ಅಧ್ಯಾಯ 6
ಒಂದು ಪವಿತ್ರ ರಹಸ್ಯವನ್ನು ಹೊರಗೆಡಹುವುದು
1. ಪ್ರಕಟನೆ 1:10-17 ರಲ್ಲಿ ದಾಖಲಿಸಲ್ಪಟ್ಟ ಉಜ್ವಲವಾದ ಚಿತ್ರದ ಕಡೆಗೆ ನಾವು ಹೇಗೆ ಪ್ರತಿವರ್ತಿಸತಕ್ಕದ್ದು?
ಘನತೆಗೇರಿಸಲ್ಪಟ್ಟ ಯೇಸುವಿನ ದರ್ಶನವು ನಿಜವಾಗಿಯೂ ಭಯಚಕಿತಗೊಳಿಸುವಂತಹದ್ದೇ! ಅಪೊಸ್ತಲ ಯೋಹಾನನೊಂದಿಗೆ ನಾವು ಕೂಡ ಅಲ್ಲಿ ಪ್ರೇಕ್ಷಕರಾಗಿರುತ್ತಿದ್ದರೆ, ನಾವು ಕೂಡ ಆ ಉಜ್ವಲವಾದ ಮಹಿಮೆಯಿಂದ ಪರವಶರಾಗಿ, ಅವನು ಮಾಡಿದಂತೆ ಸ್ವತಃ ನಾವೂ ಸಾಷ್ಟಾಂಗವೆರಗುತ್ತಿದ್ದೆವು. (ಪ್ರಕಟನೆ 1:10-17) ಈ ಅತ್ಯುತ್ತಮವಾದ ಪ್ರೇರಿತ ದರ್ಶನವು ನಾವು ಇಂದು ಕ್ರಿಯೆಗೈಯುವಂತೆ ಪ್ರಚೋದಿಸಲ್ಪಡಲು ಕಾಪಾಡಲ್ಪಟ್ಟಿದೆ. ಯೋಹಾನನಂತೆ, ದರ್ಶನದ ಎಲ್ಲಾ ಅರ್ಥದೆಡೆಗೆ ವಿನೀತವಾದ ಗಣ್ಯತೆಯನ್ನು ನಾವು ತೋರಿಸತಕ್ಕದ್ದು. ಸಿಂಹಾಸನಕ್ಕೇರಿಸಲ್ಪಟ್ಟ ಅರಸ, ಮಹಾ ಯಾಜಕ, ಮತ್ತು ನ್ಯಾಯಾಧಿಪತಿಯೋಪಾದಿ ಯೇಸುವಿನ ಹುದ್ದೆಯೆಡೆಗೆ ಭಯಭಕ್ತಿಯ ಗೌರವವು ನಮಗೆ ಯಾವಾಗಲೂ ಇರಲಿ.—ಫಿಲಿಪ್ಪಿ 2:5-11.
“ಮೊದಲನೆಯವನೂ ಕಡೆಯವನೂ”
2. (ಎ) ಯೇಸುವು ತನ್ನನ್ನು ಯಾವ ಬಿರುದಿನಿಂದ ಸಾದರಪಡಿಸಿಕೊಳ್ಳುತ್ತಾನೆ? (ಬಿ) “ನಾನು ಮೊದಲನೆಯವನು ಮತ್ತು ನಾನು ಕಡೆಯವನು” ಎಂದು ಯೆಹೋವನು ಹೇಳುವದರ ಅರ್ಥವೇನು? (ಸಿ) “ಮೊದಲನೆಯವನೂ ಕಡೆಯವನೂ” ಎಂಬ ಯೇಸುವಿನ ಬಿರುದು ಯಾವುದಕ್ಕೆ ಗಮನ ಸೆಳೆಯುತ್ತದೆ?
2 ಆದಾಗ್ಯೂ, ನಮ್ಮ ಭಯಭಕ್ತಿಯು ಅನಾರೋಗ್ಯಕರ ಹೆದರಿಕೆಗೆ ಎಡೆಕೊಡುವ ಆವಶ್ಯಕತೆಯಿಲ್ಲ. ಯೋಹಾನನಿಗೆ ಯೇಸುವು ಆಶ್ವಾಸನೆಯನ್ನೀಯುವುದನ್ನು ಅಪೊಸ್ತಲನು ತದನಂತರ ವರ್ಣಿಸುತ್ತಾನೆ: “ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, ಅಂದದ್ದು: ‘ಹೆದರಬೇಡ. ನಾನು ಮೊದಲನೆಯವನೂ ಕಡೆಯವನೂ, ಮತ್ತು ಜೀವಿಸುವವನೂ ಆಗಿದ್ದೇನೆ.’” (ಪ್ರಕಟನೆ 1:17ಬಿ, 18ಎ, NW) ಯೆಶಾಯ 44:6 ರಲ್ಲಿ, ಯೆಹೋವನು ಒಬ್ಬನೇ, ಮತ್ತು ಏಕಮಾತ್ರ ಸರ್ವಶಕ್ತ ದೇವರು ಎಂದು ತನ್ನ ಸ್ವಂತ ಸ್ಥಾನವನ್ನು ಯೋಗ್ಯವಾಗಿಯೇ ವರ್ಣಿಸುತ್ತಾ, ಹೇಳುವುದು: “ನಾನು ಮೊದಲನೆಯವನು ಮತ್ತು ನಾನು ಕಡೆಯವನು ಆಗಿದ್ದೇನೆ, ಮತ್ತು ನನ್ನ ಹೊರತು ಬೇರೆ ದೇವರು ಇಲ್ಲ.”a (NW) ಯೇಸುವು ತನ್ನನ್ನು “ಮೊದಲನೆಯವನೂ ಕಡೆಯವನೂ” ಎಂಬ ಬಿರುದಿನಿಂದ ಸಾದರ ಪಡಿಸುವಾಗ, ಅವನು ಮಹಾ ನಿರ್ಮಾಣಿಕನಾದ ಯೆಹೋವನೊಂದಿಗೆ ಸಮಾನತೆಯನ್ನು ವಾದಿಸುವದಿಲ್ಲ. ದೇವರಿಂದ ಅವನಿಗೆ ಯೋಗ್ಯವಾಗಿಯೇ ನೀಡಲ್ಪಟ್ಟ ಒಂದು ಬಿರುದನ್ನು ಅವನು ಬಳಸುತ್ತಾನೆ. ಯೆಶಾಯದಲ್ಲಿ, ಒಬ್ಬ ಸತ್ಯ ದೇವರೋಪಾದಿ ತನ್ನ ಅದ್ವಿತೀಯ ಸ್ಥಾನದ ಕುರಿತು ಯೆಹೋವನು ಒಂದು ಉಲ್ಲೇಖವನ್ನು ಮಾಡುತ್ತಾನೆ. ಅವನು ಶಾಶ್ವತತೆಯ ದೇವರಾಗಿದ್ದಾನೆ, ಮತ್ತು ಅವನ ಹೊರತಾಗಿ ಬೇರೆ ದೇವರು ಖಂಡಿತವಾಗಿಯೂ ಇಲ್ಲ. (1 ತಿಮೊಥೆಯ 1:17) ಪ್ರಕಟನೆಯಲ್ಲಿ, ಯೇಸುವು ತನಗೆ ನೀಡಲ್ಪಟ್ಟ ಬಿರುದಿನ ಕುರಿತು ಮಾತಾಡುತ್ತಾ, ಅವನ ಅದ್ವಿತೀಯ ಪುನರುತ್ಥಾನದ ಕಡೆಗೆ ಗಮನವನ್ನು ಸೆಳೆಯುತ್ತಾನೆ.
3. (ಎ) ಯಾವ ರೀತಿಯಲ್ಲಿ ಯೇಸುವು “ಮೊದಲನೆಯವನೂ ಕಡೆಯವನೂ” ಆಗಿದ್ದನು? (ಬಿ) “ಮರಣದ ಮತ್ತು ಹೇಡೀಜ್ನ ಬೀಗದ ಕೈಗಳು” ಯೇಸುವಿನೊಡನೆ ಇವೆ ಎನ್ನುವದರ ಅರ್ಥವೇನು?
