ಅ. ಕಾರ್ಯ
14 ಈಗ ಅವರು ಇಕೋನ್ಯದಲ್ಲಿ ಯೆಹೂದ್ಯರ ಸಭಾಮಂದಿರವನ್ನು ಪ್ರವೇಶಿಸಿದರು ಮತ್ತು ಅವರು ಮಾತಾಡಿದ ರೀತಿಯಿಂದ ಯೆಹೂದ್ಯರಲ್ಲಿಯೂ ಗ್ರೀಕರಲ್ಲಿಯೂ ಬಹಳ ಮಂದಿ ವಿಶ್ವಾಸಿಗಳಾದರು. 2 ಆದರೆ ನಂಬದೆ ಹೋದ ಯೆಹೂದ್ಯರು ಅನ್ಯಜನಾಂಗಗಳ ಜನರನ್ನು ಸಹೋದರರ ವಿರುದ್ಧ ಎಬ್ಬಿಸಿ ಅವರ ಮನಸ್ಸುಗಳಲ್ಲಿ ಕಹಿಭಾವನೆಯನ್ನು ತುಂಬಿಸಿದರು. 3 ಆದುದರಿಂದ ಪೌಲ ಬಾರ್ನಬರು ಯೆಹೋವನಿಂದ ಅಧಿಕಾರಹೊಂದಿದವರಾಗಿ ಧೈರ್ಯದಿಂದ ಮಾತಾಡುತ್ತಾ ಸಾಕಷ್ಟು ಕಾಲ ಅಲ್ಲಿದ್ದರು; ಮತ್ತು ಆತನು ಅವರ ಕೈಗಳಿಂದ ಸೂಚಕಕಾರ್ಯಗಳನ್ನೂ ಆಶ್ಚರ್ಯಕಾರ್ಯಗಳನ್ನೂ ನಡಿಸುವ ಮೂಲಕ ತನ್ನ ಅಪಾತ್ರ ದಯೆಯ ವಾಕ್ಯಕ್ಕೆ ಸಾಕ್ಷಿನೀಡಿದನು. 4 ಆಗ ಆ ಊರಿನ ಜನರ ನಡುವೆ ಒಡಕು ಉಂಟಾಗಿ ಕೆಲವರು ಯೆಹೂದ್ಯರ ಪಕ್ಷವನ್ನೂ ಇತರರು ಅಪೊಸ್ತಲರ ಪಕ್ಷವನ್ನೂ ಸೇರಿಕೊಂಡರು. 5 ಅನ್ಯಜನಾಂಗಗಳ ಜನರು ಮತ್ತು ಯೆಹೂದ್ಯರು ತಮ್ಮ ಅಧಿಪತಿಗಳೊಂದಿಗೆ ಸೇರಿಕೊಂಡು ಅವರನ್ನು ಅವಮಾನಪಡಿಸಿ ಕಲ್ಲೆಸೆದು ಕೊಲ್ಲಲು ಹಿಂಸಾತ್ಮಕ ಪ್ರಯತ್ನವನ್ನು ಮಾಡಿದರೆಂಬುದು 6 ತಿಳಿದುಬಂದಾಗ ಅವರು ಲುಕವೋನ್ಯ ಲುಸ್ತ್ರ ದೆರ್ಬೆ ಪಟ್ಟಣಗಳಿಗೂ ಅವುಗಳ ಸುತ್ತಲೂ ಇದ್ದ ಊರುಗಳಿಗೂ ಓಡಿಹೋದರು; 7 ಮತ್ತು ಅಲ್ಲಿ ಅವರು ಸುವಾರ್ತೆಯನ್ನು ಸಾರುತ್ತಾ ಹೋದರು.
