ವೇದನೆರಹಿತ ಜೀವಿತವು ಹತ್ತಿರವಿದೆ!
ನಮ್ಮನ್ನು ಅಪಾಯದಿಂದ ರಕ್ಷಿಸುವ ದೇಹದ ಯಾಂತ್ರಿಕ ಕೌಶಲಗಳು ನಿಶ್ಚಯವಾಗಿಯೂ ಅದ್ಭುತವಾಗಿವೆ: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ,” ಎಂದು ಬರೆದ ಬೈಬಲಿನ ಕೀರ್ತನೆಗಾರನು ಸ್ತುತಿಸಿದಂತೆ, ಅವುಗಳ ಒಂದು ಅಧ್ಯಯನವು ಸೃಷ್ಟಿಕರ್ತನನ್ನು ಸ್ತುತಿಸುವಂತೆ ನಮ್ಮನ್ನು ಪ್ರೇರಿಸಬೇಕು. (ಕೀರ್ತನೆ 139:14) ನಿಜವಾಗಿಯೂ, ದೇವರು ಮಾತ್ರವೇ ವೇದನೆರಹಿತ ಜೀವಿತವನ್ನು ಸಾಧ್ಯಮಾಡಬಲ್ಲನು! ಆದರೆ ಇದು ಹೇಗೆ ನೆರವೇರಲಿರುವುದು?
ವೇದನೆ ಅಥವಾ ಕಣ್ಣೀರು ತೆಗೆದುಹಾಕಲ್ಪಡುವುದರ ಕುರಿತಾದ ವಾಗ್ದಾನಕ್ಕೆ ಸ್ವಲ್ಪ ಮುಂಚೆ ಬೈಬಲು “ಒಂದು ನೂತನಾಕಾಶಮಂಡಲ ಮತ್ತು ಒಂದು ನೂತನಭೂಮಂಡಲ . . . . ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಇಲ್ಲದೆ ಹೋದವು” ಎಂದು ಹೇಳುವುದನ್ನು ಗಮನಿಸಿ. (ಪ್ರಕಟನೆ 21:1, 4) ನಮ್ಮ ವಾಸ್ತವವಾದ ಆಕಾಶ ಮತ್ತು ಭೂಮಿಯು ಇಲ್ಲದೆ ಹೋಗುವುದರ ಕುರಿತು ಬೈಬಲು ಮಾತಾಡುತ್ತಿಲ್ಲವೆಂಬುದು ನಿಶ್ಚಯ. ಬದಲಾಗಿ, ಪ್ರಸ್ತುತ ವಿಷಯ ವ್ಯವಸ್ಥೆಯನ್ನು ನೂತನ ವಿಷಯಗಳ ವ್ಯವಸ್ಥೆಯ ಸಂಪೂರ್ಣವಾಗಿ ಸ್ಥಾನಪಲ್ಲಟ ಮಾಡುವುದೆಂದು ಅದು ಸಂಕ್ಷಿಪ್ತವಾಗಿ ಹೇಳುತ್ತಿದೆ. ಹೌದು, ಒಂದು ನೂತನ, ಅತಿಮಾನುಷ ಸರಕಾರವು ಇದೇ ಭೂಮಿಯಲ್ಲಿ ವೇದನೆರಹಿತ ಜೀವಿತವನ್ನು ಅನುಭವಿಸುವಂತೆ ಸಾಧ್ಯಮಾಡುವುದು.