3 ಮಾನವರಲ್ಲಿ ಅಮರ ಆತ್ಮ ಜೀವಕ್ಕೆ ಎಬ್ಬಿಸಲ್ಪಟ್ಟವರಲ್ಲಿ ಯೇಸುವು “ಮೊದಲನೆಯವನು” ಆಗಿದ್ದಾನೆ. (ಕೊಲೊಸ್ಸೆ 1:18) ಇನ್ನೂ ಹೆಚ್ಚಾಗಿ, ವ್ಯಕ್ತಿಶಃ ಯೆಹೋವನಿಂದ ಹಾಗೆ ಪುನರುತ್ಥಾನಗೊಳಿಸಲ್ಪಟ್ಟವರಲ್ಲಿ ಅವನು “ಕಡೆಯವನೂ” ಆಗಿರುತ್ತಾನೆ. ಆದಕಾರಣ, ಅವನು “ಜೀವಿಸುವವನೂ . . . ಯುಗಯುಗಾಂತರಗಳಲ್ಲಿ ಬದುಕುವವನೂ” ಆಗಿದ್ದಾನೆ. ಅವನು ಅಮರತ್ವವನ್ನು ಅನುಭೋಗಿಸುತ್ತಿದ್ದಾನೆ. ಈ ರೀತಿಯಲ್ಲಿ “ಜೀವಸ್ವರೂಪನಾದ ದೇವರು” ಎಂದು ಕರೆಯಲ್ಪಡುವ ಅವನ ಅಮರ ತಂದೆಯಂತೆ ಇರುತ್ತಾನೆ. (ಪ್ರಕಟನೆ 7:2; ಕೀರ್ತನೆ 42:2) ಮಾನವವರ್ಗದ ಬೇರೆ ಎಲ್ಲರಿಗಾಗಿ, ಯೇಸುವು ಸ್ವತಃ “ಪುನರುತ್ಥಾನವೂ, ಜೀವವೂ” ಆಗಿದ್ದಾನೆ. (ಯೋಹಾನ 11:25) ಇದಕ್ಕೆ ಹೊಂದಿಕೆಯಲ್ಲಿ, ಅವನು ಯೋಹಾನನಿಗೆ ಹೇಳುವುದು: “ನಾನು ಸತ್ತವನಾದೆನು, ಆದರೆ, ನೋಡು! ನಾನು ಸದಾ ಸರ್ವದಾ ಬದುಕುವವನಾಗಿದ್ದೇನೆ, ಮತ್ತು ಮರಣದ ಮತ್ತು ಹೇಡೀಜ್ನ ಬೀಗದ ಕೈಗಳು ನನ್ನಲ್ಲಿ ಅವೆ.” (ಪ್ರಕಟನೆ 1:18ಬಿ, NW) ಸತ್ತವರನ್ನು ಪುನರುತ್ಥಾನಗೊಳಿಸಲು ಯೆಹೋವನು ಅವನಿಗೆ ಅಧಿಕಾರವನ್ನು ಕೊಟ್ಟಿರುತ್ತಾನೆ. ಆದುದರಿಂದ ಮರಣ ಮತ್ತು ಹೇಡೀಜ್ನಿಂದ (ಸಮಾಧಿಕ್ಷೆತ್ರ) ಬಂಧಿತರಾಗಿರುವವರಿಗಾಗಿ ದ್ವಾರಗಳನ್ನು ತೆರೆಯಲು ಅವನ ಹತ್ತಿರ ಬೀಗದ ಕೈಗಳು ಇವೆ ಎಂದು ಯೇಸುವು ಹೇಳಶಕ್ತನಾಗಿದ್ದಾನೆ.—ಹೋಲಿಸಿರಿ ಮತ್ತಾಯ 16:18.
4. ಯಾವ ಅಪ್ಪಣೆಯನ್ನು ಯೇಸುವು ಪುನರುಚ್ಚರಿಸುತ್ತಾನೆ, ಮತ್ತು ಯಾರ ಪ್ರಯೋಜನಕ್ಕಾಗಿ?
4 ದರ್ಶನವನ್ನು ದಾಖಲೆಮಾಡಬೇಕಾದ ತನ್ನ ಅಪ್ಪಣೆಯನ್ನು ಯೇಸುವು ಇಲ್ಲಿ ಪುನರುಚ್ಚರಿಸುತ್ತಾ, ಯೋಹಾನನಿಗೆ ಹೇಳುವುದು: “ನೀನು ಕಂಡ ಸಂಗತಿಗಳನ್ನೂ, ಈಗ ನಡೆಯುತ್ತಿರುವುದನ್ನೂ, ಮತ್ತು ಇದರ ಬಳಿಕ ಮುಂದೆ ಆಗಬೇಕಾದವುಗಳನ್ನೂ ಬರೆ.” (ಪ್ರಕಟನೆ 1:19, NW) ನಮ್ಮ ಉಪದೇಶಕ್ಕಾಗಿ ಯೋಹಾನನು ನಮ್ಮನ್ನು ಬೆರಗುಗೊಳಿಸುವ ಯಾವ ಸಂಗತಿಗಳನ್ನು ಇನ್ನೂ ತಿಳಿಯಪಡಿಸಲಿದ್ದಾನೆ?
ನಕ್ಷತ್ರಗಳು ಮತ್ತು ದೀಪಸ್ತಂಭಗಳು
5. “ಏಳು ನಕ್ಷತ್ರಗಳನ್ನು” ಮತ್ತು “ಏಳು ದೀಪಸ್ತಂಭಗಳನ್ನು” ಯೇಸುವು ಹೇಗೆ ವಿವರಿಸುತ್ತಾನೆ?
5 ಏಳು ಚಿನ್ನದ ದೀಪಸ್ತಂಭಗಳ ನಡುವೆ, ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದುಕೊಂಡು ನಿಂತಿರುವ ಯೇಸುವನ್ನು ಯೋಹಾನನು ನೋಡಿದ್ದಾನೆ. (ಪ್ರಕಟನೆ 1:12, 13, 16) ಇದನ್ನು ಈಗ ಯೇಸುವು ವಿವರಿಸುತ್ತಾನೆ: “ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಪವಿತ್ರ ರಹಸ್ಯವು: ಆ ಏಳು ನಕ್ಷತ್ರಗಳು ಅಂದರೆ ಏಳು ಸಭೆಗಳ ದೂತರು, ಮತ್ತು ಆ ಏಳು ದೀಪಸ್ತಂಭಗಳು ಅಂದರೆ ಏಳು ಸಭೆಗಳು.”—ಪ್ರಕಟನೆ 1:20, NW.
6. ಏಳು ನಕ್ಷತ್ರಗಳಿಂದ ಏನು ಪ್ರತಿನಿಧಿಸಲ್ಪಟ್ಟಿದೆ, ಮತ್ತು ಇವುಗಳಿಗೆ ಆ ಸಂದೇಶಗಳು ನಿರ್ದಿಷ್ಟವಾಗಿ ಏಕೆ ಸಂಬೋಧಿಸಲ್ಪಟ್ಟವು?
6 “ನಕ್ಷತ್ರಗಳು” “ಏಳು ಸಭೆಗಳ ದೂತರು” ಆಗಿರುತ್ತಾರೆ. ಪ್ರಕಟನೆಯಲ್ಲಿ, ನಕ್ಷತ್ರಗಳನ್ನು ಕೆಲವೊಮ್ಮೆ ಅಕ್ಷರಶಃ ದೇವದೂತರಿಗೆ ಸೂಚಿಸಲಾಗಿದೆ, ಆದರೆ ಅದೃಶ್ಯ ಆತ್ಮ ಜೀವಿಗಳಿಗೆ ಬರೆಯಲು ಮಾನವ ಲೇಖಕರನ್ನು ಯೇಸುವು ಬಳಸಲಿಕ್ಕಿಲ್ಲ. ಆದುದರಿಂದ “ನಕ್ಷತ್ರಗಳು” ಯೇಸುವಿನ ದೂತರಾಗಿ ವೀಕ್ಷಿಸಲ್ಪಟ್ಟಿರುವ ಸಭೆಯಲ್ಲಿರುವ ಮಾನವ ಮೇಲ್ವಿಚಾರಕರು, ಯಾ ಹಿರಿಯರು ಆಗಿರಬೇಕು.b ಸಂದೇಶಗಳನ್ನು ನಕ್ಷತ್ರಗಳಿಗೆ ಸಂಬೋಧಿಸಲಾಗಿದೆ, ಯಾಕಂದರೆ ಇವರು ಯೆಹೋವನ ಮಂದೆಯ ಮೇಲ್ವಿಚಾರಣೆಗಾಗಿ ಜವಾಬ್ದಾರರಾಗಿರುತ್ತಾರೆ.—ಅ. ಕೃತ್ಯಗಳು 20:28.
7. (ಎ) ಸಭೆಯ ಒಬ್ಬನೇ ದೂತನಿಗೆ ಯೇಸುವು ಮಾತಾಡುವುದು, ಪ್ರತಿಯೊಂದು ಸಭೆಯಲ್ಲಿ ಕೇವಲ ಒಬ್ಬ ಹಿರಿಯನಿದ್ದಾನೆ ಎಂಬರ್ಥದಲ್ಲಲ್ಲ ಎಂದು ಯಾವುದು ತೋರಿಸುತ್ತದೆ? (ಬಿ) ಯೇಸುವಿನ ಬಲಗೈಯಲ್ಲಿರುವ ಏಳು ನಕ್ಷತ್ರಗಳಿಂದ, ಕಾರ್ಯತಃ ಯಾರು ಪ್ರತಿನಿಧಿಸಲ್ಪಡುತ್ತಾರೆ?
