವದಕ್ಕೆ ಒಟ್ಟು ಐವತ್ತೆರಡು ದಿನಗಳು ಹಿಡಿದವು.”—ನೆಹೆಮೀಯ 6:10-15; ಅರಣ್ಯಕಾಂಡ 1:51; 18:7.
16 ನೆಹೆಮೀಯನಂತೆ ನಾವು ಕೂಡ ವಿರೋಧಿಗಳನ್ನು ಎದುರಿಸಬಹುದು. ಅವರು ವಿಶ್ವಾಸಘಾತ ಮಾಡುವ ಸ್ನೇಹಿತರು, ಸುಳ್ಳು ಆಪಾದಕರು ಮತ್ತು ಸುಳ್ಳು ಸಹೋದರರ ರೂಪದಲ್ಲಾಗಿರಬಹುದು. ಕೆಲವರು ನಾವು ಅರ್ಧಹಾದಿಯಲ್ಲಿ ಸಂಧಿಸೋಣವೊ ಎಂಬಂತೆ ತಮ್ಮೊಂದಿಗೆ ರಾಜಿಮಾಡಿಕೊಳ್ಳಲು ನಮ್ಮನ್ನು ಕರೆಯಬಹುದು. ‘ಯೆಹೋವನನ್ನು ಅಷ್ಟೊಂದು ಹುರುಪಿನಿಂದ ಸೇವಿಸುವುದಕ್ಕಿಂತ ಅದೇ ಸಮಯ ಸ್ವಲ್ಪ ಲೌಕಿಕ ಗುರಿಗಳನ್ನೂ ಬೆನ್ನಟ್ಟಬಹುದಲ್ಲಾ’ ಎಂದು ನಮಗೆ ಮನದಟ್ಟು ಮಾಡಲು ಅವರು ಪ್ರಯತ್ನಿಸಬಹುದು. ಆದರೆ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಏಕೆಂದರೆ ನಮ್ಮ ಜೀವನಗಳಲ್ಲಿ ದೇವರ ರಾಜ್ಯವೇ ಪ್ರಥಮವಾಗಿದೆ. (ಮತ್ತಾಯ 6:33; ಲೂಕ 9:57-62) ವಿರೋಧಿಗಳು ನಮಗೆ ವಿರುದ್ಧವಾಗಿ ಸುಳ್ಳು ಆರೋಪಗಳನ್ನೂ ಹಬ್ಬಿಸಬಹುದು. ನೆಹೆಮೀಯನು ರಾಜನನ್ನು ಪ್ರತಿಭಟಿಸುವವನು ಎಂದು ಹೇಳಲಾದಂತೆಯೇ, ಕೆಲವು ದೇಶಗಳಲ್ಲಿ ನಾವು ಸರಕಾರಕ್ಕೆ ಅಪಾಯ ತರುವವರು ಎಂಬ ಆರೋಪ ಹೊರಿಸಲಾಗುತ್ತದೆ. ಇಂಥ ಕೆಲವು ಆರೋಪಗಳು ಸುಳ್ಳೆಂದು ನಾವು ನ್ಯಾಯಾಲಯಗಳಲ್ಲಿ ಯಶಸ್ವಿಕರವಾಗಿ ಸಮರ್ಥಿಸಿಕೊಂಡಿದ್ದೇವೆ. ಆದರೆ ಒಂದೊಂದು ಸನ್ನಿವೇಶಗಳ ಪರಿಣಾಮ ಏನೇ ಆಗಿರಲಿ, ಯೆಹೋವನು ತನ್ನ ಚಿತ್ತಾನುಸಾರ ವಿಷಯಗಳನ್ನು ನಿರ್ದೇಶಿಸಲಿ ಎಂದು ನಾವು ಭರವಸೆಯಿಂದ ಪ್ರಾರ್ಥಿಸುತ್ತೇವೆ. (ಫಿಲಿಪ್ಪಿ 1:7) ಯೆಹೋವನನ್ನು ಸೇವಿಸುತ್ತೇವೆಂದು ಸೋಗು ಹಾಕಿಕೊಳ್ಳುವವರಿಂದ ಸಹ ವಿರೋಧ ಬರಬಹುದು. ನೆಹೆಮೀಯನು ತನ್ನ ಪ್ರಾಣರಕ್ಷಣೆಗಾಗಿ ದೇವರ ನಿಯಮವನ್ನು ಮುರಿಯುವಂತೆ ಜೊತೆ ಯೆಹೂದ್ಯನೊಬ್ಬನು ಅವನನ್ನು ಬಲವಂತ ಮಾಡಿದಂತೆಯೇ, ಧರ್ಮಭ್ರಷ್ಟರಾಗಿರುವ ಮಾಜಿ ಸಾಕ್ಷಿಗಳು ನಾವು ಒಂದಲ್ಲ ಒಂದು ವಿಧದಲ್ಲಿ ರಾಜಿಮಾಡಿಕೊಳ್ಳುವಂತೆ ನಮ್ಮನ್ನು ಪ್ರಭಾವಿಸಲು ಪ್ರಯತ್ನಿಸಬಹುದು. ಆದರೂ, ನಾವು ಇಂಥ ಧರ್ಮಭ್ರಷ್ಟರನ್ನು ತಿರಸ್ಕರಿಸುತ್ತೇವೆ. ಏಕೆಂದರೆ ನಮ್ಮ ಜೀವರಕ್ಷಣೆಯಾಗುವುದು ದೇವರ ನಿಯಮಗಳನ್ನು ಮುರಿಯುವುದರಿಂದಲ್ಲ, ಅವುಗಳನ್ನು ಪಾಲಿಸುವುದರಿಂದಲೇ ಎಂದು ನಮಗೆ ತಿಳಿದದೆ! (1 ಯೋಹಾನ 4:1) ಹೌದು, ಯೆಹೋವನ ಸಹಾಯದಿಂದ ನಾವು ಯಾವುದೇ ರೂಪದ ಕೆಟ್ಟದ್ದನ್ನು ಜಯಿಸಬಲ್ಲೆವು.
