ಒಂದನೇ ಅರಸು
17 ಗಿಲ್ಯಾದಿನಲ್ಲಿದ್ದ+ ತಿಷ್ಬೀಯನಾದ ಎಲೀಯ*+ ಅಹಾಬನಿಗೆ “ನಾನು ಆರಾಧಿಸೋ ಇಸ್ರಾಯೇಲ್ ದೇವರಾದ ಯೆಹೋವನ ಆಣೆ, ಇವತ್ತಿಂದ ಸ್ವಲ್ಪ ವರ್ಷ ನಾನು ಹೇಳೋ ತನಕ ದೇಶದಲ್ಲಿ ಮಂಜಾಗಲಿ ಮಳೆಯಾಗಲಿ ಬೀಳಲ್ಲ!”+ ಅಂದ.
2 ಆಮೇಲೆ ಯೆಹೋವ ಎಲೀಯನಿಗೆ 3 “ನೀನು ಈ ಜಾಗ ಬಿಟ್ಟು ಪೂರ್ವಕ್ಕೆ ಹೋಗು. ಯೋರ್ದನಿನ ಪೂರ್ವಕ್ಕಿರೋ ಕೆರೀತ್ ಕಣಿವೆಯಲ್ಲಿ ಬಚ್ಚಿಟ್ಕೊ. 4 ನೀನು ಅಲ್ಲಿ ಹೊಳೆ ನೀರನ್ನ ಕುಡಿಬೇಕು. ಕಾಗೆಗಳು ಬಂದು ನಿನಗೆ ಊಟ ಕೊಡೋಕೆ ಅವುಗಳಿಗೆ ನಾನು ಆಜ್ಞೆ ಕೊಡ್ತೀನಿ”+ ಅಂದನು. 5 ತಕ್ಷಣ ಅವನು ಅಲ್ಲಿಂದ ಹೊರಟು ಯೆಹೋವ ಹೇಳಿದ ಹಾಗೆ ಯೋರ್ದನಿನ ಪೂರ್ವಕ್ಕಿದ್ದ ಕೆರೀತ್ ಕಣಿವೆಗೆ ಬಂದ. 6 ಕಾಗೆಗಳು ಅವನಿಗೆ ಬೆಳಿಗ್ಗೆ ಮತ್ತು ಸಂಜೆ ರೊಟ್ಟಿಯನ್ನ ಮಾಂಸವನ್ನ ತಂದ್ಕೊಡ್ತಿದ್ವು. ಅವನು ಹೊಳೆ ನೀರನ್ನ ಕುಡಿತಿದ್ದ.+ 7 ಆದ್ರೆ ಸ್ವಲ್ಪ ದಿನ ಆದ್ಮೇಲೆ ಆ ಹೊಳೆ ನೀರು ಬತ್ತಿ ಹೋಯ್ತು.+ ಯಾಕಂದ್ರೆ ದೇಶದಲ್ಲಿ ಮಳೆ ಆಗಿರಲಿಲ್ಲ.
8 ಆಮೇಲೆ ಯೆಹೋವ ಅವನಿಗೆ 9 “ನೀನು ಇಲ್ಲಿಂದ ಸೀದೋನಿನ ಚಾರೆಪ್ತ ಪಟ್ಟಣಕ್ಕೆ ಹೋಗು. ನಿನಗೆ ಊಟ ಕೊಡೋಕೆ ಅಲ್ಲಿರೋ ಒಬ್ಬ ವಿಧವೆಗೆ ನಾನು ಆಜ್ಞೆ ಕೊಡ್ತೀನಿ”+ ಅಂದನು. 10 ಹಾಗಾಗಿ ಅವನು ಎದ್ದು ಚಾರೆಪ್ತ ಪಟ್ಟಣಕ್ಕೆ ಹೋದ. ಅವನು ಆ ಪಟ್ಟಣದ ಬಾಗಿಲ ಹತ್ರ ಬಂದಾಗ ಒಬ್ಬ ವಿಧವೆ ಸೌದೆ ಕೂಡಿಸ್ತಾ ಇರೋದನ್ನ ನೋಡಿದ. ಅವನು ಅವಳಿಗೆ “ದಯವಿಟ್ಟು ಕುಡಿಯೋಕೆ ಸ್ವಲ್ಪ ನೀರು ತಗೊಂಡು ಬರ್ತಿಯಾ?”