7 ಪ್ರತಿಯೊಂದು ಸಭೆಯಲ್ಲಿ ಕೇವಲ ಒಬ್ಬ “ದೂತ” ನಿಗೆ ಯೇಸು ಮಾತಾಡುವುದರಿಂದ, ಅದರ ಅರ್ಥ ಪ್ರತಿಯೊಂದು ಸಭೆಯಲ್ಲಿ ಕೇವಲ ಒಬ್ಬನೇ ಒಬ್ಬ ಹಿರಿಯನು ಇದ್ದನೆಂದೋ? ಅಲ್ಲ. ಪೌಲನ ದಿನಗಳಷ್ಟು ಹಿಂದಕ್ಕೆ, ಎಫೆಸದ ಸಭೆಯಲ್ಲಿ ಹಲವಾರು ಹಿರಿಯರಿದ್ದರು, ಕೇವಲ ಒಬ್ಬನಲ್ಲ. (ಪ್ರಕಟನೆ 2:1; ಅ. ಕೃತ್ಯಗಳು 20:17) ಆದುದರಿಂದ ಯೋಹಾನನ ದಿನಗಳಲ್ಲಿ, ಸಭೆಗಳಲ್ಲಿ (ಎಫೆಸದಲ್ಲಿರುವದರ ಸಹಿತ) ಓದಬೇಕಾಗಿರುವ ಸಂದೇಶಗಳನ್ನು ಏಳು ನಕ್ಷತ್ರಗಳಿಗೆ ಕಳುಹಿಸಿದಾಗ, ಯೆಹೋವನ ಅಭಿಷಿಕ್ತ ಸಭೆಯಲ್ಲಿ ಇರುವ ಹಿರಿಯರ ಸಮೂಹಗಳೊಳಗೆ ಸೇವೆ ಸಲ್ಲಿಸುವ ಎಲ್ಲರನ್ನೂ ಆ ನಕ್ಷತ್ರಗಳು ಸೂಚಿಸಿರಬೇಕು. ಅದೇ ರೀತಿಯಲ್ಲಿ, ಯೇಸುವಿನ ಶಿರಸ್ಸುತನದ ಕೆಳಗೆ ಸೇವೆ ಸಲ್ಲಿಸುವ ಅಭಿಷಿಕ್ತ ಮೇಲ್ವಿಚಾರಕರು ಕೂಡಿರುವ ಆಡಳಿತ ಮಂಡಲಿಯಿಂದ ಪಡೆದ ಪತ್ರಗಳನ್ನು ಹಿರಿಯರು ಇಂದು ತಮ್ಮ ಸಭೆಗಳಲ್ಲಿ ಓದುತ್ತಾರೆ. ಅವರ ಸಭೆಗಳಲ್ಲಿ ಯೇಸುವಿನ ಬುದ್ಧಿವಾದವು ಅನುಸರಿಸಲ್ಪಡುವದನ್ನು ಸ್ಥಳಿಕ ಹಿರಿಯರ ಮಂಡಲಿಗಳು ಖಚಿತ ಮಾಡಿಕೊಳ್ಳಬೇಕು. ನಿಜವಾಗಿಯೂ, ಸಭೆಗಳಲ್ಲಿ ಸಹವಾಸ ಮಾಡುವ ಎಲ್ಲರ ಪ್ರಯೋಜನಾರ್ಥವಾಗಿ ಸಲಹೆಗಳು ಕೊಡಲ್ಪಟ್ಟಿವೆಯೇ ಹೊರತು, ಅವು ಕೇವಲ ಹಿರಿಯರಿಗೆ ಮಾತ್ರವಲ್ಲ.—ನೋಡಿರಿ ಪ್ರಕಟನೆ 2:11ಎ.
8. ಹಿರಿಯರು ಯೇಸುವಿನ ಬಲಗೈಯಲ್ಲಿರುವದರಿಂದ ಏನು ಸೂಚಿಸಲ್ಪಡುತ್ತದೆ?
8 ಯೇಸುವು ಸಭೆಯ ಶಿರಸ್ಸಾಗಿ ಇರುವದರಿಂದ, ಹಿರಿಯರು ಅವನ ಬಲಗೈಯಲ್ಲಿದ್ದಾರೆ ಎಂದು ಯುಕ್ತವಾಗಿಯೇ ಹೇಳಲಾಗಿದೆ, ಅಂದರೆ ಅವನ ಹತೋಟಿ ಮತ್ತು ಮಾರ್ಗದರ್ಶನದ ಕೆಳಗೆ ಇದ್ದಾರೆ. (ಕೊಲೊಸ್ಸೆ 1:18) ಅವನು ಮುಖ್ಯ ಕುರುಬನಾಗಿದ್ದಾನೆ, ಮತ್ತು ಅವರು ಉಪಕುರುಬರಾಗಿದ್ದಾರೆ.—1 ಪೇತ್ರ 5:2-4.
9. (ಎ) ಏಳು ದೀಪಸ್ತಂಭಗಳು ಏನನ್ನು ಪ್ರತಿನಿಧಿಸುತ್ತವೆ, ಮತ್ತು ದೀಪಸ್ತಂಭಗಳು ಅವುಗಳಿಗೆ ಯುಕ್ತವಾದ ಸಂಕೇತಗಳಾಗಿವೆ ಯಾಕೆ? (ಬಿ) ಅಪೊಸ್ತಲ ಯೋಹಾನನಿಗೆ ದರ್ಶನವು ಯಾವುದರ ನೆನಪನ್ನು ಹುಟ್ಟಿಸಿರಬಹುದು?
9 ಪ್ರಕಟನೆಯ ಪುಸ್ತಕವನ್ನು ಯೋಹಾನನು ನಿರ್ದೇಶಿಸಿದ ಏಳು ಸಭೆಗಳೇ ಏಳು ದೀಪಸ್ತಂಭಗಳಾಗಿವೆ: ಎಫೆಸ, ಸ್ಮುರ್ನ, ಪೆರ್ಗಮಮ್, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಮತ್ತು ಲವೊದಿಕೀಯ. ಸಭೆಗಳು ದೀಪಸ್ತಂಭಗಳಿಂದ ಯಾಕೆ ಸೂಚಿಸಲ್ಪಟ್ಟಿವೆ? ಯಾಕಂದರೆ ಕ್ರೈಸ್ತರು, ವ್ಯಕ್ತಿಗತವಾಗಿ ಇಲ್ಲವೆ ಸಭೆಗಳಂತೆ ಸಾಮೂಹಿಕವಾಗಿ, ಈ ಅಂಧಕಾರಮಯ ಲೋಕದಲ್ಲಿ ‘ಅವರ ಬೆಳಕನ್ನು ಮನುಷ್ಯರ ಮುಂದೆ ಪ್ರಕಾಶಿಸಬೇಕು.’ (ಮತ್ತಾಯ 5:14-16) ಇದಕ್ಕೆ ಕೂಡಿಸಿ, ಸೊಲೊಮೋನನ ದೇವಾಲಯದಲ್ಲಿ ಇದ್ದ ಉಪಕರಣಗಳಲ್ಲಿ ದೀಪಸ್ತಂಭಗಳು ಕೂಡ ಇದ್ದವು. ಈ ದೀಪಸ್ತಂಭಗಳನ್ನು ಸಭೆಗಳೆಂದು ಕರೆಯುವದರ ಮೂಲಕ, ಒಂದು ನಿದರ್ಶನೆಯ ರೀತಿಯಲ್ಲಿ, ಅಭಿಷಿಕ್ತರ ಪ್ರತಿಯೊಂದು ಸ್ಥಳಿಕ ಸಭೆಯು “ದೇವರ ಮಂದಿರ” ವಾಗಿದ್ದು, ದೇವರ ಆತ್ಮವು ನೆಲಸುವ ಸ್ಥಳವೆಂದು ಯೋಹಾನನ ನೆನಪಿಗೆ ತಂದಿರಬೇಕು. (1 ಕೊರಿಂಥ 3:16) ಮೇಲಾಗಿ, ಯೆಹೂದಿ ದೇವಾಲಯದ ಏರ್ಪಾಡಿನ ಮೂಲಬಿಂಬದೋಪಾದಿ, ಯೆಹೋವನ ಮಹಾ ಆತ್ಮಿಕ ದೇವಾಲಯದ ಏರ್ಪಾಡಿನಲ್ಲಿ ಅಭಿಷಿಕ್ತರ ಸಭೆಯ ಸದಸ್ಯರುಗಳು “ರಾಜ ವಂಶಸ್ಥರಾದ ಯಾಜಕರಾಗಿ” ಸೇವೆ ಸಲ್ಲಿಸುತ್ತಾರೆ, ಇದರಲ್ಲಿ ಯೇಸುವು ಮಹಾ ಯಾಜಕನಾಗಿದ್ದಾನೆ ಮತ್ತು ಯೆಹೋವನು ವ್ಯಕ್ತಿಶಃ ಸ್ವರ್ಗೀಯವಾದ ಅತಿ ಪವಿತ್ರ ಸ್ಥಾನದಲ್ಲಿ ನಿವಾಸಿಸುತ್ತಾನೆ.—1 ಪೇತ್ರ 2:4, 5, 9; ಇಬ್ರಿಯ 3:1; 6:20; 9:9-14, 24.