ಕೆಟ್ಟದ್ದನ್ನು ಎದುರಿಸುವಾಗಲೂ ಸುವಾರ್ತೆಯನ್ನು ಸಾರುವುದು
17 ಕ್ರಿಸ್ತನ ಅಭಿಷಿಕ್ತ ಸಹೋದರರ ಬಗ್ಗೆ ದೇವರ ವಾಕ್ಯ ಹೇಳುವುದು: ‘ಅವರು ತಮ್ಮ ಸಾಕ್ಷಿಯ ವಾಕ್ಯದಿಂದಲೂ [ಸೈತಾನನನ್ನು] ಜಯಿಸಿದರು.’ (ಪ್ರಕಟನೆ 12:11, NIBV) ಹೀಗೆ, ಕೆಟ್ಟದ್ದರ ಮೂಲನಾದ ಸೈತಾನನನ್ನು ಜಯಿಸುವುದಕ್ಕೂ ರಾಜ್ಯ ವಾರ್ತೆಯನ್ನು ಸಾರುವುದಕ್ಕೂ ನೇರ ಸಂಬಂಧವಿದೆ. ಆದುದರಿಂದ ವಿರೋಧವನ್ನು ಎಬ್ಬಿಸುವ ಮೂಲಕ ಅಭಿಷಿಕ್ತ ಜನಶೇಷದ ಮತ್ತು ‘ಮಹಾಸಮೂಹದ’ ಮೇಲೆ ಸೈತಾನನು ಮರುಕವಿಲ್ಲದ ಆಕ್ರಮಣವನ್ನು ಮಾಡುವುದರಲ್ಲಿ ಆಶ್ಚರ್ಯವೇನೂ ಇಲ್ಲ!—ಪ್ರಕಟನೆ 7:9; 12:17.
18 ನಾವು ನೋಡಿರುವಂತೆ ವಿರೋಧವು ಬೈಗುಳ ಅಥವಾ ದೈಹಿಕ ಹಿಂಸೆಯ ಬೆದರಿಕೆಗಳು ಇಲ್ಲವೆ ಕುಯುಕ್ತಿಯ ಜಾಲಗಳ ರೂಪಗಳಲ್ಲಿ ಬರಬಹುದು. ಏನೇ ಆಗಲಿ, ಯಾವಾಗಲೂ ಸೈತಾನನ ಗುರಿ ಒಂದೇ. ಸಾರುವ ಕೆಲಸವನ್ನು ನಿಲ್ಲಿಸುವುದೇ. ಆದರೂ, ಅವನು ಕ್ಷುದ್ರ ರೀತಿಯಲ್ಲಿ ವಿಫಲಗೊಳ್ಳುವನು, ಏಕೆಂದರೆ ಪೂರ್ವದ ನೆಹೆಮೀಯನ ಅನುಕರಣೆಯಲ್ಲಿ ದೇವಜನರು “ಒಳ್ಳೆಯದರಿಂದ ಕೆಟ್ಟದ್ದನ್ನು” ಜಯಿಸಲು ನಿರ್ಧರಿಸಿದ್ದಾರೆ. ಕೆಲಸವು ಮುಗಿಯಿತು ಎಂದು ಯೆಹೋವನು ಹೇಳುವವರೆಗೆ ಅವರು ಸುವಾರ್ತೆಯನ್ನು ಸಾರುತ್ತಿರುವ ಮೂಲಕ ಹಾಗೆ ಮಾಡುತ್ತಾರೆ.—ಮಾರ್ಕ 13:10; ರೋಮಾಪುರ 8:31; ಫಿಲಿಪ್ಪಿ 1:27, 28. (w07 7/1)
[ಪಾದಟಿಪ್ಪಣಿ]
a ಆ ಘಟನೆಗಳ ಹಿನ್ನೆಲೆಗಾಗಿ, ನೆಹೆಮೀಯ 1:1-4; 2:1-6, 9-20; 4:1-23; 6:1-15ನ್ನು ಓದಿ.