8 ಲುಸ್ತ್ರದಲ್ಲಿ ಪಾದಗಳಲ್ಲಿ ಬಲವಿಲ್ಲದ ಒಬ್ಬ ಮನುಷ್ಯನು ಕೂತಿದ್ದನು; ಅವನು ತಾಯಿಯ ಗರ್ಭದಿಂದಲೇ ಕುಂಟನಾಗಿದ್ದು ಎಂದಿಗೂ ನಡೆದಿರಲೇ ಇಲ್ಲ. 9 ಈ ಮನುಷ್ಯನು ಪೌಲನ ಮಾತುಗಳಿಗೆ ಕಿವಿಗೊಡುತ್ತಾ ಇದ್ದನು. ಪೌಲನು ಅವನನ್ನು ದಿಟ್ಟಿಸಿ ನೋಡಿ ವಾಸಿಯಾಗಲು ಬೇಕಾದ ನಂಬಿಕೆ ಅವನಿಗಿದೆ ಎಂಬುದನ್ನು ತಿಳಿದು, 10 “ನಿನ್ನ ಪಾದಗಳನ್ನು ಊರಿ ನೆಟ್ಟಗೆ ನಿಲ್ಲು” ಎಂದು ಗಟ್ಟಿಯಾದ ಸ್ವರದಲ್ಲಿ ಹೇಳಿದನು. ಆ ಕೂಡಲೆ ಅವನು ನೆಗೆದು ನಿಂತು ನಡೆಯಲಾರಂಭಿಸಿದನು. 11 ಪೌಲನು ಮಾಡಿದ ಕಾರ್ಯವನ್ನು ಜನರ ಗುಂಪು ನೋಡಿ, “ದೇವತೆಗಳು ಮನುಷ್ಯರ ರೂಪದಲ್ಲಿ ನಮ್ಮ ಬಳಿಗೆ ಇಳಿದುಬಂದಿದ್ದಾರೆ!” ಎಂದು ಲುಕವೋನ್ಯ ಭಾಷೆಯಲ್ಲಿ ಕೂಗಿಹೇಳಿದರು. 12 ಆಗ ಅವರು ಬಾರ್ನಬನನ್ನು ಸ್ಯೂಸ್ ದೇವನೆಂದೂ ಪೌಲನು ಮಾತಾಡುವುದರಲ್ಲಿ ಮುಂದಾಳುತ್ವವನ್ನು ವಹಿಸಿದ್ದರಿಂದ ಅವನನ್ನು ಹರ್ಮೀಸ್ ದೇವನೆಂದೂ ಕರೆದರು. 13 ಊರ ಮುಂದಿದ್ದ ಸ್ಯೂಸ್ ದೇವಸ್ಥಾನದ ಪೂಜಾರಿಯು ಎತ್ತುಗಳನ್ನೂ ಹೂವಿನ ಹಾರಗಳನ್ನೂ ತೆಗೆದುಕೊಂಡು ಊರ ಬಾಗಿಲಿನ ಬಳಿಗೆ ಬಂದು ಜನರ ಗುಂಪಿನೊಂದಿಗೆ ಯಜ್ಞಗಳನ್ನು ಅರ್ಪಿಸಲು ಬಯಸಿದನು.
14 ಆದರೆ ಅಪೊಸ್ತಲರಾದ ಬಾರ್ನಬ ಪೌಲರು ಇದನ್ನು ಕೇಳಿಸಿಕೊಂಡಾಗ ತಮ್ಮ ಮೇಲಂಗಿಗಳನ್ನು ಹರಿದುಕೊಂಡು ಜನರ ಗುಂಪಿನೊಳಗೆ ನುಗ್ಗಿ 15 ಗಟ್ಟಿಯಾಗಿ ಕೂಗಿಹೇಳಿದ್ದು: “ಜನರೇ, ನೀವು ಇದನ್ನೆಲ್ಲ ಏಕೆ ಮಾಡುತ್ತಿದ್ದೀರಿ? ನಾವೂ ನಿಮ್ಮಂತೆಯೇ ದೇಹದೌರ್ಬಲ್ಯಗಳುಳ್ಳ ಮನುಷ್ಯರಾಗಿದ್ದೇವೆ; ನೀವು ಈ ವ್ಯರ್ಥ ಕಾರ್ಯಗಳನ್ನು ಬಿಟ್ಟು ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಉಂಟುಮಾಡಿದ ಜೀವವುಳ್ಳ ದೇವರ ಕಡೆಗೆ ತಿರುಗಿಕೊಳ್ಳುವಂತೆ ನಿಮಗೆ ಸುವಾರ್ತೆಯನ್ನು ಸಾರುತ್ತಿದ್ದೇವೆ. 16 ಹಿಂದಿನ ಸಂತತಿಗಳಲ್ಲಿ ಆತನು ಎಲ್ಲ ಜನಾಂಗಗಳು ತಮ್ಮದೇ ಆದ ಮಾರ್ಗಗಳಲ್ಲಿ ನಡೆಯುವಂತೆ ಬಿಟ್ಟನು. 17 ಆದರೂ ಆತನು ತನ್ನ ಕುರಿತು ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ಅನುಗ್ರಹಿಸಿ, ಹೇರಳವಾಗಿ ಆಹಾರವನ್ನು ಕೊಟ್ಟು ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸುವ ಮೂಲಕ ಆತನು ಒಳ್ಳೇದನ್ನು ಮಾಡಿದನು.” 18 ಈ ವಿಷಯಗಳನ್ನೆಲ್ಲ ಹೇಳುವ ಮೂಲಕ ಅವರು ತಮಗೆ ಯಜ್ಞಗಳನ್ನು ಅರ್ಪಿಸುವುದರಿಂದ ಜನರ ಗುಂಪನ್ನು ಪ್ರಯಾಸದಿಂದ ತಡೆದರು.