ಮಹಾ ಧರ್ಮಭ್ರಷ್ಟತೆ
10. ಸಾ.ಶ. 70 ರಲ್ಲಿ ಯೆಹೂದಿ ವ್ಯವಸ್ಥೆಗೆ ಮತ್ತು ಅದರ ಪಶ್ಚಾತ್ತಾಪರಹಿತ ಬೆಂಬಲಿಗರಿಗೆ ಏನು ಸಂಭವಿಸಿತು?
10 ಯೋಹಾನನು ಪ್ರಕಟನೆಯನ್ನು ಬರೆದಾಗ, ಕ್ರೈಸ್ತತ್ವವು 60 ವರ್ಷಗಳಿಗಿಂತಲೂ ಹೆಚ್ಚಿನ ವಯಸ್ಸಿನದ್ದಾಗಿತ್ತು. ಆರಂಭದಲ್ಲಿ, ಅದು ಯೆಹೂದ ಮತದಿಂದ 40 ವರ್ಷಗಳ ಎಡೆಬಿಡದ ವಿರೋಧದಿಂದ ಪಾರಾಗಿ ಉಳಿದಿತ್ತು. ಅನಂತರ, ಯೆಹೂದಿ ವ್ಯವಸ್ಥೆಯು ಸಾ.ಶ. 70 ರಲ್ಲಿ ಒಂದು ಮಾರಕ ಹೊಡೆತವನ್ನು ಪಡೆಯಿತು, ಆಗ ಪಶ್ಚಾತ್ತಾಪರಹಿತ ಯೆಹೂದ್ಯರು, ತಮ್ಮ ರಾಷ್ಟ್ರೀಯ ಗುರುತು ಮತ್ತು ತಮಗೆ ಯಾವುದು ಒಂದು ವಿಗ್ರಹದೋಪಾದಿ ಇತ್ತೋ ಅದನ್ನು—ಯೆರೂಸಲೇಮಿನ ಆ ದೇವಾಲಯವನ್ನು—ಕಳೆದುಕೊಂಡರು.
11. ಬೆಳೆಯುತ್ತಿದ್ದ ಪ್ರವೃತ್ತಿಗಳ ಕುರಿತು ಸಭೆಗಳಿಗೆ ಮುಖ್ಯ ಕುರುಬನು ಎಚ್ಚರಿಸುವುದು ಎಷ್ಟೋ ಸಮಯೋಚಿತವಾಗಿತ್ತು ಯಾಕೆ?
11 ಆದಾಗ್ಯೂ, ಅಭಿಷಿಕ್ತ ಕ್ರೈಸ್ತರ ನಡುವೆ ಧರ್ಮಭ್ರಷ್ಟತೆಯುಂಟಾಗುವದೆಂದು ಅಪೊಸ್ತಲ ಪೌಲನು ಮುನ್ನುಡಿದಿದ್ದನು, ಮತ್ತು ಯೋಹಾನನ ಮುದೀ ಪ್ರಾಯದಲ್ಲಿ ಈ ಧರ್ಮಭ್ರಷ್ಟತೆಯು ಆಗಲೇ ಬೆಳೆಯುತ್ತಾ ಇತ್ತು ಎಂದು ಯೇಸುವಿನ ಸಂದೇಶಗಳು ತೋರಿಸುತ್ತವೆ. ಸ್ತ್ರೀಯ ಸಂತಾನವನ್ನು ಭ್ರಷ್ಟಗೊಳಿಸುವ ಸೈತಾನನ ಸರ್ವಶಕ್ತಿಯ ಪ್ರಯತ್ನದ ಮೇಲೆ ಒಂದು ತಡೆಯೋಪಾದಿ ಕಾರ್ಯನಡಿಸಿದವರಲ್ಲಿ ಯೋಹಾನನು ಕೊನೆಯವನಾಗಿದ್ದನು. (2 ಥೆಸಲೊನೀಕ 2:3-12; 2 ಪೇತ್ರ 2:1-3; 2 ಯೋಹಾನ 7-11) ಆದುದರಿಂದ ಯೆಹೋವನ ಮುಖ್ಯ ಕುರುಬನು ಸಭೆಯಲ್ಲಿರುವ ಹಿರಿಯರುಗಳಿಗೆ ಬೆಳೆಯುತ್ತಿರುವ ಪ್ರವೃತ್ತಿಯ ಕುರಿತು ಎಚ್ಚರಿಸಿ, ನೀತಿಯ ಕಡೆಗೆ ಸ್ಥಿರರಾಗಿ ನಿಲ್ಲುವಂತೆ ಯೋಗ್ಯ ಹೃದಯದ ಜನರಿಗೆ ಉತ್ತೇಜಿಸುವಂತೆ ಬರೆಯಲು ಇದು ತಕ್ಕ ಸಮಯವಾಗಿತ್ತು.
12. (ಎ) ಯೋಹಾನನ ದಿನಗಳ ಅನಂತರದ ಶತಮಾನಗಳಲ್ಲಿ ಧರ್ಮಭ್ರಷ್ಟತೆಯು ಹೇಗೆ ಬೆಳೆಯಿತು? (ಬಿ) ಕ್ರೈಸ್ತಪ್ರಪಂಚವು ಅಸ್ತಿತ್ವಕ್ಕೆ ಬಂದದ್ದು ಹೇಗೆ?
12 ಯೇಸುವಿನ ಸಂದೇಶಗಳಿಗೆ ಸಾ. ಶ. 96 ರಲ್ಲಿದ್ದ ಸಭೆಗಳು ಯಾವ ಪ್ರತಿಕ್ರಿಯೆಯನ್ನು ತೋರಿಸಿದವು ಎಂಬ ಬಗ್ಗೆ ನಮಗೆ ತಿಳಿದಿಲ್ಲ. ಆದರೆ ಯೋಹಾನನ ಮರಣಾನಂತರ ಧರ್ಮಭ್ರಷ್ಟತೆಯು ಬಹಳ ತೀವ್ರವಾಗಿ ಬೆಳೆಯಿತು ಎಂದು ನಮಗೆ ತಿಳಿದಿದೆ. “ಕ್ರೈಸ್ತರು” ಯೆಹೋವನ ಹೆಸರನ್ನು ಪ್ರಯೋಗಿಸುವದನ್ನು ನಿಲ್ಲಿಸಿದರು ಮತ್ತು ಅವರ ಬೈಬಲ್ ಹಸ್ತ ಪ್ರತಿಗಳಲ್ಲಿ “ಕರ್ತ” ಯಾ “ದೇವರು” ಎಂಬ ಬದಲಿ ಪದಗಳನ್ನು ಹಾಕಿದರು. ನಾಲ್ಕನೆಯ ಶತಮಾನದೊಳಗೆ, ಸುಳ್ಳು ಬೋಧನೆಯಾದ ತ್ರಯೈಕ್ಯವು ಸಭೆಗಳಲ್ಲಿ ತೂರಿಬಂತು. ಅದೇ ಸಮಯದಲ್ಲಿ, ಅಮರವಾದ ಒಂದು ಆತ್ಮದ ಕಲ್ಪನೆಯನ್ನು ಸ್ವೀಕರಿಸಲಾಗುತ್ತಿತ್ತು. ಕೊನೆಗೆ, ರೋಮನ್ ಚಕ್ರವರ್ತಿ ಕಾನ್ಸ್ಟೆಂಟೀನನು “ಕ್ರೈಸ್ತತ್ವ” ವನ್ನು ರಾಷ್ಟ್ರ ಧರ್ಮವನ್ನಾಗಿ ಮಾಡಿದನು, ಮತ್ತು ಇದು ಕ್ರೈಸ್ತಪ್ರಪಂಚಕ್ಕೆ ಜನ್ಮವನ್ನಿತಿತ್ತು, ಇಲ್ಲಿ ಸಾವಿರ ವರ್ಷಗಳು ಆಳುವುದರಲ್ಲಿ ಚರ್ಚ್ ಮತ್ತು ಸರಕಾರ ಕೈಜೋಡಿಸಿಕೊಂಡವು. ಹೊಸ ಶೈಲಿಯ “ಕ್ರೈಸ್ತ” ನಾಗುವುದು ಈಗ ಬಹಳ ಸುಲಭವಾಯಿತು. ಧರ್ಮದ ಈ ರೂಪಾಂತರಗಳಿಗೆ ತಮ್ಮ ಮೊದಲಿನ ವಿಧರ್ಮೀ ನಂಬಿಕೆಗಳನ್ನು ಇಡೀ ಕುಲಗಳೇ ಸರಿಹೊಂದಿಸಿಕೊಂಡವು. ಕ್ರೈಸ್ತಪ್ರಪಂಚದ ಮುಂದಾಳುಗಳಲ್ಲಿ ಅನೇಕರು ದಬ್ಬಾಳಿಕೆಯ ರಾಜಕೀಯ ನಿರಂಕುಶಾಧಿಕಾರಿಗಳಾಗಿ, ಖಡ್ಗದ ಮೂಲಕ ತಮ್ಮ ಧರ್ಮಭ್ರಷ್ಟ ದೃಷ್ಟಿಕೋನಗಳನ್ನು ಬಲಾತ್ಕಾರದಿಂದ ಜಾರಿಗೆ ತಂದರು.