ನೆನಪಿದೆಯೆ?
• ಗತಕಾಲಗಳ ದೇವಸೇವಕರು ಯಾವ ವಿರೋಧವನ್ನು ಎದುರಿಸಿದರು ಮತ್ತು ಇಂದಿನ ಕ್ರೈಸ್ತರು ಯಾವುದನ್ನು ಎದುರಿಸುತ್ತಾರೆ?
• ನೆಹೆಮೀಯನ ವೈರಿಗಳ ಮುಖ್ಯ ಗುರಿ ಏನಾಗಿತ್ತು ಮತ್ತು ಇಂದು ದೇವರ ವೈರಿಗಳ ಗುರಿ ಏನಾಗಿದೆ?
• ನಾವು ಇಂದು ಹೇಗೆ ಒಳ್ಳೆಯದರಿಂದ ಕೆಟ್ಟದ್ದನ್ನು ಗೆಲ್ಲುತ್ತೇವೆ?
[ಅಧ್ಯಯನ ಪ್ರಶ್ನೆಗಳು]
1. ನಾವು ಕೆಟ್ಟದ್ದನ್ನು ಜಯಿಸಬಲ್ಲೆವೆಂದು ಏಕೆ ದೃಢವಾಗಿ ಹೇಳಬಲ್ಲೆವು?
2. ನೆಹೆಮೀಯನ ಜೀವನದ ಕೆಲವು ಘಟನೆಗಳನ್ನು ನಾವೇಕೆ ಪರಿಗಣಿಸುವೆವು?
3. ನೆಹೆಮೀಯನು ಯಾವ ಸನ್ನಿವೇಶದಲ್ಲಿ ಜೀವಿಸಿದ್ದನು ಮತ್ತು ಅವನು ಯಾವ ಸಾಹಸಕಾರ್ಯವನ್ನು ಮಾಡಿದನು?
4. ನೆಹೆಮೀಯನ ವಿರೋಧಿಗಳ ಗುರಿ ಏನಾಗಿತ್ತು?
5, 6. (ಎ) ನೆಹೆಮೀಯನ ವೈರಿಗಳು ನಿರ್ಮಾಣದ ಕೆಲಸಕ್ಕೆ ಹೇಗೆ ಪ್ರತಿಕ್ರಿಯೆ ತೋರಿಸಿದರು? (ಬಿ) ನೆಹೆಮೀಯನು ವಿರೋಧಿಗಳಿಗೆ ಏಕೆ ಬೆದರಲಿಲ್ಲ?
7. ತನ್ನ ವಿರೋಧಿಗಳ ಆರೋಪಗಳಿಗೆ ನೆಹೆಮೀಯನು ಯಾವ ವಿಧಗಳಲ್ಲಿ ಪ್ರತಿಕ್ರಿಯಿಸಿದನು?
8. (ಎ) ವಿರೋಧಿಗಳು ಸುಳ್ಳು ಆರೋಪ ಹೊರಿಸುವಾಗ ನಾವು ನೆಹೆಮೀಯನನ್ನು ಹೇಗೆ ಅನುಸರಿಸಬಹುದು? (ಬಿ) ಸೇಡು ತೀರಿಸದೆ ಇರುವುದು ವಿವೇಕಪ್ರದವೆಂದು ತೋರಿಸಲು ನಿಮಗಾಗಿರುವ ಅಥವಾ ನೀವು ಕೇಳಿರುವ ಒಂದು ಅನುಭವವನ್ನು ಹೇಳಿರಿ.
9. ನೆಹೆಮೀಯನ ವೈರಿಗಳು ಯಾವ ರೀತಿಯ ವಿರೋಧವನ್ನು ಚಲಾಯಿಸಿದರು ಮತ್ತು ನೆಹೆಮೀಯನು ಹೇಗೆ ಪ್ರತಿಕ್ರಿಯಿಸಿದನು?
10. (ಎ) ನೆಹೆಮೀಯನ ವೈರಿಗಳಲ್ಲಿ ಹಠಾತ್ತಾದ ಬದಲಾವಣೆಯನ್ನು ಯಾವುದು ಆಗಿಸಿತು? (ಬಿ) ನೆಹೆಮೀಯನು ಯಾವ ಕ್ರಮಗಳನ್ನು ಕೈಕೊಂಡನು?