19 ಆದರೆ ಅಂತಿಯೋಕ್ಯ ಮತ್ತು ಇಕೋನ್ಯದಿಂದ ಬಂದ ಯೆಹೂದ್ಯರು ಜನರ ಗುಂಪನ್ನು ಒಡಂಬಡಿಸಿ ಪೌಲನಿಗೆ ಕಲ್ಲೆಸೆದು ಅವನು ಸತ್ತನೆಂದು ಭಾವಿಸಿ ಊರ ಹೊರಕ್ಕೆ ಎಳೆದುಹಾಕಿದರು. 20 ಶಿಷ್ಯರು ಅವನ ಸುತ್ತಲೂ ಬಂದು ನಿಂತಾಗ ಅವನು ಎದ್ದು ಊರೊಳಕ್ಕೆ ಹೋದನು. ಮರುದಿನ ಅವನು ಬಾರ್ನಬನೊಂದಿಗೆ ದೆರ್ಬೆಗೆ ಹೋದನು. 21 ಆ ಊರಿನಲ್ಲಿ ಸುವಾರ್ತೆಯನ್ನು ಸಾರಿ ಅನೇಕರನ್ನು ಶಿಷ್ಯರನ್ನಾಗಿ ಮಾಡಿದ ಬಳಿಕ ಅವರು ಲುಸ್ತ್ರಕ್ಕೂ ಇಕೋನ್ಯಕ್ಕೂ ಅಂತಿಯೋಕ್ಯಕ್ಕೂ ಹಿಂದಿರುಗಿ 22 ಶಿಷ್ಯರನ್ನು ಬಲಪಡಿಸುತ್ತಾ, “ನಾವು ಅನೇಕ ಸಂಕಟಗಳನ್ನು ತಾಳಿ ದೇವರ ರಾಜ್ಯವನ್ನು ಪ್ರವೇಶಿಸಬೇಕು” ಎಂದು ಹೇಳಿ ನಂಬಿಕೆಯಲ್ಲಿ ಉಳಿಯುವಂತೆ ಅವರನ್ನು ಉತ್ತೇಜಿಸಿದರು. 23 ಇದಲ್ಲದೆ ಅವರು ಪ್ರತಿ ಸಭೆಯಲ್ಲಿ ಅವರಿಗಾಗಿ ಹಿರೀಪುರುಷರನ್ನು ನೇಮಿಸಿದರು ಮತ್ತು ಉಪವಾಸವಿದ್ದು ಪ್ರಾರ್ಥಿಸುತ್ತಾ ಅವರು ಯಾರಲ್ಲಿ ವಿಶ್ವಾಸಿಗಳಾಗಿದ್ದರೋ ಆ ಯೆಹೋವನ ಕೈಗೆ ಅವರನ್ನು ಒಪ್ಪಿಸಿದರು.
24 ಬಳಿಕ ಅವರು ಪಿಸಿದ್ಯದ ಮಾರ್ಗವಾಗಿ ಪಂಫುಲ್ಯಕ್ಕೆ ಬಂದರು 25 ಮತ್ತು ಪೆರ್ಗದಲ್ಲಿ ದೇವರ ವಾಕ್ಯದ ಕುರಿತು ಮಾತಾಡಿದ ಬಳಿಕ ಅವರು ಅತಾಲ್ಯಕ್ಕೆ ಹೋದರು. 26 ಅಲ್ಲಿಂದ ಅವರು ಸಮುದ್ರಮಾರ್ಗವಾಗಿ ಅಂತಿಯೋಕ್ಯಕ್ಕೆ ಹೋದರು. ಅವರು ಈಗ ಸಂಪೂರ್ಣವಾಗಿ ನೆರವೇರಿಸಿ ಬಂದ ಕೆಲಸಕ್ಕೋಸ್ಕರ ದೇವರ ಅಪಾತ್ರ ದಯೆಗೆ ಒಪ್ಪಿಸಲ್ಪಟ್ಟದ್ದು ಅದೇ ಊರಿನಲ್ಲಿ.
27 ಅವರು ಅಲ್ಲಿ ಬಂದು ಸಭೆಯನ್ನು ಒಟ್ಟುಗೂಡಿಸಿದಾಗ ದೇವರು ತಮ್ಮ ಮೂಲಕ ನಡಿಸಿದ ಅನೇಕ ಕಾರ್ಯಗಳನ್ನೂ ಆತನು ಅನ್ಯಜನಾಂಗಗಳವರಿಗೆ ನಂಬಿಕೆಯ ದ್ವಾರವನ್ನು ತೆರೆದದ್ದನ್ನೂ ತಿಳಿಸಿದರು. 28 ತರುವಾಯ ಅವರು ಅಲ್ಲಿ ಶಿಷ್ಯರ ಸಂಗಡ ಬಹುಕಾಲ ಇದ್ದರು.