13. ಮತಪಂಥದ ವಿರುದ್ಧವಾಗಿ ಯೇಸುವಿನ ಎಚ್ಚರಿಕೆಯ ಹೊರತಾಗಿಯೂ, ಧರ್ಮಭ್ರಷ್ಟರಾಗುತ್ತಿದ್ದ ಕ್ರೈಸ್ತರು ಯಾವ ಪಥವನ್ನು ತೆಗೆದುಕೊಂಡರು?
13 ಏಳು ಸಭೆಗಳಿಗಾಗಿರುವ ಯೇಸುವಿನ ಮಾತುಗಳು ಧರ್ಮಭ್ರಷ್ಟಗೊಳ್ಳುತ್ತಿರುವ ಕ್ರೈಸ್ತರಿಂದ ಸಂಪೂರ್ಣವಾಗಿ ಅಲಕ್ಷಿಸಲ್ಪಟ್ಟವು. ಅವರಿಗಿದ್ದ ಮೊದಲ ಪ್ರೀತಿಯನ್ನು ಪುನಃ ಸಂಪಾದಿಸಿಕೊಳ್ಳುವಂತೆ ಯೇಸುವು ಎಫೆಸದವರನ್ನು ಎಚ್ಚರಿಸಿದ್ದನು. (ಪ್ರಕಟನೆ 2:4) ಆದಾಗ್ಯೂ, ಯೆಹೋವನಿಗಾಗಿರುವ ಪ್ರೀತಿಯಲ್ಲಿ ಕ್ರೈಸ್ತಪ್ರಪಂಚದ ಸದಸ್ಯರು ಐಕ್ಯದಲ್ಲಿ ಇಲ್ಲದೆ ಇದ್ದುದರಿಂದ, ಅವರು ಕ್ರೂರ ಯುದ್ಧಗಳಲ್ಲಿ ಹೋರಾಡಿದರು ಮತ್ತು ಒಬ್ಬರು ಇನ್ನೊಬ್ಬರನ್ನು ಘೋರ ರೀತಿಯಲ್ಲಿ ಹಿಂಸಿಸಿದರು. (1 ಯೋಹಾನ 4:20) ಪಂಥಾಭಿಮಾನದ ವಿರುದ್ಧವಾಗಿ ಪೆರ್ಗಮಮ್ನಲ್ಲಿರುವ ಸಭೆಯನ್ನು ಯೇಸುವು ಎಚ್ಚರಿಸಿದ್ದನು. ಆದರೂ, ಎರಡನೆಯ ಶತಮಾನದಲ್ಲಿಯೇ ಮತಪಂಥಗಳು ಕಾಣಿಸಿಕೊಂಡವು, ಮತ್ತು ಇಂದು ಕ್ರೈಸ್ತಪ್ರಪಂಚದಲ್ಲಿ ಸಾವಿರಾರು ಪರಸ್ಪರ ವಿರೋಧಿಸುವ ಮತಪಂಥಗಳು ಮತ್ತು ಧರ್ಮಗಳು ಇವೆ.—ಪ್ರಕಟನೆ 2:15.
14. (ಎ) ಆತ್ಮಿಕವಾಗಿ ಸತ್ತವರಾಗಿರುವದರ ವಿರುದ್ಧವಾಗಿ ಯೇಸುವು ಎಚ್ಚರಿಸಿದರೂ, ನಾಮ-ಮಾತ್ರದ ಕ್ರೈಸ್ತರು ಯಾವ ಮಾರ್ಗವನ್ನು ತಕ್ಕೊಂಡರು? (ಬಿ) ವಿಗ್ರಹಾರಾಧನೆ ಮತ್ತು ಹಾದರದ ವಿರುದ್ಧ ಯೇಸುವಿನ ಎಚ್ಚರಿಕೆಯನ್ನು ಅಲಿಸುವದರಲ್ಲಿ ನಾಮ-ಮಾತ್ರದ ಕ್ರೈಸ್ತರು ಯಾವ ವಿಧಗಳಲ್ಲಿ ತಪ್ಪಿಹೋದರು?
14 ಆತ್ಮಿಕವಾಗಿ ಸತ್ತಿರುವದರ ವಿರುದ್ಧವಾಗಿ ಸಾರ್ದಿಸ್ ಸಭೆಯನ್ನು ಯೇಸುವು ಎಚ್ಚರಿಸಿದ್ದನು. (ಪ್ರಕಟನೆ 3:1) ಸಾರ್ದಿಸ್ನಲ್ಲಿರುವವರಂತೆ, ನಾಮ-ಮಾತ್ರದ ಕ್ರೈಸ್ತರು ಬಲುಬೇಗನೆ ಕ್ರೈಸ್ತ ಕಾರ್ಯಗಳನ್ನು ಮರೆತರು ಮತ್ತು ಸಾರುವ ಅತಿ ಪ್ರಾಮುಖ್ಯ ಕಾರ್ಯವನ್ನು ಬೇಗನೆ, ಒಂದು ಚಿಕ್ಕ, ಸಂಬಳ ಪಡೆಯುವ ವೈದಿಕ ವರ್ಗದವರಿಗೆ ಹಸ್ತಾಂತರಿಸಿದರು. ವಿಗ್ರಹಾರಾಧನೆ ಮತ್ತು ಹಾದರದ ವಿರುದ್ಧವಾಗಿ ಥುವತೈರದಲ್ಲಿರುವ ಸಭೆಯನ್ನು ಯೇಸು ಎಚ್ಚರಿಸಿದ್ದನು. (ಪ್ರಕಟನೆ 2:20) ಆದರೂ, ಕ್ರೈಸ್ತಪ್ರಪಂಚವು ಬಹಿರಂಗವಾಗಿ ವಿಗ್ರಹಗಳ ಉಪಯೋಗಕ್ಕೆ ಅನುಮತಿಯನ್ನಿತ್ತರು, ಅಲ್ಲದೆ ರಾಷ್ಟ್ರೀಯತೆ ಮತ್ತು ಪ್ರಾಪಂಚಿಕತೆಯ ನಿಗೂಢ ರೀತಿಯ ವಿಗ್ರಹಾರಾಧನೆಯನ್ನು ಪ್ರವರ್ತಿಸಿತು. ಮತ್ತು ಅನೈತಿಕತೆಯ ವಿರುದ್ಧ ಕೆಲವು ಬಾರಿ ಸಾರಿದರೂ ಕೂಡ, ವ್ಯಾಪಕವಾಗಿ ಅದು ಯಾವಾಗಲೂ ಸಹಿಸಲ್ಪಟ್ಟಿದೆ.
15. ಕ್ರೈಸ್ತಪ್ರಪಂಚದ ಧರ್ಮಗಳ ಕುರಿತಾಗಿ ಏಳು ಸಭೆಗಳಿಗಾಗಿರುವ ಯೇಸುವಿನ ಮಾತುಗಳು ಏನನ್ನು ಬಹಿರಂಗಪಡಿಸಿದೆ, ಮತ್ತು ಕ್ರೈಸ್ತಪ್ರಪಂಚದ ವೈದಿಕರು ಏನಾಗಿ ಪರಿಣಮಿಸಿದ್ದಾರೆ?
15 ಆದುದರಿಂದ, ಯೆಹೋವನ ವಿಶೇಷ ಜನರಾಗಿರುವದರಲ್ಲಿ ಕ್ರೈಸ್ತಪ್ರಪಂಚದ ಮತಗಳೆಲ್ಲವೂ ಸಂಪೂರ್ಣವಾಗಿ ಸೋತಿವೆ ಎಂಬದು ಏಳು ಸಭೆಗಳಿಗೆ ನುಡಿದ ಯೇಸುವಿನ ಮಾತುಗಳು ಬಹಿರಂಗ ಮಾಡುತ್ತವೆ. ಕ್ರೈಸ್ತಪ್ರಪಂಚದ ವೈದಿಕರು ಖಂಡಿತವಾಗಿಯೂ ಸೈತಾನನ ಸಂತಾನದಲ್ಲಿ ಅತಿ ಪ್ರಮುಖ ಸದಸ್ಯರುಗಳಾಗಿರುತ್ತಾರೆ. ಅವರನ್ನು ‘ನಿಯಮರಾಹಿತ್ಯದ ಪುರುಷನು’ ಎಂದು ಮಾತಾಡುತ್ತಾ, ಅಪೊಸ್ತಲ ಪೌಲನು ಮುನ್ನುಡಿದದ್ದೇನಂದರೆ ಅವರ “ಸಾನ್ನಿಧ್ಯವು ಸೈತಾನನ ಕೆಲಸ ನಡಿಸುವ ನೀತಿಗನುಸಾರ, ಪ್ರತಿಯೊಂದು ಬಲಾಢ್ಯ ಕಾರ್ಯ, ಮೋಸದ ಪವಾಡಗಳು ಮತ್ತು ಅದ್ಭುತಗಳು ಮತ್ತು ಪ್ರತಿಯೊಂದು ಅನೀತಿಯ ವಂಚನೆಯಿಂದಿರುವುದು.”—2 ಥೆಸಲೊನೀಕ 2:9, 10, NW.