ಈ ಸರಕಾರವನ್ನು ವಿವರಿಸುತ್ತಾ, ಬೈಬಲು ಹೇಳುವುದೇನಂದರೆ “ಪರಲೋಕದೇವರು ಒಂದು ರಾಜ್ಯವನ್ನು [ಅಥವಾ, ಸರಕಾರ] ಸ್ಥಾಪಿಸುವನು; ಅದು . . . ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ಯೇಸು ಕ್ರಿಸ್ತನು ಭೂಮಿಯಲ್ಲಿದ್ದಾಗ, ಈ ರಾಜ್ಯ ಸರಕಾರಕ್ಕಾಗಿ ಪ್ರಾರ್ಥಿಸುವಂತೆ ಆತನು ನಮಗೆ ಕಲಿಸಿದನು, ಆತನಂದದ್ದು: “ಹೀಗೆ ಪ್ರಾರ್ಥನೆಮಾಡಿರಿ: ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”—ಮತ್ತಾಯ 6:9, 10, ಕಿಂಗ್ ಜೇಮ್ಸ್ ವರ್ಷನ್.
ಆದರೂ, ಆ ಪ್ರಾರ್ಥನೆಯ ನೆರವೇರಿಕೆಯು ನಿಮಗೆ ವೇದನೆರಹಿತ ಜೀವಿತವಾಗಿ ಹೇಗೆ ಅರ್ಥೈಸಬಲ್ಲದು?
ಅತಿಮಾನುಷ ಶಕ್ತಿಯುಳ್ಳ ಒಬ್ಬ ರಾಜ
ದೇವರು ತನ್ನ ಸರಕಾರದ ಮುಂದಾಳುತ್ವವನ್ನು ವಹಿಸಲು ಆರಿಸಿಕೊಂಡಿರುವವನ ಜ್ಞಾನ ಮತ್ತು ಶಕ್ತಿಯಲ್ಲಿ ಈ ಕೀಲಿ ಕೈ ಇದೆ. ಅವನು ಯೇಸು ಕ್ರಿಸ್ತನೇ. ಅವನ ಕುರಿತು ಒಂದು ಬೈಬಲ್ ಪ್ರವಾದನೆಯು ಹೇಳುವುದು: “ಸರಕಾರವು ಅವನ ಬಾಹುವಿನ ಮೇಲಿರುವದು . . . ಆತನ ಸರಕಾರದ ಅಭಿವೃದ್ಧಿಗೂ ಶಾಂತಿಗೂ ಅಂತ್ಯವಿರದು.”—ಯೆಶಾಯ 9:6, 7, KJ.
ಈಗ ಪರಲೋಕದಲ್ಲಿರುವ ಯೇಸುವಿನ ಜ್ಞಾನವು, ಭೂಮಿಯ ಎಲ್ಲಾ ವೈದ್ಯರಿಗಿಂತಲೂ ತೀರ ಹೆಚ್ಚು ಮಹತ್ವದ್ದಾಗಿದೆ. ಹಾನಿಯಿಂದ ಸ್ವತಃ ರಕ್ಷಿಸಿಕೊಳ್ಳುವ ಅದರ ವ್ಯವಸ್ಥೆಗಳನ್ನು ಒಳಗೊಂಡು, ನಮ್ಮ ಭೌತಿಕ ದೇಹದ ಕೆಲಸಗಳನ್ನು ಆತನು ಸಂಪೂರ್ಣವಾಗಿ ಗ್ರಹಿಸುತ್ತಾನೆ. ಆತನು 1,900 ವರ್ಷಗಳ ಹಿಂದೆ ಭೂಮಿಯಲ್ಲಿ ಮನುಷ್ಯನಾಗಿದ್ದಾಗ, ಆತನು ಗುಣಪಡಿಸಸಾಧ್ಯವಿದಿರ್ದದ ಒಂದು ರೋಗವಾಗಲಿ ಕ್ಲೇಶವಾಗಲಿ ಇರಲಿಲ್ಲ. ಹೀಗೆ ದೇವರ ರಾಜ್ಯದ ಅರಸನೋಪಾದಿ ತಾನು ಅಧಿಕ ಪ್ರಮಾಣದಲ್ಲಿ ಏನು ಮಾಡಲಿರುವನೆಂಬುದನ್ನು ಆತನು ಪ್ರದರ್ಶಿಸಿದನು. ಒಂದು ನಿದರ್ಶನದ ಕುರಿತು ಬೈಬಲು ಹೇಳುವುದು:
“ಆಗ ಜನರು ಗುಂಪುಗುಂಪಾಗಿ ಆತನ ಬಳಿಗೆ ಬಂದು ಕುಂಟರು ಕುರುಡರು ಮೂಕರು ಕೈಕಾಲಿಲ್ಲದವರು ಈ ಮುಂತಾದ ಅನೇಕರನ್ನು ಕರತಂದು ಅವರನ್ನು ಆತನ ಪಾದಗಳ ಬಳಿಯಲ್ಲಿ ಬಿಟ್ಟರು; ಆತನು ಅವರನ್ನು ವಾಸಿಮಾಡಿದನು. ಮೂಕರಾಗಿದ್ದವರು ಮಾತಾಡಿದ್ದನ್ನೂ ಕೈಕಾಲಿಲ್ಲದವರು ಸ್ವಸ್ಥವಾದದ್ದನ್ನೂ ಕುಂಟರಿಗೆ ಕಾಲುಬಂದದ್ದನ್ನೂ ಕುರುಡರಿಗೆ ಕಣ್ಣುಬಂದದ್ದನ್ನೂ ಜನರು ಕಂಡು ಆಶ್ಚರ್ಯ”ಪಟ್ಟರು. (ಮತ್ತಾಯ 15:30, 31) ಯೇಸು ತನ್ನ ರಾಜ್ಯ ಆಳಿಕೆಯ ಸಮಯದಲ್ಲಿ ವಾಸಿಮಾಡಲಿರುವ ಕ್ಲೇಶಗಳಲ್ಲಿ, ಭಯಂಕರವಾದ ದೀರ್ಘಕಾಲದ ವೇದನೆಯು ಒಂದಾಗಿದೆ.
ವಾಸ್ತವವಾಗಿ, ಎಂತಹ ಒಂದು ಅದ್ಭುತವಾದ ಆಶೀರ್ವಾದವು ಅದಾಗಿರುವುದು! ಮತ್ತು ಕೇವಲ ಸ್ವಲ್ಪ ಮಂದಿಗೋಸ್ಕರ ಇದು ನೆರವೇರಲ್ಪಡುವುದಿಲ್ಲ. “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು,” ಎಂಬುದು ಸೃಷ್ಟಿಕರ್ತನ ವಾಗ್ದಾನವಾಗಿದೆ. (ಯೆಶಾಯ 33:24) ಅನಂತರ, ದೇವರ ರಾಜ್ಯದ ಆಳಿಕೆಯ ಕೆಳಗೆ, “ವೇದನೆಯಾಗಲಿ . . . ಇನ್ನು ಮುಂದೆ ಇರುವುದಿಲ್ಲ,” ಎಂಬ ವಾಗ್ದಾನವು ನೆರವೇರಲ್ಪಡಲಿರುವುದು.—ಪ್ರಕಟನೆ 21:4.
ಕ್ರಿಸ್ತನ ಮಹಿಮೆಯುಳ್ಳ ರಾಜ್ಯ ಆಳಿಕೆಯ ಕೆಳಗೆ, ಬಾಧ್ಯತೆಯಾಗಿ ಬಂದ ಪಾಪವು ತೆಗೆದುಹಾಕಲ್ಪಡುವುದರಿಂದ, ನಮ್ಮನ್ನು ಅಪಾಯದಿಂದ ಸಂರಕ್ಷಿಸುವವುಗಳನ್ನೊಳಗೊಂಡು, ನಮ್ಮ ದೇಹದ ಅನೇಕ ಯಾಂತ್ರಿಕ ಕೌಶಲಗಳು ಪರಿಪೂರ್ಣವಾಗಿ ಕಾರ್ಯನಡಿಸುವವು. ನಮ್ಮ ದೇಹದ ವೇದನೆಯ ಸಂವೇದನೆಯು ಪುನಃ ಎಂದಿಗೂ ಒಂದು ಹಿಂಸಕವಾಗಿ ಪರಿಣಮಿಸದು. ಸಂತೋಷಕರವಾಗಿಯೇ, ಈಗ ನೆರವೇರಿಕೆಯನ್ನು ಪಡೆಯುತ್ತಿರುವ ಬೈಬಲಿನ ಪ್ರವಾದನೆಗಳಿಗನುಸಾರ, ವೇದನೆಯು ಎಂದಿಗೂ ಕಷ್ಟಾನುಭವವನ್ನುಂಟುಮಾಡದಿರುವ ನೂತನ ಲೋಕದ ಹೊಸ್ತಿಲಿನಲ್ಲಿ ನಾವಿದ್ದೇವೆ.—ಮತ್ತಾಯ 24:3-14, 36-39; 2 ತಿಮೊಥೆಯ 3:1-5; 2 ಪೇತ್ರ 3:11-13.