+ ಅಂತ ಕೇಳಿದ. 11 ಅವಳು ನೀರನ್ನ ತರೋಕೆ ಹೋಗ್ತಿದ್ದಾಗ ಅವನು ಅವಳನ್ನ ಕರೆದು “ಅದ್ರ ಜೊತೆ ಒಂದು ತುಂಡು ರೊಟ್ಟಿನೂ ತಗೊಂಡು ಬರ್ತಿಯಾ?” ಅಂತ ಕೇಳಿದ. 12 ಅದಕ್ಕೆ ಅವಳು “ನಿನ್ನ ದೇವರಾದ ಯೆಹೋವನ ಆಣೆ, ನನ್ನ ಹತ್ರ ಒಂದು ರೊಟ್ಟಿನೂ ಇಲ್ಲ. ದೊಡ್ಡ ಮಡಿಕೆಯಲ್ಲಿ ಒಂದು ಹಿಡಿ ಹಿಟ್ಟು ಮತ್ತು ಚಿಕ್ಕ ಮಡಿಕೆಯಲ್ಲಿ ಸ್ವಲ್ಪ ಎಣ್ಣೆ ಬಿಟ್ಟು ಬೇರೆ ಏನೂ ಇಲ್ಲ.+ ಈಗ ನಾನು ಸೌದೆ ಕೂಡಿಸ್ತಾ ಇದ್ದೀನಿ. ಆಮೇಲೆ ಮನೆಗೆ ಹೋಗಿ ನನಗೆ ಮತ್ತು ನನ್ನ ಮಗನಿಗೆ ಏನಾದ್ರೂ ಮಾಡ್ಕೊಳ್ತೀನಿ. ಇದೇ ನಮ್ಮ ಕೊನೆ ಊಟ. ಆಮೇಲೆ ನಾವು ಹಸಿವಿಂದ ಸತ್ತುಹೋಗ್ತೀವಿ” ಅಂದಳು.
13 ಅದಕ್ಕೆ ಎಲೀಯ ಅವಳಿಗೆ “ಹೆದರಬೇಡ, ಮನೆಗೆ ಹೋಗಿ ನೀನು ಹೇಳಿದ ಹಾಗೇ ಮಾಡು. ಆದ್ರೆ ನಿನ್ನ ಹತ್ರ ಇರೋ ಹಿಟ್ಟಿಂದ ಮೊದ್ಲು ನನಗೊಂದು ಚಿಕ್ಕ ರೊಟ್ಟಿ ಮಾಡಿ ತಗೊಂಡು ಬಾ. ಆಮೇಲೆ ನಿನಗಾಗಿ ಮತ್ತು ನಿನ್ನ ಮಗನಿಗಾಗಿ ಮಾಡ್ಕೊ. 14 ಯಾಕಂದ್ರೆ ಇಸ್ರಾಯೇಲ್ ದೇವರಾದ ಯೆಹೋವ ಹೀಗೆ ಹೇಳಿದ್ದಾನೆ: ‘ಯೆಹೋವನಾದ ನಾನು ಎಲ್ಲಿ ತನಕ ಈ ನೆಲದ ಮೇಲೆ ಮಳೆ ಸುರಿಸಲ್ವೋ ಅಲ್ಲಿ ತನಕ ದೊಡ್ಡ ಮಡಿಕೆಯಲ್ಲಿರೋ ಹಿಟ್ಟು ಮುಗಿಯಲ್ಲ, ಚಿಕ್ಕ ಮಡಿಕೆಯಲ್ಲಿರೋ ಎಣ್ಣೆ ಖಾಲಿಯಾಗಲ್ಲ’”+ ಅಂದನು. 15 ಅವಳು ಹೋಗಿ ಎಲೀಯ ಹೇಳಿದ ಹಾಗೇ ಮಾಡಿದಳು. ಇದಾದ ಮೇಲೆ ಆ ವಿಧವೆಗೆ, ಅವಳ ಕುಟುಂಬದವ್ರಿಗೆ ಮತ್ತು ಎಲೀಯನಿಗೆ ತುಂಬ ದಿನಗಳ ತನಕ ಊಟಕ್ಕೆ ಯಾವ ಕೊರತೆನೂ ಇರಲಿಲ್ಲ.+ 16 ಯೆಹೋವ ಎಲೀಯನ ಮೂಲಕ ಹೇಳಿದ ತರಾನೇ ದೊಡ್ಡ ಮಡಿಕೆಯಲ್ಲಿದ್ದ ಹಿಟ್ಟು ಮುಗಿಲಿಲ್ಲ, ಚಿಕ್ಕ ಮಡಿಕೆಯಲ್ಲಿದ್ದ ಎಣ್ಣೆ ಖಾಲಿಯಾಗಲಿಲ್ಲ.