16. (ಎ) ಕ್ರೈಸ್ತಪ್ರಪಂಚದ ಮುಂದಾಳುಗಳು ಯಾರ ವಿರುದ್ಧವಾಗಿ ವಿಶೇಷ ದ್ವೇಷವನ್ನು ತೋರಿಸಿದರು? (ಬಿ) ಮಧ್ಯ ಯುಗಗಳಲ್ಲಿ ಕ್ರೈಸ್ತಪ್ರಪಂಚದಲ್ಲಿ ಏನು ನಡೆಯಿತು? (ಸಿ) ಪ್ರಾಟೆಸ್ಟಂಟ್ ದಂಗೆ ಇಲ್ಲವೆ ಸುಧಾರಣೆಯು, ಕ್ರೈಸ್ತಧರ್ಮದ ಧರ್ಮಭ್ರಷ್ಟತೆಯ ಮಾರ್ಗಗಳನ್ನು ಬದಲಾಯಿಸಿತೋ?
16 ದೇವರ ಮಂದೆಯ ಕುರುಬರೆಂದು ಹೇಳಿಕೊಳ್ಳುವಾಗ, ಕ್ರೈಸ್ತಧರ್ಮ ರಾಜ್ಯದ ಮುಂದಾಳುಗಳು, ಧಾರ್ಮಿಕರಾಗಿರಲಿ ಲೌಕಿಕರಾಗಿರಲಿ, ಬೈಬಲ್ ವಾಚನವನ್ನು ಪ್ರೋತ್ಸಾಹಿಸಲು ಪ್ರಯತ್ನಿಸಿದವರ ಯಾ ಅವರ ಅಶಾಸ್ತ್ರೀಯ ಪದ್ಧತಿಗಳನ್ನು ಬಹಿರಂಗಗೊಳಿಸಿದವರ ಯಾವನೆಡೆಗಾದರೂ, ವಿಶೇಷವಾದ ದ್ವೇಷವನ್ನು ತೋರಿಸಿದರು. ಜಾನ್ ಹಸ್ ಮತ್ತು ಬೈಬಲ್ ತರ್ಜುಮೆಗಾರ ವಿಲ್ಯಮ್ ಟಿಂಡೇಲ್—ಇವರು ಹಿಂಸಿಸಲ್ಪಟ್ಟು, ಹುತಾತ್ಮರಾದರು. ಅಂಧಕಾರದ ಮಧ್ಯಯುಗದ ಸಮಯಾವಧಿಯಲ್ಲಿ, ಧರ್ಮಭ್ರಷ್ಟತೆಯ ಆಧಿಪತ್ಯವು ಪೈಶಾಚಿಕವಾದ ಕ್ಯಾತೊಲಿಕ್ ಮಠೀಯ ವಿಚಾರಣೆಯಲ್ಲಿ ಅದರ ತುತ್ತತುದಿಯನ್ನು ತಲುಪಿತು. ಚರ್ಚ್ನ ಬೋಧನೆಗಳನ್ನು ಯಾ ಅಧಿಕಾರವನ್ನು ಯಾರಾದರೂ ವಿವಾದಕ್ಕೆಳೆದರೆ, ನಿಷ್ಕರುಣೆಯ ರೀತಿಯಲ್ಲಿ ಅವರನ್ನು ಅದುಮಲಾಗುತ್ತಿತ್ತು, ಮತ್ತು ಪಾಷಂಡವಾದಿಗಳೆಂದು ಹೆಸರಿಸಲ್ಪಟ್ಟ ಅಸಂಖ್ಯಾತ ಸಾವಿರಾರು ಮಂದಿಯನ್ನು ಚಿತ್ರಹಿಂಸೆ ಕೊಟ್ಟು ಕೊಲಲ್ಲಾಯಿತು ಯಾ ವಧಸ್ತಂಭದ ಮೇಲೆ ಸುಡಲಾಯಿತು. ಈ ರೀತಿಯಲ್ಲಿ ದೇವರ ಸ್ತ್ರೀ ಸದೃಶ ಸಂಸ್ಥೆಯ ನಿಜ ಸಂತಾನದ ಯಾವನೇ ಒಬ್ಬನು ಶೀಘ್ರವಾಗಿ ಜಜ್ಜಲ್ಪಡುವದನ್ನು ಖಚಿತಮಾಡಲು ಸೈತಾನನು ಪ್ರಯತ್ನಿಸಿದನು. ಪ್ರಾಟೆಸ್ಟಂಟ್ ದಂಗೆಯು ಇಲ್ಲವೆ ಸುಧಾರಣೆಯು ಸಂಭವಿಸಿದಾಗ (1517 ರಿಂದ ಮುಂದಕ್ಕೆ), ಅನೇಕ ಪ್ರಾಟೆಸ್ಟಂಟ್ ಚರ್ಚುಗಳು ಕೂಡ ತದ್ರೀತಿಯ ಅಸಹಿಷ್ಣುತೆಯ ಆತ್ಮವನ್ನು ತೋರ್ಪಡಿಸಿದರು. ದೇವರಿಗೆ ಮತ್ತು ಕ್ರಿಸ್ತನಿಗೆ ನಿಷ್ಠರಾಗಿ ಉಳಿಯಲು ಪ್ರಯತ್ನಿಸಿದವರನ್ನು ಧರ್ಮಬಲಿಯಾಗಿ ಕೊಲ್ಲುವದರ ಮೂಲಕ ಅವರು ಕೂಡ ರಕ್ತಾಪರಾಧಿಗಳಾದರು. ಸತ್ಯವಾಗಿಯೇ, “ಪವಿತ್ರ ಜನರ ರಕ್ತವು” ಸ್ವಚ್ಛಂದವಾಗಿ ಧಾರೆಯೆರೆಯಲ್ಪಟ್ಟಿತು!—ಪ್ರಕಟನೆ 16:6; ಹೋಲಿಸಿರಿ ಮತ್ತಾಯ 23:33-36.
ಸಂತಾನವು ಬಾಳುತ್ತದೆ
17. (ಎ) ಗೋದಿ ಮತ್ತು ಹಣಜಿಯ ಯೇಸುವಿನ ಸಾಮ್ಯವು ಏನನ್ನು ಮುಂತಿಳಿಸಿತು? (ಬಿ) 1918 ರಲ್ಲಿ ಏನು ಸಂಭವಿಸಿತು, ಇದರಿಂದ ಯಾವ ತ್ಯಜಿಸುವಿಕೆ ಮತ್ತು ಯಾವ ನೇಮಕವು ಫಲಿತಾಂಶವಾಗಿ ಉಂಟಾಯಿತು?
17 ಗೋದಿ ಮತ್ತು ಹಣಜಿಯ ಸಾಮ್ಯದಲ್ಲಿ, ಯೇಸುವು ಕ್ರೈಸ್ತಪ್ರಪಂಚವು ಪರಮಾಧಿಕಾರದಿಂದ ಆಳುವಾಗ ಇರುವ ಒಂದು ಅಂಧಕಾರದ ಸಮಯದ ಕುರಿತು ಮುಂತಿಳಿಸಿದನು. ಆದಾಗ್ಯೂ, ಧರ್ಮಭ್ರಷ್ಟತೆಯ ಶತಮಾನಗಳಲ್ಲಿಲ್ಲಾ, ಗೋದಿಯಂತಹ ಒಬ್ಬೊಬ್ಬ ಕ್ರೈಸ್ತರು, ಅಪ್ಪಟ ಅಭಿಷಿಕ್ತರು ಅಸ್ತಿತ್ವದಲ್ಲಿರುವರು. (ಮತ್ತಾಯ 13:24-29, 36-43) ಈ ರೀತಿಯಲ್ಲಿ, ಅಕ್ಟೋಬರ 1914 ರಲ್ಲಿ ಕರ್ತನ ದಿನವು ಉದಯಿಸಿದಾಗ, ಸತ್ಯ ಕ್ರೈಸ್ತರು ಭೂಮಿಯ ಮೇಲೆ ಇನ್ನೂ ಇದ್ದರು. (ಪ್ರಕಟನೆ 1:10) ಮೂರುವರೆ ವರ್ಷಗಳ ನಂತರ, 1918 ರಲ್ಲಿ, ಯೆಹೋವನು ತನ್ನ “ಒಡಂಬಡಿಕೆಯ ದೂತನಾದ” ಯೇಸುವಿನೊಂದಿಗೆ ತನ್ನ ಆತ್ಮಿಕ ದೇವಾಲಯಕ್ಕೆ, ನ್ಯಾಯತೀರ್ಪು ಮಾಡಲು ಆಗಮಿಸಿದನು ಎಂದು ತೋರುತ್ತದೆ. (ಮಲಾಕಿಯ 3:1; ಮತ್ತಾಯ 13:47-50) ಯಜಮಾನನು ಸುಳ್ಳು ಕ್ರೈಸ್ತರನ್ನು ಕಟ್ಟಕಡೆಗೆ ತ್ಯಜಿಸುವ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದ ಆಳನ್ನು ಅವನ ಎಲ್ಲಾ ಆಸ್ತಿಯ ಮೇಲೆ’ ನೇಮಕ ಮಾಡುವ ಸಮಯವು ಅದಾಗಿತ್ತು.—ಮತ್ತಾಯ 7:22, 23; 24:45-47.