11. ರಾಜ್ಯಕಾರ್ಯವು ನಿಷೇಧಿಸಲ್ಪಟ್ಟಿರುವ ದೇಶಗಳಲ್ಲಿ ಕೆಟ್ಟದ್ದನ್ನು ಎದುರಿಸುವಂತೆ ಸತ್ಯ ಕ್ರೈಸ್ತರನ್ನು ಯಾವುದು ಶಕ್ಯಗೊಳಿಸುತ್ತದೆ ಮತ್ತು ಅವರು ಒಳ್ಳೆಯದರಿಂದ ಕೆಟ್ಟದ್ದನ್ನು ಜಯಿಸುವುದು ಹೇಗೆ?
12, 13. (ಎ) ನೆಹೆಮೀಯನ ವಿರೋಧಿಗಳು ಯಾವ ಕುಯುಕ್ತಿಯನ್ನು ಯೋಜಿಸಿದರು? (ಬಿ) ವಿರೋಧಿಗಳನ್ನು ಭೇಟಿಯಾಗುವ ಆಮಂತ್ರಣವನ್ನು ನೆಹೆಮೀಯನು ನಿರಾಕರಿಸಿದ್ದೇಕೆ?
14. ನೆಹೆಮೀಯನು ತನ್ನ ಸುಳ್ಳಾರೋಪಿಗಳಿಗೆ ಹೇಗೆ ಪ್ರತಿವರ್ತಿಸಿದನು?
15. ಒಬ್ಬ ಸುಳ್ಳು ಪ್ರವಾದಿ ಯಾವ ಸಲಹೆಯನ್ನು ಕೊಟ್ಟನು, ಅದನ್ನು ನೆಹೆಮೀಯನು ಏಕೆ ಅಂಗೀಕರಿಸಲಿಲ್ಲ?
16. (ಎ) ಸುಳ್ಳು ಸ್ನೇಹಿತರು, ಸುಳ್ಳು ಆಪಾದಕರು ಮತ್ತು ಸುಳ್ಳು ಸಹೋದರರೊಂದಿಗೆ ಹೇಗೆ ವ್ಯವಹರಿಸಬೇಕು? (ಬಿ) ಮನೆ, ಶಾಲೆ ಮತ್ತು ಕೆಲಸದಲ್ಲಿ ನೀವು ನಿಮ್ಮ ವಿಶ್ವಾಸಗಳ ವಿಷಯದಲ್ಲಿ ರಾಜಿಮಾಡಿಕೊಳ್ಳಲು ನಿರಾಕರಿಸುತ್ತೀರೆಂದು ಹೇಗೆ ತೋರಿಸುತ್ತೀರಿ?
17, 18. (ಎ) ಸೈತಾನನೂ ಅವನ ದೂತರೂ ಏನನ್ನು ಸಾಧಿಸಲು ಪ್ರಯತ್ನಿಸುತ್ತಾರೆ? (ಬಿ) ನೀವು ಏನು ಮಾಡಲು ನಿಶ್ಚಯಿಸಿರುತ್ತೀರಿ ಮತ್ತು ಏಕೆ?
[ಪುಟ 30ರಲ್ಲಿರುವ ಚೌಕ/ಚಿತ್ರ]
ನೆಹೆಮೀಯನ ಪುಸ್ತಕದಲ್ಲಿರುವ ಪಾಠಗಳು
ದೇವರ ಸೇವಕರು ಎದುರಿಸುವ ವಿಷಯಗಳು
• ಅಪಹಾಸ್ಯ
• ಬೆದರಿಕೆ
• ವಂಚನೆ
ವಂಚಿಸಲ್ಪಡುವುದು ಇವರ ಮೂಲಕ
• ಸುಳ್ಳು ಸ್ನೇಹಿತರು
• ಸುಳ್ಳು ಆಪಾದಕರು
• ಸುಳ್ಳು ಸಹೋದರರು
ದೇವರ ಸೇವಕರು ಕೆಟ್ಟದ್ದನ್ನು ಗೆಲ್ಲುವುದು
• ತಮ್ಮ ದೇವದತ್ತ ಕೆಲಸಕ್ಕೆ ಅಂಟಿಕೊಳ್ಳುವ ಮೂಲಕವೇ
[ಪುಟ 31ರಲ್ಲಿರುವ ಚಿತ್ರ]
ಸತ್ಯ ಕ್ರೈಸ್ತರು ನಿರ್ಭೀತಿಯಿಂದ ಸುವಾರ್ತೆ ಸಾರುತ್ತಾರೆ