ಇಂದು ಲಕ್ಷಾಂತರ ಜನರನ್ನು ಬಾಧಿಸುತ್ತಿರುವ ವೇದನೆಯು ಹಿಂದಿನಂತೆ ಇನ್ನು ಮುಂದೆ ಅಸ್ತಿತ್ವದಲ್ಲಿಲ್ಲದೇ ಹೋಗುವಾಗ, ದೇವರ ರಾಜ್ಯದ ಕೆಳಗೆ ನೀವು ಜೀವಿತವನ್ನು ಅನುಭವಿಸಬಲ್ಲಿರಿ. ಆದರೆ ನೀವು ಏನನ್ನೋ ಮಾಡುವ ಅಗತ್ಯವಿದೆ. ಯೇಸು ಕ್ರಿಸ್ತನು ದೇವರಿಗೆ ಪ್ರಾರ್ಥನೆಯಲ್ಲಿ: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು” ಎಂದು ಹೇಳಿದಾಗ ಆತನು ಒಂದು ಮೂಲಭೂತವಾದ ಅಗತ್ಯತೆಯ ಕಡೆಗೆ ನಿರ್ದೇಶಿಸಿದನು.—ಯೋಹಾನ 17:3.
ಈ ಅತ್ಯಾವಶ್ಯಕವಾದ ಜ್ಞಾನವನ್ನು ಗಳಿಸಿಕೊಳ್ಳುವುದರಲ್ಲಿ ನಿಮಗೆ ನೆರವು ನೀಡಲು ಯೆಹೋವನ ಸಾಕ್ಷಿಗಳು ಸಂತೋಷಿಸುವರು. ನಿಮ್ಮ ಕ್ಷೇತ್ರದಲ್ಲಿರುವ ಅವರಲ್ಲಿ ಒಬ್ಬರನ್ನು ಕೇಳಿರಿ, ಅಥವಾ ನಿಮ್ಮ ಮನೆಯಲ್ಲಿ ಅಥವಾ ಇತರ ಯಾವುದೇ ಅನುಕೂಲಕರವಾದ ಸ್ಥಳದಲ್ಲಿ ಒಂದು ಬೈಬಲ್ ಅಧ್ಯಯನವನ್ನು ಪಡೆದುಕೊಳ್ಳುವ ನಿಮ್ಮ ಬಯಕೆಯನ್ನು ವ್ಯಕ್ತಪಡಿಸುತ್ತಾ, ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ. ಆಗ ವೇದನೆರಹಿತ ಒಂದು ಜೀವಿತದಲ್ಲಿ ಆನಂದಿಸಲಿಕ್ಕಾಗಿ ಮಾನವರಿಗಾಗಿ ದೇವರ ಉದ್ದೇಶಗಳನ್ನು ಕುರಿತು ನೀವು ಹೆಚ್ಚನ್ನು ಕಲಿಯುವರೆ ಏರ್ಪಾಡುಗಳು ಮಾಡಲ್ಪಡುವವು.