18. ಯಾವ “ತಾಸು” 1914 ರಲ್ಲಿ ಬಂತು, ಮತ್ತು ಆಳು ಯಾವದನ್ನು ಮಾಡಲು ಅದು ಸಮಯವಾಗಿತ್ತು?
18 ಅಲ್ಲಿ ತಿಳಿಸಿರುವ ಸಂಗತಿಗಳಿಂದ ನಾವು ನೋಡುವಂತೆ, ಏಳು ಸಭೆಗಳಿಗೆ ಯೇಸುವಿನ ಸಂದೇಶಗಳಲ್ಲಿ ಬರೆದಿರುವ ಸಂಗತಿಗಳಿಗೆ ಈ ಆಳು ವಿಶೇಷ ಗಮನ ಕೊಡುವ ಸಮಯವು ಕೂಡ ಅದಾಗಿತ್ತು. ಉದಾಹರಣೆಗೆ, ಯಾವ ನ್ಯಾಯತೀರ್ಪು 1918 ರಲ್ಲಿ ಆರಂಭಗೊಂಡಿತೋ ಆ ಸಭೆಗಳ ನ್ಯಾಯತೀರ್ಪು ಮಾಡಲು ತಾನು ಬರುವುದರ ಕುರಿತಾಗಿ ಯೇಸುವು ಸೂಚಿಸುತ್ತಾನೆ. (ಪ್ರಕಟನೆ 2:5, 16, 22, 23; 3:3) “ಲೋಕದ ಮೇಲ್ಲೆಲಾ ಬರುವದಕ್ಕಿರುವ ಶೋಧನೆಯ ತಾಸಿನಲ್ಲಿ” ಫಿಲದೆಲ್ಫಿಯ ಸಭೆಯನ್ನು ಸುರಕ್ಷಿತವಾಗಿಡುವದರ ಕುರಿತು ಅವನು ಮಾತಾಡುತ್ತಾನೆ. (ಪ್ರಕಟನೆ 3:10, 11, NW) ಈ “ಶೋಧನೆಯ ತಾಸು” 1914 ರಲ್ಲಿ ಕರ್ತನ ದಿನವು ಉದಯಿಸುವುದರೊಂದಿಗೆ ಮಾತ್ರ ಆಗಮಿಸುತ್ತದೆ, ತದನಂತರ ದೇವರ ಸ್ಥಾಪಿತ ರಾಜ್ಯದ ಕಡೆಗಿನ ಅವರ ನಿಷ್ಠೆಯ ಕುರಿತಾಗಿ ಕ್ರೈಸ್ತರು ಪರೀಕ್ಷಿಸಲ್ಪಟ್ಟರು.—ಹೋಲಿಸಿರಿ ಮತ್ತಾಯ 24:3, 9-13.
19. (ಎ) ಇಂದು ಏಳು ಸಭೆಗಳು ಏನನ್ನು ಚಿತ್ರಿಸುತ್ತವೆ? (ಬಿ) ಅಭಿಷಿಕ್ತ ಕ್ರೈಸ್ತರೊಂದಿಗೆ ಬಹುಸಂಖ್ಯೆಯಲ್ಲಿ ಯಾರು ಜತೆಗೂಡಿದ್ದಾರೆ, ಮತ್ತು ಯೇಸುವಿನ ಬುದ್ಧಿವಾದ ಮತ್ತು ಅವನು ವರ್ಣಿಸಿದ ಪರಿಸ್ಥಿತಿಗಳು ಅವರಿಗೂ ಅನ್ವಯಿಸುತ್ತದೆ ಏಕೆ? (ಸಿ) ಮೊದಲನೆಯ ಶತಕದ ಏಳು ಸಭೆಗಳಿಗಾಗಿರುವ ಯೇಸುವಿನ ಸಂದೇಶಗಳನ್ನು ನಾವು ಹೇಗೆ ವೀಕ್ಷಿಸತಕ್ಕದ್ದು?
19 ಈ ಕಾರಣಕ್ಕಾಗಿ, ಸಭೆಗಳಿಗಾಗಿರುವ ಯೇಸುವಿನ ಮಾತುಗಳ ಪ್ರಧಾನ ಅನ್ವಯಿಸುವಿಕೆಯು 1914 ರಿಂದ ನಡೆಯಿತು. ಈ ಸನ್ನಿವೇಶದಲ್ಲಿ, ಏಳು ಸಭೆಗಳು ಕರ್ತನ ದಿನದಲ್ಲಿರುವ ಅಭಿಷಿಕ್ತ ಕ್ರೈಸ್ತರ ಎಲ್ಲಾ ಸಭೆಗಳನ್ನು ಚಿತ್ರಿಸುತ್ತವೆ. ಮೇಲಾಗಿ, ಕಳೆದ 50 ಮತ್ತು ಅದಕ್ಕಿಂತಲೂ ಹೆಚ್ಚು ವರ್ಷಗಳಲ್ಲಿ, ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಕಾಲ ಜೀವಿಸುವ ನಿರೀಕ್ಷೆಯೊಂದಿಗೆ ಬಹುಸಂಖ್ಯಾತ ನಂಬಿಗಸ್ತರು, ಯೋಹಾನನಿಂದ ಚಿತ್ರಿತವಾದ ಅಭಿಷಿಕ್ತ ಕ್ರೈಸ್ತರೊಂದಿಗೆ ಜತೆಗೂಡಿರುತ್ತಾರೆ. ಮಹಿಮಾಭರಿತ ಯೇಸು ಕ್ರಿಸ್ತನ ಬುದ್ಧಿವಾದ ಮತ್ತು ಅವನ ಪರೀಕ್ಷಣೆಯ ಫಲಿತಾಂಶವಾಗಿ ಏಳು ಸಭೆಗಳಲ್ಲಿ ತೋರಿಬಂದ ಪರಿಸ್ಥಿತಿಗಳು, ಅದೇ ಸಮಬಲದಿಂದ ಅನ್ವಯಿಸುತ್ತವೆ, ಯಾಕಂದರೆ ಯೆಹೋವನ ಎಲ್ಲಾ ಸೇವಕರಿಗೆ ನೀತಿ ಮತ್ತು ನಂಬಿಗಸ್ತಿಕೆಯ ಕೇವಲ ಒಂದೇ ಒಂದು ಮಟ್ಟವಿದೆ. (ವಿಮೋಚನಕಾಂಡ 12:49; ಕೊಲೊಸ್ಸೆ 3:11) ಈ ರೀತಿಯಲ್ಲಿ, ಏಷಿಯ ಮೈನರಿನ ಮೊದಲನೆಯ ಶತಕದ ಏಳು ಸಭೆಗಳಿಗಾಗಿರುವ ಯೇಸುವಿನ ಸಂದೇಶಗಳು ಕೇವಲ ಐತಿಹಾಸಿಕ ಕುತೂಹಲತೆಯದ್ದಾಗಿರುವದಿಲ್ಲ. ನಮ್ಮಲ್ಲಿ ಪ್ರತಿಯೊಬ್ಬನಿಗೂ ಅವುಗಳು ಜೀವ ಇಲ್ಲವೆ ಮರಣ ಎಂಬರ್ಥದಲ್ಲಿ ಇವೆ. ಆದುದರಿಂದ, ಯೇಸುವಿನ ಮಾತುಗಳನ್ನು ನಾವು ಜಾಗ್ರತೆಯಿಂದ ಆಲಿಸೋಣ.