17 ಸ್ವಲ್ಪ ದಿನ ಆದ್ಮೇಲೆ ಆ ವಿಧವೆಯ ಮಗನಿಗೆ ಹುಷಾರಿಲ್ಲದೆ ಅವನ ಉಸಿರೇ ನಿಂತುಹೋಯ್ತು.+ 18 ಆಗ ಆ ವಿಧವೆ ಎಲೀಯನಿಗೆ “ಸತ್ಯದೇವರ ಮನುಷ್ಯನೇ! ನೀನು ಯಾಕೆ ಹೀಗೆ ಮಾಡಿದೆ? ನನ್ನ ಪಾಪಗಳನ್ನ ನನ್ನ ನೆನಪಿಗೆ ತರೋಕೆ, ನನ್ನ ಮಗನ ಪ್ರಾಣವನ್ನ ಕಿತ್ಕೊಳ್ಳೋಕೆ ನೀನು ಇಲ್ಲಿಗೆ ಬಂದಿಯಾ?”+ ಅಂತ ಕೇಳಿದಳು. 19 ಆದ್ರೆ ಎಲೀಯ ಅವಳಿಗೆ “ನಿನ್ನ ಮಗನನ್ನ ನನಗೆ ಕೊಡು” ಅಂತ ಹೇಳಿ ಅವಳ ತೋಳಲ್ಲಿದ್ದ ಮಗನನ್ನ ಎತ್ಕೊಂಡ. ಆಮೇಲೆ ಮಾಳಿಗೆ ಮೇಲಿದ್ದ ತನ್ನ ಕೋಣೆಗೆ ಹೋಗಿ, ಆ ಹುಡುಗನನ್ನ ಮಂಚದ ಮೇಲೆ ಮಲಗಿಸಿದ.+ 20 ಆಮೇಲೆ ಅವನು ಯೆಹೋವನನ್ನ ಕರೆದು “ಯೆಹೋವನೇ, ನನ್ನ ದೇವರೇ,+ ನಾನು ಯಾರ ಮನೆಯಲ್ಲಿ ಇದ್ದಿನೋ ಆ ವಿಧವೆಯ ಮಗನಿಗೆ ಸಾವನ್ನ ತಂದು ಯಾಕೆ ಅವಳ ಮೇಲೆ ಕಷ್ಟ ಬರೋಕೆ ಬಿಟ್ಟೆ?” ಅಂತ ಕೇಳಿದ. 21 ಆಮೇಲೆ ಎಲೀಯ ಆ ಹುಡುಗನನ್ನ ಮೂರು ಸಲ ತಬ್ಕೊಂಡು “ಯೆಹೋವನೇ, ನನ್ನ ದೇವರೇ, ಈ ಹುಡುಗ ಮತ್ತೆ ಬದುಕೋ ತರ ಮಾಡು” ಅಂತ ಯೆಹೋವನಲ್ಲಿ ಅಂಗಲಾಚಿದ. 22 ಯೆಹೋವ ಎಲೀಯನ ಬೇಡಿಕೆನ ಕೇಳಿದನು.+ ಹಾಗಾಗಿ ಆ ಹುಡುಗನಿಗೆ ಮತ್ತೆ ಜೀವ ಬಂತು.+ 23 ಎಲೀಯ ಆ ಹುಡುಗನನ್ನ ಕೆಳಗೆ ಕರ್ಕೊಂಡು ಬಂದು ಅವನ ತಾಯಿಗೆ ಒಪ್ಪಿಸ್ತಾ “ನೋಡು, ನಿನ್ನ ಮಗ ಬದುಕಿದ್ದಾನೆ”+ ಅಂದ. 24 ಅದಕ್ಕೆ ಆ ವಿಧವೆ “ನೀನು ನಿಜವಾಗಿ ಸತ್ಯದೇವರ ಮನುಷ್ಯ+ ಮತ್ತು ನೀನು ಹೇಳಿದ ಯೆಹೋವನ ಮಾತು ಸತ್ಯ ಅಂತ ಈಗ ನನಗೆ ಗೊತ್ತಾಯ್ತು” ಅಂದಳು.