[ಅಧ್ಯಯನ ಪ್ರಶ್ನೆಗಳು]
a ಮೂಲ ಹೀಬ್ರು ಭಾಷೆಯಲ್ಲಿ ಯೆಶಾಯ 44:6 ರಲ್ಲಿ “ಮೊದಲು [First]” ಮತ್ತು “ಕಡೆಯ [Last]” ಎಂಬ ಶಬ್ದಗಳಿಗೆ ನಿರ್ದೇಶಕ ಗುಣವಾಚಿ ಇಲ್ಲ, ಆದರೆ ತನ್ನ ಕುರಿತಾದ ಯೇಸುವಿನ ವರ್ಣನೆಯಲ್ಲಿ ಮೂಲ ಗ್ರೀಕ್ನಲ್ಲಿ ಪ್ರಕಟನೆ 1:17 ರಲ್ಲಿ, ನಿರ್ದೇಶಕ ಗುಣವಾಚಿ ಕಂಡುಬರುತ್ತದೆ. ಆದುದರಿಂದ, ವ್ಯಾಕರಣಬದ್ಧವಾಗಿ, ಪ್ರಕಟನೆ 1:17 ಒಂದು ಬಿರುದನ್ನು ತೋರಿಸುವಾಗ, ಯೆಶಾಯ 44:6 ಯೆಹೋವನ ದೇವತ್ವವನ್ನು ವರ್ಣಿಸುತ್ತದೆ.
b ಗ್ರೀಕ್ ಶಬ್ದವಾದ ಎಗ್’ಜೆ-ಲೊಸ್ (“ಎನ್’ಜೆ-ಲೊಸ್” ಎಂದು ಉಚ್ಚರಿಸಲಾಗುತ್ತದೆ) ಅಂದರೆ “ಸಂದೇಶವಾಹಕ” ಹಾಗೂ “ದೇವದೂತನು” ಎಂದರ್ಥ. ಮಲಾಕಿಯ 2:7 ರಲ್ಲಿ ಒಬ್ಬ ಲೇವಿಯ ಯಾಜಕನನ್ನು “ಸಂದೇಶವಾಹಕ (ಮೆಸೆಂಜರ್)” ನೆಂದು (ಹೀಬ್ರು ಭಾಷೆಯಲ್ಲಿ ಮಾಲ್’ಅಖ್) ಸೂಚಿಸಲಾಗಿದೆ.—ನೋಡಿರಿ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ರೆಫರೆನ್ಸ್ ಬೈಬಲ್, ಪಾದಟಿಪ್ಪಣಿ.
[ಪುಟ 43 ರಲ್ಲಿರುವ ಚೌಕ]
ಪರೀಕ್ಷಿಸುವ ಮತ್ತು ನ್ಯಾಯವಿಚಾರಣೆ ಮಾಡುವ ಒಂದು ಸಮಯ
ಯೇಸುವು ಸಾ.ಶ. 29ರ ಅಕ್ಟೋಬರದ ಸುಮಾರಿಗೆ ಯೊರ್ದನ್ ಹೊಳೆಯಲ್ಲಿ ದೀಕ್ಷಾಸ್ನಾನ ಪಡೆದನು ಮತ್ತು ನಿಯುಕ್ತ ರಾಜನಾದನು. ಮೂರುವರೆ ವರ್ಷಗಳ ನಂತರ, ಸಾ.ಶ. 33 ರಲ್ಲಿ, ಅವನು ಯೆರೂಸಲೇಮಿನ ದೇವಾಲಯಕ್ಕೆ ಆಗಮಿಸಿದನು ಮತ್ತು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದವರನ್ನು ಹೊರಗೆ ದಬ್ಬಿದನು. ಇದಕ್ಕೆ, ಯೇಸು ಸ್ವರ್ಗದಲ್ಲಿ ಅಕ್ಟೋಬರ 1914 ರಿಂದ ‘ಮಹಿಮೆಯ ಸಿಂಹಾಸದಲ್ಲಿ ಕುಳಿತುಕೊಂಡಂದಿನಿಂದ’ ದೇವರ ಮನೆಯಲ್ಲಿ ನ್ಯಾಯವಿಚಾರಣೆ ತೊಡಗಿ, ಅವನು ನಾಮಮಾತ್ರದ ಕ್ರೈಸ್ತರನ್ನು ಪರೀಕ್ಷಿಸಲು ಬರುವ ವರೆಗೆ ಇರುವ ಮೂರುವರೆ ವರ್ಷಗಳ ಅವಧಿಯಲ್ಲಿ ಒಂದು ಪರಸ್ಪರವಾದ ಹೋಲಿಕೆಯಿದೆ ಎಂದು ಕಂಡುಬರುತ್ತದೆ. (ಮತ್ತಾಯ 21:12, 13; 25:31-33; 1 ಪೇತ್ರ 4:17) ಯೆಹೋವನ ಜನರ ರಾಜ್ಯಚಟುವಟಿಕೆಗೆ 1918ರ ಆರಂಭದಲ್ಲಿ ಮಹಾ ವಿರೋಧವು ಬಂತು. ಇದು ಭೂವ್ಯಾಪಕವಾಗಿ ಒಂದು ಪರೀಕ್ಷಾ ಸಮಯವಾಗಿತ್ತು, ಮತ್ತು ಹೆದರಿಕೆಯುಳ್ಳವರು ಬೇರ್ಪಡಿಸಲ್ಪಟ್ಟರು. ಮೇ 1918 ರಲ್ಲಿ, ಕ್ರೈಸ್ತಪ್ರಪಂಚದ ವೈದಿಕರುಗಳು ವಾಚ್ ಟವರ್ ಸೊಸೈಟಿಯ ಅಧಿಕಾರಿಗಳ ಸೆರೆವಾಸವನ್ನು ಪ್ರೇರಿಸಿದರು. ಆದರೆ ಒಂಬತ್ತು ತಿಂಗಳ ಅನಂತರ ಇವರು ಬಿಡುಗಡೆ ಹೊಂದಿದರು. ತದನಂತರ ಅವರನ್ನು ಸುಳ್ಳು ಆರೋಪಗಳಿಂದ ಪೂರ್ಣವಾಗಿ ದೋಷಮುಕ್ತರನ್ನಾಗಿ ಮಾಡಲಾಯಿತು. ಪರೀಕ್ಷಿಸಲ್ಪಟ್ಟ ಮತ್ತು ಪರಿಶೋಧಿಸಲ್ಪಟ್ಟ ದೇವಜನರ ಸಂಸ್ಥೆಯು 1919 ರಿಂದ ಕ್ರಿಸ್ತ ಯೇಸುವಿನಿಂದಾಳಲ್ಪಡುವ ಯೆಹೋವನ ರಾಜ್ಯವೊಂದೇ ಮಾನವಕುಲದ ನಿರೀಕ್ಷೆಯಾಗಿದೆ ಎಂದು ಪ್ರಚುರಿಸಲು ಹುರುಪಿನಿಂದ ಮುಂದಕ್ಕೆ ಚಲಿಸಿತು.—ಮಲಾಕಿಯ 3:1-3.
ಯೇಸುವು 1918 ರಲ್ಲಿ ತನ್ನ ಪರೀಕ್ಷಣೆಯನ್ನು ಆರಂಭಿಸಿದಂತೆಯೇ, ಕ್ರೈಸ್ತಪ್ರಪಂಚದ ವೈದಿಕರು ಪ್ರತಿಕೂಲ ನ್ಯಾಯತೀರ್ಪನ್ನು ನಿಸ್ಸಂದೇಹವಾಗಿ ಪಡೆದರು. ದೇವಜನರ ವಿರುದ್ಧ ಅವರು ಹಿಂಸೆಯನ್ನು ತೀವ್ರಗೊಳಿಸಿದ್ದು ಮಾತ್ರವಲ್ಲದೆ, ಮೊದಲನೆಯ ಲೋಕ ಯುದ್ಧದ ಸಮಯದಲ್ಲಿ ಹೋರಾಡುವ ರಾಷ್ಟ್ರಗಳಿಗೆ ಬೆಂಬಲಿಸುವದರ ಮೂಲಕ ಘೋರ ರಕ್ತಾಪರಾಧಕ್ಕೂ ತುತ್ತಾಗಿದ್ದರು. (ಪ್ರಕಟನೆ 18:21, 24) ಅನಂತರ ಈ ವೈದಿಕರು ಅವರ ನಿರೀಕ್ಷೆಯನ್ನು ಮಾನವ-ನಿರ್ಮಿತ ಜನಾಂಗ ಸಂಘದ ಮೇಲೆ ಇಟ್ಟರು. ಸುಳ್ಳು ಧರ್ಮದ ಪೂರ್ತಿ ಲೋಕ ಸಾಮ್ರಾಜ್ಯದೊಂದಿಗೆ, ಕ್ರೈಸ್ತಪ್ರಪಂಚವು 1919 ರಿಂದ ದೇವರ ಮೆಚ್ಚಿಕೆಯಿಂದ ಪೂರ್ಣವಾಗಿ ಬಿದ್ದುಹೋಗಿದೆ.
[Map on page 28, 29]
(For fully formatted text, see publication)
ಎಫೆಸ
ಸ್ಮುರ್ನ
ಪೆರ್ಗಮಮ್
ಥುವತೈರ
ಸಾರ್ದಿಸ್
ಫಿಲದೆಲ್ಫಿಯ
ಲವೊದಿಕೀಯ
[ಪುಟ 42 ರಲ್ಲಿರುವ ಚಿತ್ರ]
ಬೈಬಲನ್ನು ತರ್ಜುಮೆ ಮಾಡಿದವರನ್ನು, ಓದಿದವರನ್ನು, ಮತ್ತು ಯಾರ ಹತ್ತಿರ ಅದು ಇತ್ತೋ ಅವರನ್ನು ಕೂಡ ಹಿಂಸಿಸಿದರ್ದಿಂದ ಮತ್ತು ಕೊಂದದರ್ದಿಂದ ಕ್ರೈಸ್ತಪ್ರಪಂಚದ ಧರ್ಮ ಘೋರ ರಕ್ತಾಪರಾಧಕ್ಕೆ ತುತ್ತಾಗಿದೆ